ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಶ್ರೀಪುರುಷ
ಶ್ರೀಪುರುಷ ತಲಕಾಡು ಗಂಗವಂಶದ ದೊರೆ (ಸು. 725-88). ಒಂದನೆಯ ಶಿವಮಾರನ ಮೊಮ್ಮಗ; ತನ್ನ ತಾತನ ತರುವಾಯ ಪಟ್ಟಕ್ಕೆ ಬಂದ.
ಪಟ್ಟಕ್ಕೆ ಏರುವುದಕ್ಕೆ ಮುಂಚೆಯೇ ಈತ ಮುತ್ತರಸನೆಂಬ ಹೆಸರಿನಿಂದ ಕೋಲಾರ ಪ್ರಾಂತದ ಪೊಂಕುಂದ 12, ಕೆರೆಕುಂದ 300, ಎಳೆನಾಗರ ನಾಡು 70 ಮುಂತಾದುವುಗಳನ್ನು (ಪ್ರಾಯಶಃ ಪ್ರಾಂತ್ಯಾಧಿಕಾರಿಯಾಗಿ) ಆಳುತ್ತಿದ್ದ. ಬಾದಾಮಿಯ ಚಳುಕ್ಯರೊಡನೆ ಸ್ನೇಹದಿಂದಿದ್ದ. ಈತ ಇಮ್ಮಡಿ ವಿಕ್ರಮಾದಿತ್ಯ ಕಂಚಿಯ ಮೇಲೆ ದಾಳಿಮಾಡಿದಾಗ ಅವನಿಗೆ ನೆರವಾಗಿದ್ದ. ಇದರಿಂದ ಕುಪಿತನಾದ ಪಲ್ಲವ ನಂದಿವರ್ಮ ಸು. 754ಕ್ಕೆ ಸ್ವಲ್ಪ ಮುಂಚೆ ಗಂಗರಾಜ್ಯದ ಮೇಲೆ ದಂಡೆತ್ತಿ ಬಂದ. ಆದರೆ ಶ್ರೀಪುರುಷ ಇದರಿಂದ ನಷ್ಟವೇನನ್ನೂ ಅನುಭವಿಸಲಿಲ್ಲವೆಂದು ತೋರುತ್ತದೆ. ಆದರೆ ಚಾಳುಕ್ಯರ ಆಳಿಕೆ ಕೊನೆಗೊಂಡು ಉತ್ತರದಲ್ಲಿ ರಾಷ್ಟ್ರಕೂಟರು ಪ್ರಬಲಿಸಿದ ಮೇಲೆ ಶ್ರೀಪುರುಷ ಕಷ್ಟಪರಂಪರೆಗಳನ್ನು ಎದುರಿಸಬೇಕಾಯಿತು. ರಾಷ್ಟ್ರಕೂಟ 1ನೆಯ ಕೃಷ್ಣ ಗಂಗರಾಜ್ಯದ ಮೇಲೆ ನಡೆದು ಮಾನ್ಯಪುರದಲ್ಲಿ (ಬೆಂಗಳೂರು ಜಿಲ್ಲೆ ನೆಲಮಂಗಲ ತಾಲ್ಲೂಕಿನ ಮಣ್ಣೆ) ಸು. 768ರಲ್ಲಿ ತಳ ಊರಿದ್ದ. ಈ ಸಂದರ್ಭದಲ್ಲಿ ಶ್ರೀಪುರುಷ ಬಾಗೆಯೂರು, ಪಿಂಚನೂರು ಮೊದಲಾದೆಡೆಗಳಲ್ಲಿ ರಾಷ್ಟ್ರಕೂಟರೊಡನೆ ಸೆಣಸಿ ರಾಜ್ಯವನ್ನು ಉಳಿಸಿಕೊಂಡನಾದರೂ ರಾಜ್ಯದ ಉತ್ತರದ ಕೆಲವು ಭಾಗಗಳು ಕೈಬಿಟ್ಟಂತೆ ತೋರುತ್ತದೆ. ಗಂಗಾಧೀನರಾಗಿದ್ದ ನೊಳಂಬರು ಒಂದನೆಯ ಕೃಷ್ಣ ಮತ್ತು ಇಮ್ಮಡಿ ಗೋವಿಂದರ ಕಾಲದಲ್ಲಿ ಪಕ್ಷ ಬದಲಾಯಿಸಿ ರಾಷ್ಟ್ರಕೂಟರೊಡನೆ ಸೇರಿದರು.
ಈತ ಗಜಶಾಸ್ತ್ರ ಎಂಬ ಗ್ರಂಥವನ್ನು ರಚಿಸಿದ್ದಾನೆ. ಪೃಥ್ವೀಪತಿ, ಶ್ರೀವಲ್ಲಭ, ರಣಭಾಜ ಮುಂತಾದ ಬಿರುದುಗಳನ್ನು ಹೊಂದಿದ್ದ ಇವನು ಕೊಂಗಣಿ ರಾಜಾಧಿರಾಜಪರಮೇಶ್ವರ ಶ್ರೀಪುರುಷ ಎಂದು ಕೆಲವು ಶಾಸನಗಳಲ್ಲಿ ಕರೆದುಕೊಂಡಿದ್ದಾನೆ. ಇವನಿಗೆ ಮೂವರು ಪತ್ನಿಯರು; ಚಳುಕ್ಯವಂಶದ ವಿಜಯಮಹಾದೇವಿ, ನೊಳಂಬವಂಶದ ಮಹಾದೇವಿ ಮತ್ತು ಇನ್ನೊಬ್ಬಳು. ದುಗ್ಗಮಾರ, ಎರಡನೆಯ ಶಿವಮಾರ ಮತ್ತು ವಿಜಯಾದಿತ್ಯ ಈತನ ಮಕ್ಕಳು.
(ಟಿ.ಎಸ್.ಎಸ್.ಎನ್.)