ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಷ

ವಿಕಿಸೋರ್ಸ್ ಇಂದ
Jump to navigation Jump to search

ಷ ಅವರ್ಗೀಯ ವ್ಯಂಜನ ವರ್ಗದ ಆರನೆಯ ಅಕ್ಷರ. ಮೂರ್ಧನ್ಯ ಅಘೋಷ ಸಂಘರ್ಷ ವ್ಯಂಜನ ಧ್ವನಿ. ಅಶೋಕನ ಕಾಲದ ಈ ಅಕ್ಷರ ಸಾತವಾಹನ ಕಾಲದಲ್ಲಿ ಅಗಲವಾಗುತ್ತದೆ. ಕದಂಬ ಕಾಲದಲ್ಲಿ ಇದು ಸ್ವಲ್ಪ ಬದಲಾವಣೆಯನ್ನು ಹೊಂದಿ ಗಂಗರ ಕಾಲದಲ್ಲಿ ಈ ಅಕ್ಷರದ ಕೆಳಭಾಗ ಗುಂಡಗೆ ಆಗುತ್ತದೆ. ಕಲ್ಯಾಣಿ ಚಾಳುಕ್ಯರ ಕಾಲದಲ್ಲಿ ಈ ಅಕ್ಷರ ಸ್ಥಿರಗೊಂಡು ಅದೇ ರೂಪವೇ ಕಳಚುರಿ, ಹೊಯ್ಸಳ ಮತ್ತು ಸೇವುಣರ ಕಾಲಗಳಲ್ಲಿ ಉಪಯೋಗಕ್ಕೆ ಬರುತ್ತದೆ. ವೃತ್ತಾಕಾರದಂತಿದ್ದ ಈ ಅಕ್ಷರದ ಕೆಳಭಾಗ ವಿಜಯನಗರ ಕಾಲದಲ್ಲಿ ಗಮನಾರ್ಹವಾದ ಬದಲಾವಣೆಯನ್ನು ವ್ಯಕ್ತಪಡಿಸುತ್ತದೆ. ಕೆಳಗಿನ ವೃತ್ತಾಕಾರ ಖಂಡವೃತ್ತವಾಗಿ ಪರಿವರ್ತಿತಗೊಳ್ಳುತ್ತದೆ. ಹದಿನೆಂಟನೆಯ ಶತಮಾನದಲ್ಲಿ ಈ ಖಂಡವೃತ್ತಕ್ಕೆ ಒಂದು ಸಣ್ಣ ಕೊಂಡಿಯಂತಿರುವ ಆಕಾರ ಸೇರಿ ಅದೇ ರೂಪವೇ ಸ್ಥಿರವಾಗುತ್ತದೆ. (ಎ.ವಿ.ಎನ್.)