ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಷಾ, ಜಾರ್ಜ್ ಬರ್ನಾಡ್
ಷಾ, ಜಾರ್ಜ್ ಬರ್ನಾಡ್ 1856-1950. ನೊಬೆಲ್ ಬಹುಮಾನ ಪಡೆದ ಪ್ರಸಿದ್ಧ ಇಂಗ್ಲಿಷ್ ನಾಟಕಕಾರ; ವಿಮರ್ಶಕ ಹಾಗೂ ಪ್ರಬಂಧಕಾರ. ಕಲೆಗಾಗಿ ತಾನು ಒಂದೇ ಒಂದು ವಾಕ್ಯವನ್ನು ಬರೆಯುವ ಶ್ರಮವಹಿಸಲು ಸಿದ್ಧನಿಲ್ಲವೆಂದೂ ಬಾಳು ದೈವಿಕವಾಗಿ ತನ್ನನ್ನು ತಾನು ಅರಿಯುವ ಹೋರಾಟದ ಭಾಗ ಸಾಹಿತ್ಯ ಎಂದೂ ಘೋಷಿಸಿದವನು. ಐರ್ಲೆಂಡ್‍ನ ಡಬ್ಲಿನ್‍ನಲ್ಲಿ 1856 ಜುಲೈ 26ರಂದು ಜನಿಸಿದ. ಇವನ ತಂದೆತಾಯಿಗಳು ಪ್ರಾಟೆಸ್ಟೆಂಟ್ ಮತಾನುಯಾಯಿಗಳಾಗಿದ್ದರು. ಈತ ಹದಿನಾಲ್ಕನೆಯ ವಯಸ್ಸಿನಲ್ಲಿಯೇ ಶಾಲೆಗೆ ಹೋಗುವುದನ್ನು ಬಿಟ್ಟನಾ ದರೂ ಖಾಸಗಿಯಾಗಿ ಇವನಿಗೆ ಒಳ್ಳೆಯ ವಿದ್ಯಾಭ್ಯಾಸ ದೊರೆಯಿತು. ಈತ ಸದಾ ಓದಿನಲ್ಲಿ ಮಗ್ನನಾಗಿರುತ್ತಿದ್ದ; ಜೊತೆಗೆ ನಾಟಕ ನೋಡುವ ಹುಚ್ಚು ಕೂಡ ಇತ್ತು. ಹಾಗಾಗಿ ಕಳಪೆ ನಾಟಕದಿಂದ ಅತ್ಯುತ್ತಮ ಗಂಭೀರ ನಾಟಕ ಗಳವರೆಗೆ ಒಂದನ್ನೂ ಬಿಡದೆ ನೋಡುತ್ತಿದ್ದ. ಇವನಿಗೆ ಸಂಗೀತದ ಪರಿಜ್ಞಾನವೂ ಅಪಾರವಾಗಿತ್ತು. ಈತನ ತಾಯಿ ಉತ್ತಮ ಗಾಯಕಿಯಾಗಿದ್ದಳು. ಈತ ತನ್ನ ಹದಿನೈದನೆಯ ವಯಸ್ಸಿನಲ್ಲಿ ಕಚೇರಿಯೊಂದರಲ್ಲಿ ಗುಮಾಸ್ತನಾಗಿ ಕೆಲಸಕ್ಕೆ ಸೇರಿದ. ಅನಂತರ ಕ್ಯಾಷಿಯರ್ ಹುದ್ದೆಗೆ ಬಡ್ತಿ ಪಡೆದನಾದರೂ ಆ ಕೆಲಸವನ್ನು ತೊರೆದು 1876ರಲ್ಲಿ ಲಂಡನ್ನಿನ ತನ್ನ ತಾಯಿಯ ಮನೆಗೆ ಬಂದ. ಇವನಿಗೆ ಲೇಖಕನಾಗಬೇಕೆಂಬ ಹೆಬ್ಬಯಕೆಯಿತ್ತು. 1879 ರಿಂದ 1913ರವರೆಗೆ ಐದು ಕಾದಂಬರಿಗಳನ್ನು ಬರೆದ. ಇಮ್ಮೆಚೂರಿಟಿ (1879), ದಿ ಇರ್ಯಾಷನಲ್ ನಾಟ್ (1880), ಲವ್ ಅಮಾಂಗ್ ದಿ ಆರ್ಟಿಸ್ಟ್ಸ್ (1881), ಕ್ಯಾಷಲ್ ಬೈರನ್ಸ್ ಪ್ರೊಫೆಷನ್ (1882), ಎನ್ ಅನ್ ಸೋಷಿಯಲ್ ಸೋಷಿಯಲಿಸ್ಟ್ (1883). ಪ್ರಕಾಶಕರು ಇವುಗಳನ್ನು ತಿರಸ್ಕರಿಸಿದರು.
1884ರ ವೇಳೆಗೆ ಸಮಾಜವಾದದ ಬಗ್ಗೆ ಗಾಢ ಒಲವು ಬೆಳೆಸಿಕೊಂಡಿದ್ದ ಈತ ಮದ್ಯಪಾನ, ಧೂಮಪಾನಗಳ ವರ್ಜಕನಾಗಿದ್ದ (ಟೀ ಟೋಟಲರ್). ಸಮಾಜವಾದವನ್ನು ಅಂಗೀಕರಿಸಿದ್ದ ಫೇಬಿಯನ್ ಸೊಸೈಟಿ ಇವನ ಗಮನ ಸೆಳೆಯಿತು. 1884ರಲ್ಲಿ ಈ ಸಂಘದ ಸದಸ್ಯನಾಗಿ ಸೇರಿದ. ಈ ಸಂಘಕ್ಕಾಗಿ ಸಮಾಜವಾದವನ್ನು ಕುರಿತು ಈತ ಅನೇಕ ಲೇಖನಗಳನ್ನು ಬರೆದ, ಸಂಗ್ರಹಿಸಿ ಪ್ರಕಟಿಸಿದ. ಈತ ಈ ಅವಧಿಯಲ್ಲಿ ಪತ್ರಿಕೋದ್ಯಮಿಯೂ ಅತ್ಯುತ್ತಮ ಭಾಷಣಕಾರನೂ ಆಗಿದ್ದ. ಅನೇಕ ಪತ್ರಿಕೆಗಳಿಗೆ ಪುಸ್ತಕ ವಿಮರ್ಶೆ, ಸಂಗೀತ ವಿಮರ್ಶೆ, ನಾಟಕ ವಿಮರ್ಶೆಯನ್ನು ಮಾಡುತ್ತಿದ್ದ. 1891ರಲ್ಲಿ ಜೆ.ಟಿ. ಶ್ರೀಯಿನ್ ಎಂಬ ಡಚ್ ವ್ಯಕ್ತಿಯೊಬ್ಬ ಸ್ಥಳೀಯ ಇಂಗ್ಲಿಷ್ ನಾಟಕಗಳನ್ನು ಪ್ರದರ್ಶಿಸುವ ಉದ್ದೇಶದಿಂದ ಲಂಡನ್ನಿನಲ್ಲಿ ಒಂದು ಸ್ವತಂತ್ರ ನಾಟಕ ಮಂಡಳಿಯನ್ನು ಪ್ರಾರಂಭಿಸಿದ. ವಿಲಿಯಂ ಆಚಫ್ ಎಂಬ ಸಹೋದ್ಯೋಗಿ ವಿಮರ್ಶಕ ನೊಡಗೂಡಿ ಇವನು ಈ ಮೊದಲೇ ಬರೆದಿದ್ದ ನಾಟಕವನ್ನು ಪರಿಷ್ಕರಿಸಿದ. ಆ ನಾಟಕ ವಿಡೋವರ್ಸ್ ಹೌಸ್ (1892) ಎಂಬ ಹೆಸರಿನಲ್ಲಿ ರಂಗಪ್ರದರ್ಶನ ಕಂಡಿತು. ದಿ ಫಿಲಾಂಡೆರೆರ್ (1893), ಮಿಸ್ ವಾರೆನ್ಸ್ ಪ್ರೊಫೆಷನ್ (1893), ಆಮ್ರ್ಸ್ ಅಂಡ್ ದಿ ಮ್ಯಾನ್ (1894), ಕ್ರಾಂಡಿಡ (1897), ದಿ ಮ್ಯಾನ್ ಆಫ್ ಡೆಸ್ಟಿನಿ (1897), ದಿ ಡೆವಿಲ್ಸ್ ಡಿಸೈಪಲ್ (1897), ಸೀಸರ್ ಅಂಡ್ ಕ್ಲಿಯೋಪಾತ್ರ (1898), ಯೂ ಕೆನ್ ನೆವರ್ ಟೆಲ್ (1899), ಕ್ಯಾಪ್ಟನ್ ಬ್ರಾಸ್‍ಬಾಂಡ್ಸ್ ಕನ್‍ವರ್ಷನ್ (1900), ಹೌ ಹಿ ಲೈಡ್ ಟು ಹರ್ ಹಸ್ಬೆಂಡ್ (1904), ಮ್ಯಾನ್ ಅಂಡ್ ಸೂಪರ್‍ಮ್ಯಾನ್ (1905), ಮೇಜರ್ ಬಾರ್ಬರ (1905), ಪಿಗ್‍ಮ್ಯಾಲಿಯನ್ (1913), ಬ್ಯಾಕ್ ಟು ಮೆಥುಸಲಾ (1922), ಸೇಂಟ್ ಜೋನ್ (1923), ದಿ ಆ್ಯಪಲ್ ಕಾಟ್ (1929), ಜಿನಿವ (1938) - ಇವು ಇವನ ಇತರ ನಾಟಕಗಳು.
ನಾವು ವಾಸ್ತವಿಕವಾಗಿ ಹೇಗಿರುವೆವು ಎಂಬುದನ್ನು ಅರಿವು ಮಾಡಿಕೊಡುವುದು ಕಲೆಗಾರನ ಕರ್ತವ್ಯ ಎಂದು ಸಾರಿದ ಈತ ತಾನು ಈ ಗುರಿಯನ್ನು ಸಾಧಿಸಲು ಒಮ್ಮೊಮ್ಮೆ ಕೃತಿಯಷ್ಟೇ ದೀರ್ಘ ಮುನ್ನುಡಿಗಳನ್ನು ಬರೆದ. ಈ ಮುನ್ನುಡಿಗಳನ್ನು ಓದುವುದು ಸೊಗಸಾದ ಬೌದ್ಧಿಕ ಅನುಭವ. ಈ ಮುನ್ನುಡಿಗಳಲ್ಲಿ ಈತ ಹೇಳದ ವಸ್ತುವಿಲ್ಲ. ಪ್ರತಿ ವಿಷಯದ ಬಗೆಗೂ ಅನಿರೀಕ್ಷಿತವಾದ, ಪ್ರಚೋದಕವಾದ, ತನ್ನದೇ ಆದ ಅಭಿಪ್ರಾಯವನ್ನು ಹೇಳದಿರುವುದಿಲ್ಲ. ತನ್ನ ಕಾಲದ ಬೌದ್ಧಿಕ ಕ್ಷೇತ್ರದ ಜೇಡರಬಲೆಗಳನ್ನು ಹರಿದು ಗಾಳಿ ಬೆಳಕುಗಳನ್ನು ಒಳಕ್ಕೆ ಹರಿಸುವ ಕಾರ್ಯದಲ್ಲಿ ಇವನ ಮುನ್ನುಡಿಗಳು ಗಮನಾರ್ಹ ಪಾತ್ರ ವಹಿಸಿದುವು. ಸತ್ಯವೂ ಹೊಸತೂ ಆದ ಶೈಲಿ, ಶೈಲಿಗಾಗಿಯೇ ಸಾಧಿತವಾಗದು. ಪ್ರತಿಪಾದಿಸಲು ಏನೂ ಇರದವನಿಗೆ ಶೈಲಿ ಇರಲು ಸಾಧ್ಯವಿಲ್ಲ ಎಂದು ಹೇಳಿದ ಈತ ಇದರ ಸಮರ್ಥ ಪ್ರತಿಪಾದಕನಾಗಿ ಸಂಭಾಷಣೆಗೂ ಬರೆಹಕ್ಕೂ ಒಂದೇ ಸಮನಾಗಿ ಹೊಂದಿಕೊಳ್ಳಬಲ್ಲ ಗದ್ಯಶೈಲಿಯನ್ನು ಸಿದ್ಧಮಾಡಿಕೊಂಡ. ಇದರಲ್ಲಿ ಮುಖ್ಯವಾದ ಅಂಶ ವೇಗ. ಈತ ಮನಸ್ಸು ಮಾಡಿದಾಗ ಇವನ ಗದ್ಯ ಗಗನತೇಜಿಯಂತೆ ಓಡುತ್ತದೆ. ಮೂರು, ನಾಲ್ಕು, ಐದು ಅಭಿಪ್ರಾಯಗಳನ್ನು ಒಂದೇ ವಾಕ್ಯದಲ್ಲಿ ನುಸುಳಿಸಿ ಓದುವವರು ಒಂದೊಂದಕ್ಕೂ ಪ್ರತ್ಯೇಕ ಗಮನ ಕೊಡಲಾಗದಂತೆ ಸೆಳೆದೊಯ್ಯಬಲ್ಲ ಶಕ್ತಿ ಈತನದು. ಬರೆಹದ ಹಿಂದೆ ಸರ್ವಜ್ಞತ್ವ, ತೂಕ ತಪ್ಪದ ವಿವೇಚನೆಗಳ ಪ್ರದರ್ಶನ ಮಾಡುವ ಅಸಾಧಾರಣ ಆತ್ಮವಿಶ್ವಾಸದ ವ್ಯಕ್ತಿತ್ವ. ಓದುಗರನ್ನು ಚಕಿತಗೊಳಿಸುವುದೇ ಮುಖ್ಯ ಉದ್ದೇಶವಾದುದರಿಂದ ಈತ ವಿರೋಧಾಭಾಸದವನು (ಪ್ಯಾರಡಾಕ್ಸ್). ಉತ್ಪ್ರೇಕ್ಷೆಯನ್ನೂ ವಿಪುಲವಾಗಿ ಬಳಸಿಕೊಂಡ. ಆದರೆ ಕತ್ತಿಯಲುಗಿನ ತೀಕ್ಷ್ಣ ಬುದ್ಧಿ ಅದೆಲ್ಲವನ್ನೂ ಸಾರ್ಥಕಗೊಳಿಸುತ್ತದೆ. ಬೆಟ್ಟಸಾಲಿನ ಮಧ್ಯೆ ಎದ್ದು ನಿಲ್ಲುವ ಶಿಖರಗಳಂತೆ ವಾದಸರಣಿಯ ಮಧ್ಯೆ ನಾಟುನುಡಿ ಸಾರ್ಥಕವಾಗಿ ಬಳಕೆಯಾಗುತ್ತದೆ. ಮಾತಿನ ಚಮತ್ಕಾರ ಇವನಲ್ಲಿ-ರೆಸ್ಟೊರೇಷನ್ ಕಾಲದ ನಾಟಕಕಾರರಲ್ಲಿ ಕಾಣುವಂತೆ-ಬರಿಯ ಮನರಂಜನೆಯ ಅಥವಾ ಕುಶಾಗ್ರ ಬುದ್ಧಿಯ ಪ್ರದರ್ಶನದ ಸಾಧನವಲ್ಲ. ಶ್ರದ್ಧೆಯಿಂದ ಈತ ಇದನ್ನು ಬಳಸುತ್ತಾನೆ. ಭ್ರಾಂತಿಗಳನ್ನು ಸೀಳುವ ಮತ್ತು ಅನ್ಯಾಯವನ್ನು ಸರಿಪಡಿಸುವ ಉತ್ಸಾಹ ಇವನ ತರ್ಕಕ್ಕೆ ಉದಾ ತ್ತತೆಯನ್ನು ನೀಡುತ್ತದೆ. ಆದರೆ ಕಲ್ಪನೆ, ಭಾವನೆಗಳನ್ನು ವ್ಯಕ್ತಪಡಿಸಲು ಹೊರಟಾಗ ಇವನ ಬರೆಹ ಬರಿಯ ಮಾತಿನ ಗೊಂದಲವಾಗುತ್ತದೆ. ಇವನ ನಾಟಕಗಳು ನಾಟಕ ಮಂದಿರದಲ್ಲಿ ಉಂಟುಮಾಡುವಷ್ಟೇ ಪರಿಣಾಮವನ್ನು, ಪ್ರಾಯಃ ಹೆಚ್ಚಿನ ಪರಿಣಾಮವನ್ನು ಇವನ್ನು ಓದಿದಾಗಲೂ ಉಂಟುಮಾಡುವುವು ಎಂಬುದು ಗಮನಾರ್ಹ ಅಂಶ.
“ಯುದ್ಧ, ರೋಗ ಮತ್ತು ವರ್ತಮಾನ ಕಾಲದ ಕುಗ್ಗಿದ ಆಯುಷ್ಯ - ಇವೆಲ್ಲ ಜೀವನ ಬಲವನ್ನು ಕುಂದಿಸುತ್ತದೆಯಾಗಿ ಕ್ರಿಯಾತ್ಮಕ ಹೊಂದಾಣಿಕೆ ಹಾಗೂ ಮನುಷ್ಯನ ಜಾಗೃತ ಸಂಕಲ್ಪವೇ ಮಾನವನ ಪ್ರಗತಿಗೆ ಆಶಾಕಿರಣ” ಎಂದು ಈತ ಹೇಳಿದ್ದಾನೆ. ಈತನ ಮರಣಾನಂತ ರವೂ ಇವನ ಜನಪ್ರಿಯತೆ ಕಡಿಮೆಯಾಗಲಿಲ್ಲ. ಬದುಕಿನ ಬಗ್ಗೆ ಈತ ಇಟ್ಟುಕೊಂಡಿದ್ದ ಅಸಾಂಪ್ರದಾಯಿಕ ದೃಷ್ಟಿಕೋನ, ಹಾಸ್ಯ ಮತ್ತು ವಿರೋಧಾಭಾಸವನ್ನು ಇವನು ಪ್ರೀತಿಸುತ್ತಿದ್ದ ಬಗೆ-ಇವೆಲ್ಲ ಈಗ ಸ್ಥಾಪಿತವಾಗಿರುವ ಸಂಗತಿಗಳು. ಈತ ನಾರ್ವೆ ದೇಶದ ಪ್ರಖ್ಯಾತ ನಾಟಕಕಾರ ಇಬ್ಸನ್‍ನಿಂದ ಸ್ಫೂರ್ತಿಪಡೆದಿರುವುದು ಸರ್ವವಿದಿತ. ಷಾ ಪತ್ರ ಬರೆಯುವುದರಲ್ಲಿ ನಿಸ್ಸೀಮ. ತನ್ನ ಸ್ನೇಹಿತರಿಗೆ ಇವನು ಬರೆದ ಸಹಸ್ರಾರು ಪತ್ರಗಳನ್ನು ಗ್ರಂಥ ರೂಪದಲ್ಲಿ ಪ್ರಕಟಿಸಲಾಗಿದೆ. 1925ರಲ್ಲಿ ಇವನಿಗೆ ನೊಬೆಲ್ ಬಹುಮಾನ ಬಂತು. ಈತ 1950ರಲ್ಲಿ ನಿಧನನಾದ. 1970ರಲ್ಲಿ ಏಳು ಸಂಪುಟಗಳಲ್ಲಿ ಇವನ ಸಮಗ್ರ ನಾಟಕಗಳನ್ನು ಸಂಗ್ರಹಿಸಲಾಗಿದೆ. (ಎಲ್.ಎಸ್.ಎಸ್.)