ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಮ್ನರ್, ವಿಲಿಯಂ ಗ್ರಹಾಮ್
ಸಮ್ನರ್, ವಿಲಿಯಂ ಗ್ರಹಾಮ್ 1840-1910. ಅಮೆರಿಕದ ಸಮಾಜಶಾಸ್ತ್ರಜ್ಞ. ಸಾಮಾಜಿಕ ಡಾರ್ವಿನ್‍ವಾದದ ಪುರಸ್ಕøತರಲ್ಲಿ ಪ್ರಮುಖನಾದವ. ಈತ ಇಂಗ್ಲೆಂಡಿನಿಂದ ಅಮೆರಿಕಕ್ಕೆ ವಲಸೆಬಂದ ಕುಶಲಕರ್ಮಿಯ ಮಗನಾಗಿ 1840ರಲ್ಲಿ ನ್ಯೂಜೆರ್ಸಿಯಲ್ಲಿ ಜನಿಸಿದ. ಯೇಲ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರವನ್ನೂ ಜಿನೀವದಲ್ಲಿ ಫ್ರೆಂಚ್ ಮತ್ತು ಹೀಬ್ರೂ ಸಾಹಿತ್ಯಗಳನ್ನೂ ಜರ್ಮನಿಯ ಗಾಟಿಂಗೆನ್‍ನಲ್ಲಿ ಇತಿಹಾಸವನ್ನೂ ಆಕ್ಸ್‍ಫರ್ಡಿನಲ್ಲಿ ಆಂಗ್ಲಿಕನ್ ದೇವಶಾಸ್ತ್ರವನ್ನೂ ಅಧ್ಯಯನ ಮಾಡಿದ. ಯೇಲ್ ವಿಶ್ವವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಮತ್ತು ಸಮಾಜವಿಜ್ಞಾನ ಪ್ರಾಧ್ಯಾಪಕನಾಗಿದ್ದು (1872-1909) ಸಮಾಜಶಾಸ್ತ್ರವನ್ನು ಜನಪ್ರಿಯಗೊಳಿಸಿದ. ಅಮೆರಿಕದ ಸಮಾಜಶಾಸ್ತ್ರ ಸಂಘದ ಎರಡನೆಯ ಅಧ್ಯಕ್ಷನೂ ಆಗಿದ್ದ. ಇವನ ಅಂದಿನ ಖ್ಯಾತಿಗೆ ಕಾರಣವಾದುದು ಸರ್ಕಾರ ಎಲ್ಲಿಯೂ ಮಧ್ಯ ಪ್ರವೇಶಿಸಬಾರದು ಎಂಬ ವಾದ ಸರಣಿ ಸಮಾಜವಾದ, ಕಾರ್ಮಿಕ ಸಂಘ, ಸಾಮಾಜಿಕ ಶಾಸನ, ಬಾಲಕಾರ್ಮಿಕ ಕಾಯ್ದೆ, ಎಂಟುಗಂಟೆಗಳ ಪರಮಾವಧಿ ಕೆಲಸ ನಿರ್ಬಂಧ ಕಾಯ್ದೆ, ವ್ಯಾಪಾರಿ ಏಕಸ್ವಾಮ್ಯ ನಿರ್ಬಂಧ ಕಾಯ್ದೆ, ಸಮಾಜ ಸುಧಾರಣೆ ಇವೆಲ್ಲ ನೈಸರ್ಗಿಕ ನಿಯಮಗಳನ್ನು ಉಲ್ಲಂಘಿ ಸುತ್ತವೆಂದೂ ಸಮಾಜ ಕಲ್ಯಾಣದ ಹೆಸರಿನಲ್ಲಿ ಹೆಚ್ಚು ಕೂಲಿ ಸಂಬಳ ಕೊಟ್ಟರೆ ಅಥವಾ ಜನಸೇವೆಗಳಿಗೆ ಖರ್ಚುಮಾಡುತ್ತ ಹೋದರೆ “ಮರೆತ ಮಾನವ”ರಾದ ಬಡಮಧ್ಯಮ ವರ್ಗದವರಿಗೆ ಅನವಶ್ಯಕವಾಗಿ ಆರ್ಥಿಕ ಹೊರೆ ಹೆಚ್ಚುತ್ತದೆಂದೂ ಖಂಡತುಂಡವಾಗಿ ಬರೆದ, ಮಾತನಾಡಿದ.
ಇವನ ಸಾಮಾಜಿಕ ಡಾರ್ವಿನ್‍ವಾದವೂ ಇಷ್ಟೇ(ಕು)ಖ್ಯಾತಿ ಪಡೆದಿದೆ. ಆ ಎರಡು ಶಕ್ತಿಗಳು ಮಾನವನು ಎಲ್ಲ ಪ್ರಾಣಿಗಳಂತೆ ಕೊಳ್ಳೆಹೊಡೆಯು ವವನೇ. ಆಸ್ತಿ, ವಸ್ತು ಒಡವೆ, ಮಾನವತಾವಾದ ಅನೈಸರ್ಗಿಕ ಮತ್ತು ದುಬಾರಿ; ಡಾರ್ವಿನ್‍ವಾದ ನೈಸರ್ಗಿಕ ಮತ್ತು ನ್ಯಾಯಸಮ್ಮತ. ವೃದ್ಧರನ್ನು ನಿರ್ಮಮತೆಯಿಂದ ಕೊಲ್ಲುವ ಕೆಲವು ಬುಡಕಟ್ಟುಗಳ ರೂಢಿ ಸಹ ಸಹಜವಾದುದು. ಆದುದರಿಂದ ಯೋಗ್ಯವಾದುದು - ಇದು ಸಮ್ನರನ ಡಾರ್ವಿನ್‍ವಾದ. ಇಲ್ಲಿ ಹರ್ಬರ್ಟ ಸ್ಪೆನ್ಸರನ ದಟ್ಟ ಪ್ರಭಾವವನ್ನು ಕಾಣಬಹುದು. ಮಾನವಶಾಸ್ತ್ರಜ್ಞರನ್ನೊಳ ಗೊಂಡ ಎಲ್ಲರಿಂದಲೂ ಈ ವಾದಸರಣಿ ತಿರಸ್ಕøತವಾಗಿದೆ.
ಇವನ ಮೌಲಿಕ ಕಾಣಿಕೆಗಳಲ್ಲಿ ಲೋಕರೂಢಿ, ನೈತಿಕ ಕಟ್ಟಳೆಗಳು, ಒಳಗುಂಪು, ಹೊರಗುಂಪು ಇತ್ಯಾದಿ ಪ್ರಕಲ್ಪನೆಗಳನ್ನೂ ಹೆಸರಿಸಬಹುದು. ಈತ ಸಂಸ್ಕøತಿಗಳ ಸಾಪೇಕ್ಷತೆಯನ್ನು ಒತ್ತಿಹೇಳಿದ. ಇವನಲ್ಲಿ ಸಾಮಾಜಿಕ ಪರಿವರ್ತನೆಯ ಒಂದು ಸಿದ್ಧಾಂತವೂ ಅಸ್ಪಷ್ಟರೂಪದಲ್ಲಿದೆ. ಆದರೆ ಇವನ ಸಮಾಜಶಾಸ್ತ್ರದಲ್ಲಿ ಕೆಲವು ಪ್ರಮೇಯಗಳೇನೋ ಇವೆಯಾದರೂ ಯಾವ ವ್ಯವಸ್ಥಿತ ಸಿದ್ಧಾಂತ ಮತ್ತು ಇಂದಿನ ಮಾನವ ಸಮಸ್ಯೆಗಳಿಗೆ ಪರಿಹಾರ ಇವಾವುದೂ ಇಲ್ಲವೆಂದು ಈತನ ಟೀಕಾಕಾರರ ಅಭಿಪ್ರಾಯ.
ಇವನ ಫೋಕ್‍ವೇಸ್(1906) ಗ್ರಂಥದಲ್ಲಿ ಮೌಲಿಕ ಸಿದ್ಧಾಂತಗ ಳಿಲ್ಲದಿದ್ದರೂ ಅನೇಕ ದಶಕಗಳ ಕಾಲ ಅದು ಅಮೆರಿಕದಲ್ಲಿ ಪ್ರಭಾವ ಶಾಲಿಯೂ ಕಥೆ, ಐತಿಹ್ಯ, ಆಚರಣೆಗಳ ವಿವರಗಳನ್ನೊಳಗೊಂಡು ಜನಪ್ರಿಯವೂ ಆಗಿತ್ತು. ಇವನ ಶಿಷ್ಯನಾದ ಆಲ್ಬರ್ಟ್‍ಕೆಲ್ಲರ್ ಈತನ ಬರೆಹಗಳನ್ನೂ ಟಿಪ್ಪಣಿಗಳನ್ನೂ ಸಂಗ್ರಹಿಸಿ ನಾಲ್ಕು ಸಂಪುಟಗಳಲ್ಲಿ ಸೈನ್ಸ್ ಆಫ್ ಸೊಸೈಟಿ ಎಂಬ ಹೆಸರಿನಲ್ಲಿ ಈತನ ನಿಧನಾನಂತರ (1927-28) ಪ್ರಕಟಿಸಿದ.
(ಎಚ್.ವಿ.ಎನ್.)