ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾಲ್ವಡಗಿ
ಸಾಲ್ವಡಗಿ ಮುದ್ದೇಬಿಹಾಳ ತಾಲ್ಲೂಕಿನಲ್ಲಿ ತಾಳೀಕೋಟೆಯಿಂದ ಪೂರ್ವಕ್ಕೆ 11 ಕಿಮೀ ದೂರದಲ್ಲಿರುವ ಒಂದು ಸಣ್ಣಹಳ್ಳಿ. ಜನಸಂಖ್ಯೆ 2,540. ಇಲ್ಲಿನ ಪ್ರಾಗೈತಿಹಾಸಿಕ ನೆಲೆಗಳು ಬಹು ಪ್ರಸಿದ್ಧವಾಗಿವೆ. ಈ ಹಳ್ಳಿಯ ಪೂರ್ವದಿಕ್ಕಿಗೆ ಸು. 21/2 ಕಿಮೀ ದೂರದಲ್ಲಿ ಮಧ್ಯ ಹಳೆಯ ಶಿಲಾಯುಗದ ಹಾಗೂ ಅಂತ್ಯ ಹಳೆಯ ಶಿಲಾಯುಗದ್ದು ಎನ್ನಬಹುದಾದ ಸಂಸ್ಕøತಿಗಳ ಕಲ್ಲಿನ ಚಕ್ಕೆ ಆಯುಧಗಳು, ಅವುಗಳ ತಯಾರಿಕೆಗೆ ಉಪಯೋಗಿಸುವ ಕಲ್ಲಿನ ಗಟ್ಟಿಗಳು ಮತ್ತು ಅವುಗಳನ್ನು ಮಾಡುತ್ತಿದ್ದಾಗ ಬಿದ್ದ ಪುಡಿಚಕ್ಕೆಗಳು ಹೇರಳವಾಗಿ ಬಿದ್ದಿವೆ. ಇವುಗಳನ್ನೆಲ್ಲ ಪರಿಶೀಲಿಸಿದರೆ, ಆ ಸ್ಥಳ ಅಂಥ ಕಲ್ಲಿನ ಉಪಕರಣಗಳನ್ನು ಮಾಡುತ್ತಿದ್ದ ಕಾರ್ಯಾಗಾರವೆನ್ನಬಹುದು. ಮಧ್ಯ ಶಿಲಾಯುಗ ಸಂಸ್ಕøತಿಯ ಕಲ್ಲಿನ ಉಪಕರಣಗಳಲ್ಲಿ ಹೆರೆಯಲು ಉಪಯೋಗವಾಗುವಂಥ ವಿವಿಧಾಕಾರಗಳ ಚಕ್ಕೆಗಳು, ತೂತು ಮಾಡುವಂಥ ಮೊನೆಗಳು ಇವೆ. ಅಂತ್ಯ ಹಳೆಯ ಶಿಲಾಯುಗದ ಉಪಕರಣಗಳಲ್ಲಿ ಹೆಚ್ಚಿನವು ನೀಳವಾದ ಎರಡು ಬದಿಗಳಲ್ಲಿನ ಹರಿತವಾದ ಬಾಯಿಯುಳ್ಳ ಚಕ್ಕೆಗಳು. ಇವುಗಳೆಲ್ಲ ಚರ್ಟ್ ಹಾಗೂ ಜಾಸ್ಪೆರ್ ಕಲ್ಲುಗಳಲ್ಲಿ ಶಿಲೆಗಳಿಂದ ಮಾಡಿದವುಗಳು.
ಈ ಹಳ್ಳಿಯ ಆಗ್ನೇಯ ದಿಕ್ಕಿಗೆ ಮತ್ತೊಂದು ಪ್ರಾಚೀನ ನಿವೇಶನ ಕೆಲವೇ ಮೀಟರುಗಳ ದೂರದಲ್ಲಿದೆ. ಇದು ಶಿಲಾ-ತಾಮ್ರಯುಗದ ಹಂತದಲ್ಲಿರುವ ಒಂದು ನೂತನ ಶಿಲಾಯುಗ ಸಂಸ್ಕøತಿ ಜನರ ನೆಲೆ. ಹರಪ್ಪ ಸಂಸ್ಕøತಿಯ ನೀಳವಾದ ಉದ್ದ ಚಕ್ಕೆಗಳನ್ನು ಹೋಲುವಂಥ ಕಲ್ಲಿನ ಚಕ್ಕೆಗಳು, ಪಟ್ಟಿಕಟ್ಟೆಯ ಗಟ್ಟಿಗಳು, ಉಜ್ಜಿ ನಯಮಾಡಿದ ಮೈಯುಳ್ಳ ಕಲ್ಲಿನ ಕೊಡಲಿಗಳು, ಬೂದು ಹಾಗೂ ನಸುಗೆಂಪು ಬಣ್ಣಗಳ ವಿಧವಿಧವಾದ ಹರವಿ, ಕೊಡ, ಬಟ್ಟಲು, ತಟ್ಟೆ ಮುಚ್ಚಳ ಮುಂತಾದ ಮಣ್ಣಿನ ಪಾತ್ರೆಗಳ ಅವಶೇಷಗಳು, ಸುಣ್ಣ ಹಿಡಿದ ಪ್ರಾಣಿಗಳ ಎಲುಬುಗಳು ಇವೇ ಮೊದಲಾದ ಅವಶೇಷಗಳು ವಿಪುಲವಾಗಿವೆ.
ಸಾಲ್ವಡಗಿ ಪ್ರಾಗೈತಿಹಾಸಿಕ ಮಾನವನ ಸಂಸ್ಕøತಿಯ ಮುಖ್ಯವಾದ ಮೂರು ಹಂತಗಳನ್ನು ಸ್ಪಷ್ಟವಾಗಿ ತೋರಿಸುವಂಥ ಅಪರೂಪವಾದ ಸ್ಥಳಗಳಲ್ಲಿ ಒಂದು. (ಎ.ಎಸ್.ಯು.)