ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾವಿತ್ರಿ
ಸಾವಿತ್ರಿ ಮದ್ರ ದೇಶಾಧಿಪತಿ ಅಶ್ವಪತಿ ರಾಜನ ಮಗಳು. ಸಾಳ್ವರಾಜ ದ್ಯುಮತ್ಸೇನನ ಮಗ ಸತ್ಯವಂತನ ಹೆಂಡತಿ. ಮಾಳವ ರಾಜಪುತ್ರಿ ಈಕೆಯ ತಾಯಿ.
ಸತ್ಯವಂತ ಅಲ್ಪಾಯುಷಿ ಎಂದು ತಿಳಿದೂ ಆತನನ್ನೇ ಮೆಚ್ಚಿ ಮದುವೆಯಾದಳು. ಸತ್ಯವಂತನೊಂದಿಗೆ ಅರಣ್ಯಕ್ಕೆ ಸೌದೆ ತರಲು ಹೋಗಿ ಅಲ್ಲಿ ಸತ್ತ ತನ್ನ ಗಂಡನನ್ನು ಎಳೆದು ಒಯ್ಯಲು ಬಂದ ಯಮನನ್ನು ತಾನೂ ಹಿಂಬಾಲಿಸಿ ಅವನೊಡನೆ ಸಂವಾದ ನಡೆಸಿ, ಆತನನ್ನು ಮೆಚ್ಚಿಸಿ, ಆತನಿಂದ ವರಗಳನ್ನು ಪಡೆದು ತನ್ನ ಗಂಡನನ್ನು ಬದುಕಿಸಿಕೊಂಡು ಬಂದಳು. ಕುರುಡನಾದ ತನ್ನ ಮಾವನಿಗೆ ಕಣ್ಣು ಬರುವಂತೆಯೂ ಮಾವ ಕಳೆದುಕೊಂಡಿದ್ದ ರಾಜ್ಯ ಪುನಃ ದೊರೆಯುವಂತೆಯೂ ತನಗೂ ತನ್ನ ತಂದೆಗೂ ಪುತ್ರ ಸಂತಾನವಾಗುವಂತೆಯೂ ಯಮನಲ್ಲಿ ಸಾವಿತ್ರಿ ಬೇಡಿದ ವರಗಳು. ಅವಳು ತನ್ನ ಧೈರ್ಯ ಸಾಹಸಗಳಿಂದ ಯಮನನ್ನು ಮೆಚ್ಚಿಸಿ ತನ್ನ ಗಂಡನನ್ನು ಪುನಃ ಪಡೆದ ಸೌಭಾಗ್ಯದಿಂದಾಗಿ ತನ್ನ ಅತ್ತೆ ಮಾವಂದಿರ ಕೃಪೆಗೆ ಪಾತ್ರಳಾದಳು. ಈ ಕಾರ್ಯಗಳಿಂದಾಗಿ ಪತಿವ್ರತೆಯರಲ್ಲಿ ಅಗ್ರಮಾನ್ಯಳು ಎನಿಸಿಕೊಂಡಿದ್ದಾಳೆ.
ಈ ವೃತ್ತಾಂತ ಮಹಾಭಾರತದ ವನಪರ್ವದಲ್ಲಿ ಉಲ್ಲೇಖಗೊಂಡಿದೆ. ಈ ಕಥಾವಸ್ತುವನ್ನು ಆಧರಿಸಿ ಅನೇಕ ಕಥೆ, ಕಾವ್ಯ, ನಾಟಕಗಳು ಸೃಷ್ಟಿಯಾಗಿವೆ. ಕುವೆಂಪು ಅವರು ರಚಿಸಿರುವ ಯಮನ ಸೋಲು ಎಂಬ ನಾಟಕ ಈ ಕಥಾವಸ್ತುವನ್ನೇ ಆಧರಿಸಿದೆ. (ಎ.ವಿ.ಕೆ.)