ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸಾವಿರದೊಂದು ರಾತ್ರಿ
ಸಾವಿರದೊಂದು ರಾತ್ರಿ
ಅರಬ್ಬೀ ಭಾಷೆಯ ಜನಪ್ರಿಯ ಕಥಾ ಸಂಕಲನ. ಈ ಕೃತಿಯ ಕರ್ತೃ, ಕಾಲ ಚರ್ಚಾಸ್ಪದ. ಯುರೋಪಿನ ಜನಪ್ರಿಯ ಜನಪದ ಕಥೆಗಳಿವು. ಮುಖ್ಯ ಪಾತ್ರಗಳ ಹೆಸರು ಇರಾನಿನವರಂತಿದೆಯಾದರೂ ಕಥಾ ಭಿತ್ತಿ ಭಾರತದ್ದು ಎನ್ನಲಾಗಿದೆ. ಸಾವಿರದೊಂದು ಅಥವಾ ಒಂದು ಸಾವಿರ ಕಥೆಗಳು ಕಥಾಜಗತ್ತಿನ ಆಗಾಧತೆ ತೋರುತ್ತವೆ. ಇಲ್ಲಿನ ಕಥೆಗಳಲ್ಲಿ ಪ್ರಕ್ಷಿಪ್ತಗಳೂ ಇವೆ. ಈ ಕೃತಿಯನ್ನು ಅನೇಕರು ಸಂಪಾದಿಸಿದ್ದಾರೆ. ಇವುಗಳಲ್ಲಿ ಸರ್ ರಿಚರ್ಡ್ ಬರ್ಟನ್ ಸಂಪಾದಿಸಿದ 10 ಸಂಪುಟಗಳು(1885) ಹಾಗೂ ಆರು ಉಪಸಂಪುಟಗಳು (1886-88) ಪ್ರಪಂಚಾದ್ಯಂತ ಜನ ಮನ್ನಣೆ ಗಳಿಸಿವೆ. ಈ ಸಂಪುಟಗಳ ಹೆಸರು ದಿ ಥೌಸಂಡ್ ನೈಟ್ಸ್ ಅಂಡ್ ಎ ನೈಟ್. ತರುವಾಯ ಈತನೇ ಸಂಕ್ಷಿಪ್ತ ಆವೃತ್ತಿಯನ್ನೂ ಪ್ರಕಟಿಸಿದ್ದಾನೆ. ಸಿ.ಕೆ. ವೆಂಕಟರಾಮಯ್ಯನವರು ಇದನ್ನು ಕನ್ನಡಕ್ಕೆ ಸಾವಿರದೊಂದು ರಾತ್ರಿ ಎಂದು ಅನುವಾದಿಸಿದ್ದಾರೆ(1960).
ಅರೇಬಿಕ್ ಭಾಷೆಯಲ್ಲಿ ಕಥನಕಾರರಿಂದ ಪ್ರಚಾರವಾಗುತ್ತಿದ್ದ ಕಥೆಗಳಲ್ಲಿ 480 ಕಥೆಗಳನ್ನು ಜಶಿಯಾರಿ 942ರಲ್ಲಿ ಬರೆದಿಟ್ಟ. ಮುಂದೆ ಬೆಳೆದ ಕಥೆಗಳೆಲ್ಲವನ್ನೂ ಕೂಡಿಸಿ ಕೈರೋದಲ್ಲಿ ಗ್ರಂಥ ರೂಪದಲ್ಲಿ ತರಲಾಯಿತು. ಪೌರ್ವಾತ್ಯ ನಾವಿಕರ ಅನುಭವಗಳಿಂದ ಇಲ್ಲಿಯ ಕಥೆಗಳು ಪ್ರೇರಣೆ ಪಡೆದಿವೆ. ಇಂಡಿಯನ್, ಜ್ಯೂಯಿಸ್, ಈಜಿಪ್ಷಿಯನ್ ಹಾಗೂ ಅರೇಬಿಕ್ ಮೂಲಗಳಿಂದ ಈ ಕಥೆಗಳು ಬಂದಿವೆಯೆಂದು ನಂಬಲಾಗಿದೆ. ಹೋಮರನ ಒಡಿಸಿಯಸ್‍ನ ಸಾಹಸ ಯಾತ್ರೆಗಳ ಕಥೆಯ ಹೋಲಿಕೆ ಸಿಂದಬಾದ್ ಕಥೆಯಲ್ಲಿದೆ. ಮೂರು ಸೋದರಿಯರು ಎಂಬ ಕಥೆಗೆ ಬೈಬಲ್ಲಿನ ಮೋಸಸ್‍ನ ಕಥೆಯ ಹೋಲಿಕೆಯಿದೆ. ಕಥಾಸರಿತ್ಸಾಗರದಲ್ಲಿ ಬರುವ ಮಂತ್ರ, ಮಾಟ, ಭೂತ ಪಿಶಾಚಾದಿ ಕಥೆಗಳ ವಾತಾವರಣ ಇಲ್ಲಿಯೂ ಬರುತ್ತದೆ. ಅದರೆ ಇಲ್ಲಿಯ ಕಥೆಗಳ ಶೈಲಿಯ ಕಲ್ಪನಾ ಸಂಪತ್ತು ಹೆಚ್ಚು ಶ್ರೀಮಂತವಾಗಿದೆ. ಸಿಂದಬಾದ್ ನಾವಿಕ, ಅಲ್ಲಾವುದ್ದೀನನ ಅದ್ಭುತದೀಪ ಭೂತದ ಕಥೆ, ಅಲಿಬಾಬಾ ಮತ್ತು ನಲ್ವತ್ತು ಕಳ್ಳರು, ಕಪ್ಪು ದೀಪದ ರಾಜಕುಮಾರರು ಮುಂತಾದ ಕಥೆಗಳೂ ಅತ್ಯಂತ ಜನಪ್ರಿಯವಾಗಿವೆ.
ಮಾಟದ ಉಂಗುರ, ಮಂತ್ರತಂತ್ರ, ಮಾಯಾದೀಪ, ಸಮುದ್ರ ರಾಕ್ಷಸ, ಕೀಲು ಕುದುರೆ ಇತ್ಯಾದಿ ಅದ್ಭುತ ರಮ್ಯ ವಿಷಯಗಳು ಇಲ್ಲಿವೆ. ಇಸ್ಲಾಮ್ ಧರ್ಮದ ವಾತಾವರಣ ಇದರಲ್ಲಿದೆ. ಆಗಿನ ಅನೇಕ ನಂಬಿಕೆಗಳೂ ಆಚರಣೆಗಳೂ ಇದರಲ್ಲಿವೆ.
ಶಾಹ್ರೀರ್ ಬಾದಶಹನ ರಾಣಿ ಶಹರಜಾದೆ ಸಾವಿರದೊಂದು ರಾತ್ರಿಗಳವರೆಗೆ ಕುತೂಹಲಕಾರಿಯಾದ ಕಥೆ ಹೇಳಿ ಮೊದಲಿನ ಪತ್ನಿಯ ದ್ರೋಹದ ಪರಿಣಾಮವಾಗಿ, ಮದುವೆಯಾಗಿ ಮರುದಿನವೇ ಪತ್ನಿಯರನ್ನು ಕೊಲ್ಲಿಸುತ್ತಿದ್ದ ಬಾದಶಹನನ್ನು ಮೆಚ್ಚಿಸಿ ಸಾವನ್ನು ತಪ್ಪಿಸಿಕೊಂಡು ಸುಖದಿಂದುಳಿದ ಕಥೆ ಈ ಎಲ್ಲ ಕಥೆಗಳಿಗೆ ಏಕಸೂತ್ರತೆಯನ್ನು ಕಲ್ಪಿಸಿದೆ.
(ಎಲ್.ಆರ್.ಎಚ್.)