ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಕ್ಥಣಕರ್, ವಿ ಎಸ್
ಸುಕ್ಥಣಕರ್, ವಿ ಎಸ್ 1887-1943. ಪ್ರಸಿದ್ಧ ಸಂಸ್ಕøತ ವಿದ್ವಾಂಸ ಹಾಗೂ ಭಾಷಾವಿಜ್ಞಾನಿ. ಪುಣೆಯ ಭಂಡಾರ್ಕರ್ ಪ್ರಾಚ್ಯವಿದ್ಯಾಸಂಸ್ಥೆ ಪ್ರಕಟಿಸಿರುವ ಮಹಾಭಾರತ ಸಂಪುಟಗಳ ಪ್ರಧಾನಸಂಪಾದಕ. ಇವರ ಪೂರ್ಣ ಹೆಸರು ವಿಷ್ಣು ಸೀತಾರಾಮ ಸುಕ್ಥಣಕರ್. ಇವರು 1887ರಲ್ಲಿ ಜನಿಸಿದರು. ಪ್ರಾರಂಭಿಕ ಶಿಕ್ಷಣ ಮುಂಬಯಿಯ ಮರಾಠ ಹೈಸ್ಕೂಲ್ ಹಾಗೂ ಸಂತ ಕ್ಸೇವಿಯರ್ ಕಾಲೇಜುಗಳಲ್ಲಿ. ಅನಂತರ ಉನ್ನತ ಶಿಕ್ಷಣಕ್ಕಾಗಿ ಕೇಂಬ್ರಿಜ್‍ಗೆ ಹೋದರು. ಅಲ್ಲಿನ ವಿಶ್ವವಿದ್ಯಾಲಯದಲ್ಲಿ ಗಣಿತಶಾಸ್ತ್ರದಲ್ಲಿ ಎಂ.ಎ. ಪದವಿ ಗಳಿಸಿದರು. ಅನಂತರ ಬರ್ಲಿನ್‍ಗೆ ಹೋಗಿ ಸಂಸ್ಕøತ ಸಾಹಿತ್ಯ ಹಾಗೂ ಭಾಷಾಶಾಸ್ತ್ರಗಳ ಅಧ್ಯಯನ ಮಾಡಿದರು. ಅಲ್ಲಿ ಇವರಿಗೆ ಲುಡರ್ಸ್‍ನ ಮಾರ್ಗದರ್ಶನ ದೊರೆಯಿತು. ಅಲ್ಲಿ ಇವರು ಡಾಯೀ ಗ್ರಮೈಟಿಕ್ ಸಾಕಟಾಯನಾಭ್ ಎಂಬ ಗ್ರಂಥವನ್ನು ಸಾದರಪಡಿಸಿ ಪಿಎಚ್.ಡಿ. ಪದವಿ ಪಡೆದರು. ಇದು ಶಾಕಟಾಯನನ ವ್ಯಾಕರಣಕ್ಕೆ ಸಂಬಂಧಿಸಿದೆ. ಭಾರತಕ್ಕೆ ಹಿಂದಿರುಗಿದ ಮೇಲೆ ಭಾರತೀಯ ಪುರಾತತ್ತ್ವ ಸರ್ವೇಕ್ಷಣ ಇಲಾಖೆಯಲ್ಲಿ ಸಹಾಯಕ ಅಧೀಕ್ಷಕ ಪದವಿಯಲ್ಲಿ ನಿಯುಕ್ತರಾದರು. ಇಲ್ಲಿ ಇವರು ಪೂರ್ವ ಮಧ್ಯಕಾಲೀನ ಅನೇಕ ಶಿಲಾಲೇಖನಗಳನ್ನು, ತಾಮ್ರಪಟಗಳನ್ನು ಓದಿ ಸಾತವಾಹನ ರಾಜವಂಶದ ಇತಿಹಾಸದ ಮೇಲೆ ಹೊಸಬೆಳಕು ಚೆಲ್ಲುವ ವಿದ್ವತ್ಪೂರ್ಣ ಲೇಖನಗಳನ್ನು ಪ್ರಕಟಿಸಿದರು. ಈ ಲೇಖನಗಳು ಎಪಿಗ್ರಾಫಿಯ ಇಂಡಿಕ ಸಂಪುಟಗಳಲ್ಲಿ ಪ್ರಕಟವಾಗಿವೆ.
ಇವರ ಪ್ರತಿಭೆಯ ಪ್ರದರ್ಶನ ಆದದ್ದು ಇವರು ಮಹಾಭಾರತ ಗ್ರಂಥದ ಸಂಪುಟಗಳನ್ನು ವಿದ್ವತ್‍ಪೂರ್ಣ ಮುನ್ನುಡಿಯಿಂದ ಪ್ರಕಟಿಸಿದಾಗ. ಆದಿಪರ್ವಕ್ಕೆ ಇವರು ಬರೆದಿರುವ ಉಪೋದ್ಘಾತ ಇಂದಿಗೂ ಮಾರ್ಗದರ್ಶಿಯಾಗಿದೆ; ಮಹಾಭಾರತದ ಮೂಲಪಾಠವನ್ನು ನಿರ್ಣಯಿಸುವಲ್ಲಿ ಅತ್ಯಂತ ಪಾರದರ್ಶಕವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿ, ಪಶ್ಚಿಮ ಸಮುದ್ರದಿಂದ ಜಾವಾ ಸುಮಾತ್ರ ದ್ವೀಪಗಳವರೆಗೆ ಹಾಗೂ ಪಾಶ್ಚಿಮಾತ್ಯ ದೇಶಗಳಿಗೆ ಹೋಗಿರುವ ಉಪಲಬ್ಧ ಸಾಮಗ್ರಿಯನ್ನು ಈ ಸಂಪುಟಗಳ ಸಂಪಾದನೆಯ ಕಾರ್ಯದಲ್ಲಿ ಬಳಸಿಕೊಂಡಿದ್ದಾರೆ. ಇವುಗಳ ವಿಶೇಷ ಹಾಗೂ ಸ್ಥೂಲಪರಿಚಯಗಳನ್ನು ಈ ಉಪೋದ್ಘಾತದಲ್ಲಿ ನೀಡಿದ್ದಾರೆ. ಇದರ ಸ್ಥೂಲಪರಿಚಯ ಹೀಗಿದೆ: ಭಿನ್ನಭಿನ್ನ ಲಿಪಿಗಳು -
1. ದೇವನಾಗರಿ ಹಸ್ತಪ್ರತಿಗಳು 107, 2. ಬಂಗಾಲಿ ಹಸ್ತಪ್ರತಿಗಳು 32, 3. ಗ್ರಂಥಹಸ್ತಪ್ರತಿಗಳು 31, 4. ತೆಲುಗು ಹಸ್ತಪ್ರತಿಗಳು 28, 5. ಮಲಯಾಳಮ್ ಹಸ್ತಪ್ರತಿಗಳು 26, 6. ನೇಪಾಲಿ ಹಸ್ತಪ್ರತಿಗಳು 5, 7. ಶಾರದಾ ಹಸ್ತಪ್ರತಿಗಳು 3, 8. ಮೈಥಿಲಿ ಹಸ್ತಪ್ರತಿ 1, 9. ಕನ್ನಡ ಹಸ್ತಪ್ರತಿ 1, ಹಾಗೂ 10. ನಂದಿನಾಗರೀ ಹಸ್ತಪ್ರತಿ 1 - ಹೀಗೆ ಒಟ್ಟು 235 ಹಸ್ತಪ್ರತಿಗಳು.
ಇವಲ್ಲದೆ ಥಿಯೋಡರ್ ಗೋಲ್ಡ್‍ಸ್ಟುಕರ್ ಅವರು ಪ್ರಕಟಿಸಿದ ಮಹಾಭಾರತಕ್ಕೆ ಸಂಯೋಜಿಸಿದ ಪಾಠಸಂಯೋಜನೆಯನ್ನು ಬಳಸಿದುದಾಗಿ ತಿಳಿಸಿದ್ದಾರೆ. ಅಂದರೆ ಯುರೋಪಿಯನ್ ಗ್ರಂಥಾಲಯಗಳಲ್ಲಿ ಇರುವ ಹಸ್ತಪ್ರತಿಗಳನ್ನು ಬಳಸಲಾಗಿದೆ. ಈ ಕಾರ್ಯ ಇವರ ಅಪಾರ ಭಾಷಾಜ್ಞಾನದ ದ್ಯೋತಕವಾಗಿದೆ. ಮಹಾಭಾರತ ಮೀಮಾಂಸೆ ಒಂದು ಮನನೀಯ ಗ್ರಂಥ. ಇವರ ಸಮಗ್ರ ಬರೆಹಗಳು ಎರಡು ಸಂಪುಟಗಳಲ್ಲಿ ಪ್ರಕಟವಾಗಿವೆ. ಇವರು ಅಮೆರಿಕ ಹಾಗೂ ಚೆಕೊಸ್ಲೊವಾಕಿಯ (ಪ್ರಾಗ್) ದೇಶಗಳಿಂದ ಸನ್ಮಾನಿತರಾಗಿದ್ದರು. ಇವರು 1943ರಲ್ಲಿ ನಿಧನರಾದರು. (ಎಸ್.ಎಸ್.ಜೆ.ಎ.)