ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಗ್ಗಿಯ ಕುಣಿತ
ಸುಗ್ಗಿಯ ಕುಣಿತ - ಬೆಳೆದ ಧಾನ್ಯವನ್ನು ಒಕ್ಕುವ ಅಥವಾ ಧಾನ್ಯವನ್ನು ಮನೆ ತುಂಬಿಸಿಕೊಳ್ಳುವ ಸಂದರ್ಭದಲ್ಲಿ ರೈತಾಪಿವರ್ಗ ಮಾಡುವ ಸಂತೋಷದ ನೃತ್ಯ ಅಥವಾ ಕುಣಿತ. ಜಗತಿನಾದ್ಯಂತ ಇಂಥ ಆಚರಣೆ ಕಂಡುಬರುತ್ತದೆ. ಇಂಗ್ಲೆಂಡಿನ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಸುಗ್ಗಿಯ ಆಚರಣೆಗಳನ್ನು (ಹಾರ್ವೆಸ್ಟ್ ಹೋಮ್) ಉತ್ಸವಗಳು ಎಂದು ಕರೆಯುತ್ತಾರೆ. ಈ ಸಂದರ್ಭದಲ್ಲಿ ಕುಣಿತ ಪ್ರಮುಖವಾಗಿರುತ್ತದೆ. ಸ್ಕಾಟ್ಲೆಂಡಿನಲ್ಲಿ ಈ ಕುಣಿತವನ್ನು ಕೆರ್ನ್ ಎಂದು ಕರೆಯುತ್ತಾರೆ. ಬೆಳೆದ ದವಸಧಾನ್ಯಗಳನ್ನು ಮನೆಗೆ ತರುವ ಸಂದರ್ಭದಲ್ಲಿ ಕೊನೆಯ ಗಾಡಿಯಲ್ಲಿ ಸುಗ್ಗಿಯರಾಣಿ ಎಂದೇ ಕರೆಯಲ್ಪಡುವ ಮತ್ತು ಹೆಣ್ಣು ಮಕ್ಕಳ ಉಡುಪನ್ನು ಧರಿಸಿರುವ ಗೊಂಬೆಯನ್ನು ಒಂದು ಕೇಂದ್ರ ಸ್ಥಾನಕ್ಕೆ ತಂದಿರಿಸಿ ಅಲ್ಲಿ ನೆರೆದಿರುವ ಎಲ್ಲ ಜನರು ನೀರು ಹಾಗೂ ಸೇಬುಗಳನ್ನು ಎಸೆಯುತ್ತಾರೆ. ಆ ಸಂದರ್ಭದಲ್ಲಿ ತಮ್ಮದೇ ಆದ ವಿಶಿಷ್ಟ ಉಡುಪಿನೊಂದಿಗೆ ಕುಣಿಯುತ್ತಾರೆ. ಈ ಗೊಂಬೆಯನ್ನು ಶಕ್ತಿದೇವತೆ ಎಂದು ಭಾವಿಸುತ್ತಾರೆ. ಮುಂಬರುವ ಚಳಿಗಾಲದ ಕೃಷಿಯ ಕೆಲಸಗಳು ಜರಗುವವರೆಗೂ ಈ ಗೊಂಬೆಯನ್ನು ಸಂರಕ್ಷಿಸಿ ಇಡುವುದ ಲ್ಲದೆ ಹುಲ್ಲಿನಿಂದ ಮಾಡಿದ ಗೊಂಬೆಯ ಕೆಲವು ಭಾಗಗಳನ್ನು ಕುದುರೆ ಹಾಗೂ ಜಾನುವಾರುಗಳಿಗೆ ಕೊಡುತ್ತಾರೆ ಅಥವಾ ಬಿತ್ತುವ ಬೀಜದೊಂ ದಿಗೆ ಬೆರಸುತ್ತಾರೆ. ಇದೇ ಮಾದರಿಯ ಸುಗ್ಗಿಯ ಗೊಂಬೆಗಳನ್ನು ಯುರೋಪಿನ ಹಲವು ಭಾಗಗಳಲ್ಲಿ ಕಾಣಬಹುದು.
ಬ್ರಿಟನ್‍ನಲ್ಲಿ ಸುಗ್ಗಿಯ ಗೊಂಬೆಗೆ ಮದರ್ ಶೀಫ್ ಎಂಬ ಹೆಸರಿದೆ. ಎಲ್ಲ ಬಗೆಯ ಧಾನ್ಯಗಳು, ತೆನೆಯುಳ್ಳ ಸಸಿಯ ಮೊತ್ತವನ್ನು ಮದರ್ ಶೀಫ್ ಎಂದು ಕರೆಯಲಾಗುತ್ತದೆ.
ಸ್ಕಾಟ್ಲೆಂಡಿನಲ್ಲಿ ಸುಗ್ಗಿಯ ಗೊಂಬೆಯನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ವರ್ಗಾವಣೆ ಮಾಡುತ್ತಾರೆ. ಆ ಸಂದರ್ಭದಲ್ಲಿ ಕುಣಿತ ಪ್ರಧಾನವಾಗಿರುತ್ತದೆ. ತಾವು ಬೆಳೆದ ಧಾನ್ಯಗಳನ್ನು ಹೆಂಗಸರೂ ಕೈಯಲ್ಲಿ ಹಿಡಿದು ಧಾರ್ಮಿಕ ಸಂಪ್ರದಾಯದೊಂದಿಗೆ ಪೂಜೆ ಸಲ್ಲಿಸುತ್ತಾರೆ. ಪೋಲೆಂಡಿನಲ್ಲಿ ಸುಗ್ಗಿಯ ಗೊಂಬೆಯನ್ನು ಬಾಬಾ ಎಂದು ಕರೆಯುತ್ತಾರೆ.
ಗ್ರೀಸ್‍ನಲ್ಲಿ ಸುಗ್ಗಿ ಕುಣಿತವನ್ನು ಜೆರಾನ್ಸ್ ಎಂದು ಕರೆಯುತ್ತಾರೆ. ಮಾನವ ಸರಪಳಿಗಳ ರೀತಿ ಕೈಕೈ ಹಿಡಿದುಕೊಂಡು ಒಬ್ಬರನ್ನೊಬ್ಬರು ಹಿಂಬಾಲಿಸಿ ಕುಣಿಯುತ್ತಾ ಹೋಗುತ್ತಾರೆ. ಈ ಕುಣಿತದಲ್ಲಿ ಒಬ್ಬ ನಾಯಕನಿರುತ್ತಾನೆ. ವಿಶಿಷ್ಟ ಉಡುಗೆಯೊಂದಿಗೆ ಕುಣಿಯುವರು. ಕುಣಿತಕ್ಕೆ ಸ್ಥಳೀಯ ವಾದ್ಯಗಳನ್ನು ಬಳಸುವರು. ಸ್ಥಳೀಯ ಅಮೆರಿಕನ್ನರಲ್ಲಿ ಈ ನೃತ್ಯವನ್ನು ಚೀರೂಕಿ ಡಾನ್ಸ್ ಎಂದು ಕರೆಯುತ್ತಾರೆ. ಸಮೃದ್ಧತೆ ಮತ್ತು ಫಲವತ್ತತೆಯ ಪ್ರತೀಕವಾಗಿ ಈ ನೃತ್ಯವನ್ನು ಮಾಡುತ್ತಾರೆ. ಅಮೆರಿಕದ ಬೇಟೆಗಾರ ಬುಡಕಟ್ಟುಗಳಲ್ಲಿ ಈ ಕುಣಿತ ಗೌಪ್ಯವಾಗಿ ಸುರಂಗಗಳಲ್ಲಿ ನಡೆಯುತ್ತದೆ. ಇನ್ನು ಕೆಲವು ಭಾಗಗಳಲ್ಲಿ ಮಾಂತ್ರಿಕ ಆಚರಣೆಗಳನ್ನು ಬಹುಪಾಲು ಅನುಕರಣೆ ಮಾಡುವುದನ್ನು ಕಾಣಬಹುದು. ಇರಾಕಿನ ಜನರಲ್ಲಿ ಈ ಕುಣಿತ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಯುತ್ತವೆ.
ಅಸ್ಸಾಂ ಮತ್ತು ಮಣಿಪುರದಲ್ಲಿ ಮೈಗೈನ್ವೆ ಎಂಬುದು ಸುಗ್ಗಿಯ ಕುಣಿತ. ಇದು ಸ್ತ್ರೀಪುರುಷರು ಒಟ್ಟಾಗಿ ದುಡಿಯುವ ಸಾಮುದಾಯಿಕ ಭಾವವನ್ನು ಚಿತ್ರಿಸುವ ಕುಣಿತವಾಗಿದೆ. ಕಟಾವಿಗೆ ಸೇರಿದಂತೆ ದುಡಿಮೆಯ ವಿವಿಧ ಹಂತಗಳನ್ನು ಈ ನೃತ್ಯದ ಭಾವರೂಪಗಳು ಚಿತ್ರಿಸುತ್ತವೆ. ಅಲ್ಲದೆ ಗುದ್ದಲಿ, ಸಲಿಕೆ, ಪಾತ್ರೆ ಇತರ ಸಲಕರಣೆಗಳನ್ನು ಈ ನೃತ್ಯದಲ್ಲಿ ಬಳಸುತ್ತಾರೆ. ಕೊಂಬಿನಿಂದ ತಯಾರಿಸಲಾದ ಪೆಸಾ ಎಂಬ ಕೊಳಲು ಮತ್ತು ಟಕಾ ಎಂಬ ಬಿದಿರು ವಾದ್ಯಗಳನ್ನೂ ಬಳಸುತ್ತಾರೆ.
ಉತ್ತರ ಕಚಾರ್ ಜಿಲ್ಲೆಯಲ್ಲಿ ನೆಲೆಸಿರುವ ಜೆಮಿ ಪಂಗಡದವರು ಖಂಬಾಲಿಂ ಕುಣಿತವನ್ನು ಮಾಡುತ್ತಾರೆ. ಇದು ಅವರ ಸುಗ್ಗಿಯ ಕುಣಿತ. ಸ್ತ್ರೀ ಪುರುಷರು ಎರಡು ತಂಡಗಳನ್ನಾಗಿ ಮಾಡಿಕೊಂಡು ತಮ್ಮ ತಮ್ಮ ನೆಲೆಗಳನ್ನು, ಕುಣಿಯುತ್ತಲೆ ಬದಲಾಯಿಸಿ ಅಭಿನಯಿಸು ತ್ತಾರೆ. ಕುಣಿತಕ್ಕೆ ವಿಶೇಷವಾದ ಬಟ್ಟೆಯನ್ನು ತೊಟ್ಟಿರುತ್ತಾರೆ.
ಹಿಮಾಚಲ ಪ್ರದೇಶ, ಸಿಕ್ಕಿಂ, ಡಾರ್ಜಿಲಿಂಗ್‍ಗಳಲ್ಲಿ ಸುಗ್ಗಿ ಕುಣಿತ ಮಾಡುವಾಗ ಮುಖವಾಡಗಳನ್ನು ಬಳಸುವರು. ಈ ಸುಗ್ಗಿಕುಣಿತಕ್ಕೆ ಶಾಪ್-ದೊ ಎಂದು ಕರೆಯುತ್ತಾರೆ. ಗೀತೆಗಳನ್ನು ಹಾಡುತ್ತಾ ನಿರ್ದಿಷ್ಟ ಹೆಜ್ಜೆಹಾಕಿ ನರ್ತಕರು ಗೋಲಾಕಾರದಲ್ಲಿ ಚಲಿಸಿ ಕುಣಿಯುವರು. ಗಂಡಸರು, ಹೆಂಗಸರು ಪ್ರತ್ಯೇಕ ಗೋಲಾಕಾರದಲ್ಲಿ ಕುಣಿಯುವಾಗ ಹಳ್ಳಿಯ ಜನರೆಲ್ಲ ಗುಂಪಾಗಿ ತಾವು ಬೆಳೆದ ದವಸಧಾನ್ಯಗಳಿಗೆ ಧಾರ್ಮಿಕ ಸಂಪ್ರದಾಯದಂತೆ ಪೂಜಿಸುವರು.
ಪಂಜಾಬಿನ ಜಿಟ್ಟ ಪ್ರದೇಶಗಳಲ್ಲಿ ಸುಗ್ಗಿ ಕುಣಿತವನ್ನು ಕಾರ್ತಿ ಎಂದು ಕರೆಯುವರು. ಬೆಳೆಗಳನ್ನು ಕಟಾವು ಮಾಡಿದ ಬಳಿಕ ಹುಣ್ಣಿಮೆಯ ರಾತ್ರಿಯಲ್ಲಿ ಕೈಗೆ ಕೈ ಸೇರಿಸಿ ವೃತ್ತಾಕಾರವಾಗಿ ಕುಣಿಯುವರು. ಇದರೊಂದಿಗೆ ಶಹನಾಯ್ ಮತ್ತು ಡೋಲುಗಳು ಹಿಮ್ಮೇಳದ ಮುಖ್ಯ ವಾದ್ಯಗಳಾಗಿರುತ್ತವೆ.
ಮಧ್ಯಪ್ರದೇಶದ ಬುಂದೆಲ್‍ಖಂಡ ಪ್ರದೇಶದಲ್ಲಿ ಎಲ್ಲ ಬಗೆಯ ಧಾನ್ಯಗಳನ್ನು ಬುಟ್ಟಿಗೆ ತುಂಬಿ ತಲೆಯ ಮೇಲಿಟ್ಟುಕೊಂಡು, ಹೆಂಗಸರು ರಂಗುರಂಗಿನ ವೇಷ ಮತ್ತು ಒಡವೆಗಳನ್ನು ಧರಿಸಿ ಗಂಡಸರೊಡನೆ ನೃತ್ಯ ಮಾಡುವುದನ್ನು ಜವರ್ ಎಂದು ಕರೆಯುತ್ತಾರೆ. ಇದು ಇವರ ಸುಗ್ಗಿಯ ಕುಣಿತವಾಗಿದೆ.
ಬಿಹಾರ ರಾಜ್ಯದ, ಅದರಲ್ಲೂ ದಕ್ಷಿಣ ಬಿಹಾರಿನಲ್ಲಿ ಸೆರೈಕೆಲ್ಲಾ ಎಂಬಲ್ಲಿನ ಆದಿವಾಸಿಗಳ ನೃತ್ಯ ಬಹಳ ಪ್ರಸಿದ್ಧವಾದದ್ದು. ಅದರಲ್ಲಿ ಬಹಳ ಮುಖ್ಯವಾದವೆಂದರೆ ಕರ್ಮ, ಜಾತ್ರ ಮತ್ತು ಪೈಕ. ಭಾದ್ರಪದ ತಿಂಗಳಿನ ಏಕಾದಶಿಯ ದಿನ ಕರ್ಮಗಿಡವನ್ನು ತಂದು ನೆಟ್ಟು ಅದನ್ನು ಪೂಜಿಸಿ ಅಕ್ಕಿಯಿಂದ ಮಾಡಿದ ಪಾನೀಯವನ್ನು (ಕರ್ನಾಟಕದ ಮಲೆನಾಡಿನ ಕಡೆ ಅಕ್ಕಿಬೋಜ ಎನ್ನುವರು) ಕುಡಿದು ಮೂರು ದಿನಗಳವರೆಗೂ ಸಂತೋಷದಿಂದ ಕುಣಿಯುವರು.
ಮೇಘಾಲಯದ ಗುಡ್ಡಗಾಡು ಪ್ರದೇಶಗಳಲ್ಲಿ ಖಾಸಿ ಬುಡಕಟ್ಟಿನವರು ಬತ್ತ ಕೊಯ್ಲಿಗೆ ಬಂದಾಗ ಆಡುವ ನಾನ್‍ಕ್ರೆಮ್ ನೃತ್ಯ ಕೂಡ ಸುಗ್ಗಿಯ ಕುಣಿತವಾಗಿದೆ. * ಸುಗ್ಗಿಯ ಕುಣಿತ ಒಂದು ಸಾಮೂಹಿಕ ನೃತ್ಯ. ಇದನ್ನು ಕರ್ನಾಟಕ ದಲ್ಲಿ ಕೆಲವು ಕಡೆ ರಂಗದ ಕುಣಿತ, ಮಾರಿಕುಣಿತ ಎಂದೂ ಕರೆಯುತ್ತಾರೆ. ಕುಣಿಯಲು ಸಮತಟ್ಟಾದ ಬಯಲು ಪ್ರದೇಶವನ್ನು ರಂಗಸ್ಥಳವಾಗಿ ಆರಿಸಿಕೊಳ್ಳುತ್ತಾರೆ. ಇದಕ್ಕೆ ಸಮೀಪದಲ್ಲೇ ತಿಮ್ಮಪ್ಪನಗುಡಿ, ಇಲ್ಲವೆ ಮಾರಿಗುಡಿ ಇರುತ್ತದೆ.
ಸಾಮಾನ್ಯವಾಗಿ ನೃತ್ಯ ಆರಂಭವಾಗುವುದು ರಾತ್ರಿ ಊಟದ ಅನಂತರ. ನೃತ್ಯದ ಆರಂಭಕ್ಕೆ ಮುನ್ನ ತಮಟೆವಾದ್ಯಗಾರ ನೆಲ್ಲುಹುಲ್ಲಿನಿಂದ ತಮಟೆ ಕಾಯಿಸಿ ಊರಿಗೆಲ್ಲ ಕೇಳುವಂತೆ ಜೋರಾಗಿ ಬಡಿಯುತ್ತಾನೆ. ಈ ಶಬ್ದ ಕೇಳಿದೊಡನೆ ನೃತ್ಯದಲ್ಲಿ ಭಾಗವಹಿಸುವ ಕಲಾವಿದರು ಗೆಜ್ಜೆ ಸರದೊಡನೆ ರಂಗಸ್ಥಳಕ್ಕೆ ಬರುತ್ತಾರೆ. ಅಲ್ಲಿ ಕಾಲಿಗೆ ಗೆಜ್ಜೆಸರ ಕಟ್ಟಿಕೊಂಡು ನೃತ್ಯಕ್ಕೆ ಅಣಿಯಾಗುತ್ತಾರೆ.
ಸುಗ್ಗಿ ಕುಣಿತದಲ್ಲಿ ತಮಟೆ ವಾದ್ಯಗಾರನ ಪಾತ್ರ ಅತಿ ಮುಖ್ಯ ವಾದುದು. ಈತ ನಾನಾ ಗತ್ತಿನಲ್ಲಿ ತಮಟೆ ಬಾರಿಸುತ್ತಿರುವಂತೆ ಅದಕ್ಕೆ ಹೊಂದಿಕೊಂಡಂತೆ ಕಲಾವಿದರು ಕುಣಿತ ಆರಂಭಿಸುತ್ತಾರೆ. ಸುಗ್ಗಿ ಕುಣಿತದ ಪ್ರಮುಖ ವ್ಯಕ್ತಿಯೊಬ್ಬ ಹೆದ್ದನಿಯಲ್ಲಿ ಸೈಯೋ ಸೈ ಎಂದು ಕೇಕೆ ಹೊಡೆಯುತ್ತಿರುತ್ತಾನೆ. ಇದಕ್ಕೆ ಕೆಲವರು ದನಿಗೂಡಿಸುತ್ತ ಕುಣಿಯುತ್ತಾರೆ. ಅನೇಕ ಬಗೆಯ ಕುಣಿತ ಸುಮಾರು ಸರಿಹೊತ್ತಿನ ತನಕ ಸಾಗುತ್ತದೆ. ಕೊನೆಯಲ್ಲಿ ತಮಟೆ ವಾದ್ಯಗಾರನ ಬಡಿತದ ಸೂಚನೆಯೊಂದಿಗೆ ನೃತ್ಯ ಕೊನೆಗೊಳ್ಳುತ್ತದೆ. ನೃತ್ಯದಲ್ಲಿ ಪರಿಣಿತ ಕುಣಿತಗಾರರ ಜೊತೆಗೆ, ಕಲಿಕೆಯಲ್ಲಿ ಇರುವವರೂ ಭಾಗವಹಿಸು ವುದುಂಟು.
ಸುಗ್ಗಿಯ ಕುಣಿತ ಒಂದೊಂದು ಗ್ರಾಮದಲ್ಲಿ ಆ ಗ್ರಾಮದ ಪದ್ಧತಿಗನು ಸಾರವಾಗಿ ನಡೆಯುತ್ತದೆ. ಕುಣಿತದ ಕೊನೆಯ ದಿನವನ್ನು ಬೆಳಗ್ಗುಣಿತ ವೆಂದು ಆಚರಿಸುತ್ತಾರೆ. ಅಂದು ಇಡೀ ರಾತ್ರಿ ಕುಣಿತ ನಡೆಯುತ್ತದೆ. ಒಮ್ಮೊಮ್ಮೆ ನೆರೆಗ್ರಾಮದ ಕುಣಿತದವರೂ ಇದಕ್ಕೆ ಬಂದು ಸೇರುತ್ತಾರೆ. ಆಗ ಒಂದು ಗ್ರಾಮದವರ ಕುಣಿತ ಮುಗಿದಮೇಲೆ ಮತ್ತೊಂದು ಗ್ರಾಮದವರ ಕುಣಿತ ಪ್ರಾರಂಭವಾಗುತ್ತದೆ. ರಾತ್ರಿಯ ಕುಣಿತ ಮುಗಿದ ಮಾರನೆಯದಿನ ಬೆಳಗ್ಗೆ ಗ್ರಾಮದ ಯುವತಿಯರು ಧೂಪಾರತಿಗಳೊಂದಿಗೆ ರಂಗಕ್ಕೆ ಬಂದು ರಂಗದ ಸುತ್ತಲೂ ಪ್ರದಕ್ಷಿಣೆ ಹಾಕಿ ರಂಗವನ್ನು ಪೂಜಿಸುತ್ತಾರೆ; ಅನಂತರ ಗ್ರಾಮದ ಹೆಬ್ಬಾಗಿಲಿಗೆ ಬರುತ್ತಾರೆ. ಇವರ ಹಿಂದೆ ವೀರಕಥೆ ಹಾಡುವವರೂ ಊರ ಯಜಮಾನರೂ ಕುಣಿತದವರೂ ಊರ ಜನರೂ ಇರುತ್ತಾರೆ. ತಮಟೆ ವಾದ್ಯಗಾರ ಗುಂಪಿನ ಮುಂದಿರುತ್ತಾನೆ. ವೀರಕಥೆಯನ್ನು ನಡುನಡುವೆ ನಿಲ್ಲಿಸಿ ಹಾಡುತ್ತಾರೆ. ಹಾಡು ನಿಂತಾಗ ಕುಣಿತ ಶುರುವಾಗುತ್ತದೆ; ಮೆರವಣಿಗೆ ಸಾಗುತ್ತದೆ. ವೀರಕಥೆಯ ಹಾಡು ಮುಗಿಯುವಷ್ಟರಲ್ಲಿ ಆ ಊರಿನ ವೀರಗಲ್ಲಿನ ಬಳಿ ಬರುತ್ತಾರೆ. ತಂಡದಲ್ಲಿ ಮೊದಲು ಯಾರು ವೀರಗಲ್ಲಿಗೆ ವಂದಿಸುತ್ತಾನೋ ಅವನೇ ಆ ವರ್ಷದ ವೀರನೆಂದು ಸಾರಲಾಗುತ್ತದೆ.
ಕೊಡಗು ಜಿಲ್ಲೆಯ ಗಿರಿಜನ ವರ್ಗಕ್ಕೆ ಸೇರಿದ ಎರವರಲ್ಲೂ ಸುಗ್ಗಿ ಕುಣಿತವಿದೆ. ಇದನ್ನು ಅವರು ಎರಕದ ಕುಣಿತ ಎನ್ನುತ್ತಾರೆ. ಅವರ ಈ ಕುಣಿತಕ್ಕೆ ಯಾವ ಜಾಗವಾದರೂ ಸರಿಯೆ. ಸುಗ್ಗಿಯ ಕಾಲದಲ್ಲಿ ರಾತ್ರಿಯ ವೇಳೆ ಬೆಂಕಿಯನ್ನು ಹಾಕಿಕೊಂಡು ಅದರ ಸುತ್ತಲೂ ಹಿರಿಕಿರಿಯ ರೆನ್ನದೆ, ಗಂಡು ಹೆಣ್ಣೆನ್ನದೆ ಎಲ್ಲರೂ ಕುಣಿತದಲ್ಲಿ ಸೇರುತ್ತಾರೆ. ಕುಣಿತದ ಹಿನ್ನೆಲೆಗೆ ದುಡಿ ಮತ್ತು ಚೀನಿ ವಾದ್ಯಗಳನ್ನು ಬಳಸಲಾಗುತ್ತದೆ. ಈ ರೀತಿಯ ಕುಣಿತ ಜೇನುಕುರುಬರಲ್ಲೂ ಕಾಡುಕುರುಬರಲ್ಲೂ ಸೋಲಿಗ ರಲ್ಲೂ ಕಾಣಬರುತ್ತದೆ. ಇಲ್ಲಿ ಇವರು ಸೋರೆ ಬುರುಡೆಯ ವಾದ್ಯವನ್ನು ಕುಣಿತದ ಹಿನ್ನೆಲೆಗೆ ಬಳಸುತ್ತಾರೆ.
ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗರಲ್ಲೂ ಸುಗ್ಗಿಯ ಕುಣಿತ ರೂಢಿಯಲ್ಲಿದೆ. ಇವರ ಸುಗ್ಗಿಕುಣಿತದಲ್ಲಿ ಆರಂಭದ ದಿನ ಕುಣಿತದ ಯಜಮಾನನು (ಗುನಗ) ಪ್ರತಿ ಕುಣಿತದವನಿಗೂ ಕರಿಅಕ್ಕಿ ಮಂತ್ರಿಸಿ ಕೊಡುತ್ತಾನೆ. ಹಾಗೆ ಪಡೆದ ಕರಿಅಕ್ಕಿಯನ್ನು ತಮ್ಮ ತಮ್ಮ ಸೊಂಟದ ಬಟ್ಟೆಗೆ ಸೇರಿಸುತ್ತಾರೆ. ಕರಿಅಕ್ಕಿ ಹಿಡಿಯದ ಕುಣಿತಗಾರರು ಬಿಳಿಅಕ್ಕಿ ಹಿಡಿದಿರುತ್ತಾರೆ. ಎಲ್ಲರೂ ಕರಿಕಣಕ್ಕೆ ಬರುತ್ತಾರೆ. ಮೂರು ಕಡೆಯೂ ಮರೆಮಾಡಿದ ಆರೇಳು ಅಡಿ ಎತ್ತರದ ಚೌಕದ ಚಪ್ಪರವೇ ಕರಿಕಣ. ಇದರ ನಡುವೆ ಒಂದು ಕಂಬವಿರುತ್ತದೆ. ಇದೇ ಸುರಗಿ ಕಂಬ. ಇದಕ್ಕೆ ಹಲವು ಕೊಂಬೆಗಳಿರುತ್ತವೆ. ಈ ಕೊಂಬೆಗಳಿಗೆ ಕುಣಿತದ ತಂಡದವರು ತಮ್ಮ ತಮ್ಮ ಗೆಜ್ಜೆ, ಕುಂಚ, ಜಾಗಟೆ, ತಾಳ, ಕೋಲುಗಳನ್ನು ನೇತುಹಾಕು ತ್ತಾರೆ. ಯಜಮಾನನ ಸೂಚನೆಯ ಮೇರೆಗೆ ಕುಣಿತದವರು ಕಾಲಿಗೆ ಗೆಜ್ಜೆಕಟ್ಟಿ, ಪೈಜಾಮದಂಥ ದೋತ್ರ ಉಟ್ಟು, ನಿಲುವಂಗಿಯ ಮೇಲೆ ಕೆಂಪು ಜಾಕೀಟು ತೊಟ್ಟು, ಸೊಂಟಕ್ಕೆ ಶಲ್ಯ ಬಿಗಿದು ಕೊರಳಲ್ಲಿ ಹೂಮಾಲೆ ಧರಿಸಿ, ತಲೆಯಲ್ಲಿ ಪೇಟ ಕಟ್ಟಿ ಕುಣಿತಕ್ಕೆ ಸಿದ್ಧರಾಗುತ್ತಾರೆ. ಕುಣಿತದೊಡನೆ ಯಜಮಾನ ಹೇಳಿಕೊಟ್ಟ ಹಾಡಿಗೆ ದನಿಗೂಡಿಸುತ್ತಾರೆ. ಕೆಲವು ಕಡೆ ಇವರ ಸುಗ್ಗಿ ಕುಣಿತದಲ್ಲಿ ತಂಡದ ರಕ್ಷಕನಂತೆ ಕೈಲಿ ಖಡ್ಗ ಹಿಡಿದ ಕರಡಿ ವೇಷಧಾರಿ ಮುಂಭಾಗದಲ್ಲಿರುತ್ತಾನೆ.
ಹಾಲಕ್ಕಿಗೌಡರ ಸುಗ್ಗಿಕುಣಿತದಲ್ಲಿ ಕುಣಿತದ ಹಿನ್ನೆಲೆಗೆ ಹೆದ್ದುಂಬೆ ಕೋಲು ಎಂಬ ವಾದ್ಯವನ್ನು ಬಳಸುತ್ತಾರೆ. ಗುಮ್ಮಟೆ ಇವರ ಸುಗ್ಗಿ ಕುಣಿತದ ಮುಖ್ಯ ವಾದ್ಯ. ಜಾಗಟೆಯನ್ನು ಇದರ ಜೊತೆಗೆ ಬಳಸುತ್ತಾರೆ. ಇಂಥದೇ ವಾದ್ಯಗಳನ್ನು ಸಿದ್ದಿ ಎಂಬ ಗಿರಿಜನರೂ ಬಳಸುತ್ತಾರೆ. ಸಂಜೆಯವೇಳೆ ಈ ನೃತ್ಯದವರೂ ಗ್ರಾಮಸ್ಥರೂ ಸೇರಿ ಕಾಮದಹನ ಆಚರಿಸುತ್ತಾರೆ. ಅಗ್ನಿಕೊಂಡವನ್ನು ಹಾದು ಕೋಲು ಕುಂಚಗಳನ್ನೆಲ್ಲ ಕೊಂಡದ ಎದುರಿಗೆ ಇರಿಸಿ ವಂದಿಸುತ್ತಾರೆ.
ಕುಮಟ ತಾಲ್ಲೂಕಿನ ಕಡೆ ಇದೇ ಸುಗ್ಗಿ ಕುಣಿತ ಕೊಂಚ ಭಿನ್ನವಾಗಿರು ತ್ತದೆ. ಕೊಂಡವನ್ನು ಹಾದು ಕರಿಕಣಕ್ಕೆ ಬಂದು ಅಲ್ಲಿನ ಕರಿಹೊಂಡದಲ್ಲಿ ಮಿಂದು ಗುನಗನ ಮನೆಗೆ ಬರುತ್ತಾರೆ. ಅಲ್ಲಿ ಅವರಿಗೆ ಆರತಿ ಬೆಳಗುತ್ತಾರೆ. ಇಲ್ಲಿಗೆ ಸುಗ್ಗಿ ಕುಣಿತ ಮುಕ್ತಾಯವಾಗುತ್ತದೆ. ಸುಗ್ಗಿ ಕುಣಿತದಲ್ಲಿ ಐದು ದಿನಗಳ ಆಚರಣೆಯನ್ನು ಹೀರೇ ಸುಗ್ಗಿ ಎನ್ನುತ್ತಾರೆ. ಸಾಮಾನ್ಯ ವೇಷದಲ್ಲಿ ಆಚರಿಸುವುದನ್ನು ಕೀರೇ ಸುಗ್ಗಿ ಎನ್ನುತ್ತಾರೆ. ಕುಣಿತದ ಕೋಲಾಟಕ್ಕೆ ಬೋಳು ಸುಗ್ಗಿ ಎಂದೂ ಕರೆಯಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರಗರ ಸುಗ್ಗಿ ಕುಣಿತವಿದೆ. ಇವರಲ್ಲಿ ಇದು ನವರಾತ್ರಿ ವೇಳೆಯಲ್ಲಿ ಪ್ರಚಲಿತವಿದೆ. ಕೊಡಗಿನ ಉಮ್ಮತ್ತಾಟ, ಬೊಳುಕಾಟ ಇವೆಲ್ಲ ಸುಗ್ಗಿಕುಣಿತದ ಪ್ರಾದೇಶಿಕ ಮಾದರಿಗಳಾಗಿ ಕಂಡುಬರುತ್ತವೆ. ಹಾಸನ ಜಿಲ್ಲೆಯ ಸುಗ್ಗಿ ಕುಣಿತದಲ್ಲಿ ಒಂದು ವಿಶೇಷ ರೀತಿಯನ್ನು ಗಮನಿಸಬಹುದು. ಇಲ್ಲಿ ಕೈಯಲ್ಲಿ ಪಂಜನ್ನು ಹಿಡಿದು ಕುಣಿಯುವುದು ವಾಡಿಕೆ.
(ಪಿ.ಆರ್.ಟಿ.)