ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಣ್ಣ

ವಿಕಿಸೋರ್ಸ್ದಿಂದ

ಸುಣ್ಣ ಭಸ್ಮೀಕೃತ (ಕ್ಯಾಲ್ಸೈನ್ಡ್) ಸುಣ್ಣಕಲ್ಲಿನ ವಿವಿಧ ಉತ್ಪನ್ನಗಳ ಸರ್ವನಾಮ (ಲೈಮ್). ಸುಣ್ಣದ ಪ್ರಮುಖ ಪ್ರಭೇದಗಳು ಇವು: ಸುಟ್ಟಸುಣ್ಣ (ಅಚಿಔ: ಕ್ವಿಕ್‍ಲೈಮ್), ಜಲಯೋಜಿತ ಸುಣ್ಣ (ಅಚಿ(ಔಊ)2: ಹೈಡ್ರೇಟೆಡ್ ಲೈಮ್) ಮತ್ತು ನಯಸುಣ್ಣ (ಸ್ಲೇಕ್ಡ್ ಲೈಮ್). ಕ್ಯಾಲ್ಶಿಯಮ್ ಕಾರ್ಬೊನೇಟ್ ಅಧಿಕ ಪ್ರಮಾಣದಲ್ಲಿರುವ ಜಲಜಶಿಲೆಯೇ ಸುಣ್ಣಕಲ್ಲು. ಇದನ್ನು ಭಸ್ಮೀಕರಿಸಿದರೆ, ಅರ್ಥಾತ್ ಉಚ್ಚ ಉಷ್ಣತೆಯಲ್ಲಿ ದೀರ್ಘಕಾಲ ಹುರಿದರೆ ಸುಟ್ಟಸುಣ್ಣ ಲಭ್ಯ. ಬಳಸುವ ಮುನ್ನ ಸುಟ್ಟಸುಣ್ಣವನ್ನು ನೀರಿನಿಂದ ಉಪಚರಿಸುವುದು ವಾಡಿಕೆ. ನೀರಿನ ಪ್ರಮಾಣ ಅವಶ್ಯವಿರುವಷ್ಟೇ ಇದ್ದರೆ ಜಲಯೋಜಿತ ಸುಣ್ಣವೂ ಅಧಿಕವಾಗಿದ್ದರೆ ನಯಸುಣ್ಣವೂ ಲಭ್ಯ, ಮೊದಲನೆಯದು ಶುಷ್ಕ ಪುಡಿ, ಎರಡನೆಯದು ಪೇಸ್ಟ್.(ಸರಿ). ಸುಣ್ಣಕಲ್ಲನ್ನು ಅದರಲ್ಲಿರುವ ಮೆಗ್ನೀಸಿಯಮ್ ಪ್ರಮಾಣವನ್ನು ಆಧರಿಸಿ ವರ್ಗೀಕರಿಸುವುದುಂಟು. ಉದಾ: ಅಧಿಕ ಕ್ಯಾಲ್ಸಿಯಮ್ ಸುಣ್ಣಕಲ್ಲು (ಒgಅo3 ಪ್ರಮಾಣ < ತೂಕದ 5%), ಮೆಗ್ನೀಸಿಯಮ್ ಸುಣ್ಣಕಲ್ಲು (ತೂಕದ 5%ಗಿಂತ ಸ್ವಲ್ಪ ಹೆಚ್ಚು), ಡಾಲೊಮೈಟಿಕ್ ಸುಣ್ಣಕಲ್ಲು (ತೂಕದ 30-45%). ಸುಣ್ಣ ಬಹೋಪಯೋಗೀ ಪದಾರ್ಥ. ಕಟ್ಟಡ ನಿರ್ಮಾಣದಲ್ಲಿ ಗಾರೆ ತಯಾರಿಗೆ ಹಾಗೂ ಗಿಲಾವು ಮಾಡಲು; ಲೋಹೋದ್ಯಮದಲ್ಲಿ ಫ್ಲಕ್ಸ್ ಆಗಿ; ತೆರೆದಕುಲುಮೆಗಳಲ್ಲಿ ತಾಪನಿರೋಧಕ ಒಳಪದರವಾಗಿ; ಕೃಷಿಯಲ್ಲಿ ಮಣ್ಣಿನ ಆಮ್ಲೀಯತೆ ಕಡಿಮೆ ಮಾಡಲು; ರಸ್ತೆಯ ತಳಸ್ತರದ ಸ್ಥಿರಕಾರಿಯಾಗಿ; ಗಾಜು, ಕಾಗದ ಮುಂತಾದವುಗಳ ತಯಾರಿಯಲ್ಲಿ ಕಚ್ಚಾಪದಾರ್ಥವಾಗಿ; ಜಲಶುದ್ಧೀಕರಣದಲ್ಲಿ, ಗ್ರಾಮಸಾರ (ಸ್ಯೂಎಜ್) ಉಪಚಾರದಲ್ಲಿ, ಸಕ್ಕರೆ ಮತ್ತು ಪೆಟ್ರೋಲಿಯಮ್ ಸಂಸ್ಕರಣೆಯಲ್ಲಿ; ಚಕ್ಕಳ ಹದಮಾಡಲು ಸುಣ್ಣದ ಬಳಕೆ ಇದೆ. (ಎಚ್.ಜಿ.ಎಸ್.)