ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸುಬಂಧು

ವಿಕಿಸೋರ್ಸ್ದಿಂದ
Jump to navigation Jump to search

ಸುಬಂಧು ಸು.5ನೆಯ ಶತಮಾನ. ವಾಸವದತ್ತಾ ಎಂಬ ಗದ್ಯಕಾವ್ಯದ ಕರ್ತೃ. ಸಂಸ್ಕøತ ಗದ್ಯಕಾವ್ಯದ ರತ್ನತ್ರಯರಲ್ಲೊಬ್ಬ. ದಂಡಿ ಮತ್ತು ಬಾಣ ಉಳಿದ ಇಬ್ಬರು. ಈತನ ಕಾಲ, ದೇಶಗಳು ಖಚಿತವಾಗಿ ತಿಳಿಯದಾದರೂ ಇವನ ಗ್ರಂಥದಲ್ಲಿ ನ್ಯಾಯವಿದ್ಯಾಮಿವೋದ್ಯೋತಕಾರ ಸ್ವರೂಪಾಂ ಎಂದು ಹೇಳಿರುವುದರಿಂದ ಸುಪ್ರಸಿದ್ಧ ನೈಯಾಯಿಕನಾದ ಉದ್ಯೋತಕಾರನಿಗಿಂತ ಅರ್ವಾಚೀನನೆಂದೂ ಕವೀನಾಂ ಅಗಲದ್ದರ್ಪೋ ನೂನಂ ವಾಸವದತ್ತಯಾ ಮತ್ತು ಅತಿದ್ವಯೀ ಕಥಾ ಎಂದೂ ಬಾಣ ಹೇಳಿರುವುದರಿಂದ ಆತನಿಗಿಂತ ಪ್ರಾಚೀನನೆಂದೂ ಹೇಳಬಹುದು (ಆದರೆ ಬಾಣ ಮತ್ತು ಸುಬಂಧು ಇವರಿಬ್ಬರಲ್ಲಿ ಯಾರು ಪ್ರಾಚೀನರೆಂಬ ವಿಷಯ ಚರ್ಚಾಸ್ಪದವಾಗಿದೆ). ಸುಬಂಧುರ್ಬಾಣ ಭಟ್ಟಶ್ಚ ಕವಿರಾಜ ಇತಿತ್ರಯಃ ಎಂದು ಕವಿರಾಜ ಶ್ಲೇಷಾರ್ಥ ನೈಪುಣ್ಯಕ್ಕೆ ಖ್ಯಾತಿವೆತ್ತವರನ್ನು ಕಾಲಾನುಕ್ರಮವನ್ನು ಅನುಸರಿಸಿ ಹೇಳಿದ್ದಾನೆ.

ಕಂದರ್ಪಕೇತು ಮತ್ತು ವಾಸವದತ್ತಾ ಇವರ ಪ್ರಣಯ, ವಾಸವದತ್ತಾ ಕೃತಿಯ ಕಥಾವಸ್ತು. ಇದು ಕವಿಕಲ್ಪಿತ. ಈ ಕೃತಿಯಲ್ಲಿ ಭಾರತೀಯ ಕಾಲ್ಪನಿಕ ಕಥನ ಕಲೆಯ ವೈಶಿಷ್ಟ್ಯಗಳಾದ ಮಾಯಾಕುದುರೆ, ಮಾತಾಡುವ ಗಿಳಿ, ಸ್ವಪ್ನಾನುರಾಗ, ರೂಪಪರಿವರ್ತನೆ ಮೊದಲಾದ ಅದ್ಭುತ ವೃತ್ತಾಂತಗಳು ಬಂದಿವೆ. ಗದ್ಯಕಾವ್ಯದಲ್ಲಿ ಸುಂದರವೂ ಸಮಾಸಮಯವೂ ಓಜೋಗುಣ ವಿಶಿಷ್ಟವೂ ಆದ ಶೈಲಿ ಇರಬೇಕಾದುದು ಸಹಜವಾದರೂ ಕಥಾವಸ್ತು ನಿರೂಪಣೆಯಷ್ಟೇ ಶ್ಲೇಷಾದ್ಯಲಂಕಾರಗಳಿಂದ ಕೂಡಿದ ವರ್ಣನಾ ಚಮತ್ಕಾರಕ್ಕೆ ಪ್ರಧಾನ್ಯವೀಯಬೇಕೆಂಬುದನ್ನು ಒಪ್ಪಬಹುದಾ ದರೂ ಶ್ಲೇಷಾರ್ಥ ಪದಪ್ರಯೋಗವೇ ಸಾರಸರ್ವಸ್ವವೆಂಬುದನ್ನು ಒಪ್ಪಲಾಗದು. ಕವಿ ಆದರ್ಶ ನಿರೂಪಣೆಗಾಗಲಿ, ಕಥಾಸಂವಿಧಾನಕ್ಕಾಗಲಿ, ಪಾತ್ರ ಚಿತ್ರಣಕ್ಕಾಗಲಿ, ರಸ ಸಂಯೋಜನೆಗಾಗಲಿ ಹೆಚ್ಚು ಪ್ರಾಧಾನ್ಯವೀ ಯದೆ, ಶಬ್ದ ಮಾಧುರ್ಯಕ್ಕೆ ಅದರಲ್ಲಿಯೂ ಶ್ಲೇಷಾರ್ಥ ಪ್ರಯೋಗಕ್ಕೆ ಮಾರುಹೋದಂತೆ ಕಾಣುತ್ತದೆ. ಈತನೇ ಹೇಳಿರುವಂತೆ “ಪ್ರತ್ಯಕ್ಷರಶ್ಲೇಷ ಮಯಪ್ರಬಂಧ”ವನ್ನು ರಚಿಸಬೇಕೆಂಬುದೇ ಗುರಿಯಾಗಿ ಅದನ್ನು ಅಭೂತ ಪೂರ್ವವಾಗಿ ಸಾಧಿಸಿ ಸಂಸ್ಕøತ ಸಾಹಿತ್ಯ ಕ್ಷೇತ್ರದಲ್ಲಿ ಅದ್ವಿತೀಯ ಪಂಡಿತಪ್ರಿಯನಾಗಿದ್ದಾನೆ. ಇತರ ವಿಷಯಗಳಿಗೆಷ್ಟು ಪ್ರಾಧಾನ್ಯ ನೀಡಬೇಕೋ ಅಷ್ಟು ನೀಡದಿರುವುದು ಈತನ ಮಹೋನ್ನತ ಸಾಧನೆಗೆ ತುಸು ಕುಂದು ತಂದಿದೆ. ಇಲ್ಲಿನ ಅಲಂಕಾರಗಳೂ ಶ್ಲೇಷಮಯವಾಗಿಯೇ ಇವೆ. ನಿದರ್ಶನಕ್ಕೆ ಕಂದರ್ಪಕೇತುವಿನ ಸ್ವಪ್ನಸುಂದರಿಯ ಸೊಬಗನ್ನು ಪರಿಪರಿ ಬಣ್ಣಿಸುವಾಗ ಒಂದೇ ವಾಕ್ಯ ಸುಮಾರು ನೂರಿಪ್ಪತ್ತು ಸಾಲುಗಳ ಅನಂತರ ತುಸು ವಿರಮಿಸುತ್ತದೆ. ಕಂದರ್ಪಕೇತುವಿನ ವಿಕ್ರಮವರ್ಣನೆ, ವಸಂತವರ್ಣನೆ, ಸಿಂಹವರ್ಣನೆ ಮೊದಲಾದವು ಮನೋಜ್ಞವಾಗಿವೆ. ಹಲವೆಡೆ ಸಮಾಸಗಳು ದೊಡ್ಡವಾದರೂ ಅನುಪ್ರಾಸಗಳು ಉದ್ದವಾದರೂ ಶ್ಲೇಷಗಳು ಲಂಬಿಸಿದ್ದರೂ ಕವಿಯ ಶೈಲಿ ಸಂಸ್ಕøತ ಸಾಹಿತ್ಯದ ಬಹುಮುಖಗಳನ್ನು ಕರತಲಾಮಲಕ ಮಾಡಿಕೊಂಡಿರುವ ಪ್ರೌಢರಿಗೆ ಹೆಚ್ಚು ಅಪ್ಯಾಯಮಾನವಾಗುತ್ತದೆ. ಕಾಳಿದಾಸನಿಗೆ ವೈದರ್ಭೀ ಶೈಲಿಯೇ ಆದರ್ಶವಾಗಿದ್ದರೆ, ಈತನಿಗೆ ಗೌಡೀಶೈಲಿಯೇ ಹೆಚ್ಚು ಪ್ರಿಯ.

ಗೌಡೀ ಶೈಲಿಯ ಅಗ್ರಗಣ್ಯನೂ ವಕ್ರೋಕ್ತಿ ಧುರಂಧರನೂ ನಾನಾರ್ಥ ಕೋಶ ಪಂಡಿತನೂ ಆದ ಇವನ ಪಾಂಡಿತ್ಯವನ್ನು ವಾಕ್ಪತಿ, ಬಾಣ, ರಾಜಶೇಖರ, ಕವಿರಾಜ ಮೊದಲಾದವರು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.

   (ಎಚ್.ಪಿ.ಎಮ್.ಡಿ.)