ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೊಡ್ಢಲ

ವಿಕಿಸೋರ್ಸ್ದಿಂದ

ಸೊಡ್ಢಲ ಹನ್ನೊಂದನೆಯ ಶತಮಾನದ ಸಂಸ್ಕøತಕವಿ. ಉದಯ ಸುಂದರೀಕಥಾ ಎಂಬ ಸಂಸ್ಕøತ ಚಂಪೂ ಪ್ರಬಂಧದ ಕರ್ತೃ. ಈತನ ಜನ್ಮಭೂಮಿ ಲಾಟದೇಶ. ವಾಲಭಕಾಯಸ್ಥವೆಂಬ ಕ್ಷತ್ರಿಯ ವಂಶದ ಸೂರ ಈತನ ತಂದೆ. ಪಾಂಡಿತ್ಯದಿಂದಲೂ ಪ್ರತಿಭೆಯಿಂದಲೂ ಕೊಂಕಣ ಪ್ರಭುಗಳಾದ ವಿತ್ತರಾಜ, ನಾಗಾರ್ಜುನ ಮತ್ತು ಮುಮ್ಮಣಿ ರಾಜರ ಗೌರವಕ್ಕೆ ಪಾತ್ರನಾಗಿ ಅನಂತರ ಲಾಟಾಧಿಪತಿಯಾದ ಚಾಳುಕ್ಯ ವತ್ಸರಾಜನ (ಸು. 11ನೆಯ ಶತಮಾನ) ಆಶ್ರಯದಲ್ಲಿ ಪ್ರಸ್ತುತ ಕಾವ್ಯವನ್ನು ರಚಿಸಿದನೆಂದು ಈ ಕಾವ್ಯದ ಕವಿವಂಶ ನಿವೇದನ ಎಂಬ ಮೊದಲನೆಯ ಉಚ್ಛ್ವಾಸಕದಿಂದ ತಿಳಿದುಬರುತ್ತದೆ.

ಉದಯ ಸುಂದರೀ ಕಥೆಯಲ್ಲಿ ಕವಿವಂಶ ನಿವೇದನ, ಶುಕಲಾಭ, ಚಿತ್ರ ಸಂದರ್ಶನ, ಕುಮಾರ ಕೇಸರಿ ಸಮಾಗಮ, ತಾಪಸೀ ರಕ್ಷಣ, ತಾರಾವಲೀದರ್ಶನ, ಉಭಯಮೇಲಕ ಮತ್ತು ಸರ್ವಾನಂದ ಎಂಬ ಎಂಟು ಉಚ್ಛ್ವಾಸಕಗಳಿವೆ. ಪಾತಾಲ ಲೋಕಾಧಿಪತಿಯಾದ ಶಿಖಂಡತಿಲಕ ಮತ್ತು ರಾಣಿ ವಿಜಯರೇಖೆ ಇವರ ಮಗಳಾದ ಉದಯ ಸುಂದರಿಯೊಡನೆ ಪ್ರತಿಷ್ಠಾನ ನಗರದ ರಾಜನಾದ ಮಲಯವಾಹನನ ವಿವಾಹವೇ ಈ ಕಥೆಯ ವಸ್ತು. ಪ್ರತಿ ಘಟ್ಟದಲ್ಲಿಯೂ ಬಾಣನ ಪ್ರಭಾವ ಕಂಡುಬರುತ್ತದೆ. ಪ್ರಕೃತಿ ಮತ್ತು ಮಾನವ ಸಂಬಂಧ ಹೆಚ್ಚಿಲ್ಲ; ಎಲ್ಲವೂ ಅತಿಮಾನುಷ, ಅಪ್ರಾಕೃತ. ಪೂರ್ವಕವಿಗಳಾದ ಅಭಿನಂದ ಮತ್ತು ವಾಕ್ಪತಿರಾಜ ಇವರನ್ನು ಕ್ರಮವಾಗಿ ಮಾತಿಗೂ ಅರ್ಥಕ್ಕೂ ಪ್ರಸಿದ್ಧರೆಂದು ಪ್ರಶಂಸಿಸುತ್ತಾ ಕಾಳಿದಾಸನನ್ನು ರಸೇಶ್ವರನೆಂದೂ ಬಾಣನನ್ನು ಸರ್ವೇಶ್ವರನೆಂದೂ ಹೊಗಳಿದ್ದಾನೆ. ಬಾಣನ ಕಾದಂಬರೀ ಮತ್ತು ಹರ್ಷಚರಿತೆಗಳೇ ಈತನ ಗ್ರಂಥಕ್ಕೆ ಆದರ್ಶವೆಂದು ಹೇಳಬಹುದು. (ಆರ್.ಎ.ಸಿ.)