ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೋಮಶೇಖರನಾಯಕ 3

ವಿಕಿಸೋರ್ಸ್ದಿಂದ

ಸೋಮಶೇಖರನಾಯಕ 3

ಕೆಳದಿ ವಂಶದ ಕೊನೆಯ ರಾಜ (1757-63). ಅವಿವಾಹಿತನಾದ ಚೆನ್ನಬಸವನಾಯಕನ ಮರಣಾನಂತರ ರಾಜಮಾತೆ ವೀರಮ್ಮಾಜಿ ತನ್ನ ಸೋದರಮಾವನಾದ ಬಂಕಾಪುರದ ಪಟ್ಟಣಸೆಟ್ಟಿಯಾಗಿದ್ದ ವೀರಪ್ಪನ ಕೊನೆಯ ಮಗನನ್ನು ದತ್ತು ತೆಗೆದುಕೊಂಡು ಮುಮ್ಮಡಿ ಸೋಮಶೇಖರ ನಾಯಕನೆಂಬ ಹೆಸರಿನಿಂದ ಪಟ್ಟಕ್ಕೆ ತಂದಳು. ಇವನು ನಾಮಮಾತ್ರ ದೊರೆ. ವೀರಮ್ಮಾಜಿಯೇ ಸ್ವತಃ ಆಡಳಿತ ನಡೆಸುತ್ತಿದ್ದಳು. ಕೆಳದಿ ರಾಜ್ಯದ ಅಪಾರ ಸಂಪತ್ತಿನ ಮೇಲೆ ಕಣ್ಣಿಟ್ಟಿದ್ದ ಮರಾಠರು ಮತ್ತೆ ಮತ್ತೆ ಕೆಳದಿಯ ಮೇಲೆ ದಾಳಿ ಮಾಡುತ್ತಿದ್ದುದರಿಂದ ವೀರಮ್ಮಾಜಿ ಪ್ರಜೆಗಳ ಮೇಲೆ ಹೆಚ್ಚಿನ ತೆರಿಗೆಗಳನ್ನು ವಿಧಿಸಿ, ಹಣ ಸಂಗ್ರಹಿಸಿ ಮರಾಠರಿಗೆ ತೆರಲಾರಂಭಿಸಿದಳು. ಜನತೆ ಈ ಹೆಚ್ಚಿನ ತೆರಿಗೆಗಳಿಂದ ರೊಚ್ಚಿಗೆದ್ದರು. ಪ್ರಜೆಗಳ ಹಿತಚಿಂತನೆಗಾಗಿ ವಾದಿಸಿದ ಪ್ರಧಾನಿ ಮುಂತಾದ ಹಿರಿಯ ಅಧಿಕಾರಿಗಳನ್ನು ರಾಜಮಾತೆ ವೀರಮ್ಮಾಜಿ ಸೆರೆಗೆ ತಳ್ಳಿದಳು. ಹೆಸರಿಗೆ ರಾಜನಾದ ಸೋಮಶೇಖರ ನಾಯಕ ನಿಸ್ಸಹಾಯಕನಾಗಿ ಪ್ರಜಾಕ್ಷೋಭೆಯನ್ನು ನೋಡಿಕೊಂಡಿರ ಬೇಕಾಯಿತು.

ಮೈಸೂರು ರಾಜ್ಯದಲ್ಲಿ ಕ್ರಮೇಣ ಪ್ರಬಲನಾಗುತ್ತಿದ್ದ ಹೈದರ್‍ಅಲಿಯ ದೃಷ್ಟಿ ಕೆಳದಿಯತ್ತ ಬೀಳಲಾರಂಭಿಸಿತು. ಕೆಳದಿಯ ನೆರೆಹೊರೆಯ ಪಾಳೆಯಗಾರರನ್ನು ಜಯಿಸಿ ಚಿತ್ರದುರ್ಗ ಕೋಟೆಯನ್ನೂ ವಶಪಡಿಸಿಕೊಂಡ ಹೈದರ್ ಕೆಳದಿಯನ್ನು ವಶಪಡಿಸಿಕೊಳ್ಳಲು ಸಮಯ ಕಾಯುತ್ತಿದ್ದ. ಆ ಸಂದರ್ಭದಲ್ಲಿ ರಾಜ್ಯಭ್ರಷ್ಠನಾಗಿದ್ದ ಚಿತ್ರದುರ್ಗದ ಪಾಳೆಯಗಾರ ಮದಕರಿನಾಯಕ, ಮೃತನಾಗಿದ್ದ ಕೆಳದಿಯ ಸಿಂಹಾಸನದ ಹಕ್ಕುದಾರ ಚೆನ್ನಬಸವನಾಯಕ ಸತ್ತಿಲ್ಲವೆಂದು ಒಬ್ಬ ಕೃತ್ರಿಮ ವ್ಯಕ್ತಿಯನ್ನು ಮುಂದುಮಾಡಿಕೊಂಡು ಪ್ರಚಾರ ಮಾಡುತ್ತಿದ್ದ. ಹೈದರ್ ಆ ಕಪಟಿ ಹಕ್ಕುದಾರನ ಪರವಾಗಿ ಕೆಳದಿಯ ಮೇಲೆ ದಂಡೆತ್ತಿಬಂದ. ವೀರಮ್ಮಾಜಿ ಈ ಕುತ್ತಿನಿಂದ ಪಾರಾಗಲು ಸವಣೂರಿನ ನವಾಬ ಅಬ್ದುಲ್ ಹಕೀಮ್‍ಖಾನನ ನೆರವಿನಿಂದ ಹೋರಾಡಿದಳು. ಆದರೂ ಹೈದರನ ಸೈನ್ಯ ಜಯಗಳಿಸಿ ರಾಜಧಾನಿ ಬಿದನೂರನ್ನು ಸೂರೆಮಾಡಿತು. ಬಿದನೂರಿಗೆ ಹೈದರ್‍ನಗರವೆಂದು ಹೆಸರಾಯಿತು. ವೀರಮ್ಮಾಜಿ ತಪ್ಪಿಸಿಕೊಂಡು ಪುಣೆಯತ್ತ ಹೋಗುತ್ತಿದ್ದಾಗ ದಾರಿಯಲ್ಲಿ ನಿಧನಳಾದಳು. ಕೃತ್ರಿಮ ಚೆನ್ನಬಸವನಾಯಕ ಮತ್ತು ಸೋಮಶೇಖಕರನಾಯಕ ಇಬ್ಬರೂ ಹೈದರನ ಸೆರೆ ಸೇರಿದರು. ಸೋಮಶೇಖರನಾಯಕ ಮಧುಗಿರಿಯ ಸೆರೆಯಲ್ಲಿ ಏಕಾಂಗಿಯಾಗಿದ್ದು ಅಲ್ಲಿಯೇ ನಿಧನನಾದ. ಕೆಳದಿಯ ಇತಿಹಾಸ ಇಂಥ ದುಃಸ್ಥಿತಿಯಲ್ಲಿ ಕೊನೆಗೊಂಡಿತು.

ವಿಜಯನಗರದ ತರುವಾಯ ಕರ್ನಾಟಕ ಸಂಸ್ಕøತಿಯ ಮೇಲ್ಮೆಗಾಗಿ ಶ್ರಮಿಸಿದ ಕೆಳದಿಯ ಧೀರೋದಾತ್ತ ಇತಿಹಾಸದಲ್ಲಿ ಸೋಮಶೇಖರ ನಾಯಕ ಕೊನೆಯ ಮತ್ತು ದುರ್ಬಲ ಅರಸನಾಗಿದ್ದು ಅದರ ನಾಶಕ್ಕೆ ಕಾರಣನಾದನೆನ್ನಬಹುದು.

   (ಬಿ.ಕೆ.ಜಿ.)