ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸೌರವ್ಯೂಹ
ಸೌರವ್ಯೂಹ ಸೂರ್ಯ ಮತ್ತು ಇದರ ಗುರುತ್ವಾಕರ್ಷಣ ಕ್ಷೇತ್ರದೊಳಗಿದ್ದು ಇದನ್ನು ಪರಿಭ್ರಮಿಸುತ್ತಿರುವ ಸಮಸ್ತ ಆಕಾಶ ಕಾಯಗಳು (ಸೋಲಾರ್ ಸಿಸ್ಟಮ್). ಸೌರವ್ಯೂಹದಲ್ಲಿ ಸೂರ್ಯ ಒಂದೇ ನಕ್ಷತ್ರ. ಮಿಕ್ಕ ಅನಕ್ಷತ್ರ ಕಾಯಗಳಲ್ಲಿ ಪ್ರಮುಖವಾದವು ಗ್ರಹ, ಉಪಗ್ರಹ, ಉಲ್ಕೆ, ಧೂಮಕೇತು ಮತ್ತು ಊರ್ತ್‍ಮೇಘ
ಸೌರವ್ಯೂಹದ ಇತಿಹಾಸ: ಸೌರವ್ಯೂಹದ ಉಗಮ ಕುರಿತಂತೆ ವೈe್ಞÁನಿಕ ಚಿಂತನೆ ರೀನ್ ಡೆಕಾರ್ತ್‍ನಿಂದ (1596-1650) ಆರಂಭವಾಗು ತ್ತದೆ. ಈತ ಮಂಡಿಸಿದ ನೀಹಾರಿಕಾವಾದದ (ನೆಬ್ಯುಲರ್ ಹೈಪಾಥಿಸಿಸ್) ಸಾರವಿಷ್ಟು: ನೀಹಾರಿಕೆ (ನೋಡಿ- ನೀಹಾರಿಕೆ) ವಿಶ್ವದ ಮಹಾವಿಸ್ತಾರದಲ್ಲಿ ತನ್ನ ಸುತ್ತ ಆವರ್ತಿಸುತ್ತ ಎತ್ತಲೋ ಧಾವಿಸುತ್ತಲೂ ಇತ್ತು. ಈ ಆವರ್ತನ ಶೀಲ ನೀಹಾರಿಕೆಯ ಕೇಂದ್ರದಲ್ಲಿ ಹೈಡ್ರೊಜನ್ ದ್ರವ್ಯ ಅತಿದಟ್ಟವಾಗಿ ಸಂಚಯಿಸಿ ಸ್ವಂತ ಭಾರದ ಕಾರಣವಾಗಿ ಸಂಕೋಚಿಸತೊಡಗಿತು. ಈ ಕ್ರಿಯೆ ಒಂದು ಹಂತ ದಾಟಿದಾಗ ಸಂಮರ್ದ ಮಿತಿಮೀರಿ ಮುದ್ದೆಯ ಗರ್ಭದಲ್ಲಿ ತೀವ್ರ ಶಾಖಸಂಜನಿಸಿ ಪರಮಾಣು ಕುಲುಮೆ ಕ್ರಿಯಾಶೀಲ ವಾಯಿತು. ಹೈಡ್ರೊಜನ್ ಸಂಲಯನ ಕ್ರಿಯೆ ಮತ್ತು ವಿಕಿರಣೋತ್ಪಾಟನ ಪ್ರಕ್ರಿಯೆ - ಇದೇ ಸೂರ್ಯ. ಇದರ ಸುತ್ತಲೂ ಬಲು ದೂರದವರೆಗೆ ವಿರಳವಾಗಿ ಹರಡಿಕೊಂಡಿದ್ದ ದೂಳಿನ ಕಣಗಳು ಅಲ್ಲಲ್ಲೇ ಹಿರಿಕಿರಿಯ ಮುದ್ದೆಗಳಾಗಿ ಒಗ್ಗೂಡಿ ಗ್ರಹೋಪಗ್ರಹಗಳೂ ಇತರ ಕಾಯಗಳೂ ಮೈದಳೆದುವು.
ಕಾಮ್ಟೆ ಡ ಬಫನ್ (1707-88) ನೀಡಿದ ವಿವರಣೆ ಬೇರೆಯೇ (1745): ಸೂರ್ಯಸದೃಶ ಆಗಂತುಕ ರಾಶಿಯೊಂದು (ಬಫನ್ ಸೂಚಿಸಿದ್ದು ಧೂಮಕೇತು) ಸೂರ್ಯನತ್ತ ಬಂದು ಇದನ್ನು ಸವರಿ ಧಾವಿಸಿ ಹೋಯಿತು. ಆ ವೇಳೆ ಸೂರ್ಯನಿಂದ ಹೊರ ಸೆಳೆಯಲ್ಪಟ್ಟ ಅನಿಲರಾಶಿ ಕ್ರಮೇಣ ಘನೀಭವಿಸಿ ಗ್ರಹೋಪಗ್ರಹಗಳೂ ಇತರ ಕಾಯಗಳೂ ಉದ್ಭವಿಸಿದುವು.
1950ರ ದಶಕದ ವೇಳೆಗೆ ಇದೇ ವಾದದ ಸುಧಾರಿತ ರೂಪ ಮನ್ನಣೆ ಪಡೆಯಿತು. ಇದರಲ್ಲಿ ಧೂಮಕೇತುವಿನ ಬದಲು ಸೂರ್ಯಸಮಾನ ನಕ್ಷತ್ರವನ್ನು ಕಲ್ಪಿಸಿಕೊಳ್ಳಲಾಗಿತ್ತು. ಫಾರೆಸ್ಟ್ ರೇ ಮೌಲ್ಟನ್ (1872-1952) ಮಂಡಿಸಿದ ಮತ್ತು ಜೇಮ್ಸ್ ಜೀನ್ಸ್ (1877-1946) ಎಂಬವನಿಂದ ಸುಧಾರಿಸಲ್ಪಟ್ಟ ಈ ಊಹೆ ಅಲ್ಲಿಯತನಕ ಜಮೆಯಾಗಿದ್ದ ಸೌರವ್ಯೂಹದ ಬಗೆಗಿನ ಮಾಹಿತಿಗಳನ್ನು ಸಮರ್ಪಕವಾಗಿ ವಿವರಿಸಲು ಶಕ್ತವಾಗಿತ್ತು. 1957ರಲ್ಲಿ ಆಕಾಶ ಯುಗಾರಂಭ, 1969ರಲ್ಲಿ ಮಾನವನಿಂದ ಚಂದ್ರಾವತರಣ ಮತ್ತು ಸುರಕ್ಷಿತ ಮರುಪಯಣ. ಹೀಗೆ ವಿಶ್ವದ ಬಗ್ಗೆ ದೊರೆತ ಅಧಿಕ ಮಾಹಿತಿಗಳು ಪ್ರವರ್ತಿಸಿದ ಊಹೆ ಡೆಕಾರ್ತ್‍ರ ಬೌದ್ಧಿಕ-ತಾರ್ಕಿಕ ಚಿಂತನೆಗೆ ಸಂವಾದಿಯಾಗಿದೆ. (ಸಿ.ಎನ್.ಎಸ್.)