ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಸ್ಟಾಲಿನ್, ಜೋಸೆಫ್

ವಿಕಿಸೋರ್ಸ್ ಇಂದ
Jump to navigation Jump to search

ಸ್ಟಾಲಿನ್, ಜೋಸೆಫ್ 1879-1953. ಯೂನಿಯನ್ ಆಫ್ ಸೋಷಿಯಲಿಸ್ಟ್ ಸೋವಿಯತ್ ರಿಪಬ್ಲಿಕ್‍ನ (ಯು.ಎಸ್.ಎಸ್.ಆರ್.) ಸರ್ವಾಧಿಕಾರಿ (1929-53). ಇವನು ಜಾರ್ಜಿಯಾದ ಗೋರಿ ಎಂಬಲ್ಲಿ 1879 ಡಿಸೆಂಬರ್ 21ರಂದು ಜನಿಸಿದ. ತಂದೆ ವಿಸೊರಿನ್ ಐವಾನೊವಿಚ್, ತಾಯಿ ಎಕ್ತರಿನ ಗೆಹ್ಲಾಜ್. ಇವನ ಮೂಲ ಹೆಸರು ಐವೊಸಿಫ್ ವಿಸರಿಯೊನವಿಚ್ ಜುಗಾಷ್‍ವಿಲಿ. 1913ರಲ್ಲಿ ಸ್ಟಾಲಿನ್ ಎಂದು ತನ್ನ ಹೆಸರನ್ನು ಬದಲಿಸಿಕೊಂಡ. ರಷ್ಯನ್ ಭಾಷೆಯಲ್ಲಿ ಸ್ಟಾಲಿನ್ ಎಂದರೆ ಕಬ್ಬಿಣ ಎಂದರ್ಥ. ಕಡುಬಡತನದಲ್ಲಿ ಬೆಳೆದ ಇವನು ಚರ್ಚ್‍ನ ಶಾಲೆಯಲ್ಲಿ ವಿದ್ಯಾಭ್ಯಾಸ ಪಡೆದ. ಧರ್ಮಾಧಿಕಾರಿಯಾಗಬೇಕೆಂಬುದು ಇವನ ಅಪೇಕ್ಷೆಯಾಗಿತ್ತು. ಜಾರ್ಜಿಯನ್ ಆರ್ಥೊಡಾಕ್ಸ್ ಚರ್ಚ್‍ನಲ್ಲಿ ಅಧ್ಯಯನ ಕೈಗೊಂಡ. ಆದರೆ ರಷ್ಯದಲ್ಲಿ ಸಂಭವಿಸಿದ ಅನೇಕ ಘಟನೆಗಳು ಇವನನ್ನು ಕ್ರಾಂತಿಕಾರಿಯಾಗಿ ರೂಪಿಸಿದವು. ಅನೇಕ ಬಾರಿ ಬಂಧನಕ್ಕೊಳಗಾಗಿ ಸೆರೆಮನೆವಾಸ ಅನುಭವಿಸಿದ. ಗಡೀಪಾರು ಶಿಕ್ಷೆಗೂ ಒಳಗಾಗಿದ್ದ. ಇವನ ಹೆಂಡತಿ ನಡೇಸ್ಥ ಅಲ್ಲಿಲುಯೆವ.

ಇವನು 1905ರಲ್ಲಿ ಮೊದಲಬಾರಿಗೆ ಲೆನಿನನನ್ನು ಭೇಟಿ ಮಾಡಿದ. ಅನಂತರ ಲೆನಿನ್ ಇವನನ್ನು ಬೋಲ್ಷೆವಿಕ್ ಪಕ್ಷದ ಕೇಂದ್ರ ಸಮಿತಿಗೆ ಸದಸ್ಯನಾಗಿ ಮಾಡಿದ (1912). 1917ರಲ್ಲಿ ಸೋಷಿಯಲ್ ಡೆಮಾಕ್ರಟಿಕ್ಟ್ ಲೇಬರ್ ಪಾರ್ಟಿ ಸೇರಿದ. 1917ರ ಅಕ್ಟೋಬರ್ ಕ್ರಾಂತಿಯಲ್ಲಿ ತಮ್ಮ ಪಕ್ಷದ ತತ್ತ್ವ ಸಿದ್ಧಾಂತಗಳಿಗೆ ವಿರೋಧಿಗಳಾಗಿದ್ದ ಅನೇಕ ಕ್ರಾಂತಿಕಾರಿಗಳನ್ನು ಅಡಗಿಸುವಲ್ಲಿ ಯಶಸ್ವಿಯಾದ. ಕೆಂಪು ಸೈನ್ಯ ಸಂಘಟಿಸಿದ. ವಿರೋಧಿಗಳನ್ನು ಹತ್ತಿಕ್ಕಿದ. ರಾಜಕೀಯ ಚತುರನಾದ ಇವನು ತನ್ನ ರಾಜಕೀಯ ವಿರೋಧಿಯಾದ ಟ್ರಾಟಸ್ಕಿಯನ್ನು ರಾಜಕೀಯ ರಂಗದಿಂದ ದೂರ ಸರಿಯುವಂತೆ ಮಾಡಿ, ಅನಂತರ ಅವನನ್ನು ಗಡೀಪಾರುಗೊಳಿಸಿದ. 1927ರ ಹೊತ್ತಿಗೆ ಅನೇಕ ರಾಜಕೀಯ ವಿರೋಧಿಗಳಿಂದ ಮುಕ್ತನಾದ. ಹಲವಾರು ಸಂಸ್ಥಾನಗಳನ್ನು ಒಗ್ಗೂಡಿಸಿ ಯೂನಿಯನ್ ಆಫ್ ಸೋಷಿಯಲಿಸ್ಟ್ ಸೋವಿಯತ್ ರಿಪಬ್ಲಿಕ್ (ಯು.ಎಸ್.ಎಸ್.ಆರ್.) ಸ್ಥಾಪಿಸಿದ (1923). ಅನಂತರ ರಷ್ಯ ಆರ್ಥಿಕ ಹಾಗೂ ಸೈನಿಕ ಶಕ್ತಿಗಳನ್ನು ಬಲಗೊಳಿಸಿದ. ಲೆನಿನ್ ಜಾರಿಗೊಳಿಸಿದ ಹೊಸ ಆರ್ಥಿಕ ನೀತಿಯನ್ನು 1928ರಲ್ಲಿ ಕೊನೆಗೊಳಿಸಿದ. ರಷ್ಯಕ್ಕೆ ಒಂದು ಪ್ರಜಾಪ್ರಭುತ್ವ ಮಾದರಿಯ ರಾಜ್ಯಾಂಗ ರೂಪಿಸಲು ಕಾರಣನಾದ (1935). ಪಂಚವಾರ್ಷಿಕ ಯೋಜನೆಗಳ (1928) ಮೂಲಕ ಕೈಗಾರಿಕೆ, ಕೃಷಿ, ಉತ್ಪಾದನೆ, ವಿದ್ಯಾಭ್ಯಾಸ, ವಿಜ್ಞಾನ ಮತ್ತಿತ್ತರ ಕ್ಷೇತ್ರಗಳಲ್ಲಿ ಗಣನೀಯವಾದ ಪ್ರಗತಿ ಸಾಧಿಸಿದ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹಾಮುತ್ಸದ್ಧಿಯಾಗಿದ್ದ. ಈತನ ನೇತೃತ್ವದ ಕಮ್ಯೂನಿಷ್ಟ್ ಸರ್ಕಾರಕ್ಕೆ ಇತರ ಪ್ರಜಾಪ್ರಭುತ್ವ ರಾಷ್ಟ್ರಗಳಿಂದ ಯಾವುದೇ ಸಹಕಾರ ದೊರೆಯಲಿಲ್ಲ. ಲೆನಿನ್‍ನಂತೆ ಇವನೂ 1939ರಲ್ಲಿ ಹಿಟ್ಲರನೊಡನೆ ಅನ್ಯಾಕ್ರಮಣ ಒಪ್ಪಂದ ಮಾಡಿಕೊಂಡ. ಎರಡನೆಯ ಮಹಾಯುದ್ಧದಲ್ಲಿ ರಷ್ಯವನ್ನು ಯುದ್ಧದಿಂದ ದೂರವಿಡಲು ಯತ್ನಿಸಿದನಾದರೂ ಹಿಟ್ಲರ್‍ನ ಆಕ್ರಮಣ ನೀತಿಯಿಂದಾಗಿ ಅದು ಸಾಧ್ಯವಾಗಲಿಲ್ಲ. ರಷ್ಯ ಮಿತ್ರರಾಷ್ಟ್ರಗಳ ಪರ ಹೋರಾಡಿ ವಿಜಯದಲ್ಲಿ ಭಾಗಿಯಾದ. ಈ ಯುದ್ಧದಿಂದ ರಷ್ಯ ಪ್ರಪಂಚದಲ್ಲಿಯೇ ಶಸ್ತ್ರಸಜ್ಜಿತ ಬಲಿಷ್ಠ ರಾಷ್ಟ್ರವೆಂಬ ಕೀರ್ತಿಗೆ ಪಾತ್ರವಾಯಿತು. ರಷ್ಯ ಪ್ರಪ್ರಥಮ ಬಾರಿಗೆ 1949ರಲ್ಲಿ ಅಣುಬಾಂಬ್ ಸ್ಫೋಟಿಸಿ ಅಣುಶಕ್ತಿ ರಾಷ್ಟ್ರವಾಯಿತು. ಕೊರಿಯ ಯುದ್ಧ ಸಂದರ್ಭದಲ್ಲಿ (1950-53) ಈತ ಕಮ್ಯೂನಿಷ್ಟ್ ಉತ್ತರಕೊರಿಯವನ್ನು ಬೆಂಬಲಿಸಿದ್ದ. ವಿಚಾರವಂತನೂ ಚಿಂತಕನೂ ಆಗಿದ್ದ ಈತ ದ ನ್ಯಾಷನಲ್ ಕ್ವೆಶ್ಚನ್ ಅಂಡ್ ಸೋಷಿಯಲ್ ಡೆಮಾಕ್ರಸಿ ಎಂಬ ಸುದೀರ್ಘ ಲೇಖನವನ್ನು ಬರೆದಿದ್ದ (1913). ಈತ ಕೆಲಕಾಲ ಪ್ರಾವ್ಡ (ಸತ್ಯ) ಪತ್ರಿಕೆಯ ಸಂಪಾದಕನೂ ಆಗಿದ್ದ. ಇವನು 1953 ಮಾರ್ಚ್ 5ರಂದು ಮಾಸ್ಕೋದಲ್ಲಿ ನಿಧನನಾದ.