ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹಾಲೇರಿ ರಾಜವಂಶ

ವಿಕಿಸೋರ್ಸ್ದಿಂದ

ಹಾಲೇರಿ ರಾಜವಂಶ ಸು. 1633-1834ರ ಅವಧಿಯಲ್ಲಿ ಕೊಡಗಿನಲ್ಲಿ ಆಳುತ್ತಿದ್ದ ರಾಜಮನೆತನ. ಇವರ ರಾಜಧಾನಿ ಮಡಿಕೇರಿ. ಮೊದಲು ಹಾಲೇರಿ, ಸ್ವಲ್ಪಕಾಲ ನಾಲ್ಕುನಾಡು ಸಹ ರಾಜಧಾನಿಗಳಾಗಿ ದ್ದುವು. ಈ ವಂಶದ ರಾಜರು ತಾವು ಚಂದ್ರವಂಶದವರು ಆಶ್ವಲಾಯನ ಸೂತ್ರ ಋಕ್ ಶಾಖೆಯವರು, ವೀರಶೈವ ಮತ ಧುರೀಣರು ಎಂದು ಕರೆದುಕೊಂಡಿದ್ದಾರೆ. ಈ ಅರಸರೂ ಒಡೆಯರು ಎಂಬ ಉತ್ತರನಾಮ ವನ್ನು ಬಳಸುತ್ತಿದ್ದರು. ಈ ವಂಶದ ವೀರರಾಜೇಂದ್ರ (1780-1809) ಬರೆಯಿಸಿದ ರಾಜೇಂದ್ರನಾಮೆ ಮತ್ತು ಹಲವು ಬ್ರಿಟಿಷರ ಬರೆಹಗಳು ಈ ವಂಶದ ಚರಿತ್ರೆಯ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಒದಗಿಸುತ್ತವೆ.

17ನೆಯ ಶತಮಾನದ ಆದಿಭಾಗದಲ್ಲಿ ವೀರರಾಜನೆಂಬ ಇಕ್ಕೇರಿಯ ರಾಜಕುಮಾರ ಜಂಗಮ ವೇಷದಲ್ಲಿ ಕೊಡಗಿಗೆ ಬಂದು ಮಡಿಕೇರಿ ಹತ್ತಿರದಲ್ಲಿರುವ ಹಾಲೇರಿಯಲ್ಲಿ ನೆಲಸಿದ. ಇವನೇ ಹಾಲೇರಿ ವಂಶದ ಮೂಲಪುರುಷ. ಇವನು ಒಂದು ದಂಡನ್ನು ಕಟ್ಟಿ ಸುತ್ತುಮುತ್ತಲ ಪ್ರದೇಶವನ್ನು ಆಕ್ರಮಿಸಿಕೊಂಡ. ಅಂದು ಕೊಡಗಿನಲ್ಲಿ ಒಡೆತನ ಮಾಡುತ್ತಿದ್ದ ಕಿಗ್ಗಟ್ಟುನಾಡಿನ ಅಚ್ಚುನಾಯಕ, ಬೆಪ್ಪುನಾಡಿನ ಉತ್ತನಾಯಕ, ಪಾಡಿ ನಾಲ್ಕುನಾಡಿನ ಕರ್ಣೆಂಬಾಹು ಮೊದಲಾದ ಪಾಳೆಯಗಾರರು ಇವನ ಅಧೀನರಾದರು ಎಂಬ ಹೇಳಿಕೆಗಳಿವೆ. ಆದರೆ ವೀರರಾಜ ಮತ್ತು ಇವನ ಮಗ ಅಪ್ಪಾಜಿರಾಜ ಈ ಮೊದಲ ರಾಜರ ಕಾಲದ ಆಳಿಕೆಯ ಕಾಲ ಮತ್ತು ಇತರ ವಿವರಗಳು ಸರಿಯಾಗಿ ತಿಳಿದುಬಂದಿಲ್ಲ. ಅಪ್ಪಾಜಿರಾಜನ ಮಗ ಮುದ್ದುರಾಜ 1633-87ರ ವರೆಗೆ ಆಳಿದ. ಇವನು 1681ರಲ್ಲಿ ಮಡಿಕೇರಿಯಲ್ಲಿ ಅರಮನೆಯನ್ನೂ ಅದರ ಸುತ್ತ ಕೋಟೆಯನ್ನೂ ಕಟ್ಟಿಸಿದ. ಆ ಕಾಲದಲ್ಲಿ ಬಹುಶಃ ಬಲಯುತ ರಾಜನಾಗಿದ್ದ ಈತ ಮೈಸೂರು ಅರಸರಿಂದ ಪಿರಿಯಾಪಟ್ಟಣ ದಾಳಿಗೆ ಒಳಗಾದ ಸಂದರ್ಭದಲ್ಲಿ ಅದನ್ನು ರಕ್ಷಿಸುವ ಮನಸ್ಸು ಮಾಡಿದ್ದ. ಆದರೆ ಇವನು ಕಾರ್ಯನಿರತನಾಗುವ ಹೊತ್ತಿಗೆ ಕೈಮೀರಿಹೋಗಿತ್ತು. ಮುದ್ದುರಾಜನಿಗೆ ದೊಡ್ಡವೀರಪ್ಪ (1687-1736), ಅಪ್ಪಾಜಿರಾಜ ಮತ್ತು ನಂದರಾಜ ಎಂಬ ಮೂವರು ಮಕ್ಕಳು ಇದ್ದರು. ದೊಡ್ಡವೀರಪ್ಪ ತಂದೆಯ ಮರಣಾನಂತರ ಪಟ್ಟಕ್ಕೆ ಬಂದ. ಈತ ಕೊಟ್ಟಾಯಂ ಅರಸ ವೀರವರ್ಮನನ್ನು ಯುದ್ಧದಲ್ಲಿ ಸೋಲಿಸಿ ಕೊಂದ. ಬಿದನೂರ ಸೋಮಶೇಖರನಾಯಕನೊಡನೆ ಮೈತ್ರಿಯನ್ನು ಸಾಧಿಸಿದ. 49 ವರ್ಷಗಳ ಕಾಲ ಈತ ದಕ್ಷತೆಯಿಂದ ಆಳಿ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿ ತನ್ನ 78ನೆಯ ವಯಸ್ಸಿನಲ್ಲಿ ಮರಣಹೊಂದಿದ. ಇವನು ಶೂರನೂ ಪ್ರಾಮಾಣಿಕನೂ ದಕ್ಷ ಆಡಳಿತಗಾರನೂ ನಿರ್ದಾಕ್ಷಿಣ್ಯ ಸ್ವಭಾವದವನೂ ಆಗಿದ್ದ. ಇವನ ಅನಂತರ ಆಳಿದವನು ಚಿಕ್ಕವೀರಪ್ಪ (1736-66). ಇವನು ದುರ್ಬಲನಾಗಿದ್ದುದರಿಂದ ಏಳುಸಾವಿರ ಸೀಮೆ, ಬೆಮ್ಮತ್ತಿ, ಮಲ್ಲಿಪಟ್ಟಣ ಮತ್ತು ಹೊಸೂರು ಹೋಬಳಿಗಳನ್ನು ಹೈದರ್ ಅಲಿ ವಶಪಡಿಸಿಕೊಂಡ. ಚಿಕ್ಕವೀರಪ್ಪನ ಅನಂತರ ಹಾಲೇರಿಯ ಮುದ್ದುರಾಜ ಮತ್ತು ಹೊರಮಲೆಯ ಮುದ್ದಯ್ಯ ಇವರಿಬ್ಬರೂ ಸಮರಸದಿಂದ 1766-70ರ ವರೆಗೆ ಒಟ್ಟಿಗೆ ಆಡಳಿತ ನಡೆಸಿದರು. ಈ ಕಾಲದಲ್ಲಿ ಪಂಜೆ ಮತ್ತು ಬೆಳ್ಳಾರೆಗಳನ್ನು ಸೇರಿಸಿಕೊಂಡು ಕೊಡಗು ವಿಸ್ತರಿಸಲ್ಪಟ್ಟಿತು. ಮುದ್ದಯ್ಯನ ಮಗ ದೇವಪ್ಪರಾಜ 4 ವರ್ಷ ಆಳಿದ ಅನಂತರ ಸಿಂಹಾಸನಕ್ಕಾಗಿ ಹೋರಾಟ ನಡೆಯಿತು. ಹೊರಮಲೆಯವರು ದೇವಪ್ಪನನ್ನು ಸಿಂಹಾಸನಕ್ಕೇರಿಸಿದರೂ ಹಾಲೇರಿಯ ಒಂದನೆಯ ಲಿಂಗರಾಜೇಂದ್ರ (1774-80) ಐಗೂರಿಗೆ ಹೋಗಿ ಹೈದರನ ಸಹಾಯ ದಿಂದ ಸಿಂಹಾಸನ ಪಡೆದ. ಇವನು 1780ರಲ್ಲಿ ಮರಣಹೊಂದಿದ. ಇವನ ಮಕ್ಕಳು ಪ್ರಾಪ್ತವಯಸ್ಕರಾಗುವತನಕ ಅವರ ಪೋಷಕನಾಗುವ ನೆಪದಲ್ಲಿ ಹೈದರ್ ಕೊಡಗನ್ನು ವಶಪಡಿಸಿಕೊಂಡ. ರಾಜಕುಮಾರರನ್ನು ಮೊದಲು ಹಾಸನ ಜಿಲ್ಲೆಯ ಗೊರೂರಿನಲ್ಲಿಯೂ ಅನಂತರ ಪಿರಿಯಾಪಟ್ಟಣದಲ್ಲಿಯೂ ಸೆರೆಯಲ್ಲಿಟ್ಟಿದ್ದ. 1782ರಲ್ಲಿ ಕೊಡವರು ದಂಗೆಯೆದ್ದರು. ಅದೇ ವರ್ಷ ಹೈದರನೂ ಮರಣಹೊಂದಿದ.

ಹೈದರನ ಅನಂತರ ಟಿಪ್ಪುಸುಲ್ತಾನ್ ಕೊಡಗಿನಲ್ಲಿ ತನ್ನ ಅಧಿಕಾರ ಸ್ಥಾಪಿಸಿದ. ಈ ಸಂದರ್ಭದಲ್ಲಿ ಪುನಃ ಕೊಡಗಿನಲ್ಲಿ ದಂಗೆಗಳುಂಟಾದಾಗ ಈ ದಂಗೆಗಳನ್ನು ಅಡಗಿಸಿ ಸೆರೆಸಿಕ್ಕವರನ್ನು ಶ್ರೀರಂಗಪಟ್ಟಣಕ್ಕೆ ಕಳಿಸಿದ. ಕೊಡಗುಪ್ರದೇಶವನ್ನು ಮುಸ್ಲಿಂ ಜಮೀನ್ದಾರರಿಗೆ ಕೊಟ್ಟು ಉಳಿದ ಕೊಡವರನ್ನೆಲ್ಲ ಕೊಡಗಿನಿಂದ ಉಚ್ಚಾಟಿಸುವಂತೆ ತಿಳಿಸಿದ. ವೀರರಾಜೇಂದ್ರ ತನ್ನ ಪತ್ನಿ ಮತ್ತು ಸಹೋದರರೊಡನೆ ಪಿರಿಯಾಪಟ್ಟಣದಿಂದ ತಪ್ಪಿಸಿಕೊಂಡು ಸ್ವಲ್ಪ ಅಧಿಕಾರ ಹಿಂದಕ್ಕೆ ಪಡೆದ. ಟಿಪ್ಪುವಿನೊಡನೆ ಯುದ್ಧದಲ್ಲಿ ತೊಡಗಿದ್ದ ಬ್ರಿಟಿಷರ ಸಹಾಯದಿಂದ ವೀರರಾಜೇಂದ್ರ ಪುನಃ ಸಿಂಹಾಸನವೇರಿದ. 1792ರಲ್ಲಿ ಲಾರ್ಡ್ ಕಾರ್ನ್‍ವಾಲೀಸ್ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದಾಗ ಅನೇಕ ಜನ ಕೊಡವರು ಕೊಡಗಿಗೆ ಹಿಂದಿರುಗಿದರು. ವೀರರಾಜೇಂದ್ರ ಕೊಡಗಿನ ರಾಜರಲ್ಲೆಲ್ಲ ಅತ್ಯಂತ ಪ್ರಮುಖನಾಗಿದ್ದ. ಈತ ಟಿಪ್ಪುವನ್ನು ಸೋಲಿಸಿ ಕುಶಾಲನಗರ, ಬೆಪ್ಪುನಾಡು, ಭಾಗಮಂಡಲ-ಈ ಮೂರು ಕೋಟೆಗಳನ್ನು ವಶಪಡಿಸಿಕೊಂಡ.

1790ರಲ್ಲಿ ಮೂರನೆಯ ಮೈಸೂರು ಯುದ್ಧ ಪ್ರಾರಂಭವಾದಾಗ ತಲಚೇರಿಯಲ್ಲಿದ್ದ ಇಂಗ್ಲಿಷ್ ಮುಖಂಡ ರಾಬರ್ಟ್ ಟೇಲರ್ ಕೊಡಗಿನ ರಾಜನೊಡನೆ ಸಂಧಾನ ಆರಂಭಿಸಿ, ವ್ಯಾಪಾರ ಸೌಕರ್ಯಗಳನ್ನು ಪಡೆದ. ಬ್ರಿಟಿಷ್ ಕಂಪನಿ ಕೊಡಗಿನ ಸ್ವಾತಂತ್ರ್ಯ ರಕ್ಷಿಸಲು ಒಪ್ಪಿತು. ಇದೇ ಸಂದರ್ಭದಲ್ಲಿ ಇಂಗ್ಲಿಷರ ವಿರುದ್ಧ ಯುದ್ಧಮಾಡಿದರೆ ಕೆಲವು ಪ್ರದೇಶಗಳನ್ನು ಕೊಡುವುದಾಗಿ ಟಿಪ್ಪು ಹೇಳಿಕಳಿಸಿದ. ಆದರೆ ವೀರರಾಜೇಂದ್ರ ಟಿಪ್ಪುವಿನ ಆಹ್ವಾನವನ್ನು ಒಪ್ಪಲಿಲ್ಲ. ಸಿದ್ದೇಶ್ವರದ ಬಳಿ ಬ್ರಿಟಿಷ್ ಸೈನ್ಯ ಬೀಡುಬಿಟ್ಟಿದ್ದಾಗ ವೀರರಾಜ ಅಬರ್‍ಕ್ರಾಂಬಿಯನ್ನು ಭೇಟಿಮಾಡಿದ. ಇದರ ನೆನಪಿಗಾಗಿ 1792ರಲ್ಲಿ ಒಂದು ಪಟ್ಟಣ ಕಟ್ಟಿಸಿ, ಅದಕ್ಕೆ ವೀರರಾಜಪೇಟೆ ಎಂದು ಹೆಸರಿಟ್ಟ. 1793ರಲ್ಲಿ ಬ್ರಿಟಿಷರೊಡನೆ ಪುನಃ ಒಪ್ಪಂದ ಮಾಡಿಕೊಂಡು ಅವರಿಗೆ ವರ್ಷಕ್ಕೆ 24,000 ರೂಪಾಯಿ ಪೊಗದಿ ಕೊಡಲು ಸ್ವಯಂಪ್ರೇರಣೆಯಿಂದ ಒಪ್ಪಿದ. ಮೊದಲ ರಾಣಿಗೆ ಗಂಡು ಮಕ್ಕಳಿಲ್ಲದ್ದರಿಂದ 1796ರ ಫೆಬ್ರವರಿಯಲ್ಲಿ ಮಹದೇವಮ್ಮಾಜಿ ಯನ್ನು ವಿವಾಹ ಮಾಡಿಕೊಂಡ. ನಾಲ್ಕನೆಯ ಮೈಸೂರು ಯುದ್ಧದಲ್ಲಿ ಈತ ಬ್ರಿಟಿಷರಿಗೆ ಸಹಾಯ ಮಾಡಿದ. ಯುದ್ಧದಲ್ಲಿ ಟಿಪ್ಪು ಮಡಿದಾಗ ಅವನ ಯುದ್ಧಾಶ್ವ, ಪಲ್ಲಕ್ಕಿ ಮತ್ತು ಅಂಬಾರಿಗಳು ವೀರರಾಜೇಂದ್ರನಿಗೆ ಬಹುಮಾನವಾಗಿ ದೊರೆತವು. ಟಿಪ್ಪುವಿನ ಪ್ರದೇಶಗಳ ಹಂಚಿಕೆಯ ಅನಂತರ ಮೈಸೂರು ಮತ್ತು ಕೊಡಗುಗಳ ಗಡಿ ಸ್ಪಷ್ಟವಾಗಿ ಗುರುತಿಸಲ್ಪಟ್ಟವು.

ವೀರರಾಜೇಂದ್ರನ ಸಹೋದರ ಎರಡನೆಯ ಲಿಂಗರಾಜೇಂದ್ರ 1811 ರಿಂದ 1820ರ ವರೆಗೆ ಆಳಿದ. ಇವನ ಕಾಲದಲ್ಲಿ ಮಡಿಕೇರಿಯ ಅರಮನೆ (1812), ಓಂಕಾರೇಶ್ವರ ದೇವಸ್ಥಾನ (1820) ನಿರ್ಮಾಣ ಗೊಂಡವು. ಓಂಕಾರೇಶ್ವರ ದೇವಾಲಯಕ್ಕಾಗಿ ಶಿವಲಿಂಗವನ್ನು ಕಾಶಿಯಿಂದ ತರಿಸಿ 1820 ಮಾರ್ಚ್ 26ರಂದು ಪ್ರತಿಷ್ಠಾಪಿಸಿದ.

ಲಿಂಗರಾಜೇಂದ್ರ ದಕ್ಷ ಆಡಳಿತಗಾರನಾಗಿದ್ದ. ಕೋಟೆಗಳನ್ನು ಬಲಪಡಿಸಿದ. ರಾಜ್ಯದ ಜಮೀನನ್ನು ಕ್ರಮವಾಗಿ ಅಳತೆಮಾಡಿಸಿ. ಜಮೀನಿನ ಫಲವತ್ತತೆಯ ಆಧಾರದ ಮೇಲೆ ಕಂದಾಯವನ್ನು ನಿರ್ಧರಿಸಿದ. ಸರ್ಕಾರ ದಕ್ಷತೆಯಿಂದ ಕೆಲಸ ಮಾಡಲು 54 ಹುಕುಂ ಅಥವಾ ಆಜ್ಞೆಗಳನ್ನು ಹೊರಡಿಸಿದ. ನಾಡಿನ ಪ್ರತಿಯೊಂದು ಇಲಾಖೆಯ ಆಡಳಿತ ಪಾರುಪತ್ತೇಗಾರರಿಗೆ ವಹಿಸಲ್ಪಟ್ಟಿತು. ಸುಬೇದಾರರು ದೊಡ್ಡ ವಿಭಾಗಗಳನ್ನು ನೋಡಿಕೊಳ್ಳುತ್ತಿದ್ದರು. ಹಳ್ಳಿಗಳಲ್ಲಿ ಪಟೇಲರು ಮತ್ತು ನಾಡಟಿಕ್ಕರು ಎಂಬ ಖಾಸಗೀ ನಾಯಕರಿದ್ದರು.

ಇವನ ಮಗ ಚಿಕ್ಕವೀರರಾಜೇಂದ್ರ ಹಾಲೇರಿ ವಂಶದ ಹಾಗೂ ಕೊಡಗಿನ ಕೊನೆಯ ದೊರೆ (1820-34). ಇವನು ಅನೇಕ ಕೊಲೆಗಳಿಗೆ ಕಾರಣನಾಗಿದ್ದುದರ ಫಲವಾಗಿ ವಿಚಾರಣೆ ಮಾಡಲು ತೀರ್ಮಾನಿಸಿದಾಗ ರಾಜ ಇದನ್ನು ಪ್ರತಿಭಟಿಸಿದ. ಸೋದರಿ ದೇವಮ್ಮಾಜಿಯೂ ಆಕೆಯ ಗಂಡ ಚನ್ನಬಸಪ್ಪನೂ 1831ರಲ್ಲಿ ಮೈಸೂರಿಗೆ ಓಡಿಹೋಗಿ ಬ್ರಿಟಿಷರ ರಕ್ಷಣೆ ಕೋರಿದರು. ಬೇಟೆಗೆ ಸೌಕರ್ಯವಾಗಿದ್ದು ಹಿತಕರವಾದ ವಾತಾವರಣವಿದ್ದುದರಿಂದ ಕೊಡಗಿನ ಮೇಲೆ ಬ್ರಿಟಿಷರ ಕಣ್ಣು ಬಿತ್ತು. ಪ್ರಜೆಗಳನ್ನು ಹಿಂಸಿಸುತ್ತಾನೆಂದು ರಾಜನ ಮೇಲೆ ದೂರು ಹೋದಾಗ, ಇದೇ ಸರಿಯಾದ ಕಾಲವೆಂದು ಕೊಡಗನ್ನು ವಶಪಡಿಸಿಕೊಳ್ಳಲು ಲಾರ್ಡ್ ವಿಲಿಯಂ ಬೆಂಟಿಂಕ್ ಆಜ್ಞೆ ಹೊರಡಿಸಿದ. ಕರ್ನಲ್ ಲಿಂಡ್ಸೆ ಒಂದು ಸೈನ್ಯದೊಡನೆ ಮಡಿಕೇರಿಯ ಮೇಲೆ ದಾಳಿಮಾಡಿ ಅದನ್ನು 1834ರ ಏಪ್ರಿಲ್ 6ರಂದು ವಶಪಡಿಸಿಕೊಂಡ. ಕೊಡಗು ಬ್ರಿಟಿಷರ ವಶವಾಯಿತು. ಈ ಸಂದರ್ಭದಲ್ಲಿ ಬ್ರಿಟಿಷರ ಅಧೀನದಲ್ಲಿ ಸಿಂಹಾಸನದಲ್ಲಿ ಮುಂದುವರಿ ಯಲು ಅವಕಾಶ ಕೊಡಬೇಕೆಂದು ಈತ ಪ್ರಾರ್ಥಿಸಿಕೊಂಡ. ಬ್ರಿಟಿಷರು ಅವನ ಕೋರಿಕೆಯನ್ನು ನಿರಾಕರಿಸಿದರು. ಮೈಸೂರು, ಮಲಬಾರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಹತೋಟಿಯಲ್ಲಿಟ್ಟುಕೊಳ್ಳಲು ಕೊಡಗು ಸೂಕ್ತ ಸ್ಥಳವೆಂದು ಅರಿತಿದ್ದ ಬ್ರಿಟಿಷರು ಕೊಡಗನ್ನು ಕಂಪನಿಯ ಆಡಳಿತಕ್ಕೆ ಒಳಪಡಿಸಿಕೊಳ್ಳಲು ನಿರ್ಧರಿಸಿದ್ದರು. ಆದ್ದರಿಂದ ಬ್ರಿಟಿಷ್ ಸೈನ್ಯದ ಮುಖ್ಯಾಧಿಕಾರಿ ಹಾಗೂ ಕಂಪನಿಯ ರಾಜಕೀಯ ಅಧಿಕಾರಿಯಾ ಗಿದ್ದ ಕರ್ನಲ್ ಫ್ರೇಸರ್ ರಾಜ್ಯದ ಮುಂದಿನ ಆಡಳಿತದ ವಿಷಯದಲ್ಲಿ ಜನಾಭಿಪ್ರಾಯ ಪಡೆಯುವ ಯತ್ನಮಾಡಿ, ಜನರೆಲ್ಲ ಬ್ರಿಟಿಷ್ ಕಂಪನಿಯ ಆಡಳಿತ ಒಪ್ಪುತ್ತಾರೆಂದು ಹೇಳಿದ. ಜನಾಭಿಪ್ರಾಯದಂತೆ ಕೊಡಗು ಕಂಪನಿಯ ಆಡಳಿತಕ್ಕೆ ವಶಪಡಿಸಿಕೊಳ್ಳಲ್ಪಟ್ಟಿತೆಂದು ಒಂದು ಘೋಷಣೆ ಹೊರಡಿಸಿದ. ಬ್ರಿಟಿಷರು ವೀರರಾಜನನ್ನೂ ಆತನ ಕುಟುಂಬದವರನ್ನೂ ವಾರಣಾಸಿಗೆ ಕಳಿಸಿದರು. 1852ರಲ್ಲಿ ವೀರರಾಜೇಂದ್ರ ಮತ್ತು ಅವನ ಪುತ್ರಿ ಗೌರಮ್ಮ ಇಂಗ್ಲೆಂಡಿಗೆ ಹೋದರು. ಭಾರತದಿಂದ ಇಂಗ್ಲೆಂಡಿಗೆ ಪ್ರಯಾಣಮಾಡಿದ ರಾಜರುಗಳಲ್ಲಿ ವೀರರಾಜೇಂದ್ರ ಮೊದಲನೆಯವನು. ಗೌರಮ್ಮ ಕ್ರೈಸ್ತಧರ್ಮ ಅವಲಂಬಿಸಿ ಇಂಗ್ಲಿಷ್ ಅಧಿಕಾರಿಯೋರ್ವನನ್ನು ವಿವಾಹ ಮಾಡಿಕೊಂಡಳು. ವೀರರಾಜೇಂದ್ರ 1859 ಸೆಪ್ಟೆಂಬರ್ 24ರಂದು ಲಂಡನ್ನಿನಲ್ಲಿ ಮರಣಹೊಂದಿದ. ಅವನ ದೇಹವನ್ನು ವಾರಣಾಸಿಗೆ ತಂದು ಅಲ್ಲಿ ಸಮಾಧಿ ಮಾಡಲಾಯಿತು. ಹಾಲೇರಿ ಕುಟುಂಬದ ಸದಸ್ಯರು ಕೊಡಗನ್ನು ಬಿಟ್ಟು ಮೈಸೂರಿನಲ್ಲಿ ಬಂದು ನೆಲೆಗೊಂಡರು.

ಹಾಲೇರಿ ರಾಜರ ವಂಶಾವಳಿ :


ವೀರರಾಜ ಅಪ್ಪಾಜಿರಾಜ ಮುದ್ದುರಾಜ (1633-87) ದೊಡ್ಡವೀರಪ್ಪ ಅಪ್ಪಾಜಿರಾಜ ನಂದರಾಜ (1687-1736) ಅಪ್ಪಾಜಿರಾಜ ಮುದ್ದಯ್ಯರಾಜ (1766-70) ಚಿಕ್ಕವೀರಪ್ಪ ಮುದ್ದುರಾಜ ಲಿಂಗರಾಜೇಂದ್ರ I (1736-66) (1766-70) (1774-80) ಮಲ್ಲಯ್ಯ ಅಪ್ಪಾಜಿ ದೇವಪ್ಪರಾಜ (1770-74) ವೀರರಾಜೇಂದ್ರ I ಲಿಂಗರಾಜೇಂದ್ರ II (1780-1809) (1811-20) (ದೊಡ್ಡವೀರರಾಜೇಂದ್ರ ಒಡೆಯರ್) ವೀರರಾಜೇಂದ್ರ II ದೇವಮ್ಮಾಜಿ (1809-11) (1820-34) (ಚಿಕ್ಕವೀರರಾಜೇಂದ್ರ ಒಡೆಯರ್)

(ಕೆ.ವಿ.ಟಿ.)