ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹುಸೇನ್ ಜಕೀರ್ 2

ವಿಕಿಸೋರ್ಸ್ದಿಂದ

ಹುಸೇನ್ ಜಕೀರ್ 2

1951-. ಪ್ರಪಂಚದ ಸುಪ್ರಸಿದ್ಧ ತಬಲಾ ವಾದಕ. ಇವರು 1951 ಮಾರ್ಚಿ 9ರಂದು ಜನಿಸಿದರು. ತಂದೆ ಭಾರತದ ತಬಲಾ ಕ್ಷೇತ್ರದ ದಂತಕಥೆ ಎಂದೇ ಖ್ಯಾತರಾದ ಉಸ್ತಾದ್ ಅಲ್ಲಾ ರಖಾ. ತನ್ನ ತಂದೆಯಿಂದಲೇ ಸಂಗೀತ ಶಿಕ್ಷಣ ಪಡೆದರು. ಇವರು ತಬಲಾ ಪ್ರಪಂಚಕ್ಕೆ ಕಾಲಿಟ್ಟದ್ದು 8 ವರ್ಷದ ಬಾಲ ಪ್ರತಿಭೆಯಾಗಿ. ಅಲ್ಲಿಂದ ನಿರಂತರವಾಗಿ ತಂದೆಯವರೊಂದಿಗೆ ಪಕ್ಕವಾದ್ಯಕಾರನಾಗಿ ಪ್ರದರ್ಶನ ನೀಡಿದರು. ಇವರು ತಮ್ಮ 12ನೆಯ ವಯಸ್ಸಿನಲ್ಲೆ ಅಮೆರಿಕದಲ್ಲಿ ನೆಲಸಿ (1970), ಉಸ್ತಾದ್ ಅಲಿ ಅಕ್ಬರ್ ಖಾನ್‍ರ ಕ್ಯಾಲಿಫೋರ್ನಿಯದ ಸ್ಯಾನ್ ರ್ಯಾಫೆಲ್‍ನಲ್ಲಿರುವ ಸ್ಕೂಲ್ ಆಫ್ ಮ್ಯೂಸಿಕ್‍ನಲ್ಲಿ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸಿದರು.

ಭಾರತದ ಸಂಗೀತ ಕ್ಷೇತ್ರದ ದಿಗ್ಗಜರಾದ ರವಿಶಂಕರ್, ಶಿವಕುಮಾರಶರ್ಮ, ಅಲಿ ಅಕ್ಬರ್ ಖಾನ್, ಬ್ರಿಜು ಮಹಾರಾಜ್‍ರವರಿಗೆ ಪಕ್ಕವಾದ್ಯ ನೀಡಿ ಖ್ಯಾತರಾದರು. ಭಾರತದಲ್ಲಿ ಇವರಿಗೆ ಸರಿಸಮಾನವಾಗಿ ಶಾಸ್ತ್ರೀಯ ಮಟ್ಟಿನ ತಬಲಾವಾದಕರಿದ್ದಾರಾದರೂ ಹೊಸ ಹೊಸ ಅನ್ವೇಷಣೆಯನ್ನು ಶಾಸ್ತ್ರೀಯ ಹಾಗೂ ಪಾಶ್ಚಾತ್ಯ ಮಟ್ಟಿನಲ್ಲಿ, ಹಿಂದೂಸ್ಥಾನೀ ಹಾಗೂ ದಾಕ್ಷಿಣಾತ್ಯ ಬಾನಿಯಲ್ಲಿ ಹುಟ್ಟು ಹಾಕುತ್ತ ಗಣನೀಯ ಸಾಧಕರಾಗಿ ನಿಂತಿರುವವರು ಇವರೊಬ್ಬರೆ.

ಇವರ ತಂದೆ 2000ದಲ್ಲಿ ನಿಧನರಾದರು. ಆದರೆ ಅವರ ಅದ್ಭುತ ಪ್ರತಿಭೆ, ಅವರ ಅಸಾಧಾರಣ ಕರ್ತೃತ್ವ ಶಕ್ತಿ ಇವರ ಹಾಗೂ ಇವರ ಸಹೋದರರಾದ ಫಜûಲ್ ಮತ್ತು ತೌಫಿಕ್ ಖುರೇಷಿಯವರುಗಳ ಮೂಲಕ ಜೀವಂತವಾಗಿದೆ ಎಂಬುದು ಸಂಗೀತ ಕ್ಷೇತ್ರದ ನಂಬಿಕೆ. ಇವರು ತಮ್ಮ ತಬಲಾ ವಾದನದಲ್ಲಿ ಬಳಸುವ ಬೆರಳುಗಳ ಜಾದೂಗಾರಿಕೆ ಈ ಕ್ಷೇತ್ರಕ್ಕೆ ಅಪೂರ್ವವಾದದ್ದು.

ಇವರು ಚಲನಚಿತ್ರಗಳಿಗೆ ಸುಮಧುರ ಸಂಗೀತ ರಚನಾಕಾರರಾಗಿಯೂ ಖ್ಯಾತರಾಗಿದ್ದಾರೆ. 1996ರಲ್ಲಿ ಅಟ್ಲಾಂಟಾದಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್ ಕ್ರೀಡೋತ್ಸವಕ್ಕೆ ಆರಂಭಿಕ ಸಂಗೀತ ಸಂಯೋಜನೆ ಮಾಡಿದ್ದಾರೆ. ಇವರು ಸಂಯೋಜಿಸಿದ ಪ್ಲಾನೆಟ್ ಡ್ರಂ ಆಲ್ಬಂ ಪ್ರಪಂಚದ ಅತ್ಯುತ್ತಮ ಸಂಗೀತ ಆಲ್ಬಂ ಎಂದು ಪರಿಗಣಿತವಾಗಿ ಪ್ರತಿಷ್ಠಿತ ಗ್ರಾಮೀ ಅವಾರ್ಡ್ ಪಡೆದುಕೊಂಡಿದೆ(1991). ಭಾರತೀಯ ಶಾಸ್ತ್ರೀಯ ಸಂಗೀತ ಸಂಪ್ರದಾಯಕ್ಕೆ ಇವರು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರಾದರೂ, ಪಾಶ್ಚಿಮಾತ್ಯ ಜಾಸ್ó ಮತ್ತು ರಾಕ್ ಸಂಗೀತರಾರರೊಂದಿಗೆ ಲಯವಾದ್ಯ ಸಿಂಫೊನಿಗಳನ್ನು ರಚಿಸಿ ಪ್ರದರ್ಶಿಸುವ ಮೂಲಕ ಪ್ರಪಂಚಾದ್ಯಂತ ಗಮನ ಸೆಳೆದಿದ್ದಾರೆ. ನಿಯೊಟಲ್‍ನ ಯೂನಿವರ್ಸಿಟಿ ಆಫ್ ವಾಷಿಂಗ್ಟನ್‍ನಲ್ಲಿ ಚೀನ, ಆಫ್ರಿಕ ಹಾಗೂ ಇಂಡೋನೇಷ್ಯದ ಸಂಗೀತ ಶೈಲಿಗಳನ್ನೂ ಇವರು ಅಭ್ಯಾಸ ಮಾಡಿದ್ದಾರೆ. ಲ್ಯಾಟಿನ್ ಅಮೆರಿಕ, ಆಫ್ರಿಕ ಹಾಗೂ ಇತರ ಯುರೋಪ್ ದೇಶಗಳಲ್ಲಿ ಇವರು ನೀಡಿರುವ ಪ್ರದರ್ಶನಗಳು ಪ್ರಸಿದ್ಧವಾಗಿವೆ. ಸಂಗೀತ ಪ್ರಪಂಚಕ್ಕೆ ಅಪೂರ್ವವಾದ ರಚನೆಗಳನ್ನು ನೀಡಿದ ಈಸ್ಟ್‍ವೆಸ್ಟ್ ಫ್ಯೂಷನ್ ಸಂಸ್ಥೆಯ ಕ್ರಿಯಾಶೀಲ ಸದಸ್ಯರಾಗಿದ್ದಾರೆ.

ಇವರು ಭಾರತದ ಪ್ರಸಿದ್ಧ ಸಂಗೀತ ಸಾಧಕರಾದ ರವಿಶಂಕರ್, ಭೀಮಸೇನ್ ಜೋಶಿ, ಜಸ್‍ರಾಜ್, ಅಮ್ಜದ್ ಅಲೀಖಾನ್, ಎಲ್.ಶಂಕರ್, ಎಲ್.ಸುಬ್ರಹ್ಮಣ್ಯಮ್ ಮುಂತಾದವರಿಗೆ ಪಕ್ಕವಾದ್ಯಕಾರರಾಗಿ ಪ್ರದರ್ಶನ ನೀಡಿದ್ದಾರೆ. ಡಿಗಾರಿದಂ ಬ್ಯಾಂಡ್, ಜಾರ್ಜ್ ಹ್ಯಾರಿಸನ್, ಜೋಹೆಂಡರ್ಸನ್, ವ್ಯಾನ್ ಮಾರಿಸನ್, ಜಾಕ್‍ಬ್ರೂಸ್, ಪಾರೋ ಸ್ಯಾಂಡರ್ಸ್, ಬಿಲ್ಲಿ ಕೋಬಾಮ್, ದ ಹಾಂಕಾಂಗ್ ಸಿಂಫೊನಿ ಹಾಗೂ ದ ನ್ಯೂ ಆರ್ಲಿಯೆನ್ಸ್ ಸಿಂಫೊನಿ ಮೊದಲಾದವರೊಂದಿಗೆ ಸಂಗೀತ ಸಂಯೋಜಕರಾಗಿದ್ದಾರೆ. ಇವರ ಪ್ರಸಿದ್ಧ ಪಾಶ್ಚಾತ್ಯ ಲಯವಾದ್ಯಕಾರರ ಸಂಸ್ಥೆ, ರಿದಂ ಎಕ್ಸ್‍ಪೀರಿಯನ್ಸ್ ಹಾಗೂ ಭಾರತೀಯ ಲಯವಾದ್ಯಕಾರರ ಸಂಸ್ಥೆ ಮಾಸ್ಟರ್ಸ್ ಆಫ್ ಪರ್ಕಷನ್.

ಇನ್ ಕಸ್ಟಡಿ, ಇಸ್ಮಾಯಿಲ್ ಮರ್ಚೆಂಟ್‍ನ ಡೈರೆಕ್ಟೋರಿಯಲ್ ಡೆಬೂ, ಬರ್ನಾರ್ಡೊ ಬರ್ಟ್‍ಲೂಸಿಯ ಲಿಟ್ಲ್ ಬುದ್ಧ ಹಾಗೂ ನಾನಪ್ರಸ್ಥಂ-ಇವು ಇವರು ಸಂಗೀತ ಸಂಯೋಜಿಸಿದ ಪ್ರಪಂಚ ಪ್ರಸಿದ್ಧ ಚಲನಚಿತ್ರಗಳು. ಸಾಸ್ ಮಿ. ಆ್ಯಂಡಾಮಿಸಸ್ ಐಯರ್ ಹಾಗೂ ಇತ್ತೀಚಿನ ರಾಹುಲ್ ಬೋಸರ ಎವರಿಬಡಿ ಸೇಸ್ ಐ.ಆ್ಯಮ್ ಫೈನ್ ಮುಂತಾದವು ಭಾರತದ ಚಲನಚಿತ್ರಗಳು.

ಭಾರತೀಯ ಹಾಗೂ ಪಾಶ್ಚಾತ್ಯ ಸಂಗೀತ ಕ್ಷೇತ್ರದಲ್ಲಿ ಪ್ರಸಿದ್ಧರಾಗಿರುವ ಇವರಿಗೆ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. ಪದ್ಮಶ್ರೀ (1988) ಹಾಗೂ ಪದ್ಮಭೂಷಣ (2002) ಪುರಸ್ಕಾರಗಳಿಗೂ ಪಾತ್ರರಾಗಿದ್ದಾರೆ. ಇವರ ಹೆಸರಿನಲ್ಲಿ ಸು. 145 ಸಂಗೀತ ಆಲ್ಬಂಗಳಿವೆ. ಪ್ರಸ್ತುತ ಇವರು ವಾಷಿಂಗ್‍ಟನ್, ಕ್ಯಾಲಿಫೋರ್ನಿಯ, ಲಾಂಗ್‍ಬೀಚ್, ಲಾಸ್ ಏಂಜಲೀಸ್, ಪೋರ್ಟ್ ಹಾಗೂ ಇತರ ವಿಶ್ವವಿದ್ಯಾಲಯಗಳಲ್ಲಿ ತಬಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ, ತಮ್ಮ ಸಹೋದ್ಯೋಗಿ ಕರ್ಶ್‍ಕಾಳೆ ಅವರೊಂದಿಗೆ ಬಿಲ್‍ಲ್ಯಾಸ್ವೆಲ್ ಅವರ ತಬಲಾ ಬೀಟ್‍ಸೈನ್ ಎಂಬ ಸಂಯೋಜನೆಯನ್ನು ಪ್ರಪಂಚಾದ್ಯಂತ ಪ್ರದರ್ಶನಗಳ ಮೂಲಕ ಪರಿಚಯಿಸುತ್ತಿದ್ದಾರೆ.

(ಜಿ.ಎನ್.ಎಸ್.)