ವಿಷಯಕ್ಕೆ ಹೋಗು

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹೈದರ್ ಅಲಿ

ವಿಕಿಸೋರ್ಸ್ದಿಂದ

ಹೈದರ್ ಅಲಿ - 1721-82. ಮೈಸೂರು ಸಂಸ್ಥಾನದ ಪ್ರಖ್ಯಾತ ಸುಲ್ತಾನ. 1721ರಲ್ಲಿ ಕೋಲಾರ ಜಿಲ್ಲೆಯ ಬೂದಿಕೋಟೆಯಲ್ಲಿ ಜನಿಸಿದ. ಇವನ ತಂದೆ ಫತೆ ಮಹಮ್ಮದ್ ಶಿರಾದ ನವಾಬನ ಸೇವೆಯಲ್ಲಿದ್ದ. ತನ್ನ ಬಾಲ್ಯಜೀವನವನ್ನು ಹೈದರ್ ಕಾಡಿನಲ್ಲಿ ಅಲೆಯುತ್ತ ಬೇಟೆಯಾಡುತ್ತ ಕಳೆದ. ಶಾಲೆಗೆ ಹೋಗದೆ ಜೀವನವಿಡೀ ನಿರಕ್ಷರಕುಕ್ಷಿಯಾಗುಳಿದ. ತರುವಾಯ ಇವನು ಮೈಸೂರು ದಳವಾಯಿ ನಂಜರಾಜನ ಸೈನ್ಯದಲ್ಲಿ ಸೇರಿದ. ದೇವನಹಳ್ಳಿ ಮುತ್ತಿಗೆಯ ಸಂದರ್ಭದಲ್ಲಿ ಈತ ತೋರಿಸಿದ ಶೌರ್ಯವನ್ನು ಕಂಡು ಸುಪ್ರೀತನಾದ ದಳವಾಯಿಯ ಪ್ರೋತ್ಸಾಹದಿಂದ ಬಹುಬೇಗ ಉನ್ನತ ಹುದ್ದೆಗೇರಿದ. ಇಂಗ್ಲಿಷರು ಮತ್ತು ಫ್ರೆಂಚರ ನಡುವೆ ನಡೆದ ಕರ್ನಾಟಿಕ್(ಈಗಿನ ತಮಿಳುನಾಡು ಭಾಗ) ಯುದ್ಧಗಳಲ್ಲಿ ತಿರುಚ್ಚಿರಾಪಳ್ಳಿಯನ್ನು ಪಡೆಯುವ ಆಸೆಯಿಂದ ನಂಜರಾಜ ಕರ್ನಾಟಕದ ನವಾಬ ಮಹಮ್ಮದ್ ಅಲಿಯನ್ನು ಬೆಂಬಲಿಸಿದ. ಈ ಯುದ್ಧದಲ್ಲಿ ಭಾಗವಹಿಸಲು ಹೈದರ್ ಅಲಿಯ ನೇತೃತ್ವದಲ್ಲಿ ಮೈಸೂರು ಸೈನ್ಯದ ತುಕಡಿಯೊಂದನ್ನು ಕಳುಹಿಸಿದ. ಮಹಮ್ಮದ್ ಅಲಿ ತನ್ನ ಶತ್ರುಗಳನ್ನು ಸೋಲಿಸಲು ಹೈದರ್ ಅವನಿಗೆ ನೆರವಾದ. ಗೆಲುವಿನ ಅನಂತರ ಮಹಮ್ಮದ್ ಅಲಿ ತನ್ನ ಮಾತನ್ನು ಮುರಿದು ತಿರುಚ್ಚಿರಾಪಳ್ಳಿಯನ್ನು ನಂಜರಾಜನಿಗೆ ಒಪ್ಪಿಸಲು ನಿರಾಕರಿಸಿದ. ಇದು ಮೈಸೂರಿನವರು ಫ್ರೆಂಚರ ಕಡೆ ಸೇರಿಕೊಂಡು ಇಂಗ್ಲಿಷರ ವಿರುದ್ಧ ಹೋರಾಡುವಂತೆ ಮಾಡಿತು. ಹೈದರ್ ಈ ಸಂಬಂಧವಾದ ಕಾರ್ಯಾಚರಣೆಗಳಲ್ಲಿ ನಾಲ್ಕು ವರ್ಷಗಳಿಗೂ ಹೆಚ್ಚುಕಾಲ ಪಾಲ್ಗೊಂಡು ಸೈನಿಕ ವಿಷಯಗಳಲ್ಲಿ ಅಪಾರ ಅನುಭವ ಗಳಿಸಿದ ಹಾಗೂ ಗಾಡಿಗಟ್ಟಲೆ ಚಿನ್ನ, ತುಪಾಕಿಗಳು, ಮತ್ತಿತರ ಯುದ್ಧ ಸಾಮಗ್ರಿಗಳನ್ನು ಸಾಗಿಸಿಕೊಂಡು ಬಂದ. ಈ ಸಂಪನ್ಮೂಲಗಳನ್ನು ಬಳಸಿಕೊಂಡು ಇವನು 500 ಜನ ಸಿಪಾಯಿಗಳುಳ್ಳ ಸಣ್ಣ ಸೈನ್ಯವೊಂದನ್ನು ಕಟ್ಟಿ, ಅದಕ್ಕೆ ಫ್ರೆಂಚ್ ಮಾದರಿಯಲ್ಲಿ ತರಬೇತು ಕೊಟ್ಟ. ಅದೇ ವೇಳೆಗೆ ಯುದ್ಧದಲ್ಲಿ ನಾಲ್ಕು ಕೋಟಿ ರೂಪಾಯಿಗಳನ್ನು ಮತ್ತು 20,000 ಸೈನಿಕರನ್ನು ಕಳೆದುಕೊಂಡಿದ್ದ ನಂಜರಾಜ ತನ್ನ ಸೈನ್ಯಕ್ಕೆ ಬಾಕಿಯನ್ನು ಸಹ ಕೊಡುವ ಸ್ಥಿತಿಯಲ್ಲಿರಲಿಲ್ಲ. ಜೊತೆಗೆ ಮೈಸೂರಿನ ಮೇಲೆ ಮರಾಠರು ಮತ್ತು ನಿಜಾಮ-ಇವರು ಪದೇ ಪದೇ ನಡೆಸುತ್ತಿದ್ದ ದಾಳಿಗಳಿಂದ ಸಂಪನ್ಮೂಲಗಳು ಬರಿದಾದುವು. ನಂಜರಾಜನ ಅರಮನೆಯ ಮುಂದೆ ಸೈನ್ಯ ಧರಣಿ ಕುಳಿತು, ಅರಮನೆಗೆ ಆಹಾರವಸ್ತುಗಳು ಮತ್ತು ನೀರುಸರಬರಾಜನ್ನು ತಡೆದಾಗ ಹೈದರ್ ತನಗೆ ಕಂದಾಯ ವಸೂಲು ಮಾಡಿಕೊಂಡು ಸಾಲಕ್ಕೆ ಜಮಾ ತೆಗೆದುಕೊಳ್ಳಲು ಕೆಲವು ತಾಲ್ಲೂಕುಗಳನ್ನು ಬಿಡುವುದಾದರೆ ಸೈನ್ಯದ ಬಾಕಿ ತೀರಿಸಲು ಸಿದ್ಧವೆಂದು ಮುಂದೆ ಬಂದ. ಮೈಸೂರು ರಾಜ್ಯದ ಬಹುತೇಕ ಭಾಗಕ್ಕೆ ಹೈದರ್ ಅಲಿ ವಾಸ್ತವ ಆಡಳಿತಗಾರನಾಗುವವರೆಗೆ ಇಂಥ ಪ್ರಸಂಗಗಳು ಮರುಕಳಿಸುತ್ತಿದ್ದವು. ಇದರಿಂದ ಜುಗುಪ್ಸೆಗೊಂಡ ನಂಜರಾಜ ತನ್ನ ಸ್ಥಾನವನ್ನು ತೊರೆಯಲು ನಿರ್ಧರಿಸಿದ. ಆಗ ಹೈದರ್ ಮೈಸೂರಿನ ದಳವಾಯಿಯಾದ. ಆಡಳಿತದಲ್ಲಿ ತನಗೆ ಸಹಾಯ ಮಾಡಲು ಖಂಡೇರಾಯನನ್ನು ಕಾರ್ಯದರ್ಶಿಯಾಗಿ ನೇಮಿಸಿಕೊಂಡ.

ಅಧಿಕಾರವನ್ನು ಪುನಃ ಪಡೆಯಲು ರಾಜಮನೆತನ ಕೊನೆಯ ಪ್ರಯತ್ನವಾಗಿ ಸಂಚು ನಡೆಸಿತು. ಅದರಲ್ಲಿ ಖಂಡೇರಾಯ ಕೇಂದ್ರವ್ಯಕ್ತಿಯಾಗಿದ್ದ. 1760 ಆಗಸ್ಟ್‍ನಲ್ಲಿ ನಡೆದ ಮರಾಠರ ದಾಳಿಯ ಸಂದರ್ಭವನ್ನು ಉಪಯೋಗಿಸಿಕೊಂಡು ಹೈದರನನ್ನು ಪದಚ್ಯುತ ಗೊಳಿಸುವುದೇ ಈ ಸಂಚಿನ ಹಂಚಿಕೆಯಾಗಿತ್ತು. ಆಗ ಹೈದರನ ಪಡೆಗಳು ಪಾಂಡಿಚೆರಿಯಲ್ಲಿರಲಿಲ್ಲ. ಖಂಡೇರಾಯನೇ ಸ್ವತಃ ನೇತೃತ್ವವಹಿಸಿ ದಾಳಿ ನಡೆಸಿದ. ಈ ಸಂದರ್ಭದಲ್ಲಿ ಹೈದರ್ ಓಡಿಹೋಗಿ ತಲೆತಪ್ಪಿಸಿಕೊಳ್ಳಬೇಕಾಯಿತು. ಇವನು ಒಂದು ವರ್ಷಕ್ಕೂ ಹೆಚ್ಚುಕಾಲ ಕಾಡುಮೇಡುಗಳಲ್ಲಿ ಅಲೆದಾಡಬೇಕಾಗಿಬಂದರೂ ತನ್ನ ಸಂಘಟನಾ ಚಾತುರ್ಯ, ವಿವೇಕಯುತ ಮುತ್ಸದ್ದಿತನ, ದೃಢನಿರ್ಧಾರ ಮತ್ತು ದಣಿವರಿಯದ ದುಡಿಮೆಯಿಂದಾಗಿ ತನ್ನ ಅಧಿಕಾರ ಸ್ಥಾನವನ್ನು ಪುನಃ ಪಡೆದ. ಅಲ್ಲಿಂದ ಮುಂದೆ ಇವನು ಮೈಸೂರು ರಾಜ್ಯದ ಅನಿರ್ಬಂಧಿತ ಅಧಿಪತಿಯಾದ.

ಹೈದರ್ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡ ಮೇಲೆ ರಾಜ್ಯದ ಸರಹದ್ದುಗಳನ್ನು ವಿಸ್ತರಿಸುವತ್ತ ಗಮನ ಹರಿಸಿದ. 1761ರಲ್ಲಿ ಇವನು ಆದೋನಿಯ ಬಸಲತ್ ಜಂಗ್‍ನೊಡನೆ ಕೂಡಿಕೊಂಡು ಶಿರಾವನ್ನು ವಶಪಡಿಸಿಕೊಂಡ. ತರುವಾಯ ಬಸಲತ್ ಜಂಗನಿಗೆ ಮೂರು ಲಕ್ಷ ರೂಪಾಯಿಗಳನ್ನು ಕೊಟ್ಟು ಶಿರಾವನ್ನು ಪಡೆದ. ದಕ್ಷಿಣದಲ್ಲಿ ಸಮಗ್ರ ಮುಗಲ್ ಪ್ರಾಂತದ ರಾಜಧಾನಿಯಾದ ಶಿರಾ ವಶವಾದ ಕೂಡಲೆ ಅದರ ಸುತ್ತುಮುತ್ತಲ ವಿಸ್ತಾರ ಪ್ರದೇಶವನ್ನು ಹೈದರ್ ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಬಹುಬೇಗ ಹೊಸಕೋಟೆ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಪೆನುಕೊಂಡೆ, ಮಡಕಶಿರಾ, ನಂದಿದುರ್ಗ ಮತ್ತು ಹರಪನಹಳ್ಳಿಗಳನ್ನು ಹಿಡಿದ. ಚಿತ್ರದುರ್ಗವನ್ನು ಜಯಿಸುವಲ್ಲಿ ಸ್ವಲ್ಪಮಟ್ಟಿನ ತೊಂದರೆ ಎದುರಿಸಿದರೂ ಕೊನೆಗೆ ವಶಪಡಿಸಿಕೊಂಡ. ಆದರೆ ಪ್ರಾಕೃತಿಕ ಸಂಪನ್ಮೂಲಗಳಲ್ಲಿ ಸಮೃದ್ಧವಾಗಿದ್ದ ಮತ್ತು ಪಶ್ಚಿಮತೀರದವರೆಗೂ ಹಬ್ಬಿದ್ದ ವಿಸ್ತಾರ ಪ್ರದೇಶವನ್ನು ಹೊಂದಿದ್ದಂಥ ಬಿದನೂರನ್ನು ಗೆದ್ದಿದ್ದು ಈ ಕಾಲದಲ್ಲಿ ಇವನು ಗಳಿಸಿದ ವಿಜಯಗಳಲ್ಲೆಲ್ಲ ಅತಿಮುಖ್ಯವಾದುದು. ಬಿದನೂರು ರಾಜಮನೆತನದಲ್ಲಿ ಉಂಟಾಗಿದ್ದ ಅಂತಃಕಲಹ, ಅವರ ವಿಷಯಗಳಲ್ಲಿ ಪ್ರವೇಶಿಸಲು ಹೈದರನಿಗೆ ಒಳ್ಳೆಯ ಅವಕಾಶ ಕಲ್ಪಿಸಿತು. ಇವನು ಬಿದನೂರನ್ನು ತಲುಪಿದಾಗ ಕೋಟೆಯನ್ನು ರಕ್ಷಿಸುತ್ತಿದ್ದ ರಾಣಿವೀರಮ್ಮಾಜಿ ಬಳ್ಳಾರಿದುರ್ಗಕ್ಕೆ ಪಲಾಯನ ಮಾಡಿದಳು. ಆಗ ಈ ಸ್ಥಳವನ್ನು ಹೆಚ್ಚು ಕಷ್ಟವಿಲ್ಲದೆ ವಶಪಡಿಸಿಕೊಳ್ಳಲಾಯಿತು. ಹೈದರ್ ಅಲಿಗೆ ಅಲ್ಲಿ ಅಪಾರ ಐಶ್ವರ್ಯ ಸಿಕ್ಕಿತು. ಹೊನ್ನಾವರದಿಂದ ಮಂಗಳೂರಿನವರೆಗಿನ ಪಶ್ಚಿಮ ತೀರಪ್ರದೇಶ ಇವನ ಸ್ವಾಧೀನವಾಯಿತು. ಇವನು ಸುಂಡವನ್ನು ಸಹ ವಶಪಡಿಸಿಕೊಂಡು ತಾನು ಅಧಿಕಾರಕ್ಕೆ ಬಂದ ಮೂರು ವರ್ಷಗಳೊಳಗೆ ರಾಜ್ಯವನ್ನು ಗೋವದವರೆಗೆ ವಿಸ್ತರಿಸಿದ.

ಮೈಸೂರು ರಾಜ್ಯದ ಈ ಶೀಘ್ರ ವಿಸ್ತರಣೆಯನ್ನು ಕಂಡು ನೆರೆಹೊರೆಯ ವರಾದ ಮರಾಠರು, ನಿಜಾಮ ಮತ್ತು ಇಂಗ್ಲಿಷರು ಅಸೂಯೆಗೊಂಡರು. ಮೂರನೆಯ ಪಾಣಿಪಟ್ ಯುದ್ಧದ ಸೋಲಿನ ಅನಂತರ ಮರಾಠರು ಒಂದನೆಯ ಮಾಧವರಾವ್‍ನ ಸಮರ್ಥ ನಾಯಕತ್ವದಲ್ಲಿ ತಮ್ಮ ಪ್ರಾಬಲ್ಯವನ್ನು ಮರಳಿಗಳಿಸುತ್ತಿದ್ದರು. ಅವರು ಉತ್ತರದಲ್ಲಿ ಆದ ನಷ್ಟವನ್ನು ತುಂಬಿಕೊಳ್ಳಲು ಮೈಸೂರು ಪ್ರದೇಶದ ಮೇಲೆ ಮತ್ತೆ ಮತ್ತೆ ದಾಳಿ ಮಾಡತೊಡಗಿದರು. ಆದ್ದರಿಂದ 1762-78ರ ತನಕ ಮರಾಠರ ದಾಳಿಗಳ ವಿರುದ್ಧ ತನ್ನ ರಾಜ್ಯವನ್ನು ರಕ್ಷಿಸಿಕೊಳ್ಳುವುದೇ ಹೈದರನ ಪ್ರಧಾನ ಕಾರ್ಯನೀತಿಯಾಗಿದ್ದಿತ್ತು. 1764ರ ಮೊದಲ ಭಾಗದಲ್ಲಿ ಮಾಧವರಾಯ ಮೈಸೂರಿನ ಮೇಲೆ ದಾಳಿ ಮಾಡಿ ಸುಮಾರು ಒಂದು ವರ್ಷಕಾಲ ಕಾರ್ಯಾಚರಣೆ ನಡೆಸಿದ. ಹೈದರ್ ಅಲಿ ಮಾಧವರಾಯನಿಗೆ ಸಮಬಲನಾಗಿಲ್ಲದಿದ್ದು ದರಿಂದ ಇವನು ನೇರ ಯುದ್ಧಕ್ಕಿಳಿಯದೆ ಮರಾಠರನ್ನು ರಾತ್ರಿದಾಳಿಗಳಿಂದ ಚಕಿತಗೊಳಿಸುವ, ಅವರ ಅಗತ್ಯ ಸಾಮಗ್ರಿಗಳ ಮತ್ತು ಆಹಾರವಸ್ತುಗಳ ಪೂರೈಕೆಯನ್ನು ಕಡಿದುಹಾಕುವ ಹಾಗೂ ಶಾಂತಿಯುತ ಸಂಧಾನಗಳಿಗಾಗಿ ಯುಕ್ತ ಅವಕಾಶ ಕಲ್ಪಿಸಿಕೊಳ್ಳುವ ತಂತ್ರವನ್ನು ಅನುಸರಿಸಿದ. ಕೊನೆಗೆ 28 ಲಕ್ಷರೂಪಾಯಿಗಳ ಕಪ್ಪಕೊಡುವ ಮತ್ತು ಸರಹದ್ದು ಪ್ರದೇಶದ ಕೆಲವು ಸಣ್ಣ ಕೋಟೆಗಳನ್ನು ಬಿಟ್ಟುಕೊಡುವ ಮೂಲಕ ಮಾಧವರಾವ್‍ನನ್ನು ಸಂತುಷ್ಟಗೊಳಿಸಿದ. ಮರಾಠರೊಡನೆ ಶಾಂತಿ ಒಪ್ಪಂದ ಮಾಡಿಕೊಂಡು ಹೈದರ್ ಮಲಬಾರಿನ ದಿಗ್ವಿಜಯ ಕೈಗೊಂಡ. ಇವನು ಬಿದನೂರು ರಾಜ್ಯವನ್ನು ಗೆದ್ದದ್ದು ಮಲಬಾರನ್ನು ಸ್ವಾಧೀನಪಡಿಸಿಕೊಳ್ಳಲು ಅನುಕೂಲ ವಾಯಿತು. ಇವನು ಈ ವೇಳೆಗಾಗಲೇ ಅಗತ್ಯವಾಗಿದ್ದ ನೌಕಾಪಡೆಯನ್ನು ರಚಿಸಿಕೊಂಡಿದ್ದರಿಂದ ಇಂಗ್ಲಿಷರು ಮತ್ತು ಪೋರ್ಚುಗೀಸರಿಂದ ತನ್ನ ತೀರಪ್ರದೇಶಗಳನ್ನು ರಕ್ಷಿಸಿಕೊಳ್ಳಲು ಸಾಧ್ಯವಾಯಿತು. 1765ರ ಹೊತ್ತಿಗೆ ಇವನ ಬಳಿ 30 ಯುದ್ಧನೌಕೆಗಳು ಮತ್ತು ದೊಡ್ಡ ಸಂಖ್ಯೆಯಲ್ಲಿ ಸಾಗಣೆ ನೌಕೆಗಳಿದ್ದುವು. ಇವನ ನೌಕೆಗಳನ್ನು ನೋಡಿಕೊಳ್ಳಲು ಮಾಪಿಳ್ಳೆಗಳ ಉತ್ತಮ ನಾವಿಕ ತಂಡ ದೊರೆತಿತ್ತು. ಅನಂತರ ಡಚ್ಚರ ನೆರವಿನಿಂದ 20 ರಿಂದ 40 ಫಿರಂಗಿಗಳನ್ನು ಸಾಗಿಸುವ ಮುಕ್ಕೂವೆಯ ಹಡಗುಗಳು ಮತ್ತು ಇತರ ಅನೇಕ ಸಣ್ಣ ಹಡಗುಗಳಿಂದ ಹೈದರ್ ತನ್ನ ನೌಕಾಪಡೆಯನ್ನು ಬಲಗೊಳಿಸಿದ. ಇದು ಅನೇಕ ಯುದ್ಧಾಕಾಂಕ್ಷಿ ನಾಯರ್ ಅಧಿಪತಿಗಳನ್ನು ಸದೆಬಡಿದು ಮಲಬಾರನ್ನು ವಶಪಡಿಸಿ ಕೊಳ್ಳಲು ಬಹುಮುಖ್ಯ ಸಾಧನವಾಗಿ ಪರಿಣಮಿಸಿತು. ಕೊಳತ್ತಿರಿ ರಾಜನು ತನ್ನ ಶತ್ರುಗಳ ವಿರುದ್ಧ ಹೈದರನ ಸಹಾಯವನ್ನು ಕೋರಿದ. ಈ ನೆಪವನ್ನು ಮುಂದೆ ಮಾಡಿಕೊಂಡ ಹೈದರ್ ಅಲಿ 40,000 ಸೈನ್ಯದೊಂದಿಗೆ ಮಲಬಾರನ್ನು ಪ್ರವೇಶಿಸಿ 1766 ಮಾರ್ಚ್ ಹೊತ್ತಿಗೆ ತಿರುವಾಂಕೂರು ರಾಜ್ಯವೊಂದನ್ನುಳಿದು ಮಂಗಳೂರಿನಿಂದ ಕೊಚಿನ್‍ವರೆಗೆ ಸಮಗ್ರ ಮಲಬಾರನ್ನು ಸ್ವಾಧೀನ ಪಡಿಸಿಕೊಂಡ. ಹೈದರ್ ಆ ರಾಜ್ಯದ ಮೇಲೆಯೂ ದಂಡೆತ್ತಿ ಹೋಗಬಹುದಿತ್ತು. ಆದರೆ ಒಂದನೆಯ ಮೈಸೂರು ಯುದ್ಧಕ್ಕೆ ಕಾರಣವಾದ ಹೊಸ ಘಟನೆಗಳು ಇವನ ರಾಜ್ಯದ ಉತ್ತರದ ಗಡಿಗಳಲ್ಲಿ ಸಂಭವಿಸಿದ್ದರಿಂದ ಇವನು ಈ ವಿಜಯವನ್ನು ಮುಂದುವರಿಸಲಾಗಲಿಲ್ಲ.

ಮರಾಠರು ಮಾತ್ರವಲ್ಲದೆ ಇಂಗ್ಲಿಷರೂ ಇವನ ಮುಖ್ಯ ಶತ್ರುಗಳಾಗಿ ದ್ದರು. ಅವರು ಕೂಡ ಇವನ ರಾಜ್ಯವಿಸ್ತರಣೆಯಿಂದ ಅಸಮಾಧಾನ ಗೊಂಡು ಇವನನ್ನು ನಾಶಪಡಿಸಲು ಯಾವುದಾದರೂ ಅವಕಾಶವನ್ನು ಬಳಸಿಕೊಳ್ಳಲು ಕಾಯುತ್ತಿದ್ದರು. ಈ ಬೆಳೆವಣಿಗೆ ಹೈದರ್ ಅಲಿಯ ವಿರುದ್ಧ ಇಂಗ್ಲಿಷರು, ಮರಾಠರು ಮತ್ತು ನಿಜಾಮ-ಇವರೆಲ್ಲ ಪ್ರಬಲ ಒಕ್ಕೂಟ ರಚಿಸಲು ಕಾರಣವಾಯಿತು. 1764ರಲ್ಲಿ ನಡೆದ ಬಕ್ಸಾರ್ ಯುದ್ಧದ ತರುವಾಯ ಕ್ಲೈವನು ಮುಗಲ್ ಸಾಮ್ರಾಟ ಷಾ ಆಲಂನಿಂದ ಬಂಗಾಳ, ಬಿಹಾರ ಮತ್ತು ಒರಿಸ್ಸಾಗಳ ದಿವಾನಿಯನ್ನಲ್ಲದೆ ಉತ್ತರ ಸರ್ಕಾರಗಳ ಐದು ಕಿರುಪ್ರದೇಶಗಳನ್ನು ಪಡೆದಿದ್ದ. ಈ ಸರ್ಕಾರಗಳು ನಿಜಾಮನಿಗೆ ಸೇರಿದ್ದವು. ಇಂಗ್ಲಿಷರಿಗೆ ಅವನ್ನು ಒಪ್ಪಿಸುವ ಕಾಲ ಬಂದಾಗ ಅವನು ಇಂಗ್ಲಿಷರನ್ನು ಸಮುದ್ರಕ್ಕೆ ಎಸೆಯುವುದಾಗಿ ಹೇಳುವಷ್ಟರ ಮಟ್ಟಿಗೆ ಕೋಪಗೊಂಡಿದ್ದ. ಆದರೆ ಇಂಗ್ಲಿಷರಿಗೆ ನಿಜಾಮನ ಮನಸ್ಸು ಮತ್ತು ಶಕ್ತಿ ತಿಳಿದಿದ್ದರಿಂದ ಅವರು ಬೇಗ ಅವನ ಮನವೊಲಿಸಿ ಮಿತ್ರನನ್ನಾಗಿ ಮಾಡಿಕೊಂಡರು. ನಿಜಾಮನಿಗೆ ಯಾವ ರೀತಿಯಲ್ಲೂ ಉಪಯೋಗಕ್ಕೆ ಬರದಿದ್ದ ಕಿರುಪ್ರದೇಶಗಳಿಗೆ ಬದಲಾಗಿ ಇಡೀ ಮೈಸೂರು ರಾಜ್ಯವನ್ನು ಜಯಿಸಿಕೊಡುವ ಆಶಾಭಾವನೆಯನ್ನು ಅವನಲ್ಲಿ ಹುಟ್ಟಿಸಿ ಅವನನ್ನು ಸೆಳೆದುಕೊಂಡಿದ್ದರು. ನಿಜಾಮನ ಬಳಿಗೆ ನಿಯೋಗ ಕಳುಹಿಸಿದ ಇಂಗ್ಲಿಷರು ಅವನ ಬೆಂಬಲ ಗಳಿಸಿದರು. ಇದರಿಂದ ಹೈದರನ ವಿರುದ್ಧ ಇಂಗ್ಲಿಷ್ ಮತ್ತು ನಿಜಾಮರ ಮೈತ್ರಿಕೂಟ ಬಹುಬೇಗ ರಚಿತವಾಯಿತು. ಈ ಇಬ್ಬರ ಮೈತ್ರಿಕೂಟ ಸಾಲದೆಂಬಂತೆ ಪ್ರತಿವರ್ಷವೂ ಸಾಮಾನ್ಯವಾಗಿ ನಡೆಯುತ್ತಿದ್ದ ಮರಾಠ ದಾಳಿಯ ಸಂದರ್ಭದಲ್ಲೇ ತಾವೂ ದಾಳಿ ನಡೆಸಲು ಸಮಯ ಕಾದರು. ಹೀಗೆ ಹೈದರ್ ಅಲಿಯ ವಿರುದ್ಧ ದಕ್ಷಿಣ ಭಾರತದ ಎಲ್ಲ ಮೂರೂ ಮುಖ್ಯರಾಜ್ಯಗಳ ಸಂಯುಕ್ತ ವ್ಯೂಹ ರಚನೆಗೊಂಡಿತು.

ಹೈದರ್ ಅಲಿಯನ್ನು ಹೀಗೆ ಏಕಾಂಗಿಯಾಗಿ ಮಾಡಿದರೂ ಇವನು ತನ್ನ ಚಾಣಾಕ್ಷತನದಿಂದ ಈ ಶತ್ರುಕೂಟವನ್ನು ಭೇದಿಸುವಲ್ಲಿ ಕೊನೆಗೆ ಯಶಸ್ವಿಯಾದ. ಮರಾಠರು ಉತ್ತರದಿಂದ ದಾಳಿ ಮಾಡಿದ ಕಾಲದಲ್ಲೇ ಇಂಗ್ಲಿಷರು ಮತ್ತು ನಿಜಾಮ ಮೈಸೂರಿನ ವಿರುದ್ಧ ದೊಡ್ಡ ಸೈನ್ಯದೊಡನೆ ದಂಡೆತ್ತಿಬಂದರು. ಈ ಒಕ್ಕೂಟವನ್ನು ಮುರಿಯುವುದೇ ಹೈದರ್ ಮಾಡಬೇಕಾದ ಮುಖ್ಯ ಕಾರ್ಯವಾಗಿದ್ದಿತ್ತು. ಹೈದರನು ಮಾಧವರಾವ್ ನೊಡನೆ ಒಪ್ಪಂದಕ್ಕೆ ಬಂದು ಅವನಿಗೆ ಕೆಲವು ಕೋಟೆಗಳನ್ನು ಮತ್ತು ಕೆಲವು ಲಕ್ಷ ರೂಪಾಯಿಗಳನ್ನು ನೀಡಿದ. ಇನ್ನು ನಿಜಾಮ ಮತ್ತು ಇಂಗ್ಲಿಷರು ಉಳಿದುಕೊಂಡರು. ಅವರಿಬ್ಬರಲ್ಲಿ ಭೇದಭಾವ ಬರುವಂತೆ ಮಾಡಲು ತನ್ನೆಲ್ಲ ಬುದ್ಧಿವಂತಿಕೆಯನ್ನು ಉಪಯೋಗಿಸಿದ. ಭಾರತೀಯ ರಾಜ್ಯಗಳೆಲ್ಲ ವಿದೇಶೀಯರ ವಿರುದ್ಧ ಒಂದಾಗಬೇಕೆಂದು ಮುಂದಿಟ್ಟ ಇವನ ಸೂತ್ರ ಫಲಪ್ರದವಾಯಿತು. ಇದರಿಂದ ನಿಜಾಮ ಇದ್ದಕ್ಕಿದ್ದಂತೆಯೇ ಮಿತ್ರನಾದ. ಇಂಗ್ಲಿಷರು ತಮ್ಮ ಮಿತ್ರರೆಲ್ಲ ಶತ್ರುಪಕ್ಷ ಸೇರಿದ್ದನ್ನು ಕಂಡು ಅಚ್ಚರಿಗೊಂಡರು. ಈ ರೀತಿ ಮೊದಲ ಮೈಸೂರು ಯುದ್ಧ ಬಹು ವಿಲಕ್ಷಣ ಸ್ಥಿತಿಯಲ್ಲಿ ಪ್ರಾರಂಭವಾಯಿತು.

1767 ಆಗಸ್ಟ್‍ನಲ್ಲಿ ಹೈದರನು ನಿಜಾಮನೊಂದಿಗೆ ಕರ್ನಾಟಿಕ್ ಪ್ರದೇಶದ ಮೇಲೆ ದಾಳಿ ಮಾಡಿದ. ಸೆಪ್ಟೆಂಬರ್ 2 ರಂದು ನಡೆದ ನಿರ್ಣಾಯಕ ಯುದ್ಧದಲ್ಲಿ ಇಂಗ್ಲಿಷ್ ಸೇನಾಪತಿ ಕರ್ನಲ್ ಸ್ಮಿತ್ ಹೈದರನಿಗೆ ಭಾರಿ ಪೆಟ್ಟುಕೊಟ್ಟ. ತರುವಾಯ ಹೈದರ್ ತನ್ನ ಯುದ್ಧತಂತ್ರ ವನ್ನು ಬದಲಾಯಿಸಿಕೊಂಡು ವಾಣಿಯಂಬಾಡಿ, ತಿರುವತ್ತೂರು ಮತ್ತು ಅಂಬೂರುಗಳನ್ನು ಹಿಡಿದ. ನಿಜಾಮ ಈ ಕಾರ್ಯಾಚರಣೆಗಳಲ್ಲಿ ಎಷ್ಟು ಘಾಸಿಗೊಂಡನೆಂದರೆ ಇಂಗ್ಲಿಷರೊಡನೆ ಪ್ರತ್ಯೇಕ ಒಪ್ಪಂದ ಮಾಡಿಕೊಂಡು ಮಿತ್ರಕೂಟದಿಂದ ಹಿಂದೆ ಸರಿದ. ಇಂಗ್ಲಿಷರು ಮತ್ತು ಹೈದರನ ನಡುವೆ ಸುಮಾರು ಎರಡು ವರ್ಷಗಳ ಕಾಲ ನೇರ ಯುದ್ಧ ನಡೆಯಿತು. 1769 ಮಾರ್ಚ್ 28 ರಂದು ಹೈದರ್ ಇದ್ದಕ್ಕಿದಂತೆ ಮದರಾಸಿನಲ್ಲಿ ಕಾಣಿಸಿಕೊಂಡ. ಇದು ಇಂಗ್ಲಿಷರನ್ನು ತಬ್ಬಿಬ್ಬು ಗೊಳಿಸಿದ್ದಲ್ಲದೆ ಅವರು ಹೈದರನಿಗೆ ಶರಣಾಗದೆ ಅನ್ಯಮಾರ್ಗವೇ ಇರಲಿಲ್ಲ. ಅನೇಕ ವಿಧದಲ್ಲಿ ಪ್ರಮುಖವಾದ ಇತಿಹಾಸ ಪ್ರಸಿದ್ಧ ಮದರಾಸು ಒಪ್ಪಂದವನ್ನು ಹೈದರ್ ಹೇಳಿ ಬರೆಸಿದ. ಇದು ಭಾರತೀಯ ರಾಜನೊಬ್ಬ ಇಂಗ್ಲಿಷರ ಮೇಲೆ ಸಾಧಿಸಿದ ಮೊದಲ ವಿಜಯವಾಗಿತ್ತು. ಈ ಯುದ್ಧದಿಂದ ಇಂಗ್ಲಿಷರು ಅಜೇಯರೆಂಬ ಪ್ರತೀತಿಯನ್ನು ಸಂಪೂರ್ಣವಾಗಿ ತೊಡೆದು ಹಾಕಲಾಯಿತು. ಇಂಗ್ಲಿಷರು ಈ ಯುದ್ಧದಲ್ಲಿ ಆದ ಸರ್ವತೋಮುಖ ಹಾನಿಯನ್ನು ಅವರು ಭಾರತದ ನೆಲದಲ್ಲಿ ಎಂದೂ ಅನುಭವಿಸಿರಲಿಲ್ಲ. ಅವರು ಆರ್ಥಿಕ, ಸೈನಿಕ, ರಾಜಕೀಯ ಮತ್ತು ನೈತಿಕ ಹಾನಿಗೊಳಗಾಗಿ ದ್ದರು. ಮೈಸೂರಿನ ಮೇಲೆ ಮರಾಠರು ದಾಳಿ ಎಸಗಿದ ಸಂದರ್ಭದಲ್ಲಿ ಅವನ ನೆರವಿಗೆ ಹೋಗುವುದು ಒಳಗೊಂಡಂತೆ ಇಂಗ್ಲಿಷರು ಹೈದರನ ಎಲ್ಲ ಷರತ್ತುಗಳಿಗೂ ಒಪ್ಪಿಕೊಂಡಿದ್ದರು.

ಹೈದರ್ ಅಲಿ ಇಂಗ್ಲಿಷರನ್ನು ಸೋಲಿಸಿದ್ದರಿಂದ ಇವನ ಘನತೆ ಬಹುವಾಗಿ ಹೆಚ್ಚಿತು. 1770 ಜನವರಿಯಲ್ಲಿ ಮರಾಠರು ಇವನ ರಾಜ್ಯದ ಮೇಲೆ ದಾಳಿ ಮಾಡಿದಾಗ ಇವನು ಇಂಗ್ಲಿಷ್ ಪಡೆಗಳನ್ನು ಕಳುಹಿಸುವಂತೆ ಇಂಗ್ಲಿಷರನ್ನು ಕೇಳಿದ. ಇಂಗ್ಲಿಷರು ಇದನ್ನು ನಿರಾಕರಿಸಿ ತಮ್ಮ ಷರತ್ತನ್ನು ಉಲ್ಲಂಘಿಸಿದಾಗ ಅವರು ಭಾರಿ ಬೆಲೆ ತೆರಬೇಕಾಯಿತು. ಮುಂದೆ 1799ರಲ್ಲಿ ವೆಲ್ಲೆಸ್ಲಿ ಟಿಪ್ಪುವನ್ನು ನಾಶಪಡಿಸುವವರೆಗೂ ಮುಂದಿನ ಮೂವತ್ತು ವರ್ಷಗಳವರೆಗೆ ಮೈಸೂರು ಇಂಗ್ಲಿಷರ ಶಾಶ್ವತ ಶತ್ರುವಾಯಿತು. ಮೈಸೂರಿನ ಮೇಲೆ ಮಾಧವರಾವ್ ನಡೆಸಿದ ಕೊನೆಯ ಯುದ್ಧ ತೀವ್ರ ಸ್ವರೂಪದ್ದಾಗಿದ್ದು ಇಂಗ್ಲಿಷರ ಬಗ್ಗೆ ಹೈದರ್ ಕೋಪೋದ್ರಿಕ್ತನಾದ. ಮಾಧವರಾಯ ಈ ಯುದ್ಧ ನಡೆದ ಅನತಿಕಾಲದಲ್ಲಿ ನಿಧನನಾದುದರಿಂದ ಮರಾಠರು ಒಳಜಗಳದಲ್ಲಿ ತೊಡಗಿದರು. ಇದು ಹೈದರನಿಗೆ ಅನುಕೂಲ ಕಲ್ಪಸಿದ್ದಲ್ಲದೆ ಮರಾಠರ ಕೆಲವು ಪ್ರದೇಶಗಳನ್ನೂ ಇವನು ವಶಪಡಿಸಿಕೊಂಡ. ಗುತ್ತಿ, ನರಗುಂದ ಗಳು ಸೇರಿದಂತೆ ಕೃಷ್ಣಾನದಿಯ ವರೆಗೂ ಇವನು ರಾಜ್ಯ ವಿಸ್ತರಿಸಿದ. ಕೊಡಗನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ.

1776ರಲ್ಲಿ ಇಂಗ್ಲೆಂಡ್ ಮತ್ತು ಫ್ರಾನ್ಸ್‍ಗಳ ನಡುವೆ ಯುದ್ಧ ಘೋಷಣೆಯಾದಾಗ ಇದು ಹೈದರನಿಗೆ 1770ರ ಒಪ್ಪಂದ ಮುರಿದಿದ್ದಕ್ಕಾಗಿ ಇಂಗ್ಲಿಷರ ಮೇಲೆ ಹಗೆ ಸಾಧಿಸಲು ಸದವಕಾಶ ಕಲ್ಪಿಸಿಕೊಟ್ಟಿತು. ಜೊತೆಗೆ ಎಲ್ಲ ಭಾರತೀಯ ರಾಜರು ಇಂಗ್ಲಿಷರನ್ನು ದ್ವೇಷಿಸುತ್ತಿದ್ದರು. ಮರಾಠರು ತಮ್ಮ ಆಂತರಿಕ ವಿಷಯಗಳಲ್ಲಿ ಇಂಗ್ಲಿಷರು ಕೈಹಾಕುವುದ ರಿಂದ ಅಸಮಾಧಾನ ಗೊಂಡಿದ್ದರೆ, ನಿಜಾಮನು ಗುಂಟೂರನ್ನು ಮದರಾಸು ಸರ್ಕಾರ ಕೇಳುತ್ತಿದ್ದುದರಿಂದ ಕ್ರುದ್ಧನಾಗಿದ್ದ. ತಾನು ಸೈನಿಕ ವಸ್ತುಗಳನ್ನು ಪಡೆಯುತ್ತಿದ್ದ ಫ್ರೆಂಚರ ಮಾಹೆ ಕೋಟೆಯನ್ನು ಇಂಗ್ಲಿಷರು ಮುತ್ತಿದ್ದು, ಗುಂಟೂರಿನ ತನ್ನ ಪ್ರದೇಶದ ಮೂಲಕ ಅಪ್ಪಣೆ ಇಲ್ಲದೆ ಹಾದುಹೋಗಿದ್ದು, ಮಲಬಾರಿನಲ್ಲಿ ತನ್ನ ವಿರುದ್ಧ ನಾಯರನ್ನು ಬೆಂಬಲಿಸಿ ತಂಟೆ ಮಾಡುತ್ತಿದ್ದುದು ಮೊದಲಾದ ಘಟನೆಗಳು ಹೈದರನ ಸಹನೆಯನ್ನು ಕೆಡಿಸಿದ್ದವು. ಈ ಘಟನೆಗಳು 1780ರಲ್ಲಿ ಇಂಗ್ಲಿಷರ ವಿರುದ್ಧ ಭಾರತೀಯ ಮೈತ್ರಿಕೂಟವನ್ನು ರಚಿಸುವಂಥ ವಿಶಿಷ್ಟ ಪರಿಸ್ಥಿತಿ ನಿರ್ಮಿತವಾಗಲು ಕಾರಣವಾದುವು. ಈ ಮೈತ್ರಿಕೂಟ ರಚನೆಯಲ್ಲಿ ಹೈದರ್ ಮಹತ್ತ್ವದ ಪಾತ್ರವಹಿಸಿದ. ಈ ಮಿತ್ರಕೂಟದವರ ಒಪ್ಪಂದದ ಪ್ರಕಾರ ಹೈದರ್ ಮದರಾಸು ಪ್ರೆಸಿಡೆನ್ಸಿಯ ಮೇಲೆ ಬೃಹತ್ ದಾಳಿ ನಡೆಸಿ, ಅಲ್ಲಿಂದ ಇಂಗ್ಲಿಷರನ್ನು ಮೂಲೋತ್ಪಾಟನ ಮಾಡಬೇಕಾಗಿತ್ತು. ನಾನಾ ಫಡ್ನವಿಸ್, ಸಿಂಧ್ಯ, ಗಾಯಕ್‍ವಾಡ್ ಮತ್ತು ಹೋಳ್ಕರರನ್ನೊಳಗೊಂಡ ಮರಾಠ ಕೂಟದವರು ಮುಂಬಯಿಯನ್ನು ಮುತ್ತಬೇಕಾಗಿತ್ತು; ಮುದಾಜಿ ಭೋಂಸ್ಲೆ ಬಂಗಾಳಕ್ಕೆ ದಾಳಿ ಇಡಬೇಕಾಗಿತ್ತು; ನಿಜಾಮ ಉತ್ತರದ ಸರ್ಕಾರಗಳಿಂದ ಇಂಗ್ಲಿಷರನ್ನು ತೊಡೆದುಹಾಕಬೇಕಿತ್ತು. ಸಮಾನ ಉದ್ದೇಶಕ್ಕಾಗಿ ಇಷ್ಟೊಂದು ಭಾರತೀಯ ರಾಜರುಗಳು ಒಗ್ಗೂಡಿದ್ದು ಮತ್ತು ಅಷ್ಟು ದೀರ್ಘಕಾಲ ಒಂದಾಗಿ ನಿಂತದ್ದು ಇತಿಹಾಸದಲ್ಲಿ ಅದೇ ಪ್ರಥಮ.

ಈ ಒಪ್ಪಂದಕ್ಕೆ ನಿಷ್ಠನಾಗಿದ್ದ ಹೈದರ್ ಒಂದು ಲಕ್ಷಕ್ಕೂ ಹೆಚ್ಚು ಸೈನ್ಯ ಸಂಗ್ರಹಿಸಿ ಕರ್ನಾಟಿಕ್ ಮೇಲೆ ಉಗ್ರದಾಳಿ ನಡೆಸಿದ. ಇಂಗ್ಲಿಷರನ್ನು ಇವನು ಹಲವೆಡೆಗಳಲ್ಲಿ ಸೋಲಿಸಿದ. ಕರ್ನಲ್ ಬ್ಯಾಲಿಯ ಪಡೆಯನ್ನು ಸಂಪೂರ್ಣ ನಾಶಗೊಳಿಸಿ ಅವನನ್ನು ಸೆರೆಹಿಡಿಯಲಾಯಿತು. ದೆಹಲಿಯ ಷಾ ಆಲಂ, ಔದ್‍ನ ಷಿಯ-ಉದ್-ದೌಲ ಮತ್ತು ಬಂಗಾಲದ ಮೀರ್ ಖಾಸಿಂ ಇವರ ಪ್ರಬಲ ಕೂಟವನ್ನು ಸೋಲಿಸಿದ. ಬಕ್ಸಾರ್ ಯುದ್ಧವೀರ ಜನರಲ್ ಹೆಕ್ಟರ್ ಮನ್ರೋ ಹೈದರನನ್ನು ಎದುರಿಸಲಾರದೆ ಫಿರಂಗಿಗಳನ್ನು ಮತ್ತು ಕೋವಿಗಳನ್ನು ಕಾಂಜೀವರಂ ಕೆರೆಗೆ ಎಸೆದು ಪ್ರಾಣರಕ್ಷಣೆಗಾಗಿ ಪಲಾಯನ ಮಾಡಿದ. ಮದರಾಸು ಕೌನ್ಸಿಲ್‍ನ ಸದಸ್ಯರು ದೋಣಿಗಳಲ್ಲಿ ಆಶ್ರಯ ಪಡೆಯುವಷ್ಟರ ಮಟ್ಟಿಗೆ ಭಯಭೀತರಾಗಿದ್ದರು. ಗವರ್ನರ್ ಜನರಲ್ ವಾರನ್ ಹೇಸ್ಟಿಂಗ್ಸನು ವೈಟ್‍ಹಿಲ್‍ನ ನೇತೃತ್ವದ ಮದರಾಸು ಸರ್ಕಾರವನ್ನು ರದ್ದುಪಡಿಸಿ ಮದರಾಸಿನಲ್ಲಿ ಅಳಿದುಳಿದಿದ್ದ ಇಂಗ್ಲಿಷರ ಅಸ್ತಿತ್ವವನ್ನು ಉಳಿಸಲು ಯುದ್ಧವೀರ ಸರ್ ಐರ್‍ಕೂಟನನ್ನು ಕಳುಹಿಸಬೇಕಾಯಿತು. ಹೀಗೆ ಹೈದರ್ ಎರಡನೆಯ ಮೈಸೂರು ಯುದ್ಧವನ್ನು ಯಶಸ್ವಿಯಾಗಿ ನಿರ್ವಹಿಸಿದ.

ಆದರೆ ಮಹಾ ಒಕ್ಕೂಟದ ಇತರ ಭಾಗಿಗಳ ಸಾಧನೆ ಸಪ್ಪೆಯಾಗಿತ್ತು. ನಿಜಾಮ ಉದ್ದುದ್ದ ಮಾತನಾಡಿದರೂ ಹೈದರಾಬಾದಿನಿಂದ ಒಬ್ಬ ಸೈನಿಕನನ್ನೂ ಕಳುಹಿಸಲಿಲ್ಲ. ಇತ್ತ ಹೇಸ್ಟಿಂಗ್ಸ್ ಗುಂಟೂರನ್ನು ತೆಗೆದುಕೊಳ್ಳುವುದಿಲ್ಲವೆಂದು ಒಂದು ಪತ್ರವನ್ನು ತನಗೆ ಬರೆದದ್ದೇ ನಿಜಾಮನಿಗೆ ಸಂತೃಪ್ತಿ ತಂದಿತ್ತು. ಇದೇ ರೀತಿ ಗವರ್ನರ್ ಜನರಲ್ ನಾಗಪುರದ ಮುದಾಜಿಗೆ ಅವನ ಮಗ ಚಿಮನ್‍ಜಿಯನ್ನು ಮರಾಠ ಪಡೆಗಳ ಸೇನಾಪತಿಯಾಗಿ ಮಾಡಲು ನೆರವಾಗುವುದಾಗಿ ನೀಡಿದ ಭರವಸೆಯಿಂದ ಅವನು ಬಂಗಾಲದ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ಪಶ್ಚಿಮ ಭಾರತದಲ್ಲಿ ಮರಾಠ ಸರದಾರರಿಗೆ ಇಂಗ್ಲಿಷರು ಕೊಟ್ಟ ಕೆಲವು ಹೊಡೆತಗಳಿಂದಾಗಿ ಮಹದಾಜಿ ಸಿಂಧ್ಯ ಇಂಗ್ಲಿಷರೊಂದಿಗೆ ಸಾಲ್ಬಾಯಿ ಒಪ್ಪಂದ ಮಾಡಿಕೊಂಡ. ಹೋಳ್ಕರನ ಇಂದೂರು, ಸಿಂಧ್ಯನ ರಾಜಧಾನಿ ಗ್ವಾಲಿಯರ್ ಸೇರಿದಂತೆ ಮರಾಠರು ಗಣನೀಯ ಪ್ರದೇಶವನ್ನು ಕಳೆದುಕೊಂಡರು. ಈ ಸಂದರ್ಭದಲ್ಲಿ ಹೈದರ್ ಅಲಿಯೊಬ್ಬನೇ ಇಂಗ್ಲಿಷರಿಗೆ ಸರಿಯಾದ ಪಾಠ ಕಲಿಸಿದವ. ಇವನು ಕರ್ನಾಟಕ ಪ್ರದೇಶವನ್ನು ಬಿಟ್ಟುಕೊಡದೆ ಆರ್ಕಾಟನ್ನು ಮುಖ್ಯ ಕೇಂದ್ರವಾಗಿ ಮಾಡಿಕೊಂಡ. ಆದರೆ ದುರದೃಷ್ಟವಶಾತ್ ವಿಧಿ ಇವನನ್ನು ಹೆಚ್ಚು ಕಾಲ ಬಾಳಲು ಬಿಡಲಿಲ್ಲ. ಹೈದರ್ 1782 ಡಿಸೆಂಬರ್ 16ರಂದು ಯುದ್ಧ ನಿರತನಾಗಿದ್ದಾಗಲೇ ಕಾಯಿಲೆಯಿಂದ ನಿಧನಹೊಂದಿದ. ಇವನ ಪರಾಕ್ರಮಿ ಮಗ ಟಿಪ್ಪು ಈ ಯುದ್ಧವನ್ನು ಮುಂದುವರಿಸಿ 1784ರಲ್ಲಿ ಯಶಸ್ವಿಯಾಗಿ ಕೊನೆಗೊಳಿಸಿದ.

ಹೈದರ್ ಅಲಿ ಇತಿಹಾಸದ ಗಮನಾರ್ಹ ವ್ಯಕ್ತಿಗಳಲ್ಲೊಬ್ಬ. ಇವನ ದೂರದೃಷ್ಟಿ, ಚಾಣಾಕ್ಷತನ, ಧೈರ್ಯ ಮತ್ತು ಸೈನ್ಯಸಂಘಟನಾ ಸಾಮಥ್ರ್ಯಗಳು ದಕ್ಷಿಣ ಭಾರತದಲ್ಲಿ ವಿದೇಶೀಯರು ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳದಂತೆ ಮಾಡಿದ್ದುವು. ಇವನು ಆಡಳಿತದಲ್ಲಿ ನ್ಯಾಯಪರನೂ ಉದಾರಿಯೂ ಸಹನಾಮಯಿಯೂ ಆಗಿದ್ದ. ಇವನ ಸಮರ್ಥ ಆಳಿಕೆಯಲ್ಲಿ ಇಡೀ ಕರ್ನಾಟಕ ಒಗ್ಗೂಡಿ ದಕ್ಷ ಮತ್ತು ದೃಢಸರ್ಕಾರ ಪಡೆದಿತ್ತು. (ಬಿ.ಎಸ್.ಎ.)

ನಾಣ್ಯಗಳು : ಹೈದರ್ ಅಲಿ 1761ರಲ್ಲಿ ಅಧಿಕಾರವನ್ನು ವಹಿಸಿ ಕೊಂಡಾಗ ಮೈಸೂರಿನಲ್ಲಿ ಮೊಗಲ್ ಮತ್ತು ವಿಜಯನಗರದ ನಾಣ್ಯಗಳು ಹೆಚ್ಚು ಪ್ರಸಿದ್ಧಿ ಹೊಂದಿದ್ದು ಜನಾನುರಾಗಿಯಾಗಿದ್ದವು. ಅದರಲ್ಲಿಯೂ ವಿಜಯನಗರದ ನಾಣ್ಯಗಳು ಹೆಚ್ಚು ಬಳಕೆಯಲ್ಲಿದ್ದವು. ಇದನ್ನು ಗಮನಿಸಿದ ಹೈದರ್ ತನ್ನ ನಾಣ್ಯಗಳಲ್ಲಿ ಹೊಸ ಬದಲಾವಣೆಗಳನ್ನು ವಿಶೇಷವಾಗಿ ಮಾಡದೆ ವಿಜಯನಗರದ ಮತ್ತು ಮೊಗಲ್ ರೀತಿಯ ನಾಣ್ಯಗಳ ಪರಂಪರೆಯನ್ನೇ ಕೆಲವು ಸಣ್ಣಪುಟ್ಟ ಬದಲಾವಣೆಗಳೊಂದಿಗೆ ಮುಂದುವರಿಸಿದ. ಈತ ನಾಣ್ಯಗಳ ವಿಷಯದಲ್ಲಿ ಅಷ್ಟೊಂದು ಆಸಕ್ತಿಯನ್ನು ತೋರಿಸಿದನೆಂದು ಹೇಳಲೂ ಆಗುವುದಿಲ್ಲ. ಇವನ ಮಗ ಟಿಪ್ಪು ಸುಲ್ತಾನನ ನಾಣ್ಯಗಳು ನಾಣ್ಯಶಾಸ್ತ್ರಜ್ಞರನ್ನು ಅಚ್ಚರಿಗೊಳಿಸುವಷ್ಟು ಸುಂದರವೂ ವೈವಿಧ್ಯಪೂರ್ಣವೂ ಆಗಿವೆ. ಆದರೆ ಹೈದರನ ನಾಣ್ಯಗಳಲ್ಲಿ ಆ ಕಲಾವಂತಿಕೆಯಾಗಲೀ ವೈವಿಧ್ಯವಾಗಲೀ ಕಾಣಬರುವುದಿಲ್ಲ.

1763ರಲ್ಲಿ ಹೈದರ್ ಅಲಿ ಬಿದನೂರನ್ನು ತನ್ನ ವಶಮಾಡಿಕೊಂಡ ಮೇಲೆ, ಅಲ್ಲಿ ಒಂದು ಟಂಕಸಾಲೆಯನ್ನು ಸ್ಥಾಪಿಸಿದ. ಈ ಟಂಕಸಾಲೆ ಯಿಂದ ಬಹಾದುರಿ ಹಣ ಎಂಬ ಚಿನ್ನದ ನಾಣ್ಯಗಳನ್ನು ಮುದ್ರಿಸಿದ. ಇವು ವಿಜಯನಗರದ ಸದಾಶಿವರಾಯನ ನಾಣ್ಯಗಳಂತೆಯೇ ಇವೆ. ಇವುಗಳ ಮುಮ್ಮುಖದಲ್ಲಿ ಶಿವ-ಪಾರ್ವತಿಯರ ಚಿತ್ರವೂ ಹಿಮ್ಮುಖದಲ್ಲಿ ಬಿಂದುಗಳ ವೃತ್ತದಲ್ಲಿ ಪರ್ಷಿಯನ್ ಲಿಪಿಯಲ್ಲಿ ಹೆ ಎಂಬ ಅಕ್ಷರವೂ ಇದೆ. ಈ ರೀತಿಯ ನಾಣ್ಯಗಳನ್ನು ಬೆಂಗಳೂರು ಟಂಕಸಾಲೆಯಿಂದಲೂ ಮುದ್ರಿಸಿದ. ಇವು ದೊಡ್ಡ ತಲೆ ಬೆಂಗಳೂರಿ ಎಂದೂ ಪ್ರಸಿದ್ಧವಾಗಿವೆ. ಇವು ಪಗೋಡ ನಾಣ್ಯಗಳ ನಮೂನೆಗೆ ಸೇರಿದವು.

ಇವನ ಅರ್ಧವರಹ ಚಿನ್ನದ ನಾಣ್ಯಗಳು ಕೃಷ್ಣದೇವರಾಯನ ದುರ್ಗೀ ಪಗೋಡದಂತೆ ಇವೆ. ಇವು ಅಷ್ಟಾಗಿ ದೊರಕಿಲ್ಲ. ಹೈದರ್ ಅಲಿ ಗುತ್ತಿಯ ಟಂಕಸಾಲೆಯಲ್ಲಿ ಮುದ್ರಿಸಿದ ಪಗೋಡಗಳು ವಿಶೇಷವಾಗಿ ಮೊಗಲ್ ಪಗೋಡಗಳನ್ನೇ ಹೋಲುತ್ತವೆ. ಇವುಗಳ ಜೊತೆಗೆ ಈತ ಫಣಂ ಎಂಬ ನಮೂನೆಯ ಚಿನ್ನದ ನಾಣ್ಯಗಳನ್ನೂ ಮುದ್ರಿಸಿದ. ಇವೂ ಪಗೋಡ ನಾಣ್ಯಗಳಂತೆಯೇ ಇವೆ. ಆದರೆ ಕೆಲವು ಫಣಂ ಮತ್ತು ಅರ್ಧಫಣಂ ನಾಣ್ಯಗಳಲ್ಲಿ ಒಂದು ಮುಖದಲ್ಲಿ ಹೆ ಎಂಬ ಅಕ್ಷರವೂ ಮತ್ತೊಂದು ಮುಖದಲ್ಲಿ ಹಿಜಿರ ಕಾಲವೂ ನಮೂದಿತವಾಗಿವೆ. ಅರ್ಧಪಗೋಡ ನಮೂನೆಯ ನಾಣ್ಯಗಳಲ್ಲಿ ಕುಳಿತಿರುವ ವಿಷ್ಣುವಿನ ಚಿತ್ರವಿದೆ. ಈ ನಮೂನೆಯ ನಾಣ್ಯಗಳು ವಿಶೇಷವಾಗಿ ದೊರಕಿಲ್ಲ. ಇದೇ ನಮೂನೆಯ ಪಗೋಡಗಳನ್ನೂ ಹೈದರ್ ಅಚ್ಚುಹಾಕಿಸಿರಬೇಕೆಂದು ಖ್ಯಾತ ನಾಣ್ಯಶಾಸ್ತ್ರಜ್ಞ ಹೆಂಡರ್‍ಸನ್ ಊಹಿಸಿದ್ದರೂ ಅಂಥವು ಇದುವರೆಗೂ ದೊರಕಿಲ್ಲ.

ಹೈದರ್ ಬೆಳ್ಳಿಯ ನಾಣ್ಯಗಳನ್ನು ಅಚ್ಚುಹಾಕಿಸಿದನೇ ಇಲ್ಲವೇ ಎಂಬುದು ಖಚಿತವಾಗಿ ತಿಳಿದುಬಂದಿಲ್ಲ. ಆದರೆ ಇವನ ತಾಮ್ರದ ನಾಣ್ಯಗಳು ವಿಶೇಷವಾಗಿ ದೊರಕಿವೆ. ಇವನ ತಾಮ್ರದ

ನಾಣ್ಯ ಪೈಸಾದಲ್ಲಿ ಮುಮ್ಮುಖದಲ್ಲಿ ಆನೆಯ ಚಿತ್ರವೂ ಹಿಮ್ಮುಖದಲ್ಲಿ ಕಾಲ ಮತ್ತು ಟಂಕಸಾಲೆಯ ಹೆಸರೂ ಬರೆಯಲ್ಪಟ್ಟಿವೆ. ಇವು ವಿಶೇಷವಾಗಿ ಶ್ರೀರಂಗಪಟ್ಟಣ ಮತ್ತು ಬಳ್ಳಾರಿಗಳಲ್ಲಿ ಅಚ್ಚಾದವು. ಇನ್ನು ಕೆಲವು ಪೈಸಾಗಳಲ್ಲಿ ಕನ್ನಡ ಮತ್ತು ಅರಾಬಿಕ್ ಸಂಖ್ಯೆಗಳೂ ಹಿಂಭಾಗದಲ್ಲಿ ಹೆ ಎಂಬ ಅಕ್ಷರವೂ ಇವೆ. ಇವೂ ಬಳ್ಳಾರಿ ಮತ್ತು ಶ್ರೀರಂಗಪಟ್ಟಣ ಗಳಲ್ಲಿ ಮುದ್ರಿತವಾದವು. ಇವುಗಳಲ್ಲಿರುವ ಸಂಖ್ಯೆಗಳು ಏನನ್ನು ಸೂಚಿಸುತ್ತವೆ ಎಂಬುದು ಇನ್ನೂ ವಿವಾದಾಸ್ಪದವಾಗಿಯೇ ಉಳಿದಿದೆ. ಹುಲಿ ಮತ್ತು ಕೊಡಲಿಯ ಚಿತ್ರವಿರುವ ತಾಮ್ರದ ಪೈಸಾಗಳನ್ನು ಹೈದರನ ನಾಣ್ಯಗಳೆಂದು ಕೆಲವರು ಭಾವಿಸಿದ್ದರು. ಅದನ್ನು ಖಚಿತವಾಗಿ ಹೇಳುವಂತಿಲ್ಲವೆಂದು ಹೈದರ್ ಅಲಿ ಮತ್ತು ಟಿಪ್ಪುಸುಲ್ತಾನರ ನಾಣ್ಯಗಳನ್ನು ವಿಶೇಷವಾಗಿ ಅಭ್ಯಾಸಮಾಡಿರುವ ಹೆಂಡರ್‍ಸನ್ ಅಭಿಪ್ರಾಯಪಡುತ್ತಾನೆ. (ಬಿ.ಎಸ್.ಎ.; ಎ.ವಿ.ಎನ್.)