ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹೈಪರ್ಸ್ತೀನ್
ಹೈಪರ್ಸ್ತೀನ್ ಅಚ್ಚ ಕಂದುಮಿಶ್ರಿತ ಹಸುರು ಅಥವಾ ಬೂದು ಛಾಯೆಯುಳ್ಳ, ಇಲ್ಲವೆ ಕಡುಕಂದು ಬಣ್ಣದ, ಪೈರಾಕ್ಸೀನ್ ಗುಂಪಿಗೆ ಸೇರಿದ ಖನಿಜ [(Mg,Fe)SiO3]. ಇದು ಶಿಲೆಗಳಲ್ಲಿ ಆರ್ಥೊರಾಂಬಿಕ್ ವರ್ಗಕ್ಕೆ ಸೇರಿದ ಹರಳುಗಳಾಗಿ ಕಂಡುಬರುತ್ತದೆ. ಹರಳುಗಳು ಇರುವುದು ಬಲು ಅಪರೂಪ. ಈ ಖನಿಜ ಸಾಮಾನ್ಯವಾಗಿ ಪದರುರಚನೆ ಇಲ್ಲವೆ ಕಣರಚನೆಯನ್ನು ಪ್ರದರ್ಶಿಸುತ್ತದೆ. ಹಲವು ವೇಳೆ ಹಸುರು ಮಿಶ್ರಿತ ಕಪ್ಪು ಬಣ್ಣದ ಖನಿಜವೂ ಇರುತ್ತದೆ. ಇದರ ಒರೆ ಬೂದು ಅಥವಾ ಕಂದು ಛಾಯೆಯ ಬೂದು ಕಂಚಿನಂಥ ಅಥವಾ ಮುತ್ತಿನಂತ ಹೊಳಪುಳ್ಳದ್ದು. ಮಿತಪಾರದರ್ಶಕ ಇಲ್ಲವೆ ಅಪಾರದರ್ಶಕ ಗುಣ ಹೊಂದಿದೆ.
ಖನಿಜ ಉತ್ತಮ ಬಗೆಯ ಸೀಳುಗಳನ್ನೂ ಅಸ್ಪಷ್ಟಬಿರಿತವನ್ನೂ ಕಾಣಬಹುದು. ಒಡೆದ ಚೂರಾಗುವ ಸ್ವಭಾವವೂ ಉಂಟು. ಕಾಠಿಣ್ಯಾಂಕ 5-6. ಇದನ್ನು ಚಾಕುವಿನ ಅಲಗಿನಿಂದ ಗೀರಬಹುದು. ಸಾಪೇಕ್ಷಸಾಂದ್ರತೆ 3.4-3.5.
ಹೈಪರ್‍ಸ್ತೀನ್ ಹರಳುಗಳಲ್ಲಿ ತೆಳುಕಂದುಬಣ್ಣದ ಸೂಕ್ಷ್ಮಕಣಗಳು ಸೀಳುಗಳ ಉದ್ದಕ್ಕೂ ಹರಡಿದ್ದು ವಿಶಿಷ್ಟ ಒಳರಚನೆ ಪ್ರದರ್ಶಿಸುತ್ತವೆ. ಈ ಕಾರಣಕ್ಕಾಗಿ ಹೈಪರ್‍ಸ್ತೀನ್ ಖನಿಜಕ್ಕೆ ಲೋಹದ ಹೊಳಪು ಇದೆ.
ಇದು ಅಗ್ನಿಶಿಲೆಗಳಾದ ನೋರೈಟ್, ಆ್ಯಂಡಿಸೈಟ್ ಮತ್ತು ರೂಪಾಂತರಶಿಲೆಗಳಾದ ಗ್ರಾನ್ಯುಲೈಟ್‍ಗಳಲ್ಲಿ ಪ್ರಧಾನ ಖನಿಜವಾಗಿ ಕಂಡುಬರುತ್ತದೆ. ಈ ಖನಿಜವನ್ನು ಒಳಗೊಂಡಿರುವ ಶಿಲೆಗಳಿಗೆ ಚಾರ್ನಕೈಟ್ ಎಂದು ಹೆಸರು. (ಬಿ.ವಿ.ಜಿ.)