ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹೊನ್ನಪ್ಪ ಭಾಗವತರ್, ಸಿ
ಹೊನ್ನಪ್ಪ ಭಾಗವತರ್, ಸಿ (1916-92). ಪ್ರಸಿದ್ಧ ಸಂಗೀತಗಾರ, ವಾಗ್ಗೇಯಕಾರ, ನಾಟಕಕಾರ, ಚಿತ್ರನಟ ಮತ್ತು ನಿರ್ಮಾಪಕರು. ಇವರು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲುಕು ಚೌಡಸಂದ್ರದಲ್ಲಿ 1916 ಜನವರಿ 15ರಂದು ಜನಿಸಿದರು. ತಂದೆ ಚಿಕ್ಕಲಿಂಗಪ್ಪ, ತಾಯಿ ಕಲ್ಲಮ್ಮ. ಚಿಕ್ಕವಯಸ್ಸಿನಲ್ಲಿ ಯಕ್ಷಗಾನ, ಭಜನೆ, ನಾಟಕ ಮೊದಲಾದ ಹಳ್ಳಿಯ ಜನಪದ ಕಲಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಶಾಲೆಗೆ ಹೋಗುತ್ತಿದ್ದಂತೆಯೇ ಹಾರ್ಮೋನಿಯಂ, ತಬಲಾ ಮುಂತಾದ ವಾದ್ಯ ನುಡಿಸುವುದನ್ನು ಕಲಿತುಕೊಂಡರು. ಮೂರು ವರ್ಷಕಾಲ ಶಾಸ್ತ್ರೀಯ ಸಂಗೀತಾಭ್ಯಾಸ ಮಾಡಿದರು. ಇವರ ಮಧುರ ಕಂಠ ಸ್ವರ, ಸಂಗೀತ ಮತ್ತು ವ್ಯಕ್ತಿತ್ತ್ವವನ್ನು ಮೆಚ್ಚಿದ ಕನ್ನಡ ನಾಟಕರಂಗದ ಪಿತಾಮಹರೆಂದು ಪ್ರಸಿದ್ಧರಾದ ಗುಬ್ಬಿವೀರಣ್ಣನವರು ತಮ್ಮ ನಾಟಕ ಕಂಪನಿಯಲ್ಲಿ ಸೇವೆಸಲ್ಲಿಸುವಂತೆ ಇವರನ್ನು ಕೇಳಿಕೊಂಡರು. ಅಲ್ಲಿಯ ಪೌರಾಣಿಕ ಮತ್ತು ಐತಿಹಾಸಿಕ ನಾಟಕಗಳಲ್ಲಿ ನಾಯಕ ನಟರಾಗಿ ಬಹಳ ಜನಪ್ರಿಯತೆಯನ್ನು ಗಳಿಸಿದರು. ಅನಂತರ ಹೊರರಾಜ್ಯಗಳವರು ಸಹ ಇವರ ಪ್ರತಿಭೆಯನ್ನು ಮೆಚ್ಚಿ ಹೊಗಳಿ ಪ್ರೋತ್ಸಾಹಿಸಿದರು. ಹೀಗೆ ಇವರ ಸಾಂಸ್ಕøತಿಕ ಕಾರ್ಯಕ್ರಮಗಳು ಹೆಚ್ಚು ಜನಾಕರ್ಷಣೆಯನ್ನು ಪಡೆದವು.
ಇವರ ನಿಜವಾದ ಪ್ರತಿಭೆ ಬೆಳಕಿಗೆ ಬಂದು ಅತ್ಯುನ್ನತ ಸ್ಥಾನಕ್ಕೇರಿದ್ದು ತಮಿಳುನಾಡಿನ ಸೇಲಂನ ಸೇಲಂ ಸಂಗೀತ ಅಭಿಮಾನಿಗಳ ಸಂಘದವರು ಏರ್ಪಡಿಸಿದ್ದ ಸಂಗೀತ ಕಚೇರಿಯಲ್ಲಿ (1937). ಇದು ಇವರ ಜೀವನದಲ್ಲಿ ಮರೆಯಲಾರದ ತಿರುವು. ಅಲ್ಲದೆ ಇದೇ ಅಭಿಮಾನಿಗಳು ಭವ್ಯ ಸ್ವಾಗತ ಸಮಾರಂಭ ಮಾಡಿ ಬೆಂಗಳೂರಿನ ಹೊನ್ನಪ್ಪ ಭಾಗವತರ್ ಎಂದು ಕರೆದರು. ಆ ಸಮಯದಲ್ಲಿ ಇಂಥ ಅನೇಕ ಸಂಗೀತ ಕಚೇರಿಗಳನ್ನು ಮಾಡಿದರು. ಕೂಡಲೆ ಇವರನ್ನು ಸೇಲಂನ ಶಂಕರ್ ಫಿಲಂಸ್‍ನವರು ಅಂಬಿಕಾಪತಿ ಎಂಬ ತಮಿಳು ಚಿತ್ರದಲ್ಲಿ ಅಭಿನಯಿಸಲು ಕರೆಕೊಟ್ಟರು. ಈ ಚಿತ್ರದಲ್ಲಿ ಅಭಿನಯಿಸಿದ್ದರಿಂದ ಚಿತ್ರರಂಗದಲ್ಲಿ ಹೆಚ್ಚು ಜನಪ್ರಿಯತೆ ಬಂದಿತಲ್ಲದೆ ಇವರ ಪ್ರತಿಭೆಗೆ ಕಳಶವಿಟ್ಟಂತಾಯಿತು. ಆಗಿನ ಚಿತ್ರಗಳಲ್ಲಿ ಗಾಯನಕ್ಕೆ ಆದ್ಯತೆ ಇತ್ತು. ರೂಪ ಕಂಠಸಿರಿ ಇದ್ದ ಹೊನ್ನಪ್ಪ ಭಾಗವತರ್ ಅನಂತರ ಅನೇಕ ತಮಿಳು ಚಿತ್ರಗಳಲ್ಲಿ ಅಭಿನಯಿಸಿದರು. ಮುರಗನ್ ಕೃಷ್ಣಕುಮಾರ, ಸತಿಸುಕನ್ಯಾ, ಭಕ್ತಕಲತಿ, ದೇವಕನ್ಯೆ, ಪ್ರಭಾವತಿ, ರಾಜರಾಜೇಶ್ವರಿ, ಕುಂಡಲಕೇಶಿ, ಅರುಂಧತಿ, ಬರ್ಮಾರಾಣಿ, ವಾಲ್ಮೀಕಿ, ಗೋಕುಲ ದಾಸಿ, ಭಕ್ತಜನ, ದೇವಮನೋಹರಿ, ಗುಣಸಾಗರಿ-ಅಲ್ಲದೆ ಇನ್ನೂ ಅನೇಕ ಚಿತ್ರಗಳಲ್ಲಿ ಅಭಿನಯಿಸಿದರು. 1940ರಲ್ಲಿ ಗುಬ್ಬಿವೀರಣ್ಣ ಅವರು ತಯಾರಿಸಿದ ಸುಭದ್ರಾ ಕನ್ನಡ ಚಿತ್ರದಲ್ಲಿ ನಾಯಕ ನಟನಾಗಿ ಅಭಿನಯಿಸಿದ್ದರು. ಈ ಚಿತ್ರ ಕರ್ನಾಟಕದಲ್ಲಿ ನೂರುದಿನ ನಡೆದು ಇವರಿಗೆ ಕೀರ್ತಿ ಗೌರವವನ್ನು ತಂದುಕೊಟ್ಟಿತು. 1947ರಲ್ಲಿ ಇವರೇ ಸ್ವತಃ ತಯಾರಿಸಿದ ಭಕ್ತಕುಂಬಾರ ರಾಜ್ಯಾದ್ಯಂತ ನೂರಾರು ದಿವಸ ನಡೆದು ಮತ್ತಷ್ಟು ಜನಪ್ರಿಯತೆಯನ್ನು ಹೆಚ್ಚಿಸಿತು.
ಕನ್ನಡದ 'ಹೇಮರೆಡ್ಡಿ ಮಲ್ಲಮ್ಮ, 'ಗುಣಸಾರಿ', 'ಜಗಜ್ಯೋತಿ ಬಸವೇಶ್ವರ, 'ಮಹಾಕವಿ ಕಾಳಿದಾಸ, 'ಪಂಚರತ್ನ ಇತ್ಯಾದಿ ಚಿತ್ರಗಳಲ್ಲೂ ಅಭಿನಯಿಸಿರುವರು. ಮಹಾಕವಿ ಕಾಳಿದಾಸ, ಪಂಚರತ್ನ ಈ ಎರಡು ಚಿತ್ರಗಳನ್ನು ಭಾಗವತರು ತಯಾರಿಸಿದರು. ಮಹಾಕವಿ ಕಾಳಿದಾಸ (1955) ಮತ್ತು ಜಗಜ್ಯೋತಿ ಬಸವೇಶ್ವರ (1959) ರಾಷ್ಟ್ರೀಯ ಪ್ರಶಸ್ತಿಗಳಿಸಿದುವು. ಭಕ್ತಕುಂಬಾರ, ಮಹಾಕವಿ ಕಾಳಿದಾಸ ಮತ್ತು ಪಂಚರತ್ನ ಚಿತ್ರಗಳಿಗೆ ಇವರೇ ಸಂಗೀತ ಸಂಯೋಜಿಸಿರುವರು. ಮಹಾಕವಿ ಕಾಳಿದಾಸ ಮೂಲಕ ಬಿ. ಸರೋಜಾದೇವಿ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. 1958-59ರಲ್ಲಿ ಉಳಲಿಕ್ಕು ತೊಳಿಲುಕ್ಕಂ ವಂದನೈ ಸೈವೊಂ ಎಂಬ ತಮಿಳು ಚಿತ್ರ ತಯಾರಿಸಿ ಅದರಲ್ಲಿ ಸಾಕಷ್ಟು ನಷ್ಟ ಅನುಭವಿಸಿದರು. ಸಂಗೀತವೇ ನನ್ನ ದೈವ ಎಂದು ಭಾವಿಸುತ್ತ ಇವರು ಸಂಗೀತ ಕಛೇರಿಗಳನ್ನು ನಡೆಸುತ್ತ ಕೃತಿ ರಚನೆಗೆ ತೊಡಗಿದರು. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಇವರು ಸುಮಾರು ಮುನ್ನೂರು ಕೃತಿಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಆಯ್ದ 101 ಕನ್ನಡದ ಕೃತಿಗಳನ್ನು ಓಂಕಾರನಾದ ಸುಧಾ ಎಂಬ ಹೆಸರಿನ ಪುಸ್ತಕವನ್ನು ಹೊರತಂದಿದ್ದಾರೆ. ಇವರು ಹಲವಾರು ಹೊಸಬರನ್ನು ಚಿತ್ರರಂಗಕ್ಕೆ ಪರಿಚಯಿಸಿರುವರು. ಅವರಲ್ಲಿ ಬಿ.ಸರೋಜಾದೇವಿ, ಪಂಢರಿಬಾಯಿ ಮುಖ್ಯರು. ಅನಂತರ ತಮಿಳು-ತೆಲುಗು ಚಿತ್ರರಂಗದಲ್ಲೂ ಖ್ಯಾತಿ ಪಡೆದರು. ಕೆ.ಆರ್.ಸೀತಾರಾಮಶೆಟ್ಟಿ ಅವರನ್ನು ನಿರ್ದೇಶಕರನ್ನಾಗಿ ಹಾಗೂ ಛಾಯಾಗ್ರಾಹಕರಾಗಿ ಎ.ಎನ್.ಪರಮೇಶ್ವರ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು.
1961ರಲ್ಲಿ ಉಮಾ ಮಹೇಶ್ವರ ಸಂಗೀತ ನಾಟಕ ಮಂಡಲಿ ಎಂಬ ತಮ್ಮದೇ ಆದ ಹೊಸ ನಾಟಕ ಕಂಪನಿಯೊಂದನ್ನು ಪ್ರಾರಂಭಿಸಿ 1964ರವರೆಗೆ ಹಲವಾರು ನಾಟಕಗಳನ್ನು ರಾಜ್ಯಾದ್ಯಂತ ಪ್ರದರ್ಶಿಸಿದರು. ಕೊನೆಗೆ ಹಣದ ಮುಗ್ಗಟ್ಟಿನಿಂದಾಗಿ ಕಲಾವಿದರನ್ನು ಸಂಭಾಳಿಸುವುದು ಕಷ್ಟಕರವಾಗಿ ಕಂಪನಿಯನ್ನೇ ವಿಸರ್ಜಿಸಿದರು. ಸಂಗೀತ, ರಂಗಭೂಮಿ ಮತ್ತು ಚಿತ್ರರಂಗದಲ್ಲಿಯ ಇವರ ಸೇವೆಯನ್ನು ಮೆಚ್ಚಿ ಹಲವಾರು ಸಂಘ ಸಂಸ್ಥೆಗಳು ಸನ್ಮಾನ ಮಾಡಿವೆ. 1956ರಲ್ಲಿ ತಯಾರಾದ ಕನ್ನಡ ಚಿತ್ರಗಳಲ್ಲಿಯ ನಟನೆಗೆ ಉತ್ತಮನಟರೆಂದು ಮದರಾಸು ಸಿನಿಮಾ ಅಭಿಮಾನಿಗಳ ಸಂಘದವರ ಆಯ್ಕೆ, ಆಂಧ್ರ ಪ್ರದೇಶದ ಶ್ರೀಶೈಲ ಮಠದ ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಅವರು ನೀಡಿದ ನಟಾಚಾರ್ಯ ಎಂಬ ಬಿರುದು (1960), ಚಿತ್ರದುರ್ಗ ಜಿಲ್ಲೆಯ ಮಲ್ಲಾಡಿಹಳ್ಳಿಯ ಅನಂತ ಸೇವಾಶ್ರಮದ ಶ್ರೀರಾಘವೇಂದ್ರ ಸ್ವಾಮಿಯವರು ಬಂಗಾರದ ಪದಕದೊಂದಿಗೆ ನೀಡಿದ ಗಾನಾಭಿನಯ ಚಂದ್ರ ಎಂಬ ಬಿರುದು (1962), ಬೆಂಗಳೂರಿನ ಕನ್ನಡಾಭಿಮಾನಿಗಳು ನೀಡಿದ ಬಂಗಾರದ ತೋಡ (1974), ಕರ್ನಾಟಕ ಸಂಗೀತ ಅಕಾಡೆಮಿ ನೀಡಿದ ಕರ್ನಾಟಕ ಶಾಸ್ತ್ರೀಯ ಸಂಗೀತ ಬಹುಮಾನ (1972), ಶೃಂಗೇರಿ ಮಠದ ಶ್ರೀ ಅಭಿನವ ವಿದ್ಯಾತೀರ್ಥ ಜಗದ್ಗುರುಗಳು ಬಂಗಾದ ಪದಕದೊಂದಿಗೆ ನೀಡಿದ ಗಾಯಕ ಶಿಖಾಮಣಿ ಎಂಬ ಬಿರುದು (1976) ಮುಖ್ಯವಾದುವು. ಅದೇ ವರ್ಷ ಕರ್ನಾಟಕ ಗಾನಕಲಾ ಪರಿಷತ್ತಿನ ಆರನೆಯ ಸಂಗೀತ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಇವರು ಸಲ್ಲಿಸಿದ ಸೇವೆಯನ್ನು ಸ್ಮರಿಸಿ ಗಾನಕಲಾ ಭೂಷಣ ಎಂಬ ಬಿರುದಿನೊಂದಿಗೆ ಬಂಗಾರದ ಪದಕ ನೀಡಿ ಗೌರವಿಸಲಾಗಿದೆ. ಮೈಸೂರು ಸಂಸ್ಥಾನದ ವಿದ್ವಾಂಸರು ಗಾನಕಲಾ ಗಂಧರ್ವ ಎಂಬ ಬಿರುದನ್ನು ನೀಡಿ ಸನ್ಮಾನಿಸಿದ್ದಾರೆ (1978). ಇವಲ್ಲದೆ ಇವರು ಕರ್ನಾಟಕ ಫಿಲಂ ಅಡ್ವೈಸರಿ ಬೋರ್ಡಿನ ಸದಸ್ಯರಾಗಿಯೂ 1939 ರಿಂದ ಆಕಾಶವಾಣಿಯಲ್ಲಿ ಕರ್ನಾಟಕ ಸಂಗೀತದ ಹಾಡುಗಾರರಾಗಿಯೂ ಹಲವಾರು ಕಾರ್ಯಕ್ರಮಗಳ ಚಾಲನೆಗೆ ಕಾರಣರಾಗಿದ್ದರು. ಕರ್ನಾಟಕ ರಾಜ್ಯ ಶಿಕ್ಷಣ ಇಲಾಖೆಯವರು ಮಾಡಿದ ಸಂಗೀತ ಪರೀಕ್ಷೆಯ ಬೋರ್ಡಿನ ಚೇರ್‍ಮನ್ನರಾಗಿಯೂ ಇವರು ಸೇವೆ ಸಲ್ಲಿಸಿದ್ದಾರೆ. 'ಸದಾನಂದ (1979) ಇವರು ನಿರ್ಮಿಸಿದ ಕೊನೆಯ ಚಿತ್ರ. ಸಂಗೀತ ನಾಟಕ ಅಕಾಡೆಮಿಯ ಫೆಲೊಷಿಪ್ ಪಡೆದ ಮೊದಲಿಗ ಕನ್ನಡಿಗ. ಇವರು 1992ರಲ್ಲಿ ನಿಧನರಾದರು.
(ಟಿ.ಜಿ.ಆರ್.)