ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹ್ಯುಮಾಸನ್, ಮಿಲ್ಟನ್ ಲಾಸೆಲ್
ಹ್ಯುಮಾಸನ್, ಮಿಲ್ಟನ್ ಲಾಸೆಲ್ 1891-1972. ಅಮೆರಿಕದ ಖಗೋಲವಿಜ್ಞಾನಿ. ಮಿನೆಸೋಟಾದ ಡಾಡ್ಜ್ ಸೆಂಟರ್‍ನಲ್ಲಿ ಜನಿಸಿದ. 14 ವರ್ಷ ವಯಸ್ಸಿಗೆ ಶಾಲೆ ಬಿಟ್ಟು ಮೌಂಟ್ ವಿಲ್ಸನ್ ವೀಕ್ಷಣಾಲಯಕ್ಕೆ ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ಹೇಸರಗತ್ತೆಯ ಮೇಲೆ ಹೇರಿ ಸಾಗಿಸುವ ಕಾಯಕ ಕೈಗೊಂಡ. ದ್ವಾರಪಾಲಕ-ಉಸ್ತುವಾರಿ ಸೇವಕನಾಗಿ ವೀಕ್ಷಣಾಲಯದ ಸಿಬ್ಬಂದಿ ವರ್ಗಕ್ಕೆ ಸೇರ್ಪಡೆಯಾದ (1917). ತಾಂತ್ರಿಕ ಸಿಬ್ಬಂದಿಯ ಸಾಹಚರ್ಯದಿಂದ ಛಾಯಾಚಿತ್ರಗ್ರಹಣದಲ್ಲಿ ಪರಿಣತಿ ಗಳಿಸಿದ. ಸಹ ಖಗೋಲವಿಜ್ಞಾನಿಯಾಗಿ ಬಡ್ತಿ ಪಡೆದ (1918). ಗೆಲಕ್ಸಿಗಳ ಕುರಿತು ಎಡ್ವಿನ್ ಪಾವೆಲ್ ಹಬ್ಬಲ್ (1889-1953) ಮಾಡುತ್ತಿದ್ದ ಸಂಶೋಧನೆಗಳಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸಿದ (1929-1953).
ಹಬ್ಬಲ್ ಆವಿಷ್ಕರಿಸಿದ್ದ ರಕ್ತ ಪಲ್ಲಟಗಳಿಗೂ ಗೆಲಕ್ಸಿಗಳ ವ್ಯಕ್ತ ಕಾಂತಿಮಾನಕ್ಕೂ ನಡುವಿನ ಸಂಬಂಧವನ್ನು ಪರೀಕ್ಷಿಸಲು ಹಾಗೂ ವಿಸ್ತರಿಸಲೋಸುಗ ವ್ಯವಸ್ಥಿತವಾಗಿ ರೋಹಿತದರ್ಶಕ ವೀಕ್ಷಣೆಗಳನ್ನು ಮಾಡುವದು ಈತನ ಕಾರ್ಯವಾಗಿತ್ತು. ಮಸುಕಾದ ಗೆಲಕ್ಸಿಗಳಿಂದ ಉದ್ಭವವಾಗಿದ್ದ ತೀವ್ರ ತಾಂತ್ರಿಕ ಅಡಚಣೆಗಳನ್ನು ನಿವಾರಿಸಿದ್ದು ಈತನ ಪ್ರಮುಖ ಸಾಧನೆ. ಪ್ರಸಾಮಾನ್ಯ ಗೆಲಕ್ಸಿಗಳ ಅಧ್ಯಯನಕ್ಕೆ ಪ್ರಮುಖ ಆಕರ ಎಂಬ ಮಾನ್ಯತೆ ಪಡೆದಿರುವ 620 ಗೆಲಕ್ಸಿಗಳ ಅರೀಯವೇಗ ಅಳೆದು ಫಲಿತಾಂಶಗಳ ಪಟ್ಟಿಯನ್ನು ಪ್ರಕಟಿಸಿದ (1956) ಕೀರ್ತಿ ಈತನಿಗೆ ಸಲ್ಲುತ್ತದೆ. ಮಸುಕಾದ ಕಾಯಗಳ ರೋಹಿತಗಳನ್ನು ದಾಖಲಿಸಲು ತಾನು ವಿಕಸಿಸಿದ ತಂತ್ರಗಳನ್ನು ಅನ್ವಯಿಸಿ ಸೂಪರ್ನೋವಾಗಳು, ಪುರಾತನ ನೋವಾಗಳು, ಮಸುಕಾದ ನೀಲನಕ್ಷತ್ರಗಳು ಮತ್ತು ಶ್ವೇತಕುಬ್ಜಗಳನ್ನೂ ಅಧ್ಯಯಿಸಿದ. ಗೆಲಕ್ಸಿಗಳ ಅಧ್ಯಯನಾವಧಿಯಲ್ಲಿ 1961 ಧೂಮಕೇತುವನ್ನೂ ಆವಿಷ್ಕರಿಸಿದ. (ಎಸ್.ಎಚ್.ಬಿ.ಎಸ್.)