ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಹ್ಯೂಗೋವಿಕ್ಟರ್

ವಿಕಿಸೋರ್ಸ್ ಇಂದ
Jump to navigation Jump to search

ಹ್ಯೂಗೋವಿಕ್ಟರ್ 1802-1885. ಫ್ರೆಂಚ್ ನಾಟಕಕಾರ ಹಾಗೂ ಫ್ರೆಂಚ್ ಸಾಹಿತ್ಯದ ರೊಮ್ಯಾಂಟಿಕ್ ಯುಗದ ನೇತಾರ. ಫ್ರಾನ್ಸ್‍ನ ಬೆಸಾಂಕನ್ ಎಂಬಲ್ಲಿ 1802ರಲ್ಲಿ ಜನಿಸಿದ. ಈತ 17ನೆಯ ವಯಸ್ಸಿನಲ್ಲಿಯೇ ಫ್ರೆಂಚ್ ಭಾಷೆಯಲ್ಲಿ ಅದ್ಭುತ ಪ್ರಾವೀಣ್ಯ ಪಡೆದಿದ್ದ. ತನ್ನ ಸಹೋದರರೊಂದಿಗೆ ಸೇರಿ ದ ಲಿಟರರಿ ಕನ್ಸರ್ವೇಟಿವ್ ಎಂಬ ಪತ್ರಿಕೆಯನ್ನು ಹೊರತಂದ. ರಾಜಕೀಯದಲ್ಲಿಯೂ ಆಸಕ್ತಿ ಹೊಂದಿದ್ದ. 1848ರಲ್ಲಿ ಫ್ರೆಂಚ್‍ನ ಎರಡನೆಯ ಗಣರಾಜ್ಯ ಸ್ಥಾಪನೆ ಕಾಲದಲ್ಲಿ ಇವನ ಆಸಕ್ತಿ ಏಕಾಧಿಪತ್ಯದಿಂದ ಗಣರಾಜ್ಯದತ್ತ ಹರಿಯಿತು. ಹೊಸ ರಾಷ್ಟ್ರೀಯ ಗಣಪರಿಷತ್ತಿಗೂ ಆಯ್ಕೆಯಾದ. ಮತದ ಹಕ್ಕು, ಉಚಿತ ಶಿಕ್ಷಣ, ಪತ್ರಿಕಾ ಸ್ವಾತಂತ್ರ್ಯಗಳ ವಿಚಾರದಲ್ಲಿ ಆಸಕ್ತಿ ವಹಿಸಿದ. ಲೂಯಿ ನೆಪೋಲಿಯನ್‍ನ ಆಗಮನದ ಅನಂತರ ರಾಜಕೀಯ ಬದಲಾವಣೆಗಳಲ್ಲಿ ಸಕ್ರಿಯವಾಗಿ ಭಾಗಿಯಾದ. ಇದರ ಪರಿಣಾಮದಿಂದ 20 ವರ್ಷ ದೇಶಭ್ರಷ್ಠನಾಗಿ, ಗಡಿಪಾರಾಗಿ ಬೆಲ್ಜಿಯಂ ಹಾಗೂ ಇಂಗ್ಲಿಷ್ ಕಡಲ್ಗಾಲುವೆಯ ಜರ್ಸಿ ದ್ವೀಪಗಳಲ್ಲಿರಬೇಕಾಯಿತು. ಫ್ರಾನ್ಸಿಗೆ ಮರಳುವ ಅವಕಾಶವೊದಗಿದರೂ ಅದನ್ನು ತಿರಸ್ಕರಿಸಿ ತಾನು ಸ್ವಾತಂತ್ರ್ಯ ಪಡೆಯದ ಹೊರತು ಬಂಧಮುಕ್ತನಾಗಲಾರೆನೆಂದು ಘೋಷಿಸಿದ, ನೆಪೋಲಿಯನ್ ಅಧಿಕಾರದಿಂದ ಕೆಳಗಿಳಿದ ಅನಂತರವೇ ಫ್ರಾನ್ಸಿಗೆ ಮರಳಿದ.

ಓಡ್ಸ್ ಅಂಡ್ ವೇರಿಯಸ್ ಪೊಯಮ್ಸ್ (1822) ಇದು ಇವನ ಮೊದಲನೆಯ ಕವನ ಸಂಕಲನ. ಓಡ್ಸ್ ಅಂಡ್ ಬ್ಯಾಲೆಡ್ಸ್ (1826) ಹಾಗೂ ದ ಓರಿಯಂಟಲ್(1829)- ಇವು ತರುಣ ರೊಮ್ಯಾಂಟಿಕ್ ಕವಿಗಳನ್ನು ಸಂಘಟಿಸಿ ಹೊರತಂದ ಕೃತಿಗಳು. ಇವನು ಪ್ರಸಿದ್ಧ ರೊಮ್ಯಾಂಟಿಕ್ ಕವಿ ಎಂದು ಹೆಸರು ಪಡೆಯಲು ಇವು ಕಾರಣವಾದುವು. ಕ್ರಾಮ್‍ವೆಲ್ (1877) ಒಂದು ಐತಿಹಾಸಿಕ ನಾಟಕ. ಇದರ ಮುನ್ನುಡಿಯಲ್ಲಿ ರೊಮ್ಯಾಂಟಿಕ್ ಸೌಂದರ್ಯ ಮೀಮಾಂಸೆಯನ್ನು ಪರಿಚಯಿಸಿದ್ದಾನೆ, ಸಾಂಪ್ರದಾಯಿಕ ಸಾಹಿತ್ಯ ತತ್ತ್ವಗಳನ್ನು ಮೀರಿ ಬರೆಯುವ ಅಗತ್ಯವನ್ನು ಇಲ್ಲಿ ಸೂಚಿಸಿದ್ದಾನೆ.

ಹರ್ನಾನಿ (1830) ಇವನ ಅತ್ಯಂತ ಪ್ರಸಿದ್ಧ ನಾಟಕ ಕೃತಿ. ಫ್ರೆಂಚ್ ರಂಗಭೂಮಿಯ ಹೊಸ ದಿಕ್ಕಿಗೆ ಇದು ಕಾರಣವಾಯಿತಲ್ಲದೆ, ಇವನನ್ನು ರೊಮ್ಯಾಂಟಿಕ್ ಯುಗದ ಮುಂಚೂಣಿಗೆ ತಂದು ನಿಲ್ಲಿಸಿತು. ದ ಕಿಂಗ್ ಈಸ್ ಅಮ್ಯೂಸ್ಡ್ (1832), ರೇಬ್ಲಾಸ್ (1838), ಲೀವ್ಸ್ ಆಫ್ ಆಟಂ (1831), ಸಾಂಗ್ಸ್ ಆಫ್ ಟ್ವಿಲೈಟ್ (1835) ಇನ್ನರ್ ವಾಯ್ಸಸ್ (1837), ರೇಸ್ ಅಂಡ್ ಶಾಡೋಸ್ (1840) ಮೊದಲಾದುವು ಇವನ ಇತರ ಕೃತಿಗಳು.

ದ ಚಸ್ಟಿಸ್‍ಮೆಂಟ್ಸ್ (1853) ವಿಡಂಬನಾ ಕಾವ್ಯ ಸಂಗ್ರಹ. ದಿ ಕಾನ್‍ಟೆಂಪ್ಲೇಷನ್ಸ್ (1856), ದ ಲೆಜೆಂಡ್ ಆಫ್ ಸೆಂಚುರೀಸ್ (1859), ಲೆಸ್ ಮಿಸರಬಲ್ (1862) ಕೃತಿಗಳು ಗಡೀಪಾರಾಗಿದ್ದ ಸಂದರ್ಭದಲ್ಲಿ ಈತ ಬರೆದುವು.

ಇವನು ಪ್ರಸಿದ್ಧಿಗೆ ಬಂದದ್ದು ನಾಟಕಗಳಿಂದಲೆ ಆದರೂ ಬ್ರಿಟನ್ ಹಾಗೂ ಸಂಯುಕ್ತ ರಾಷ್ಟ್ರಗಳಲ್ಲಿ ಇವನನ್ನು ಶ್ರೇಷ್ಠ ಕಾದಂಬರಿಕಾರ ಎಂದು ಗುರುತಿಸಲಾಗಿದೆ. ಫ್ರಾನ್ಸ್‍ನಲ್ಲಿ ಇವನ ಕಾವ್ಯಗಳಿಗೆ ಅಪಾರ ಮನ್ನಣೆ ದೊರೆತಿದೆ. ಈತ 1885ರಲ್ಲಿ ನಿಧನನಾದ. (ಜಿ.ಎನ್.ಎಸ್.)