ವಿಷಯಕ್ಕೆ ಹೋಗು

ಯಾರು ಒಲಿದರೇನು

ವಿಕಿಸೋರ್ಸ್ದಿಂದ

ಯಾರು ಒಲಿದರೇನು?

[ಸಂಪಾದಿಸಿ]
ರಾಗ: ಆನಂದಭೈರವಿ, ತಾಳ: ಆದಿ;

                                           
ಯಾರು ಒಲಿದರೇನು ನಮಗಿ-ನ್ನಾರು ಮುನಿದರೇನು
ಕ್ಷೀರಸಾಗರಶಾಯಿಯಾದವನ ಸೇರಿದಂಥ ಹರಿದಾಸರಿಗೆ || ಪಲ್ಲವಿ||

ಊರನಾಳುವ ದೊರೆಗಳು ನಮ್ಮನು ದೂರ ಅಟ್ಟಿದರೇನು
ಘೋರಾರಣ್ಯದಿ ತಿರುಗುವ ಮೃಗಗಳು ಅಡ್ಡಗಟ್ಟಿದರೇನು
ಮಾರಿಹಿಂಡು ಮತ್ತೆ ಮುಸುಕಿನ ದಂಡು ಮೈಗೆ ಮುತ್ತಿದರೇನು
ವಾರಿಜನಾಭನ ವಸುದೇವಸುತನ ಸಾರುವಂಥ ಹರಿದಾಸರಿಗೆ |೧ ||

ಪಡೆದ ತಾಯಿ ತಂದೆ ನಮ್ಮೊಳು ಅಹಿತ ಮಾಡಿದರೇನು
ಮಡದಿ ಮಕ್ಕಳು ಮನೆಯ ನೆಂಟರು ಮುನಿಸುಗುಟ್ಟಿದರೇನು
ಒಡನಾಡುವ ಗೆಳೆಯರು ನಮ್ಮೊಳು ವೈರವ ಬೆಳೆಸಿದರೇನು
ಕಡಲಶಯನ ಕರುಣಾನಿಧಿ ನಾಮವು ಒಡಲೊಳಗಿಹ ಹರಿದಾಸರಿಗೆ || ೨ ||

ಕಾನನದೊಳ್ಹರಿದಾಡುವ ಸರ್ಪವು ಕಾಲಿಗೆ ಸುತ್ತಿದರೇನು
ಜೇನಿನಂದದಿ ಕೀಟ ಕ್ರಿಮಿಗಳು ಚರ್ಮಕೆ ಮುತ್ತಿದರೇನು
ಭಾನುನಂದನ ಬುಧ ಮಂಗಳರಾ ಬಲವು ತಪ್ಪಿದರೇನು
ದೀನನಾಥ ಶ್ರೀ ಪುರಂದರವಿಠಲನ ಧ್ಯಾನವುಳ್ಳ ಹರಿದಾಸರಿಗೆ || ೩ ||[]
ರಚನೆ : ಪುರಂದರದಾಸರು.

ಪರಿವಿಡಿ

[ಸಂಪಾದಿಸಿ]

ಉಲ್ಲೇಖ

[ಸಂಪಾದಿಸಿ]
  1. ದಾಸವಾಣಿ