ವಿಮೋಚನೆ/ಶುಕ್ರವಾರ

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
...ಶುಕ್ರವಾರ

ಈತನಗಿನ್ನೂ ಎಳೆಯ ವಯಸ್ಸು. ಮೂವತ್ತೊ ಮೂವತ್ತೆ ರಡೊ. ಇಷ್ಟರಲ್ಲೆ ಈತ ಪ್ರಸಿದ್ಧನಾದ ಡಾಕ್ಟರ್. ಜೈಲಿನ ವೈದ್ಯ ಕೀಯ ಅಧಿಕಾರಿ. ಈತನ ಜೀವನದ ಇತಿಹಾಸವನ್ನು ನಾನು ಸ್ವಲ್ಪ ಮಟ್ಟಿಗೆ ಕೇಳಿ ತಿಳಿದಿದ್ದೇನೆ ಇವನು ಕಷ್ಟಪಟ್ಟೇ ಓದಿದನಂತೆ. ವಿದ್ಯಾರ್ಥಿ ವೇತನ, ಹೆಣ್ಣು ಕೊಡಲು ಬಂದ ಮಾವನಿಂದ ಮುಂಗಡ ಹಣ, ಅವರಿವರ ಸಹಾಯ.......ಜೊತೆಯಲ್ಲಿ ಕಟ್ಟು ನಿಟ್ಟುನ ಜಿಪುಣ ಜೀವನ. ಆದರೆ ಯಾರನ್ನಾದರೂ ಚಕಿತಗೊಳಿಸುವಂತಹ ದೇಹ ಸೌಷ್ಟವವಿದೆ ಈತನಿಗೆ--ಸುಂದರ ಕಾಯ. ಆ ಕೆನ್ನೆಗಳು ಕೆಂಪಗಿವೆ-- ಈಗ ತಾನೆ ಪ್ರೇಯಸಿ ಅವುಗಳ ನೆಮ್ಮದಿಗೆ ಭಂಗ ತಂದಹಾಗೆ. ನುಟು ಪಾದ ತಲೆಗೂದಲಲ ಸುರುಳಿ ಸುರುಳಿಯಾಗಿ ಬಾಚಣಿಗೆಯ ಹತೋ ಟಿಗೆ ಸಿಗದೆ ಗಾಳಿಯಲ್ಲಿ ಓಲಾಡುತ್ತಿದೆ. ಮುಗುಳುನಗೆಯೊಂದು ಬೇಕೋ ಬೇಡವೋ ಎನ್ನುವಂತೆ ತುಟಿಗಳ ಮೇಲೆ ಮಿನುಗಿ ಮಾಯ ವಾಗುತ್ತಿದೆ. ಆತನ ಪೋಷಾಕು ಶುಭ್ರವಾಗಿ ಮೋಹಕವಾಗಿದೆ. ಸ್ವೆತಸ್ಕೋಪನ್ನು ಒಂದು ಕೈಯಲ್ಲಿ ಹಿಡಿಯುತ್ತ ಎಡಬಲಕ್ಕೆ ನೋಡುತ್ತಾ ಆತ ಹೋಗುತ್ತಿದ್ದರೆ, ಮತ್ತೆ ಮತ್ತೆ ಅವನನ್ನೆ ನೋಡುವ ಹಾಗಿರುತ್ತದೆ. ಶ್ರೀಮಂತವರ್ಗಕ್ಕೆ ಮೀಸಲಾದ ಈ ಸೊಬಗು ಸಂ ಪತ್ತು, ಬಡ ಕುಟುಂಬದಲ್ಲಿ ಹುಟ್ಟಿ ಬಂದ ನಮ್ಮ ಡಾಕ್ಟರರ ಸೊತ್ತಾ ಗಿದೆ. ಬಡವರೆಲ್ಲಾ ಸಾಮಾನ್ಯವಾಗಿ ತಮ್ಮ ಆವರಣದ ಕೂಸುಗ ಳಾಗಿ ಬಾಗಿ ಬೆಳೆಯುತ್ತಾರೆ. ಆ ಅವರಣವನ್ನೂ ಏರಿ ತಲೆ ಯೆತ್ತಿ ಸೆಟಿದು ನಿಲ್ಲುವವರ ಸಂಖ್ಯೆ ಬಲು ಕಡಿಮೆ.

ಆ ಕಡಿಮೆ ಸಂಖ್ಯೆಯವರಲ್ಲಿ ಒಬ್ಬರು ಈ ಡಾಕ್ಟರು-- ನಾನಿದ್ದ ಹಾಗೆ,ನನ್ನ ಹಾಗೆ.

ಪ್ರತಿ ದಿನವು ಬೆಳಿಗ್ಗೆ ಈತ ಸೆರೆಮನೆಯ ಒಳಗೆ ಒಂದು ಸುತ್ತು ಬರಬೇಕು. ಸಮಾಜದಿಂದ ಬಾಹಿರರಾದ, ಸಮಾಜ ರಕ್ಷಕರು ಗೊತ್ತು ಮಾಡಿದ ನೀತಿ ನಿಯಮಗಳಿಗೆ ವ್ಯತಿರಿಕ್ತವಾಗಿ ನಡೆದ, ರೋಗಿಗಳನ್ನು ಆತ ಪರೀಕ್ಷಿಸಬೇಕು. ಆ ಮನಸ್ಸಿನ ಒಳಹೊಕ್ಕು ಆತನ ಮನೋ ವ್ಯಾಪಾರಗಳನ್ನು ತಿಳಿದುಕೊಳ್ಳಲು ನಾನು ಯತ್ನಿಸಿದ್ದುಂಟು. ಆತನ ಪಾಲಿಗೆ ಇವೆಲ್ಲವು ಸಾಮಾನ್ಯ ವಿಷಯಗಳಾಗಿದ್ದವು. ರೋಗಿಗಳು ಕೈದಿಗಳಾಗಿದ್ದರೇನು ? ಸ್ವತಂತ್ರರಾಗಿದ್ದರೇನು ? ಅವನ ಪಾಲಿಗೆ ಎಲ್ಲರೂ ಒಂದೇ. ಇಲ್ಲಿಯೂ ಆತ ಗೆಳತನದಿಂದ ಸಿರಿವಂತಿಕೆಯಿಂದ ನಡೆನುಡಿಯಿಂದ ಪ್ರಭಾವಿತನಾಗುತ್ತಾನೆ,ಈತ ನನ್ನ ವಕೀಲರ ಸ್ನೇಹಿತ-ಸೆರೆ ಮನೆಯ ಅಧಿಕಾರಿ ಇರುವ ಹಾಗೆ. ಆ ಕಾರಣ ದಿಂದಲೇ ನನ್ಸ ಬಗೆಗೆ ಇಲ್ಲದ ಆಸಕ್ತಿ ಅವನಿಗೆ.

"ಹಲೋ ಚಂದ್ರಶೇಖರ್-ಹೇಗಿದೀರಾ?"

"ಇದೀನಿ ಡಾಕ್ಟರೆ-ಹೀಗೇ ಇದೀನಿ. ನಿಮ್ಮ ಕೃಪೆ ಇರು ವಾಗ ಚಿಂತೆ ಯಾತರದು?

"ಏನಂತಾ ಇದೆ ನಿಮ್ಮ ಕರುಳು?""

"ಓ ಬಿಡಿ,ಡಾಕ್ಟರೆ. ಕರುಳಿಗೇನು? ಅದರ ಗೋಳು ನನಗೆ ತೀರಾ ಸಾಮಾನ್ಯವಾಗಿದೆ."

"ಹಾಗನ್ಬಾರದು ಇವರೆ. ಒಂದು ಸಾರಿ ಸರಿಯಾಗಿ ಪರೀಕ್ಷೆ ಮಾಡೋಣ. ವೈದ್ಯವೃತ್ತಿಗೇ ಸವಾಲು ಹಾಕೊ ಕಾಹಿಲೆ ಅದೆಂ ಥದೋ ನೋಡೋಣ."

ಹಾಗೆ ಹೇಳುವಾಗ ಆತನ ಮುಖ ಗಂಭೀರವಾಯಿತು. ಸೋಲ ನ್ನೊಪ್ಪಿಕೊಳ್ಳಲು ಯಾವ ಡಾಕ್ಟರೂ ಇಷ್ಟಪಡುವುದಿಲ್ಲ...

ಡಾಕ್ಟರು ಮುಂದೆ ಹೋದಮೇಲೆ ಮತ್ತೆ ಅದೇ ಮೌನ. ಯಾರ ತೊಂದರೆಯೂ ಇಲ್ಲದೆ ಬರೆಯುತ್ತ ಹೋಗುವ ಅವಕಾಶ.

ಈ ದಿನ ಶುಕ್ರವಾರ. ನನ್ನ ಜೀವನವೃತ್ತದ ದೀರ್ಘ ಪಯಣದಲ್ಲಿ ಬಾಲ್ಯದ ಹರದಾರಿಗಳನ್ನು ಹಾದು ಬಂದಿದ್ದೇನೆ. ದೂರದ ಮುಂಬಯಿಯಿಂದ ಮತ್ತೆ ಊರಿಗೆ ಮರಳಿದ್ದೇನೆ.

ಈ ಡಾಕ್ಟರು--

ಹದಿನೆಂಟು-ಹತ್ತೊಂಭತ್ತು ವರ್ಷಗಳ ಹಿಂದೆ ಪ್ರಾಯಶಃ ಈತ ಮಿಡಲ್ ಸ್ಛೂಲ್ ಪರೀಕ್ಷೆ ಮುಗಿಸುತ್ತಲಿದ್ದನೇನೋ. ಆದರೆ ನಾನು ಜೀಬಿನಲ್ಲಿ ದುಡ್ದಿಟ್ಟುಕೊಂಡು,ಕಣ್ಣುಗಲ್ಲಿ ಭಯ ಭೀತಿಯ ಗೂಂದಲ ತುಂಬಿಕೂಂಡು,ಒಬ್ಬ ಡಾಕ್ಟರಿಗಾಗಿ ಬೀದಿ ಅಲೆಯುತ್ತಿದ್ದೆ.

ನಾನು ಊರಿಗೆ ಹಿಂತಿರುಗಿದಾಗ ಅಜ್ಜಿಯ ಜೀವ ಕೊನೆಯ ಹೋರಾಟ ನಡೆಸಿತ್ತು. ನಾನು ಊರು ಸೇರಿದ್ದು ಸಂಜೆ. ಬೀದಿ ಯುದ್ದಕ್ಕೂ ಧಾವಿಸಿ ಹೋಗಿ ಅಂಗಳದೊಳಕ್ಕೆ ನಾನು ಕಾಲಿರಿಸಿದೆ. ಎದುರಿನ ಕೂಟ್ಟಗೆಯಿಂದ ಸೆಗಣಿ ಗಂಜಳದ ವಾಸನೆ ಬರುತಿತ್ತು. ನಮ್ಮಜ್ಜಿಯ ಎಮ್ಮೆ ಕರು.........ಒಳಗೆ ಚಿಮಿಣಿಯ ದೀಪವೊಂದು ಗಾಳಿಯಲ್ಲಿ ತೊರಾಡುತಿತತ್ತು.ಅಲ್ಲಿಯೇ ಚಾವೆಯ ಮೇಲೆ ಮಲಗಿತ್ತು ಆ ಜೀವ.ಕ್ಷೀಣವಾಗಿದ್ದ ದೇಹ,ಬೆಳ್ಳಿ ಕೊದಲಿಂದ ಮುಚ್ಚಿಹೋಗಿದ್ದ ತಲೆ,ಗುಳಿ ಬಿದ್ದಿದ್ದ ಕಣ್ಣುಗಳು,ಎದ್ದು ನಿಂತು ಅಣಕಿಸುತ್ತಿದ್ದ ಕಪೋಲದ ಎಲುಬುಗಳು...ಜೊತೆಯಲ್ಲೆ ರೋಗಿಯ ದೇಹದಿಂದ ಸಾಮಾನ್ಯವಾಗಿ ಹೊರಡುವ ದುರ್ಗಂಧ.........ನನ್ನಜ್ಜಿ......

"ಅಜ್ಜೀ ಅಜ್ಜೀ....."

ಆಕೆ ಮೆಲ್ಲನೆ ಕಣ್ಣು ತೆರೆದರು.ಆ ಒಂದು ನಿಮಿಷ ನನ್ನ ಪಾಲಿಗೆ ಯುಗವಾಗಿತ್ತು.ನನ್ನ ಎಳೆಯ ಬಾಳನ್ನು ಹಸನಾಗಿ ಇರಿಸಿದ ಆತ್ಮೀಯ ಜೀವ ಹೀಗೆ ನರುಳುತ್ತಿದ್ದಾಗ ನಾನು ದೂರದ ಊರಿನಲ್ಲಿ ದಿನ ಕಳೆದಿದ್ದೆ.ನಾನು ಪಾಪಿ,ನಿಷ್ಕರುಣಿ.ಆ ವಿಷಯದಲ್ಲಿ ಸಂದೇಹವೇ ಇರಲಿಲ್ಲ.

"ಯಾರು?"

ಆ ಸ್ವರ ಕ್ಷೀಣವಾಗಿತ್ತು.

"ನಾನಜ್ಜೀ, ನಾನು-ಚಂದ್ರು. ನಾನಜ್ಜೀ, ನಾನು."

ಹೇಳಿದ್ದನ್ನೆ ನಾನು ಪುನರುಚ್ಚರಿಸುತ್ತಿದ್ದೆ. ಆ ಜೀವ ನನ್ನನ್ನು ಗುರುತು ಹಿಡಿಯುವುದಲ್ಲವೆ? ತಪ್ಪುಗಳನ್ನು ಮರೆತು ಕ್ಷಮಿಸುವು ದಲ್ಲವೆ ?

" ಯಾರು ಮಗು, ಯಾರಪ್ಪ ?"

-ಮತ್ತೆ ಕ್ಷೀಣವಾದ ಸ್ವರ ತೊದಲಿತು. ಆ ದೃಷ್ಟಿಗಳು ಯೋಚನಾಮಗ್ನವಾಗಿದ್ದವು. ಸ್ವಲ್ಪ ಗಟ್ಟಿಯಾಗಿಯೆ, ದುಡುಕಿನ ಸ್ವರದಲ್ಲೆ, ಉತ್ತರವಿತ್ತೆ.

"ನಾನಜ್ಜೀ, ಚಂದ್ರು-ಚಂದ್ರಶೇಖರ. ಬೊಂಬಾಯಿಂದ ಬಂದಿದೀನಿ ಅಜ್ಜೀ."

ನನ್ನೆದೆ ಡವಡವನೆ ಹೊಡೆದುಕೊಳ್ಳುತಿತ್ತು. ಅಜ್ಜಿ ನನ್ನ ನ್ನೆಂದಿಗೂ ಗುರುತಿಸಲಾರರೆ ಹಾಗಾದರೆ?ನಾನು ತಡವಾಗಿ ಬಂದೆನೆ? ಬಂದುದು ತಡವಾಯಿತೆ?

"ಚಂದ್ರೂ ಚಂದ್ರೂ" ಎಂದು ಅವರ ನಾಲಿಗೆ ತೊದಲಿತು. ನಾನು ಕೈ ಚೀಲವನ್ನು ನೆಲದ ಮೇಲಿರಿಸಿ,ಅಜ್ಜಿಯ ಕೈಯ ಮೇಲೆ ಮುಖದ ಮೇಲೆ ತಲೆಯ ಮೇಲೆ ಕೈ ಓಡಿಸಿದೆ. ನನ್ನ ಅಜ್ಜಿ ಮತ್ತೆ ಹೆಸರು ಹಿಡಿದು ನನ್ನನ್ನು ಕರೆದಿದ್ದರು ! ನನ್ನ ನೆನಪಿತ್ತು ಅವರಿಗೆ! ಮಾತು ಮೀರಿ ಪರದೇಶಿಯಾಗಿ ಹೋದ ನನ್ನ ನೆನಪಿತ್ತು !

ನಾನು ಬಂದುದರಿಂದ ಅವರಿಗಾದ ಸಂತೋಷ ಆಪರಿಮಿತ ವಾಗಿತ್ತು. ಆ ಅನುಭವವನ್ನು ದಾಟಿ ತಿರುಗಿ ಮಾತಾಡಲು ಬಲು ಹೊತ್ತು ಹಿಡಿಯಿತು. ಆ ಬತ್ತಿದ ಬಾವಿಯಂತಹ ಕಣ್ಣುಗಳಿಂದ ಕಂಬನಿಯ ಒರತೆಗಳು ಚಿಮ್ಮಿ ಬಂದುವು. ನನಗೆ ಕಸಿವಿಸಿಯಾಯಿತು. ಆಕೆಯ ಬಲಹೀನ ಬಲಗೈ ನನ್ನ ಮೈದಡವುತಿತ್ತು.

"ಬಂದಿಯಾ ಚಂದ್ರು? ಬಂದಿಯೇನೋ ಮರಿ?"

ಮರಿಯೇನೋ ಬಂದಿದ್ದ. ಆದರೆ-ಆದರೆ?

ಆಗಲೆ ಹೇಳಿದೆನಲ್ಲ? ನನಗೆ ಡಾಕ್ಟರರ ಅವಶ್ಯತೆ ಇತ್ತು. ನಾನು ಅಲ್ಲಿ ಇಲ್ಲಿ ಓಡಿದೆ. ಯಾರನ್ನೊ ಕರೆದುತಂದೆ. ಆದರೆ ಆ ವರೆಗೆ ನನ್ನ ಅಜ್ಜಿಗೆ ಆಲ್ಪ ಸ್ವಲ್ಪ ಸಹಾಯ ಮಾಡತ್ತಿದ್ದ ನೆರೆ ಮನೆಯವರು, ನನಗೆ ತಂತಿ ಕಳುಹಿದ್ಡವರು, ನನ್ನ ಓಡಾಟವನ್ನು ತಿರ ಸ್ಕಾರದಿಂದ ನೋಡಿದರು. ಆನ್ಯ ಜಾತಿಯ ಫೋಲಿ ಹುಡುಗನೊಬ್ಬ ಮರಣೋನ್ಮುಖಳಾದ ವೃದ್ದ ಸ್ತ್ರೀಯೊಬ್ಬಳ ಶುಷ್ರೊಷೆ ಮಾಡುವು ದೆಂದರೇನು? ಆದರ ಅರ್ಥವೇನು?

ಅರ್ಥವಿತ್ತು ಅದಕ್ಕೆ. ಅಜ್ಜಿಯ ಅಸ್ತಿಯನ್ನು ಹೊತ್ತು ಹಾಕಲು ನಾನು ಯತ್ನಿಸುತ್ತಿದ್ದೆನೆಂದು ಅವರು ಬಹಿರಂಗವಾಗಿಯೇ ಆರೋಪಿ ಸಿದರು.

ನಾನು ಬಂದ ಮೂರನೆಯ ದಿನ ಅಜ್ಜಿ ಎದ್ದು ಕುಳಿತುಕೊಳ್ಳಲು ಸಮರ್ಥರಾದರು. ತನ್ನನ್ನು ಅದೆ ಕ್ಷಣವೊ ಬಿಟ್ಟಿರಬಾರದೆಂದು ಅಜ್ಞೆ ಕೊಟ್ಟರು. ವಾಂತಿ ಬೇದಿ ನಿಂತು, ಜ್ವರ ಇಳಿಮುಖವಾಗಿತ್ತು. ಲೋಕವನ್ನು ನೋಡಿ ನಗುತಲಿತ್ತು ಮೂಳೆಯ ಹಂದರ......ಆ ನೆರೆಮನೆಯವರು ದೂರವೇ ನಿಂತರು. ತಮ್ಮ ಆಚಾರ ನೀತಿಗಳಿಗೆ ನನ್ನಿಂದ ಆತಂಕವಾಗಬಾರದೆಂದು ದೂರವೇ ನಿಂತರು.

ಆಕೆಯನ್ನು ಬಿಟ್ಟುಹೋಗಿ ನಾನು ಮಾಡಿದ ಅಪರಾಧಕ್ಕೆಲ್ಲಾ ಪ್ರಾಯಶ್ಚಿತ್ತ ಎನ್ನುವಂತೆ, ಹಗಲೂ ರಾತ್ರಿ ನಿಷ್ಟೆಯಿಂದ ಆ ಮುದುಕಿಯ ಸೇವೆ ಮಾಡಿದೆ.

ಆದರೆ ಕಾಹಿಲೆ ಮರಳಿ ಬಂತು.

ನಾನು ದಿಗ್ಮೂಡನಾದೆ. ಈ ರೋಗದಿಂದ ಅಜ್ಜಿಗೆ ಬಿಡುಗಡೆಯೇ ಇಲ್ಲವೆ ಹಾಗಾದರೆ?

ನಾನು ನಮ್ಮ ಬೀದಿಯ ದೊಡ್ಡ ಡಾಕ್ಟರಲ್ಲಿಗೆ ದಾವಿಸಿದೆ.

ಬಂದಿದ್ದ ರೋಗಿಗಳೆಲ್ಲಾ ಹಿಂತಿರುಗಿದ ಮೇಲೆ ಅವರು ನನ್ನನ್ನು ಮಾತನಾಡಿಸಿದರು.

"ಏನಪ್ಪ, ಏನು ವಿಶೇಷ?"

"ನಮ್ಮಜ್ಜಿಗೆ ಸಾರ್, ನಮ್ಮಜ್ಜಿಗೆ ಕಾಹಿಲೆ ಸಾರ್."

"ಏನು ಕಾಹಿಲೆಯೋ?"

"ವಾಂತಿ ಬೇದಿ ಸಾರ್. ನಿಂತಿತ್ತು, ಆದರೆ ತಿರ್ಗಾ ಹತ್ಕೊಂಡು.

ಬಿಟ್ಟಿದೆ."

"ಶೀಷೆ

ತಂದಿದೆಯೇನು?"

ನಾನು ಶೀಷೆ ತಂದಿರಲಿಲ್ಲ. ಆ ಹೆಸರಾಂತ ಡಾಕ್ಟರನ್ನು ನಮ್ಮ ಮನೆಗೆ ಕರೆದೊಯ್ಯುವುದು ನನ್ನ ಉದ್ದೇಶವಾಗಿತ್ತು.

"ನೀವು ಒಂದುಸಾರಿ ಬಂದು ಅಜ್ಜಿನ ನೋಡ್ಬೇಕು ಡಾಕ್ಟರೆ."

ಅವರು ನನ್ನನ್ನೆ ದಿಟ್ಟಿಸಿ ನೋಡಿದರು.

"ವಿಸಿಟಿಂಗ್ ಫೀಸ್ ಕೊಡ್ತಿಯೇನು ?"

"ಎಷ್ಟು ಸಾರ್?"

"ಐದು ರೂಪಾಯಿ."

ನನ್ನಲ್ಲಿ ಹಣವಿತ್ತು. ನಾನು ಮುಂಗಡವಾಗಿಯೇ ಅವರ ಫೀಸ್ ಕೊಟ್ಟೆ. "ಹೋಗು ಜಟಕ ಮಾಡ್ಕೊಂಡು ಬಾ." ಆಗಿನ ಕಾಲದಲ್ಲಿ

ಡಾಕ್ಟರೆಲ್ಲಾ ಕಾರುಗಳನ್ನಿಡುವಸ್ಟು ರೋಗ ಗಳು ಪ್ರಬಲವಾಗಿರಿಲಿಲ್ಲ; ರೋಗಿಗಳು ಬಡಕಲಾಗಿರಲಿಲ್ಲ. ನಾನು ಜಟಕ ತಂದೆ. ಕತ್ತೆಯಂತ್ತಿದ್ದ ಆ ಕುದುರೆ ಡಾಕ್ಟರರ ಭಾರವನ್ನೂ ನನ್ನನ್ನೂ ಎಳೆದು ಮನೆಗೆ ಕೊಂಡೊಯ್ದಿತ್ತು. ಡಾಕ್ಟರರ ಪರೀಕ್ಷೆ ಎರಡು ನಿಮಿಷವೂ ಇರಲಿಲ್ಲ. ಐದು ರೂಪಾಯಿ ವಿಸಿಟಿಂಗ್ ಫೀಸ್ ಕೊಟ್ಟ ಗಿರಾಕಿಯ ಮನೆಯಲ್ಲಿ ಕುಳಿತು ಕೊಳ್ಳಲು ಒಂದು ಕುರ್ಚಿಯೂ ಇರಲಿಲ್ಲ. ನನ್ನಜ್ಜಿಯನ್ನು ಮುಟ್ಟಿದ ಮೇಲೆ ಕೈ ತೊಳೆಯಲು ಬಿಸಿ ನೀರಿರಲಿಲ್ಲ. ಹಚ್ಚಲು ಸೋಪಿ ರಲಿಲ್ಲ. ಕೈ ಒರೆಸಲು ಶುಭ್ರವಾದ ಬಟ್ಟೆಯಿರಲಿಲ್ಲ ಆದರೂ ಅವರು ಪರೀಕ್ಶೆ ಮುಗಿಸಿದರು. ಮನೆಯೊಳಗಿನ ದುರ್ಗಂದದ ಒತ್ತಡಕ್ಕೆ. ಸಿಲುಕಿ, ಆವರ ಮೂಗಿನ ಸೊಳ್ಳೆಗಳು ಚಡಪಡಿಸುತ್ತಿದ್ದವು.

"ನಾನು ಹೋಗಿರ್ತೀನಿ- ಶೀಷೆ ತಗೊಂಡು ಬಂದ್ಬಿಡು. ಕೊಡ್ತೀನಿ."

ವಾಪಸು ಹೋಗುವಾಗ ಗಾಡಿಯಲ್ಲಿ ನಾನಿರಲಿಲ್ಲ. ಕಡು ಬಡವ ನಂತಿದ್ದ ನಾನು ನಡೆದು ಬರುವುದು ಸಾಧ್ಯವಿತ್ತು.

ಆ ಔಷಧಿಯಿಂದಲೂ ಅಜ್ಜಿಗೆ ಗುಣವಾಗಲಿಲ್ಲ.

ಅದಾದ ಎರಡು ದಿನಗಳ ಮೇಲೆ ಅಜ್ಜಿ ನನ್ನನ್ನು ಸಮಿಪಕ್ಕೆ ಕರೆದು, ನನಗೊಂದು ಕೆಲಸ ವಹಿಸಿಕೊಟ್ಟರು.

"ಒಬ್ಬರು ವಕೀಲರನ್ನ ಕರಕೊಂಡು ಬಾ."

"ವಕೀಲರು ? ವಕೀಲರೆ-ಡಾಕ್ಟರೆ ? ಯಾರಜ್ಜಿ ?"

"ವಕೀಲರು ಕಣೋ. ಕರೆ ಕೋಟು ಹಾಕಿ ಪೇಟ ಇಟ್ಕೋತಾ ರಲ್ಲಾ. ಅಂಥವರು ಕಣೋ--ವಕೀಲರು."

"ಅಂಥವರು ಯಾಕಜ್ಜೀ ?"

"ನೀನು ಕರೊಂಬಾ,ಹೇಳ್ತಿನಿ" ಆದರೆ ಆ ಕರಿಯ ಕೋಟಿನವರೂ ಫೀಸಿನ ಪ್ರಸ್ತಾಪಮಾಡಿದರು. ಅವರನ್ನೂ ಬಡಕಲು ಕುದುರೆಯೊಂದು ನಮ್ಮ ಮನೆಗೆ ಎಳೆದು ತಂದಿತು.

ಅಜ್ಜಿ ಆ ವಕೀಲರ ನೆರವಿನಿಂದ ತಮ್ಮ ಮರಣ ಶಾಸನ ಬರೆಸಿ ದರು. ತಮ್ಮ ಗಂಡನಿಂದ ತಮಗೆ ದೊರೆತಿದ್ದ ಆ ಮನೆ-ಅಂಗಳ ವೆಲ್ಲಾ, ನನಗೆ ಸೇರಿದುದೆಂದು ಅವರು ಬರೆಸಿದರು. ತಾನು ಕಾಹೀಲೆ ಬಿದ್ದಾಗ ತನ್ನನ್ನು ನೋಡಿಕೊಂಡ ನೆರೆಮನೆಯವರಿಗೆ ಉಳಿದಿದ್ದ ಒಂದೇ ಒಂದು ಎಮ್ಮೆಯನ್ನೂ ಅದರ ಕರುವನ್ನೂ ವಹಿಸಿಕೊಟ್ಟರು.

"ಚಂದ್ರೂ ಬರೋತನಕ ಕಷ್ಟ ಪಟ್ಟು ನನ್ನ ನೋಡ್ಕೊಂಡಿರಿ. ಅಷ್ಟೇ ಅಲ್ದೆ,ಆ ಪಾಪಿಗಳು ಯಾರೂ ಸಂಬಂಧಿಕರು ಅಂತ ಬಡ ಕೊಂಡು ಈವರೆಗೆ ಹತ್ತಿರ ಬರದಹಾಗೆ ಮಾಡಿದಿರಿ. ಆ ಋಣಾನೆಲ್ಲಾ ಸಂದಾಯ ಮಾಡೋದು ಸಾದ್ಯವೇ ಇಲ್ಲ...ಆದರೂ ಈ ಎಮ್ಮೇನ ನೀವು ತಗೋಬೇಕು--ಖಂಡಿತಾ ತಗೋಬೇಕು."

ಆ ವಕೀಲರು ಇಪ್ಪತ್ತೈದು ರೂಪಾಯಿ ಸಂಪಾದಿಸಿಕೊಂಡು ತಮ್ಮ ಮನೆಗೆ ಹೋದರು. ಎಮ್ಮೆ ಅಂದಿನಿಂದಲೇ ನೆರೆಮನೆ ಸೇರಿತು.

"ಯಾಕೆ ಹೀಗ್ಮಾಡ್ತಾ ಇದ್ದೀರಿ ಅಜ್ಜಿ ? ನಿಮಗೆ ಗುಣವಾ ಗುತ್ತೆ. ನಾಳೆ ನಾಡಿದ್ದರಲ್ಲಿ ಗುಣವಾಗುತ್ತೆ."

ನಾನೇನೋ ಸಮಾಧಾನದ ಮಾತುಗಳನ್ನಾಡುತ್ತಿದ್ದೆ. ಆದರೆ ಆ ಮಾತುಗಳಲ್ಲಿ ತಿರುಳಿರಲಿಲ್ಲವೆನ್ನುವುದು ನನಗೆ ಗೊತ್ತಿತ್ತು. ನನ್ನ ಅಜ್ಜಿಯ ಕೊನೆಯ ಘಳಿಗೆ ಸಮೀಪಿಸುತ್ತಲಿತ್ತು. ಸಾವು ನನಗೆ ಅಪರಿಚಿತವಾಗಿರಲಿಲ್ಲ. ತಂದೆಯ ಸುತ್ತಲೂ ಬಲು ಸುಲಭವಾಗಿ ಅದು ಬಲೆ ಬೀಸಿ ಆತನ ಜೀವ ಹಿಂಡಿದ್ದನ್ನು ನಾನು ಕಂಡಿದ್ದೆ. ಈಗ ಇನ್ನೊಂದು ಜೀವ. ಇದಾದ ಮೇಲೆ ನನ್ನವರೆನ್ನುವ ಒಬ್ಬರು ಈ ಪ್ರಪಂಚದಲ್ಲಿ ಇಲ್ಲವೇ ಇಲ್ಲ. ಆಗ ನಾನು ಏಕಾಕಿ. ಈ ಪ್ರಪಂಚ ಒತ್ತಟ್ಟಿಗೆ--ನಾನು ಒತ್ತಟ್ಟಿಗೆ.

ಮರು ದಿನ ದೂರದ ಊರಿನಿಂದ ಇಬ್ಬರು ಬಂದರು. ಒಬ್ಬರ ಜುಟ್ಟು ಶಾಲುಗಳು ವಿಭೂತಿ ನಾಮಗಳು ಅವರ ಮಡಿವಂತಿಕೆಯನ್ನು ತೋರಿಸುತ್ತಿದ್ದವು. ಇನ್ನೊಬ್ಬ ಎಳೆಯ ಹುಡುಗ--ಆ ಮಡಿವಂತಿಕೆಯ ಮರಿ. ತಾವು ಅಜ್ಜಿಯ ಸಂಬಂಧಿಕರೆಂದು ಇವರು ಜಾಹೀರು ಮಾಡಿಕೊಂಡರು. ನನ್ನನ್ನು ಆ ವ್ಯಕ್ತಿ ಕೆಂಗಣ್ಣಿನಿಂದ ನೋಡಿದ. ನಶ್ಯ ತೀಡುತ್ತಾ ನೆರೆ ಮನೆಯವರ ಎಡುರು ನನ್ನನ್ನು ಉದ್ದೇಶಿಸಿ, "ಯಾವುದು ಇದು--ಮುಂಡೇದು?" ಎಂದು ಕೇಳಿದ.

ಕಾಹಿಲೆಯಿಂದ ನರಳುತ್ತಿದ್ದ ಅಜ್ಜಿ ಅಲ್ಲದೆ ಇರುತ್ತಿದ್ದರೆ,ಈ ಮುಂಡೇದು ಯಾವುದೆಂಬುನ್ನು ಆತನಿಗೆ ಬಲು ಸುಲಭವಾಗಿ ತೋರಿಸಿಕೊಡುತ್ತದ್ದೆ.

ಆದರೆ ಅಜ್ಜಿಯೇ ನನ್ನ ಪಾಲಿನ ಕೆಲಸ ಮಾಡಿದರು.

"ಶಂಕರಾ " ಎಂದು ಆಕೆ ಆ ಮನುಷ್ಯನನ್ನು ಕರೆದರು. ಆ ಶಂಕರ ಅವಳೆಡೆಗೆ ಬಂದು ಕುಳಿತ.

"ಇಲ್ನೋಡು, ಸಂಸಾರ ಸಂಬಂಧ ಅವರು ಹೋದ ದಿವಸವೇ ಹರಿದು ಹೋಯ್ತು. ಈಗ ಉಳಿದದ್ದೇನೂ ಇಲ್ಲ. ನೀವು ಬೇರೆ, ನಾನು ಬೇರೆ."

ಆ ಮನುಷ್ಯ ಅಷ್ಟು ಸುಲಭವಾಗಿ ಅಜ್ಜಿಯ ಮಾತಿಗೆ ತಲೆ ಬಾಗುವ ಹಾಗಿರಲಿಲ್ಲ.

"ಎಲ್ಲಾದರೂ ಉಂಟೆ? ಕಡೆ ಘಳಿಗೇಲಿ ನಾವಾಗದೆ ಇನ್ಯಾರು ಆಗ್ತಾರೆ? ಆ ಮುಂಡೇದರ ಕೈಲಿ ಕ್ರಿಯೆ ಮಾಡಿಸ್ಕೊಳ್ತಿ ಏನು?"

ಅಜ್ಜಿ ಕೆರಳಿದರು.

"ನೀನೇನಾದಾರೂ ಆ ಮಗೂಗೆ ಅಂದುಗಿಂದಿ ಅಂದರೆ ನಿನ್ನ ನಾಲಿಗೆ ಸೀದು ಹೋಗುತ್ತೆ. ಪಾಪಿ ಚಂಡಾಲ. ಅವರು ಬದುಕಿ ದ್ದಾಗ ನನ್ನನ್ನ ಪೀಡಿಸಿದ ಪಿಶಾಚಿ, ಈಗಲೂ ಬಂದಿಯಾ?"

ನಾನು ಧೈರ್ಯ ತಾಳಿ, "ನೀವು ಯಾರೇ ಇರಿ. ದಯವಿಟ್ಟು ಈಗ ಹೊರಟ್ಟುಹೋಗಿ. ಅಜ್ಜಿಗೆ ತೊಂದರೆ ಆಗುತ್ತೆ. ದಯವಿಟ್ಟು ಹೊರಟುಹೋಗಿ," ಎಂದು ಗಟ್ಟಿಯಾಗಿ ಹೇಳಿದೆ.

ತಪೋಬಲ ಇರುತ್ತಿದ್ದರೆ ಅಲ್ಲೆ ನನ್ನನ್ನು ಅವರು ಸುಟ್ಟು ಬಿಡು ತ್ತಿದ್ದರೇನೋ. ಆದರೆ ಆ ಕೆರಳಿದ ನೋಟಕ್ಕೆ ನಾನು ಮಿಸುಕಲ್ಲಿಲ್ಲ.

ನೆರೆ ಮನೆಯವರು ಬಂದರು. ಮತ್ತೆ ಗದ್ದಲವಾಯಿತು. ಅಜ್ಜಿಯ ಅಪೇಕ್ಷೆಯಂತೆ ಎಮ್ಮೆಯ ದಾನ ಪಡೆದಿದ್ದ ಅವರು, ಅಜ್ಜಿಯ ಪಕ್ಷವನ್ನೆ ವಹಿಸಿದರು. ಬಂದಿದ್ದ ಶಂಕರ ಕೆರಳಿ ಕಿರಿಚಿಕೊಂಡ.

"ಪಾಪಿಗಳು. ಮುದುಕಿ ಸಾಯ್ತಾ ಇದ್ದರೆ, ಆಸ್ತಿ ಹೊತ್ತಾ ಕೋಕೆ ನೋಡ್ತಾ ಇದ್ದಾರೆ. ತೋರಿಸ್ತೀನಿ, ಕೋರ್ಟಿಗೆ ಎಳೀತೀನಿ. ಆಗ ಗೊತ್ತಾಗುತ್ತೆ. ನ್ಯಾಯ ಧರ್ಮ ಮಣ್ಣುಪಾಲಾಯಿತೇನು ಇಷ್ಟ ರಲ್ಲೆ?"

ಆತನಿಗೇನು ಬೇಕಾಗಿತ್ತು? ಆ ಮನೆಯೆ? ಅದಾಗಿದ್ದರೆ ಅದನ್ನು ಕೊಟ್ಟು ಬಿಡಬಹುದು. ಅಷ್ಟು ದೊರೆತರೆ ಆತ ಅಲ್ಲಿಂದ ತೊಲಗಲಾರನೆ? ಅಜ್ಜಿಯನ್ನು ನೆಮ್ಮದಿಯಲ್ಲಿ ಬಿಟ್ಟು ಹೋಗಲಾರನೆ?

ಆ ವ್ಯಕ್ತಿ ಅಜ್ಜಿಯ ಭಾವ ಮೈದುನನಾಗಿದ್ದ. ಆ ಹುಡುಗ ಆತನ ಕಿರಿಯ ಮಗ. ಆ ಮಗನೊಡನೆ, ಬಂದವನು ಹೊರಟು ಹೋದ. ನ್ಯಾಯಾಸ್ಧಾನದ ಕಟ್ಟೆಯೇರಲು ನಿರ್ಧರಿಸಿದ್ದ ಅವನು, ನಮ್ಮ ಮನೆಯ ಮೆಟ್ಟಲಿಳಿದು ಹೋಗಲು ತಡಮಾಡಲಿಲ್ಲ.

ಆ ಮೇಲೋಂದು ದಿನ, ಮಧ್ಯಾಹ್ನದ ಹೊತ್ತಿಗೆ ಅಜ್ಜಿಗೆ ಮಾತು ಕುಂಠಿತವಾಗ ತೊಡಗಿತು. ಆಕೆ ನನ್ನನ್ನು ಸಮಿಪಕ್ಕೆ ಕರೆದು ಕ್ಷೀಣ ಸ್ವರದಲ್ಲಿ ಹೇಳಿದರು.

"ಚಂದ್ರೂ........ಇನ್ನೇನು ಆಗ್ತಾ ಬಂತು.........ಅಲ್ನೋಡ್ದಾ
........ಅಲ್ಲಿ,ಆ ನಿಚ್ಚಣಿಕೆ ಕೆಳಗೆ,ಆ ಮೂಲೇಲಿ.......ನೋಡ್ಡೇನೋ ಸರಿಯಾಗಿ........ಆ ಮೂಲೇಲಿ ಮರಿ.......ಆಲ್ಲೆ ಕೆಳಕ್ಕೆ ನೆಲ್ಡಲ್ಲೆ.... ಮುನ್ನೂರು ರೂಪಾಯಿ ಕಣೋ......."

ಒಮ್ಮೆಲೆ ಹೃದಯ ಕಿವುಚಿಬಂದ ಹಾಗಾಯಿತು ನನಗೆ. ಅದು ಅವರ ಮಹಾ ಆಸ್ತಿ. ಅದರಿಂದದಾಗಿಯೇ ಅವರ ಕೊನೆಯ ದಿನಗಳ ನೆಮ್ಮದಿ ನಾಶವಾಯಿತು. ಬೇಸರದ ಧ್ವನಿಯಿಂದ, "ಇರಲಿ ಅಜ್ಜೀ. ಹಾಗಿರಲಿ....ನೀವು ಮಲಕ್ಕೊಳ್ಳಿ ಅಜ್ಜೀ." ಎಂದೆ.

ಆಕೆ ಮಲಗಿಕೊಂಡರು. ಮುಚ್ಚಂಚೆಯ ಹೊತ್ತಿಗೆ ಅವರಿಗೆ ಎಚ್ಚರವಾಯ್ತು.

ಬಾಯಾರುತ್ತಿದೆ...ನೀರು...ಎಂದು ಸನ್ನೆ ಮಾಡಿದರು. ಸ್ವಲ್ಪ ನೀರನ್ನು ಆ ಗಂಟಲಲ್ಲಿ ನಾನು ಇಳಿಬಿಟ್ಟೆ. ಗೊರಕ್ ಗೊರಕ್ ಎಂದು ಸದ್ದಾಯಿತು. ಆ ನೀರು ನಡು ಹಾದಿಯಲ್ಲೇ ನಿಂತಿತ್ತು. ಅಜ್ಜಿ ಜೀವಂತರಾಗಿರಲಿಲ್ಲ. ಅಜ್ಜಿ...ಅಜ್ಜಿ..

...ನೆರೆ ಮನೆಯವರು ನೆರವಾದರು. ಅಜ್ಜಿಯ ಜಾತಿಯವ ರನ್ನೆ ಕರೆದುಕೊಂಡು ಬಂದೆ. ಆಕೆಯನ್ನು ಸುಡುಗಾಡಿಗೆ ಒಯ್ದು ಸುಟ್ಟರು. ಆ ದೇಹ ಸುಡುತ್ತಿತ್ತೆಂದು ಖಚಿತವಾದ ಮೇಲೆ ಅವರೆಲ್ಲಾ ಹಿಂತಿರುಗಿದರು. ನಾನು ಅಲ್ಲೆ ನಿಂತೆ. ಛಟಲ್ ಛಟಲ್ ಎಂದು ಬೆಂಕಿಯೊಳಗಿಂದ ಸದ್ದಾಗುತ್ತಿತ್ತು.

ನಾನು ದೀರ್ಘಕಾಲ ಸ್ಮಶಾನ ಭೂಮಿಯಲ್ಲೆ ಕುಳಿತೆ. ನಾನು ಅಳಲಿಲ್ಲ. ಅಳಬೇಕೆಂದು ನನಗೆ ತೋಚಲಿಲ್ಲ.

ಮತ್ತೆ ದಿನಗಳು ಉರುಳಿದವು. ದಿನಗಳೊಡನೆ ನೆನಪುಗಳೂ ಕೂಡ. ಆ ಮನೆ ಭಣಗುಡುತಿತ್ತು. ಕೈಯಲ್ಲಿದ್ದ ಬೊಂಬಾಯಿ ಹಣವೆಲ್ಲಾ ಖರ್ಚಾಗುವತನಕ ಅಲ್ಲಿ ಇಲ್ಲಿ ಏನನ್ನೋ ತಿಂದು ಕುಡಿದು ದೇಹದ ಬೇಡಿಕೆಗಳನ್ನು ಪೂರೈಸುತ್ತಿದ್ದೆ.

ಭವಿಷ್ಯತ್ತಿನ ಪ್ರಶ್ನೆ ನನ್ನನ್ನು ಕಾಡುತ್ತಿತ್ತು.

ಪೇಪರು ಮಾರುತ್ತಿದ್ದ ಶೇಷಗಿರಿ ಈಗ ಪತ್ರಿಕೆ ಪುಸ್ತಕಗಳ ಪುಟ್ಟ ಅಂಗಡಿ ಇಟ್ಟಿದ್ದ. ಹಾದಿಯಲ್ಲೊಂದು ದಿನ ನನ್ನನ್ನು ತಡೆದು ನಿಲ್ಲಿಸಿ ಸುಖದುಃಖ ವಿಚಾರಿಸಿದ. ಅವನ ಜಗತ್ತು ಬಲು ಚಿಕ್ಕದಾಗಿ ನನಗೆ ತೋರಿತು. ನನ್ನ ಮತ್ತು ಅವನ ನಡುವೆ ಅಳೆಯಲಾಗದ ಅಂತರ ವಿತ್ತು. ಅವನು ನನ್ನ ಮುಂದಿನ ಉದ್ಯೋಗದ ಪ್ರಶ್ನೆ ಎತ್ತಿದ. ನಾನು ಉತ್ತರವೀಯಲಿಲ್ಲ. ಊರಿನ ಹೊರಗೆ ನಾನು ಕಲಿತ ಪಾಠಗಳ, ಪಡೆದ ಅನುಭವಗಳ, ವರದಿಯನ್ನು ಅವನಿಗೆ ಒಪ್ಪಿಸಲಿಲ್ಲ. ನನಗರಿಯದೆಯೇ ನಾನು ರಹಸ್ಯ ಜೀವಿಯಾಗಿ ರೂಪುಗೊಂಡಿದ್ದೆ. ಎ‍‍‍‍‍ಷ್ಟೋ ವಿಷಯಗಳು ನನ್ನಲ್ಲಿ ರಕ್ತಗತವಾಗಿದ್ದುವು. ಹೊರಗೆ ಇನ್ನೊ ಬ್ಬರಿಗೆ ಅವುಗಳನ್ನು ತಿಳಿಯ ಹೇಳುವುದು ಸಾಧ್ಯವೇ ಇರಲಿಲ್ಲ.

ಕೈ ಖಾಲಿಯಾಗಿದ್ದಾಗ, ಅಜ್ಜಿ ತೋರಿಸಿದ್ದ ನೆಲದ ಮೂಲೆ ಯನ್ನು ಕೆದಕಿದೆ. ನಿಕ್ಟೋರಿಯಾ ರಾಣಿಯ ಬೊಂಬೆ ಇದ್ದ ಮುನ್ನೂರು ರೂಪಾಯಿ ನಾಣ್ಯಗಳು ಅಲ್ಲಿದ್ದುವು. ನಾನು ಅವುಗಳನ್ನು ವಶಪಡಿಸಿಕೊಂಡೆ. ಅಜ್ಜಿಯ ದೃಷ್ಟಿಯಲ್ಲಿ ಅದು ದೊಡ್ದ ಆಸ್ತಿ ಯಾಗಿತ್ತು. ಆದರೆ ನನಗೆ ಹಣದ ಬಗ್ಗೆ ಗೌರವವಿರಲಿಲ್ಲ. ಅದು ಯಾರದು ಏನು ಎಂಬುದು ನನಗೆ ಮುಖ್ಯವಾಗಿರಲಿಲ್ಲ. ಮಾನವನ ಆವಶ್ಯತೆಗಳನ್ನು ಪೂರೈಸಬೇಕಾದರೆ ಹಣ ಬೇಕು-ಅಷ್ಟನ್ನು ಮಾತ್ರ ನಾನು ತಿಳಿದಿದ್ದೆ.

ಅಜ್ಜಿಯ ಸಂಬಂಧಿಕರು ನ್ಯಾಯಾಸ್ಥಾನಕ್ಕೆ ಬರಲಿಲ್ಲ. ನೆರೆ ಮನೆಯವರಲ್ಲಿದ್ದ ಎಮ್ಮೆ, ಕಾಲಿಗೆ ಹುಳು ತಗಲಿ ಸತ್ತು ಹೋಯಿತು. ಅದರ ಕರುವನ್ನವರು ಐದು ರುಪಾಯಿಗೆ ಮಾರಿದರು.

" ಮನೇನ ಯಾತಕ್ಕೆ ಮಾರ್ಬಾರ್ದು ?" ಎಂದು ಉಯಿಲು ಬರೆದಿದ್ದ ನಕೀಲರು ಒಂದು ದಿನ ಕೇಳಿದರು. "ಆ ಹಣದಿಂದ ಏನಾದರೂ ಅಂಗಡಿ ತೆರೆಯಬಹುದಲ್ಲಾ. ಮದುವೆ ಮಾಡ್ಕೊಂಡು ಹಾಯಾಗಿ ಇರ್ಬಹುದಲ್ಲಾ."

ನಾನು ನಕ್ಕು ಸುಮ್ಮನಾದೆ. ಆ ಮನೆಯನ್ನು ನಾನು ಮಾರ ಲಿಲ್ಲ. ಅಜ್ಜಿ ನನಗೆ ಕೊಟ್ಟುದನ್ನು ಹಾಗೆ ಬಿಟ್ಟು ಕೊಡಲು ನಾನು ಇಷ್ಟಪಡಲಿಲ್ಲ.

ಹೊರಗೆ ನಡೆದು ಆಯಾಸವಾದಾಗ ಮನೆಗೆ ಬಂದು ಮಲಗಿ

ಕೊಳ್ಳುತ್ತಿದ್ದೆ . ಹದಿನಾಲ್ಕು ವರ್ಷಗಳಿಂದಲೂ ನಾನು ಕುಡಿದು ಬೆಳೆದಿದ್ದ ಬಾವಿ ನೀರು........ಅದರಿಂದ ನಾಲ್ಕು ಕೊಡ ಸೇದಿ ತಲೆಯ ಮೇಲೆ ಸುರಿದುಕೊಂಡರೆ, ಹಾಯೆನಿಸುತ್ತಿತ್ತು

ಆಗಾಗ್ಗೆ ಅಮಿರನ ನೆನಪಾಗುತ್ತಿತ್ತು ----ಶೀಲಳ ನೆನಪಾಗು ತ್ತಿತ್ತು . ಆದರೆ ಬೊಂಬಾಯಿಯ ಕರೆ ನನಗೆ ಕೇಳಿಸಲಿಲ್ಲ. ಕಟುಕ ನಾಗಿ ಬಾಳಲು ಆ ಮಹಾ ನಗರವೇ ಆಗಬೇಕೆ ? ನಮ್ಮ ಊರು-- ಸಾಲದೆ ? ನಮ್ಮ ಊರು--

........ಆ ದಿನಗಳನ್ನು ಈಗ ಸ್ಮರಿಸಿಕೊಂಡಾಗ ಸಂದೇಹದ ಅಲೆಗಳೇಳುತ್ತವೆ. ಒಂದು ವೇಳೆ ಹಾಗಾಗಿದ್ದರೆ? ಹೀಗಾಗಿದ್ದರೆ? ಆ ಅವಕಾಶದ ಬದಲು ಬೇರೊಂದು ಅವಕಾಶ ದೊರೆಯುತ್ತಿದ್ದರೆ? ಅಂಥ ಕಟು ಅನುಭವದ ಬದಲು ಬೇರೇನೋ ಇರುತ್ತಿದ್ದರೆ?..... ಹೀಗೆ ಚಿಂತಿಸುವುದರಲ್ಲಿ ಅರ್ಥವೇನೂ ಇಲ್ಲ ಎಂಬುದನ್ನು ನಾನು ಬಲ್ಲೆ. ಆದರೂ ಮನಸ್ಸು ಅತ್ತ ಧಾವಿಸುತ್ತಿದೆ. ಗತಕಾಲದ ಬಗೆಗೆ ನನ್ನಲ್ಲಿರುವ ಕನಿಕರ ಕಳವಳವನ್ನೆಲ್ಲಾ ಒಂದೇ ಸಂಜ್ಞೆಯಿಂದ ತೊಡೆದು ಹಾಕುವುದು ಹೇಗೆ ಸಾಧ್ಯ?

ನಾನು ಊರು ಬಿಟ್ಟು ಮತ್ತೊಮ್ಮೆ ಪರದೇಶಿಯಾಗಲಿಲ್ಲ. ತಂದೆಯ ಸಾವಿಗೆ ಮೊದಲು ನನಗಿದ್ದ ಉದ್ಯೋಗದ ಎಳೆಯನ್ನು ಮತ್ತೆ ಎತ್ತಿಕೊಂಡು ಜೀವನದ ಬುಗುರಿಯನ್ನಾಡುವುದು ಅಷ್ಟು ಸುಲಭವಾಗಿರಲಿಲ್ಲ. ಬೊಂಬಾಯಿಯ ಆನುಭವಗಳು ನನ್ನ ಬಾಳಿನಲ್ಲಿ ಹಾಸುಹೊಕ್ಕಾಗಿದ್ದುವು.

ಆದರೂ ನಾನು ಸಮಾಜದ ದೃಷ್ಟಿಯಲ್ಲಿ ಸಂಭಾವಿತನಾಗಿ ಇರುವುದಕ್ಕೋಸ್ಕರ ಉದ್ಯೋಗ ಹುಡುಕಿದೆ.

ಆಮೀರನ ಸ್ವರ ನನ್ನನ್ನು ಆಣಕಿಸುತ್ತಿತು:

" ಒಬ್ಬರನ್ನೊಬ್ಬರು ಸುಲಿದು ತಿನ್ನೋದೇ ಈ ಪ್ರಪಂಚದ ಸೂತ್ರ ಶೇಖರ."

ತಂದೆಯ ಸ್ವರ ಮೈದಡವುವ ಹಾಗೆ ಕೇಳಿಬರುತ್ತಿತ್ತು:

"ನೀನು ದೊಡ್ಡಮನುಷ್ಯನಾಗ್ಬೇಕು ಚಂದ್ರೂ. ದೊಡ್ಡ ಮನುಷ್ಯ ನಾಗಬೇಕಪ್ಪ."

ತಂದೆಯ ಬಯಕೆಯನ್ನು ನಾನು ಈಡೇರಿಸುವುದು ಎಂದಿಗೂ ಸಾಧ್ಯವಿರಲಿಲ್ಲ. ಆತನ ಕಲ್ಪನೆಯ ದೊಡ್ಡಮನುಷ್ಯನಾಗುವುದು ಎಂದಿಗೂ ಸಾಧ್ಯವಿರಲಿಲ್ಲ. ಇಪ್ಪತ್ತು ವರ್ಷಗಳ ಅವಧಿಯ ಜೀವನ ವನ್ನು ನಾನು ಕಂಡಿದ್ದೆ. ಅದು ಮಧುರವಾಗಿರಲಿಲ್ಲ, ಕಹಿಯಾಗಿತ್ತು. ಶಾಲೆಗೆ ಹೋಗದೆ ಇದ್ದರೂ ಜ್ಞಾನಿಯಾಗಿದ್ದ ಅಮೀರನ ಮಾತುಗ ಳಲ್ಲಿ ಸತ್ಯಾಂಶ ಒಡೆದು ತೋರುತ್ತಿತ್ತು: ಈ ಸಮಾಜ.... ಒಬ್ಬರನ್ನೊ ಬ್ಬರು ಸುಲಿಯುವ ಸೂತ್ರ.......

ಹೀಗಿದ್ದರೂ ನಾನು, ಸುಲಿಗೆಯ ಒಂದು ಯಂತ್ರಕ್ಕೆ ಸಣ್ಣ ಕೀಲಿ ಯಾಗಿ ಬದುಕಲು ಯತ್ನಿಸಿದೆ. ಆ ಯತ್ನಕ್ಕಾಗಿ ನಾನು ಜವಾಬ್ದಾರ ನಾದ ಯುವಕನಾಗಬೇಕಿತ್ತು. ಮುಖದ ಮೇಲಿನ ಮಗುತನದ ಬದಲು, ಎಲ್ಲರನ್ನೂ ದಿಟ್ಟತನದಿಂದ ನೋಡುವ ನೋಟ ಬೇಕಿತ್ತು. ಅಂಥಾ ನೋಟ ನನ್ನಲ್ಲಿದ್ದರೂ ಮುಖದ ಮುಗ್ಧತೆ ಮಾಯವಾಗಿರಲಿಲ್ಲ. ಕನ್ನಡಿಯಲ್ಲಿ, ಮುಖ ಸುಂದರವಾಗಿ ಕಾಣುತ್ತಿತ್ತು. ತೆಳ್ಳನೆಯ ಬಾಲಮೀಸೆಯೊಂದು ಆಲಂಕಾರವಾಗಿತ್ತು. ಗಲ್ಲದ ಕಳಗೆ ಮೂರು ನಾಲ್ಕು ಕೂದಲುಗಳು ವಿನಯದಿಂದ ನೀಳವಾಗಿ ಬೆಳೆಯತ್ತಿದ್ದವು. ನಾನು ಪೇಟೆಗೆ ಹೋಗಿ ಆರಾಣೆ ಕೊಟ್ಟು, ಒಂದು ಷೇವಿಂಗ್ ಸೆಟ್ಟು, ತಂದೆ. ತಂದ ಮರುದಿನ ಬಲು ಶ್ರಮಪಟ್ಟು ಮುಖಕ್ಷೌರಮಾಡಿ. ಗಲ್ಲದಲ್ಲಿ ಎರಡು ಪುಟ್ಟ ಗಾಯಗಳಾಗಿ ರಕ್ತ ಸೋರಿತು. ಮುಖವೆಲ್ಲಾ ಉರಿಯಿತು. ತಣ್ಣೀರಿನಲ್ಲಿ ಚೆನ್ನಾಗಿ ನೀರು ಹನಿಸಿ ಮುಖ ಒರೆಸಿದೆ. ನನ್ನನ್ನು ಕಂಡು ನನಗೇ ತಮಾಷೆ ಎನ್ನಿಸಿತು. ವಯಸ್ಸಿನ ಮಾರ್ಪಾಟನ್ನು ತಂದುಕೊಟ್ಟಿತ್ತು ಆ ಮುಖ ಕ್ಷೌರ.

ಉಣ್ಣೆಯ ಸೂಟು ತೊಟ್ಟು, ನಾನು ಕೆಲಸದ ಬೇಟೆಗೆ ಹೊರಟೆ. ನಾನು ವಿದ್ಯಾವಂತನಾಗಿದ್ದೆ-ಗುಮಸ್ತನಾಗಲು ಸಾಕಷ್ಟು ಸಾಮರ್ಥ್ಯವಿದ್ದ ವಿದ್ಯಾವಂತ.

ಆ ಮಿಲ್ಲಿನ ಮ್ಯಾನೇಜರರ ಮನೆಯ ಮುಂದೆ ಸುಳಿದುದಾಯಿತು.

ಅದರೆ ನಾನು ಹೋದ ಘಳಿಗೆ ಸರಿಯಾಗಿರಲಿಲ್ಲ. ಭಾನುವಾರವಾ ಗಿತ್ತೇನೋ ನಿಜ. ಆದರೆ, ಅದು ಅವರು ನಿದ್ದೆ ಮಾಡುತ್ತಿದ್ದ ಘಳಿಗೆ ಯಾಗಿತ್ತು. ಎದ್ದವರು ಕೆಂಗಣ್ಣುಗಳಿಂದಲೇ ನನ್ನನ್ನು ನೋಡಿದರು. ಲೋಕವನ್ನೆ ತೂಗಿ ಅಳೆಯುವ ಸಾಮರ್ಥ್ಯವಿತ್ತೇನೋ ಅ ದೃಷ್ಟಿಗೆ. ನನ್ನದು ಖೋಟಾ ದೌಲತ್ತೆಂದು ಅವರು ಸುಲಭವಾಗಿ ಕಂಡು ಹಿಡಿದಿರ ಬೇಕು.

"ಏನು ನೀವು ಗ್ರಾಜುಯೇಟೇ ?"

"ಇಲ್ಲ ಸಾರ್, ವಿದ್ಯಾಭ್ಯಾಸ ಪೂರ್ತಿ ಮಾಡ್ಲಿಲ್ಲ."

ಇಂಗ್ಲಿಷಿನಲ್ಲೆ ಮಾತುಕತೆಯಾಗುತ್ತಿತ್ತು.

"ಯಾವುದಾದರೂ ಸ್ಪೆಷಲೈಸ್ ಮಾಡ್ಕೊಂಡಿದಿರಾ?"

ನಾನು ಉತ್ತರವೀಯಲಿಲ್ಲ. ಒಂದು ವಿಷಯದಲ್ಲಿ ನಾನು ಸ್ಪೆಷ ಲೈಸ್ ಮಾಡಿಕೊಂಡಿದ್ದೆ __ಪರಿಣತನಾಗಿದ್ದೆ. ಆದರೆ ಅದನ್ನು ಆ ಮಹಾನುಭಾವರಿಗೆ ತಿಳಿಸುವುದು ಸಾಧ್ಯವಿತ್ತೆ ?

"ಸರಿ, ಮಿಲ್ಲಿಗೆ ಬರುವುದು ಬಿಟ್ಟಿಟ್ಟು ನಮ್ಮನೇಗೆ ಯಾಕ್ ಬಂದಿರಿ?"

"ಏನಾದರೂ ತಂದಿದೀರೇನು ?"

ನನಗೆ ಮೊದಲು ಅರ್ಥನಾಗಲಿಲ್ಲ. ಅವರೇನು ಕೇಳುತ್ತಿದ್ದರು ? ಪ್ರಮಾಣ ಪತ್ರವನ್ನೆ ? ಪರಿಚಯದ ಕಾಗದವನ್ನೆ ? ಅಥವಾ, ಅಥವಾ.......

ಅವರು ನನ್ನನ್ನೆ ನೋಡುತ್ತಿದ್ದರು. ಸ್ವಲ್ಪ ಸ್ವಲ್ಪವಾಗಿ ನನಗೆ ಅರ್ಥವಾಗುತ್ತಿತ್ತು. ನಾನು ಏನನ್ನೂ ತಂದಿರಲಿಲ್ಲ. ಅವರಿಗಾಗಿ ಯಾವ ಕಾಣಿಕೆಯನ್ನೂ ತಂದಿರಲಿಲ್ಲ.

"ಸರಿ,ಈಗ ಹೋಗು."

ನನ್ನ ಮುಖ ಕೆಂಪಗಾಯಿತು. ಬಹು ವಚನದ ಸಂಬೋಧನೆ ಯನ್ನು ಆತ ಏಕ ವಚನಕ್ಕೆ ಇಳಿಸಿದ್ದ. ನಾನು ಎದ್ದು ನಿಂತೆ.

"ಅರ್ಜ್ಜಿ ಕೊಟ್ಟರು.ಉತ್ತರ ಬಂದರೆ ಮತ್ತೆ ಬಾ."

ಉತ್ತರ ಬರುವುದಕ್ಕೂ ಮತ್ತೆ ಹೋಗುವುದಕ್ಕೂ ಅವಕಾಶವೇ ದೊರೆಯಲಿಲ್ಲ.ನಾನು ಅರ್ಜಿ ಬರೆಯಲೇ ಇಲ್ಲ.

ಆ ಬಳಿಕ ನಾನು ಮಂಡಿಪೇಟೆಯಲ್ಲಿ ಸುತ್ತಾಡಿದೆ. ಪದ್ಮಾಸನ ಹಾಕಿ ಮಂಡದ ಮೇಲೆ ಕುಳಿತು,ಎಲೆಯಡಿಕೆ ಜಗಿದು ಉಗುಳುತ್ತಾ ದುಡ್ಡೆಣಿಸುತ್ತಿದ್ದ ವ್ಯಾಪಾರಿಗಳು,ನನ್ನ ಸೂಟನ್ನು ನೋಡಿ ನಕ್ಕರು. ನನ್ನನ್ನು ಮಾತನಾಡಿಸುವುದಕ್ಕೆ ಮುಂಚೆ,ಸ್ವರಕ್ಕೆ ಹಾದಿ ಮಾಡಿ ಕೊಡಲೆಂದು,ಅವರು ಎಂಜಲು ಉಗುಳುತ್ತಿದ್ದರು.ಕೆಲವರು ಪೀಕ ದಾನಿಯಲ್ಲಿ,ಕೆಲವರು ಹೊರಕ್ಕೆ ಬೀದಿಯಲ್ಲಿ.ಆ ಮೇಲೆ ಹೊರಡು ತ್ತಿದ್ದ ಮಾತುಗಳೆಲ್ಲ,ಏಕ ಪ್ರಕಾರವಾಗಿದ್ದವು.ನನ್ನನ್ನು ನೋಡಿ ದಾಗಲೆಲ್ಲಾ ಬೇಕುಬೇಕೆಂದೇ ಅವರು ಎಂಜಲು ಉಗುಳುತ್ತಿದ್ದರೆಂಬ ಭ್ರಮೆಯ ಆರೋಪವನ್ನೂ ಅವರ ಮೇಲೆ ನಾನು ಹೊರಿಸಿದೆ-ಮೌನ ವಾಗಿ ಮನಸಿನಲ್ಲೆ ಹೊರಿಸಿದೆ.

ಬೇರೆ ಕೆಲಸಗಳಿದ್ದವು.ಆದರೆ ಅದಕ್ಕೆ ನಿರ್ದಿಷ್ಟ ವಿದ್ಯೆ ದೊರಕಿಸಿ ಕೊಂಡ ವ್ಯಕ್ತಿಗಳೇ ಬೇಕಾಗಿದ್ದರು.ಆ ನಿರ್ದಿಷ್ಟ ವಿದ್ಯೆಯ ಪ್ರಮಾಣ ಪತ್ರವನ್ನು ಅವರು ಕೇಳುತ್ತಿದ್ದರು.ನನ್ನಲ್ಲಿ ಯಾವ ಪ್ರಮಾಣ ಪತ್ರವೂ ಇರಲಿಲ್ಲ.

ಹೀಗೆ ಊರೆಲ್ಲಾ ಸುತ್ತಾಡಿ.ಒಮ್ಮೊಮ್ಮೆ ಅಜ್ಜಿಯ ಮನೆಗೆ ಹಿಂತಿರುಗುತ್ತಿದ್ದೆ.ಅಜ್ಜಿಯ ಪಾತ್ರೆ ಸರಂಜಾಮಗಳು,ಡಬ್ಬ ತಪ್ಪಲೆ ಗಳು,ಮಡಿಕೆ ಕುಡಿಕೆಗಳು,ಇನ್ನೂ ಅಲ್ಲೆ ಇದ್ದುವು.ನನ್ನ ಹಾಗೆಯೇ ಅವು ಕೂಡ,ಆ ಮನೆಯ ಸದಸ್ಯರಾಗಿದ್ದುವು........

ಜೀವನದ ಪ್ರವಾಹದಲ್ಲಿ ಅನಿರೀಕ್ಷಿತವಾದ ಒರತೆಗಳಿರುತ್ತವೆ, ಸುಳಿಗಳಿರುತ್ತವೆ.ಇಂಥದು ಹೀಗೆಯೇ ಆಗುವುದೆಂದು ಹೇಳುವ ಸಾಮರ್ಥ್ಯ ಆಗ ನನಗಿರಲಿಲ್ಲ.

ಆ ಸಂಜೆ ಮತ್ತೊಮ್ಮೆ ಜೀವನದೊಂದು ಸುಳಿಯೊಳಕ್ಕೆ ಸಿಕ್ಕು ನಾನು ಎತ್ತಲೋ ಸಾಗಿಹೋದೆ.

ಕತ್ತಲಾಗುತ್ತ ಬಂದಿತ್ತು. ಆ ಆಗ್ರಹಾರದ ಬೀದಿಯಲ್ಲಿ

ನಾನು ನಡೆದು ಬರುತ್ತಿದ್ದೆ ಒಂದೆಡೆ ನಾಲ್ಕಾರು ಜನ, ನೆಲದ ಮೇಲು ರುಳಿದ್ದ ಯುವತಿಯೂಬ್ಬಳನ್ನು ಸುತ್ತುವರಿದಿದ್ದರು. ಎಲ್ಲಾರೂ ಮಾತ ನಾಡುವವರೇ, ಎಲ್ಲರೂ ಶಪಿಸುವವರೇ. ನಾನು ಆ ಗುಂಪನ್ನು ಸಮಿಪಿಸಿದೆ. ಒಂದು ಕ್ಷಣ ಕಿವಿಗೊಟ್ಟು ನಿಂತೆ. ಆದರೆ ಏನೂ ಆರ್ಥವಾಗಲಿಲ್ಲ. ನೆಲದ ಮೇಲೆ ಮುಖಾ ಮರೆಸಿ ಬಿದ್ದಿದ್ದ ಆ ಹೆಂಗಸು ನನ್ನ ವಯಸ್ಸಿನಾಕೆಯೇ ಇದಿರಬೇಕು. ಬಿಚ್ಚಿಹೋಗಿದ್ದ ತಲೆಗೂದಲು ಸುರುಳಿ ಸುರುಳಿಯಾಗಿ ಧೂಳರಾಶಿಯ ಮೇಲೆ ಬಿದ್ದಿತ್ತು. ಬಡತನದ ಸೀರೆ ರವಕೆ, ಮೈಮುಚ್ಚಲು ಯತ್ನಿಸುತ್ತಿದ್ದುವು........

"ಪಾಪಿ ರಂಡೆ...... ಏನೂ ತಿಳೀದ ಮೊದ್ದಿನ ಹಾಗೆ ಬಿದ್ಕೊಂಡಿ ದಾಳೆ. ಎಷ್ಟು ಚೆನ್ನಾಗಿ ಮಾಡ್ತಾಳೆ ಪಾರ್ಟು! ನಾಟ್ಕದ್ಕಂಪನಿ ಸೇರ್ಕೊಳ್ಳೆ ಮಾರಾಯ್ತಿ. ನಮ್ಮನೇನ ಯಾತಕ್ಕೆ ಬೀದಿಗೆಳೀ ತೀಯ.........."

ಹಾಗೆ ಶಪಿಸುತ್ತಿದ್ದವಳು ವಯಸ್ಸಾದ ಒಬ್ಬ ಸ್ತ್ರಿ. ಇನ್ನೊಬ್ಬ ಒಂದು ದೊಣ್ಣೆ ತಂದುಬ್ದಿದಿದ ಹೆಣ್ಣಿಗೆ ಬಡೆಯತೊಡಗಿದ.

"ಹಾಗೆ, ಹಾಗೆ, ನೋವಾಗತ್ತೇನೊ ಪಾಪ."

ಅದನು ನೋಡುತ್ತ ಸುಮ್ಮನಿರುವುದು ನನ್ನಿಂದಾಗಲಿಲ್ಲ. ಮುಂದಕ್ಕೆ ಸಾಗಿ ಆ ದೊಣ್ಣೆಯನ್ನು ಕಸಿದುಕೊಂಡೆ. ಅದನ್ನು ಹಿಡಿದವ ನನ್ನು ಹಿಂದಕ್ಕೆ ತಳ್ಳಿದೆ. ಅಲ್ಲಿದ್ದವರೆಲ್ಲಾ ಕ್ಷಣಕಾಲ ಸತ್ತ ಶವ ಗಳಾದರು. ಮರುಕ್ಷಣವೇ ಅವುಗಳಿಗೆ ಜೀವ ಬಂತು.

"ಓ ಹೋ ಹೋ,"ಎಂದು ಯಾರೋ ವ್ಯಂಗ್ಯವಾಗಿ ನಕ್ಕರು.

ನಾನು ಕಣ್ಣು ಕೆರಳಿಸಿ ಹಾಗೆ ನಕ್ಕವನನ್ನೆ ನೋಡಿದೆ.

"ಎಂಥ ಮನುಷ್ಯರೋ ನೀವು? ಏನಿದರರ್ಥ ? ಹೀಗೆಯೋ ನೀವು ಹೆಂಗಸರನ್ನು ರಕ್ಷಣೆ ಮಾಡೋದು?"

ನಾನು ಏನನ್ನೊ ಮಾತನಾಡುತ್ತಿದ್ದೆ. ನೆಲದ ಮೇಲೆ ಬಿದ್ದಿದ್ದ ಆ ಹೆಂಗಸು ಮುಖವೆತ್ತಿ ನನ್ನನ್ನೆ ನೋಡಿದಳು. ಆ ನೋಡಿದಳು. ಆ ನೋಟದಲ್ಲಿ ದೈನ್ಯತೆ ಇತ್ತು;ಸಹಾಯದ ಯಾಚನೆಯಿತ್ತು; ತಾನು ನಿರಾಪರಾಧಿ ಎಂಬ ಘೋಷಣೆ ಇತ್ತು. ಆ ನೋಟ ನಾನು ಮಾಡಬೇಕಾದ ಕಾರ್ಯ ವೇನೆಂಬುದನ್ನು ತಿಳಿಯಹೇಳಿತು.

ಆ ಗುಂಪಿನವರಲ್ಲೊಬ್ಬ ನನ್ನ ಮೈ ಮೇಲೆ ಕೈ ಮಾಡಿದ. ಕೈಲಿದ್ದ ದೊಣ್ಣೆಯನ್ನು ಬೀಸಿದೆ. ಅವನು ಕುಂಟುತ್ತಾ ದೂರ ಹೋದ ___ಕಾಲುಗಳೆಡೆಯಲ್ಲಿ ಬಾಲ ಮಡಚಿ ಹೋಗುವ ಪುಕ್ಕಲು ನಾಯಿಯ ಹಾಗೆ.

"ಯಾರು ಬರ್ತ್ತಿರ ಇನ್ನು? ಬನ್ನಿ........ಬಂದ್ಬಿಡಿ........" ಯಾರು ಬರಲಿಲ್ಲ. ಅವರಲ್ಲಿ ವಯಸ್ಸಾದವನೊಬ್ಬ ತೀರ್ಪು ಕೊಡುವ ಧ್ವನಿಯಲ್ಲಿ ಹೇಳಿದ.

"ಅಂಥ ಸಾಹಸಿಯಾಗಿದ್ದರೆ ಕರ್ಕೊಂಡು ಹೋಗೋ ಆವಳ್ನ. ನೋಡ್ಕೋತೀವಿ........"

"ಏಳಮ್ಮ,"ಎಂದೆ ನಾನು___ಆ ಹೆಂಗಸನ್ನು ಉದ್ದೇಶಿಸಿ.

ಆಕೆ ಪ್ರಯಾಸದಿಂದ ಎದ್ದಳು . ಆ ಜನ ಮತ್ತೆ ಕಿರಿಚಿಕೊಂಡರು. ಅವರ ನಡುವೆ ಇದ್ದ ವೃದ್ದೆ, ಲೊಬೋ ಲೊಬೋ ಎಂದು ಬಾಯಿ ಬಡೆದುಕೊಂಡಳು.

ಏನಾಗುತ್ತಿದೆ ಎಂದು ನಾನು ಊಹಿಸುವುದೂ ಸಾಧ್ಯವಿಲ್ಲದ ಹಾಗೆ ಘಟನೆ ನಡೆದು ಹೋಗಿತ್ತು. ಅಷ್ಟು ಜನರ ಕೋಪಕ್ಕೆ ಗುರಿ ಯಾಗಿದ್ದ ಹೆಣ್ಣೊಂದು ನನ್ನನ್ನು ಹಿಂಬಾಲಿಸಿ ಬಂತು. ದೊಣ್ಣೆ ಹಿಡಿದು ನಾನದರ ರಕ್ಷಕನಾಗಿ ಮುಂದುವರಿದೆ. ಸ್ವಲ್ಪ ದೂರದ ತನಕ ಯಾರೋ ಒಬ್ಬಿಬ್ಬರು, ಉಗುಳುತ್ತ ನಮ್ಮ ಹಿಂದೆಯೇ ಬಂದರು.

"ಪೋಲೀಸರನ್ನ ತರ್ತೀವಿ. ಕೋರ್ಟಗೆಳೀತೀವಿ ನಿನ್ನ. ಆಗ ಗೊತ್ತಾಗುತ್ತೆ."

ನನ್ನನ್ನು ಕುರಿತಾದ ಬೆದರಿಕೆ ಇದು. ಆ ಮಾನವ ಜಂತು ಗಳು ಬಲು ತುಚ್ಛವಾಗಿ ನನಗೆ ಕಂಡರು. ಒಂದು ಹೆಣ್ಣು ಜೀವ ವನ್ನು ಬೀದಿಗೆಸೆದು ಶೌರ್ಯ ಪ್ರದರ್ಶನ ಮಾಡುತ್ತಿದ್ದವರು, ತಾವೇ ಆನ್ಯಾಯಕ್ಕೆ ಗುರಿಯಾದವರ ಹಾಗೆ, ಪೋಲೀಸರ___ನ್ಯಾಯಾಸ್ಥಾನದ ಮಾತನ್ನಾಡುತ್ತಿದ್ದರು!

ಆ ಹೆಂಗಸನ್ನು ಕರೆದುಕೊಂಡು ನಾನು ಅಜ್ಜಿಯ ಮನೆಗೆ ಬಂದೆ. ದೀಪ ಉರಿಸಿದೆ. ಅದರ ಎದುರು ಆಕೆ ತರಗೆಲೆಯ ಹಾಗೆ ನಡುಗುತ್ತಿದ್ದುದನ್ನು ಕಂಡೆ. ಹಲವು ಪ್ರಶ್ನೆಗಳನ್ನು ಮುಂದಿಟ್ಟು, ಆ ಕಣ್ಣುಗಳೆರಡೂ ನನ್ನನ್ನು ನೋಡುತ್ತಿದ್ದವು. ಆ ನೋಟದಲ್ಲಿ ಒಂದು ಬಗೆಯ ಶೂನ್ಯ ಸ್ವರೂಪವಿತ್ತು.

ಮತ್ತೆ ಆ ಮುಖವನ್ನು ನೋಡಿದೆ, ನೋಡಿ ತಲೆ ಬಾಗಿದೆ. ನನ್ನ ನೆಮ್ಮದಿಗೆ ಭಂಗ ಬಂದಿತ್ತು. ಆದರೂ ಸ್ವರವನ್ನು ಶಾಂತವಾಗಿ ಡಲು ಯತ್ನಿಸುತ್ತಾ ಹೇಳಿದೆ.

"ಅಮ್ಮಾ ನೀನು ಹೆದರ್ಕೊಬೇಡ. ಆಗಣಿ ಹಾಕಿಕೊಂಡು ಈ ರಾತ್ರೆ ಇಲ್ಲೆ ಮಲಕ್ಕೊ. ನಾನು ಜಗಲಿ ಮೇಲಿರ್ತೀನಿ. ಇಲ್ಲಿಗೆ ಬರೋ ಧೈರ್ಯ ಯಾರಿಗೂ ಇಲ್ಲ. ನಾನು ನೋಡ್ಕೋತೀನಿ ."

ಅವಳು ಮೂಕಿಯಾಗಿಯೇ ಇದ್ದಳು.

"ಯಾಕಮ್ಮಾ-ನನ್ ಮಾತ್ನಲ್ಲಿ ನಂಬಿಕೆ ಬರಲಿಲ್ವ? ನಾನಿನ್ನೂ ಹುಡುಗ. ನೋಡಿದರೆ ಗೊತ್ತಾಗಲ್ವೆನು?"

"ಇಲ್ಲಪ್ಪ,ನೀವು ಒಳ್ಳೆಯವರು. ನೀವಲ್ಲದೆ ಹೋಗಿದ್ದರೆ ಈ ದಿವ್ಸ ಅವರೆಲ್ಲಾ ಸೇರಿ ನನ್ನ ಗತಿ ಕಾಣಿಸ್ತಾ ಇದ್ದರು."

ಆ ಸ್ವರ ಕೋಮಲವಾಗಿತ್ತು. ನನ್ನ ತಾಯಿ ಚಿಕ್ಕಂದಿನಲ್ಲಿ ಹೀಗೆಯೇ ಮಾತನಾಡುತ್ತಿದ್ದಳೇನೋ? ಆ ಶೀಲ-ಆಕೆಯ ಸ್ವರ--

ನಾನು ಅಲ್ಲಿಂದ ಎದ್ದೆ ಹೊದ್ದುಕೊಳ್ಳಲು ಒಂದು ಚಾದರ ವೆತ್ತಿಕೊಂಡು ಹೊರಕ್ಕೆ ನಡದೆ.

ಗಾಳಿ ಮೈ ಕೊರೆಯುವ ಹಾಗೆ ತಣ್ಣನೆ ಬೀಸುತ್ತಿತ್ತು. ಆದರೆ ಈ ಗಾಳಿಯನ್ನೆ ಕುಡಿದು ಬೆಳೆದವನು ನಾನು. ಬೇಸಗೆ ಇರಲಿ, ಚಳಿ ಗಾಲವಿರಲಿ, ಆ ಗಾಳಿ ನನಗೆ ಪ್ರಿಯವಾಗಿತ್ತು. ಹತ್ತಿ ಬಟ್ಟೆಯ ಆ ಚಾದರದಲ್ಲಿ ಒಂದೆರಡು ತೂತುಗಳಿದ್ದವು. ಕೋಟಿನ ಗುಂಡಿಗಳನ್ನು ಮತ್ತೊಮ್ಮೆ ಬಿಗಿಯಾಗಿ ಹಾಕಿ ನಾನು ನಿದ್ದೆಹೋದೆ.

ಅದು ನನ್ನದೊಂದು ಅಭ್ಯಾಸ. ಒಂದು ಕೆಲಸ ಪೂರೈಸಿದಾಗ, ನನಗೆ ಸುಲಭವಾಗಿ ನಿದ್ದೆ ಬರುತ್ತಿತ್ತು. ಮುಂದಿನ ಕೆಲಸದ ಯೋಚನೆ ಯಿಂದ ನಾನು ನಿದ್ದೆಯ ಹೊತ್ತಿನಲ್ಲಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಯಾವ ಗಂಡಾಂತರವೇ ಕಾದು ನಿಂತಿರಲಿ, ತೋಳನ್ನು ಮಡಚಿ ದಿಂಬಾಗಿ ಮಾಡಿ, ಅದರ ಮೇಲೆ ತಲೆ ಇರಿಸಿದೊಡನೆ, ನನಗೆ ನಿದ್ದೆ ಬರುತ್ತಿತ್ತು. ಆದರೆ ಸಾಮಾನ್ಯವಾಗಿ ಸಣ್ಣ ಸಪ್ಪಳವಾದರೂ ಸಾಕು, ಒಮ್ಮೆಲೆ ಎಚ್ಚರವಾಗುತ್ತಿತ್ತು.

ಆ ರಾತ್ರೆ ಮಾತ್ರ ನನಗೆ ಎಚ್ಚರವಾಗಲಿಲ್ಲ. ಸಣ್ಣ ಸಪ್ಪಳ ವಾಗಿತ್ತು.ಆದರೆ ನನಗೆ ಎಚ್ಚರವಾಗಿರಲಿಲ್ಲ

ಬೆಳಗು ಮುಂಜಾನೆ ದೂರದಲ್ಲಿ ಉದಿಸುತ್ತಿದ್ದ ಸುರ್ಯನ ಮೊದಲ ಕಿರಣಗಳನ್ನು ಎದಿರ್ಗೊಳ್ಳಲು ನಾನು ಕಣ್ಣು ತೆರೆದೆ. ಹಿಂದಿನ ರಾತ್ರೆಯ ಘಟನೆಗಳು ನೆನಪಿಗೆ ಬಂದವು. ದಿಗ್ಗನೆ ಎದ್ದು ಕುಳಿತು, ಮನೆಯ ಒಳ ಬಾಗಲಿನತ್ತ ದೃಷ್ಟಿ ಹಾಯಿಸಿದೆ. ಅದು ತೆರೆದಿತ್ತು. ಒಳಿಗೆ ಇಣಿಕಿ ನೋಡಿದೆ. ಆಕೆ ಹೊರಟುಹೋಗಿದ್ದಳು.

ಆಮೇಲೆ ಸ್ವಲ್ಪ ಹೊತ್ತಿನಲ್ಲೆ ಪೋಲೀಸರು ಬಂದರು. ಮನೆಯ ಕೊಠಡಿಗಳನ್ನೂ ಹಿತ್ತಿಲನ್ನೂ ಶೋಧಿಸಿದರು. ಒಳಗೆ ಪಾತ್ರೆಗಳನ್ನು ಚೆಂಡಾಡಿದರು. ಇಬ್ಬರು ನನ್ನ ಎಡ ಬಲಗಳನ್ನು ಹಿಡಿದು ನಿಲ್ಲಿಸಿ, "ಬೊಗಳು ಎಲ್ಲಿದಾಳೆ?" ಎಂದರು.ಅವರೊಡನೆ ಮಾತನಾಡುವುದು, ನನ್ನ ಗೌರವಕ್ಕೆ ಕುಂದು ಎಂಬುದನ್ನು ನಾನು ಚೆನ್ನಾಗಿ ತಿಳಿದು ಮೌನ ವಾಗಿದ್ದೆ.ನನ್ನನ್ನು ಆ ದಫೇದಾರ ದುರದುರನೆ ನೋಡಿದ. ನನ್ನ ಕೈಗಳಿಗೆ ಬೇಡಿತೊಡಿಸಲು ಆಙ್ಞೆ ಯನ್ನಿತ್ತ.

ಆ ಪೋಲೀಸರ ಹಿಂಬದಿಯಲ್ಲೆ ಒಂದು ಮುಖ ಕಾಣಿಸಿತು. ಯಾರಿರಬಹುದೆಂದು ಊಹಿಸುವುದು ಕಷ್ಥವಾಗಲಿಲ್ಲ.ಆ ಬಡ ಹೆಣ್ಣನ್ನು ಸಾಯಬಡೆಯಲು ಮುಂದೆ ಬಂದಿದ್ದ ಧೀರರಲ್ಲಿ ಆತನೊಬ್ಬ. ಒಬ್ಬ ಪೋಲೀಸನೊಡನೆ ಆತ ಒಂದೇ ಸಮನೆ ಪಿಸುಮಾತನಾಡುತ್ತಿದ್ದ. ಎಡಗೈಗೂ ಬಲಗೈಗೂ ಬೇರೆ ಬೇರೆಯಾಗಿ ಬೇಡಿಹಾಕಿ ಇಬ್ಬರು ಪ್ರತ್ಯ ಪ್ರತ್ಯೇಕವಾಗಿ ಅದನ್ನು ಹಿಡಿದಿದ್ದರು.ನನ್ನನ್ನು ಹೊರಕ್ಕೆ ಒಯ್ಯಲು ಆಙ್ಞೆಯಾಯಿತು.

ನಾನೆಂದೆ:

"ದಫೇದಾರ್, ಮನೆಗೆ ಬೀಗ ತಗಲಿಸ್ಬೇಕು. ಇಲ್ಲಿ ಕೋಟಿನ ಕೋಟಿನ ಜೇಬ್ನಲ್ಲಿ ಬೀಗದ ಕೈ ಇದೆ."

"ಮುಚ್ಚು ಬಾಯಿ!” ಎಂದನೊಬ್ಬ ಪೋಲೀಸಿನಾತ. "ದಫೇದಾಗ್ನ ಸಾಹೇಬರೆ-ಎಂತ ಕೂಗು."

ಫೇದಾರ್ ಸಾಹೇಬರೆ ದಯವಿಟ್ಟು ಮನೆಗೆ ಬೀಗ ತಗಲ್ಸೊ ಉಪಕಾರ ಮಾಡ್ತೀರ?” ಎಂದು ಅಣಕದ ಸ್ವರದಲ್ಲಿ ನುಡಿದೆ. ಆತ ಹರಿದು ತಿನ್ನಲು ಬಯಸುವವರ ಹಾಗೆ ನನ್ನನ್ನು ನೋಡಿದ.

ಮನೆಯ ಬಾಗಿಲುಗಳು ತೆರೆದೇ ಇದ್ದವು. ನನ್ನನ್ನು ಅಲ್ಲಿಂದ ಒಂದು ಮೈಲಿನಾಚೆಯಿದ್ದ ಸ್ಟೇಷನ್ನಿಗೆ ನಡೆಸಿಕೊಂಡು ಹೋದರು.

ಅದೇ ಸ್ಟೇಷನು. ಅದೇ ಲಾಕಪ್ಪು.

ಆಗ ಜೇಬುಗಳ್ಳನೆಂಬ ಆರೋಪದ ಮುದ್ರೆಯೊಡನೆ ಬಂದಿದ್ದೆ. ಈಗ-?

ಒಂಭತ್ತು ಗಂಟೆಗೆ ಸ್ಟೇಷನ್ನಿಗೆ ಬಂದ ಅಧಿಕಾರಿ, ಆಳಕ್ಕೆ ತಿವಿದು ನೋಡುವ ನೋಟದಿಂದ ನನ್ನನ್ನು ನೋಡಿದ. ಆತ ನನಗೆ ಅಪರಿಚಿತನಾಗಿರಲಿಲ್ಲ, ಅಷ್ಟು ಬೇಗನೆ ಅವನನ್ನು ನಾನು ಮರೆಯು ವುದು ಸಾಧ್ಯವಿತ್ತೆ?

ಆತ ನನ್ನನ್ನು ನೋಡುತ್ತಾ ಇಂಗ್ಲಿಷಿನಲ್ಲಿ ಹೇಳಿದ.

"ಓ ನೀವೇನಾ! ಮಿಸ್ಟರ್ ಚಂದ್ರಶೇಖರ್. ಮನೆಯಲ್ಲಿ ಚಂದ್ರೂ, ಬೊಂಬಾಯಲ್ಲಿ? ಈಗ?”

ನಾನು ಕ್ಷಣ ಕಾಲ ಅವಕ್ಕಾದೆ. ಈತನಿಗೆ ಕುಲಗೋತ್ರಗ ಳಲ್ಲದೆ ಇತ್ತೀಚಿನ ಮಾಹಿತಿಯೂ ಹೇಗೆ ದೊರೆಯಿತು?

“ಯಾಕೆ ಆಶ್ಚರ್ಯವಾಯ್ನೆನು? ಪೋಲೀಸರ ಕೈ ಭಾರೀ ಉದ್ದ ಚಂದ್ರಶೇಖರ್........ ನಿಮ್ಮ ಫೈಲು ಸಿದ್ದವಾಗಿದೆ. ಇವತ್ತಿನದೊಂದು ವರದಿ ಸೇರಿಸಿ ಸಂಟ್ರಲ್ ಸ್ಟೇಷನಿಗೆ ರವಾನಿಸ್ತೆನೆ.”

ನಾನು ಉತ್ತರವೀಯಲಿಲ್ಲ, ಲಾಕಪ್ಪಿನೊಳಗೆ ಮನವಾಗಿ ನಿಂತೆ, ಪೋಲೀಸರು, ತಮ್ಮ ಸಾಹೇಬರು ನನ್ನೊಡನೆ ಇಂಗ್ಲಿಷಿನಲ್ಲಿ ಮಾತನಾಡಿದುದನ್ನು ಕಂಡ ಮೇಲೆ, ನನ್ನನ್ನು ಅವಮಾನಿಸಲಿಲ್ಲ. ಇನ್ನು ಮುಂದೆ ನಾನು ಗುಮಾನಿ ವ್ಯಕ್ತಿ. ಆದರೆ.ಸಾಮಾನ್ಯ ಪೋಲೀ ಸರು ನನಗೆ ಗೌರವ ನೀಡುವರು. ಒಂದು ಕಟ್ಟು ಬೀಡಿಗಾಗಿ ನಾನು ಅವರಿಗೆ ಆರೆಂಟು ಕಾಸು ಕೊಟ್ಟರೂ ಕೊಡಬಹುದು. ಇನ್ನು ಮುಂದೆ ಹೊರಗಿಳಿದಾಗ ಬೀದಿಯಲ್ಲಿ ಅವರು ನನ್ನನ್ನು ಸೆಲ್ಯೂಟು ಹೊಡೆದು ಮಾತನಾಡಿಸುವರು. ಈ ರಾಜ್ಯರಚನೆಯಲ್ಲಿ ಅವರ ಶಾಖೆಗೂ ನನಗೂ ನೆಂಟಸ್ಥನವಿನ್ನು........

ಹೊತ್ತು ಕಳೆಯಿತು. ಅಧಿಕಾರಿ ನನಗಾಗಿ ಇಡ್ಲಿ ಕಾಫಿ ತರಿಸಿದ.

"ಸಿಗರೇಟ್ ಬೇಕೆ ಚಂದ್ರಶೇರ್?"

"ಕ್ಷಮಿಸಿ. ಸೇದೋ ಅಭ್ಯಾಸವಿಲ್ಲ."

"ಏಚಿತ್ರ ! ನಿಜವಾಗ್ಲೂ ವಿಚಿತ್ರ!"

ಅವನ ತುಟಿಗಳ ಕೊನೆಯಲ್ಲಿ ಅಪನಂಬುಗೆಯ ನಗುವಿತ್ತು. ನಾನು ಹೇಳಿದುದೊಂದನ್ನೂ ಎಂದಿಗೂ ನಂಬಲಾರದ ವ್ಯಕ್ತಿಯಾತ. ನಾನು ಆ ನಗುವನ್ನು ಲೆಕ್ಕಿಸಲಿಲ್ಲ.

ಕಾವಲಿನ ಪೋಲೀಸರನ್ನು ಹೊರಗೆ ಕಳುಹಿಸಿ ಆತ್ಮೀಯತೆಯ ನಟನೆ ಮಾಡುತ್ತಾ ಅಧಿಕಾರಿ ಮಾತನಾಡಿದ:

"ನೋಡಿ ಚಂದ್ರಶೇಖರ್, ನಿಮ್ಮನ್ನು ಆ ದಿನ ನೋಡ್ದಾಗ ಲಿಂದ ಮರೆಯೋಕೇ ಆಗಿಲ್ಲ."

ನಾನು ಸ್ವರಕ್ಷಣೆಯ ಮುಖವಾಡ ಧರಿಸಿ ಆ ಮಾತುಗಳನ್ನು ತೂಗಿ ನೋಡಿದೆ.

"ಚಂದ್ರಶೇಖರ್, ಈ ಹಾದಿ ಬಿಟ್ಟು ನೀವು ಎಲ್ಲರ ಹಾಗೆ ಯಾಕಿರಬಾರ್ದು?"

"ಯಾವ ಹಾದಿ ಸಾರ್?"

"ನೋಡಿ, ಅಂಥ ಪ್ರಶ್ನೆ ಕೇಳ್ಬಾರ್ದು. ಅದೆಲ್ಲಾ ಬಿಚ್ಚಿ ಹೇಳ್ಬೇ ಕಾದ ವಿಷಯವೆ?"

ಆ ಅಧಿಕಾರಿಯ ಕುಡಿ ಮೀಸೆ ಕುಣಿಯುತ್ತಿತ್ತು. ಕತ್ತಿನ ಲ್ಲೊಂದು ಕಪ್ಪಗಿನ ಮಚ್ಚೆಯಿತ್ತು. ಹಿಂದಕ್ಕೆ ಬಾಚಿದ್ದ ಕ್ರಾಪು ಶಿರಸ್ತ್ರಾಣದ ಒತ್ತಡಕ್ಕೆ ಸಿಲುಕಿ ಧೋಬಿ ಇಸ್ತ್ರಿ ಒರೆಸಿದಂತೆ, ತಲೆ ಅಂಟಿಕುಳಿತಿತ್ತು.

ಒಮ್ಮೆಲೆ ನಾನೊಂದು ಪ್ರಶ್ನೆ ಕೇಳಿದೆ:

“ಸಾರ್ ನಿಮಗೆ ಮಕ್ಕಳಿದಾರ?”

ಭಾವನಾರಹಿತವಾಗಿದ್ದ ಆತನ ಗಾಜಿನಂತಹ ಕಣ್ಣುಗಳು ಕ್ಷಣ ಕಾಲ ಚಲಿಸದೆ ನಿಂತುವು. ಎರಡು ಕ್ಷಣ ಸ್ಟೇಷನ್ನಿನ ಆ ಹಳೆಯ ಗಡಿ ಯಾರವೊಂದೇ ಟಿಕಾ ಟಕ್ ಎಂದಿತು.

"ಇದಾರೆ ಚಂದ್ರಶೇಖರ್. ದೊಡ್ಡ ಹುಡುಗನಿಗೆ ನಿಮ್ಮ ವಯಸ್ಸು, ಈ ವರ್ಷ ಬಿ. ಎ. ಪರೀಕ್ಷೆ ಕಟ್ಟಿದ್ದಾನೆ.”

"ಸಂತೋಷ ಸಾರ್. ದೊಡ್ಡ ಹುಡುಗನಿಗೆ ಮುಂದೆ ಏನು ಓದಿಸ್ಬೇಕೂಂತ ಇದೀರಿ ಸಾರ್? ವೈಯಕ್ತಿಕ, ಪ್ರಶ್ನೆ ಕೇಳ್ ಬಾರ್ದು ಆದರೂ..."

"ವಕೀಲಿ ಓದಿಸ್ತೀನಿ. ಆತ ಪೋಲೀಸ್ ಪ್ರಾಸಿಕ್ಯೂಟರ್ ಆಗ ಬೇಕೂಂತ ನನ್ನ ಆಸೆ.”

ನಾನು ಮುಗುಳು ನಕ್ಕೆ, ಹಾಗೆ ನಕ್ಕು ತಲೆಬಾಗಿ ನೆಲವನ್ನೇ ನೋಡಿದೆ. ನನ್ನನ್ನು ತಿಳಿಯಲಾರದೆ ಹೋದ ಆ ಅಧಿಕಾರಿ ಮತ್ತೆ ಮಾತನಾಡಿದ :

"ಅದು ಬೇರೆವಿಷಯ. ಎಲ್ಲರಿಗೂ ಹುಡುಗರ್ನ ಜಾಸ್ತಿ ಓದಿ ಸೋಕೆ ಆಗಲ್ಲ. ಆದರೆ ಇಷ್ಟು ವಿದ್ಯಾಭಾಸ ಇರೋ ನಿಮ್ಮಂಥವರು ಸಂಭಾವಿತರಾಗಿ ಬದುಕೋದು ಸಾಧ್ಯ.”

ನನಗೆ ಸಂಭಾವಿತತನದ ದೀಕ್ಷೆಕೊಡಲು ಆತ ಯತ್ನಿಸುತ್ತಿದ್ದ ನೇನೋ !

"ಸಾರ್, ನನ್ನ ಬಗ್ಗೆ ನಿಮ್ಮ ಅಭಿಪ್ರಾಯವೇನು?”

"ಮತ್ತೆ ಅದೇ ಪ್ರಶ್ನೆ ಹಾಗೆ ಕೇಳಬಾರು ಚಂದ್ರಶೇಖರ್, ಅವೆಲ್ಲಾ ಕೇಳಿ ತಿಳಿದುಕೊಳ್ಳೊ ವಿಷಯಗಳೇ ಅಲ್ಲ."

"ಥಾಂಕ್ಸ್ ನಿಮ್ಮ ಹಿತ ವಚನಗಳಿಗಾಗಿ ಕೃತಜ್ಞ.”

ನನ್ನ ಧ್ವನಿ ಕಠಿಣವಾಗಿತ್ತು. ಅಧಿಕಾರಿಯ ಹುಬ್ಬು ಚಲಿಸಿದ

ಹಾಗಾಯಿತು. ಕಣ್ಣುಗಳು ಅರಳಿದವು. ಆತ ಸ್ವರ ಬದಲಿಸಿ
ನುಡಿದ:

"ಚಂದ್ರಶೇಖರ್, ಏನೋ ಪಾಪ ಅಂತ ಇಷ್ಟು ಹೇಳಿದೆ. ಆದರೆ

ನಿನ್ನ ಎಳೆ ನಿಂಬೇಕಾಯಿತನ ನೀನು ಬಿಡೋ ಲಕ್ಷಣ ಕಾಣಿಸ್ಲಿಲ್ಲ.
ನೀನು ಏನು ಮಾಡ್ತಾ ಇದೀಯಾ ಅನ್ನೋದು ನಿನಗೆ ಗೊತ್ತಾ?"

"ಏನು ಮಾಡ್ತಾ ಇದೀನಿ ಸಾರ್?"
"ನಿನ್ಮೇಲೆ ಏನೇನು ಆರೋಪಗಳಿವೆ ಗೊತ್ತಾ?"
"............"
"ಇನ್ನೊಬ್ಬರ ಹೆಂಗಸನ್ನ ಓಡಿಸಿಕೊಂಡು ಹೋಗಿದೀಯಾ.

ಆಕೆ ಮನೆಯವರು ದೂರು ಕೊಟ್ಟಿದಾರೆ. ಅವಳು ಪತ್ತೆಯಾಗದೆ
ಹೋದರೆ ನೀನು ಬಚ್ಚಿಟ್ಟಿದೀಯಾಂತ ಇನ್ನೊಂದು ಆರೋಪ."

ನಾನು ಮುಗುಳು ನಕ್ಕೆ. ಅಧಿಕಾರಿ ಆ ನಗುವನ್ನು ನೋಡಿದ.

ಸ್ವರ ಮತ್ತಷ್ಟು ಗಡಸಾಯಿತು.

"ಇದೇನೋ ತಮಾಷೆ ಅಂತ ತಿಳ್ಕೊಂಡಿದ್ದೀ ಏನು? ಆರು

ಆರು ವರ್ಷ ಆಗತ್ತೆ. ಆಗ ತಿಳಿದೀತು."

........ನನಗೆ ಆರು ಆರು ವರ್ಷಗಳ ಶಿಕ್ಷೆಯಾಗಲಿಲ್ಲ. ಹೆಂಗ

ಸೊಬ್ಬಳನ್ನು ನಾನು ಓಡಿಸಿಕೊಂಡು ಬಂದಿದ್ದೆನೆನ್ನು ವುದಕ್ಕೆ ರುಜುವಾತೇ
ಇರಲಿಲ್ಲ. ಆ ತಾಯಿ ಯಾರ ಕಣ್ಣಿಗೊ ಬೀಳಲಿಲ್ಲ. ನ್ಯಾಯಾಸ್ಥಾನ
ದತ್ತು ಹೋಗದೆ ಪೊಲೀಸು ಅಧಿಕಾರಿ ಆ ಸಂಜೆಯೇ ನನ್ನನ್ನು ಹೊರ
ಬಿಟ್ಟ.ಕಳುಹಿಸಿಕೊಟ್ಟಾಗ ಆತನಲ್ಲಿ ವಿನಯವಿರಲಿಲ್ಲ. ಒರಟು
ಒರಟಾಗಿ ಅವನು ಹೇಳಿದ:

"ಹುಷಾರ್! ಈ ಸಾರಿ ತಪ್ಪಿಸಿಕೊಂಡೆ. ಇನ್ನೊಮ್ಮೆ ನನ್ನ

ಕೈಗೆ ಸಿಕ್ದೇಂತಂದರೆ ಸೆಂಟ್ರಲ್ ಜೈಲಿಗೇ ರವಾನಿಸ್ತೀನಿ!"
ಮೈ ನಿಡಿದುಕೊಂಡು ನೇಳವಾಗಿ ತಲೆಯೆತ್ತಿ ನಿಶ್ಚಲವಾಗಿ ಆ
ಮಾತುಗಳನ್ನು ಕೇಳುತ್ತಿದ್ದ ನಾನು, ಮಾತು ಪೊರೈಸುವುದಕ್ಕೆ ಮುಂಚೆ

ಯೇ ಸ್ವೇಷನ್ನಿ ನಿಂದ ಹೊರಕ್ಕೆಳಿದೆ.

ಬೀದಿಯ ದೀಪಗಳು ಹತ್ತಿಕೂಂಡಿದ್ಡವು. ಹೊರಗೆ ನಿಂತಿದ್ದ ನಾಲ್ಕಾರು ಜನ, ಸೂಟುಧಾರಿಯಾಗಿದ್ದ ನನನ್ನು ಕುತೂಹಲದಿಂದ ನೋಡಿದರು. ತಲೆಗೂದಲನ್ನು ಬದಿಗೆ ಸರಿಸಿ ಗಂಭೀರವಾಗಿ ಹೆಜ್ಜೆಯ ಮೇಲೆ ಹೆಜ್ಜೆ ಇಟ್ಟು, ನಾನು ಮುಂದೆ ನಡೆದೆ . ಸಾವಿರ ಕಣ್ಣುಗಳು ನನ್ನನ್ನೇ ನೋಡುತ್ತಿದ್ದಂತೆ ಭಾಸವಗುತ್ತಿತ್ತು. ಆ ತೀಕ್ಷ್ಣ ದೃಷ್ಟಿಗಳ ಮುಂದೆ ನಾನು ತಲೆಬಾಗಲಿಲ್ಲ. ಬಾಹ್ಯ ಜಗತ್ತು ನನ್ನನ್ನು ಅಣಿಕಿ ಸುತ್ತಿದ್ದಂತೆ ತೋರಿತು. ನಾನು ಎದುಗುಂದದೆ ಮುಂದುವರಿದೆ.

ಮನೆಯ ನೆನಪಾಯಿತು. ಬೀಗ ತಗುಲಿಸಿರಲಿಲ್ಲ. ಬೆಳ್ಳಿಗ್ಗೆ ಹೊರ ಬಿದ್ದಾಗ ಬಾಗಿಲುಗಳು ತೆರೆದೇ ಇದ್ದವು...

ಬಲು ವೇಗವಾಗಿ ನಾನು ಮನೆಯತ್ತ ನಡೆದೆ, ಆದರೆ ತಡವಾಗಿ ನಾನು ಮನೆ ಸೇರಿದ್ದೆ. ನೆರೆ ಮನೆಯಲ್ಲಿ ತಂದೆ ಮಗನಿಗೆ ಪಾಠ ಓದಿ ಸುವುದು ಕೇಳುತ್ತಿತ್ತು. ನಾನು ಬಂದ ಸದ್ದಾದಾಗ ಆತ ಎದ್ದು ಹೊರಕ್ಕೆ ಬಂದರು.

"ಚಂದ್ರಶೇಖರ್, ವಿಷಯ ತಿಳಿತಾ ನಿನಗೆ? "

ಆ ಮಾತಿನಲ್ಲಿ ಕಾತರವಿತ್ತು.

"ಏನು ವಿಷಯ? "

ನೀನು ಹೋದ್ಮೇಲೆ ಬಾಗಿಲು ಹಾಕ್ಕೊಳ್ಳೋಣಾಂತ ಇದ್ವಿ. ಆದರೆ ಧೈರ್ಯ ಬರ್ಲಿಲ್ಲ. ಪೋಲೀಸರ ಸಹವಾಸ ಬೇರೆ. ಆದರೂ ಮನೆ ಮೇಲೆ ನಿಗಾ ಇಟ್ತಿದ್ವಿ. ಮಧ್ಯಾಹ್ನ ಇಬ್ಬರು ಬಂದ್ರು. ಯಾರೂಂತ ನಾನು ಕೇಳಿದಾಗ ಸ್ಟೇಷನ್ನಿಂದ ಬಂದಿದೀವಿ ಅಂತ ದಬಾಯಿಸಿದರು. ನಾನು ಮನೆ ಸೇರ್ಕೋಂಡ್ಬಿಟ್ಟೆ. ಅಂತೂ ಎರಡು ದೊಡ್ದ ಮೂಟೆ ಕಟ್ಕೊಂದು ಹೋದ ಹಾಗಿತ್ತಪ್ಪ. "

ಆ ಮಾತಿನಲ್ಲಿ ಸಹಜತೆ ಇತ್ತು. ನನ್ನ ಕಣ್ಣೆದುರಲ್ಲೆ ಅವರು ಬೆಳೆದು ಮುದುಕರಾಗಿದ್ದರು. ಅವರ ಸಂಸಾರ ರಥ ಸಾಗಿಸುವುದರಲ್ಲೆ ಅವರ ಕೂದಲು ಹಣ್ಣಾಗಿತ್ತು.

ನಾನು ಮೌನವಾನಿ ಕಡ್ದಿ ಕೊರೆದೆ. ಗಾಳಿಗೆ ಅದು ನಿಲ್ಲಲಿಲ್ಲ. ಮತ್ತೆ ಮತ್ತೆ ಕಡ್ದಿ ಗೀರಿದೆ. ನೆರೆಮನೆಯಾತ ಕಂದೀಲು ತಂದು ಕೊಟ್ಟರು. ಹಿಂದೊಮ್ಮೆ, ಮತ್ತೆ ಈಗ, ಎರಡು ಸಾರೆ ಅವರ ಪಕ್ಕದ ಅಂಗಳಕ್ಕೆ ಪೋಲೀಸರ ಆಗಮನವಾಗಿತ್ತು. ನಾನು ಕಂದೀಲನ್ನೆತ್ತಿ ಕೊಂಡು, ಒಳ ಮನೆಯನ್ನು, ದೇವರ ಮನೆಯನ್ನು, ಅಡುಗೆ ಮನೆ ಯನ್ನು- ಎಲ್ಲವನ್ನೂ ಶೋಧಿಸಿದೆ. ಒಡೆದು ಹೋಗಿದ್ದ ನಾಲ್ಕಾರು ಮಡಿಕೆಗಳ ಹೋಳುಗಳು ಮಾತ್ರ ನನ್ನ ಕಾಲಿಗೆ ಅಡ್ಡವಾಗಿ ಬಂದುವು. ಕಣ್ಣಿಗೆ ಬೇರೇನೂ ಕಾಣಿಸಲಿಲ್ಲ. ಎಲ್ಲವೂ ಖಾಲಿಯಾಗಿತ್ತು- ಎಲ್ಲವೂ-. ಆ ಬಡಕಲು ಗೋಡೆ ಬದಿರು ಛಾವಣಿಯ ಮನೆಯ ಹೊರತು, ನನ್ನ ಪಾಲಿಗೆ ಬೇರೇನೂ ಉಳಿದಿರಲಿಲ್ಲ. ಜೀವಮಾನ ವೆಲ್ಲಾ ಒಂದೊಂದು ತುತ್ತು ಎತ್ತಿಟ್ಟು ಕೂಡಿಸಿದ್ದ ವಿಕ್ಟೋರಿಯಾ ರಾಣಿಯ ನಾಣ್ಯಗಳು,,,, ಅವುಗಳಲ್ಲಿ ಇನ್ನೂರಕ್ಕೂ ಹೆಚ್ಚು ಅಲ್ಲಿ ಉಳಿ ದಿದ್ದವು. ಬಂದಿದ್ದವರ ಪಾಲಿಗೆ ಅದೇ ದೊಡ್ಡ ಸಂಪಾದನೆಯಾಗಿತ್ತು. ಆದರೂ ಸಣ್ಣ ಪುಟ್ಟ ವಸ್ತುಗಳನ್ನೂ ಅವರು ಬಿಟ್ಟಿರಲಿಲ್ಲ. ಹರಿದು ಹೋಗಿದ್ದ ಚಾದರವನ್ನೂ ಒಯ್ದಿದ್ದರು. ಒಳಗೆ ಗೂಟಕ್ಕೆ ತಗುಲಿ ಹಾಕಿದ್ದ ಕೈಯಿಲ್ಲದ ಬೀಗವನ್ನೂ ಅವರು ಹೊತ್ತಿದ್ದರು. ಯಾವ ಅವಸರವೂ ಇಲ್ಲದೆ ಮನೆ ಖಾಲಿಮಾಡುವ ಕೆಲಸ ಬಲು ಶಿಸ್ತಿನಿಂದ ನಡೆದಿತ್ತು. ನಗಬೇಕೋ ಮುಖ ಬಾಡಿಸಿಕೊಳ್ಳಬೇಕೋ ನನಗೆ ತಿಳಿಯಲಿಲ್ಲ. ಒಳಗೆ ಮನಸ್ಸು ಸುಣ್ಣವಾಗಿತ್ತು. ಆದರೆ ಹೊರಗೆ ಮುಖಭಾವನೆ ಹಾಗಿರಲಿಲ್ಲವೇನೋ. ನೆರೆಮನೆಯವರು ಬಲು ಆಶ್ಚರ್ಯದಿಂದ ನನ್ನನ್ನೇ ನೋಡುತ್ತಿದ್ದರು

" ಸ್ಟೇಷನ್ನಿಗೆ ತರಲೇ ಇಲ್ಲವೇನು ಹಾಗಾದರೆ ? "

ಯೋಚನೆಯ ಲೋಕದಿಂದ ಭೂಮಿಗೆ ಇಳಿದೆ ನಾನು.

" ಏನನ್ನು ?" ಎಂದೆ."

" ಅದೇ ಇವನ್ನ-ಸಾಮಾನುಗಳ್ನ."

" ಸಾಮಾನುಗಳನ್ನೆ? ತಗೊಂಡು ಹೋಗಿದ್ದಾಯ್ತು. ಇನ್ಯಾವ ಯೋಚನೆಯೂ ಇಲ್ಲವಲ್ಲ."

ಅವರು ಅವಾಕ್ಕದರು.

" ಒಂದು ಚಿಮಣಿ ದೀಪ ತಂದುಕೊಡ್ಲೇನು ?"

"ಬೇಡಿ, ಏನೂ ಬೇಡಿ."

"ಮತ್ತೆ ?"

"ಬೇಡಿ ಎಂದೆನಲ್ಲ. ಈ ರಾತ್ರೆ ನಾನು ಇಲ್ಲಿರೋದಿಲ್ಲ."

ಅವರು ನಿಟ್ಟುಸಿರುಬಿಟ್ಟರು.

"ಏನೋಪ್ಪ ಚಂದ್ರಶೇಖರ್. ಹೀಗಾಗುತ್ತೇಂತ ಯಾರಿಗೆ ಗೊತ್ತಿತ್ತು ಹೇಳು,,,,,,,,ಒಂದೂ ಅರ್ಥವಾಗೋದಿಲ್ಲ ಈ ಕಾಲದಲ್ಲಿ."

ನಾನು ಅವರ ಕಂದಿಲ್ಲಿನೊಡನೆ ಬಾಗಿಲನ್ನು ದಾಟಿ ಹೊರಬಂದೆ. ಅವರು ತಮ್ಮ ಕಂದೀಲನ್ನು ಹಿಂಬಾಲಿಸಿ ಬಂದರು. ಹೊರಗೆ ದಟ್ಟ ವಾದ ಕತ್ತಲು ನಮ್ಮನ್ನೂ ಕಂದೀಲನ್ನೂ ಅಣಕಿಸುತ್ತಿತ್ತು.

ನನ್ನನ್ನು ಅಲ್ಲೆ ಬಿಟ್ಟು ನೆರೆಮನೆಯಾತ ಕಂದೀಲನ್ನು ಆಡಿ ಸುತ್ತಾ, ತಮ್ಮ ಮನೆಯೊಳಕ್ಕೆ ಹೋದರು. ನಾನು ಗೊತ್ತು ಗುರಿ ಇಲ್ಲದೆ ರಸ್ತೆಗಿಳಿದೆ.

ಬಾರಿ ಬಾರಿಗೂ ನನ್ನನ್ನು ಇದಿರಿಸುತ್ತಿದ್ದ ಆ ಶೂನ್ಯ. ಬಾರಿ ಬಾರಿಗೂ ಅದನ್ನು ನಾನು ದಾಟಿ ಮುಂದೆ ಸಾಗಬೇಕಾಗುತ್ತಿತ್ತು. ಅಂತಹ ಒಂದೊಂದು ಕಾಲಘಟ್ಟವೂ ನನಗೆ ಬಳಲಿಕೆಯನ್ನು ತರು ತ್ತಿತ್ತು. ಜೀವನದ ಆ ಒಂದೊಂದು ಹೆಜ್ಜೆಗೂ ನಾನು ಹೆಚ್ಚು ವಯಸ್ಕನಾಗುತ್ತಿದ್ದೆ.

ಹಿಂದಿನ ಸಂಜೆ ಬಡಪಾಯಿ ಹೆಂಗಸೊಬ್ಬಳಿಗೆ ನ್ಯಾಯ ದೊರಕಿಸಲು ಹೋದಾಗ, ಒಂದು ದಿನದೊಳಗೆ ಹೀಗಾಗುವುದೆಂದು ಯಾರು ಭಾವಿಸಿದ್ದರು? ಹಿಂದಿನ ಸಂಜೆ, ಆಕೆಯನ್ನು ಮನೆಗೆ ಕರೆದು ತಂದು ದೀಪ ಹಚ್ಚಿದ್ದಾಗ, ಮುಂದೆ ಒಂದು ದಿನದೊಳಗಾಗಿ ಆ ದೀಪವೇ ಮಾಯವಾಗುವುದೆಂದು ಯಾರು ತಿಳಿದಿದ್ದರು?

ಸಾವಧಾನವಾಗಿ ಚಲಿಸಿದರೆ ಒಂದು ವರ್ಷ ಬೇಕಾಗುವಷ್ಟು ದೂರವನ್ನು ಒಂದೇ ದಿನದಲ್ಲಿ ನಾನು ಕ್ರಮಿಸಿದ್ದೆ.

... ಇನ್ನು ಮುಂದಿನ ಹಾದಿ ಹುಡುಕಬೇಕು. ಉಣ್ಣೆಯ ಫೋಷಾ ಕಿನ ಹೊರ ಜೇಬುಗಳೂ ಒಳ ಜೇಬುಗಳೂ ಖಾಲಿಯಾಗಿದ್ದವು. ಹೊಟ್ಟೆ ಹಸಿದಿತ್ತು. ಮೈಯಲ್ಲಿ ಉತ್ಸಾಹವೆಲ್ಲಾ ಮಾಯವಾಗಿ ಕಾಲು

ಅಂಗಡಿ ಬೀದಿಯ ದೀಪಗಳು ಹೆಚ್ಚು ಹತ್ತಿರವಾದುವು . ನಾನು ಮೆಲ್ಲ ಮೆಲ್ಲನೆ ಹೆಜ್ಜೆಯಿಡುತ್ತಾ , ಆರನೆಯ ಕ್ರಾಸನ್ನು ತಲಪಿದೆ. ಶೇಷಗಿರಿ ತನ್ನ ಪುಟ್ಟ ಅಂಗಡಿಯನ್ನು ಮುಚ್ಚುವ ಸಿದ್ದತೆಯಲ್ಲಿದ್ದ. ನಾನು ಅಂಗಡೀಯ ಎದುರು ನಿಂತು, ಬಣ್ಣ ಬಣ್ಣದೊಂದು ಪತ್ರಿಕೆಗೆ ಕೈ ಹಾಕಿದೆ. ಮೊದಲು ಕೈಯನ್ನು ನೋಡಿದ ಶೇಷಗಿರಿಯ ದೃಷ್ಟಿ ಬಳಿಕ ನನ್ನ ಮುಖದತ್ತ ಹೊರಳಿತು.

"ನೀನೇನೋ. ಯಾವುದೋ ಗಿರಾಕಿ ಸಿಗುತ್ತೇಂತ ಇದ್ದೆ .......ಏನಪ್ಪ ದೊರೆ, ಎನ್ಸಮಾಚಾರ? ಹೆಂಡ್ತಿ ಸತ್ತೋರ ಹಾಗೆ ಮುಖ ಬಾಡಿಸ್ಕೊಂಡು ಇದೀಯಲ್ಲೊ!"

ನಾನು ಮುಗುಳು ನಕ್ಕೆ.

"ಮದುವೆ ಮಾಡ್ಕೋಬೇಕೊಂತ ಇರೋವರು ಹಾಗೆ ಅಮಂಗಳ ಮಾತಾಡ್ಬಾರದು ಕಣಯ್ಯ," ಎಂದೆ.

"ಸಾಕು ಬಿಡೂ ವೇದಾಂತ. ಮದ್ವೆ ಮಾಡ್ಕೊಳ್ಳೋದು ಅಂದ್ರೆ ಒಂದೇ ಸಾರಿ ದೊಡ್ಡ ಖರೀದಿ ಮಾಡ್ದಹಾಗೆ. ಹೆಂಡ್ತಿ ಸಾಯೋದೂಂ ತಂದ್ರೆ ಪಾಪರ್ ಎದ್ದ ಹಾಗೆ,"

"ಎಲ್ ಕಲ್ತೆ ಇದ್ನ? ಈ ಹೊಸ ಪೇಪರ್‌ನೋರು ಪ್ರಿಂಟು ಮಾಡಿದಾರೇನು?"

"ಪೇಪರಿನಲ್ಲೇನಿದಿಯೋ ಮಣ್ಣು! ಎಲ್ಲಾ ಇರೋದು ಇಲ್ಲಿ ಶೇಷಗಿರಿ ಮೆದುಳ್ನಲ್ಲಿ"

"ಹೂಂ?"

"ಹೌದು ಕಣಯ್ಯ. ನಾಳೆ ದಿವ್ಸ ನಾನೆ ಸ್ವತ: ಒಂದು ಪೇಪರ್ ತೆಗೀತೀನಿ ನೋಡ್ಕೊ."

ಶೇಷಗಿರಿ ಎಂದಾದರೊಮ್ಮೆ ಅಂತಹ ಗುಂಗಿನಲ್ಲಿರುತ್ತಿದ್ದ. ಆ ಲಹರಿಯಲ್ಲಿ ನನ್ನ ಸಂಕಟಗಳನ್ನೂ ನಾನು ತೇಳಿಬಿಟ್ಟೆ.

"ಭೇಷ್. ಅಂತೂ ಒಂದರೆಡು ಮೂರು ಸಾವಿರ ಮಾಡಿ ಇಟ್ಟಿದಿಯಾಂತನ್ನು ."

"ಪೇಪರ್ ಮಾಡೋದಕ್ಕೆ ಹಣ ಯಾತಕ್ಕಯ್ಯ ಬೇಕು?"

ಆ ವಾದವನ್ನು ಮುಂದುವರೆಸಲು ನನಗೆ ಇಷ್ಠವಿರಲಿಲ್ಲ, ಮಾತಿ ನಲ್ಲಿ ಸೋಲುವ ಗುಣ ಅವನದಾಗಿರಲಿಲ್ಲ.

"ಸರಿ ಬಿಡಪ್ಪ, ನಾಳೆದಿನ ನೀನು ದಿವಾನನೇ ಆಗಬಹುದು ಯಾರು ಕಂಡೋರು?"

ಶೇಷಗಿರಿ ಸಿಳ್ಳು ಹಾಕುತ್ತಾ ಹೊರಗೆ ಬೆಂಚಿನ ಮೇಲಿದ್ದುವನೆಲ್ಲಾ ಒಳಕ್ಕೆ ಎತ್ತಿ ಹಾಕಿ, ಬೆಂಚನ್ನು ಒಳಭಾಗಕ್ಕೆ ತುರುಕಿಸಿ, ದೀಪ ಆರಿಸಿ, ಬಾಗಿಲು ಮುಚ್ಚಿ, ಬೀಗ ತಗುಲಿಸಿದ. ತಗುಲಿಸಿದ ಮೇಲೆ ಗಟ್ಟಿ ಯಾಗಿ ಎಳೆದು ನೋಡಿದ.

"ಹುಷಾರಾಗಿರಬೇಕಪ್ಪ. ಬೀಗ ಭದ್ರವಾಗಿದೆ ತಾನೆ?"

ಆ ಅಂಗಡಿಯ ಬೀಗ ಭದ್ರವಾಗಿತ್ತು. ಬೀಗ ಇಲ್ಲದೆ ಇದ್ದು ನನ್ನ ಪಾಲಿಗೆ ಬಂದಿದ್ದ ಬಡಕಲು ಮನೆಗೆ ಮಾತ್ರ. ಕೋಟಿನ ಜೇಬಿ ನೊಳಕ್ಕೆ ಕೈ ಇಳಿ ಬಿಟ್ಟೆ. ಅಲ್ಲಿ ಬೀಗದ ಕೈ ಆನಾಥವಾಗಿ ಕುಳಿತಿತ್ತು.

"ಏನಮ್ಮಾ, ಯೋಚಿಸ್ತಾ ನಿಂತ್ಬಿಟೆ, ಏನ್ಕಥೆ?’

ಮತ್ತೂ ಎರಡು ಕ್ಷಣ ನಾನು ಸುಮ್ಮನಿದ್ದೆ.

ಅವನೊಡನೆ ಮುಂದೆ ನಡೆಯುತ್ತಾ ಹೇಳಿದೆ:

" ತುಂಬಾ ಹಸಿವಾಗ್ತ ಇದೆ ಶೇಷಗಿರಿ, ಹೊಟ್ಟೆಯೂ ಖಾಲಿ, ಜೇಬೂ ಖಾಲಿ."

"ಅದಕ್ಕೆಲ್ಲಾ ಇಷ್ಟೊಂದು ಆಳುಮೋರೆ ಹಾಕ್ತಾರೇನೋ?" ಎಂದ ಶೇಷಗಿರಿ. ನನಗೆ ನಗು ಬಂತು.

ನಾವು ಮೂಲೆಯ ಹೋಟೆಲನ್ನು ಹೊಕ್ಕೆವು. ನನ್ನ ಕಣ್ಣು ಗಳು ಕುಳಿತಿದ್ದವರ ಮೇಲೆಲ್ಲಾ ಅವಸರ ಅವಸರವಾಗಿ ಹೊರಳಿ ನೋಡಿದವು.

"ಯಾರ್ನ ಹುಡುಕ್ತಾ ಇದೀಯೋ?’

ನಾನು ಯಾರನ್ನೂ ಹುಡುಕುತ್ತಾ ಇರಲಿಲ್ಲ. ಆದರೆ, ನನ್ನ ಬಂಧುಗಳಾಗಿದ್ದ ನ್ಯಾಯ ಪರಿಪಾಲನಾ ಶಾಖೆಯವರು, ಅಲ್ಲಿ ಕುಳಿ ತಿದ್ದರೇನೋ ಎಂದು ತಿಳಿಯಲು, ನಾನು ದೃಷ್ಟಿ ಬೀರಿದ್ದೆ ಅಷ್ಟೆ.

" ಯಾರೂ ಇಲ್ಲ ಕಣೋ. ಸುಮ್ ಸುಮ್ನೆ ನೋಡ್ದೆ."

ನಿಜ ಸಂಗತಿಯನ್ನು ನಾನು ಶೇಷಗಿರಿಗೆ ಹೇಳುವ ಹಾಗಿರಲಿಲ್ಲ. ಕಳೆದ ಒಂದು ಹಗಲು ಒಂದು ರಾತ್ರಿಯಲ್ಲಿ ನನಗಾದ ಅನುಭವ ಗಳನ್ನು, ನಾನು ಆತನಿಗೆ ತಿಳಿಯ ಹೇಳುವುದು ಸಾಧ್ಯವಿರಲಿಲ್ಲ. ಆ ಅನುಭವಗಳೆಲ್ಲಾ ನನ್ನವಾಗಿಯೇ, ನನ್ನೊಬ್ಬನ ಸೊತ್ತಾಗಿಯೇ, ಉಳಿಯಬೇಕಾಗಿತ್ತು.

ಆ ಹೋಟೆಲಿನಲ್ಲಿ ಕೊನೆಯದಾಗಿ ಉಳಿದಿದ್ದ ತಿಂಡಿಗಳನ್ನು ತಿಂದೆವು. ಕಾಫಿ ಕುಡಿದೆವು. ಹೊರ ಬರುತ್ತಾ ಶೇಷಗಿರಿ ಹಣವನ್ನು ತೆತ್ತ.

" ಎಲ್ಲಪ್ಪ ಒಂದು ರೂಪಾಯಿ ಸಾಲ ಕೊಟ್ಟಿರು."

ಅವನು ಚಿಲ್ಲರೆ ಹದಿನಾರು ಆಣೆಗಳನ್ನೆಣಿಸಿ ನನ್ನ ಕೈಗೆ ಕೊಟ್ಟ.

" ಇನ್ನೂ ಒಂದು ನಾಲ್ಕಾಣೆ ಕೊಡ್ಲೇನು?"

" ಬೇಡ ಇಷ್ಟು ಸಾಕು."

ನಾನು ಅವನನ್ನು ಬೀಳ್ಕೊಟ್ಟೆ.

.........ಬೀಡಿ ಸಿಗರೇಟಿನ ಅಂಗಡಿಗೆ ಹೋಗಿ ನನ್ನ ಜೀವನದ ಮೊದಲ ಪ್ಯಾಕೇಟನ್ನು ಕೊಂಡು ಕೊಂಡೆ, ರಾತ್ರಿಸಂಚಾರಿಯಾದ ನನ್ನ ಕೈಯಲ್ಲಿ ಬೆಂಕಿಯ ಪೊಟ್ಟಣ ಯಾವಾಗಲೂ ಇರುತ್ತಿತ್ತು. ಯಾವ ಅಳುಕೂ ಅಲ್ಲದೆ, ಸಿಗರೇಟನ್ನು ಬಾಯಿಗಿರಿಸಿ, ಅದಕ್ಕೆ ಬೆಂಕಿ ಹಚ್ಚಿದೆ. ಅಳುಕುವುದರಲ್ಲಿ ಅರ್ಥವಿರಲಿಲ್ಲ. ಸಿಗರೇಟು ಸೇದುವುದನ್ನೇ ಮಹಾ ಕೆಲಸವೆಂದು ಭಾವಿಸಿದರೆ, ಬೇರೆ ಏನು ಮಾಡುವುದು ಸಾಧ್ಯವಿತ್ತು.?

ಹೊಗೆಯುಗುಳುತ್ತ ನಾನು, ಆ ಚೌಕದತ್ತ ಹೋದೆ. ಪತ್ರಿಕೆ ಮಾರುವ ಹುಡುಗರಲ್ಲಿ ಹೆಚ್ಚಿನವರು ಮನೆಗೆ ಹೋಗಿದ್ದರು. ಯಾವನೋ ಒಬ್ಬ ಪುಟ್ಟ ಹುಡುಗ ಮಾತ್ರ ಮುಖ ಬಾಡಿಸಿಕೊಂಡು ನಿಂತಿದ್ದ.

ಆ ಚೌಕ! ನಾಲ್ಕು ವರ್ಷಗಳ ಹಿಂದೆ ನಾನು ಅಲ್ಲಿ ಪತ್ರಿಕೆ ಮಾರುತ್ತಿದ್ದೆ. ನಾಲ್ಕು ವರ್ಷಗಳ ಹಿಂದೆ ಅಲ್ಲೆ, ಮಾಡದೆ ಇದ್ದ ಅಪರಾಧಕ್ಕಾಗಿ ನನ್ನನ್ನು ಜೇಬುಗಳ್ಳನೆಂದು ಕರೆದಿದ್ದರು. ಆ ಚೌಕ!

ಜನ ಸಂದಣಿಯೂ ಅಷ್ಟಾಗಿ ಇರಲಿಲ್ಲ. ಆದರೂ ಬರಲಿದ್ದ ಕೊನೆಯ ಬಸ್ಸಿಗಾಗಿ, ಆರೇಳು ಜನ ಕಾದಿದ್ದರು.ನಾನು ಅವರ ಬಳಿ ಹೋಗಿ ನಿಂತೆ. ನನ್ನ ಕಣ್ಣುಗಳು ಅಲ್ಲಿದ್ದ ಅವರನ್ನು ಪರೀಕ್ಷಿ ಸುತ್ತಲಿದ್ದುವು.

ಅಷ್ಟರಲ್ಲೆ ಮೋಟಾರು ಬಂತು. ಆ ಜನರೆಲ್ಲಾ ಒಮ್ಮೆಲೆ ನುಗ್ಗಿದರು. ಸಿಗರೇಟನ್ನೆಸೆದು ಅವರ ನಡುವೆ ನಾನೂ ನುಗ್ಗಿದೆ. ಅವರೆಲ್ಲಾ ಒಳ ಹೊಕ್ಕರು. ನಾನೊಬ್ಬನೇ ಹಿಂದೆ ಉಳಿದೆ........ ಗಾಡಿ ಚಲಿಸಿತು. ಇನ್ನೊಂದು ಸಿಗರೇಟು ಹೊರ ತೆಗೆದು ಹಚ್ಚುತಾ, ಮೋಟಾರು ಹೋದ ಹಾದಿಯನ್ನೆ ನೋಡಿದೆ........ಆ ಮೋಟಾರು ಒಮ್ಮೆಲೆ ನಿಂತಿತು. ಯಾರೋ ಕೂಗಾಡುತ್ತಿದ್ದರು. ಆ ನಿಲ್ದಾಣದಲ್ಲಿ ಮತ್ತೆ ನಿಲ್ಲದೆ, ಮೆಲ್ಲನೆ ಗಂಭೀರವಾಗಿ ಅಲ್ಲಿಂದ ನಡೆದು ಹೋದೆ.

ಅದು ದೊಡ್ಡ ಸಂಪಾದನೆಯಾಗಿರಲಿಲ್ಲ. ಆ ಬೇಟೆಯ ಪಾಕೀಟಿನಲ್ಲಿ ಐದು ರೂಪಾಯಿಯ ಒಂದು ನೋಟು, ಒಂದು ರೂಪಾಯಿ ನಾಣ್ಯ, ಮತ್ತು ಚಿಲ್ಲರೆ ಏಳು ಆಣೆಗಳಿದ್ದುವು. ಆಸ್ಪತ್ರೆಯ ಚೀಟಿಯೊಂದಿತ್ತು. ಆ ಚೀಟಿಯಲ್ಲಿ, ಹೆಸರು ಬರೆದಿದ್ದರು ಕಾವೇರಮ್ಮ, ವಯಸ್ಸು ಐವತ್ತಾರು....ಆ ವೃದ್ಧನ ಪತ್ನಿಯಾಗಿರಬಹುದು. ಪಾಕೀಟಿನೊಳಗೆ ವಿಳಾಸ ಮುದ್ರಿಸಿದ ಗುರುತು ಚೀಟಿಯಿರಲಿಲ್ಲ. ಆ ಪಾಕೀಟೇ ಹಳೆಯ ದಾಗಿ ಹರಿದಿತ್ತು. ನಾನು ದೊಡ್ಡ ಮನುಷ್ಯರನ್ನು ಬಲಿ ತೆಗೆದು ಕೊಂಡಿರಲಿಲ್ಲ. ಮಧ್ಯಮ ವರ್ಗದ್ದೊಂದು, ಕಾಹಿಲೆ ಕಸಾಲೆಗಳಿದ್ದ ತಾಪತ್ರಯಗಳಿದ್ದ ಬಡಪ್ರಾಣಿಯನ್ನು ಬಲೆಗೆ ಕೆಡವಿದ್ದೆ. ನನಗೆ ಹಣದ ತೀವ್ರ ಅವಶ್ಯತೆಯಿತ್ತು. ಅದಕ್ಕಾಗಿ ಇನ್ನೊಂದು ಜೀವದ ಸುಖದುಃಖ ನೋಡದೆ ನನ್ನ ಕೆಲಸ ನಡೆಸಿದೆ. ಆದರೂ ಆ ಔಷಧಿ ಚೀಟಿಯನ್ನು ನೋಡಿದಾಗ, ಆ ಹೆಸರನ್ನೋಡಿದಾಗ, ತಾಯಿಯ ನೆನಪಾಯಿತು. ಕಾಹಿಲೆ ನರಳುತ್ತಿದ್ದ ತಂಡೆಯ ನೆನಪಾಯಿತು. ವಾಂತಿ ಭೇದಿಯಿಂದ ನರಳಿ ಸತ್ತ ಅಜ್ಜಿಯ ನೆನಪಾಯಿತು. ಯಾರಿಗೋ ಅನ್ಯಾಯ ಮಾಡಿದ ಹಾಗೆ ನನಗೆ ತೋರುತ್ತಿತ್ತು. ಸಾಧ್ಯವಿದ್ದಿದ್ದರೆ ಅಷ್ಟನ್ನೂ ವಾಪಸ್ಸು ಒಯ್ದು ಮುಟ್ಟಿಸಿ ನಮಸ್ಕರಿಸಿ ಕ್ಷಮೆಯಾಚಿಸಿ ಹಿಂತಿರುಗುತ್ತಿದ್ದೆನೇನೋ. ಹಾಗೆ ಮಾಡಿದ್ದರೆ, ನಾನು ಮಹಾ ಮೂರ್ಖನಾಗುತ್ತಿದ್ದೆ. ನನ್ನನ್ನು ನೋಡಿ, ಸದಾ ಕಾಲವೂ ಗೇಲಿ ಮಾಡುತ್ತಿದ್ದ ಅಮೀರನನ್ನೆದುರು ಬಂದ. ನನ್ನದು ಹೆಣ್ಣು ಕರುಳಂದು ಆತ ಹೇಳುತ್ತಿದ್ದ. ಅದು ಅರ್ಥವಿಲ್ಲದ ಮಾತು. ಕರುಳು ಹಣ್ಣಿನದಿರಲಿ ಗಂಡಿನದಿರಲಿ ಎಲ್ಲರದೂ ಒಂದೇ ತರಹೆ. ಆದರೆ ದುಡಿಮೆಗೆ ಅನುಸಾರವಾಗಿ ಆ ಕರುಳು ಕಲ್ಲಾಗುತ್ತದೆ.....ಆದರು ಅಮೀರನನ್ನು ನೆನೆಸಿಕೊಂಡು ನನ್ನ ಮೃದುತನದ ಬಗ್ಗೆ ನಾನು ನಕ್ಕೆ. ಆ ಔಷಧಿ ಚೀಟಿಯನ್ನು ಎರಡು ಚೂರಾಗಿ ಹರೆದು, ಗಾಳಿಗೆ ತೊರಿದೆ. ಪಾಕೀಟನ್ನು ಮೋರಿಗೆ ಎ ಸೆದೆ...........

ಆ ಮೇಲೆ ಮತ್ತೊಮ್ಮೆ ಏನನ್ನಾದರೂ ಕುಡಿಯಬೇಕೆನಿಸಿತು ಆ ಹಾದಿಯಲ್ಲಿ ಒಂದೇ ಒಂದು ತೆರೆದಿದ್ದ ಇಸ್ಲಾಮಿಯಾ ಹೋಟೆಲಿತ್ತು. ಒಲಹೋಗಿ ಕುಳಿತು, " ಚಾ ಲಾವ್," ಎಂದೆ. ಆ ಹುಡುಗ ನನ್ನನ್ನೆ ನೋಡಿದ. ನಾನು ಹಿಂದುವೆ? ಮುಸಲ್ಮಾನನೆ? ಮತ್ತೆ ಸಿಗರೇಟು ಉರಿಸಿ ಮುಖದ ಎದುರು ಹೊಗೆಯ ತೆರೆಯೆಬ್ಬಿಸುತ್ತಾ, ನನ್ನನ್ನೆ ದಿಟ್ಟ ಸುತ್ತಿದ್ದ ಆ ಹುಡುಗನನ್ನು ನೋಡಿದೆ. ನನ್ನ ಕಿವಿಗಳಲ್ಲಿ ತೂತುಗಳಿರಲಿಲ್ಲ. ನನ್ನ ನಡಿಗೆಯಲ್ಲಿ ಹಿಂದುತನ ವಿರಲಿಲ್ಲ. ನಾನು ಮುಸಲ್ಮಾನ ನಿದ್ದರೂ ಇರಬಹುದು......... ಆ ಹುಡುಗ ಅಂತಹ ಸಂದೇಹದಲ್ಲಿ ತೇಲಿ ಮುಳುಗುತಿದ್ದ. ಅವನನ್ನು ಗೊಂದಲದಲ್ಲಿ ಕೆಡವಿದ ನಾನು ಸಮಾಧಾನದಲ್ಲಿದ್ದೆ. ಹೌದು ಯಾಕಾಗಬರದು? ನಾನು ಯಾವ ಜಾತಿಯವನೂ ಆಗಬಹುದು. ಮುಖ್ಯ ವಿಷಯವೆಂದರೆ ನನ್ನನ್ನಿವರು, ಮನುಷ್ಯಜಾತಿಯವನೆಂದು ಒಪ್ಪಿಕೊಂಡಿದ್ದಾರೆ........ ಚಹದ ಲೋಟ ವನ್ನು ಎರಡು ಗುಟುಕಿಗೆ ಬರಿದು ಮಾಡಿದೆ....... ಇದೇ ಆಶ್ಚರ್ಯ! ನಾನು ಮನುಷ್ಯ ಜಾತಿಯವನೆಂದು ಇವರು ಒಪ್ಪಿಕೊಂಡಿದ್ದಾರೆ. ಸುತ್ತಲೂ ಕಾಣುವವರೆಲ್ಲಾ, ಮನುಷ್ಯರೆಂದು ಒಪ್ಪಿಕೊಳ್ಳಲು, ನಾನು ಸಿದ್ಧನಿರಲಿಲ್ಲ ಅದು ನನಗೆ ಅವಮಾನದ ಮಾತಾಗು ತಿತ್ತು. ಈ ಸಮಾಜದಲ್ಲಿ, ಮನುಷ್ಯರು ಹಲವರಿದ್ದರು ನಿಜ. ಆದರೆ ಎಲ್ಲರೂ ಮನುಷ್ಯರಾಗಿರಲಿಲ್ಲ.

ಆದಾದ ಮೇಲೆ ಮತ್ತೆ ಬೀದಿ. ಯಾವುದು ನನ್ನ ಮನೆ?

ಯಾರು ನನ್ನವರು? ಎಲ್ಲಿಗೆ ನನ್ನ ಪಯಣ?.....ನಾನು ನಡೆಯು ತ್ತಲೇ ಇದ್ದೆ.ಇನ್ನು ಜನ ಸಂಚಾರ ಮತ್ತಷ್ಟು ನಿಬಿಡವಾಗುವುದು. ಆ ಮೇಲೆ, ಬೂದು ಕೋಟು ಹೊದ್ದುಕೊಂಡು. ಕೈ ದೊಣ್ಣೆಯಿಂದ ನೆಲವನ್ನು ಕುಟ್ಟಿ ಟಕ್ ಟಕ್ ಸದ್ದು ಮಾಡುತ್ತಾ ಸೀಟಿ ಊದಿ ಕೊಂಡು, ಪೋಲೀಸರು ಬರುವರು-ಗಸ್ತಿನ ಪೋಲೀಸರು.

ಇವರ ಬಗ್ಗೆ, ನಾನು ಯೋಚಿಸಬೇಕಾದ್ದಿರಲಿಲ್ಲ.ಆದರೆ, ಆ ಬಿ.ಎ.ಕಟ್ಟಿದ ಹುಡುಗನ ತಂದೆಯಾದ ಪೋಲೀಸು ಅಧಿಕಾರಿ, ಫೈಲು ಸಿದ್ದವಾಗುತ್ತಿದೆ ಎಂದಿದ್ದನಲ್ಲವೆ? ಆ ಫೈಲು.....ಇನ್ನು ನಾನು ಮಹತ್ವದ ವ್ಯಕ್ತಿ. ನಾನು ಎತ್ತ ತಿರುಗಿದರೂ ಏನ್ನು ಮಾಡಿ ದರೂ, ತಮ್ಮ ಡೈರಿಯಲ್ಲಿ ಅದನ್ನು ಅವರು ಬರೆದಿಡುವರು-ತಾವು ಕಂಡರೆ, ತಮಗೆ ಗೊತ್ತಾದರೆ ಬರೆದಿಡುವುದು. ನನ್ನ ಫೈಲು ದಪ್ಪ ದಪ್ಪನಾಗುತ್ತ ಹೋಗುವುದು.

ಇದೊಂದು ತಮಾಷೆ. ಆ ಫೈಲನ್ನು ಓದಿ ನೋಡಬೇಕೆಂಬ ಆಸೆ ನನಗೆ. ಬೇರೆಯವರು ನಮ್ಮನ್ನು ಕಾಣುವ ರೀತಿಯನ್ನು ತಿಳಿದು ಕೊಳ್ಳುವುದರಲ್ಲೂ ಸ್ವಾರಸ್ಯವಿರುತ್ತದೆಲ್ಲವೆ?........

ನಡೆಯುತ್ತಾ ನಾನು ಆ ಹೈಸ್ಕೂಲಿನತ್ತ ಬಂದೆ. ಅಜ್ಜಿಯ ಮರಣದಿಂದ ನಿನ್ನೆಯವರಿಗೆ, ಎಷ್ಟೋ ಕಾಲ ಕಳೆದಿತ್ತು. ಆದರೆ ಎಲ್ಲವೂ ಏಕ ಪ್ರಕಾರವಾದ ದಿನಗಳು. ಕಾಲ ಕಳೆದಿತ್ತು, ಆದರೆ ನನ್ನ ಜಗತ್ತು ಚಲಿಸಿರಲಿಲ್ಲ. ಈಗ ಮಾತ್ರ ನಾನು ಎಷ್ಟೊಂದು ದೂರ ಬಂದ ಹಾಗಾಯ್ತು-ಎಷ್ಟೊಂದು ದೂರ!

ನನಗೆ ಆಯಾಸವಾಗಿತ್ತು. ಆ ಹೈಸ್ಕೂಲಿನ ಆವರಣವನ್ನು ನಾನು ಹೊಕ್ಕೆ. ನಗರದ ಇನ್ನೊಂದು ಮೂಲೆಯಲ್ಲಿ, ಹಿಂದೆ ನಾನು ಓದುತ್ತಿದ್ದ ಹೈಸ್ಕೂಲಿತ್ತು. ಆದರೆ ಅಲ್ಲಿ ಓದು ಪೂರ್ಣವಾಗಿರಲ್ಲಿಲ. ಇಲ್ಲಿ ಈ ಹೈಸ್ಕೂಲಿನ ಜಗಲಿಯ ಮೇಲೆ, ಕೈ ತೋಳನ್ನೆ ದಿಂಬಾಗಿ ಮಾಡಿ ನಾನು ಮಲಗಿಕೊಂಡಾಗ, ಒಂದೊಂದು ತರಗತಿಯಲ್ಲೂ ಕಲಿತ, ವಿಧ ವಿಧದ ಪಾಠಗಳು ನೆನಪಿಗೆ ಬಂದವು. ಒಂದು ಕಾಲ ದಲ್ಲಿ ನಾನು ತರಗತಿಗೆ ಮೊದಲಿಗನಾಗಿದ್ದೆ ಹಿರೇಮಣಿ ಈಗ.........

ಮತ್ತೆ ಆ ಚೌಕದ ನೆನಪು.....

ಆ ನೆನಪಿನಲ್ಲೇ ನಿದ್ದೆ.....

ನಿದ್ದೆಯಲ್ಲಿ ನಾನು ಆಗ, ಗೊರಕೆ ಹೊಡೆಯುತ್ತಿದ್ದೆನೋ ಇಲ್ಲವೋ ತಿಳಿಯದು. ಅಮೀರ್ ಮತ್ತು ಶೀಲಾ ಗೊರಕೆಗಾಗಿ

ನನ್ನನು ಎಂದೂ ಗೇಲಿ ಮಾಡಿದವರಲ್ಲಿ. ನನ್ನ ಜೀವನದಲ್ಲಿ ಮತ್ತೊಂದು ರಾತ್ರೆ ಕಳೆದು ಬೆಳಗಾಯಿತು. ಅಲ್ಲಿಂದೆದ್ದು, ಬೀದಿಯುದ್ದಕ್ಕೂ ಉರಿಯುತ್ತಿದ ಸಿಗರೇಟಿನ ಜೊತೆ ಗೂಡಿ ನಡೆದು, ನಮ್ಮ ಮನೆ ಸೇರಿದೆ.

ನೆರೆಮನೆಯವರಿಗೆ, ನನ್ನನ್ನು ಮಾತನಾಡಿಸುವ ಆಸಕ್ತಿ ಇದ್ದಂತೆ ತೋರಲಿಲ್ಲ. ಆ ದಿನವೇನೋ ನೀರು ಸೇದಲೆಂದು ಕೊಡ ಹಗ್ಗವನ್ನು ಎರವಲು ಪಡೆದೆ......ಇದೊಂದು ಮನೆಯಾಗಬೇಕಾದರೆ ಇಲ್ಲಿ ಕೆಲವು ಸಾಮಾನುಗಳಾದರೂ ಇರಬೇಕು. ಇಲ್ಲದೆ ಹೋದರೆ, ಹೈಸ್ಕೂಲಿನ ಜಗಲಿಯೂ ಒಂದೇ ಈ ಮನೆಯೂ ಒಂದೇ.

ಸೇವೆ ಮಾಡಿ ಜೋಟುದ್ದವಾಗಿದ್ದ ಪರಕೆಯೊಂದು, ಒಂದೆಡೆ ಕುಳಿತಿತ್ತು. ಅದನ್ನೆತ್ತಿಕೊಂಡು, ಮನೆಯನ್ನೆಲ್ಲಾ ಗುಡುರಸಿದೆ. ಈ ಮನೆಯ ಗೋಡೆಗಳಿಗೆ ಸುಣ್ಣಸಾರಿಸಿದರಾಗಬಹುದೆಂದು ತೋರಿತು ಅಜ್ಜಿ ನನಗೋಸ್ಕರ ಬಿಟ್ಟು ಹೋದ ಈ ಮನೆ ಎಷ್ಟೊಂದು ವಿಶಾಲವಾ ಗಿಲ್ಲ! ಅಮೀರನೂ ಶೀಲಳೂ ಇದ್ದ ಆ ಗೂಡು?......ನನಗೊಬ್ಬ ನಿಗೇ ಇಷ್ಟೊಂದು ದೊಡ್ಡಮನೆ ಯಾಕೆ ಬೇಕು? ಆದರೆ ನನ್ನ ಜೀವನ ದಲೂ ಯಾರಾದರೊಬ್ಬಳು ಶೀಲ-ಥೂ! ಧೂಳು ನನ್ನ ಮೂಗಿನ ಒಳಹೊಕ್ಕಿತ್ತು. ನಾನು ಸೀದಿದೆ ಮೂಗಿನ ನೀರನ್ನು, ಅಲ್ಲೆ ಎಸೆ ಯಲು ಇಷ್ಟಪಡದೆ ಹಿತ್ತಿಲ ಬಾಗಿಲಿಗೆ ಹೋದೆ. ಅಲ್ಲಿ ಆ ಗುಡಿಸಲು ನಿಂತಿತ್ತು. ನಾನು ಬೆಳೆದು ದೊಡ್ಡವನಾದ, ದೊಡ್ಡವನಾದ ನನ್ನ ತಂದೆ ಬೆಳೆದು ಮುದುಕನಾದ, ಆ ಕೊಟ್ಟಿಗೆ. ಅಲ್ಲಿ ರುಕ್ಕೂ ಚಂದ್ರೂ ಎನ್ನುತ್ತಾ, ತಂದೆ ಸತ್ತಿದ್ದ......"ಚಂದ್ರೂ, ನೀನು ಆ ದಿವ್ಸ ಪಾಕೀಟು ಕದ್ದಿರಲಿಲ್ಲ ಅಲ್ವ? ಅಲ್ವ ಚಂದ್ರೂ?".....ನನ್ನೆದೆ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. "ನಾನು, ಪಾಕೀಟು ಕದ್ದಿ ದೀನಿ ಅಪ್ಪಾ. ನಾನು ಪಾಕೀಟು ಕದ್ದಿದೀನಿ. ಅವತ್ತಲ್ಲ, ಈಗ. ಕದೀಬೇಕೊಂತ ನಾನಾಗಿ ಇಷ್ಟಪಡಲಿಲ್ಲ ಪಡಲಿಲ್ಲ, ಆದರೆ ಬೇರೆ ಹಾದೀನೇ ಇರಲಿಲ್ಲ ಆಪ್ಪ. ದೊಡ್ಡ ಮನುಷ್ಯ ಆಗೋದು ಸಾಧ್ಯವಾಗಲಿಲ್ಲ ಅಪ್ಪ".....

... ನಾನು ಮುಖ ಮುಚ್ಚಿಕೊಂಡು ಒಳಕ್ಕೆ ಓಡಿದೆ. ಅಳಲಿಲ್ಲ. ನಾನು ಅಳುವುದು ಸಾಧ್ಯವೇ ಇರಲಿಲ್ಲ.... ಹೊರಗೆ ತಂಗಾಳಿ ಬೀಸಿತು. ಬಲು ನಿಧಾನವಾಗಿ ಮನಸ್ಸಿನ ನೆಮ್ಮದಿ ಮರಳಿ ಬಂತು. ಮತ್ತೆ ದೀರ್ಘವಾದೊಂದು ಹಗಲು, ನೀಳವಾಗಿ ನನ್ನ ಮುಂದೆ, ಮೈ ಚಾಚಿ ಮಲಗಿತ್ತು. ಅದು ಮುಂಜಾವದಲ್ಲಿ ಕಾಣುವ ದೀರ್ಘವಾದ ಕರಿ ನೆರಳು. ಸಂಜೆಯೂ ಆ ನೆರಳು ಕಾಣಿಸುವುದು. ಆದರೆ ಅದು ಮೈ ಚಾಚಿದ ದೀರ್ಘವಾದ ಕತ್ತಲೆಯ ಸಂಕೇತ.

ಒಳ ಮನೆಯಲ್ಲಿ ತಣ್ಣನೆ ನೆಲದ ಮೇಲೆ ನಾನು ಮಲಗಿದೆ. ನುಣುಪಾಗಿತ್ತು ಆ ನೆಲ. ಪುಟ್ಟದಾದೊಂದು ನಯವಾದ ಕಲ್ಲನ್ನು ನೆಲದ ಮೇಲೆ ತೀಡಿ ಸಾರಣೆ ಮಾಡಿ ಆ ನೆಲವೆಲ್ಲಾ ನುಣು ಪಾಗುವ ಹಾಗೆ ಅಜ್ಜಿ ಮಾಡಿದ್ದಳು ನೆಲವೂ ನುಣುಪಾಗಿತ್ತು. ತೀಡಿ ತಿಕ್ಕಿ ಆ ಕಲ್ಲೂ ನುಣುಪಾಗಿತ್ತು. ತೀಡಿ ತಿಕ್ಕಿ, ಸವೆದು ಹೋದ ಆ ಕಲ್ಲು ಮತ್ತು ಹಾಗೆಯೇ ಸವೆದು ಹೋದ ಆ ಜೀವ.....

ಬರಿ ಹೊಟ್ಟೆಯಲ್ಲೆ ಮಲಗಿದ್ದೆನಾದರೂ ನಿದ್ದೆ ಬಂತು. ಎಚ್ಚೆ ತ್ತಾಗ, ನಡು ಹಗಲು ದಾಟಿರಬೇಕು...... ಆ ಮೇಲೆ ಊಟದ ಬೇಟೆ. ಅಜ್ಜಿ ಮಾಡಿದ ಅಡುಗೆಯಲ್ಲ, ಶೀಲಳ ಕೈ ಅಡುಗೆಯಲ್ಲ. ಯಾವುದೋ ಅಯ್ಯರ್ ಮಾಣಿಯ ಹುಳಿ ಸಾರು. ಇಲ್ಲವೆ ಯಾವುದೋ ಮಲ ಬಾರು ಹುಡುಗನ ಬಿರಿಯಾಣಿ-ಚಾಪೀಸು.

ಹೇಗೋ ಹೊಟ್ಟೆ ತುಂಬಿಸಿಕೊಂಡೆ. ಕಳವಾಗಿದ್ದ ರೇಜರ್ ಸೆಟ್ಟಿನ ಬದಲು ಇನ್ನೊಂದನ್ನು ತಂದೆ. ಆ ಪೋಷಾಕಿಗೆ ಕೈ ಇಸ್ತ್ರಿ. ಷೂಗಳಿಗೆ ಕಾಗದದ ಚೂರಿನಿಂದ ಧೂಳೊರೆಸುವ ಪಾಲೀಶು......

ತಡಮಾಡುವುದರಲ್ಲಿ ಅರ್ಥವಿರಲಿಲ್ಲ. ಉಪವಾಸ ಸಾಯು

ವುದರಲ್ಲಂತೂ ಯಾವ ಅರ್ಥವೂ ಇರಲಿಲ್ಲ. ಕೂಲಿಯಾಗಿದ್ದು ಬಾಳ ಬೇಕಿತ್ತೆಂದು ನೀತಿ ಬೋಧಕರು ಹೇಳುವುದು ಸಾಧ್ಯ. ಆದರೆ ಕೂಲಿ ಯಾಗಿ ನನ್ನ ತಂದೆ, ಕ್ಷಯರೋಗ ಸಂಪಾದಿಸಿದ.....ಆ ಸಂಪಾದನೆ ನನಗೆ ಇಷ್ಟವಿರಲಿಲ್ಲ. ಇಲ್ಲ, ಯಾವ ತೊಂದರೆಯೂ ಇಲ್ಲದೆ ನಾನು ಬಾಳಬೆಕು........

ನನ್ನ ಫೈಲನ್ನು ಸಿದ್ಧಗೊಳಿಸಿದ ಅಧಿಕಾರಿಯ ಕ್ಷೇತ್ರದಿಂದ ದೂರವಾಗಿ, ನಗರದ ಇನ್ನೊಂದು ಭಾಗದಲ್ಲಿ ಆ ಸಂಜೆ ಬೀಡು ಬಿಟ್ಟೆ. ಆ ಥಿಯೇಟರಿನ ಹೊರ ಭಾಗದಲ್ಲಿ, ಎಲ್ಲರೂ ನನಗೆ ಕಾಣುವ ಒಂದು ಜಾಗದಲ್ಲಿ ನಿಂತೆ. ಆರೂವರೆಗೆ ಆ ಇಬ್ಬರು ಜಟಕಾದಲ್ಲಿ ಬಂದಿಳಿ ದರು- ಹುಡುಗ ಮತ್ತು ಯುವತಿ. ಅಕ್ಕ ತಮ್ಮ ಇದ್ದ ಹಾಗಿದ್ದರು. ಮೂರೆಳೆಯ ಬಂಗಾರದ ಸರ ಬಲು ಮಾಟವಾಗಿ ಅವಳ ಕತ್ತಿನ ಸುತ್ತಲೂ ತೂಗಾಡುತ್ತಿತ್ತು. ಆ ಸರಕ್ಕಿಂತಲೂ ಹೆಚ್ಚಾಗಿ, ತನ್ನ ವಕ್ಷ ಸ್ಥಳದ ಪ್ರದರ್ಶನವೇ ಅವಳಿಗೆ ಮುಖ್ಯವಾಗಿತ್ತು. ಬಾರಿ ಬಾರಿಗೂ ಜಾರುತ್ತಿದ್ದ ಬೆಲೆ ಬಾಳುವ ರೇಶ್ಮೆ ಸೀರೆ. ಆಗರ್ಭ ಶ್ರೀಮಂತಿಕೆಯ ಸರಳತನವನ್ನು ತೋರುವ ತೆಳು ಚಪ್ಪಲಿ. ದೇಹ, ಎತ್ತರಕ್ಕೆ ಬೆಳೆ ಯುವುದನ್ನು ನಿಲ್ಲಿಸಿ ಸುತ್ತಲೂ ಜಾಗ ಆಕ್ರಮಿಸಿಕೊಳ್ಳತೊಡಗಿತ್ತು. ಊದಿಕೊಳ್ಳುತ್ತಿದ್ದ ಮುಖದಿಂದ ಕಾಡಿಗೆ ತುಂಬಿದ ಎರಡು ಕಣ್ಣುಗಳು ಬಲು ಆತುರದಿಂದ ಇದ್ದವರನ್ನೆಲ್ಲಾ ನೋಡುತ್ತಿದ್ದುವು. ಅಂಥ ವರ್ಗದ ಆ ಪಾತ್ರ ನನಗೆ ಅಪರಿಚಿತವಾಗಿರಲಿಲ್ಲ. ನಿಂತಲ್ಲಿಂದ ಮುಂದೆ ಬಂದು ಅವರ ಹಿಂಭಾಗದಲ್ಲೆ ನಡೆದು, ನಾನೂ ಅದೇ ಟಕೆಟು ಪಡೆದೆ. ಮೊದಲ ತರಗತಿಯ ಒಂದೊವರೆ ರೂಪಾಯಿ ಟಿಕೆಟು.

ತನ್ನ ಹಿಂದೆಯೇ ನಿಂತಿದ್ದ ನನ್ನನ್ನು ಆಕೆ ಅರೆ ಕ್ಷಣ ನೋಡಿ ದಳು. ಆ ತುಟಿಗಳು ಏನನ್ನೋ ಮಾತನಾಡಲು ಬಯಸುತ್ತಿದ್ದವು. ನಿನ್ನ ಸಂಕಟವನ್ನು ನಾನು ಬಲ್ಲೆ ಎನ್ನುವ ಹಾಗೆ, ಹೌದೋ ಅಲ್ಲವೋ ಅನ್ನುವಷ್ಟು ಸೂಕ್ಷ್ಮವಾಗಿ, ನಾನು ಮುಗುಳು ನಕ್ಕೆ.

ಅವರಿಬ್ಬರೂ ತಮ್ಮಸ್ಥಾನಗಳಲ್ಲಿ ಕುಳಿತರು. ಅವರ ಹಿಂದಿ ದ್ದುದು ಒಂದೇ ಸಾಲು. ನಾನು ಅತ್ತ ನಡೆದೆ. ಅದೆಂತಹ ಚಿತ್ರವೋ ಏನೋ.. ಬಾಲ್ಕನಿಯಲ್ಲಿ ಹೆಚ್ಚು ಜನರಿರಲಿಲ್ಲ, ನಾಲ್ಕಾರು ಜನ ಮುಖ ತಿರುಗಿಸಿ, ಚಿಕ್ಕ ಹುಡುಗಿಯ ಹಾಗೆ ಕಕಿಲಕಿಲನೆ ನಗುತ್ತಿದ್ದ ಈ ತಾಯಿಯನ್ನೆ ನೋಡುತ್ತಿದ್ದರು. ಆಕೆ ಅತ್ತ ಇತ್ತ ಕತ್ತು ತಿರುಗಿಸು ತ್ತಿದ್ದಳು. ಅವಳ ಕಟಾಕ್ಷ ಹಿಂಭಾಗದಲ್ಲೆ ಇದ್ದ ನನ್ನ ಮೇಲೂ ಬೀಳ ದಿರಲಿಲ್ಲ, ದೀಪ ಆರಿಕೊಂಡಿತು. ಚಿತ್ರದ ಆರಂಭ.

ಸಿಗರೇಟು ಹೊರ ತೆಗೆದು ಮುಖ ಬಾಗಿಸಿ, ನಾನು ಸೇದ ಬಹುದೆ? ಆಕ್ಷೇಪವಿಲ್ಲವಷ್ಟೆ ? ಎಂದು ಇಂಗ್ಲಿಷಿನಲ್ಲಿ ಕೇಳಿದೆ.

"ಸೇದಿ, ಅದಕ್ಕೆನಂತೆ? ಏನು ಮಾಡೋದಕ್ಕೂ ನೀವು ಸ್ವತಂತ್ರರು."......

ಆ ಭಾಷೆ ನನಗೆ ಹೊಸದಾಗಿತ್ತು, ಆದರೆ ಆರ್ಥವಾಗುವುದು ತಡವಾಗಲಿಲ್ಲ........ ಏನು ಮಾಡುವುದಕ್ಕೂ ನಾನು ಸ್ವತಂತ್ರ........

ಅವರು ತೆರೆಯ ಮೇಲಿನ ಚಿತ್ರಗಳನ್ನು ನೋಡುತ್ತಿದ್ದರು. ನಾನು ಆ ಶ್ರೀಮತಿಕೆಯ ಕತ್ತಿನ ಮೇಲಿನ ಸರವನ್ನು ನೋಡುತ್ತಿದ್ದೆ. ದೃಷ್ಟಿ ಮತ್ತೂ ಅತ್ತಿತ್ತ ಚಲಿಸುತ್ತಿತ್ತು, ಆ ಬ್ರೌಸಿನ ಆಕೃತಿ, ತೆರೆದು ನಿಂತ ಕೊರಳ ಭಾಗ, ಮತ್ತೂ ಕೆಳಗೆ–ಇಷ್ಟಿದ್ದರೂ ದೃಷ್ಟಿ ನನ್ನ ಹತೋಟಿಯನ್ನು ತಪ್ಪಿಹೋಗದೆ ಅ ಸರದ ಮೇಲೆಯೇ ಕುಳಿತಿತ್ತು. ಆ ಸರ... ಅದರ ಸುಲಭವಾದ ಕೊಂಡಿ........ ಅದಕ್ಕೆ ದೊರೆಯ ಬಹುದಾದ ಬೆಲೆ....... ಇಂಥದನ್ನು ಮಾರಲು ಬೇಕಾಗುವ ಏರ್ಪಾಟು ........ಯೋಚನೆ ಮುಂದೆ ಧಾವಿಸಿದಾಗ ಮತ್ತೆ ಹಿಡಿದು ತಂದು ವಸ್ತು ಸ್ಥಿತಿಗೆ ನಿಲ್ಲಿಸುತ್ತಿದ್ದೆ. ಮೊದಲ ಕೆಲಸ ಮೊದಲು.

ಎಡ ಕಾಲ ಮೇಲೆ ವಿರಮಿಸಿದ್ದ ನನ್ನ ಬಲ ಕಾಲು ಆಕೆಯ ಕುರ್ಚಿಯ ಹಿಂಭಾಗದಲ್ಲಿ ಮೌನವಾಗಿ ನಿಶ್ಚಲವಾಗಿ ನಿಂತಿತ್ತು. ತಮ್ಮ ನೊಡನೆ ಮಾತನಾಡುತ್ತಿದ್ದ ಉತ್ಸಾಹದ ಭರದಲ್ಲಿ, ಒಮ್ಮೆ ಆಕೆ ಎಡ ಗೈಯನ್ನು ಹಿಂಭಾಗಕ್ಕೆ ಇಳಿಬಿಟ್ಟಳು. ಆ ಕೈ ನನ್ನ ಉಣ್ಣೆಯ ಪ್ಯಾಂಟನ್ನು ಸೋಂಕಿತು. ಅದು ಹತ್ತಿಯ ಬಟ್ಟಯಲ್ಲವಿಂದು ಅದಕ್ಕೆ ಸಮಾಧಾನವಾಯಿತೇನೋ? ನಾನು ಕಾಲನ್ನು ಚಲಿಸಲಿಲ್ಲ. ಆಕೆಯ ಕೈ ವಾಪಸು ಹೋಗಬಹುದೆಂದಿದ್ದೆ. ಅದು ಹೋಗಲೂ ಇಲ್ಲ........

....... ನಿಮಿಷಗಳು ಕಳೆದುವು. ನಾನು ಇನ್ನೊಂದು ಸಿಗರೇಟು ಉರಿಸಿದೆ. ಬೇಕೆಂದೇ ಹೊಗೆಯನ್ನು ನೇರವಾಗಿ ಮುಂದಕ್ಕೆ ಉಗು ಳಿದೆ. ಅವಳು ಉನ್ಮಾದಗೊಂಡವಳಂತೆ ತಲೆ ಕೊಂಕಿಸಿದಳು. "ಥೂ" ಎಂದು ಅಲ್ಲಿಂದ ಎದ್ದು ಹೋಗಬೇಕೆನಿಸಿತು... ಬೀದಿಯಲ್ಲಿ ಆ ದಿನ ಧರ್ಮರಕ್ಷಕರ ಹೊಡೆತಗಳನ್ನು ಸಹಿಸಲಾರದೆ ಬಿದ್ದಿದ್ದ ಆ ಮುಗ್ಢ ಜೀವ. .... ಸಮಾಜದ ದೃಷ್ಟಿಯಲ್ಲಿ ಆಕೆ ಪಾಪಿ. ಆದರೆ ನನ್ನ ಪ್ಯಾಂಟನ್ನು ಸೂಕ್ಷ್ಮವಾಗಿ ಮುಟ್ಟಿ ನೋಡುವ ಈ ಹೆಣ್ಣು ಮೃಗ, ಸಮಾಜದಲ್ಲಿ ಪ್ರತಿಷ್ಠಿತರಾದ ಯಾರೋ ದೊಡ್ಡ ಮನುಷ್ಯರ ಮಗಳು..........

ಅಂತೂ ವಿರಾಮದ ವೇಳೆ ಬಂತು. ಆಗ ಆ ಕೈ ಮುಂದಕ್ಕೆ ಸರಿಯಿತು. ದೀಪದ ಬೆಳಕಿನಲ್ಲಿ ಅವಳು ತಲೆ ಕೊಂಕಿಸಿ, ನನ್ನನ್ನೊಮ್ಮೆ ನೋಡಿದಳು. ಆ ಮುಖದಲ್ಲಿ ಅಸಮಾಧಾನ ತುಂಬಿತ್ತು. ನಾನು, ಅರ್ಧ ಮುಚ್ಚಿದ ಎವೆಗಳೆಡೆಯಿಂದ, ಅವಳನ್ನೆ ನೋಡಿದೆ.

ಮತ್ತೊಮ್ಮೆ ದೀಪ ಅರಿತು. ಅದನ್ನೆ ಕಾದಿದ್ದವಳ ಹಾಗೆ ಆಕೆ ಕೈಯನ್ನು ಹಿಂದಕ್ಕೆ ಇಳಿಬಿಟ್ಟಳು. ನಾನು ಮುಂದಕ್ಕೆ ಕೊಂಚ ಬಾಗಿದೆ. ಆ ಭುಜವನ್ನು ನನ್ನ ಬಲಗೈ ಸೋಂಕಿತು. ಬಲು ನಿಧಾನ ವಾಗಿ ಕಳೆದ ಕೆಲವು ನಿಮಿಷಗಳು........... ಬಿಸಿಯುಸಿರು. ಬಿಡುತ್ತಿದ್ದ ಆ ಜೀವಕ್ಕೆ ರವಕೆಯ ಮೇಲಿನಿಂದ ಸರ ಹರಿದು ಹೋದ ಸಪ್ಪಳ ಕೇಳಿಸಲಿಲ್ಲವೇನೊ? ಹರಿದಾಟದ ಅನುಭವವಾಗಲಿಲ್ಲವೇನೊ? ............ ನಾನು ಮತ್ತೆ ನಾಲ್ಕು ನಿಮಿಷಗಳಾದ ಮೇಲೆ ಹಿಂದಕ್ಕೆ ಸರಿದೆ. ಮತ್ತೊಂದು ಸಿಗರೇಟು. ನನ್ನ ಮುಖ ಸ್ವಲ್ಪ ಬೆವತಿತ್ತು. ಬೆವತು ಆರುವವರೆಗೂ ಅಲ್ಲೆ ಕುಳಿತೆ. ಆ ಮೇಲೆ ಕೈತಕವಾಗಿ ಒಂದೇ ಸಮನೆ ಕೆಮ್ಮಿದೆ , ಕೆಮ್ಮು ಉಗುಳಲು ಹೊರಟವನ ಹಾಗೆ ಬಲು ನಿಧಾನವಾಗಿ, ನಡೆದು ಹೊರ ಹೋದೆ. ನನ್ನ ಪಾಲಿನ ಚಲಚ್ಚಿತ್ರ ಆ ದಿನದ ಮಟ್ಟಗೆ ಮುಕ್ತಾಯವಾಗಿತ್ತು.

ಅಲ್ಲಿಂದ ಮನೆಗೆ ಜಟಕ ಬಲು ವೇಗವಾಗಿ, ನನ್ನನ್ನು ಹೊತ್ತು ತಂದಿತು. ಜಟಕಾದ ಸಾಬಿ 'ಸಾಹೇಬರೇ' ಸಾಹೇಬರೆ' ಎಂದು ನನ್ನನ್ನು ಗೌರವಿಸುತ್ತಿದ್ದ. ಅವನ ಪಾಲಿಗೆ ನಾನೊಬ್ಬ ಅಮೀರನಾದ ವ್ಯಕ್ತಿ. ಕುಡಿದು, ಗಂಭೀರನಾಗಿದ್ದವನ ಸೋಗು ಹಾಕಿ, ನಾನು ನಮ್ಮ ಹಿಂದೆ ಹಾದು ಹೋದ ದೀಪದ ಕಂಬ ಗಳನ್ನು ಎಣಿಸಿದೆ-ಜನರನ್ನು ಎಣಿಸಿದೆ.

ಮನೆ ಸೇರಿದ ಮೇಲೆ, ಮಲಗುವ ಯೋಚನೆ. ನಾನು ಹಿತ್ತಿಲ

ಬಾಗಿಲು ತೆರೆದು ಆ ಕೊಟ್ಟಿಗೆಯ ಮುಖ ನೋಡಲಿಲ್ಲ. ಹಾಸಿ ಕೊಳ್ಳಲು ನನ್ನಲ್ಲಿ ಬಟ್ಟೆ ಚೂರಿರಲಿಲ್ಲ, ಹೊದ್ದುಕೊಳ್ಳಲೂ ಇರಲಿಲ್ಲ. ನಾಳೆಯೇ ಅಷ್ಟನ್ನೂ ಕೊಂಡು ತರಬೇಕು. ಹೊಸ ದೀಪ, ಎಣ್ಣೆ, ಕೊಡ ಹಗ್ಗ, ಬಟ್ಟೆ ಬರೆ—ಇವೆಲ್ಲವನ್ನೂ ಭದ್ರವಾಗಿಡಲು ಬೀಗ, ಇವಿಷ್ಟನ್ನೂ ಹೊಸದಾಗಿ ತರಬೇಕು. ಅದಕ್ಕೆ ಹಣ?...ತಡ ಮಾಡದೆ ಆ ಸರವನ್ನು ನಾನು ಮಾರಬೇಕು.

......ಆ ಮಾರಾಟ ಸುಲಭವಾಗಿರಲಿಲ್ಲ, ನನ್ನ ಪಾಲಿಗೆ

ಅಂತಹ ಮಾರಾಟ ಹೊಸದು. ಬೊಂಬಾಯಲ್ಲಿ ಆ ರೀತಿಯ ಕೆಲಸ ಕಾರ್ಯಗಳನ್ನು ಅಮಿಾರ ವಹಿಸಿಕೊಳ್ಳುತ್ತಿದ್ದ, ಅದಕ್ಕೆ ಬಲು ಭದ್ರ ವಾದ ವ್ಯವಸ್ಥೆಯಿತ್ತು ಎಂತಹ ವಸ್ತುವೂ ಒಂದೆರಡು ಗಂಟೆಗಳ ಹೊತ್ತಿನೊಳಗಾಗಿ ಹಣವಾಗಿ ಮಾರ್ಪಡುತ್ತಿತು. ತಡವಾಗುವ ಲಕ್ಷಣವಿದ್ದರೆ, ಸ್ವಲ್ಪ ಹಣ ಮುಂಗಡವಾಗಿ ದೊರೆಯುತ್ತಿತ್ತು, ನಮ್ಮ ಊರು ಬೊಂಬಾಯಿಯಲ್ಲ, ಕಳ್ಳತನ ಇಲ್ಲಿ ಯಾವತ್ತೂ ಇರಲಿಲ್ಲ ವೆಂದಲ್ಲ. ಆದರೆ ಇಲ್ಲಿನ ಕಳ್ಳರಿಗೆ, ಆಧುನಿಕ ವ್ಯವಹಾರ ಚಾತುರ್ಯ ಗಳು ತಿಳಿದಿರಲಿಲ್ಲ.

ಹೀಗೆ ಬಲು ತೊಡಕಿನ ಸಮಸ್ಯೆಯನ್ನು ಮರುದಿನ ನಾನು.

ಎದುರಿಸಬೇಕಾಯಿತು.ಅಂಗಡಿ ಬೀದಿಗಳಲ್ಲಿ, ಎರಡು ಸಾರೆ ಬಲು ನಿಧಾನವಾಗಿ ನಡೆದು ಹೋದೆ. ಸರಾಫ ಕಟ್ಟೆಯ ಅಂಗಡಿಗಳಿಗೆ ಎರಡು ಸುತ್ತು ಬಂದೆ. ಹಣ ಸಾಲ ಕೊಡುವ ಮಾರವಾಡಿಗಳನ್ನೂ ದೂರದಿಂದ ಪರೀಕ್ಷಿಸಿದೆ. ಯಾವ ಆಧಾರದ ಬೆಂಬಲವೂ ಇಲ್ಲದೆ, ನಾನು ಹೆಜ್ಜೆಯನ್ನು ಮುಂದಿಡಬೇಕಾಗಿತ್ತು. ಸಾಮಾನ್ಯವಾಗಿ ಇಂಥ ವರಲ್ಲಿ ನಾಯವಾದಿಗಳು ಯಾರೂ ಇಲ್ಲವೆಂಬುದನ್ನು ನಾನು ತಿಳಿದಿದ್ದೆ. ಆದರೂ ಆಕಸ್ಮಿಕವಾಗಿ ತಪ್ಪು ಹೆಜ್ಜೆಯನ್ನಿಟ್ಟನೆಂದರೆ, ಅಪಘಾತ ವಾಗುವುದು.

ಕೊನೆಗೆ ವಿವಿಧ ವ್ಯಕ್ತಿಗಳ ಸ್ವರೂಪ ನಿರೀಕ್ಷಣೆ

ಮಾಡಿದ ಮೇಲೆ, ಆ ನಂಬುಗೆಯ ಆಧಾರದ ಮೇಲೆ, ಆ ನಂಬುಗೆಯ ಆಧಾರದ ಮೇಲೆ, ಒಬ್ಬಿಬ್ಬರನ್ನು ನಾನು ಆರಿಸಿದೆ. ತೊಂದರೆಯಾದರೆ ತಪ್ಪಿಸಿಕೊಳ್ಳುವ ಅನುಕೂಲತೆ ಇರಲೆಂದು, ಇತರ ಅಂಗಡಿಗಳಿಗಿಂತ ಸ್ವಲ್ಪ ದೂರವಾಗಿಯೇ ಇದ್ದ ಚಿನ್ನ ಬೆಳ್ಳಿ ವ್ಯಾಪಾರಿಯೊಬ್ಬನ ಅಂಗಡಿಯೊಳಕ್ಕೆ ನಾನು ಕಾಲಿರಿಸಿದೆ.

ಮಧ್ಯಾಹ್ನದ ಹೊತ್ತು. ಇದ್ದ ಒಬ್ಬನೇ ಗಿರಾಕಿ ಹೊರಟುಹೋಗ

ಲೆಂದು, ಗಾಜಿನ ಬೀರುಗಳಲ್ಲಿದ್ದ ಆಭರಣಗಳನ್ನು ನೋಡುತ್ತಾ ನಿಂತೆ. ಆ ಗಿರಾಕಿ , ಹೊರಟೊಡನೆಯೇ ಸಹಾಯಕ ಹುಡುಗ ನನ್ನಬಳಿಗೆ ಬಂದ. ಯಾರಿಗೂ ತಿಳಿಯದ ಹಾಗೆ, ತುಟಿಯೊಣಗದಂತೆ ತೇವ ಬರಿಸಿಕೊಂಡೆ. ಅಂಗಡಿಯ ಯಜಮಾನ ದೂರದಲ್ಲಿ ಕುಳಿತು ನನ್ನನ್ನು ನಿರೀಕ್ಷಿಸುತ್ತಲಿದ್ದ.

ಹುಡುಗ, ಬಾಯ್ದೆರೆಯುವುದಕ್ಕೆ ಮುಂಚೆಯೇ, "ಒಂದಿಷ್ಟು

ನೆಕ್‌ಲೇಸು ತೋರ್ಸಪ್ಪಾ "ಎಂದೆ.

ಯಜಮಾನ ಅದೆಷ್ಟು ಸೂಕ್ಶ್ಮವಾಗಿ ನನ್ನನ್ನು ನೋಡುತ್ತಿ

ದ್ದನೋ ಏನೋ? ಕುಳಿತಿದ್ದಲ್ಲಿಂದ ಎದ್ದು ಬಂದ.

ಹುಡುಗ, ನನ್ನೆದುರು ಎರಡು ಮೂರು ಕೇಸುಗಳನ್ನು ಬಿಚ್ಚಿಟ್ಟು

ಒಳ ಹೋದ. ನಾನು ಬೀದಿಗೆ ಮರೆಯಾಗಿದ್ದೆ ಆ ಯಜಮಾನ ಪರೀಕ್ಷಕನ ದೃಷ್ಟಿಯಿಂದ ನನ್ನನ್ನು ನೋಡಿದ.

"ಸರ ಉಡುಗೊರೆ ಕೊಡೋಕೆ ಬೇಕಾಗಿತ್ತಾ?"

ಹೌದು, ನೀವೇ ಚೆನ್ನಾಗಿರೋದು ಸೂಚಿಸಿ."

ನನಗೆ, ಇಂತಹ ಆಭರಣಗಳ ಪರಿಚಯವಿರಲಿಲ್ಲವೆಂಬುದು ಆ

ಸೂಕ್ಷ್ಮಗ್ರಾಹಿಗೆ, ನನ್ನ ನೋಟದಿಂದಲೇ ತಿಳಿದುಹೋಗಿರಬೇಕು. ನಾನು ಕೋಟಿನ ಒಳಜೇಬಿಗೆ ಕೈ ಹಾಕಿದೆ. ಆ ಯಜಮಾನ ಅದನ್ನು ನೋಡಿದ.

ಯಾವುದಾದ್ರೂ ಪ್ಯಾಟರ್ನ್ ಇದೆಯೇನು? ತೋರಿಸಿ.

ಬೇಕಿದ್ರೆ ಅಂಥದೇ ಹುಡುಕೋಣ."

ನನ್ನ ಬೆರಳುಗಳು ಬೆವರತೊಡಗಿದ್ದುವು. ಮತ್ತೆ ನನಗೆ ನಾನೆ ಧೈರ್ಯ ತಂದುಕೊಂಡೆ. ಇಂತಹ ಘಟ್ಟಗಳನ್ನು ನಾನು ದಾಟಲೇ ಬೇಕು. ದಾಟ ಮುಂದುವರೆಯಲೇ ಬೇಕು. ನೀರಿಗೆ ಹಾರಿದ ಮೇಲೆ ಈಸು ಬರುವುದಿಲ್ಲವೆಂದು ಹೇಳಿಕೊಳ್ಳುವುದರಲ್ಲಿ ಅರ್ಥವಿಲ್ಲ. ಈಸಿ ಜಯಿಸಬೇಕು; ಇಲ್ಲವೆ ಮುಳುಗಬೇಕು.

ನಾನು ತಡಮಾಡದೆ ಸರವನ್ನು ಹೊರ ತೆಗೆದೆ. ಆತನ ತಿಳಿ

ವಳಿಕೆಯ ಕಣ್ಣುಗಳು ನೋಟದಲ್ಲೆ ಆ ಆಭರಣವನ್ನು ತೂಗಿ ನೋಡುತ್ತಿದ್ದವು.

ಇದನ್ನ ಮಾರ್ತ್ತಿನಿ. ಕೊಂಡ್ಕೋತೀರೇನು?"

ಅಷ್ಟು ಹೇಳಿದ ಮೇಲೆ ಸರಾಗವಾಗಿ ಉಸಿರು ಬಿಡಲು ನನಗೆ

ಸಾಧ್ಯವಾಯಿತು. ಬಂದ ಕೆಲಸದಲ್ಲಿ ಅರ್ಧವನ್ನು ನಾನು ಪೂರೈಸಿದ್ದೆ.

ಆತ ಆಶ್ಚರ್ಯವನ್ನೇನೂ ವ್ಯಕ್ತಪಡಿಸಲಿಲ್ಲ ಗಂಭೀರವಾಗಿ ನೇರವಾಗಿ

ನನ್ನನ್ನು ನನ್ನನ್ನು ನೋಡಿದ. ಆ ದೃಷ್ಟಿಯನ್ನು ಇದಿರಿಸುವ ಸಾಮರ್ಥ್ಯ ನನಗೆ ಆಗ ಇರಲಿಲ್ಲ. ಕಾಲುಗಳು ಕುಸಿಯುತ್ತಿದಂತೆ ಭಾಸವಾಯಿತು. ಎದುರಿಗಿದ್ದ ನಿಲುವುಗನ್ನಡಿಯಲ್ಲಿ ನನ್ನ ಪ್ರತಿಬಿಂಬ ಕಾಣಿಸಿತು. ನನಗೇನೂ ಆಗಿರಲಿಲ್ಲ. ಹೊರಗಿನ ನೋಟಕ್ಕೆ ಪ್ರಶಾಂತನಾಗಿಯೇ ಆ ಕನ್ನಡಿಯಲ್ಲಿ ನಾನು ಕಾಣಿಸುತ್ತಿದೆ. ವ್

" ಇದು ನಿಮ್ಮದೇ ಏನು" ?

ಆತ ಘಾಟ ಅಸಾಮಿ. ನನ್ನ ಪರೀಕ್ಷೆ ಅದು ಆರಂಭ.

"ಏನೆಂದಿರಿ?"

"ಇದು ನಿಮ್ಮದೆ ಎಂದು ಕೇಳಿದೆ."

ನಾನು ನಗಲು ಯತ್ನಿಸಿದೆ."

"ಬೇರೊಬ್ಬರದನ್ನ ಮಾರೋದಕ್ಕೆ ತರ್ತಾರೇನು ? ಎಂಥ

ಮಾತು!"

" ಕ್ಷಮಿಸಿ. ನಿಮ್ಮದೇ ಅಂದರೆ ನಿಮ್ಮ ಸ್ವಂತದ್ದೇ ಅಥವಾ

ಮನೆಯವರದೇ ಅಂತ ಕೇಳಿದೆ. ಲೇಡೀಸ್ ಚೈನ್ ಇದ್ದ ಹಾಗಿದೆ, ಅದಕ್ಕೆ."

ಆತ, ನಾನು ಎಣಿಸಿದುದಕ್ಕಿಂತ ಹೆಚ್ಚು ಚತುರನಾಗಿದ್ದ.

"ಹಾಗೊ? ಇದು ನನ್ನ ತಂಗೀದು."

ಬೀದಿಯ ಕಡೆ ಗಮನದ ದೃ‌‌‌‌‌‌‌‌‌‌‌‌‌‌ಷ್ಟಿಯನ್ನಿಡುತ್ತಾ ನಾನು

ಮತ್ತೊಮ್ಮೆ ಕೇಳಿದೆ.

"ಕೊಂಡ್ಕೋತೀರೇನು?"

"ತುಂಬಾ ಅವಸರದಲ್ಲಿದೀರಾ? ಸಾವಧಾನವಾಗಿ ಮಾತಾ

ಡೋಣ. ಬನ್ನಿ ಒಳಕ್ಕೆ ಬನ್ನಿ."

ಒಂದು ಕ್ಷಣ ಏನು ಮಾಡಬೇಕೋ ತಿಳಿಯಲಿಲ್ಲ. ಆದರೆ

ಯೋಚಿಸಲು ಅಲ್ಲಿ ಅವಕಾಶವಿರಲಿಲ್ಲ. ಅವನನ್ನು ಹಿಂಬಾಲಿಸಿದೆ. ಒಳಗಿನ ಕೋಣೆಯಲ್ಲಿ ಎರಡು ಕುರ್ಚಿಗಳಿದ್ದವು. ನಡುವೆ ಮೇಜಿನ ಅಂತರದಲ್ಲಿ ನಾವು ಕುಳಿತೆವು.

ಆತ ಒರೆಗಲ್ಲನ್ನು ತೆಗೆದು ಸರವನ್ನು ತೀಡಿ ತೀಡಿ ಪರೀಕ್ಷಿಸಿದ,

ಕ್ಷಣಕಾಲ. ನಾನು ಸರಿಯಾದ ಜಾಗಕ್ಕೇ ಬಂದಿದ್ದೆ. ಸಾವಕಾಶ ವಾಗಿ ಮಾತಾಡಲು ಅಪೇಕ್ಷಿಸಿದ್ದ ಯಜಮಾನ, ವಾಸ್ತವವಾಗಿ ನನ್ನಷ್ಟೇ ಆತುರವಾಗಿದ್ದ.

ಮಿಸ್ಟರ್, ನೀವು ಹೆಚ್ಚು ಹೇಳಬೇಕಾದ್ದಿಲ್ಲ. ಈಗ, ನಿಮ್ಮ

ಭವಿಷ್ಯತ್ತು ನಿನ್ನ ಕೈಲಿದೆ. ಈ ಸರವನ್ನು ನಾನು ಬಲ್ಲೆ . ಏನು ಹೇಳುತ್ತೀರಿ?"

"ನಿಮ್ಮ ಪಾಟೀ ಸವಾಲು ಅರ್ಥವಾಗ್ತಾ ಇಲ್ಲ. ಏನು ನಿಮ್ಮ

ಉದ್ದೇಶ?"

"ಬಾಯಿ ಬಿಟ್ಟು ಹೇಳ್ಬೇಕೇನು? ನಿಮ್ಮನ್ನ ಪೋಲೀಸರಿಗೆ

ಒಪ್ಪಿಸಬಲ್ಲೆ."

"ಓ! ಪ್ರಾಯಶಃ ನಿಮಗೆ ನನ್ನ ಪರಿಚಯವಿಲ್ಲ. ಪೋಲೀ

ಸರೂ ನಾನೂ ಹಳೆಯ ಸ್ನೇಹಿತರು."

ಆತ ಮುಗುಳ್ನಕ್ಕ. ನಾನು ಮತ್ತೊಮ್ಮೆ ಬೀದಿಯ ಕಡೆ

ನೋಡಿದೆ‍‍‍‍‍‍‍‍‍‍‍‍‍‍‍‍

"ಗಾಬರಿಯಾಗಬೇಡಿ. ನಿಮ್ಮಂಥ ಸದ್ಗೃಹಸ್ಥರನ್ನು ಪೋಲೀ ಸರಿಗೆ ಒಪ್ಪಿಸೋಕೆ ನಾನೇಕೆ ಮೂರ್ಖನೆ?"

ಸದ್ಗೃಹಸ್ಥನಾದ ನಾನು ಏನು ಉತ್ತರ ಕೊಡಬೇಕೊ ತಿಳಿಯಲಿಲ್ಲ. ಆತನೇ ಹೇಳಿ;

"ನೀವು ಯಾರೇ ಆಗಿರಿ. ಅದು ನನಗೆ ಮುಖ್ಯವಲ್ಲ. ನಮ್ಮ ಗಿರಾಕಿಯಾಗಿ ಯಾವಾಗಲೂ ಬನ್ನಿ. ನಿಮಗೆ ಸ್ವಾಗತ ಇದ್ದೇ ಇದೆ."

ಆತ ನೂರರ ಎರಡು ನೋಟುಗಳನ್ನು ಹೊರ ತೆಗೆದು ಮೇಜಿನ ಮೇಲಿಟ್ಟ.

"ನಾನ್ನೂರು " ಎಂದೆ ನಾನು.

"ಚರ್ಚೆ ಬೇಡಿ."

"ಅದು ಸರಿಯಲ್ಲ. ಹೊಸ ಪರಿಚಯ ಆಗೋ ರೀತಿ ಹೀಗಲ್ಲ."

ಆತ ಹತ್ತು ರೂಪಾಯಿಗಳ ಐದು ನೋಟುಗಳನ್ನು ಮತ್ತೆ ಎಣಿಸಿ,ಮೇಜಿನ ಮೇಲಿಟ್ಟ.

"ತೃಪ್ತಿಯಾಯಿತೋ?"

"ಇಲ್ಲ."

"ಅಪ್ಪಾ. ನೀವಿನ್ನೂ ಹುಡುಗ. ತಿಳಿವಳಿಕೆಯಿಲ್ಲದೆ ಹೀಗೆ ಚಂಡಿತನ ಮಾಡ್ಬೇಡಿ. ಅಪಾಯಾನ ಹಂಚಿಕೋ ಬೇಕಾದರೆ ಲಾಭಾನೂ ಹಾಗೆಯೇ ಹಂಚಿಕೋ ಬೇಕು."

ನಾನು ನೋಟುಗಳನ್ನು ಜೇಬಿನೊಳಕ್ಕೆ ತುರುಕಿದೆ. ಆ ಸರ ಕಾಣಿಸಲೇ ಇಲ್ಲ. ಆತನ ಕೈ ಬೆರಳುಗಳ ಎಡೆಯಿಂದ ಇಳಿದು ಅದೆಲ್ಲಿಗೋ ಮಾಯವಾಗಿತ್ತು.

ಆತ ನನ್ನನ್ನು ಬೀಳ್ಕೊಡಲೆಂದು ಬಾಗಿಲವರೆಗೂ ಬಂದು ಬರುತ್ತಾ ಗಟ್ಟಿಯಾಗಿ ಹೇಳಿದ.

"ನಿಮಗೆ ಬೇಕಾದ ಸರ ಮಾಡ್ಸಿ ಇಟ್ಟಿರ್ತೀವಿ. ನೀವು ಯಾವತ್ತು ಬೇಕಾದರೂ ಬನ್ನಿ."

"ಸರಿ."

"ನಿಮ್ಮ ಹೆಸರು ?"

ಮತೊಮ್ಮ ನನ್ನ ನಾಲಿಗೆ ಸರಳವಾಗಿ ಮಗುಚಿತು.

"ರಾಘವ".

ಅತ ಮಗುಳ್ನಕ್ಕ ಅದು ಸುಳ್ಳಿರಬಹುದೆ೦ದು ಅವನು ತಿಳಿದು

ಕೊಂಡನೇನೋ.

ಇನ್ನೂರ ಐವತ್ತು ರೂಪಾಯಿಗಳ ಒಡಯನಾಗಿ ನಾನು

ಬೀದಿಗಳಲ್ಲಿ ಸುತ್ತಾಡಿದೆ. ಮನೆ ತುಂಬಿಸುವ ಸದ್ಗೃಹಸ್ಥನಾಗಿ, ನಾನು ಸಾಮಗ್ರಿಗಳನ್ನು ಕೊಂಡುಕೊಂಡೆ. ನನಗೆ ನೂರು ರೂಪಾ ಯಿಯ ನೋಟಿಗೆ ಚಿಲ್ಲರೆ ಕೊಡಲು ಯಾವ ಅಂಗಡಿಯವರೂ ಹಿಂಜರಿ ಯಲಿಲ್ಲ. ನನ್ನ ನಡೆ ನುಡಿ, ನನ್ನ ದೊಡ್ಡಸ್ತಿಕೆಗೆ ಸಾಕ್ಷಿಗಳಾಗಿದ್ದವು. ಹೀಗೆ ಜೀವನದ ಅಧ್ಯಾಯದೊಂದು ಹಾಳೆಮುಗುಚಿಕೊಂಡಿತು.

ಎಷ್ಟೋ ದಿನಗಳ ಮೇಲೆ, ಮನಸ್ಸಿನ ಚಿಂತೆ ನನ್ನನ್ನು ಕೊರೆ

ದುದುಂಟು. ಅದು ಕ್ಷಣಿಕ ಮಾನಸಿಕ ದೌರ್ಬಲ್ಯಕ್ಕೆ ತುತ್ತಾದಾಗ, ಬೊಂಬಾಯಿಯ ಬೀದಿಯ ಬದಿಗಳಲ್ಲಿ ಬಾಯ್ತೆರೆದು ಮಲಗಿದ್ದಾಗ ಹಸಿವು ಎಷ್ಟು ಕ್ರೊರವೆಂಬುದನ್ನು ನಾನು ಪುರ್ಣವಾಗಿ ಮನಗಂಡಿದ್ದೆ. ಬಡತನವನ್ನು ಎಲ್ಲರೂ ತುಚೀಕರಿಸುತ್ತಿದ್ದರು. ಬಡವ, ಮಾನವಂತ ನಾಗಿ ಬಾಳ್ವೆ ನಡೆಸುವುದು ಬರಿಯ ಭ್ರಮೆಯಾಗಿತ್ತು. ಹಸಿವೆಯಿಂದ ತೊಳಲಾಡಲು ನಾನೆಂದೂ ಇಚ್ಛಿಸಲಿಲ್ಲ. ನಾನು ದ್ವೇಷಿಸುತ್ತಿದ್ದ ಬಡತನದಲ್ಲಿ ನರಳಲು ಎಂದೂ ಆಪೇಕ್ಷಿಸಲಿಲ್ಲ.

ಕಾವೇರಮ್ಮನ ಚೀಟಿ. ಆ ಚಿಲ್ಲರೆ ರೂಪಾಯಿ

ಆಣೆಗಳು..... ಆ ದಿನ ನನ್ನ ಮನಸ್ಸಿಗೆ ನೆಮ್ಮದಿಯೇ ಇರಲಿಲ್ಲ. ಆದರೆ, ಮಾನವತೆಯ ಗಡಿ ದಾಟಿ ಮೃಗವಾಗಿ ಮಾರ್ಪಡುತ್ತಿದ್ದ ಶ್ರೀಮಂತ ಯುವತಿಯೊಬ್ಬಳಿಂದ ಆ ಹಾರವನ್ನು ನಾನು ಕೈವಶಪಡಿಸಿಕೊಂಡಿದ್ದೆ. ಅದು ಸರಿಯೆ? ತಪ್ಪೆ? ಆ ಹಾರ ಅವಳಿಗೆ ಹೇಗೆ ದೊರಕಿತು? ಆಕೆಯ ಅಪ್ಪ ಬೇರೆ ಯಾರನ್ನೋ ನೂರಾರು ಜನರನ್ನು ಸುಲಿದುದರ ಫಲವೇ

ಅಲ್ಲವೆ? ಅಂಥ ಸುಲಿಗೆಯ ವಸ್ತುವನ್ನು ನಾನು ಎತ್ತಿ ಹಾಕಿದ್ದ್ದು ತಪ್ಪೆ?

ಈ ರೀತಿಯ ಮಾನಸಿಕ ತುಮುಲ ಯಾವಾಗಲೂ, ನಾನೇ

ಸರಿ ಎ೦ಬ ತೀರ್ಮಾನದಲ್ಲೆ ಪರ್ಯವಸಾನವಾಗುತಿತ್ತು.

ಉದ್ಯೋಗವಿಲ್ಲದ ಸ೦ಪಾದನೆಯಿಲ್ಲದ ಯುವಕನೊಬ್ಬ, ಒಬ್ಬ೦

ಟಿಗನಾಗಿ ಒ೦ದು ಮನೆಯಲ್ಲಿ ಜೀವಿಸುವುದೆ೦ದರೇನು? ಪ್ರಾಯಶಃ ಅಜ್ಜಿ ಉಳಿಸಿ ಹೋಗಿದ್ದ ಹೇರಳವಾದ ಆಸ್ತಿ ಈತನ ಕೈ ಸೇರಿರ ಬೇಕು.- ಇದೀಗ ನಾಲ್ಕು ಜನ ಆಡಿಕೊ೦ಡ ಮಾತು.

ಅದೊ೦ದು ಸ೦ಜೆ, ಬಿಳಿಯ ಷರಟು ತೊಟ್ಟು, ಶುಭ್ರವಾದ

ಬೂದುಬಣ್ಣದ ಪ್ಯಾ೦ಟು ಧರಿಸಿ, ಉಣ್ಣೆಯ ಮೇಲ೦ಗಿಯನ್ನು ಅಲ೦ ಕಾರವಾಗಿ ಭುಜದ ಮೇಲಿರಿಸಿ, ಕನ್ನಡಿಯ೦ತೆ ಮಿನುಗುತ್ತಿದ್ದ ಷೂ ಮೆಟ್ಟಿಕೊ೦ಡು, ನಾನು ಮಾರ್ಕೆಟ್ಟಿನ ಚೌಕದಲ್ಲಿ ನಿ೦ತಿದ್ದೆ.

ಸ೦ಜೆಯ ಜನ ಜ೦ಗುಳಿಯನ್ನು ನೋಡುತ್ತಲಿದ್ದರೆ, ನನ್ನ

ಪಾಲಿಗೆ ಯಾವಾಗಲೂ ಅದೊಳ್ಳೆಯ ಮನೋರ೦ಜನೆಯಗುತಿತ್ತು. ಮನೆಗಳಿ೦ದ ಹೊರಡಲು ಇಚ್ಚಿಸಿದ ಹೆ೦ಡಿರೊಡನೆ. ನಾಲ್ಕಾರು ಅ೦ಗಡಿಗ‍ಳ ಮೆಟ್ಟಲೇರಿ ಇಳಿಯುವ ಗ೦ಡಸರು. ಯಾವಾಗಲೂ ಅವಸರ ಅವಸರವಾಗಿ ಆಫೀಸುಗಳಿ೦ದ ಮನೆಗೆ ಹಿ೦ತಿರುಗುವ ನಿತ್ಯ ಕರ್ಮಿಗಳು.ತಮ್ಮಷ್ಟಕ್ಕೆ ತಾವು ಜನ ಸಮೂಹದೆಡೆಯಿ೦ದ ನಡೆದು ಹೋಗಲು ಯತ್ನಿಸುತ್ತಿದ್ದ ದನಕರುಗಳು.ಆ ಸನ್ನಿವೇಶದಲ್ಲೂ ಅಲ್ಲಲ್ಲಿ ಬಡ ಹುಡುಗರು. "ಇವೊತ್ತಿನ ಸಾಯ೦ಕಾಲದ ಪತ್ರಿಕೆ ಸಾರ್. ಬಿಸಿ ಬಿಸಿ ಸಮಾಚಾರ.ಒಂದೇ ಆಣೆ"..."ಸಾರ್ ಮೂರು ದಿವ್ಸದಿಂದ ಊಟ ಇಲ್ಲ ಸಾರ್. ಒಂದಾರ್ಕಾಸು ಕೊಡಿ ಸಾರ್.".. ನನ್ನ ವೃತ್ತಿಯವರೂ ಅಲ್ಲಿ ಇರಲಿಲ್ಲವೆಂದರೆ ತಪ್ಪಾದೀತು. ಆದರೆ ಅವರಿಗೆ ನನ್ನ ವಿದ್ವತ್ತಿನ, ನಾಗರಿಕತೆಯ, ರಕ್ಷಣೆಯಿರಲಿಲ್ಲ..... ....ಅವರ ದೃಷ್ಟಿಯಲ್ಲಿ ನಾನು ವೃತ್ತಿಬಾಂಧವನಾಗುವುದು ಸಾಧ್ಯವೇ ಇರಲಿಲ್ಲ.

ಮಾರ್ಕೆಟಿನ ಚೌಕದ ಹೆಬ್ಬಾಗಿಲಿನಿಂದ ಕೆಲವು ದಂಪತಿಗಳು

ಹೊರಬರುತ್ತಿದ್ದರು. ಅವರನ್ನೆ ನೋಡುತ್ತಾ, ಅಲ್ಲಿ ನಿಂತೆ.

ನೋಡುತ್ತ ಇದ್ದ ನನಗೆ ಕ್ಷಣಕಾಲ ಯಾವುದೋ ನೆನಪು
ಬಾಧಿಸತೊಡಗಿತು. ನನ್ನೆದುರು ಬರುತ್ತಿದ್ದ ಒ೦ದು ಗಂಡು ಮತ್ತು
ಹೆಣ್ಣು ಆ ಕುತೂಹಲಕ್ಕೆ ಕಾರಣರಾದರು. ಆತನ ಮುಖ ನನಗೆ
ಪರಿಚಿತವಾಗಿ ತೋರುತ್ತಿತ್ತು. ಯಾರಿರಬಹುದು? ಯಾರು?

ಅವರು ನೇರವಾಗಿ ಬೀದಿ ದಾಟುತ್ತಿದ್ದರು. ದಾಟಿದ ಬಳಿಕ
ಅವರು ನನ್ನೆಡೆಗೆ ಬಂದೇ ತೀರಬೇಕು.

ಆತ ನನ್ನ ಸಹಪಾಠಿಯಾಗಿದ್ದ ಶ್ರೀಕ೦ಠ . ನಾನು ಸುಮ್ಮನಿದ್ದೆ.
ಬೀದಿ ದಾಟಿದೊದನೆಯೇ ಅವನ ಕಣ್ಣುಗಳು ನನ್ನನ್ನು ನೋಡಿ
ದವು. ಮತ್ತೆ ಮತ್ತೆ ನೋಡುತ್ತಲೇ ಕೈ ತುಂಬಾ ಸಾಮಾನು
ಹೊತ್ತಿದ್ದವನು, "ಹಲೋ" ಎ೦ದ. ಅವನು ನನ್ನನ್ನು ಮರೆ
ತಿರಲಿಲ್ಲ. ಸಾಮಾನುಗಳನ್ನು ಕೆಳಕ್ಕೆ ಕೊಡವಿ. ದಿಗ್ಬ್ರಮೆಗೊಂಡು
ಆ ಹೆಣ್ಣಿನ ನೋಟವನ್ನೂ ಗಮನಿಸದೆ, ಆತ ನನ್ನೆಡೆಗೆ ಹಾರಿದ.
ಸುತ್ತಲಿದ್ದ ಜನರು ನೋಡುತ್ತಲೇ ಇದ್ದರು.

"ಹಲೋ ಚಂದ್ರೂ! ಎಷ್ಟು ವಿಚಿತ್ರ! ಎಷ್ಟೊಂದು ಸೊಗಸು!
ಯುಗಗಳಾದ ಮೇಲೆ ಭೇಟಿ! ಹೇಗಿದ್ದೀಯ ದೊರೆ?
ನಾನು ಅಷ್ಟು ಕಾಲ ಬಲು ಪ್ರಯಾಸದಿಂದ ಕಲಿತಿದ್ದ ಮೋಹಕ ನಗೆಯನ್ನು ಬೀರಿದೆ
ಅವನ ಕೈ ಕುಲುಕುತ್ತ ಮೇಲಿ೦ದ ಕೆಳತನಕ ಅವನನ್ನು
ನೋಡಿದೆ. ಶ್ರೀಮ೦ತರ ಹಾಗೆ ಪೋಷಾಕು ಧರಿಸಿದ್ದ.
" ಗಾಬರಿ ಬೀಳಬೇಡ ಚ೦ದ್ರೂ. ಬಟ್ಟೆ ನೋಡಿ ತಪ್ಪು
ತಿಳ್ಕೊಂಡು ಬಿಟ್ಟೀಯೇ? ಇದಕ್ಕೆಲ್ಲಾ ಇವರೇ ಕಾರಣ!"
ಆತನ ದೃಷ್ಟಿಯನ್ನು ಹಿಂಬಾಲಿಸಿ ನಾನೂ ಅವರನ್ನು - ಆ
ಯುವತಿಯನ್ನು ನೋಡಿದೆ. ಆಕೆಯ ಮುಖ ಲಜ್ಜೆಯಿ೦ದ ಕೆಂಪೇ
ರಿತ್ತು.
"ಶಾರದಾ,ಈತ ಚ೦ದ್ರೂ. ಮಹಾ ಖಿಲಾಡಿ. ನಮ್ಮ
ಹಳೇ ಸಹಪಾಠಿ..... ನೋಡ್ ಚಂದ್ರೂ. ಈ ಯಮ್ಮಣ್ಣಿಯವರೇ

ನಮ್ಮ ಧರ್ಮಪತ್ನಿ."

ಶ್ರೀಕಂಠನ ಸರಸ ಮನೋವೃತ್ತಿ ನನಗೇನೂ ಹೊಸತಾಗಿರ

ಲಿಲ್ಲ. ನಾನು ನಕ್ಕೆ.

"ತುಂಬಾ ಸಂತೋಷ. ಇಬ್ಬರಿಗೂ ಧನ್ಯವಾದಗಳು!”

ಆಕೆ ಕೈ ಚೀಲವನ್ನು ಎಡಗೈಗೆ ದಾಟಿಸುತ್ತಾ ಸೀರೆಯ ಸೆರಗು

ಸರಿಪಡಿಸಿಕೊಂಡಳು. ನೈಸರ್ಗಿಕವಾದ ಸೌಂದರ್ಯಕ್ಕೆ ಅತ್ಯಂತ ಸ್ವಲ್ಪವಾಗಿ ಬೆಡಗು ಬಿನ್ನಾಣದ ಚೌಕಟ್ಟನ್ನು ಹಾಕಿದಂತಿತ್ತು. ಮತ್ತೊಮ್ಮೆ ಕಣ್ಣುಗಳನ್ನು ನೋಡಿದೆ. ಶ್ರೀಕಂಠ ನನ್ನನ್ನೆ ಪರೀಕ್ಷಿಸುತ್ತಿದ್ದ.

"ಎಲ್ಲಪ್ಪ ಚಂದ್ರೂ, ಏನ್ಸಮಾಚಾರ? ಎಲ್ಲಿದೀಯಾ? ಏನ್ಯತೆ?

ಇನ್ನೂ ಒಬ್ನೇ ಇದಿಯೋ ಅಥವಾ—"

"ನಾವೆಲ್ಲಾ ಅಂಥ ಪುಣ್ಯ ಎಲ್ಲಿ ಮಾಡಿದ್ವಿ ಶ್ರೀಕಂಠಾ.. ಹೀಗೇ

ಇದಿನಿ,–ನೋಡು."

ಆತ ನನ್ನ ಉಡುಗೆ ತೊಡುಗೆಯನ್ನು ನೋಡಿದ. ಆಗಿನ ಬಡ

ಚಂದ್ರೂ ಮತ್ತು ಈಗಿನ ನಾನು.

"ಏನಾದ್ರೂ ಕೆಲಸ ನೋಡೊಂಡಿದೀಯೇನು?"

"ಇಲ್ಲವಪ್ಪಾ, ಅಂತಾ ಪಾಪಕ್ಕೆ ಹೋಗಿಲ್ಲ."

"ಬಿಸಿನೆಸ್ಸು?”

"ಹೂಂ"

"ಸದ್ಯ ಸ್ವಂತದ್ದೇನೇ. ನೀನು?"

"ಬಿ.ಎಸ್ ಸಿ. ಮುಗಿಸ್ದೆ. ಇನ್ನು ಇದೇ ಇದೆಯಲ್ಲ

ಹೊಂಚು ಹಾಕೋದು."

ಹೀಗೆ ಹೇಳುತ್ತಾ ಶ್ರೀಕಂಠ ತನ್ನಹೆಂಡತಿಯ ಮುಖ ನೋಡಿದ.

ಆಕೆ ರೇಗಿದಂತೆ ತೋರಿತು, ಅದನ್ನು ನೋಡಿದವನೇ ಮತ್ತೆ ಮಾತು ಹರಿಸಿದ.

“ಆದರೆ, ನನ್ಗೆಲ್ಬಂತು ಸ್ವಾತಂತ್ರ್ಯ ? ನಾನೊಬ್ಬ ಕೈದಿ

ಏನಿದ್ರೂ ಇಲ್ಲೇ ಇರ್ಬೇಕೂಂತು ಇವರೂ ಇವರ ತಂದೆಯವರೂ ಆಜ್ಞೆ ಕೊಟ್ಟಿದ್ದಾರೆ."

ಸದ್ಯಃ ಯಾವ ಗೊಡೆವೆಯೂ ಇಲ್ಲದೆ ಸ್ವಚ್ಛಂದವಾಗಿದ್ದ ಎರಡು

ಹಕ್ಕಿಗಳು. ಮದ್ಯಮ ವರ್ಗದ ಸಂತಾನ ನಿಜ. ಆದರೆ ಸಿರಿವಂತಿಕೆ ಆತನನ್ನು ತನ್ನೆಡೆಗೆ ಕರೆಯುತ್ತಿತ್ತು. ಕ್ರಮಬದ್ಧವಾದ ವಿದ್ಯಾಭ್ಯಾಸ. ಬಳಿಕ ಪದವಿ. ಪದವಿಯ ಜೊತೆಯಲ್ಲೇ ಮದುವೆ. ಇನ್ನುಕೈ ತುಂಬಾ ಸಂಪಾದನೆಯ ಕೆಲಸ.ಬರುವ ಹಣದ ಆವರಣದಲ್ಲಿ ಸುಖ ಸಂಸಾರ.......

"ಬಸ್ ಬಂತು," ಎಂದಿತು ಮಧುರ ಸ್ವರ. ತಪ್ಪು ಮಾಡು

ತ್ತಿದ್ದ ಎಳೆಯ ಹುಡುಗನ ಹಾಗೆ ಶ್ರೀಕಂಠ ಬೆಚ್ಚಿಬಿದ್ದು ಕೆಳಗಿದ್ದ ಸಾಮಾನುಗಳನ್ನು ಎತ್ತಿಕೊಂಡು ನನ್ನನ್ನು ಆಲ್ಲಿಯೇ ಬಿಟ್ಟು ಹೆಂಡತಿ ಯೊಡನೆ ಮುಂದಕ್ಕೆ ನುಗ್ಗಿದ. ನುಗ್ಗುತ್ತಾ, "ಆ ಮೇಲೆ ಸಿಕ್ತೀ ನಪ್ಪಾ. ಮರಿಬೇಡ ಕಣೋ. ನಮ್ಮನೆಗೂ ಬಾ.ನಮ್ಮನೇಂತಂದ್ರೆ ಹೊಸ್ತು ಕಣೋ, ಇವರ್ದು ,"ಎಂದ.

ನಾನು 'ರೈಟೋ' ಎಂದೆ."

ಆ ಗೊಂದಲದಲ್ಲಿ ಆತನೇನೂ ವಿಳಾಸ ಕೊಟ್ಟಿರಲಿಲ್ಲ. ನನ್ನ

ದನ್ನೂ ಕೇಳಿರಲಿಲ್ಲ. ನನಗೆ ಆ ಬಗ್ಗೆ ಆಗ ಉತ್ಸುಕತೆಯೂ ಇರಲಿಲ್ಲ.

ಆ ಇಬ್ಬರ ಜೀವನದ ರೀತಿ ನನ್ನದಕಿಂತ ಬಲು ಭಿನ್ನವಾಗಿತ್ತು.

ಶ್ರೀಕಂಠ ತರಗತಿಯಲ್ಲಿ ಎಂದೂ ಜಾಣ ಎನ್ನಿಸಿಕೊಂಡವನಲ್ಲ, ಇಂಗ್ಲಿಷು ಯಾವಾಗಲೂ ಅವನಿಗೆ ತೊಂದರೆ ಕೊಡುತಿತ್ತು,-ಕನ್ನಡವೂ ತೊಂದರೆ ಕೊಡುತಿತ್ತು. ನಾನೇ ಎಷ್ಟೋ ಸಾರೆ ಆತನ ನೆರವಿಗೆ ಹೋಗುತ್ತಿದ್ದೆ. ಆದರೆ ಈ ದಿನ ಅಂತಹ ಚಿಂತೆ ಶ್ರೀಕಂಠನಿಗೆ ಇಲ್ಲ. ದುಡ್ಡಿನವರೊಬ್ಬರು ತಮ್ಮಮಗಳಿಗಾಗಿ ಅವನ ಸಮಸ್ಯೆಗಳನ್ನು ಬಗೆ ಹರಿಸಿದ್ದಾರೆ.........

.....ನಾನು ಸಿಗರೇಟು ಹೊರತೆದು ಕಡ್ಡಿ ಗೀರಿದೆ. ಶ್ರೀಕಂಠ,

ನಾನು ಸಿಗರೇಟು ಸೇದುವುದನ್ನು ನೋಡಬೇಕಾಗಿತ್ತು. ಆಗ ಅವನು

ಖಂಡಿತವಾಗಿಯೂ ಮತ್ತಷ್ಟು ಆಶ್ಚರ್ಯಪಡುತ್ತಿದ್ದ.

ನನಗೂ ಅವನಿಗೂ ಇರುವ ಅಂತರ. ಆಕೆ, ಅವನ ಶಾರದಾ

ದೇವಿ...ಬೇಡ ಬೇಡವೆಂದರೂ ನನಗೆ ಶೀಲಳ ನೆನಪಾಗುತ್ತಿತ್ತು. ಆ ಬಳಿಕ ಬೀದಿಯಿಂದ ನಾನು ರಕ್ಷಣೆ ಕೊಟ್ಟ ಕರೆದೊಯ್ದಿದ್ದ ಆ ಹೆಣ್ಣ. ಆ ಸರದ ಯಜಮಾನಿತಿ....ನಾನು ಚಲಿಸತೊಡಗಿದೆ. ಎದುರು ಭಾಗದಿಂದ ಇಬ್ಬರು ಬಿನ್ನಾಣಗಿತ್ತಿಯರು ಬರುತ್ತಿದ್ದರು. ನಾನು ತಲೆಯೆತ್ತಿ ಅವರನ್ನು ನೋಡಿದೆ. ಆ ನಾಲ್ಕು ಕಣ್ಣುಗಳೂ ನನ್ನನ್ನು ನೋಡಿದುವು. ಆ ಇಬ್ಬರಲ್ಲೂ ನನ್ನ ಬಗ್ಗೆ ಒಂದೇ ರೀತಿಯ ಪ್ರತಿ ಕ್ರಿಯೆ ಇತ್ತು. ನಗೆ ಮಿಂಚುತ್ತಿತ್ತು-ಆ ಇಬ್ಬರ ತುಟಿಗಳಲ್ಲಿ...... ಅದಕ್ಕೆ ಅರ್ಥವೇನೂ ಇರಲಿಲ್ಲ. ಆಧುನಿಕತೆಯ ಪರೀಕ್ಷೆಯಲ್ಲಿ ನಾನು ಸೋತಿಲ್ಲ ಎನ್ನುವುದಕ್ಕೆ ಬೇಕಾದ ಪ್ರಮಾಣ ಪತ್ರವನ್ನು ಅವರು ಕೊಡುತ್ತಿದ್ದರು, ಅಷ್ಟೆ.

ಹೊತ್ತು ಕಳೆದಂತೆ, ಜನಜಂಗುಳಿ ಕರಗಿತು. ಕತ್ತಲಾಯಿತು.

ಸಂಜೆಯಿದ್ದ ಉತ್ಸಾಹ ನನ್ನಲ್ಲಿ ಆಗ ಉಳಿದಿರಲಿಲ್ಲ. ಇನ್ನು ಊಟ ಮುಗಿಸಿದ ಬಳಿಕ ಮನೆಗೆ. ಎಲ್ಲರಿಗಿಂತ ದೂರವಾದ ಒಂಟಿಯಾದ ಬಾಳ್ವೆ. ಅದರ ಅರ್ಥವೇನು? ಅದರ ಗುರಿ ಏನು?.. ಹಾಗೆ ಯೋಚಿಸಿ ಹೊರಟಾಗ, ನನಗೆ ನಗು ಬರುತ್ತಿತ್ತು. ಕಸಾಯಿ, ತಾನು ಮಾಂಸದ ತುಣುಕಾಗಿ ಮಾರ್ಪಡಿಸಬೇಕಾದ ಮೂಕ ಜೀವಿಗಳ ಹೃದಯದಲ್ಲಿ ಎಂಥ ಭಾವನೆಗಳಿವೆ ಎಂದು ಯೋಚಿಸುವ ವಿಷಯ ಎಂದಾದರೂ ಕೇಳಿದ್ದೀರಾ? ಸಾಮಾನ್ಯ ಸಾಮಾಜಿಕ ಜೀವನವನ್ನು ಬಿಟ್ಟು ಕೊಟ್ಟ ನಾನು, ಬಾಳ್ವೆಯ ವಿಶಾಲ ಸ್ವರೂಪದ ಬಗ್ಗೆ ಯೋಚಿಸುವುದರಲ್ಲಿ ಅರ್ಥವಿರಲಿಲ್ಲ.

ಮನೆಯ ಕಡೆಗೆ ಹೊರಟವನು ನಡೆಯುತ್ತಾ ಆ ಹೈಸ್ಕೂಲನ್ನು

ಸಮೀಪಿಸಿದೆ. ಅದು ಹಲವಾರು ರಾತ್ರೆ ನನಗೆ ಆಸರೆ ಒದಗಿ ಸಿದ್ದ ವಿದ್ಯಾಛತ್ರ, ಎರಡು ನಿಮಿಷ ಆ ಜಗುಲಿಯ ಮೇಲೆ ವಿರಮಿಸಿ ಮುಂದೆ ಪ್ರಯಾಣ ಬೆಳೆಸುವುದೇ ವಿಹಿತವೆನಿಸಿತು. ಕರವಸ್ತ್ರವನ್ನು ಹಾಸಿ ಅದರೆ ಮೇಲೆ ಕುಳಿತು, ಜಗುಲಿಯ ಕೆಳಕ್ಕೆ ಕಾಲುಗಳನ್ನು ಇಳಿ

ಬಿಟ್ಟು ಆಕಾಶವನ್ನೇ ದಿಟ್ಟಸಿದೆ.

ಸ್ವಲ್ಪ ಹೊತ್ತಿನಲ್ಲೆ ನನ್ನ ಸಮೀಪದಲ್ಲಿ ಇನ್ನೊಂದು ಜೀವ

ವಿದ್ದುದು ನನಗೆ ಅರಿವಾಯಿತು. ಒಮ್ಮೆಲೆ ಆ ರಾತ್ರೆಯ ನೀರವತೆ ಯನ್ನು ಭೇದಿಸುತ್ತಾ ಅಲೆಯಲೆಯಾಗಿ ಬಂದ ಆ ಕೆಮ್ಮು...ಈ ರೀತಿಯ ಕೆಮ್ಮು ನನಗೆ ಪರಿಚಿತವಾದುದಲ್ಲವೆ? ನನ್ನ ಆತ್ಮೀಯರಾದ ವರೊಬ್ಬರು ಹಾಗೆಯೇ ಕೆಮ್ಮತ್ತಿದ್ದರಲ್ಲವೆ?...

ಕೆಮ್ಮ ನಿಂತು, ಮತ್ತೆ ಮೌನ್ಮನೆಲೆಸಿದ ಮೇಲೆ ನಾನು ಕೇಳಿದೆ.

"ಯಾರಪ್ಪ ನೀನು?"

ಉತ್ತರ ಬರಲಿಲ್ಲ.

"ಯಾವೂರಪ್ಪಾ ? "

ಪ್ರಾಯಶಃ, ನನ್ನ ಸ್ವರವನ್ನು ಕೇಳಿ ಆತ ಧೈರ್ಯ ತಳೆದಿರಬಹುದು.

"ಕ್ಯಾತನಹಳ್ಳಿ ಬುದ್ಧಿ"

"ಏಟ್ ದಿವ್ಸ ಆಯ್ತ ಇಲ್ಲಿಗೆ ಬಂದು?"

ಆತ ಉತ್ತರವೀಯುವುದರ ಬದಲು ಮತ್ತೊಮ್ಮೆ ವಿಕಾರವಾಗಿ

ಕೆಮ್ಮಿದ. ಎರಡು ಮೂರು ನಿಮಿಷಗಳ ಮೇಲೆ ಮತ್ತೆ ನೀರವತೆ ನಿಲಿಸಿದ.

"ಔಷಧ ಗಿವ್ಷಧ ತಗೊಂಡಿಲ್ಲಾ ?”

"ಇಲ್ಲ ಬುದ್ಧಿ.....ನಮ್ಗೆಂಥಾ ಔಷಧ ಬಿದ್ಧಿ ? "

"ಬಾಳಾ ದಿವ್ಸದಿಂದ ಹಿಂಗೇ ಐತ?"

"ಹೌದು ಬುದ್ಧಿ. ಎಂಟು ತಿಂಗ್ಳಾಯ್ತು ಹಳ್ಳಿ ಬಿಟ್ಟು ಬಂದು

ಮಿಲ್ನಲ್ಲಿ ಕೆಲ್ಸ ಸಿಕ್ತು, ಆದರೆ ಜ್ವರ ಬಂದ್ದಿಡು, ಆಮೇಕೆ ಕೆಲ್ಲಾನೇ ಇಲ್ಲ. ಬಿಕ್ಸ ಎತ್ತಾ ಇವ್ನಿ ಬುದ್ಧ"

ಆ ಮಾತುಗಳನ್ನು ಕೇಳಿಕೊಂಡು ಮೆಲುಕು ಹಾಕುತ್ತಾ

ಇರಲು ನಾನು ಸಿದ್ಧನಿರಲಿಲ್ಲ, ಷರಾಯಿಯ ಜೇಬಿಗೆ ಕೈ ಹಾಕಿ ಅಲ್ಲಿದ್ದ ಚಿಲ್ಲರೆ ದುಡ್ಡನ್ನೆಲ್ಲಾ ನಾನು ಹೊರಕ್ಕೆ ತೆಗೆದೆ. ಅಷ್ಟನ್ನೂ ಕತ್ತಲಲ್ಲಿ ಕೈ ಚಾಚಿ ಆತನ ಬಳಿಯಲ್ಲಿಟ್ಟೆ, ಆ ಬಳಿಕ ಅಲ್ಲಿಂದೆದ್ದು ಹಾದಿ ಹಿಡಿದೆ............ ಆತ ಹೇಳಿದ ಮಾತುಗಳನ್ನು ನಾನು

ನಂಬಬೇಕೆ? ಆ ಮಾತುಗಳೆಲ್ಲಾ ನಿಜವೆ? ನಾನು ಹೃದಯ ಹೀನ
೧೭೬
ವಿಮೋಚನೆ

ಯಂತ್ರವಾಗಿ ಮಾರ್ಪಟ್ಟಿರಲಿಲ್ಲ. ಆತನ ಜೀವನದ ಕತೆಯನ್ನು
ಸುಳ್ಳೆಂದು ಹೇಳಲು ನಾನು ಸಿದ್ದನಿರಲಿಲ್ಲ, ಆದರೆ ಅಂತಹ ಕತೆ
ಯನ್ನು ನಾನು ದ್ವೇಷಿಸುತ್ತಿದ್ದೆ, ಇದು ಜೀವನದ ಪುನರಾವರ್ತ
ನೆಯೆ? ಆತ ಕ್ಯಾತನಹಳ್ಳಿಯಿಂದ ಬಂದಿದ್ದ ಬಡ ಗೌಡ. ಹಳ್ಳಿ
ಯಿಂದ ಬರುವುದು.....ಮಿಲ್ಲಿನಲ್ಲಿ ಕೆಲಸ ...ಕೆಮ್ಮು, ಭಿಕ್ಷೆ ಹದಿ
ನೈದು ವರ್ಷಗಳ ಹಿಂದೆ, ತಂದೆ ನನ್ನ ತಂದೆ, ಹಾಗೆಯೇ ಬಂದಿದ್ದ.
ಆದರೆ ನಾನು ಅವನಿಗೆ ಜೊತೆಗಾರನಾಗಿದ್ದೆ, ಈ ಮುದುಕನಿಗೆ
ಅಂತಹ ಜೊತೆಗಾರರಿದ್ದರೊ ಇಲ್ಲವೊ ತಿಳಿಯದು, ತಿಳಿಯುವ
ಇಚ್ಛೆಯೂ ನನಗಿರಲಿಲ್ಲ, ಇಂತಹ ಗೋಳಿನ ಕತೆಗಳನ್ನು ನಾನು
ಯಾಕೆ ಕೇಳಬೇಕು?ಸುತ್ತ ಮುತ್ತಲಿನ ಸಂಕಟವನ್ನೆಲ್ಲಾ ಕಂಡು
ಕನಿಕರಪಡುತ್ತಾ ಹೃದಯ ಕರಗಿಸಲು, ನಾನು ಸುಖದ ಸುಪ್ಪತ್ತಿಗೆ
ಯಿಂದ ಇಳಿದು ಬಂದ ದೇವತೆಯಾಗಿರಲಿಲ್ಲ.... ದೇವತೆಯಾಗುವ
ಇಚ್ಛೆ ನನಗಿರಲಿಲ್ಲ.

.....ಶ್ರೀಕಂಠನ ಹಾಗೆಯೇ ನನಗೆ ಬಾಲ್ಯ ಸ್ನೇಹಿತರು ಹಲವ

ರಿದ್ದರು, ವರ್ಷ ವರ್ಷಗಳು ಕಳೆದ ಹಾಗೆ ಅವರೆಲ್ಲ ಬೇರೆ ಬೇರೆ
ಯಾಗಿ ಬೆಳೆದು ತಮ್ಮ ತಮ್ಮ ಹಾದಿ ಹಿಡಿದಿದ್ದರು. ನಾನು ಆ
ಹಿಂಡಿಗಿಂತ ದೂರವಾದವನು–ಅನಿವಾರ್ಯ ಕಾರಣಗಳಿಗಾಗಿ ದೂರ
ವಾದವನು. ಅವರು ಯಾರನ್ನೂ ಕಾಣಲು ನಾನು ಇಷ್ಟ ಪಡಲಿಲ್ಲ,
ಆದರೂ ಬೊಂಬಾಯಿಗಿಂತ ಚಿಕ್ಕದಾದ ನನ್ನ ಊರಿನಲ್ಲಿ ಅವರಲ್ಲಿ
ಎಂದಾದರೂ ಯಾರಾದರೂ ಒಬ್ಬರನ್ನು ನಾನು ಅಪೇಕ್ಷಿಸದೆ ಇದ್ದರೂ
ಕೂಡ, ಬೀದಿಯಲ್ಲಿ ಕಾಣಬೇಕಾಗುತ್ತಿತ್ತು.

ಮತ್ತೊಂದು ಸಂಜೆ, ನಾರಾಯಣ ನನಗೆ ಕಾಣಲು ದೊರೆತ.

ಹುಡುಗನಾಗಿದ್ದಾಗ ಜೊತೆಯಲ್ಲಿ ಓದುತ್ತಿದ್ದಾಗ ಅವನ ಮುಖ
ದುಂಡಗೆ ತುಂಬಿಕೊಂಡು ಸದಾ ಗೆಲುವಾಗಿರುತ್ತಿತ್ತು, ತಾನೂ ನಕ್ಕು
ಎಲ್ಲರನ್ನೂ ನಗಿಸುವ ಮಹಾ ಸಾಮರ್ಥ್ಯ ಆತನಿಗಿತ್ತು, ಆದರೆ ಈಗ?
ಆತ ಎತ್ತರವಾಗಿ ಬೆಳೆದಿದ್ದ-ಒಣಗಿದ ಕಡ್ಡಿಯಂತೆ. ಕಪೋಲಗಳು
ಬತ್ತಿದ್ದುವು. ಮುಖದ ಮೂಳೆಗಳು ಎದ್ದು ಕಾಣಿಸುತ್ತಿದ್ದುವು.........
ಒಂದಕ್ಕೊಂದು ಆತು ಕುಳಿತಿದ್ದ ಆ ತುಟಿಗಳು ಬಲು ಆಳವಾದ ಯವುದೋ ನೋವಿಗೆ ಮುಖವಾಡವಾಗಿದ್ದುವು. ಕೊಳೆಯಾಗಿದ್ದ ಷರಟು ಪಾಯಜಾಮಗಳನ್ನು ಅವನು ತೊಟ್ಟಿದ್ದ ....... ನನ್ನನ್ನು ಆತ ಗುರುತಿಸಿದಂತೆ ತೋರಲಿಲ್ಲ.

ಬೇಕು ಬೇಕೆಂದೇ ನಾನು ಅತನ ಭುಜ ಒರೆಸಿದೆ. ಅದನ್ನೂ

ಮೌನವಾಗಿ ಸಹಿಸಿಕೊಂಡು ಅತ ಹೋಗುತ್ತಿದ್ದ. ನಾನು " ನಿಲ್ಲಿ ಅಲ್ಲಿ! "ಎಂದು ತಡೆದು ನಿಲ್ಲಿಸಿದೆ.

ಆತ ನಿಂತು ನನ್ನೆಡೆಗೆ ತಿರುಗಿ ನೋಡಿದ ಆ ನೋಟದಲ್ಲಿ

ಗಾಬರಿ ತುಂಬಿತ್ತು.

"ಸ್ವಲ್ಪ ನೋಡ್ಕೊಂಡು ಹೋಗ್ಬಾರ್ದೇನು?"

"ಕ್ಷಮಿಸ್ಬೇಕು. ಎನೋ ಯೋಚಿಸ್ತಾ ಇದ್ದೆ. ನೋಡಿಲ್ಲ."

ಇಷ್ಟು ಹೇಳಿ ಆತ ಪುನಃ ತನ್ನ ಹಾದಿ ಹಿಡಿಯತೊಡಗಿದ.

ಆ ದೀನತನವನ್ನು ನೋಡಿ ನಗುವ ಚೈತನ್ಯವೂ ನನ್ನಲ್ಲಿ ಉಳಿಯಲಿಲ್ಲ. ಆದರೂ ಹೇಳಿದೆ.

"ಅದೇನು ಯೋಚ್ನೆ ಮಾಡ್ತಾ ಇದೀಯೋ? ಯಾವನಾ

ದರೂ ನನ್ನಂಥ ಪಾಪಿ ಬೀದೀಲಿ ಸಿಕ್ಕರೂ ಮಾತ್ನಾಡಬಾರದೇನು?"

ಈಗ ತಿರುಗಿ ನೋಡಿದಾಗ ಆತನ ಮುಖ ಆಶ್ಚರ್ಯದಿಂದ ಅರ

ಳಲು ಯತ್ನಿಸುತ್ತಿತ್ತು-ಹಿಂದಿನ ಹಾಗೆ. ಆದರೆ ರೂಢಿ ತಪ್ಪಿಹೋಗಿ ತ್ತೇನೋ? ಮತ್ತೆ ಕುಂಠಿತವಾಯಿತು.

"ನಾನ್ಕಣೋ ನಾಣಿ. ನಾನು ಚಂದ್ರು."

"ತಿಳೀತು. ಚೆನ್ನಾಗಿದೀಯೇನಪ್ಪ?"

ನಾನು ಉತ್ತರಕೊಡದೆ ಅವನನ್ನು ಸಮೀಪದ ಹೋಟೆಲಿಗೆ

ಎಳೆದೊಯ್ದೆ. ಅವನು ಎಷ್ಟು ಬೇಡ ಬೇಡವೆಂದರೂ ಕೇಳದೆ, ಕಾಫಿ ತಿಂಡಿ ತರಿಸಿದೆ. ಆ ಪ್ರಾಣಿ ತಿಂಡಿ ತಿಂದ,ಕಾಫಿ ಕುಡಿದ. ಆದರೆ ಬಾಯಿ ತೆರೆದು ತನ್ನ ಬಾಳ್ವೆಯ ಪರಿಚಯ ಮಾಡಿಕೊಡಲಿಲ್ಲ.

"ಏನಪ್ಪ ನಾಣಿ? ಮನೇಲಿ ತಂಗಿ ತಾಯಿ ತಂದೆ ಚೆನ್ನಾಗಿ

ದಾರೇನಪ್ಪ?"

ಆತ ನಗಲು ಯತ್ನಿಸಿದ-ಸಿನಿಕತನದ ನಗು.

"ಯಾಕೆ,ಏನಾಯ್ತು ನಾಣಿ?"

"ನನ್ನ ತಂಗಿ ನಿನ್ನೆ ತೀರ್ಕೊಂಡ್ಲು."

ಆರು ವರ್ಷಗಳ ಹಿಂದೆಯೊಮ್ಮೆ ಅವರ ಮನೆಗೆ ಹೋಗಿದ್ದಾಗ

ಆ ಪುಟ್ಟ ತಂಗಿಯನ್ನು ನೋಡಿದ್ದೆ. ಆಗ ಆಕೆಗೆ ಹತ್ತೋ ಹನ್ನೊಂದೋ ಇರಬೀಕು. ಲಂಗ ತೊಟ್ಟು ಓಡಾಡುತ್ತಿದ್ದಳು. ಅಣ್ಣನಂತೆಯೇ ಮನೆ ಬೆಳಗುವ ನಗು ನಗುತ್ತಿದ್ದ ಆ ಹುಡುಗಿಯನ್ನು ಸ್ಮರಿಸಿಕೊಳ್ಳುತ್ತಾ ಕುಳಿತೆ.

"ಹೆರಿಗೆಗೆ ಬಂದಿದ್ಲು. ಹೆರಿಗೆ ಏನೋ ಆಯ್ತು. ಮಗುವೂ

ಇಲ್ಲ, ಅವಳೂ ಇಲ್ಲ, ಅಷ್ಟೆ."

ಲಂಗ ತೊಟ್ಟಿದ್ದ ಹುಡುಗಿ ಬೆಳೆದು ದೊಡ್ಡವಳಾಗಿದ್ದಳು. ಸೀರೆ

ಯುಟ್ಟು ಗಂಡನ ಮನೆಗೆ ಹೋಗಿದ್ದಳು. ಗರ್ಭಿಣಿಯಾಗಿ ಅಲ್ಲಿಂದ ಹೆರಿಗೆಗೆಂದು ತವರಿಗೆ ಬಂದಿದ್ದಳು. ಆಗ ಸಾವು-

ನನ್ನ ಯೋಚನೆಯ ಸರಣಿ ಕಡಿದು ಹೋಯಿತು.

"ಎಲ್ಲಾಯ್ತು ಹೆರಿಗೆ? ಆಸ್ಪತ್ರೇಲೊ?"

"ಆಸ್ಪತ್ರೆ ಎಲ್ಬಂತು? ಎಲ್ಲಾ ನಮ್ಮನೇಲೆ...., ನೋಡಿ

ದ್ಯಲ್ಲಾ ನಮ್ಮ ಹಟ್ಟೀನಾ."

ಆ ಮೇಲೆ ಮುರುಕು ಮುರುಕಾಗಿ ಅವನ ಬಾಯಿಂದ ಕೆಲವು

ಮಾತುಗಳು ಹೊರಬಿದ್ದವು.ಒಂದಕ್ಕೊಂದು ಜೋಡಿಸಿ ಅವುಗಳಿಗೆ ಅರ್ಥ ಕಲ್ಪಿಸಿದೆ.

ಆತನ ತಂದೆ ಬಲು ಪ್ರಯಾಸ ಪಟ್ಟು ಇಂಟರ್ ತನಕ ಅವನನ್ನು

ಓದಿಸಿದರು. ತಂಗಿಗೆ ಮದುವೆ ಮಾಡಿಕೊಡುವ ಪ್ರಶ್ನೆ ದೊಡ್ಡದಾಗಿ ಎದುರು ಬಂದುದರಿಂದ ನಾರಾಯಣನ ವಿದ್ಯಾಭ್ಯಾಸ ಅಲ್ಲಿಗೇ ನಿಂತಿತು. ಅಲ್ಲಿ ಇಲ್ಲಿ ಸಾಲ ಮಾಡಿ ಅವನ ತಂದೆ, ಮಗಳ ಮದುವೆ ನೆರವೇರಿಸಿ ದರು. ನಾರಾಯಣನಿಗೆ ಹೆಣ್ಣು ಕೊಡುವವರು ಬರಬಹುದು. ಅವ ರಿಂದ ವರದಕ್ಷಿಣೆ ಪಡೆದು ಅವನ ಓದು ಮುಂದುವರಿಸಬೇಕು-ಎನ್ನು ವುದು ಅವನ ತಂದೆಯ ಯೋಜನೆಯಾಗಿತ್ತು.ಆದರೆ ಆ ಯೋಜನೆ ಕಾರ್ಯರೂಪಕ್ಕೆ ಇಳಿಯಲಿಲ್ಲ. ಅವನ ತಂದೆ ನಿವೃತ್ತ ಗುಮಾಸ್ತೆ, ಇನ್ನು ಯಾವುದೋ ಅಂಗಡಿಯಲ್ಲಿ ಲೆಕ್ಕ ಬರೆದು ಮನೆಯ ಸಂಸಾರ ಸಾಗಿಸಲು ಆತ ಸಂಪಾದಿಸಬೇಕಾಗಿತ್ತು, ನಾರಾಯಣ ಕೆಲಸಕ್ಕೋ ಸ್ವರ ಅಲೆದ. ಅವನು ಹೋದಲ್ಲಿ ಅದು ಇರಲಿಲ್ಲ....

... ಹೊರಡುವ ಹೊತ್ತಿಗೆ ನಾಣಿ ಕೇಳಿದ:

"ಇದೇ ಊರಲ್ಲಿ ಇರ್ತಿ ಏನು?”

"ಇಲ್ಲ ಬೊಂಬಾಯಲ್ಲಿ ಇದ್ದೀನಿ. ಯಾವತ್ತಾದರೂ ಇಲ್ಲಿಗೆ

ಬರ್ತೀನಿ ಅಷ್ಟೆ."

ಅದು ಸುಳ್ಳಾಗಿತ್ತು, ಆದರೆ ಸುಳ್ಳು ಸತ್ಯಗಳ ನಡುವಿನ

ವ್ಯತ್ಯಾಸ ನನ್ನ ಪಾಲಿಗೆ ಎಷ್ಟೋ ಕಡಿಮೆಯಾಗಿತ್ತಲ್ಲವೆ?

“ಹೂಂ. ನೋಡಿದರೆ ಗೊತ್ತಾಗುತ್ತೆ. ಬೊಂಬಾಯಿ ಒಗ್ಗಿದೆ

ಯೇನೋ ? "

“ಪರವಾಗಿಲ್ಲ.”

"ಯಾವತ್ತಾದರೂ ಇಲ್ಲಿದ್ದಾಗ ನಮ್ಮನೇ ಕಡೆ ಬಾ. ಇನ್ನೂ

ನಮ್ಮಾಯಿ ಉಪ್ಪಿಟ್ಟು ಚೆನಾಗಿಯೇ ಮಾಡ್ತಾರೆ.”

“ ಬರ್ತೀನಿ.”

ನನ್ನ ಕೈಯಲ್ಲಿದ್ದ ಕೆಲವು ರೂಪಾಯಿಗಳನ್ನು ಆತನಿಗೆ

ಕೊಡೋಣವೇ ಎನಿಸಿತು.ಆದರೆ ಅದೆಂತಹಹ ದಾನಶೀಲತೆ ? ಅಂತಹ ದಾನಕ್ಕೆ ಅರ್ಥ ಉಂಟೆ? ಹಾಗೆ ದುಡ್ಡು ಕೊಟ್ಟು ಅವನ ಹೃದಯ ವನ್ನು ಘಾಸಿಗೊಳಿಸಲೇ?

ನಾನು ಹಾಗೆ ಮಾಡಲಿಲ್ಲ. ಮನಸ್ಸನ್ನು ಕಲ್ಲಾಗಿ ಮಾರ್ಪಡಿಸಿ

ನನ್ನ ಹಾದಿ ಹಿಡಿದಿದೆ....

....ಆದರೆ ಮತ್ತೆ ಮನಸ್ಸು ಹಿಂಡುವ ಯೋಚನೆಗಳು ಧಾವಿಸಿ

ಬರುತ್ತಿದ್ದವು. ಎಲ್ಲದರಲ್ಲಾ ಅತೃಪ್ತಿ, ವಿವರಿಸಲಾಗದ ಅಶಾಂತಿ. ನಾನು ಸಾಗುತ್ತಿದ್ದ ಹಾದಿ ಎಲ್ಲಿ ಮುಕ್ತಾಯವಾಗುವುದು? ಅದರ ಮೈಲುಗಲ್ಲಾವುದು, ಯಾವುದು? ಹೀಗೆಯೇ ಬೆಳೆಯುತ್ತಾ ಹೋಗು

ವುದೇ ಮಾನವ ಜೀವನವೆ ?

......ಕತ್ತಲೆಯ ಗವಿಯಂತೆ ಬಲು ಆಳವಾಗಿರುವ ಗತ

ಕಾಲದ ನನ್ನ ಬಾಳ್ವೆಯಿಂದ ಇಷ್ಟು ಸಂಗತಿಗಳನ್ನು ಈ ದಿನ ಹೊರ ತೆಗೆದು ನಿಮ್ಮ ಮುಂದಿರಿಸಿದ್ದೇನೆ. ಬೆಳಗಿನಿಂದ ಹಿಡಿದು, ನಡುವೆ ಹೆಚ್ಚಿನ ವಿರಾಮಕ್ಕೂ ಅವಕಾಶವಿಲ್ಲದ ಹಾಗೆ, ಈಗ ಈ ನಡುವಿರುಳಿನ ವರೆಗೂ ಬರೆದಿದ್ದೇನೆ. ಅತ್ಯಂತ ಕಟುವಾದ ಈ ಅಂಶಗಳನ್ನು ಬರೆ ಯುವ ಕೆಲಸ ಸುಲಭವಾಗಿಲ್ಲ, ನನ್ನ ಮುಂದೆ ಹಲವು ಹಾದಿಗಳಿ ದುವು–ಎಲ್ಲರ ಮುಂದೆಯೂ ಇರುವಂತೆ. ಆದರೆ ಬೇರೆ ಗತಿ ಇಲ್ಲದೆ, ನಾನು ನನ್ನ ಜೀವನದ ಹಾದಿಯನ್ನು ಆ ರೀತಿ ರೂಪಿಸಿಕೊಂಡೆ. ಅದನ್ನು ನಿಮ್ಮೆದುರು ವಿವರಿಸುತ್ತಾ ಸಮರ್ಥಿಸುವ ಇಚ್ಛೆ ನನಗಿಲ್ಲ. ನಿಮ್ಮನ್ನು ಯಾವುದೇ ನಿರ್ದಿಷ್ಟ ಅಭಿಪ್ರಾಯದತ್ತ ಒಯು ತಲಪಿಸುವ ಉದ್ದೇಶ ನನ್ನದಲ್ಲ, ನಾನು ಮಾಡಬೇಕಾದ ಕೊನೆಯ ಕರ್ತವ್ಯ ವೆಂದು ಇದನ್ನು ಬರೆಯುತ್ತಿದ್ದೇನೆ.

ಒಣ ವಾದ ನಿಮಗೆ ಇಷ್ಟವಿಲ್ಲದಿರಬಹುದು. ನನಗೂ ಅದು

ಇಷ್ಟವಿಲ್ಲ, ಇಲ್ಲಿಗೆ ಸಾಕು.

ನಾಳೆ ಶನಿವಾರ, ನನ್ನ ವಕೀಲರು ಬಂದು ಹೋಗಬಹುದು.

ಅವರಿಗೆ ನನ್ನಿಂದ ಸರಿಯಾದ ಸಹಕಾರ ದೊರೆಯದಲ್ಲಾ ಎಂದು ನನಗೆ ದುಃಖವಾಗುತ್ತಿದೆ.....

ಲೇಖನಿಯನ್ನು ಕೆಳಗಿಟ್ಟು, ನೆಟಿಕೆಗಳನ್ನು ಮುರಿದು, ದೇಹ

ವನ್ನು ಸಡಿಲಿಸಿ, ಈ ಚಾಪೆಯ ಮೇಲೆ ಕಾಲು ಚಾಚಿಕೊಳ್ಳುವೆ. ನಿದ್ದೆಹೋಗುವೆ. ಕನಸಿನಲ್ಲಿ ಯಾರು ಬೇಕಾದರೂ ಬರಬಹುದು– ಯಾರು ಬೇಕಾದರೂ.