ವಿಷಯಕ್ಕೆ ಹೋಗು

ವೇಶ್ಯಾವಾಟಿಕೆಯ ಕಥೆ-ವ್ಯಥೆ

ವಿಕಿಸೋರ್ಸ್ದಿಂದ

ಪುಸ್ತಕ ವಿವರ , ಪ್ರಕಾಶಕರ ಮಾತು

[ಸಂಪಾದಿಸಿ]

ವೇಶ್ಯಾವಾಟಿಕೆಯ
ಕಥೆ-ವ್ಯಥೆ



ಬಿ.ಎಂ. ರೋಹಿಣಿ


ಆಕೃತಿ ಆಶಯ ಪಬ್ಲಿಕೇಶನ್ಸ್
ಮಂಗಳೂರು

.
VESHYAVATIKEYA KATHE VYATHE
A book about Prostitution and the grievances of Prostitutes
by
B.M. Rohini
Near Panchayath Office
Kudupu, Mangaluru-575 028
Mobile: 9480250244


Published by
Aakrithi Aashaya Publications
Maximus Complex, Light House Hill Road
Mangaluru-575 001
Tel.: 0824 2972002
aakrithiaashayapublications@gmail.com


ISBN : 978-93-92116-53-7
First Impression : 2022
© : Author
Size : Demy
Paper used : 70 gsm maplitho
Pages : 240
Price : Rs. 275
Cover Design : Kallur Nagesh


.
Page Designed & Printed at
Aakrithi Prints
Light House Hill Road
Mangaluru-575 001

Tel.: 0824 2972002

ಪ್ರಕಾಶಕರ ಮಾತು

ಜೀವಿಸಲು ಆಹಾರ, ಸಂತಾನಾಭಿವೃದ್ಧಿಗೆ ಮೈಥುನ, ವಿಶ್ರಾಂತಿಗೆ ನಿದ್ದೆ ಇವಿಷ್ಟು ಜೀವಿಗೆ ಪ್ರಧಾನವಾದುದು. ಇದನ್ನು ಪ್ರಕೃತಿಯೇ ವ್ಯವಸ್ಥೆಗೊಳಿಸಿದೆ. ಇದರ ಸೂತ್ರದಂತೆಯೇ ಬದುಕಿದರೆ ಪ್ರಕೃತಿಯಲ್ಲಿ ಎಲ್ಲವೂ ಸುಸೂತ್ರ ಮತ್ತು ಸರಳ. ಕಾಲ ಕಾಲಕ್ಕೆ ಬೇಕಾದ ಆಹಾರವನ್ನು ಪ್ರಕೃತಿಯೇ ಚಿಗುರಿಸಿ ಹಸಿವು ಮೂಡಿಸಿ ಉಣ್ಣಲು ಪ್ರೇರೇಪಿಸುತ್ತದೆ. ಋತುಬದ್ಧವಾಗಿ ಲೈಂಗಿಕತೆಯನ್ನು ಚೋದಿಸಿ ಸಂತಾನಾಭಿವೃದ್ಧಿಗೆ ಪ್ರಚೋದಿಸುತ್ತದೆ. ಆಹಾರಕ್ಕಾಗಿ ಸುತ್ತಾಟ, ಕಿತ್ತಾಟ, ಲೈಂಗಿಕತೆಗಾಗಿ ವೈಯ್ಯಾರ, ಕಾದಾಟಗಳಿಂದ ಸುಸ್ತಾದಾಗ ಸುಖನಿದ್ದೆಯಿತ್ತು ಜೀವಿಯನ್ನು ಪುನಶ್ವೇತನಗೊಳಿಸುತ್ತದೆ. ಆದರೆ ಮನುಷ್ಯ ವ್ಯವಸ್ಥಿತ ಕುಟುಂಬ ವ್ಯವಸ್ಥೆ, ಸುಂದರ ಸಮಾಜಕ್ಕಾಗಿ ಹಂಬಲಿಸಿ ತನ್ನದೇ ನಿಯಮಗಳನ್ನು ರೂಪಿಸಿಕೊಂಡು ಪ್ರಕೃತಿಯನ್ನು ಮೀರಿ ಬುದ್ಧಿವಂತಿಕೆಯಿಂದ ಬದುಕಲು ಕಲಿತ. ಆದ್ದರಿಂದ ಆತ ಇತರ ಜೀವಿಗಳಿಗಿಂತ ಭಿನ್ನ ಮತ್ತು ಶ್ರೇಷ್ಠ, ಆಹಾರಕ್ಕಾಗಿ ಅಲೆಯಬೇಕಾಗಿಲ್ಲ, ಕಿತ್ತಾಡಬೇಕಾಗಿಲ್ಲ. ಕೂಡಿಟ್ಟ ಆಹಾರವನ್ನೇ ಪ್ರಕೃತಿ ಯೋಜಿಸಿದ್ದಕ್ಕಿಂತಲೂ ಸಮಯದ ಹಂಗಿಲ್ಲದೆ ಉಪಯೋಗಿಸಿಕೊಳ್ಳಬಲ್ಲವ. ಲೈಂಗಿಕತೆಗೂ ಋತುವನ್ನೇ ಕಾಯಬೇಕಾಗಿಲ್ಲ. ಮೈಥುನಕ್ಕೆ ಹಾತೊರೆದಾಗಲೆಲ್ಲ ಲಭ್ಯವಾಗುವಂತಹ ವ್ಯವಸ್ಥೆ ಆತ ಮಾಡಿಕೊಂಡಿದ್ದಾನೆ. ಜೀವಿಸಲು ಆಹಾರ, ಸಂತಾನಾಭಿವೃದ್ಧಿಗೆ ಮೈಥುನ ಎನ್ನುವ ಪ್ರಕೃತಿಯ ಯೋಜನೆ ಮನುಷ್ಯನಿಗೆ ಅರ್ಥವಾಗದೆಯೋ ಬೇಡವಾಗದೆಯೋ ಆಹಾರ ಮೈಥುನಾದಿಗಳು ತಮ್ಮ ಸುಖಕ್ಕಿರುವಂಥವುಗಳು ಎನ್ನುವ ಭೋಗಭಾವನೆ ಬಂದುಬಿಟ್ಟಿತು. ಪ್ರಕೃತಿ ಸಿದ್ಧಗೊಳಿಸಿದ ಶುದ್ಧ ಆಹಾರವನ್ನು ಛೇದಿಸಿ ಅದಕ್ಕೆ ಹತ್ತಾರು ರುಚಿಗಳನ್ನು ಬೆರೆಸಿ ಹಸಿವಿಗಲ್ಲ; ರುಚಿ ಸವಿಯಲೆಂದೇ ತಿನ್ನುತ್ತಿದ್ದಾನೆ. ಎಲ್ಲ ಪ್ರಾಣಿಗಳಿಗೂ ಮೈಥುನ ಋತು ಸಹಜವಾಗಿದ್ದರೆ ಮನುಷ್ಯನ ನಿತ್ಯ ಉದ್ರೇಕಾವಸ್ಥೆ, ಬಹುಶಃ ಅವನು ತನ್ನ ಮೈಥುನದ ಋತುವಿನ ಪ್ರಜ್ಞೆಯನ್ನೇ ಕಳೆದುಕೊಂಡಂತಿದೆ.

ವೇಶ್ಯಾವಾಟಿಕೆಯೆಂದಾಕ್ಷಣ ನಮ್ಮ ಮನಸ್ಸಿನ ಮುಂದೆ ನಿಲ್ಲುವುದು ಮಹಿಳೆ. ಇದೇಕೆ ಹೀಗೆ? ಪುರುಷನಿಲ್ಲದೆ ವೇಶ್ಯಾವಾಟಿಕೆಯುಂಟೆ! ಚರಿತ್ರೆಯುದ್ದಕ್ಕೂ ಈ ವೇಶ್ಯಾವಾಟಿಕೆಯ ಪಟ್ಟವನ್ನು ಮಹಿಳೆಗೇ ಕಟ್ಟಿಕೊಟ್ಟದ್ದರ ಹಿಂದೆ ಏನೋ ಅಡಗಿಸಿಟ್ಟುಕೊಂಡಿರುವಂತಿದೆ. ಪ್ರಕೃತಿಗೆ ಗಂಡು ಮುಖ್ಯವಲ್ಲ. ಹೆಣ್ಣು ಮುಖ್ಯ. ಪ್ರಕೃತಿ ಮಹಿಳೆಗಿಂತ ಹೆಚ್ಚು ಪುರುಷನಿಗೆ ಸ್ನಾಯುಬಲ ಕೊಟ್ಟಿರುವುದು ಹೆಣ್ಣನ್ನು ರಕ್ಷಿಸಲು ಮತ್ತು ಪೋಷಿಸಲು, ಕಾಮಾತುರತೆಯನ್ನು ಕೊಟ್ಟಿರುವುದು ಆಕೆಯನ್ನು ಒಲಿಸಿ ರಮಿಸಿ ಸಂತಾನವನ್ನು ಹುಟ್ಟುಹಾಕಲು, ನೋಟಮಾತ್ರಕ್ಕೆ ಗಂಡು ಕಾಮಾತುರನಾಗಬಲ್ಲವನು. ಹೆಣ್ಣು ಹಾಗಲ್ಲ. ಹೆಣ್ಣಿಗೆ ಭಾವಪ್ರಾಪ್ತಿಯಾಗಬೇಕು. ಇಲ್ಲಿ ಸ್ಪಷ್ಟವಾಗುವುದೇನೆಂದರೆ ಹೆಣ್ಣಿಗೆ ಕಾಮ ಮುಖ್ಯವಲ್ಲ. ತನ್ನ ರಕ್ಷಣೆ, ತನ್ನ ಸಂತಾನದ ರಕ್ಷಣೆಯ ಭದ್ರತಾಭಾವ ಮಾತ್ರ ಮುಖ್ಯ. ಅದನ್ನು ಪ್ರಕೃತಿ ಒದಗಿಸಿದ ಸ್ನಾಯುಬಲವುಳ್ಳ ಗಂಡು ಪೂರೈಸಬೇಕು. ಇಲ್ಲಿ ಗಂಡು ಹೆಚ್ಚ ಹೆಣ್ಣು ಹೆಚ್ಚೇ ಎಂಬುದಿಲ್ಲ. ಎರಡೂ ಒಂದೇ. ಸಂತಾನಾಭಿವೃದ್ಧಿಗಾಗಿ ಗಂಡಿನಲ್ಲಿಲ್ಲದ ಕೆಲವು ವಿಶೇಷಗಳನ್ನು ಪ್ರಕೃತಿ ಹೆಣ್ಣಿನಲ್ಲಿಟ್ಟಿದೆ. ಕೆಲವನ್ನು ಗಂಡಿನಲ್ಲಿಟ್ಟಿದೆ. ಪ್ರಕೃತಿ ರೂಪಿಸಿರುವ ಈ ವ್ಯತ್ಯಾಸಗಳು ಸಂತಾನಾಭಿವೃದ್ಧಿಗಷ್ಟೇ ಸೀಮಿತ. ವೇಶ್ಯಾವಾಟಿಕೆ ಎಂದಾಕ್ಷಣ ಮಹಿಳೆಯನ್ನು ಗಂಡುಬೀರಿಯೆಂದೋ ಎಲ್ಲ ಬಿಟ್ಟವಳೆಂದೋ ಹೀಯಾಳಿಸುವವರು ಈ ವೈಜ್ಞಾನಿಕತೆಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಕಾಮಾತುರತೆಯಿಂದ ಮಹಿಳೆಯೊಬ್ಬಳು ವೇಶ್ಯಾವಾಟಿಕೆಗೆ ತೊಡಗುವುದಲ್ಲ. ಸಮಾಜದ ಅದರಲ್ಲೂ ಗಂಡಿನ ರಕ್ಷಣೆವಂಚಿತ, ಕುಟುಂಬ ನಿಭಾಯಿಸದ, ಸಂತಾನದ ಜವಾಬ್ದಾರಿ ಹೊರದ ಪುರುಷ ವ್ಯಾವಹಾರಿಕ ಜಗತ್ತಿನಲ್ಲಿ ಬದುಕುಳಿಯಲು ಮಹಿಳೆ ಕಂಡುಕೊಳ್ಳುವ ದಾರುಣ ಉಪಾಯ ಅಷ್ಟೆ, ಆಹಾರವನ್ನೂ ಮೈಥುನವನ್ನೂ ಭೋಗದ ವಸ್ತುಗಳೆನ್ನುವ ತಿಳಿಗೇಡಿಗಳಿಂದ ಇಂತಹ ಸಾಮಾಜಿಕ ದುರಂತಗಳು ರೂಪುಗೊಳ್ಳುತ್ತವೆ.


ಸುಮಾರು ನಾಲೈದು ವರ್ಷಗಳಿಂದ ಅನೇಕ ಸಾಮಾಜಿಕ ಕಾರ್ಯಕರ್ತರನ್ನು, ಸಂಸ್ಥೆಗಳನ್ನು, ಲೈಂಗಿಕ ಕಾರ್ಯಕರ್ತೆಯರನ್ನು, ವೇಶ್ಯಾವಾಟಿಕೆಯಲ್ಲಿ ತೊಡಗಿರುವವರನ್ನು, ಪೊಲೀಸ್‌ ಠಾಣೆಗಳನ್ನು, ವಸತಿಗೃಹಗಳನ್ನೆಲ್ಲ ಸಂಪರ್ಕಿಸಿ ವೇಶ್ಯಾವಾಟಿಕೆಯ ಕಥೆ-ವ್ಯಥೆಯನ್ನು ದಾಖಲಿಸುವ ಕೆಲಸವನ್ನು ಹಿರಿಯ ಲೇಖಕಿ ಬಿ.ಎಂ. ರೋಹಿಣಿಯವರು ಇಲ್ಲಿ ಮಾಡಿದ್ದಾರೆ. ಅವರ ಆತ್ಮಕಥನ ಸಹಿತ ಸುಮಾರು ಇಪ್ಪತ್ತೊಂದು ಕೃತಿಗಳನ್ನು ಪ್ರಕಟಿಸಿರುವ ಬಿ.ಎಂ. ರೋಹಿಣಿಯವರು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ಕೌಟುಂಬಿಕ ದುರಂತಗಳಿಂದ ಮರುಗಿ ಈ ಕೃತಿ ರಚಿಸುವ ಸಾಹಸ ಮಾಡಿದ್ದಾರೆ. ಸರಕಾರಿ ಇಲಾಖೆ, ವಿಶ್ವವಿದ್ಯಾನಿಲಯ ಅಥವಾ ಪ್ರಕಾಶನ ಸಂಸ್ಥೆಗಳು ಲೇಖಕರಿಗೆ ಖರ್ಚು-ವೆಚ್ಚ ಸಹಿತ ರಕ್ಷಣೆ ನೀಡಿ ಮಾಡಿಸಬೇಕಾದ ಈ ಕೆಲಸವನ್ನು ಬಿ.ಎಂ. ರೋಹಿಣಿಯವರು ಏಕಾಂಗಿಯಾಗಿ ನಿರ್ವಹಿಸಿ ನಮ್ಮ ಪ್ರಕಾಶನಕ್ಕೆ ತಂದೊಪ್ಪಿಸಿದ್ದಾರೆ. ಅವರಿಗೆ ನಮ್ಮ ಪ್ರಕಾಶನವು ಅತ್ಯಂತ ಆಭಾರಿಯಾಗಿದೆ ಮತ್ತು ಕೃತಜ್ಞತೆಗಳನ್ನು ಸಲ್ಲಿಸುತ್ತಿದೆ. ಕೃತಿಯನ್ನು ಅಕ್ಷರ ಸಂಯೋಜಿಸಿ ಪುಟವಿನ್ಯಾಸಗೊಳಿಸಿ ಮುದ್ರಿಸುವಲ್ಲಿ ಸಹಕರಿಸಿದ ಶ್ರೀಮತಿ ಭಾರತಿ ಮತ್ತು ಶ್ರೀಮತಿ ಗಾಯತ್ರಿಯವರಿಗೆ ಹಾಗೂ ಪುಸ್ತಕದ ಮಾರಾಟದ ಜವಾಬ್ದಾರಿಯನ್ನು ವಹಿಸಿರುವ ಶ್ರೀ ಕೆ. ಮೋನಪ್ಪ ಅವರಿಗೆ ಕೃತಜ್ಞತೆಗಳು. ಪ್ರಕಾಶನವನ್ನು ಯಾವತ್ತು ಬೆಂಬಲಿಸುತ್ತ ಬಂದ ನಮ್ಮೆಲ್ಲ ಓದುಗರಿಗೆ ಕೃತಜ್ಞತೆಗಳು.

ಕಲ್ಲೂರು ನಾಗೇಶ

ಮಂಗಳೂರು
30 ಎಪ್ರಿಲ್ 2022

ಪುಟನೋಟ

1. ಪ್ರಸ್ತಾವನೆ / 9
2. ಪ್ರಾಚೀನ ಇತಿಹಾಸ / 20
3. ವಾರಾಂಗನೆಯರು / 38
ಅ) ಸಾಹಿತ್ಯದಲ್ಲಿ ವೇಶ್ಯಾವಾಟಿಕೆ / 39
ಆ) ಶಾಸನಗಳಲ್ಲಿ ವೇಶ್ಯಾವಾಟಿಕೆ / 53
4. ವೇಶ್ಯಾವಾಟಿಕೆ ಮತ್ತು ರಾಜಕಾರಣ / 59
5. ಸವಾಲಿನೊಂದಿಗೆ ಮುಖಾಮುಖಿ / 64
ಅ) ಈ ವೃತ್ತಿಗೆ ಇರುವ ಹಿನ್ನೆಲೆ / 66
ಆ) ಈ ದಂಧೆ ನಡೆಸುವವರು ಯಾರು / 71
ಇ) ಮಾರಾಟ ಜಾಲ / 78
ಈ) ವೇಶ್ಯಾವೃತ್ತಿಗೆ ಸಂಪ್ರದಾಯದ ಸಮ್ಮತಿ / 89
6. ಪಾತರದವರು / 94
ಅ) ನೃತ್ಯದ ನಂಟು / 101
ಆ) ಹರದೇಶಿ/108
7. ದೇವದಾಸಿಯರು / 112
ಅ) ದೇವದಾಸಿಯರ ಅಂತ್ಯಸಂಸ್ಕಾರ / 117
ಆ) ದೇವದಾಸಿ ಪದ್ಧತಿಯ ನಿಷೇಧ ಒಡೆಯರ ಕಾಲದಲ್ಲಿ / 119
ಇ) ವೇಶ್ಯಾವೃತ್ತಿಯ ನಿಷೇಧಾಜ್ಞೆ 1936 / 120
ಈ) ದೇವದಾಸಿ ಪದ್ಧತಿಯನ್ನು ವಿರೋಧಿಸಿದ ಚಳುವಳಿಗಳು / 121
8. ಬಾರ್ ಬಾಲೆಯರ ಕುಣಿತಗಳು / 125
ಅ) ಈ ವೃತ್ತಿ ಬೆಳೆಯಲು ಕಾರಣಗಳು / 130
ಆ) ವಾದಗಳು / 134
ಇ) ಬ್ರಿಟಿಷ್ ಭಾರತದಲ್ಲಿ ವೇಶ್ಯಾವಾಟಿಕೆ / 135
9. ದೇವದಾಸಿ ಮನೆತನದಲ್ಲಿ ಅರಳಿದ ಪ್ರತಿಭೆಗಳು / 139
10. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೇಶ್ಯಾವಾಟಿಕೆ / 144
ಅ) ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವದಾಸಿಯರು / 147
ಆ) ಬಸರೂರಿನಲ್ಲಿ ದೇವದಾಸಿ ಸಂಪ್ರದಾಯ / 158
11. ಅಧ್ಯಯನಗಳು / 167
ಅ) ಕರ್ನಾಟಕದ ಉತ್ತರ ಭಾಗದ ವೃತ್ತಿನಿರತರ ಬಗ್ಗೆ ಅಧ್ಯಯನದ ಅಂಕಿ ಅಂಶಗಳು / 185
ಆ) ಮಂಗಳೂರಿನ ಆಸುಪಾಸಿನ ಅಧ್ಯಯನಗಳು / 187
ಇ) ಅಧ್ಯಯನದ ಫಲಿತಾಂಶಗಳು / 193
ಈ) ವೇಶ್ಯೆಯರ ಕಾನೂನು ಸಮರ / 195
ಉ) ಮ್ಯಾತೀಯ ಸಾಧನೆ / 196
ಊ) ಪತ್ರಿಕಾ ವರದಿಗಳಲ್ಲಿ ಉಂಟಾದ ವ್ಯತ್ಯಾಸಗಳು / 198
ಎ) ಕಾನೂನುಗಳು ಏನು ಹೇಳುತ್ತವೆ / 201
12. ಸಮಾಜಸೇವಕಿಯೊಬ್ಬರ ಪ್ರತಿಕ್ರಿಯೆ / 203
ಅ) ವೃತ್ತಿನಿರತರ ಅನುಭವ ಕಥನಗಳು / 208
13. ಕಾಮನ ಮಾಯಾಜಾಲದ ವಿಸ್ತಾರ / 233
14. ಪರಾಮರ್ಶನ ಗ್ರಂಥಗಳು / 237

ಪ್ರಸ್ತಾವನೆ

[ಸಂಪಾದಿಸಿ]
ಪ್ರಸ್ತಾವನೆ


2020ರಲ್ಲಿ ಕೋವಿಡ್-19 ಪ್ರಪಂಚವನ್ನು ಬಾಧಿಸಿದಾಗ ನಾವೆಲ್ಲಾ ವಿಧಿ ಇಲ್ಲದೆ ಮನೆಯೊಳಗೆ ಬಂಧಿಸಲ್ಪಟ್ಟೆವು. ನನ್ನಂತಹ ಸಾಹಿತ್ಯಾರಾಧಕರಿಗೆ ಇದೊಂದು ವರದಾನವೇ ಸರಿ, ನಿಧಾನವಾಗಿ ಓದಬೇಕು ಎಂದು ಕಪಾಟಿನಲ್ಲಿ ಬದಿಗೆ ಸರಿಸಿದ ಪುಸ್ತಕಗಳನ್ನು ಕೈಗೆತ್ತಿಕೊಂಡಾಗ ಏಳೆಂಟು ವರ್ಷಗಳ ಹಿಂದೆ ನಾನು ಅರ್ಧ ಬರೆದಿಟ್ಟ ಹಸ್ತಪ್ರತಿಗಳು ನನ್ನನ್ನೇಕೆ ಅಂಚಿಗೆ ತಳ್ಳಿದ್ದೀ ಎಂದು ಕೆಣಕಿ ಎಚ್ಚರಿಸಿತು. ಹೌದಲ್ಲಾ. ಅಂದು ನಾನು ಡೀಡ್ಸ್ ಸಂಸ್ಥೆಯ ಸಹಯೋಗದಲ್ಲಿ ಅಧ್ಯಯನವನ್ನು ಕೈಗೊಂಡು ತಿಂಗಳುಗಳ ಕಾಲ ಈ ಬಗ್ಗೆ ಕ್ಷೇತ್ರಕಾರ್ಯ, ಸಂದರ್ಶನಗಳನ್ನು ಮಾಡಿ ಧ್ವನಿಮುದ್ರಣ ಮಾಡಿಸಿಕೊಂಡಿದ್ದೆ. ಆಗ ನನಗೆ ಮಾರ್ಗದರ್ಶನ ಮಾಡಿ ಸಹಕರಿಸಿದವಳು ನನ್ನ ಗೆಳತಿ ಹರಿಣಿ, ಅವಳು ಹಲವು ವರ್ಷಗಳ ಕಾಲ ಲೈಂಗಿಕ ಕಾರ್ಯಕರ್ತೆಯರನ್ನು ಸಂಘಟಿಸುವುದರಲ್ಲಿ ಮತ್ತು ಅವರಲ್ಲಿ ಜಾಗೃತಿ ಮೂಡಿಸುವುದರಲ್ಲಿ ತುಂಬಾ ಕೆಲಸ ಮಾಡಿದ ಅನುಭವವಿದ್ದವಳು. ಅವಳ ಸಹಕಾರವೇ ಈಗ ಈ ಅಧ್ಯಯನವು ಪೂರ್ಣಗೊಳ್ಳುವುದಕ್ಕೆ ಸ್ಫೂರ್ತಿ ತುಂಬಿದೆ. ಈ ಅಧ್ಯಯನವನ್ನು ಕೈಗೊಳ್ಳಬೇಕೆಂದು ಯಾಕೆ ಮನಸ್ಸು ಮಾಡಿದೆ ಎಂಬುದಕ್ಕೂ ಕಾರಣವಿದೆ. ನನ್ನ ನೆರೆಮನೆಯಲ್ಲಿರುವ ನನಗೆ ತೀರಾ ಆತ್ಮೀಯರಾದ ಮಹಿಳೆ ಯೊಬ್ಬರು ಈ ವೃತ್ತಿಯಲ್ಲಿದ್ದುಕೊಂಡು ದೊಡ್ಡ ನಗರದಲ್ಲಿ ದಂಧೆ ನಡೆಸುತ್ತಿದ್ದರು. ವರ್ಷಕ್ಕೊಮ್ಮೆಯೋ ಎರಡು ವರ್ಷ ಕ್ಕೊಮ್ಮೆಯೋ ಊರಿಗೇ ಬಂದು ಮರಳುವಾಗ ಇಲ್ಲಿಂದ ಹೆಣ್ಣುಮಕ್ಕಳನ್ನು ಕರೆದೊಯ್ಯುತ್ತಿದ್ದರು. ಊರಿಗೆ ಬರುವಾಗ ಯಾವಾಗಲೂ ವಿಮಾನದಲ್ಲೇ. ಮರಳುವಾಗ ಕಾರಲ್ಲೇ ಅವರ ಪ್ರಯಾಣ. ಅಂತಹ ಒಂದು ಪ್ರಯಾಣದಲ್ಲಿ ಅವರು ಪೋಲೀಸರಿಗೆ ಸಿಕ್ಕಿಬಿದ್ದು, ಕೇಸ್ ಆಗಿ ಕೆಲವು ತಿಂಗಳುಗಳ ಕಾಲ ಬಂಧನದಲ್ಲಿದ್ದು ಹೊರ ಬಂದರು. ಆ ಸಮಯದಲ್ಲಿ ಅವರು ನನ್ನಲ್ಲಿ ಮನಬಿಚ್ಚಿ ಮಾತನಾಡಿದರು. ಅವರ ಕರುಣಕತೆಯನ್ನು ಹೇಳಿಕೊಂಡರು. ತಾಯಿ ತೀರಿದ ಮೇಲೆ ಅಪ್ಪ ಎರಡನೇ ಮದುವೆಯಾದದ್ದು, ತನ್ನನ್ನು ಮನೆಕೆಲಸಕ್ಕೆಂದು ದೂರದ ಊರಿಗೆ ಕಳಿಸಿದ್ದು, ಅಲ್ಲಿ ಮಾರಲ್ಪಟ್ಟು ಈ ವೃತ್ತಿಗೆ ತಳ್ಳಿದ್ದು, ಆಗ ಪರಿಚಯವಾದ ಮಂಗಳೂರಿನ ಯುವಕನೊಂದಿಗೆ ಸೇರಿ ಬೇರೆಯೇ ಕಡೆಯಲ್ಲಿ ದಂಧೆ ಪ್ರಾರಂಭಿಸಿದ್ದು. ಆ ವೃತ್ತಿಯಲ್ಲಿ ಅನುಭವಿಸಿದ ಹಿಂಸೆ, ಅವಮಾನಗಳು, ಎದುರಿಸಿದ ಸವಾಲುಗಳ ಕರುಣಕತೆಯನ್ನು ಹೇಳಿದರು. ಕೇಳಿ ನಾನು ಭಾವುಕಳಾದೆ. ಈ ವೃತ್ತಿಯನ್ನು ಯಾರೂ ಬಯಸಿ ಆಯ್ಕೆ ಮಾಡಿರುವುದಿಲ್ಲ. ನಾನಾ ರೀತಿಯ ಆಮಿಷಗಳು, ಒತ್ತಡಗಳು ಅವರನ್ನು ಈ ವೃತ್ತಿಗೆ ತಳ್ಳುತ್ತವೆ. ಇಂತಹ ಅಭಾಗಿನಿಯರು ಕೆಲವರು ನನ್ನ ಪರಿಚಿತರಲ್ಲೂ ಇದ್ದರು. ಈ ವಿಷವರ್ತುಲದತ್ತ ಅವರನ್ನು ಸೆಳೆಯುವ ಮೂಲ ಯಾವುದು ಎಂದು ಹುಡುಕುವ ಆಸಕ್ತಿ ನನ್ನಲ್ಲಿ ಮೂಡಿತು. ಅದೇ ಸಮಯದಲ್ಲಿ ಡೀಡ್ಸ್ ಸಂಸ್ಥೆಯ ಮಹಿಳಾಪರ ಚಿಂತನ ವೇದಿಕೆಯಲ್ಲಿ ಹರಿಣಿಯೊಂದಿಗೆ ಒಡನಾಟ ಲಭಿಸಿತು. ಅವಳೂ ನಾನೂ ಜೊತೆಯಾಗಿ ಹಲವರನ್ನು ಮುಖಾಮುಖಿಯಾಗಿ ನಮ್ಮ ಆಪ್ತ ವಲಯಕ್ಕೆ ಸೇರಿಸಿಕೊಂಡುದರಿಂದ ತಮ್ಮ ಅನುಭವಗಳನ್ನು ನಮ್ಮಲ್ಲಿ ಹೇಳಿಕೊಂಡರು.

ಸಮಾಜಸೇವೆಗಾಗಿಯೇ ತನ್ನ ಜೀವನವನ್ನು ಮುಡಿಪಾಗಿರಿಸಿದ ದಿವಂಗತ ಜೂಡಿತ್ ಮಸ್ಕರೇಞಸ್ ಅವರೂ ಆಗ ಡೀಡಿನ ಮಹಿಳಾಪರ ವೇದಿಕೆಯ ಖಾಯಂ ಸದಸ್ಯರು. ಅವರು ಮತ್ತು ಮಂಗಳೂರಿನ ವಕೀಲರಾದ ವಾಸುದೇವ ರಾವ್ ಕುಷ್ಠರೋಗಿಗಳ ಶುಶೂಷೆಗಾಗಿ ಮತ್ತು ಪುನರ್ವಸತಿಗಾಗಿ ಮಾಡಿದ ಅವಿರತ ಪ್ರಯತ್ನದಿಂದಾಗಿ ಇಂದು ನಮ್ಮ ಜಿಲ್ಲೆ ಆ ರೋಗದಿಂದ ಮುಕ್ತವಾಗಿದೆ ಎಂಬುದನ್ನು ನಾವು ಮರೆಯಬಾರದು. ಅವರಿಬ್ಬರ ಪ್ರಯತ್ನದಿಂದಾಗಿ 'ಹಿಂದು ಕುಷ್ಟ ನಿವಾರಣಾ ಸಂಘ'ವು ಲೈಂಗಿಕ ಕಾರ್ಯಕರ್ತೆಯರನ್ನು ಜಾಗೃತಿಗೊಳಿಸುವ ಕೆಲಸವನ್ನೂ ಕೈಗೊಳ್ಳುವಂತಾಯಿತು. ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯ ಒಂದು ಪಾರ್ಶ್ವದಲ್ಲಿ ಈ ಸಂಘವು ಆಗ ಕಾರನಿರತವಾಗಿತ್ತು. ಅಲ್ಲಿಗೆ ನನ್ನನ್ನು ಪರಿಚಯಿಸಿದವರು ಮಸ್ಕರೇಞಸ್. ನನ್ನ ಅಧ್ಯಯನಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದು ಅವರು ಕೇಳಿಕೊಂಡ ಮೇರೆಗೆ ನಾನು ಅಲ್ಲಿಗೆ ಹಲವು ಸಲ ಹೋಗಿದ್ದೆ. ತಿಂಗಳಿಗೊಮ್ಮೆ ಈ ಕಾರಕರ್ತೆಯರು ಸಭೆ ಸೇರುತ್ತಿದ್ದರು. ನನಗೆ ಅಲ್ಲಿ ಅನೇಕರ ಪರಿಚಯವಾಯಿತು. ಅವರಲ್ಲಿ ಕೆಲವರನ್ನು ನನ್ನ ಆಪ್ತವಲಯಕ್ಕೆ ಸೇರಿಸಿಕೊಂಡೆ. ಅವರ ನೋವುಗಳಿಗೆ ಕಿವಿಯಾದೆ. ಅವರನ್ನು ಈ ವೃತ್ತಿಯಿಂದ ಹೊರಗೆಳೆದು ರಕ್ಷಿಸುವ ಉದ್ದೇಶವಂತೂ ನನಗಿರಲಿಲ್ಲ. ಅದು ನನ್ನಿಂದ ಮಾತ್ರವಲ್ಲ ಬಹುಶಃ ಯಾರಿಂದಲೂ ಸಾಧ್ಯವಿಲ್ಲವೆಂದೇ ಆಗ ನಾನು ಭಾವಿಸಿದ್ದೆ. ಈ ವೃತ್ತಿಯಲ್ಲಿ ಅವರೆದುರಿಸುವ ಹಿಂಸೆಗಳನ್ನು ಕಡಿಮೆ ಮಾಡಲು ಸಾಧ್ಯವೇ ಎಂಬುದಷ್ಟೇ ನನ್ನ ಉದ್ದೇಶವಿತ್ತು. ಆಗ ಪೋಲೀಸರಿಂದ ಈ ವೃತ್ತಿನಿರತರು ತುಂಬಾ ಹಿಂಸೆ ಅನುಭವಿಸುತ್ತಿದ್ದರು. ಬೀದಿಯಲ್ಲಿ ತಮ್ಮ ಬಂಧುಗಳೊಂದಿಗೆ ನಡೆದಾಡುವಾಗಲೂ ಹಿಡಿದು ಪೋಲೀಸ್ ಸ್ಟೇಶನ್ನಿಗೆ ಒಯ್ದು ಹಿಂಸಿಸಿದ ಘಟನೆಗಳು ನಡೆದಿದ್ದುವು. ಸ್ಟೇಶನಿನಲ್ಲಿ ಲಾಠಿ ಏಟು ಮಾತ್ರವಲ್ಲ ಅವರ ಬಳಿಯಿದ್ದ ಹಣ, ಚಿನ್ನ ಎಲ್ಲವನ್ನೂ ಎಗರಿಸಿದ್ದೂ ಇದೆ. ಕಾಲಿನ ಚೈನನ್ನೂ ಬಿಡದೆ ಸುಲಿಗೆ ಮಾಡಿದ ಕ್ರೌರ್ಯದ ಕತೆಯನ್ನು ಕಣ್ಣೀರು ತುಂಬಿಕೊಂಡು ಅವರು ಹೇಳಿದ್ದಕ್ಕೆ ನಾನು ಸಾಕ್ಷಿಯಾಗಿದ್ದೆ. ಅದರ ವಿರುದ್ಧ ಪೋಲೀಸ್ ಸ್ಟೇಶನ್‌ನಲ್ಲಿ ಅವರ ಪರವಾಗಿ ವಾದವನ್ನು ಮಾಡಿದೆ. ಈ ವೃತ್ತಿನಿರತರ ಮೇಲೆ ಹಲ್ಲೆ ಮಾಡುವುದು, ಹಿಂಸಿಸುವುದು, ಸುಲಿಗೆ ಮಾಡುವುದು ಅಪರಾಧವಲ್ಲವೇ? ಅಮಾಯಕರಾದ ಈ ಮಹಿಳೆಯರ ಮೇಲೆ ಹೀಗೆ ದಾಳಿ ಮಾಡಿ ದೌರ್ಜನ್ಯವೆಸಗುವುದಕ್ಕೆ ಕಾನೂನು ಸಮ್ಮತಿಸುವುದಿಲ್ಲ. ಯಾಕೆ ಈ ರೀತಿಯ ಕ್ರೌರ್ಯವೆಸಗುತ್ತೀರಿ ಎಂದು ಪ್ರಶ್ನಿಸಿದಕ್ಕೆ ಅಲ್ಲಿನ ಪೋಲೀಸ್ ಇನ್ಸ್‌ಪೆಕ್ಟರ್ ಹೇಳಿದ್ದೇನು ಗೊತ್ತೇ?! "ಹಾಗೆ ಮಾಡದಿದ್ದರೆ ನಾವು ಇಲ್ಲಿ ಕೂತಿರುವುದು ಯಾವ ಶೋಭೆಗೆ? ಅಷ್ಟೂ ಮಾಡದಿದ್ದರೆ ನಮಗೆ ಮಾದೆ ಏನಿದೆ? 'ಸ್ಪಿರಿಟ್ ಆಫ್ ಲಾ' ನಮ್ಮಿಂದ ಆ ಕೆಲಸ ಮಾಡಿಸುತ್ತದೆ. ನಿಮ್ಮ ಯಾರ ಪ್ರತಿಭಟನೆಗಳನ್ನೂ ಈ ಲಾದ ಮುಂದೆ ಮಕಾಡೆ ಮಲಗಿಸಿ ಬಿಡುತ್ತೇವೆ" ಎಂದು ಹೆಮ್ಮೆಯಿಂದ ಭುಜ ಕುಣಿಸಿ ಮಾತನಾಡಿದ ದೃಶ್ಯ ಈಗಲೂ ನನಗೆ ನೆನಪಿದೆ. ಆ ಇನ್ಸ್‌ಪೆಕ್ಟರ್ ಆಗ ಇಂತಹ ಕೆಲಸಗಳಿಗಾಗಿಯೇ ಮಂಗಳೂರಿನಲ್ಲಿ ಹೆಸರು ಪಡೆದಿದ್ದರು. ಪೋಲೀಸರ ಕ್ರೌರ್ಯದಿಂದ ಪಾರಾಗಲು ಈ ವೃತ್ತಿನಿರತರಿಗೆ ಶರಣಾಗುವುದು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ. ಕೆಲವೊಮ್ಮೆ ಹಪ್ತಾ ವಸೂಲಿ ಮಾಡಿಕೊಂಡ ಮೇಲೂ ಈ ಮಹಿಳೆಯರನ್ನು ಶೋಷಣೆ ಮಾಡಿದ ಕತೆಗಳಿದ್ದುವು. ಆದುದರಿಂದ ಈ ವೃತ್ತಿನಿರತ ಮಹಿಳೆಯರು ತಮ್ಮನ್ನು ತಾವೇ ಆ ವೃತ್ತಿಗೆ ಗಟ್ಟಿಯಾಗಿ ಹೊಂದಿಕೆ ಮಾಡಿಕೊಳ್ಳುತ್ತಿದ್ದರು. ಹೆಣ್ಣಿನ ಪುಕ್ಕಲುತನ, ಸೌಮ್ಯಗುಣ, ಭಯ, ಸಂಕೋಚ ಇತ್ಯಾದಿಗಳನ್ನೆಲ್ಲಾ ಗಂಟುಕಟ್ಟಿ ಅರಬ್ಬಿ ಸಮುದ್ರಕ್ಕೆ ಬಿಸಾಡಿದ ಇವರು ಬೇರೆಯೇ ಮುಖವಾಡ ಧರಿಸಿ ಬೀದಿಗಿಳಿಯುತ್ತಿದ್ದರು. ಒಂದು ರೀತಿಯಲ್ಲಿ ಈ ಭೂಗತ ಜಗತ್ತಿನೊಂದಿಗೆ ಹೇಗೆ ವ್ಯವಹರಿಸಬೇಕು, ಇಲ್ಲಿ ಬದುಕಬೇಕಾದರೆ ಅಗತ್ಯವಾದ ಗುಣಲಕ್ಷಣಗಳೇನು ಎಂಬುದನ್ನು ಈ ವೃತ್ತಿಗಿಳಿದ ತಿಂಗಳೊಳಗೆ ಅವರು ಮೈಗೂಡಿಸಿಕೊಂಡಿರುತ್ತಾರೆ. ಮತ್ಸರ, ದ್ವೇಷ, ಕಾಲೆಳೆಯುವ ಗುಣಗಳೆಲ್ಲಾ ಇಲ್ಲಿ ಮಾಮೂಲು ಎಂಬಂತೆ ಅದರೊಂದಿಗೇ ಬದುಕುವ ಮತ್ತು ಅದನ್ನು ಮೀರಲು ಪ್ರಯತ್ನಿಸುವ ಕೆಲಸಗಳು ನಡೆಯುತ್ತಲೇ ಇರುತ್ತವೆ. ಇದರಲ್ಲಿ ಅವರನ್ನು ಪಳಗಿಸುವಂತೆ ಮಾಡುತ್ತದೆ ಈ ವೃತ್ತಿ. ಹಾಗೆ ಪಳಗದಿದ್ದರೆ ಅವರಿಗೆ ಅಲ್ಲಿ ಉಳಿಗಾಲವಿಲ್ಲ. ಯಾರನ್ನೇ ಆದರೂ ಅವರು ನಂಬುವ ಸ್ಥಿತಿಯಲ್ಲಿರುವುದಿಲ್ಲ. ಮನುಷ್ಯರನ್ನು ಎಷ್ಟು ನಂಬಬಹುದು? ಹೇಗೆ ನಂಬಬಹುದು? ಎಂಬುದನ್ನು ಅವರ ಬದುಕು ಕಲಿಸಿರುತ್ತದೆ. ಆದುದರಿಂದ ನಾನು ಮಾತನಾಡಿಸಿದ ಓರ್ವ ಕಾರ್ಯಕರ್ತೆ ನನ್ನನ್ನು ನೇರವಾಗಿ ದಿಟ್ಟಿಸುತ್ತಾ, "ನೀವು ನಮ್ಮನ್ನು ಮಾತ್ರ ಹೀಗೆ ಮಾತನಾಡಿಸುವುದಾ? ಅಥವಾ ಹೈಟೆಕ್ ವೇಶ್ಯಯರಿದ್ದಾರಲ್ಲಾ. ಅವರನ್ನೂ ಹೀಗೆ ಭೇಟಿಯಾಗಿ ಮಾತನಾಡಿಸುತ್ತೀರಾ?" ಎಂದು ಸವಾಲೆಸೆದರು. ನಾನು ಗೊಂದಲಕ್ಕೊಳಗಾಗಿ "ಇಲ್ಲ, ನನಗೆ ಆ ಉದ್ದೇಶವಿಲ್ಲ. ಇಲ್ಲಿ ಈ ವೃತ್ತಿಗೆ ದೂಡಲ್ಪಟ್ಟ ಮಹಿಳೆಯರ ಹಿನ್ನೆಲೆ ಮತ್ತು ಅವರು ಪಟ್ಟ ಹಿಂಸೆ, ನೋವುಗಳನ್ನು ದಾಖಲಿಸಬೇಕೆಂಬ ಮನಸ್ಸಿದೆ. ಅಷ್ಟೇ. ಹೈಟೆಕ್‌ ವೇಶ್ಯಯರು ಆ ವೃತ್ತಿಯನ್ನು ಹೊಟ್ಟೆಪಾಡಿಗಾಗಿ ಮಾಡುವುದಿಲ್ಲವಲ್ಲಾ?" ಎಂದೆ. "ನೀವು ನಮ್ಮ ನೋವುಗಳನ್ನು ಕೇಳಿ ಏನು ಮಾಡುತ್ತೀರಿ?". "ನಾನು ಅವುಗಳನ್ನು ದಾಖಲಿಸಿ ಒಂದು ಪುಸ್ತಕ ಪ್ರಕಟಿಸುತ್ತೇನೆ" ಎಂದೆ ನಿರಾಳವಾಗಿ ಕೂಡಲೇ ಆಕೆ, "ಅದರಿಂದ ನಮಗೇನು ಪ್ರಯೋಜನ?" ಎಂದು ಪ್ರಶ್ನಿಸಿದರು. ಈ ಪ್ರಶ್ನೆ ಕೇಳಿ ನನ್ನ ಮನಸ್ಸು ಒಂದು ಕ್ಷಣ ಸ್ತಬ್ಧವಾಗಿ ಯೋಚಿಸುವುದನ್ನೇ ನಿಲ್ಲಿಸಿದಂತಾಯಿತು. ಹೌದಲ್ಲಾ. ಅವರ ನೋವನ್ನು ಎನ್‌ಕ್ಯಾಶ್ ಮಾಡಿಕೊಂಡು ನಾನು ಪುಸ್ತಕ ಬರೆದು ಪ್ರಕಟಿಸಿದರೆ ಅವರಿಗೆ ಯಾವ ಪ್ರಯೋಜನವೂ ಇಲ್ಲ. ನಾನು ನನ್ನ ಬರೆಯುವ ಗೀಳಿಗೆ ಇವರನ್ನು ಬಳಸಿಕೊಳ್ಳುವುದು ಅನ್ಯಾಯವಲ್ಲವೇ ಎಂಬ ಭಾವನೆ ಮೂಡಿತು. ನನ್ನ ಗೊಂದಲವನ್ನು ತೋರ್ಪಡಿಸದೆ ಶಾಂತವಾಗಿ, "ನಾನು ನಿಮ್ಮ ಕತೆ ಹೇಳಬೇಕೆಂದು ಒತ್ತಾಯ ಮಾಡುವುದಿಲ್ಲ. ಹೌದು. ನಾನು ಪುಸ್ತಕ ಬರೆದರೆ ನಿಮಗೆ ಇದರಿಂದ ಏನೂ ಪ್ರಯೋಜನವಾಗದು. ನೀವು ಈ ವೃತ್ತಿಗೆ ಬಂದ ಹಿನ್ನೆಲೆ ಮತ್ತು ನೀವು ಇಲ್ಲಿ ಎದುರಿಸುವ ದೌರ್ಜನ್ಯಗಳ ಬಗ್ಗೆ ಸಮಾಜಕ್ಕೆ ಗೊತ್ತಾಗಲಿ. ಹೀಗೊಂದು ದಮನಿತ ಸ್ತ್ರೀ ಸಮುದಾಯ ನಮ್ಮ ಸಮಾಜದಲ್ಲಿ ಹಿಂಸೆಯಿಂದ ನರಳುತ್ತಿದೆ ಎಂಬ ಸತ್ಯವನ್ನು ಹೇಳುವುದು ನನ್ನ ಉದ್ದೇಶವಾಗಿದೆ. ನಿಮಗೆ ಇಷ್ಟವಿಲ್ಲವೆಂದಾದರೆ ಬೇಡ." ಎಂದೆ. "ಸರಿ, ನಾನಿನ್ನು ಹೋಗುತ್ತೇನೆ" ಎಂದು ತಟ್ಟನೇ ಎದ್ದು ಹೋದರು. ನನ್ನ ಲೇಖಕಿ ಎಂಬ ಅಹಂ ಅನ್ನು ಕೆಣಕಿದಂತಾಯಿತು. ರಪ್ಪನೆ ಕೈ ಬೀಸಿ ಎದ್ದು ಹೋದದ್ದು ನನ್ನ ಕೆನ್ನೆಗೆ ಬಾರಿಸಿದಷ್ಟೇ ನೋವಾಯಿತು. ಅವರನ್ನು ಭೇಟಿಯಾಗುವುದೂ ಕಷ್ಟ ಭೇಟಿಯಾದರೆ ಮಾತನಾಡಿಸುವುದೂ ಕಷ್ಟ. ಮಾತನಾಡಿಸಿದರೆ ಅವರಿಂದ ಸತ್ಯ ಸಂಗತಿಯನ್ನು ಹೊರಡಿಸುವುದೂ ಕಷ್ಟವೆಂಬ ಅರಿವಾಯಿತು.

ಈ ಸಮಯದಲ್ಲಿ ನನ್ನ ಪರಿಚಯದ ರಿಕ್ಷಾ ಡ್ರೈವರ್ ಶಂಕರ ನನ್ನ ನೆರವಿಗೆ ಬಂದ. ಅವನಿಗೆ ಹಲವಾರು ಮಹಿಳೆಯರ ಪರಿಚಯವಿತ್ತು. ಅವನ ಪರಿಚಯ ದಿಂದಾಗಿ ನನ್ನನ್ನು ಆ ಮಹಿಳೆಯರು ತಮ್ಮ ಆಪ್ತ ವಲಯಕ್ಕೆ ಸೇರಿಸಿಕೊಂಡರು. ಅಂದು ಕೆಲವು ಮಹಿಳೆಯರು ಹೇಳಿದ ಕತೆಗಳು ಹೃದಯವಿದ್ರಾವಕವಾಗಿದ್ದುವು. ಸಮಾಜ ತಮ್ಮವರೆಂದು ನಂಬಿದ ಬಂಧುಗಳು ಇಷ್ಟೊಂದು ಕ್ರೂರವಾಗಿ ನಡೆಸಿಕೊಳ್ಳಲು ಸಾಧ್ಯವೇ ಎಂದು ಆಶ್ಚರ್ಯ ಪಡುವಂತಾಗಿತ್ತು. ಹರಿಣಿಯ ಜೊತೆಯಲ್ಲೂ ಹಲವರನ್ನು ಭೇಟಿ ಮಾಡಿ ಅವರ ಮಾತುಗಳನ್ನು ದಾಖಲಿಸಿ ಕೊಂಡಿದ್ದೆ. ಆದರೂ ನನಗೆ ಈ ಕಥಾನಕಗಳನ್ನು ಪ್ರಕಟಿಸುವ ಧೈರ್ಯ ಬರಲಿಲ್ಲ. ಯಾಕೆಂದರೆ ಈ ದಾರುಣಕತೆಗಳನ್ನು ಕೇಳಿ ಒಂದು ಕ್ಷಣ ಸ್ಪಂದಿಸುವ ಹೃದಯವಂತಿಕೆಯುಳ್ಳ ಸಮಾಜವನ್ನು ಈಗ ನಿರ್ಮಿಸಲು ಸಾಧ್ಯವೇ? ಕಳೆದ ಏಳೆಂಟು ವರ್ಷಗಳಿಂದೀಚೆಗೆ ನಾನು ಕೇಳಿದ ಈ ವೃತ್ತಿಯ ಕುರಿತಾದ ಸಂಗತಿ ಗಳು ಯೋಚಿಸುವಂತೆ ಮಾಡಿತು. ಪ್ರಾಚೀನ ಕಾಲದಿಂದಲೂ ನಡೆದು ಬಂದ ಈ ವೃತ್ತಿಗೆ ಪ್ರೋತ್ಸಾಹ ಕೊಟ್ಟ ಉದಾಹರಣೆಗಳು ಸಾಕಷ್ಟಿವೆ. ಆದರೆ ಈ ವೃತ್ತಿಯನ್ನು ನಿಲ್ಲಿಸಲು ಪ್ರಯತ್ನಿಸಿದ ಉದಾಹರಣೆಗಳು ತೀರಾ ವಿರಳ. ಧರ್ಮ ಮತ್ತು ಪ್ರಭುತ್ವಗಳು ಈ ವೃತ್ತಿ ಬೆಳೆಯಲು ನೀರು, ಗೊಬ್ಬರ ಹಾಕುವ ಮಾಲಿಯಂತೆ ವರ್ತಿಸಿವೆ. ಈ ವೃತ್ತಿ ಇನ್ನಷ್ಟು ವ್ಯಾಪಕವಾಗಿ ಬೆಳೆಯುತ್ತಿರುವುದನ್ನು ಗಮನಿಸುತ್ತಾ ಬಂದಿದ್ದೇನೆ. ಮಂಗಳೂರು ಇತರ ಕೆಲವು ಮಹಾನಗರಗಳಂತೆ ಕೆಂಪುದೀಪವೆಂದು ಕರೆಸಿಕೊಳ್ಳುವುದಿಲ್ಲ. ಪೂನಾ, ಮುಂಬಯಿ, ಕಲ್ಕತ್ತಾ ಮುಂತಾದ ಮಹಾನಗರಗಳಲ್ಲಿ ಈ ವೃತ್ತಿಗೆಂದೇ ಖಾಯಂ ಆದ ಒಂದು ಪ್ರದೇಶಗಳಿವೆ. ಇಲ್ಲಿ ಹಾಗಲ್ಲ. ಹಲವು ಮನೆಗಳು, ಹೊಟೇಲುಗಳು, ಮಸಾಜ್ ಕೇಂದ್ರಗಳು ಈ ವೃತ್ತಿಗೆ ಆಶ್ರಯ ನೀಡುತ್ತವೆ. ಇದ್ಯಾವುದೂ ಲಭ್ಯವಾಗದಿದ್ದರೆ ಯಾವುದಾದರೂ ಓಣಿ, ನಿರ್ಜನ ಪ್ರದೇಶ, ರೈಲು, ಬಸ್ ನಿಲ್ದಾಣಗಳ ಮರೆ, ಸಾರ್ವಜನಿಕ ಶೌಚಾಲಯಗಳು ಹೀಗೆ ಸುಲಭವಾಗಿ ಲಭಿಸಿದ ಜಾಗಗಳಲ್ಲಿ ವೃತ್ತಿ ನಿರತರಾಗುತ್ತಾರೆ. ಇಂತಹ ಬೀದಿ ವೇಶ್ಯೆಯರ ನರಕ ಸದೃಶ ಬಾಳಿನ ಕರುಣ ಕತೆಗಳು ನೂರಾರು ಇವೆ. ಕೆಲವು ಭಯಾನಕಕತೆಗಳಾದರೆ ಹಲವು ದಾರುಣ ಕತೆಗಳೂ ಇವೆ.

ಈಗ 2020ರಲ್ಲಿ ನಾನು ಮತ್ತೆ ಈ ವೃತ್ತಿನಿರತ ಮಹಿಳೆಯರ ಕುರಿತು ಅಧ್ಯಯನ ಮಾಡಿ ಒಂದಷ್ಟು ಮಾಹಿತಿಗಳನ್ನು ಸಂಗ್ರಹಿಸತೊಡಗಿದೆ. ಈ ವೃತ್ತಿಗೆ ಸಂಬಂಧಿಸಿದ ಅಧ್ಯಯನಗಳನ್ನು ಈಗಾಗಲೇ ತುಂಬಾ ಮಂದಿ ಮಾಡಿದ್ದಾರೆ ಮತ್ತು ಪುಸ್ತಕಗಳನ್ನು ಪ್ರಕಟಿಸಿದ್ದಾರೆ ಎಂಬುದು ನನ್ನ ಗಮನಕ್ಕೆ ಬಂತು. ಈ ಅಧ್ಯಯನಗಳಲ್ಲಿ ಹಲವು ಕೇವಲ ಪುಸ್ತಕ ಪ್ರಕಟಣೆಗೆ ಮಾತ್ರ ಸೀಮಿತ ವಾಗಿದ್ದುವು. ಕೆಲವು ಅಧ್ಯಯನಗಳು ಈ ವೃತ್ತಿನಿರತ ಮಹಿಳೆಯರನ್ನು ಅದರಿಂದ ಹೊರತಂದು ಉತ್ತಮ ಭವಿಷ್ಯವನ್ನು ರೂಪಿಸುವ ಪ್ರಯತ್ನವನ್ನೂ ಮಾಡಿದ್ದುವು. ಈಗಲೂ ಈ ಕೆಲಸದಲ್ಲಿ ನಿರತವಾದ ಹಲವು ಸಂಘ ಸಂಸ್ಥೆಗಳಿವೆ. ರಾಜ್ಯದ ಪ್ರತೀ ಜಿಲ್ಲೆಗಳಲ್ಲೂ ಈ ಮಹಿಳೆಯರನ್ನು ಸಂಘಟಿಸುವ ಕೆಲಸದಲ್ಲಿ ನಿರತರಾದ ಸ್ವಯಂಸೇವಾ ಸಂಸ್ಥೆಗಳಿವೆ. ಬೆಳಗಾಂನಲ್ಲಿ ರಾಮಚಂದ್ರ ರಾವ್, ಕೊಪ್ಪಳದಲ್ಲಿ ಶೋಭಾ ಮಠದ್, ಹಾಸನದಲ್ಲಿ ರೂಪಾ ಹಾಸನ, ಮೈಸೂರಿನಲ್ಲಿ ಒಡನಾಡಿ ಸಂಸ್ಥೆಯ ಸ್ಪಾನಿ ಮತ್ತು ಪರಶು ಈ ಮಹಿಳೆಯರಲ್ಲಿ ಸಂಘಟನಾ ಶಕ್ತಿಯನ್ನು ತುಂಬಿಸುತ್ತಿದ್ದಾರೆ. ಮಂಗಳೂರಿನಲ್ಲಿ ಹಿಂದೆ ಕುಷ್ ನಿವಾರಣಾ ಸಂಘವು ಈ ಕೆಲಸ ಮಾಡುತ್ತಿದೆ. ಹರೀಶ್ ಮತ್ತು ಅವರ ಬಳಗದವರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರೆಲ್ಲರಿಂದ ಈಗ ಈ ಮಹಿಳೆಯರ ಪರಿಸ್ಥಿತಿ, ಅವರ ಹಿನ್ನೆಲೆ ಇತ್ಯಾದಿ ವಿಷಯಗಳ ಮಾಹಿತಿಗಳನ್ನು ಸಂಗ್ರಹಿಸಿದೆ. ನನ್ನ ವಿನಂತಿಯನ್ನು ಮನ್ನಿಸಿ ಮಾಹಿತಿ ನೀಡಿದ ರಾಮಚಂದ್ರ ರಾವ್, ಹರೀಶ್ ಮತ್ತು ರೂಪಾ ಹಾಸನ ಅವರಿಗೆ ನನ್ನ ಪ್ರೀತಿಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.

ಮುಂಬಯಿಯ ಕೆಂಪುದೀಪ ಪ್ರದೇಶದ ಲೈಂಗಿಕ ಕಾರ್ಯಕರ್ತೆಯರಲ್ಲಿ ಜಾಗೃತಿ ಮೂಡಿಸುವ ಕೆಲಸದಲ್ಲಿ ವರ್ಷಗಳ ಕಾಲ ನಿರತರಾಗಿದ್ದ ಬೆಥನಿ ಭಗಿನಿ ಶಾಂತಿಪ್ರಿಯಾ ಅವರು ತಮ್ಮ ಅನುಭವಗಳನ್ನು ನನ್ನಲ್ಲಿ ಹಂಚಿಕೊಂಡಿದ್ದಾರೆ. ಅವರಿಗೂ ನನ್ನ ಹೃತ್ತೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಈ ಎಲ್ಲಾ ಮಾಹಿತಿಗಳೂ ಈಗ ಈ ವೃತ್ತಿಯಲ್ಲಿರುವ ಸಂಕಷ್ಟಗಳು, ಹಿಂಸೆಗಳು ಇತ್ಯಾದಿಗಳನ್ನು ತಿಳಿಸುತ್ತವೆ. ಕೊರೋನಾದಿಂದಾಗಿ ಸಮಾಜ ಎದುರಿಸಬೇಕಾದ ಮುಂಜಾಗ್ರತಾ ಕ್ರಮಗಳಲ್ಲಿ ಮನುಷ್ಯರ ನಡುವೆ ಅಂತರವು ಬಹಳ ಮುಖ್ಯ ಮತ್ತು ಅಸ್ಪೃಶ್ಯತೆಯೂ ಪಾಲಿಸಲೇಬೇಕಾದ ನಿಯಮವಾಗಿತ್ತು. ಆದರೆ ಈ ವೃತ್ತಿಯು ಈ ನಿಯಮಗಳನ್ನು ಧಿಕ್ಕರಿಸಿಯೇ ಬಾಳಬೇಕಿತ್ತು. 2021ರಲ್ಲಿ ಏಪ್ರಿಲ್ ತಿಂಗಳಲ್ಲಿ ನಾನು ಭೇಟಿ ಮಾಡಿದ ಹೊಟೇಲ್ ಮಾಲೀಕರು ಹೇಳಿದ ಸತ್ಯವನ್ನು ನನಗೆ ಅರಗಿಸಿಕೊಳ್ಳುವುದೇ ಕಷ್ಟವಾಯಿತು. ಈ ಸಮಯದಲ್ಲಿ ಹಗಲೂ ರಾತ್ರಿ ಬಿಡುವಿಲ್ಲದೆ ಈ ವೃತ್ತಿ ಸಾಗುತ್ತಿತ್ತು ಮತ್ತು ಅದು ಅವರ ಬದುಕಿನ ತುತ್ತಿನ ಪ್ರಶ್ನೆಯೂ ಆಗಿತ್ತು ಎಂದು ಹೇಳಿದರು. ಇದೇ ಸಮಯದಲ್ಲಿ ಅಮೆರಿಕಾದ ಸಂಸ್ಥೆಯೊಂದು ಅಧ್ಯಯನ ಮಾಡಿ ವೇಶ್ಯಾವಾಟಿಕೆಯನ್ನು ನಿಷೇಧಿಸಿದರೆ ಮಾತ್ರ ಕೊರೋನಾ ಮಹಾಮಾರಿಯನ್ನು ಬಹಳ ಬೇಗನೇ ನಿಲ್ಲಿಸಬಹುದು ಎಂದು ವರದಿ ಮಾಡಿದೆ. ಇದು ಬಹಳ ಕಷ್ಟದ ಕೆಲಸ. ಅನ್ನ, ಆಹಾರವಿಲ್ಲದೆ ಮನುಷ್ಯ ಬದುಕುವುದು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಕಾಮವನ್ನು ನಿಗ್ರಹಿಸಿ ಬದುಕುವುದು ಕಷ್ಟವೇ ಸರಿ. ಆದುದರಿಂದ ಈ ವೃತ್ತಿಯು ಈ ಪ್ರಪಂಚದಲ್ಲಿ ಗಂಡು ಹೆಣ್ಣು ಇರುವವರೆಗೂ ಹೀಗೆಯೇ ಇರುತ್ತದೆ. ಗಂಡು ಹೆಣ್ಣು ಎರಡೂ ಅಲ್ಲದ ತ್ರಿಲಿಂಗಿಗಳ ಬಗ್ಗೆಯೂ ಸಾಕಷ್ಟು ಮಂದಿ ಅಧ್ಯಯನ ಮಾಡಿದ್ದಾರೆ. ಡಾ. ರೇಷ್ಮಾ ಉಳ್ಳಾಲ ಇವರು ಈ ತ್ರಿಲಿಂಗಿಗಳ ಸಾಮಾಜಿಕ, ಸಾಂಸ್ಕೃತಿಕ ಪರಿಸ್ಥಿತಿಗಳ ಬಗ್ಗೆ ಅಧ್ಯಯನ ಮಾಡಿ ಪುಸ್ತಕ ಪ್ರಕಟಿಸಿದ್ದಾರೆ. ಮಂಗಳೂರಿನಲ್ಲಿ ವ್ಯಾಲೆಟ್ ಪಿರೇರಾ ಎಂಬ ಸಾಮಾಜಿಕ ಕಾರ್ಯಕರ್ತೆಯು ಈ ತ್ರಿಲಿಂಗಿಗಳನ್ನು ಸಂಘಟಿಸಿ ಪರಿವರ್ತನಾ ಎಂಬ ಸಂಸ್ಥೆಯ ಮೂಲಕ ಅವರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಲೈಂಗಿಕ ಕಾರಕರ್ತೆಯರ ಹಾಗೆಯೇ ಇವರದ್ದೂ ದಯನೀಯ ಬದುಕು. ನಾನು ಲೈಂಗಿಕ ಕಾರಕರ್ತೆಯರ ಬಗ್ಗೆ ಅಧ್ಯಯನ ಕೈಗೊಂಡಾಗ ಅಂದರೆ ಏಳೆಂಟು ವರ್ಷಗಳ ಹಿಂದೆ ಈ ತ್ರಿಲಿಂಗಿಗಳು ಮಂಗಳೂರಿನಲ್ಲಿ ಬಹಳ ವಿರಳವಾಗಿದ್ದರು. ಈಗ ಮಂಗಳೂರು ದಿನೇ ದಿನೇ ಬೆಳೆಯುತ್ತಿರುವುದರಿಂದ ಮತ್ತು ಜಾಗತೀಕರಣವು ಶರವೇಗದಲ್ಲಿ ಧಾವಿಸುತ್ತಿರುವುದರಿಂದ ಎಲ್ಲಾ ರೀತಿಯ ವಲಸೆ ಪ್ರಕ್ರಿಯೆಗಳಂತೆ ಈ ವೃತ್ತಿಯೂ ಹಳ್ಳಿ, ಪಟ್ಟಣ, ನಗರ ಎನ್ನದೇ ವ್ಯಾಪಕವಾಗಿ ಹರಡುತ್ತಿದೆ. ಆದುದರಿಂದ ತ್ರಿಲಿಂಗಿಗಳು ಬದುಕುವ ದಾರಿಯನ್ನು ಹುಡುಕುತ್ತಾ ವಲಸೆ ಬರುವುದು ಸಹಜವೇ ಆಗಿದೆ. ಇಲ್ಲಿರುವವರೂ, ವಲಸೆ ಬಂದವರೂ ಸೇರಿ ಇಲ್ಲಿ ಸಂಘಟಿತರಾಗಿದ್ದಾರೆ. ಇವರ ಬಗ್ಗೆ ನಾನು ಸಾಕಷ್ಟು ಮಾಹಿತಿಗಳನ್ನು ಸಂಗ್ರಹಿಸಿದರೂ ಈ ಕೃತಿಯಲ್ಲಿ ಅವರನ್ನು ಕುರಿತು ಬರೆದಿಲ್ಲ. ಯಾಕೆಂದರೆ ಅದು ಇನ್ನಷ್ಟು ವಿಸ್ತಾರವಾದ ಮತ್ತು ಗಂಭೀರವಾದ ಅಧ್ಯಯನವನ್ನು ಬಯಸುತ್ತದೆ. ಹಾಗೆಂದು ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಕೈಕೊಂಡ ಅಧ್ಯಯನವು ಪರಿಪೂರ್ಣವೆಂದು ಹೇಳುತ್ತಿಲ್ಲ. ನನ್ನದೇ ಮಿತಿಯೊಳಗೆ ನಾನು ಕೈಗೆತ್ತಿಕೊಂಡು ಮಾಡಿದ ಅಧ್ಯಯನದಲ್ಲಿ ಕ್ಷೇತ್ರಕಾರ್ಯದ ಜೊತೆಗೆ ಸಾಹಿತ್ಯ ಕೃತಿಗಳ ಓದಿನಿಂದ ಲಭ್ಯವಾದ ಮಾಹಿತಿಗಳನ್ನೂ ಸಂಗ್ರಹಿಸಿದ್ದೇನೆ.

ನಮ್ಮ ಸಂಸ್ಕೃತಿಯಲ್ಲಿ ಕಾಮಕ್ಕೆ ಒಂದು ವಿಶೇಷ ಮಹತ್ವವಿದೆ. ಕಾಮಶಾಸ್ತ್ರವನ್ನು ಜಗತ್ತಿಗೇ ಕೊಟ್ಟ ವಾತ್ಸಾಯನ ಭಾರತೀಯನೆಂಬ ಗೌರವವಿದೆ. ಕಾಮವನ್ನು ಗೆದ್ದ ವೈರಾಗ್ಯ ಮತ್ತು ಕಾಮದಲ್ಲಿ ಮುಳುಗಿದ ಭೋಗ ಇವೆರಡಕ್ಕೂ ಸಮನಾದ ಸ್ಥಾನವನ್ನು ನೀಡಿದ ಉದಾಹರಣೆಗಳಿವೆ. ನಮ್ಮ ದೇವಸ್ಥಾನಗಳಲ್ಲಿ ಕೆತ್ತಿದ ಶಿಲ್ಪಗಳು ಇದಕ್ಕೆ ಸಾಕ್ಷಿಯಾಗಿವೆ. ಪುರಾತನ ಕಾಲದಿಂದಲೂ ಇಲ್ಲಿದ್ದ ವೇಶ್ಯಾವಾಟಿಕೆಗಳು ಅದಕ್ಕೆ ಸಂಬಂಧಿಸಿದ ಕತೆ, ಕಾವ್ಯಗಳು ಬಹಳ ಕುತೂಹಲಕಾರಿಯಾಗಿವೆ. ಗಂಡಸರು ದೇವಲೋಕದಲ್ಲೂ ವಾರಾಂಗನೆಯರ ಸುಖವನ್ನು ಪಡೆಯಬಹುದೆಂಬ ಆಮಿಷ ವನ್ನೊಡ್ಡಿದ ಪುರಾಣ ಕತೆಗಳಿವೆ. ಭೂಮಿಯ ಮೇಲೆ ಮನುಷ್ಯ ಏನೇನು ವೈಭೋಗಗಳನ್ನು ಅನುಭವಿಸುತ್ತಾನೋ ಅವೆಲ್ಲವನ್ನು ಸ್ವರ್ಗದಲ್ಲೂ ಸೃಷ್ಟಿಸಿದ ಪುರಾಣಕರ್ತೃಗಳ ನಾಡು ನಮ್ಮದು, ಮನಸಿಜನ ಮಾಯೆಗೆ ಒಳಗಾಗದವರಾರು? ದೇವಾನುದೇವತೆಗಳು, ರಾಜಾಧಿರಾಜರು, ದಿವ್ಯದೃಷ್ಟಿಯುಳ್ಳ ಮಹರ್ಷಿಗಳು ಇವರೆಲ್ಲರನ್ನೂ ತನ್ನ ಜಾಲದೊಳಗೆ ಆಕರ್ಷಿಸುವ ಶಕ್ತಿ ಇರುವ ಕಾಮದ ಬಗ್ಗೆ ಗಮನ ಕೊಡದಿರಲು ಸಾಧ್ಯವೇ?

ವರ್ಣ, ಜಾತಿ ಆಧಾರಿತ ಸಮುದಾಯವಾಗಿರುವ ಭಾರತದಲ್ಲಿ ಕಾಮಕ್ಕೆ ಈ ಭೇದವಿಲ್ಲ. ಹೌದು, ಇದು ರಹಸ್ಯವಾಗಿ ಕಾಮ ಉದ್ರೇಕಗೊಂಡವರಿಗೆ ಮಾತ್ರ ಆದರೆ ಬಹಿರಂಗವಾಗಿ ಅಂದರೆ ಸಮಾಜವು ಪರವಾನಿಗೆ ನೀಡಿದ ಕಾಮ ವ್ಯಾಪಾರಗಳಿಗೆ ಅದರದ್ದೇ ಆದ ಕೆಲವು ನಿಯಮ, ನಿರ್ಬಂಧಗಳನ್ನು ವಿಧಿಸಿ ಜಾರಿಗೊಳಿಸಿದ ರೀತಿಯೇ ವಿಸ್ಮಯಗೊಳಿಸುತ್ತದೆ. ಧಾರ್ಮಿಕ ಮುದ್ರೆಯನ್ನೊತ್ತಿ ಕಾಮನಾಟಗಳಿಗೆ ಪರ್ಮಿಶನ್ ನೀಡಿದ ಒಂದು ಪ್ರಾಚೀನ ವ್ಯವಸ್ಥೆಯಿದೆಯಲ್ಲಾ ಅದರೊಳಗಿನ ಸುಳಿಗಳು, ಕಂದರಗಳು, ಮುಳ್ಳುಕಂಟಿಗಳು, ಸಾಮಾನ್ಯ ಮನುಷ್ಯರು ಇಣುಕಿ ನೋಡುವುದಕ್ಕೂ, ಪ್ರಶ್ನಿಸುವುದಕ್ಕೂ, ತಿಳಿಯುವುದಕ್ಕೂ ಸಾಧ್ಯವಿಲ್ಲದಂತಹ ಗಾಢವಿಸ್ಕೃತಿಯಲ್ಲಿತ್ತು. ಸಮಾಜದಲ್ಲಿ ಪತ್ನಿ ಹೇಗೆ ಅತ್ಯವಶ್ಯಳೋ ಹಾಗೆಯೇ ವೇಶ್ಯಯೂ ಅತ್ಯವಶ್ಯಳೇ ಆಗಿದ್ದಳು.

ಮನಸಿಜನ ಮಾಯಾಜಾಲದಲ್ಲಿ ಮಾನವರನ್ನು ಕೆಡೆದುರುಳಿಸುವುದಕ್ಕೆ ವೇಶ್ಯಯರೆಂಬ ಮಾಯಾಂಗನೆಯರೇ ಕಾರಣರೆಂದು ಆರೋಪಿಸಿ ಪುರುಷ ಸಮಾಜ ತಮ್ಮನ್ನು ತಾವೇ ಪವಿತ್ರ ಪಟ್ಟದಲ್ಲಿ ಕೂರಿಸಿಕೊಂಡು ಬೀಗುತ್ತಿತ್ತು. ಒಂದು ಕಾಲದಲ್ಲಿ ಜಗತ್ತಿಗೆ ಪಾಪವನ್ನು ತಂದವಳು ಹೆಣ್ಣೆ ಎಂದು ನಂಬಿದಂತಹ ಸಮಾಜವಿತ್ತಲ್ಲಾ. ವೇಶ್ಯೆಯೇ ಕಳಂಕಿತೆ, ವಿಟನಲ್ಲ. ವೇಶ್ಯಾವಾಟಿಕೆ ಪಾಪಕೃತ್ಯವೂ ಹೌದು. ಆದರೆ ಅದು ಸಮಾಜಕ್ಕೆ ಅವಶ್ಯಕವಾದ ಪಾಪವೆಂದು ಸಮಾಜ ಸಮ್ಮತಿಸಿತ್ತು. ವೇಶ್ಯಾವಾಟಿಕೆಯನ್ನು ರದ್ದುಗೊಳಿಸುವುದಕ್ಕೆ ಪ್ರಯತ್ನಿಸಿ ವಿಫಲರಾದ ಕೆಲವು ರಾಜರುಗಳೂ ಇದ್ದರು. ಆದರೆ ಹೆಚ್ಚಿನವರು ವೇಶ್ಯೆಯರ ಗಳಿಕೆಯನ್ನು ರಾಜಾದಾಯವಾಗಿ ಸ್ವೀಕರಿಸಿದ್ದರು. ಇಂತಹ ಪ್ರಭುತ್ವವು ಪುರೋಹಿತ ಶಾಹಿಯೊಂದಿಗೆ ಸೇರಿ ಅದಕ್ಕೊಂದು ಧಾರ್ಮಿಕ, ಸಾಂಸ್ಕೃತಿಕ ಆವರಣವನ್ನು ಕಲ್ಪಿಸಿ ಬಂಧಿಸಿದ್ದು ಇನ್ನೂ ಕುತೂಹಲದಾಯಕವಾದ ಸಂಗತಿಯಾಗಿದೆ. ಸಂಗೀತ, ನೃತ್ಯಗಳ ಸೇವೆಯ ಮೂಲಕ ಪವಿತ್ರ ವೇಶ್ಯೆಯರನ್ನು ದೇವರ ಸೇವೆಗಾಗಿ ನೇಮಿಸಲಾಯಿತು. ಈ ದೇವದಾಸಿಯರಲ್ಲೂ ಎಷ್ಟೊಂದು ವೈವಿಧ್ಯಗಳು. ಎಷ್ಟೆಲ್ಲಾ ಸೇವೆಗಳು ನಿರ್ಮಾಣವಾಯಿತೆಂದರೆ ಈ ವ್ಯವಸ್ಥೆಯ ಒಳ ಸುಳಿಗಳನ್ನು ಪ್ರವೇಶಿಸುತ್ತಿದ್ದಂತೆಯೇ ನಾವು ಗಾಬರಿಗೊಳಗಾಗುತ್ತೇವೆ.

ಸಾಮಾನ್ಯವಾಗಿ ಭಾರತದ ಹೆಚ್ಚಿನ ದೇವಾಲಯಗಳಲ್ಲಿ ದೇವದಾಸಿಯರಿದ್ದರು ಎಂದು ಚಾರಿತ್ರಿಕ ದಾಖಲೆಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯ ದೇವಸ್ಥಾನಗಳಲ್ಲಿ ದೇವದಾಸಿಯರಿಲ್ಲವೇ ಎಂಬ ಪ್ರಶ್ನೆ ನನ್ನನ್ನು ಕಾಡಿತು. ನಮ್ಮ ಜಿಲ್ಲೆಯ ಶಾಸನಗಳಲ್ಲಿ ದೇವಸ್ಥಾನದ ಚಾಕರಿಯ ಹೆಂಗಸರಿಗೆ ದಾನ ನೀಡಿದ ಉದಾಹರಣೆಗಳು ಅವರ ಅಸ್ತಿತ್ವವನ್ನು ಸಾರುತ್ತವೆ. ಈಗ ಯಾವ ದೇವಸ್ಥಾನಗಳಲ್ಲೂ ದೇವದಾಸಿಯರ ಸೇವೆಗಳು ನಡೆಯುತ್ತಿಲ್ಲವಾದರೂ ಆ ವ್ಯವಸ್ಥೆ ಇಲ್ಲಿ ಹೇಗಿತ್ತು ಎಂಬುದನ್ನು ತಿಳಿಯುವ ಕುತೂಹಲವುಂಟಾಯಿತು. ಆಗ ನನಗೆ ಸಹಕಾರ ನೀಡಿದವರು ಡಾ. ಕನರಾಡಿ ವಾದಿರಾಜ ಭಟ್ಟರು. ಬಸರೂರಿನ ದೇವದಾಸಿಯರ ಬಗ್ಗೆ ಸುಮಾರು 40 ವರ್ಷಗಳ ಹಿಂದೆಯೇ ಅಧ್ಯಯನ ಮಾಡಿ ಬರೆದ ಕೃತಿಯನ್ನು ನೀಡಿದರು ಮತ್ತು ಬಸರೂರಿನಲ್ಲಿ ಸಂದರ್ಶಿಸಬಹುದಾದ ದೇವದಾಸಿಯರ ಮನೆಗಳ ಬಗ್ಗೆ ಮಾಹಿತಿ ನೀಡಿದರು. ಪ್ರದೀಪ್ ಬಸರೂರು ಎಂಬ ಉತ್ಸಾಹೀ ತರುಣನನ್ನು ನಮ್ಮ ಜೊತೆಗೆ ಕಳುಹಿಸಿಕೊಟ್ಟು ಅಲ್ಲಿನ ದೇವದಾಸಿ ಮನೆತನದ ಬಗ್ಗೆ ಮಾಹಿತಿ ಸಂಗ್ರಹಿಸಲು ಅನುವು ಮಾಡಿಕೊಟ್ಟರು. ಹಿಂದಿನ ದೇವದಾಸಿಯರ ನಾಲ್ಕನೇ ತಲೆಮಾರಿನವರು ಈಗ ನಮ್ಮೊಂದಿಗೆ ಮುಖಾಮುಖಿಯಾದಾಗ ಹಿಂದಿನ ಚರಿತ್ರೆ ಯಾವುದೂ ಅವರಿಗೆ ನೆನಪಿಲ್ಲ. ಆ ನೆನಪುಗಳನ್ನು ಅವರು ಬೇಕೆಂದೇ ಅಳಿಸಿ ಹಾಕಿದ್ದರು ಎಂಬ ಸತ್ಯವು ಅವರ ಭೇಟಿಯಿಂದ ನಮಗೆ ವ್ಯಕ್ತವಾಯಿತು. ಹಿರಿಯಡ್ಕ, ಪುತ್ತಿಗೆ, ಧರ್ಮಸ್ಥಳ ಮುಂತಾದ ಕಡೆಗಳಲ್ಲಿ ದೇವದಾಸಿಯರಿದ್ದರೆಂಬ ಮಾಹಿತಿ ಲಭಿಸಿದರೂ ಆ ಮನೆತನದವರು ಹಿಂದಿನ ಕಾಲದ ಯಾವ ಚರಿತ್ರೆಯನ್ನೂ ಹೇಳುವ ಸ್ಥಿತಿಯಲ್ಲಿಲ್ಲ ಎಂಬ ಸತ್ಯವೂ ಅರ್ಥವಾಯಿತು. ಆದುದರಿಂದ ನಮಗೆ ದೊರೆತ ಕೆಲವೇ ಮಾಹಿತಿಗಳಿಂದ ತೃಪ್ತರಾಗಿ ಹಿಂದಿರುಗಬೇಕಾಯಿತು. 50 ವರ್ಷಗಳ ಹಿಂದೆ ಯಾರಾದರೂ ಅವರನ್ನು ಭೇಟಿಯಾಗಿ ಮಾಹಿತಿ ಸಂಗ್ರಹಿಸಿದ್ದರೆ ಒಂದಷ್ಟು ಅಮೂಲ್ಯ ಮಾಹಿತಿಗಳು ಲಭಿಸುತ್ತಿದ್ದುವು. ಇರಲಿ. ಅದಕ್ಕೆ ಈಗ ಚಿಂತಿಸಿ ಫಲವಿಲ್ಲ.

ನಾವು ಸಣ್ಣವರಿರುವಾಗ ಹದಿಹರೆಯದ ಅಂದರೆ ಪ್ರಾಯಕ್ಕೆ ಬರುವ ವಯಸ್ಸಿನ ಹುಡುಗಿಯರು ಧರ್ಮಸ್ಥಳಕ್ಕೆ ಹೋಗಬಾರದು. ಹೋದರೆ ಅವಳನ್ನು ಅಲ್ಲೇ ಬಿಟ್ಟು ಬರಬೇಕು ಎಂಬ ಅಲಿಖಿತ ನಿಯಮವೊಂದು ಚಾಲ್ತಿಯಲ್ಲಿತ್ತು. ಅದನ್ನು ಯಾರು ರೂಢಿಗೆ ತಂದರೋ ಯಾಕೆ ತಂದರೋ ಗೊತ್ತಿಲ್ಲ. ಅಲ್ಲಿಯೂ ಹಿಂದೆ ದೇವದಾಸಿಯರಿದ್ದರು ಎಂಬುದಕ್ಕೆ ಇದು ಸಾಕ್ಷಿಯಾಗುತ್ತದೆ. ಹದಿಹರೆಯದ ಹೆಣ್ಣುಮಕ್ಕಳು ದೇವಸ್ಥಾನಕ್ಕೆ ತುಂಬಾ ಉಪಯುಕ್ತರಾಗಿದ್ದರು ಎಂದು ಈ ನಿಯಮವು ಸಮಾಜಕ್ಕೆ ಒಂದು ಸಂದೇಶವನ್ನು ಸಾರುತ್ತದೆ. ಇನ್ನೂ ಒಂದು ವಿಶೇಷವೆಂದರೆ ಪುರಾತನ ಕಾಲದಲ್ಲಿ ದೇವದಾಸಿಯರ ಬಗ್ಗೆ ಸಮಾಜದಲ್ಲಿ ಒಂದು ವಿಶೇಷ ಗೌರವವಿತ್ತು. ಅವರಿಗೆ ಮದುವೆಯಾಗುವ ಹಕ್ಕು ಇಲ್ಲದಿದ್ದರೂ ಓರ್ವ ಗೃಹಿಣಿಗೆ ನೀಡುವುದಕ್ಕಿಂತಲೂ ವಿಶೇಷವಾದ ಗೌರವವನ್ನು ನೀಡುತ್ತಿದ್ದರು. ಅದು ಸಭೆ, ಸಮಾರಂಭ, ಉತ್ಸವ, ಪೂಜೆ ಇತ್ಯಾದಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತ ಉಳಿದಂತೆ ಅವರು ಆಟಕ್ಕುಂಟು, ಲೆಕ್ಕಕ್ಕಿಲ್ಲ' ಎಂಬಂತೆ. ಸ್ವಾತಂತ್ರ್ಯ ಪೂರ್ವದಲ್ಲೇ ಬ್ರಿಟಿಷರು ದೇವದಾಸಿ ಪದ್ಧತಿಯನ್ನು ರದ್ದುಗೊಳಿಸಿದ್ದರು. ಮಹಿಳೆಯರ ಶಿಕ್ಷಣಕ್ಕೆ ಬಹಳ ಪ್ರೋತ್ಸಾಹವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಭಿಸಿದೆ. ದೇವದಾಸಿಯರಿಗೆ ಸಹಜವಾಗಿಯೇ ಶಿಕ್ಷಣವು ಅವರ ಮನೆತನದಲ್ಲಿ ಲಭಿಸಿತ್ತು. ಆ ಶಿಕ್ಷಣ ಮತ್ತು ಇಂಗ್ಲಿಷ್ ಶಿಕ್ಷಣ ಎರಡೂ ಲಭಿಸಿದ್ದರಿಂದ ನಮ್ಮ ಜಿಲ್ಲೆಯ ದೇವದಾಸಿಯರು ಬಹಳ ಬೇಗನೇ ಆ ಪಟ್ಟವನ್ನು ಕಳಚಿ ಉತ್ತಮ ಭವಿಷ್ಯದತ್ತ ಆಧುನಿಕ ಯುಗದತ್ತ ದಾಪುಗಾಲಿಟ್ಟು ನಡೆದರು. ಉತ್ತರ ಕರ್ನಾಟಕದಲ್ಲಿ ದೇವದಾಸಿಯರು ಇನ್ನೂ ನಲುಗುತ್ತಿರುವಾಗ ನಮ್ಮ ಜಿಲ್ಲೆಯ ದೇವದಾಸಿಯರು ಬದುಕಿಗೆ ಪರಾಯ ದಾರಿಯನ್ನು ಅರಸುತ್ತಾ ಉತ್ತಮ ಭವಿಷ್ಯದತ್ತ ಸಾಗಿದರು. ಇದಿಷ್ಟು ನಮ್ಮ ಜಿಲ್ಲೆಯ ದೇವದಾಸಿಯರನ್ನು ಹುಡುಕುತ್ತಾ ಹೋದಾಗ ನನಗೆ ಲಭಿಸಿದ ಮಾಹಿತಿಗಳು. ಮನುಷ್ಯ ಸಂಪರ್ಕವಿಲ್ಲದ ಕೋವಿಡ್-19 ಕಾಲದ ಜಡತ್ವದಿಂದ ನನಗೆ ಚೇತರಿಸಿಕೊಳ್ಳಲು ಈ ಅಧ್ಯಯನವು ಸಹಾಯ ಮಾಡಿತು. ಈ ಕೆಲಸಕ್ಕೆ ನನಗೆ ಪ್ರೋತ್ಸಾಹ ನೀಡಿದವರನ್ನು ಶಿರಬಾಗಿ ನಮಿಸುತ್ತೇನೆ. ಮುಂಬೈಯ ಬಾಬು ಶಿವಪೂಜಾರಿಯವರು ಆಗಾಗ ಫೋನ್ ಮಾಡುತ್ತಾ ಹುರಿದುಂಬಿಸುತ್ತಿದ್ದುದಲ್ಲದೇ ನನ್ನ ಅಧ್ಯಯನಕ್ಕೆ ಬೇಕಾದ ಪುಸ್ತಕಗಳನ್ನು ಕಳಿಸಿಕೊಟ್ಟರು. ಇವರ ಈ ಪ್ರೀತಿಯೇ ನನ್ನನ್ನು ಈ ಕೆಲಸದಲ್ಲಿ ಚುರುಕುಗೊಳಿಸಿತು. ಆರಂಭದಿಂದ ಈವರೆಗೂ ನನಗೆ ಬೆಂಬಲವಾಗಿ ನಿಂತು ಸಹಕಾರ ನೀಡಿದವಳು ಹರಿಣಿ, ಅವಳ ಅಭಿಮಾನಕ್ಕೆ ನಾನು ತಲೆ ಬಾಗುತ್ತೇನೆ. ಇನ್ನೂ ನನ್ನ ಕ.ಲೇ.ವಾ. ಸಂಘದ ಗೆಳತಿಯರು ನನ್ನ ಪ್ರತಿಯೊಂದು ಕೆಲಸಗಳಿಗೆ ಮೆಚ್ಚುಗೆಯ ಮಾತುಗಳನ್ನಾಡಿ ಬೆನ್ನು ತಟ್ಟುವವರು. ಅವರಲ್ಲಿ ಡಾ. ಸಬಿಹಾ ಅವರು ಪರಾಮರ್ಶನ ಗ್ರಂಥಗಳನ್ನು ನೀಡಿ ಸಹಕರಿಸಿದರು. ಡಾ. ಜ್ಯೋತಿ ಚೇಳ್ಯಾರು, ದೇವಿಕಾ ನಾಗೇಶ್ ಇವರೆಲ್ಲಾ ನನ್ನೊಟ್ಟಿಗೆ ಕ್ಷೇತ್ರಕಾರ್ಯದಲ್ಲೂ ಸಹಕರಿಸಿದವರು. ಅವರ ಶುಭ ಹಾರೈಕೆಗಳು ಸದಾ ನನ್ನ ಜೊತೆಗಿರುತ್ತವೆ ಎಂದು ನಂಬಿದ್ದೇನೆ. ಕುಂದಾಪುರದ ಪ್ರಮೀಳಾ ವಾಜ್ ಮತ್ತು ಪ್ರದೀಪ್ ಬಸೂರು ಇವರು ನೀಡಿದ ಸಹಕಾರಕ್ಕೆ ನಾನು ಚಿರಋಣಿ. ಡಾ. ಕನರಾಡಿ ವಾದಿರಾಜ ಭಟ್ಟರಿಗೆ ನನ್ನ ಹೃತ್ತೂರ್ವಕ ನಮನಗಳು. ಈ ಅಧ್ಯಯನಕ್ಕೆ ಕೆಲವು ಮಾಹಿತಿಗಳನ್ನು ನೀಡಿದ ಮೋಹನ್ ಚಂದ್ರ, ರಾಮಚಂದ್ರ ರಾವ್, ದೀಪಾ ರೋಸ್, ಹರೀಶ್, ರೂಪಾ ಹಾಸನ ಇವರನ್ನೆಲ್ಲಾ ಪ್ರೀತಿಯಿಂದ ಸ್ಮರಿಸುತ್ತೇನೆ. ಪೋಲೀಸ್ ಸ್ಟೇಶನ್‌ಗಳಲ್ಲಿ ಮಾಹಿತಿಗಾಗಿ ಹೋದಾಗ, "ಈಗ ವೇಶ್ಯಾವಾಟಿಕೆ ಅಪರಾಧ ಅಲ್ಲವಲ್ಲಾ. ಹೆಣ್ಣು ಗಂಡು ಇಷ್ಟಪಟ್ಟು ಸೇರಿದರೆ ನಾವು ಕೇಸು ಹಾಕುವಂತಿಲ್ಲವಲ್ಲಾ" ಎಂದು ನಗುತ್ತಾ ಹೇಳಿದ ಅಧಿಕಾರಿಗಳು ಕಳೆದ ನಾಲೈದು ವರ್ಷಗಳಲ್ಲಿ ಈ ವೃತ್ತಿ ಹೆಚ್ಚುತ್ತಾ ಬಂದುದನ್ನು ಗಮನಿಸಿದ್ದಾರೆ. ದಾಖಲಾದ ಕೇಸುಗಳ ಮಾಹಿತಿ ನೀಡಿ ಸಹಕರಿಸಿದ್ದಾರೆ. ಅವರ ಸಹಕಾರಕ್ಕೂ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ಈ ಕೆಲಸವನ್ನು ಬರಹ ರೂಪಕ್ಕಿಳಿಸಿದುದನ್ನು ಸುಂದರವಾಗಿ ಡಿ.ಟಿ.ಪಿ. ಮಾಡಿದ ನನ್ನ ಪ್ರೀತಿಯ ಶಿಷ್ಯ ಅಮಿತಾಗೆ ಮತ್ತು ವರ್ಷಾಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಾನು ಕರೆದಾಗಲೆಲ್ಲಾ ಬಂದು ಹಸ್ತಪ್ರತಿಯನ್ನು ಸ್ವೀಕರಿಸಿ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಕೊಟ್ಟ ಅವರನ್ನು ಪ್ರೀತಿಯಿಂದ ಸ್ಮರಿಸುತ್ತೇನೆ. ಈ ಕೃತಿಗೆ ಸುಂದರವಾದ ಮುಖಪುಟವನ್ನು ಹಾಗೂ ಸುಂದರವಾದ ರೂಪವನ್ನು ಕೊಟ್ಟು ಸಿದ್ಧಪಡಿಸಿದ ಕಲ್ಲೂರು ನಾಗೇಶ ಅವರಿಗೆ, ಪುಟವಿನ್ಯಾಸಗೊಳಿಸಿದ ಶ್ರೀಮತಿ ಭಾರತಿ ಅವರಿಗೆ ನನ್ನ ಪ್ರೀತಿಯ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಪುಸ್ತಕವನ್ನು ಕೈಗೆತ್ತಿಕೊಂಡು ಓದುವ ನಿಮಗೂ ನನ್ನ ವಂದನೆಗಳು.

ಕುಡುಪು
29 ಎಪ್ರಿಲ್ 2022

ಬಿ.ಎಂ. ರೋಹಿಣಿ

ಪ್ರಾಚೀನ ಇತಿಹಾಸ

[ಸಂಪಾದಿಸಿ]

ಪ್ರಾಚೀನ ಇತಿಹಾಸ

ಪ್ರಾಚೀನ ಕಾಲದಲ್ಲಿ ಯುದ್ಧಗಳು ನಡೆಯದ ಕಾಲವೂ ಇರಲಿಲ್ಲ ಮತ್ತು ದೇಶವೂ ಇರಲಿಲ್ಲ. ಈ ಯುದ್ಧಗಳ ಜೊತೆಯಲ್ಲಿ ವಾರಾಂಗನೆಯರಿಗೂ ನಂಟಿದೆ. ಸೇನೆಯ ಜೊತೆಯಲ್ಲಿ ವೇಶ್ಯೆಯರ ಒಂದು ದೊಡ್ಡ ಗುಂಪೇ ಸಾಗುತ್ತಿತ್ತೆಂಬ ದಾಖಲೆಗಳು ಚರಿತ್ರೆಯಲ್ಲಿವೆ. ಸೈನಿಕರ ದಣಿದ ದೇಹಗಳಿಗೆ ಈ ವೇಶ್ಯೆಯರು ಚೈತನ್ಯ ತುಂಬುತ್ತಿದ್ದರು. ಯುದ್ಧ ನಡೆಯುತ್ತಿರುವಾಗಲೂ ಈ ಕಾಮನಾಟಗಳಿಗೆ ಬಿಡುವಿರುವುದಿಲ್ಲ. ಯುದ್ಧ ಮುಗಿದು ಗೆದ್ದರೆ ಸೋತ ರಾಜ್ಯದ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿ ಪೌರುಷ ಮೆರೆಯುವುದಕ್ಕೂ ಬಿಡುವಿರುವುದಿಲ್ಲ. ಹೇಗಿದೆ ನೋಡಿ, ಪುರುಷರ ಕಾಮದಾಹ? ಇದು ಪ್ರಾಚೀನ ಕಾಲದ ಕತೆಯಾಯಿತು.

ಹೀಗೆ ಆಧುನಿಕ ಕಾಲದ ಯುದ್ಧಗಳ ಕತೆಯೂ ಇದಕ್ಕಿಂತ ಭೀಕರವಾಗಿದೆ. 1960ರ ದಶಕದಲ್ಲಿ ವಿಯಟ್ನಾಂ ಮತ್ತು ಅಮೇರಿಕಾದ ಯುದ್ಧ ಸಮರದ ಕತೆ ಎಲ್ಲರಿಗೂ ಗೊತ್ತಿದೆಯಲ್ಲವೇ? ಅಮೆರಿಕಾದ ಸೈನಿಕರನ್ನು ರಮಿಸಲು ಥಾಯ್ಲೆಂಡಿನಿಂದ, ಕಾಂಬೋಡಿಯಾದಿಂದ ಸಾವಿರಾರು ಹೆಣ್ಣುಮಕ್ಕಳನ್ನು ಕರೆತರಲಾಯಿತು, ಕರೆತರುವುದೇನು, ಕದ್ದು ತರಲಾಯಿತು. ಇಲ್ಲವೇ, ತಲೆಹಿಡುಕರಿಗೆ ಮಾರಲಾಯಿತು. ಹೀಗೆ ಥಾಯ್ಲೆಂಡಿನಲ್ಲಿ ಪ್ರಾರಂಭವಾದ ವೇಶ್ಯಾವಾಟಿಕೆ ಈಗ ಜಗತ್ಪಸಿದ್ಧವಾಗಿದೆ. ಒಂದನೆ ಮಹಾಯುದ್ಧದಲ್ಲಿ ಯುರೋಪಿನ ರಾಷ್ಟ್ರಗಳಿಂದ ಹೆಣ್ಣುಮಕ್ಕಳನ್ನು ಲೈಂಗಿಕ ಸೇವೆಗಾಗಿ ಕರೆತರಲಾಯಿತು. ಎರಡನೇ ಮಹಾಯುದ್ಧದಲ್ಲಿ ಜಪಾನಿನ ಸೈನಿಕರ ಕಾಮವನ್ನು ತಣಿಸಲು ಪೂರ್ವ ಮತ್ತು ಆಗ್ನಿಯ ಏಷ್ಯಾದ ಈ ಬಡದೇಶಗಳ ಹೆಣ್ಣುಮಕ್ಕಳನ್ನು ಹೆತ್ತವರು ಗುಲಾಮರಂತೆ ಮಾರಾಟ ಮಾಡಿದರು. ಯುದ್ಧ ಕಾಲದಲ್ಲಿ ಅವರು ಪಟ್ಟ ಪಾಡುಗಳ ಬಗ್ಗೆ ತನ್ನ ಅನುಭವಗಳನ್ನು ಬರೆದ ಯಾನ್‌ರಫ್-ಓ ಹರ್ನ್ ಎಂಬ ಹೆಣ್ಣುಮಗಳ ಆತ್ಮಕತೆ ಹೃದಯ ವಿದ್ರಾವಕವಾಗಿದೆ. 'ಅರ್ಧ ಶತಮಾನದ ಮೌನ' ಎಂಬ ಈ ಕೃತಿ ಅರುಣ್‌ರವರಿಂದ ಕನ್ನಡಕ್ಕೆ ಅನುವಾದಗೊಂಡಿದೆ. ಯುದ್ಧ ನಿಂತು 50 ವರ್ಷದ ಬಳಿಕ ಯುದ್ಧ ಕಾಲದಲ್ಲಿ ಪುರುಷರು, ಸೈನಿಕರು ಸ್ತ್ರೀಯರ ಮೇಲೆ ನಡೆಸಿದ ಅತ್ಯಾಚಾರವನ್ನು ಸಹಿಸಿ ಆಕೆ ಬದುಕಿ ಬಂದುದೇ ಒಂದು ಪವಾಡ, 2ನೆಯ ಶತಮಾನದಲ್ಲಿ ನಡೆದ ಜಾಗತಿಕ ನ್ಯಾಯಾಲಯದ ಸಮಾವೇಶದಲ್ಲೂ ಈ ವೇಶ್ಯಾ ಸ್ತ್ರೀಯರು ತಮ್ಮ ಮೇಲೆ ನಡೆದ ದೌರ್ಜನ್ಯಗಳನ್ನು ಪ್ರಪಂಚದ ಮುಂದೆ ಪ್ರಕಟ ಪಡಿಸಿದ್ದರು. ಆಗಿನ ಜಪಾನ್ ಸರಕಾರ ಇವರ ಬಗ್ಗೆ ಕ್ಷಮೆ ಯಾಚಿಸಬೇಕೆಂದು ಮನವಿ ಮಾಡಿದ್ದರು. ಸರಕಾರ ಕ್ಷಮೆ ಯಾಚಿಸಲಿ, ಯಾಚಿಸದಿರಲಿ ಅದರಿಂದ ವೇಶ್ಯಾ ಸಮಸ್ಯೆಗಳು ಪರಿಹಾರವಾಗಲಾರವು. ನೋವು, ಅಪಮಾನ, ನಿಂದೆಗಳಿಂದ ಜರ್ಜರಿತರಾದ ಅವರನ್ನು ಸಮಾಜ ಗೌರವದಿಂದ ಕಾಣುವ ಮನಸ್ಥಿತಿ ಇದೆಯೇ ಎಂಬುದೇ ದೊಡ್ಡ ಪ್ರಶ್ನೆ, ಅವರನ್ನು ಲೈಂಗಿಕ ಸೇವೆಗಾಗಿಯೇ ಅಂದರೆ ಲೈಂಗಿಕ ಜೀತಕ್ಕಾಗಿಯೇ ನೇಮಿಸಿಕೊಂಡ ಸರಕಾರಗಳ ಮನೋಸ್ಥಿತಿ ಏನನ್ನು ಹೇಳುತ್ತದೆ?

ಅವರಿವರ ಸುದ್ದಿ ಏಕೆ, ನಮ್ಮ ಭಾರತೀಯ ಸೇನೆಯ ವ್ಯವಸ್ಥೆಯಲ್ಲೂ ಹೀಗೆ ದೇಹದಾಹವನ್ನು ತಣಿಸುವ ವ್ಯವಸ್ಥೆಗಳು ಚಾಲ್ತಿಯಲ್ಲಿವೆ. ತಿಂಗಳುಗಟ್ಟಲೇ ಹೆಣ್ಣುಗಳ ಮುಖ ನೋಡದೆ ಸಂಪರ್ಕವಿಲ್ಲದೆ ಬದುಕುವುದು ಸೈನಿಕರ ಮನೋವಿಕೃತಿಗೆ ಕಾರಣವಾಗುತ್ತದೆಂದು ಮನೋವಿಜ್ಞಾನಿಗಳ ಅಭಿಪ್ರಾಯವಾಗಿದೆ. ಸಲಿಂಗಕಾಮವು ಸೈನಿಕರಲ್ಲಿ ತಾತ್ಕಾಲಿಕ ಪರಿಹಾರವಾಗಿ ರೂಢಿಯಲ್ಲಿದೆ ಎಂದು ಅಧ್ಯಯನಗಳು ತಿಳಿಸಿವೆ. ಈಶಾನ್ಯ ರಾಜ್ಯಗಳಲ್ಲಿ ದಂಗೆಯನ್ನು ನಿಯಂತ್ರಿಸಲು ನಮ್ಮ ಕೇಂದ್ರ ಸರಕಾರ ಕಳಿಸಿದ ಸೇನೆಯ ಪುಂಡಾಟಗಳು ಮಿತಿಮೀರಿದಾಗ ಅಲ್ಲಿ ಸ್ತ್ರೀಯರಿಗೆ ಸ್ವತಂತ್ರವಾಗಿ ಬದುಕುವುದೇ ಕಷ್ಟವಾಯಿತು. ಮನೋರಮಾ ಎಂಬ ಮಹಿಳೆಯನ್ನು ಅತ್ಯಾಚಾರ ಮಾಡಿ ಕೊಂದ ಸೈನಿಕರ ವಿರುದ್ಧ ದನಿ ಎತ್ತುವ ಅಧಿಕಾರವೂ ಅಲ್ಲಿನ ಪ್ರಜೆಗಳಿಗಿರಲಿಲ್ಲ. ಆದುದರಿಂದ ಅಲ್ಲಿನ ಹೆಂಗಸರು ಸೈನಿಕ ಕಾರ್ಯಾಲಯದ ಮುಂದೆ ಬತ್ತಲೆ ನಿಂತು, 'ಬನ್ನಿ ನಮ್ಮನ್ನು ರೇಪ್ ಮಾಡಿ' ಎಂದು ಪ್ರತಿಭಟಿಸಿದ್ದು ಎಲ್ಲರ ಹೃದಯ ಕಲಕಿ ಜಗತ್ತಿನಾದ್ಯಂತ ಮಾನವೀಯ ಸ್ಪಂದನೆ ಪ್ರಕಟವಾಗಿತ್ತು. ಇರೋಮ್ ಶರ್ಮಿಳಾ ಎಂಬ ಹುಡುಗಿ ಸೈನಿಕರಿಗೆ ಕೇಂದ್ರ ಸರಕಾರ ನೀಡಿದ ಈ ವಿಶೇಷ ಕಾನೂನನ್ನು ರದ್ದುಪಡಿಸಬೇಕೆಂದು 13 ವರ್ಷಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದರೂ ಸರಕಾರ ಸೈನಿಕರ ವಿರುದ್ಧ ಯಾವ ಕಾನೂನು ಕ್ರಮವನ್ನೂ ಕೈಗೊಳ್ಳಲಿಲ್ಲ. ಮಾತ್ರವಲ್ಲ ಆ ಕಾನೂನನ್ನು ರದ್ದುಪಡಿಸುವ ಯಾವ ಇಚ್ಛೆಯನ್ನೂ ಪ್ರಕಟಿಸಲಿಲ್ಲ. ಇದೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ ಯುದ್ಧ ಕಾಲದಲ್ಲಿ ಸೈನಿಕರು ಸ್ತ್ರೀಯರ ಮೇಲೆ ಮಾಡುವ ಲೈಂಗಿಕ ಆಕ್ರಮಣವನ್ನು ಸರಕಾರವು ತೀರಾ ಕಡೆಗಣಿಸುತ್ತದೆ. ಈ ಮನಸ್ಥಿತಿಯಿದೆಯಲ್ಲಾ ಅದು ಸ್ತ್ರೀಯರೆಲ್ಲರನ್ನೂ ಲೈಂಗಿಕ ದಾಸಿಯರೆಂದೇ ಪರಿಗಣಿಸುತ್ತಿದೆಯೇ ಎಂದು ಅನುಮಾನ ಮೂಡುತ್ತಿದೆ. ಇರೋಮ್ ಶರ್ಮಿಳಾ ಈಗ ಸತ್ಯಾಗ್ರಹದಿಂದ ಹಿಂಜರಿದು ತನ್ನ ಭವಿಷ್ಯವನ್ನು ಭದ್ರಗೊಳಿಸುವ ಹಾದಿಯತ್ತ ಸಾಗುತ್ತಿರುವುದು ಸಂತೋಷದ ವಿಷಯ. ಆದರೆ ಈಶಾನ್ಯ ರಾಜ್ಯಗಳ ಶೋಷಿತ ಸ್ತ್ರೀಯರಲ್ಲಿ ಹತಾಶ ಮನಸ್ಥಿತಿಯನ್ನುಂಟುಮಾಡಿದೆ. ಅವಳ ಸತ್ಯಾಗ್ರಹದಿಂದ ಕಾನೂನು ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅವರಿಗೆ ದಾರಿ ಕಾಣದಾಗಿದೆ. ಸರಕಾರವು ಸ್ತ್ರೀಯರ ಬಗ್ಗೆ ತಳೆದ ಧೋರಣೆಯ ಬಗ್ಗೆ ಪ್ರಪಂಚದ ಮುಂದೆ ನಾಚಿಕೆಯಿಂದ (ಅದು ಇದ್ದರೆ) ತಲೆತಗ್ಗಿಸಬೇಕಾಗಿದೆ. ನಾರಿಯರನ್ನು ಪೂಜಿಸುವ ನಾಡಿನಲ್ಲಿ ಅವರಿಗಿರುವ ಗೌರವದ ಬಗ್ಗೆ ಈ ಘಟನೆಗಳು ಸಾಕ್ಷಿಯನ್ನು ನೀಡಿವೆ. ವೇಶ್ಯಾವಾಟಿಕೆಗಳನ್ನು ಕಾನೂನುಬದ್ಧಗೊಳಿಸಬೇಕೆಂದು ವಾದಿಸುವವರು ಬಹಳ ಕಳಕಳಿಯಿಂದ ಹೇಳುವ ಮಾತುಗಳೆಂದರೆ ವೇಶ್ಯಾವಾಟಿಕೆಗಳಿಂದ ಅತ್ಯಾಚಾರಗಳು ಕಡಿಮೆಯಾಗುತ್ತವೆ ಎಂದು. ಆದರೆ ಇದನ್ನು ಎಲ್ಲಾ ದೇಶಗಳಿಗೂ ಅನ್ವಯಿಸಲು ಸಾಧ್ಯವಿಲ್ಲ. ವೇಶ್ಯಾವಾಟಿಕೆಯನ್ನು ಜೊತೆಯಲ್ಲೇ ಒಯ್ಯುತ್ತಿದ್ದ ಹಿಂದಿನ ರಾಜರುಗಳ ಕಾಲದಲ್ಲಿ ಅತ್ಯಾಚಾರಗಳೇನಾದರೂ ಕಡಿಮೆಯಿತ್ತೇ? ಅದಕ್ಕೆ ಹೆದರಿಯೇ ಅಲ್ಲವೇ ಆ ಕಾಲದ ಸಮಾಜದಲ್ಲಿ ಹೆಂಗಸರು ಸಹಗಮನ ಮತ್ತು ಜೋಹಾರ್ ಪದ್ಧತಿಯನ್ನು ಮಾನ್ಯ ಮಾಡಿದ್ದು, ಅದಕ್ಕೆ ಧರ್ಮದ ಸಮ್ಮತಿಯನ್ನಿತ್ತದ್ದು. ವೇಶ್ಯಾವಾಟಿಕೆಯಿದ್ದರೂ ಅತ್ಯಾಚಾರಗಳು ಸಾಮಾನ್ಯವಾಗಿತ್ತು. ಸಹಗಮನವನ್ನು ಸ್ತ್ರೀಯರು ಸ್ವಇಚ್ಛೆಯಿಂದ ಮಾಡುತ್ತಿದ್ದರೆಂಬುದು ಆ ಪದ್ಧತಿಯನ್ನು ಜಾರಿಗೆ ತಂದ ಪುರುಷಸಮಾಜ ವೈಭವೀಕರಿಸಿ ಹೇಳಿದೆ. ಯಥಾರ್ಥವಾಗಿ ಸಹಗಮನಗಳು ಧಾರ್ಮಿಕ ಪ್ರೇರಣೆ, ಸ್ವರ್ಗದ ಹಂಬಲ ಮತ್ತು ಸಮಾಜದ ಕುಟುಂಬದ ಒತ್ತಾಯ ಮತ್ತು ಒತ್ತಡದಿಂದಲೇ ನಡೆಯುತ್ತಿತ್ತು. ವರ್ಣ ಸಂಕರವನ್ನು ತಡೆಯಲು ಮತ್ತು ಯೋನಿ ಪಾವಿತ್ರ್ಯವನ್ನು ರಕ್ಷಿಸಲು ಈ ಸಂಪ್ರದಾಯವನ್ನು ಸ್ತ್ರೀಯರ ಮೇಲೆ ಹೇರಲಾಯಿತು.

ವೇಶ್ಯಾವಾಟಿಕೆಗೆ ಸ್ತ್ರೀಯ ಪ್ರವೇಶವೂ ಒಂದು ರೀತಿಯಲ್ಲಿ ಅಗ್ನಿಕುಂಡಕ್ಕೆ ತನ್ನನ್ನು ಅರ್ಪಿಸಿಕೊಂಡಂತೆ. ಒಮ್ಮೆ ಆಕೆ ಆ ಕುಂಡಕ್ಕೆ ಜಿಗಿದಳೆಂದರೆ ಅದರಿಂದ ಹೊರಬರುವ ದಾರಿಗಳೆಲ್ಲಾ ಮುಚ್ಚಲ್ಪಡುತ್ತವೆ. ಇತ್ತೀಚಿನ ವರ್ಷಗಳಲ್ಲಿ ಭಯೋತ್ಪಾದನೆಯು ಪ್ರಪಂಚದಾದ್ಯಂತ ನಾನಾ ರೀತಿಯ ಉತ್ಪಾತಗಳನ್ನುಂಟು ಮಾಡಿದ ಸುದ್ದಿ ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆ. 2013ರಲ್ಲಿ ಟ್ಯೂನೀಷಿಯಾ ದೇಶದ ಕೆಲವು ಹೆಣ್ಣುಮಕ್ಕಳು ಮನೆಯಲ್ಲಿ ಹೇಳದೆ ತಪ್ಪಿಸಿಕೊಂಡರು. ಅವರನ್ನು ಸಿರಿಯಾದ ಇಸ್ಲಾಮಿಕ್ ಉಗ್ರವಾದಿಗಳ ಗುಂಪಿಗೆ ಕಳ್ಳ ಸಾಗಾಣಿಕೆಯ ಮೂಲಕ ಒಯ್ಯಲಾಗಿತ್ತು. ಸಿರಿಯಾದ ಬಂಡುಕೋರರ ಲೈಂಗಿಕ ಸೇವೆಗೆ ಈ ಹುಡುಗಿಯರನ್ನು ಬಳಸಿಕೊಳ್ಳಲಾಯಿತೆಂದು ಟ್ಯುನೀಷಿಯಾದ ಧಾರ್ಮಿಕ ಮುಖಂಡ ಹೇಳಿದ. ಹೀಗೆ ಹೇಳಿದ್ದರಿಂದ ಅವರನ್ನು ಹುದ್ದೆಯಿಂದಲೇ ಕಿತ್ತು ಹಾಕಲಾಯಿತು. ಆಗ ಮಾಧ್ಯಮದಲ್ಲಿ ವರದಿಯಾದಂತೆ ಸಿರಿಯಾದ ಹೋರಾಟಗಾರರಿಗೆ ತಾತ್ಕಾಲಿಕ ದೇಹ ಸಂಬಂಧ ಇರಿಸಿಕೊಳ್ಳುವುದಕ್ಕಾಗಿಯೇ ಒಂದು ಕಾನೂನು ಮಾಡಿದ್ದರಂತೆ. ಕೆಲವು ಘಂಟೆಗಳ ಬಳಿಕ ಈ ಸಂಬಂಧವು ಅಸಿಂಧುವಾಗಿತ್ತದೆ. ಈ ಕಾನೂನಿನಂತೆ ಯುವತಿಯರು ಕೆಲವು ಗಂಟೆಗಳೊಳಗೆ ಹಲವರೊಂದಿಗೆ ಲೈಂಗಿಕ ಸಂಪರ್ಕ ನಡೆಸಬೇಕಾಗುತ್ತಿತ್ತು. ಇಸ್ಲಾಮಿಕ್ ಸ್ಟೇಟ್‌ನ ಉಗ್ರವಾದಿಗಳು ತಮ್ಮಲ್ಲಿ ಸೆರೆ ಸಿಕ್ಕಿರುವ ಇತರ ಪಂಥಗಳ ಮಹಿಳೆಯರನ್ನು ಗುಲಾಮರಂತೆ ಬಳಸಿಕೊಳ್ಳುತ್ತಿದ್ದರು. ಉಗ್ರವಾದಿಗಳ ತಂಡದಿಂದ ತಪ್ಪಿಸಿಕೊಂಡು ಬಂದ ಯುವತಿಯರು ಹೇಳಿದಂತೆ ದಿನಕ್ಕೆ ಹಲವಾರು ಮಂದಿ ಉಗ್ರರ ಕಾಮತೃಷೆಯನ್ನು ತೀರಿಸಬೇಕಾಗಿತ್ತು. ಕೆಲವರು ಬಸುರಿಯರಾಗಿ ಮನೆಗೆ ಮರಳಿ ಬಂದಿದ್ದಾರೆ. ಅಂತರ್ಜಾಲಗಳ ಮೂಲಕ ಲೈಂಗಿಕ ಸೇವೆಗಾಗಿ ಕರೆನೀಡುವ ಕೆಲಸವನ್ನೂ ಮಾಡುತ್ತಿದ್ದಾರೆ. ಉಗ್ರವಾದಿಗಳ ಪತ್ನಿಯರೂ ಕೂಡಾ ಬೇರೆ ಬೇರೆ ದೇಶದ ಹೆಣ್ಣುಮಕ್ಕಳಿಗೆ ಪ್ರೇರೇಪಣೆ ನೀಡಿ ಲೈಂಗಿಕ ಸೇವೆಗಾಗಿ ಆಮಂತ್ರಿಸುತ್ತಿದ್ದಾರೆ ಅನ್ನುವುದು ಕೂಡಾ ವಿಚಿತ್ರವಾಗಿದೆ. ಈ ಸೇವೆಗೆ ಬಂದ ತರುಣಿಯರು ಗುಲಾಮರಾಗಿಯೇ ಬಾಳಬೇಕಾಗುತ್ತದೆ. ಇಸ್ಲಾಂ ಗುಲಾಮಗಿರಿಯನ್ನು ಖಂಡಿಸುತ್ತದೆ. ಅಂತಾರಾಷ್ಟ್ರೀಯ ನಿಯಮದ ಪ್ರಕಾರ ಪ್ರಪಂಚದಲ್ಲಿ ಗುಲಾಮಿ ಪದ್ಧತಿಯನ್ನು ನಿಷೇಧಿಸಲಾಗಿದೆ. ಹಾಗಿದ್ದೂ ಕೂಡಾ ಉಗ್ರವಾದಿಗಳು ಲೈಂಗಿಕದಾಸಿಯರನ್ನು ತಮ್ಮ ಕಾಮತೃಷೆಗಾಗಿ ನೇಮಿಸಿಕೊಂಡಿರುವುದು ವೇಶ್ಯಾವಾಟಿಕೆಯ ಇನ್ನೊಂದು ಕರಾಳ ಮುಖವನ್ನೂ ವ್ಯಕ್ತಪಡಿಸುತ್ತದೆ. ವಿದೇಶೀ ಉಗ್ರರಿಗೆ ನಿಧಿ ಸಂಗ್ರಹಕ್ಕಾಗಿ ಹುಣಸೂರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿರುವುದನ್ನು 2012ರಲ್ಲಿ ಏಪ್ರಿಲ್ ತಿಂಗಳ 19ನೇ ತಾರೀಕಿನ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿ ಇನ್ನೂ ಭೀಕರವಾಗಿದೆ. ಬಳ್ಳಾರಿಯಲ್ಲಿ ಗಣಿ ಮಾಫಿಯಾ ಮೆರೆಯುತ್ತಿದ್ದಾಗ ಅಲ್ಲಿಯೂ ಈ ಜಾಲ ಕಾರ್ಯಚರಿಸುತಿತ್ತು. ಗಣಿದಣಿಗಳು ಈ ತಂಡವನ್ನು ಬಳಸಿಕೊಂಡು ತಮಗೆ ಬೇಕಾದ ಕಾರ್ಯಗಳನ್ನು ಅಡ್ಡದಾರಿಯಿಂದ ಗಳಿಸಿಕೊಳ್ಳಲು ಪ್ರಯತ್ನಿಸಿದ್ದು ತಿಳಿದುಬಂದಿದೆ. ತೆಹಲ್ಕಾ ಎಂಬ ಪತ್ರಿಕೆ ಸರಕಾರದ ಭ್ರಷ್ಟಾಚಾರವನ್ನು ಬಯಲಿಗೆಳೆಯಲು ವೇಶ್ಯೆಯರನ್ನು ಬಳಸಿಕೊಂಡದ್ದು ಆಗ ದೊಡ್ಡ ಬಾಂಬ್ ಸ್ಪೋಟದಂತಹ ಸುದ್ದಿಯಾಗಿತ್ತು. ಹತ್ತು ವರ್ಷಗಳ ಹಿಂದೆ ಗೋವಾದಲ್ಲಿ ನಡೆದ ಒಂದು ಸೆಮಿನಾರಿನಲ್ಲಿ ಭಾಗವಹಿಸಿದ್ದೆ. ಪ್ರವಾಸೋದ್ಯಮವು ತಂದೊಡ್ಡುವ ಸುಖದ ಹಿಂದೆ ಎಂತೆಂತಹಾ ದಾರುಣ ಮತ್ತು ಭಯಾನಕ ಕತೆಗಳಿವೆ ಎಂದು ಅಲ್ಲಿನ ಸ್ವಯಂಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುವವರು ಪ್ರತ್ಯಕ್ಷದರ್ಶಿಯಾದ ಕೆಲವು ಘಟನೆಗಳನ್ನು ಹೇಳಿದಾಗ ಮನಸ್ಸು ಮರಗಟ್ಟಿ ಹೋಗಿತ್ತು. ಅಲ್ಲಿ ಹೆಣ್ಣುಮಕ್ಕಳು ಮಾತ್ರವಲ್ಲ ಗಂಡು ಮಕ್ಕಳನ್ನು ಸೆಕ್ಸ್ ಉದ್ಯಮದಲ್ಲಿ ಬಳಕೆಗೊಳಿಸುತ್ತಾರೆ. ಇದಕ್ಕಾಗಿ ಮಾನವ ಕಳ್ಳ ಸಾಗಾಣಿಕೆಯೇ ಇಲ್ಲಿ ದೊಡ್ಡ ಉದ್ಯಮವಾಗಿ ಬೆಳೆಯುತ್ತಿದೆ. ಈ ದಂಧೆಯಲ್ಲಿ ಕೋಟಿಗಟ್ಟಲೇ ಲಾಭ ಗಳಿಸುವವರಿದ್ದಾರೆ. ಯಾವುದೇ ಬಂಡವಾಳವಿಲ್ಲದೆ ಕೇವಲ ಮಾನವ ಮಾಂಸ ಮಾರಾಟದಿಂದಲೇ ಕೋಟ್ಯಾಧೀಶರಾದವರಿದ್ದಾರೆ. ಮದಿರೆ, ಮಾನಿನಿ, ಜೂಜು ಈ ಮೂರು ಪ್ರವಾಸೋದ್ಯಮದ ಮುಖ್ಯ ಕೇಂದ್ರಗಳು.

ಇಂದಿಗೂ ಅಲ್ಲಿನ ಕಡಲ ತೀರದಲ್ಲಿ ಹೊಟೇಲ್, ಬಾರ್, ಮಸಾಜ್ ಪಾರ್ಲ‌್ರಗಳಲ್ಲಿ ಘರ್‌ವಾಲಿಗಳ ವ್ಯವಸ್ಥಿತ ಜಾಲಗಳು ಕೆಲಸ ಮಾಡುತ್ತವೆ. ವೇಶ್ಯಾವಾಟಿಕೆಯು ಇಲ್ಲಿ ಹುಲುಸಾಗಿ ಬೆಳೆಯಲು ಪೊಲೀಸರ ಮೌನ ಸಮ್ಮತಿಯೂ ಇದೆ. ಅತಿವೃಷ್ಟಿ, ಅನಾವೃಷ್ಟಿಗಳಿಂದ ಕಂಗೆಟ್ಟು ರೈತರ ಕುಟುಂಬಗಳು ಇಲ್ಲಿಗೆ ವಲಸೆ ಹೋಗುತ್ತಿದ್ದಾರೆ. ಈ ಕುಟುಂಬಗಳ ಎಳೆಯ ಮಕ್ಕಳೂ ಬಾಲಕಾರ್ಮಿಕರಾಗಿ ಅರಳುವ ಮೊದಲೇ ಮುರುಟುತ್ತಿದ್ದಾರೆ. ಗಂಡಸರು ನಶೆಯ ದಾಸರಾಗಿ ಕುಟುಂಬಗಳನ್ನು ಬೀದಿಪಾಲು ಮಾಡಿದಾಗ ಹೆಂಗಸರು ಬದುಕಿಗಾಗಿ ವೇಶ್ಯಾವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಐದು ವರ್ಷಗಳ ಹಿಂದೆ ಇಲ್ಲಿನ ಹೆಣ್ಣುಮಕ್ಕಳು ಮಾಧ್ಯಮದ ಮುಂದೆ ತಮ್ಮ ದುಃಖವನ್ನು ತೋಡಿಕೊಂಡದ್ದು ವರದಿಯಾಗಿತ್ತು. "ನಮ್ಮ ದುಡಿತಕ್ಕಿಂತ ಮೈಯ ಮೇಲೆ ಹೆಚ್ಚು ಆಸೆ ತೋರಿಸಿದ್ರು. ನಾವು ಹೀಗೆ ಬದುಕಿ ಹೊಟ್ಟೆ ಹೊರೆಯುವುದು ನ್ಯಾಯವೇ? ಖುರ್ಚಿ ಮೇಲೆ ಕೂತ ರಾಜಕಾರಿಣಿಗಳಿಗೆ ಕಿವಿ ಕಣ್ಣು ಕಾಣಿಸದಂಗೆ ಆಗಿದೆಯೇ? ನಮಗೆ ಹೊಟ್ಟೆ ತುಂಬಿಸುವ ಉದ್ಯೋಗ ನೀಡಿದರೆ ನಾವು ಯಾಕೆ ಇಲ್ಲಿಗೆ ಬರುತ್ತಿದ್ದೆವು?" ಎಂದು ನೋವಿನಿಂದ ಹೇಳಿಕೊಂಡ ಮಾತುಗಳು ರಾಜಕಾರಿಣಿಗಳ ತಲೆಯ ಮೇಲಿಂದಲೇ ಹಾರಿ ಹೋಗಿರಬೇಕು. ಬಾರ್‌ಗಳನ್ನು ಬಂದ್ ಮಾಡಿದರೆ ಜನರ ಮನಸ್ಥಿತಿ ಹೇಗಾಗಬಹುದು? ಕುಡಿತವನ್ನು ನಿಷೇಧಿಸಿದರೆ? ಬಹುಶಃ ವೇಶ್ಯಾವಾಟಿಕೆಯನ್ನು ನಿಷೇಧಿಸಿದರೂ ಅದು ಇನ್ನೊಂದೇ ರೀತಿಯಲ್ಲಿ ಹೊಸರೂಪ ತೊಟ್ಟು ಪ್ರತ್ಯಕ್ಷವಾಗ ಬಹುದು, ಕಳ್ಳ ದಂಧೆಗಳಿಗೆ ಪರವಾನಗಿ ಕೊಟ್ಟಂತಾಗಬಹುದು.

ರಸಿಕ ಗಂಡಸರ ಮನಸ್ಸಿಗೆ ಮುದ ನೀಡುವುದನ್ನೇ ತಮ್ಮ ವೃತ್ತಿಯನ್ನಾಗಿಸಿ ಕೊಂಡ ಕಲಾವಿದೆಯರನ್ನು ಜಪಾನಿನಲ್ಲಿ 'ಗೀಶಾ' ಎಂದು ಕರೆಯುತ್ತಾರೆ. ಈ ಗೀಶಾ ಸ್ತ್ರೀಯರು ಸಕಲ ಕಲೆಗಳಲ್ಲಿ ಪರಿಣತಿಯನ್ನು ಹೊಂದಿರುತ್ತಿದ್ದರು. ಆರ್ಥಿಕವಾಗಿ ದುರ್ಬಲರಾದ ಮನೆತನದ ಹೆಣ್ಣುಮಕ್ಕಳನ್ನು ಬಹಳ ಚಿಕ್ಕ ಪ್ರಾಯದಲ್ಲೇ (ಕೆಲವೊಮ್ಮೆ ಮೂರು ವರ್ಷದ ಹಸುಳೆಯನ್ನು) ಗೀಶಾ ಮನೆ ಅಂದರೆ ತರಬೇತಿ ಕೊಡುವ ಒಕಾಯ ಮನೆಗಳಿಗೆ ತಂದೊಪ್ಪಿಸುತ್ತಿದ್ದರು. ಸುಮಾರು 15 ವರ್ಷಗಳ ಕಾಲ ಇವರಿಗೆ ಸಂಗೀತ, ನೃತ್ಯ ಮತ್ತು ಇತರ ಕಲೆಗಳಲ್ಲಿ, ಸಂಗೀತವಾದ್ಯಗಳ ನುಡಿಸುವಿಕೆ, ಸಾಂಪ್ರದಾಯಿಕ ಆಟಗಳು, ಸಂಭಾಷಣಾ ಚಾತುರ, ಸಿಂಗರಿಸಿಕೊಳ್ಳುವ ಕೌಶಲ, ತನ್ನ ಸಂಪರ್ಕಕ್ಕೆ ಬಂದ ಪುರುಷರನ್ನು ರಂಜಿಸಿ ಪ್ರಸನ್ನಗೊಳಿಸುವ ಕಲೆಯನ್ನು ಕಲಿಸಲಾಗುತ್ತದೆ. ಒಂಬತ್ತು ವರ್ಷಗಳಾದಾಗ ಅವರು ವಿದ್ಯಾರ್ಥಿ ಗೀಶಾಗಳು ಅಥವಾ ಮಾಯ್‌ ಎಂದು ಕರೆಯಲ್ಪಡುತ್ತಾರೆ. ಈ 'ಮಾಯ್‌ಕೋ'ಗಳು ಟೀ ಪಾರ್ಟಿಗಳಿಗೆ ಆಮಂತ್ರಿಸಲ್ಪಡುತ್ತಾರೆ. ಈ ಗೀಶಾಗಳಿರುವ ಮನೆಯೊಡತಿ ಅಂದರೆ ಹಿರಿಯ ಗೀಶಾರ ಮೂಲಕ ಪಾರ್ಟಿಗಳಿಗೆ ಕರೆ ಬರುತ್ತದೆ. ಇಂತಹ ಪಾರ್ಟಿಗಳಲ್ಲಿ ಪುರುಷ ನೊಂದಿಗೆ ಸಮಯ ಕಳೆಯಲು ಒಂದು ರಾತ್ರಿ ಅವನೊಂದಿಗಿರಲು ಮನೆಯೊಡತಿ ಅವಕಾಶ ನೀಡುತ್ತಾಳೆ. 'ಟೀ ಸೆರಮನಿ'ಯು ಜಪಾನೀಯರ ಒಂದು ಮಹತ್ವದ ಕಾರ್ಯಕ್ರಮ. ಎರಡನೇ ಮಹಾಯುದ್ಧದ ಕಾಲದಲ್ಲಿ ಈ ಟೀ ಸೆರೆಮನಿಯನ್ನು ನಿಷೇಧಿಸಲಾಯಿತು. ಗೀಶಾ ವೃತ್ತಿಯಲ್ಲಿದ್ದವರನ್ನು ಕಾರ್ಖಾನೆಗಳಲ್ಲಿ ಕೆಲಸ ಮಾಡಲು ಕಳಿಸಲಾಯಿತು.

ಈಗ ಈ ವೃತ್ತಿ ನೇಪಥ್ಯಕ್ಕೆ ಸೇರಿದೆ ಎಂದು ಹೇಳುತ್ತಾರೆ. ಜಪಾನೀಯರು ಗೀಶಾ ಸ್ತ್ರೀಯರನ್ನು ವೇಶ್ಯೆಯರೆಂದು ಕರೆಯುವುದಿಲ್ಲ. ಇವರಲ್ಲಿ ತಮ್ಮ ಒಡೆಯನನ್ನು ಆರಿಸುವ ಸಮಾರಂಭವನ್ನು ನಮ್ಮ ನಾಡಿನ ಗೆಜ್ಜೆಪೂಜೆ ಸಮಾರಂಭದಂತೆ ಮಾಡುತ್ತಾರೆ. ಇದಕ್ಕೆ 'ಮಿಝಯೇ' ಎನ್ನುತ್ತಾರೆ. ಪರಿಪೂರ್ಣ ಕಲಾವಿದೆಯನ್ನು ಯಾರು ಹೆಚ್ಚು ಹಣ ನೀಡುತ್ತಾನೋ ಅವನು ಆಯ್ಕೆ ಮಾಡುತ್ತಾನೆ. ಅವನನ್ನು 'ಡಾನಾ' ಎಂದು ಕರೆಯುತ್ತಾರೆ. ಆಯ್ಕೆ ಮಾಡಿಕೊಂಡವನು ಅವಳನ್ನು ಜೀವನ ಪೂರ್ತಿ ಪೋಷಿಸುವುದೂ ಇದೆ. ಮಧ್ಯದಲ್ಲಿ ಕೈ ಬಿಡುವುದೂ ಇದೆ. ವಿವಾಹವೆಂಬ ಸಾಂಪ್ರದಾಯಿಕ ವ್ಯವಸ್ಥೆಯ ಹೊರಗಿದ್ದುಕೊಂಡು ಪುರುಷರನ್ನು ರಂಜಿಸುವ ವೃತ್ತಿಯಲ್ಲಿ ನಿರತರಾಗಿರುವ ಈ ಗೀಲಾ ಸ್ತ್ರೀಯರು ಅತ್ಯುತ್ತಮ ಕಲಾವಿದೆಯರೂ ಆಗಿರುತ್ತಾರೆ. ಭಾರತದಲ್ಲಿ ದೇವರ ಹೆಸರಿನಲ್ಲಿ ಕಲಾವಂತೆಯರಾಗಿ ಬಾಳಿದ ಪಾತರದವರು, ದೇವದಾಸಿಯರಿದ್ದರು. ಇದಕ್ಕಿಂತ ಭಿನ್ನವಾಗಿ ಧಾರ್ಮಿಕ ಮುದ್ರೆಯಿಲ್ಲದೆ ಕಲೆಯ ಅಭಿವ್ಯಕ್ತಿಯಿಂದ ರಸಿಕ ಪುರುಷರ ಮನಸ್ಸನ್ನು ರಂಜಿಸುವವರೇ ಈ ಗೀಶಾ ಸ್ತ್ರೀಯರು. ಇತ್ತೀಚಿನ ವರ್ಷಗಳಲ್ಲಿ ಈ ವೃತ್ತಿಯನ್ನು ಆಯ್ಕೆ ಮಾಡುವವರ ಸಂಖ್ಯೆ ಕಡಿಮೆಯಾಗಿದೆಯಂತೆ.

ವೇಶ್ಯಾವಾಟಿಕೆಯ ಪ್ರಾಚೀನತೆಗೆ ನಿರ್ದಿಷ್ಟ ಕಾಲವನ್ನು ಸೂಚಿಸಲು ಸಾಧ್ಯವಿಲ್ಲ. ಯಾಕೆಂದರೆ ನಾಗರಿಕತೆಯ ಉಗಮದಿಂದಲೇ ಈ ವೃತ್ತಿ ಆರಂಭವಾಗಿರಬೇಕು. ಒಂದು ಹೆಣ್ಣಿಗೆ ಒಂದೇ ಗಂಡು ಎಂದು ನಿರ್ದಿಷ್ಟಪಡಿಸಿದ ವಿವಾಹ ವ್ಯವಸ್ಥೆ ಗಂಡಿಗೆ ಲೈಂಗಿಕತೆಯನ್ನು ಮುಕ್ತಗೊಳಿಸಿತು. ಸ್ತ್ರೀಗೆ ಪಾತಿವ್ರತ್ಯದ ಪಟ್ಟ ಕಟ್ಟಿ ಕತೆಗಳನ್ನು ಪ್ರಚಾರ ಮಾಡಿ ವೈಭವೀಕರಿಸಿತು. ಮಾತ್ರವಲ್ಲ ವಿಧವಾ ವಿವಾಹವನ್ನು ನಿಷೇಧಿಸಿ, ಬಾಲ್ಯ ವಿವಾಹವನ್ನು ಪ್ರೋತ್ಸಾಹಿಸಿತು. ವಿಧವೆಗೆ ಸಹಗಮನಕ್ಕೆ ಪ್ರಚೋದನೆ ನೀಡಿ, ಯೋನಿ ಪಾವಿತ್ರ್ಯವನ್ನು ಕಾಪಾಡಿತು. ವರ್ಣ ಸಂಕರಗಳುಂಟಾಗದಂತೆ ಧರ್ಮ ಶಾಸ್ತ್ರಗಳನ್ನು ರಚಿಸಿ ಆ ಮೂಲಕ ಪ್ರಚಾರ ಮಾಡಿತು. ಇಷ್ಟೆಲ್ಲಾ ನಿರ್ಬಂಧ ಗಳಿದ್ದರೂ ವೇಶ್ಯಾವಾಟಿಕೆ ನಿರಂತರವಾಗಿ ನಡೆಯುತ್ತಲೇ ಇತ್ತು ಎನ್ನುವುದು ಬಹಳ ವಿಸ್ಮಯದ ಸಂಗತಿಯಾಗಿದೆ. ಪಾತಿವ್ರತ್ಯದ ವೈಭವೀಕರಣ ಮಾಡಿ ಹೆಣ್ಣನ್ನು ಸಂತಾನಕ್ಕಾಗಿ ಮನೆಯೊಳಗೆ ಬಂಧಿಸಿದ್ದು ಶೋಷಣೆಯ ಒಂದು ತುದಿಯಾದರೆ, ಕಾಮಕ್ಕಾಗಿ ವೇಶ್ಯಾವಾಟಿಕೆಯನ್ನು ಸೃಷ್ಟಿಸಿದ್ದು ಇನ್ನೊಂದು ತುತ್ತ ತುದಿ, ಇವೆರಡೂ ಪುರುಷ ಪ್ರಧಾನ ಸಮಾಜದ ಸ್ವಾರ್ಥ ಮೂಲವಾದ ಕಾರ್ಯ ತಂತ್ರಗಳು, ವೇಶ್ಯಾವಾಟಿಕೆಗೂ ಧಾರ್ಮಿಕ ಮುದ್ರೆಯನ್ನೊತ್ತಿ ಕಲೆಯ ಹೆಸರಿನಲ್ಲಿ ಕಾಣದ ದೇವರ ಹೆಸರಿನಲ್ಲಿ ಕಾಮದಾಹವನ್ನು ತೀರಿಸಿಕೊಳ್ಳುವಂತೆ ಸುವ್ಯವಸ್ಥಿತವಾದ ಕ್ರಮ ನಿಯಮಗಳನ್ನು ಮಾಡಿದ ಶಾಸನ ಕರ್ತೃಗಳ ಕುಟಿಲ ತಂತ್ರಗಳನ್ನು ಪ್ರಪಂಚದ ಬೇರೆ ದೇಶಗಳಲ್ಲೂ ಭಿನ್ನ ಭಿನ್ನ ರೂಪಗಳಲ್ಲಿ ಕಾಣಬಹುದು.

ಪ್ರಾಚೀನ ನಾಗರಿಕತೆಗೆ ಪ್ರಸಿದ್ಧವಾದ ಬ್ಯಾಬಿಲೋನಿಯಾದಲ್ಲಿ ಕಿ.ಪೂ. 3000 ಕಾಲದಲ್ಲೇ ಈ ಪದ್ಧತಿ ಅಸ್ತಿತ್ವದಲ್ಲಿತ್ತು. ಶ್ರೀಮಂತರು ಬಹುಪತ್ನಿತ್ವವನ್ನು ಹೊಂದಿದವರಾಗಿದ್ದರು. ಅದಲ್ಲದೆ ಉಪಪತ್ನಿಯರು ಮತ್ತು ವೇಶ್ಯಯರನ್ನು ಸಂಪರ್ಕದಲ್ಲಿರಿಕೊಂಡಿದ್ದರು. ಅಲ್ಲಿ ದೇವರ ಸೇವೆಗಾಗಿ ನಿಯೋಜಿಸಲ್ಪಟ್ಟ ಮಹಿಳೆ ಯರಿದ್ದರು. ಎಂಟು, ನಟಿಟು, ಜಿಕ್ರು, ಜರ್ಮಶಿಟು ಮುಂತಾದ ವರ್ಗದಲ್ಲಿ ದೇವರ ಸೇವೆಯ ವೇಶ್ಯೆಯರಿದ್ದರು. ವಿಶೇಷವೆಂದರೆ ದೇವರ ಸೇವೆಗೆ ಅರ್ಪಿಸಿದ ವೇಶ್ಯಯರಾದರೂ ಇವರಿಗೆ ಮದುವೆಯಾಗುವ ಮಕ್ಕಳನ್ನು ಪಡೆಯುವ ಅವಕಾಶ ವಿತ್ತು. ಇವರಲ್ಲಿ ಅನೇಕರು ತುಂಬಾ ಶ್ರೀಮಂತೆಯರಾಗಿದ್ದು ಸಮಾಜದಲ್ಲಿ ಗೌರವದ ಸ್ಥಾನವನ್ನು ಹೊಂದಿದ್ದರು.

ಮಾತೃ ದೇವತೆಯಾದ ಇಫ್ತಾರ್, ಮುರ್‌ಡಕ್ ದೇವರ ಪತ್ನಿಯೆಂದು ಭಕ್ತಿಯಿಂದ ಪೂಜಿಸುತ್ತಿದ್ದರು. ಅಲ್ಲಿ ಈ ಇಪ್ತಾರ್ ದೇವತೆಯನ್ನು ತೃಪ್ತಿಪಡಿಸಲು ಬ್ಯಾಬಿಲೋನಿಯಾದ ಹೆಚ್ಚಿನ ಮಹಿಳೆಯರು ವೇಶ್ಯಾವಾಟಿಕೆಯನ್ನು ಮಾಡುತ್ತಿದ್ದರು ಎಂದು ಗ್ರೀಕ್ ಇತಿಹಾಸಕಾರ ಹೆರೊಡೊಟಸ್ ತನ್ನ ಕೃತಿಯಲ್ಲಿ ದಾಖಲಿಸುತ್ತಾನೆ. ಇಫಾರ್ ದೇವತೆಯನ್ನು ಸರ್‌ಪನಿಟ್ ಎಂದೂ ಕರೆಯುತ್ತಿದ್ದರು. ಈ ದೇವತೆಯನ್ನು ಸೃಷ್ಟಿಕರ್ತೆ ಪ್ರಣಯ ದೇವತೆ, ಯುದ್ಧದ ದೇವತೆ ಮತ್ತು ಲಯಕರ್ತೆ ಎಂದೂ ಜನ ನಂಬಿ ಪೂಜಿಸುತ್ತಿದ್ದರು. ಈ ದೇವತೆಯ ಭಕ್ತರು ಬ್ಯಾಬಿಲೋನಿಯಾದ ಸುತ್ತುಮುತ್ತಲ ರಾಜ್ಯಗಳಲ್ಲೆಲ್ಲಾ ವ್ಯಾಪಿಸಿದ್ದರು. ಇಫಾರ್ ದೇವತೆಯ ನಗ್ನ ಶಿಲ್ಪಗಳು ಸುತ್ತಮುತ್ತಲ ಹಲವು ದೇಶಗಳಲ್ಲಿ ಲಭಿಸಿರುವುದು ಆಕೆಯ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇಪ್ತಾರ್ ದೇವಾಲಯಕ್ಕೆ ಬಂದ ಗಿರಾಕಿಗಳು (ಭಕ್ತರು) ಒಂದು ಕೈಯಲ್ಲಿ ಹಣ ಕೊಡುತ್ತಾ ಇನ್ನೊಂದು ಕೈಯನ್ನು ಸೂಳೆಯ ದೇಹದ ಮೇಲೆ ಇಡುತ್ತಿದ್ದರೆಂದು 'ಫಿರಾ' ಎಂಬ ಐತಿಹ್ಯದಲ್ಲಿ ವರ್ಣಿಸಲಾಗಿದೆ.

ಈ ಧಾರ್ಮಿಕ ವೇಶ್ಯಾವಾಟಿಕೆ ಪ್ರಾರಂಭವಾದುದಕ್ಕೆ ಒಂದು ಕತೆಯಿದೆ. ಇಫಾರ್ ದೇವತೆ ಪ್ರತಿವರ್ಷವೂ ತನ್ನ ಪ್ರಿಯತಮನನ್ನು ಹುಡುಕುತ್ತಾ ದೇಶ ಬಿಟ್ಟು ಪರದೇಶಕ್ಕೆ ಹೋಗತೊಡಗಿದಳು. ಇದರಿಂದಾಗಿ ಇಲ್ಲಿನ ನೆಲದಲ್ಲಿ ಸೃಷ್ಟಿಕಾರ್ಯವೇ ನಿಂತುಹೋಯಿತು. ಮಾನವರಲ್ಲಿ ಮತ್ತು ಪ್ರಾಣಿಗಳಲ್ಲಿ ಕಾಮ ಭಾವವೇ ಮಾಯವಾಗಿ ಸಂಭೋಗಿಸುವ ಪ್ರವೃತ್ತಿಯೇ ನಾಶವಾಯಿತು. ಇದರಿಂದ ಜನರು ವ್ಯಾಕುಲಗೊಂಡರು. ಆಗ ಫಲವಂತಿಕೆಯ ದೇವತೆಯಾಗಿ ಹೆಂಗಸರು ಪಾತ್ರವನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಉಂಟಾಯಿತು. ಇದೇ ಮುಂದೆ 'ಧಾರ್ಮಿಕ ವೇಶ್ಯಾಗಾರಿಕೆ' ಎಂಬ ಪದ್ಧತಿಯನ್ನು ಸೃಷ್ಟಿಸಿತು ಎಂದು ಫೇಜರ್, ಟಾನ್ನಿ, ಪೆಂಜರ್ ಎಂಬ ಇತಿಹಾಸಕಾರರು ದಾಖಲಿಸಿದ್ದಾರೆ. ಮಾನವ ನಾಗರಿಕತೆಯ ಆರಂಭದ ಕಾಲಘಟ್ಟದಲ್ಲಿ ಜನಸಂಖ್ಯೆಯನ್ನು ವೃದ್ಧಿಸುವ ತಂತ್ರವಾಗಿಯೂ ಈ ಪದ್ಧತಿಯನ್ನು ಮಾನ್ಯ ಮಾಡಿರಬಹುದು. ಆ ವೇಶ್ಯೆಯರಿಗೆ ಮದುವೆಯಾಗುವ ಮತ್ತು ಮಕ್ಕಳನ್ನು ಪಡೆಯುವ ಅವಕಾಶವಿತ್ತು. ಸಂತಾನಾಭಿವೃದ್ಧಿಯನ್ನು ದೇವರ ಹೆಸರಿನಲ್ಲಿ ನಿಷ್ಠೆಯಿಂದ ಮಾಡುವುದಕ್ಕಾಗಿ ಈ ಪದ್ಧತಿಯನ್ನು ಜಾರಿಗೆ ತಂದಿರಬಹುದು. ಭಾರತದ ದೇವದಾಸಿ ಪದ್ಧತಿಗೆ ಹೋಲಿಕೆಯಿದ್ದರೂ ಮದುವೆಯಾಗುವ ಅವಕಾಶ ಇಲ್ಲಿನ ದೇವದಾಸಿಯರಿಗಿರಲಿಲ್ಲ. ಹೋಲಿಕೆಗಿಂತ ಭಿನ್ನತೆಗಳೇ ಹೆಚ್ಚು. ಫಲವಂತಿಕೆಯ ನಿರಂತರ ಕ್ರಿಯೆಗೆ ಧರ್ಮವು ಸ್ಫೂರ್ತಿಯನ್ನು ನೀಡಿದೆ. ಆದುದರಿಂದ ಯಾವುದೇ ಒತ್ತಡ ಅಥವಾ ಭಯವಿಲ್ಲದೆ ವೇಶ್ಯಾವಾಟಿಕೆ ಕೆಲಸ ಮಾಡುತಿತ್ತು.

ಜಗತ್ತಿನ ಅನೇಕ ಕಡೆಗಳಲ್ಲಿ ಈ ಧಾರ್ಮಿಕ ವೇಶ್ಯಾವಾಟಿಕೆಗಳು ಮಾತೃ ದೇವತೆಯ ಆರಾಧನೆಯೊಂದಿಗೆ ಪ್ರಾರಂಭವಾಗಿದೆ. ಸಿರಿಯಾದಲ್ಲಿ ಅಬ್ಬರ, ಲೆಬನಾನ್‌ನಲ್ಲಿ ಅತರಗಟಿಸ್ ಎಂಬ ದೇವತೆಯ ಆರಾಧನೆಯೊಂದಿಗೆ ಈ ಪದ್ಧತಿ ಜಾರಿಯಲ್ಲಿದೆ. ಏಷ್ಯಾ ಮೈನರ್, ಘೋನೋಷಿಯಾ, ಉತ್ತರ ಸಿರಿಯಾಗಳಲ್ಲೂ ಮಾತೃದೇವತೆಯು ಸಂತಾನ ದೇವತೆಯಾಗಿ ಆರಾಧಿಸಲ್ಪಡುತ್ತಿದ್ದಳು. ವೇಶ್ಯಾವಾಟಿಕೆ ಅದರ ಜೊತೆಗೆ ಸಹಜವಾಗಿ ಸೇರಿಕೊಂಡಿತು. ಬ್ಯಾಬಿಲೋನಿನ ದೇವಾಲಯಗಳಲ್ಲಿ ನಡೆಯುವ ಕಾರ್ಯಾಚರಣೆಯ ಬಗ್ಗೆ ಅಧ್ಯಯನ ಮಾಡಿದ ಟಾವಿ ಮತ್ತು ಪೆಂಜರ್ ಅವರು ತಮ್ಮ ಕೃತಿಯಲ್ಲಿ "ಅಧೋನಿಯನ್ನು ಕಳೆದುಕೊಂಡ ದೇವತೆಗಳು ಶೋಕಾಚರಣೆಯ ನಂತರ ಅಲ್ಲಿಯ ಜನರೆಲ್ಲ ಕೇಶ ಮುಂಡನವನ್ನು ಕಡ್ಡಾಯವಾಗಿ ಮಾಡಿಸಿಕೊಳ್ಳಬೇಕಿತ್ತು. ಅದಕ್ಕೆ ತಿರಸ್ಕರಿಸಿದ ಹೆಣ್ಣು ಮಕ್ಕಳು ಆ ದೇವಾಲಯದಲ್ಲಿ ಇಡೀ ದಿವಸ ಎಲ್ಲರಿಗೂ ತನ್ನನ್ನು ಅರ್ಪಿಸಿಕೊಳ್ಳಬೇಕಿತ್ತು. ಅಪರಿಚಿತರು ಮಾತ್ರ ಹೆಂಗಸರನ್ನು ಬಾಡಿಗೆಗೆ ತೆಗೆದುಕೊಳ್ಳಲು ಅವಕಾಶವಿತ್ತು ಎಂದು ತಿಳಿದು ಬರುತ್ತದೆ" ಎನ್ನುತ್ತಾರೆ. "ಇಲ್ಲಿನ ದೇವಾಲಯಗಳಲ್ಲಿ ಹೆಣ್ಣು ಶೀಲ ಮತ್ತು ಕೂದಲನ್ನು ಹೆಣ್ಣು ದೇವತೆಗೆ ಅರ್ಪಿಸುವುದೇ ಆಗಿತ್ತು." ಎಂದು ಡಾ. ಜೋಗನ್‌ಶಂಕರ್ ಅವರು ತಮ್ಮ ದೇವದಾಸಿ ಸಂಪ್ರದಾಯ ಎಂಬ ಕೃತಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಘೋನೋಷಿಯಾ, ಕನಾನ್, ಸೈಪ್ರಸ್ ಮುಂತಾದ ದೇಶಗಳಲ್ಲಿ ಮಾತೃ ದೇವತೆಯನ್ನು ಅಟರ್ಟ್, ಅಶೂರತ್, ಅಸ್ಟೇಟ್ ಎಂಬ ಹೆಸರಿನಿಂದ ಕರೆಯುತ್ತಿದ್ದರು. ಗ್ರೀಕ್‌ನ ಅಫೊಡೈಟ್ ದೇವತೆಯೂ ಕೂಡ ಫಲವಂತಿಕೆಯ ದೇವತೆಯಾಗಿದ್ದಳು. ಅಲೆಕ್ಸಾಂಡ್ರಿಯಾದಲ್ಲಿ ಜಸ್ಟಿನ್, ಅಥೆನಕಸ್ ಎಂಬ ಹೆಸರಿನಿಂದ ಉತ್ತರ ಆಫ್ರಿಕಾದಲ್ಲಿ ಅಫಾರ್ಟ್, ತನಿತ್ ಎಂಬ ಹೆಸರಿನಿಂದ ಅರೇಬಿಯಾದಲ್ಲಿ ಅಮ್-ಲಟ್ ಎಂಬ ಮಾತೃದೇವತೆಯ ಹೆಸರಿನಲ್ಲಿ ವೇಶ್ಯಾವಾಟಿಕೆಯು ನಡೆಯುತ್ತಿತ್ತು. ಸೈಪ್ರೆಸ್‌ನ ಕಿಟಿಯೋನ್ ದೇವಾಲಯದಲ್ಲಿ ಗಂಡು ವೇಶ್ಯೆಯರೂ ಇದ್ದರೆಂದು ಇತಿಹಾಸಕಾರ ಹೆರೊಡೊಟಸನು ತನ್ನ ಕೃತಿಯಲ್ಲಿ ದಾಖಲಿಸಿದ್ದಾನೆ.

ಪಶ್ಚಿಮ ಆಫ್ರಿಕಾದಲ್ಲಿದ್ದ ಪದ್ಧತಿಯ ಬಗ್ಗೆ ಎಲ್ಲಿಸ್ ಎಂಬ ವಿದ್ವಾಂಸನು ತನ್ನ ಕೃತಿಯಲ್ಲಿ ಹೀಗೆ ಹೇಳುತ್ತಾನೆ. "ಗಂಡು ಅಥವಾ ಹೆಣ್ಣು ಯಾರೇ ಹದಿಹರೆಯದವರಾಗಲಿ ಒಂದು ದೇವರಿಗೆ ಅರ್ಪಿಸಲ್ಪಟ್ಟರೆ ಅವರನ್ನು 'ಕೊಸಿಯೋ' (ಉಪಯೋಗವಿಲ್ಲದವರು) ಎಂದು ಕರೆಯುತ್ತಿದ್ದರು. ಒಂದು ದೇವರಿಗೆ ಅರ್ಪಿಸಲ್ಪಟ್ಟ ಮಗುವು ಆ ದೇವರಿಗೆ ಹೆಂಡತಿಯರಾಗುತ್ತಾರೆ. ಕೋಸಿಯಾಳ ಮುಖ್ಯ ದಂಧೆ ವೇಶ್ಯಾವಾಟಿಕೆ, ಪ್ರತಿ ಪಟ್ಟಣದಲ್ಲೂ 10ರಿಂದ 12 ವರ್ಷದ ಹೆಣ್ಣುಮಕ್ಕಳನ್ನು ಈ ವೃತ್ತಿಗಾಗಿ ಸ್ವೀಕರಿಸುವ ಸಂಸ್ಥೆಗಳಿದ್ದವು. ಈ ಹುಡುಗಿಯರು ಮೂರು ವರ್ಷಗಳ ಕಾಲ ದೇವರ ಪೂಜೆಗಳ ಬಗ್ಗೆ ಅಭ್ಯಾಸ ಮಾಡುತ್ತಾರೆ. ಪುರುಷ ಶಿಕ್ಷಕರೊಂದಿಗೆ ವೇಶ್ಯಾವಾಟಿಕೆಯನ್ನು ಅಭ್ಯಾಸ ಮಾಡುತ್ತಾರೆ. ತಮ್ಮ ಅಭ್ಯಾಸದ ಅವಧಿ ಮುಗಿದ ಬಳಿಕ ಈ ಹುಡುಗಿಯರು ಸಾಮಾಜಿಕ ವೇಶ್ಯಯರಾಗುತ್ತಾರೆ. ಅವರನ್ನು ದೇವರೊಂದಿಗೆ ಮದುವೆಯಾದವರು ಎಂದು ಸಮಾಜ ಭಾವಿಸುತ್ತದೆ. ದೇವಸ್ಥಾನದ ಪೂಜಾರಿಗಳ ಜೊತೆಗೆ ಲೈಂಗಿಕ ಸಂಬಂಧ ಸೀಮಿತವಾಗಿದ್ದರೂ, ವಾಸ್ತವಿಕವಾಗಿ ವ್ಯತ್ಯಾಸವನ್ನು ಮಾಡಲಾಗುವುದಿಲ್ಲ. ಆ ರೀತಿಯ ಕೂಡುವಿಕೆಯಿಂದ ಹುಟ್ಟಿದ ಮಕ್ಕಳು ದೇವರಿಗೆ ಸೇರಿದವರಾಗಿರುತ್ತಾರೆ. ಆಫ್ರಿಕಾದಲ್ಲಿಯೂ ಧಾರ್ಮಿಕ ವೇಶ್ಯಾವಾಟಿಕೆ ಇದೆ. ಅವರನ್ನು 'ಧನ್-ಗಿ' ಎಂದು ಕರೆಯುತ್ತಾರೆ. ಇವರು ಬೇಲಿಯಿಂದ ಆವರಿಸಲ್ಪಟ್ಟ ಗುಂಪು ಮನೆಗಳಲ್ಲಿ ವಾಸಿಸುತ್ತಿದ್ದರು. ಒಡೆಯನಿಂದ ತಿರಸ್ಕರಿಸಲ್ಪಟ್ಟ ಗುಲಾಮರು, ಗಂಡನಿಂದ ತಿರಸ್ಕರಿಸಲ್ಪಟ್ಟ ಹೆಂಡತಿಯರಿಗೆ ಈ ಗುಂಪು ಮನೆಗಳು ಆಶ್ರಯವನ್ನು ನೀಡುತ್ತಿದ್ದವು. ಆದರೆ ಅವರು ಅಲ್ಲಿನ ಕೆಲವು ಸಂಪ್ರದಾಯ ಮತ್ತು ಕ್ರಮ ನಿಯಮಗಳನ್ನು ಪಾಲಿಸಬೇಕಿತ್ತು (ಕನ್ನಡ ಶಾಸನಗಳಲ್ಲಿ ವೇಶ್ಯಯರು ಪು:24).

ಪ್ರಾಚೀನ ಕಾಲದಲ್ಲಿ ಪೆರು, ಮೆಕ್ಸಿಕೋ, ಬೋರ್ನಿಯೋ, ಜಪಾನ್, ಪಶ್ಚಿಮ ಏಷ್ಯಾ, ಪ್ರಾಚೀನ ಮಧ್ಯ ಅಮೆರಿಕಾ, ಪಶ್ಚಿಮ ಆಫ್ರಿಕಾ, ಜಪಾನ್ ಹೀಗೆ ಪ್ರಪಂಚದಾದ್ಯಂತ ಈ ಪವಿತ್ರ ವೇಶ್ಯಾವಾಟಿಕೆಗಳು ಅಸ್ತಿತ್ವದಲ್ಲಿದ್ದವು. ಪ್ರಪಂಚದ ಎಲ್ಲಾ ಕಡೆಗಳಲ್ಲಿ ಹಬ್ಬಿರುವ ಈ ಪವಿತ್ರ ವೇಶ್ಯಾವಾಟಿಕೆಗಳು ವೇಶ್ಯೆಯರಿಗೆ ಕೆಲವು ವಿಶೇಷ ಸ್ಥಾನಮಾನಗಳನ್ನು ನೀಡಿದ್ದುಂಟು. ದೇವತೆಯು ಮತ್ತು ದೈವದ ಮುಖವಾಣಿಯಂತಿದ್ದ ಇವರು ಧರ್ಮದ ಹೆಸರಿನಲ್ಲಿ ಪುರೋಹಿತರಿಗೆ, ಮುಖಂಡರಿಗೆ ಹಾಗೂ ಸಾರ್ವಜನಿಕರಿಗೆ ಲೈಂಗಿಕ ಸೇವೆಯನ್ನು ನೀಡಬೇಕಿತ್ತು. ನರ್ತಕಿಯರಾಗಿ, ಸೇವಕಿಯರಾಗಿಯೂ ಕೆಲಸ ಮಾಡಬೇಕಾಗಿತ್ತು. ರಾಜ ಮಹಾರಾಜರು, ಪಾಳೆಯಗಾರರು, ಜಮೀನ್ದಾರರು, ಪುರೋಹಿತರು, ಸೈನಿಕರು, ಪ್ರವಾಸಿಗಳು, ರಾಜಕಾರಿಣಿಗಳು ಇವರೆಲ್ಲರ ಕಾಮದಾಹವನ್ನು ತಣಿಸಲಿಕ್ಕಾಗಿಯೇ ದೊಡ್ಡ ದೊಡ್ಡ ರೇವು ಪಟ್ಟಣಗಳಲ್ಲಿ ಇಂತಹ ಪವಿತ್ರ ವೇಶ್ಯಾವಾಟಿಕೆಗಳಲ್ಲದೆ ಸಾಮಾಜಿಕ ವೇಶ್ಯಯರೂ ಸಾಮಾನ್ಯ ಜನರ ಕಾಮತೃಪ್ತಿಗಾಗಿ ದೇಹವನ್ನು ಅರ್ಪಿಸುತ್ತಿದ್ದರು.

ಇಟೆಲಿಯಲ್ಲಿಯೂ ವೇಶ್ಯಾವೃತ್ತಿ ಇದ್ದರೂ ಭಾರತದ ವೇಶ್ಯೆಯರಂತೆ ಗೌರವವಿರಲಿಲ್ಲ. ವೇಶ್ಯೆಯಾಗಲು ಇಚ್ಛೆ ಇದ್ದವರು ಪುರಸಭೆಯ ಕಚೇರಿಯಲ್ಲಿ ಹೆಸರಿನಲ್ಲಿ ನೋಂದಾಯಿಸಬೇಕು. ಈ ವೃತ್ತಿಗೆ ಲೈಸನ್ಸ್ ಪಡೆದರೆ ಜೀವಮಾನವಿಡೀ ಅವಳಿಗೆ ಸಮಾಜದಲ್ಲಿ ಗೌರವವಿರಲಿಲ್ಲ. ಕುಲೀನ ಮನೆತನದ ಮತ್ತು ಸುಂದರವಾದ ತರುಣಿಯರು ಈ ವೃತ್ತಿಗೆ ಬಾರದಂತೆ ಪುರಸಭೆಯ ಅಧಿಕಾರಿ ಅವಳಿಗೆ ಮನವರಿಕೆ ಮಾಡಿಕೊಡುತ್ತಿದ್ದ. ವೇಶ್ಯೆಯರಿಗೆ ಪ್ರತ್ಯೇಕ ಉಡುಪು ಇತ್ತು. ತಲೆಗೂದಲಿಗೆ ನೀಲಿ ಅಥವಾ ಹಳದಿ ಬಣ್ಣ ಬಳಿಯಬೇಕಿತ್ತು.

ಕ್ರಿ.ಶಕ 5ನೇ ಶತಮಾನದಲ್ಲಿ ಗ್ರೀಸ್ ದೇಶದ ಅರಸ ಅನಸ್ಟಾಸಿಯನ್ ವೇಶ್ಯಾವೃತ್ತಿಯ ನಿರ್ಮೂಲನಕ್ಕಾಗಿ ಕೆಲವು ಕಾನೂನುಗಳನ್ನು ಮಾಡಿದ. ಲೈಸನ್ಸ್ ನೀಡುವುದನ್ನು ರದ್ದುಪಡಿಸಿದ. ಆ ನಂತರ ರಾಜನಾದ ಜುಸ್ಟಾನಿಯನ್ ನಾಗರಿಕರು ವೇಶ್ಯೆಯರನ್ನು ವಿವಾಹವಾಗಲು ಅನುಮತಿ ನೀಡಿದ. ಖ್ಯಾತ ನರ್ತಕಿಯೂ, ವೇಶ್ಯೆಯೂ ಆಗಿದ್ದ ಥಿಯೋಡೋರಳನ್ನು ಆತ ಮದುವೆಯಾದ. ಆಕೆ ವೇಶ್ಯೆಯರ ಪುನರ್ವಸತಿಗಾಗಿ ಪ್ರಯತ್ನಿಸಿದಳು. ಅವರಿಗೆ ದೊಡ್ಡ ಬಂಗಲೆಯನ್ನು ನಿರ್ಮಿಸಿ ಊಟ, ಉಡುಗೆ, ವಸತಿಗಳನ್ನಿತ್ತು ಪೋಷಿಸಿ ವೇಶ್ಯಾವೃತ್ತಿಯನ್ನು ನಡೆಸದಂತೆ ವ್ಯವಸ್ಥೆ ಮಾಡಿದಳು. ಹಾಗಿದ್ದರೂ ಹತಾಶೆಯಿಂದ ಕೆಲವರು ವೇಶ್ಯೆಯರು ಆತ್ಮಹತ್ಯೆ ಮಾಡಿಕೊಂಡರಂತೆ. ರಾಜ ಜುಸ್ಪಾನಿಯನ್ ತಲೆಹಿಡುಕರಿಗೆ ಮತ್ತು ಅವರಿಗೆ ಆಶ್ರಯ ನೀಡುವವರಿಗೆ ಕಠಿಣ ಶಿಕ್ಷೆ ನೀಡುವ ಕಾನೂನು ಮಾಡಿದರೂ ವೇಶ್ಯೆಯರ ವಿರುದ್ಧ ಎಂದೂ ಕಠಿಣ ನಿಲುವು ತೆಗೆದುಕೊಂಡಿರಲಿಲ್ಲ.

1347ರಲ್ಲಿ ನೇಪಲ್ಸ್‌ನಲ್ಲಿ ರಾಣಿ ಜೋ ಅನ್ನ ಸರಕಾರಿ ವೇಶ್ಯಾಗೃಹಗಳನ್ನು ತೆರೆದು ವೇಶ್ಯೆಯರು ಕೆಂಪು ಟೊಪ್ಪಿ ಧರಿಸಬೇಕೆಂದು ಕಾನೂನು ಮಾಡಿದಳು. ಸಮಾಜದ ಸ್ವಾಸ್ಥ್ಯಕ್ಕಾಗಿ ವೇಶ್ಯಾವೃತ್ತಿಯು ಇರಬೇಕೆಂದು ಅಧಿಕಾರಿಗಳು ವಾದಿಸಿದರು. ಮುಂದಿನ ಶತಮಾನದಲ್ಲಿ ಕೌನ್ಸಿಲ್ ಮಿಲನ್ ಎಂಬವನು ವೇಶ್ಯೆಯರನ್ನು ಒಂದು ವಿಶಿಷ್ಟ ವರ್ಗವೆಂದು ಪರಿಗಣಿಸಿ ಅವರಿಗೆ ಬೇರೆಯೇ ಕಾನೂನು ವಿಧಿಸಿದ. ವೇಶ್ಯೆಯರು ಆಭರಣಗಳನ್ನು ಧರಿಸಬಾರದು. ಚರ್ಚುಗಳಿಂದ ದೂರದಲ್ಲಿ ಬಿಷಪ್ಪರು ಸೂಚಿಸಿದ ಸ್ಥಳಗಳಲ್ಲಿ ವಾಸಿಸಬೇಕು. ಅವರು ತಪ್ಪು ಮಾಡಿದರೆ ಬಿಷಪ್ ಇಲ್ಲವೇ ಮ್ಯಾಜಿಸ್ಟ್ರೇಟರು ಶಿಕ್ಷೆ ನೀಡಬಹುದು ಎಂದು ಕಾನೂನು ಮಾಡಿದ (ಪುಟ 15, ಕಾಯದ ಕಾರ್ಪಣ್ಯ).

ಪ್ರಾಚೀನ ಕಾಲದ ಭಾರತದಲ್ಲಿ ವೇಶ್ಯಾವಾಟಿಕೆಗಳಲ್ಲಿ ವಾರಾಂಗನೆಯರು ನೃತ್ಯ ಸಂಗೀತದ ಮೂಲಕ ರಾಜರನ್ನು ಮನರಂಜಿಸುತ್ತಿದ್ದರು. ಪವಿತ್ರ ವೇಶ್ಯೆಯರು ಅಂದರೆ ದೇವದಾಸಿಯರು ತಮ್ಮ ದೇಹವನ್ನು ದೇವರಿಗೆ ಅರ್ಪಿಸಿ ಸಮಾಜದಲ್ಲಿ ಗೌರವವನ್ನು ಗಳಿಸಿದ್ದಾರೆ. ವಾರಾಂಗನೆಯರು ರಾಜನ ಸೇವೆಯಲ್ಲಿ ದೇವದಾಸಿಯರು ದೇವರ ಸೇವೆಯಲ್ಲಿ ನೃತ್ಯ ಸಂಗೀತದ ಪರಿಣತಿಯನ್ನು ಪಡೆದು ಗೌರವದ ಸ್ಥಾನದಲ್ಲಿದ್ದರು. ಬುದ್ಧ ಗುರುವಿನ ಕಾಲದಲ್ಲಿ ವೈಶಾಲಿ ನಗರದಲ್ಲಿದ್ದ ಆಮ್ರಪಾಲಿ ಎಂಬ ಶ್ರೀಮಂತ ವಾರಾಂಗನೆಯ ಕತೆಯು ಪ್ರಸಿದ್ಧವಾಗಿದೆ. ಆಕೆ ಬೌದ್ಧ ಭಿಕ್ಷುಣಿಯಾಗಿ ಬೌದ್ಧ ಧರ್ಮದ ಪ್ರಚಾರಕ್ಕೆ ಶ್ರಮಿಸಿದಳು. ಅಶೋಕ ಚಕ್ರವರ್ತಿಯ ಕಾಲದಲ್ಲಿ ಪಾಟಲಿಪುತ್ರದಲ್ಲಿ ಬಿಂದುಮತಿ ಎಂಬ ವೇಶ್ಯೆಯು ಸಮಾಜಸೇವೆ ಮಾಡಿದ ಕತೆಯೂ ಪ್ರಸಿದ್ಧವಾಗಿದೆ. ಉಕ್ಕೇರಿ ಹರಿಯುವ ಗಂಗಾ ನದಿಯ ಪ್ರವಾಹವನ್ನು ಇಳಿಯುವಂತೆ ಮಾಡಿದಳಂತೆ. ವೇಶ್ಯಾ ಧರ್ಮವನ್ನು ಒತ್ತೆಯಿಟ್ಟು ತನ್ನ ಪ್ರಾಣದ ಹಂಗುತೊರೆದು ರೌದ್ರಾವತಾರ ತಾಳಿದ ಗಂಗೆಯನ್ನು ಮಣಿಸಿದಳೆಂಬ ಕತೆಯಿದೆ. ಅನಂತರದ ಕಾಲದಲ್ಲಿ ವೇಶ್ಯೆಯರು ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ ಇತಿಹಾಸವಿದೆ. ತುಮಕೂರಿನ ಕೊರಟಗೆರೆಯಲ್ಲಿ ಸೂಳೆಕೆರೆಯಿದೆ. ಇದನ್ನು ಅಲ್ಲಿನ ಅರಸರ ಸೂಳೆ ತನ್ನ ಅಭರಣಗಳನ್ನು ಮಾರಿ ಕಟ್ಟಿಸಿದ್ದಾಳೆಂದು ಹೇಳುತ್ತಾರೆ. ದಾವಣಗೆರೆಯಲ್ಲಿರುವ ಸೂಳೆಕೆರೆ ಒಂದು ಸಮುದ್ರದಷ್ಟು ವಿಶಾಲವಾಗಿದೆ. ಅದನ್ನು ಈಗ ಶಾಂತಿಸಾಗರ ಎಂದು ಕರೆಯುತ್ತಾರೆ. ಇಂತಹ ಹಲವು ನಿದರ್ಶನಗಳು ಚರಿತ್ರೆಯಲ್ಲಿ ಸಿಗುತ್ತದೆ. ಆ ಕಾಲದಲ್ಲಿ ವಾರಾಂಗನೆ ಮತ್ತು ದೇವದಾಸಿಯರಲ್ಲಿ ವ್ಯತ್ಯಾಸವಿತ್ತು. ದೇವದಾಸಿಯರಲ್ಲೂ ಬೇರೆ ಬೇರೆ ಸೇವೆಗನುಸಾರವಾಗಿ ಭಿನ್ನ ಭಿನ್ನ ಹಂತಗಳಿದ್ದವು. ಬೇರೆ ಬೇರೆ ರಾಜ್ಯಗಳಲ್ಲಿ ರಾಜರುಗಳು ತಮ್ಮ ಆಸ್ಥಾನಗಳಲ್ಲಿ ಮತ್ತು ದೇವಸ್ಥಾನಗಳಲ್ಲಿ ಸೇವೆಸಲ್ಲಿಸುವುದಕ್ಕಾಗಿ ತಮ್ಮದೇ ಸಂಸ್ಕೃತಿಗನುಸಾರವಾಗಿ ಕೆಲವು ಪದ್ಧತಿಗಳನ್ನು ಜಾರಿಗೆ ತಂದಿದ್ದರು. ಎಲ್ಲಾ ಕಡೆಗಳಲ್ಲೂ ಇವರು ವಿವಾಹವೆಂಬ ವ್ಯವಸ್ಥೆಯಿಂದ ಹೊರಗುಳಿದು ದೇಹ ಮತ್ತು ಕಲೆಯನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು ಬದುಕುತ್ತಿದ್ದರು. ಈ ವ್ಯವಸ್ಥೆಗೆ ಧರ್ಮ ಮತ್ತು ಪ್ರಭುತ್ವದ ಅಂಗೀಕಾರ ಮುದ್ರೆಯನ್ನೊತ್ತಿತ್ತು.

ಕರ್ನಾಟಕದಲ್ಲಿ ವೇಶ್ಯಾವಾಟಿಕೆ ಹೇಗಿತ್ತು ಎಂಬುದನ್ನು ಈ ನಾಡನ್ನು ಸಂದರ್ಶಿಸಿದ ಪ್ರವಾಸಿಗರು ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ.

ವಿಜಯನಗರದಲ್ಲಿ ತುಂಗಭದ್ರಾ ದಂಡೆಯ ಈಶಾನ್ಯ ದಿಕ್ಕಿನಲ್ಲಿ ಒಂದು ದೊಡ್ಡ ಬೀದಿ ಇದೆ. ಇಲ್ಲಿ ಹಿಂದೆ ವೇಶ್ಯಾಸ್ತ್ರೀಯರೇ ವಾಸಿಸುತ್ತಿದ್ದರು ಎಂದು ಪ್ರವಾಸಿ ಅಬ್ದುಲ್ ರಜಾಕನು ತನ್ನ ಪ್ರವಾಸ ಕಥನದಲ್ಲಿ ವೇಶ್ಯಾವಾಟಿಕೆಯನ್ನು ವರ್ಣಿಸಿದ್ದಾನೆ.

ವಿಜಯನಗರದ ಟಂಕಸಾಲೆಗೆದುರಾಗಿ ನಗರಪಾಲಕನ ಕಚೇರಿ ಇದೆ. ಅವನ ಕೈಕೆಳಗೆ ನಗರ ರಕ್ಷಣೆಗಾಗಿ 12 ಸಾವಿರ ರಕ್ಷಕ ಭಟರಿದ್ದಾರೆ. ಅವರಿಗೆ ಸಂಬಳವೆಂದು ದಿನಂಪ್ರತಿ ಒಂದು ಪಣದಂತೆ ವೇಶ್ಯಾವಾಟಿಕೆಯಲ್ಲಿ ಹನ್ನೆರಡು ಸಾವಿರ ಪಣಗಳನ್ನು ವಸೂಲು ಮಾಡಲಾಗುತ್ತದೆ.

ಈ ಬೀದಿಗೆ ಬಂದು ತಮಗಿಷ್ಟವಾದ ಅಂಗನೆಯ ಸಂಗ ಸುಖ ಪಡೆಯಬಹುದು. ವಿಟರ ಸೊತ್ತೇನಾದರೂ ಹೋದರೆ ಪರಿಚಾರಕರ ಪ್ರಾಣಕ್ಕೆ ಬರುತ್ತದೆ. ಅವರನ್ನು ಕೂಡಲೇ ಮನೆಯಿಂದ ಹೊರಗಟ್ಟುವರು. ಈ ನಗರದ ಏಳು ಸುತ್ತಿನ ಕೋಟೆಯ ಒಡಲಲ್ಲಿ ಲೆಕ್ಕವಿಲ್ಲದಷ್ಟು ಗಣಿಕಾಗೃಹಗಳಿವೆ. ಕಾವಲು ಭಟರು ಪ್ರತಿಕ್ಷಣವೂ ಕೋಟೆಯಲ್ಲಿ ಏನೇನು ನಡೆಯುತ್ತಿದೆಯೆಂದು ಗಮನಿಸಿ

ನಗರಪಾಲಕನಿಗೆ ತಿಳಿಸುತ್ತಾರೆ. ಯಾವ ವಸ್ತುವು ಎಲ್ಲಿ ಹೋದರೂ ಎಲ್ಲೇ ಕಳ್ಳತನವಾದರೂ, ಕೂಡಲೇ ತಪ್ಪಿತಸ್ಥನನ್ನು ಹುಡುಕಿ ಕಳೆದುಕೊಂಡವರಿಗೆ ಪುನಃ ತಲುಪಿಸುವ ಕೆಲಸವಾಗುತ್ತದೆ. ಯಾವ ಅಪರಾಧವೂ ಘಟಿಸಬಾರದು. ಹಾಗೇನಾದರೂ ಆದರೆ ಅದಕ್ಕೆ ದಂಡ ವಿಧಿಸಲಾಗುತ್ತದೆ (ಪುಟ. 45, ಭಗ್ನ ವಿಜಯನಗರದ ಚರಿತ್ರೆ ಅಬ್ದುಲ್ ರಜಾಕ್ ಪರ್ಷಿಯಾ ದೇಶದವನು ಕ್ರಿ.ಶ. 1442ರಲ್ಲಿ ಭಾರತಕ್ಕೆ ಬಂದು 1443ರಲ್ಲಿ ವಿಜಯನಗರಕ್ಕೆ ಭೇಟಿ ನೀಡಿದನು. ಮಹಾನವಮಿ ಉತ್ಸವವನ್ನು ವೀಕ್ಷಿಸಿದ ಇವನು ಈ ದೇಶದಲ್ಲಿ ಸುಮಾರು ಎರಡು ವರ್ಷಗಳೂ ಕಾಲ ಪ್ರವಾಸ ಮಾಡಿ ತನ್ನೂರಿಗೆ ಮರಳಿದ ಮೇಲೆ ಪ್ರವಾಸ ಕಥನ (ಮಲ್ಲ ಅಸ್- ಸಾ- ದೈನ್)ವನ್ನು ಬರೆದನು.

"ದರಬ್‌ಖಾನೆಯ ಹಿಂಭಾಗದಲ್ಲಿ ಮುನ್ನೂರು ಗಜಕ್ಕಿಂತಲೂ ಅಗಲವಾದ ಅಂಗಡಿ ಬೀದಿಗಳಿವೆ. ಇವುಗಳ ಮುಂದೆ ಭವ್ಯವಾಗಿ ಸಿಂಗರಿಸಿದ ಗೃಹಗಳ ಸಾಲುಗಳಿವೆ. ಆ ಗೃಹಗಳಲ್ಲಿ ಅಂದವಾಗಿ ಕಟ್ಟಿದ ಪೀಠಗಳಿವೆ. ಈ ಪೀಠಗಳ ಮೇಲೆ ವೇಶ್ಯಾಂಗನೆಯರು ಕುಳಿತುಕೊಳ್ಳುತ್ತಾರೆ. ಈ ವೇಶ್ಯೆಯರು ಬೆಲೆಬಾಳುವ ಮುತ್ತು ಮಾಣಿಕ್ಯಗಳಿಂದಲೂ ಆಭರಣ ವಸ್ತುಗಳಿಂದಲೂ ಅಲಂಕೃತರಾಗಿರುತ್ತಾರೆ. ಪ್ರತಿಯೊಬ್ಬ ವೇಶ್ಯೆಯ ಬಳಿ ಇಬ್ಬರು ದಾಸಿಯರು ಇದ್ದು ಮನರಂಜನೆಯನ್ನುಂಟು ಮಾಡುತ್ತಾರೆ. ಯಾರು ಬೇಕಾದರೂ ಈ ಬೀದಿಗೆ ಬಂದು ತನಗೆ ಮೆಚ್ಚಿಗೆಯಾದ ವೇಶ್ಯಯನ್ನು ಆರಿಸಿಕೊಂಡು ಅವಳೊಡನೆ ಕಾಲ ಕಳೆಯಬಹುದು. ಆತನ ಬಳಿ ಇರುವ ಸಾಮಾನುಗಳನ್ನೆಲ್ಲಾ ಈ ವೇಶ್ಯಾ ಗೃಹಗಳ ಮೇಲ್ವಿಚಾರಕರ ಬಳಿ ಇಟ್ಟು ಹೋಗಬೇಕು. ಹೀಗೆ ಇಟ್ಟ ಸಾಮಾನುಗಳಿಗೆ ಮೇಲ್ವಿಚಾರಕರೇ ಜವಾಬ್ದಾರರು. ಈ ನಗರದ ಏಳು ಕೋಟೆಗಳಲ್ಲಿಯೂ ಈ ತರಹ ಅನೇಕ ವೇಶ್ಯಾಗೃಹಗಳಿವೆ. ಈ ವೇಶ್ಯಾಗೃಹಗಳ ಮೇಲೆ ಹಾಕಿದ ತೆರಿಗೆಯಿಂದ ಹನ್ನೆರಡು ಸಾವಿರ ಘನಂ ಆದಾಯ ಬರುತ್ತದೆ. ಈ ಹಣವನ್ನು ಪಹರೆಯವರಿಗೆ ಸಂಬಳವಾಗಿ ಕೊಡುತ್ತಾರೆ (ಪುಟ 17).

ದುಅರ್ತೆ ಬರ್ಬೋಸಾ ಪೋರ್ಚುಗಲ್ಲಿನ ಲಿಸ್ಟನ್ನಿನವನು. ಕ್ರಿ.ಶಕ 1500ರಲ್ಲಿ ಭಾರತಕ್ಕೆ ಬಂದನು. ವಿಜಯನಗರ ಮತ್ತು ಮಲಬಾರ್ ರಾಜ್ಯಗಳಲ್ಲಿ ಸಂಚರಿಸಿ ಅಲ್ಲಿನ ಜನರ ನಡೆನುಡಿ, ಆಚಾರವಿಚಾರ, ವ್ಯಾಪಾರಗಳ ಬಗ್ಗೆ ಬಹಳ ಉಪಯುಕ್ತವಾದ ಮಾಹಿತಿಗಳನ್ನು ನೀಡಿದ್ದಾನೆ.

"ಮೂಢನಂಬಿಕೆಯಿಂದ ಅನೇಕ ಹೆಂಗಸರು ತಮ್ಮ ಕನೈಯರನ್ನು ದೇವದಾಸಿಯರಾಗಿ ಬಿಡುತ್ತಾರೆ. ಅವರು ಹತ್ತು ವರ್ಷ ವಯಸ್ಕರಾದಾಗ ಅವರನ್ನು ಮದುವೆಯಲ್ಲಿ ಮೆರವಣಿಗೆ ಮಾಡಿದಂತೆ ಮಾಡುತ್ತಾ ಬಂಧು ಬಳಗದೊಡನೆ ದೇವಸ್ಥಾನಕ್ಕೆ ಕರೆದುಕೊಂಡು ಹೋಗುತ್ತಾರೆ. ದೇವಸ್ಥಾನದ ಬಾಗಿಲಿನ ಹೊರಗಡೆ ಮನುಷ್ಯನ ಎತ್ತರದ ಕಗ್ಗಲ್ಲು ಇರುತ್ತದೆ. ಇದರ ಸುತ್ತ ಮರದ ಕಟಕಟೆಯಿರುತ್ತದೆ. ಈ ಕಟಕಟೆಯ ಮೇಲೆ ಅನೇಕ ದೀಪಗಳನ್ನಿಟ್ಟು ಅಲಂಕರಿಸುತ್ತಾರೆ. ಸುತ್ತಲೂ ರೇಶ್ಮೆಯ ಪರದೆಯನ್ನು ಹಾಕುತ್ತಾರೆ. ಹೊರಗಡೆ ಯವರಾರಿಗೂ ಒಳಗೆ ನಡೆಯುವುದು ಕಾಣುವುದಿಲ್ಲ. ಮೇಲೆ ಹೇಳಿದ ಶಿಲೆಯ
ಮೇಲೆ ಮನುಷ್ಯನ ಅರ್ಧದಷ್ಟು ಎತ್ತರದ ಇನ್ನೊಂದು ಶಿಲೆ ಇರುತ್ತದೆ. ಈ ಶಿಲೆಯ ಮಧ್ಯೆ ಒಂದು ಕುಳಿಯಿರುತ್ತದೆ. ಈ ಕುಳಿಗೆ ಚೂಪಾದ ಕಡ್ಡಿಯನ್ನು ಸಿಕ್ಕಿಸಿರುತ್ತಾರೆ. ಕನೈಯ ತಾಯಿಯು ತನ್ನ ಮಗಳನ್ನು ಹತ್ತಿರದ ಸಂಬಂಧಿಗಳಾದ ಸ್ತ್ರೀಯರನ್ನು ಕಟಕಟೆಯೊಳಗೆ ಕರೆದುಕೊಂಡು ಹೋಗುತ್ತಾಳೆ. ಅಲ್ಲಿ ವಿಶೇಷ ಪೂಜೆ ಪುರಸ್ಕಾರಗಳು ನಡೆಯುತ್ತವೆ. ಆದರೆ ಅವು ಹೊರಗಡೆಯವರಿಗೆ ಗೊತ್ತಾಗುವುದಿಲ್ಲ. ಅಂತೂ ವಿಧಿಗಳು ಮುಗಿದ ಮೇಲೆ ಕನೈಯು ಅಲ್ಲಿ ಸಿಕ್ಕಿಸಿರುವ ಕಡ್ಡಿಯ ಸಹಾಯದಿಂದ ಕನ್ಯತ್ವವನ್ನು ನೀಗಿ ಆ ಕಲ್ಲುಗಳ ಮೇಲೆ ರಕ್ತವನ್ನು ಚೆಲ್ಲುತ್ತಾಳೆ (ಪುಟ 45).

ಡೊಮಿಂಗೋ ಪ್ಯಾಸ್ ಪೋರ್ಚುಗಲ್ ದೇಶದವನು. ಕ್ರಿ.ಶ. 1520ರಲ್ಲಿ ವಿಜಯನಗರಕ್ಕೆ ಬಂದಿದ್ದನು, ಕೃಷ್ಣದೇವರಾಯನ ವೈಭವದ ಆಳ್ವಿಕೆಯ ಕಾಲದ ವರ್ಣನೆಗಳನ್ನು ತನ್ನ ಕೃತಿಯಲ್ಲಿ ಪ್ರಕಟಿಸಿದ್ದಾನೆ. ಇಲ್ಲಿಯ ರಾಜರ ಇತಿಹಾಸ ವನ್ನು ಸಾಮ್ರಾಜ್ಯದ ವರ್ಣನೆ ಸಾಮಾಜಿಕ ಪರಿಸ್ಥಿತಿಗಳನ್ನು ಈ ಕೃತಿಯಲ್ಲಿ ದಾಖಲಿಸಿದ್ದಾನೆ.

"ನವರಾತ್ರಿಯ ಉತ್ಸವದ ಸಮಯದಲ್ಲಿ ರಾಜನು ಮಂಟಪದಲ್ಲಿ ಕುಳಿತ ಕೂಡಲೇ ದಳವಾಯಿಗಳು, ಸಾಮಂತರು, ದಳಪತಿಗಳು ರಾಜನಿಗೆ ವಂದನೆ ಸಲ್ಲಿಸುತ್ತಾರೆ. ಸೈನಿಕರು ತಮ್ಮ ಸ್ಥಾನದಲ್ಲಿ ನಿಂತ ಕೂಡಲೇ ಸ್ತ್ರೀಯರು ನರ್ತಿಸಲಾರಂಭಿಸುವರು. ಮತ್ತು ಅವರಲ್ಲಿ ಕೆಲವರು ಪ್ರವೇಶ ದ್ವಾರದಲ್ಲಿರುವ ವರ್ತುಲಾಕಾರದ ದ್ವಾರ ಮಂಟಪಗಳಲ್ಲಿ ನಿಂತುಕೊಳ್ಳುತ್ತಾರೆ. ಈ ಸ್ತ್ರೀಯರು ತಮ್ಮ ದೇಹಗಳ ಮೇಲೆ ಧರಿಸಿದ ವಿಪುಲ ಸಂಪತ್ತನ್ನು ಯಥೋಚಿತವಾಗಿ ನಿಮಗಾರು ವರ್ಣಿಸಬಲ್ಲರು? ಅಷ್ಟೊಂದು ವಜ್ರ, ಮಾಣಿಕ್ಯ, ಮುತ್ತುಗಳಿಂದೊಡಗೂಡಿನ ಬಂಗಾರದ ಆಭರಣಗಳು, ತೋಳುಗಳು ಹಾಗೂ ರಟ್ಟೆಗಳಲ್ಲಿಯೂ ಕಡಗ ಗಳೂ, ಕೆಳಗೆ ನಡುಪಟ್ಟಿಗಳು, ಕಾಲುಗಳಲ್ಲಿ ಕಾಲ್ಕಡಗಗಳು ಅತ್ಯಂತ ಬೆಲೆಬಾಳುವವು ಗಳಾಗಿರುತ್ತದೆ. ಅರ್ಥಾತ್ ಇಂತಹ ವೃತ್ತಿಯ ಸ್ತ್ರೀಯರಿಗೆ ಇಷ್ಟು ಐಶ್ವರ್ಯ ಹೇಗೆ ಬಂತೆಂಬ ಬಗೆಗೆ ಆಶ್ಚರ್ಯ ಉಂಟಾಗುತ್ತದೆ. ಆದರೆ ಅವರಲ್ಲಿ ತಮಗೆ ಕೊಡಲಾದ ವಿಸ್ತಾರವಾದ ಭೂಮಿ, ಹೊಲಗಳುಳ್ಳ, ಎಷ್ಟೊಂದು ಸೇವಕಿಯರುಳ್ಳ ಮತ್ತು ಎಣಿಸಲಾಗದಷ್ಟು ವಸ್ತುಗಳುಳ್ಳವರೂ ಇದ್ದಾರೆ. ಒಂದು ನೂರು ಸಾವಿರ ಪಣಗಳನ್ನೂ (ಸುವರ್ಣ ನಾಣ್ಯ) ಪಡೆದಿರುವಳೆಂದು ಹೇಳಲಾಗುವ ಸ್ತ್ರೀಯೊಬ್ಬಳು ಈ ನಗರದಲ್ಲಿದ್ದಾಳೆ ಮತ್ತು ಅವರನ್ನು ನೋಡಿದರೆ ಮೇಲಿಂದ ನಾನಿದನ್ನು ನಂಬುತ್ತೇನೆ (ಪುಟ 80).

ಕ್ರಿ.ಶ. 1351ರಲ್ಲಿ ಭಾರತಕ್ಕೆ ಭೇಟಿ ನೀಡಿದ ಅರೇಬಿಯಾದ ಇಬ್ಬರು ಪ್ರವಾಸಿಗರು ಭಾರತದ ವೇಶ್ಯೆಯರನ್ನು ದೇವದಾಸಿಯರೆಂದು ಕರೆದಿದ್ದಾರೆ. "ಒಬ್ಬ ಮಹಿಳೆ ಮಕ್ಕಳಾಗುವಂತೆ ಹರಕೆ ಹೊತ್ತುಕೊಂಡು ಸುಂದರವಾದ ಹೆಣ್ಣುಮಗುವನ್ನೇ ಹೆತ್ತರೆ ಆ ಮಗುವನ್ನು 'ಬೋಡ' ಎನ್ನುವ ದೇವರ ಮೂರ್ತಿಯಿರುವ ಸ್ಥಳದಲ್ಲಿ ಬಿಟ್ಟು ಬರಲಾಗುತ್ತಿತ್ತು. ಆ ಹೆಣ್ಣುಮಗು ದೊಡ್ಡವಳಾದ ನಂತರ ಆ ಊರಿನ ಸಾರ್ವಜನಿಕ ಸ್ಥಳದಲ್ಲಿ ಒಂದು ಮನೆ ಮಾಡಿಕೊಂಡು ವಾಸಿಸುತ್ತಿದ್ದಳು. ಮನೆಯ ಬಾಗಿಲಿಗೆ ಒಂದು ಪರದೆ ಹಾಕಿಕೊಂಡು ಹಾದಿಯಲ್ಲಿ ಹೋಗುವ ಬರುವ ಗಂಡಸರನ್ನು ಆಹ್ವಾನಿಸುವ ರೀತಿಯಲ್ಲಿ ವರ್ತಿಸುತ್ತಿದ್ದಳು. ಅವಳ ಕರೆಗೆ ಓಗೊಟ್ಟ ಗಂಡಸು ಹಿಂದೂವಾಗಿರಲಿ ಅಥವಾ ಇನ್ನಾವುದೇ ಪಂಥದವನಾಗಿರಲಿ ಆಕೆ ಆತನೊಂದಿಗೆ ನಿರ್ದಿಷ್ಟಪಡಿಸಿದ ಬೆಲೆಗೆ ದೇಹಸುಖವನ್ನು ಹಂಚಿಕೊಳ್ಳುತ್ತಿದ್ದಳು. ಹಾಗೆಯೇ ದೇಹ ಹಂಚಿಕೊಂಡು ಸಂಪಾದಿಸಿದ ಒಟ್ಟು ಹಣ ಅಥವಾ ಸಂಪತ್ತನ್ನು ಆಕೆ ದೇವಾಲಯದ ಬೋಡ ದೇವರ ಮೂರ್ತಿಯ ಪೂಜಾರಿಗಳಿಗೆ ನೀಡುತ್ತಿದ್ದಳು. ಆಕೆ ಗಳಿಸಿದ ದುಡ್ಡಿನಲ್ಲಿಯೇ ದೇವಾಲಯದ ಪುನರುಜ್ಜಿವನ ಅಥವಾ ಇನ್ನಿತರ ಖರ್ಚುಗಳು ನೀಗುತ್ತಿದ್ದವು" ಎಂಬುದಾಗಿ ಅರರಾಸಿವೋದ್ ಲಿಂದ ಎಡ್‌ಲಾಸಿನ್ ಈ ಕೃತಿಯಲ್ಲಿ ಹೇಳಿದ್ದಾರೆ (ಪುಟ 43 ದೇವದಾಸಿ ಮತ್ತು ಬೆತ್ತಲೆ ಸೇವೆ).

ಅನಂತರದ ಕಾಲದಲ್ಲಿ ಮುಸ್ಲಿಮ್ ಧರ್ಮದ ಕೆಲವು ಪಂಥಗಳು ಕೂಡ ತಮ್ಮ ದೇವಾಲಯಗಳಿಗೆ ಹೆಣ್ಣುಮಕ್ಕಳನ್ನು ಮೀಸಲು ಬಿಡುವ ಪದ್ಧತಿಯನ್ನು ಆರಂಭಿಸಿದ್ದು ಕಂಡುಬರುತ್ತದೆ. ಉತ್ತರ ಪ್ರದೇಶದ ಲಖನೋದಲ್ಲಿ ಅಂತಹ ಕನೈಯರನ್ನು ಅಚೂತಿಗಳು ಎಂದು ಕರೆಯುತ್ತಾರೆ. ಈ ನಗರದಲ್ಲಿ ಈಗಲೂ ಅಚೂತಿ ಗಲ್ಲಿ ಎಂಬ ಹೆಸರಿನ ಗಲ್ಲಿ ಇದೆ. ಹಿಂದೆ ಈ ಸಂಪ್ರದಾಯವಿದ್ದುದಕ್ಕೆ ಇದು ಸಾಕ್ಷಿಯಾಗಿದೆ.

ಕ್ರಿ.ಶ. 12ನೇ ಶತಮಾನದಲ್ಲಿ ಭಾರತಕ್ಕೆ ಬಂದ ಚೀನಿ ಯಾತ್ರಿಕ ಚನ್ ಚು-ಕ್ವ ಇವನು ತನ್ನ ಕೃತಿ ಚು-ಫಾನೆಚಿ ಇದರಲ್ಲಿ ಮಧ್ಯಕಾಲೀನ ಭಾರತದ ದೇವಾಲಯಗಳಲ್ಲಿದ್ದ ನರ್ತಕಿಯರ ಬಗ್ಗೆ ದಾಖಲಿಸಿದ್ದಾನೆ. ಗುಜರಾತಿನ ಬೌದ್ಧ ಚೈತ್ಯ ಮತ್ತು ವಿಹಾರಗಳಲ್ಲಿದ್ದ ನರ್ತಕಿಯರ ಕುರಿತು ಬರೆದಿದ್ದಾನೆ. "ಅಲ್ಲಿನ ನಾಲ್ಕು ಸಾವಿರ ಬೌದ್ಧ ದೇವಾಲಯಗಳ ಕಟ್ಟಡಗಳಲ್ಲಿ 20 ಸಾವಿರಕ್ಕಿಂತಲೂ ಹೆಚ್ಚು ನರ್ತಕಿಯರು ವಾಸವಾಗಿದ್ದಾರೆ. ಅವರು ದೇವರಿಗೆ ಹೂವನ್ನು ಅರ್ಪಿಸುವಾಗ ದಿನಕ್ಕೆ ಎರಡು ಬಾರಿ ಹಾಡುತ್ತಾರೆ. ಕಾಂಬೋಡಿಯಾದಲ್ಲಿಯೂ ಇದೇ ಪದ್ಧತಿಗಳಿದ್ದವು. ಅಲ್ಲಿ ಅವರನ್ನು ಅನಾನ್ ಎನ್ನುತ್ತಾರೆ" ಎಂದು ಬರೆದಿದ್ದಾನೆ.

ಮಹಾನ್ ಪ್ರವಾಸಿ ಮಾರ್ಕೊಪೋಲೋ ಕ್ರಿ.ಶ. 1290ರಲ್ಲಿ ಭಾರತಕ್ಕೆ ಬಂದಾಗ ತಂಜಾವೂರು ಪ್ರದೇಶದಲ್ಲಿದ್ದ ವೇಶ್ಯಯರ ಬಗ್ಗೆ ತನ್ನ ಕೃತಿಯಲ್ಲಿ ದಾಖಲಿಸಿದ್ದಾನೆ. "ಅವರು ಕೆಲವು ಭವ್ಯವಾದ ದೇವಾಲಯದ ಕಟ್ಟಡಗಳನ್ನು ಹೊಂದಿದ್ದರು. ಅಲ್ಲಿರುವ ದೇವರು ಮತ್ತು ಹೆಣ್ಣು ದೇವತೆಗಳಿಗೆ ಅನೇಕ ಚಿಕ್ಕ ವಯಸ್ಸಿನ ಹೆಣ್ಣುಮಕ್ಕಳು ಸಮರ್ಪಣೆಗೊಂಡಿದ್ದರು. ಇವರು ದೇವರಿಗೆ ನೈವೇದ್ಯವನ್ನು ತಯಾರಿಸಿ ತಂದು ದೇವರ ಮುಂದೆ ಇರಿಸುತ್ತಿದ್ದರು. ದೇವರು ಗಾಳಿಯ ರೂಪದಲ್ಲಿ ಬಂದು ಆಹಾರವನ್ನು ತಿನ್ನುತ್ತಾನೆ ಎಂಬ ನಂಬಿಕೆ ಇತ್ತು. ದೇವರು ತಿನ್ನುವವರೆಗೆ ಇವರು ಹಬ್ಬದ ಸಡಗರದಿಂದ ಗಾಯನ, ನರ್ತನ ಮಾಡುತ್ತಿದ್ದರು. ಅನೇಕ ಹೆಣ್ಣುಮಕ್ಕಳು ಈ ಹಬ್ಬಕ್ಕೆ ಆಗಮಿಸುತ್ತಿದ್ದರು. ದೇವರು ಹೆಣ್ಣು ದೇವತೆಯೊಂದಿಗೆ ಕೋಪಗೊಂಡಿರುತ್ತಾನೆ. ಅವರೊಂದಿಗೆ ಶಾಂತಿ ಏರ್ಪಡಬೇಕಾದರೆ ಈ ಹೆಂಗಸರು ದೇವಾಲಯದಲ್ಲಿ ಬತ್ತಲೆಯಾಗಿ ಬಂದು ಹಾಡಿ ನರ್ತಿಸಬೇಕೆಂದು ದೇವಸ್ಥಾನದ ಸನ್ಯಾಸಿಗಳು ಹೇಳುತ್ತಾರೆ" ಎಂದು ದಾಖಲಿಸಿದ್ದಾನೆ. ಇದು ಒಂದು ರೀತಿಯ ಬತ್ತಲೆ ಸೇವೆಯ ಮೂಲ ರೂಪವೆಂದು ಭಾವಿಸಬಹುದು.

ಕ್ರೈಸ್ತ ಧರ್ಮ ಪ್ರಚಾರಕನಾಗಿ ಬಂದ ಡುಬಾಯ್ಸ್ ಮೈಸೂರು ಮತ್ತು ಮದ್ರಾಸ್ ಪ್ರಾಂತ್ಯದಲ್ಲಿ ಕೆಲಸ ಮಾಡುತ್ತಿದ್ದನು. "ಇಲ್ಲಿನ ಪ್ರತಿಯೊಂದು ದೇವಾಲಯದಲ್ಲೂ ಹಾಡು ಮತ್ತು ನರ್ತನ ಸೇವೆ ಮಾಡುವ ದೇವದಾಸಿಯರಿದ್ದಾರೆ. ದೇವರುಗಳ ಚರಿತ್ರೆಯ ಕೆಲವು ಕಾಮ ಕ್ರೀಡೆಗಳನ್ನು ವರ್ಣಿಸುವ ಅಶ್ಲೀಲ ಹಾಡುಗಳನ್ನು ಹಾಡುತ್ತಿದ್ದರು. ಪವಿತ್ರ ದೇವಾಲಯಗಳು ವೇಶ್ಯಾವಾಟಿಕೆಗಳಾಗಿ ಪರಿವರ್ತನೆ ಗೊಂಡಿರುವ ದೃಶ್ಯವನ್ನು ಸಾಮಾನ್ಯವಾಗಿ ಕಾಣಬಹುದು. ತಮ್ಮ ಗಂಡಂದಿರ ಒಪ್ಪಿಗೆಯೊಂದಿಗೆ ಗರ್ಭಿಣಿ ಸ್ತ್ರೀಯರು ಈ ದಂಧೆಯಲ್ಲಿ ನಿರತರಾಗಿರುವರು" ಎಂದು ಬರೆದಿದ್ದಾನೆ. ಭಾರತದ ಮಹಿಳೆಯರಿಗೆ ಓದು ಬರಹ ನಿಷಿದ್ಧವಾಗಿದ್ದರೂ ಈ ದೇವದಾಸಿ ವೃತ್ತಿಯಲ್ಲಿದ್ದ ಹೆಂಗಸರಿಗೆ ಅದು ಕರಗತವಾಗಿತ್ತು ಎಂದೂ ಹೇಳುತ್ತಾನೆ.

ಇದೇ ಕಾಲದಲ್ಲಿ ದಕ್ಷಿಣ ಭಾರತ ಪ್ರವಾಸ ಮಾಡುತ್ತಾ ಕರಾವಳಿಯ ತುಳುನಾಡಿಗೆ ಬಂದ ಹ್ಯಾಮಿಲ್ಟನ್ ಎಂಬ ಪ್ರವಾಸಿಯೂ ಮೊಝಾರ್ ಎಂಬ ಹೆಸರಿನ ಜಾತಿಗೆ ಮೂಲವಾದ ಒಂದು ಪದ್ಧತಿಯನ್ನು ಹೇಳುತ್ತಾನೆ. ದೇವಸ್ಥಾನದ ಚಾಕರಿಗೆ ಇರುವ ಈ ಸ್ತ್ರೀಯರಲ್ಲಿ ಬ್ರಾಹ್ಮಣ ಜಾತಿಯವರೂ ಇದ್ದಾರೆ. ಅವಳು ದೇವರ ಪ್ರತಿಮೆಗೆ ಗಾಳಿ ಬೀಸಬೇಕು. ಅವಳ ಪ್ರಣಯವು ಬ್ರಾಹ್ಮಣರಿಗೆ ಸೀಮಿತವಾಗಿರಬೇಕು. ದೇವಾಲಯದಲ್ಲಿ ಉಳಿಯಲು ಬಯಸದ ಬ್ರಾಹ್ಮಣ ಮಹಿಳೆ ಮತ್ತು ಕೆಳಜಾತಿಗೆ ಸೇರಿದ ಮಹಿಳೆಯರು ತಾವು ಇಷ್ಟಪಡುವ ಉತ್ತಮ ಮನೆತನದ ಯಾವುದೇ ಒಬ್ಬ ವ್ಯಕ್ತಿಯೊಂದಿಗೆ ಅವರು ಇಷ್ಟಪಟ್ಟರೆ ಸೇರಬಹುದು. ಆದರೆ ಅವರು ಪ್ರತೀ ವರ್ಷವೂ ತಮ್ಮ ಆದಾಯದ ಹದಿನಾರನೇಯ ಒಂದು ಭಾಗದಿಂದ ಅರ್ಧವನ್ನು ದೇವಾಲಯಕ್ಕೆ ನೀಡಬೇಕು" ಎಂದು ಹೇಳಿದ್ದಾನೆ. ಬ್ರಾಹ್ಮಣ ದೇವದಾಸಿಯರು ಕೆಲವು ವಿಶೇಷ ಸವಲತ್ತುಗಳನ್ನು ಹೊಂದಿದ್ದರು ಎಂದು ದಾಖಲೆಗಳೊಂದಿಗೆ ವಿವರಿಸಿದ್ದಾನೆ.

ಜಾನ್ ಶ್ರಾಟ್ ಎಂಬ ವೈದ್ಯನು ಅಂಥ್ರೊಪೊಲಾಜಿಕಲ್ ಸೊಸೈಟಿ ಆಫ್ ಇಂಡಿಯಾದಲ್ಲಿ ದಕ್ಷಿಣ ಭಾರತದ ನರ್ತಕಿಯರು ಎಂಬ ಪ್ರಬಂಧವನ್ನು ಮಂಡಿಸಿದ್ದನು. ಅದರಲ್ಲಿ "ಹುಡುಗಿ ಋತುಮತಿಯಾಗುತ್ತಿದ್ದ ಹಾಗೆ ದೇವಸ್ಥಾನದ ಬ್ರಾಹ್ಮಣರಿಂದ ಅವಳ ಕನ್ಯತ್ವವನ್ನು ಒಡೆಯದಿದ್ದರೆ ಆ ಗೌರವವನ್ನು ಅಪೇಕ್ಷಿಸುವ ಹೊರಗಿನವನಿಗೆ ಅವನ ಶ್ರೀಮಂತಿಕೆಗೆ ಅನುಸಾರವಾಗಿ ಅವಳನ್ನು ಮಾರಲಾಗುತ್ತಿತ್ತು. ಈ ಕ್ರಿಯೆಗೆ "ಅಬ್ಬ‌ರ್" ಎಂದು ಹೆಸರು. ಅನಂತರ ಅವಳು ವೇಶ್ಯಾ ವೃತ್ತಿಯನ್ನು ಮುಂದುವರಿಸುತ್ತಿದ್ದಳು. ದೇವದಾಸಿಯರ ಸೇವೆಗಳು ಶೂದ್ರ ಮತ್ತು ಅಸ್ಪೃಶ್ಯ ಪುರುಷರಿಗೆ ಇರಲಿಲ್ಲ ಎಂದೂ ಹೇಳುತ್ತಾನೆ.

ವಾರಾಂಗನೆಯರು

[ಸಂಪಾದಿಸಿ]

ವಾರಾಂಗನೆಯರು


ವಿಜಯನಗರದ ಧಾರ್ಮಿಕ ಹಾಗೂ ಮನರಂಜನಾ ಕಲಾಪಗಳೆರಡರಲ್ಲೂ ವೇಶ್ಯೆಯರಿಗೆ ಪ್ರಮುಖ ಪಾತ್ರವಿತ್ತು.ತಮ್ಮ ಪ್ರದೇಶದ ಅತ್ಯಂತ ಸುಂದರಾಂಗಿಯರನ್ನು ಕರೆತಂದು ಅವರ ಬೆಡಗು ಬಿನ್ನಾಣಗಳನ್ನು ಉತ್ಸವ ಕಣದಲ್ಲಿ ಪ್ರದರ್ಶಿಸಲು ನಾಯಕರು ಪೈಪೋಟಿ ನಡೆಸುತ್ತಿದ್ದರೆಂದು ಚರಿತ್ರೆಯಿಂದ ತಿಳಿದು ಬರುತ್ತದೆ. ಅರಸನ ಸಮ್ಮುಖದಲ್ಲಿ ಕುಳಿತು ವೀಳ್ಯ ಜಗಿಯುವ ದಾರ್ಷ್ಟ್ಯ ಯಾವ ಸಾಮಂತನಿಗಿಲ್ಲದಿದ್ದರೂ ಇವರಿಗಿತ್ತು ಎಂದು ಪ್ಯಾಸ್ ತಿಳಿಸಿರುವನು. ಸಂತಾನವಿಲ್ಲದ ಒಬ್ಬ ವಾರಾಂಗನೆಯ ಮರಣ ಸನ್ನಿಹಿತವಾದಾಗ ತನ್ನ ಸಾವಿನ ಬಳಿಕ ಅರಸನಿಗೆ 70 ಸಾವಿರ ಪಾರ್ದೊ (ಚಿನ್ನದ ನಾಣ್ಯಗಳನ್ನು ಬಿಟ್ಟುಕೊಟ್ಟದ್ದನ್ನು ಅವನೇ ಸ್ವತಃ ಕಂಡಿದ್ದನು. ಪುರೋಹಿತರು ಪೂಜೆ ಮುಗಿಸಿದೊಡನೆ ಈ ವಾರಾಂಗನೆ ಯರು ಅರಸನ ಮುಂದೆ ನಿಂತು ನೃತ್ಯ ಮಾಡುತ್ತಿದ್ದುದ್ದನ್ನು, ಸಂಜೆಯ ಕಪ್ಪ ಕಾಣಿಕೆಯ ಕಾರ್ಯಕ್ರಮ ಮುಗಿಸಿದೊಡನೆ ವಿಜಯ ಸೌಧದ ಮುಂದೆ ನಿಂತು ಸಾಮೂಹಿಕವಾಗಿ ನರ್ತಿಸುತ್ತಿದ್ದುದ್ದನ್ನು ಪ್ರವಾಸಿ ನ್ಯೂನಿಜ್ ಪ್ರತ್ಯಕ್ಷ ಕಂಡಿದ್ದನು.

ವೆನಿಸ್ ದೇಶದ ಪ್ರವಾಸಿ ನಿಕೊಲೊ ಕೊಂತಿಯಾದರೋ ಈ ಹದಿಹರೆಯದ ವಾರಾಂಗನೆಯರ ಬೆಡಗಿಗೆ ಬೆವತು, ಬಾಯಾರಿ, ಅವರ ಸೌಂದರ್ಯವನ್ನು ಆತುರದಲ್ಲಿ ಆಸ್ವಾದಿಸಲು ಪ್ರಯತ್ನಿಸಿದಂತೆ ಕಾಣುತ್ತದೆ. "ಚಂದ್ರನಂತಹ ಕಪೋಲ ಮತ್ತು ವಸಂತದ ಅಲರನ್ನು ಉಪೇಕ್ಷಿಸುವಂತಹ ಮುಖದ ಈ ಸಿಂಗಾರಿಗಳ ಮೈಮಾಟವು ಶುಭೋಜ್ವಲ ಗುಲಾಬಿ ಪುಷ್ಪದಂತೆ ಸಮ್ಮೋಹಿತವಾಗಿತ್ತು" ಎಂದು ಅವನು ಹೊಗಳಿದ್ದಾನೆ. ವಿಜಯನಗರದ ಪಟ್ಟಣದೊಡನೆ ಗಹನವಾಗಿ ಗುರುತಿಸಿಕೊಂಡ ಕವಿಗಳಲ್ಲಿ ಪ್ರಮುಖನಾದವನು ಪಂಪಾ ಸ್ಥಾನ ವರ್ಣನಂ ಕೃತಿಯನ್ನು ಬರೆದ ಚಂದ್ರಶೇಖರ. ಇವನು ವಾರಾಂಗನೆಯರ ಕಲಾಕಲಾಪಗಳನ್ನು ವಿಶೇಷವಾಗಿ ನೃತ್ಯಗಳನ್ನು ಸಮಗ್ರವಾಗಿ ಚಿತ್ರಿಸಿರುವನು. ಮಾರ್ಗ, ಪ್ರದೇಶ, ದೇಸಿ ಎಂಬ ಮೂರು ನಾಟ್ಯ ಪ್ರಭೇದಗಳನ್ನು ಸಾಂಪ್ರದಾಯಿಕ ಮತ್ತು ಶಾಸ್ತ್ರ ನಿಯಂತ್ರಿಸಿದ ನೃತ್ಯವು ಸಂಪನ್ನಗೊಂಡ ರೀತಿಯನ್ನು ವರ್ಣಿಸಿರುವನು. ಆಂಗಿಕಾ, ಆಹಾರ್ಯ, ಸಾತ್ವಿಕ ಮತ್ತು ವಾಚಿಕಾಭಿನಯವನ್ನು ಸ್ಥಾಯೀ ಮತ್ತು ಸಂವಾದಿ ರಸಧಾರೆಯನ್ನು, ಕರಣ, ಸ್ಥಾನಕ, ಚಾರಿ ಬಂಧಗಳನ್ನು ವೈಜ್ಞಾನಿಕವಾಗಿಯೂ, ಕಲಾತ್ಮಕವಾಗಿಯೂ ನಿರೂಪಿಸುವುದೇ ಈ ಶಾಖೆಯ ನೃತ್ಯಗಾರ್ತಿಯ ಹಿರಿಮೆ ಎಂದು ಹೇಳುತ್ತಾನೆ. ನೃತ್ಯದ ಬೇರೆ ಬೇರೆ ಪ್ರಕಾರಗಳಲ್ಲಿ ಪರಿಣತರಾದ ಕಲಾವಿದೆಯರ ನೈಪುಣ್ಯವನ್ನು ವರ್ಣಿಸುತ್ತಾನೆ. ಆ ಕಾಲದಲ್ಲಿ ವಾರಾಂಗನೆಯರು ನೃತ್ಯ ಮತ್ತು ಸಂಗೀತದಲ್ಲಿ ಎಂತಹ ಅದ್ಭುತ ಸಾಧನೆ ಮಾಡಿದ್ದರೆಂದು ಇದರಿಂದ ತಿಳಿಯುತ್ತದೆ.

ಸಾಹಿತ್ಯದಲ್ಲಿ ವೇಶ್ಯಾವಾಟಿಕೆ

ಕನ್ನಡ ಸಾಹಿತಿಗಳೂ ತಮ್ಮ ಕೃತಿಗಳಲ್ಲಿ ವೇಶ್ಯಾ ಸಮಸ್ಯೆಯನ್ನೇ ವಸ್ತುವಾಗಿರಿಸಿಕೊಂಡು ಕೃತಿ ರಚಿಸಿದ್ದಾರೆ. ಕಳೆದ ಶತಮಾನದ ಶ್ರೇಷ್ಠ ಕಾದಂಬರಿಕಾರರಾದ ಅ.ನ.ಕೃಷ್ಣರಾಯರು ಸಂಜೆ ಗತ್ತಲು, ನಗ್ನ ಸತ್ಯ, ಶನಿ ಸಂತಾನ ಮುಂತಾದ ಕಾದಂಬರಿಗಳನ್ನು ಈ ಸಮಸ್ಯೆಯ ಬಗ್ಗೆ ರಚಿಸಿದರು. ಆಗ ಓದುಗರಿಂದ ಸಾಕಷ್ಟು ವಿರೋಧ, ನಿಂದೆಗಳು ಪ್ರಕಟವಾಗಿದ್ದವು. ಇದಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಅವರು ಸಾಹಿತ್ಯ ಮತ್ತು ಕಾಮಪ್ರಚೋದನೆ ಎಂಬ ಕೃತಿಯನ್ನೇ ರಚಿಸಿದರು (1952). ತ.ರಾ.ಸುಬ್ಬರಾಯರು ಮಸಣದ ಹೂವು ಎಂಬ ಕಾದಂಬರಿಯನ್ನು ರಚಿಸಿದರು. ಬಸವರಾಜ ಕಟ್ಟಿಮನಿಯವರು ಬೀದಿಗೆ ಬಿದ್ದವಳು ಕಾದಂಬರಿಯಲ್ಲಿ ಈ ಸಮಸ್ಯೆಯನ್ನು ವಿವರಿಸಿದ್ದರು. ಎಂ.ಕೆ. ಇಂದಿರಾ ಅವರು ಬರೆದ ಗೆಜ್ಜೆಪೂಜೆ ಕಾದಂಬರಿಯು ದೇವದಾಸಿ ಸಮಸ್ಯೆಗೆ ಬಲಿಯಾಗುವ ಹೆಣ್ಣಿನ ಮಾನಸಿಕ ವೇದನೆಯನ್ನು ಹೃದಯಂಗಮವಾಗಿ ಚಿತ್ರಿಸಿದ ಕೃತಿಯಾಗಿತ್ತು. ಹಾಗೆಯೇ ಗೀತಾ ನಾಗಭೂಷಣರು ಬರೆದ ಮಾಪುರದ ತಾಯಿ ಮುಂತಾದ ಅನೇಕ ಕಾದಂಬರಿಗಳಲ್ಲಿ ಈ ಸಮಸ್ಯೆಯ ಚಿತ್ರಣವಿದೆ. ಡಾ. ಶಿವರಾಮ ಕಾರಂತರು ಕುಂದಾಪುರದ ಬಸರೂರಿನ ವೇಶ್ಯೆಯರ ಸಮಸ್ಯೆಗಳನ್ನು ಪರಿಹರಿಸುವ ಪ್ರಯತ್ನ ಮಾಡಿದವರು. ಮಹಾತ್ಮಾ ಗಾಂಧೀಜಿಯೊಂದಿಗೂ ಈ ಸಮಸ್ಯೆಗೆ ಪರಿಹಾರ ಕೇಳಿ ಪತ್ರ ಬರೆದಿದ್ದರು. ಗಾಂಧೀಜಿಯು ಈ ವೇಶ್ಯೆಯರು ಆಜನ್ಮ ಬ್ರಹ್ಮಚಾರಿಣಿಯರಾಗಿ ಬಾಳುವುದೇ ಪರಿಹಾರವೆಂದು ಸೂಚಿಸಿದ್ದರು. ವೇಶ್ಯಯೆಂಬ ಪಟ್ಟ ಕಟ್ಟಿಸಿಕೊಂಡ ಹೆಣ್ಣು ಸಮಾಜದಲ್ಲಿ ಅವರ ಸೂಚನೆಯಂತೆ ಬಾಳುವುದು ಸಾಧ್ಯವಿಲ್ಲ. ಅದು ಪ್ರಯೋಗಾತ್ಮಕವಾಗಿ ವಿಫಲವಾಗುತ್ತದೆ ಮತ್ತು ಅಮಾನವೀಯವೂ ಆಗುತ್ತದೆ ಎಂಬುದನ್ನು ಗಾಂಧೀಜಿಗೆ ಅರ್ಥ ಮಾಡಿಸುವುದು ವ್ಯರ್ಥ ಪ್ರಯತ್ನವೆಂದು ತಿಳಿದು ಅವರ ಸಲಹೆಯನ್ನು ತಿರಸ್ಕರಿಸಿದರು. ಆ ಬಳಿಕ ಅವರು ಬರೆದ 'ಮೈ ಮನಗಳ ಸುಳಿ'ಯಲ್ಲಿ ಎಂಬ ಕಾದಂಬರಿಯು ಒಂದು ಉತ್ಕೃಷ್ಟ ಕೃತಿಯಾಗಿ ಮೂಡಿ ಬಂತು. ಹನುಮಂತ ಹಾಲಿಗೇರಿಯವರು 2011ರಲ್ಲಿ ಕೆಂಗುಲಾಬಿ ಎಂಬ ಕಾದಂಬರಿ ಪ್ರಕಟಿಸಿದರು. ಇದರಲ್ಲಿ ಈ ಸಮಸ್ಯೆಯನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಕಳೆದ ಶತಮಾನದ ಸಾಹಿತಿಗಳಲ್ಲಿ ಅನೇಕರು ಈ ಸಮಸ್ಯೆಯನ್ನು ವಸ್ತುವಾಗಿಟ್ಟುಕೊಂಡು ಬಹಳಷ್ಟು ಕತೆಗಳನ್ನು ಬರೆದಿದ್ದಾರೆ. ಅದರಲ್ಲಿ ನಿರಂಜನರ 'ಕೊನೆಯ ಗಿರಾಕಿ' ಬಹಳ ಪ್ರಸಿದ್ಧವಾಗಿದೆ.

ಎಲ್ಲಾ ಭಾಷೆಯ ಸಾಹಿತ್ಯದಲ್ಲೂ ವೇಶ್ಯೆಯರ ಜೀವನವನ್ನು ವಸ್ತುವನ್ನಾಗಿಸಿ ಕೊಂಡು ರಚಿಸಲ್ಪಟ್ಟು ಕತೆ, ಕಾವ್ಯ, ಕಾದಂಬರಿಗಳಿವೆ. ವಸಂತ ಪ್ರಕಾಶನದಿಂದ 2019ರಲ್ಲಿ ಪ್ರಕಟವಾದ 'ಬರ್ತೀಯಾ ಎಷ್ಟು' ಭಾರತೀಯ ಸೂಳೆಲೋಕದ ಕತೆಗಳು ಬಹಳ ವಿಶಿಷ್ಟವಾದ ಒಂದು ಸಂಕಲನವಾಗಿದೆ. ರುಚಿರಾ ಗುಪ್ತ ಅವರು ಇಂಗ್ಲಿಷಿನಲ್ಲಿ ಸಂಪಾದಿಸಿದ ಈ ಸಂಕಲನವನ್ನು ಸುಕನ್ಯಾ ಕನ್ಯಾರಳ್ಳಿಯವರು ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ.

ತಮ್ಮ ದೇಶದ ಪ್ರಸಿದ್ಧ ಲೇಖಕ ಲೇಖಕಿಯರು ಬೇರೆ ಬೇರೆ ಭಾಷೆಯಲ್ಲಿ ಬರೆದ 21 ಕತೆಗಳು ಈ ಸಂಕಲನದಲ್ಲಿವೆ. ಕನ್ನಡದ ಶ್ರೇಷ್ಟ ಸಾಹಿತಿ ನಿರಂಜನರು ಬರೆದ ಕೊನೆಯ ಗಿರಾಕಿಯು ಈ ಸಂಕಲನದಲ್ಲಿದೆ. ಕಮಲಾದಾಸ್, ಬಾಬೂರಾವ್‌ ಬಗೂಲ್, ವಿಭೂತಿ ಭೂಷಣ ಬಂದೋಪಾಧ್ಯಾಯ, ಸಾದತ್ ಹಸನ್ ಮಂಟೊ, ಕಮಲೇಶ್ವರ್, ಪ್ರೇಮ್‌ಚಂದ್, ಖುರಾತುಲೇನ್ ಹೈದರ್, ಇಂದಿರಾ ಗೋಸ್ವಾಮಿ, ಪುದು ಮೈ ಪಿತ್ತನ್, ಸಿದ್ದೀಕ್ ಆಲಂ, ನಬೇಂದು ಘೋಷ್, ಖುರ್ಶಿದ್ ಅಕ್ರಂ, ಮನೀಶ್ ಕುಲಶ್ರೇಷ್ಠ, ಕ್ರಿಷನ್ ಚಂದರ್, ಸುಬೋದ್ ಘೋಷ್, ಇಸ್ಮಾತ್ ಚುಗ್ತಾಯಿ, ನಯನ ಅದ್ಧಾರಕರ್, ಮೆದುರಿಮಾ ಸಿನ್ಹಾ, ಜೆ.ಪಿ.ದಾಸ್, ಅಮೃತಾ ಪ್ರೀತಂ ಮುಂತಾದವರು ಬರೆದ ಈ ಕತೆಗಳಲ್ಲಿ ಬೇರೆ ಬೇರೆ ಭಾಷೆಯ ಕತೆಗಾರರು ಈ ವೇಶ್ಯಾ ಸಮಸ್ಯೆಯನ್ನು ಪ್ರಕಟ ಪಡಿಸಿದ ರೀತಿಯೇ ಅನನ್ಯ. ಒಂದೊಂದು ಕತೆಯೂ ಈ ಸಮಸ್ಯೆಯ ಆಳಕ್ಕಿಳಿದು ವ್ಯಕ್ತ ಪಡಿಸಿದ ರೀತಿಯೇ ಓದುಗರ ಕರುಳಲ್ಲಿ ಕತ್ತರಿಯಾಡಿಸಿದಂತಹ ಅನುಭವವನ್ನುಂಟು ಮಾಡುತ್ತದೆ. ಕತೆಗಳನ್ನು ಓದುತ್ತಾ ಹೋದಂತೆ ನಮ್ಮ ಮನಸ್ಸು ತತ್ತರಿಸುತ್ತದೆ. ಎರಡನೆಯ ಸಲ ಓದಿದಾಗ ನಮ್ಮ ಅರಿವು ವಿಸ್ತಾರವಾಗುತ್ತದೆ. ಜೀವ ತುಂಬುವ ಚೈತನ್ಯ ಶೀಲವಾದ ಹೆಣ್ಣು ಮಗಳು ಜೀವಂತ ಹೆಣವಾಗುವ, ತಮ್ಮನ್ನು ಕೊಂದು ಕೊಂಡು ಬದುಕುವ ರೀತಿಯೇ ನಮ್ಮ ಹೃದಯವನ್ನು ಆದ್ರ್ರಗೊಳಿಸುತ್ತದೆ. ಮುಂಬೈಯ ಕಾಮಾಟಿಪುರದೊಳಗಿನ ದಾರುಣ ಕತೆಯನ್ನು ಬಹಳ ಸೂಕ್ಷ್ಮವಾಗಿ ಚಿತ್ರಿಸಿದ ಸಹನಾ ವಿಜಯಕುಮಾರ್ ಅವರ 'ಅವಸಾನ' ಕಾದಂಬರಿಯು ಬಹಳ ವಿಶಿಷ್ಟವಾಗಿದೆ.

ವೇಶ್ಯಾ ಸೋದರಿಯರ ಕರುಣಕಥನವನ್ನು ಪ್ರತ್ಯಕ್ಷ ಕಂಡು ಬರೆದಿರುವ ಚೆನ್ನಣ್ಣ ವಾಲೀಕಾರರು ಬರೆದ ಘಟನೆ ಹೀಗಿದೆ. "ಮಹಾರಾಷ್ಟ್ರ ಕೊಲ್ಲಾಪುರದ ಲಕ್ಷ್ಮೀ ದೇವಸ್ಥಾನದ ಹಿಂಭಾಗದಲ್ಲಿ ರಾತ್ರಿ ಒಂಬತ್ತು ಗಂಟೆಯ ಬಳಿಕ ಕಂಡ ಘಟನೆಯನ್ನು ಹೀಗೆ ಹೇಳಿದ್ದಾರೆ. "ಛೋಡೋರೆ ಮಝ ಛೋಡೋರೆ, ದೋ ಹೈ ಬೋಲಕೆ ಲಾಕ್‌ಸ್ ಆಯೆತೋ ಕ್ಯಾಕರೂಂರೇ" ಎಂದು ಹೇಳುತ್ತಾ ಹತ್ತಾರು ಗಂಡಸರ ಮಧ್ಯೆ ಒಬ್ಬ ಹೆಣ್ಣು ಸಿಕ್ಕಿ ನರಳುತ್ತಿರುವುದು ಕೇಳಿಸಿತು. ಅಲ್ಲೇನು ನಡೆದಿದೆ ಎಂಬ ನಿಜ ಸಂಗತಿ ಹೊಳೆಯಿತು. ಆ ಗ್ಯಾಂಗಿನ ಕೈಯಲ್ಲಿ ನರಳುತ್ತಿರುವ ಹೆಣ್ಣನ್ನು ಬಿಡಿಸಬೇಕೆಂದು ಒಂದೇ ಸಮನೆ ಜೋರಾಗಿ ಪೋಲೀಸ್, ಪೋಲೀಸ್ ಎಂದು ಕೂಗುತ್ತಾ ಅವರು ಓಡಿದಾಗ ಅವರು ಆಕೆಯನ್ನು ಅಲ್ಲಿಯೇ ಬಿಟ್ಟು ಖಬರಿಲ್ಲದೆ ಓಡತೊಡಗಿದರು. ಅವರೆಲ್ಲರೂ ಓಡಿಹೋದ ಬಳಿಕ ನಾನು ಆಕೆಯ ಹತ್ತಿರ ಹೋದೆ, "ದೇವರು ಬಂದಂಗ ಬಂದರಿ ಬಾಯಿ ಸಾಬ. ಇಬ್ಬರಂತ ಹೇಳಿ ಕರಕೊಂಡು ಬಂದಾರಿ. ಈಗ ಹತ್ತು ಮಂದಿ ಮೂಲಾಗ್ಯಾರಿ." ಎಂದಾಕೆ ಹೇಳುತ್ತಿದ್ದಂತೆ "ಆಯಿತಮ್ಮ ಈಗ ನಿಮ್ಮ ಮನಿಗಿ ಬಿಟ್ಟು ಬರತೀನಿ ನಡೀರಿ, ಇಲಕರ ಮತ್ತು ಗೂಂಡಾಗಳು ನಿನಗ ಮೂಲಾಗತಾವ" ಎಂದು ಹೇಳಿ ಆಕೆಗೆ ಕರೆದುಕೊಂಡು ಆಕೆಯ ಕೇರಿ ಇರುವ ಕಡೆಗೆ ನಡೆದೆ.

ಆಕೆ ಮುಂದೆ ಮುಂದೆ ನಾನು ಹಿಂದೆ ಹಿಂದೆ. ಮೌನವಾಗಿ ಇಬ್ಬರೂ ಆ ರಾತ್ರಿಯಲ್ಲಿ ನಡೆದವು. ಒಂದು ಹಾಳು ಬಿದ್ದ ಮನೆಯಲ್ಲಿ ಮನೆ ಮಾಡಿಕೊಂಡು ಇದ್ದದ್ದು ಕಂಡು ನನ್ನ ಕರುಳು ಕಿತ್ತು ಬಂದವು. ಆಕೆಯ ತಾಯಿ ತಂದೆಗಳು ಆಕೆಯ ಅಳುವ ಮಕ್ಕಳನ್ನು ರಮಿಸುತ್ತಾ ಕುಳಿತಿದ್ದರು. ಪುಟ 11 (ಮಹಾರಾಷ್ಟ್ರ ರಾಜ್ಯದ ತುಂಬಾ ಹರಿಯುತ್ತಿರುವ ವೇಶ್ಯಾ ಸೋದರಿಯರ ಕಣ್ಣೀರು ಕಡಲಿನ ಕೋಗಿಲೆ ಗಾನ: ಚೆನ್ನಣ್ಣ ವಾಲೀಕಾರ 1999)

ಬೀದಿ ವೇಶ್ಯೆಯರು ದಿನನಿತ್ಯ ಇಂತಹ ಒಂದಲ್ಲ ಒಂದು ದೌರ್ಜನ್ಯಗಳನ್ನು ಎದುರಿಸುತ್ತಲೇ ಬದುಕು ಸವೆಸುತ್ತಾರೆ. ಮೈ ಮಾರಿಯೇ ದಿನನಿತ್ಯದ ಜೀವನಕ್ಕೆ ಬೇಕಾದ ವಸ್ತುಗಳನ್ನು ತಂದು ಕುಟುಂಬ ಪೋಷಿಸಬೇಕಾದ ಪರಿಸ್ಥಿತಿಯನ್ನು ಎದುರಿಸುತ್ತಿರುವ ಹಲವರ ಜೀವನ ಕಥನವಿದು. ಬೆಳಗಾವಿಯಲ್ಲಿ ಬಸ್‌ಸ್ಟಾಂಡಿನ ಹಿಂಬದಿಯಲ್ಲಿ ಜೋಪಡಿ ಪಟ್ಟಿಯ ರೀತಿಯಲ್ಲಿ ಸವದತ್ತಿ ಎಲ್ಲಮ್ಮನ ಜೋಗತಿಯರಿರುವ ಕೇರಿಯಿತ್ತು. ವಾಲೀಕಾರರು ಏಳು ಗಂಟೆಯ ಹೊತ್ತಿಗೆ ಬಸ್ ಸ್ಟಾಂಡಿನಲ್ಲಿದ್ದಾಗ 10 ವರ್ಷದ ಹುಡುಗಿಯೊಬ್ಬಳು 'ಸಾಹೇಬರೇ, ನಿಮಗೆ ನಮ್ಮಮ್ಮ ಕರಕೊಂಡು ಬಾ ಅಂತ ಹೇಳಿದ್ದಾ" ಎಂದಾಗ ಯಾರು? ಯಾಕೆ ಕರೀತಾಳೆ ಎಲ್ಲಿದ್ದಾಳೆ ಎಂದು ಕೇಳಿದರು. ಆ ಹುಡುಗಿ 'ಬರಿ ನನ್ನ ಹಿಂದೆ. ನಾ ತೋರಿಸ್ತೀ' ಎಂದು ಒಂದು ಗುಡಿಸಲಿನ ಮುಂದೆ 'ಇಕಿನೆ ನಮ್ಮ ತಾಯಿರಿ, ನಾ ಚಾ ತಗೊಂಡು ಬರತೀನಿ' ಎಂದು ಒಳಗೆ ಹೋದಳು. ವಾಲೀಕಾರರಿಗೆ ಅರ್ಥವಾಗಿ ಅವಳ ಪೂರ್ವಕತೆಯನ್ನು ಕೇಳಿದರು. ತನ್ನ ತಾಯಿ ತನ್ನನ್ನು ಸವದತ್ತಿ ಎಲ್ಲಮ್ಮನಿಗೆ ಹರಕೆ ಹೇಳಿ ಜೋಗತಿಯನ್ನಾಗಿ ಮಾಡಿದಳು. ಅಂದಿನಿಂದ ಊರೂರು ತಿರುಗುತ್ತಾ ಇದೊಂದು ಮಗಳಿಗೆ ಹಡೆದೆ. ಇಲ್ಲೊಂದು ಗುಡಿಸಲು ಕಟ್ಟಿ ಜೀವನ ಸಾಗಿಸುತ್ತೇನೆ. ಈಗ ಮೊದಲಿನಂತೆ ಊರೂರು ತಿರುಗಲು ಆಗುತ್ತಿಲ್ಲ. ಅದಕ್ಕಾಗಿ ಹೊಟ್ಟೆಪಾಡಿಗಾಗಿ ಬರುವ ಗಿರಾಕಿಗಳಿಂದ ಮೊದಲಿನಂತೆ ತಿರುಗಾಡದೆ ಮನೆಯಲ್ಲಿದ್ದುಕೊಂಡೇ ಹೊಟ್ಟೆ ತುಂಬಿಸಿಕೊಳ್ಳುತ್ತಿರುವೆನು ಎಂದಾಗ ನನಗೆ ಮಾತೇ ಬರಲಿಲ್ಲ (ಪುಟ 18 ವೇಶ್ಯಾ ಸೋದರಿಯರ ಕಣ್ಣೀರ ಕಥನ)

ಪೂನಾದಲ್ಲಿ ಒಂದು ಗಲ್ಲಿಯಲ್ಲಿ ಸುತ್ತುವಾಗ ಗಂಡನೊಬ್ಬ ತನ್ನ ಹೆಂಡತಿಯನ್ನು ನೆಲಕ್ಕೆ ಹಾಕಿ ಹೊಡೆಯುತ್ತಿದ್ದ. ಜನ ನಿಂತು ಚಂದ ನೋಡುತ್ತಿದ್ದರು. ಜಗಳ ಬಿಡಿಸುತ್ತಿರಲಿಲ್ಲ. ಆಗ ವಾಲೀಕಾರರು ಗಂಡನನ್ನು ದೂರ ದಬ್ಬಿದರು. ಗಂಡನು ಸಿಟ್ಟಿನಿಂದ ಹೊಡೆಯಲು ಬಂದ. "ನೀನ್ಯಾರು ಕೇಳುವವ? ಅವಳ ಕಮಾಯಿಯ ಅರ್ಧಭಾಗವನ್ನು ನೀನು ಕೊಡುತ್ತೀಯಾ? ಎಂದು ಹೊಡೆದಾಗ, ಆಕೆ "ಏಯ್ ಈ ಪಾಪದವನನ್ನು ಏಕೆ ಹೊಡೆಯುತ್ತೀಯಾ? ತಗೋ ನಿನ್ನ ಹಣ" ಎಂದು ನೂರ ನೋಟನ್ನು ಆತನ ಮುಖಕ್ಕೆ ಬಿಸಾಡಿದಾಗ ಅದನ್ನು ಹೆಕ್ಕಿಕೊಂಡು ಹೆಂಡದಂಗಡಿಯತ್ತ ಹೊರಟನು. ಆ ಇಡೀ ಗಲ್ಲಿ ಅವರದ್ದಾಗಿತ್ತು. ಅಲಂಕೃತರಾಗಿ ಗಿರಾಕಿಗಳಿಗಾಗಿ ಕಾಯುತ್ತಿದ್ದರು. ಮುದುಕ ಮುದುಕಿಯರು ಕಥೆ ಹೇಳುತ್ತಾ ಅಂಗಳದಲ್ಲಿ ಕೂತಿದ್ದರು. ದಲ್ಲಾಳಿಗಳು ಗಿರಾಕಿ ತರಲು ಓಡಾಡುತ್ತಿದ್ದರು. ರೋಗ ಹತ್ತಿದವರು ನರಳುತ್ತಾ ಗುಡಿಸಲೊಳಗೆ ಮಲಗಿದ್ದರು" (ಪುಟ25)

ವಾಲೀಕಾರರು ಮುಂಬಯಿಯಲ್ಲಿ ಹಿಂದೂ ಕಾಲನಿಯಲ್ಲಿರುವ ಅಂಬೇಡ್ಕರ್‌ರ ಮನೆಗೆ ಹೋಗುವ ಸೇತುವೆಯ ಮೇಲೆ ಕುಳಿತಿದ್ದ ಹೆಣ್ಣು ಮಗಳನ್ನು ಕಂಡು ಮಾತಾಡಿಸಿದಾಗ ಆಕೆ, "ನನಗೆ ನಿನ್ನೆಯಿಂದ ಊಟವಿಲ್ಲ ಮೊದಲು ನನಗೆ ಊಟ ಮಾಡಿಸು. ಆ ಮ್ಯಾಲ ನೀ ಕೇಳಿದ್ದಕೆಲ್ಲ ಹೇಳೀನಿ ಎಂದಳು. ಅದರಂತೆ ಊಟ ಮಾಡಿಸಿ ಅವಳು ಹೇಳಿದ್ದನ್ನು ಟಿಪ್ಪಣಿ ಮಾಡಿಕೊಳ್ಳೋಣವೆಂದು ಅಲ್ಲೇ ಪಕ್ಕದ ಕಾಲೇಜಿನ ಆಟದ ಮೈದಾನದಲ್ಲಿ ಒಂದು ಮರದ ಕೆಳಗೆ ಕೂತರು. ಅವಳು ಕತೆಯನ್ನು ಹೇಳಿದಳು. ಆಕೆ ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಕಂಬಾರರ ಹೆಣ್ಣು ಮಗಳು ಗಿರಿಜಾ, ಒಬ್ಬ ಯುವಕ ಈಕೆಗೆ ಸಿನಿಮಾ ನಟಿ ಮಾಡುತ್ತೇನೆಂದು ಆಶೆ ಹಚ್ಚಿ ಓಡಿಸಿಕೊಂಡು ಬಂದು ಕೈಯಲ್ಲಿ ದುಡ್ಡಿರುವ ತನಕ ಒಂದು ಜೋಪಡಿ ಕಟ್ಟಿ ರೂಮು ಹಿಡಿದು ಈಕೆಯ ಜೊತೆಗೆ ಆರು ತಿಂಗಳು ಇದ್ದು, ದುಡ್ಡೆಲ್ಲ ಆಗಿ ಹೋದ ಮೇಲೆ ಒಂದು ಸೂಳೆಗೇರಿಗೆ ಒಯ್ದು ಒಬ್ಬ ಘರವಾಲಿಗೆ ಮಾರಿ ಪರಾರಿಯಾದನು. ಆ ಘರವಾಲಿ ಈಕೆಗೆ ಭರ್ತಿ ಯೌವನ ಇರುವ ತನಕ ಇಟ್ಟುಕೊಂಡು ಆ ಮೇಲೆ ಗಿರಾಕಿಗಳ ಬೇಡಿಕೆ ಕಡಿಮೆಯಾದ ಮೇಲೆ ಮನೆಯಿಂದ ಹೊರದಬ್ಬಿದಳು. ಊರಿಗೆ ಹೋಗುವಂತಿಲ್ಲ. ಮನಿ ಮಾರಿ ನೋಡುವಂತಿಲ್ಲ. ರೈಲ್ವೇ ಸ್ಟೇಷನ್, ಬಸ್‌ಸ್ಟಾಂಡಿನಲ್ಲಿ ರಾತ್ರಿ ಹೊತ್ತುಗಳೆಯುತ್ತಾ ಅಲ್ಲಿ ಇಲ್ಲಿ ಬೀಳುತ್ತೇಳುತ್ತಾ ಕೊನೆಗೆ ಒಂದು ಜೋಪಡಿ ಕಟ್ಟಿ ರೂಮು ಕಿರಾಯಿ ಹಿಡಿದು ಹೀಗೆ ಹೊರಗೆ ಬಂದು ಸಿಕ್ಕ ಗಿರಾಕಿಗಳಿಗೆ ರೂಮಿಗೆ ಕರೆದುಕೊಂಡು ಹೋಗಿ ಬದುಕು ಸಾಗಿಸುತ್ತಿರುವ ಸಂಗತಿಯನ್ನು ತಿಳಿಸಿದಾಗ ನನಗೆ ಮಾತೇ ಬರದಾದವು." ಆ ಬಳಿಕ ವಾಲೀಕಾರರು ಅವಳನ್ನು ಮಾತುಂಗಾದಲ್ಲಿ ಊಟ ಮಾಡಿಸಿ, ಸಮೀಪದ ಥಿಯೇಟರಿನಲ್ಲಿ 'ಬೈಜೂ ಬಾವರ' ಎಂಬ ಸಿನಿಮಾ ತೋರಿಸಿ, ಬಾಜಾರೆಲ್ಲಾ ಸುತ್ತಾಡಿಸಿ ಸಂಜೆ ಅವಳ ರೂಮಿನ ಬಳಿಗೆ ಬಂದಾಗ ಅಲ್ಲಿನ ಹೆಂಗಸರು, 'ಅರೆ ಗಿರಿಜಾ, ಅಚ್ಛಾ ಆದಿ ಮಿಲಾರೆ, ಖೂಬ್ ಕಮಾವರೆ ಎಂದದ್ದು ಕೇಳಿ ನನ್ನ ಮುಖದ ಮೇಲೆ ಏಳು ಜೋಡ ಮೆಟ್ಟು ತೆಗೆದುಕೊಂಡು ಹೊಡೆದಂತಾಯಿತು ಎಂದು ಬರೆಯುತ್ತಾರೆ. (ಪುಟ 49) ಇಂತಹ ಪರಿಸ್ಥಿತಿಯಲ್ಲಿ ವೃತ್ತಿ ನಿರತರಾಗಿರುವ ವೇಶ್ಯೆಯರು ಈಗಲೂ ಇದ್ದಾರೆ.

ತುಳಜಾಪುರದಲ್ಲಿ ಕಂಡ ಜೋಗತಿಯರ ಎರಡು ಪ್ರಸಂಗಗಳು ಹೀಗಿವೆ. ಇಬ್ಬರು ಜೋಗತಿಯರು ಹಣಕ್ಕಾಗಿ ಕಚ್ಚಾಡುತ್ತಿದ್ದರು. "ಏ, ಸೂಳಿ, ನಾನು ಹಾಡು ಹಾಡಕ್ಕಿ, ನನಗೆ ಹೆಚ್ಚು ರೊಕ್ಕ ಬೇಕು ನಿನಗ್ಯಾಕೆ' ಎಂದು ಒಬ್ಬಳು ಹೇಳಿದರೆ ಇನ್ನೊಬ್ಬಳು, 'ಏ, ಸೂಳಿ ನಾನು ವಾದ್ಯ ಬಾರಸಕ್ಕಿ, ನನಗೆ ಹೆಚ್ಚು ರೊಕ್ಕ ಬೇಕು ನಿನಗ್ಯಾಕೆ' ಎಂದು ಒಬ್ಬರಿಗೊಬ್ಬರು ಸೀರೆ ಕುಬುಸ ಹರಿಯುವಷ್ಟರ ಮಟ್ಟಿಗೆ ಜಗಳಾಡಿದಾಗ ಹಿರಿಯ ಜೋಗತಿ ಬಂದು ಎಲ್ಲರಿಗೂ ಸಮನಾಗಿ ದುಡ್ಡು ಹಂಚಿದ ಬಳಿಕ ಎಲ್ಲರೂ ಶಾಂತರಾದರು (ಪುಟ 71)

ರಾತ್ರಿ ಒಂಬತ್ತಾಗುವಾಗ ಗಿರಾಕಿಯೊಬ್ಬ ಬಂದು, "ಏ ಮನುಷ್ಯಾ, ನೂರು ರುಪಾಯಿ ಕೊಡ್ತೀನೆಂದ್ರೆ ಇಕಿಗೆ ಕಳಿಸ್ತೀನಿ ನೋಡು" ಎಂದು ಕೊಡ ಹೊತ್ತು ಕುಣಿದವಳೊಬ್ಬಳನ್ನು ಕಳಿಸಿ ಕೊಟ್ಟದ್ದು ಯಾಕೋ ನನಗೆ ಸರಿ ಕಾಣಲಿಲ್ಲ. ಮುಂಜಾನೆಯಿಂದ ಸಂಜೆಯವರೆಗೆ ನೂರಾರು ರೂಪಾಯಿ ಹಂಚಿಕೊಂಡಿದ್ದಾರೆ. ಹೆಚ್ಚಿನ ಹಣ ಇವರಿಗೇಕೆ? ಇವರಿಗೇನು ಮಕ್ಕಳು ಮರಿಗಳೇ? ಅವರ ಜೀವನ ವಿಧಾನ ಅರ್ಥವಾಗದಂತಾಯಿತು. ಒಂದು ಮನೆಯಲ್ಲಿ ಕುಲವತಿಯರಾಗಿ ಇರಬೇಕಾದವರು ಈ ರೀತಿಯಾಗಿ ಬೀದಿಯಲ್ಲಿ ಬಸವಿಯರಾಗಿ ಬಾಳುವೆ ಸಾಗಿಸುತ್ತಿರುವುದನ್ನು ಕಂಡು ದುಃಖವಾಯಿತು ಎನ್ನುತ್ತಾರೆ ವಾಲೀಕಾರರು.

ಪಂಢರಪುರದಲ್ಲಿ ಸೂರ ಮುಳುಗಿದಂತೆ ಕತ್ತಲಾಗುತ್ತಿದ್ದಂತೆ ವಿಠಲನ ಮಂದಿರದ ಮುಂದೆ ಕುಳಿತ ಜೋಗತಿಯರ ದಂಡು ಬಸ್‌ಸ್ಟಾಂಡಿನ ಕಡೆಗೆ ಹೊರಟಿತು. ಭಕ್ತರು ನೀಡಿದ ಅನ್ನವನ್ನು ಉಂಡಾದ ಮೇಲೆ ತಮ್ಮಲ್ಲಿರುವ ಹುಡುಗ ನನ್ನು ಕರೆದು, 'ಏ, ಮಲ್ಯಾ ಎಲ್ಲಾ ಕಡೆ ತಿರುಗಾಡಿ ಗಿರಾಕಿ ಹುಡುಕಿಕೊಂಡು ಬಾರೋ ಎಂದು ಕಳಿಸಿದ್ದು ನೋಡಿ ಇವರೂ ಹೀಗೆಯೇ ಎಂದು ವಾಲೀಕಾರರು ಚಿಂತಿಸತೊಡಗಿದರು. ಒಂದರ್ಧ ಗಂಟೆಯ ಬಳಿಕ ಹುಡುಗ ಒಂದಿಬ್ಬರನ್ನು ಕರೆದುಕೊಂಡು ಬಂದನು. ಆ ಗಿರಾಕಿಗಳು ಹೀಗೆ ಜೋಗತಿಗೆ ಐವತ್ತು ರೂಪಾಯಿ ಕೊಟ್ಟರು. ಸಣ್ಣ ಜೋಗತಿಯವರನ್ನು ಎಲ್ಲಿಗೋ ಕರೆದುಕೊಂಡು ಹೋದರು. ನನ್ನೆದೆಗೆ ಬರೆ ಬರೆದಂತಾಯಿತು. ತಾಯಿಗೋ ತಂಗಿಗೋ, ಅಕ್ಕನಿಗೋ, ಅವರು ಕರೆದುಕೊಂಡು ಹೋದಂತೆ ಅನ್ನಿಸಿತು. ನನ್ನ ಕಣ್ಣೀರ ಕೋಗಿಲೆ ಜೋರಾಗಿ ಅಳತೊಡಗಿತು (ಪುಟ. 75) ಹೀಗೆ ಅವರು ತಮ್ಮ ಪ್ರವಾಸದಲ್ಲಿ ಕಂಡ ಲೈಂಗಿಕ ವೃತ್ತಿ ನಿರತರ ದಾರುಣವಾದ ಜೀವನವನ್ನು ತನ್ನ ಕೃತಿಯಲ್ಲಿ ದಾಖಲಿಸಿದ್ದಾರೆ.

ಇತಿಯೋಪಿಯಾದ ರಾಜಕೀಯ ಪರಿಸ್ಥಿತಿ ಹದಗೆಟ್ಟಾಗ ಅರಾಜಕತೆ ಉಂಟಾಗಿ ಆಹಾರದ ಅಭಾವ ಹೆಚ್ಚಾಯಿತು. ಎಲ್ಲೆಲ್ಲೂ ಬಡತನ ತಾಂಡವಾಡತೊಡಗಿತ್ತು. ವೇಶ್ಯಾವೃತ್ತಿ ವ್ಯಾಪಕವಾಯಿತು. ವೇಶ್ಯಾವೃತ್ತಿಯ ನಿರ್ಮೂಲನಕ್ಕೆ ಸರಕಾರವು ಅವರನ್ನು ಸಂಘಟಿಸಿ ಅವರಿಗೆ ಶಿಕ್ಷಣ ನೀಡಿತು. ಸೈನಿಕ ತರಬೇತಿ ನೀಡಿ ಯೋಧೆಯರನ್ನಾಗಿ ಮಾಡಿತು. ಎಲ್ಲಾ ವೇಶ್ಯೆಯರು ಇದಕ್ಕೆ ಅರ್ಹರಾಗಿರಲಿಲ್ಲ. ವೇಶ್ಯಾವೃತ್ತಿಯ ನಿರ್ಮೂಲನೆ ಬರಿಯ ಗ್ಲೋಗನ್ ಆಯಿತು. ಏಕೆಂದರೆ ವೇಶ್ಯ ಎಲ್ಲರಿಗೂ ಬೇಕಾದವಳಾಗಿದ್ದಳು. ಅಧ್ಯಾಪಕರು, ಪೋಲೀಸರು, ಸೈನಿಕರಂತೆ ಅವಳದ್ದೂ ಒಂದು ವೃತ್ತಿಯಾಗಿದ್ದು, ಅವಳಿಗೂ ಇತರರಂತೆ ಸಾಮಾಜಿಕ ಸ್ಥಾನಮಾನವಿತ್ತು. ಅವಳಿಗೂ ಮಕ್ಕಳು ಮರಿಗಳಿದ್ದುವು. ಅವಳದ್ದು ಒಂದು ರೀತಿಯ ಗಂಡನೆಂಬವನಿಲ್ಲದ ಸ್ವತಂತ್ರ ಕುಟುಂಬವಾಗಿತ್ತು. ಬಹುತೇಕ ಸ್ವಂತ ಆಯ್ಕೆಯಿಂದಲೇ ವೇಶ್ಯಯರಾದ ಅವರಿಗೆ ಅದೊಂದು ಜೀವನ ವಿಧಾನ ಮಾತ್ರವೇ ಆಗಿತ್ತು (ಅರಗಿನ ಮನೆ, ಪುಟ 125).

ಶರತ್‌ಚಂದ್ರರು ಬಂಗಾಳಿಯ ಪ್ರಸಿದ್ಧ ಕಾದಂಬರಿಕಾರರು. ಅವರು ವೇಶ್ಯಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯಗಳನ್ನು ಖಂಡಿಸಿ ತಮ್ಮ ಕಾದಂಬರಿಗಳಲ್ಲಿ ಅವರನ್ನು ನಾಯಕಿಯರನ್ನಾಗಿ ಚಿತ್ರಿಸಿದ್ದರು. ಅದು ಕಳೆದ ಶತಮಾನದ ಪೂರ್ವಾರ್ಧದಲ್ಲಿ ಸನಾತನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಶರತ್‌ಚಂದ್ರರ ಮೇಲೆ ಮಿಥ್ಯಾರೋಪಗಳನ್ನು ಹೊರಿಸಿ ಅವರ ಮಾನ ಹಾನಿಗೂ ಪ್ರಯತ್ನಿಸಿದ್ದರು. ಹಿಂದಿಯ ತರುಣ ಲೇಖಕರಾಗಿದ್ದ ಇಳಾ ಚಂದ್ರ ಜೋಶಿಯವರು ಶರತ್ ಅವರನ್ನು ಸಂದರ್ಶಿಸಿ ಇದೇ ಪ್ರಶ್ನೆಯನ್ನು ಕೇಳಿದ್ದರು. "ನಿಮ್ಮ ಕಾದಂಬರಿಗಳಲ್ಲಿ ವೇಶ್ಯಯರನ್ನು ನಾಯಕಿಯರನ್ನಾಗಿ ಆರಿಸಿಕೊಂಡಿದ್ದೀರಿ. ನಿಮ್ಮ ವೈಯಕ್ತಿಕ ಅಭಿರುಚಿ ಅಥವಾ ಸಹಾನುಭೂತಿಯೇ ಇದಕ್ಕೆ ಕಾರಣವಾಗಿದೆಯೇ ಅಥವಾ ಯಾವುದಾದರೂ ಆದರ್ಶಾತ್ಮಕ ಉದ್ದೇಶದಿಂದ ಪ್ರೇರಿತರಾಗಿ, ನಿಮ್ಮ ಸೈದ್ಧಾಂತಿಕ ನಿಲುವಿನ ಸಮರ್ಥನೆಗಾಗಿಯೇ ಇಂತಹ ಪಾತ್ರಗಳನ್ನು ಚಿತ್ರಿಸಿದ್ದೀರಾ?” ಎಂದು ಕೇಳಿದಾಗ ಸಹಜವೆಂಬಂತೆ ಶರತ್‌ಚಂದ್ರರು ಉತ್ತರಿಸಿದರು. "ಎರಡೂ ನಿಜ. ವೈಯಕ್ತಿಕವಾಗಿ ಅಂತಹ ಪಾತ್ರಗಳ ನಿಕಟ ಸಂಪರ್ಕ ಉಂಟಾಗಿದೆ. ಆದ್ದರಿಂದಲೇ ವೇಶ್ಯೆಯರೇ ಸಮಾಜದಲ್ಲಿ ಅತ್ಯಂತ ಹೆಚ್ಚು ಶೋಷಿತರಾದ ಹಾಗೂ ಅತ್ಯಂತ ಹೆಚ್ಚು ಅತ್ಯಾಚಾರ ಪೀಡಿತರಾದ ನಾರಿಯರು ಎಂಬ ತೀವ್ರವಾದ ಭಾವನೆ ನನ್ನಲ್ಲಿ ಮೂಡಿದೆ. ಆರ್ಥಿಕ ವಿಷಮತೆಯಿಂದಾಗಿ ಯಾವ ಕೊಳಕಾದ ಹಾಗೂ ಹೇಯವಾದ ಬಾಳನ್ನು ನಡೆಸುತ್ತಿದ್ದಾರೋ, ಅದರಿಂದ ಬಿಡುಗಡೆ ಹೊಂದಲು ಪ್ರಜ್ಞಾಪೂರ್ವಕವಾಗಿ ಹಾಗೂ ಅಪ್ರಜ್ಞಾಪೂರ್ವಕವಾಗಿ ಸದಾಕಾಲವೂ ಅವರು ಒದ್ದಾಡುತ್ತಲೇ ಇರುತ್ತಾರೆ. ಅವರ ಈ ಒದ್ದಾಟವನ್ನು ಕಾಣುವ ಅವಕಾಶ ಎಲ್ಲರಿಗೂ ಎಲ್ಲ ಕಾಲದಲ್ಲಿಯೂ ದೊರೆಯುವುದಿಲ್ಲ. ಎಂದಾದರೂ, ಯಾರಿಗಾದರೂ ಕಾರಣಾಂತರದಿಂದ ಅಂತಹ ಅವಕಾಶ ದೊರೆತರೆ, ಅದನ್ನು ಅವನು ತನ್ನ ಬಾಳಿನ ಪರ್ಯಂತ ಮರೆಯಲಾಗುವುದಿಲ್ಲ. ಅವರ ಅಂತರಾಳದ ಈ ಮೂಲಭೂತ ವಿದ್ರೋಹಕ್ಕೆ ಮಾತುಗೊಡಬೇಕೆಂದು ನಾನು ಬಹಳ ಹಿಂದೆಯೇ ತೀರ್ಮಾನಿಸಿದ್ದೆ" ಎಂದು ಹೇಳಿದರು. ಬಿನೋದಿನಿ ಎಂಬ ವೇಶ್ಯೆಯು ರಂಗನಟಿಯಾಗಿ ರಂಗಮಂದಿರ ಸ್ಥಾಪಿಸಲು ಹೆಣಗಿದ ಅನುಭವಗಳನ್ನು ಶರತಚಂದ್ರರು ತನ್ನ ಪತ್ರಿಕೆ 'ರೂಪ್ ಓ ರಂಗ'ದಲ್ಲಿ ಧಾರವಾಹಿಯಾಗಿ ಪ್ರಕಟಿಸಿದ್ದರು. (ಅಲೆಮಾರಿ ಪ್ರವಾದಿ, ಪುಟ 335, ಲೇ: ವಿಷ್ಣು ಪ್ರಭಾಕರ್, ಅನು: ಪ್ರಧಾನ ಗುರುದತ್ತ, ನ್ಯಾಶನಲ್ ಬುಕ್ ಟ್ರಸ್ಟ್ ಇಂಡಿಯಾ 2001)

ಸಿಮಾನ್ ದಬುವಾ ತನ್ನ ಸೆಕೆಂಡ್ ಸೆಕ್ಸ್ ಕೃತಿಯಲ್ಲಿ "ಚರ್ಚ್‌ ಪಾದ್ರಿಗಳ ಪ್ರಕಾರ ಅರಮನೆಗಳು ಶುಚಿಯಾಗಿರಬೇಕಾದರೆ ಗಟಾರಗಳಿರಬೇಕು. ಸೀ ಸಮುದಾಯದ ಒಂದು ವರ್ಗವನ್ನು ಸಂರಕ್ಷಿಸಿ ಅವರಿಗೆ ತೊಂದರೆಗಳಾಗದಂತೆ ಇನ್ನೊಂದು ವರ್ಗವನ್ನು ಬಲಿಕೊಡುವುದು ಅನಿವಾರ್ಯವೆಂದು ಹೇಳಲಾಗುತ್ತದೆ. ಲೋಕದಲ್ಲಿ ನಿರುದ್ಯೋಗ ಮತ್ತು ಸಂಕಷ್ಟಗಳು ತುಂಬಿವೆ. ಆದುದರಿಂದ ಈ ವೃತ್ತಿಗೆ ಪ್ರವೇಶಿಸುವ ಹೆಂಗಸರು ಇದ್ದೇ ಇರುತ್ತಾರೆ. ಎಲ್ಲಿಯವರೆಗೆ ಪೋಲೀಸ್‌ದಳ ಮತ್ತು ವೇಶ್ಯಾವೃತ್ತಿ ಇರುತ್ತವೋ ಅಲ್ಲಿಯವರೆಗೆ ಪೋಲೀಸರೂ ಇರುತ್ತಾರೆ ವೇಶ್ಯೆಯರೂ ಇರುತ್ತಾರೆ. ಅವಿವಾಹಿತ ತಾಯಂದಿರು ಮಕ್ಕಳನ್ನು ಸಾಕಲೆಂದೇ ಈ ವೃತ್ತಿಗೆ ಬರುತ್ತಾರೆ. ಯುದ್ಧ ಮತ್ತು ಅನಂತರದ ಸಾಮಾಜಿಕ ಅವ್ಯವಸ್ಥೆಯಿಂದಾಗಿ ವೇಶ್ಯಾವೃತ್ತಿ ಹೆಚ್ಚಾಗುತ್ತದೆ.


ಕೆಲವೊಮ್ಮೆ ಪಾಲಕರೇ ಹೆಣ್ಣು ಮಕ್ಕಳನ್ನು ವೇಶ್ಯಾವೃತ್ತಿಗೆ ತಳ್ಳುತ್ತಾರೆ. ಅಮೆರಿಕದ ಜ್ಯೂಕ್ ಕುಟುಂಬಕ್ಕೆ ಸೇರಿದ ಪ್ರತಿಯೊಬ್ಬ ಹೆಂಗಸೂ ಈ ವೃತ್ತಿಯನ್ನೇ ಕೈಗೊಳ್ಳಬೇಕು. ದಾರಿತಪ್ಪಿ ಬೀದಿಗೆ ಬಿದ್ದ ಹಲವು ಹುಡುಗಿಯರನ್ನು ಅವರ ಬಂಧುಗಳೇ ತ್ಯಜಿಸುತ್ತಾರೆ.ಬೇಡಲು ಶುರು ಮಾಡಿ ಕೊನೆಗೆ ವೇಶ್ಯಾವೃತ್ತಿಯನ್ನು ಹಿಡಿಯುತ್ತಾರೆ.


ಮ್ಯಾಡ್ರಿಡ್‌ನಲ್ಲಿ ಕೊರೆಯುವ ಚಳಿಯಲ್ಲಿ ರಾತ್ರಿಯಲ್ಲಿ ಅಲ್ಲಿನ ಪ್ಯಾಸಿಸ್ಟ್ ಯುವಕರ ಪಡೆಯೊಂದು ವೇಶ್ಯೆಯರನ್ನು ನದಿಗೆಸೆದು ಆನಂದ ಪಟ್ಟಿತು. ಫ್ರಾನ್ಸ್‌ನಲ್ಲಿ ವಿದ್ಯಾರ್ಥಿಗಳು ಸಮಯ ಕಳೆಯಲು ಹುಡುಗಿಯರನ್ನು ಮತ್ತು ಲೈಂಗಿಕ ಕಾರ್ಯಕರ್ತೆಯನ್ನು ಕರೆದೊಯ್ದು ಕೊನೆಗೆ ರಾತ್ರಿಯಲ್ಲಿ ಅವರನ್ನು ವಿವಸ್ತ್ರರನ್ನಾಗಿ ಮಾಡಿ ತೊರೆದು ಬರುತ್ತಾರೆ ಎಂದು ತನ್ನ ಕೃತಿಯಲ್ಲಿ ಬುವಾ ಹೇಳಿದ್ದಾರೆ.


'ಈ ರೀತಿಯ ಹಿಂಸೆಯಿಂದ ಆನಂದ ಪಡುವ ಗಿರಾಕಿಗಳು ಇಲ್ಲೂ, ನಮ್ಮ ಜಿಲ್ಲೆಯಲ್ಲೂ ಇದ್ದಾರೆಂಬುದಕ್ಕೆ ಚಾರ್ಮಾಡಿ, ಶಿರಾಡಿ ಘಾಟಿಯಲ್ಲಿ ವೇಶ್ಯೆಯರನ್ನು ಪ್ರಪಾತಕ್ಕೆ ದೂಡಿದ ಘಟನೆ ಕೆಲವು ವರ್ಷಗಳ ಹಿಂದೆ ನಡೆದಿತ್ತು. ಅದೇ ರೀತಿಯಲ್ಲಿ ಹಿಂದೆ ನಮ್ಮ ಜಿಲ್ಲೆಯ ಗುಡ್ಡದಲ್ಲಿ ವೇಶ್ಯೆಯರನ್ನು ಬತ್ತಲೆ ಮಾಡಿ ಬಿಟ್ಟು ಹೋದ ಪ್ರಕರಣವು ದಾಖಲಾಗಿತ್ತು. ಉಡುಪಿಯಲ್ಲಿ ಹೊಟೇಲಿಗೆ ಕರೆದೊಯ್ದು ಗಿರಾಕಿಯೊಬ್ಬ ಅವಳನ್ನು ಬತ್ತಲೆಗೊಳಿಸಿ ಬಿಟ್ಟು ಹೋದ ಘಟನೆಯನ್ನು ಬಹಳ ದುಃಖದಿಂದ ಲೈಂಗಿಕ ಕಾರ್ಯಕರ್ತೆಯೊಬ್ಬಳು ನನ್ನಲ್ಲಿ ಹೇಳಿದ್ದಳು. ಇಂತಹ ಕ್ರೌರ್ಯಗಳು ವೇಶ್ಯೆಯರ ಜೀವನದಲ್ಲಿ ಸಾಮಾನ್ಯವಾಗಿದ್ದವು.


12ನೆಯ ಶತಮಾನದ ಕವಿ ಕಲ್ಹನನು ಬರೆದ ರಾಜತರಂಗಿಣಿಯನ್ನು ಒಂದು ಐತಿಹಾಸಿಕ ಗ್ರಂಥವೆಂದೇ ಪರಿಗಣಿಸುತ್ತಾರೆ. ಕಾಶ್ಮೀರ ದೇಶದ ಪರಂಪರೆ, ವಿದ್ಯೆ, ಸಂಸ್ಕೃತಿ, ಜನಜೀವನ, ಭೌಗೋಳಿಕ ಸ್ಥಿತಿಗತಿ, ಸಂಪ್ರದಾಯ, ಐತಿಹ್ಯ ಮುಂತಾದವುಗಳ ಬಗ್ಗೆ ಬರೆದಿರುತ್ತಾನೆ. ಜಿಬೌಕನೆಂಬ ರಾಜನು ನಂದಿ ಕ್ಷೇತ್ರದಲ್ಲಿ ಭೂತಪತಿಯ ಮಂದಿರದಲ್ಲಿ ಜೇಷ್ಠ ರುದ್ರನ ಪ್ರೀತ್ಯರ್ಥವಾಗಿ ನೂರಾರು ಮಂದಿ ಸ್ತ್ರೀಯರು ನೃತ್ಯ ಗೀತಗಳಿಗಾಗಿ ನೇಮಿಸಿದನು. (ಪು 9)


ಲಲಿತಾ ಪೀಡನೆಂಬ ರಾಜನು ತನ್ನ ರಾಜ್ಯವನ್ನು ವಾರಾಂಗನಾ ಭೋಗ್ಯ ವನ್ನಾಗಿ ಮಾಡಿದನು. ಮಂತ್ರಿಗಳು ಸೂಳೆಯರ ಪಾದ ಮುದ್ರೆಯಿಂದ ಅಂಕಿತವಾದ ಸುಂದರ ಪ್ರಾವರಣಗಳನ್ನು ಧರಿಸುವಂತೆ ಮಾಡಿದನು. (ಪು.90) ತಂತ್ರಿಗಳ ವಶೀಕರಣದಲ್ಲಿ ಸಮರ್ಥಳಾದ ಸೂಳೆ ಸಾಂಬವತಿಯು ಪಾರ್ಥನಿಗೆ ಪರಮ ಪ್ರಿಯೆಯಾಗಿದ್ದಳು. ಅವಳು ಸಾಂಬೇಶ್ವರ ದೇವಸ್ಥಾನವನ್ನು ಕಟ್ಟಿಸಿದ್ದಳು. (ಪು. 107)

ಕೆಲವು ವಿಟರು ದೇವದಾಸಿಯರನ್ನು ಕಳಿಸಿ, ಅವರು ರಾಜನ ಮುಂದೆ ಮದನಬಾಧೆಯನ್ನು ನಿವಾರಿಸುವ ಮಂತ್ರವನ್ನು ಜಪಿಸುವವರಂತೆ ಅವನನ್ನು ಮುಗ್ಧಗೊಳಿಸಿದರು. ದೀರ್ಘಕಾಲ ಬದುಕಬೇಕೆಂಬ ಬಯಕೆಯುಳ್ಳ ಅವನಿಗೆ ದೀರ್ಘಾಯುಸ್ಸನ್ನು ದೇವದಾಸಿಯರು ಹಾರೈಸಿದರು. ರಾಜನಿಗೆ ನೂರು ವರ್ಷದ ಆಯಸ್ಸನ್ನು ದಯಪಾಲಿಸಿದರು (ಪು.206)

ವೇಶ್ಯಯರು, ಕಾಯಸ್ಥಳು, ದಿವಿರರು, ವ್ಯಾಪಾರಿಗಳು ನಿಸರ್ಗದಿಂದಲೇ ವಂಚಕರು. ಇವರಿಗೆಲ್ಲಾ ಒಬ್ಬನೇ ಗುರು. ಆದುದರಿಂದ ವಿಷಮಯ ಬಾಣಗಳಿಂದ ಇವರು ಪ್ರಾಣವನ್ನೇ ಅಪಹರಿಸ ಬಲ್ಲವರಾಗಿದ್ದಾರೆ. ನಗರದ ಮುಖ್ಯಾಧಿಕಾರಿಯಾದ ಕುಲರಾಜನು ಬಂಧನದಲ್ಲಿದ್ದ ವೇಶ್ಯೆಯರನ್ನು ಮದುವೆ ಮಾಡಿಸಿ ಗೃಹಿಣಿಯರನ್ನಾಗಿ ಮಾಡಿಸಿದನು (ಪು. 199) ಎಂದು ಬರೆಯಲಾಗಿದೆ.

"ಜಾತಕ ಸಾಹಿತ್ಯದಲ್ಲಿ ಈ ಸಂಪ್ರದಾಯದ ಉಲ್ಲೇಖವಿಲ್ಲ. ಗ್ರೀಕ್ ಲೇಖಕರು ಇದನ್ನು ಹೆಸರಿಸಿಲ್ಲ. ಅರ್ಥಶಾಸ್ತ್ರದಲ್ಲಿ ಗಣಿಕೆಯರ ವಿಷಯವು ವಿಸ್ತಾರವಾಗಿ ಬಂದಿದ್ದರೂ ದೇವದಾಸಿಯರನ್ನು ಹೆಸರಿಸಿಲ್ಲ. ಕ್ರಿ.ಶ. ಮೂರನೆಯ ಶತಮಾನದಿಂದ ಈ ಸಂಪ್ರದಾಯ ಆರಂಭವಾಗಿರಬಹುದು. ಉಜ್ಜಯಿನಿಯ ಮಹಾಕಾಲ ದೇವಸ್ಥಾನದಲ್ಲಿ ನರ್ತಕಿಯರಿದ್ದ ವಿಷಯವನ್ನು ಮೇಘದೂತ ಕಾವ್ಯದಲ್ಲಿ ಕಾಳಿದಾಸನು ಉಲ್ಲೇಖಿಸುತ್ತಾನೆ. ದೇವಪೂಜೆಯ ಸಂದರ್ಭದಲ್ಲಿ ಸಂಗೀತಕ್ಕಾಗಿ ಸ್ತ್ರೀಯರನ್ನು ನೇಮಿಸಿಕೊಳ್ಳಬೇಕೆಂದು ಹಲವು ಪುರಾಣಗಳು ಹೇಳುತ್ತವೆ. ಈ ಸ್ತ್ರೀಯರು ಸಾಮಾನ್ಯವಾಗಿ ವೇಶ್ಯಯರು. ಇವರನ್ನು ದೇವಸ್ಥಾನಗಳಿಗಾಗಿ ಕೊಂಡುಕೊಳ್ಳಬೇಕೆಂದು ಕೆಲವು ಪುರಾಣಗಳು ಸೂಚಿಸುವುದು ವಿಷಾದನೀಯ. ಸೂರ್ಯಲೋಕವನ್ನು ಪಡೆಯಲು ಸೂರ್ಯದೇವ ಸ್ಥಾನಕ್ಕೆ ವೇಶ್ಯೆಯರನ್ನು ದಾನವಾಗಿ ನೀಡುವುದು ಉತ್ತಮ ಮಾರ್ಗವೆಂದು ಭವಿಷ್ಯ ಪುರಾಣ ಹೇಳುತ್ತದೆ. ಆರನೆಯ ಶತಮಾನದಲ್ಲಿ ಈ ಸಂಪ್ರದಾಯ ಹೆಚ್ಚಾಗಿ ಹರಡಿರಬೇಕು. ಏಳನೇ ಶತಮಾನದಲ್ಲಿ ಭಾರತಕ್ಕೆ ಬಂದ ಹುಯೆನ್‌ತ್ಸಾಂಗನು ಮುಲ್ತಾನ್ ಎಂಬಲ್ಲಿ ಸೂರ ದೇವಸ್ಥಾನದಲ್ಲಿ ಗಾಯಕಿಯರನ್ನು ಕಂಡೆ ಎಂದು ಹೇಳುತ್ತಾನೆ. ಕಾಶ್ಮೀರದಲ್ಲಿ ಏಳನೆಯ ಶತಮಾನದಿಂದಲೇ ಈ ಸಂಪ್ರದಾಯವಿತ್ತೆಂದು ಕಲ್ಲಣನ ರಾಜತರಂಗಿಣಿಯಲ್ಲಿ ಉಲ್ಲೇಖವಿದೆ. ಗುಜರಾತಿನ ಬಹು ಪ್ರಸಿದ್ಧವಾದ ಸೋಮನಾಥ ದೇವಾಲಯದಲ್ಲಿ ಐನೂರು ಮಂದಿ ನರ್ತಕಿಯರಿದ್ದರೆಂದು ತಿಳಿದು ಬರುತ್ತದೆ. ರಾಜರಾಜನು ತಂಜಾವೂರಿನಲ್ಲಿ ದೇವಸ್ಥಾನದ ಸೇವೆಗಾಗಿ ನಾಲ್ಕು ನೂರು ಮಂದಿ ನರ್ತಕಿಯರನ್ನು ಒದಗಿಸಿದ್ದನು", ಎಂದು ಡಾ ಅಲ್ವೇಕರರು ಹೇಳುತ್ತಾರೆ.

ಶೂದ್ರಕ ಕವಿ ಬರೆದ ಸಂಸ್ಕೃತ ನಾಟಕದಲ್ಲಿ ವಸಂತ ಸೇನೆಯೆಂಬ ವೇಶ್ಯೆಯ ಕಥೆಯಿದೆ. ಈಕೆಯು ಚಾರುದತ್ತನೆಂಬ ಶ್ರೀಮಂತ ಬ್ರಾಹ್ಮಣನನ್ನು ಮೋಹಿಸಿ ಮದುವೆಯಾಗುವ ಪ್ರಸ್ತಾಪ ಬರುತ್ತದೆ. ಕ್ರಿ. ಪೂ.300 - ಕ್ರಿ.ಶ. 200ರ ವರೆಗಿನ ಸಂಗಮ ಯುಗದ ಕೃತಿ ಶಿಲಪ್ಪದಿಕಾರಂ ಮತ್ತು ಚಾತ್ತನಾರ್ ಕವಿಯಿಂದ ರಚಿತವಾದ ಮಣಿಮೇಖಲೈ ಕೃತಿಗಳಲ್ಲಿ ವೇಶ್ಯೆಯರ ಉಲ್ಲೇಖವಿದೆ.

ಮೊಗಲ್ ದೊರೆ ಅಕ್ಟರನ ಕಾಲದಲ್ಲಿದ್ದ ಅಬುಲ್ ಫಜಲ್ ಬರೆದ ಐನ್, ಇ. ಅಕ್ಟರಿಯಲ್ಲಿ "ರಾಜ್ಯದಲ್ಲಿ ವೇಶ್ಯೆಯರು ಸೈತಾನ್‌ಪುರ (ದೆವ್ವದ ವಾಸಸ್ಥಳ) ದಲ್ಲಿ ಅವರಿಗೆ ಪ್ರತ್ಯೇಕವಾಗಿ ಸಿದ್ಧಪಡಿಸಿದ ಪ್ರದೇಶದಲ್ಲಿ ಎಣಿಕೆಗೂ ಸಿಗದಷ್ಟು ಮಂದಿ ವೇಶ್ಯೆಯರಿದ್ದರು. ಅಲ್ಲಿ ಒಬ್ಬ ದರೋಗಾ (ಪೋಲೀಸ್ ಅಧಿಕಾರಿ)ನನ್ನು ನೇಮಿಸಲಾಗಿತ್ತು. ಅವನು ವೇಶ್ಯಯರಿಗಾಗಿ ಬಂದವರ ಹೆಸರು ಮತ್ತು ಮನೆಗೆ ಕರೆದುಕೊಂಡು ಹೋಗುತ್ತಿದ್ದವರ ಹೆಸರುಗಳನ್ನು ನೋಂದಾಯಿಸುತ್ತಿದ್ದನು. ಸುಂಕದ ಅಧಿಕಾರಿಗಳಿಗೆ ತಿಳಿಸಿ ಜನರು ಈ ಸಂಬಂಧವನ್ನು ಪಡೆಯುತ್ತಿದ್ದರು. ಅನುಮತಿಯಿಲ್ಲದೆ ನೃತ್ಯದ ಹುಡುಗಿಯರನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಲು ಅವಕಾಶವಿರಲಿಲ್ಲ. ಅಕ್ಟರನ ಆಸ್ಥಾನದ ಪ್ರಸಿದ್ಧ ಸಂಗೀತಗಾರನಾದ ತಾನ್‌ಸೇನನು ಈ ನರ್ತಕಿಯರ ಪೋಷಕನಾಗಿದ್ದನು" ಎಂದು ಇತಿಹಾಸಕಾರರು ಹೇಳುತ್ತಾರೆ (ಬ್ಲಾಕ್‌ಮನ್ ಮತ್ತು ಜರೆಟ್) ಆ ನಂತರದ ಜಹಾಂಗೀರ ಮತ್ತು ಶಹಜಹಾನನ ಕಾಲದಲ್ಲಿ ಈ ಪದ್ಧತಿ ವ್ಯಾಪಕವಾಗಿ ಬೆಳೆಯಿತು. ಔರಂಗಜೇಬನು ಅರಸನಾದ ಮೇಲೆ ಈ ನೃತ್ಯದ ಹುಡುಗಿಯರಿಗೆ ಮದುವೆ ಮಾಡಿಸಿದ. ಮದುವೆಯಾಗಲು ಒಪ್ಪದವರನ್ನು ತನ್ನ ರಾಜ್ಯದಿಂದ ಹೊರಗೆ ಹಾಕಿದ ಎಂದು ಎಲಿಯೆಟ್ ತನ್ನ ಕೃತಿಯಲ್ಲಿ ಬರೆದಿದ್ದಾನೆ.

ಸೋಮನಾಥ ಕವಿಯು "ಸೂಳೆಗೊಬ್ಬಳು ಮಗಳು ಹುಟ್ಟಿದರೆ ಪ್ರಯೋಜನವೇನು? ಅವಳು ಮತ್ತೋರ್ವ ಬೆಲೆವೆಣ್ಣಾಗುತ್ತಾಳೆ. ಸೂಳೆಯ ಮಗ ಶ್ರಾದ್ಧವ ಮಾಡಿದರೆ ತಾಯಿಯ ಹೆಸರು ಮಾತ್ರವಿರುತ್ತದೆ ತಂದೆಯ ಹೆಸರಿಲ್ಲ ಎನ್ನುತ್ತಾನೆ. ಭಾಸ್ಕರ ಕವಿಯು ತನ್ನ ಕೃತಿಯಲ್ಲಿ ನಾನಾ ವರ್ಣದ ಜನಗಳ ಎಂಜಲು ತಿಂದು ಬದುಕುವ ವೇಶ್ಯೆಯರ ಬಾಳು ಸುಡಲಿ" ಎನ್ನುತ್ತಾನೆ. ಬಡವನ ಸ್ತ್ರೀ, ವೃದ್ಧನ ವಧು, ಷಂಡನ ಹೆಂಡತಿ, ರೋಗಿಯ ಪತ್ನಿ ಮುಂತಾದವರ ಪರಿಸ್ಥಿತಿಗಳು ವ್ಯಭಿಚಾರಕ್ಕೆ ಕಾರಣವೆನ್ನುತ್ತಾರೆ ಕವಿಗಳು.

ಬಡವನ ಹೆಂಡತಿ ಕಡು ಚೆಲ್ವೆಯಾದರೆ ನಡು ಬೀದಿಯೊಳಗೆ ದವನವ ಬಿತ್ತಲು ಮುಡಿಯದವರಾರು ಎನ್ನುತ್ತಾನೆ ಸರ್ವಜ್ಞ.

ವಿಜಯನಗರದ ವೇಶ್ಯೆಯರ ಕೇರಿಗಳಲ್ಲಿ ಸಂಜ್ಞಾ ಗಂಟೆ ಇರುವ ವಿಚಾರವನ್ನು ಕೆಲವು ಕವಿಗಳು ವರ್ಣಿಸಿದ್ದಾರೆ. ವಿದೇಶಿ ಪ್ರವಾಸಿಗಳೂ ಇದನ್ನು ಉಲ್ಲೇಖಿಸಿದ್ದಾರೆ. ವಿಟರು ಬಂದರೆ ಗಂಟೆಯನ್ನು ಬಾರಿಸುತ್ತಿದ್ದರು ಎಂದು ತಿಳಿಯುತ್ತದೆ. ಸೂಳೆಗೇರಿಗಳಲ್ಲಿ ಶಾಸ್ತ್ರೀಯ ಸಂಗೀತವು ಕೇಳಿ ಬರುತ್ತಿತ್ತು ಎಂದು ನಂಜುಂಡ ಕವಿಯು ತನ್ನ ಕಾವ್ಯದಲ್ಲಿ ವರ್ಣಿಸುತ್ತಾನೆ, ಮುದಿ ವೇಶ್ಯೆಯರ ಪರಿಸ್ಥಿತಿಗಳನ್ನು ಕೂಡಾ ಕವಿಗಳು ಚಿತ್ರಿಸಿದ್ದಾರೆ. ಅದೇ ರೀತಿ ವೃದ್ಧ ವಿಟರ ಮನೋ ವೈಕಲ್ಯವನ್ನು ಕಂಡು ಕವಿ ವಿಸ್ಮಯ ಪಡುತ್ತಾನೆ. 12ನೇ ಶತಮಾನದಲ್ಲಿ ಬಸವಣ್ಣನ ಸಾಮಾಜಿಕ ಕ್ರಾಂತಿಯು ಅನುಭವ ಮಂಟಪದಲ್ಲಿ ಶೂದ್ರರು ಅಂತ್ಯಜರು ಮಹಿಳೆಯರು ಎಲ್ಲರನ್ನು ಸಮಾನವಾಗಿ ಕಂಡು ದೀಕ್ಷೆ ನೀಡಿತು. ಸೂಳೆ ಸಂಕವ್ವ ಬರೆದ ವಚನವು ವೇಶ್ಯಯು ತನ್ನ ವಚನದಲ್ಲಿ ಕರ್ತವ್ಯ ನಿಷ್ಠೆಯನ್ನು ತೋರಿದ ರೀತಿಯನ್ನು ವರ್ಣಿಸಿದ್ದಾಳೆ. "ಒತ್ತೆಯ ಹಿಡಿದು ಮತ್ತೊತ್ತೆಯ ಹಿಡಿದಡೆ ಬತ್ತಲೆ ನಿಲ್ಲಿಸಿ ಕೊಲುವರಯ್ಯ ವ್ರತಹೀನರನು ಬೆರೆದಡೆ ಕಾದ ಕತ್ತಿಯಲ್ಲಿ ಕೈ, ಕಿವಿ, ಮೂಗು ಕೊಯ್ದರಯ್ಯಾ, ಒಲ್ಲೆಲ್ಲೊ ಒಲ್ಲೆನಾಗಿ ನಿಮ್ಮಾಣೆ ನಿರ್ಲಜೇಶ್ವರಾ ಎನ್ನುತ್ತಾಳೆ. ದಾಸೀಪುತ್ರನಾಗಲಿ, ವೇಶ್ಯ ಪುತ್ರನಾಗಲಿ ಎಲ್ಲರೂ ಶಿವ ದೀಕ್ಷೆಯಾದ ಬಳಿಕ ಸಾಕ್ಷಾತ್ ಶಿವನೆಂದು ಪೂಜಿಸಿ ಪಾದೋದಕ ಕೊಳ್ಳಬೇಕು. ಉದಾಸೀನ ಮಾಡಿದರೆ ಪಂಚ ಮಹಾಪಾತಕ ಮತ್ತು ನರಕ ಪ್ರಾಪ್ತಿಯಾಗುವುದು ಎಂದು ಬಸವಣ್ಣ ಸಾರಿದ್ದರಿಂದ ಅವನ ಕಾಲದಲ್ಲಿ ವೇಶ್ಯಯರನ್ನು ಮಾನವೀಯ ದೃಷ್ಟಿಯಿಂದ ಕಾಣುವ ಮನಸ್ಥಿತಿ ಸಮಾಜದಲ್ಲಿ ಮೂಡಿರಬಹುದೆಂದು ಊಹಿಸಬಹುದು. ಆದರೆ ಆ ನಂತರದ ಕಾಲದಲ್ಲಿ ರಾಜರು ಮತ್ತು ಪುರೋಹಿತ ಶಾಹಿಯ ಬೆಂಬಲದಿಂದ ಈ ಪದ್ಧತಿಗೆ ಬೇರೆಯದೇ ರೂಪವನ್ನು ಸೃಷ್ಟಿಸಿದರು. ಮುಂದಿನ ನಾಲೈದು ಶತಮಾನಗಳಲ್ಲಿ ವೇಶ್ಯಾವಾಟಿಕೆಯು ಎಲ್ಲಾ ವರ್ಗಗಳಲ್ಲೂ ಎಲ್ಲಾ ವರ್ಣಗಳಲ್ಲಿ ವ್ಯಾಪಿಸಿಕೊಂಡದ್ದನ್ನು ಕಾಣಬಹುದು (ಪುಟ 54 ಶಾಸನಗಳಲ್ಲಿ ವೇಶ್ಯಯರು)

ಪ್ರಾಚೀನ ಮಹಾ ಕಾವ್ಯಗಳಲ್ಲಿ ಬರುವ ಅಷ್ಟಾದಶ ಅಂದರೆ 18 ವರ್ಣನೆಗಳಲ್ಲಿ ವೇಶ್ಯಾವಾಟಿಕೆಯ ವರ್ಣನೆಯೂ ಕಡ್ಡಾಯವಾಗಿತ್ತು ಶೃಂಗಾರದ ವರ್ಣನೆಯಲ್ಲಿ ನುರಿತವನೇ ಮೇರುಕವಿ ಎಂಬ ಬಿರುವು ಲಭ್ಯವಾಗುತ್ತಿತ್ತು. ವೇಶ್ಯಾವಾಟಿಕೆಯ ವರ್ಣನೆಗಳು ಕೆಲವು ಕವಿಗಳ ಕೃತಿಗಳಲ್ಲಿ ಬಹಳ ಕೀಳು ಮಟ್ಟದಲ್ಲಿರುತ್ತಿದ್ದವು. ಕೆಲವು ಕವಿಗಳು ಈ ವರ್ಣನೆಯನ್ನು ಸಭ್ಯ ರೀತಿಯಲ್ಲಿ ಅಂದರೆ ಸಹೃದಯರಿಗೆ ಮುಜುಗರವಾಗದಂತೆ ಬರೆದವರೂ ಇದ್ದಾರೆ". ಈ ವೇಶ್ಯಾವಾಟಿಕೆಯ ವರ್ಣನೆಯನ್ನು ಕಾವ್ಯದಲ್ಲಿ ತುರುಕಲು ನಾರದನನ್ನೋ, ಕಥಾ ನಾಯಕನನ್ನೋ, ಪ್ರತಿನಾಯಕನ್ನೂ ಸೇನಾಪತಿಗಳನ್ನೋ ವೇಶ್ಯಾವಾಟಿಕೆಗೆ ಒಂದು ಸುತ್ತು ಬರುವಂತೆ ಸಂದರ್ಭಗಳನ್ನು ಸೃಷ್ಟಿ ಮಾಡಿದ್ದೂ ಇವೆ.

ಪಂಪನು ತನ್ನ ವಿಕ್ರಮಾರ್ಜುನ ವಿಜಯ ಕಾವ್ಯದ ನಾಲ್ಕನೆಯ ಅಧ್ಯಾಯ ದಲ್ಲಿ ಕಥಾನಾಯಕ ಅರಿಕೇಸರಿ (ಅರ್ಜುನ)ಯನ್ನು ವೇಶ್ಯಾವಾಟಿಕೆಯಲ್ಲಿ ಸುತ್ತಾಡಿಸು ತ್ತಾನೆ. ವೇಶ್ಯಾ ಸ್ತ್ರೀಯರನ್ನು ನಾಲ್ಕು ಭಾಗವಾಗಿ ವರ್ಗೀಕರಣ ಮಾಡುತ್ತಾನೆ. ಜೋಡೆಗೆಯದ ಮಾಲೆಗಾರ್ತಿಯರು, ಜೋಡೆಯರು, ಪೆಂಡವಾಸದ ಒಳ್ಕೊಂಡಿರು, ಪೆಂಡಿರಂತೆ ಸೊಗಯಿಸುವ ಒಳ್ಳೆಂಡಿರು. ಈ ನಾಲ್ಕು ಬಗೆಯ ವೇಶ್ಯೆಯರ ಹಾವಭಾವ ಮತ್ತು ಕೆಲಸಗಳನ್ನು ವಿವರವಾಗಿ ವರ್ಣಿಸಿದ್ದಾನೆ. ಹಾಗೆಯೇ ವಿಟರಲ್ಲೂ ನಾಲ್ಕು ಬಗೆಯ ವರ್ಗೀಕರಣ ಮಾಡಿದ್ದಾನೆ. ಅರಸು ಬೊಜಂಗ, ಕಿರುಕುಳ ಬೊಜಂಗ, ಪೋರ್ಕುಳಿ ಬೊಜಂಗ, ಕತ್ತುರಿ ಬೊಜಂಗ, ಪಂಪನ ಕಾಲದ ಮಾನವ ಸಮಾಜದ ಮಾನಸಿಕ ಸ್ಥಿತಿಯನ್ನು ತುಂಬ ಸೂಕ್ಷ್ಮವಾಗಿ ಗಮನಿಸಿದ ಮನಶಾಸ್ತ್ರೀಯವಾದ ಒಂದು ನೋಟವನ್ನು ಈ ಕಾವ್ಯದಲ್ಲಿ ಕಾಣಬಹುದು. ಇದಕ್ಕಿಂತಲೂ ವಿಶೇಷವೆಂದರೆ ಸೂಳೆಗೇರಿಯ ಪಾನಗೋಷ್ಠಿಯ ವರ್ಣನೆ. ಸುಮಾರು 360 ಜಾತಿಯ ಕಳ್ಳುಗಳನ್ನು ವೇಶ್ಯಾವಾಟಿಕೆಯಲ್ಲಿ ವಿಟರು ಮಧುದೇವತಾರ್ಚನೆ ಮಾಡುತ್ತಿದ್ದ ವಿವರಗಳು ಇವೆ. ಕಳ್ಳಿನ ಜೊತೆಗೆ ನೆಂಚಿಕೊಳ್ಳುವ ಚಾಕಣಗಳ ವರ್ಣನೆಗಳೂ ಇವೆ.

ನೇಮಿಚಂದ್ರನೆಂಬ ಕವಿಯು ಸ್ತ್ರೀ ರೂಪವೇ ರೂಪ, ಶೃಂಗಾರವೇ ರಸ ವೆಂದು ನಂಬಿದವನು. ಅವನ ಲೀಲಾವತಿ ಕಾವ್ಯದ ಎರಡನೇ ಆಶ್ವಾಸ ಪೂರ್ತಿ ಸೂಳೆಗೇರಿಯ ವರ್ಣನೆಗೆ ಮೀಸಲಾಗಿಟ್ಟಿದ್ದಾನೆ. ಈ ಚಂಪೂ ಕಾವ್ಯದ ಮಧ್ಯದಲ್ಲೇ ದೇಸೀ ಛಂದಸ್ಸಿನ 10 ತ್ರಿಪದಿಗಳನ್ನು ವೇಶ್ಯೆಯರ ವರ್ಣನೆಗೆ ಬಳಸಿಕೊಂಡಿದ್ದಾನೆ. ಸೂಳೆಯನ್ನು ಬೆಲೆವೆಣ್ಣು ಎಂದು ಸಾರಿ ಸೂಳೆ ಸಿದ್ಧಾಂತವನ್ನು ಬರೆದು ಅಗ್ಗದ ಮನರಂಜನೆಯನ್ನುಂಟು ಮಾಡಿದ್ದಾನೆ. ಪಂಪನಲ್ಲಿ ಕಾಣುವ ವೇಶ್ಯೆಯರ ಕುರಿತಾದ ಜೀವನ ವಿಮರ್ಶೆ ನೇಮಿಚಂದ್ರನಲ್ಲಿ ಕಾಣುವುದಿಲ್ಲ. ಕಾಳಿದಾಸನ ಕಾಲದಲ್ಲಿ ಶೃಂಗಾರ ವರ್ಣನೆಯು ಕಾವ್ಯದಲ್ಲಿ ಬಹಳ ಮನೋಜ್ಞವಾಗಿದ್ದದ್ದು ಕ್ರಮೇಣ ಅದು ಹಳಸಿ ನಾರುವ ಸ್ಥಿತಿಗೆ ತಲುಪಿತು. ಆಲಿಂಗನ, ಚುಂಬನಗಳಿರುವ 'ವಯಸ್ಕರಿಗೆ ಮಾತ್ರ' ಎಂಬ ಲೇಬಲ್‌ಯಿರುವ ಸೆಕ್ಸ್ ಸಿನಿಮಾಗಳಂತೆ ಕಾವ್ಯಗಳು ಓದುಗರ ಮನಸ್ಸನ್ನು ಕೆರಳಿಸುವಂತಿದ್ದವು. ಮಾಘ ಕವಿಯ ಶಿಶುಪಾಲ ವಧೆ ಎಂಬ ಸಂಸ್ಕೃತ ಕಾವ್ಯವನ್ನು ಓದಿ 'ಮಾಘ ಓದಿ ಮಗ ಕೆಟ್ಟ' ಎಂಬ ನಾಣ್ಣುಡಿಯೇ ಆಗ ಪ್ರಚಲಿತದಲ್ಲಿತ್ತು.

ನೇಮಿಚಂದ್ರನು 12ನೆಯ ಶತಮಾನದಲ್ಲಿ ಆಳಿದ ಸವದತ್ತಿಯ ಪಟ್ಟದೊರೆ ಲಕ್ಷ್ಮಣರಾಜನ ಆಸ್ಥಾನದಲ್ಲಿದ್ದ ಕವಿ. 'ಲೀಲಾವತಿ ಪ್ರಬಂಧಂ' ಎಂಬ ಚಂಪೂ ಕಾವ್ಯವನ್ನು ಬರೆದನು. ಇದೊಂದು ಶೃಂಗಾರ ಕಾವ್ಯ. ಕಂದರ್ಪ ದೇವ ಮತ್ತು ಲೀಲಾವತಿಯ ಶೃಂಗಾರ ವಿರಹಗಳುಳ್ಳ ಕಥಾ ವಸ್ತುವಿದೆ. ಕಥಾ ನಾಯಕನಾದ ಕಂದರ್ಪ ದೇವನಿಗೆ ಸ್ತ್ರೀ ಸ್ವಭಾವಗಳ ಪ್ರತ್ಯಕ್ಷ ದರ್ಶನ ಮಾಡಿಸಬೇಕೆಂಬ ಉದ್ದೇಶದಿಂದಲೋ ಅಥವಾ ಮಹಾಕಾವ್ಯಗಳಲ್ಲಿ ವೇಶ್ಯಾವಾಟಿಕೆಯ ವರ್ಣನೆಯು ಇರಲೇಬೇಕು ಎಂಬ ಒತ್ತಡಕ್ಕೋ ಸಿಲುಕಿ ಕವಿ ದೀರ್ಘವಾಗಿಯೇ ವೇಶ್ಯೆಯರ ವರ್ಣನೆ ಮಾಡಿದ್ದಾನೆ. ಯುವಕನಾದ ಕಂದರ್ಪ ದೇವನು ವೇಶ್ಯಾವಾಟಿಕೆಯನ್ನು ಸುತ್ತಾಡಿದರೂ ಅವನ ಮನಸ್ಸು ಉದ್ರೇಕಗೊಳ್ಳಲಿಲ್ಲ. ಚಿತ್ತವು ಕಲಕಲಿಲ್ಲವೆಂದು ವ್ಯಕ್ತ ಪಡಿಸುವುದು ಕವಿಯ ಉದ್ದೇಶವಾಗಿದೆ. ಆದರೆ ಈ ಭಾಗವನ್ನು ಓದಿದವರ ಚಿತ್ರ ಕಲಕುವುದಂತೂ ಸತ್ಯ. ಈ ಪ್ರಸಂಗದ ವರ್ಣನೆಯು ಕವಿಯ ಔಚಿತ್ಯ ಪ್ರಜ್ಞೆಯ ಬಗ್ಗೆ ಸಂದೇಹವುಂಟಾಗುತ್ತದೆ.

ರಾಘವಾಂಕ ಕವಿಯ ಹರಿಶ್ಚಂದ್ರ ಕಾವ್ಯದಲ್ಲೂ ವೇಶ್ಯಾವಾಟಿಕೆಯ ವರ್ಣನೆ ಇದೆ. ಸೂಳೆಗೇರಿಯು ಜಾಣಿನ ಜನ್ಮಭೂಮಿ, ಸಿಂಗರದ ಮಡು. ಮೋಹನದ ಬೀಡು, ಸೊಬಗಿನ ಸೀಮೆ, ಚದುರಿನ ಛಾವಡಿ, ಪುರುಡಿನ ಎಡೆ, ಉಪಚಾರದ ಇಕ್ಕೆ, ವೈಸಿಹದ ಹರವರಿ, ಹುಸಿಯ ಸರ, ಕೃತಕದ ಕೇರಿ, ಅರ್ಥದ ಆಗರ, ಅಳುಪಿನ ಆವಾಸವೆನ್ನುತ್ತಾನೆ. ಮಾಳಿಗೆಗಳಲ್ಲಿ ಲೆತ್ತವಾಡುವ, ವೀಣೆ ನುಡಿಸುವವರು, ಕಾಮ ಶಾಸ್ತ್ರವನ್ನು ಓದಿಸುವವರು, ಗೀತ ನೃತ್ಯ ವಾದ್ಯಗಳನ್ನು ಕಲಿಯುವವರು, ಕಲಿಸುವವರು, ಕಚಗುಳಿ ಆಟವನ್ನು ಆಡುವವರು ಇದ್ದುದನ್ನು ವರ್ಣಿಸುತ್ತಾನೆ. ಚಿತ್ರಿನಿ, ಹಸ್ತಿನಿ, ಶಂಖಿನಿ, ಪದಿನಿಯರೆಂಬ ನಾಲ್ಕು ಜಾತಿಯ ಭಿನ್ನ ಸ್ವಭಾವದ ತರುಣಿಯರು ಅವರ ವರ್ತನೆಗಳನ್ನು, ವಿಟ ಪುರುಷರ ಹಾವಭಾವಗಳನ್ನು, ಮಾತುಕತೆಗಳನ್ನು ವಿವರಿಸಿದ್ದಾನೆ. ಮುದಿ ವೇಶ್ಯೆಯರ ಸ್ಥಿತಿಯನ್ನು ಅತ್ಯಂತ ನೈಜವಾಗಿ ಚಿತ್ರಿಸಿದ್ದಾನೆ. ಹರಿಶ್ಚಂದ್ರನ ರಾಜದುರ್ಗದಲ್ಲಿರುವ ಸೂಳೆಗೇರಿಗಳಲ್ಲಿ ಚಿಕ್ಕ ವಯಸ್ಸಿನ ಸೂಳೆಯರಿರುವಂತೆ ಮುದಿ ವೇಶ್ಯೆಯರು ಇದ್ದರು. ಕೆಲವು ಕಡೆಗಳಲ್ಲಿ ಕವಿಯ ಕಾವ್ಯ ಲಹರಿಯ ಉತ್ತೇಕ್ಷೆ ಮತ್ತು ಆಡಂಬರದ ವರ್ಣನೆಗಳಿಂದ ಉಸಿರುಗಟ್ಟಿಸುವಂತಹ ಪ್ರಸಂಗಗಳಿದ್ದರೂ ಅವನ ಕಾಲದ ಸೂಳೆಗೇರಿಯನ್ನು ಬಹಳ ಸೂಕ್ಷ್ಮವಾಗಿ ವೀಕ್ಷಿಸಿ, ವಿವರಗಳನ್ನು ನೀಡಿದ್ದಾನೆ (ಪುಟ 32 ವೇಶ್ಯಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು).

ದೇವದಾಸಿಯರ ಬಗ್ಗೆ ವೇಶ್ಯೆಯರ ಬಗ್ಗೆ ಜಗತ್ತಿನ ಎಲ್ಲಾ ಭಾಷೆಗಳಲ್ಲಿ ಕತೆ, ಕವನ ಮತ್ತು ಕಾದಂಬರಿಗಳು ಪ್ರಕಟವಾಗಿವೆ. ಅದರಲ್ಲಿ ಈಜಿಪ್ಟಿನ ಲೇಖಕಿ ನವಲ್ ಎಲ್ ಸಾದವಿ ಬರೆದ ವುಮನ್ ಅಟ್ ಪಾಯಿಂಟ್ ಜೀರೋ ಬಹಳ ಮಹತ್ವದ ಕೃತಿಯಾಗಿದೆ. ಅದನ್ನು ಡಾ. ವೆಂ. ವನಜ ಅವರು ಶೂನ್ಯ ವಾದವಳು ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ಫಿರ್ದೋಸಾ ಎಂಬ ಚಿಕ್ಕ ಪ್ರಾಯದ ಬಡ ಹೆಣ್ಣುಮಗಳು ಪುರುಷರ ಲೈಂಗಿಕ ಶೋಷಣೆಗೆ ಸಿಲುಕಿ, ಮುದುಕ ಗಂಡನ ಶಿಕ್ಷೆಯಿಂದ ತಪ್ಪಿಸಿಕೊಂಡು ಓಡಿ ಹೋದ ಮೇಲೆ ಹಲವು ಗಂಡಸರ ಕಾಮದಾಹಕ್ಕೆ ಬಲಿಯಾಗಿ ವೇಶ್ಯಯಾಗುತ್ತಾಳೆ. ಅದರಿಂದ ಹೊರ ಬರುವ ದಾರಿಗಳೆಲ್ಲವೂ ಅವಳಿಗೆ ಮುಚ್ಚಲ್ಪಟ್ಟಿದ್ದವು. ದುಡಿಮೆಯ ಜೊತೆಗೆ ಭಾವನೆಗಳನ್ನು ತಳುಕು ಹಾಕದೆ ಬದುಕುವುದು ಅನಿವಾರ್ಯವಾಗಿತ್ತು. ಯಶಸ್ವೀ ವೇಶ್ಯಯೊಬ್ಬಳು ತಪ್ಪು ಮಾರ್ಗದಲ್ಲಿರುವ ಸನ್ಯಾಸಿಗಿಂತ ಮೇಲು, ಉಳಿದವರು ಹಣದಿಂದ ಪಡೆಯುವುದನ್ನು ಕ್ರಾಂತಿಕಾರಿ ಪುರುಷರು ತತ್ವ ಸಿದ್ಧಾಂತಗಳಿಂದ ಚಾಣಾಕ್ಷತೆಯಿಂದ ಪಡೆದುಕೊಳ್ಳುತ್ತಾರೆ ಎಂಬ ಸತ್ಯ ಅವಳಿಗೆ ಅರಿವಾಗುತ್ತದೆ. ತಲೆ ಹಿಡುಕನ ಕ್ರೌರ್ಯಕ್ಕೆ ರೋಸಿ ಆಕೆ ಅವನನ್ನು ಕೊಲ್ಲುತ್ತಾಳೆ. ಜೈಲಲ್ಲಿ ಅವಳಿಗೆ ಮರಣ ದಂಡನೆಯಾಗುತ್ತದೆ. ಕಥಾನಾಯಕಿ ಫಿರ್ದೋಸಾ ಅಪ್ಪಂದಿರು, ಮಾವಂದಿರು, ಗಂಡಂದಿರು, ತಲೆ ಹಿಡುಕರು, ವಕೀಲರು, ಡಾಕ್ಟರು, ಪತ್ರಕರ್ತರು ಎಲ್ಲಾ ವೃತ್ತಿಗಳಲ್ಲಿರೋ ಗಂಡಸರೂ ಅಪರಾಧಿಗಳು ಎಂಬ ತೀರ್ಮಾನಕ್ಕೆ ಬರುತ್ತಾಳೆ. ವೇಶ್ಯೆಯರ ಬದುಕಿನ ಹಿಂಸೆ, ನೋವುಗಳನ್ನು ವರ್ಣಿಸಿದ ರೀತಿಗೆ ಓದುಗರ ಕರುಳಲ್ಲಿ ಕತ್ತರಿಯಾಡಿಸಿದಂತಾಗುತ್ತದೆ. ಇದು ಪ್ರಪಂಚದ ಎಲ್ಲಾ ವೇಶ್ಯಯರ ವಾಸ್ತವ ಚಿತ್ರಣವೂ ಆಗಿದೆ.

ರತ್ನಾಕರವರ್ಣಿ ಬಾಳಿದ ಕಾಲ ವಿಜಯನಗರದ ಮತ್ತು ಶಾಹಿರಾಜ್ಯಗಳ ಸಂಘರ್ಷದ ಕಾಲವಾದ 16ನೆಯ ಶತಮಾನ ಇವನು ವಿಜಯನಗರದ ಸುವರ್ಣ ಯುಗವನ್ನು ಕಂಡವನು. ದ.ಕನ್ನಡ ಜಿಲ್ಲೆಯ ಮೂಡಬಿದಿರೆಯ ಬೈರರಸನ ಆಸ್ಥಾನದಲ್ಲಿದ್ದವನು. ಶೃಂಗಾರ ಕವಿಯೆಂದೇ ಪ್ರಸಿದ್ಧನು. ವಿಜಯನಗರದ ಪ್ರಸಿದ್ಧ ವೇಶ್ಯಾವಾಟಿಕೆಗಳುಳ್ಳ ರಾಜಬೀದಿಯನ್ನು ಕಂಡವನಂತೆ ಕಾವ್ಯದಲ್ಲಿ ವೇಶ್ಯಾವಾಟಿಕೆ ಸ್ತ್ರೀಯರ ನೃತ್ಯ ವೈಭವವನ್ನು ವರ್ಣಿಸಿದ್ದಾನೆ. ಪೂರ್ವ ನಾಟಕ ಸಂಧಿಯ ನೇತ್ರ ಮೋಹಿನಿ, ಚಿತ್ತ ಮೋಹಿನಿಯರೆಂಬ ವೇಶ್ಯೆಯರನ್ನು ಕವಿ ಶೃಂಗಾರ ರಸವುಕ್ಕುವಂತೆ ವರ್ಣಿಸಿದ್ದಾನೆ. ನೃತ್ಯದ ಬಳಿಕ ನರ್ತಕಿಯರ ಕಾಮಾತುರತೆಯನ್ನು ವಿವರಿಸಿದ್ದಾನೆ. ಭರತ ಚಕ್ರವರ್ತಿಯು ಅವರನ್ನು ಉಂಗುಷ್ಠದಿಂದ ಸ್ಪರ್ಶಿಸಿ ಅನುಗ್ರಹಿಸಿದ ರೀತಿ ವಿಚಿತ್ರವೆನಿಸುತ್ತದೆ. "ಸೂಳೆಯರಿಲ್ಲವೆ ಕೂಡೆ ಲಜ್ಜೆಯ ನೂಂಕಿ । ಮೇಳ ಸಹಿತ ಹೋದರೆಸೆದು" ಎಂದು ಹೇಳಿರುವುದು ಮಾತ್ರ ಕವಿಯು ಅವರನ್ನು ಮಾನವೀಯ ದೃಷ್ಟಿಯಿಂದ ಕಂಡಿಲ್ಲ ಎಂಬುದನ್ನು ಸ್ಪಷ್ಟ ಪಡಿಸುತ್ತದೆ. ಉಪ್ಪರಿಗೆ ಸಂಧಿ ಮತ್ತು ಸಂಭೋಗ ಸಂಧಿಯಲ್ಲಂತೂ ಕಾಮದ ಅತಿರೇಕದ ವರ್ಣನೆಗಳನ್ನು ಓದುಗರು ಸಂಕೋಚ ಪಟ್ಟು ಓದುವಂತೆ ವರ್ಣಿಸಿದ್ದಾನೆ.

ಸರ್ವಜ್ಞನು ಶ್ರೇಷ್ಟ ದಾರ್ಶನಿಕ ಮತ್ತು ಅವಧೂತ ಕವಿ, ಅಶು ಕವಿಯೂ ಹೌದು. ಸಮಾಜದ ಅಂಕು ಡೊಂಕುಗಳನ್ನು ಜನರ ಮೂಢ ನಂಬಿಕೆಗಳನ್ನು, ಅನ್ಯಾಯ ಅಧರ್ಮಗಳನ್ನು ಕಂಡ ಕಂಡಲ್ಲಿ ವಚನಗಳ ಮೂಲಕ ಚಾಟಿಯೇಟು ಬೀಸಿದವನು. ವೇಶ್ಯೆಯರ ಬಗ್ಗೆ ಬರೆದ 40 ವಚನಗಳು ಅವನ ಹೆಸರಿನಲ್ಲಿವೆ.

ಬೆಲೆವೆಣ್ಣಿನಾ ಬಾಯಿ ಹಲವೆಂಜನ ಬೇಡ।
ಹುಳಿ ಮುಟ್ಟಿ ಕಿಲುಬು ಕೆಡುವಂತೆ ಬಾಯವಳ।
ಎಲೆ ಮೆಲಲು ಶುದ್ಧ ಸರ್ವಜ್ಞ॥

ವೇಶ್ಯಯ ಬಾಯಿ ಹಲವು ಜನರಿಂದ ಎಂಜಲಾಗಿದೆ ಎಂದು ತಿಳಿಯಬಾರದು. ಕಿಲುಬು ಹತ್ತಿದ ಪಾತ್ರೆಗೆ ಹುಳಿಯನ್ನು ತಿಕ್ಕಲು ಅದು ಹೊರಟು ಹೋಗುವಂತೆ ಅವಳು ಎಲೆ ಅಡಿಕೆಯನ್ನು ತಿಂದ ನಂತರ ಆ ಬಾಯಿಯ ಮತ್ತೆ ಶುದ್ಧವಾಗುತ್ತದೆ ಎನ್ನುತ್ತಾನೆ ಸರ್ವಜ್ಞ ವ್ಯಭಿಚಾರವೆಂಬುದು ಸಮಾಜಕ್ಕೆ ಅಂಟಿದ ಕಿಲುಬು. ಈ ಕಿಲುಬನ್ನು ಶುಚಿಗೊಳಿಸುವವರು ಯಾರು? ಯಾರೂ ಇಲ್ಲ. ವೀಳ್ಯದೆಲೆಯನ್ನು ಮೆಲ್ಲುತ್ತಾ ವೇಶ್ಯೆಯು ಆ ಎಂಜಲನ್ನು ತಾನೇ ಶುದ್ಧ ಮಾಡಿಕೊಳ್ಳುತ್ತಾಳೆ ಎಂದು ಸರ್ವಜ್ಞನ ಅಭಿಪ್ರಾಯವಾಗಿದೆ. ಪ್ರಾಚೀನ ಮತ್ತು ಆಧುನಿಕ ಸಾಹಿತ್ಯದಲ್ಲಿ ವೇಶ್ಯೆಯರನ್ನು ಸಾಹಿತಿಗಳು ಹೇಗೆ ಕಂಡಿದ್ದಾರೆ ಎಂಬುದರ ಒಂದು ಪಕ್ಷಿನೋಟವಿದು.

ಶಾಸನಗಳಲ್ಲಿ ವೇಶ್ಯಾವಾಟಿಕೆ

ನಮ್ಮ ನಾಡಿನ ಶಾಸನಗಳಲ್ಲಿ ವೇಶ್ಯೆಯರ ಬಗ್ಗೆ ಹಲವು ಅಮೂಲ್ಯವಾದ ಮಾಹಿತಿಗಳು ಲಭಿಸುತ್ತವೆ. ಹೆಚ್ಚಿನ ಶಾಸನಗಳು ವೇಶ್ಯೆಯರನ್ನು ಸೂಳೆಯರೆಂದೇ ಪ್ರಧಾನವಾಗಿ ಸಂಬೋಧಿಸಿದೆ. ಅವರನ್ನು ನೃತ್ಯಗಾರ್ತಿಯರು, ಪಾತ್ರದವರು, ದೇವದಾಸಿಯರು ಎಂದೂ ಪರಿಚಯಿಸಿದೆ. ಅದಲ್ಲದೆ ಇತರ ಉಪಪ್ರಕಾರಗಳಾದ ಕನ್ಯಾದಾನ, ತೊತ್ತು ಸೇವೆ. ಮಹಿಳಾ ಊಳಿಗದವಳೆಂದೂ ದಾಖಲಿಸಿವೆ. ಕ್ರಿ.ಶ. ಏಳನೆಯ ಎಂಟನೆಯ ಶತಮಾನದಲ್ಲೇ ವೇಶ್ಯೆಯರಿದ್ದರೆಂದು ಕನ್ನಡ ಶಾಸನ ಸಾಹಿತ್ಯ ಕೃತಿಗಳು ದಾಖಲಿಸಿವೆ.

ಎಂಟನೆ ಶತಮಾನದ ಪಟ್ಟದಕಲ್ಲು ಶಾಸನದಲ್ಲಿ ಲೋಕೇಶ್ವರ ದೇವಾಲಯದಲ್ಲಿ ಉಲ್ಲೇಖಗೊಂಡ ಗೋಯ್ದಿನ ಪೊಡ್ಡಿ ಬಾದಿ(ಲಿ) ಪೊಡ್ಡಿಯರೇ ಕರ್ನಾಟಕದ ಪ್ರಥಮ ದೇವಾಲಯ ಸೂಳೆಯರು. ಎಂಟನೆ ಶತಮಾನದಲ್ಲಿ ಆರು, ಒಂಭತ್ತನೆ ಶತಮಾನದಲ್ಲಿ ಎರಡು, ಹತ್ತನೇ ಶತಮಾನದಲ್ಲಿ 16, 14ನೇ ಶತಮಾನದಲ್ಲಿ ಐದು ಶಾಸನಗಳಲ್ಲಿ ಸೂಳೆಯರ ಉಲ್ಲೇಖವಿದೆ. ಇವುಗಳಲ್ಲಿ ಮಣ್ಣಿ, ಲಕ್ಕುಂಡಿ, ಅರಸಿಬೀದಿಯ ಜೈನ ಬಸದಿಗಳನ್ನು ಬಿಟ್ಟರೆ ಮಿಕ್ಕವುಗಳು ಹಿಂದೂ ದೇವಾಲಯಕ್ಕೆ ಸಂಬಂಧಿಸಿದ ಶಾಸನಗಳಾಗಿವೆ. ಬಾದಾಮಿಯ ಮಹಾ ಕೂಟೇಶ್ವರ ದೇವಾಲಯವನ್ನು ಲಂಜಿಕಾ ಎಂಬ ವೇಶ್ಯ ಕಟ್ಟಿಸಿದ್ದರಿಂದ ಅದಕ್ಕೆ ಲಂಜಿಕೇಶ್ವರ (ಮಹಾಕೂಟೇಶ್ವರ) ಎಂಬ ಹೆಸರೂ ಇದೆ. ಇದೇ ದೇವಾಲಯಕ್ಕೆ ರಾಜ ವಿನಯಾದಿತ್ಯನ ಪ್ರಾಣವಲ್ಲಭೆಯಾದ ವಿನಾಪೋಟಿ ಎಂಬ ವೇಶ್ಯ ಹಿರಣ್ಯ ಗರ್ಭದಾನ ಮಾಡಿ, ಪೀಠಕ್ಕೆ ತಾಮ್ರದ ಹೊದಿಕೆ ಹಾಕಿಸಿ ದೇವರಿಗೆ ಬೆಳ್ಳಿಕೊಡೆ ಮತ್ತು ಭೂದಾನ ಮಾಡಿದ ವಿವರಗಳು ಶಾಸನದಲ್ಲಿ ದಾಖಲಾಗಿವೆ. ವೇಶ್ಯಯೋರ್ವಳು ದಾನ ನೀಡಿದ ಅತ್ಯಂತ ಪ್ರಾಚೀನ ಶಾಸನವು ಬಾಗಲಕೋಟೆಯ ಪಟ್ಟದಕಲ್ಲಿನಲ್ಲಿದೆ. ಇಲ್ಲಿನ ವಿರೂಪಾಕ್ಷ ದೇವಾಲಯಕ್ಕೆ ಒಂದು ಕುದುರೆ ರಥ ಮತ್ತು ಒಂದು ಆನೆಯ ರಥವನ್ನು ದೇಗುಲದ ಸೂಳೆ ದಾನ ಮಾಡಿದ ವಿವರಗಳಿವೆ.

ಕ್ರಿ.ಶ. 1113ನೇಯ ಇಸವಿಯ ಆಲನಹಳ್ಳಿಯಲ್ಲಿ ದೊರೆತ ಶಾಸನದಲ್ಲಿ ಮೊತ್ತಮೊದಲು ದೇವದಾಸಿ ಎಂಬ ಪದ ಪ್ರಯೋಗಿಸಲಾಗಿದೆ. ಕ್ರಿ.ಶ. ಒಂಭತ್ತನೆಯ ಶತಮಾನದ ಶಾಸನವೊಂದು ದೇವಾಲಯದ ಒಬ್ಬ ವೇಶ್ಯೆಯನ್ನು ರಾಜನು ವಿವಾಹವಾದುದನ್ನು ತಿಳಿಸುತ್ತದೆ. ದೇವಾಲಯದ ಸೂಳೆಯನ್ನು ದೇವರಾರತಿಯ ಸೂಳೆ, ಮದದ ಸೂಳೆ, ಓಲಗದ ಸೂಳೆ, ಪಾತ್ರದ ಸೂಳೆ ಎಂದು ಶಾಸನಗಳು ಉಲ್ಲೇಖಿಸುತ್ತವೆ. ದೇವಾಲಯಕ್ಕೆ ಕನ್ಯಾದಾನ ಮತ್ತು ಸೂಳೆ ದಾನ ಮಾಡಿದ ವಿವರಗಳನ್ನು ಚಿತ್ರದುರ್ಗದ ಶಾಸನವು ತಿಳಿಸುತ್ತದೆ. ಆರ್ಥಿಕ ಬಲವುಳ್ಳವರು ದೇವಸ್ಥಾನದ ಅಂಗಭೋಗ ಮತ್ತು ಲಿಂಗಭೋಗಕ್ಕೆ ದಾನ ನೀಡಿದ ಶಾಸನಗಳು ಹಲವಾರು ದೇವಸ್ಥಾನಗಳಲ್ಲಿವೆ. ಶಾಸನಗಳಲ್ಲಿ ವೇಶ್ಯಾ ಕುಟುಂಬದ ವಂಶಾವಳಿಯನ್ನೇ ದಾಖಲಿಸಿದ ಶಾಸನ ಕ್ರಿ.ಶ. 576ರ ದಾವಣಗೆರೆಯ ಕಾಡಚ್ಚಿ ಗ್ರಾಮದಲ್ಲಿದೆ. ಮಯ್ದಮರಸರ ಸೂಳೆ ಕಾಡಬ್ಬಿ, ಕಾಡಬ್ಬೆಯ ಮಗಳು ಕಾಡಬ್ಬೆ, ಕಾಡಬ್ಬೆಯ ಮಗಳು ಅಯ್ಯಬ್ಬೆ, ಅಯ್ಯಬ್ಬೆಯ ಮಗಳು ಕಳಿಂಗಬ್ಬೆಗಳಯ್ಯ ಪಲ್ಲಹಾರತಿ ಪರಕಿಯ ಮಗಳು ಕಳಿಂಗಬ್ಬೆ, ಕಳಿಂಗಬ್ಬೆಯ ಮಗಂಪರಕಯ್ಯ ಹೀಗೆ ಪರಂಪರೆಯಿಂದ ಎಡೆವರಿಯಿದೆ ಬಂದ ಧರ್ಮ ಸಂತತಿ" ಎಂದು ಉಲ್ಲೇಖಿಸಲ್ಪಟ್ಟಿದೆ.

ಸೂಡಿಯ ಕಾಳಿದೇವ ದೇವಾಲಯದ ಪಾತ್ರದ ಸಿರಿಯವ್ವ ಬಳ್ಳಿಗಾವೆಯ ತ್ರಿಪುರಾಂತಕ ದೇವಾಲಯದ ಪದ್ಮಾವತಿ, ಹುಣಿಗಾರ್ ಮಾದ, ಆನೆಯ ಮಾಳವ್ವ, ಚಿಂದ, ಹೊಯ್ಸಳೇಶ್ವರ ದೇವಾಲಯದ ಪಾತ್ರದ ದೇವವ್ವ ಹಾಡುವ ಕಾಮನ್ವೆಯರ ಹೆಸರುಗಳಿವೆ. ಈ ಶಾಸನಗಳು 11-12ನೆಯ ಶತಮಾನದವುಗಳು. ಕ್ರಿ.ಶ. 1372ರ ಹೆಗ್ಗಡದೇವನ ಕೋಟೆಯ ಶಾಸನವು ವಿಜಯಪುರದ ರಾಮನಾಥ ದೇವರ ಪಾತ್ರ ಭೋಗಕ್ಕಾಗಿ ನಾಗವ್ವ ಮತ್ತು ಮಗ ಹೀರ್ಯರಾಮಣ್ಣಗಳು ಕೇತವೆ ಎಂಬಾಕೆಯನ್ನು ಪಾತ್ರಕ್ಕಾಗಿ ದಾನ ನೀಡಿದ ವಿವರವಿದೆ.

ಕ್ರಿ.ಶ. 1027ರ ಸೂಡಿಯ ಶಾಸನವು ಬಲದ ದೆಸೆಯ ಪಾತ್ರಂ ಸೂಳೆ ವಕ್ಕಬ್ಬೆ ಮತ್ತು ಎಡ ದೆಸೆಯ ಪಾತ್ರಂ ಸೂಳೆ ಗಾರ್ಗಚ್ಛೆಗೆ ಅಕ್ಕಾ ದೇವಿಯು ದಾನ ನೀಡಿದ ವಿವರಗಳಿವೆ. ಉಳ್ಳವರು ದೇವಸ್ಥಾನದ ವೇಶ್ಯೆಯರಿಗೆ ದೇವಸ್ಥಾನಕ್ಕೆ ದಾನ ನೀಡಿದಂತೆಯೇ ವೇಶ್ಯಯರೂ ದಾನ ನೀಡಿದ್ದನ್ನು ಶಾಸನಗಳು ದಾಖಲಿಸಿವೆ. ಹಳೆಬೀಡಿನ ಹೊಯ್ಸಳೇಶ್ವರ ದೇವಾಲಯಕ್ಕೆ ಪಾತ್ರದ ಎಸ್ಸವ್ವ, ಲಕ್ಕನ್ವೆಯರು ನೀಡಿದ ದಾನದ ಉಲ್ಲೇಖವಿದೆ.

ಹಳೆಬೀಡಿನ ಹೊಯ್ಸಳೇಶ್ವರ ದೇವಸ್ಥಾನದ ಶಾಸನವೊಂದರಲ್ಲಿ ಪಾತರದವರು ಸಾಮೂಹಿಕವಾಗಿ ದಾನ ನೀಡಿದ ವಿವರಗಳಿವೆ. 12ನೇಯ ಶತಮಾನದ ವಿಜಾಪುರದ ಶಾಸನದಲ್ಲಿ ಅಯ್ಯಣಯ್ಯನ ವಾರವಧು ವಿಜಯದಬ್ಬೆಯು ಕಂಬ ದಾನವನ್ನು ನೀಡಿದ ವಿವರವಿದೆ. ಹೊಳೆ ಅನವೇರಿ ಶಾಸನದಲ್ಲಿ 'ಪಿರಿಯರವಣ' ಎಂಬ ತೆರಿಗೆಯನ್ನು ಆಯ್ತವರ್ಮನ ಸೂಳೆ ಪಿರಿಯ ಚಟ್ಟಿದ್ದೆಗೆ ವಿಧಿಸಿದ್ದನ್ನು ಹೇಳಿದೆ. ಈ ಎರಡು ಶಾಸನದಲ್ಲಿ ಸೂಳೆಯರ ಪಾಲಕರ ಹೆಸರನ್ನು ಶಾಸನದಲ್ಲಿ ಉಲ್ಲೇಖಿಸಿದ್ದು ವಿಶೇಷ.

ದೇವಸ್ಥಾನಗಳಲ್ಲಿ ಪ್ರತಿಯೊಂದು ಕಂಬದ ಮುಂದೆ ನಿಲ್ಲುವವರನ್ನು ಕಂಬದ ಸೂಳೆಯರು ಎನ್ನುತ್ತಿದ್ದರು. ಬಲದೆಸೆಯ ಕಂಬ ಎಡದೆಸೆಯ ಕಂಬದ ಸೂಳೆಯರೆಂದು ಚಾವುಂಡಬ್ಬೆ, ಅಸಗಬ್ಬೆ, ರೇವಕಬ್ಬೆ ಮುಂತಾದವರ ಹೆಸರುಗಳು ಅಕ್ಕೇಶ್ವರ ದೇವಾಲಯದ ಶಾಸನದಲ್ಲಿ ಉಕ್ತವಾಗಿವೆ. ದೇವರ ಉತ್ಸವಗಳಲ್ಲಿ ಚಾಮರ ಬೀಸುವ ಕೆಲಸವನ್ನು ಸೂಳೆಯರೇ ಮಾಡುತ್ತಿದ್ದರು. ಸೂಡಿಯಲ್ಲಿ ದೊರೆತ ಶಾಸನದಲ್ಲಿ ಎಡದ ಪಕ್ಕದ ಕೇರಿಯ ಮೊದಲ ದೆಸೆಯ ಚಾಮರದ ಸೂಳೆ, ಬಲದ ದೆಸೆಯ ಬಿಟ್ಟಿಯ ಚಾಮರದ ಸೂಳೆ, ಎಡದ ದೆಸೆಯ ಬಿಟ್ಟಿಯ ಚಾಮರದ ಸೂಳೆ, ಎಡದ ದೆಸೆಯ ಕೇರಿಯ ಚಾಮರದ ಸೂಳೆ, ಮುಂತಾದ ಕೇರಿಯ ಚಾಮರದ ಸೂಳೆಯರ ಅಬ್ಬೆ, ಆಟಬೈ ಮುಂತಾದ ಹೆಸರು ಸಹಿತ ಉಲ್ಲೇಖಿಸಿದೆ.

ಕಳ್ಳಿಹಾಳದ ಶಾಸನವೊಂದರಲ್ಲಿ "ಈ ನಾಲ್ವರು ಸೂಳೆಯರು ಎಲ್ಲಿಗೂ ಹೋಗಲಾಗದು" ಎಂಬ ಮಾತಿದೆ. ಹಲೆಯಬ್ಬೆ, ರಾಜಂಬೆ, ಕಾದಂಬೆಯೆಂಬ ಈ ಮಹಿಳೆಯರನ್ನು ಒತ್ತಾಯದಿಂದ ವೇಶ್ಯೆಯರನ್ನಾಗಿಸಿರಬಹುದೇ? ಎಲ್ಲಿಗೂ ಹೋಗಲಾಗದು ಎಂಬ ಶಾಸನಾದೇಶವು ಬೇರೇನನ್ನೋ ಹೇಳುತ್ತಿದೆ ಎಂದು ಅನಿಸುತ್ತದೆ. ಹಿಂದೆ ದೇವಸ್ಥಾನಗಳಿಗೆ ಬೇರೆ ಬೇರೆ ಕಡೆಗಳಿಂದ ಹಣಕೊಟ್ಟು ಖರೀದಿಸಿ ವೇಶ್ಯೆಯರನ್ನು ತರಿಸಲಾಗುತ್ತಿತ್ತು ಎಂದು ತಿಳಿದು ಬರುತ್ತದೆ. ಹಾಗೆ ಬೇರೆ ಕಡೆಯಿಂದ ತರಿಸಿದವರಾಗಿರಬಹುದೇ ಎಂಬ ಸಂದೇಹ ಉಂಟಾಗುತ್ತದೆ. ರಾಜವೇಶ್ಯೆಯರಿಗೆ ಹೆಣ್ಣುಮಕ್ಕಳು ಜನಿಸಿದರೆ ಅದೇ ವೃತ್ತಿಯನ್ನು ಮುಂದುವರಿಸುತ್ತಾರೆ. ಗಂಡು ಮಗು ಜನಿಸಿದರೆ ರಾಜನ ಸೇನೆಯಲ್ಲಿ ಅಥವಾ ಬೇರೆಯಾವುದಾದರೂ ಹುದ್ದೆಯನ್ನು ರಾಜನಿಂದ ಪಡೆಯುತ್ತಿದ್ದರು. ಒಂಭತ್ತನೇ ಶತಮಾನದ ಬೇವಿನಕುಪ್ಪೆ ಶಾಸನದಲ್ಲಿ 'ಪೃಥುವೀ ಗಂಗನ ಸೂಳೆ ಬೀರಕ್ಕನ ಮಗ ಎರಕಳಿಂಗನ ನೆನಪಿಗೆ ನಿರ್ಮಿಸಿದ ವೀರಗಲ್ಲು" ಎಂದು ಬರೆಯಲಾಗಿದೆ. ಎರೆಕಳಿಂಗನು ಯೋಧನಾಗಿದ್ದು ಯಾವುದೋ ಯುದ್ಧದಲ್ಲಿ ಮಡಿದಾಗ ಆತನ ನೆನಪಿಗಾಗಿ ವೀರಗಲ್ಲನ್ನು ಇರಿಸಲಾಗಿದೆ.

ತೊತ್ತು ಎಂದು ಕರೆಯಲ್ಪಡುವ ಇನ್ನೊಂದು ವರ್ಗದ ಸ್ತ್ರೀಯರನ್ನು ಶಾಸನಗಳು ಉಲ್ಲೇಖಿಸುತ್ತವೆ. ದೇವಾಲಯದ ವಶಕ್ಕೆ ಕನ್ಯಾದಾನ ಮಾಡಿದವರು ತೊತ್ತುಗಳಾಗಿ ಸೇವೆ ಸಲ್ಲಿಸುತ್ತಿದ್ದರು. ಇವರೂ ವೇಶ್ಯೆಯರಂತೆ ಪಾತರದವರಂತೆ ಸೇವೆ ಸಲ್ಲಿಸುತ್ತಿದ್ದರು. ಕ್ರಿ.ಶ. 1035 ಬಾಗಳಿ ಶಾಸನದಲ್ಲಿ ಹಾಡುವ ಕಾಮವ್ವ ನಾಗವ್ವಯರ ಮಗಳು ಶ್ರೀ ಕಲಿದೇವರ ತೊತ್ತು ಪಾತ್ರದ ಸಿರಿಯವೈಯು ದಾನ ನೀಡಿದ ಮಾಹಿತಿ ಇದೆ. ಬಿಜಾಪುರದ ವಸ್ತು ಸಂಗ್ರಹಾಲಯದಲ್ಲಿದ್ದ ಶಾಸನದಲ್ಲಿ ರಬ್ಬಕಟ್ಟೆ ತನ್ನ ತೊತ್ತು ಮಾಚಬ್ಬೆಯನ್ನು ಸಕಳೇಶ್ವರ ದೇವರಿಗೆ ಬಿಟ್ಟಳು ಎಂಬ ಉಲ್ಲೇಖವಿದೆ.

ವೇಶ್ಯಾ ಪದ್ಧತಿಯ ಇನ್ನೊಂದು ರೂಪವಾದ ನೃತ್ಯ ಮತ್ತು ಸಂಗೀತ ಪರಂಪರೆಯನ್ನು ಶಾಸನಗಳು ದಾಖಲಿಸಿವೆ. ಮೌರ್ಯ ಮತ್ತು ಶಾತವಾಹನರ ಕಾಲದ ಶಾಸನವು, "ಬೌದ್ಧ ವರ್ಗಕ್ಕೆ ಸೇರಿದ ನಡೆಯಗುಡ ಎಂಬವನ ಪುತ್ರಿ ಹಾಗೂ ನರ್ತಕಿ ಗೋವಿದಾಸಿ ಮಹಾಸ್ತೂಪದ ನಿರ್ಮಾಣಕ್ಕೂ, ನರ್ತಕಿ ಆರವಾಸಿ ಮತ್ತು ವಾಲುಕಿಯರು ಉನ್ನತ ದ್ವಾರ ಮತ್ತು ಸಭಾಂಗಣವನ್ನು ಕಟ್ಟಿಸಿದರು' ಎಂದು ಸನ್ನತಿಯ ಕಂಬವೊಂದರ ಮೇಲೆ ಕೆತ್ತಲಾಗಿದೆ. ಹೊಯ್ಸಳ ರಾಜ ವಿಷ್ಣುವರ್ಧನನ ರಾಣಿ, ಶಾಂತಲೆ ನೃತ್ಯವಿಶಾರದೆಯೆಂದು ಗೌರವಿಸಲ್ಪಟ್ಟಿದ್ದಳು. ಕ್ರಿ. ಶಕ 1521ರ ಯಲಹಂಕ ನಾಡ ಪ್ರಭುಗಳ ಇಮ್ಮಡಿ ಕೆಂಪೇಗೌಡನ ಶಾಸನದಲ್ಲಿ ಪಟ್ಟದ ನಾಟಕಶಾಲೆಯ ಶೃಂಗಾರಮ್ಮ ಎಂಬ ಉಲ್ಲೇಖವಿದೆ. ನೃತ್ಯ ಬಲ್ಲವರು ಎಲ್ಲರೂ ಪಾತರದವರಲ್ಲ. ವೇಶ್ಯೆಯರು ನೃತ್ಯ ಕಲಿತು ಪಾತರದವರಾಗಿ ಸೇವೆ ಸಲ್ಲಿಸಿರಬಹುದು ಎಂಬ ಅಭಿಪ್ರಾಯವಿದೆ. (ಪುಟ 78-104, ಶಾಸನಗಳಲ್ಲಿ ವೇಶ್ಯಯರು)

ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದ ಕ್ರಿ.ಶ.1371ರ ಕಾಲದ ಶಾಸನವು ಆ ಗ್ರಾಮದ ರಾಮೇಶ್ವರ ದೇವಸ್ಥಾನದ ನೃತ್ಯಗಾರ್ತಿಯರ ನಿರ್ವಹಣೆ ಗಾಗಿ ದತ್ತಿಯನ್ನು ಕೊಟ್ಟ ಉಲ್ಲೇಖವಿದೆ. ಬೆಂಗಳೂರಿನ ಕೂಡಿಗೆ ಹಳ್ಳಿಯ ವಿಜಯನಗರದ ದೇವರಾಯನ ಕಾಲದ 1353ರ ಶಾಸನವು ಏಳು ಜನ ಪಾತ್ರದವರಿಗೆ ಸೋಮದೇವನ ದೇವಸ್ಥಾನದಲ್ಲಿ ದಿನನಿತ್ಯದ ಸಂಗೀತ ಸೇವೆಗೋಸ್ಕರ ದಾನ ಕೊಟ್ಟ ವಿವರಗಳಿವೆ. ಈ ಏಳು ಜನರಲ್ಲಿ ಇಬ್ಬರು ನೃತ್ಯಗಾರ್ತಿಯರು. ಉಳಿದವರು ಒಬ್ಬ ನಟುವಾಂಗ ನೃತ್ಯ ಕಲಿಸುವವ, ಒಬ್ಬ ತಬಲಾ ಬಾರಿಸುವವ, ಒಬ್ಬ ಸಿತಾರವಾದಕ, ಒಬ್ಬ ಉಪಾಂಗ, ಒಬ್ಬ ಕಂಸಾಳೆ ಬಾರಿಸುವವ ಎಂಬ ವಿವರಣೆಗಳಿವೆ.

ಕ್ರಿ.ಶ. 1572ರ ಕೃಷ್ಣ ದೇವರಾಯನ ಕಾಲದ ಶಾಸನವು ನಿಲಾಡಿ ಎಂಬ ಶ್ರೇಷ್ಟ ನೃತ್ಯಗಾರ್ತಿಗೆ ಒಂದು ಗ್ರಾಮವನ್ನು ಕೊಡುಗೆಯಾಗಿ ಕೊಟ್ಟುದನ್ನು ವಿವರಿಸುತ್ತದೆ. ಈ ಶಾಸನವು ಧಾರವಾಡ ಜಿಲ್ಲೆಯ ರಾಣೆಬೆನ್ನೂರಿನ ಹೊನ್ನಾಪುರದ ಗ್ರಾಮದಲ್ಲಿದೆ.

ಅನೇಕ ದೇವಸ್ಥಾನಗಳಲ್ಲಿ ರಂಗಪೂಜೆಗೆ ದೇವದಾಸಿಯರನ್ನು ನೇಮಕ ಮಾಡಿಕೊಂಡಿರುವುದನ್ನು ಶಾಸನಗಳು ಉಲ್ಲೇಖಿಸುತ್ತವೆ. ಸದಾಶಿವ ರಾಯನ ಕಾಲದ ಶಾಸನವು ಮತ್ತು ಹರಿಯಪ್ಪ ಒಡೆಯನ ಕಾಲದ ಶಾಸನಗಳು ಬೇರೆ ಬೇರೆ ಸಂಗೀತಗಾರರಿಗೆ ದಾನದತ್ತಿ ನೀಡಿದ ವಿವರಗಳನ್ನು ತಿಳಿಸುತ್ತವೆ. ವಿಜಯನಗರದ ಶಾಸನ ಸಂಪುಟ ಎರಡರಲ್ಲಿ 485, 954, 982, 986 ಮತ್ತು 990 ಮುಂತಾದ ಶಾಸನಗಳು ಸಂಗೀತ ಮತ್ತು ನೃತ್ಯಗಾರ್ತಿಯರಿಗೆ ದತ್ತಿಯನ್ನು ನೀಡಿದ ಬಗ್ಗೆ ಉಲ್ಲೇಖಿಸುತ್ತವೆ (ವಿಜಯನಗರ ಕಾಲದಲ್ಲಿ ಸಂಗೀತ, ನೃತ್ಯ, ಶಾಸನಾಧಾರಿತ ಅಧ್ಯಯನ, ಟಿ. ದಯಾನಂದ ಪಟೇಲ್).

ದಕ್ಷಿಣ ಕನ್ನಡದ ಶಾಸನಗಳಲ್ಲಿ ದೇವದಾಸಿಯರು

ಉಡುಪಿ ಜಿಲ್ಲೆಯ ಬಾರ್ಕೂರು ಗ್ರಾಮದ ಹರಿಯಪ್ಪನ ಕಾಲದ ಕ್ರಿ.ಶ. 1382ರ ಶಾಸನವು ನೃತ್ಯಗಾರ್ತಿಯರಿಗೆ ಭೂಮಿಯನ್ನು ಕೊಡುಗೆಯಾಗಿ ಕೊಟ್ಟ ವಿವರಣೆಗಳಿವೆ.

ದಕ್ಷಿಣ ಕನ್ನಡದ ಕುಂದಾಪುರ ತಾಲೂಕಿನ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದಲ್ಲಿ ವಿರೂಪಾಕ್ಷನ ಕಾಲದ ಶಾಸನವು ಸಂಗೀತಗಾರರಿಗೆ ಕೊಟ್ಟ ದಾನವನ್ನು ಹೇಳುತ್ತದೆ.

'ಕಸವ ಕಳೆವ ಬೆಸವಿತ್ತಿ' ಎಂಬ ಮಾತು ಕೋಟೇಶ್ವರದ ಶಾಸನದಲ್ಲಿದೆ (SII VOL VII No. 329,330, 332)

ಇನ್ನೊಂದು ದಾಖಲೆಯಲ್ಲಿ 'ಮಠವ ಬೋಹರಿಸುವ ಬಸವಿತ್ತಿ' ಎಂಬ ಉಲ್ಲೇಖವಿದೆ. ಬಾರಕೂರಿನ ದಾಖಲೆಯೊಂದರಲ್ಲಿ ಕುಂಚದ ಸರಸು ಎಂಬ ಸ್ತ್ರೀಯ ಉಲ್ಲೇಖವಿದೆ. ದೇವಾಲಯಗಳಲ್ಲಿ ಕುಂಚವನ್ನು ಬೀಸಲು ಸ್ತ್ರೀಯರಿದ್ದರೆಂದು ತಿಳಿದು ಬರುತ್ತದೆ. ಸಂಪೂರ್ಣ ತಮ್ಮನ್ನು ದೇವರಿಗೆ ಸಮರ್ಪಿಸಿಕೊಂಡು ದೇವರ ಸೇವೆಯೆಂದು ಪ್ರತಿಫಲ ಬಯಸದೆ ದೇವಾಲಯದಲ್ಲಿ ಹಾಡು ನರ್ತನವನ್ನುಚಾಮರ ಬೀಸುವ, ಕಸ ಗುಡಿಸುವ ಕೆಲಸವನ್ನು ಮಾಡುತ್ತಿದ್ದ ಸ್ತ್ರೀ ವರ್ಗದವರನ್ನು ಕೂತಾಡುವ ಬಾಕನಂಗೆಯರು, ಬೋಹರಿಸುವ ಬಸವಿತ್ತಿಯರು ಎಂದು ಕರೆಯುತ್ತಿದ್ದರು (ಪುಟ 208)

ಶಾಸನವೊಂದರಲ್ಲಿ ಮಠದ ಕಸವ ಕಳೆದ ಬೆಸವಿತ್ತಿಗೆ ಗೌರವಪೂರ್ವಕವಾಗಿ ಭತ್ತದಾನ ನೀಡಿದರು. ಕೋಟೇಶ್ವರದ ಶಾಸನವು ಇಬ್ಬರು ಚಾಮರ ಬೀಸುವ ಹೆಂಗಸರಿಗೆ ದಾನ ನೀಡಿದುದನ್ನು ತಿಳಿಸುತ್ತದೆ. ಕ್ರಿ.ಶಕ 1359ರ ಬಾರಕೂರಿನ ಶಾಸನವೊಂದು ಮಠದ ಬಡಿಗೆಗೆಲಸದ ಬೆಸವಿತ್ತಿಯ ಉಲ್ಲೇಖ ಮಾಡುತ್ತದೆ. ದೇವಾಲಯದ ಆದಾಯವನ್ನು ಹೊಂದಿಕೊಂಡು ಈ ಉದ್ಯೋಗಿಗಳನ್ನು ನೇಮಿಸಲಾಗುತ್ತಿತ್ತು. (ಪುಟ. 252 (ಡಾ.ಶೈಲಾ ಟಿ. ವರ್ಮಾ ತುಳುನಾಡಿನ ಶಾಸನಗಳ ಸಾಂಸ್ಕೃತಿಕ ಅಧ್ಯಯನ)SII VOL IX Part II No. 417, SII VOL VII No. 365, SII VOL VII No. 329,330,332, SII VOL VII No. 332)

ವೇಶ್ಯಾವಾಟಿಕೆ ಮತ್ತು ರಾಜಕಾರಣ

[ಸಂಪಾದಿಸಿ]

ವೇಶ್ಯಾವಾಟಿಕೆ ಮತ್ತು ರಾಜಕಾರಣ

ವೇಶ್ಯಯರು ರಾಜಕಾರಣದಲ್ಲಿ ಸಕ್ರಿಯರಾಗಿ ತೊಡಗಿಸಿ ಕೊಂಡುದರ ಬಗ್ಗೆ ನಮ್ಮ ಪುರಾಣಗಳಲ್ಲಿ ಹಲವು ಕತೆಗಳಿವೆ. ದೇವತೆಗಳು ಸ್ವರ್ಗದಲ್ಲಿರುವ ವೇಶ್ಯೆಯರನ್ನು ದಾಳಗಳನ್ನಾಗಿ ಬಳಸಿಕೊಂಡು ತಮ್ಮ ಕಾರ್ಯ ಸಾಧಿಸಿಕೊಂಡ ಕತೆಗಳಿವೆ. ಕ್ಷತ್ರಿಯನಾದ ವಿಶ್ವಾಮಿತ್ರ ಕಠಿಣ ತಪಸ್ಸಿನಿಂದ ಬ್ರಹ್ಮರ್ಷಿ ಪದವಿಗೇರುವುದು, ತಮ್ಮ ಆಧಿಪತ್ಯಕ್ಕೆ ಸವಾಲೊಡ್ಡುವುದು ಸಹ್ಯವಾಗಲಿಲ್ಲ. ಆದುದರಿಂದ ದೇವಲೋಕದ ಅಪ್ಸರೆ ಮೇನಕೆಯನ್ನು ಅವನ ತಪೋಭಂಗಕ್ಕಾಗಿ ಕಳಿಸಿದ್ದು, ಮೇನಕೆ — ವಿಶ್ವಾಮಿತ್ರರು ಒಂದಾದ ಕಾರಣ ಶಕುಂತಲೆ ಜನಿಸಿದ್ದು, ಹೀಗೆ ಕತೆ ಮುಂದುವರಿಯುತ್ತದೆ.

ಅರ್ಜುನ — ಊರ್ವಶಿಯರ ಕತೆಯು ರಾಜಕಾರಣದ ಇನ್ನೊಂದು ಮುಖವನ್ನು ಪರಿಚಯಿಸುತ್ತದೆ. ದೇವಲೋಕದಲ್ಲಿ ಅವರ ಭೇಟಿ, ನೃತ್ಯಾಭ್ಯಾಸ ಎಲ್ಲವೂ ದೇವೇಂದ್ರನ ಸಹಕಾರದಿಂದಲೇ ನಡೆಯುತ್ತದೆ. ಆಗ ಊರ್ವಶಿ ಸಹಜ ವಾಗಿ ಅರ್ಜುನನನ್ನು ಬಯಸಿದರೂ ಆತ ಅವಳನ್ನು ವಿನಯಪೂರ್ವಕವಾಗಿ ತಿರಸ್ಕರಿಸುತ್ತಾನೆ. ಇದು ಆಕೆಯನ್ನು ಕೆರಳಿಸಿ ಅರ್ಜುನನಿಗೆ ಶಾಪ ನೀಡುವ ಹಂತಕ್ಕೆ ತಲುಪುತ್ತದೆ. ಆದರೆ ಅದೇ ಶಾಪ ಅವನಿಗೆ ವರವಾಗಿ ಪರಿಣಮಿಸುವಂತೆ ಕತೆ ಬೆಳೆಯುತ್ತದೆ. ಪಾಂಡವರು ಅಜ್ಞಾತವಾಸದ ಅವಧಿಯಲ್ಲಿ ವಿರಾಟನ ಅರಮನೆಯಲ್ಲಿ ಊಳಿಗಕ್ಕೆ ನಿಂತಾಗ ಅರ್ಜುನನು ಬ್ರಹನ್ನಳೆಯಾಗಿ ಪರಿವರ್ತನೆಗೊಂಡು ಉತ್ತರೆಗೆ ನೃತ್ಯಾಭ್ಯಾಸ ಮಾಡಿಸುವ ಗುರುವಾಗುತ್ತಾನೆ. ಹೀಗೆ ದೇವಲೋಕದ ಅಪ್ಸರೆಯರು ರಾಕ್ಷಸರು, ದೇವತೆಗಳು ಮತ್ತು ಮಾನವರ ಮಧ್ಯದ ರಾಜಕೀಯದಲ್ಲಿ ಭಾಗವಹಿಸಿ ತಮ್ಮ ಒಡೆಯರ ಆಜ್ಞೆಗಳನ್ನು ಪಾಲಿಸಿ ಕೃತಕೃತ್ಯರಾಗಿದ್ದಾರೆ. ದೇವತೆಗಳ ಅಧಿಕಾರ ದಾಹ ಮತ್ತು ಮತ್ಸರಗಳು ವೇಶ್ಯೆಯರ ಮೂಲಕ ಇಂತಹ ಕೆಲಸಗಳಿಗೆ ಪ್ರಚೋದನೆಯನ್ನು ನೀಡಿವೆ.

ಇನ್ನು ಚಾರಿತ್ರಿಕವಾಗಿಯೂ ವೇಶ್ಯಾ ಪದ್ಧತಿಗೂ ರಾಜಕೀಯಕ್ಕೂ ನಿಕಟವಾದ ಸಂಬಂಧವಿದ್ದ ದಾಖಲೆಗಳಿವೆ. ವಿಷಕನೈಯರ ಮೂಲಕ ಶತ್ರುರಾಜ ರನ್ನು ಮಣಿಸುವ, ಕೊಲ್ಲುವ, ಕ್ರಮವಿತ್ತೆಂದು ಕೆಂಪು ನಾರಾಯಣ ಕವಿಯ ಮುದ್ರಾರಾಕ್ಷಸ ಕೃತಿಯು ಹೇಳುತ್ತದೆ. ಬೇರೆ ರಾಜ್ಯದ ಪುರುಷರಿಂದ ಆಗಬೇಕಾದ ಅಥವಾ ಆಗಬಹುದಾದ ಕೆಲಸಗಳನ್ನು ಶೀಘ್ರವಾಗಿ ಮಾಡಲು ರಾಜರು ವೇಶ್ಯಯರನ್ನು ಬಳಸುತ್ತಿದ್ದರೆಂದು ತೊರವೆ ರಾಮಾಯಣದಲ್ಲಿ ಹೇಳಲಾಗಿದೆ. ಪ್ರಸಿದ್ಧ ಇತಿಹಾಸಕಾರ ಡಿ.ಡಿ. ಕೋಸಾಂಬಿಯವರು, "ವೇಶ್ಯಾ ವ್ಯವಸ್ಥೆಗೂ ರಾಜಕೀಯಕ್ಕೂ ನಿಕಟ ಸಂಬಂಧವಿದೆ ಎನ್ನುತ್ತಾರೆ. ವೇಶ್ಯೆಯರನ್ನು ರಾಜಕೀಯದ ಲಾಭಕ್ಕಾಗಿ ಬಳಸಿಕೊಳ್ಳುವುದಕ್ಕೆ ಬೇಕಾಗಿ ಆಸ್ಥಾನದ ವೇಶ್ಯ, ಗುಪ್ತವೇಶ್ಯ, ದೇವಸ್ಥಾನದ ನರ್ತಕಿ, ಪವಿತ್ರ ಕ್ಷೇತ್ರಗಳಲ್ಲಿರುವ ವೇಶ್ಯ, ನಾಗರಿ ವೇಶ್ಯೆಯೆಂದು ಬೇರೆ ಬೇರೆ ಹೆಸರಿನಿಂದ ಕರೆಯಲಾಗುತ್ತಿತ್ತೆಂದು ಮಹಾ ನಿರ್ವಾಣ ತಂತ್ರದಲ್ಲಿ ಹೇಳಲಾಗಿದೆ.

"ಮನರಂಜನೆಗೆ, ಕಾಮತೃಷೆಗೆ, ಮಧ್ಯಸ್ಥಿಕೆಗೆ, ಒಡನಾಟಕ್ಕೆ, ಕಾರ್ಯಸಿದ್ಧಿಗೆ, ಸೇವೆಗೆ, ಆಲಾಪನೆಗೆ, ಹೊಗಳಿಕೆಗೆ, ಹಣಕ್ಕೆ, ಅಲಂಕಾರಕ್ಕೆ, ಹೀಗೆ ಎಲ್ಲಾ ಕಾಲಘಟ್ಟಗಳಲ್ಲೂ ರಾಜಕಾರಣ ಮತ್ತು ಬದುಕಿನೊಂದಿಗೆ ಹೆಣ್ಣು ಬೆಲೆವೆಣ್ಣಾಗಿ ನಡೆದು ಬರುತ್ತಲೇ ಇದ್ದಾಳೆ. (ಪುಟ 148 ವೇಶ್ಯಾವಾಟಿಕೆ ಒಂದು ಅಧ್ಯಯನ). ಅರಮನೆಯಲ್ಲಿ ಅಥವಾ ಪ್ರತಿಷ್ಠಿತರ ಮನೆಗಳಲ್ಲಿ ನಡೆಯುವ, ವಿವಾಹ, ಪಟ್ಟಾಭಿಷೇಕ, ಪುತ್ರೋತ್ಸವ, ವಿಜಯೋತ್ಸವ, ವನವಿಹಾರ, ಜಲಕೇಳಿ, ಗರ್ಭಿಣಿ ರಾಣಿಯರ ಉಪಚಾರಗಳಂತಹ ಹಬ್ಬ ಹರಿದಿನಗಳಲ್ಲಿ ಈ ವೇಶ್ಯೆಯರ ಉಪಸ್ಥಿತಿ ಕಡ್ಡಾಯವಾಗಿರುತ್ತಿತ್ತು. ಇನ್ನು ಯುದ್ಧದ ಸಂದರ್ಭಗಳಲ್ಲಿ ಆಯುಧ ಮತ್ತು ಆಹಾರ ಸಾಮಾಗ್ರಿಯಷ್ಟೇ ಮುಖ್ಯವಾಗಿ ಸೇನೆಯ ಜೊತೆಯಲ್ಲಿ ಇರುತ್ತಿದ್ದರು. ಪಂಪನ ಆದಿಪುರಾಣದಲ್ಲಿ ಭರತನ ಸೇನೆಯಲ್ಲಿ ವೇಶ್ಯಾ ಸ್ತ್ರೀಯರು ಇದ್ದರೆಂಬ ಉಲ್ಲೇಖವಿದೆ. ನಂಜುಂಡ ಕವಿಯ ರಾಮನಾಥ ಚರಿತೆಯಲ್ಲಿ ವೇಶ್ಯಯರನ್ನು ಸೈನಿಕರ ಮನರಂಜನೆಯ ಉದ್ದೇಶಕ್ಕಾಗಿ ಬಳಸಿಕೊಂಡ ವಿವರಗಳಿವೆ. ಹೀಗೆ ಚರಿತ್ರೆ ಕಾವ್ಯ ಮತ್ತು ವಿದೇಶೀಯರ ಪ್ರವಾಸ ಕಥನಗಳಲ್ಲೂ ರಾಜಕೀಯದಲ್ಲಿ ವೇಶ್ಯಯರ ಸಹಭಾಗಿತ್ವದ ವಿವರಗಳು ಲಭಿಸುತ್ತವೆ.

ರಾಜ್ಯಾಡಳಿತದಲ್ಲಿ ಆರ್ಥಿಕ ವ್ಯವಸ್ಥೆಯ ಭಾಗವಾಗಿ ಮತ್ತು ಆಡಳಿತದ ಕೆಲವು ಜವಾಬ್ದಾರಿಗಳಲ್ಲೂ ವೇಶ್ಯೆಯರ ಪಾತ್ರವಿತ್ತು ಎಂದು ಕೌಟಿಲ್ಯನ ಅರ್ಥಶಾಸ್ತ್ರದಿಂದ ತಿಳಿಯುತ್ತದೆ. ವೇಶ್ಯೆಯರನ್ನು ರಾಜ್ಯಾಡಳಿತವೇ ನೇಮಕ ಮಾಡುತ್ತಿತ್ತು. ಅವರಿಗೆ ಬೇರೆ ಬೇರೆ ಭಾಷೆ ಕಲಿಸುವುದು, ನಟನೆಯ ಭಂಗಿಗಳನ್ನು ಕಲಿಸುವುದು, ವಿಟನ ಮನಸ್ಸನ್ನು ಓದುವ ಸೂಕ್ಷ್ಮ ಬುದ್ಧಿಯನ್ನು ರೂಪಿಸುವುದು ಪ್ರೀತಿ - ಪ್ರಣಯದ ಕೇಳಿಗಳನ್ನು ಕಲಿಸುವುದು. ಹೀಗೆ ಅವರನ್ನು ನಾನಾ ವಿದ್ಯೆಗಳಲ್ಲಿ ಪಾರಂಗತ ರಾಗುವಂತೆ ಮಾಡುತ್ತಿದ್ದರು. ಇಂತಹವರನ್ನು ಗೂಢಚರ್ಯೆಗೆ, ವೈರಿಗಳ ಸೇನೆಯಲ್ಲಿ ತಪ್ಪು ಅಭಿಪ್ರಾಯಗಳನ್ನು ಮೂಡಿಸುವುದಕ್ಕೆ, ಕ್ರೂರಿಗಳನ್ನು, ದಂಗೆ ಎದ್ದವರನ್ನು, ಶತ್ರುಗಳನ್ನು ಕೊಲ್ಲುವುದಕ್ಕೆ ಈ ವೇಶ್ಯೆಯರ ಪ್ರತಿಭೆ, ಕೌಶಲಗಳನ್ನು ಬಳಸಿಕೊಂಡು ರಾಜಕೀಯವು ತನ್ನ ಗುರಿಯನ್ನು ಸಾಧಿಸುತ್ತಿತ್ತು.

ಭೂಗತ ಜಗತ್ತಿನ ಕಾರ್ಯಾಚರಣೆಗಳಲ್ಲಿ ಡ್ರಗ್ಸ್, ಮಾದಕದ್ರವ್ಯ, ಮಾನವ ಸಾಗಾಣಿಕೆ, ಚಿನ್ನ ಸಾಗಾಣಿಕೆ ಮುಂತಾದ ಎಲ್ಲಾ ವಕ್ರದಾರಿಯ ವ್ಯವಹಾರಗಳಲ್ಲಿ ಹಿಂದೆಯೂ ಈಗಲೂ ಹೆಣ್ಣು ಬಳಕೆಯಾಗುವುದು ಎಲ್ಲರಿಗೂ ಗೊತ್ತೇ ಇದೆ. 2001ರಲ್ಲಿ 'ತೆಹಲ್ಕಾ' ಡಾಟ್ ಕಾಮ್ ಒಂದು ದೊಡ್ಡ ಬಾಂಬ್ ಸಿಡಿಸಿ ಇಡೀ ದೇಶವೇ ತಲ್ಲಣಗೊಳ್ಳುವಂತೆ ಮಾಡಿದ್ದು ನೆನಪಿದೆಯೇ? ಶಸ್ತ್ರ ತಯಾರಿಕಾ ಕಂಪೆನಿ ವೆಸ್ಟ್ ಎಂಡ್ ಇಂಟರ್‌ನ್ಯಾಷನಲ್ ಕಂಪೆನಿಯ ಪ್ರತಿನಿಧಿಗಳೆಂದು ಅನಿರುದ್ಧ ಬೆಹಾಲ್ ನಾಯಕತ್ವದ ತೆಹಲ್ಕಾ ತಂಡ ನಮ್ಮ ದೇಶದ ರಕ್ಷಣಾ ಇಲಾಖೆಯ ಒಪ್ಪಂದಗಳ ಅಕ್ರಮಗಳನ್ನು ಬಯಲಿಗೆಳೆಯಲು ಒಂದು ಹೊಸ ತಂತ್ರವನ್ನು ರೂಪಿಸಿತ್ತು. ರಕ್ಷಣಾ ಇಲಾಖೆಯು ಕೆಳಗಿನ ಅಧಿಕಾರಿಗಳಿಗೆ ಮದ್ಯ ಮತ್ತು ಲೈಂಗಿಕ ವೃತ್ತಿಯ ಮಹಿಳೆಯರನ್ನು ಒದಗಿಸಿ ಮೇಲಿನ ಅಧಿಕಾರಿಗಳನ್ನು ಸಂಪರ್ಕಿಸುವಂತೆ ವ್ಯವಸ್ಥೆ ಮಾಡಿಕೊಟ್ಟಿದ್ದರು. ದೇಶದ ರಕ್ಷಣಾ ಇಲಾಖೆಯು ತನ್ನ ರಹಸ್ಯಗಳನ್ನು ಬಿಟ್ಟುಕೊಟ್ಟ ಕಾರಣ ಅಧಿಕಾರಿಗಳು ತಮ್ಮ ಘನತೆಯನ್ನು ಕಳೆದುಕೊಂಡು ಬೇಸ್ತು ಬೀಳುವಂತೆ ಮಾಡಿತ್ತು ತೆಹಲ್ಕಾ ತಂಡ. ಈ ಕರ್ಮಕಾಂಡದ ಹೀನ ಸುಳಿಗಳು ಬಹಿರಂಗವಾದಾಗ ವೇಶ್ಯೆಯರನ್ನು ಪತ್ತೇದಾರಿಕೆಯ ಕೆಲಸದಲ್ಲಿ ತೊಡಗಿಸಿಕೊಂಡದ್ದು ಅನೈತಿಕ ಎಂಬ ಚರ್ಚೆ ವಾದ ವಿವಾದಗಳು ಆಗ ಮಾಧ್ಯಮಗಳಲ್ಲಿ ಬಹಳ ಬಿರುಸಿನಿಂದ ನಡೆದುವು. ಅಧಿಕಾರಿಗಳು ವೇಶ್ಯೆಯರ ಆಮಿಷಕ್ಕೊಳಗಾದುದನ್ನು ತಪ್ಪು ಎಂದು ವಾದಿಸಿದವರು ವಿರಳ. ಈ ಕಾರಣಕ್ಕಾಗಿ ವೇಶ್ಯೆಯರನ್ನು ಬಳಸಿದ್ದು ಅನೈತಿಕ ಎಂದೇ ಹಲವರು ವಾದ ಮಾಡಿದ್ದರು. ಈ ರೀತಿಯ ಪಾತಕ ಲೋಕದ ಎಷ್ಟು ಕತೆಗಳಿವೆಯೋ? ಎರಡನೇ ಮಹಾಯುದ್ಧದ ಕಾಲದಲ್ಲಿ ಮಾತಾಹರಿ ಎಂಬ ಹೆಣ್ಣು ಮಗಳನ್ನು ಶತ್ರು ದೇಶದ ಸೇನೆಯ ವಿವರಗಳನ್ನು ಪಡೆಯಲಿಕ್ಕಾಯೇ ನೇಮಿಸಿಕೊಂಡದ್ದು ಇತಿಹಾಸದಲ್ಲಿ ದಾಖಲಾಗಿದೆ.

ಹಿಂದೆ ನಮ್ಮ ರಾಜ್ಯದ ಮುಖಂಡರೊಬ್ಬರು ಮದಿರೆ- ಮಾನಿನಿ ನನ್ನ ಜೀವನದ ಭಾಗವೆಂದು ಬಹಿರಂಗವಾಗಿ ಹೇಳಿ ಸುದ್ದಿಯಾಗಿದ್ದರು. ಲೀಲಾ ಸಂಪಿಗೆಯವರು ವೇಶ್ಯಯರ ಬಗ್ಗೆ ಅಧ್ಯಯನ ಕೈಗೊಂಡಾಗ ಎದುರಾದ ಸತ್ಯಗಳನ್ನು ಅರಗಿಸಿಕೊಳ್ಳುವುದೇ ಕಷ್ಟವೆಂಬ ಮನಸ್ಥಿತಿಯನ್ನು ಹೊಂದಿದ್ದರು. ಪ್ರತೀ ಸಲ ವಿಧಾನ ಸಭೆಯ ಅಧಿವೇಶನಗಳು ನಡೆಯುವಾಗ ಬೆಂಗಳೂರಿನ ವೇಶ್ಯಾಗೃಹಗಳು ಗಿಜಿಗುಡುತ್ತವೆ. ಪಿಂಪ್‌ಗಳು, ಬೋಕರ್‌ಗಳು ಬಿಡುವಿಲ್ಲದಂತೆ ಕಾರ್ಯ ಮಗ್ನರಾಗಿರುತ್ತಾರೆಂಬುದನ್ನು ಕಂಡಿದ್ದಾರೆ.

ಮಾಡೆಲಿಂಗ್‌ನ ಹೆಸರಿನಲ್ಲಿ ದೆಹಲಿಯಲ್ಲಿ ದೊಡ್ಡ ಹೋಟೇಲಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಜಾಲವು ಸಿಕ್ಕಿಬಿತ್ತು. ದೆಹಲಿಗೆ ಹೆಣ್ಣುಗಳನ್ನು ಸರಬರಾಜು ಆಗುತ್ತಿದ್ದುದ್ದು ಬೆಂಗಳೂರಿನಿಂದ; ಅಧಿಕಾರದಲ್ಲಿದ್ದ ಪಕ್ಷದ ನಾಯಕಿ ಯಂತೆಯೇ ಮೆರೆಯುತ್ತಿದ್ದ ಈಕೆಗೆ ಮಂತ್ರಿ ಮಹೋದಯರೇ ಆಪ್ತರಾಗಿದ್ದರು. ವಿಚಿತ್ರವೇನು ಗೊತ್ತೇ? ಪೋಲೀಸರಿಗೆ ಸೆರೆ ಸಿಕ್ಕಿದ ಈ ಯುವತಿಯರನ್ನು ಜಾಮೀನು ಮಾಡಿ ರಕ್ಷಿಸಿದ್ದು ವಿರೋಧಿ ಪಕ್ಷದ ನಾಯಕ. ಹೇಗಿದೆ ನೋಡಿ ರಾಜಕೀಯದಲ್ಲಿ ವೇಶ್ಯಯರ ಸಹಭಾಗಿತ್ವ, ರಾಜಕೀಯ ಭ್ರಷ್ಟಾಚಾರದ ಚಮತ್ಕಾರಗಳು ಇವರೆಲ್ಲರನ್ನು ರಕ್ಷಿಸುವ ಹೊಣೆ ಹೊತ್ತಂತೆ ಕಾಣುವುದಿಲ್ಲವೇ?

ಮೊನ್ನೆ ಮೊನ್ನೆ ನಡೆದ ಹಿಂದಿ ನಟ ಸುಶಾಂತ್‌ ಆತ್ಮಹತ್ಯೆಯ ಪ್ರಕರಣವು ಪಡೆದುಕೊಂಡ ತಿರುವುಗಳನ್ನು ಗಮನಿಸಿದರೆ ಅರ್ಥವಾಗುತ್ತದೆ. ರಾಜಕೀಯ ದಂತೆ, ಭೂಗತ ಜಗತ್ತಿನಂತೆ, ಸಿನಿಮಾ ಜಗತ್ತು ಕೂಡಾ ಡ್ರಗ್ಸ್ ಮತ್ತು ಮಾದಕ ವಸ್ತು ಮಾರಾಟದ ಕಳ್ಳ ದಂಧೆಯಲ್ಲಿ ಹೇಗೆ ಗಟ್ಟಿಯಾಗಿ ಬೆಸೆದುಕೊಂಡಿದೆ ಎಂದು ತಿಳಿಯುತ್ತದೆ. ಮದಿರೆ, ಮಾನಿನಿ, ಜೂಜು, ಮಾದಕ ದ್ರವ್ಯ ವ್ಯಸನ ಇತ್ಯಾದಿಗಳನ್ನೆಲ್ಲಾ ಒಂದು ಸಪೂರವಾದ ಕೊಂಡಿಯ ಮೂಲಕ ಜೋಡಿಸಲ್ಪಟ್ಟದ್ದು ಕಂಡುಬರುತ್ತದೆ. ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಯನದ ಪ್ರಕಾರ ಈ ವೃತ್ತಿಯಿಂದ ವಾರ್ಷಿಕ 200ರಿಂದ 300 ಕೋಟಿಗಳಷ್ಟು ವ್ಯವಹಾರ ನಡೆಯುತ್ತದೆ. ಇಷ್ಟು ದೊಡ್ಡ ವ್ಯವಹಾರದಲ್ಲಿ ಹೆಣ್ಣು ಮಾತ್ರ ಅಪರಾಧಿಯಾಗಿ ಕಾಣುವುದು ಹೇಗೆ? ಗಂಡು ಸಭ್ಯನೆಂಬ ಫೋಸು ಕೊಡುವುದು ಹೇಗೆ? ಎಂತಹ ವಿಚಿತ್ರವಲ್ಲವೇ?

1913ರಲ್ಲಿ ಲೆನಿನ್ ಮಹಿಳೆಯರ ವಿಮೋಚನೆಯ ಬಗ್ಗೆ ಆಡಿದ ಮಾತುಗಳು ಸಮಾಜದ ವ್ಯವಸ್ಥೆಯ ಮುಖವಾಡವನ್ನು ಕಳಚುತ್ತದೆ. "ವೇಶ್ಯಾ ವೃತ್ತಿಯ ಬಗ್ಗೆ ಎಷ್ಟೇ ಪ್ರಮಾಣದ ನೈತಿಕ ರೋಷವನ್ನು ತೋರಿದರೂ ನೂರರಲ್ಲಿ 99 ಪ್ರಸಂಗಗಳು ಸೋಗಿನವು. ಅವು ಸ್ತ್ರೀ ದೇಹದ ವಿಕೃತಿಯ ಬಗ್ಗೆ ಏನೂ ಮಾಡಲಾರವು. ಕೂಲಿ ಮತ್ತು ಗುಲಾಮಗಿರಿ ಇರುವವರೆಗೂ ವೇಶ್ಯಾವೃತ್ತಿಯೂ ಅನಿವಾರ್ಯವಾಗಿ ಇರುವುದು. ಮಾನವ ಸಮಾಜದ ಇತಿಹಾಸದಾದ್ಯಂತ ಎಲ್ಲ ಮರ್ದಿತ ಹಾಗೂ ಶೋಷಿತ ವರ್ಗಗಳು ಯಾವತ್ತೂ ತಮ್ಮ ಪೀಡಕರಿಗೆ ಮೊದಲು ತಮ್ಮ ಕೂಲಿ ರಹಿತ ಶ್ರಮವನ್ನು, ಎರಡನೆಯದಾಗಿ ತಮ್ಮ ಮಹಿಳೆಯರನ್ನು ಬೆಲೆವೆಣ್ಣುಗಳಾಗಿ ಬಿಟ್ಟುಕೊಡುವ ಬಲಾತ್ಕಾರಕ್ಕೊಳಗಾಗಿಯೇ ಇದ್ದುಕೊಂಡು ಬಂದಿವೆ. ಈ ವಿಷಯಕ್ಕೆ ಸಂಬಂಧಿಸಿ ಗುಲಾಮ ಪದ್ಧತಿಯೂ, ಸಾಮಂತ ಶಾಹಿ ವ್ಯವಸ್ಥೆಯೂ, ಬಂಡವಾಳಶಾಹಿವಾದವೂ ಒಂದೇ ರೀತಿಯವು.... ಬದಲಾಗುವುದು ಶೋಷಣೆಯ ರೂಪವಷ್ಟೇ ಹೊರತು ಶೋಷಣೆಯಂತೂ ಉಳಿದೇ ಇರುತ್ತದೆ.” ಆದರೆ ಇಂದಿನ ಎಡಪಕ್ಷಗಳ ಮುಖಂಡರು ಈ ಸಮಸ್ಯೆಯ ಬಗ್ಗೆ ಯಾವ ಕಾಳಜಿಯನ್ನೂ ವ್ಯಕ್ತಪಡಿಸಿಲ್ಲ. ಈ ವಿಷಯದಲ್ಲಿ ಅವರನ್ನು ಉಸಿರೆತ್ತದಂತೆ ಮಾಡಿದ ರಾಜಕೀಯ ದಾಳವಾಗಿ ವೇಶ್ಯ ಹೇಗೆ ಉಪಯುಕ್ತಳಾಗಿದ್ದಾಳೆ ಎಂಬುದನ್ನು ಕಂಡಾಗ ಆಶ್ಚರ್ಯವೂ, ಖೇದವೂ ಏಕಕಾಲದಲ್ಲಿ ಉಂಟಾಗುತ್ತದೆ.

ಸವಾಲಿನೊಂದಿಗೆ ಮುಖಾಮುಖಿ

[ಸಂಪಾದಿಸಿ]

ಸವಾಲಿನೊಂದಿಗೆ ಮುಖಾಮುಖಿ

ಖಲೀಲ್ ಗಿಬ್ರಾನ್‌ನ 'ದ ಪ್ರೊಫೆಟ್' ಕೃತಿಯಲ್ಲಿ ಒಂದು ಘಟನೆ ಬರುತ್ತದೆ. ನಾರಿಯೊಬ್ಬಳು ಅಲ್ ಮುಸ್ತಫಾರನ್ನು ನೋವಿನ ಬಗ್ಗೆ ಒಂದು ಪ್ರಶ್ನೆ ಕೇಳುತ್ತಾಳೆ. ಅಷ್ಟರ ವರೆಗೆ ಯಾವ ಗಂಡಸರೂ ಕೇಳದ ಪ್ರಶ್ನೆ ಇದು, ಏಕೆಂದರೆ ಆಕೆ ಶಾರೀರಿಕವಾಗಿ ಮಾನಸಿಕವಾಗಿ ಶತಮಾನಗಳಿಂದ ನೋವುಂಡವಳು. ಪ್ರಪಂಚದ ಯಾವ ಸಂಸ್ಕೃತಿಯೂ ಅದನ್ನು ನೋವೆಂದು ಪರಿಗಣಿಸಿಲ್ಲ. ಖಲೀಲ್ ಗಿಬ್ರಾನ್ ಅವಳಿಗೆ ಸಾಂತ್ವನ ನೀಡಿದರು. ಆದರೂ ಅವಳ ಆಕ್ರಂದನ ಅಂದಿನಿಂದ ಇಂದಿನವರೆಗೂ ನಿರಂತರವಾಗಿ ಕೇಳಿ ಬರುತ್ತಿದೆ. ಅನೇಕ ಮಹಾಪುರುಷರು ಅವಳಿಗೆ ಸಾಂತ್ವನ ನೀಡಿರಬಹುದಷ್ಟೆ. ಆ ಸಾಂತ್ವನದಿಂದೇನೂ ಅವಳು ನೋವಿನಿಂದ ಮುಕ್ತಳಾದುದಿಲ್ಲ. ಆಮ್ರಪಾಲಿಯನ್ನು ಬುದ್ಧ ಭಿಕ್ಷುಣಿಯಾಗಿ ಪರಿವರ್ತಿಸಿ ದೊಡ್ಡ ಕ್ರಾಂತಿ ಮಾಡಿದ. "ಈ ವರೆಗೆ ಒಂದೂ ತಪ್ಪು ಮಾಡದವರು ಅವಳಿಗೆ ಕಲ್ಲು ಹೊಡೆಯಿರಿ", ಎಂದು ಕ್ರಿಸ್ತನು, ಪುರುಷರು ತಮ್ಮನ್ನೇ ಆತ್ಮ ಪರೀಕ್ಷೆ ಮಾಡಿಕೊಳ್ಳುವಂತೆ ಆದೇಶಿಸಿದ. ಹೆಣ್ಣನ್ನು ಶೀಲಗೆಟ್ಟವಳೆಂದು ಶಿಕ್ಷಿಸಲು ಸಾಕ್ಷಿಗಳಿರಲೇ ಬೇಕು ಎಂದು ಪ್ರವಾದಿ ಮಹಮ್ಮದರು ತಾಕೀತು ಮಾಡಿದರು. ಸೂಳೆ ಸಂಕವ್ವನಂತಹವರಿಗೂ ಲಿಂಗ ದೀಕ್ಷೆ ಕೊಡಿಸಿ ಬಸವಣ್ಣ ಅವಳನ್ನು ಸಮಾಜದ ಕುತ್ತಿತ ದೃಷ್ಟಿಯಿಂದ ಪಾರು ಮಾಡಲು ಪ್ರಯತ್ನಿಸಿದ. ಇಂತಹ ಪ್ರಯತ್ನಗಳು ಹೆಣ್ಣಿನ ನೋವಿಗೆ ಶಾಶ್ವತ ಪರಿಹಾರ ಕೊಟ್ಟಿಲ್ಲ. ಯಾಕೆಂದರೆ ಈ ಸೃಷ್ಟಿಯಲ್ಲಿ ಹೆಣ್ಣು ಹುಟ್ಟಿರುವುದೇ ನೋವು ನುಂಗಲು, ಧರ್ಮ, ಸ್ಮೃತಿ, ಶಾಸ್ತ್ರ, ಸಂಪ್ರದಾಯಗಳು ನೋವಿಗೆ ಕಾರಣರಾದವರನ್ನು ಎಂದೂ ಅಪರಾಧಿ ಗಳೆಂದು ಪರಿಗಣಿಸಿಲ್ಲ. ಬದಲಾಗಿ ಸಹನೆ, ತ್ಯಾಗಗಳನ್ನು ಅವಳ ಧರ್ಮವೆಂದು ವಿಧಿಸಿದೆ.

ಪ್ರಪಂಚದ ಎಲ್ಲಾ ಕಾವ್ಯ, ಪುರಾಣಗಳಲ್ಲಿ ಹೆಣ್ಣು ಪತ್ನಿಯಾಗಿ, ತಾಯಿಯಾಗಿ ಎಷ್ಟು ವೈಭವೀಕರಿಸಲ್ಪಟ್ಟಿದ್ದಾಳೋ ಅಷ್ಟೇ ವೈಭವೀಕರಿಸಲ್ಪಟ್ಟವಳು ವೇಶ್ಯ. ಸ್ತ್ರೀಯ ಈ ಮೂರು ರೂಪಗಳ ವಿಜೃಂಭಣೆ ಅನಾದಿ ಕಾಲದಿಂದಲೂ ನಡೆಯುತ್ತಿತ್ತು. ನಾಗರಿಕ ಸಮಾಜ ವಿವಾಹವೆಂಬ ವ್ಯವಸ್ಥೆಯನ್ನು ರೂಢಿಗೆ ತಂದ ಜೊತೆಯಲ್ಲಿಯೇ ವೇಶ್ಯಾವಾಟಿಕೆಯನ್ನೂ ನಿರ್ಮಿಸಿತು. ಈ ವ್ಯವಸ್ಥೆಯ ಎರಡು ಭಿನ್ನ ತುತ್ತತುದಿಗಳಾಗಿ ಪತಿವ್ರತೆ ಮತ್ತು ವೇಶ್ಯ ಇದ್ದಾಳೆ. ಈ ಎರಡೂ ಪಾತ್ರಗಳಲ್ಲೂ ಹೆಣ್ಣು ಸಹನಾತೀತವಾದ ನೋವಿನ ಪ್ರತಿನಿಧಿಯಾಗಿದ್ದಾಳೆ.

ವೇಶ್ಯಯರಿಲ್ಲದ ನಾಗರಿಕ ಸಮಾಜವನ್ನು ಪ್ರಪಂಚ ಈ ವರೆಗೂ ಕಂಡಿಲ್ಲ. ಅವರಿಗೂ ಮನಸ್ಸು, ಹೃದಯಗಳಿವೆ ಎಂದೂ ಪರಿಗಣಿಸಿಲ್ಲ. ವಿಟನಿಲ್ಲದೆ ವೇಶ್ಯ ಇಲ್ಲ. ಆದರೆ ಈ ವಿಟ ವೃತ್ತಿಯನ್ನು ದೂಷಿಸುವ, ಖಂಡಿಸುವ ಧೈರ್ಯ ಸಮಾಜಕ್ಕಿಲ್ಲ. ಪುರುಷರ ಬಹುಮುಖೀ ರಸಿಕತನವೆಂದೇ ಭಾವಿಸಲಾಗುತ್ತಿದೆ. ಈ ವೃತ್ತಿಯಲ್ಲಿ ಮೂರು ಸ್ತರಗಳನ್ನು ಗುರುತಿಸಬಹುದು. ದೇವರು, ಧರ್ಮದ ಹೆಸರಿನಲ್ಲಿ ವೇಶ್ಯಾವೃತ್ತಿಯನ್ನು ಒಂದು ಧಾರ್ಮಿಕ ಕ್ರಿಯೆಯೆಂದು ದೇವದಾಸಿ ಯರಾಗಿ ರೂಢಿಗೊಳಿಸಿದ್ದು ಪುರುಷಪ್ರಧಾನ ಸಮಾಜದ ಸ್ವಾರ್ಥಕ್ಕಾಗಿ. ಇದನ್ನು ಭಾರತೀಯ ಸಂಸ್ಕೃತಿಯ ಹಿರಿಮೆ ಎನ್ನೋಣವೇ? ವೇಶ್ಯೆಯರ ಗಳಿಕೆಯಿಂದ ದೇವಸ್ಥಾನಗಳ ನಿತ್ಯ ಪೂಜೆಗಳು ನಡೆಯುತ್ತಿದ್ದದ್ದು, ರಾಜ್ಯದಲ್ಲಿ ಅನೇಕ ಸಮಾಜ ಸೇವಾ ಕಾರಗಳಿಗೆ ನೆರವಾಗುತ್ತಿದ್ದದ್ದು, ಶಾಸನಗಳಲ್ಲಿ, ಕಾವ್ಯಗಳಲ್ಲಿ ಪ್ರಾಚೀನ ಕಾಲದ ಚರಿತ್ರೆಯಲ್ಲಿ ದಾಖಲೆಯಾಗಿವೆ. ಅವರೆಲ್ಲ ಆ ಕಾಲದ 'ಹೈಟೆಕ್' ವೇಶ್ಯಯರಾಗಿದ್ದರು. ಮೇಲ್ವರ್ಗದ ಪುರುಷರು, ಸಾಮಂತರು, ಪಾಳೆಯಗಾರರು, ಜಮೀನ್ದಾರರು ಇವರ ಗಿರಾಕಿಗಳಾಗಿದ್ದರು.

ಎರಡನೆಯ ಸ್ತರದವರು ಮಧ್ಯಮ ವರ್ಗದ ಪುರುಷರಿಗಾಗಿ ಈ ವೃತ್ತಿಯಲ್ಲಿ ತೊಡಗಿಸಿಕೊಂಡವರು. ಇವರಲ್ಲೂ ಎಲ್ಲಮ್ಮನ ಭಕ್ತರಾಗಿ, ಜೋಗತಿಯರಾಗಿ ಈ ವೃತ್ತಿಗೆ ಧಾರ್ಮಿಕ ಒತ್ತಡದಿಂದ ಬಂದವರು. ಕೆಳವರ್ಗದ ಪುರುಷರ ಕಾಮ ಪಿಪಾಸೆಗೆ ಆಹುತಿಯಾಗುವವರು. ನಿರಕ್ಷರತೆ, ಮೂಢನಂಬಿಕೆಗಳಿಗೆ ಬಲಿಯಾಗಿ ತಮ್ಮ ಬದುಕನ್ನೇ ನರಕವಾಗಿಸಿಕೊಂಡವರು.

ಮೂರನೇ ವರ್ಗದ ವೇಶ್ಯೆಯರೂ ಇದ್ದಾರೆ. ಅವರು ತಮ್ಮನ್ನೇ ಕೊಂದು ಕೊಂಡು ಈ ವೃತ್ತಿಗೆ ಪ್ರವೇಶಿಸಿದವರು. ಆರ್ಥಿಕ ಭದ್ರತೆಯೂ ಇಲ್ಲದ, ಧಾರ್ಮಿಕ ಹಣೆಪಟ್ಟಿಯೂ ಇಲ್ಲದ ಇವರ ಬದುಕು ಯಾತನೆಯ ಅಗ್ನಿಕುಂಡ. ಇವರನ್ನು ಲೈಂಗಿಕ ಕಾರಕರ್ತೆಯರೆನ್ನಿ, ಬೀದಿ ವೇಶ್ಯೆಯರೆನ್ನಿ ಯಾವ ಹೆಸರಿನಿಂದ ಕರೆದರೂ ಅದೊಂದು ದಾರುಣ ಬದುಕು.

ಇಂತಹ ಲೈಂಗಿಕ ಕಾರಕರ್ತೆಯರ ಬಗ್ಗೆ ನಡೆಸಿದ ಒಂದು ಅಧ್ಯಯನದ ಪಕ್ಷಿನೋಟವಷ್ಟೇ ಇಲ್ಲಿದೆ. 'ವೈ ಕೇ‌ ಲಂಡನ್' ಸಂಸ್ಥೆಯ ಪ್ರಾಯೋಜಕತ್ವದಲ್ಲಿ ಮೂರು ವರ್ಷಗಳ ಕಾಲ ಈ ವೇಶ್ಯೆಯರಲ್ಲಿ ಜಾಗೃತಿಯನ್ನುಂಟು ಮಾಡಲು ಶ್ರೀಮತಿ ಹರಿಣಿಯವರು ಮಾಡಿದ ಪ್ರಯತ್ನಗಳು, ಎದುರಾದ ಸಮಸ್ಯೆಗಳು, ಪರಿಹಾರಗಳು, ಸಾಫಲ್ಯ, ವೈಫಲ್ಯಗಳು ಇತ್ಯಾದಿಗಳನ್ನು ಅವರ ಪ್ರತ್ಯಕ್ಷ ಅನುಭವಗಳಿಗನುಸಾರವಾಗಿ ಇಲ್ಲಿ ಈ ಬರಹದಲ್ಲಿ ದಾಖಲಿಸಲಾಗಿದೆ.

ಈ ವೃತ್ತಿಗೆ ಇರುವ ಹಿನ್ನೆಲೆ

ಇದು ಸಮಾಜದ ನೈತಿಕ ಪತನದ ಸಂಕೇತವಾಗಿದೆ. 'ಕೆಸರು ಕಂಡಲ್ಲಿ ತುಳಿಯಬಹುದು, ನೀರು ಕಂಡಲ್ಲಿ ತೊಳೆಯಬಹುದು" ಎಂಬ ಗಾದೆ ಪುರುಷನ ಪೌರುಷದ ಪ್ರತೀಕವಾಗಿದೆ. ಹೆಣ್ಣಿರುವುದೇ ಭೋಗಕ್ಕೆ ಎಂಬ ಭಾವನೆಯೂ ಭದ್ರವಾಗಿ ಬೇರೂರಿದೆ. ದೈಹಿಕವಾಗಿ ಪ್ರಬಲನಾದ ಪುರುಷ ಹೆಣ್ಣನ್ನು ಅಬಲೆ ಎಂದೇ ನಂಬಿದ್ದಾನೆ. ಆದುದರಿಂದ ತನ್ನ ಸ್ವಾರ್ಥಕ್ಕಾಗಿ ಯಾವ ಆಮಿಷವೊಡ್ಡಿಯಾದರೂ ಅವಳನ್ನು ಭೋಗಿಸುವ ಅಕಾಂಕ್ಷೆಯುಳ್ಳವನಾಗಿರುತ್ತಾನೆ. ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮಗಳಲ್ಲಿ ಹೆಣ್ಣನ್ನು ಕೇವಲ ಮಾಂಸದ ಮುದ್ದೆಯೆಂದೇ ಬಿಂಬಿಸುವುದರಿಂದ ತನ್ನ ಕುಟುಂಬದ ಹೊರತಾಗಿ ಎಲ್ಲ ಹೆಣ್ಣುಗಳಲ್ಲೂ ರತಿ ಸುಖವನ್ನು ಪಡೆಯುವ ಹಂಬಲ ತಳೆದಿರುತ್ತಾನೆ. ಅವಿವಾಹಿತ ಗಂಡಸರು, ಪತ್ನಿಯಿಂದ ಸುಖ ಸಿಕ್ಕದವರು, ಹೆಂಡತಿ ಗರ್ಭಿಣಿಯಾಗಿ ಹೆರಿಗೆಯ ಸಮಯದ ವರೆಗೆ ಸಂಗಸುಖದಿಂದ ವಂಚಿತರಾದವರು, ಪತ್ನಿಯನ್ನು ತೊರೆದು ದೂರದ ಊರುಗಳಲ್ಲಿ ವೃತ್ತಿ ನಿರತರಾಗಿರುವವರು, ಮೀಸೆ ಕಪ್ಪಾಗದ ಎಳೆಯ ಯುವಕರು ಈ ಎಲ್ಲರಿಗೂ ಸುಲಭದಲ್ಲಿ ತಮ್ಮ ತೆವಲಿಗೆ ಪ್ರಯೋಗ ಪಶುಗಳಾಗುವವರು ಈ ಬೀದಿ ವೇಶ್ಯಯರು, ತಮ್ಮ ಲೈಂಗಿಕ ಕಾಮನೆಗಳನ್ನು ನಿಯಂತ್ರಿಸಲಾಗದ ಈ ಗಂಡಸರಿಗೆ ಮೈತುಂಬ ಬಟ್ಟೆ ತೊಟ್ಟ ಗರತಿಯರನ್ನು ಬತ್ತಲೆಯಾಗಿ ಕಲ್ಪಿಸಿಕೊಂಡು ಮಾನಸಿಕವಾಗಿ ವ್ಯಭಿಚಾರ ಮಾಡಬಲ್ಲವರು, ಬಸ್ ಸ್ಟಾಂಡಿನಲ್ಲಿ, ಮಾರ್ಗದ ಬದಿಯಲ್ಲಿ ಒಂಟಿ ಹೆಣ್ಣು ಹತ್ತು ನಿಮಿಷ ನಿಂತರೆ ಸಾಕು ಈ ವಿಕೃತ ಮನಸ್ಸಿನ ಪುರುಷರು ಕೈಸನ್ನೆ, ಕಣ್ಣ ಸನ್ನೆ ಮಾಡಿ ಹತ್ತಿರ ಬಂದು 'ಬರುತ್ತೀಯಾ' ಎಂದು ಕೇಳುವಷ್ಟು ಕಲುಷಿತ ಮನಸ್ಸಿನವರಾಗಿರುತ್ತಾರೆ. ಅಷ್ಟೇ ಪ್ರಾಯದ ಮಗಳು, ತಂಗಿಯಿದ್ದ ಗಂಡಸರೂ ಇಂತಹ ಮನೋಭಾವದಿಂದ ವರ್ತಿಸುತ್ತಾರೆ. ರಾತ್ರಿ ಪ್ರಯಾಣದ ಬಸ್ಸಿನಲ್ಲಿ 'ಪೀಕ್ ಅವರ್‌'ನಲ್ಲಿ ಸಂಚರಿಸುವ ಸಿಟಿ ಬಸ್ಸುಗಳಲ್ಲಿ ಕೆಲವು ಪ್ರತಿಷ್ಠಿತರೆನ್ನಿಸಿದ ಗಂಡಸರ ವರ್ತನೆಗಳೂ ಕೆಟ್ಟ ರೂಪದಲ್ಲಿರುತ್ತವೆ. ತನ್ನ ಕೈಕೆಳಗೆ ದುಡಿಯುವ ಹೆಣ್ಣುಗಳನ್ನು ಕಾಣುವ ರೀತಿಯಲ್ಲಿ ಪುರುಷರ ದೃಷ್ಟಿಯಲ್ಲಿ ತಾನು ಶ್ರೇಷ್ಠ ಎಂಬ ಭಾವವೇ ಅಡಗಿರುತ್ತದೆ. ಇತ್ತೀಚಿನ ದಿನಗಳಲ್ಲಂತೂ 'ಸೆಕ್ಸಿ' ಎಂಬ ಪದ ಮಾರ್ಯಾದೆಯ ಹಂತ ಮೀರಿ ಪ್ರಯೋಗವಾಗುತ್ತಿದೆ. ಒಳ್ಳೆಯ ರುಚಿಯ ತಿಂಡಿಯನ್ನು ಕಂಡು ಬಾಯಿ ನೀರೂರಿಸುವಾಗಲೂ 'ಹೌ ಸೆಕ್ಸಿ' ಎಂಬ ಪದ ಪ್ರಯೋಗವಾಗುತ್ತಿರುವುದು ಏನನ್ನು ಸೂಚಿಸುತ್ತದೆ? ತಿನ್ನಲು, ಭೋಗಿಸಲು, ಅನುಭವಿಸಲು ಯೋಗ್ಯವಾದುದೆಲ್ಲಾ 'ಸಿ' ಆದರೆ ಗಂಡು ಹೆಣ್ಣಿನ ರಕ್ಷಕನೆಂಬ ಬಿರುದು ಇದೆಯಲ್ಲಾ? ಅವನು ಭಕ್ಷಕನಾದಾನೇ? ಆಗಲಾರ, ಆಗಬಾರದು ಕೂಡ. ಆದರೆ ಅವನು ನಿಜವಾಗಿ ಹೆಣ್ಣಿನ ರಕ್ಷಕನಾಗಿದ್ದಾನೆಯೇ? ನಮ್ಮ ಸಾಮಾಜಿಕ ಪರಂಪರೆ ಹೆಂಗಸರ ಜವಾಬ್ದಾರಿ ಹೊರುವ ಭಾರವನ್ನು ಗಂಡಸರಿಗೆ ಹೇರಿ ಬಿಟ್ಟಿದೆ. ಆ ಹೊರೆಯಿಂದ ಬಿಡುಗಡೆ ಹೊಂದಲು ಅವರು ಭಕ್ಷಕರಾಗುತ್ತಿರಬಹುದೇ? ಒಟ್ಟು ನಮ್ಮ ಸಾಮಾಜಿಕ ನೀತಿ ನಿಯಮಗಳು ವಿಧಿ, ನಿಷೇಧಗಳು, ನಂಬಿಕೆ, ನಡವಳಿಕೆಗಳು ಹೆಣ್ಣನ್ನು ಬಾಲ್ಯದಿಂದಲೇ ತಾರತಮ್ಯದಿಂದ ಪೋಷಿಸಿದ್ದರಿಂದ ಗಂಡು ಮಕ್ಕಳು ಸ್ತ್ರೀಯರ ಬಗ್ಗೆ ಗೌರವದಿಂದ ನಡೆದುಕೊಳ್ಳಲಾರರು. ಹೆಣ್ಣನ್ನು ಕಾಮದ ಗೊಂಬೆಯಾಗಿಯೇ ಕಾಣುವಂತಹ ಮನಸ್ಥಿತಿ ಪುರುಷರಲ್ಲಿ ಬೆಳೆಯುವಂತಾಗಿದೆ. ಇದೇ ವೇಶ್ಯಾವಾಟಿಕೆಗೆ ಆಸ್ಪದ ಕೊಟ್ಟಿದೆ. ಮುಂಬಯಿಯಲ್ಲಿ ಕಾಮಾಟಿಪುರ ಇರುವುದರಿಂದ ಅಲ್ಲಿನ ಇತರ ಹೆಂಗಸರು ಬೀದಿಯಲ್ಲಿ ಕ್ಷೇಮವಾಗಿ ಸಂಚರಿಸಲು ಸಾಧ್ಯವಾಗಿದೆ ಎಂಬ ಮಾತಿದೆ. ಈ ಮಾತು ಏನನ್ನು ಧ್ವನಿಸುತ್ತದೆ? ಸಾಮಾನ್ಯ ಸ್ತ್ರೀಯರು ಗೌರವದಿಂದ ಬದುಕುಬೇಕಾದರೆ ವೇಶ್ಯಾಸ್ತ್ರೀಯ ಬದುಕನ್ನು ನರಕವಾಗಿಸುವುದೇ? ಇಲ್ಲಿ ಗಂಡಸರ ಹೀನ ಸುಳಿಯನ್ನು ಮರೆಮಾಚಿ ಸಾಮಾನ್ಯ ಹೆಂಗಸರ ಮಾರಾದೆಯನ್ನು ರಕ್ಷಿಸಲಾಗಿದೆ ಅಷ್ಟೇ. ಜನಪದ ಹೆಣ್ಣು "ಹೆಣ್ಣಾಗಿ ಜನ್ಮ ಪಡೆಯೋದಕ್ಕಿಂತ ಬೀದಿನಾಯಿ ಜನ್ಮ ಕಡುಲೇಸು" ಎಂದು ಹಾಡಿದ್ದು ಇಂತಹ ಹೆಣ್ಣುಗಳನ್ನು ಕಂಡೇ ಇರಬೇಕು. ಗಂಡು ಹೆಣ್ಣುಗಳಲ್ಲಿ ಕಾಮದ ಆಕರ್ಷಣೆ ನಿಸರ್ಗ ಸಹಜ. ಹೆಣ್ಣು ಗಂಡನ್ನು ಒಲಿಸಿಕೊಂಡು ಕೂಡುವುದು ಅವರವರ ಇಚ್ಛೆ. ಅವರವರ ವೈಯಕ್ತಿಕ ವಿಷಯ. ಆದರೆ ವಿಕೃತ ಕಾಮಗಳಿಗಾಗಿ, ಹಣದ ಆಮಿಷವೊಡ್ಡಿ ಪದೇ ಪದೇ ಅವಳ ದೇಹದ ಮೇಲೆ ಆಕ್ರಮಣವೆಸಗುವುದು ಮಾತ್ರ ದೌರ್ಜನ್ಯದ ಪರಮಾವಧಿಯಾಗಿದೆ. ಈ ಎಲ್ಲಾ ಹಿನ್ನೆಲೆಯಿರುವ ಪುರುಷ ವರ್ಗವೊಂದು ಇರುವುದರಿಂದ ಲೈಂಗಿಕ ಕಾರಕರ್ತೆಯರೂ ಇರುತ್ತಾರೆ.

ಹರಿಣಿಯವರು ಸಂದರ್ಶಿಸಿದ ಸುಮಾರು 1500 ಲೈಂಗಿಕ ಕಾರಕರ್ತೆಯರಲ್ಲಿ ಹೆಚ್ಚಿನವರು ಈ ವೃತ್ತಿಯನ್ನು ಬಯಸಿ ಬಂದವರಲ್ಲ. ಅವರ ಕೌಟುಂಬಿಕ, ಸಾಮಾಜಿಕ, ಮಾನಸಿಕ ವಿಪ್ಲವಗಳು ಅನಿವಾರ್ಯವಾದ ದುರಂತ ಎಂಬ ಹಂತವನ್ನು ತಲಪಿದಾಗ ನಿರ್ವಾಹವಿಲ್ಲದೆ ಈ ವೃತ್ತಿಗೆ ಜೋತು ಬಿದ್ದವರು. ಎಲ್ಲಾ ವೃತ್ತಿಗಳಂತೆ ಇದೂ ಕೂಡಾ ಒಂದು ವೃತ್ತಿ ಎಂದು ತಿಳಿದುಕೊಂಡು ಸರಕಾರದಿಂದ ಲೈಸೆನ್ಸ್‌ ಪಡೆದು ವೇಶ್ಯಾ ವೃತ್ತಿ ನಡೆಸುವ ಒಂದು ಗುಂಪೂ ಇದೆ. ಇವರು ಈ ವೃತ್ತಿಯನ್ನು ಬಯಸಿ ಬಂದವರೂ ಇದ್ದಾರೆ. ಮೈಯಲ್ಲಿ ಕಸುವು ಇರುವಷ್ಟು ಕಾಲ ದುಡಿದು ನಿವೃತ್ತರಾಗುತ್ತಾರೆ. ದುಡಿಮೆಯ ಕಾಲಾವಧಿಯಲ್ಲಿ ನಿವೃತ್ತಿಯ ನಂತರದ ಬದುಕಿಗಾಗಿ ಮೊದಲೇ ಯೋಚನೆ, ಯೋಜನೆ ಮಾಡ ಬಲ್ಲವರಿವರು. ಇವರಿಗೆ ತಾವು ವೃತ್ತಿ ನಿರತರಾಗಿರುವಾಗ ದಬ್ಬಾಳಿಕೆ, ಶೋಷಣೆ, ಕ್ರೌರ್ಯಗಳಿಗೊಳಗಾಗದಂತೆ ರಕ್ಷಣೆ ಮತ್ತು ಭದ್ರತೆಯ ವ್ಯವಸ್ಥೆಯೂ ಇದೆ. ಇಲ್ಲಿಯೂ ಬೇಲಿಯೇ ಹೊಲ ಮೇದ ಘಟನೆಗಳು ನಡೆದಿಲ್ಲವೆಂದಿಲ್ಲ. 'ರಖವಾಲಿ' ಗಳಿಂದ, ಪೋಲಿಸರಿಂದ ಶೋಷಣೆಗೊಳಗಾಗುವುದೂ ಇದೆ. ಹೀಗಾದಾಗ ಅವರು ಕಾನೂನಿನ ಮೊರೆ ಹೋಗಲು ಆಸ್ಪದವಿದೆ. ಕಾನೂನು ಎಷ್ಟು ರಕ್ಷಿಸುತ್ತದೆ ಎಂಬುದು ಬೇರೆ ಪ್ರಶ್ನೆ. ಆದರೂ ಹೀಗೊಂದು ವ್ಯವಸ್ಥೆಯೊಳಗಿದ್ದೇವೆಂದೇ ಅವರಿಗೆ ಒಂದು ಸಣ್ಣ ಸಮಾಧಾನವಿರಬಹುದು. ನಾನೀಗ ಹೇಳ ಹೊರಟಿರುವುದು ಈ ವೃತ್ತಿಗೆ ಎಸೆಯಲ್ಪಟ್ಟ ಅಮಾಯಕ ಮಹಿಳೆಯರ ಬಗ್ಗೆ. 12 ವರ್ಷದಿಂದ 60 ವರ್ಷ ವಯಸ್ಸಿನ ಮಹಿಳೆಯರು ಬೀದಿ ವೇಶ್ಯೆಯರೆಂಬ ಹೆಸರಿನಲ್ಲಿ ಈ ವೃತ್ತಿಗಿಳಿದಿದ್ದಾರೆ. ಪ್ರೀತಿ ವಂಚಿತರಾದವರು ಒಂದು ಹನಿ ಪ್ರೀತಿಗಾಗಿ ಗಂಡಿನ ಹಿಂದೆ ಓಡಿ ಬಂದು ಬೀದಿಗೆಸೆಯಲ್ಪಟ್ಟವರು, ಯಾರದೋ ಮನೆಯಲ್ಲಿ ಕೆಲಸಕ್ಕಿದ್ದು ದೌರ್ಜನ್ಯಕೊಳಗಾಗಿ ಹೊರಹಾಕಲ್ಪಟ್ಟವರು, ಮದುವೆಯಾಗಿ ಮಕ್ಕಳನ್ನು ಹುಟ್ಟಿಸಿ ಗಂಡನಿಂದ ತ್ಯಜಿಸಲ್ಪಟ್ಟವರು, ಮಕ್ಕಳನ್ನು ಸಾಕುವ ಬೇರಾವ ದಾರಿಯೂ ಕಾಣದೆ ಈ ವೃತ್ತಿಗೆ ಶರಣಾದವರು, ಕೆಲಸ ಕೊಡಿಸುವ ನೆಪದಲ್ಲಿ ಈ ವೃತ್ತಿಗೆ ತಳ್ಳಲ್ಪಟ್ಟವರು, ತಲೆ ಹಿಡುಕರ ಕುತಂತ್ರದಿಂದ ಈ ದಾರಿಗೆ ಎಳೆಯಲ್ಪಟ್ಟವರು ಹೀಗೆ ಅನೇಕ ರೀತಿಯ ಹಿನ್ನೆಲೆಯುಳ್ಳವರಿದ್ದಾರೆ. ಇವರಲ್ಲೂ ಹೆಚ್ಚಿನವರು ಅಕ್ಷರಸ್ಥರು. ಅವರಲ್ಲಿ ಹಲವು ಮಂದಿಯನ್ನು ಆಯ್ಕೆ ಮಾಡಿ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿರುವವರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಅವರನ್ನು ಕೆಲಸಕ್ಕೆ ನೇಮಿಸಿಕೊಳ್ಳಲಾಯಿತು. ದುಡಿಮೆಗೆ ಬೇರೆ ದಾರಿಯನ್ನು ತೋರಿಸಿ ಕೊಡುವ ವ್ಯವಸ್ಥೆ ಮಾಡಲಾಯಿತು. ಲೈಂಗಿಕ ಕಾವ್ಯಕರೆಯರನ್ನೇ ಸಂಘಟಿಸಿ ಅವರೇ ತಮ್ಮ ಉದ್ಧಾರಕ್ಕಾಗಿ ಹೊಸ ಅವಕಾಶಗಳ ಬಾಗಿಲುಗಳನ್ನು ತೆರೆದು ತೋರಿಸುವ ಮತ್ತು ಅವರ ನೈಪುಣ್ಯ, ಬೌದ್ಧಿಕ ಸಾಮರ್ಥ್ಯಗಳನ್ನು ಬಳಸಿಕೊಂಡು ಹೊಸ ಜೀವನವನ್ನು ರೂಪಿಸುವ, ಸಮಾಜದ ಇತರರೊಂದಿಗೆ ಮುಕ್ತವಾಗಿ ಬೆರೆಯುವ ಆತ್ಮವಿಶ್ವಾಸವನ್ನು ತುಂಬಿಸುವ ಕೆಲಸವನ್ನು ಮಾಡುವ ಉದ್ದೇಶವನ್ನು ಹೊಂದಿತ್ತು.

ಬೀದಿ ವೇಶ್ಯೆಯರು ನಮ್ಮ ನಿಮ್ಮಂತೆ ಸಾಮಾನ್ಯ ಮಹಿಳೆಯರು. ಅವರ ಹಣೆಯ ಮೇಲೆಲ್ಲೂ ವೇಶ್ಯ ಎಂಬ ಹಣೆಪಟ್ಟಿ ಇಲ್ಲ. ಹಾಗಾಗಿ ಅವರನ್ನು ಸಂಪರ್ಕಿಸುವುದು ಸುಲಭವಲ್ಲ. ಆಗಾಗ ಇಂತಹ ಹೆಂಗಸರನ್ನು ಕಾನೂನು ಬಾಹಿರ ಅಶ್ಲೀಲ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರೆಂಬ ಆರೋಪದಲ್ಲಿ ಪೊಲೀಸರು ಕೇಸು ಹಾಕಿ ಹಿಡಿದು ತರುವುದು ನಡೆಯುತ್ತಾ ಇರುತ್ತದೆ. ಮಹಿಳಾ ಪೊಲೀಸ್ ಠಾಣೆಯಲ್ಲಿ ಒಮ್ಮೆ ಮೂವರು ಹೆಂಗಸರನ್ನು ಬಂಧಿಸಿದ ಸುದ್ದಿ ಬಂದೊಡನೆಯೇ ಅಲ್ಲಿಗೆ ಧಾವಿಸಿದ ಹರಿಣಿಯವರು ಅವರನ್ನು ಪ್ರೀತಿಯಿಂದ ಮಾತಾಡಿ ಮನವೊಲಿಸಿದರು. ಈ ವೃತ್ತಿಗೆ ಇಳಿದ ಮೇಲೆ ಆ ಮಹಿಳೆಯರನ್ನು ಯಾರೂ ಆವರೆಗೂ ಪ್ರೀತಿಯಿಂದ ಮಾತಾಡಿಸಿರಲಿಲ್ಲ. ಅವರ ಪೂರ್ವಾಪರ ಗಳನ್ನು ವಿಚಾರಿಸಿದಂತೆಲ್ಲಾ ಈ ವೃತ್ತಿಯಲ್ಲಿ ನಡೆಯುತ್ತಿರುವ ಶೋಷಣೆಗಳ ಕರಾಳ ಮುಖಗಳನ್ನು ಒಂದೊಂದಾಗಿ ಅವರು ತೆರೆದಿಡುತ್ತಾ ಹೋದರು. ಇದರಿಂದ ಹೊರಬರುವ ಇಚ್ಛೆಯುಳ್ಳ ಕೆಲವರನ್ನು ವಿಶ್ವಾಸಕ್ಕೆ ತೆಗೆದುಕೊಂಡುದರಿಂದ ತಮ್ಮ ನೋವನ್ನು ಹಂಚಿಕೊಂಡರು ಮಾತ್ರವಲ್ಲ. ಇತರರ ನೋವಿನ ನೆಲೆಗಳನ್ನು ಶೋಧಿಸಲು ನೆರವಾದರು. ಹೀಗೆ ಪ್ರಾರಂಭಗೊಂಡಿತು ಈ ಮಹಿಳೆಯರ ಬಗ್ಗೆ ಅಧ್ಯಯನ ಕಾರ್ಯ.

ಮೊತ್ತಮೊದಲು ಮಾಡಬೇಕಾದ ಕೆಲಸವೆಂದರೆ ಏಡ್ಸ್ ಬಗ್ಗೆ ಅವರಿಗೆ ತಿಳುವಳಿಕೆಯನ್ನು ಕೊಡುವುದು. ಇವರಲ್ಲಿ ಕೆಲವರು ಈಗಾಗಲೇ ಈ ಕಾಯಿಲೆಯನ್ನು ಅಂಟಿಸಿಕೊಂಡವರಿದ್ದರು. ಉಳಿದವರನ್ನು ಈ ಮಹಾಮಾರಿಯಿಂದ ತಪ್ಪಿಸಿಕೊಳ್ಳುವಂತೆ ಮುಂಜಾಗ್ರತಾ ವಿಧಾನವಾಗಿ ಕಾಂಡೋಮನ್ನು ಕಡ್ಡಾಯವಾಗಿ ಬಳಕೆ ಮಾಡಬೇಕೆಂದು ಒತ್ತಾಯಿಸಲಾಯಿತು. ಈ ವೃತ್ತಿಗೆ ಒಮ್ಮೆ ಇಳಿದವರನ್ನು ಮತ್ತೆ ಅವರ ಮನೆಯವರೂ ಸೇರಿಸಿಕೊಳ್ಳುವುದಿಲ್ಲ. ಈ ವೃತ್ತಿಯಿಂದ ರೋಸಿ ಹೋಗಿ ಬೇರೆ ಸಭ್ಯ ಜೀವನ ನಡೆಸಬೇಕೆಂದರೂ ಸಮಾಜ ಅದಕ್ಕೆ ಆಸ್ಪದ ಕೊಡುವುದಿಲ್ಲ. ಅದೂ ಅಲ್ಲದೆ ಈ ವೃತ್ತಿಯಲ್ಲಿ ದಿನಕ್ಕೆ ಸಾವಿರ ರೂಪಾಯಿಗಿಂತ ಹೆಚ್ಚು ಗಳಿಸುವವರೂ ಇದ್ದರು. ಇವರಿಗೆ ಅಷ್ಟು ಗಳಿಕೆಯ ಬೇರೆ ಉದ್ಯೋಗ ಸಿಗುವುದಿಲ್ಲ. ಸ್ಪೋದ್ಯೋಗದಲ್ಲಿ ತಮ್ಮನ್ನು ತೊಡಗಿಸಿಕೊಂಡ ಕೆಲವು ಮಹಿಳೆಯರು ಕೆಲಕಾಲ ವೃತ್ತಿಗೆ ವಿದಾಯ ಹೇಳಿದರೂ ಕೂಡಾ ಮತ್ತೆ ಪುನಃ ಹಣದ ಅವಶ್ಯಕತೆಗಾಗಿ ಮತ್ತೆ ಅದೇ ಲೈಂಗಿಕ ವೃತ್ತಿಗೆ ಮರಳಿದುದೂ ಉಂಟು. ದೇಹವೇ ಬಂಡವಾಳವಾದ ಈ ಉದ್ಯೋಗದಲ್ಲಿ ಎದುರಾಗುವ ಕಷ್ಟನಷ್ಟ, ನೋವುಗಳಿಗೆಲ್ಲಾ ಅವರ ದೇಹ ಮನಸ್ಸುಗಳನ್ನು ಒಗ್ಗಿಸಿಕೊಂಡು ಬಿಟ್ಟರುತ್ತಾರೆ. ಅವರ ಉಡುಗೆ

ತೊಡುಗೆ, ಶೃಂಗಾರ ಸಾಧನಗಳಿಗೆ ಗಿರಾಕಿಗಳನ್ನು ದೊರಕಿಸಿಕೊಟ್ಟವರಿಗೆ, ಮನೆ ಅಥವಾ ಹೋಟೇಲು ಮಾಲಕರಿಗೆ ಮತ್ತು ಪೋಲಿಸರಿಗೆ ಕೊಟ್ಟು ಉಳಿದ ಹಣವಷ್ಟೇ ಅವರಿಗೆ ದಕ್ಕುತ್ತಿತ್ತು. ವೃತ್ತಿ ಮಾತ್ಸಲ್ಯ ಎಷ್ಟು ಕರಾಳವಾಗಿ ಇವರನ್ನು ಆವರಿಸಿ ಬಿಟ್ಟಿದೆಯೆಂದರೆ ಅದರಿಂದ ಹೊರಗೆ ಬರುವ ದಾರಿಗಳೇ ಮುಚ್ಚಿ ಹೋಗಿರುತ್ತವೆ. ಈ ಅಧ್ಯಯನದ ಪೂರ್ಣ ಅವಧಿಯುದ್ದಕ್ಕೂ ಈ ರೀತಿಯ ಕಲಹಗಳನ್ನು ಪರಿಹರಿಸುವುದೇ ದೊಡ್ಡ ಸಮಸ್ಯೆಯಾಗಿ ಕಾಡುತ್ತಿತ್ತು. ವೃತ್ತಿ ನಿರತರಾಗಿದ್ದ ಹೊತ್ತಿನಲ್ಲಿ ಅವರು ಕೇವಲ ಹಣದೊಂದಿಗೆ ವ್ಯವಹರಿಸುತ್ತಾರೆ. ಮನುಷ್ಯ ಸಂಬಂಧದೊಂದಿಗಲ್ಲ. ಉಳಿದ ಸಮಯದಲ್ಲಿ ಅವರಲ್ಲಿ ಮಾನವೀಯ ಅಂತಃಕರಣಗಳು ಸ್ಪಂದಿಸುತ್ತವೆ. ವೃತ್ತಿಯನ್ನು ಕೈಗೊಳ್ಳುತ್ತಿರುವಾಗ ಎಲ್ಲಾ ಭಾವನೆಗಳನ್ನು ಸುಟ್ಟುಕೊಂಡಿರುತ್ತಾರೆ. ಇಲ್ಲವೇ ಕೊಂದಿರುತ್ತಾರೆ. ಯಾಕೆಂದರೆ ಅವರೊಂದಿಗೆ ವ್ಯವಹರಿಸುವವರೂ ಒಂದೋ ಮೃಗಗಳಾಗಿರುತ್ತಾರೆ ಇಲ್ಲವೇ ರಾಕ್ಷಸರಾಗಿರುತ್ತಾರೆ. ಹೋಟೇಲು, ಮನೆಗಳಂತಹ ಸ್ಥಳಗಳನ್ನು ಆಯ್ಕೆ ಮಾಡಲು ಅಸಮರ್ಥರಾದವರು ಬೀದಿ ಬದಿಯಲ್ಲೋ, ರೈಲ್ವೆ, ಬಸ್ಸು ನಿಲ್ದಾಣಗಳಲ್ಲೊ ತಮ್ಮ ದಂಧೆಯನ್ನು ಪೂರೈಸುವವರೂ ಇದ್ದಾರೆ. ತುತ್ತಿನ ಚೀಲ ತುಂಬಿಸಲಿಕ್ಕಾಗಿ ಅನೇಕರೊಂದಿಗೆ ಮಲಗಬೇಕಾದ ಅನಿವಾರ್ಯ ದೌರ್ಜನ್ಯ ಕ್ಕೊಳಗಾಗುತ್ತಾರೆ. ಯಾಕೆಂದರೆ ಕೆಲವೊಮ್ಮೆ ಹಣ ಕೊಡದೇ ಮೋಸ ಮಾಡುವ ಗಂಡಸರೂ ಇರುತ್ತಾರೆ. ಹಾಗಾಗಿ ಕೇವಲ ಹತ್ತಿಪ್ಪತ್ತು ರೂಪಾಯಿಗಳಿಗಾಗಿ ಮೈಯೊಪ್ಪಿಸಬೇಕಾದ ದಯನೀಯ ಸ್ಥಿತಿಗೆ ಬಂದಿರುತ್ತಾರೆ. ಈ ವೃತ್ತಿಯಲ್ಲಿ ಭಾವುಕತೆ, ಪ್ರೀತಿ, ಪ್ರೇಮಗಳು ಇಣುಕುವುದೇ ಇಲ್ಲ. ಕೇವಲ ಕಾಮ ಮತ್ತು ಹಣದೊಂದಿಗೆ ಹೆಣ್ಣಿನ ದೇಹದ ವ್ಯಾಪಾರ ನಡೆಯುತ್ತದೆ. ಜಾತಿ, ಧರ್ಮ, ಅಂತಸ್ತು, ವರ್ಣ, ವರ್ಗ ಇದ್ಯಾವುದೂ ಬಾಧಿಸದ ಏಕೈಕ ಕ್ಷೇತ್ರವಿದು. ಈ ವೃತ್ತಿಯನ್ನು ತಡೆಯಲು ಶತಮಾನಗಳಿಂದ ಎಷ್ಟೆಷ್ಟೋ ಮಹಾಪುರುಷರು ಪ್ರಯತ್ನಪಟ್ಟಿದ್ದಾರೆ. ಉಪದೇಶಗಳ ಅಮೃತಧಾರೆಯನ್ನೇ ಸುರಿಸಿದ್ದಾರೆ. ಆದರೂ ಕೂಡಾ ಇಂದೂ ಈ ವ್ಯಾಪಾರವನ್ನು ಸಮಾಜ ಉಳಿಸಿಕೊಂಡೇ ಬಂದಿದೆ. ಒಂದೇ ಒಂದು ಭೇದವೆಂದರೆ ದೇಹ ಎಳೆಯದ್ದೋ, ಬಲಿತದ್ದೋ ಎಂಬುದಷ್ಟೇ ಉಳಿದಿರುವ ಕ್ಷೇತ್ರವಿದು.

ಈ ದಂಧೆ ನಡೆಸುವವರು ಯಾರು

ಮೊದಲೇ ಹೇಳಿದಂತೆ ಈ ದಂಧೆಗೆ ತಳ್ಳಲ್ಪಡುವವರು ಬದುಕಿಗೆ ಬೇರಾವ ದಾರಿಯೂ ಕಾಣದೆ ಸೋತವರು. ಇಂತಹವರನ್ನು ಗುರುತಿಸಿ ಕರೆತರುವ ತಲೆಹಿಡುಕರ ಒಂದು ಜಾಲವೇ ಇದೆ. ಫೋನ್ ಮೂಲಕ ಸಂಪರ್ಕಿಸಿ ಹೊಟೇಲೋ, ಮನೆಯೋ ಯಾವುದಾದರೊಂದು ಸ್ಥಳವನ್ನು ಗೊತ್ತು ಮಾಡುತ್ತಾರೆ. ಈ ವೃತ್ತಿಯಲ್ಲಿ ನುರಿತ ಹೆಂಗಸರೇ ಈ ದಲ್ಲಾಳಿ ಕೆಲಸ ನಿರ್ವಹಿಸುವುದೂ ಇದೆ. ಮನೆಯ ಯಜಮಾನಿಗೆ ದಲ್ಲಾಳಿಗೆ ಕೊಟ್ಟು ಉಳಿದುದಷ್ಟೇ ಈ ವೇಶ್ಯೆಯರಿಗೆ ಸಿಕ್ಕುತ್ತದೆ. ಸುಲಭ ಗಳಿಕೆಯ ಈ ದಾರಿಯನ್ನು ಒಮ್ಮೆ ಆಯ್ಕೆ ಮಾಡಿಕೊಂಡರೆ ಶೋಷಣೆಗೆ ತಮ್ಮನ್ನು ಒಗ್ಗಿಸಿಕೊಳ್ಳುತ್ತಾರೆ. ಪ್ರತಿಭಟಿಸುವ ಶಕ್ತಿಯನ್ನೇ ಕಳಕೊಂಡಿರುತ್ತಾರೆ. ಸಾಧ್ಯವಿರುವಷ್ಟು ದುಡಿಮೆ, ಗಳಿಕೆ ಇವಿಷ್ಟೇ ಅವರ ಬದುಕು. ಮನೆಯಲ್ಲೇ ಈ ದಂಧೆ ನಡೆಸುವವರು ತಮ್ಮ ಮಕ್ಕಳನ್ನು ರಹಸ್ಯವಾಗಿ ಎಲ್ಲಾದರೂ ಬಿಟ್ಟಿರುತ್ತಾರೆ. ಯಾಕೆಂದರೆ ಬರುವ ಗಂಡಸರು ಎಳೆ ಪ್ರಾಯದವರನ್ನೇ ಆಶಿಸುತ್ತಾರೆ. ಮಾತ್ರವಲ್ಲ ಅವರಿಗಾಗಿ ಹೆಚ್ಚು ಹಣ ನೀಡಲೂ ಸಿದ್ಧರಾಗುತ್ತಾರೆ. ಈ ವೃತ್ತಿಯಲ್ಲಿ ತಲೆಹಿಡುಕರಾದ ಸಂಸಾರಸ್ಥರಾದ ಗಂಡಸರೂ ಹೆಂಗಸರೂ ತಮ್ಮ ಮಕ್ಕಳನ್ನು ಜೋಪಾನ ಮಾಡುತ್ತಾ ವೇಶ್ಯಾವೃತ್ತಿಗಿಳಿಯದಂತೆ ರಕ್ಷಿಸುತ್ತಾರೆ. ಆದರೆ ವೇಶ್ಯಾವೃತ್ತಿಗಿಳಿದ ಹೆಂಗಸರ ಮಕ್ಕಳು ಸರಿಯಾಗಿ ಪೋಷಣೆ ಇಲ್ಲದೆ, ಶಿಕ್ಷಣವಿಲ್ಲದೆ ನೆಲೆ ಇಲ್ಲದೆ ನರಳುವುದೇ ಹೆಚ್ಚು.

ಮಕ್ಕಳ ಭವಿಷ್ಯದ ಯೋಚನೆಯಿದ್ದರೂ ಅದನ್ನು ಅವರಿಂದ ಪೂರೈಸಲಾಗದ್ದೇ ಹೆಚ್ಚು. ವೃತ್ತಿನಿರತ ವೇಶ್ಯೆಯರಲ್ಲಿ ಅವರ ಮಕ್ಕಳ ಬಗ್ಗೆ ಕೇಳಿದರೆ ಸಾಕು ಕರುಳಲ್ಲಿ ಕತ್ತಿಯಾಡಿಸಿದಂತಹ ನೋವಿನಿಂದ ಬೇಯುತ್ತಾರೆ. ಇಂತಹ ಸ್ಥಿತಿಯಲ್ಲಿದ್ದವ ಳೊಬ್ಬಳಲ್ಲಿ ಮಗುವನ್ನು ಯಾರಿಗಾದರೂ ಕೊಡು ಎಂದು ಪದೇ ಪದೇ ಹೇಳಿದರೂ ಕೇಳದೆ ನಿಧಿಯಂತೆ ತನ್ನ ಜೊತೆಯಲ್ಲೇ ಒಯ್ಯುತ್ತಿದ್ದಳು. ಒಂದು ದಿನ ವಿಪರೀತ ಕುಡಿದು ತೂರಾಡುತ್ತಿದ್ದ ಆಕೆಯ ಕೈಯಿಂದ ಮಗು ಜಾರಿ ಬಸ್ಸಿನಡಿಗೆ ಬಿದ್ದು ಸತ್ತ ಬಳಿಕ ಆಕೆ ಮತಿವಿಕಲೆಯೇ ಆಗಿ ಬಿಟ್ಟಿದ್ದಳು.

ಮತ್ತೊಬ್ಬಾಕೆಯೂ 4-5 ವರ್ಷದ ವರೆಗೂ ತನ್ನ ಹೆಣ್ಣು ಮಗುವನ್ನು ಅಗಲಿರಲಾರದೆ ಅಪ್ಪಿಕೊಂಡು ಹೋದಲ್ಲಿಗೆಲ್ಲಾ ಒಯ್ಯುತ್ತಿದ್ದವಳು ಕೊನೆಗೆ ಹೆಣ್ಣು ಮಗು ತನ್ನಂತಾಗುವುದು ಬೇಡವೆಂದು ನಿರ್ಧರಿಸಿ ಅನಾಥಾಶ್ರಮಕ್ಕೆ ಸೇರಿಸಲು ಮನಸ್ಸು ಮಾಡಿದಳು.

ಈ ವೃತ್ತಿಯಲ್ಲಿದ್ದವರಿಗೆ ಬಸಿರು, ಬಾಣಂತನಗಳು ಸಂಪಾದನೆಗೆ ಖೋತಾ ಮಾಡುತ್ತಿದ್ದವು. ಗರ್ಭಪಾತ ಮಾಡಿಸಲು ಹಣ ಹೊಂದಿಸಲು ಸಾಧ್ಯವಾಗದೆ ಕೆಲವೊಮ್ಮೆ ಬಸಿರು ಬೆಳೆಯುವುದುಂಟು. ಕಾಂಡೋಮ್ ಬಳಕೆಯನ್ನು ನಿರಾಕರಿಸುವ ಪುರುಷರೊಂದಿಗೆ ವ್ಯವಹರಿಸುವಾಗ ಬಸಿರು ಸಹಜವಾಗಿಯೇ ಬೆಳೆಯುತ್ತಿತ್ತು. ಕೆಲ ವರ್ಷಗಳ ಹಿಂದೆ ಹೆಚ್ಚಿನ ಪುರುಷರು ಕಾಂಡೋಮ್ ಬಳಕೆಯನ್ನು ನಿರಾಕರಿಸುತ್ತಿದ್ದರು. ಆದರೆ ಇತ್ತೀಚಿನ ವರ್ಷ ಗಳಲ್ಲಿ ಏಡ್ಸ್ ಬಗ್ಗೆ ಜಾಗೃತಿ ಮೂಡುವುದು ಹೆಚ್ಚಿದ್ದರಿಂದ ಪುರುಷರೂ ಎಚ್ಚರಗೊಂಡಿದ್ದಾರೆ. ಮಾತ್ರವಲ್ಲ ವೇಶ್ಯೆಯರೂ ಕೂಡಾ ಇದರ ಬಳಕೆಯನ್ನು ಕಡ್ಡಾಯವಾಗಿ ಪಾಲಿಸುತ್ತಾರೆ. ಹಾಗಾಗಿ, ಈಗ ಬಸಿರು, ಬಾಣಂತನಗಳ ಕಿರಿಕಿರಿ ಹಿಂದಿಗಿಂತ ಕಡಿಮೆಯಾಗಿದೆ. ಮೊತ್ತಮೊದಲು ಈ ವೃತ್ತಿಗೆ ಸೇರಿದವಳು ಅಕ್ಷತ ಯೋನಿಯವಳಾಗಿದ್ದರೆ ಕಾಂಡೋಮ್ ರಹಿತವಾಗಿಯೇ ಸಂಭೋಗಕ್ಕೆ ಸಿದ್ಧಳಾಗಬೇಕೆಂದು ಒತ್ತಾಯಿಸಲಾಗುತ್ತದೆ. ಕಾಂಡೋಮ್ ಸಹಿತ ಸಂಭೋಗ ಪುರುಷರಿಗೆ ತೃಪ್ತಿಯಾಗುವಷ್ಟು ರತಿಸುಖ ಕೊಡುವುದಿಲ್ಲವೆಂಬ ಭ್ರಮೆಯುಳ್ಳವರಿದ್ದಾರೆ. ವಿಟ ವೃತ್ತಿಯನ್ನೇ ಗೀಳಾಗಿಸಿಕೊಂಡು ಲೈಂಗಿಕ ಕಾಯಿಲೆ ಗಳನ್ನು ಹತ್ತಿಸಿಕೊಂಡವರು ಅತಿ ಸಣ್ಣ ಪ್ರಾಯದವರನ್ನೇ ಆಯ್ಕೆ ಮಾಡಿ ತಮ್ಮ ತೀಟೆ ತೀರಿಸಿಕೊಳ್ಳುವುದೇ ಜಾಸ್ತಿ. ತಾವೂ ಮುಳುಗುವುದಲ್ಲದೆ ಇತರರನ್ನು ಮುಳುಗಿಸಿದ ಕ್ರೂರ ಸಂತೋಷಿಗಳಿವರು. ಈ ಮಹಿಳೆಯರಿಗೆ ಲೈಂಗಿಕ ಕಾಯಿಲೆಗಳಿದ್ದರೂ ವೃತ್ತಿಗೆ ವಿಶ್ರಾಂತಿಯಾಗಲೀ, ವಿದಾಯವಾಗಲೀ ಇರುವುದಿಲ್ಲ. ಹಾಗೆ ಮಾಡಿದರೆ ಅವರಿಗೆ ತುತ್ತು ಕೂಳಿಗೂ ಗತಿಯಿರುವುದಿಲ್ಲ. ಆದುದರಿಂದ ಚಿಕಿತ್ಸೆ ಮಾಡಿಕೊಳ್ಳುತ್ತಲೇ ವೃತ್ತಿಯಲ್ಲಿ ಮುಂದುವರಿಯುತ್ತಾರೆ. ಅಧ್ಯಯನ ನಡೆಸಿದ ವರ್ಷಗಳಲ್ಲಿ ಈ ರೋಗಗಳ ಕುರಿತು ಅವರಿಗೆ ಸರಿಯಾದ ಪರೀಕ್ಷೆ ನಡೆಸಿ ಸೂಕ್ತ ಚಿಕಿತ್ಸೆ ಪಡೆಯುವ ವ್ಯವಸ್ಥೆ ಮಾಡಲಾಯಿತು.

ಈ ವೃತ್ತಿಗೆ ಬಂದ ಒಬ್ಬೊಬ್ಬರದೂ ಒಂದೊಂದು ಕರುಣ ಕತೆ, ಅಪ್ಪನ ಕುಡಿತ, ಸೋದರರ ಬೇಜವಾಬ್ದಾರಿತನದಿಂದ ಜರ್ಜರಿತವಾದ ಕುಟುಂಬದ ಹೊಟ್ಟೆ ತುಂಬಿಸಲಿಕ್ಕಾಗಿಯೇ ಬಂದವರು ಕೆಲವರು. ಒಳ್ಳೆ ಕಾಲೇಜು ತರುಣಿಯಂತೆ ನೀಟಾಗಿ ಡ್ರೆಸ್ ಮಾಡಿಕೊಂಡು ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟು ಬಂದರೆ ರಾತ್ರಿಯೇ ಮನೆ ತಲುಪುವುದು ನಿತ್ಯ ರೂಢಿ, ನಾಲ್ಕು ಮಕ್ಕಳನ್ನು ಹುಟ್ಟಿಸಿ ತಲಾಖ್ ಕೊಟ್ಟು ಗಂಡ ಪರಾರಿಯಾದ ಮೇಲೆ ಅವುಗಳನ್ನು ಸಾಕುವ ಉದ್ದೇಶಕ್ಕಾಗಿಯೇ ಬೆಳಿಗ್ಗೆ ಬಂದು ಸಂಜೆ ಮರಳುವವರೂ ತುಂಬಾ ಮಂದಿ ಇದ್ದಾರೆ. ಹುಟ್ಟಿಸಿದ ಅಪ್ಪನಿಂದಲೇ ಮಾರಲ್ಪಟ್ಟ ಕುಮಾರಿಯರೂ ಇದ್ದಾರೆಂದರೆ ಇದಕ್ಕಿಂತ ಕ್ರೂರವಾದ ಮನುಷ್ಯರು ಇರಲು ಸಾಧ್ಯವೇ? ಕೈಹಿಡಿದ ಪತಿಯೇ ಪ್ರೋತ್ಸಾಹಿಸಿ ಈ ಕೆಲಸಕ್ಕೆ ದೂಡಿದ ಪತಿಪರಮೇಶ್ವರರೂ ಇದ್ದಾರೆ.

ಈ ಕೆಲಸಕ್ಕೆ ಊರಿನವರಿಗಿಂತ ದೂರ ದೂರಿನಿಂದ ಬಂದು ಸೇರಿಕೊಂಡವರೇ ಹೆಚ್ಚು. ಕೇರಳ, ಆಂಧ್ರ, ತಮಿಳ್ಳಾಡುಗಳಿಂದ ಬಂದ ಮಹಿಳೆಯರು ಮೊದಲೇ ಗೊತ್ತುಪಡಿಸಿದ ತಾಣಗಳಲ್ಲಿ ಸೇರಿಕೊಂಡು ವಾರ, ತಿಂಗಳುಗಳಷ್ಟು ಕಾಲ ಅಲ್ಲಿ ನೆಲೆಸಿ ಸಾಕಷ್ಟು ಹಣ ಸಂಗ್ರಹವಾದ ಮೇಲೆ ತಮ್ಮ ಊರಿಗೆ ಮರಳುತ್ತಾರೆ. ಈ ವೃತ್ತಿಯಲ್ಲಿ ನಿರಾತಂಕವಾಗಿ ನಿರ್ಭಿಡೆಯಿಂದ ತೊಡಗಿಸಿಕೊಳ್ಳಲು ತಮ್ಮ ಊರಲ್ಲಿ ಸಾಧ್ಯವಿಲ್ಲದ ಕಾರಣ ಹೀಗೆ ಸ್ಥಳ ಬದಲಾಯಿಸುವುದು ಕ್ಷೇಮಕರವೆಂದು ಇವರು ಭಾವಿಸುತ್ತಾರೆ. ಮುಂಜಾನೆಯ ರೈಲಿನಲ್ಲಿ ಸಮೀಪದ ಕಾಸರಗೋಡಿನಿಂದ ಬಂದು ಸಂಜೆಯ ರೈಲಿಗೆ ಮರಳುವ ಒಂದು ದೊಡ್ಡ ಗುಂಪೇ ಇದೆ. ಇವರನ್ನು ಆಯಾಯ ಮನೆಗಳಿಗೆ, ಹೋಟೇಲುಗಳಿಗೆ ತಲುಪಿಸುವ ಹೊಣೆ ಹೊತ್ತ ತಲೆಹಿಡುಕರು ಕಾಯುತ್ತಿರುತ್ತಾರೆ. ತಮ್ಮ ಕಮಿಶನ್ ಪಡೆದು ವ್ಯಾಪಾರ ಕುದುರಿಸುತ್ತಾರೆ. ಹೀಗೆ ಮಧ್ಯವರ್ತಿಗಳಾಗಿ ಕಾರನಿರ್ವಹಿಸುತ್ತಿರುವವರು ಹೆಚ್ಚಿನವರು ಗಂಡಸರು. ಇವನ್ಯಾರೂ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ಈ ಕೆಲಸಕ್ಕೆ ಕಳಿಸುವುದಿಲ್ಲ. ತಮ್ಮ ಮಕ್ಕಳನ್ನು ಈ ಕೆಲಸಕ್ಕೆ ತಳ್ಳುವಾಗ ಕಾಡುವ ಪಾಪಪ್ರಜ್ಞೆಯು, ಅವರಿಗೆ ಬೇರೆ ಹೆಣ್ಣು ಮಕ್ಕಳನ್ನು ಈ ಕೆಲಸಕ್ಕೆ ತಳ್ಳುವಾಗ ಕಾಡುವುದಿಲ್ಲ. ಅದೇ ರೀತಿ ಮನೆಯೊಡತಿಯರಾಗಿ ಹೆಣ್ಣು ಮಕ್ಕಳನ್ನು ಈ ವೃತ್ತಿಯಲ್ಲಿ ತೊಡಗಿಸಿಕೊಳ್ಳುವ 'ಘರ್‌ವಾಲೀ'ಗಳಿಗೂ ಪಾಪಪ್ರಜ್ಞೆ ಕಾಡುವುದಿಲ್ಲ. ತಾವೂ ಸುಖವಾಗಿ ಬದುಕಿ ಈ ವೃತ್ತಿಗೆ ಸೇರಿದ ಹೆಣ್ಣು ಮಕ್ಕಳಿಗೂ ಬದುಕಿಗೊಂದು ದಾರಿ ತೋರಿಸಿದ್ದೇವೆ ಎಂಬ ಭಾವನೆಯೇ ಹೆಚ್ಚಿದೆ. ಒಮ್ಮೆ ಈ ವೃತ್ತಿಗೆ ಸೇರಿ ಹಣದ ರುಚಿ ಹತ್ತಿತೆಂದರೆ ಮುಗಿಯಿತು. ಅದು ಹುಲಿಯ ಮೇಲಿನ ಸವಾರಿಯೇ. ಇದರಿಂದ ಕೆಳಗಿಳಿದರೂ ಸಾವಿನ ಭಯ ಕಾಡುತ್ತದೆ. ಸಂಪಾದನೆಯ ಬೇರೆ ಮೂಲಗಳನ್ನು ತೋರಿಸಿಕೊಟ್ಟರೂ ಹಿಂದಿನ ಐಷಾರಾಮದ ಜೀವನ ಅವರಿಗೆ ಕನಸಿನ ಮಾತಾಗುತ್ತದೆ.

ಈ ಅಧ್ಯಯನದ ಸಮಯದಲ್ಲಿ ವೃತ್ತಿ ತ್ಯಜಿಸಲು ಮನಸ್ಸು ಮಾಡಿದ ಮೂವರು ಮಹಿಳೆಯರನ್ನು 'ಶುಭದಾ' ಸಂಸ್ಥೆಯಲ್ಲಿ ಅಲ್ಪ ಕಾಲದ ವಾಸ್ತವ್ಯಕ್ಕಾಗಿ ಇಡಲಾಯಿತು. ಅವರಿಗೆ ಅಲ್ಲಿಯ ಶಿಸ್ತುಬದ್ಧ ಜೀವನಕ್ಕೆ ಒಗ್ಗಿಕೊಳ್ಳಲು ಕಷ್ಟವಾಗಿ ಮೂರೇ ದಿನದಲ್ಲಿ ಹೇಳದೆ ಓಡಿ ಬಂದು ಬಿಟ್ಟರು. ಈ ವೃತ್ತಿಯಲ್ಲಿದ್ದವರ ಜೀವನ ಶೈಲಿಯೇ ಬೇರೆ, ವೇಷಭೂಷಣ, ಉಡುವುದು ಉಣ್ಣುವುದಕ್ಕೆ ಸಾಕಷ್ಟು ಹಣ ವ್ಯಯ ಮಾಡಲೇಬೇಕಾಗುತ್ತದೆ. ಜೊತೆಗೆ ಆರೋಗ್ಯ ರಕ್ಷಣೆಗಾಗಿ ಮಧ್ಯವರ್ತಿಗಳ ಕಮಿಷನ್‌ಗಾಗಿ, ಮನೆ ಬಾಡಿಗೆ, ಹೋಟೇಲ್ ಬಾಡಿಗೆ ಮತ್ತು ಪೋಲೀಸರ ಕಾಟ ತಪ್ಪಿಸಲು ಹಣದ ಅವಶ್ಯವಿರುವುದರಿಂದ ಹೆಚ್ಚು ದುಡಿಯಲೇಬೇಕಾಗುತ್ತದೆ. ಇಷ್ಟೆಲ್ಲಾ ಕೊಟ್ಟು ಉಳಿದ ಹಣವಷ್ಟೇ ತನ್ನ ಸ್ವಂತಕ್ಕೆ ಮತ್ತು ಕುಟುಂಬಕ್ಕೆ ಉಳಿಸಬೇಕಾಗುತ್ತದೆ. ಇಂತಹ ರಕ್ಷಣೆಯ ವ್ಯವಸ್ಥೆ ಮಾಡಲು ಸಾಧ್ಯವಿಲ್ಲದ ಕೆಳ ಹಂತದ ವೇಶ್ಯೆಯರು ಒಂದಿಷ್ಟೂ ಮರೆ ಸಿಕ್ಕಿದಲ್ಲಿ, ಬಯಲಲ್ಲಿ, ಪಾರ್ಕ್‌ಗಳಲ್ಲಿ, ರೈಲು ನಿಲ್ದಾಣಗಳಲ್ಲಿ ತಮ್ಮ ಕೆಲಸ ಪೂರೈಸುತ್ತಾರೆ. ಬಹಳ ಕಡಿಮೆ ದರದಲ್ಲಿ ಮೈ ಮಾರಾಟ ಮಾಡುವ ಇವರ ಸ್ಥಿತಿ ಅತ್ಯಂತ ಶೋಚನೀಯ. ಹಣ ಕೊಡದೇ ಹಿಂಸಿಸುವುದು ವಿಕೃತ ಕಾಮಚೇಷ್ಠೆಗಳಿಗೆ ಇವರನ್ನು ಬಳಸಿಕೊಳ್ಳುವುದು ಹೆಚ್ಚಾಗಿ ಕಂಡು ಬರುತ್ತದೆ.

ಬದುಕಲು ಬೇರಾವ ದಾರಿಯೂ ಕಾಣದಾಗ ತನ್ನ ದೇಹವೆಂಬ ಆಸ್ತಿಯನ್ನೇ ಬಂಡವಾಳ ಮಾಡಿ ಈ ವೃತ್ತಿಗಿಳಿವವರಲ್ಲಿ ಒಂದು ದೊಡ್ಡ ಗುಂಪಿನ ವೇಶ್ಯೆಯರ ಜೀವನ ಅನುಕಂಪವನ್ನು ಹುಟ್ಟಿಸುತ್ತದೆ. ಆದರೆ ಉಡಲು, ಉಣ್ಣಲು ಸಾಕಷ್ಟು ಇದ್ದರೂ ಐಷಾರಾಮದ ಬದುಕಿಗಾಗಿ, ಭೋಗಲಾಲಸೆಗಾಗಿ ಈ ವೃತ್ತಿಯಿಂದ ಸಂಪಾದನೆ ಮಾಡುವ ಗೃಹಿಣಿಯರೂ ಇದ್ದಾರೆ. ಈ ಮನೋವೃತ್ತಿಯನ್ನು ಏನೆನ್ನಬೇಕು? ಗಂಡನಿಂದ ಸಂಭೋಗ ಸುಖ ಪಡೆಯಲಾರದವರು 'ಸೈಡ್ ಬಿಸಿನೆಸ್' ಆಗಿ ಈ ಉದ್ಯೋಗಕ್ಕಿಳಿದವರಿದ್ದಾರೆ. ಎಷ್ಟೇ ರಹಸ್ಯವಾಗಿ ಈ ಕೆಲಸಗಳಲ್ಲಿ ಅವರು ತೊಡಗಿಸಿಕೊಂಡರೂ ಬಹಿರಂಗಗೊಂಡು ಸುದ್ದಿಯಾಗುವುದಿದೆ. ಇಲ್ಲಿ ಮಹಿಳೆಯ ಭೋಗಲಾಲಸೆ ಮತ್ತು ಹಣದ ಮೋಹವೇ ಪ್ರಧಾನವಾಗಿ ಕೆಲಸ ಮಾಡುತ್ತದೆ. ಪ್ರತಿಷ್ಠಿತ ಮನೆತನದ ಹೆಣ್ಣು ಮಕ್ಕಳೂ ಈ ಸುಳಿಯಲ್ಲಿ ಸಿಕ್ಕಿಕೊಂಡು ಒದ್ದಾಡಿ ಮೇಲೆ ಬಂದವರಿದ್ದಾರೆ. ಈ ವರ್ಗದವರ ವ್ಯವಹಾರವೆಲ್ಲಾ ಸುಶಿಕ್ಷಿತ ಪ್ರತಿಷ್ಠಿತ ವರ್ಗದ ಪುರುಷರೊಂದಿಗೆ, ಈ ಮಹಿಳೆಯರೂ ವಿದ್ಯಾವಂತರೇ ಮಾತ್ರವಲ್ಲ ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿರುವವರು ಇಲ್ಲೂ ನಡೆಯುವುದು ಸ್ತ್ರೀಯ ದೇಹದ ವ್ಯಾಪಾರ ಹಸಿವಿಗಾಗಿ ಅಲ್ಲ ಮೋಜಿಗಾಗಿ, ಅದಕ್ಕಾಗಿಯೇ ಶ್ರೀಮಂತರು ಮಾಡಿದರೆ ವ್ಯವಹಾರ ಬಡವರು ಮಾಡಿದಾರೆ ವ್ಯಭಿಚಾರ ಎಂದ ಗಾದೆಯಿದೆ.

ಈ ಬೀದಿ ವೇಶ್ಯಯರ ಸ್ಥಿತಿ ಇದಕ್ಕಿಂತ ತೀರಾ ಭಿನ್ನ ಎಂಬುದನ್ನು ಗಮನಿಸಬೇಕು. ಇವರಲ್ಲಿ ಎಳೆಯ ಪ್ರಾಯದ ಹೆಣ್ಣು ಮಕ್ಕಳನ್ನು 'ಬ್ಲೂಫಿಲ್ಡ್' ತಯಾರಿಕೆಯಲ್ಲಿ ತೊಡಗಿಸಿಕೊಂಡು ಹಣ ಸಂಪಾದಿಸುವ ಒಂದು ದುಷ್ಟಕೂಟವೇ ಇದೆ. ಈ ವೇಶ್ಯೆಯರಿಗೆ ಈ ಉದ್ಯೋಗದಲ್ಲಿ ತನ್ನನ್ನು ತೊಡಗಿಸಿಕೊಂಡರೆ ಒಮ್ಮೆಯೇ ಒಂದೇ ದಿನ 10-15 ಸಾವಿರದಷ್ಟು ಸಂಪಾದನೆಯಾಗುತ್ತದೆ. ಇದರಿಂದ ಅದರ ನಿರ್ಮಾಪಕರು ಕೋಟಿಗಟ್ಟಲೆ ಗಳಿಸುತ್ತಾರೆ. ಒಮ್ಮೆ ಒಂದಿಷ್ಟು ಹಣ ಬಿಸಾಕಿದರೆ ಮುಗಿಯಿತು. ಈ ಉದ್ಯಮಪತಿಗಳಿಗೆ ಕೂತಲ್ಲಿಯೇ ಲಕ್ಷ್ಮೀ ಕೃಪೆ ಸಿಗುತ್ತದೆ. ಇವತ್ತು ಇಂಟರ್‌ನೆಟ್‌ಗಳ ಮೂಲಕ ಕಂಪ್ಯೂಟರ್ ತೆರೆದ ಕೂಡಲೇ ಹಾರಿ ಬಂದು ಬೀಳುವ ಲೈಂಗಿಕ ದೃಶ್ಯಗಳನ್ನು ಕಂಡಾಗ ಈ ಲೈಂಗಿಕ ಕೇಳಿಗಳು ಪ್ರಪಂಚದಾದ್ಯಂತ ಹೇಗೆ ಬಿಲಿಯನ್ ಡಾಲರ್ ಉದ್ಯಮವಾಗಿ ಬೆಳೆದಿದೆ ಎಂಬ ಸತ್ಯದ ಅರಿವಾಗುತ್ತದೆ. ಸಮೂಹ ಸಂಭೋಗ, ಮೌಖಿಕ ಸಂಭೋಗ ಮುಂತಾದ ವಿಕೃತಿಗಳನ್ನು ಕಂಡೋ ಕೇಳಿಯೋ ಉನ್ಮತ್ತರಾದ ಪುರುಷರು ಅದರಲ್ಲೂ ಎಳೆಯ ಪ್ರಾಯದ ತರುಣರು ಈ ಬೀದಿ ವೇಶ್ಯೆಯರ ಅನ್ವೇಷಣೆಗೆ ತೊಡಗುತ್ತಾರೆ ಮತ್ತು ತಮ್ಮ ತೆವಲುಗಳನ್ನು ತೀರಿಸುತ್ತಾರೆ. ಇಲ್ಲಿ ಒಂದು ವೈಚಿತ್ರ್ಯವನ್ನು ಗಮನಿಸಲೇ ಬೇಕಾಗಿದೆ. ಸಣ್ಣ ಪ್ರಾಯದ ಹುಡುಗರು ಮಧ್ಯ ವಯಸ್ಸಿನ ಪ್ರೌಢ ಹೆಂಗಸರನ್ನೇ ಬಯಸುತ್ತಾರೆ. ಮಧ್ಯ ವಯಸ್ಸು ದಾಟಿದ ಗಂಡಸರು ಎಳೆಯ ಪ್ರಾಯದ ಹುಡುಗಿಯರನ್ನೇ ತಮ್ಮ ಲಾಲಸೆಗೆ ಆಹ್ವಾನಿಸುತ್ತಾರೆ.

ಪ್ರೌಢ ವಯಸ್ಸು ದಾಟಿದ ಬೀದಿ ವೇಶ್ಯಯರದ್ದು ಇನ್ನೂ ದಾರುಣ ಸ್ಥಿತಿ. ಇವರಿಗೆ ದಿನನಿತ್ಯದ ಜೀವನದ ಖರ್ಚುವೆಚ್ಚಗಳಿಗಾಗುವಷ್ಟು ಹಣ ಸಂಪಾದನೆಯಾಗುವುದೂ ದುಸ್ತರವಾದಾಗ ಇಂತಹವರು ಮುಖ ಸಂಭೋಗ, ಸಮೂಹ ಸಂಭೋಗ ಮುಂತಾದ ಇತರ ಕಾಮ ಕೇಳಿಗಳಿಗೆ ತಮ್ಮ ದೇಹವನ್ನು ಒಪ್ಪಿಸಬೇಕಾಗುತ್ತದೆ. ದೇಹದ ಕಸುವು ಕುಗ್ಗಿ, ರೂಪ ಕುಂದಿದ ಇವರಲ್ಲಿ ಹೆಚ್ಚಿನವರು ಕುಡಿತಕ್ಕೆ ದಾಸರಾಗಿರುತ್ತಾರೆ. ಯಾಕೆಂದರೆ ಸ್ವಸ್ಥ ಮನಸ್ಥಿತಿಯುಳ್ಳ ಯಾರಾದರೂ ಈ ಹಿಂಸೆಗಳನ್ನು ಸಹಿಸಲು ಸಾಧ್ಯವೇ? ಹಾಗಾಗಿ ತೊಟ್ಟೆ ಶರಾಬು, ಸಿಕ್ಕಿದರೆ ಡ್ರಗ್ಸ್, ಗಾಂಜಾ ಮುಂತಾದವುಗಳಿಗೆ ಶರಣು ಹೋಗುತ್ತಾರೆ. ಇವರ ದೇಹದ ಮೇಲೆ ನಡೆದ ಅಮಾನುಷ ಆಕ್ರಮಣಗಳಿಂದಾಗಿ ಮಧ್ಯ ವಯಸ್ಸಿನಲ್ಲೇ ಮುಪ್ಪು ಆವರಿಸುತ್ತದೆ ಮತ್ತೆ ಕಾಯಿಲೆಗಳ ಗೂಡಾಗಿ ಉಸಿರಾಡುವ ಹೆಣಗಳಂತಿರುತ್ತಾರೆ. ಸಭ್ಯರು ಅವರನ್ನು ಮುಟ್ಟುವುದಿಲ್ಲ. ಮಾತಾಡುವುದಿಲ್ಲ. ಅವರ ವ್ಯವಹಾರಗಳೆಲ್ಲಾ ಒಂದು ಮೃಗಗಳಂತಿರುವ ಮನುಷ್ಯರೊಂದಿಗೆ ನಡೆಯುವ ಕಾರಣ ಅವರೂ ಕೂಡಾ ಒರಟುತನವನ್ನೇ ಮೈಗೂಡಿಸಿಕೊಂಡಿರುತ್ತಾರೆ. ವಯಸ್ಸಿನಲ್ಲಿ ನಮ್ಮ ತಾಯಿಯಂತಿರುವ ಇವರಲ್ಲಿ ಕೋಮಲ ಭಾವನೆಗಳು ಇಲ್ಲವೇ? ಇವೆ. ಅವುಗಳ ಮೇಲೆ ತುತ್ತಿಗಾಗಿ ನಡೆಸುವ ಹೋರಾಟವು ಕಲ್ಲು ಚಪ್ಪಡಿ ಹಾಸಿರುತ್ತದೆ. ತಮ್ಮನ್ನು ಯಾರೂ ವಿಶ್ವಾಸಕ್ಕೆ ಯೋಗ್ಯರೆಂದು ಸ್ವೀಕರಿಸದ ಕಾರಣ ಅವರೂ ಯಾರನ್ನೂ ವಿಶ್ವಾಸಕ್ಕೆ ಯೋಗ್ಯರೆಂದು ಪಕ್ಕನೆ ಪುರಸ್ಕಾರವೀಯುವುದಿಲ್ಲ. ಎಷ್ಟೋ ಭೇಟಿಗಳ ನಂತರ ಅಳೆದೂ ಸುರಿದೂ, ತೂಗಿ ನೋಡಿದ ಬಳಿಕವೇ ಅವರು ಇತರರನ್ನು ನಂಬುವ ಸ್ಥಿತಿಗೆ ಬಂದಿರುತ್ತಾರೆ. ಸಾಮಾನ್ಯವಾಗಿ ಅವರು ಗಂಡಸರ ಕಣೋಟದಲ್ಲೇ ಅವನಲ್ಲಿ ಮಾನವಾಂಶವೆಷ್ಟಿದೆ, ದಾನವಾಂಶವೆಷ್ಟಿದೆ ಎಂದು ತಿಳಿವ ಸೂಕ್ಷ್ಮಗ್ರಾಹಿ ಮನಸ್ಸುಳ್ಳವರಾಗಿರುತ್ತಾರೆ. ಎಳೆಯ ತರುಣರನ್ನು ಲೈಂಗಿಕ ಕ್ರಿಯೆಗೆ ತೊಡಗಿಸಿಕೊಳ್ಳುವಾಗ ತಮ್ಮದೇ ಹೊಟ್ಟೆಯಲ್ಲಿ ಹುಟ್ಟಿದ ಕೂಸು ಗಳೋ, ಒಡಹುಟ್ಟುಗಳೋ ಎಂಬ ಭಾವ ಇಣುಕಿ ಹೃದಯವೇ ಬಾಯಿಗೆ ಬಂದಂತಾಗುವುದೂ ಇದೆ. ಆ ಕೂಡಲೇ ಹೊಟ್ಟೆ ಹೃದಯಕ್ಕೆ ಕಬ್ಬಿಣದ ಗೋಡೆ ಯಂತೆ ಅಡ್ಡ ಬಂದು ಕೊಟ್ಟ ಹಣಕ್ಕೆ ನ್ಯಾಯ ಸಲ್ಲಿಸುವುದಿದೆ. ಕೆಲವೊಮ್ಮೆ ದಿನವಿಡೀ ಹಸಿದು ಕೂತು ರಾತ್ರಿ ಮೈ ಒಪ್ಪಿಸಿದ ಮೇಲೆಯೇ ಒಂದು ತುತ್ತು ಅನ್ನ ತಿನ್ನುವ ಪರಿಸ್ಥಿತಿಯನ್ನೆದುರಿಸುವವರಿದ್ದಾರೆ. ವಿಟರಿಗೆ ಬೇಕಾದುದು ಸ್ತ್ರೀಯ ದೇಹ ಮಾತ್ರ ಆಕೆಯ ಹೃದಯ, ಮನಸ್ಸುಗಳಲ್ಲ, ಭಾವನೆಗಳೂ ಅಲ್ಲ. 'ಸ್ತ್ರೀಯನ್ನೇ ಪ್ರೀತಿಸಿದವನೂ ಕೂಡಾ ಆಕೆಯ ಶೀಲವನ್ನು ಪ್ರೀತಿಸಿದವನನ್ನು ನಾನಿದುವರೆಗೆ ಪ್ರಪಂಚದಲ್ಲಿ ಕಂಡಿಲ್ಲ' ಎಂದು ಕನ್‌ಶಿಯಸ್ ಹೇಳಿದ್ದು ಸುಳ್ಳಲ್ಲ. ಹಾಗಾದರೆ ಸಮಾಜದಲ್ಲಿ ಶೀಲಗೆಟ್ಟವರೆಂದು ದೂಷಿಸಲ್ಪಡುವ ಇಂತಹ ಹೆಂಗಸರನ್ನು ಪ್ರೀತಿಸುವ ಪತಿ, ತಂದೆ, ಸೋದರರಿಲ್ಲವೇ? ಇದ್ದಾರೆ ಅವರಾರೂ ಅವಳನ್ನು ಪ್ರೀತಿಸುವುದಿಲ್ಲ. ಅವಳು ತರುವ ಹಣವನ್ನು ಮಾತ್ರ ಪ್ರೀತಿಸುತ್ತಾರೆ. ಅದು ನಿಂತ ಮರುದಿನ ಅವಳ ಶೀಲ ಒಂದು ಕಳಂಕವಾಗಿ ಅವಳು ತಿರಸ್ಕರಿಸಲ್ಪಡುತ್ತಾಳೆ. ಇಲ್ಲಿ ಎಲ್ಲಾ ದೌರ್ಜನ್ಯಗಳ ವಿಜಯಧ್ವಜವಾಗಿ ಹಣ ಮೆರೆಯುತ್ತದೆ. ಹಣವಿದ್ದರೆ ಹೊಟ್ಟೆ, ಹಣವಿದ್ದರೆ ಬಟ್ಟೆ, ಹಣವಿದ್ದರೆ ಆಟ, ಹಣವಿದ್ದರೆ ಮಾತ್ರ ನೋಟವೆಂಬುದೇ ಇವರ ಜೀವನ ಸಿದ್ಧಾಂತ. ಹಾಗಿದ್ದರೂ ಇವರ ಪರ್ಸಿನಲ್ಲಿ ಹಣವೂ ಅಶಾಂತಿಯಿಂದಿದ್ದು 'ಹೊರಗೆ ಹೋಗುವೆ' ಎಂದು ಕಾಡುತ್ತಾ ಇರುತ್ತದೆ. ಕೂಡಿಡುವುದು ಕಷ್ಟ. ತೀರಾ ಬಿಗಿ ಹಿಡಿದರೆ ಹಣ ಕೈ ಕಚ್ಚುತ್ತದೆ ಅಥವಾ ಸಡಿಲ ಬಿಟ್ಟರೆ ಜಾರುತ್ತದೆ. ಮಧ್ಯಮ ಮಾರ್ಗ ಅವರಿಗೆ ತಿಳಿಯದು. ಹಾಗಾದರೆ ಇವರಿಗೆ ನಾಳೆಯ ಚಿಂತೆ ಕಾಡುವುದಿಲ್ಲವೇ? ಕಾಡುತ್ತದೆ. ಕಾಡತೊಡಗಿದಾಗಲೆಲ್ಲಾ ಅದನ್ನು ಮರೆಯಲು ಮಾದಕ ವ್ಯಸನಕ್ಕೆ ಈಡಾಗುತ್ತಾರೆ. ಇಲ್ಲವೇ ಚಿಂತೆಯನ್ನು ಮೂಟೆ ಕಟ್ಟಿ ಅರಬೀ ಸಮುದ್ರಕ್ಕೆ ಎಸೆದು ಬಿಡುತ್ತಾರೆ. ಯುದ್ಧಗಳ ಸಾಲು ಸರಣಿ ಈ ವೃತ್ತಿಯವರದು. ಬದುಕಲಾರದ ಬದುಕು. ಇಹಕ್ಕೆ ಸಾಲದು. ಪರಕ್ಕೆ ಮುಟ್ಟದು ಎಂಬಂತೆ ಬಾಳಲ್ಲ ಅದು ಗೋಳು.

ನಾನು ಹರಿಣಿಯ ಜೊತೆಗೆ ಕ್ಷೇತ್ರ ಕಾರ್ಯದ ಸಮಯದಲ್ಲಿ ಸಂದರ್ಶಿಸಿದ ಒಬ್ಬೊಬ್ಬರದೂ ಒಂದೊಂದು ಹೃದಯ ವಿದ್ರಾವಕ ಕಥೆಗಳಿವೆ. ಸಭ್ಯ ಜೀವನ ನಡೆಸಲು ಬೇಕಾದ ಎಲ್ಲಾ ಅವಕಾಶಗಳು ತಪ್ಪಿ ಹೋದಾಗ ಕಟ್ಟಕಡೆಯ ಮಾರ್ಗವಿದೆಂದು ಆರಿಸಿಕೊಂಡವರೇ ಬಹಳಷ್ಟು ಮಂದಿ, ಅವಕಾಶಗಳಿದ್ದೂ ಈ ವೃತ್ತಿಗಿಳಿದ ಮಹಿಳೆಯರೂ ಇದ್ದಾರೆಂಬುದು ನಂಬಲಾಗದ ಸತ್ಯವಾಗಿ ನಮ್ಮ ಕಣ್ಣ ಮುಂದಿದೆ. ಆಕೆ ಶಿಕ್ಷಕಿಯಾಗಿದ್ದಳು. ಮದುವೆಯಾದ ಮೇಲೆ ಗಂಡನಿಗೆ ಉತ್ತಮ ಆದಾಯವಿತ್ತೆಂದು ಗಂಡ ಕೆಲಸ ಬಿಡಿಸಿದ. ಗಂಡನೂ ಸಾಲ ಸೋಲ ಮಾಡಿಯೇ ವ್ಯವಹಾರ ನಡೆಸುತ್ತಿದ್ದ, ಹೆಂಡತಿ ಕೆಲಸ ಮಾಡುವುದು ಅವನ ಪ್ರತಿಷ್ಠೆಗೆ ಕುಂದು ತರುವ ವಿಷಯವೆಂದು ರಾಜೀನಾಮೆ ಕೊಡಿಸಿದ, ಒಂದು ಮಗುವಾಗುವಷ್ಟರಲ್ಲಿ ಗಂಡ ಆಕಸ್ಮಿಕ ನಿಧನ ಹೊಂದಿದ. ಅವನ

76 / ವೇಶ್ಯಾವಾಟಿಕೆಯ ಕಥೆ-ವ್ಯಥೆ
ವ್ಯವಹಾರಗಳ ಟೊಳ್ಳುತನ ಅವನ ನಿಧನದ ನಂತರ ಇವಳಿಗೆ ತಿಳಿಯಿತು. ಐಷಾರಾಮದ ಜೀವನಕ್ಕೆ ತನ್ನನ್ನು ಒಗ್ಗಿಸಿಕೊಂಡಿದ್ದ ಆಕೆ ತನ್ನನ್ನು ಈ ವೃತ್ತಿಗೆ ಒಪ್ಪಿಸಿಕೊಂಡು ಬಿಟ್ಟಳು. ಮೊದಮೊದಲು ಗಂಡನ ಸಾಲಗಾರ ಮಿತ್ರರಿಗೆ ಹಾಸಿಗೆ ಹಂಚಿಕೊಂಡವಳು ಮತ್ತೆ ಬೀದಿಗಿಳಿಯಬೇಕಾಯಿತು. ಇನ್ನೂ ವಿಚಿತ್ರವೆಂದರೆ ತನ್ನ ಗಂಡು ಮಗುವಿನ ಮುಂದೆಯೇ ಆಕೆ ಈ ವೃತ್ತಿಯನ್ನು ನಡೆಸುತ್ತಿದ್ದುದು ಆ ಮಗು ಕಣ್ಣು ಮುಚ್ಚಿಕೊಂಡಿರಲು ಹೇಳುತ್ತಿದ್ದಳೆಂದು ಮಗುವೇ ಮತ್ತೆ ಹೇಳುತ್ತಿತ್ತು. ಈ ವಾತಾವರಣದಲ್ಲಿ ಬೆಳೆದ ಮಗುವಿನ ಮನಸ್ಸು ಹೇಗೆ ರೂಪುಗೊಳ್ಳಬಹುದು ಎಂಬ ಭಯದಿಂದ ಸ್ವಯಂಸೇವಾ ಸಂಸ್ಥೆಯ ಮೂಲಕ ಅವನನ್ನು ಹಾಸ್ಟೆಲಲ್ಲಿರಿಸಿ ಓದಿಸುವ ವ್ಯವಸ್ಥೆ ಮಾಡಲಾಯಿತು. ಇಲ್ಲಿ ಒಂದು ಪ್ರಶ್ನೆ ನಮ್ಮನ್ನು ಕಾಡುತ್ತದೆ. ಎಲ್ಲಾದರೂ ಕೆಲಸ ಹುಡುಕಿ ತನ್ನ ಅನ್ನ ಗಳಿಸುವ ಅರ್ಹತೆ ಇದ್ದ ಈ ಶಿಕ್ಷಕಿ ಯಾಕೆ ಈ ವೃತ್ತಿಯನ್ನು ಆಯ್ಕೆ ಮಾಡಿದಳು? ಗಂಡ ಸತ್ತಾಗ ಉಂಟಾದ ಆರ್ಥಿಕ ಸಂಕಷ್ಟದಲ್ಲಿ ನೆರವಾಗುವ ಉದ್ದೇಶದಿಂದ ಬಂದ ಗಂಡನ ಗೆಳೆಯರಿಗೆ ಹಾಸಿಗೆ ಹಂಚಿಕೊಳ್ಳುವುದು ಆ ಸಮಯದ ತುರ್ತು ಕರ್ತವ್ಯ ಎಂದು ಭಾವಿಸಿದಳೇ? ಹೀಗೆ ಮಾಡಿದ್ದರಿಂದ ತನ್ನ ಹದಗೆಟ್ಟ ಆರ್ಥಿಕ ಸ್ಥಿತಿಯನ್ನು ಮರಳಿ ತಂದು ಕೊಟ್ಟದ್ದೂ ಹೌದು. ಇದೇ ಹೆಬ್ಬುಲಿಯ ಮೇಲಿನ ಸವಾರಿಯಾಯಿತು. ಏರುವಾಗ ಇದ್ದ ಸ್ವಲ್ಪ ಅಂಜಿಕೆಯೂ ಸವಾರಿ ಮಾಡುವಾಗ ಮಾಯವಾಯಿತು. ಅಂಜಿದರೆ ಕೂಡಲೇ ಇವಳ ಕತ್ತು ಅದರ ಬಾಯಲ್ಲಿರುತ್ತದೆ ಎಂಬುದನ್ನರಿತು ಈ ವೃತ್ತಿಯಲ್ಲೇ ಮುಂದುವರಿದಳು. ಎಲ್ಲಾದರೂ ಕೆಲಸಕ್ಕೆ ಪ್ರಯತ್ನಿಸಬಹುದಿತ್ತು ಟ್ಯೂಷನ್ ಕ್ಲಾಸ್‌ಗಳನ್ನು ನಡೆಸಬಹುದಿತ್ತು. ಈ ಎಲ್ಲಾ ಅವಕಾಶಗಳನ್ನೂ ಈ ಸವಾರಿ ಒದ್ದು ಝಾಡಿಸಿ ಬಿಟ್ಟಿತು. ಬಾಳು ಚಿಂತೆ ಮಾಡಿ ನರಳುವಷ್ಟು ದೊಡ್ಡ ವಿಷಯವಲ್ಲ ಎಂಬ ಭಾವನೆ ಈಗ ಅವಳಲ್ಲಿದೆ. ಜೀವನ ಒಂದು ಸಮರಾಂಗಣ ಎನ್ನುತ್ತೇವೆ. ವೈರಿಗಳೊಂದಿಗೆ, ಮಿತ್ರರೊಂದಿಗೆ ಕತ್ತಿ ಹಿಡಿದು ಹೋರಾಡುವುದು ಎಲ್ಲ ಸಾಮಾನ್ಯರ ಜೀವನದಲ್ಲಿ ನಡೆಯುತ್ತಿರಬಹುದು. ಇವರು ನಿತ್ಯ ತಮ್ಮೊಂದಿಗೆ ತಾವೇ ಹೋರಾಡುತ್ತಾ ಸೋಲುತ್ತಾ, ಗೆಲ್ಲುತ್ತಾ, ಸಾಗುವ ಜೀವನಶೈಲಿಗೆ ಒಗ್ಗಿ ಹೋಗಿದ್ದಾರೆ. ಮುಗಿದು ಹೋದ ಬಾಳು ಕೇವಲ ಸ್ವಪ್ನ ಮಾತ್ರ ಆರಿಸಿಕೊಂಡ ಜೀವನದಲ್ಲಿ ಕೊಲ್ಲುವ ವಿಷವಿದೆ ಎಂದು ಅವಳಿಗೆ ತಿಳಿದಿದೆ. ಔಷಧಿಯಲ್ಲೂ ವಿಷವಿಲ್ಲವೇ? ಈ ವಿಷವನ್ನೇ ಔಷಧಿಯಾಗಿ ಸೇವಿಸುವುದೇ ನನ್ನ ಜೀವನ ಎಂದು ಹೇಳುತ್ತಾಳೆ. ವಿಧಿ, ದೇವರು, ಧರ್ಮ ಇತ್ಯಾದಿಗಳ ಬಗ್ಗೆ ಹೊಟ್ಟೆ ತುಂಬಿದ ಸಮಯದಲ್ಲಿ ಒಮ್ಮೊಮ್ಮೆ ಅವಳಿಗೆ ನೆನಪಾಗುವುದುಂಟು. ತನ್ನ ಈ ಸ್ಥಿತಿಗೆ ವಿಧಿಯೇ ಕಾರಣ ಎಂದು ಆಕೆ ಒಪ್ಪುವುದಿಲ್ಲ. ನನ್ನ ಹಣೆಬರಹವನ್ನು ವಿಧಿ ಬರೆದಿಲ್ಲ ನಾನೇ ಬರೆದೆ. ಆದರೆ ಅದು ಅಕ್ಷರ ಕಲಿಯುವ ಮೊದಲೇ ಬರೆದ ಮೊಂಡು ಲಿಪಿಯಾಯಿತು ಅಷ್ಟೇ. ಮಗ ತನ್ನ ರಕ್ಷಕನಾದಾನು, ಆಗಬೇಕು ಎಂಬ ನಿರೀಕ್ಷೆಯೂ ಅವಳಲ್ಲಿಲ್ಲ. ಆ ನಿರೀಕ್ಷೆ ಮಾಡುವ ಯೋಗ್ಯತೆಯೂ ತನ್ನಲ್ಲಿಲ್ಲವೆಂದು ಅರಿತಿದ್ದಾಳೆ. ಈ ಮಮಕಾರದ ಬಂಧನಗಳು ಈ ವೃತ್ತಿಯವರಿಗೆ ನೋವಲ್ಲದೇ ಬೇರೇನನ್ನು ನೀಡಲಾರವು. ಮುಳ್ಳು ಬಿತ್ತಿದವರು ಹೂ, ಹಣ್ಣುಗಳನ್ನು ನಿರೀಕ್ಷಿಸುವುದು ತಪ್ಪಲ್ಲವೇ? ಬೆಳೆದಷ್ಟನ್ನೇ ಕೊಯ್ಯುವ ಹಕ್ಕು ನಮಗಿದೆ. ಎಲ್ಲರಂತೆ ಒಂದು ದಿನ ಸಾಯುತ್ತೇನೆ. ಹಾಗೆಂದು ಸಾಯುವ ಭಯವಿಲ್ಲ. ಕೊಳೆತು ಹೋಗಿ ಸಾಯುತ್ತೇನೋ, ಬೀದಿಗೆ ಬಿದ್ದು ಸಾಯುತ್ತೇನೋ ಎಂಬುದರ ಬಗ್ಗೆ ಕಿಂಚಿತ್ತೂ ಚಿಂತೆ ಇಲ್ಲ. ಬದುಕು ಅಸಹನೀಯವೆನಿಸಿದಾಗ ನನ್ನ ಸಾವನ್ನು ನಾನೇ ಆಹ್ವಾನಿಸುತ್ತೇನೆ. ಹುಟ್ಟುವುದನ್ನು ಯಾರೂ ಕೇಳಿ ಪಡೆದು ಬಂದಿಲ್ಲ. ಸಾವು ಹಾಗಲ್ಲ. ನಮಗೆ ಬೇಕಾದಾಗ ಕೇಳಿ ಕರೆಸಿಕೊಳ್ಳಬಹುದು ಎಂದು ದೃಢಚಿತ್ತದಿಂದ ಅವಳು ಹೇಳುವುದನ್ನು ಕೇಳಿದಾಗ ಇವರ ಅಂತರಂಗದ ಧ್ವನಿಗಳಿಗೆ ಜೀವ ತುಂಬಿದರೆ ಈ ವರೆಗೂ ಅಗೋಚರವಾದ ದೌರ್ಜನ್ಯಲೋಕವೊಂದು ಅನಾವರಣಗೊಳ್ಳಬಹುದೆಂದು ನನಗನಿಸುತ್ತದೆ. ನಾನು ಮತ್ತು ಹರಿಣಿ ಭೇಟಿಯಾದ ಹಲವು ಮಹಿಳೆಯರೊಂದಿಗೆ ಮಾತುಕತೆ ನಡೆಸಿದಾಗ ವ್ಯಕ್ತವಾದ ಮಾತುಗಳಿಗೆ ಅಕ್ಷರ ರೂಪಕೊಡಲು ಸಾಧ್ಯವೇ ಇಲ್ಲ ಎಂಬ ಭಾವನೆಯುಂಟಾಯಿತು. ಅಂತಹ ಧಾರುಣ ಬದುಕು ಸಾಧ್ಯವೇ? ಇಷ್ಟೊಂದು ಕ್ರೌರ್ಯ ಮನುಷ್ಯನಲ್ಲಿರಲು ಸಾಧ್ಯವೇ? ಎಂಬ ಪ್ರಶ್ನೆಗಳಿಗೆ ಉತ್ತರಿಸುವವರಾರು?

ಮಾರಾಟ ಜಾಲ

ವೇಶ್ಯಾವಾಟಿಕೆಯನ್ನು ಈಗ ಅಂತಾರಾಷ್ಟ್ರೀಯ ಉದ್ಯಮವಾಗಿ ಪರಿಗಣಿಸ ಲಾಗಿದೆ. ಆದುದರಿಂದ ಹೆಣ್ಣು ಮಕ್ಕಳ ಕಳ್ಳ ಸಾಗಾಣಿಕೆಗಳು ನಿರಂತರವಾಗಿ ನಡೆಯುತ್ತಿವೆ. ಶ್ರೀಮಂತ ದೇಶಗಳು ಈ ದಂಧೆಗೆ ಪ್ರೋತ್ಸಾಹ ಕೊಡುತ್ತವೆ. ಬಡ ದೇಶಗಳ ಹೆಣ್ಣುಮಕ್ಕಳು ಅಲ್ಲಿಗೆ ಮಾರಾಟವಾಗುತ್ತಾರೆ. ಹೆಣ್ಣುಮಕ್ಕಳ ಕಣ್ಣೀರಿನಿಂದ ಒದ್ದೆಯಾಗದ ನೆಲವೇ ಈ ಭೂಮಿಯಲ್ಲಿ ಇಲ್ಲ. ದುಃಖದ ಮತ್ತು ನಾಚಿಕೆಯ ಸಂಗತಿಯೆಂದರೆ ಶಿಶು ಕಲ್ಯಾಣ ಮತ್ತು ಹೆಣ್ಣುಮಕ್ಕಳ ಉದ್ಧಾರ ಮಾಡುವ ಹೊಣೆ ಹೊತ್ತ ಸಂಸ್ಥೆಗಳೂ ಮುಗ್ಧ ಹೆಣ್ಣುಮಕ್ಕಳನ್ನು ವೇಶ್ಯಾವೃತ್ತಿಗೆ ಮಾರಾಟ ಮಾಡಿದ ಉದಾಹರಣೆಗಳು ನಮ್ಮ ದೇಶದಲ್ಲೇ ಇವೆ. ಇನ್ನೂ ವಿಚಿತ್ರವೆಂದರೆ ಯುದ್ಧನಿರತ ದೇಶಗಳಲ್ಲಿ ಶಾಂತಿ ಸ್ಥಾಪನೆಗಾಗಿ ಕೆಲಸ ಮಾಡುವ ವಿಶ್ವ ಸಂಸ್ಥೆಯ ಸಿಬ್ಬಂದಿಗಳೂ ಈ ರೀತಿಯಲ್ಲಿ ಮಾನವ ಕಳ್ಳ ಸಾಗಾಣಿಕೆ ಮಾಡಿ ಹಣ ಗಳಿಸುವ ದಂಧೆಯಲ್ಲಿ ನಿರತರಾಗಿದ್ದಾರೆ ಎಂಬ ದೂರುಗಳೂ ಇವೆ. "ಒಲೆ ಹೊತ್ತಿ ಉರಿದರೆ ನಿಲ್ಲಬಹುದು. ಧರೆಯೇ ಹೊತ್ತಿ ಉರಿದರೆ ನಿಲಬಹುದೇ" ಎಂಬ ವಚನ ನೆನಪಾಗುತ್ತದೆ. ಬೇಲಿಯೇ ಹೊಲವನ್ನು ನುಂಗಿ ಹಾಕಿದಂತಹ ಪರಿಸ್ಥಿತಿ ಇದು.

ಉತ್ತರ ಅಮೇರಿಕಾ, ಯುರೋಪ್, ಆಸ್ಟ್ರೇಲಿಯಾಗಳಲ್ಲಿ ಲೈಂಗಿಕ ಶೋಷಣೆ ಯನ್ನು ತಡೆಗಟ್ಟಲು ಬಿಗಿಯಾದ ಕಾನೂನುಗಳಿವೆ. ಇಸ್ರೇಲ್, ಗ್ರೀಸ್, ಸೌದಿ ಅರೇಬಿಯಾ ಮುಂತಾದ 23 ದೇಶಗಳು ಲೈಂಗಿಕ ಶೋಷಣೆಯನ್ನು ತಡೆಗಟ್ಟಲು ವಿಫಲವಾಗಿವೆ ಎಂಬ ಆರೋಪವಿದೆ. ಪ್ರತಿ ವರ್ಷ ಜಗತ್ತಿನಲ್ಲಿ ಈ ರೀತಿಯ ಮಾರಾಟದಿಂದ ಏಳು ಲಕ್ಷ ಹೆಂಗಸರು ಶೋಷಣೆಗೊಳಗಾಗುತ್ತಾರೆ. ಮಕ್ಕಳಲ್ಲಿ 50 ಸಾವಿರ ಮಂದಿ ಶೋಷಿತರಾಗಿ ನರಳುತ್ತಿದ್ದಾರೆ ಎಂದು ಅಂಕಿ ಅಂಶಗಳು ತಿಳಿಸುತ್ತವೆ.

"ಈ ಪರಿಸ್ಥಿತಿ ಪೌರ್ವಾತ್ಯ ದೇಶಗಳಲ್ಲಿ ಮಾತ್ರ ಇದೆ ಎಂಬುದು ಸತ್ಯವಲ್ಲ. ಸೋವಿಯಟ್ ರಷ್ಯಾ, ಯುಗೋಸ್ಲಾವಿಯಾಗಳು ಒಡೆದು ಹೋದ ಬಳಿಕ ಸ್ವತಂತ್ರವಾಗಿ ಚದುರಿಹೋದ ದೇಶಗಳಾಗಿವೆ. ಬಾಲ್ಟಿಕ್ ದೇಶಗಳು ಭೀಕರ ಆರ್ಥಿಕ ಸಂಕಷ್ಟದಲ್ಲಿವೆ. ಫಾರಿನ್ ಕೆಲಸವೆಂದರೆ ಇಲ್ಲಿನ ಹುಡುಗಿಯರು ಮುಗಿ ಬೀಳುತ್ತಾರೆ. ಇದೇ ಆಸೆಯನ್ನು ಕಳ್ಳ ಸಾಗಣೆಯ ತಂಡಗಳು ಉಪಯೋಗಿಸಿಕೊಳ್ಳುತ್ತವೆ. ಅಪಾರ ಲಾಭದ ಕಾರಣ ಅಂತಾರಾಷ್ಟ್ರೀಯ ಕ್ರೈಮ್ ಸಿಂಡಿಕೇಟ್‌ಗಳೂ ಇದರಲ್ಲಿ ಭಾಗಿಯಾಗಿವೆ. ಇವರ ಬಳಿ ಶಸ್ತ್ರಾಸ್ತ್ರಗಳಿರುವ ಸುಸಜ್ಜಿತ ಸೈನ್ಯವಿದೆ. ಸಮುದ್ರ ದ್ವೀಪಗಳಲ್ಲಿ ಕೋಟೆಗಳೂ ಇವೆ. ಯಾವ ದೇಶಕ್ಕೆ ಬೇಕಾದರೂ ಗುಲಾಮ ಹೆಣ್ಣುಗಳನ್ನು ಒದಗಿಸುವ ಶಕ್ತಿ ಇವರಿಗಿದೆ. ಮುಂಬಯಿಯಲ್ಲಿ ಸೆರೆ ಸಿಕ್ಕಿದ ದಲ್ಲಾಳಿಯೊಬ್ಬ ಒತ್ತೆಯಾಳುಗಳಾದ ಹೊನ್ನಗೂದಲ ರಷ್ಯನ್ ತರುಣಿಯರ ಮೂಲಕ ಯುವ ಗ್ರಾಹಕರನ್ನು ಆಕರ್ಷಿಸಿ ಭರ್ಜರಿ ದಂಧೆ ನಡೆಸುತ್ತಿದ್ದ. (ತರಂಗ ಪತ್ರಿಕೆ ನವೆಂಬರ್ 23, 2006) ಈ ಪರಿಸ್ಥಿತಿ ಈಗ ಇನ್ನೂ ವ್ಯವಸ್ಥಿತವಾಗಿ ನಡೆಯುತ್ತದೆ. ಯಾಕೆಂದರೆ ಪ್ರವಾಸೋದ್ಯಮವು ಅಭಿವೃದ್ಧಿಯ ಒಂದು ಭಾಗವೇ ಆಗಿದೆಯಲ್ಲವೇ? ಮಹಿಳೆಯರ ಕಳ್ಳ ಸಾಗಾಣಿಕೆ, ವೇಶ್ಯಾವಾಟಿಕೆಗಳೂ ಆಡಳಿತದ ಕಣ್ಣಾವಲಿನಲ್ಲೇ ನಡೆಯುತ್ತಿವೆ. ಇದನ್ನು ಯಾರಾದರೂ ಪ್ರತಿಭಟಿಸಿದರೆ ಅವರು ಗಾಳಿಯೊಂದಿಗೆ ಗುದ್ದಾಡುತ್ತಾರೆಂದೇ ತಿಳಿಯಬೇಕಾಗುತ್ತದೆ.

ಭಾರತದಲ್ಲಿ ವೇಶ್ಯಾವಾಟಿಕೆಗಳು ದಿನವೊಂದಕ್ಕೆ 18.5 ಕೋಟಿ ಗಳಿಸುತ್ತವೆ ಎಂದು 15 ವರ್ಷಗಳ ಹಿಂದಿನ ಅಂಕಿ ಅಂಶಗಳು ತಿಳಿಸುತ್ತವೆ. ಈಗ ಅದು ಹತ್ತು ಪಟ್ಟು ಹೆಚ್ಚಿರುವ ಸಂಭವವಿದೆ. ಕೆಲವು ವರ್ಷಗಳ ಹಿಂದೆ ನ್ಯಾಶನಲ್ ಹೂಮನ್ ರೈಟ್ಸ್ ಕಮಿಶನ್ ಅಧ್ಯಯನ ಮಾಡಿ ಒಂದು ವರದಿಯನ್ನು ಪ್ರಕಟಿಸಿತ್ತು. ಈ ಆಯೋಗವು ತಿಳಿಸಿದ ಪ್ರಕಾರ ವರ್ಷದಿಂದ ವರ್ಷಕ್ಕೆ ಕಾಣೆಯಾಗುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚುತ್ತಿದೆ. ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ತಮಿಳುನಾಡು, ಕರ್ನಾಟಕಗಳಲ್ಲಿ ಹೆಚ್ಚು ಸಂಖ್ಯೆಯ ಹೆಣ್ಣು ಮಕ್ಕಳು ಕಾಣೆಯಾಗುತ್ತಿದ್ದಾರೆ. ಪ್ರಶ್ನಾವಳಿಗಳ ಮೂಲಕ ಈ ವೇಶ್ಯೆಯರನ್ನು ವಿಚಾರಿಸಿದಾಗ 25 ಶೇಕಡಾ ಹೆಣ್ಮಕ್ಕಳು 15 ವರ್ಷಕ್ಕಿಂತ ಮೊದಲೇ ವೇಶ್ಯಾವಾಟಿಕೆಗೆ ಸೇರಿದ್ದರು. ಪಾಶ್ಚಾತ್ಯ ದೇಶಗಳಲ್ಲಿ ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳೊಡನೆ ಸಂಭೋಗ ನಡೆಸಿದರೆ ಕಠಿಣ ಶಿಕ್ಷೆಯಿದೆ. ಭಾರತ, ಬರ್ಮಾ, ಥ್ಯಾಲೆಂಡ್‌ಗಳಲ್ಲಿ ಈ ಬಗ್ಗೆ ಕಟ್ಟುನಿಟ್ಟಿನ ಕಾನೂನುಗಳಿಲ್ಲ. ಹೂಮನ್ ರೈಟ್ ಕಮಿಶನ್ ಅವರ ಅಧ್ಯಯನದ ಪ್ರಕಾರ ಶೇ. 68ರಷ್ಟು ಹುಡುಗಿಯರನ್ನು ಕೆಲಸಕೊಡಿಸುವ ಆಮಿಷವೊಡ್ಡಿ ವೇಶ್ಯಾವಾಟಿಕೆಗೆ ತಳ್ಳಲಾಗುತ್ತದೆ. ಶೇ.17 ರಷ್ಟು ಹುಡುಗಿಯರನ್ನು ಮದುವೆ ಮಾಡಿಸುವ ಭರವಸೆ ನೀಡಿ ದೊಡ್ಡ ದೊಡ್ಡ ನಗರಗಳ ತಲೆಹಿಡುಕರಿಗೆ ಮಾರಾಟ ಮಾಡಲಾಗುತ್ತದೆ.

ಕೆಲವು ವರ್ಷಗಳ ಹಿಂದೆ ಕಾಶ್ಮೀರದಲ್ಲಿ ನಡೆದ ಯಾಸ್ಮಿನ್ ಪ್ರಕರಣ ನಿಮಗೆ ಗೊತ್ತಿರಬಹುದು. 15 ವರ್ಷದ ಬಡ ಹುಡುಗಿ ಯಾಸ್ಮಿನ್‌ಗೆ ಕೆಲಸ ಕೊಡಿಸುವ ಆಸೆ ತೋರಿಸಿ ಸಬೀನಾ ಎಂಬ ಶ್ರೀಮಂತ ಹೆಣ್ಣು ಬಲೆ ಬೀಸಿದಳು. ಯಾಸ್ಮಿನ್‌ಗೆ ಚಹಾದಲ್ಲಿ ಡ್ರಗ್ಸ್ ಸೇರಿಸಿ ಕುಡಿಸಿದಳು ಸಬೀನಾ, ಆಕೆಯೊಂದಿಗೆ ಹುಡುಗನೊಬ್ಬ ಸಂಭೋಗ ಮಾಡುವ ದೃಶ್ಯಗಳನ್ನು ಚಿತ್ರೀಕರಿಸಿ ಮರುದಿನ ಯಾಸ್ಮಿನ್‌ಗೆ ತೋರಿಸಿದಳು. ಈ ವಿಷಯ ತನ್ನ ಹೆತ್ತವರಿಗೆ ತಿಳಿದರೆ ಕೊಂದೇ ಬಿಡಬಹುದು ಇಲ್ಲವೇ ಆತ್ಮಹತ್ಯೆ ಮಾಡಬಹುದು ಎಂದು ತಿಳಿದ ಯಾಸ್ಮಿನ್, ಸಬೀನಾ ಹೆಣೆದ ಸಂಚಿನಲ್ಲಿ ಸಿಕ್ಕಿಬಿದ್ದು ಜೀವಮಾನವಿಡೀ ಜೀವಂತ ಹೆಣದಂತೆ ಬದುಕಿದಳು. ಸೆಕ್ಸ್ ಗುಲಾಮಗಿರಿಗೆ ಬಲಿಯಾದ ಹೆಣ್ಣು ಮಕ್ಕಳು ಶೋಷಣೆಗೀಡಾಗಿ ನೋವಿನಿಂದ ನರಳಿದರೆ ಇತ್ತ ಸಬೀನಾ ಲಕ್ಷಗಟ್ಟಲೇ ಸಂಪತ್ತಿನ ಒಡತಿಯಾದಳು. ಅವಳ ಈ ಮನೆಗೆ ಬರುವ ಅತಿಥಿಗಳು ಸಾಮಾನ್ಯರಲ್ಲ, ಉನ್ನತ ಸರಕಾರಿ ಅಧಿಕಾರಿಗಳು, ಪೋಲೀಸರು, ಸೈನಿಕ, ಅಧಿಕಾರಿಗಳು ಖಾಯಂ ಗಿರಾಕಿಗಳೆಂದ ಮೇಲೆ ಆಕೆಯ ಈ ದಂಧೆ ನಿರ್ಭಯವಾಗಿ ರಾಜಾರೋಷವಾಗಿ ನಡೆಯುತ್ತಿತ್ತು ಎಂಬುದು ತನಿಖೆಯಿಂದ ಹೊರ ಬಿದ್ದ ಸತ್ಯವಾಗಿದೆ.

ಮನೆಗೆ ಭಾರವಾದ ಬಡ ಹೆಣ್ಣು ಮಕ್ಕಳನ್ನು ಒಂದಿಷ್ಟು ಹಣದಾಸೆಗೆ ಕೊಲ್ಲಿ ರಾಷ್ಟ್ರಗಳ ಅರಬರಿಗೆ ಮಾರಾಟ ಮಾಡುತ್ತಾರೆ. 18ರ ಹುಟ್ಟು ಹಬ್ಬ ಕಾಣುವ ಮೊದಲೇ ಈ ಹುಡುಗಿಯರು ಹತ್ತಾರು ಕೈಗಳಿಗೆ ದಾಟಿ ಲೈಂಗಿಕ ವ್ಯಾಪಾರದ ವಸ್ತುವಾಗುತ್ತಾರೆ. ಹೈದರಾಬಾದ್‌ನಲ್ಲಿ ವ್ಯವಸ್ಥಿತವಾದ ವಧುಗಳ ಮಾರುಕಟ್ಟೆಯೇ ಇದೆಯಂತೆ. ಪಂಜಾಬ್, ಹರಿಯಾಣಗಳಲ್ಲಿ ಶ್ರೀಮಂತರು ಹೆಂಗಸರನ್ನು ಖರೀದಿಸುತ್ತಾರೆ. ಅವರನ್ನು ಜೀತದಾಳುಗಳಾಗಿ ಬಂಧನದಲ್ಲಿರಿಸಿ ಲೈಂಗಿಕ ಸೇವೆಗೆ ಉಪಯೋಗಿಸುತ್ತಾರೆ. ಬೇರೆ ಬೇರೆ ರಾಜ್ಯಗಳಿಂದ ಹೆಣ್ಣು ಮಕ್ಕಳನ್ನು ಅಪಹರಿಸಿ ಇಲ್ಲಿನ ಶ್ರೀಮಂತರಿಗೆ ಪೂರೈಕೆ ಮಾಡುವ ಒಂದು ದೊಡ್ಡ ಜಾಲವೇ ದೇಶಾದ್ಯಂತ ವ್ಯಾಪಕವಾಗಿವೆ. "ಗುರ್ಜರ ಮದುವೆಗಳಲ್ಲಿ ಬಹುತೇಕ ಹೆಣ್ಣು ಮಕ್ಕಳು ಲೈಂಗಿಕ ವಸ್ತುವಾಗಿಯೇ ಮಾರಾಟವಾಗುತ್ತಾಳೆ.

ನಕಲಿ ಪಾಸ್‌ಪೋರ್ಟ್ ಮಾಡಿಸಿ ಜಪಾನ್, ಬ್ಯಾಂಕಾಕ್, ಇಂಗ್ಲೆಂಡ್ ದೇಶಗಳಿಗೆ ಹೆಣ್ಣು ಮಕ್ಕಳನ್ನು ಕಳಿಸುವ ಒಂದು ಅಂತಾರಾಷ್ಟ್ರೀಯ ಜಾಲವೇ ಕಾರನಿರತವಾಗಿದೆ. ಈ ಜಾಲದ ಮೂಲಕ ವಿದೇಶಕ್ಕೆ ಕೆಲಸಕ್ಕೆಂದು ವೀಸಾ ಪಡೆದು ಹೋದ ಹೆಣ್ಣುಮಕ್ಕಳನ್ನು ಒತ್ತೆಯಾಳುಗಳಂತೆ ದುಡಿಸುತ್ತಾರೆ. ವಿದೇಶಗಳಲ್ಲಿ ಭಾಷೆ ಬಾರದ ಈ ಬಡ ಹೆಣ್ಣುಮಕ್ಕಳು ಈ ವಿಷ ವರ್ತುಲದಿಂದ ಹೊರ ಬರುವುದೇ ಕಷ್ಟವಾಗುತ್ತದೆ. ಕೆಲವೊಮ್ಮೆ ಮಹಿಳಾ ಕಲ್ಯಾಣ ಸಂಸ್ಥೆಗಳು ಈ ಹೆಣ್ಮಕ್ಕಳನ್ನು ಬಿಡಿಸಿ ತಂದ ಘಟನೆಗಳೂ ಇವೆ. ಆದರೆ ಹೀಗೆ ಮರಳಿದರೂ ಈ ದಂಧೆಯ ದಲ್ಲಾಳಿಗಳು ಗೂಂಡಾಗಳ ಮೂಲಕ ಬೆದರಿಕೆ ಹಾಕಿಸಿ ಆ ಹೆಣ್ಣುಮಕ್ಕಳನ್ನು ತಾವು ನೀಡಿದ ಸಾಲದ ನೆಪದಿಂದ ಸೆಕ್ಸ್ ದಂಧೆಗೇ ಮರಳಿ ಬರುವಂತಹ ವಾತಾವರಣ ನಿರ್ಮಿಸಿ ಅವರ ಬದುಕು ದುರ್ಭರವಾಗುವಂತೆ ಮಾಡಿಬಿಡುತ್ತಾರೆ.

ಎಳೆಯ ಮಕ್ಕಳನ್ನು ವಿಕೃತ ಕಾಮಕ್ಕಾಗಿ ಉಪಯೋಗಿಸುವ ರಾಕ್ಷಸೀ ಪ್ರವೃತ್ತಿಯ ಮನುಷ್ಯರೂ ಇರುತ್ತಾರೆ. ಗೋವಾದ ಸಮುದ್ರ ತೀರದಲ್ಲಿ ಇಂತಹ ಕಾಮಿಗಳು ಮುಕ್ತವಾಗಿ ತಿರುಗಾಡುತ್ತಿದ್ದಾರೆ ಎಂದು ಅಧ್ಯಯನವೊಂದು ತಿಳಿಸುತ್ತದೆ. ಬಡ ಮಕ್ಕಳನ್ನು ಅನಾಥಾಲಯದಿಂದ ದತ್ತು ತೆಗೆದುಕೊಂಡು ಬಂದು ಕಾಮಕೇಳಿಗೆ ಬಳಸುತ್ತಾರೆ. ಇಂತಹ ವಿಕೃತಕಾಮಿಗಳಿಗೆ 'ಪೀಡೋಪೈಲ್‌'ಗಳೆಂದು ಕರೆಯುತ್ತಾರೆ. ಎಂಟರಿಂದ ಹತ್ತು ವರ್ಷದ ಗಂಡು ಅಥವಾ ಹೆಣ್ಣು ಮಕ್ಕಳೊಂದಿಗೆ ರಿಸಾರ್ಟ್‌ಗಳಲ್ಲಿ ಕಾಮಕೇಳಿಯಾಡುತ್ತಾರೆ. ಇದನ್ನು ನಿಷೇಧಿಸುವುದಕ್ಕೆ, ಶಿಕ್ಷಿಸುವುದಕ್ಕೆ ವಿದೇಶಗಳಲ್ಲಿದ್ದಂತಹ ಕಠಿಣ ಕಾನೂನು ನಮ್ಮಲ್ಲಿಲ್ಲದ ಕಾರಣ ಇಂತಹ ಕಾಮ ವಿಕಾರಿಗಳು ಗೋವಾದ ಸಮುದ್ರ ಕಿನಾರೆಯಲ್ಲಿ ಮುಕ್ತವಾಗಿ ತಮ್ಮ ತೆವಲು ತೀರಿಸಿಕೊಳ್ಳುತ್ತಾರೆ. ಇಂತಹ ಅಪ್ರಿಯವಾದ ಸತ್ಯಗಳನ್ನು ನಮಗೆ ಅರಗಿಸಿಕೊಳ್ಳುವುದು ಕಷ್ಟವಾಗುತ್ತದಲ್ಲವೇ? ಹೌದು. ಕಾಮನಾಟದ ವಾಸ್ತವಗಳು ನಾನು ಹೇಳಿದ್ದಕ್ಕಿಂತಲೂ ಹೆಚ್ಚು ಕ್ರೂರವು, ಹಿಂಸಾತ್ಮಕವೂ ಆಗಿದೆ ಎಂಬುದನ್ನು ಪ್ರಜ್ಞಾವಂತರು ಅರ್ಥ ಮಾಡಿಕೊಳ್ಳಬೇಕು.

ಇಂತಹ ಪರಿಸ್ಥಿತಿ ಎಲ್ಲಾ ದೊಡ್ಡ ನಗರಗಳಲ್ಲೂ ನಡೆಯುತ್ತವೆ. ಕೆಲವು ಬ್ಯೂಟಿ ಪಾರ್ಲ‌ರ್‍‍ಗಳು, ಬಾಡಿ ಮಸಾಜ್ ಕೇಂದ್ರಗಳು ಇಂತಹ ದಂಧೆಯನ್ನು ನಡೆಸುತ್ತಿರುವುದು ರಹಸ್ಯವಾಗಿ ಉಳಿದಿಲ್ಲ. ಹೀಗೆ ನಡೆವ ಸೆಕ್ಸ್ ಕರ್ಮಕಾಂಡ ಗಳು ಎಂದಾದರೊಮ್ಮೆ ಬಹಿರಂಗ ಸುದ್ದಿಯಾಗುವುದುಂಟು. ಎಷ್ಟು ದೊಡ್ಡ ಹಗರಣವಾದರೂ ತಲೆಹಿಡುಕರಿಗೆ, ಘರ್‌ವಾಲೀಗಳಿಗೆ, ಜೀವಂತ ಮಾನವರ ಮಾಂಸ ವ್ಯಾಪಾರ ಮಾಡುವ ರಾಕ್ಷಸರಿಗೆ ಎಂದಾದರೂ ಎಲ್ಲಾದರೂ ಶಿಕ್ಷೆಯಾಗಿದೆಯೇ?, "ಐಟಿಪಿ ಸೆಕ್ಷನ್‌ಗಳನ್ನು ಶೋಷಿತ ಹೆಣ್ಣು ಮಕ್ಕಳ ವಿರುದ್ಧ ಉಪಯೋಗಿಸಬಾರದು. ಕಳ್ಳ ಸಾಗಾಣಿಕೆ ಮಾಡುವವರ, ದಲ್ಲಾಳಿಗಳ, ವೇಶ್ಯಾವಾಟಿಕೆಯ ಒಡೆಯ - ಒಡತಿಯರ, ಹೆಣ್ಣುಗಳ ದುಡಿತದಿಂದ ಹಣ ಗಳಿಸುತ್ತಿರುವವ ವಿರುದ್ಧ ಉಪಯೋಗಿಸಬೇಕು" ಎಂದು ಪೋಲೀಸ್ ಇಲಾಖೆಯ ಆದೇಶವಿದೆ. ಆದರೆ ದಾಳಿ ನಡೆಸುವ ಪೋಲೀಸ್ ಸಿಬ್ಬಂದಿಗಳ ಕೈಗೆ ಸಿಗುವುದು ಬಡಪಾಯಿ ಹೆಣ್ಣು ಮಕ್ಕಳು ಮಾತ್ರ ಶೋಷಕರಾದ ವಿಟರು ತಲೆಹಿಡುಕರು. ದಂಧೆಕೋರರು ಆರಾಮವಾಗಿ ಸಮಾಜದಲ್ಲಿ ಬದುಕುತ್ತಾರೆ. ಇದೆಂತಹ ವಿಪತ್ಯಾಸವಲ್ಲವೇ? ಹೆಣ್ಣನ್ನು ಕೇವಲ ಕಾಮದ ವಸ್ತುವಾಗಿಯೇ ಕಾಣುವ ಮನೋಭಾವ ಇಂದು ನಿನ್ನೆಯದಲ್ಲ.

'ನಾನು ಮಾರಾಟಕ್ಕಿಲ್ಲ, ನೀನೂ ಮಾರಾಟಕ್ಕಿಲ್ಲ, ಯಾರೊಬ್ಬರೂ ಮಾರಾಟವಾಗಕೂಡದು' ಇದು ಮಾನವ ಅಕ್ರಮ ಸಾಗಣೆ ತಡೆಗಟ್ಟಲು ಮೂರು ದಶಕಗಳ ಹಿಂದೆ ವಿಶ್ವಸಂಸ್ಥೆ ಹೊರಡಿಸಿದ ಘೋಷಣೆ. ಇತ್ತೀಚಿನ ವರ್ಷಗಳಲ್ಲಿ ಇದು ಬೃಹತ್ ಉದ್ಯಮವಾಗಿ ಬೆಳೆದಿದೆ. ನಿಜವಾಗಿ ನೋಡಿದರೆ 18ನೇ ಶತಮಾನದಿಂದಲೇ ಮನುಷ್ಯರ ಮಾರಾಟವನ್ನು ಕಾನೂನುಬದ್ಧವಾಗಿ ನಿಷೇಧಿಸಲಾಗಿತ್ತು. ಆದರೂ ಇಂದಿಗೂ ಮಾನವ ಕಳ್ಳ ಸಾಗಣೆ ನಿರಂತರವಾಗಿ ನಡೆಯುತ್ತಿದೆ. ಭಾರತದಲ್ಲಿ ಹಳ್ಳಿಯಿಂದ ಡಿಲ್ಲಿಯ ವರೆಗೂ ವ್ಯವಸ್ಥಿತ ಜಾಲಗಳು ಈ ದಂಧೆಯಲ್ಲಿ ತೊಡಗಿವೆ. ಪಂಜಾಬ್, ಹಲ್ಯಾಣ, ಬಿಹಾರ, ಆಂಧ್ರ, ಕೇರಳ ಮತ್ತು ಕರ್ನಾಟಕದಲ್ಲಿ ಅತಿ ಹೆಚ್ಚು ಅಕ್ರಮ ಸಾಗಣೆ ನಡೆಯುತ್ತದೆಂದು ರಾಷ್ಟ್ರೀಯ ಮಹಿಳಾ ಆಯೋಗದ ವರದಿ ತಿಳಿಸುತ್ತದೆ. ರಾಜು ಮೇಸ್ತ್ರಿ ಎಂಬವನು ಪೋಲಿಸರಿಗೆ ಸಿಕ್ಕಿ ಬಿದ್ದ ಮೇಲೆ ನೂರಾರು ಯುವತಿಯರನ್ನು ಮದುವೆಯ ನೆಪದಲ್ಲಿ ಮಾರಾಟ ಮಾಡಿದ್ದಾನೆಂದು ಒಪ್ಪಿಕೊಂಡಿದ್ದಾನೆ. ಅಕ್ರಮ ಸಾಗಣೆ ಆರೋಪದ ಮೇಲೆ ಬಾಬೂ ಭಾಯಿ ಕಟಾರ ಎಂಬ ಸಂಸದನೂ ಆರೋಪಿಯಾಗಿದ್ದಾನೆಂದ ಮೇಲೆ ಈ ದಂಧೆ ವಿಶ್ವ ವ್ಯಾಪಿಯಾಗಿ ಬೆಳೆಯುವುದಕ್ಕೆ ಇವನೂ ಕಾರಣನಾಗಿದ್ದಾನೆ. ಹೀಗೆ ಮಾರಾಟವಾದ ಹೆಣ್ಣು ಮಕ್ಕಳಲ್ಲಿ 90% ವೇಶ್ಯಾವೃತ್ತಿಗೆ ದೂಡಲ್ಪಡುತ್ತಾರೆ. ಉಳಿದವರು ಮನೆ, ಕೃಷಿ ಮತ್ತಿತರ ಕೃಷಿ ಕೆಲಸಗಳಿಗೆ ನಿಯೋಜಿಸಲ್ಪಡುತ್ತಾರೆ. ಇದೊಂದು ರೀತಿಯಲ್ಲಿ ಆಧುನಿಕ ಜೀತ ಪದ್ಧತಿಯಾಗಿದೆ. ಕರ್ನಾಟಕದಲ್ಲಿ ಇಂತಹ ಜೀತಕ್ಕೆ ದೊಡ್ಡ ಇತಿಹಾಸವೇ ಇದೆ. ಶೃಂಗೇರಿ ದೇವಸ್ಥಾನದ ದಾಖಲೆಗಳಲ್ಲಿ ಹೆಣ್ಣು ಮಕ್ಕಳನ್ನು ದೇವಸ್ಥಾನಕ್ಕೆ ಮಾರಾಟ ಮಾಡಿದ ದಾಖಲೆಗಳಿವೆ. ಹಾಗಿರುವಾಗ ಹಣಕ್ಕೆ ಮಡಿ ಮೈಲಿಗೆಯಿಲ್ಲವಲ್ಲಾ. ಆಧುನಿಕ ಕಾಲದಲ್ಲಿ ಕೆಲವು ಸಂಸತ್‌ ಸದಸ್ಯರು, ಶಾಸಕರು, ಹಿರಿಯ ಅಧಿಕಾರಿಗಳು, ರಾಜತಾಂತ್ರಿಕರು, ಕ್ರೀಡಾಪಟುಗಳು, ಕಲಾವಿದರು, ಟ್ರಾವೆಲ್ ಏಜೆಂಟರು, ದಲ್ಲಾಳಿಗಳು, ಈ ದಂಧೆಯಲ್ಲಿ ಸಕ್ರಿಯರಾಗಿದ್ದಾರೆ. ಹಿರಿಯ ಅಧಿಕಾರಿಗಳು, ರಾಜತಾಂತ್ರಿಕರು ಈ ಅಕ್ರಮದಲ್ಲಿ ಮೂಕ, ಕಿವುಡ ಕುರುಡರಂತೆ ವರ್ತಿಸಿ ಲಕ್ಷಾಂತರ ಹಣ ಗಳಿಸುತ್ತಾರೆ. 1965ರ ಕಾನೂನು ಐಟಿಪಿ ಜಾರಿಯಾಯಿತು. ಆದರೂ ಈ ಮಾರಾಟವನ್ನು ಸಂಪೂರ್ಣ ನಿಲ್ಲಿಸಲು ಸಾಧ್ಯವಾಗುತ್ತಿಲ್ಲವೆಂದರೆ ಅದರ ಹಿಂದಿರುವ ಜಾಲ ಎಷ್ಟು ಭದ್ರವಾಗಿದೆ ಎಂದು ಅರ್ಥವಾಗುತ್ತದೆ.

ಜಗತ್ತಿನ 137 ರಾಷ್ಟ್ರಗಳಲ್ಲಿ ಈ ವ್ಯಾಪಾರ ನಡೆಯುತ್ತದೆ. ಪ್ರತಿ ವರ್ಷ 10 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳ ಅಕ್ರಮ ಸಾಗಣಿ ನಡೆಯುತ್ತದೆ. ಭಾರತದಲ್ಲಿ 1.50 ಲಕ್ಷಕ್ಕೂ ಅಧಿಕ ಮಾನವ ಅಕ್ರಮ ಸಾಗಣೆ ನಡೆಯುತ್ತದೆ. ಭಾರತದಲ್ಲಿ 10 ಲಕ್ಷ ವೇಶ್ಯೆಯರಿದ್ದಾರೆ. ಪ್ರತಿ ದಿನ 200 ಮಕ್ಕಳು ವೇಶ್ಯಯರಾಗುತ್ತಾರೆ. ಕರ್ನಾಟಕದಿಂದ ಪ್ರತಿ ವರ್ಷ 5 ಸಾವಿರ ಹೆಣ್ಣು ಮಕ್ಕಳು ನಾಪತ್ತೆಯಾಗುತ್ತಾರೆ ಎಂದು ಸರಕಾರಿ ಅಂಕಿ ಅಂಶಗಳು ತಿಳಿಸುತ್ತವೆ.

ಕಾಮ ಉತ್ತೇಜಕಗಳು

ಕಾಮನಾಟಗಳಿಗೆ ಪ್ರೇರಣೆ, ಪ್ರೋತ್ಸಾಹ ನೀಡುವ ಪರಿಸರವೊಂದು ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಇತ್ತು. ಅದಕ್ಕೆ ಪೂರಕವಾಗಿ ಬರೆದ ಕೃತಿಗಳಿದ್ದವು. ಜಗತ್ತಿಗೆ ಕಾಮಶಾಸ್ತ್ರವನ್ನು ಕೊಟ್ಟ ದೇಶ ಭಾರತ. ವಾತ್ಸಾಯನನು ಸಂಸ್ಕೃತದಲ್ಲಿ ಬರೆದ ಕಾಮಶಾಸ್ತ್ರವು ಪ್ರಪಂಚದ ಮೊದಲ ಕಾಮಶಾಸ್ತ್ರದ ಕೃತಿ. ಇವನ ಕಾಲ ಕ್ರಿಪೂ 671ರಿಂದ ಕ್ರಿ.ಶಕ 200 ರವರೆಗೂ ಉಯ್ಯಾಲೆಯಾಡುತ್ತದೆ. ಕ್ರಿಶ ಮೂರನೆಯ ಶತಮಾನದಲ್ಲಿ ಅಂದರೆ ಗುಪ್ತರು ಭಾರತವನ್ನು ಆಳುತ್ತಿದ್ದಾಗ ವಾತ್ಸಾಯನ ಈ ಕೃತಿ ರಚಿಸಿರಬೇಕು ಎಂದು ಇತಿಹಾಸಕಾರರ ಅಭಿಪ್ರಾಯ. ಕ್ರಿ.ಶಕ ಒಂದನೆಯ ಶತಮಾನದವನಿರಬೇಕೆಂದು ಹಲವರು ಸೂಚಿಸುತ್ತಾರೆ. ಆದರೆ ಅವನಿಗಿಂತಲೂ ಹಿಂದೆ ಕಾಮಶಾಸ್ತ್ರವನ್ನು ಬರೆದವರಿರಬಹುದು ಎಂದು ಕೆಲವು ಕವಿಗಳ ದಾಖಲೆಗಳಿಂದ ಊಹಿಸುತ್ತಾರೆ. ಈ ಕಾಮಶಾಸ್ತ್ರದಲ್ಲಿ ಗೌಪ್ಯವಾದ, ರಹಸ್ಯವಾದ ಸಂಗತಿಗಳೆಲ್ಲವನ್ನೂ ಕವಿ ವಿವರಿಸಿದ್ದಾನೆ. 36 ಅಧ್ಯಾಯಗಳಲ್ಲಿ ಏಳು ಅಧಿಕರಣಗಳಲ್ಲಿ 1250 ಶ್ಲೋಕಗಳಲ್ಲಿ ವಿಸ್ತಾರವಾಗಿ ಕಾಮದ ಬಗ್ಗೆ ವಿವರಿಸಿದ್ದಾನೆ. ಕವಿಯು ಆ ಕಾಲದ ಮಹಾನ್ ತತ್ವ ಜ್ಞಾನಿಯಾಗಿದ್ದನು. ಆಗವನು ಆ ಕಾಲದ ಬೇರೆ ಬೇರೆ ಪ್ರದೇಶದ ಜನರ ಲೈಂಗಿಕ ಕ್ರಿಯೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದಾನೆ. ಪ್ರಸಿದ್ಧ ವೇಶ್ಯಾವಾಟಿಕೆಗಳನ್ನು ಅಧ್ಯಯನ ಮಾಡಿ ವಿಟರೊಡನೆ ವೇಶ್ಯಯರೊಡನೆ ಸಂದರ್ಶನ ಮಾಡಿದ್ದಾನೆ. ಬೇರೆ ಬೇರೆ ದೇಶಗಳ ಮಹಿಳೆಯರ ದೇಹದ ಅಂಗರಚನೆ ಮತ್ತು ಹಾವಭಾವಗಳನ್ನು ಸೌಂದರ್ಯ ರಸಿಕನಾಗಿ ಗ್ರಹಿಸಿದ್ದಾನೆ. ವೈಶಿಕ ಅಧಿಕರಣದ 10ನೆಯ ಅಧ್ಯಾಯದ ವೇಶ್ಯಾ ಪ್ರಕರಣವು ಆ ಕಾಲದ ವೇಶ್ಯಾವಾಟಿಕೆಗಳ ನೈಜ ಚಿತ್ರಣವನ್ನು ನೀಡುತ್ತದೆ. ವಾತ್ಸಾಯನನು ಬದುಕಿದ್ದ ಕಾಲದಲ್ಲಿ ತಾಂತ್ರಿಕ ಪಂಥವು ದೇಶಾದ್ಯಂತ ಮೆರೆಯುತ್ತಿತ್ತು. ಈ ಪಂಥವು ಆಧ್ಯಾತ್ಮದ ಸಾಧನೆಯ ಹೆಸರಿನಲ್ಲಿ ಮಾಡುತ್ತಿದ್ದ ಆಚರಣೆಗಳು ಜನಸಾಮಾನ್ಯರನ್ನು ಕೆಟ್ಟ ಕೆಲಸಗಳಿಗೆ ಪ್ರೇರೇಪಿಸುತ್ತಿರಬೇಕು. ಕಾಮವನ್ನು ಆರೋಗ್ಯಕರವಾಗಿ, ಮನಶಾಸ್ತ್ರೀಯವಾಗಿ ಮತ್ತು ವೈಜ್ಞಾನಿಕವಾಗಿ ಒಂದು ಚೌಕಟ್ಟಿನೊಳಗೆ ಹಿಡಿದಿಡುವ ಪ್ರಯತ್ನವನ್ನು ಕವಿಯು ಮಾಡಿರಬೇಕು. ಈ ಕೃತಿಯಿಂದಾಗಿ 64 ಕಲೆಗಳಲ್ಲಿ ಕಾಮಕಲೆಯೂ ಮುಖ್ಯವೆಂದು ಪರಿಗಣಿಸುವಂತಾಯಿತು. ಕಾಮಸೂತ್ರದ ರಚನೆಯ ಬಳಿಕ ಜನ ಸಾಮಾನ್ಯರಿಗೆ ಇನ್ನಷ್ಟು ಸುಲಭ ಗ್ರಾಹ್ಯವಾಗುವಂತೆ ಇದನ್ನು ಆಧರಿಸಿ ಹಲವು ಕೃತಿಗಳು ರಚನೆಗೊಂಡವು. ಇವುಗಳಲ್ಲಿ ಕೊಕ್ಕೋಕನ ರತಿ ರಹಸ್ಯ ಮುಖ್ಯವಾಗಿದೆ. ಈ ಕೃತಿಯು ಅರೇಬಿಕ್, ಪರ್ಷಿಯನ್, ತುರ್ಕಿ ಮತ್ತು ಹಿಂದಿ ಭಾಷೆಗಳಿಗೂ ಅನುವಾದಗೊಂಡಿದೆ. ಕಲ್ಯಾಣ ಮಲ್ಲ ಎಂಬ ಕವಿಯು ಅನಂಗರಂಗ ಎಂಬ ಕೃತಿಯನ್ನೂ ಲೋದಿ ಸಂತತಿಯ ರಾಜನಿಗಾಗಿ ಬರೆದನು. ಚಾಣಕ್ಯನು ತನ್ನ ಅರ್ಥ ಶಾಸ್ತ್ರದಲ್ಲಿ ಮೊತ್ತ ಮೊದಲು ಕಾಮವನ್ನು ವ್ಯಾಪಾರೀಕರಣಗೊಳಿಸಿದನು. ಸಣ್ಣ ಪುಟ್ಟ ನಗರಗಳಲ್ಲಿ ಪ್ರವಾಸಿತಾಣಗಳಲ್ಲಿ ಸೂಳೆಗೇರಿಗಳು ಬೆಳೆಯಲು ಪ್ರೋತ್ಸಾಹ ನೀಡಿದನು. ವೇಶ್ಯೆಯರನ್ನು ಗೂಢಚರಿಯ ಕೆಲಸಕ್ಕೂ ನೇಮಿಸಿ ಪರರಾಜ್ಯದ ಶತ್ರು ಸೈನ್ಯಗಳ ಮಾಹಿತಿಯನ್ನು ಸಂಗ್ರಹಿಸುವ ಕೆಲಸಕ್ಕೂ ನೇಮಿಸುತ್ತಿದ್ದರು. ಕನ್ನಡದಲ್ಲಿಯೂ ಕಾಮಶಾಸ್ತ್ರದ ಬಗ್ಗೆ ಹಲವು ಕೃತಿಗಳು ಪ್ರಕಟಗೊಂಡಿವೆ. ಚಂದ್ರರಾಜನ ಮದನ ತಿಲಕ ಸುಮಾರು 11ನೆ ಶತಮಾನದ ಕೃತಿ. 12ನೆಯ ಶತಮಾನದಲ್ಲಿ ಜನ್ನನು ಬರೆದ ಮೋಹಾನುಭವ ಮುಕುರ, 14ನೆಯ ಶತಮಾನದಲ್ಲಿ ಕವಿಮಲ್ಲನು ಬರೆದ ಮನ್ಮಥ ವಿಜಯ, ವಿಜಯನಗರದರಸ ಮಲ್ಲಿಕಾರ್ಜುನನ ಕಾಲದಲ್ಲಿ 15ನೆಯ ಶತಮಾನದಲ್ಲಿ ಕಲ್ಲರಸನು ಬರೆದ ಜನವಶ್ಯ ಎಂದು ಕೃತಿಯು ಪ್ರಸಿದ್ಧವಾಗಿದೆ. ಅದಲ್ಲದೆ ರತಿರಹಸ್ಯ ಟೀಕು, ಅಂಗಜ ಬೋಧೆ, ಕಕೋಕ ಶಾಸ್ತ್ರ ಟೀಕೆ ಮುಂತಾದ ವ್ಯಾಖ್ಯಾನ ಕೃತಿಗಳೂ ಬೇರೆ ಬೇರೆ ಕವಿಗಳಿಂದ ರಚಿತವಾಗಿವೆ. ಈ ಎಲ್ಲಾ ಕೃತಿಗಳಲ್ಲಿ ವಿಟರು ಮತ್ತು ವೇಶ್ಯಯರನ್ನು ಕೂಡುವ ಬಗ್ಗೆ ಸವಿವರವಾದ ವರ್ಣನೆಗಳಿವೆ. ಕಾಮವು ಮನುಷ್ಯನ ಬದುಕಿನ ಮೂಲಭೂತ ಅವಶ್ಯಕತೆಯಾಗಿದೆ ಎಂಬುದನ್ನು ತಿಳಿದವರು ನಿದ್ರೆ, ಹಸಿವೆಯಂತೆ ಇದೂ ಒಂದು ಸಾಮಾನ್ಯ ಕ್ರಿಯೆಯೆಂದು ಒಪ್ಪಿದ್ದಾರೆ. ಕಾಮವು ಪ್ರತಿಯೊಂದು ಜೀವ ಜಂತುಗಳಿಗೂ ಪ್ರಕೃತಿದತ್ತವಾದ ಕ್ರಿಯೆಯಲ್ಲವೇ? ಅದನ್ನು ಸಂತೋಷವಾಗಿ, ಆರೋಗ್ಯಪೂರ್ಣವಾಗಿ ಹೇಗೆ ನಿಭಾಯಿಸಬಹುದು ಎಂಬುದನ್ನು ಈ ಕಾಮಶಾಸ್ತ್ರ ಕೃತಿಗಳು ವರ್ಣಿಸುತ್ತವೆ.

'ಮಾಘ ಓದಿ ಮಗ ಕೆಟ್ಟ' ಎಂಬ ನಾಣ್ಣುಡಿ ಇದೆ. ಮಾಘ ಕವಿ ಬರೆದ ಶಿಶುಪಾಲ ವಧೆ ಕಾವ್ಯವನ್ನು ಓದಿ ಮಗ ಹಾದಿ ತಪ್ಪಿದ ಎಂದು ಈ ನುಡಿ ಹೇಳುತ್ತದೆ. ನಮ್ಮ ಎಲ್ಲಾ ಮಹಾಕಾವ್ಯಗಳಲ್ಲಿ ಅಷ್ಟಾದಶ ಅಂದರೆ 18 ವರ್ಣನೆಗಳು ಇರಬೇಕಾದುದು ಕಡ್ಡಾಯ. ಅವುಗಳಲ್ಲಿ ವೇಶ್ಯಾವಾಟಿಕೆಯ ವರ್ಣನೆಯೂ ಒಂದು. ಮಾಘನಕಾವ್ಯದಲ್ಲಿ ಬರುವ ವೇಶ್ಯಾವಾಟಿಕೆಯ ವರ್ಣನೆಗಳನ್ನು ಓದಿದವರಲ್ಲಿ ಕಾಮೋದ್ದೀಪನಗೊಳ್ಳುತ್ತಿತ್ತು. ಆದುದರಿಂದ ಕಾವ್ಯಗಳಲ್ಲಿ ಬರುವ ಈ ವರ್ಣನೆಗಳು ಸಾರ್ವಜನಿಕವಾಗಿ ಓದುವಂತೆ ಇರಲಿಲ್ಲವೆಂದು ತಿಳಿಯಬಹುದು. ವೇಶ್ಯಾವಾಟಿಕೆಯ ವರ್ಣನೆಯನ್ನು ಕಡ್ಡಾಯಗೊಳಿಸಿದ್ದರಿಂದ ಕವಿಗಳು, ನಾರದನನ್ನು, ಜೈನ ಸನ್ಯಾಸಿಗಳನ್ನು ವೇಶ್ಯಾವಾಟಿಕೆಗೆ ಒಂದು ಸುತ್ತು ಬರಿಸಿ ಆ ದೃಶ್ಯಗಳನ್ನು ಕಾಣಿಸಿದ್ದಾರೆ. ಇದು ಪ್ರಾಚೀನ ಕಾಲದ ಕಾವ್ಯಗಳು ಕಾಮವನ್ನು ವೇಶ್ಯಾವಾಟಿಕೆಗೆ ಮಾತ್ರ ಸೀಮಿತಗೊಳಿಸಿ ಬರೆದ ಕೆಲವು ಧಾರ್ಮಿಕ ಕಾವ್ಯಗಳಾಗಿದ್ದುವು ಎಂಬುದು ವಿಶೇಷ.

ಆಧುನಿಕ ಕಾಲದಲ್ಲೂ ಕಾಮ ಪ್ರೇಮಗಳಿಲ್ಲದ ಕಾವ್ಯ ಸಾಹಿತ್ಯಗಳಿರಲು ಸಾಧ್ಯವೇ? ಆರೋಗ್ಯಕರವಾದ ಕಾಮವನ್ನು ಚಿತ್ರಿಸಿದವುಗಳಿದ್ದಂತೆ ವಿಕೃತ ಕಾಮಗಳನ್ನು ಚಿತ್ರಿಸಿದ ಕೆಲವು ಪತ್ರಿಕೆಗಳು ಪುಸ್ತಕಗಳು ಹದಿಹರೆಯದ ಯುವಕ ಯುವತಿಯರನ್ನು ಹುಚ್ಚೆಬ್ಬಿಸಿ ಕೆರಳುವಂತೆ ಮಾಡಿದವುಗಳೂ ಇದ್ದವು.

ನಮ್ಮ ಕೆಲವು ದೇವಸ್ಥಾನಗಳಲ್ಲಿ ಕೆತ್ತಿದ ಶಿಲ್ಪಗಳು ವಾತ್ಸಾಯನನ ಕಾಮಶಾಸ್ತ್ರದ ಸೂತ್ರಗಳ ಶಿಲ್ಪಕೃತಿಗಳೇ ಆಗಿವೆ. ಹಂಪೆ, ಕೊನಾರ್ಕ್, ಖುಜುರಾಹೋ ಮುಂತಾದ ಕಡೆಗಳಲ್ಲಿ ಕಾಮದ ಸಹಜ ಮತ್ತು ವಿಕೃತ ರೂಪಗಳನ್ನು ಕೆತ್ತಿರುವುದನ್ನು ಕಂಡರೆ ಆಶ್ಚರ್ಯವಾಗುತ್ತದೆ. ನಾಲ್ಕು ಪುರುಷಾರ್ಥಗಳಲ್ಲಿ ಕಾಮವೂ ಒಂದು ಎಂದು ತಿಳಿಸಲು ಅದನ್ನು ಕೆತ್ತಿದ್ದಾರೆಂದು ಹೇಳುವವರಿದ್ದಾರೆ. ಕಾಮವನ್ನು ದೇವಸ್ಥಾನದ ಒಳಗೆ ಹೋಗುವಾಗ ಸಂಪೂರ್ಣ ನಿಯಂತ್ರಿಸಬೇಕು ಎಂಬುದನ್ನು ಸೂಚಿಸುವುದಕ್ಕಾಗಿ ದೇವಸ್ಥಾನದ ಹೊರ ಆವರಣದಲ್ಲಿ ಅದನ್ನು ಕೆತ್ತಿದ್ದಾರೆಂದು ಸಮಜಾಯಿಷಿ ನೀಡುವವರಿದ್ದಾರೆ. ಈ ಕಾಮೋತ್ತೇಜಕ ಶಿಲ್ಪಗಳನ್ನು ನೋಡಿ ಸಾಮಾನ್ಯ ಮನುಷ್ಯನು ಮನಸ್ಸನ್ನು ನಿಗ್ರಹಿಸಬಲ್ಲನೇ? ಇದೊಂದು ಸಿಹಿಯಾದ ಸುಳ್ಳೆಂದು ತಿರಸ್ಕರಿಸಬಹುದು. ದೇವಸ್ಥಾನಗಳ ನಿರ್ಮಾಣ ಪ್ರಾರಂಭವಾದದ್ದೇ ಕ್ರಿಸ್ತ ಶಕಾರಂಭದಿಂದ. ಆಗ ರಾಜರು ಪೈಪೋಟಿಯಿಂದ ಎಂಬಂತೆ ದೊಡ್ಡ ದೊಡ್ಡ ದೇವಸ್ಥಾನಗಳನ್ನು ಕಟ್ಟಿ ತಮ್ಮ ವೈಭವವನ್ನು ಮೆರೆಯತೊಡಗಿದರು. ದೇವಸ್ಥಾನಗಳು ರಾಜನ ಉಂಬಳಿಯಿಂದ ಮಾತ್ರ ಎಷ್ಟು ಕಾಲ ನಡೆಯ ಬಲ್ಲವು? ಹರಕೆ ಕಾಣಿಕೆಗಳೇ ದೇವಸ್ಥಾನಗಳ ಪ್ರಮುಖ ಆದಾಯಗಳಲ್ಲವೇ? ಹೆಚ್ಚು ಹೆಚ್ಚು ಭಕ್ತರನ್ನು ದೇವಸ್ಥಾನದ ಕಡೆಗೆ ಆಕರ್ಷಿಸಲು ಮಾಡಿದ ಜಾಹಿರಾತು ತಂತ್ರದಂತೆ ಕಾಣುತ್ತಿಲ್ಲವೇ ಈ ಮಿಥುನ ಶಿಲ್ಪಗಳು, ಭಕ್ತಿಯ ಬಗ್ಗೆ ಮಾನವರೆಲ್ಲರೂ ಕುತೂಹಲಿಗಳಾಗಿರುವರೋ ಇಲ್ಲವೋ ಆದರೆ ಕಾಮದ ಬಗ್ಗೆಯಂತೂ ಕುತೂಹಲವಿಲ್ಲದ ಮಾನವರಿರಲು ಸಾಧ್ಯವೇ? ಆದುದರಿಂದ ದೇವಸ್ಥಾನದ ಜಾಹೀರಾತುಗಳಾಗಿ ಈ ಮಿಥುನ ಶಿಲ್ಪಗಳು ಆ ಕಾಲದಲ್ಲಿ ಜನರನ್ನು ಸೆಳೆದಿರುವ ಸಂಭವವಿದೆ.

ಆಧುನಿಕ ಕಾಲದ ಸಾಹಿತ್ಯದ ಬಗ್ಗೆ ಹೇಳುವುದಾದರೆ ಕಳೆದ ಶತಮಾನದ ಕೆಲವು ಜನಪ್ರಿಯ ಕಾದಂಬರಿಗಳು ಕಾಮಪ್ರಚೋದನೆಗಾಗಿಯೇ ಬರೆಯಲ್ಪಟ್ಟವು. ಇಂಗ್ಲಿಷ್‌ ಮಿಲ್ಸ್ ಎಂಡ್ ಬೂನ್ಸ್ ಕಾದಂಬರಿಗಳಂತಹ ಕೃತಿಗಳು ಓದುಗರಲ್ಲಿ ಲೈಂಗಿಕತೆಯನ್ನು ಕೆರಳಿಸುವುದಕ್ಕೂ, ಕೆಲವು ಕಾದಂಬರಿಗಳು ಕಾಮವನ್ನು ನಿಯಂತ್ರಿಸುವುದಕ್ಕೂ ಪ್ರಯತ್ನಿಸಿವೆ ಎಂದು ಹೇಳಬಹುದು. ಈಗ ನಾವು ಸೂಪರ್ ಫಾಸ್ಟ್ ಯುಗದಲ್ಲಿದ್ದೇವೆ. ಅಂತರ್ಜಾಲಗಳಲ್ಲಿ ಕಾಮಪ್ರಚೋದಕ ಜಾಲತಾಣಗಳು ಪುಕ್ಕಟೆಯಾಗಿ ಸಲೀಸಾಗಿ ಎಲ್ಲರಿಗೂ ಲಭಿಸುವಂತಾಗಿದೆ. ಕಂಪ್ಯೂಟರ್, ಸ್ಮಾರ್ಟ್‌ಫೋನ್‌ಗಳ ಪರದೆಯ ಮೇಲೆ ಬೆರಳು ತಾಗಿಸಿದ ಕೂಡಲೇ ಕಾಮಪ್ರಚೋದಕ ತಾಣಗಳು ತೆರೆದುಕೊಳ್ಳುತ್ತವೆ. ಪ್ರಾಣಿಗಳು ಸುರತದಲ್ಲಿ ನಿರತವಾದಂತೆ ಎಳೆಯ ಬಾಲಕ ಬಾಲಕಿಯರು, ಯುವ ತರುಣ ತರುಣಿಯರು ಈ ನೀಲಿಚಿತ್ರಗಳಲ್ಲಿ ನಾನಾ ರೀತಿಯ ಕಾಮ ವಿಕೃತಿಯಲ್ಲಿ ತೊಡಗಿಕೊಂಡಿರುವ ಜಾಲತಾಣಗಳು 'ಪೋರ್ನೊ' ಎಂಬ ಹೆಸರಿನಲ್ಲಿ ಪ್ರಕಟವಾಗುತ್ತವೆ. ಮೊತ್ತ ಮೊದಲು ಇದನ್ನು ಕಂಡವರು ಮಾನಸಿಕ ಅಸ್ವಸ್ಥಗೊಳ್ಳುವುದು ಖಂಡಿತ. ಈ ಜಾಲತಾಣಗಳು ಹದಿವಯಸ್ಸಿನ ಕಾಮಕುತೂಹಲವನ್ನು ತಣಿಸುತ್ತದೆ. ಎಂದು ಸಮರ್ಥಿಸುವವರಿದ್ದಾರೆ. ಇತ್ತೀಚೆಗೆ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಈ ಜಾಲತಾಣಗಳ ವೀಕ್ಷಣೆಯೇ ಪ್ರೇರಣೆ ಎಂದು ಅತ್ಯಾಚಾರಿಗಳು ಹೇಳಿಕೆ ನೀಡಿದ್ದಾರೆ. ಹಾಗಿದ್ದರೆ ಇಂತಹ ಕಾಮ ಪ್ರಚೋದಕ ಜಾಲತಾಣಗಳನ್ನು ಯಾಕೆ ನಿಷೇಧಿಸಬಾರದು? ಹೌದು, ಐದು ವರ್ಷಗಳ ಹಿಂದೆ ಈ ಜಾಲತಾಣಗಳನ್ನು ಭಾರತ ಸರಕಾರ ನಿಷೇಧಿಸಿದ್ದು ನೆನಪಿರಬಹುದು. 2014ರ ಡಿಸೆಂಬರ್‌ನಲ್ಲೇ ಮಿಮಿಯೋ, ಗಿಟ್‌ಹಬ್, ಡೈಲಿಮೋಷನ್‌ನಂತಹ ಸುಮಾರು 32 ವೆಬ್‌ಸೈಟ್‌ಗಳನ್ನು ಭಾರತ ಸರಕಾರ ನಿಷೇಧಿಸಿತು. ಮಾಹಿತಿ ತಂತ್ರಜ್ಞಾನದ ಕಾಯ್ದೆಯ 69ಎ ಸೆಕ್ಷನ್ ಅಡಿಯಲ್ಲಿ ಈ ಕ್ರಮಕೈಗೊಳ್ಳಲಾಗಿತ್ತು. ಹಾಗಾದರೆ ಸಿನಿಮಾಗಳಲ್ಲಿ ಅಶ್ಲೀಲ ದೃಶ್ಯಗಳು ಆಕ್ಷೇಪಾರ್ಹವಲ್ಲವೇ? ಆದುದರಿಂದ ಮರುವರ್ಷ ಸಿನಿಮಾಗಳಲ್ಲಿ ಅಶ್ಲೀಲ ಪದ ಬಳಸುವುದಕ್ಕೆ ನಿಷೇಧ ಹೇರಿತು. ಸೆನ್ಸಾರ್ ಮಂಡಳಿ ಸಿನಿಮಾಗಳಿಗೆ ಪ್ರಮಾಣ ಪತ್ರ ನೀಡುವುದರಲ್ಲಿ ಪ್ರಾಮಾಣಿಕವಾಗಿ ವರ್ತಿಸದೆ ಭ್ರಷ್ಟಾಚಾರವನ್ನು ಪ್ರದರ್ಶಿಸಿತು. 'ಇಂಡಿಯಾಸ್ ಡಾಟರ್' ಎಂಬ ಸಾಕ್ಷ್ಯ ಚಿತ್ರವನ್ನೇ ಕೇಂದ್ರ ಸರಕಾರ ನಿಷೇಧಿಸಿದ್ದು ಇದಕ್ಕೆ ಸಾಕ್ಷಿ. ಫಿಫ್ಟಿ ಶೇಡ್ಸ್ ಆಫ್ ಗ್ರೇ ಎಂಬ ಸಿನಿಮಾವನ್ನು ಕೂಡಾ ಸೆನ್ಸಾರ್ ಮಂಡಳಿ ನಿಷೇಧಿಸಿತು. ಈಗ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಶ್ರೇಯಾ ಸಿಂಘಾಲ್ ಸರಕಾರದ ವಿರುದ್ಧ ಕೋರ್ಟ್ ಮೆಟ್ಟಲೇರಿದರು. ಇದರಿಂದ ಇರಿಸು ಮುರಿಸಿಗೊಳಗಾದ ಸರಕಾರ ಜಾಲತಾಣಗಳ ನಿಷೇಧವನ್ನು ಹಿಂತೆಗೆದುಕೊಂಡಿತು. ಕಮಲೇಶ್ ವಾಸ್ತಾನಿಯವರು ಈ ಜಾಲತಾಣಗಳ ದುರುಪಯೋಗದ ಬಗ್ಗೆ ಸುಪ್ರೀಂ ಕೋರ್ಟಿಗೆ ಸಲ್ಲಿಸಿದ ಅರ್ಜಿಯಿಂದಾಗಿ ನಿಷೇಧದ ಬಗ್ಗೆ ಸರಕಾರ ತನ್ನ ನಿಲುವಿನಿಂದ ಹಿಂದೆ ಸರಿಯಿತು. ಐ.ಟಿ. ಕಾಯ್ದೆಯ ಸೆಕ್ಷನ್ 69 ಎ ಮತ್ತು 79ನ್ನು ದುರ್ಬಳಕೆ ಮಾಡುವ ಬಾಗಿಲುಗಳನ್ನು ಮುಚ್ಚುವುದಕ್ಕೆ ನ್ಯಾಯಾಲಯಕ್ಕೆ ಉತ್ತಮ ಅವಕಾಶ ಲಭಿಸಿದೆ.

ಕಾಮ ಪ್ರಚೋದಕ ಜಾಲತಾಣಗಳನ್ನು ಸಂಪೂರ್ಣ ನಿಷೇಧಿಸಿದ ಅರಬ್ ದೇಶಗಳಲ್ಲಿ ಲೈಂಗಿಕ ಅಪರಾಧಗಳು ಕಡಿಮೆಯಾಗಿದೆ ಎಂದು ಹೇಳುತ್ತಾರೆ. ಅವುಗಳನ್ನು ನೋಡುವ ಮುಕ್ತ ಅವಕಾಶವಿರುವ ದೇಶಗಳಲ್ಲೂ ಲೈಂಗಿಕ ಅಪರಾಧ ಕಡಿಮೆಯಾಗಿದೆಯೆಂದೂ ಹೇಳುತ್ತಾರೆ. ಜಪಾನಿನಲ್ಲಿ ಪೋರ್ನೋಗ್ರಾಫಿ ವ್ಯಾಪಕವಾಗಿದೆ. ಆದರೆ ಅತ್ಯಾಚಾರದ ಘಟನೆಗಳು ತೀರಾ ಕಡಿಮೆ. ಭಾರತದ ಸಾಂಸ್ಕೃತಿಕ ಮತ್ತು ಸಾಮಾಜಿಕ ಪರಿಸ್ಥಿತಿಯನ್ನು ಅಭಿವೃದ್ಧಿ ಹೊಂದಿದ ದೇಶಗಳೊಂದಿಗೆ ಹೋಲಿಸಲಾಗದು. ಶೈಕ್ಷಣಿಕವಾಗಿ, ಆರ್ಥಿಕವಾಗಿ ಬಹಳ ದುರ್ಬಲಗೊಂಡ ದೇಶಗಳಲ್ಲಿ ಕಾಮಪ್ರಚೋದಕ ಜಾಲತಾಣಗಳು ಯಥೇಚ್ಛವಾಗಿ ದುರ್ಬಳಕೆಯಾಗುತ್ತವೆ. ಒಂದು ನಿರ್ದಿಷ್ಟ ವಯಸ್ಸಿನಲ್ಲಿ ನೋಡಿದ ಇಂತಹ ಕಾಮ ಪ್ರಚೋದಕ ದೃಶ್ಯಗಳು ಅವನ / ಅವಳ ಮಾನಸಿಕ ಸ್ಥಿತಿಯನ್ನೇ ಪಲ್ಲಟಗೊಳಿಸಬಹುದು. ಸಿನಿಮಾ ನಿರ್ಮಾಪಕರು ಜನರ ಈ ಮೂಲ ಗುಣಗಳನ್ನು ಗಮನದಲ್ಲಿರಿಸಿಕೊಂಡೇ ಮಸಾಲೆ ದೃಶ್ಯಗಳನ್ನು ತುರುಕುತ್ತಾರೆ. ಇಲ್ಲಿ ಸಿನಿಮಾ ನಟಿಯರ ಅಂಗಗಳು ಹಣಗಳಿಸುವ ಬಂಡವಾಳವಾಗಿರುತ್ತವೆ. ಹಾಗೆಯೇ ಅಶ್ಲೀಲ ಮಾತುಗಳನ್ನೇ ಬಂಡವಾಳ ಮಾಡಿಕೊಂಡ ಸಿನಿಮಾಗಳೂ ಹಣ ಗಳಿಕೆಯ ವಕ್ರಧಾರಿ ಹಿಡಿಯುತ್ತವೆ. ಉದಾಹರಣೆಗೆ ನಮ್ಮ ಕರಾವಳಿಯಲ್ಲಿ ತುಳುಭಾಷೆಯ ಚಲನಚಿತ್ರವೊಂದರಲ್ಲಿ ಅತ್ಯಾಚಾರ ಮಾಡುವುದು ಹೇಗೆ ಎಂಬುದನ್ನು ಮಾತುಗಳ ಮೂಲಕ ವಿವರಿಸುವ ದೃಶ್ಯವೇ ಬಂಡವಾಳವಾಗಿ ಸಿನಿಮಾ ಸುದ್ದಿ ಮಾಡಿತು. ಆ ಮಾತುಗಳನ್ನು ತೆಗೆದು ಹಾಕಬೇಕೆಂದು ಮಂಗಳೂರಿನ ಹಲವು ಸಂಘಟನೆಗಳ ಮಹಿಳೆಯರು ಸೇರಿ ಪ್ರತಿಭಟನೆ, ಜಾಥಾ ಎಲ್ಲಾ ಮಾಡಿದರು. ಮಹಿಳೆಯರ ವಿರೋಧವನ್ನು ಕಾಲಡಿಯ ಕಸಕ್ಕೆ ಸಮಾನವೆಂಬಂತೆ ತಿರಸ್ಕರಿಸಿದ ನಿರ್ಮಾಪಕರ ಧೈರ್ಯಕ್ಕೆ ಪ್ರಜ್ಞಾವಂತ ನಾಗರಿಕರು ಬೆರಗಾದರು. ಸೆನ್ಸಾರ್ ಮಂಡಳಿಗೆ ಈ ಸಂಭಾಷಣೆಯನ್ನು ಕೇಳಿಸದಂತೆ ಮಾಡಿ ಸರ್ಟಿಫಿಕೇಟು ಪಡೆಯಲು ಯಾವ ಅಡ್ಡದಾರಿಯನ್ನು ಹಿಡಿಯಲಾಗಿದೆ ಎಂದು ಹುಡುಕಬೇಕಾಗಿದೆ. ಇದೆಲ್ಲಾ ಯಾಕೆ ಹೇಳಬೇಕಾಯಿತೆಂದರೆ ಅಶ್ಲೀಲ ಸಂಭಾಷಣೆಗಳ ಮೂಲಕವೇ ನಾಟಕರಂಗದಲ್ಲಿ ಪ್ರಸಿದ್ಧಿ ಪಡೆಯುವುದು, ದೃಶ್ಯ ಮಾಧ್ಯಮಗಳಲ್ಲಿ ಅಶ್ಲೀಲ ಸಂಭಾಷಣೆಗಳ ಮೂಲಕವೇ ದೃಶ್ಯ ನಿರ್ಮಾಣ ಮಾಡುವುದು, ಕಾಮ ಉತ್ತೇಜಿಸುವ ಮೂಲಕ ಹಣ ಮತ್ತು ಕೀರ್ತಿ ಗಳಿಸುವ ಸುಲಭ ಮಾರ್ಗಗಳಾಗಿ ಬಿಟ್ಟಿವೆ.

ನನಗೆ ನನ್ನ ಬಾಲ್ಯದ ಕೆಲವು ಘಟನೆಗಳು ನೆನಪಾಗುತ್ತವೆ. ಮದುವೆ ಸಮಾರಂಭಗಳಲ್ಲಿ ಬಂಧು ಮಿತ್ರರು ಒಂದೆರಡು ದಿನ ಮೊದಲೇ ಮದುವೆ ಮನೆಯಲ್ಲಿ ಸೇರುತ್ತಿದ್ದ ಕಾಲವದು. ಹೀಗೆ ಬಂಧುಗಳು ಸೇರಿದಾಗ ಹೆಂಗಸರಿಗೆ ಗಂಡಸರು ಅಶ್ಲೀಲ ಜೋಕುಗಳನ್ನು ಹಾರಿಸಿ ಎಲ್ಲರನ್ನು ನಗಿಸುವ ಚಾಲಾಕಿತನವುಳ್ಳ ಗಂಡಸರಿದ್ದರು. ಅವರನ್ನು ಎಲ್ಲರೂ ಮೆಚ್ಚಿ ಕೊಂಡಾಡಿ ಹೀರೋ ಎಂದೇ ಗೌರವಿಸುವುದನ್ನೂ ಕಂಡಿದ್ದೇನೆ. ಅಂದರೆ ಅಶ್ಲೀಲ ಜೋಕುಗಳೂ ಮನುಷ್ಯನ ಕಾಮ ತಣಿಸುವಿಕೆಯ ಮಾಧ್ಯಮವಾಗಿವೆ. ನೋಡುವುದು, ಮಾತಾಡುವುದು, ಮಾನಸಿಕ ಉದ್ರೇಕಗಳನ್ನು ತಣಿಸುತ್ತವೆ. ಕೇವಲ ಹೆಂಗಸರೇ ಸೇರಿದಲ್ಲಿಯೂ ಹೀಗೆ ಅಶ್ಲೀಲ ಜೋಕ್‌ಗಳನ್ನು ಹರಿಯಲು ಬಿಟ್ಟು ಆನಂದಿಸುವುದೂ ಇದೆ. ಹೀಗೆ ಕಾಮವು ಮನುಷ್ಯನ ಮೂಲಭೂತ ಗುಣವಾಗಿರುವುದರಿಂದಲೇ ಕಾವ್ಯ, ಸಾಹಿತ್ಯ, ನಾಟಕ, ಸಿನಿಮಾ, ನೃತ್ಯ, ಸಂಗೀತ, ಚಿತ್ರ, ಶಿಲ್ಪ, ಮುಂತಾದ ಎಲ್ಲಾ ಮಾಧ್ಯಮಗಳಲ್ಲೂ ಕಾಮಕ್ಕೆ ಉತ್ತೇಜನ ಕೊಡುವವುಗಳಾಗಿದ್ದರೆ ಎಲ್ಲರ ಗಮನ ಸೆಳೆಯುತ್ತದೆ. ಮೆಚ್ಚುತ್ತದೆ. ಅಲ್ಲಿ ಮಾನ ಗೌರವ ದೊರಕುತ್ತದೆ. ಕಾಮವನ್ನು ತಣಿಸುವ ಕೆಲಸ ಮಾಡುವ ಲೈಂಗಿಕ ಕಾರಕರ್ತೆಯರು ಮಾತ್ರ ನಿಂದೆಗೆ ದೂಷಣೆಗೆ ಅವಮಾನಕ್ಕೆ ಗುರಿಯಾಗುವುದು ಯಾಕೆ ಎಂಬುದೇ ದೊಡ್ಡ ಪ್ರಶ್ನೆ, ಶತಮಾನಗಳಿಂದಲೂ ಇದಕ್ಕೆ ನಾನಾ ರೀತಿಯಲ್ಲಿ ಅನೇಕರು ಉತ್ತರ ಹುಡುಕಿದ್ದಾರೆ. ಆದರೆ ಉತ್ತರ ಸಿಕ್ಕಿಲ್ಲ.

ವೇಶ್ಯಾವೃತ್ತಿಗೆ ಸಂಪ್ರದಾಯದ ಸಮ್ಮತಿ

ದೇವದಾಸಿ ಮತ್ತು ಪಾತರದವರ ವೃತ್ತಿಗೆ ಧಾರ್ಮಿಕ ಸಮ್ಮತಿ ಇದೆ. ಹಾಗೆಯೇ ಉತ್ತರ ಭಾರತದ ಬೇಡಿಯಾ ಎಂಬ ಜನಾಂಗವೊಂದರಲ್ಲಿ ಶತಮಾನಗಳಿಂದ ಸ್ತ್ರೀಯರು ಅದನ್ನೊಂದು ವೃತ್ತಿಯಾಗಿಯೇ ಸ್ವೀಕರಿಸುವುದಕ್ಕೆ ಸಂಪ್ರದಾಯದ ಸಮ್ಮತಿ ಇದೆ. ಪರಂಪರಾಗತವಾಗಿ ಇವರು ಈ ವೃತ್ತಿಯನ್ನು ಮಾಡುತ್ತಾ ಬಂದಿದ್ದಾರೆ. ದೆಹಲಿಯ ದೀಪಾದಾಸ್ ಎಂಬ ಮಹಿಳೆ ಇವರ ಬಗ್ಗೆ ಅಧ್ಯಯನ ಮಾಡಿದ್ದಾರೆ. ಈ ವೃತ್ತಿಯನ್ನು 'ಖಾನ್‌ದಾನಿ ಪೇಶಾ' ಎಂದು ತಿಳಿಯುವ ಇವರಿಗೆ ಯಾವುದೇ ಅಪರಾಧಿ ಪ್ರಜ್ಞೆಯಿಲ್ಲ. ಮಧ್ಯಪ್ರದೇಶ, ರಾಜಾಸ್ತಾನ ಮತ್ತು ಉತ್ತರ ಪ್ರದೇಶಗಳಲ್ಲಿ ಈ ಜನಾಂಗದವರು ವಾಸಿಸುತ್ತಾರೆ. ಶಿಕ್ಷಣಕ್ಕೆ ತೆರೆದುಕೊಳ್ಳದ ಕಾರಣ ಈ ಸಮುದಾಯದ ಬೆರಳೆಣಿಕೆಯಷ್ಟು ಮಂದಿ ಖಾಸಗಿ ಸಂಸ್ಥೆಗಳಲ್ಲಿ ನೌಕರರಾಗಿದ್ದಾರೆ. ವೃತ್ತಿನಿರತ ಬೇಡಿಯಾ ಮಹಿಳೆಯನ್ನು 'ಬರ್ನಿಸ್' ಎನ್ನುತ್ತಾರೆ. ಆಗ್ರಾ, ಅಲಾಹಾಬಾದ್, ಮುಂಬೈ, ದೆಹಲಿ, ಕಾನ್ಸುರ, ಮೀರತ್, ನಾಗಪುರಗಳ ಕೆಂಪುದೀಪ ಪ್ರದೇಶಗಳಲ್ಲಿ ಇವರು ಹೆಚ್ಚಾಗಿದ್ದಾರೆ. ಕೆಲವರು ತಮ್ಮ ಹುಟ್ಟೂರಲ್ಲೇ ವೃತ್ತಿ ನಡೆಸುತ್ತಾರೆ. ಇವರಿಗೆ ಅವರ ಬಂಧುಗಳೇ ತಲೆ ಹಿಡುಕರಾಗಿ ವೃತ್ತಿಗೆ ಪ್ರೋತ್ಸಾಹ ನೀಡುತ್ತಾರೆ.

ಮೂಲತಃ ಇದೊಂದು ಅಲೆಮಾರಿ ಜನಾಂಗ, ಇದರ ಮೂಲ ಮಹಮದ್‌ ಘೋರಿ, ಮಹಮ್ಮದ್ ಘಜಿ ಕಾಲಕ್ಕೆ ಹೋಗುತ್ತದೆ. ದಾಳಿಗೆ ಹೆದರಿ ಕೆಲವು ರಾಜ್ಯಗಳ ನಾಗರಿಕರು ಕಾಡುಗಳಲ್ಲಿ ಅವಿತುಕೊಂಡರು. ಗೆರಿಲ್ಲಾಗಳಂತೆ ಯುದ್ಧ ಮಾಡತೊಡಗಿದರು. ದರೋಡೆ, ಲೂಟಿ ಮಾಡತೊಡಗಿದರು. ಬ್ರಿಟಿಷರು ಇವರ ಅಪರಾಧಗಳಿಗಾಗಿ ಬೇಟೆಯಾಡಿ ಶಿಕ್ಷಿಸತೊಡಗಿದರು. ಆಗ ತಮ್ಮ ರಕ್ಷಣೆಗಾಗಿ ರಾಜ ಮನೆತನದವರ ಮೊರೆಹೊಕ್ಕರು. ಅವರಿಗೆ ಕಾಣಿಕೆಯಾಗಿ ಹೆಂಗಸರನ್ನು ನೀಡಿದರು. ಹೀಗೆ ಮಹಿಳೆಯರನ್ನು ವೇಶ್ಯಾ ವೃತ್ತಿಗಿಳಿಸುವ ಸಂಪ್ರದಾಯ ಪ್ರಾರಂಭವಾಯಿತು ಎಂದು ಅವರು ಕತೆ ಹೇಳುತ್ತಾರೆ. ಈ ಕತೆಗಿಂತಲೂ ಭಿನ್ನವಾದ ಯಾವುದೋ ಕಾರಣವು ಈ ಸಂಪ್ರದಾಯದ ಹಿಂದೆ ಇರಬಹುದು.

ಪೂರ್ವ ನಿರ್ಧಾರಿತವಾದ ವೇಶ್ಯಾವೃತ್ತಿಗೆ ಕಾಲಿಡುವ ಮೊದಲು ಈ ಸಮುದಾಯದ ಹೆಣ್ಣು ಮಕ್ಕಳಿಗೆ ಏಳು, ಎಂಟನೆಯ ವಯಸ್ಸಿನಿಂದಲೇ ಲಲಿತ ಕಲೆಗಳು ಮತ್ತಿತರ ಕಸುಬಿನ ಸಂಬಂಧಿಸಿದ ವಿಚಾರಗಳಲ್ಲಿ ತರಬೇತಿ ನೀಡುತ್ತಾರೆ. ಗಂಡಸರನ್ನು ಆಕರ್ಷಿಸುವ ಕಲೆಯನ್ನೂ ಕಲಿಸುತ್ತಾರೆ. 14-15ರ ವಯಸ್ಸಿನಲ್ಲಿ ವೃತ್ತಿಗಿಳಿಯುವ ಮೊದಲು ಒಂದು ಸಮಾರಂಭ ಮಾಡುತ್ತಾರೆ. ಹಿಂದೂ ಶಾಸ್ತ್ರದಂತೆ ಮದುವೆ ಮಾಡುತ್ತಾರೆ. ವರ ಯಾರು ಗೊತ್ತೇ? ಹಣದ ಚೀಲ. ಅವಳಿಗೆ ಹುಟ್ಟುವ ಮಕ್ಕಳ ತಂದೆಯೂ ಹಣವೇ ಹೊರತು ವ್ಯಕ್ತಿಯಲ್ಲ. ಅವಳ ಆದಾಯ ಮೂಲವನ್ನೇ ಅವಲಂಬಿಸಿದ ಕುಟುಂಬಗಳಲ್ಲಿ ಸ್ವತಂತ್ರಳಾದ ಸ್ಥಾನಮಾನ ಗೌರವ ಪಡೆದಿರುತ್ತಾಳೆ. ಹೆಂಡತಿ ಮತ್ತು ತಾಯಿ ಎರಡೂ ಪಾತ್ರವನ್ನು ವಹಿಸದ ಇವರು ವೃದ್ಧಾಪ್ಯದಲ್ಲಿ ಕಷ್ಟದ ಜೀವನ ನಡೆಸುವುದೂ ಇದೆ. ತನ್ನ ಹಕ್ಕುಗಳನ್ನು ಚಲಾಯಿಸಲು ತಿಳಿದರೆ ಮಾತ್ರ ಆಸ್ತಿಯಲ್ಲಿ ಪಾಲು ದಕ್ಕುತ್ತದೆ. ಈ ಜನಾಂಗದಲ್ಲಿ ಹೆಣ್ಣು ಮಕ್ಕಳಿಗೆ ವಿವಾಹವೇ ನಡೆಯುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈ ಸಮಾಜದಲ್ಲಿ ಜಾಗೃತಿ ಮೂಡಿದೆ. ಗ್ವಾಲಿಯಾರ್, ಚಂಬಲ್ ಪ್ರದೇಶದಲ್ಲಿ 1970ರಿಂದಿಚೇಗೆ ಸುಮಾರು 300 ಮಂದಿ ವಿವಾಹವಾಗಿದ್ದಾರೆಂದು ಸಮಾಜ ಕಾರ್ಯಕರ್ತರೊಬ್ಬರು ಹೇಳುತ್ತಾರೆ. ಇವರು ತಮ್ಮ ಮಕ್ಕಳನ್ನು ಈ ವೃತ್ತಿಗೆ ಬಿಡುವುದಿಲ್ಲ. ಒಟ್ಟಿನಲ್ಲಿ ಬೇಡಿಯಾ ಹೆಣ್ಣು ಈ ವೃತ್ತಿಯನ್ನು ತಾನಾಗಿಯೇ ಆರಿಸಿಕೊಂಡವಳಲ್ಲ. ಗಂಡಸರ ಒತ್ತಡಕ್ಕೆ ಹಣದಾಸೆಗೆ ಬಲಿಪಶುಗಳಾದವರು. ಮಹಿಳೆಯರನ್ನು ಶೋಷಿಸುತ್ತಾ, ಪ್ರತಿಭಟಿಸುವ ಬಾಯಿಗಳನ್ನು ಮುಚ್ಚಿಸುತ್ತಾ ಬರುವಲ್ಲಿ ಬೇಡಿಯಾ ಪುರುಷರು ಸಮರ್ಥರಾಗಿದ್ದರು ಅನ್ನೋದೇ ವಿಸ್ಮಯದ ವಿಷಯವಾಗಿದೆ (ಡಿಸೆಂಬರ್ ಮಾನಸ 1997).

ರಾಜಸ್ಥಾನದ ಭರತಪುರದ ಸುತ್ತಮುತ್ತಲಿನ ಹಲವು ಹಳ್ಳಿಗಳಲ್ಲಿ ಹೆಣ್ಣು ಹುಟ್ಟಿದರೆ ಬಹಳ ಸಂಭ್ರಮ ಪಡುತ್ತಾರೆ. ಅಲ್ಲಿನ ಬೇಡಿಯಾ ಜನಾಂಗದಲ್ಲಿ ಹೆಣ್ಣು ಮಗು ಹುಟ್ಟಿದರೆ ಹೊಸ ವೇಶ್ಯಯೊಬ್ಬಳು ಹುಟ್ಟಿದಳೆಂದೇ ಅರ್ಥ. ಈ ಜನಾಂಗ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಬರುವ ಒಂದು ಬಡ ಸಮುದಾಯ. ಆದರೆ ಎಲ್ಲಾ ಐಷಾರಾಮಿ ಸೌಕಯ್ಯ ಹೊಂದಿದ ಶ್ರೀಮಂತರೂ ಬಹು ಸಂಖ್ಯೆಯಲ್ಲಿದ್ದಾರೆ. ಇದಕ್ಕೆ ಕಾರಣ ಅಲ್ಲಿನ ಹೆಣ್ಣು ಮಕ್ಕಳು ಹೆಣ್ಣು ಮಗುವಿಗೆ 10 ವರ್ಷವಾದ ಕೂಡಲೇ ಒಂದರಿಂದ ಎರಡು ಲಕ್ಷ ರೂಪಾಯಿ ವರೆಗೆ ಮಾರಾಟವಾಗುತ್ತಾಳೆ. ಮಾರಾಟ ಮಾಡುವವರು ಅಪ್ಪ, ಅಣ್ಣ ಮತ್ತು ಸಹೋದರ ಮಾವಂದಿರು ಮೊದಲಾದ ಹತ್ತಿರದ ಬಂಧುಗಳು. ಖರೀದಿಸುವವರು ಟ್ರಕ್ ಚಾಲಕರು ಅಥವಾ ಬೇರೆ ಊರಿನ ದಲ್ಲಾಳಿಗಳು. ಮಾರಾಟ ಮಾಡಲ್ಪಡುವ ಹೆಣ್ಣು ಅವಿವಾಹಿತಳಾಗಿರಬೇಕು. ಒಂದು ವೇಳೆ ಅವಳಿಗೆ ವರ ನಿಶ್ಚಯವಾಗಿದ್ದರೆ ಹೆತ್ತವರಿಗೆ ವರನು ನಿರ್ದಿಷ್ಟ ಪ್ರಮಾಣದ ಹಣ ನೀಡಿಯೇ ಮದುವೆಯಾಗಬೇಕು. ಮನೆಯ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಾರೆ. ಆದರೆ ಮನೆಗೆ ಬಂದ ಸೊಸೆಯನ್ನು ವೇಶ್ಯಯ ಕೆಲಸಕ್ಕೆ ಕಳಿಸುವುದಿಲ್ಲವಂತೆ. ಭರತಪುರದ ಬನ್ನಿಪಹಾರ್‌ಪುರ್ ಎಂಬ ಹಳ್ಳಿಗೆ ಹೋಗಿ ನೋಡಿದರೆ ಗಂಡಸರೆಲ್ಲಾ ಒಂದೆಡೆ ಸೇರಿ ಹರಟೆ ಹೊಡೆಯುವುದು, ಸೋಮಾರಿಯಾಗಿ ತಿರುಗುವುದು ಕಂಡು ಬರುತ್ತದೆ. ಈ ಗಂಡಸರು ಬೇರೆ ಊರಿಗೆ ಹೋಗಿ ಕೆಲಸ ಹುಡುಕುವ ಪ್ರಯತ್ನವನ್ನೇ ಮಾಡಲಾರರು. ಹೆಣ್ಣು ಮಕ್ಕಳನ್ನು ಸೂಳೆಗಾರಿಕೆಗೆ ಕಳಿಸಿ ಇವರು ಆರಾಮವಾಗಿರುತ್ತಾರೆ ಅನ್ನುವುದೇ ವಿಚಿತ್ರ ಮನಸ್ಥಿತಿ ಅಲ್ಲವೇ? ಆ ಹೆಣ್ಣು ಮಕ್ಕಳು ದೊಡ್ಡ ಪಟ್ಟಣಗಳಲ್ಲಿ ಸೂಳೆಗಾರಿಕೆ ಮಾಡಿ ನಿಯಮಿತವಾಗಿ ಹಣ ಕಳುಹಿಸಿಕೊಡುತ್ತಾರೆ.

ಮನೆಯಲ್ಲೇ ವೇಶ್ಯಾವಾಟಿಕೆ ಮಾಡುವಾಗ ಗಂಡಸರು ಹೊರಗೆ ಕೂತು ಗಿರಾಕಿಗಳನ್ನು ಕೋಣೆಯೊಳಗೆ ಕರೆದುಕೊಂಡು ಹೋಗುತ್ತಾರೆ. ಹೊತ್ತು ಮೀರಿದ ತಕ್ಷಣ ಬಾಗಿಲು ಕಟಕಟ ಮಾಡಿ ಗಿರಾಕಿಯನ್ನು ಹೊರಗೆ ಕರೆಯುತ್ತಾರೆ. ಈ ಸಮುದಾಯದಲ್ಲಿ ವಿದ್ಯಾವಂತ ತರುಣ ತರುಣಿಯರ ಸಂಖ್ಯೆ ತೀರಾ ಕಡಿಮೆ. ರಾಜಸ್ತಾನ ಸರಕಾರದಲ್ಲಿ ಈ ಸಮುದಾಯದ ಒಬ್ಬನೇ ಒಬ್ಬ ನೌಕರ ಇಲ್ಲವೆಂದು ಹೇಳುತ್ತಾರೆ. ಶಾಲೆಗಳಲ್ಲೂ ಈ ಜನಾಂಗದ ಮಕ್ಕಳು ಅಪಹಾಸ್ಯಕ್ಕೆ ಗುರಿಯಾಗುತ್ತಾರೆ. ಆದುದರಿಂದ ಶಾಲೆ ಬಿಡುವವರೇ ಹೆಚ್ಚು. ಕುಟುಂಬದ ಬಂಧುಗಳೆಲ್ಲರ ಸಮ್ಮತಿಯಿಂದ ಮೈ ಮಾರಿ ಬದುಕುವಂತಹ ಸ್ಥಿತಿ ಹೆಣ್ಣಿಗೆ ಈಗಲೂ ಇದೆ ಅಂದರೆ ನಂಬುವುದು ಕಷ್ಟ ಅಲ್ಲವೇ? (ಗುರುತು ಪತ್ರಿಕೆ 2007)

ಬೇಡಿಯಾ ಸಮುದಾಯದಲ್ಲಿ ಸಮಾಜ ಒಪ್ಪಿಕೊಂಡ ವೇಶ್ಯಾವಾಟಿಕೆ ಅನೂಚಾನವಾಗಿ ನಡೆದುಕೊಂಡು ಬಂದ ಕತೆ ಒಂದು ರೀತಿಯ ವ್ಯವಸ್ಥೆಯಾದರೆ, ರಾಜಸ್ಥಾನದಲ್ಲಿ ಹೆಂಡತಿಯನ್ನೇ ಮಾರಾಟ ಮಾಡುವ ದಂಧೆಯಲ್ಲಿ ನಿರತವಾಗಿರುವ ಕತೆ ಇನ್ನೊಂದು ರೀತಿಯ ಕೆಟ್ಟ ವ್ಯವಸ್ಥೆಯಾಗಿದೆ. ಇದನ್ನು 'ನಾತಾ' (ಸಂಬಂಧ) ಕುದುರಿಸುವುದು ಎನ್ನುತ್ತಾರೆ. ಪತಿಯಾದವನಿಗೆ ಹಣದ ಅಡಚಣೆ ಉಂಟಾದಾಗ ಪತ್ನಿಯನ್ನು ನಾತಾ ಕುದುರಿಸಲು ಸಿದ್ಧಗೊಳಿಸಿ ಪತ್ನಿಯನ್ನು ಮಾರಾಟ ಮಾಡುತ್ತಾರೆ. ಇಂತಹ ನಾತಾ ಕುದುರಿಸುವುದನ್ನೇ ದಂಧೆ ಮಾಡಿಕೊಂಡ ವ್ಯವಸ್ಥಿತ ಜಾಲವು ರಾಜಸ್ಥಾನದ ಕೋಟಾ, ಬುಂದಿ, ದೇವೊಲಿ, ಅಜೀರ, ಟೊಂಕ್ ಜಿಲ್ಲೆಗಳಲ್ಲಿ ಕೆಲಸ ಮಾಡುತ್ತಿದೆ. ನಾತಾ ಸಂಬಂಧಕ್ಕೆ ಪತ್ನಿಯರು ಒಪ್ಪದಿದ್ದರೆ ಅವರನ್ನು ಕ್ರೂರ ರೀತಿಯಲ್ಲಿ ಹಿಂಸಿಸುತ್ತಾರೆ.

ಗೋವಾರಿ ಹಳ್ಳಿಯಲ್ಲಿ ಭಿಲ್ ಸಮಾಜದಲ್ಲೂ ಪತ್ನಿಯನ್ನು ಮಾರಾಟ ಮಾಡಿ ಬಂದ ಹಣದಲ್ಲೇ ಮಜಾ ಉಡಾಯಿಸುವ ಸಂಘಟನೆಗಳೂ ಇವೆ (ಪುಟ 43, ಉತ್ತರೆಯ ಅಳಲು).

ಮಹಾರಾಷ್ಟ್ರದ ಕೊಲ್ಲಾಟಿ ಸಮುದಾಯದಲ್ಲಿ ಇನ್ನೊಂದು ರೀತಿಯ ವ್ಯವಸ್ಥೆ ಇದೆ. ಸೊಲ್ಲಾಪುರ, ಪರ್ಬನಿ, ಔರಂಗಾಬಾದ್, ಜವಲ್‌ಶೇಡ್, ಪೂನಾ ಮುಂತಾದ ಊರುಗಳಲ್ಲಿ ಈ ಸಮುದಾಯದವರು ಇದ್ದಾರೆ. ಅಲೆಮಾರಿಗಳಾದ ಈ ಸಮುದಾಯದಲ್ಲಿ ಹೆಣ್ಣುಮಗು ಹುಟ್ಟಿದರೆ, ದೊಡ್ಡ ನಿಧಿ ದೊರಕಿದಂತೆಯೇ ಸರಿ. ಹೆಣ್ಣುಮಗುವಿಗೆ ಐದಾರು ವರ್ಷ ತುಂಬುತ್ತಲೇ ಲಾವಣಿ ಹಾಡು, ಜನಪದ ಕುಣಿತಗಳನ್ನು ಕಲಿಸುತ್ತಾರೆ. ಅವಳು ವಯಸ್ಸಿಗೆ ಬಂದ ಕೂಡಲೇ ಚೀರಾ ಉತ್ಸವವೆಂದು ಕರೆಯಲ್ಪಡುವ ಒಂದು ಕಾರ್ಯಕ್ರಮವೇರ್ಪಡಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಹೆಣ್ಣಿನ ದೇಹವನ್ನು ಹರಾಜಿಗಿಡುತ್ತಾರೆ. ಯಾರು ಹೆಚ್ಚು ಹಣವನ್ನು ನೀಡುತ್ತಾನೋ ಅವನು ಅವಳ ಮನೆಯಲ್ಲಿಯೇ ಸಂಸಾರ ಪ್ರಾರಂಭಿಸುತ್ತಾನೆ, ಗರ್ಭ ಧರಿಸುವ ತನಕ ಈ ಒಪ್ಪಂದವಿರುತ್ತದೆ. ಮತ್ತೆ ಅವನ ದಾರಿ ಅವನಿಗೆ, ಅವಳ ದಾರಿ ಅವಳಿಗೆ, ಮಗು ಹೆತ್ತ ಬಳಿಕ ಆಕೆ ಇನ್ನೊಂದು ಚೀರಾ ಉತ್ಸವಕ್ಕೆ ಸಿದ್ಧಳಾಗಬೇಕಾಗುತ್ತದೆ. ಮತ್ತೊಬ್ಬ ಗಂಡಸು ಅವಳ ಜೀವನದಲ್ಲಿ ಪ್ರವೇಶಿಸುತ್ತಾನೆ. ಹೀಗೆ ಈ ಸರಣಿ ಮುಂದುವರಿಯುತ್ತದೆ. ಪುರಾಣದ ಯಯಾತಿಯ ಮಗಳು ಮಾಧವಿಯ ಕತೆ ನೆನಪಾಗುತ್ತದಲ್ಲವೇ? ವಿಶ್ವಾಮಿತ್ರನ ಶಿಷ್ಯ ಗಾಲವನಿಗೆ ಗುರು ದಕ್ಷಿಣೆಯಾಗಿ ಕೊಡಬೇಕಾದ ಎಂಟು ನೂರು ಕಪ್ಪು ಕಿವಿಯ ಬಿಳಿಯ ಕುದುರೆಗಳ ಅಗತ್ಯವಿತ್ತು. ಅದಕ್ಕಾಗಿ ಯಯಾತಿಯ ಬಳಿಗೆ ಬಂದು ಬೇಡಿಕೊಂಡಾಗ ಮಾಧವಿಯ ತಂದೆ ಯಯಾತಿಯು 'ತನ್ನಲ್ಲಿ ಅಷ್ಟು ಕುದುರೆಗಳಿಲ್ಲ ಅದರ ಬದಲಿಗೆ ನನ್ನ ಮಗಳನ್ನು ನಿನಗೆ ನೀಡುತ್ತೇನೆ. ನೀನು ಅವಳನ್ನು ಯಾವ ರಾಜನಿಗಾದರೂ ಮಾರಾಟ ಮಾಡಿ ಅವರಿಂದ ಉಳಿದ ಕುದುರೆಗಳನ್ನು ಪಡೆಯಬಹುದು" ಎಂದನು. ಹೆಣ್ಣು, ದನ, ಕುದುರೆ, ಎತ್ತುಗಳಂತೆ ಒಂದು ಮಾರಾಟದ ವಸ್ತುವಾಗಿದ್ದಳು. ಆ ಕಾಲದಲ್ಲೂ ಈ ಕಾಲದಲ್ಲೂ ಇಂತಹ ಕ್ರೌರ್ಯಗಳು ನಡೆಯುತ್ತಲೇ ಇರುತ್ತವೆ. ರಾಜನಿಗೆ ಕುದುರೆಗಳನ್ನು ಹಣಕೊಟ್ಟು ಕೊಳ್ಳುವ ಸಾಮರ್ಥ್ಯವಿದ್ದರೂ ಅವನು ಮಗಳನ್ನೇ ಮಾರಾಟ ಮಾಡಿದ ಗಾಲವನಿಗೆ. ಈ ಗಾಲವನು ದಿವೋದಾಸ್, ಹರ್ಯಶ್ವ ಉಶೀನರ, ವಿಶ್ವಾಮಿತ್ರ ಇವರಿಗೆ ಒಂದೊಂದು ವರ್ಷಕ್ಕೆ ಮಾರಾಟ ಮಾಡಿ, ಅವನಿಗೆ ಬೇಕಾದ ಕುದುರೆಗಳನ್ನು ಪಡೆದಿದ್ದ, ಗುರು ದಕ್ಷಿಣೆ ಸಲ್ಲಿಸಿದ್ದ, ಈ ನಾಲ್ವರಿಗೂ ಒಂದೊಂದು ಮಗುವನ್ನು ಹೆತ್ತು ಕೊಟ್ಟಿದ್ದಳು ಮಾಧವಿ. ಹಾಗೆಯೇ ಈ ಕಾಲದಲ್ಲೂ ಕೊಲ್ದಾಟ ಜನಾಂಗದಲ್ಲೂ ಗರ್ಭ ಧರಿಸುವ ತನಕ ಈ ವ್ಯಾಪಾರದ ಒಪ್ಪಂದವಿರುತ್ತದೆ. ಈ ಸಮುದಾಯದ ಪ್ರತಿಯೊಬ್ಬ ಗಂಡಸ ಯಾರಾದರೊಬ್ಬ ಹುಡುಗಿಯನ್ನು ಅತ್ಯಾಚಾರ ಮಾಡಿಯಾದರೂ ಈ ದುಷ್ಟ ದಂಧೆಗೆ ಎಳೆಯುತ್ತಿದ್ದಾರೆ. ಮುಂಬಯಿಯ ಲಾಲ್‌ಬಾಗ್ ಏರಿಯಾದಲ್ಲಿ ಇಂತಹ ಚೀರಾ ಉತ್ಸವಗಳು ನಡೆಯುತ್ತವೆ. ಅಲ್ಲಿ ಹುಡುಗಿಯರನ್ನು ಎಳೆದು ತಂದು ಈ ದಂಧೆಗೆ ಹಚ್ಚುವ ತಲೆ ಹಿಡುಕರು ಇದ್ದಾರೆ. ಆಶ್ಚರ್ಯವೆಂದರೆ ಈ ದುಷ್ಟ ದಂಧೆಯನ್ನು ಪೋಷಿಸುವವರು ಊರ ಪ್ರಮುಖರು ಮತ್ತು ರಾಜಕಾರಿಣಿಗಳು. ಸ್ಥಳೀಯ ಗೂಂಡಾಗಳು ತಮ್ಮ ಸ್ವಾರ್ಥಕ್ಕಾಗಿ ಈ ಉತ್ಸವವನ್ನು ಏರ್ಪಡಿಸುತ್ತಾ ಚೆನ್ನಾಗಿ ಸಂಪಾದನೆ ಮಾಡುತ್ತಾರೆ. ಇದೇ ಕೊಲ್ಲಾಟ ಜನಾಂಗದ ಡಾ. ಕಿಶೋರ್ ಕಾಳೆ ಎಂಬವರು ದಶಕಗಳ ಹಿಂದೆ ಮರಾಠಿಯಲ್ಲಿ ಕೊಲ್ದಾಟ್ಯಾಚಾ ಪೋರ್ (ಕೊಲ್ಲಾಟಿಯ ಮಗ) ಎಂಬ ಆತ್ಮಕಥನವನ್ನು ಬರೆದಿದ್ದರು. ಈ ದುಷ್ಟ ಪದ್ಧತಿಯನ್ನು ತನ್ನ ಕೃತಿಯಲ್ಲಿ ನಮೂದಿಸಿದ್ದಕ್ಕಾಗಿ ಆಗ ಅವರ ಸಮುದಾಯದಿಂದಲೇ ಬಹಿಷ್ಕಾರವನ್ನು ಹಾಕಲಾಗಿತ್ತು. ಅಲ್ಲದೆ ಅವರಿಗೆ ಜೀವ ಬೆದರಿಕೆಯನ್ನೂ ಹಾಕಲಾಗಿತ್ತು. ಹೆಣ್ಣನ್ನು ಲೈಂಗಿಕ ವಸ್ತುವಾಗಿ ಮಾರಾಟ ಮಾಡುವ ಏನೆಲ್ಲಾ ಕ್ರೂರ ವ್ಯವಸ್ಥೆಗಳನ್ನು ಸಮಾಜ ತನ್ನೊಡಲಲ್ಲಿ ಅಡಗಿಸಿಟ್ಟುಕೊಂಡಿದೆ ಎಂಬುದನ್ನು ಯೋಚಿಸಿದಾಗ ಮನುಷ್ಯನ ನೀಚತನದ ಬಗ್ಗೆ ಅಸಹ್ಯ ಹುಟ್ಟುತ್ತದೆ. ಡಾ. ಕಿಶೋರ್ ಕಾಳೆಯವರು ತನ್ನ ಕೃತಿಯಲ್ಲಿ ತನ್ನ ತಾಯಿ ಶಾಂತಾಬಾಯಿ ಕಾಳೆಯೂ ಇದೇ ರೀತಿ ಮಾರಲ್ಪಟ್ಟ ಒಬ್ಬ ನತದೃಷ್ಟೆ. ಮಾಜಿ ಕಾಂಗ್ರೆಸ್ ಶಾಸಕನೊಬ್ಬ ಜೊತೆಗೂಡಿದ ಪರಿಣಾಮವಾಗಿ ಕಿಶೋರ್ ಹುಟ್ಟಿದರು. ನಂತರ ಇನ್ನೊಬ್ಬರನ್ನು ಜೊತೆಗೂಡಿದರು. ಆದರೆ ತಂದೆಯೆಂದು ಸಾರ್ವಜನಿಕವಾಗಿ ಆ ಶಾಸಕನ ಹೆಸರು ಹೇಳಲಾರದಂತಹ ಧೂರ್ತ ವ್ಯವಸ್ಥೆ ಇದು ಎಂದು ಸತ್ಯಾಂಶವನ್ನು ಹೊರಹಾಕಿದ್ದಾರೆ.

ಪಾತರದವರು

[ಸಂಪಾದಿಸಿ]

ಪಾತರದವರು

ಧರ್ಮ ಕೇಂದ್ರಿತ ಲೈಂಗಿಕ ದಾಸಿಯರಲ್ಲಿ ಜಾತಿ ಶ್ರೇಣೀಕರಣ ವ್ಯವಸ್ಥೆ ಇದೆ. ದೇವಸ್ಥಾನಗಳಲ್ಲಿ ಬೇರೆ ಬೇರೆ ಸೇವೆಗೆ ನಿಯುಕ್ತಿಗೊಂಡ ದೇವದಾಸಿಯರಿದ್ದರು. ಹಾಗೆಯೇ ಕಲಾ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡ ಒಂದು ವರ್ಗವನ್ನು ಪಾತರದವರು ಎಂದು ಕರೆಯುತ್ತಾರೆ. ರಾಜಶಾಹಿ ಮತ್ತು ಪುರೋಹಿತಶಾಹಿಗಳು ತಮ್ಮ ಸ್ವಾರ್ಥಕ್ಕಾಗಿ ರೂಪಿಸಿಕೊಂಡ ಸಂಪ್ರದಾಯವಿದು. ಆರ್ಥಿಕವಾಗಿ ಸಬಲ ರಾದ ಸಮುದಾಯ ಅಂದರೆ ಮೇಲ್ವರ್ಗದ ಮಹಿಳೆಯರು ಈ ವೃತ್ತಿಗೆ ಬರುತ್ತಿರಲಿಲ್ಲ. ದುರ್ಬಲ ವರ್ಗದ ಹಿಂದುಳಿದ ಸಮುದಾಯದ ಮಹಿಳೆಯರನ್ನು ಈ ಸೇವೆಗೆ ತಳ್ಳುತ್ತಿದ್ದರು. ಕರ್ನಾಟಕದಲ್ಲಿ ರೂಢಿಯಲ್ಲಿದ್ದ ಪಾತರ ಎಂಬ ಸೇವೆಯ ಬಗ್ಗೆ ಡಾ. ಶೈಲಜ ಹಿರೇಮಠ ಅವರು ಸಂಶೋಧನೆ ಮಾಡಿ ಪಾತರದವರು ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಕನ್ನಡ ವಿಶ್ವವಿದ್ಯಾಲಯ ಹಂಪಿಯ ಪ್ರಸಾರಾಂಗವು 1999ರಲ್ಲಿ ಈ ಪುಸ್ತಕವನ್ನು ಪ್ರಕಟಿಸಿದೆ. ದೇವರೆದುರಿಗೆ ತನ್ನ ಪಾತ್ರಗಳಾದ ನೃತ್ಯ ಹಾಡುಗಳ ಮೂಲಕ ಜನಸಮುದಾಯದ ನಿವೇದನೆಯನ್ನು ತಿಳಿಯಪಡಿಸುವವಳು ಪಾತರದವಳು. ನಟುವರು ಮತ್ತು ಪಾತರದವರು ಇದೇ ರೀತಿಯ ಸೇವೆಯನ್ನು ಸಲ್ಲಿಸಲು ನಿಯುಕ್ತಿಗೊಂಡಿರುತ್ತಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಪುರಾತನ ಹಿಂದೂ ಸಂಪ್ರದಾಯದಲ್ಲಿ ಲೈಂಗಿಕ ಸೇವೆ ಗಾಗಿ ನೇಮಕಗೊಂಡವರಲ್ಲಿ ಏಳು ಬಗೆಯ ದಾಸಿಯರಿದ್ದಾರೆ.

1. ದತ್ತ ಅಂದರೆ ತನ್ನನ್ನು ತಾನೇ ದೇವಸ್ಥಾನಕ್ಕೆ ಅರ್ಪಿಸಿಕೊಂಡವಳು. 2. ವಿಕೃತ = ತನ್ನನ್ನು ಅದೇ ಉದ್ದೇಶಕ್ಕಾಗಿ ಮಾರಿಕೊಳ್ಳು ವವರು. 3. ಕೃತ = ಕುಟುಂಬದ ಕಲ್ಯಾಣಕ್ಕಾಗಿ ತನ್ನನ್ನು ತಾನು ಸೇವಕಿ ಎಂದು ಸಮರ್ಪಿಸಿಕೊಳ್ಳುವವಳು. 4. ಭಕ್ತಿ = ಭಕ್ತಿಯಿಂದ ಸೇವೆ ಮಾಡುವವಳು. 5. =ಹೃತ ಆಮಿಷಗಳನ್ನು ತೋರಿಸಿ ದೇವಾಲಯಗಳಿಗೆ ಅರ್ಪಿಸಿದ ಸೇವಕಿ. 6. ಅಲಂಕಾರಾ = ಅಲಂಕಾರದಲ್ಲಿ ನಿಪುಣೆಯಾದವಳು. ರಾಜರು ಇಂತಹವರನ್ನು ದೇವಸ್ಥಾನಕ್ಕೆ ದಾನ ಮಾಡುತ್ತಿದ್ದರು. 7. ರುದ್ರಗಣಿಕಾ ಅಥವಾ ಗೋಪಿಕಾ = ದೇವಾಲಯಗಳಲ್ಲಿ ಸಂಗೀತ, ನೃತ್ಯ ಸೇವೆಗಾಗಿಯೇ ನೇಮಕಗೊಂಡವಳು, ಇವಳಿಗೆ ಈ ಸೇವೆಗಾಗಿ ಪ್ರತಿ ತಿಂಗಳು ವೇತನವಿತ್ತು (ಎಡ್ಗರ್ ಫರ್ಸ್ಟ್ನ್, 1987 ಪುಟ 125)

ಈ ಕೊನೆಯ ವರ್ಗಕ್ಕೆ ಸೇರಿದವಳೇ ಪಾತರದವಳು. ದೇವರ ಪ್ರೀತಿಗಾಗಿ ಸಂಗೀತ ಸೇವೆ ಸಲ್ಲಿಸುವವರನ್ನು ಶಾಸನಗಳು ಓಲಗದ ಸೂಳೆಯರು ಎಂದು ಕರೆಯುತ್ತದೆ. ದಕ್ಷಿಣ ಸೋಮೇಶ್ವರ ಮಧುಸೂದನ, ಕೇತಲೇಶ್ವರ, ಶ್ರೀ ಪತಿನಾಯಕ, ಹರಪನಹಳ್ಳಿ, ಬೇಲೂರು, ಹಳೇಬೀಡು, ಚಿನ್ನ ತುಂಬಳ, ನಾಗಾವಿ, ಶಿರಗುಪ್ಪ, ಕುಕನೂರು, ಲಕ್ಷೇಶ್ವರ, ಸಿಂದಗಿ, ಅಕ್ಕಿವಾಟ, ತೇರದಾಳ ಮುಂತಾದ ಊರಿನ ದೇವಸ್ಥಾನಗಳಲ್ಲಿ ಗಾಯಕಿಯರು ಸೇವೆಸಲ್ಲಿಸುತ್ತಿದ್ದ ದಾಖಲೆಗಳಿವೆ. ಕ್ರಿ.ಶ. 975ರ ಶಾಸನವೊಂದರಲ್ಲಿ ಐವರು ಸೂಳೆಯರಿಗೆ ಒಂದು ಪಾತ್ರಕ್ಕೆ ಪ್ರತ್ಯೇಕವಾದ ದಾನವನ್ನು ಕೊಟ್ಟ ಉಲ್ಲೇಖವಿದೆ. ಪಾತ್ರವು ಸಂಗೀತ ನೃತ್ಯಕಲೆಗಳಲ್ಲಿ ಪರಿಣತಿ ಹೊಂದಿದ ವರ್ಗವನ್ನು ಸೂಚಿಸಿದರೆ ಸೂಳೆ ಪದವು ಲೈಂಗಿಕ ದಾಸಿಯರನ್ನು ಸೂಚಿಸುತ್ತದೆ. 10ನೆಯ ಶತಮಾನದವರೆಗೆ ಪಾತ್ರ ಮತ್ತು ಸೂಳೆ ಭಿನ್ನ ಪದಗಳಾಗಿದ್ದು ಬಳಿಕ ಪಾತ್ರದೊಂದಿಗೆ ಸೂಳೆ ಪದವು ಸಮಾನಾರ್ಥಕವಾಗಿ ಬಳಕೆಗೊಂಡಿರಬೇಕು, ಲೈಂಗಿಕ ಸೇವೆ ಅವಳ ಪ್ರಧಾನ ವೃತ್ತಿಯಲ್ಲ. ಆದರೆ ಅವರು ವಿವಾಹ ಬಾಹಿರವಾಗಿ ಏಕ ವ್ಯಕ್ತಿಯೊಂದಿಗೆ ಲೈಂಗಿಕ ಒಪ್ಪಂದ ಮಾಡಿಕೊಂಡು ದೀರ್ಘಕಾಲ ಬದುಕುತ್ತಿದ್ದರು. ಪಾತರದವರಿಗೆ ಕಲೆಯೇ ಬಂಡವಾಳವಾದರೆ, ಬಸವಿಯರಿಗೆ ದೇಹವೇ ಬಂಡವಾಳವಾಗಿತ್ತು. ಸ್ಪರ್ಶಕ್ಕೆ ಅರ್ಹತೆಯುಳ್ಳ ಮಧ್ಯಮ ಜಾತಿಯ ಮಹಿಳೆಯರೇ ಪಾತರದವರಾಗಿ ಸೇವೆ ಸಲ್ಲಿಸುತ್ತಿದ್ದರು. ಪಾತರದವರನ್ನು ಊರ ಪ್ರಮುಖರು ಆಯ್ಕೆಮಾಡಿ ದೇವಸ್ಥಾನಕ್ಕೆ ಅರ್ಪಿಸುತ್ತಿದ್ದರು. ಬಸವಿಯರನ್ನು ಹರಕೆಯ ಮೂಲಕವೋ, ಸಂಪ್ರದಾಯದ ಮೌಡ್ಯಕ್ಕೆ ದಾಸರಾಗಿಯೋ ದೇವಸ್ಥಾನಕ್ಕೆ ಅರ್ಪಿಸಲ್ಪಡುತ್ತಾರೆ. ಪಾತರದವರು ದೇವಸ್ಥಾನದಲ್ಲಿ ಗಂಡಾಕಟ್ಟಿಸಿಕೊಂಡು ದೇವಸ್ಥಾನಕ್ಕೆ ಸೇವೆಗೆ ಅವಕಾಶ ಪಡೆಯುತ್ತಿದ್ದರು. ಬಸವಿಯರು ಮುತ್ತು ಕಟ್ಟಿಸಿಕೊಂಡು ದೇವಸ್ಥಾನದ ಸೇವೆಗೆ ಪ್ರವೇಶಿಸುತ್ತಿದ್ದರು. ಪಾತರದವಳ ವಿವಾಹ ಹಿರಿಯ ಪಾತರದವಳೊಂದಿಗೆ ನಡೆಯುತ್ತಿತ್ತು. ಬಸವಿಯರ ವಿವಾಹವು ಎಲ್ಲಮ್ಮ ದೇವಿ ಎಂದು ಪರಿಗಣಿಸುವ ಕೊಡದೊಂದಿಗೆ ನಡೆಯುತ್ತದೆ. ವಿವಾಹದ ಸಂದರ್ಭದಲ್ಲಿ ಜೋಗಾ ಬೇಡಲು ಬಸವಿಯರಿಗೆ ಪರಡಿಯನ್ನು ನೀಡುತ್ತಾರೆ. ಪಾತರದವರಿಗೆ ನೀಡುವ ಕ್ರಮವಿಲ್ಲ. ಪಾತರದವರು ಬಸವಿಯರಿಗಿಂತ ಆರ್ಥಿಕವಾಗಿ ಮೇಲುಸ್ತರದಲ್ಲಿದ್ದರು. ಪಾತರ ಮತ್ತು ಬಸವಿ ಸಂಪ್ರದಾಯವು ವಂಶ ಪಾರಂಪರವಾಗಿ ಮುಂದುವರಿಯುತ್ತದೆ. ಇವರಲ್ಲಿ ಮಾತೃ ಮೂಲ ಕುಟುಂಬದ ಪದ್ಧತಿ ಇದೆ. ವಿವಾಹ ಸಂಸ್ಥೆಗೆ ಬಾಹಿರರಾಗಿಯೇ ಇವರು ಜೀವನ ನಡೆಸುತ್ತಿದ್ದರು. ಇವರಿಗೆ ವಿವಾಹಕ್ಕೆ ಅವಕಾಶವಿಲ್ಲ. ಹೀಗೆ ಇವರಲ್ಲಿ ಭಿನ್ನತೆ ಇದ್ದರೂ ಶೋಷಣೆಯ ಮೂಲ ಒಂದೇ ಆಗಿದೆ. ಲೈಂಗಿಕ ದಾಸಿಯರನ್ನು ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಬಳಸಿಕೊಳ್ಳುವುದಕ್ಕೆ ಪುರುಷ ಪ್ರಧಾನ ವ್ಯವಸ್ಥೆಯು ಈ ತಂತ್ರವನ್ನು ರೂಪಿಸಿತು. ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯನ್ನು ಪುರುಷರ ಕಾಮದಾಹಕ್ಕಾಗಿಯೇ ಬಳಸಿಕೊಳ್ಳುವುದಕ್ಕೆ ಧರ್ಮ ದೇವರ ಸಮ್ಮತಿಯನ್ನು ತಾವೇ ಕೊಟ್ಟುಕೊಂಡು ಮೆರೆದರು. ಪುರಾಣ ಮತ್ತು ಕಾವ್ಯಗಳಲ್ಲಿ ದೇವಸ್ಥಾನದ ನರ್ತಕಿಯರ ಉಲ್ಲೇಖಗಳು ಸಿಗುತ್ತವೆ. ಕೌಟಿಲ್ಯನ ಅರ್ಥ ಶಾಸ್ತ್ರದಲ್ಲಿ ಗಣಿಕೆಯರ ಪ್ರಸ್ತಾಪಗಳಿವೆ. ನರ್ತಕಿಯರನ್ನು ಗಾಯಕಿಯರನ್ನು ದೇವಸ್ಥಾನಕ್ಕೆ ಅರ್ಪಿಸುವುದು ಪುಣ್ಯದ ಕೆಲಸವೆಂದು ಪುರಾಣಗಳು ಸಾರಿದವು. ಗುಜರಾತದ ಸೋಮನಾಥ ದೇವಸ್ಥಾನದಲ್ಲಿ 500 ಮಂದಿ ನರ್ತಕಿಯರಿದ್ದರೆಂದೂ ಉಲ್ಲೇಖಗಳಿವೆ. ಹುಯೆನ್ ತ್ಸಾಂಗನು ಮುಲ್ತಾನಿನ ಸೂರ್ಯ ದೇವಸ್ಥಾನದಲ್ಲಿ ಹಲವಾರು ಮಂದಿ ಗಾಯಕಿಯರನ್ನು ಕಂಡೆನೆಂದು ತನ್ನ ಪ್ರವಾಸ ಕಥನದಲ್ಲಿ ಬರೆದಿದ್ದಾನೆ. ಹಾಗೆಯೇ ವಿಜಯ ನಗರ ಸಾಮ್ರಾಜ್ಯಕ್ಕೆ ಭೇಟಿಕೊಟ್ಟ ಪ್ರವಾಸಿಗಳಾದ ಬರ್ಬೊಸಾ, ಪಾಯಿಸ್, ನ್ಯೂನಿಚ್ ಮುಂತಾದವರು ದೇವಸ್ಥಾನದಲ್ಲಿ ನರ್ತಕಿಯರು ಸೇವೆ ಸಲ್ಲಿಸುತ್ತಿದ್ದುದನ್ನು ಉಲ್ಲೇಖಿಸುತ್ತಾರೆ. ದೇವಸ್ಥಾನದ ಹೊರ ಆವರಣಗಳಲ್ಲಿ ನೃತ್ಯದ ವಿವಿಧ ಭಂಗಿಗಳನ್ನು ಕೆತ್ತಲಾಗಿತ್ತು. ದೇವಸ್ಥಾನಗಳ ರಂಗ ಮಂಟಪಗಳು ನರ್ತನ ಸೇವೆಗಾಗಿಯೇ ಕಟ್ಟಲ್ಪಟ್ಟಿದ್ದುವು.

ಉತ್ತರ ಭಾರತದಲ್ಲಿ ಮುಸ್ಲಿಂ ರಾಜರ ಆಡಳಿತಕ್ಕೆ ಒಳಪಟ್ಟಾಗ ಕೆಲವು ದೇವಾಲಯಗಳು ಸಾಮಾಜಿಕ ಹಿಡಿತವನ್ನು ಕಳೆದುಕೊಂಡವು. ಔರಂಗಜೇಬನು ದೇವಾಲಯಗಳಲ್ಲಿ ನಡೆಯುವ ಸಂಗೀತ, ನರ್ತನ ಸೇವೆಯನ್ನು ವಿರೋಧಿಸಿ ಕಾನೂನು ಮೂಲಕ ಅದನ್ನು ನಿಲ್ಲಿಸಿದನು. ದೇವಸ್ಥಾನದ ಈ ಸ್ತ್ರೀಯರಿಗೆ ವಿವಾಹವಾಗುವಂತೆ ಆಜ್ಞೆ ಮಾಡಿದನು. ಅದನ್ನು ವಿರೋಧಿಸಿದವರನ್ನು ತನ್ನ ರಾಜ್ಯದಿಂದಲೇ ಹೊರಹಾಕಿದನೆಂದು ಇಲಿಯಟ್ ಎಂಬ ಇತಿಹಾಸಕಾರ ದಾಖಲಿಸಿದ್ದಾನೆ. ದೇವಸ್ಥಾನದಿಂದ ಹೊರ ಹಾಕಲ್ಪಟ್ಟು ಆಮೇಲೆ ನರ್ತಕಿಯರಾಗಿ ಸೇವೆ ಸಲ್ಲಿಸಿದರು. ಇವರೇ ರಾಜರ ವಿಲಾಸಿ ಜೀವನದ ವಸ್ತುಗಳಾಗಿ ನಾಚ್‌ವಾಲಿಗಳಾಗಿ ಮತ್ತೊಂದು ರೀತಿಯ ಶೋಷಣೆಗೆ ಒಳಗಾಗಬೇಕಾಯಿತು. ಉತ್ತರ ಭಾರತ ಮತ್ತು ಮಧ್ಯ ಭಾರತದಲ್ಲಿ ಪಾತರ ಸಂಪ್ರದಾಯ ಎಲ್ಲಾ ಕಡೆ ದಟ್ಟವಾಗಿತ್ತು. ಕರ್ನಾಟಕದಾದ್ಯಂತ ಈ ಸಂಪ್ರದಾಯ ಪಸರಿಸಿತ್ತು.

ಡಾ. ಶೈಲಜಾ ಹಿರೇಮರ್ ಅವರು ಪಾತರದವರನ್ನು ಸಂದರ್ಶಿಸಿ ಈ ವೃತ್ತಿಯಲ್ಲಿದ್ದವರ ಅಂತರಂಗದ ಮಾತುಗಳಿಗೆ ಧ್ವನಿಯಾಗಿದ್ದಾರೆ. ಗಂಗಾಸಾನಿ, ರಂಗಾಸಾನಿ ಮುಂತಾದ ಹಲವಾರು ಮಂದಿ ಪಾತರದವರನ್ನು ಹುಡುಕಿ ಸಂದರ್ಶಿಸಿದರು. ವಿಶೇಷವೆಂದರೆ ಮುಸ್ಲಿಂ ಧರ್ಮದ ಹೆಣ್ಣುಮಕ್ಕಳು ಪಾತರದವರಾಗಿ ಸೇವೆ ಸಲ್ಲಿಸಿದ್ದು ಗಮನಾರ್ಹ. ಗುಲಾಬ್‌ಸಾನಿ, ನೂರ್‌ಜಹಾನ್, ಫಯಾಜ್, ಅಮೀನಾ ಮನ್ನು ಮಾತಾ ಮುಂತಾದವರು ಈ ಸೇವೆಯನ್ನು ವಂಶ ಪಾರಂಪರವಾಗಿ ಸಲ್ಲಿಸುತ್ತಾ ಬಂದಿದ್ದರು. ಪಾತರದ ವಿಧಿಯನ್ನು ಹೇಗೆ ಮಾಡುತ್ತಾರೆ ಎಂಬುದನ್ನು ಗೋಹರಜಾನ್ ತಾಯಿ ರಾಜಮಾ ವಿವರಿಸಿದ್ದು ಹೀಗೆ.

"ಮದುವೆಯ ಹಿಂದಿನ ದಿನ ದೇವಕಾರ ಮಾಡುವರು. ಅಂದು ಹಿಂದೂ ಮತ್ತು ಮುಸ್ಲಿಂ ಸಮುದಾಯದ ಮುತ್ತೈದೆಯರನ್ನು ಕರೆದು ಹಸಿರು ಬಳೆ ಹಾಕಿಸುವರು, ಅರಿಶಿನ ಸ್ನಾನ ಮಾಡಿಸುವರು. ಬಲಭಾಗದ ಹಲ್ಲುಗಳಿಗೆ ಮೂರು ಬಾರಿ ಮತ್ತು ಎಡ ಭಾಗದ ಹಲ್ಲುಗಳಿಗೆ ಎರಡು ಬಾರಿ ಹಲಪ್ಪನ್ನು ನಮ್ಮ ಜನಾಂಗದ ಹಿರಿಯ ಮಹಿಳೆಯು ಗೋಹರ್‌ಜಾನ್‌ಗೆ ಹಚ್ಚುತ್ತಾರೆ.

ಐವರು ಮುತ್ತೈದೆಯರನ್ನು ಪೂಜೆ ಮಾಡಿದರು. ಇವರಿಗೆ ಮಾದರಿಯನ್ನು (ಮಡಿಯಿಂದ ಮಾಡಿದ ಒಂದು ಸಿಹಿ ತಿಂಡಿ) ಹಾಕಿ ಎಡೆಯ ಮೇಲೆ ಎಲೆಯಡಿಕೆ, ಅರಿಶಿಣ, ಕುಂಕುಮ, ಜಾತಿ, ಸುರಮಾ, ಚಮಕಿಯನ್ನು ಇಟ್ಟಿದ್ದರು. ಈ ಎಡೆಯನ್ನು ಪಡೆದುಕೊಂಡ ಮುತ್ತೈದೆಯರು ದೀರ್ಘ ಸುಮಂಗಲಿಯಾಗುವಳೆಂಬ ನಂಬಿಕೆ ಇದ್ದುದರಿಂದ ಎಲ್ಲರೂ ನಾಮುಂದು, ತಾಮುಂದು ಎಂದು ಈ ಸಮಾರಂಭಕ್ಕೆ ಬರುತ್ತಿದ್ದರು. ಆ ನಂತರ ದೇವರ ಎಡೆಯೆಂದು ಶಂಕರಲಿಂಗ ದೇವಸ್ಥಾನಕ್ಕೆ ಮತ್ತು ನಮ್ಮ ಮುಸ್ಲಿಂ ದೇವರಿಗೆ ಕೊಟ್ಟು ಕಳುಹಿಸಿದರು. ಮರುದಿನವೇ ತಾಳಿ ಕಟ್ಟುವ ಕಾಠ್ಯಕ್ರಮ, ಕೈಯಲ್ಲಿ ಖಡ್ಗ ಹಿಡಿದು ಹಿರಿಯ ಪಾತರದವಳು ಕುಳಿತಿದ್ದಳು. ರೇಷ್ಮೆ ಸೀರೆಯುಟ್ಟು ಮದುಮಗಳಂತೆ ಸಿಂಗರಿಸಿ ಕೂತ ಗೊಹರ್‌ಜಾನ್ ಅವಳ ಎಡಭಾಗದಲ್ಲಿ ಬಂದು ಕುಳಿತಳು. ನಮ್ಮ ಪಾತರ ಜನಾಂಗದ ಹಿರಿಯ ವ್ಯಕ್ತಿ ಮಂತ್ರ ಹೇಳಿದನು. ಖಡ್ಗ ಹಿಡಿದುಕೊಂಡು ಕುಳಿತ ಹಿರಿಯ ಪಾತರದವಳು ಗೊಹರ್‌ಜಾನ್ ಕೊರಳಿಗೆ ತಾಳಿ ಕಟ್ಟಿದ್ದಳು. ಅಂದಿನಿಂದ ಅವಳ ಸಂಗೀತ ಶಿಕ್ಷಣ ಪ್ರಾರಂಭವಾಗುತ್ತದೆ. ಅಲ್ಲಿಗೆ ಮದುವೆಯ ಎಲ್ಲಾ ಕಾಠ್ಯಕ್ರಮಗಳು ಮುಗಿದಂತೆ, ತಾಳಿ ಕಟ್ಟಿಸಿಕೊಂಡ ದಿನದಂದು ಗೊಹರ್‌ಜಾನ್ ಶಂಕರಲಿಂಗ ದೇವಸ್ಥಾನಕ್ಕೆ ಹೋಗಿ ಬರಬೇಕಾಗಿತ್ತು." ಈ ತಾಳಿಕಟ್ಟುವ ಕಾರ್ಯಕ್ರಮವಾಗುವಾಗ ಗೊಹರ್‌ಜಾನ್‌ಗೆ ಒಂಬತ್ತು ವರ್ಷ. ಅಂದಿನಿಂದ ಯೋಗ್ಯಗುರುವಿನಿಂದ ಸಂಗೀತ ಮತ್ತು ನೃತ್ಯಕಲೆಯ ಶಿಕ್ಷಣ ಕೊಡಿಸುತ್ತಿದ್ದರು. ಆ ಬಳಿಕ ನಡೆಯುವ ಕಾರ್ಯಕ್ರಮಗಳು ಹೇಗಿವೆ ಎಂದು ಅಲ್ಲಾಸಾನಿ ವಿವರಿಸಿದಳು. "ಗಂಡು ಇಲ್ಲದೆ ನಡೆಯುವ ಈ ಮದುವೆಯನ್ನು 'ಕಾರಣ' ಇಲ್ಲವೇ 'ಹೆಣ್ಣು ಮಾಡುವುದು' ಎಂದು ಕರೆಯುವರು. ಮುಂದೆ ನನ್ನೊಂದಿಗೆ ವಿವಾಹಬಾಹಿರವಾಗಿ ಕೂಡ ಬಯಸುವವನೇ ಅಂದಿನ ನನ್ನ 'ಕಾರಣ'ದ ಎಲ್ಲ ಖರ್ಚನ್ನು ನೋಡಿಕೊಳ್ಳ ಬೇಕಾಗಿತ್ತು. ಆಗಿನ ಕಾಲದಲ್ಲಿ ನನ್ನ 'ಕಾರಣ'ಕ್ಕೆ ಸಾವಿರ ರೂಪಾಯಿ ಮೇಲ್ಪಟ್ಟು ಖರ್ಚಾಗಿತ್ತು. ಚೊಣ್ಣದ ಕಾರ್ಯ, ಹಲ್ಕಟ್ಟಿನ ಕಾರ, ಸೋಬನ ಕಾವ್ಯ ಹೀಗೆ ಮೂರುಕಾರಗಳೊಂದಿಗೆ ಮೂರು ದಿನಗಳವರೆಗೆ ವಿವಾಹ ನಡೆಯುತ್ತಿತ್ತು. 'ಚೊಣ್ಣದ ಕಾರ'ದಲ್ಲಿ ಪೈಜಾಮ ಅಂಗಿ ತೊಡಿಸಿ ಸಂಗೀತ ವಾದ್ಯಗಳಾದ ತಂಬೂರಿ ತಬಲಾ, ಹಾಮ್ಮೋನಿಯಂ ಪೆಟ್ಟಿಗೆಯ ಜೊತೆಗೆ 'ಕಾರಣ' ಮಾಡುತ್ತಿದ್ದರು. ಅದಕ್ಕೆ 'ಗಂಡಾ ಕಟ್ಟುವುದು' ಎನ್ನುವರು. ತಾಳಿ ಕಟ್ಟುವ ಸಂದರ್ಭದಲ್ಲಿ ಊರಿನ ಪಂಚರು ಹಾಡುತ್ತಾರೆ. ಅವರು ಪಾತರ ಜನಾಂಗದವರೇ ಆಗಿರುತ್ತಾರೆ. ಅವರ ಹಾಡೇ ಮದುವೆಗೆ ಮಂತ್ರವಾಗಿತ್ತು. ಅದು ತತ್‌ತಾ.. ತಕದಿಮ್‌ತಾ.... ಎಂದು ಪ್ರಾರಂಭವಾಗುತ್ತದೆ. ಆ ಹಾಡಿನ ನಂತರ ನಮಗೆ ಹಿರಿಯ ಪಾತರದವಳು ತಾಳಿ ಕಟ್ಟುವಳು. 'ಹಲ್ಲಿಟ್ಟಿನ ಕಾವ್ಯ'ದಲ್ಲಿ ಹಲ್ಲಿಟ್ಟನ್ನು ಹಚ್ಚಿ ಸಂಗೀತ ವಾದ್ಯಗಳೊಂದಿಗೆ ವಿವಾಹ ಮಾಡುತ್ತಿದ್ದರು. ಮುಂಭಾಗದ ಹಲ್ಲುಗಳನ್ನೊಳಗೊಂಡಂತೆ ಬಲಭಾಗದ ಮತ್ತು ಎಡಭಾಗದಲ್ಲಿ ಐದು ಸಲ ಹಲ್ಲಿಟ್ಟನ್ನು ಹಚ್ಚಿ ಕಾವ್ಯ ಮಾಡಿದರು.

'ಹೆಣ್ಣು ಮಾಡುವ ಕಾರ'ದ ಮಡಿಯನ್ನು ಮುಂದೆ ನನ್ನೊಂದಿಗಿರುವ ವ್ಯಕ್ತಿಯೇ ತರಬೇಕಾಗುತ್ತಿತ್ತು. ಕೆಂಪು ವರ್ಣದ ಸೀರೆ ತಂದಿದ್ದ, ನನ್ನಂತೆ ಇರುವ ಮತ್ತೊಬ್ಬ ಪಾತರದ ಹಿರಿಯ ಮಹಿಳೆಗೆ ಗಂಡಸಿನ ವೇಷ ಹಾಕಿ, ಆಕೆಯ ಕೈಯಲ್ಲಿ ಕತ್ತಿಯನ್ನು ನೀಡಿದ್ದರು. ನನ್ನದು ಅವಳೊಂದಿಗೆ ಎಲ್ಲ ಸಂಪ್ರದಾಯಸ್ಥ ವಿವಾಹ ವಿಧಿ ವಿಧಾನಗಳಂತೆ 'ಕಾರಣ' ಮುಗಿದು ಹೋಯಿತು.... ಪ್ರಸ್ತ ಮನೆಯಲ್ಲೇ ನಡೆಯಿತು. ನಮ್ಮ ಮೊದಲ ಪ್ರಸ್ತಕ್ಕೆ ಬರುವ ವ್ಯಕ್ತಿಯೊಡನೆ ಜೀವಮಾನವಿಡೀ ಧರ್ಮಪತ್ನಿಯ ಹಾಗೆ ಜೀವನ ಸಾಗಿಸುತ್ತಿದ್ದೆವು. ಆತನ ಧರ್ಮ ಪತ್ನಿ ಮತ್ತು ನಾನು ಒಡಹುಟ್ಟಿದವರಂತೆ ಇದ್ದೆವು. ನನಗೆ ಮಕ್ಕಳಾಗಲಿಲ್ಲ. ಅವಳ ಮಕ್ಕಳನ್ನು ನನ್ನ ಮಕ್ಕಳಂತೆ ಮುದ್ದಿಸುತ್ತಿದ್ದೆನು. ಸಮಾಜದವರು ನಮ್ಮನ್ನು ಗೌರವದಿಂದ ಕಾಣುತ್ತಿದ್ದರು. ಆದರೆ ಈಗ ಸಮಾಜ ನಮ್ಮನ್ನು ನೋಡುವ ದೃಷ್ಟಿಯೇ ನಮ್ಮನ್ನು ಇರಿಯುತ್ತದೆ" ಎಂದು ಹೇಳಿ ಅಲ್ಲಾಸಾನಿ ದೀರ್ಘವಾದ ಮೌನವನ್ನು ತಾಳಿದಳು.

ಈ ಹಿಂದೂ ಮುಸ್ಲಿಂ ಹೆಣ್ಣು ಮಕ್ಕಳು ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುವುದಕ್ಕೆ ವಂಶ ಪಾರಂಪರವಾಗಿ ಉಂಬಳಿ ನೀಡುತ್ತಿದ್ದರು. ಈ ವೃತ್ತಿಯನ್ನು ನಿಲ್ಲಿಸಿದರೆ ಆ ಜಮೀನನ್ನು ದೇವಸ್ಥಾನಕ್ಕೆ ಹಿಂತಿರುಗಿಸಬೇಕಾಗಿತ್ತು. ಆದುದರಿಂದ ಅದನ್ನು ಉಳಿಸಲು ಮಕ್ಕಳಿಲ್ಲದ ಪಾತರದವರು ಹೆಣ್ಣು ಮಕ್ಕಳನ್ನು ದತ್ತಕ ಪಡೆದು ಅವರನ್ನು ಈ ಸೇವೆಗೆ ದೂಡುತ್ತಿದ್ದರು. ಮುಸ್ಲಿಂ ಪಾತರದವರು ದೇವಸ್ಥಾನದಲ್ಲಿ ಮಾತ್ರವಲ್ಲ ಮಸೀದಿಯಲ್ಲೂ ಸಂಗೀತ ಸೇವೆ ನೀಡುತ್ತಿದ್ದರು. ತಾವು ನಂಬಿದ ಧರ್ಮಕ್ಕೆ ವಿರುದ್ಧವಾಗಿದ್ದರೂ ಹಿಂದೂ ಮುಸ್ಲಿಮರು ಅದನ್ನು ಯಾವುದೇ ಭೇದಭಾವವಿಲ್ಲದೆ ಸ್ವೀಕರಿಸುವ ಮನೋಭಾವವನ್ನು ಹೊಂದಿದ್ದರು. ಈಗ ಪಾತರದವರ ಸಂಪ್ರದಾಯವೇ ನಿಂತು ಹೋಗಿದೆ. ಕಳೆದ ಶತಮಾನಗಳಲ್ಲಿ ಧಾರ್ಮಿಕ ಲೈಂಗಿಕ ದಾಸಿಯರನ್ನು ಹಿಂದೂ ಮುಸ್ಲಿಂ ದೇವರುಗಳು ಸಹಿಸಿಕೊಂಡಿದ್ದುದನ್ನು ಈ ಶತಮಾನದಲ್ಲಿ ನಿಂತುಕೊಂಡು ನೋಡಿದಾಗ ಆಶ್ಚರ್ಯವೆನಿಸುತ್ತದೆ.

ಈ ಪಾತರದ ಸಮುದಾಯದಿಂದ ಬಂದ ಕೆಲವು ಹೆಣ್ಣು ಮಕ್ಕಳು ಈಗ ನಾಟಕ, ಸಂಗೀತ ಮತ್ತು ಸಿನಿಮಾ ಕ್ಷೇತ್ರಗಳಲ್ಲಿ ಅವಕಾಶ ಪಡೆದುಕೊಂಡು ಪ್ರಸಿದ್ಧರಾಗಿದ್ದಾರೆ. ಒಂದು ಕಾಲದಲ್ಲಿ ಸಮಾಜದಲ್ಲಿ ಗೌರವದ ಸ್ಥಾನವನ್ನು ಪಡೆದ ಇವರು ಕಳೆದ ಶತಮಾನದಲ್ಲಿ ನಡೆದ ನಾಚ್ ವಿರೋಧಿ ಚಳುವಳಿಯಿಂದಾಗಿ ಅವರ ಕಲೆಯು ನಿಂದೆಗೊಳಗಾಯಿತು. ಹಿಂದೆ ಪುರೋಹಿತಶಾಹಿ ಮತ್ತು ಪ್ರಭುತ್ವವು ಇವರನ್ನು ಪೋಷಿಸುತ್ತಾ ಬಂದಿತ್ತು. ಬ್ರಿಟಿಷರ ಕಾಲದಲ್ಲಿ ಉಂಟಾದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಸ್ಥಿತ್ಯಂತರಗಳು ಅವರ ನೈತಿಕತೆಯನ್ನು ಬಯಲಿಗೆಳೆಯಿತು. ದೇವಾದಾಯ ತಪ್ಪಿ ಬೀದಿಗೆ ಬೀಳುವ ಪರಿಸ್ಥಿತಿಯುಂಟಾಯಿತು. ಕೆಲವರು ತಾವು ಕಲಿತ ಸಂಗೀತ ಮತ್ತು ನೃತ್ಯವನ್ನು ವೃತ್ತಿಯಾಗಿ ಸ್ವೀಕರಿಸಿ ಪ್ರದರ್ಶನ ನೀಡತೊಡಗಿದರು. 1927ರಲ್ಲಿ ಮೈಸೂರು ಸರಕಾರವು ಪಾತರ ಪದ್ಧತಿಯನ್ನು ಮುಂದುವರಿಸುವವರು ಶಿಕ್ಷಾರ್ಹರು ಎಂಬ ಕಾನೂನು ಜಾರಿಗೊಳಿಸಿತು. ಹೆಚ್ಚು ಕಡಿಮೆ ಇಡೀ ದೇಶದಲ್ಲೇ ಈ ಪದ್ಧತಿಯ ಬಗ್ಗೆ ಪರ ವಿರೋಧಿ ಚಳುವಳಿ ನಡೆಯಿತು. ಭಾರತದ ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ಮತ್ತು ಸ್ವಾತಂತ್ರ್ಯದ ನಂತರವೂ ಈ ಸೇವೆಯನ್ನು ನಿಲ್ಲಿಸಲಾಯಿತು.

ಯಾವ ಕಾನೂನುಗಳು ಬಂದರೂ ಮನುಷ್ಯನ ಮೂಲಭೂತ ವಾಸನೆಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲವಲ್ಲಾ. ರಾಜನ ಆಸ್ಥಾನ, ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಈ ಸೇವೆಗಳು ಶ್ರೀಮಂತರ ಬಂಗಲೆಗಳಲ್ಲಿ, ದೊಡ್ಡ ದೊಡ್ಡ ಹೊಟೇಲುಗಳಲ್ಲಿ "ತವಾಯಿಪ್' ಎಂಬ ಹೆಸರಿನಲ್ಲಿ ಪ್ರಾರಂಭವಾಯಿತು. ಅದರ ಪರಿಷ್ಕೃತರೂಪವಾಗಿ ಕ್ಯಾಬರೆಗಳು, ಹೊಟೇಲುಗಳಲ್ಲಿ ಲೈವ್ ಬ್ಯಾಂಡ್‌ಗಳು ನಡೆಯತೊಡಗಿದವು. ಈ ಪಾತರದವರು ವಿಶೇಷ ಸಂದರ್ಭಗಳಲ್ಲಿ ಆಹ್ವಾನಿತ ಅತಿಥಿಗಳ ಮುಂದೆ, ಮದುವೆ ಸಮಾರಂಭಗಳಿಗೆ ಆಮಂತ್ರಿತರಾಗಿ ಪ್ರದರ್ಶನ ನೀಡುವುದರಿಂದಲೂ ಸ್ವಲ್ಪ ಮಟ್ಟಿನ ಹಣ ಗಳಿಕೆ ಮಾಡತೊಡಗಿದರು. ನೃತ್ಯಶಾಲೆ, ಸಂಗೀತ ಶಾಲೆಗಳನ್ನು ತೆರೆದರು. ಇದಕ್ಕೆ ಮೇಲ್ವರ್ಗದ ಹೆಣ್ಣುಮಕ್ಕಳು ಪ್ರವೇಶ ಪಡೆದರು. ಈಗ ಈ ವೃತ್ತಿಗೆ ಹಿಂದೆ ಇದ್ದ ಮಡಿವಂತಿಕೆ ಮಾಯವಾಗಿ ಅದಕ್ಕಿದ್ದ ಅಶ್ಲೀಲ ಹಣೆಪಟ್ಟಿ ಕಳಚಿತು. ದೇವಸ್ಥಾನದಲ್ಲಿ ಹಾಡುವುದು, ನರ್ತಿಸುವುದು ಅವಮಾನವೆಂಬ ಭಾವ ಮಾಯವಾಗಿ ಆ ಕಲೆಗಳಿಗೆ ವಿಶೇಷ ಗೌರವ ಪ್ರಾಪ್ತವಾಯಿತು. ಬ್ರಾಹ್ಮಣರ ಪ್ರವೇಶದಿಂದಾಗಿ ಸಾದಿರ್ ಎಂಬ ಪಾತರದವರ ನೃತ್ಯ ಕಲೆ ಭರತನಾಟ್ಯಂ ಎಂಬ ಹೊಸ ಹೆಸರಿನಲ್ಲಿ ಪವಿತ್ರ ಕಲೆಯಾಗಿ ರೂಪುಗೊಂಡಿತು. ಮೇಲ್ವರ್ಗದವರ ಪ್ರವೇಶದಿಂದಾಗಿ ಸಂಗೀತ, ನೃತ್ಯ ಕಲೆಗೆ ವಿಶೇಷ ಗೌರವಾದರಗಳು ಲಭಿಸಿದವು. ಸಂಗೀತ, ನೃತ್ಯ ಕಲೆಗೆ ಸಮಾಜದಲ್ಲಿದ್ದ ನಿಕೃಷ್ಟ ಸ್ಥಾನವು ಶ್ರೇಷ್ಟತೆಯ ಮಾನ ಸಮ್ಮಾನವನ್ನು ಗಳಿಸಿತು. ಪಾತರದವರಲ್ಲಿ ಆರ್ಥಿಕ ಮತ್ತು ರಾಜಕೀಯ ಬೆಂಬಲವಿದ್ದವರು ಜಗತ್ತಿನಾದ್ಯಂತ ಪ್ರಸಿದ್ಧಿ ಪಡೆದರು. ಈ ಬೆಂಬಲವಿಲ್ಲದವರು ಮೂಲೆಗುಂಪಾದರು. 1975ರಲ್ಲಿ ಗೇಣಿದಾರರ ಕಾಯ್ದೆ ಜಾರಿಯಾದಾಗ ದೇವಸ್ಥಾನದ ಪುರೋಹಿತರ ಹಿಡಿತದಿಂದ ಪಾರಾದ ಇವರು ತಮ್ಮ ಹೆಸರಿನ ದೇವಾದಾಯ (ಜಮೀನು)ವನ್ನು ತಮ್ಮ ಹೆಸರಿಗೆ ಮಾಡಿಕೊಂಡರು. ಆ ಬಳಿಕ ಈ ಪಾತರದ ಪದ್ಧತಿಯು ಸಂಪೂರ್ಣ ನಿಂತಿತು.

ನನ್ನ ಬಾಲ್ಯದಲ್ಲಿ ಬಿಕರ್ನಕಟ್ಟೆಯಲ್ಲಿ ಸಂಗೀತಗಾರರಾಗಿ ಪಿಟೀಲುವಾದಕರಾಗಿದ್ದ ಒಬ್ಬರು ನನ್ನ ದೊಡ್ಡ ತಾಯಿಯ ಮಗ ಉಮೇಶಣ್ಣನ ಮಿತ್ರರಾಗಿದ್ದರು. ಪದವು ಯುವಕ ಸಂಘದಲ್ಲಿ ನಾಟಕ ಇತ್ಯಾದಿ ಕಾರ್ಯಕ್ರಮಗಳಿಗೆ ಹಿನ್ನೆಲೆ ಸಂಗೀತ ಒದಗಿಸುತ್ತಿದ್ದರು. ಅವರ ಮನೆತನವು ದೇವಸ್ಥಾನದ ಸಂಗೀತ ಸೇವೆಯ ಕೆಲಸಗಳು ನಿಂತ ಮೇಲೆ ಹೀಗೆ ಸಂಗೀತ ಕಾರ್ಯಕ್ರಮ ನೀಡುತ್ತಾ ಆರಕ್ಕೇರದ, ಮೂರಕ್ಕಿಳಿಯದ ರೀತಿಯ ಆರ್ಥಿಕ ಪರಿಸ್ಥಿತಿಯಲ್ಲಿ ಹೇಗೋ ಜೀವನ ಮಾಡುತ್ತಿದ್ದರು. ಅವರನ್ನು ಆಗ ಮೇಲ್ವರ್ಗದವರು ಗೌರವದಿಂದ ಕಾಣುತ್ತಿರಲಿಲ್ಲ ವೆಂದು ಅವರಾಡಿದ ಮಾತುಗಳಿಂದ ಮತ್ತು ಉಮೇಶಣ್ಣನ ಮಾತುಗಳಿಂದ ವ್ಯಕ್ತವಾಗುತ್ತಿತ್ತು.

1956ರಲ್ಲಿ ಕರ್ನಾಟಕ ಸರಕಾರವು ದೇವದಾಸೀ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಿ ಕಾನೂನು ಮಾಡಿದಾಗ ಅನೇಕರ ಬಾಳಿನಲ್ಲಿ ಅಂಧಕಾರ ಕವಿಯಿತು. ದೇವರ ಮೇಲಿನ ಭಕ್ತಿಯಿಂದ, ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದ ಈ ದಾಸಿಯರು ಒಮ್ಮೆಲೇ ಬೀದಿಗೆ ಬಿದ್ದಂತಾದರು. ದೇವಸ್ಥಾನ ನೀಡಿದ ಭೂಮಿಯನ್ನು ಕಸಿದುಕೊಂಡ ಮೇಲೆ ಬದುಕುವ ದಾರಿಯೇ ಕಾಣದಾಯಿತು. ಆ ಸಮಯದಲ್ಲಿ ಸರಕಾರದ ಈ ಕಾನೂನಿಗೆ ಪ್ರತಿಭಟನೆಯಾಗಿ ಉಡುಪಿಯ ಹಿರಿಯಡ್ಕ ದೇವಸ್ಥಾನದ ದೇವದಾಸಿಯೊಬ್ಬಳು ದೇವಸ್ಥಾನದ ಅಂಗಳದಲ್ಲೇ ತನ್ನ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಳು. ಈ ಘಟನೆಯು ಅಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಎಲ್ಲರನ್ನೂ ಬೆಚ್ಚಿಬೀಳುವಂತೆ ಮಾಡಿತು. ನಿಷ್ಠೆಯಿಂದ ಬದುಕುತ್ತಿದ್ದವರಿಗೆ ಮೈಮಾರಿ ಬದುಕುವುದು ಕಷ್ಟವಾಗಿರಬೇಕು. ದೇವಾದಾಯ ತಪ್ಪಿದ ಮೇಲೆ ಬದುಕಿಗೆ ದಾರಿ ಕಾಣದೆ ದೇವರ ಮುಂದೆಯೇ ಪ್ರಾಣ ತ್ಯಾಗ ಮಾಡಿದಳು. ವರ್ಷಗಳಿಂದ ಸೇವೆಯನ್ನು ಸ್ವೀಕರಿಸಿದ ದೇವರೂ ಅವಳನ್ನು ರಕ್ಷಿಸಲಿಲ್ಲ. ಈ ವೃತ್ತಿಯನ್ನು ಸೃಷ್ಟಿ ಮಾಡಿದ ಧರ್ಮವೂ ಅವಳ ಕೈ ಹಿಡಿದೆತ್ತಲಿಲ್ಲ. ಇಂತಹ ದುರಂತವೊಂದು ತನ್ನ ಬಾಲ್ಯದಲ್ಲಿ ಸಂಭವಿಸಿದ್ದನ್ನು ಕಂಡು ಹಿರಿಯ ಸಾಹಿತಿ ಮುರಳೀಧರ ರಾವ್ ಹಿರಿಯಡ್ಕ ಅವರು ಬಹಳ ವಿಷಾದದಿಂದ ಈ ಘಟನೆಯನ್ನು ವಿವರಿಸಿದರು.

ನೃತ್ಯದ ನಂಟು

ಪೂಜೆಯಲ್ಲಿ ದೇವರಿಗೆ ಮಾಡುವ ನಾನಾ ಉಪಚಾರಗಳಲ್ಲಿ ನೃತ್ಯೋಪಚಾರವೂ ಒಂದು. ದೇವರಿಗೆ ಪೂಜೆಯ ವೇಳೆಯಲ್ಲಿ ದೇವದಾಸಿಯರು ನೃತ್ಯ ಸೇವೆಯನ್ನು ಸಲ್ಲಿಸುವುದು ಹಿಂದಿನಿಂದಲೂ ನಡೆದು ಬಂದ ಪದ್ಧತಿ. ಆದರೆ ಕೇವಲ ವೇಶ್ಯೆಯರೇ ಅಲ್ಲದೆ ಉತ್ತಮ ಕುಲದವರೂ ನಾಟ್ಯವನ್ನು ಕಲಿಯುತ್ತಿದ್ದರು. ಕರ್ನಾಟಕದ ರಾಣಿಯರಾದ ಶಾಂತಲಾ, ಚಂದಲಾ, ಮುಂತಾದವರು ಬಹಿರಂಗವಾಗಿ ರಾಜನ ಮುಂದೆ ನೃತ್ಯ ಮಾಡಿ ಸಂತುಷ್ಟನಾದ ರಾಜನಿಂದ ಬಹುಮಾನವಾಗಿ ಪಡೆದ ಗ್ರಾಮಗಳನ್ನು ದೇವ ಬ್ರಾಹ್ಮಣರಿಗೆ ದಾನ ಮಾಡಿದ ಬಗ್ಗೆ ಶಾಸನಗಳು ಹೇಳುತ್ತವೆ. ಸತ್ಕುಲದವರು ಅಭಿನಯ ಮಾಡಿದರೆ ಗೌರವಕ್ಕೆ ಕುಂದು ಎಂಬ ಭಾವನೆಯ ಹದಿನಾಲ್ಕನೆಯ ಶತಮಾನದವರೆಗೆ ಇರಲಿಲ್ಲ.

(ಡಾ. ಶ್ರೀಕಂಠಶಾಸ್ತ್ರಿ, ಭಾರತೀಯ ಸಂಸ್ಕೃತಿ ಪು.306)

ದೇವಾಲಯಗಳಲ್ಲಿ ನಾಟ್ಯಸೇವೆ ಮಾಡುವವರನ್ನು 'ತಳಿಯಲಾರ' ಅಥವಾ 'ತಳ್ಳಿಯ' ಎಂದೂ ಅವರ ಕುಲವನ್ನು 'ತಳಿಯಲಾರ ಕುಲ' ಎಂದೂ ಹೇಳುವರು. ಇದಕ್ಕೆ ಹರಿಹರನ ನಂಬಿಯಣ್ಣನ ರಗಳೆಯಲ್ಲಿ (10-13) ಪ್ರಸ್ತಾಪಿಸಿರುವ "ತಳಿಯಲಾರದ ಕುಲದ ಪರಮ ಯೌವನೆಯಪ್ಪ ಪರವೆ ನಾಚಿಯರೆಂಬ ಕನ್ಯಾ ಕನಕಲತೆಯಿರ್ದಪುದು ಆಕೆಯ ಕುಲಂ ಶಿವನೋಲಗದ ತೊತ್ತುತನಂ ತಳಿತಕ ತಳಿಯಲಾರದ ಕುಲಂ" ಎಂಬ ವರ್ಣನೆಯಿದೆ.

ಹಿಂದಿನ ಕಾಲದಲ್ಲಿ ಸಾರ್ವಜನಿಕ ನೃತ್ಯ ಪ್ರದರ್ಶನಗಳು ನಡೆಯುವುದಕ್ಕೆ ಪ್ರತ್ಯೇಕ ನಾಟ್ಯಶಾಲೆಗಳಿರುತ್ತಿದ್ದವೆ ಎಂಬುದಕ್ಕೆ ಸಾಕಷ್ಟು ಆಧಾರಗಳಿಲ್ಲ. ಆದರೆ ದೇವಾಲಯಗಳಲ್ಲಿ ನೃತ್ಯ ಪ್ರದರ್ಶನಗಳು ನಡೆಯುತ್ತಿದ್ದುವು. ದೇವಾಲಯಗಳಲ್ಲಿ ರಂಗ ಮಂಟಪಗಳಿರುತ್ತಿದ್ದುವು. ಅನೇಕ ಹಳಗನ್ನಡದ ಕವಿಗಳು ಈ ರಂಗ ಮಂಟಪಗಳನ್ನು ವರ್ಣಿಸಿದ್ದಾರೆ. ಉದಾಹರಣೆಗೆ ಪ್ರಭುಲಿಂಗ ಲೀಲೆ, ಪಂಪಾಸ್ಥಾನ ವರ್ಣನಂ ಎಂಬ ಕೃತಿಗಳೇ ಸಾಕ್ಷಿಯಾಗಿವೆ.

ಕಾಮಶಾಸ್ತ್ರವೂ ಕೂಡಾ ಕಾಮುಕ ಪುರುಷರಿಗೆ ದೇಹವನ್ನರ್ಪಿಸಿ ಧನಾರ್ಜನೆ ಮಾಡುವುದು ವೇಶ್ಯೆಯರ ಧರ್ಮವೆಂದೇ ಹೇಳಿದೆ.

ವಾತ್ಸಾಯನನ ಕಾಮಸೂತ್ರ ದಿ. ವೆಂಕಟಜಿ ಭಸ್ಮ ಪು.22 (1949)

  1. ಏಕಪುರುಷ ನಿಷ್ಠೆ
  2. ಬಹುಪುರುಷ ನಿಷ್ಠೆ
  3. ಯಾವ ಪುರುಷನಿಗೂ ನಿಷ್ಠವಾಗಿರದ ವೇಶ್ಯ.

ಹೀಗೆ ಮೂರು ವಿಭಾಗ ಮಾಡುತ್ತಾರೆ.

ಪುರುಷರು ಗುಣಿಯೋ, ನಿರ್ಗುಣಿಯೋ ನಿಶ್ಚಿತತೆಯೂ ಇಲ್ಲ. ಆದರೆ ಅವನು ಗುಣವಂತನೆಂದೇ ಭಾವಿಸಿ ಅವನ ಜೊತೆ ಸಮಾಗಮ ಮಾಡಬೇಕು. ವೇಶ್ಯಯ ಬೌದ್ಧಿಕ ಮಾನಸಿಕ ಚಟುವಟಿಕೆಗಳು ಆರೋಗ್ಯಕರ ಬೆಳವಣಿಗೆಯನ್ನು ಪಡೆಯದಂತೆ ವಿಕಾರಗೊಳಿಸುವುದೇ ಕಾಮಸೂತ್ರದ ಉದ್ದೇಶವಾಗಿದೆ. ಈ ಮೂಲಕ ಕಾಮವೆಂಬ ಪುರುಷಾರ್ಥ ಸಾಧನೆಗೆ ಹೆಣ್ಣು ಸುಲಭವಾಗಿ ದಕ್ಕುವಂತೆ ಮಾಡುವುದೇ ಮುಖ್ಯ ಉದ್ದೇಶವಾಗಿದೆ. ಕಾಮಸೂತ್ರವು ಸ್ತ್ರೀಯರನ್ನು ಅಸಹಾಯಕ ಮತ್ತು ಅನಾಥ ಸ್ಥಿತಿಯಲ್ಲಿಡುವಂತೆ ಮಾಡಿದೆ. ಮಹಿಳಾ ಶೋಷಣೆಯ ಭಿನ್ನ ಸ್ವರೂಪವನ್ನು ಪರಿಚಯ ಮಾಡಿಕೊಡುತ್ತದೆ (ಪು.226, ಡಾ. ಅನಸೂಯಾ ಕದಂ, ಮಹಿಳಾ ಶೋಷಣೆಯ ನೆಲೆಗಳು).

ಸಾದಿರ್ ನೃತ್ಯವು ಭರತನಾಟ್ಯವೆಂಬ ಗೌರವಕ್ಕೆ ಪಾತ್ರವಾಗಲು ರುಕ್ಕಿಣೀ ದೇವಿ ಆರುಂಡೇಲ್ ಅವರ ಪ್ರಯತ್ನವೂ ವಿಶಿಷ್ಟವಾಗಿದೆ. 1904ರಲ್ಲಿ ಬ್ರಾಹ್ಮಣ ಕುಲದಲ್ಲಿ ಮದ್ರಾಸಿನಲ್ಲಿ ಜನಿಸಿದ ಇವರಿಗೆ ಸಂಗೀತ ಸಾಹಿತ್ಯದಲ್ಲಿ ಆಸಕ್ತಿಯಿತ್ತು, ನೃತ್ಯಕಲೆಯು ಒಂದು ಅಸ್ಪೃಶ್ಯ ಕಲೆಯೆಂದೇ ಸಮಾಜನಿಂದೆಗೆ ಪಾತ್ರವಾಗಿತ್ತು. 1933ರಲ್ಲಿ ಸ್ವಾತಂತ್ರ್ಯ ಹೋರಾಟಗಾರರಾದ ಇ. ಕೃಷ್ಣ ಅಯ್ಯರ್ ಅವರು ನೃತ್ಯದಲ್ಲಿ ಪ್ರವೀಣರಾಗಿದ್ದ ಇಬ್ಬರು ದೇವದಾಸಿಯರ ನೃತ್ಯಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ಕಾರ್ಯಕ್ರಮಕ್ಕೆ ರುಕ್ಷ್ಮಿಣೀ ದೇವಿಯವರನ್ನು ಆಹ್ವಾನಿಸಿದ್ದರು. ಈ ನೃತ್ಯಕ್ಕೆ ಮನಸೋತು ರುಕ್ಕಿಣಿಯವರು ಅದನ್ನು ಕಲಿಯುವ ನಿರ್ಧಾರ ಮಾಡಿದರು. ಮೈಲಾಪುರಿ ಗೌರಿ ಅಮ್ಮಾಳ್ ಎಂಬ ದೇವದಾಸಿಯ ಬಳಿ ನೃತ್ಯಕಲಿಯಲು ಪ್ರಾರಂಭಿಸಿದರು. ಸಮಾಜದ ವಿರೋಧವನ್ನು ಲೆಕ್ಕಿಸದೆ ಈ ನೃತ್ಯವನ್ನು ಇತರರೂ ಕಲಿಯಲು ಅನುಕೂಲವಾಗುವಂತೆ ನೃತ್ಯ ಅಕಾಡೆಮಿ(ಕಲಾಕ್ಷೇತ್ರ) ಯನ್ನು ಮದ್ರಾಸಿನಲ್ಲಿ ಆರಂಭಿಸಿದರು. ದೇವದಾಸಿಯರ ನೃತ್ಯಕ್ಕೆ ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಭರತನಾಟ್ಯವೆಂದು ಹೆಸರಿಟ್ಟರು. ದೇವದಾಸಿ ಪಂಗಡದ ಪುರುಷರನ್ನು ಶಿಕ್ಷಕರಾಗಿ ನೇಮಿಸಿದರು. ಆದರೆ ದೇವದಾಸಿಯರನ್ನು ಆ ಕೆಲಸಕ್ಕೆ ಆಹ್ವಾನಿಸಲಿಲ್ಲ. ತಾವು ಸ್ವತಃ ದೇವದಾಸಿಯರಿಂದ ನೃತ್ಯವನ್ನು ಕಲಿತರೂ ಕಲಾಕ್ಷೇತ್ರದಲ್ಲಿ ಅವರನ್ನು ಗುರುಗಳಾಗಿ ನೇಮಿಸಲು ಹಿಂಜರಿದರು. ಅದಕ್ಕೆ ಅಂದಿನ ಸಾಮಾಜಿಕ ಪರಿಸ್ಥಿತಿಯೂ ಕಾರಣವಾಗಿತ್ತು. ದೇವದಾಸಿಯರನ್ನು ಗುರುಗಳಾಗಿ ನೇಮಿಸುತ್ತಿದ್ದರೆ ಕುಲೀನ ಮನೆತನದವರು ಕಲಾಕ್ಷೇತ್ರಕ್ಕೆ ಬರುತ್ತಿರಲಿಲ್ಲ. ಎಂಬುದೂ ಕಾರಣವಾಗಿತ್ತು. ದೇವದಾಸಿಯರ ನೃತ್ಯಕ್ಕೆ ಮನ್ನಣೆ ಸಿಕ್ಕಿದರೂ ದೇವದಾಸಿಯರಿಗೆ ಮನ್ನಣೆ ಸಿಗಲಿಲ್ಲ. ಅದರಲ್ಲೂ ದೇವದಾಸಿ ಮನೆತನದ ಪುರುಷರಿಗೆ ಸಿಕ್ಕಿದ ಗೌರವ ದೇವದಾಸಿ ಮಹಿಳೆಯರಿಗೆ ಸಿಗಲಿಲ್ಲ. ಇದಕ್ಕೆ ಲಿಂಗತಾರತಮ್ಯವು ಸಮಾಜದಲ್ಲಿ ಆಳವಾಗಿ ಬೇರೂರಿದ್ದುದ್ದೂ ಕಾರಣವಾಗಿದೆ. ಈ ಕಳಂಕವನ್ನು ಕಳೆದು ನೃತ್ಯ, ಸಂಗೀತಗಳು ಎಲ್ಲರ ಗೌರವಕ್ಕೆ ಪಾತ್ರವಾಗಲು ಶತಮಾನಗಳೇ ಉರುಳಬೇಕಾಯಿತು. ದೇವದಾಸಿಯರ ಕೈಯಿಂದ ಜಾರಿದ ಈ ಕಲೆ ಸಮಾಜದ ಮೇಲ್ವರ್ಗದವರ ಪಾಲಾದದ್ದು ಐತಿಹಾಸಿಕ ಸತ್ಯವಾಗಿದೆ. (ಪುಟ. 480, ವಸುಧೆ, ಪ್ರಬಂಧ ಮಂಜರಿ, ಸಂ.: ವಿಜಯಾ ಶಂಕರ)

ನೃತ್ಯಕಲೆಗೂ ದೇವದಾಸಿಯರಿಗೂ ಇರುವ ಸಂಚಿನ ಬಗ್ಗೆ ಪ್ರಸಿದ್ಧ ನೃತ್ಯ ಕಲಾವಿದೆ ಮಾಡಿದ ಅಧ್ಯಯನದ ಸಂಕ್ಷಿಪ್ತ ರೂಪವಿದು

ಡಾ. ಪದ್ಮಾ ಸುಬ್ರಹ್ಮಣ್ಯಂ ಅವರು ಭರತನಾಟ್ಯದ ಪ್ರಖ್ಯಾತ ಕಲಾವಿದೆ. ದೇಶ ವಿದೇಶಗಳಲ್ಲಿ ಇವರ ನೃತ್ಯ ಪ್ರದರ್ಶನಗಳು ಜನ ಮೆಚ್ಚುಗೆ ಗಳಿಸಿ ಪ್ರಸಿದ್ಧಿಯನ್ನು ಗಳಿಸಿದೆ. ಅವರು ಭರತನಾಟ್ಯದ ಬಗ್ಗೆ ರಚಿಸಿರುವ 'ಭರತಕ್ಕ ಕೊಟ್ಟಾಡು' ಎಂಬ ಕೃತಿಯು, ಭರತನಾಟ್ಯದ ಮೂಲದ ಬಗ್ಗೆ ಸಂಶೋಧನೆ ಮತ್ತು ಅಧ್ಯಯನ ಮಾಡಿ ರಚಿಸಲಾಗಿದೆ. ಇವರ ಈ ಕಲಾ ಸಿದ್ಧಾಂತವು ನಾಟ್ಯ ಕಲೆಯ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡುವವರಿಗೆ ಒಂದು ಮಾಹಿತಿ ಕೋಶವಾಗಿದೆ. ಇದರಲ್ಲಿ ಭರತನಾಟ್ಯಕ್ಕೂ ದೇವದಾಸಿ ಸಂಪ್ರದಾಯಕ್ಕೂ ಇರುವ ನಂಟಿನ ಬಗ್ಗೆ ಬಹಳ ವಿಸ್ತಾರವಾಗಿ ವಿವರಿಸಿದ್ದಾರೆ. ಈ ಕೃತಿಯ ಒಂದು ಸಣ್ಣ ಪರಿಚಯವನ್ನು ಯೋಗೇಶ್ ಮಾಸ್ಟರ್ ಅವರು 2020ರ ನವೆಂಬರ್ 11ರ ನ್ಯಾಯ ಪಥ ಪತ್ರಿಕೆಯಲ್ಲಿ ಬರೆದಿದ್ದಾರೆ. ತಮಿಳ್ಳಾಡಿನ ದೇವದಾಸಿಯರ ಕುರಿತು ಅಧ್ಯಯನ ಮಾಡಿ ರಚಿಸಿದ ಈ ಕೃತಿಯ ಬಗ್ಗೆ ಇಲ್ಲಿ ಉಲ್ಲೇಖಿಸುವುದು ಸೂಕ್ತವೆನಿಸುತ್ತದೆ.

"ಇಂದು ಭರತನಾಟ್ಯ ಎಂಬ ದೇವರ ವರ್ಣನೆಯ ಕೀರ್ತನೆಗಳ ಹಾಡುಗಾರಿಕೆಯ ಜೊತೆಗೆ ಸುಂದರವಾದ ಹಾಗೂ ಭಾವಪೂರ್ಣವಾದ ನೃತ್ಯದ ಪ್ರಕಾರದ ಬೇರುಗಳು ದೇವದಾಸಿಯರ ಕುಣಿತದ ಮೂಲದಲ್ಲಿವೆ ಎಂಬುದನ್ನು ಕೇಳಲು ಯಾವುದೇ ಕಲಾರಾಧಕರ ಮನಸ್ಸಿಗೆ ನೋವಾದರೂ ವಾಸ್ತವವನ್ನು ಒಪ್ಪಲೇಬೇಕು. ನೋವನ್ನು ಭರಿಸಲೇಬೇಕು. ಹೆಣ್ಣಿನ ದೇಹ, ಮನಸ್ಸು ಮತ್ತು ಭಾವನೆಗಳ ಮೇಲೆ ಆಗುತ್ತಿದ್ದ ದೌರ್ಜನ್ಯ ಮತ್ತು ಪುರುಷಾಧಿಪತ್ಯದ ದಬ್ಬಾಳಿಕೆಯ ಬುನಾದಿ ಭರತನಾಟ್ಯದ ಬುಡದಲ್ಲಿದೆ. ಆದರೆ ಮಹಿಳೆಯರೇ ಈ ಕಲೆಯ ಪ್ರಕಾರವನ್ನು ಉಳಿಸಿಕೊಂಡು ಅದಕ್ಕೆ ಹತ್ತಿದ್ದ ಕಳಂಕವನ್ನು ತೊಡೆದು ಹಾಕಿ, ಸಾದಿರ್ ಎಂಬ ನಾಟ್ಯದ ಬಗೆಯನ್ನು ಇಂದು ಭರತನಾಟ್ಯಂ ಎಂಬ ಅಪ್ರತಿಮ ನೃತ್ಯಪ್ರಕಾರವನ್ನಾಗಿ ಪರಿವರ್ತಿಸಿದ್ದು ಅವರ ಹೋರಾಟಕ್ಕೆ ಸಂದ ವಿಜಯವಾಗಿದೆ. ಪ್ರಾರಂಭದಲ್ಲಿ ದೇವದಾಸಿಯರು ದೇವಸ್ಥಾನದಲ್ಲಿ ಪ್ರಚಲಿತದಲ್ಲಿರುವ ಹಲವು ಆಚಾರಗಳನ್ನು ನೆರವೇರಿಸಲು ನೇಮಕವಾಗಿದ್ದರು. ದೇವದಾಸಿ ಪದ್ಧತಿಯು ಬಹಳ ಪುರಾತನವಾಗಿದ್ದು ಸುಮಾರು ಕ್ರಿ.ಶ.800 ರಲ್ಲಿ ಪ್ರಾರಂಭವಾಗಿದ್ದಿರಬಹುದು. ಐದು ಮತ್ತು ಆರನೆಯ ಶತಮಾನದಲ್ಲಿ ರಾಜ ಮನೆತನದ ಅಥವಾ ಕುಲೀನ ಮನೆತನದ ಹೆಣ್ಣು ಮಕ್ಕಳು ನಡೆಸುವಂತಹ ವೈಭವದ ಜೀವನವನ್ನು ನಡೆಸುತ್ತಿದ್ದ ಹೆಣ್ಣು ಮಕ್ಕಳ ಸಮುದಾಯಕ್ಕೆ ವೇಶ್ಯೆಯರು, ಗಣಿಕೆಯರು ಎಂದು ಕರೆಯುತ್ತಿದ್ದರು. ಅವರು ಅವರ ವೃತ್ತಿಯನ್ನು ಮಾಡಿಕೊಂಡು ತಮ್ಮದೇ ಆದಂತಹ ವರ್ತುಲವನ್ನು ರೂಪಿಸಿಕೊಂಡಿದ್ದರಿಂದ ಸಹಜವಾಗಿಯೇ ಅವರು ಸಾಮಾನ್ಯರ ಗುಂಪಿಗೆ ಸೇರುತ್ತಿರಲಿಲ್ಲ.

ತಮಿಳ್ಳಾಡಿನ ರಾಜರಾಜ ಚೋಳ ಕಟ್ಟಿಸಿದ ತಂಜಾವೂರಿನ ಬೃಹದೀಶ್ವರ ದೇವಸ್ಥಾನದಲ್ಲಿ ದೊರೆತ ಶಾಸನದ ಪ್ರಕಾರ ಈ ದೇವದಾಸಿ ಪದ್ಧತಿಯು ಕರ್ನಾಟಕದ ಪ್ರಾಂತ್ಯಗಳಲ್ಲಿ ಪ್ರಾರಂಭಗೊಂಡಿದ್ದವು ಎಂದು ದಾಖಲೆ ಇದೆ. ದೇವದಾಸಿ ಪದ್ಧತಿಯ ಮೂಲ ಉದ್ದೇಶ ಪವಿತ್ರವಾಗಿಯೇ ಇದೆ ಎಂದು ಭಾವಿಸಲಾಗಿತ್ತು. ಈ ಪದ್ಧತಿಯಂತೆ ಹೆಂಗಸರು ಸಂಪೂರ್ಣವಾಗಿ ತಮ್ಮನ್ನು ದೇವಸ್ಥಾನಕ್ಕೆ ಅರ್ಪಿಸಿಕೊಂಡಿದ್ದರು. ದೇವರ ಸೇವೆ ಮಾಡುತ್ತಾ ಅವಿವಾಹಿತರಾಗಿಯೇ ಉಳಿಯುತ್ತಿದ್ದರು. ಈ ಪದ್ಧತಿಯ ಪ್ರಾರಂಭದ ದಿನಗಳಲ್ಲಿ ಕುಲೀನ ಮತ್ತು ಉತ್ತಮ ವಂಶಸ್ಥರು ತಮ್ಮ ಮನೆಯಲ್ಲಿ ಹುಟ್ಟುವ ಹೆಣ್ಣುಮಗುವೊಂದನ್ನು ದೇವಸ್ಥಾನದಲ್ಲಿ ದೇವರ ಪಾದಕ್ಕೆ ದೇವದಾಸಿಯಾಗಿ ಸಮರ್ಪಿಸುವುದು ಗೌರವದ ಮತ್ತು ಘನತೆಯ ವಿಷಯವಾಗಿತ್ತು. ದೇವಸ್ಥಾನಕ್ಕೆ ಹೆಣ್ಣು ಮಕ್ಕಳನ್ನು ಅರ್ಪಿಸುವುದಕ್ಕಾಗಿ ಕುಲೀನ ಮನೆತನಗಳಲ್ಲಿ ಪೈಪೋಟಿಯೇ ನಡೆಯುತ್ತಿತ್ತು. ಸಣ್ಣ ಸಣ್ಣ ಕಾರಣಗಳಿಗೂ ಸಣ್ಣ ವಯಸ್ಸಿನ ಹೆಣ್ಣು ಮಕ್ಕಳನ್ನು ದೇವಸ್ಥಾನಕ್ಕೆ ಅರ್ಪಿಸುತ್ತಿದ್ದರು. ಇದರಿಂದಾಗಿ ದೇವಸ್ಥಾನಗಳಲ್ಲಿ ಸಣ್ಣ ವಯಸ್ಸಿನ ದೇವದಾಸಿಯರ ಸಂಖ್ಯೆ ಹೆಚ್ಚಿತು.

ಆ ನಂತರದ ದಿನಗಳಲ್ಲಿ ದೇವದಾಸಿ ಪದ್ಧತಿಯು ತನ್ನ ಮೂಲ ಉದ್ದೇಶವನ್ನು ಕಳೆದುಕೊಳ್ಳಲಾರಂಭಿಸಿತು. ಧಾರ್ಮಿಕ ಪದ್ಧತಿಯ ನೆಪದಲ್ಲಿ ಲಂಪಟ ಪುರುಷರು ದೇವದಾಸಿಯರನ್ನು ತಮ್ಮ ಮೋಜಿಗೆ ಬಳಸಿಕೊಂಡರು. ಆದುದರಿಂದ ಜನ ಸಾಮಾನ್ಯರ ದೃಷ್ಟಿಯಲ್ಲಿ ದೇವದಾಸಿ ಪದ್ಧತಿಯು ತನ್ನ ಗೌರವವನ್ನು ಕಳೆದುಕೊಂಡಿತು. ಇದರಿಂದಾಗಿ ದೇವದಾಸಿಯರ ಪರಿಸ್ಥಿತಿ ಹದಗೆಟ್ಟಿತು. ಅವರ ಸೋದರರೇ ಅವರನ್ನು ಸೋದರಿಯರೆಂದು ಸ್ವೀಕರಿಸುತ್ತಿರಲಿಲ್ಲ. ಹೇಳುವವರು ಕೇಳುವವರು ಯಾರೂ ಇಲ್ಲದೆ ದೇವಸ್ಥಾನದ ಪೂಜಾರಿಗಳು ಅವರನ್ನು ಮನಬಂದಂತೆ ಬಳಸಿಕೊಳ್ಳತೊಡಗಿದರು.

ಆದುದರಿಂದ ದೇವರಿಗೆ ಸೇವೆ ಸಲ್ಲಿಸುವ ಬದಲು ದೇವದಾಸಿಯರು ವೇಶ್ಯಯರಾಗಿ ಹೋದರು. ನಿಸ್ವಾರ್ಥ ಮತ್ತು ಉತ್ತಮ ಉದ್ದೇಶದಲ್ಲಿ ತೊಡಗಿದ್ದ ದೇವದಾಸಿಯರು ಆಳರಸರ, ಜಮೀನ್ದಾರಿಗಳ, ಪೂಜಾರಿಗಳ ಮತ್ತು ಶ್ರೀಮಂತರ ಸ್ವಾರ್ಥಕ್ಕೆ ಬಳಕೆಯಾದರು. ಮೂಲ ಉದ್ದೇಶದಂತೆ ಬದುಕುವ ಬದ್ಧತೆಯನ್ನು ಪ್ರಕಟಿಸಲು ಸಾಧ್ಯವಾಗಲೇ ಇಲ್ಲ. ತಮ್ಮ ಸ್ವಾರ್ಥಕ್ಕಾಗಿ ಮೇಲ್ವರ್ಗದ ಪುರುಷರು ಕೆಲವು ಕಾನೂನುಗಳನ್ನು ರೂಪಿಸಿ ಅದಕ್ಕೆ ಧರ್ಮದ ಮುದ್ರೆಯೊತ್ತಿದ್ದರು. ದೇವದಾಸಿಯರು ಮದುವೆಯಾಗುವ ಅವಕಾಶ ನೀಡಿದರು, ಅವರಿಗೆ ಹುಟ್ಟುವ ಮೊದಲ ಹೆಣ್ಣು ಮಗಳನ್ನು ದೇವದಾಸಿ ಪದ್ಧತಿಗೆ ಅರ್ಪಿಸುವ ಸಂಪ್ರದಾಯ ಪ್ರಾರಂಭಿಸಿದರು. ತಾಯಿಯಾಗಿರುವ ದೇವದಾಸಿಯು ಮರಣಿಸಿದರೆ, ಶಾಸನ ಪ್ರಕಾರ ಅವರ ಮೊದಲನೆಯ ಮಗಳು ವಯಸ್ಸಿಗೆ ಬಂದಾಗ ಆಕೆ ತನ್ನ ವೈಯಕ್ತಿಕ ವಿವರಗಳನ್ನು ಕಡ್ಡಾಯವಾಗಿ ಅಲ್ಲಿನ ಆಳರಸರಿಗೆ ನೀಡಬೇಕು. ಆ ಬಳಿಕ ಅವಳನ್ನು ದೇವದಾಸಿಯನ್ನಾಗಿ ನೇಮಕ ಮಾಡಿ ಅವಳಿಗೆ ಸಂಬಳ, ಮನೆ, ಭೂಮಿಯಂತಹ ಸವಲತ್ತುಗಳನ್ನು ನೀಡಲಾಗುತ್ತಿತ್ತು.

ಪಾಂಡ್ಯ ಮತ್ತು ಚೋಳ ರಾಜರ ಕಾಲದಲ್ಲಿ ಈ ಪದ್ಧತಿಯು ವ್ಯಾಪಕವಾಗಿತ್ತು. ಉತ್ತರ ಭಾರತದಲ್ಲೂ ಈ ಪದ್ಧತಿ ಜಾರಿಯಲ್ಲಿತ್ತು. ಅಲ್ಲಿ ದೇವದಾಸಿ ಪದ್ಧತಿಗೆ ಸೇರುವ ಹೆಣ್ಣು ಮಕ್ಕಳನ್ನು ಒಂದು ಖಡ್ಗಕ್ಕೆ ಅಥವಾ ದೇವರ ವಿಗ್ರಹಕ್ಕೆ ಮದುವೆ ಮಾಡಿ ಕೊಡುತ್ತಿದ್ದರು. 19ನೆಯ ಶತಮಾನದ ಹೊತ್ತಿಗೆ ಈ ಪದ್ಧತಿಯು ತನ್ನ ಹೆಸರನ್ನು ಕಳೆದುಕೊಂಡಿತ್ತು ಎಂಬ ಸ್ಪಷ್ಟ ಮಾಹಿತಿ ಇಲ್ಲದೆ ಹೋದರೂ, ಕಾಲಕ್ರಮೇಣ ಇದು ಸಂಪೂರ್ಣವಾಗಿ ಕಳಂಕಿತವಾಗಿತ್ತು. 1924ರಲ್ಲಿ ಭಾರತೀಯ ನಾಗರಿಕ ಹಕ್ಕಿನ ವಿಧಿಯಡಿಯಲ್ಲಿ ಈ ಸಮಸ್ಯೆಗಳಿಗೆ ಏನಾದರೂ ಪರಿಹಾರ ತರಲು ಸಾಧ್ಯವೇ? ಏನಾದರೂ ಸುಧಾರಣೆಯನ್ನುಂಟು ಮಾಡಲು ಸಾಧ್ಯವೇ? ಎಂಬ ಬಗ್ಗೆ ಅಧ್ಯಯನ ಮಾಡಲು ಒಂದು ಆಯೋಗ ಸಿದ್ಧವಾಯಿತು. ಇದರ ಬಳಿಕ ಮದ್ರಾಸ್ ಸರಕಾರ 'ಆ್ಯಂಟಿ ದೇವದಾಸಿ ಬಿಲ್' ಅನ್ನು ಜಾರಿಗೊಳಿಸಿತು. ದೇವದಾಸಿ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಲು ಒತ್ತಾಯಿಸಲಾಯಿತು. 1945-46ರಲ್ಲಿ ಈ ಕಾಯಿದೆ ಜಾರಿಯಾಗಿ ದೇವದಾಸಿ ಪದ್ಧತಿಯನ್ನು ಸಂಪೂರ್ಣ ನಿಷೇಧಿಸಲಾಯಿತು. 1948 ರಲ್ಲಿ "ಹಿಂದೂ ವಿವಾಹಿತ ಮಹಿಳೆಯರ ವಿಚ್ಛೇದನಾ ಹಕ್ಕು ಮತ್ತು ಸವಲತ್ತಿನ ಕಾಯಿದೆ"ಯು ದೇಶಾದ್ಯಂತ ವೃತ್ತಿನಿರತರಾಗಿದ್ದ ಅನೇಕ ದೇವದಾಸಿಯರಿಗೆ ಅನುಕೂಲವಾಗಿ ಪರಿಣಮಿಸಿತು. ಆದರೆ ದೇವಾಲಯಗಳು ಅವರಿಗೆ ನೀಡುತ್ತಿದ್ದ ಸವಲತ್ತುಗಳನ್ನು ನೀಡುವುದರಲ್ಲಿ ಈ ಕಾಯಿದೆ ವಿಫಲವಾಯಿತು. ಆದುದರಿಂದ ಈ ಕಾನೂನಿನಂತೆ ಮುಕ್ತರಾದ ದೇವದಾಸಿಯರು ಯಾರಾದರೊಬ್ಬ ಪುರುಷನ ಅಧೀನಕ್ಕೆ ಒಳಗಾಗಲೇಬೇಕಾಯಿತು.

ತಮಿಳುನಾಡಿನ ಪುದುಕೋಟೈ ಬ್ರಿಟಿಷರ ಆಡಳಿತಕ್ಕೆ ಹೆಸರಾದಂತೆ ದೇವದಾಸಿಯರ ಪ್ರಾಬಲ್ಯಕ್ಕೂ ಹೆಸರಾಗಿತ್ತು. ಬ್ರಿಟಿಷರ ಅಧಿಪತ್ಯ ಅಲ್ಲಿ ನಾಶವಾದಂತೆ ದೇವದಾಸಿ ಪದ್ಧತಿಯೂ ಅಲ್ಲಿ ನಾಶವಾಯಿತು. ವೀರಳಿ ಮಲೈ ಕೂಡಾ ದೇವದಾಸಿ ಪದ್ಧತಿಗೆ ಹೆಸರಾದ ಊರಾಗಿತ್ತು. ಅಲ್ಲಿನ ಬೆಟ್ಟಗಳಲ್ಲಿರುವ ಪ್ರಖ್ಯಾತ ತೀರ್ಥಕ್ಷೇತ್ರಗಳು ಹತ್ತಿರವಿದ್ದುದರಿಂದ ಇಲ್ಲಿ ದೇವದಾಸಿಯರ ಸಂಖ್ಯೆ ಹೆಚ್ಚಿತ್ತು.

ಕುರುವಂಜಿ ನಾಟಕದ ಪ್ರಖ್ಯಾತ ಕಥೆಗಳು ಇಲ್ಲಿಯೇ ಬೆಳೆದು ಪ್ರಖ್ಯಾತ ವಾಗಿದೆ. ಅಲ್ಲಿನ ದೇವದಾಸಿಯರು ತಮ್ಮನ್ನು ಮುರುಗನ್ ದೇವರಿಗೆ ಸಮರ್ಪಿಸಿಕೊಂಡು, ಸೇವೆ ಸಲ್ಲಿಸುತ್ತಾ ಮೋಕ್ಷವನ್ನು ಪಡೆಯುವರು ಎಂಬ ನಂಬಿಕೆ ಇತ್ತು. ಈ ದೇವದಾಸಿಯರಲ್ಲಿ ಪುದುಕೋಟೈಯಿಂದ ಬಂದ ಒಬ್ಬಳು ಭರತನಾಟ್ಯವನ್ನು ಮಾಡುತ್ತಿದ್ದಳು. ಇವಳೇ ಮೊತ್ತ ಮೊದಲಬಾರಿಗೆ ದೇವದಾಸಿ ಪದ್ಧತಿಯ ವಿರುದ್ಧ ದನಿ ಎತ್ತಿದಳು. ದೇವಸ್ಥಾನಗಳಲ್ಲಿ ಈ ಪದ್ಧತಿಯ ಮೂಲಕ ದೇವಸ್ಥಾನಗಳಲ್ಲಿ ನಡೆಯುತ್ತಿದ್ದ ಅನಾಚಾರಗಳ ವಿರುದ್ಧ ದನಿ ಎತ್ತಿ ಅಲ್ಲಿ ಮಹಾರಾಜನಿಗೆ ದೂರು ಸಲ್ಲಿಸಿದಳು. ಮರ್ಯಾದಸ್ಥ ಹೆಣ್ಣು ಮಕ್ಕಳ ಹಾಗೆ ಬದುಕುವುದಕ್ಕೆ ತನಗೆ ಅವಕಾಶ ಕಲ್ಪಿಸಿಕೊಡಬೇಕೆಂದೂ ದೇವದಾಸಿಯರು ತಾನು ಪಡೆದ ಭೂಮಿಯನ್ನು ತನಗೇ ಕೊಡಬೇಕೆಂದು ತಾನು ಬಯಸಿದವರೊಂದಿಗೆ ಮದುವೆಯಾಗಿ ಬಾಳಲು ಅವಕಾಶವನ್ನು ಕಲ್ಪಿಸಿಕೊಡಬೇಕೆಂದೂ ಬೇಡಿಕೆಯನ್ನು ಸಲ್ಲಿಸಿದಳು. ಅದರಂತೆಯೇ ಆಕೆ ದೇವದಾಸಿ ಪದ್ಧತಿಯನ್ನು ತಿರಸ್ಕರಿಸಿ, ತಾನು ಬಯಸಿದವನೊಂದಿಗೆ ವಿವಾಹವಾದಳು. ಇತರ ಕೆಲವು ದೇವದಾಸಿಯರೂ ಇವಳು ಹಾಕಿಕೊಟ್ಟ ಮೇಲ್ಪಂಕ್ತಿಯನ್ನು ಅನುಸರಿಸಿ ನೆಮ್ಮದಿಯಿಂದ ಬಾಳಲು ಸಾಧ್ಯವಾಯಿತು.

ತಮ್ಮ ವೈಯಕ್ತಿಕ ಬದುಕಿನಲ್ಲಿ ಏನೆಲ್ಲಾ ಏಳುಬೀಳುಗಳನ್ನು ಕಂಡರೂ ನಾಟ್ಯಕಲೆಯನ್ನು ಜೀವಂತವಾಗಿಟ್ಟ ದೇವದಾಸಿಯರಿಗೆ ಕೃತಜ್ಞತೆಯನ್ನು ಸಲ್ಲಿಸಲೇಬೇಕು. ಭಾರತೀಯ ಕಲಾ ಪರಂಪರೆಯ ಸೌಂದರ್ಯವನ್ನು ಇವರೇ ಕಾಪಾಡಿಕೊಂಡು ಬಂದಿದ್ದರು. ಆಧುನಿಕ ಶಾಸ್ತ್ರೀಯ ನೃತ್ಯದ ಪುನರುತ್ಥಾನದಲ್ಲಿ ಪಾಶ್ಚಾತ್ಯ ನೃತ್ಯ ಪಟುಗಳ ಪಾತ್ರವಿದೆ ಎಂಬುದು ಕುತೂಹಲಕರವಾದ ಅಂಶವಾಗಿದೆ. ರಷ್ಯಾ ದೇಶದ ಬ್ಯಾಲೆ ನರ್ತಕಿ ಅನ್ನಾ ಪಾವ್ ಲೋವ ಅವರು ನೃತ್ಯಕ್ಕೆ ಸಂಬಂಧಿಸಿದ ಹಾಗೆ ಭಾರತದಲ್ಲಿ ಪ್ರವಾಸ ಮಾಡುತ್ತಾ ದೇವದಾಸಿ ನೃತ್ಯದ ಪ್ರಕಾರವನ್ನು ಅಧ್ಯಯನ ಮಾಡಿದರು. ನೃತ್ಯ ಪಟು ಉದಯ್‌ಶಂಕರ್ ಅವರಿಗೆ ಈ ಬಗ್ಗೆ ಸಂಶೋಧನೆ ಮಾಡಲು ಸೂಚಿಸಿದರು. ಉದಯಶಂಕರ್ ಜೀವನದ ದಿಕ್ಕನ್ನೇ ಬದಲಾಯಿಸಿದ ಈ ಸಂಶೋಧನೆಯು ನೃತ್ಯಕ್ಷೇತ್ರದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಿತು ಹಾಗೂ ಭಾರತೀಯ ನೃತ್ಯಕ್ಷೇತ್ರದಲ್ಲಿ ಪುನರುತ್ಥಾನದ ಛಾಪು ಮೂಡಿಸಿತು.

ದೇವದಾಸಿಯರ ನೃತ್ಯದ ಪುನರುತ್ಥಾನದಲ್ಲಿ ಬಹಳ ಪ್ರಮುಖ ಪಾತ್ರ ವಹಿಸಿದವರು ಇ. ಕೃಷ್ಣ ಅಯ್ಯರ್, ದೇವದಾಸಿಯರ ನೃತ್ಯ ಕಲೆಗೆ ಹತ್ತಿದ ಕಳಂಕವನ್ನು ತೊಡೆದು ಹಾಕಿದರು. ಗೌರವಾನ್ವಿತ ಕುಟುಂಬದವರು ಅಂದು ನೃತ್ಯಕಲೆಯನ್ನು ಕಲಿಯುವುದು ಸಾಧ್ಯವಿಲ್ಲದ ಕಾಲವಾಗಿತ್ತು. ನೃತ್ಯದ ಬಗ್ಗೆ ಟೀಕೆ, ನಿಂದೆಗಳೇ ಹೆಚ್ಚಿದ್ದ ಸಮಾಜದಲ್ಲಿ ಜನರ ದೃಷ್ಟಿಕೋನವನ್ನು ಬದಲಾಯಿಸಿದವರು ಕೃಷ್ಣ ಅಯ್ಯರ್, ಆ ಕಾಲದಲ್ಲಿ ದೇವದಾಸಿಯರ ಕುಟುಂಬದ ಹೊರತಾಗಿ ಸಾಮಾನ್ಯ ಕುಟುಂಬದಿಂದ ನೃತ್ಯ ಕಲಿಯಲು ಬಂದವರು ಮೊದಲಿಯಾರ್ ಕುಟುಂಬದ ಕುಮಾರಿ ಭಾರತಿ ಪ್ರಮುಖರು, ಆ ಬಳಿಕ ಮೈಲಾಪುರದ ಪ್ರಖ್ಯಾತ ಇಂಜಿನಿಯರ್ ಗಣಪತಿ ಅಯ್ಯರ್ ಅವರ ಮಗಳು ಕಾವ್ಯನಿಧಿ ಆಗಿನ ಬ್ರಾಹ್ಮಣ ಸಮುದಾಯಕ್ಕೆ ತಮ್ಮ ನೃತ್ಯಾಭ್ಯಾಸದಿಂದ ದೊಡ್ಡ ಆಘಾತವನ್ನೇ ನೀಡಿದ್ದರು. ಆ ಬಳಿಕ ರುಕ್ಕಿಣಿ ಅರುಂಡೇಲ್ ಅವರ ಪ್ರವೇಶದಿಂದಾಗಿ ಭರತನಾಟ್ಯದ ಘನತೆ ಹೆಚ್ಚಿತು. ಹೀಗೆ ದೇವದಾಸಿಯರಿಂದ ಹುಟ್ಟಿದ ಈ ನಾಟ್ಯಕಲೆಯ ಹುಟ್ಟು ಬೆಳವಣಿಗೆಗಳ ಕುರಿತು ಸಂಶೋಧನೆ ಮಾಡಿದ ಪದ್ಮಾ ಸುಬ್ರಹ್ಮಣ್ಯಂ ಅವರು ದಕ್ಷಿಣದ ರಾಜ್ಯಗಳಲ್ಲಿ ದೇವದಾಸಿ ಪದ್ಧತಿಯು ಬೆಳೆದು ಬಂದ ರೀತಿಯನ್ನೂ ತನ್ನ ಕೃತಿಯಲ್ಲಿ ವಿವರಿಸಿದ್ದಾರೆ. ತಮಿಳ್ಳಾಡಿನ ದೇವದಾಸಿ ಪದ್ಧತಿಯ ಇತಿಹಾಸವೂ ಇಲ್ಲಿ ದಾಖಲಾಗಿದೆ. '

ಹರದೇಶಿ- ನಾಗೇಶಿ

ಉತ್ತರ ಕರ್ನಾಟಕದಲ್ಲಿ ಹರದೇಶಿ- ನಾಗೇಶಿ ಎಂಬ ಹಾಡಿಕೆಯ ಸಂಪ್ರದಾಯವಿದೆ. ಹರದೇಶಿ ಹಾಡುಗಾರರು ಪುರುಷರು, ನಾಗೇಶಿ ಹಾಡುಗಾರರು ಮಹಿಳೆಯರು, ಹರದೇಶಿ - ನಾಗೇಶಿ ಕಲೆ ಮತ್ತು ಕಲಾವಿದರು ಒಂದು ಲಿಂಗ ಸಂಬಂಧಿ ಅಧ್ಯಯನ ಎಂಬ ಕೃತಿಯನ್ನು ಡಾ. ಶೈಲಜಾ ಹಿರೇಮಠ ಅವರು ಪ್ರಕಟಿಸಿದ್ದಾರೆ. ಹರದೇಶಿ ಹಾಡುಗಾರರು ಮತ್ತು ನಾಗೇಶಿ ಹಾಡುಗಾರರ ಮಧ್ಯೆ ಇರುವ ಭೇದಗಳನ್ನು, ವೈರುದ್ಧಗಳನ್ನು ಈ ಕೃತಿಯಲ್ಲಿ ನಿರೂಪಿಸಿದ್ದಾರೆ. ಸುಮಾರು ನೂರಕ್ಕೂ ಮೇಲ್ಪಟ್ಟು ಹರದೇಶಿ ನಾಗೇಶಿ ಕಲಾವಿದರನ್ನು ಮುಖಾಮುಖಿಯಾಗಿ ಅವರ ಸಾಮಾಜಿಕ, ಸಾಂಸ್ಕೃತಿಕ ಮಹತ್ವ ಮತ್ತು ಪ್ರಸ್ತುತ ಕಾಲದ ಬದಲಾವಣೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಬರೆದ ಶ್ರೇಷ್ಟ ಕೃತಿಯಾಗಿದೆ. ಈ ಸಂಪ್ರದಾಯದ ಬಗ್ಗೆ ಕರಾವಳಿಯವರಿಗೆ ಅದರಲ್ಲೂ ದಕ್ಷಿಣ ಕನ್ನಡದವರಿಗೆ ಅಷ್ಟೊಂದು ಪರಿಚಯವಿಲ್ಲದ ಸಂಪ್ರದಾಯವಾಗಿದೆ. ಈ ವಾಡಿಕೆಯ ವಿವರಗಳು ನಮಗೆ ಹೊಸತಾಗಿದೆ. ಇಲ್ಲಿ ಇದನ್ನು ಉಲ್ಲೇಖಿಸಲು ಕಾರಣವಿದೆ. ಈ ನಾಗೇಶಿ ಕಲಾವಿದರು ದೇವದಾಸಿಯರು. ಪುರುಷರು ಮತ್ತು ಸ್ತ್ರೀಯರು ಒಟ್ಟು ಸೇರಿ ನೀಡುವ ಈ ಹಾಡಿಕೆಯ ಕಾರ್ಯಕ್ರಮದಲ್ಲಿ ದೇವದಾಸಿ ಸ್ತ್ರೀಯರು ಯಾವ್ಯಾವ ರೀತಿಯಲ್ಲಿ ಶೋಷಣೆಗೊಳಗಾಗುತ್ತಾರೆಂಬುದನ್ನು ಈ ಕೃತಿಯಲ್ಲಿ ಸಂಶೋಧಕಿ ಸ್ಪಷ್ಟ ಪಡಿಸಿದ್ದಾರೆ. ಇದರ ಸಂಕ್ಷಿಪ್ತ ವಿವರವನ್ನು ನೀಡುವುದು ಉಪಯುಕ್ತವೆಂದು ಭಾವಿಸಿದ್ದೇನೆ.

ಹಾಡಿಕೆಯಲ್ಲಿ ಮಹಿಳೆಯರಿಗೆ ಎದುರಾಗುವ ಸಾಂಸ್ಕೃತಿಕ ಹಿಂದೇಟುಗಳು ಪುರುಷ ಹಾಡುಗಾರರಿಗೆ ಎದುರಾಗಲಿಲ್ಲ. ಯಾಕೆಂದರೆ ಪುರುಷ ಹಾಡುಗಾರರು ಸರಸ್ವತಿ ಪುತ್ರರಾದರೆ ಮಹಿಳಾ ಹಾಡುಗಾರರು ಗೌರಿಯ ಮಕ್ಕಳು ಇಲ್ಲವೇ ದೇವಿಯ ಮಕ್ಕಳು ಆಗಿರುತ್ತಾರೆ. ಅಂದರೆ ದೇವದಾಸಿಯರಾಗಿರುತ್ತಾರೆ. ಪುರುಷ ಹಾಡುಗಾರರು ಜ್ಞಾನ ಮೂಲದಿಂದ ಗುರುತಿಸಲ್ಪಟ್ಟರೆ ಮಹಿಳಾ ಹಾಡುಗಾರರು ಲೈಂಗಿಕ ಸೇವಾ ನೆಲೆಯಿಂದ ಗುರುತಿಸಲ್ಪಡುತ್ತಾರೆ. (ಪು. 24)

ಹರದೇಶಿ ನಾಗೇಶಿ ಕಲಾವಿದರು ಹಾಡುವ ಹಾಡುಗಳು ಲಾವಣಿಯಿಂದ ಪ್ರತ್ಯೇಕಗೊಂಡು ಬೆಳೆದ ದಪ್ಪಿನ ಹಾಡುಗಳಾಗಿವೆ. ಈ ಹಾಡುಗಳನ್ನು ದಪ್ಪಿನ ಹಾಡುಗಳು, ಸವಾಲ್ ಜವಾಬ್ ಹಾಡುಗಳು ಎಂದು ಕರೆಯುತ್ತಾರೆ. ಗಂಡ್ಡೆಚ್ಚು - ಹೆಣ್ಣೆಚ್ಚು ಎನ್ನುವ ಹಾಡುಗಳಲ್ಲಿ ಗಂಡಸರು ಹೆಂಗಸರು ಸ್ಪರ್ಧಾ ಮನೋಭಾವದಿಂದ ಹಾಡುತ್ತಾರೆ. ಇವರ ಹಾಡುಗಳು ಮುದ್ರಿತವಾಗಿ ಹೊರ ಬಂದಿರುವುದು ಬೆರಳಣಿಕೆಯಲ್ಲಿ ಮಾತ್ರ ಸುಶಿಕ್ಷಿತರು ಈ ಜನಪದ ಹಾಡುಗಳನ್ನು ಮಡಿವಂತಿಕೆಯಿಂದ ಕಾಣುವುದಿದೆ. ಈ ಹಾಡುಗಳಲ್ಲಿ ಪೌರಾಣಿಕ, ಶರಣ ಶರಣೆಯರ ಚರಿತ್ರೆ, ಆಧ್ಯಾತ್ಮಿಕ ಮತ್ತು ಸಾಮಾಜಿಕ ವಸ್ತು ವಿಷಯಗಳಿರುತ್ತವೆ. ಹಾಡುಗಾರರು ನಿತ್ಯ ಅಭ್ಯಾಸ ಮಾಡಿ ವೇದಿಕೆಯಲ್ಲಿ ಪ್ರದರ್ಶಿಸುತ್ತಾರೆ. ಅದಕ್ಕೆ ಹಿಮ್ಮೇಳದಲ್ಲಿ ಮಹಿಳೆಯರು ತುಂತುಣಿ ಎಂಬ ವಾದ್ಯ, ಚೌಡಿಕೆ ಎಂಬ ತಾಳ ವಾದ್ಯಗಳನ್ನು ಬಳಸುತ್ತಾರೆ. ಗಂಡಸರು ಪಿಟೀಲು, ತಾಳ ವಾದ್ಯಗಳನ್ನು ಬಳಸುತ್ತಾರೆ. ಈ ಹಾಡುಗಾರರಲ್ಲಿ ಪ್ರಾಥಮಿಕ ಇಲ್ಲವೇ ಪ್ರೌಢ ಶಿಕ್ಷಣ ಪಡೆದವರು ಹಲವರು ಇದ್ದಾರೆ. ಹೆಚ್ಚಿನವರು ಅನಕ್ಷರಸ್ಥರು. ಇತ್ತೀಚಿನ ಹೊಸ ಪೀಳಿಗೆಯ ಯುವಕರು, ಯುವತಿಯರು ಪಿ.ಯು.ಸಿ ಶಿಕ್ಷಣ ಪೂರೈಸಿದವರೂ ಇದ್ದಾರೆ.

ಈ ಹಾಡುಗಳು ಜನಪದ ಕಲಾವಿದರ ಸ್ವಯಂ ರಚನೆಗಳು, ಇವುಗಳನ್ನು ಕಲಿಯಲು ಬಯಸಿದವರಿಗೆ ಪುರುಷ ಗುರುಗಳು ಕಲಿಸುತ್ತಾರೆ. ಜಾತ್ರೆ, ಪುಣ್ಯ ತಿಥಿ, ಊರ ಹಿರಿಯರ, ಶ್ರೀಮಂತರ, ಜಮೀನ್ದಾರರ ಮನೆಯ ಮಂಗಲ ಕಾವ್ಯಗಳು, ಹೊಸ ಮನೆ ಪ್ರವೇಶ, ಹಬ್ಬ, ಹರಿದಿನಗಳಲ್ಲಿ ನಡೆಯುವ ಕಾರ್ಯಕ್ರಮಗಳು ಇವರಿಗೆ ವೇದಿಕೆಯೊದಗಿಸುತ್ತದೆ. ಈ ಹಾಡಿಕೆಯು ರಾತ್ರಿ 10 ಗಂಟೆಗೆ ಪ್ರಾರಂಭವಾದರೆ ಬೆಳಿಗ್ಗೆ ಆರು ಗಂಟೆಗೆ ಮುಕ್ತಾಯವಾಗುತ್ತದೆ.

ಕಳೆದ ಶತಮಾನದ 50ರ ದಶಕದ ಮೊದಲು ಮಹಿಳೆಯರು ಈ ಹಾಡುಗಳನ್ನು ಹಾಡುವ ಸಂಪ್ರದಾಯವಿರಲಿಲ್ಲ. ಸರಕಾರವು ಹೆಣ್ಣುಮಕ್ಕಳನ್ನು ದೇವದಾಸಿಯರನ್ನಾಗಿ ಮಾಡುವುದು, ಜೋಗತಿಯರನ್ನು ಬಸವಿಯರನ್ನಾಗಿ ಮಾಡುವುದು ಅಪರಾಧವೆಂದು ಕಾನೂನು ಮಾಡಲು ಹೊರಟಾಗ ಹರದೇಶಿ ಹಾಡುಗಾರರು ತಮ್ಮ ಕುಟುಂಬದ ದೇವದಾಸಿಯರಿಗೆ ಈ ಹಾಡು ಗಳನ್ನು ಕಲಿಸಿರಬೇಕು. ಈ ವೃತ್ತಿಗೆ ಸೇರಿದ ಮೇಲೆ ಈ ಮಹಿಳೆಯರನ್ನು ಹಾಡಿಕೆ ಯವರೆಂದು ಜನ ಗುರುತಿಸತೊಡಗಿದ್ದು ದೇವದಾಸಿ ಎಂದು ಕರೆಸಿಕೊಳ್ಳುವ ಅವಮಾನ ಇಲ್ಲದಾಯಿತು. ಆದರೆ ಈ ಕಲಾವಿದೆಯರನ್ನು ಸಮಾಜ ನೋಡುವ ದೃಷ್ಟಿಯೇನೂ ಬದಲಾಗಲಿಲ್ಲ. ಈ ಕಲಾವಿದೆಯರು ಬಹುತೇಕ ತಳವರ್ಗದವರು ಮತ್ತು ಹಿಂದುಳಿದ ವರ್ಗದವರು. ಹಲವಾರು ಮಂದಿ ಈ ಹಾಡಿಕೆಯನ್ನು ವೃತ್ತಿಯಾಗಿಯೇ ಸ್ವೀಕರಿಸಿದರು. ಕೆಲವರು ಮಾತ್ರ ಈ ವೃತ್ತಿಯನ್ನು ಆಧ್ಯಾತ್ಮಿಕ ನೆಲೆಯಲ್ಲಿ ಸ್ವೀಕರಿಸಿದ್ದರು.

ಬದುಕಿನ ಒತ್ತಡಗಳಿಂದಾಗಿ ಹಾಡಿಕೆಗೆ ಬರುವ ಮುಂಚೆಯೇ ಇವರು ಜೋಗತಿಯರಾಗಿರಬಹುದು. ಆದರೆ ಅವರನ್ನು ಕಲಾವಿದೆಯರೆಂದು ಸರಕಾರ ಪರಿಗಣಿಸುವುದಿಲ್ಲ. ಹಾಡಿಕೆಯ ಕಲಾವಿದೆಯರು ಮದುವೆಯಾಗಬಾರದು. ಮದುವೆಯಾದರೆ ಕಲಾ ಜೀವನಕ್ಕೆ ಆಸ್ಪದವಿರುವುದಿಲ್ಲ. ಹಾಗೆಂದು ಅವರನ್ನು ಸಾಮಾನ್ಯ ಗೃಹಿಣಿಯರೆಂಬ ಗೌರವದಲ್ಲೂ ಸಮಾಜ ಕಾಣುವುದಿಲ್ಲ. ಶ್ರೀಮಂತ ಸಮಾಜದಲ್ಲಿ ನಾಚ್‌ವಾಲಿಗಳು, ಸಂಗೀತಗಾರ್ತಿಯರು, ಪ್ರಸಿದ್ಧರಾಗಿ ವೇಶ್ಯಯರಾಗಿಯೂ ಸಮಾಜದಲ್ಲಿ ಗೌರವದ ಜೀವನ ನಡೆಸುತ್ತಿದ್ದ ಚರಿತ್ರೆ ಇದೆ. ಈ ಹಾಡಿಕೆ ಮೇಳಗಳು ಕೆಳವರ್ಗದ ಸಮುದಾಯದಕ್ಕೆ ಹಾಡಿಕೆ ಎಂದರೆ ಜನಪದ ಸಂಗೀತ ಮೇಳಗಳನ್ನು ಏರ್ಪಡಿಸಿ ಕಲಾವಿದೆಯರಾಗಿ ಗುರುತಿಸಿಕೊಂಡಿದ್ದರು. ಪಾತರದವರ ನರ್ತನವು ದಾಸಿ ಅಟ್ಟಂ, ಸಾದಿರಾ ಎಂದು ಗುರುತಿಸಿಕೊಂಡಿದ್ದು, ಯಾವಾಗ ಮೇಲ್ವಾತಿ ಕೃಷ್ಣ ಅಯ್ಯ‌ ಅಂತಹವರು ಕಲೆಯೊಳಗೆ ಪ್ರವೇಶಿಸಿ ಅದಕ್ಕೆ ಶಾಸ್ತ್ರೀಯ ಸ್ಪರ್ಶ ನೀಡಿದರೋ ಆಗ ಅದು ಭರತನಾಟ್ಯ ಆಯಿತು. ಪಾತರದವರ ನರ್ತನದ ಹಾಗೆಯೇ ಅವರ ಸಂಗೀತಕ್ಕೂ ಶಾಸ್ತ್ರೀಯ ಸ್ಪರ್ಶ ದೊರೆತು ಅದು ಹಿಂದುಸ್ಥಾನಿ ಸಂಗೀತವಾಯಿತು, ಕರ್ನಾಟಕ ಸಂಗೀತವಾಯಿತು. ಶಾಸ್ತ್ರೀಯ ಸ್ಪರ್ಶ ಪಡೆದ ಪಾತರದವರ ಕಲೆ ಮೈಲಿಗೆಯನ್ನು ಕಳೆದುಕೊಂಡು ಶ್ರೇಷ್ಟವೂ, ಶುದ್ಧವೂ ಆಗಿ ಜಾತ್ಯತೀತ ಕಲೆಯಾಗಿ ಎಲ್ಲರಿಂದ ಮಾನ್ಯತೆಯನ್ನು ಪಡೆಯಿತು. ಆದರೆ ಈ ಅಂತ್ಯಜ ಜಾತಿಗಳ ಹಾಡುಗಾರಿಕೆಯು ಜಾತಿಗಳ ಮೂಲಕ ಅದರಲ್ಲೂ ಜೋಗತಿ ಹಾಗೂ ಬಸವಿಯರ ಮೂಲಕ ಗುರುತಿಸಲ್ಪಡುತ್ತದೆ. ಅಶ್ಲೀಲ ನೆಲೆಯಲ್ಲಿ ಗುರುತಿಸಲ್ಪಡುವ ಜೋಗತಿಯರು ಬಸವಿಯರು ಹಾಡಿಕೆ ಯಲ್ಲಿ ತೊಡಗಿಸಿಕೊಳ್ಳುವುದನ್ನು ಸಹಜವೆಂದೇ ಸಮಾಜ ಸ್ವೀಕರಿಸುತ್ತದೆ.

ಹಾಡುವ ವೃತ್ತಿಯನ್ನು ಕಲಿಯ ಬಯಸಿದವರಿಗೆ ಕಲಿಸುವವರು. ಸಾಹಿತ್ಯ ರಚನೆ ಮಾಡುವವರು ಪುರುಷರೇ ಆಗಿದ್ದಾರೆ. ಗಮನಿಸಬೇಕಾದ ವಿಶೇಷ ಸಂಗತಿಯೆಂದರೆ ಈ ಕಲೆಯಲ್ಲಿ ಪಳಗಿದವರಲ್ಲಿ, ಗುರುಗಳಾಗಿದ್ದವರಲ್ಲಿ, ಪ್ರದರ್ಶನ ನೀಡುವವರಲ್ಲಿ ಮುಸಲ್ಮಾನ ಪುರುಷರೂ ಇದ್ದಾರೆ ಮಹಿಳೆಯರೂ ಇದ್ದಾರೆ. ಆದರೆ ಯಾವ ಮಹಿಳೆಯೂ ಗುರುವಾಗಿ ವೇದಿಕೆ ಪಡೆಯುವುದಿಲ್ಲ. ಈ ಕಲೆಗೆ ಗಂಡಸರ ಮುಂದಾಳ್ತನ ಬೇಕೇಬೇಕು. ಈ ಕಲಾವಿದೆಯರನ್ನು ಊಳಿಗ ಮಾನ್ಯ ಪರಂಪರೆಯು ಹೀಗೆ ಪೋಷಿಸುತ್ತಾ ಬಂದಿದೆ.

ಗುರುವಿನ ಮನೆಯಲ್ಲಿ ಜೀತಕ್ಕಿದ್ದು ಕೊಂಡು ಶಿಷ್ಠೆಯರು ಹಾಡು ಕಲಿಯುವ ಪದ್ಧತಿ ಈಗಲೂ ಇದೆ. ಈ ಗುರುಗಳೇ ಅತ್ಯಾಚಾರ ಮಾಡಿದ ಘಟನೆಗಳು ಸಾಮಾನ್ಯವಾಗಿದ್ದುವು. ಡಾ.ಶೈಲಜಾ ಹಿರೇಮಠ ಅವರು ಸಂದರ್ಶಿಸಿದ ಕೆಲವು ಗುರುಗಳು ಚಿತ್ತ ಶುದ್ಧಿಕರಣಕ್ಕಾಗಿ ಕಲಿಯಲು ಬಂದ ಹುಡುಗಿಯರೊಂದಿಗೆ ದೈಹಿಕ ಸಂಬಂಧ ಹೊಂದುತ್ತೇವೆಂದು ತಮ್ಮನ್ನು ತಾವು ಸಮರ್ಥಿಸಿಕೊಂಡರಂತೆ. ಜೋಗತಿಯರಲ್ಲಿ ಬಸವಿಯರಲ್ಲಿ 'ಉಡಿ ತುಂಬುವ' ಇಲ್ಲವೇ 'ಹೆಣ್ಣು ಮಾಡುವ ಎಂಬ ಸಂಪ್ರದಾಯವಿದೆ. ಇದು ತಮ್ಮ ಉದ್ದೇಶಕ್ಕೆ ಅನುಕೂಲವಾಗುವ ಗಂಡಿ ನೊಂದಿಗೆ ಸಂಪರ್ಕ ಹೊಂದುವ ಕಾರ್ಯಕ್ರಮವಾಗಿ ಜೋಗತಿಯರಲ್ಲಿ ರೂಢಿಯಲ್ಲಿದೆ. ಆದರೆ ಸಾಮಾಜಿಕ ಗ್ರಹಿಕೆಯಲ್ಲಿ ಇವರು ಎಲ್ಲರೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದುತ್ತಾರೆಂಬ ನಂಬಿಕೆಯಿದೆ. ಆದುದರಿಂದ ಈ ಹಾಡಿಕೆಯ ಪ್ರದರ್ಶನಕ್ಕೆ ಹೋಗುವ ಕಡೆಗಳಲ್ಲಿ ಈ ಕಲಾವಿದೆಯರು ಅವಮಾನ ಹಿಂಸೆ, ಅತ್ಯಾಚಾರಗಳಿಗೊಳಗಾದ ಹಲವಾರು ಘಟನೆಗಳಿವೆ. ಹೀಗೆ ಅತ್ಯಾಚಾರ ಮಾಡಿದವರು ಈ ಕಲಾವಿದೆಯರ ದೇಹದ ಮೇಲೆ ಹಕ್ಕು ಚಲಾಯಿಸುತ್ತಿದ್ದರೇ ವಿನಃ ಹಣವನ್ನು ನೀಡುತ್ತಿರಲಿಲ್ಲ.

ದೇವದಾಸಿ ಪದ್ಧತಿಯಿರುವ ಸಮುದಾಯಗಳಲ್ಲಿ ಅವರ ಆರಾಧನಾ ಪದ್ಧತಿಗಳು ಮಾತೃ ಮೂಲವಾಗಿರುತ್ತವೆ. ಆದರೆ ಇವರು ಅನುಸರಿಸುವ ಮೌಲ್ಯಗಳು ಪಿತೃಪ್ರಧಾನವಾಗಿರುತ್ತದೆ. ದೇವದಾಸಿಯರನ್ನು, ಜೋಗತಿಯರನ್ನು ಮನೆಯ ಮಗನೆಂದು ಭಾವಿಸುತ್ತಾರೆ. ಮಗನಿಗಿರುವ ಅಧಿಕಾರಗಳೆಲ್ಲವೂ ಆಕೆಗಿರುತ್ತದೆ. ಆದರೆ ಇವರಲ್ಲಿ ಲೋಕಾರೂಢಿಯ ನೀತಿಗಳನ್ನು ಮುಂದಿಟ್ಟು ಆಸ್ತಿಯಲ್ಲಿನ ಆಕೆಯ ಹಕ್ಕನ್ನು ನಿರಾಕರಿಸಲಾಗುತ್ತದೆ.

ಹರದೇಶಿ- ನಾಗೇಶಿ ಹಾಡುಗಳು, ಶೃಂಗಾರ ಪ್ರಧಾನವಾಗಿವೆ. ಕಲಾವಿದೆ ಯರಿಗೆ ಮುಜುಗರ ಉಂಟುಮಾಡುವ ಹಾಡಿಕೆಗಳನ್ನು ವೇದಿಕೆಯಲ್ಲಿ ಪುರುಷರೇ ಸೃಷ್ಟಿಸುವುದೂ ಇದೆ. ಗಂಡ್ಡೆಚ್ಚು ಹೆಣ್ಣೆಚ್ಚು ಎಂಬ ಹಾಡಿಕೆಯಲ್ಲಿ ಪರಸ್ಪರರು ಸ್ಪರ್ಧೆಗಾಗಿ ಬೈದಾಡಿಕೊಳ್ಳುವುದೂ ಇದೆ. ಇಂತಹ ಪ್ರಸಂಗಗಳಲ್ಲಿ ಕಲಾವಿದೆಯರು ತಮ್ಮ ಸೃಷ್ಟಿಶೀಲ ಪ್ರತಿಭೆಯಿಂದ ತಕ್ಷಣ ಆಶುಗೀತೆಯನ್ನು ರಚಿಸಿ ತಮ್ಮ ಪ್ರೌಢಿಮೆಯನ್ನು ಮೆರೆದ ಪ್ರಸಂಗಗಳೂ ಇವೆ. ಹೀಗೆ ಹರದೇಶಿ—ನಾಗೇಶಿ ಹಾಡುಗಳನ್ನು ಮಹಿಳೆಯರೇ ಹಾಡುವ ಕೆಲವು ಗುಂಪುಗಳೂ ಇವೆ. ಏನೇ ಆದರೂ ಆಕೆಯನ್ನು ಲೈಂಗಿಕ ವಸ್ತುವೆಂದೇ ಪರಿಗಣಿಸುವ ಸಮಾಜದ ಮನಸ್ಥಿತಿಯ ಬಗ್ಗೆ ಈ ಕಲಾವಿದೆಯರಿಗೆ ರೋಷವಿದೆ, ದುಃಖವಿದೆ. ತಾವು ಕಲಾವಿದೆಯರು ಎಂದು ಗುರುತಿಸಿಕೊಳ್ಳುವ ಇವರು ತಮಗೆ ಹುಟ್ಟಿದ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಒಬ್ಬ ಗಂಡಸಿನ ಹೆಸರನ್ನು ತಂದೆಯೆಂದು ನಮೂದಿಸಿದ್ದರು. ಈ ಕಾರಣಕ್ಕಾಗಿ ದೇವದಾಸಿಯರಿಗೆ ಸರಕಾರದಿಂದ ಸಿಗುವ ಸವಲತ್ತುಗಳು ಸಿಗಲಿಲ್ಲ. ದೇವದಾಸಿಯರಿಗೆ ಹುಟ್ಟುವ ಮಕ್ಕಳಿಗೆ ತಂದೆಯ ಹೆಸರು ಇರುವುದಿಲ್ಲ. ತಮ್ಮನ್ನು ಕಲಾವಿದೆಯರೆಂದು ಗುರುತಿಸಿ ಆ ಸೌಲಭ್ಯಗಳನ್ನು ಸರಕಾರದಿಂದ ಪಡೆಯಲು ಪ್ರಯತ್ನಿಸಿ ವಿಫಲರಾದವರೇ ಹೆಚ್ಚು. ಕೆಲವೇ ಮಂದಿ ಸಫಲರಾದದ್ದಿದೆ. ಯಾಕೆಂದರೆ ಇವರನ್ನು ಕಲಾವಿದೆಯ ರೆಂದು ಗುರುತಿಸುವುದಕ್ಕೂ ಸರಕಾರ ಹಿಂಜರಿದ ಪ್ರಸಂಗಗಳೇ ಹೆಚ್ಚು. ವೇಶ್ಯಯ ಜೀವನದಿಂದ ಮುಕ್ತಿ ಪಡೆಯಬೇಕೆಂದು ಆಶಿಸಿ ಇವರು ಈ ಕಲೆಯ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಇಲ್ಲಿಯೂ ಅವರನ್ನು ಮಾನಸಿಕ ವಾಗಿ, ಸಾಮಾಜಿಕವಾಗಿ, ದೈಹಿಕವಾಗಿ ಶೋಷಿಸುವ ಪ್ರಸಂಗಗಳೇ ಹೆಚ್ಚುತ್ತಿವೆ ಎಂಬುದನ್ನು ಸಂಶೋಧಕಿಯಾದ ಶೈಲಜಾ ಅವರು ಸವಿವರವಾಗಿ ಪ್ರತಿಪಾದಿಸಿದ್ದಾರೆ. ಜೋಗತಿ ಮತ್ತು ಬಸವಿ, ದೇವದಾಸಿಯರ ಬದುಕಿನ ಇನ್ನೊಂದು ಮಗ್ಗುಲನ್ನು ತೆರೆದು ತೋರಿಸಿದ್ದಾರೆ. ಸಾಮಾಜಿಕ ಸಂಪ್ರದಾಯಗಳಿಗೆ ಕಣ್ಣು, ಕಿವಿ, ನಾಲಿಗೆಗಳೂ ಇಲ್ಲ. ಹೃದಯವೂ ಇಲ್ಲವೆಂಬುದು ಈ ಕೃತಿಯನ್ನು ಓದಿದಾಗ ಮನದಟ್ಟಾಗುತ್ತದೆ.

ದೇವದಾಸಿಯರು

[ಸಂಪಾದಿಸಿ]

ದೇವದಾಸಿಯರು

ಭಾರತದಲ್ಲಿ ವೇಶ್ಯಾ ಪದ್ಧತಿಯು ವ್ಯಾಪಕವಾಗಿತ್ತು ಮತ್ತು ವೈವಿಧ್ಯಮಯವಾಗಿತ್ತು. ಮೌಲ್ಯರಾಜರ ಗುಪ್ತ ವಂಶದ ರಾಜರ ಕಾಲದಲ್ಲಿ ವ್ಯವಸ್ಥಿತವಾದ ವೇಶ್ಯಾವಾಟಿಕೆ ಗಳಿದ್ದುವು. ದೇವದಾಸಿಯರು ಮತ್ತು ಸಾಮಾನ್ಯ ವೇಶ್ಯಯರು ಎಂಬ ವರ್ಗವಿತ್ತು. ದೇವದಾಸಿಯರಲ್ಲೂ ಅವರ ಕರ್ತವ್ಯಕ್ಕನುಗುಣವಾಗಿ ಭಿನ್ನತೆಗಳಿದ್ದುವು. ದೇವದಾಸಿಯರಲ್ಲೂ ದೇವಸ್ಥಾನದ ಅಂಗಭೋಗದ, ರಂಗಭೋಗದ ಕಾರ್ಯಗಳಿಗಾಗಿ ಸೇವೆ ಸಲ್ಲಿಸುವ ವೇಶ್ಯಯರ ಗುಂಪುಗಳಿದ್ದುವು. ದೇವಸ್ಥಾನದಲ್ಲಿ ಹಾಕುವ ಅಭಿನಯಿಸುವ ಕೆಲಸಗಳಿಗಾಗಿ ನೇಮಿಸಲ್ಪಟ್ಟು ಪಾತರದವರೆಂಬ ವರ್ಗದವರಿದ್ದರು. ಸಾಮಾನ್ಯ ವೇಶ್ಯೆಯರಲ್ಲಿ ಬಸವಿಯರು, ಜೋಗತಿಯರೆಂಬ ವರ್ಗಗಳಿದ್ದುವು. ಹಿಂದೂ ದೇವಾಲಯಗಳಲ್ಲಿ ಮಾತ್ರವಲ್ಲದೆ ಜೈನರ ಬಸದಿ ಬೌದ್ಧರ ಪಗೋಡಾದಲ್ಲೂ ದೇವದಾಸಿಯರಿದ್ದರು.

ದೇವದಾಸಿಯರನ್ನು ಯಾವುದಾದರೊಂದು ದೇವರಿಗೆ ಇಲ್ಲವೇ ಅವನ ಖಡ್ಗಕ್ಕೆ ಮದುವೆ ಮಾಡಿ ಕೊಡುತ್ತಿದ್ದರು. ಆಂಧ್ರದಲ್ಲಿ ದೇವದಾಸಿಯರನ್ನು ಜೋಗಮ್ಮಗಳೆಂದೂ ಸಾನಿಯರೆಂದೂ ಕರೆಯುತ್ತಿದ್ದರು. ಒರಿಸ್ಸಾದಲ್ಲಿ ಇವರನ್ನು ಗುಣಿ ಎಂದು ಕರೆಯುತ್ತಿದ್ದರು. ತಮಿಳುನಾಡಿನಲ್ಲಿ ದೇವದಾಸಿ ಯರಲ್ಲಿ ಬಲಗೈ ಮತ್ತು ಎಡಗೈ ದೇವದಾಸಿಯರೆಂಬ ಪಂಗಡವಿದೆ. ಎಡಗೈ ದೇವದಾಸಿಯರು ಕೆಳ ಜಾತಿಯ ಗಂಡಸರೊಂದಿಗೆ ಸಂಪರ್ಕವಿಟ್ಟುಕೊಳ್ಳುತ್ತಿದ್ದರು. ಬಲಗೈ ದೇವದಾಸಿಯರು ಉಚ್ಛ ಜಾತಿಯ ಗಂಡಸರೊಂದಿಗೆ ಮಾತ್ರ ಬೆರೆಯುತ್ತಿದ್ದರು.
ಕರ್ನಾಟಕದಲ್ಲಿ ಈ ಪದ್ಧತಿಯು ಕೆಳ ಜಾತಿಯ ಸಮುದಾಯದಲ್ಲಿ ಹೆಚ್ಚಿದೆ. ಆಪತ್ತುಗಳ ಪರಿಹಾರಕ್ಕಾಗಿ ದೇವರಿಗೆ ಹರಕೆ ಸಲ್ಲಿಸಲು ದತ್ತು ಸ್ವೀಕಾರ ಮಾಡಿ ತಮ್ಮನ್ನು ಅರ್ಪಿಸಿಕೊಂಡು ದೇವದಾಸಿಯರಾಗುತ್ತಾರೆ. ಗಂಡು ಸಂತಾನವಿಲ್ಲದವರು ತಮ್ಮ ಹೆಣ್ಣು ಮಗುವನ್ನು ದೇವದಾಸಿಯನ್ನಾಗಿ ಮಾಡುವುದಿದೆ. ಇದರಿಂದ ದೇವರು ಸುಪ್ರೀತನಾಗಿ ಗಂಡು ಮಗುವನ್ನು ಕರುಣಿಸುತ್ತಾನೆಂದು ನಂಬುತ್ತಾರೆ. ಗಂಡು ಮಗುವಿನ ಮೋಹಕ್ಕಾಗಿ ಹೆಣ್ಣು ಮಗುವನ್ನು ಶೋಷಣೆಗೊಳಪಡಿಸುವುದು ಕ್ರೌರ್ಯವೆಂಬ ಭಾವನೆಯೇ ಮೂಡದ ಕ್ರೂರ ಮನಸ್ಥಿತಿ ಆಗ ಸಮಾಜದಲ್ಲಿತ್ತು. ಈ ಮೂಢನಂಬಿಕೆಗಳಿಗೆ ದಾಸರಾಗಿ ಹುಡುಗಿಯರನ್ನು ದೇವಾಲಯಗಳಿಗೆ ಕರೆದುಕೊಂಡು ಹೋಗಿ ಅವರನ್ನು ದೇವರಿಗೆ ಮದುವೆ ಮಾಡಿಸುತ್ತಾರೆ. ದೇವಾಲಯದ ಅರ್ಚಕ ಹುಡುಗಿಯರಿಗೆ ತಾಳಿ ಕಟ್ಟುತ್ತಾನೆ. ಅವಳು ಮೂರುದಿನ ದೇವಸ್ಥಾನದಲ್ಲೇ ಅರ್ಚಕನಿಗೆ ಲೈಂಗಿಕ ಸೇವೆ ಸಲ್ಲಿಸಬೇಕು ಅನಂತರ ಅವಳು ದೇವಸ್ಥಾನಕ್ಕೆ ಬಿಟ್ಟ ಬಸವಿಯೆಂದು ಕರೆಯಲ್ಪಡುತ್ತಾಳೆ. ಅವಳು ಎಂದೂ ವಿಧವೆಯಾಗುವುದಿಲ್ಲ. ನಿತ್ಯ ಮುತ್ತೈದೆಯಾಗಿ ಕೆಳ ಸಮುದಾಯದ ಜನಗಳ ಲೈಂಗಿಕ ಸೇವೆಗೆ ಸಿದ್ಧಳಾಗುತ್ತಾಳೆ. ಹಿಂದೆ ಈ ವೇಶ್ಯೆಯರನ್ನು ಯುದ್ಧಕಾಲದಲ್ಲಿ ಗಾಯಾಳುಗಳ ಶುಶೂಷೆಗೂ ನೇಮಿಸುತ್ತಿದ್ದರಂತೆ. ದೇವಸ್ಥಾನದ ಜಾತ್ರೆಗಳ ಸಮಯದಲ್ಲಿ ಆಹಾರ ಒದಗಿಸುವ ಕೆಲಸವನ್ನು ಮಾಡುತ್ತಿದ್ದರು. ಗುಜರಾತಿನ ಸೋಮನಾಥ ದೇವಾಲಯ, ತಂಜಾವೂರಿನ ಬ್ರಹದೀಶ್ವರ ದೇವಾಲಯಗಳಲ್ಲೂ ನೂರಾರು ಮಂದಿ ದೇವದಾಸಿಯರಿದ್ದ ದಾಖಲೆಗಳಿವೆ. ಸ್ತ್ರೀ ದೇವತೆ ಮತ್ತು ಪುರುಷ ದೇವತೆಗಳುಳ್ಳ, ದೇವಸ್ಥಾನಗಳಿಗೂ ದೇವದಾಸಿಯರನ್ನು ಅರ್ಪಿಸುವ ಪದ್ಧತಿ ಇದೆ. ಬಹುಶಃ ಪುರುಷ ದೇವತೆಗಳುಳ್ಳ ದೇವಸ್ಥಾನಗಳಲ್ಲೇ ಹೆಚ್ಚು ಮಂದಿ ದೇವದಾಸಿಯರಿದ್ದರು ಎಂದು ಹೇಳಬಹುದು. ಕರ್ನಾಟಕದಲ್ಲಿ ಈಗಲೂ ಹೆಚ್ಚಾಗಿ ಸ್ತ್ರೀ ದೇವತೆಯರಾದ ಎಲ್ಲಮ್ಮ, ರೇಣುಕಾ ಮುಂತಾದ ದೇವಸ್ಥಾನಗಳಿಗೆ ದೇವದಾಸಿಯರು ಹರಕೆ ಹೇಳುವುದು, ಮುತ್ತು ಕಟ್ಟಿಸಿಕೊಳ್ಳುವುದು ಕಂಡುಬರುತ್ತದೆ. ಬೆಳಗಾವಿಯ ಉಚ್ಚಂಗಿ ದುರ್ಗಮ್ಮ ದೇವಿ, ರಾಯಚೂರಿನ ಹುಲಿಗಿಯ ಹುಲಿಗೆಮ್ಮದೇವಿ, ಕೊಪ್ಪಳದ ಮರುಳ ಸಿದ್ಧಪೀಠ ಮುಂತಾದ ಕಡೆಗಳಲ್ಲಿ ಹೆಚ್ಚು ಸಂಖ್ಯೆಗಳಲ್ಲಿ ದೇವದಾಸಿಯರು ಸೇವೆ ಸಲ್ಲಿಸುತ್ತಿದ್ದರು. ಸಮಾಜದ ಎಲ್ಲಾ ಸಮುದಾಯದ ಜನರ ಕಾಮದಾಹವನ್ನು ತಣಿಸುವುದಕ್ಕಾಗಿ ದೇವದಾಸಿಯರಲ್ಲಿಯೇ ಕೆಲವು ಭಿನ್ನತೆಗಳಿವೆ. ಧಾರ್ಮಿಕ ವೇಶ್ಯಾವಾಟಿಕೆಯನ್ನು ಎಷ್ಟು ವ್ಯವಸ್ಥಿತವಾಗಿ ಮಾಡಿದ್ದಾರೆಂಬುದನ್ನು ಕಂಡಾಗ ಪಿತೃಪ್ರಧಾನ ಸಮಾಜದ ಸ್ತ್ರೀ ಶೋಷಣೆಯ ಕ್ರೌರ್ಯದ ಅರಿವಾಗುತ್ತದೆ. ದೇವಾಲಯದ ದೇವದಾಸಿಯರಾಗುವವರು ಕನ್ಯೆಯರಾಗಿರಬೇಕು. ದೇವದಾಸಿಯಾಗುವ ಸಮಾರಂಭದಲ್ಲಿ ಅವಳ ಕನ್ಯತ್ವಹರಣ ಮಾಡುವ ಯೋಗ್ಯ ವ್ಯಕ್ತಿಯನ್ನು ಕುಟುಂಬದ ಹಿರಿಯರೇ ಆಯ್ಕೆ ಮಾಡುತ್ತಾರೆ. ಅವಳಿಗೆ ಮಂಗಳಸೂತ್ರ ಕಟ್ಟುವ ಅಧಿಕಾರ ಮಾತ್ರ ದೇವಸ್ಥಾನದ ಅರ್ಚಕನಿಗೆ ಇರುತ್ತದೆ. ದೇವರ ಗುಡಿಯನ್ನು ಸ್ವಚ್ಛಗೊಳಿಸುವುದು. ದೇವರಜಾತ್ರೆಯ ಸಂದರ್ಭದಲ್ಲಿ ದೇವರ ಕೆಲಸಗಳಲ್ಲಿ ನೆರವಾಗುವುದು ಇವಳ ಕರ್ತವ್ಯವಾಗಿದೆ. ಇನ್ನೊಂದು ವರ್ಗದ ದೇವದಾಸಿಯರು ದೇವಾಲಯದ ದೇವದಾಸಿಯರಿಗಿಂತ ಕೆಳವರ್ಗದವರು. ಇವರು ದೇವಾಲಯದ ದೇವದಾಸಿಯರ ಸಹಾಯಕರಾಗಿ ಕೆಲಸ ಮಾಡುತ್ತಾರೆ. ಇವರು ದೀಕ್ಷೆ ಸ್ವೀಕರಿಸುವಾಗ ಕುಮಾರಿಯರಾಗಬೇಕೆಂಬ ನಿಯಮವಿಲ್ಲ. ದೇವರ ವಾರ್ಷಿಕ ಜಾತ್ರೆಯ ಸಮಯದಲ್ಲಿ ಓಕುಳಿ ಆಡುವ ಹಕ್ಕು ಇವರಿಗೆ ಇದೆ. ಊರಿನ ಕೆಲವು ಜಾತಿಗೆ ಸೇರಿದ ಪುರುಷರು ಮಾತ್ರ ಇವರ ಮೇಲೆ ಓಕುಳಿ ನೀರನ್ನೆರಚಬಹುದು. ಇವರು ಸಮಾಜದ ಯಾವುದೆ ಪುರುಷನೊಂದಿಗೆ ಉಪಪತ್ನಿಯಾಗಿ ಬದುಕುತ್ತಿದ್ದರು. ಇವರಿಬ್ಬರಿಗಿಂತ ಕೆಳವರ್ಗದವರು ಬಸವಿಯರು. ದೀಕ್ಷಾ ಸಮಾರಂಭಗಳು ಸಮಾನವಾಗಿರುತ್ತದೆ. ಆದರೆ ದೇವಸ್ಥಾನದಲ್ಲಿ ನಡೆಯದೆ ಮನೆಯಲ್ಲೇ ನಡೆಯುತ್ತದೆ. ಅವಳು ಬಸವಿಯಾದ ಮೇಲೆ ತನಗಿಷ್ಟ ಬಂದವರ ಜೊತೆ ಬದುಕಬಹುದು. ತನ್ನ ಬಳಗದ ಗಂಡಸರೊಂದಿಗೆ ಮಾತ್ರ ಸಂಪರ್ಕವಿರಿಸಿಕೊಂಡವಳನ್ನು ಬಳಗದ ಬಸವಿಯೆಂದೂ, ಊರಿನ ಎಲ್ಲರೊಡನೆ ಸಂಪರ್ಕವಿರಿಸಿಕೊಂಡವಳು ಊರ ಬಸವಿಯೆಂದು ಕರೆಯುತ್ತಾರೆ. ಇಂತಹ ಅತಂತ್ರ ಬದುಕನ್ನು ಧರ್ಮದ ಹೆಸರಿನಲ್ಲಿ ತಮ್ಮ ಮೇಲೆ ಹೇರಿಕೊಂಡವರಿಗೆ ಸಮಾಜ ನೀಡಿದ ಕೆಲವು ಸಣ್ಣ ಆಮಿಷಗಳಿವೆ. ಸಮಾಜದಲ್ಲಿ ಈ ಬಸವಿಯರು ಅಸ್ಪೃಶ್ಯ ಸಮಾಜಕ್ಕೆ ಸೇರಿದವರಾಗಿದ್ದರೂ ಸ್ಪೃಶ್ಯ ಮತ್ತು ಅಸ್ಪೃಶ್ಯರಿಂದ ನಡೆಸಲ್ಪಡುವ ದೇವಸ್ಥಾನಗಳ ಜಾತ್ರೆಯಲ್ಲಿ ಮೆರವಣಿಗೆಯಲ್ಲಿ ಪವಿತ್ರ ದೀಪವನ್ನು ಹೊತ್ತುಕೊಳ್ಳುವುದು ಮತ್ತು ಬೆಳಗಿಸುವ ಅಧಿಕಾರ ಇವರಿಗೆ ಇದೆ. ಸ್ಪಶ್ಯ ಮತ್ತು ಅಸ್ಪೃಶ್ಯವೆಂಬ ಭೇದವಿರುವ ಸಮಾಜದಲ್ಲಿ ಈ ಬಸವಿಯರಿಗೆ ಮುತ್ತೈದೆಯ ಗೌರವವಾದ ಸ್ಥಾನ ನೀಡಲಾಗುತ್ತಿತ್ತು. ದೇವರಿಗೆ ಮದುವೆ ಮಾಡಲ್ಪಟ್ಟ ಕಾರಣ ಅವರೆಂದೂ ವಿಧವೆಯರಾಗುವುದಿಲ್ಲ. ಕಾಮನಹಬ್ಬದಲ್ಲಿ ಕಾಮದಹನಕ್ಕಾಗಿ ಬೆಂಕಿಯನ್ನು ಕೊಡುವ ಅಧಿಕಾರ ಇವರಿಗಿದೆ. ಕಾಮಕೇಳಿಯ ಹಾಡುಗಳನ್ನು ಹಾಡುತ್ತಾರೆ. ಸ್ಪಶ್ಯ ಸಮಾಜದವರು ಇವರನ್ನು ಕರೆದು ಹಾಡು ಹಾಡಿಸುವ ಸಂಪ್ರದಾಯವಿದೆ. ಇಂತಹ ಸಣ್ಣ ಗೌರವವೇ ಇವರಿಗೆ ವೇಶ್ಯಾ ವೃತ್ತಿಯ ಶೋಷಣೆಗಳನ್ನು ಸಹಿಸುವ ಶಕ್ತಿಯನ್ನು ನೀಡಿರಬೇಕು. ಹಳ್ಳಿಗಳಲ್ಲಿ ಜಾತಿ ಸಂರಚನೆಗಳು, ಸಂಘಟನೆಗಳು ವೇಶ್ಯಾಗಾರಿಕೆಯನ್ನು ಭದ್ರಪಡಿಸುವುದರಲ್ಲಿ ತುಂಬಾ ಮಹತ್ವದ ಪಾತ್ರ ವಹಿಸುತ್ತದೆ. ಜಾತಿ ಶ್ರೇಣೀಕರಣದಂತೆ ದೇವದಾಸಿ ಪದ್ಧತಿಯಲ್ಲೂ ಶ್ರೇಣೀಕರಣವಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದು.

ಜೋಗತಿಯರೆಂಬ ಇನ್ನೊಂದು ಪವಿತ್ರ ಸೇವೆಯೂ ರೂಢಿಯಲ್ಲಿದೆ. ಜೋಗತಿಯರಲ್ಲಿ ಎಲ್ಲರೂ ವೇಶ್ಯಾವಾಟಿಕೆಯನ್ನು ನಡೆಸುವುದಿಲ್ಲ. ಹಾಗೆಯೇ ಎಲ್ಲಾ ದೇವದಾಸಿಯರೂ ವೇಶ್ಯಾವಾಟಿಕೆಯಲ್ಲಿ ನಿರತರಾಗಿರುವುದಿಲ್ಲ. ಆದರೂ ಅವರಿಗೆ ಸಮಾಜದಲ್ಲಿ ವಿವಾಹಿತ ಗೃಹಿಣಿಯ ಮಾನ್ಯತೆ ಇರುವುದಿಲ್ಲ. ಜೋಗತಿಯರಲ್ಲಿ ಸೂಳೆಮುತ್ತುಗಳನ್ನು ಕೊರಳಲ್ಲಿ ಕಟ್ಟಿಕೊಂಡವರು ವೇಶ್ಯಾಪದ್ಧತಿಯನ್ನು ಅನುಸರಿಸುತ್ತಾರೆಂದು ನಿಖರವಾಗಿ ಹೇಳಬಹುದು. ಸಮಾಜದಲ್ಲಿ ನೀತಿ, ಮತ್ತು ಧಾರ್ಮಿಕ ಭಾವನೆಗಳನ್ನು ಹೆಚ್ಚಿಸುವುದಕ್ಕೆ ಈ ಜೋಗತಿಯರು ಪ್ರಯತ್ನಿಸುತ್ತಾರೆ. ಎಲ್ಲಮ್ಮನ ಭಕ್ತರಾದ ಇವರು ಆ ಪಂಥದ ಪ್ರಚಾರಕ್ಕಾಗಿ ಶ್ರಮಿಸುತ್ತಾರೆ. ಇವರನ್ನು ಒಂದು ರೀತಿಯಲ್ಲಿ ಧಾರ್ಮಿಕ ಭಿಕ್ಷುಕರು ಎಂದು ಕರೆಯಬಹುದು. ನಾಲೈದು ಜನರು ಸೇರಿ ಚೌಡಿಕೆ ಎಂಬ ವಾದ್ಯವನ್ನು ನುಡಿಸಿ ಹಿಮ್ಮೇಳ ಮುಮ್ಮೇಳಗಳ ಸಹಿತ ಪ್ರದರ್ಶನ ನೀಡುತ್ತಾರೆ. ಈ ಎಲ್ಲಾ ಧಾರ್ಮಿಕ ಪವಿತ್ರ ವೇಶ್ಯಾವಾಟಿಕೆಗೆ ಒಮ್ಮೆ ಸೇರಿಕೊಂಡರೆ ಮುಗಿಯಿತು. ಇತರ ಉದ್ಯೋಗಗಳ ಅವಕಾಶಗಳೂ ಬಾಗಿಲು ಮುಚ್ಚಿಬಿಡುತ್ತದೆ. ಸಮಾಜ ಮತ್ತು ಧರ್ಮ ಇವರನ್ನು ಸೇವೆಗೆ ಮೀಸಲಾದವರೆಂದು ನಿರ್ಣಯಿಸಿ ಬಿಡುತ್ತದೆ. ಲೈಂಗಿಕ ದುಡಿಮೆಯಲ್ಲೂ ಮೇಲು ಕೀಳು ಭಾವಗಳನ್ನು ಸೃಷ್ಟಿಸಿದ ಸಾಮಾಜಿಕ ಪರಿಸ್ಥಿತಿಗಳೇ ವಿಸ್ಮಯವನ್ನುಂಟು ಮಾಡುತ್ತದೆ. ಉಚ್ಛ ಜಾತಿಗೆ ಸೇರಿದ ಮಹಿಳೆಯು ಮನೆಯೊಳಗಿನ ಲೈಂಗಿಕ ಸೇವೆಗೆ ಬದ್ಧಳಾಗಿರುವಂತೆ ವಿಧಿ ನಿಷೇಧಗಳ ಕೋಟೆಯೊಳಗೆ ಬಂಧಿಸಲ್ಪಟ್ಟಿದ್ದಾಳೆ. ಹಿಂದುಳಿದ ಮತ್ತು ಕೆಳವರ್ಗದ ಸ್ತ್ರೀ ಸಮುದಾಯಕ್ಕೆ ಪವಿತ್ರ ವೇಶ್ಯಾವಾಟಿಕೆಯೆಂಬ ಗೌರವದೊಂದಿಗೆ ದೇವದಾಸಿಯರು, ಬಸವಿಯರು, ಜೋಗತಿಯರು ಮನೆಯ ಹೊರಗಿನ ಲೈಂಗಿಕ ಸೇವೆಗೆ ನಿಯುಕ್ತಿಗೊಂಡಿದ್ದಾರೆ. ಈ ದ್ವಂದ್ವಗಳನ್ನು ಅರ್ಥ ಮಾಡಿಕೊಳ್ಳುವುದು ಹೇಗೆ? ಪತಿವ್ರತೆಯರ ಗೌರವಕ್ಕೆ ವಿರುದ್ಧವಾಗಿ ಈ ಧಾರ್ಮಿಕ ವೇಶ್ಯಾವೃತ್ತಿ ಸಮಾಜದಲ್ಲಿ ದೃಢವಾಗಿ ಬೇರೂರಿತ್ತು. ಸ್ವಚ್ಛಾಚಾರಿ, ಸೈರಿಣಿಯೆಂಬ ಬಿರುದಿನ ಜೊತೆಗೆ ಅವಳಿಗೆ ವಿಶೇಷ ದೈವಿಕ ಶಕ್ತಿಯಿದೆಯೆಂದು ನಂಬಿಕೆ ಇತ್ತು. ಜೋಗತಿಯರು ಮುನಿದರೆ ಯಾರಿಗೂ ಕೇಡು ಮಾಡಬಲ್ಲಳು. ಗಂಡಸರ ಪೌರುಷವನ್ನೇ, ಪುರುಷತ್ವವನ್ನೇ ನಾಶ ಮಾಡುವ ಶಕ್ತಿಯುಳ್ಳವಳೆಂಬ ನಂಬಿಕೆಯೂ ಇತ್ತು. ಆದುದರಿಂದ ಕೆಲವು ಜೋಗತಿಯರನ್ನು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಗೌರವಿಸಿ ಕೊಂಡಾಡುವ ಕ್ರಮವೂ ಇತ್ತು. ಜೋಗತಿಯರು ಮಾಡುವ ಧಾರ್ಮಿಕ, ಸಾಂಸ್ಕೃತಿಕ ಸೇವೆಯು ಅವರನ್ನು ಇತರರು ದುರುಪಯೋಗ ಪಡಿಸಿಕೊಳ್ಳುವುದಕ್ಕೆ ಪ್ರೋತ್ಸಾಹಿಸುವುದೂ ಇದೆ. ಈ ಎಲ್ಲಾ ಧಾರ್ಮಿಕ ವೇಶ್ಯಾವಾಟಿಕೆಗಳು ದೇವರ ಹೆಸರಿನಲ್ಲಿ ಮಾಡಿದ ಶೋಷಣೆಗಳಾಗಿವೆ. ಧರ್ಮ, ದೇವರುಗಳ ಭಯವನ್ನು ಹೆಂಗಸರ ತಲೆಯಲ್ಲಿ ತುಂಬಿಸಿ ಮೌಡ್ಯಗಳಿಗೆ ದಾಸರಾಗುವಂತೆ ಮಾಡುತ್ತಾ ಬಂದಿದೆ. ಆದುದರಿಂದಲೇ ಈ ವೃತ್ತಿಯನ್ನು ನಿಷೇಧಿಸಿ ಹಲವಾರು ವರ್ಷಗಳೇ ಉರುಳಿದರೂ ಈ ಭ್ರಮೆಯಿಂದ ಹೊರಬಾರದವರು ಇನ್ನೂ ಇದ್ದಾರೆ.

ಬ್ರಿಟಿಷರ ಕಾಲದಲ್ಲಿ 19ನೆಯ ಶತಮಾನದ ಅಂತ್ಯದಲ್ಲಿ ದೇವದಾಸಿ ನರ್ತಕಿಯರನ್ನು, ಈ ವೃತ್ತಿಯನ್ನು ನಿಷೇಧಿಸಿದಾಗ ಇಡೀ ಭಾರತದಲ್ಲೇ ಈ ಸಂಪ್ರದಾಯದಲ್ಲಿ ಒಂದು ಪಲ್ಲಟವಾಯಿತು. ವ್ಯವಸ್ಥೆಯಲ್ಲಿ ಸಂಚಲನ ಉಂಟಾಯಿತು. ಈ ವೃತ್ತಿನಿರತರು ಅತಂತ್ರರಾದರು. ವೃತ್ತಿಯನ್ನು ಉಳಿಸಲು ಪ್ರಯತ್ನಿಸಿದವರಿದ್ದರು. ಯಾಕೆಂದರೆ ಈ ವೃತ್ತಿಯನ್ನು ನಿಲ್ಲಿಸಿದರೆ ಅವರಿಗೆ ದೇವಸ್ಥಾನದಿಂದ ಸಲ್ಲುವ ಸೌಲಭ್ಯ, ಸೌಕಯ್ಯ, ಉಂಬಳಿ ಭೂಮಿಗಳನ್ನು ಕಳಕೊಳ್ಳಬೇಕಾಯಿತು. ಜೀವನ ನಿರ್ವಹಣೆಗೆ ಬೇರೆ ದಾರಿ ಹುಡುಕುವ ಅಗತ್ಯವುಂಟಾಯಿತು. ಹಲವರು ಹೊಸ ದಾರಿ ಹುಡುಕಿಕೊಂಡು ಪ್ರಸಿದ್ಧರಾದರು. ಸಂಗೀತ, ನೃತ್ಯ, ಅಭಿನಯದ ಕ್ಷೇತ್ರಗಳಲ್ಲಿ ಹಲವರು ತಮ್ಮ ಭವಿಷ್ಯವನ್ನು ಕಂಡುಕೊಂಡರು. ಆಗ ಬಸವಿಯರಾಗ ಬಯಸುವವರು ಬ್ರಿಟಿಷ್ ಸರಕಾರಕ್ಕೆ ಪತ್ರ ಬರೆದು ಅನುಮತಿ ಪಡೆಯಬೇಕಿತ್ತು. "ನನಗೆ ಗಂಡು ಸಂತಾನವಿಲ್ಲದ್ದರಿಂದ ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ದೇವಾಲಯದಲ್ಲಿ ತಾಳಿ ಕಟ್ಟಿಸಬೇಕೆಂದು ಇಚ್ಛಿಸಿದ್ದೇನೆ. ಇದು ನಮ್ಮ ಗುರುಗಳ ಅಪ್ಪಣೆಯಾಗಿದೆ. ಅಲ್ಲದೆ ನಮ್ಮ ಜಾತಿ ಸಂಪ್ರದಾಯವೂ ಆಗಿದೆ. ಆದುದರಿಂದ ನನ್ನ ಇಬ್ಬರು ಹೆಣ್ಣು ಮಕ್ಕಳಿಗೆ ನ್ಯಾಯಾಲಯವು ತಾಳಿ ಕಟ್ಟಲಿಕ್ಕೆ ಅನುಮತಿ ನೀಡಬೇಕೆಂದು ಕೇಳಿಕೊಳ್ಳುತ್ತೇನೆ." ಹೀಗೆ ಹಲವರು ಪತ್ರ ಬರೆದು ಬಸವಿಯರಾಗಲು ಅನುಮತಿ ಪಡೆದ ದಾಖಲೆಗಳಿವೆ. ಧಾರ್ಮಿಕ ಕಾರ್ಯಕ್ರಮವಾದುದರಿಂದ ಬ್ರಿಟಿಷರು ಅದಕ್ಕೆ ತಡೆಯೊಡ್ಡುತ್ತಿರಲಿಲ್ಲವೆಂದು ತಿಳಿದು ಬರುತ್ತದೆ. ಹಾಗೆ ನೋಡಿದರೆ ಟಿಪ್ಪು ಸುಲ್ತಾನನು ಕೂಡಾ ದೇವದಾಸಿ ಪದ್ಧತಿಯನ್ನು ನಿಲ್ಲಿಸಬೇಕೆಂದು ಬಯಸಿದ್ದನು. ಆದರೆ ಅದರ ಧಾರ್ಮಿಕ ಬೇರುಗಳು ಆಳವಾಗಿ ದೃಢವಾಗಿರುವುದರಿಂದ ಅದನ್ನು ಕೀಳಲು ಸಾಧ್ಯವಾಗಲಿಲ್ಲ. ಬಳ್ಳಾರಿ ಜಿಲ್ಲೆಯ ಅಧಿಕಾರಿಯಾಗಿದ್ದ ಡಬ್ಲ್ಯೂ, ಫ್ರಾನ್ಸಿಸ್ ಎಂಬವನು 'ಗಂಡು ಮಕ್ಕಳಿಲ್ಲದ ದಂಪತಿಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಬದಲು ಹೆಣ್ಣು ಮಕ್ಕಳನ್ನು ದೇವರ ಹೆಸರಿನಲ್ಲಿ ಬಸವಿಯರನ್ನಾಗಿ ಮಾಡಿ ಹೆತ್ತವರ ಆಸ್ತಿಯನ್ನು ಉಳಿಯುವಂತೆ ಮಾಡುತ್ತಾರೆ. ಆಕೆ ಯಾವುದೇ ಪುರುಷನ ಜೊತೆ ಸಂಪರ್ಕ ಹೊಂದಬಹುದು. ಅವಳಿಗೆ ಹುಟ್ಟಿದ ಮಕ್ಕಳು ಅವಳ ತಾಯಿಯ ಮನೆತನದ ಹೆಸರನ್ನು ಪಡೆಯುತ್ತಾರೆ. ಜನ್ಮ ನೀಡಿದ ತಂದೆಯ ಜೊತೆ ಆ ಮಕ್ಕಳಿಗೆ ಯಾವುದೇ ಸಂಬಂಧವಿರುವುದಿಲ್ಲ. ಬಸವಿಯರು ವಿಧವೆಯರಾಗುವುದಿಲ್ಲವಾದುದರಿಂದ ತಮ್ಮ ಜಾತಿಯ ಮದುವೆಯ ಸಮಾರಂಭಗಳಿಗೆ ಪ್ರೀತಿಯಿಂದ ಸ್ವಾಗತಿಸುತ್ತಾರೆ. ಬಸವಿಯರು ನೃತ್ಯಗಾರ್ತಿಯರಿಗಿಂತ ಭಿನ್ನವಾಗಿರುತ್ತಾರೆ. ಬಹುತೇಕ ಬಸವಿಯರು ವೇಶ್ಯಾವಾಟಿಕೆ ನಡೆಸುವುದಿಲ್ಲ. ಸಾಮಾನ್ಯವಾಗಿ ಒಬ್ಬ ಪುರುಷನಿಗೆ ವಿಧೇಯರಾಗಿರುತ್ತಾರೆ. ಜೀವನೋಪಾಯಕ್ಕೆ ಅವನಿಂದ ಹಣ ಪಡೆಯುತ್ತಾರೆ. ವರುಷಕ್ಕೊಮ್ಮೆ ಹಬ್ಬಗಳಿಗೆ ಜಾತ್ರೆಗಳಿಗೆ ಬಸವಿಯರಿಗೆ ಸೀರೆ ಕುಪ್ಪಸಗಳನ್ನು ನೀಡದಿದ್ದರೆ ಅವರು ಸಂಗಾತಿಯನ್ನು ಬದಲಿಸುತ್ತಾರೆ. ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯಲ್ಲೂ ಇಂತಹ ಬಸವಿ ಪದ್ಧತಿ ಇದೆ." ಎಂದು ಬರೆದಿದ್ದಾನೆ.

ಬಳ್ಳಾರಿ ಜಿಲ್ಲೆಯಲ್ಲಿ ಒಬ್ಬ ತಂದೆ ಚಿಕ್ಕ ವಯಸ್ಸಿನ ಮಗಳನ್ನು ದೇವರ ಮೂರ್ತಿಯೊಡನೆ ಮದುವೆ ಮಾಡಿ ಬಸವಿಯನ್ನಾಗಿ ಮಾಡಿದನು. ಅವಳು ಸ್ಟೇಚ್ಛಾಚಾರಿಯಾದಳು ಅವಳ ಗಂಡು ಮಕ್ಕಳು ಅವಳ ಆಸ್ತಿಗೆ ಹಕ್ಕುದಾರರಾದರು. ಈ ಹಕ್ಕುದಾರಿಕೆಯನ್ನು ಅವಳ ಬಂಧುಗಳು ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ ನ್ಯಾಯಾಧೀಶರು, "ಅವಳು ದೇವದಾಸಿಯಾಗಿದ್ದರೂ ವೇಶ್ಯಾವೃತ್ತಿಯಿಂದ ಹಣ ಗಳಿಸುವುದು ಅವಳ ವೃತ್ತಿಯಾಗಿರುವುದಿಲ್ಲ" ಎಂದು ತೀರ್ಪು ನೀಡಿದರು. ಇದರಿಂದ ಬಸವಿಯರಿಗೆ ಸ್ಟೇಚ್ಛಾಚಾರ ಮಾಡುವ ಹಕ್ಕು ಇತ್ತು. ಆದರೆ ಹಣಕ್ಕಾಗಿ ವ್ಯಭಿಚಾರ ಮಾಡುವ ಹಕ್ಕು ಅವರಿಗೆ ಇರಲಿಲ್ಲ ಎಂದು ತಿಳಿಯುತ್ತದೆ. ದೇವದಾಸಿಯರಿಗೆ ಮಕ್ಕಳಿರದಿದ್ದರೆ, ಹೆಣ್ಣು ಮಕ್ಕಳನ್ನು ದತ್ತಕ ಪಡೆದುಕೊಂಡು ಅವರನ್ನು ದೇವದಾಸಿಯರನ್ನಾಗಿ ಮಾಡುವ ಹಕ್ಕು ಇತ್ತು. ಬೇರೆ ಸಮುದಾಯದವರಿಗೆ ಹೆಣ್ಣು ಮಕ್ಕಳನ್ನು ದತ್ತು ಸ್ವೀಕರಿಸುವ ಹಕ್ಕು ಆ ಕಾಲದಲ್ಲಿ ಇರಲಿಲ್ಲ.

ದೇವದಾಸಿಯರ ಅಂತ್ಯಸಂಸ್ಕಾರ

ತಮಿಳುನಾಡಿನಲ್ಲಿ ದೇವದಾಸಿಯರು ಮರಣ ಹೊಂದಿದರೆ ದೇವಾಲಯದಿಂದ ಹೂ, ಚಂದನ, ಗಂಧಗಳನ್ನು ನೀಡಲಾಗುತ್ತದೆ. ದೇವಾಲಯದ ಅಡುಗೆಮನೆಯ ಒಲೆಯ ಬೆಂಕಿಯಿಂದಲೇ ಆಕೆಯ ಚಿತೆಗೆ ಅಗ್ನಿಸ್ಪರ್ಶ ಮಾಡಲಾಗುತ್ತದೆ. ಮರಣಿಸಿದ ದೇವದಾಸಿಯ ಹೆಸರಿನಲ್ಲಿ ದೇವಾಲಯಗಳು ಒಂದು ದಿನದ ಸೂತಕವನ್ನು ಪಾಲಿಸುತ್ತವೆ. ಆ ದಿನ ದೇವಾಲಯದಲ್ಲಿ ಪೂಜೆ ನಡೆಯುವುದಿಲ್ಲ ಸಾಮಾನ್ಯವಾಗಿ ಮೃತದೇಹವನ್ನು ಸ್ಮಶಾನಕ್ಕೆ ಸಾಗಿಸುವಾಗ ಎಲ್ಲಿಯೂ ಇಳಿಸುವುದಿಲ್ಲ. ಆದರೆ ದೇವದಾಸಿಯ ಮೃತ ಶರೀರವನ್ನು ಸಾಗಿಸುವಾಗ ಮಾತ್ರ ದೇವಾಲಯದ ಮುಂದೆ ಇಳಿಸಲಾಗುತ್ತದೆ. ಅಲ್ಲಿ ದೇವರಿಗೆ ಹಾಕಲಾದ ಹೂವಿನ ಹಾರವನ್ನು ಹೆಣಕ್ಕೆ ಹಾಕಿ ಮುಂದಕ್ಕೆ ಸಾಗಿಸುತ್ತಾರೆ. ದೇವದಾಸಿಯರು ಬದುಕಿರುವಾಗಲೂ ಅವರಿಗೆ ದೇವರ ವಿಶೇಷ ಶಕ್ತಿಯಿದೆ ಎಂದು ಭ್ರಮೆ ಹುಟ್ಟಿಸಿ ಬಿಟ್ಟ ಕಾರಣ ಹಲವು ಮೂಢನಂಬಿಕೆಗಳು ಭದ್ರವಾಗಿ ಬೇರೂರಿರುತ್ತವೆ.

ದೇವದಾಸಿಯರಾಗುವವರಲ್ಲಿ ಹೆಚ್ಚಿನವರು ಹಿಂದುಳಿದವರು ಮತ್ತು ಕೆಳವರ್ಗದ ಅಸ್ಪೃಶ್ಯ ಸಮುದಾಯದವರು. ಇವರು ಯಾವ ದೇವರಿಗೆ ದಾಸಿ ಯರಾಗಿರುತ್ತಾರೋ ಅಲ್ಲಿ ದೇವಸ್ಥಾನದೊಳಗೆ ಅವರಿಗೆ ಪ್ರವೇಶವಿರುವುದಿಲ್ಲ. ಆದರೂ ಆ ದೇವರಿಗೆ ಇವರು ದಾಸಿಯರು. ಮಹಾರಾಷ್ಟ್ರದ ಮತ್ತು ಉತ್ತರ ಕರ್ನಾಟಕದ ಮಾರುತಿಗೆ ದೇವದಾಸಿಯರಾಗುತ್ತಾರೆ. ಆಜನ್ಮ ಬ್ರಹ್ಮಚಾರಿಯಾದ ಆತನಿಗೆ ದಾಸಿಯರನ್ನು ನೇಮಿಸುವುದು ಒಂದು ವಿಡಂಬನೆಯಂತೆ ಕಾಣುತ್ತದೆ.

ನಿಜವಾಗಿ ಅವರು ಲೈಂಗಿಕ ದಾಸಿಯರಾಗುವುದು ಊರಿಗಾಗಿ, ಪುರೋಹಿತ ರಿಗಾಗಿ, ಕಲ್ಲುದೇವರು ಭೋಗಿಸುವುದಿಲ್ಲವೆಂದು ಗೊತ್ತಿದ್ದರೂ ದೇವರ ಹೆಸರಿನಲ್ಲಿ ಭಯವನ್ನು ಹುಟ್ಟಿಸಿ ಅಜ್ಞಾನಿಗಳನ್ನು ಹುರಿದುಂಬಿಸುತ್ತಿದ್ದರು. ದೇವ ದಾಸಿಯರಾಗುವುದರಿಂದ ದೇವರ ಕೃಪೆ, ಆಶೀರ್ವಾದ ತಮ್ಮ ಮೇಲೆ ಧಾರಾಳವಾಗಿ ಸುರಿಯಲ್ಪಡುತ್ತದೆಂಬ ಭ್ರಮೆಯನ್ನುಂಟು ಮಾಡಿದ್ದರು. ದೇವದಾಸಿಯರಾಗುತ್ತೇವೆಂದು ಹರಕೆ ಹೇಳಿ ಅದನ್ನು ಸಲ್ಲಿಸದಿದ್ದರೆ ದೇವರು ಶಾಪ ಕೊಡುತ್ತಾನೆಂದು ನಂಬಿಸಿದ್ದರು. ಅನಕ್ಷರಸ್ಥರ ಧಾರ್ಮಿಕ ಮೂಢ ಭಕ್ತಿಯ ಬೆಂಬಲದಿಂದ ಮಹಿಳೆಯರನ್ನು ಶೋಷಿಸುವ ಈ ಸೇವೆಯು ಇತ್ತೀಚಿನ ವರ್ಷಗಳಲ್ಲಿ ನಿಂತುಹೋಗಿರುವುದು ನಿಜ. ಈ ಸಮಯದಲ್ಲಿ ಚಾಲ್ತಿಯಲ್ಲಿಲ್ಲದ ವಿಷಯವನ್ನು ಚರ್ಚೆಗೆತ್ತಿಕೊಳ್ಳುವ ಅಗತ್ಯವಿದೆಯೇ ಎಂಬ ಪ್ರಶ್ನೆ ಮೂಡುವುದು ಸಹಜ. ಬಾಲ್ಯ ವಿವಾಹ, ಸತಿ ಸಹಗಮನಗಳು ಈಗ ನಡೆಯುವುದೇ ಇಲ್ಲವೆಂದು ನಂಬಿದ ಈ 21ನೆಯ ಶತಮಾನದಲ್ಲೂ ಅಲ್ಲೊಂದು ಇಲ್ಲೊಂದು ಸುದ್ದಿಯಾಗುವುದನ್ನು ಕಂಡು ನಾವು ಎತ್ತ ಸಾಗುತ್ತಿದ್ದೇವೆ ಎಂದು ತಿಳಿಯದಾಗಿದ್ದೇವೆ. ಸತಿ ಸಹಗಮನವನ್ನು ನಿಷೇಧಿಸಿದ್ದು ತಪ್ಪು ಎಂದು ವಾದಿಸುವ ಪಾಷಾಣ ಹೃದಯಿಗಳು ಈಗಲೂ ಇದ್ದಾರೆ ಎಂದರೆ ನಂಬುವುದು ಕಷ್ಟ ಅಲ್ಲವೇ? ಅದೇ ರೀತಿ ದೇವಸ್ಥಾನಗಳಿಗೆ ಚಿನ್ನದ ತೇರು, ಚಿನ್ನದ ಕವಚಗಳನ್ನು ಅರ್ಪಿಸುವ ಭಕ್ತರ ಸಂಖ್ಯೆ ಹೆಚ್ಚಿದಂತೆಲ್ಲಾ ಸಂಪ್ರದಾಯ ಶುದ್ಧವಾಗಿ ದೇವದಾಸಿ ಪದ್ಧತಿ ಇದ್ದರೆ ಎಲ್ಲರೂ ಪುಣ್ಯ ಸಂಪಾದನೆ ಮಾಡಬಹುದೆಂಬ ಯೋಚನೆ ಅಂತಹವರಲ್ಲಿ ಬಂದರೆ ಆಶ್ಚರ್ಯವಿಲ್ಲ.

ದೇವದಾಸಿ ಪದ್ಧತಿಯ ನಿಷೇಧ ಒಡೆಯರ ಕಾಲದಲ್ಲಿ

ದೇವಾಲಯಗಳಲ್ಲಿ ನೃತ್ಯ ಮತ್ತು ಸಂಗೀತ ಸೇವೆ ಸಲ್ಲಿಸುವ ಸಂಪ್ರದಾಯವು ಮೊದ ಮೊದಲು ಗೌರವದ ಸಂಪ್ರದಾಯವಾಗಿತ್ತು. 18 ಮತ್ತು 19 ನೆಯ ಶತಮಾನದಲ್ಲಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಂಡು ಸಂಪೂರ್ಣ ಬದಲಾವಣೆಗೊಂಡಿತು. ಅವರು ಸಲ್ಲಿಸುವ ಸೇವೆ ಕೀಳು ಮಟ್ಟಕ್ಕಿಳಿದು ಕೊನೆಕೊನೆಗೆ ವೇಶ್ಯಯರಾದರೆಂದು ಇತಿಹಾಸ ತಿಳಿಸುತ್ತದೆ. ಮತ್ತೊಂದು ನೀಚ ಪದ್ಧತಿಯೆಂದರೆ ಬಸವಿ ಪದ್ಧತಿ, ಶಿವ, ವಿಷ್ಣು ಮತ್ತಿತರ ಗ್ರಾಮ ದೇವತೆಗಳ ಸೇವೆಗಾಗಿ ಬಸವಿಯರನ್ನು ಅರ್ಪಿಸಲಾಗುತ್ತಿತ್ತು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ದೇವದಾಸಿಯರು ಮತ್ತು ಬಸವಿಯರಲ್ಲಿ ಹೆಚ್ಚಿನವರು ಸಾಮಾನ್ಯವಾಗಿ ದಲಿತರೇ ಆಗಿದ್ದರು. ಆಳುವ ವರ್ಗ ಮತ್ತು ಪುರೋಹಿತ ವರ್ಗ ಈ ವರ್ಗದ ಜನರನ್ನು ಧಾರ್ಮಿಕ ಹಾಗೂ ಮೂಢನಂಬಿಕೆಗಳಿಂದ ಕಟ್ಟಿ ಹಾಕಿ ಇವರು ಈ ಅನಿಷ್ಟ ಪದ್ಧತಿಯನ್ನು ದೇವರು ನೀಡಿದ ವರವೆಂದು ತಿಳಿದು ಆಚರಿಸುವಂತೆ ಮಾಡಿದ್ದರೆಂದರೆ ತಪ್ಪಾಗದು. ಈ ಅನಿಷ್ಟ ಸಾಮಾಜಿಕ ಕೆಡುಕುಗಳನ್ನು ನಿರ್ಮೂಲನಗೊಳಿಸಲು ಸರ್ಕಾರವು 1892ರಲ್ಲಿಯೇ ಒಂದು ಆಜ್ಞೆಯನ್ನು ಹೊರಡಿಸಿತು. ಪ್ರಮುಖವಾಗಿ ಈ ಆಜ್ಞೆಯು ನಂಜನಗೂಡಿನ ಭೋಗಾನಂದೀಶ್ವರ ದೇವಾಲಯದಲ್ಲಿ ದೇವದಾಸಿಯರನ್ನು ನೇಮಿಸಿಕೊಳ್ಳುವುದನ್ನು ಮತ್ತು ನೃತ್ಯ ಕನೈಯರು ನೃತ್ಯ ಮಾಡುವುದನ್ನು ನಿಷೇಧಿಸಿತು. ಈ ಆಜ್ಞೆಯು ನಂಜನಗೂಡಿನ ದೇವಸ್ಥಾನಕ್ಕೆ ಮಾತ್ರ ಸೀಮಿತವಾಗಿತ್ತು. ನಾಲ್ವಡಿ ಕೃಷ್ಣರಾಜ ಒಡೆಯರು ಅಧಿಕಾರ ವಹಿಸಿಕೊಂಡ ಮೇಲೆ ಈ ಅನಿಷ್ಟ ಪದ್ಧತಿಯನ್ನು ನಿರ್ಮೂಲನೆ ಮಾಡಲು 1909ರಲ್ಲಿ ಒಂದು ಸರಕಾರಿ ಆಜ್ಞೆಯನ್ನು ಹೊರಡಿಸಿ ದೇವದಾಸಿ ಪದ್ಧತಿಯು ತನ್ನ ಪಾವಿತ್ರ್ಯವನ್ನು ಕಳೆದುಕೊಂಡಿರುವ ದುಷ್ಟ ಪದ್ಧತಿಯೆಂದು ಘೋಷಿಸಿ ಅದನ್ನು ನಿಷೇಧಿಸಿದರು. 1910 ರಲ್ಲಿ ಸರ್ಕಾರದ ಹತೋಟಿಯಲ್ಲಿರುವ ಮುಜರಾಯಿ ದೇವಸ್ಥಾನಗಳಲ್ಲಿ ಗೆಜ್ಜೆ ಪೂಜೆ ಸಮಾರಂಭ ಏರ್ಪಡಿಸಬಾರದೆಂದು ಆಜ್ಞೆ ಹೊರಡಿಸಿತು. ಒಡೆಯರು ತಮ್ಮ ಆಡಳಿತದ ಅವಧಿಯಲ್ಲಿ ಹಂತ ಹಂತವಾಗಿ ದೇವದಾಸಿ ಪದ್ಧತಿಯನ್ನು ನಿರ್ಮೂಲನ ಗೊಳಿಸಲು ಪ್ರಯತ್ನಿಸಿದರು.

ವೇಶ್ಯಾವೃತ್ತಿಯ ನಿಷೇಧಾಜ್ಞೆ 1936

ಈ ಪವಿತ್ರ ವೇಶ್ಯೆಯರ ಸೇವೆಯನ್ನು ನಿಲ್ಲಿಸುವ ಪ್ರಯತ್ನವು ಸಾಗುತ್ತಿದ್ದ ಜೊತೆಯಲ್ಲೇ ಆಧುನಿಕ ಸಮಾಜದ ಮತ್ತೊಂದು ಪಿಡುಗಾಗಿರುವ ವೇಶ್ಯಾವೃತ್ತಿ ಯನ್ನು ತಡೆಗಟ್ಟಲು ಶಾಸನವನ್ನು ಜಾರಿಗೆ ತರುವ ಪ್ರಯತ್ನವು ನಡೆಯಿತು. ಪ್ರಮುಖ ನಗರಗಳಲ್ಲಿ ವೇಶ್ಯಾವೃತ್ತಿಯ ವ್ಯವಸ್ಥೆಯ ಕುರಿತು ಅಧ್ಯಯನ ಮಾಡಲು ಒಂದು ಸಮಿತಿಯನ್ನು ನೇಮಿಸಲಾಯಿತು. ಆ ಸಮಿತಿಯು ಕಂಡುಕೊಂಡ ಸತ್ಯವೇನೆಂದರೆ ಹೊರರಾಜ್ಯದ ಪ್ರಮುಖ ನಗರಗಳಾದ ಕಲ್ಕತ್ತಾ, ಮದ್ರಾಸು, ಬೊಂಬಾಯಿ, ಬೆಂಗಳೂರು, ಮೈಸೂರು ನಗರಗಳಲ್ಲಿ ವೇಶ್ಯಾವೃತ್ತಿಯನ್ನು ಅನುಸರಿಸುತ್ತಿದ್ದವರೆಲ್ಲರೂ ಸಹ ಬಡತನದ ಬೇಗೆಯಿಂದ ನರಳುತ್ತಿದ್ದವರು ಹೆಚ್ಚಿನವರು ದಲಿತರೇ ಎಂದು ಕಂಡುಕೊಂಡಿತು. ಅಂದಿನ ಪ್ರಜಾ ಪ್ರತಿನಿಧಿ ಸಭೆಯ ಸದಸ್ಯರಾಗಿದ್ದಂತಹ ಎಚ್.ಸಿ.ದಾಸಪ್ಪನವರು ವೇಶ್ಯಾ ವೃತ್ತಿಯನ್ನು ಸಂಪೂರ್ಣ ತೊಡೆದು ಹಾಕಲು ಸಾಧ್ಯವಿಲ್ಲವಾದುದರಿಂದ ಈ ದುಷ್ಟ ಪದ್ಧತಿಯನ್ನು ತಡೆಗಟ್ಟಲಾದರೂ ಸರ್ಕಾರ ಕಾನೂನನ್ನು ಜಾರಿಗೆ ತರಬೇಕೆಂದು ಒತ್ತಾಯ ಮಾಡಿದರು. ಆದರೆ ಹೆಚ್ಚಿನ ಸಂಖ್ಯೆಯ ಸದಸ್ಯರು ವಿರೋಧಿಸಿದ್ದರಿಂದ 1931ರಲ್ಲಿ ಈ ಕಾನೂನನ್ನು ಅನುಷ್ಠಾನಕ್ಕೆ ತರಲಾಗಲಿಲ್ಲ. ಪ್ರಜಾ ಪ್ರತಿನಿಧಿ ಸಭೆಯಲ್ಲಿ 1935ರಲ್ಲಿ ಮತ್ತೆ ಸದಸ್ಯರು ಪ್ರಮುಖ ನಗರಗಳಲ್ಲಿ ವೇಶ್ಯಾವೃತ್ತಿ ಹೆಚ್ಚುತ್ತಿರುವುದರ ಬಗ್ಗೆ ಕಳವಳವನ್ನು ವ್ಯಕ್ತ ಪಡಿಸಿ ಅಂಕಿ ಅಂಶಗಳ ಸಮೇತ ನಿರೂಪಿಸಿ ವೇಶ್ಯಾವೃತ್ತಿಯನ್ನು ತಡೆಗಟ್ಟಲು ಕಾನೂನನ್ನು ತರಬೇಕೆಂದು ಒತ್ತಾಯಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರು ಸಾಮಾಜಿಕ ಕಳಕಳಿಯುಳ್ಳವರಾದುದರಿಂದ ಈ ಕಾನೂನಿಗೆ ಸಂಪೂರ್ಣ ಬೆಂಬಲ ಸಿಗುವುದೆಂದು ನಿರೀಕ್ಷಿಸಿ 1936 ಜುಲೈ 14ರಂದು ವೇಶ್ಯಾ ವೃತ್ತಿಯನ್ನು ತಡೆಗಟ್ಟುವ Suppression of immoral traffic Act ಎಂಬ ಕಾನೂನು ಜಾರಿಗೆ ಬಂತು. ಈ ಕಾರ್ಯಕ್ಕೆ ಕೈ ಹಾಕಿದರೆ ಹಾಗೂ ಇದರ ಮೂಲಕ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಎರಡು ತಿಂಗಳು ಸೆರೆವಾಸ ಮತ್ತು200 ರೂ. ದಂಡ ವಿಧಿಸುವ ಶಿಕ್ಷೆ ಜಾರಿ ಮಾಡಲಾಯಿತು. (ಪುಟ 124-125 ದಲಿತರು ಮತ್ತು ಚರಿತ್ರೆ) ಡಾ. ಎನ್ ಚಿನ್ನಸ್ವಾಮಿ ಸೊಸಲೆ)

ಈ ರೀತಿಯ ಕಾನೂನನ್ನು ಮಾಡಿ ಸರಕಾರವು ಸಮಾಜದ ಕಳಂಕವನ್ನು ತೊಡೆಯಲು ತನ್ನಿಂದಾದ ಸಣ್ಣ ಪ್ರಯತ್ನ ಮಾಡಿತು. ಆದರೆ ಯಾವ ಕಾನೂನಿಗೂ ನಿಯಂತ್ರಿಸಲಾಗದ ಈ ಕಳಂಕ ಹೊಸ ಹೊಸ ರೂಪದಲ್ಲಿ ಹೊಸ ಹೊಸ ಸಮಸ್ಯೆಗಳನ್ನು ಹೊತ್ತುಕೊಂಡು ತನ್ನ ಪಾಡಿಗೆ ತಾನು ವೈರಸ್ಸಿನಂತೆ ಹೆಚ್ಚುತ್ತಲೇ ಹೋಯಿತು.

ದೇವದಾಸಿ ಪದ್ಧತಿಯನ್ನು ವಿರೋಧಿಸಿದ ಚಳುವಳಿಗಳು

19ನೆಯ ಶತಮಾನದಿಂದಲೇ ಭಾರತದಲ್ಲಿ ಸಾಮಾಜಿಕ ಬದಲಾವಣೆಯ ಯುಗ ಪ್ರಾರಂಭವಾಯಿತು. ಆಧುನಿಕ ಭಾರತದ ಕಲ್ಪನೆಯು ಆ ಕಾಲದ ಸಮಾಜ ಸುಧಾರಕರಿಂದ, ಸಾಂಸ್ಕೃತಿಕ ನೇತಾರರಿಂದ ರೂಪುಗೊಂಡಿತು. ಉತ್ತರ ಭಾರತದಲ್ಲಿ ತವಾಯಿಫ್‌ಗಳು, ನೃತ್ಯ, ಸಂಗೀತದ ಕಾರ್ಯಕ್ರಮ ನೀಡುವ ಸಂಪ್ರದಾಯವಿತ್ತು. ದಕ್ಷಿಣ ಭಾರತದಲ್ಲಿ ದೇವರ ಹೆಸರಿನಲ್ಲಿ ಈ ಸೇವೆಗೆ ಅರ್ಪಿಸಲ್ಪಟ್ಟು ದೇವದಾಸಿಯರೂ ನೃತ್ಯ, ಸಂಗೀತ ಕಾರ್ಯಕ್ರಮ ನೀಡುತ್ತಿದ್ದರು. ನಾಚ್‌ವಾಲಿಗಳು ಸಂಗೀತ ಮತ್ತು ನೃತ್ಯಕ್ಕೆ ತಮ್ಮನ್ನು ಅರ್ಪಿಸಿಕೊಂಡು ವಿವಾಹವಿಲ್ಲದೆ ಬದುಕುತ್ತಿದ್ದರು. ದೇವದಾಸಿಯರು ದೇವರಿಗೆ ತಮ್ಮನ್ನು ಅರ್ಪಿಸಿಕೊಂಡು ವಿವಾಹವಿಲ್ಲದೆ ಬದುಕುವ ಸಂಪ್ರದಾಯವಿತ್ತು. ಈ ಎರಡೂ ಸಂಪ್ರದಾಯಗಳು ಸಾಮಾಜಿಕ ಸ್ವಾಸ್ಥ್ಯವನ್ನು ಕೆಡಿಸುತ್ತದೆಂದು ತಿಳಿದ ಸುಧಾರಣವಾದಿಗಳು 1882ರಲ್ಲಿ ಈ ಎರಡೂ ಸಂಪ್ರದಾಯವನ್ನು ವಿರೋಧಿಸಿ, ಸಾಮಾಜಿಕ ಜನಾಭಿಪ್ರಾಯಗಳನ್ನು ರೂಪಿಸುವುದಕ್ಕೆ ಸಮ್ಮೇಳನಗಳನ್ನು, ವಿಚಾರ ಸಂಕಿರಣಗಳನ್ನು ಏರ್ಪಡಿಸಿದರು. ಬ್ರಿಟಿಷ್ ಸರಕಾರಕ್ಕೆ ಸಾವಿರಾರು ಮಂದಿಯ ಸಹಿ ಇರುವ ಒಂದು ಮನವಿ ಪತ್ರ ಬರೆದು ಈ ಪದ್ಧತಿಗಳನ್ನು ನಿಷೇಧಿಸಬೇಕೆಂದು ವಿನಂತಿಸಿದರು. ನೃತ್ಯಗಳನ್ನು ವೀಕ್ಷಿಸಿದ ಬ್ರಿಟಿಷ್ ಅಧಿಕಾರಿಗಳಿಗೆ ಅದರಲ್ಲಿ ಅಶ್ಲೀಲವೆನಿಸುವ ಯಾವ ಕುರುಹೂ ಕಂಡು ಬರಲಿಲ್ಲವಾದುದರಿಂದ ಈ ಮನವಿಗೆ ತಕ್ಷಣ ಸ್ಪಂದಿಸಲಿಲ್ಲ. ಸುಧಾರಣಾವಾದಿಗಳು ದೇಶಾದ್ಯಂತ ಆಂದೋಲನವನ್ನೇ ಪ್ರಾರಂಭಿಸಿದರು. ದೇವಾಲಯಕ್ಕೆ ಬಾಲಿಕೆಯರನ್ನು ಅರ್ಪಿಸುವುದನ್ನು ನಿಷೇಧಿಸಬೇಕೆಂದು ಡಾ.ಎಸ್‌. ಮುತ್ತುಲ ಸ್ವಾಮಿ ರೆಡ್ಡಿಯವರು ದೊಡ್ಡ ಹೋರಾಟವನ್ನೇ ಪ್ರಾರಂಭಿಸಿದರು. ಸಾಕಷ್ಟು ಪ್ರತಿಭಟನೆ ಭಾವೋದ್ರೇಕದ ಚರ್ಚೆಯ ಬಳಿಕ ಕಾನೂನು ಬದ್ಧವಾಗಿ ದೇವದಾಸಿ ಪದ್ಧತಿಯನ್ನು ನಿಷೇಧಿಸಲಾಯಿತು.

ಇದರ ಜೊತೆಯಲ್ಲಿಯೇ ಪುನರುಜ್ಜಿವನ ಚಳುವಳಿಯೂ ಪ್ರಾರಂಭವಾಯಿತು. ದೇವದಾಸಿ ಪವಿತ್ರ ಸಂಪ್ರದಾಯವಾಗಿದೆ. ದೇವದಾಸಿಯರ ಮೇಲೆ ಕಾನೂನು ಅನ್ವಯಿಸಬೇಕು, ದೇವದಾಸಿ ಸಂಪ್ರದಾಯದ ಮೇಲೆ ಅಲ್ಲವೆಂದು ಪುನರುತ್ಥಾನವಾದಿಗಳು ವಾದಿಸಿದರು. ದೇವದಾಸಿ ನೃತ್ಯವನ್ನು ಶುದ್ಧಗೊಳಿಸಿ ಭರತನಾಟ್ಯಂ ಎಂದು ನಾಮಕರಣ ಮಾಡಲಾಯಿತು. ಸುಧಾರಣಾವಾದಿಗಳು ದೇವದಾಸಿಯರನ್ನು ವೇಶ್ಯೆಯರು ಎಂದು ಹೀಗಳೆದರೆ ಪುನರುತ್ಥಾನ ವಾದಿಗಳು ಅವಳನ್ನು ಸನ್ಯಾಸಿನಿಯರೆಂದು ಗೌರವಿಸಿದರು. ದೇವದಾಸಿಯರ ನೃತ್ಯವನ್ನು ಪುನರುಜ್ಜಿವನಗೊಳಿಸಲು ಮದ್ರಾಸಿನಲ್ಲಿ ಮೇಡಂ ಬ್ಲಾವಸ್ಕಿ, ಕರ್ನಲ್ ಎಚ್.ಎಸ್. ಓಲ್ಕಾಟ್, ಆನಿ ಬೆಸೆಂಟ್ ಮುಂತಾದ ಥಿಯೋಸೋಫಿಕಲ್ ಸೊಸೈಟಿಯ ಮುಂದಾಳುಗಳು ನೃತ್ಯವನ್ನು ಪವಿತ್ರಗೊಳಿಸಲು ಪ್ರಯತ್ನಿಸಿದರು. ಅನೇಕ ಬ್ರಾಹ್ಮಣ ತರುಣಿಯರು ಈ ನೃತ್ಯ ಕಲಿತರು, ಅಪಕೀರ್ತಿ ಅಳಿಯಿತು. ದೇವದಾಸಿ ನೃತ್ಯವನ್ನು ಪುನರುಜ್ಜಿವನಗೊಳಿಸಲು ರುಕ್ಕಿಣಿ ಅರುಂಡೇಲ್ ಅವರಿಗೆ ಪುನರುತ್ಥಾನವಾದಿಗಳು ತುಂಬಾ ಪ್ರೋತ್ಸಾಹ ನೀಡಿದರು. ದೇಶದ ಉದ್ದಗಲಕ್ಕೂ ನೃತ್ಯಶಾಲೆಗಳು ಸ್ಥಾಪನೆಗೊಂಡು ದೇವದಾಸಿ, ನೃತ್ಯಕ್ಕಿದ್ದ ಕಳಂಕ ನಾಶವಾಯಿತು.

ದೇವದಾಸಿ ಪದ್ಧತಿಯನ್ನು ಅಂದರೆ ಬಾಲಕಿಯರನ್ನು ಅರ್ಪಿಸುವುದನ್ನು ನಿಷೇಧಿಸುವ ಕಾನೂನುಗಳು ಮಹಾರಾಷ್ಟ್ರ, ಮದ್ರಾಸು, ಕರ್ನಾಟಕಗಳಲ್ಲಿ ಜಾರಿಗೊಂಡವು. ಆದರೂ ಈ ಪದ್ಧತಿ ಕಡಿಮೆಯಾಗಲಿಲ್ಲ. 20ನೆಯ ಶತಮಾನದ 80ರ ದಶಕದಲ್ಲಿ ದೇವದಾಸಿಯರ ಪುನರ್ವಸತಿ ಸಂಘವು ಸ್ಥಾಪನೆಗೊಂಡು ಈ ಪದ್ಧತಿಯನ್ನು ತಡೆಗಟ್ಟಲು ಪ್ರಯತ್ನಿಸಿತು. ದೇವದಾಸಿಯರನ್ನು ಸಂಘಟಿಸಿ ವಿಮೋಚನಾ ಎಂಬ ಸಂಸ್ಥೆಯನ್ನು ಕಟ್ಟಿ ದೇವದಾಸಿಯರ ಪುನರ್ವಸತಿ ಕಾರ್ಯಕ್ರಮಗಳನ್ನು ರೂಪಿಸಿ ದೇವದಾಸಿಯರು ಸಮಾಜದ ಮುಖ್ಯವಾಹಿನಿ ಯಲ್ಲಿ ಬೆರೆಯುವಂತೆ ಮಾಡಿದರು. (ಪುಟ 188 ದೇವದಾಸಿ ಸಂಪ್ರದಾಯ)

ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಉಚ್ಚಂಗಿ ದುರ್ಗದಲ್ಲಿ ಭರತ ಹುಣ್ಣಿಮೆ (ಮುತೈದೆ ಹುಣ್ಣಿಮೆ)ಯಂದು ಮಾಜಿ ದೇವದಾಸಿಯರು ತಮ್ಮ ಅನಿಷ್ಟ ಪದ್ಧತಿಯನ್ನು ನವೀಕರಣಗೊಳಿಸಿಕೊಂಡರು. ಮುತ್ತೈದೆ ಹುಣ್ಣಿಮೆ ಎಂದೇ ಕರೆಯಲಾಗುವ ಈ ದಿನ ಉಚ್ಚಂಗಿ ದುರ್ಗಕ್ಕೆ ರಾಜ್ಯದ ವಿವಿಧೆಡೆಯ ಸಾವಿರಾರು ಮಾಜಿ ದೇವದಾಸಿಯರು ಆಗಮಿಸಿದ್ದರು. ಕೈಯಲ್ಲಿನ ಹಸಿರು ಬಳೆ, ಕೊರಳಲ್ಲಿನ ಬಿಳಿ ಮತ್ತು ಕೆಂಪು ಮುತ್ತಿನ ಸರ, ಪಡ್ಲಗೆ (ದೇವರ ಸಾಮಾನುಳ್ಳ ಸಣ್ಣ ಪುಟ್ಟ) ಯನ್ನು ಮತ್ತೆ ಹೊಸದಾಗಿ ಧರಿಸುವ ಮೂಲಕ ದೇವದಾಸಿ ಪದ್ಧತಿಯನ್ನು ನವೀಕರಣಗೊಳಿಕೊಳ್ಳುವ ಧಾರ್ಮಿಕ ಆಚರಣೆ ಕೈಗೊಂಡರು.

"ಮನೆಯಲ್ಲಿ ಬಡತನ. ಹೇಗೋ 7, 8ನೇ ತರಗತಿ ತನಕ ಓದಿದೆವು ಅಷ್ಟರಲ್ಲಾಗಲೇ ತಲೆಯಲ್ಲಿ ಜಡೆ ಕಾಣಿಸಿಕೊಂಡಿತು. ಹಾಗಾಗಿ ಗ್ರಾಮದ ಮುಖಂಡರು, ಮನೆಯ ಹಿರಿಯರು ಇದೇ ದೇವಿಯ ಪ್ರತೀಕ ಎಂದು ನಂಬಿ ನಮಗೆ 'ಮುತ್ತು' ಕಟ್ಟಿಸಿದರು. ಈಗ ಈ ಪದ್ಧತಿಯಿಂದ ಹೊರಬರಲಾರದಷ್ಟು ಅದರಲ್ಲಿ ಬೆರೆತಿದ್ದೇವೆ. ನಮಗೆ ಕೂಲಿ ಕೊಡೋದಿಲ್ಲ. ಯುವಕರಿಂದ ಹಿಡಿದು ಮುದುಕರ ತನಕ ಎಲ್ಲರೂ ಆಸೆಯಿಂದಲೇ ನಮ್ಮತ್ತ ಕಣ್ಣು ಹಾಯಿಸುತ್ತಾರೆ. ನಾವು ಕೆಳ ಜಾತಿಯವರು. ಮೇಲ್ವರ್ಗದ ಮಹಿಳೆಯರಿಗೆ ಇಲ್ಲದ ಈ ಪದ್ಧತಿ ನಮಗೇಕೆ ಎಂದು ಎಷ್ಟೋ ಸಲ ಅನಿಸಿದೆ. ನಮಗೂ ಅವರಂತೆ ಮದುವೆಯಾಗಿ ಗಂಡ ಮಕ್ಕಳ ಜೊತೆ ಇದ್ದು ಸಂಸಾರ ಮಾಡಬೇಕು ಎಂದು ಆಸೆಯಾಗುತ್ತೆ. ಆದರೆ ಸಮಾಜ ನಮ್ಮನ್ನು ವೇಶ್ಯೆಯರಂತೆ ಕಾಣುತ್ತದೆ. ಮರ್ಯಾದೆಯಿಂದ ಬದುಕಲೂ ಆಗದೆ ಕೂಲಿ ಮಾಡಲೂ ಆಗದೆ ತುತ್ತು ಅನ್ನಕ್ಕಾಗಿ ಈ ನೋವು ಅನುಭವಿಸುತ್ತಿದ್ದೇವೆ" ಎಂದು ನೊಂದು ನುಡಿದರು. ಇದು 26-2-2013ರ ಪ್ರಜಾವಾಣಿ ಪತ್ರಿಕೆಯಲ್ಲಿ ಬಂದ ವರದಿ. (ದೇವದಾಸಿ ಮತ್ತು ಬೆತ್ತಲೆ ಸೇವೆ)

ಮೂಢನಂಬಿಕೆಗಳು, ಬಡತನ, ಅನಕ್ಷರತೆ ಇತ್ಯಾದಿಗಳಿಂದ ತುಂಬಿದ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇಂದಿಗೂ ಈ ಪದ್ಧತಿಯನ್ನು ಬಿಡಲಾಗದೆ ದುಃಖಿಸುತ್ತಿರುವ ಸೋದರಿಯರ ವಾಸ್ತವ ಚಿತ್ರಣವಿದು. ಅವರ ಶಿಕ್ಷಣ ಮಟ್ಟವು ಹೆಚ್ಚಿ ಆರ್ಥಿಕ ಸ್ವಾವಲಂಬನೆಗೆ ದಾರಿಯಾಗಿ ಕುಟುಂಬಗಳಲ್ಲಿ ಒಂದಿಷ್ಟು ನೆಮ್ಮದಿಯ ಬಾಳು ಕಾಣುವಂತಾದಲ್ಲಿ ಯಾವ ಮಹಿಳೆಯೂ ಈ ಪದ್ಧತಿಯನ್ನು ಅನುಸರಿಸಲು ಸಿದ್ಧಳಾಗುವುದಿಲ್ಲ. ಉದಾ.: ದ.ಕ.ದಲ್ಲಿ ಅಲ್ಲಿದ್ದಂತೆ ಆಳವಾದ ಧಾರ್ಮಿಕ ಮೂಢನಂಬಿಕೆಗಳು ಇಲ್ಲ. ಮತ್ತು ಇಲ್ಲಿ ಇದ್ದ ದೇವದಾಸಿಯರು ದಲಿತ ಸಮುದಾಯದವರಲ್ಲ. ಹಿಂದುಳಿದ ವರ್ಗ ಅಥವಾ ಸ್ಪಶ್ಯ ಸಮುದಾಯದವರು. ಇವರಿಗೆ ಶಿಕ್ಷಣ ಸೌಲಭ್ಯ ಬಹಳ ಬೇಗನೆ ಲಭಿಸಿದ್ದರಿಂದ ಈ ಶೋಷಣೆಯ ಕೂಪದಿಂದ ಮುಕ್ತಿ ಪಡೆಯುವಂತಾಯಿತು.

1927ನೆಯ ಇಸವಿಯಲ್ಲಿ ಮಹಾತ್ಮಾ ಗಾಂಧೀಜಿಯವರು ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡುತ್ತಾ ಮದರಾಸು ಪ್ರಾಂತ್ಯಕ್ಕೆ ಬಂದರು. ಮಾಯಾವರಂ ಎಂಬಲ್ಲಿ ತಂಗಿದ್ದಾಗ ಅಲ್ಲಿನ ದೇವಸ್ಥಾನಗಳಲ್ಲಿ ರೂಢಿಯಲ್ಲಿದ್ದ ದೇವದಾಸಿ ಪದ್ಧತಿಯ ಬಗ್ಗೆ ತಿಳಿದು ಬೇಸರ ವ್ಯಕ್ತಪಡಿಸಿದರು.

ಅಂದಿನ ಒಂದು ಸಾರ್ವಜನಿಕ ಸಮಾರಂಭದಲ್ಲಿ ಈ ಪದ್ಧತಿಯ ಕುರಿತು ಮಾತನಾಡಿದರು. "ಈ ದಿನ ಮಧ್ಯಾಹ್ನ ನಾನು ಕೆಲವು ದೇವದಾಸಿಯರನ್ನು ಭೇಟಿಯಾಗಿದ್ದೆ. ಅವರ ಬಗ್ಗೆ ತಿಳಿದು ನನ್ನ ಆತ್ಮಕ್ಕೆ ಆಘಾತವಾಯಿತು. ಅವರನ್ನು ದೇವದಾಸಿಯರು ಎಂದು ಕರೆದು ನಾವು ಧರ್ಮದ ಹೆಸರಿನಲ್ಲಿ ದೇವರಿಗೆ ಅವಮಾನ ಮಾಡುತ್ತಿದ್ದೇವೆ. ಅವರನ್ನು ನಮ್ಮ ದೈಹಿಕ ತೃಷೆಯನ್ನು ತೀರಿಸಿಕೊಳ್ಳಲು ಉಪಯೋಗಿಸಿಕೊಳ್ಳುವುದು, ಅದಕ್ಕಾಗಿ ದೇವರ ಹೆಸರನ್ನು ಮುಂದೆ ಮಾಡುವುದು. ಎಲ್ಲವೂ ಮುಗಿದ ಮೇಲೆ ದೇವದಾಸಿಯರನ್ನು ತುಚ್ಛವಾಗಿ ಕಾಣುವುದು ಮತ್ತು ತಪ್ಪೆಲ್ಲವೂ ಅವರದೇ ಎನ್ನುವಂತೆ ವರ್ತಿಸುವುದು ಅತ್ಯಂತ ಪಾಪದ ಕೆಲಸ. ಇಂತಹ ಅನೈತಿಕ ಕೆಲಸವನ್ನು ನಿರ್ವಹಿಸಲು ಒಂದು ವರ್ಗದ ಜನರಿರುವುದು, ಮತ್ತೊಂದು ವರ್ಗದ ಜನ ಅದನ್ನು ಬೆಂಬಲಿಸುವುದು. ಇದನ್ನು ಯೋಚಿಸಿದರೆ ಜೀವನವೇ ಹೇಸಿಗೆ ಎನಿಸುತ್ತದೆ. ಅವರು ಪ್ರಪಂಚದ ಬೇರೆ ಯಾವುದೇ ಹೆಂಗಸರಷ್ಟೇ ಸನ್ನಡತೆಯುಳ್ಳವರಂತೆ ನನಗೆ ಕಂಡರು. ನನ್ನ ಅಕ್ಕ ತಂಗಿಯರಿಗೂ ಅವರಿಗೂ ಏನು ವ್ಯತ್ಯಾಸವಿದೆ? ನಮ್ಮ ಸ್ವಂತ ಸಹೋದರಿಯರು ಅಂತಹ ಅನೈತಿಕ ವ್ಯವಹಾರಕ್ಕಿಳಿದರೆ ಹೌಹಾರುವ ನಾವು ಬೇರೆ ಹೆಂಗಸರನ್ನು ಅದೇ ಉದ್ದೇಶಕ್ಕಾಗಿ ಉಪಯೋಗಿಸಿಕೊಳ್ಳುವುದರ ಉದ್ದಿಶ್ಯವಾದರೂ ಏನು?" ಎಂದು ಸಭಿಕರ ಮುಖಗಳಿಗೆ ಹೊಡೆಯುವಂತೆ ಗಾಂಧೀಜಿ ಪ್ರಶ್ನಿಸಿದರು. (ಬಿ. ಎ. ಶ್ರೀಧರ, ಬಾಪು ಚಿಂತನೆ)

ಗಾಂಧೀಜಿಗೆ ಧರ್ಮದ ಹೆಸರಿನಲ್ಲಿ ಸ್ತ್ರೀಯರನ್ನು ಶೋಷಿಸುವ ಕ್ರಮವೊಂದು ಭಾರತದಲ್ಲಿದೆ ಎಂದು ಮೊದಲೇ ಗೊತ್ತಿರಬೇಕು. ಯಾಕೆಂದರೆ ಗುಜರಾತಿನ ದೇವಾಲಯಗಳಲ್ಲೂ ಈ ಪದ್ಧತಿಯಿತ್ತು. ಮಾಯಾವರಂನಲ್ಲಿ ಈ ದೇವದಾಸಿಯರನ್ನು ಮುಖತಃ ಭೇಟಿಯಾದ ಮೇಲೆ ಅವರ ನೋವಿನ ಆಳ ಅರ್ಥವಾಯಿತು. ದೇವದಾಸಿಯರ ಪುನರ್ವಸತಿಗೆ ಪ್ರಯತ್ನಿಸಿ ಅವರಿಗೆ ನೆಮ್ಮದಿಯ ಜೀವನವನ್ನು ಕೊಡಿಸಬೇಕೆಂಬುದೇ ಅವರ ಕಳಕಳಿಯಾಗಿತ್ತು. ಆದರೆ ಪುರೋಹಿತಶಾಹಿ ಮತ್ತು ರಾಜಶಾಹಿಯು ಇದನ್ನು ಬೆಂಬಲಿಸುತ್ತದೆ ಎಂದು ಗೊತ್ತಿದ್ದೂ ಅವರು ಅವರನ್ನು ಖಂಡಿಸುವ ಮತ್ತು ಈ ಪಾಪಕೃತ್ಯಗಳಿಗೆಲ್ಲಾ ಧಾರ್ಮಿಕ ನಂಬಿಕೆಗಳೇ ಕಾರಣ ಎಂಬ ಸತ್ಯವನ್ನು ಹೇಳಲು ಮನಸ್ಸು ಮಾಡಿಲ್ಲವಲ್ಲಾ. ಅದೇ ಆಶ್ಚರ್ಯವೆನಿಸುತ್ತದೆ. ಡಾ. ಶಿವರಾಮ ಕಾರಂತರು ದೇವದಾಸಿಯರ ಪುನರುತ್ಥಾನದ ಬಗ್ಗೆ ಗಾಂಧೀಜಿಯವರಲ್ಲಿ ಸಲಹೆ ಕೇಳಿದಾಗಲೂ ಅವರು ನೀಡಿದ ಉತ್ತರವು ಸಮರ್ಪಕವಾಗಿಲ್ಲವೆಂದೇ ಅದನ್ನು ತಿರಸ್ಕರಿಸಿದ್ದರು.

ಬಾರ್ ಬಾಲೆಯರ ಕುಣಿತಗಳು

[ಸಂಪಾದಿಸಿ]
ಬಾರ್ ಬಾಲೆಯರ ಕುಣಿತಗಳು

ದೇವದಾಸಿ ಪದ್ಧತಿ ನಿಷೇಧಿಸಲ್ಪಟ್ಟ ಮೇಲೆ ಅದರದೇ ಒಂದು ಹೊಸ ಅವಿಷ್ಕೃತ ರೂಪದಲ್ಲಿ ಆಧುನಿಕ ಕಾಲದ ದೊಡ್ಡ ಪಟ್ಟಣಗಳ ದೊಡ್ಡ ಹೋಟೇಲುಗಳಲ್ಲಿ ಬಾರ್‌ಗಳಲ್ಲಿ ನರ್ತನ ಸೇವೆ ನಡೆಯುತ್ತದೆ. ಅದಕ್ಕೆ ಕ್ಯಾಬರೆ ಎಂದೋ ಡಿಸ್ಕೋ ತೆಕ್ ಎಂದೋ ಹೊಸ ಹೆಸರು ಇದೆ. ಕ್ಯಾಬರೆಗಳು ನಿಷೇಧಿಸಲ್ಪಟ್ಟ ಮೇಲೆ ಲೈವ್ ಬ್ಯಾಂಡ್ ಬಾರ್‌ಗಳಲ್ಲಿ ಹುಡುಗಿಯರು ಸಿನಿಮಾದ ಹಾಡುಗಳಿಗೆ ನರ್ತಿಸುವ ವೃತ್ತಿ ಪ್ರಾರಂಭವಾಗಿದೆ. ಕ್ಯಾಬರೆ ನರ್ತಕಿಯರು ತುಂಡು ಬಟ್ಟೆಯುಟ್ಟು ಮಾದಕವಾಗಿ ನರ್ತಿಸುತ್ತಾ ಪಾನಗೋಷ್ಠಿಯಲ್ಲಿರುವ ಗಂಡಸರ ಕಾಮ ಕೆರಳಿಸುವ ಕಾರ್ಯ ಮಾಡುತ್ತಾರೆ. ಕಳೆದ ಶತಮಾನ 6070ರ ದಶಕಗಳ ಹೆಚ್ಚಿನ ಚಲನಚಿತ್ರಗಳಲ್ಲಿ ಕ್ಯಾಬರೆ ನೃತ್ಯದ ದೃಶ್ಯವೊಂದು ಇದ್ದೇ ಇರುತ್ತಿತ್ತು. ಇವರು ಆರ್ಥಿಕವಾಗಿ ಸಬಲರಾದಂತೆಲ್ಲಾ ಅವರ ಅಂತಸ್ತು ಮೇಲೇರುತ್ತಿತ್ತು.

ಆದರೆ ಈಗಿನ ಬಾರ್ ಬಾಲೆಯರ ಪರಿಸ್ಥಿತಿ ಕ್ಯಾಬರೆ ನರ್ತಕಿಯರಂತಿಲ್ಲ. ಆರ್ಥಿಕವಾಗಿ ತೀರಾ ಕೆಳವರ್ಗದ ಕುಟುಂಬಗಳಿಂದ ಬಂದ ಈ ಬಾಲೆಯರು ತಮ್ಮ ಕುಟುಂಬದ ತುತ್ತಿನ ಚೀಲವನ್ನು ತುಂಬಿಸುವುದಕ್ಕಾಗಿ ಈ ವೃತ್ತಿಯನ್ನು ಆಯ್ದುಕೊಂಡವರು. ಗ್ರಾಮೀಣ ಪ್ರದೇಶಗಳಲ್ಲಿ ಕುಲಕಸಬುಗಳು ನಾಶಗೊಂಡು ಹಲವು ಕುಟುಂಬಗಳು ಅತಂತ್ರವಾದುವು. ಕಳೆದ ಶತಮಾನದ 60-70ರ ದಶಕ ಗಳಲ್ಲಿ ಹಲವು ಕಾರ್ಖಾನೆಗಳು ಮುಚ್ಚಲ್ಪಟ್ಟು ಹಲವಾರು ಕುಟುಂಬಗಳು ಬೀದಿಗೆ ಬಿದ್ದವು. ಇಂತಹ ಕುಟುಂಬಗಳಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಪಟ್ಟಣಗಳಲ್ಲಿ ತೆರೆಯಲ್ಪಟ್ಟ ಬಾರ್‌ಗಳಲ್ಲಿ ಈ ನೃತ್ಯ ಸೇವೆಗೆ ಸೇರಿಕೊಂಡರು. ಕತ್ತಲೆಯಾದ ಮೇಲೆ ಮಬ್ಬು ಬೆಳಕಿನ ಸಭಾಂಗಣದಲ್ಲಿ ಕೂತು ಮದಿರಾ ಪಾನದಲ್ಲಿ ನಿರತರಾದ ಗಂಡಸರ ಮುಂದೆ ಈ ಬಾಲೆಯರು ಸಿನಿಮಾ ಹಾಡುಗಳಿಗೆ ಮೈಕುಣಿಸುವ ಕಾಯಕಕ್ಕೆ ತೊಡಗಿದವರು. ಹಿನ್ನೆಲೆ ಸಂಗೀತದೊಂದಿಗೆ ಕುಣಿತ ಮತ್ತು ಕುಡಿತದ ಅಮಲು ಏರುತ್ತದೆ. ತಾವು ತೊಟ್ಟ, ಚೋಲಿ, ಗಾಗ್ರಾಗಳಿಂದಲೇ ಅರೆ ನಗ್ನತೆಯ ಪ್ರದರ್ಶನಗೊಳ್ಳಲೇ ಬೇಕು. ಪುರುಷರ ಹಣ ಮತ್ತು ಶಕ್ತಿ ಇಲ್ಲಿ ಕೆಲಸ ಮಾಡಿಸುತ್ತದೆ. ಈ ಬಾಲೆಯರ ದೇಹ ಒಂದು ಸರಕಾಗಿ ಪ್ರದರ್ಶನಗೊಳ್ಳುತ್ತದೆ. 2005ರ ಆಗಸ್ಟ್ 14ರಿಂದ ಮಹಾರಾಷ್ಟ್ರದಲ್ಲಿ ಬಾರ್ ಬಾಲೆಯರ ನರ್ತನವನ್ನು ನಿಷೇಧಿಸಿದಾಗ ಇವರೆಲ್ಲಾ ಸಂಘಟಿತರಾಗಿ ಪ್ರತಿಭಟನೆ ನಡೆಸಿದ್ದು, ನ್ಯಾಯಾಲಯದಲ್ಲಿ ಕೇಸು ದಾಖಲಿಸಿದ್ದು, ವರ್ಷಗಳ ಬಳಿಕ ಪುನಃ ಬಾರ್‌ಗಳಲ್ಲಿ ನರ್ತನವು ಕೆಲವು ನಿಯಮಗಳ ಸಹಿತ ಪ್ರಾರಂಭಗೊಂಡದ್ದು ಈಗ ಇತಿಹಾಸ. ಇಂತಹ ಬಾರ್ ಗಳಿರುವ ದೊಡ್ಡ ಹೋಟೆಲ್‌ಗಳಲ್ಲಿ ಪಾನಮತ್ತರು ಹುಡುಗಿಯೊಬ್ಬಳನ್ನು ಕೊಂದು ಸುಟ್ಟು ಹಾಕಿದ್ದು ಇಡೀ ದೇಶವೇ ಈ ಮಧುಶಾಲೆಯ ಕ್ರೌರ್ಯವನ್ನು ಕಂಡು ಬೆರಗಾಗಿತ್ತು. ಬೆಂಗಳೂರಿನ ಬಾರ್‌ಬಾಲೆಯರ ಮನೆಗೆ ನುಗ್ಗಿ ಮೂವರ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ನಿರ್ಜನ ಪ್ರದೇಶದಲ್ಲಿ ಬಿಸಾಡಿ ಹೋದ ಘಟನೆ ದಿಗ್ಧಮೆಗೊಳಿಸಿತ್ತು. ಪುರುಷರಿಂದಲೇ ಸುತ್ತವರಿಯಲ್ಪಟ್ಟ ಅವರಿಂದಲೇ ನಿಯಂತ್ರಿಸಲ್ಪಟ್ಟ, ಅವರಿಂದಲೇ ಶೋಷಣೆಗೊಳಗಾಗುವ ಸಂದರ್ಭಗಳೇ ಇಲ್ಲಿ ಹೆಚ್ಚಿರುತ್ತವೆ. ದೂರದ ಉಪನಗರಗಳಿಂದ, ಹಳ್ಳಿಗಾಡಿನಿಂದ ಬಂದ ಇವರು ತಮ್ಮ ವೃತ್ತಿಯ ಬಗ್ಗೆ ಕುಟುಂಬಕ್ಕೆ ತಿಳಿಸಿರುವುದಿಲ್ಲ. ಬಾರ್ ನರ್ತನ ನಿಷೇಧಗೊಂಡಾಗ ಹತಾಶರಾಗಿ ಆತ್ಮಹತ್ಯೆ ಮಾಡಿಕೊಂಡವರೂ ಇದ್ದರು. ಸಿನಿಮಾದಲ್ಲಿ ನಾಯಕಿಯ ಕುಣಿತವನ್ನು ನೋಡುವುದಕ್ಕೂ ಅದೇ ಕುಣಿತವನ್ನು ಮಧುಶಾಲೆಯಲ್ಲಿ ನೋಡುವುದಕ್ಕೂ ಪುರುಷರ ದೃಷ್ಟಿಕೋನದಲ್ಲಿರುವ ವ್ಯತ್ಯಾಸವನ್ನು ಗಮನಿಸಿದಾಗ ಆಶ್ಚರ್ಯವಾಗುತ್ತದೆ.

ದೊಡ್ಡ ದೊಡ್ಡ ನಗರಗಳಲ್ಲಿ ಲೈವ್‌ ಬ್ಯಾಂಡ್, ಡೆಸ್ಕೊಥೆಕ್‌ಗಳಲ್ಲಿ ಹಾಡು ಕುಣಿತ ಮಾತ್ರವಲ್ಲ ಮಧ್ಯರಾತ್ರಿಯ ನಂತರ ಮದಿರೆಯ ಅಮಲುಂಟು ಮಾಡುವ ಅನರ್ಥಗಳು, ದೌರ್ಜನ್ಯಗಳು ಸಾಕಷ್ಟು ನಡೆಯುತ್ತವೆ. ಇಲ್ಲಿಯೂ ಈ ಕುಣಿಯುವ ಬಾಲೆಯರನ್ನು 'ಬಯಕೆ' ತೀರಿಸಲು ಕಳಿಸಿಕೊಡುವುದಿದೆ. ಗಿರಾಕಿಗಳು ಇಷ್ಟಪಟ್ಟವರನ್ನು ರೇಟು ನಿಗದಿಪಡಿಸಿ ಕಳಿಸಿಕೊಡುವವರು ಲೈವ್‌ ಬ್ಯಾಂಡ್ ಮಾಲಕರು. ಹೋಟೇಲಿನ ಅತಿಥಿಗೃಹದಲ್ಲಿ ಬಯಸಿದವರ ಜೊತೆ ಕಾಲ ಕಳೆಯುವ ಯೋಗವೂ ಲಭಿಸುತ್ತದೆ. ಇದಕ್ಕೆ 'ಪಿಕ್‌ಅಪ್ ಅಂಡ್ ಡ್ರಾಪ್ ಪ್ಯಾಕೇಜ್' ಎಂದು ಕರೆಯುತ್ತಾರೆ. ಸಾಮೂಹಿಕ ನೃತ್ಯ ಮಾಡುವ ವ್ಯವಸ್ಥೆಯೂ ಇದೆ, ಸ್ನೇಹಿತರ ಜೊತೆಗೆ ಹೋಗುವವರು ಐದಾರು ಮಂದಿಗೆ ಮಾತ್ರ ಪ್ರತ್ಯೇಕ ನೃತ್ಯ ಕಾರ್ಯಕ್ರಮವನ್ನೂ ಏರ್ಪಡಿಸುವ ವ್ಯವಸ್ಥೆ ಪ್ರಾರಂಭವಾಗಿದೆ. ಒಬ್ಬಳು ಅಥವಾ ಇಬ್ಬರು ನೃತ್ಯಗಾರ್ತಿ ಯರೊಂದಿಗೆ ಪ್ರತ್ಯೇಕ ಕೋಣೆಯಲ್ಲಿ ನೃತ್ಯ ಮಾಡಿಸುವುದಲ್ಲದೆ ತಾವು ಬಯಸಿದ ಹಾಡನ್ನು ಹಾಕಿ ಮದಿರೆಯ ಜೊತೆಗೆ ಮಾನಿನಿಯೊಂದಿಗೆ ಕುಣಿಯುವ ವ್ಯವಸ್ಥೆಯೂ ಈ ಲೈವ್‌ ಬ್ಯಾಂಡ್‌ಗಳಲ್ಲಿ ಇದೆ. ದೊಡ್ಡ ದೊಡ್ಡ ಉದ್ಯಮಿಗಳು ಇಲ್ಲಿಯ ಖಾಯಂ ಗ್ರಾಹಕರು, ಕೋರಮಂಗಲ, ಬಿ.ಟಿಎಂ. ಲೇಔಟ್, ಇಂದಿರಾ ನಗರ, ಆರ್.ಟಿ. ನಗರಗಳಲ್ಲಿ ಶನಿವಾರ, ಭಾನುವಾರಗಳಲ್ಲಿ ಇದಕ್ಕೆ ವಿಶೇಷ ರೀತಿಯಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಅನಧಿಕೃತವಾಗಿ ನಡೆಯುವ ಲೈವ್ ಬ್ಯಾಂಡ್‌ಗಳಲ್ಲಿ ಕೋಟಿಗಟ್ಟಲೆ ಹಣ ಬಾಚುತ್ತಾರೆ ಮಾಲಕರು.

ಇಲ್ಲಿ ನೃತ್ಯ ಮಾಡುವ ಹೆಣ್ಣುಮಕ್ಕಳಿಗೆ ಊಟ ವಸತಿ ವ್ಯವಸ್ಥೆ ಹೊರತಾಗಿ 500ರಿಂದ 1000ರೂ, ವೇತನ ಸಿಗುತ್ತದೆ. ಗ್ರಾಹಕರು ಖುಶಿಯಿಂದ ಕೊಟ್ಟ ಹಣದಲ್ಲಿಯೂ ಅರ್ಧಾಂಶ ಮಾಲಿಕರಿಗೆ ಸಂದಾಯ. ಗ್ರಾಹಕರು ಟಿಪ್ಸ್ ನೀಡಿದರೆ ಮಾತ್ರ ಹೆಚ್ಚುವರಿ ಗಳಿಕೆಗೆ ಸೇರುತ್ತದೆ. ಮಧ್ಯರಾತ್ರಿಯ ನಂತರವೂ ಕಾರ್ಯನಿರ್ವಹಿಸಿದರೆ ಅದಕ್ಕೆ ಪ್ರತ್ಯೇಕ ಹಣ ನೀಡಲಾಗುತ್ತದೆ. ಕೆಲವರನ್ನು ಒಂದು ಲೈವ್ ಬ್ಯಾಂಡಿನಿಂದ ಇನ್ನೊಂದು ಲೈವ್ ಬ್ಯಾಂಡಿಗೆ ಮಧ್ಯರಾತ್ರಿಯಲ್ಲಿಯೇ ಕರೆದೊಯ್ಯುವುದೂ ಇದೆ. ಈ ಬಾರ್‌ಬಾಲೆಯರು ಗಿರಾಕಿಗಳೊಂದಿಗೆ ನೇರವಾಗಿ ಮಾತನಾಡದಂತೆ ಕಾಯುವುದಕ್ಕೆ, ಬೇಹುಗಾರಿಕೆ ನಡೆಸುವುದಕ್ಕೆ ಮಾಲಿಕರು ವ್ಯವಸ್ಥೆ ಮಾಡಿರುತ್ತಾರೆ. ಮಾಲಿಕರು ನೇಮಿಸಿದ ಬೌನ್ಸರುಗಳ ಕಣ್ಣು ತಪ್ಪಿಸಿ ಯಾವ ಕೆಲಸವೂ ನಡೆಯದಂತೆ ಈ ನರ್ತಕಿಯ ಮೇಲೆ ಒಂದು ಕಣ್ಣು ಸದಾ ಕಾವಲು ಕಾಯುತ್ತಿರುತ್ತದೆ.

ಈ ಬಾರ್‌ಬಾಲೆಯರು ಹೇಳಿದ ಹಾಗೆ ಕೇಳದಿದ್ದರೆ ಬೆದರಿಕೆ, ಹೊಡೆತಗಳು ತಪ್ಪಿದ್ದಲ್ಲ. ರಾತ್ರಿಯಿಡೀ ಕುಣಿದ ಈ ಹೆಣ್ಣು ಮಕ್ಕಳನ್ನು ಮುಂಜಾನೆಯ ವೇಳೆಗೆ ಮನೆಗೆ ಬಿಡುತ್ತಾರೆ. ಹಗಲಿಡೀ ವಿಶ್ರಾಂತಿ ಪಡೆದುಕೊಂಡು ಸಂಜೆಯಾಗುತ್ತಲೇ ಮತ್ತೆ ಇವರು ಸಿದ್ಧರಾಗಬೇಕು. ಈ ವೃತ್ತಿಯಲ್ಲಿರುವ ಹೆಣ್ಣುಮಕ್ಕಳಲ್ಲಿ ಹೆಚ್ಚಿನವರು ದೂರದ ನೇಪಾಳ, ಬಿಹಾರ, ಬಂಗಾಳ ಮುಂತಾದ ರಾಜ್ಯಗಳ ಹಳ್ಳಿಗಾಡಿನವ ರಾಗಿರುತ್ತಾರೆ. ಇತ್ತೀಚೆಗೆ ಅವರಲ್ಲೂ ಪದವಿ ಪೂರೈಸಿದ ಹೆಣ್ಣು ಮಕ್ಕಳೂ ಇದ್ದಾರೆ. ತಮ್ಮ ಊರಿನವರಿಗೆ ತಾವು ಬಾರ್‌ಗಳಲ್ಲಿ ಕುಣಿಯುವ ವಾಸ್ತವ ಸಂಗತಿಯನ್ನು ಹೇಳಿರುವುದೇ ಇಲ್ಲ. ಪ್ರತೀ ತಿಂಗಳು ದುಡಿಮೆಯ ಹಣವನ್ನು ನಿಯಮಿತವಾಗಿ ತಮ್ಮ ಕುಟುಂಬಗಳಿಗೆ ಕಳಿಸುತ್ತಾರೆ. ಒಂದು ಕಾಲದಲ್ಲಿ ಬೆಂಗಳೂರಿನಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಯುವತಿಯರು ಲೈವ್‌ ಬ್ಯಾಂಡ್‌ಗಳಲ್ಲಿ ದುಡಿಯುತ್ತಿದ್ದರು. ಲೈವ್‌ಬ್ಯಾಂಡ್ ಬಂದಾದ ಮೇಲೆ ಅವರೆಲ್ಲಾ ತಮ್ಮ ತಮ್ಮ ಊರಿಗೆ ಮರಳಿ ಹೋಗಿದ್ದರು. ಆ ಮೇಲೆ ಮಹಾನಗರಗಳಲ್ಲಿ ಅಲ್ಲಲ್ಲಿ ಮಸಾಜ್ ಪಾರ್ಲ‌ರ್‍‍ಗಳು ಸ್ಥಾಪನೆಯಾದುವಲ್ಲಾ. ಆಗ ಇವರಲ್ಲಿ ಹಲವರು ಮರಳಿ ಈ ಪಾರ್ಲ‌ರ್‍‍ಗಳು ಉದ್ಯೋಗ ಗಳಿಸಿಕೊಂಡರು. ಬ್ಯಾಂಕಾಕ್‌ನಲ್ಲಿ ಮಸಾಜ್ ಪಾರ್ಲ‌್ರಗಳೇ ವೇಶ್ಯಾವಾಟಿಕೆಯ ಕೇಂದ್ರಗಳಾಗಿವೆ. ಹಾಗೆಯೇ ಎಲ್ಲಾ ನಗರಗಳು ಮಸಾಜ್ ಪಾರ್ಲರ್ ಎಂಬ ಬೋರ್ಡ್ ಹಾಕಿ ಒಳಗೆ ಬೇರೆಯೇ ವ್ಯವಹಾರ ನಡೆಸಿ ಸಿಕ್ಕಿಬಿದ್ದ ಸುದ್ದಿಗಳು ಆಗಾಗ ಪತ್ರಿಕೆಗಳಲ್ಲಿ ಪ್ರಕಟವಾದುದನ್ನು ನಾವೆಲ್ಲಾ ಗಮನಿಸಿರುತ್ತೇವೆ. ಮಂಗಳೂರಿನ ಹೊಗೆಬಜಾರ್‌ನ ಸುಭಾಸ್‌ನಗರ, ಉರ್ವಸ್ಟೋರಿನ ಕೋಟೆಕಣಿ ರಸ್ತೆಯಲ್ಲಿರುವ ಮಸಾಜ್ ಕೇಂದ್ರಗಳು ಅಲ್ಲದೆ ಕೆಲವು ಅಪಾರ್ಟ್‌ಮೆಂಟ್‌ಗಳೂ ಮಸಾಜ್ ಕೇಂದ್ರಗಳಾಗಿ ಸುದ್ದಿಯಾಗಿವೆ.

ಮಂಗಳೂರಿನಲ್ಲಿಯೂ ಕೆಲವು ಹೋಟೇಲ್‌ಗಳಲ್ಲಿ ಲೈವ್ ಬ್ಯಾಂಡ್, ಡಿಸ್ಕೊಥೆಕ್‌ಗಳು ಬಿರುಸಿನಿಂದ ಕಾರಾಚರಿಸುತ್ತಿವೆ. ಕೆಲವು ವರ್ಷಗಳ ಹಿಂದೆ ದೊಡ್ಡ ಹೊಟೇಲೊಂದರಲ್ಲಿ ನೀಲಿ ಚಿತ್ರಗಳ ಶೂಟಿಂಗ್ ಮಾಡಲು ಹೆಣ್ಣುಮಕ್ಕಳನ್ನು ತಯಾರಿಗೊಳಿಸಿದ್ದು ಸುದ್ದಿಯಾಗಿತ್ತು. ಆಮೇಲೆ ಕೋರ್ಟ್‌ಕೇಸ್ ಹಾಕಿದ್ದು ಏನಾಯಿತು ಎಂಬ ಸುದ್ದಿಯೇ ಇರುವುದಿಲ್ಲ. ಯಾಕೆ ಗೊತ್ತೇ? ಇಂತಹ ಕೇಸ್‌ಗಳೆಲ್ಲಾ ಕೆಲವು ಎಫ್.ಐ.ಆರ್.ವರೆಗೆ ಹೋಗುವುದೇ ಇಲ್ಲ. 'ನಾನು ಹೊಡೆದಂತೆ ಮಾಡುತ್ತೇನೆ ನೀನು ಅತ್ತಂತೆ ಮಾಡು' ಎಂಬ ಹೊಂದಾಣಿಕೆ ಮಾಡಿಕೊಳ್ಳುವುದು ಸರ್ವೇಸಾಮಾನ್ಯ. ವಕೀಲರಿಗೆ, ಪೊಲೀಸರಿಗೆ ಒಂದಿಷ್ಟು ಕೆಲಸ ಮತ್ತು ಅವರ ಜೇಬು ಭಾರವಾಗುವಂತೆ ಮಾಡಿಬಿಟ್ಟರೆ ನ್ಯಾಯದೇವತೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡದ್ದು ಸಾರ್ಥಕ. ಇನ್ನೂ ಒಂದು ಸತ್ಯವಿದೆ. ಇಂತಹ ಅಡ್ಡ ದಾರಿಯ ವ್ಯವಹಾರ ಮಾಡುವವರು ಮಾಡಿಸುತ್ತಿರುವವರು ಸಮಾಜದ ಪ್ರತಿಷ್ಠಿತ ಮನೆತನದವರಾಗಿರುತ್ತಾರೆ. ಇವರ ಮಾನರಕ್ಷಣೆಗಾಗಿ ಸದಾ ಸಿದ್ಧರಾಗಿರುವ ರಾಜಕೀಯ ವ್ಯಕ್ತಿಗಳಿರುತ್ತಾರೆ. ಎಷ್ಟೋ ಕಡೆಗಳಲ್ಲಿ ಇಂತಹ ಪಾರ್ಲ‌ರ್‍‍ಗಳು ಪೋಲಿಸರಿಗೆ ಗೊತ್ತಿದ್ದೂ ನಡೆಯುತ್ತದೆ ಎಂಬ ಪುಕಾರು ಇದೆ. ವೇಶ್ಯಾವಾಟಿಕೆ ನಡೆಸುವ ಕೆಲವು ಹೊಟೇಲುಗಳ ಮಾಲಿಕರೂ ಕೂಡಾ ಎಷ್ಟೇ ದೊಡ್ಡ ರೈಡ್ ನಡೆದರೂ ಪಾರಾಗಿ ಗೆಲ್ಲುವ ದಾರಿಯನ್ನು ಕಂಡುಕೊಂಡಿರುತ್ತಾರೆ.

ಮಾನ ರಕ್ಷಣೆಯ ಮಾತು ಬಂದಾಗ ವಿಶ್ವಾದ್ಯಂತ ಸುದ್ದಿಯಾದ ಮಂಗಳೂರಿನ ಪಬ್ ಮತ್ತು ಹೋಮ್ ಸ್ಟೇ ದಾಳಿಯು ನೆನಪಾಗುತ್ತದೆ. ಕುಡಿತದ ಮೋಜು ಅನುಭವಿಸುವ ಉದ್ದೇಶದಿಂದ ಐಷಾರಾಮಿ ಬದುಕಿಗೆ ಮಾರುಹೋದ ತರುಣ ತರುಣಿಯರು ಸೇರುವ ತಾಣವೆ ಪಬ್. ಇದು ಹಗಲಲ್ಲೇ ನಡೆಯುತ್ತದೆ. ಕುಡಿಯುವುದೂ ತಪ್ಪಲ್ಲವೆಂದು ನಮ್ಮ ಸರಕಾರ ಪರ್ಮಿಶನ್ ಕೊಟ್ಟಿದೆ. ಹೋಟೇಲ್‌ಗಳಲ್ಲಿ ಒಟ್ಟಿಗೆ ಕೂತು ಉಪಹಾರ ಸ್ವೀಕರಿಸಿದಷ್ಟೇ ಆರಾಮವಾಗಿ ಯುವಕರು ಪಬ್‌ಗಳಲ್ಲಿ ಕುಡಿತಕುಣಿತಗಳ ಮೋಜು ಅನುಭವಿಸುತ್ತಾರೆ. ಇದು ಸಂಸ್ಕೃತಿ ರಕ್ಷಕರಿಗೆ ಘೋರ ಪಾಪವಾಗಿ ಕಂಡಿದೆ. ಯುವತಿ ಯುವಕರಿಗೆ ಬುದ್ಧಿ ಕಲಿಸಲು ಸಂಸ್ಕೃತಿ ರಕ್ಷಕರ ಸೇನೆ ಪಬ್‌ಗೆ ಹಠಾತ್ತನೆ ದಾಳಿ ಮಾಡಿ ಅಲ್ಲಿದ್ದ ಯುವತಿಯರ ಮೇಲೆ ಕೈಹಾಕಿ, ಅಶ್ಲೀಲವಾಗಿ ಬೈಯ್ದು, ಎಳೆದಾಡಿ, ಅಟ್ಟಾಡಿಸಿ ತಮ್ಮ ಪೌರುಷಪ್ರದರ್ಶನ ಮಾಡಿದ್ದಾರೆ. ದೃಶ್ಯ ಮಾಧ್ಯಮಗಳಲ್ಲಿ ಪತ್ರಿಕಾ ಮಾಧ್ಯಮಗಳಲ್ಲಿ ಇವರ ಸಂಸ್ಕೃತಿ ಪ್ರೇಮದ ರಾಕ್ಷಸಾವತಾರ ಬಿತ್ತರಗೊಂಡು ಮಂಗಳೂರು ಜಗತ್ತಿನಾದ್ಯಂತ ಸುದ್ಧಿಯಾಯಿತು. ಇಲ್ಲಿ ಪ್ರಶ್ನೆ ಇರುವುದು ಯಾವುದೋ ಕುಟುಂಬದ ಗಂಡು ಹೆಣ್ಣು ಮಕ್ಕಳಿಗೆ ಬುದ್ಧಿ ಕಲಿಸುವ ಹಕ್ಕನ್ನು ಇವರಿಗೆ ಕೊಟ್ಟವರಾರು? ಸಂಸ್ಕೃತಿ ರಕ್ಷಣೆಗೆ ಹೊರಟಿರುವ ಇವರು ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯರ ಬಗ್ಗೆ ಪುರುಷರ ದೃಷ್ಟಿಕೋನ ಹೇಗಿದೆ ಎಂಬುದನ್ನು ಪ್ರದರ್ಶನ ಮಾಡಿದಂತಾಗಲಿಲ್ಲವೇ? ಅನೈತಿಕತೆ ಅಶ್ಲೀಲ ಯಾವುದೆಂದು ಆ ಮಕ್ಕಳ ಹೆತ್ತವರಿಗೆ ಗೊತ್ತಿಲ್ಲವೇ? ದಾಳಿ ಮಾಡಿದವರ ಮಕ್ಕಳಿಗೂ ಹೀಗೆ ಬುದ್ಧಿ ಕಲಿಸಬಹುದೇ? ಸಾರ್ವಜನಿಕವಾಗಿ ಎಳೆದಾಡಿ, ಹೊಡೆದು, ಬಡಿದು ಬುದ್ಧಿ ಕಲಿಸಲು ದುರ್ಯೋಧನ, ದುಶ್ಯಾಸನರಿರುವ ಆಸ್ಥಾನವೆಂದು ಭಾವಿಸಿರುವರೇ? ಮನೆಯಲ್ಲಿ ಆಚರಣೆ ಮಾಡಲು ಸೌಕಯ್ಯವಿಲ್ಲದ ತರುಣರು ತರುಣಿಯರು ಬರ್ತ್‌ಡೇ ಪಾರ್ಟಿಯನ್ನು ತಮ್ಮ ಖರ್ಚಿನಲ್ಲಿ ಹೋಮ್‌ ಸ್ಟೇಯಲ್ಲಿ ಮಾಡಿದ್ದು ಇವರಿಗೆ ಅಪರಾಧವಾಗಿ ಕಂಡದ್ದು ಹೇಗೆ? ತಮ್ಮ ಮನೆಯ ಮಕ್ಕಳನ್ನೇ ಹೀಗೆ ಸಾರ್ವಜನಿಕವಾಗಿ ಯಾರಾದರೂ ಹೊಡೆದಾಗಲೂ ಇದು ಭಾರತೀಯ ಸಂಸ್ಕೃತಿ ಎಂದು ಸುಮ್ಮನಿರುವರೇ? ಹೀಗೆ ಹತ್ತಾರು ಪ್ರಶ್ನೆಗಳು ಮುತ್ತಿಕೊಳ್ಳುತ್ತವೆ. ನಾಗರಿಕ ಸಮಾಜದಲ್ಲಿ ಆಧುನಿಕ ರೀತಿ ರಿವಾಜುಗಳು ಸೇರಿಕೊಂಡಾಗ ಹಳೆಯದೆಲ್ಲವೂ ಕೊಚ್ಚಿಕೊಂಡು ಹೋಗುವುದು ಸಹಜ. ಎರಡು ಮೂರು ಶತಮಾನಗಳ ಹಿಂದಿನಂತೆ ನಮ್ಮ ಸಮಾಜದಲ್ಲಿ ಆಚಾರ, ವಿಚಾರ, ಸಂಪ್ರದಾಯಗಳು ಇವೆಯೆ? ಇಲ್ಲವಲ್ಲಾ. ನಾವು ಮಾತ್ರ ಬದಲಾಗುತ್ತೇವೆ. ನೀವು 12ನೇಯ ಶತಮಾನದ ಸಂಸ್ಕೃತಿಯಲ್ಲೇ ಜೀವಿಸಿ ಎಂದು ಆದೇಶಿಸುವವರು ಹೆಚ್ಚುತ್ತಿದ್ದಾರೆ. ಆದರೆ ನಾವು 21ನೇಯ ಶತಮಾನದಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ಮರೆಯಬಾರದು ಅಲ್ಲವೇ?

ಈ ವೃತ್ತಿ ಬೆಳೆಯಲು ಕಾರಣಗಳು

ಈ ಮೊದಲೇ ಹೇಳಿದಂತೆ ಈ ವೃತ್ತಿಯನ್ನು ಪ್ರಪಂಚದ ಯಾವ ದೇಶವೂ ಗೌರವದಿಂದ ಕಂಡಿಲ್ಲ. ನಾಗರಿಕ ಸಮಾಜಕ್ಕೆ ಇದೊಂದು ಕಳಂಕವೆಂದು ಹೇಳುತ್ತಲೇ ಅದನ್ನು ಪೋಷಿಸುತ್ತಾ ಬಂದಿದೆ. ಹಾಗಿರುವಾಗ ಕಾನೂನು ಯಾಕೆ ಮಧ್ಯೆ ಪ್ರವೇಶಿಸುತ್ತದೆ ಕಾನೂನು ಪ್ರಕಾರ ಈ ವೃತ್ತಿ ಅಪರಾಧವಲ್ಲ. ಪೋಲೀಸರಿಗೆ ಇದನ್ನು ತಡೆವ ಹಕ್ಕಿಲ್ಲ. ನ್ಯಾಯಾಲಯಕ್ಕೆ ಮಾತ್ರ ಇದೆ. ಸಾರ್ವಜನಿಕ ಸ್ಥಳಗಳಲ್ಲಿ ಈ ವೃತ್ತಿ ಕೈಗೊಳ್ಳುವುದು, ಅಪ್ರಾಪ್ತ ವಯಸ್ಸಿನ ಹೆಣ್ಣು ಮಕ್ಕಳನ್ನು ಲೈಂಗಿಕವಾಗಿ ಶೋಷಿಸುವುದು, ಅಶ್ಲೀಲವಾಗಿ ಅಂಗಗಳನ್ನು ತೋರಿಸುವುದು ಅಪರಾಧ. ಈ ಕಾರಣಕ್ಕಾಗಿ ಪೋಲೀಸರು ಕೇಸು ಹಾಕಿ ಪೋಲಿಸ್ ಠಾಣೆಗೆ ಒಯ್ಯುತ್ತಾರೆ. ಠಾಣೆಯಲ್ಲಿ ಒಂದಿಷ್ಟು ಸಹಸ್ರ ನಾಮಾರ್ಚನೆಯಾಗಿ ಇವರೇ ನೈವೇದ್ಯ ಅರ್ಪಿಸಿದರೆ ದೇವರು ಒಲಿಯುತ್ತಾನೆ. ನಿರ್ವಿಘ್ನವಾಗಿ ಕೆಲಸ ಮುಂದುವರಿಸ ಬಹುದು. ಅಲ್ಲಿ ಇವರು ಒಲಿಸಿಕೊಳ್ಳುವುದರಲ್ಲಿ ಏನಾದರೂ ಎಡವಟ್ಟು ಸಂಭವಿಸಿದರೆ ಕೇಸು ಕೋರ್ಟು ಕಟ್ಟೆ ಹತ್ತುತ್ತದೆ. ಎಂತೆಂತಹ ಕೊಲೆಗಡುಕರನ್ನೇ ಆರೋಪದಿಂದ ಮುಕ್ತಗೊಳಿಸುವ ವಕೀಲರಿರುವಾಗ ನ್ಯಾಯಾಲಯದಲ್ಲಿ ಇವರ ಕೇಸುಗಳೂ ನಿರಪರಾಧಿಗಳೆಂದು ಸಾಬೀತಾಗುವುದಕ್ಕೆ ಹೆಚ್ಚು ಶ್ರಮ ಬೇಕಾಗಿಲ್ಲ. ಹಣವೊಂದಿದ್ದರೆ ಸಾಕು. ಇಷ್ಟಕ್ಕೂ ಇವರೇನು ಕೊಲೆ, ದರೋಡೆ, ಕಳ್ಳತನ ಮಾಡಿದವರಲ್ಲವಲ್ಲ. ಇಲ್ಲಿ ಕಾನೂನುಗಳು ನಿರುಪಯುಕ್ತ ಯಾಕೆಂದರೆ ಒಳ್ಳೆಯ ಜನರಿಗೆ ಅವು ಅಗತ್ಯವಿಲ್ಲ. ಕೆಟ್ಟವರನ್ನು ಅದು ಸುಧಾರಿಸಲು ಶಕ್ತವಾಗುವುದಿಲ್ಲ. ಕಾನೂನು ಕತ್ತೆ ಎಂದು ಹೇಳುವುದು ಅದಕ್ಕೆ. ಬಡವರನ್ನು ಅದು ಲತ್ತೆ ಕೊಟ್ಟು ಒದೆಯುತ್ತದೆ. ಹಣ ಬಲವುಳ್ಳವರು ಅದರ ಮೇಲೆ ಸವಾರಿ ಮಾಡುತ್ತಾರೆ.

ಈ ವೃತ್ತಿಯಲ್ಲಿ ನಿರತರಾದ ಸ್ತ್ರೀಯರು ತಮ್ಮ ಅಪರಾಧಕ್ಕಾಗಿ ನೀಡುವ ಶಿಕ್ಷೆಗೆ ಭಯ ಪಡುತ್ತಾರೆ. ಆದರೆ ತಾವು ಕೆಟ್ಟ ಕೆಲಸ ಮಾಡುತ್ತೇವೆ ಎಂಬ ಭಯವಿರುವುದಿಲ್ಲ. ಇಂತಹ ಕೇಸುಗಳು ಠಾಣೆಗೆ ಬರುವವುಗಳಲ್ಲಿ ವೇಶ್ಯೆಯರಿರು ತ್ತಾರೆಯೇ ವಿನಃ ವಿಟರು ಇರುವುದಿಲ್ಲವೆಂಬುದು ಗಮನಿಸಬೇಕಾದ ವಿಷಯ. ಈ ವೃತ್ತಿಗೆ ಪ್ರಚೋದಿಸುವ, ಕರೆತರುವವರೆಲ್ಲರೂ ತಪ್ಪಿಸಿಕೊಳ್ಳುತ್ತಾರೆ ಇಲ್ಲವೇ ಮರೆಯಲ್ಲಿರುತ್ತಾರೆ. ಈ ವೇಶ್ಯೆಯರ ಕೇಸುಗಳು ನ್ಯಾಯಾಲಯದ ಮೆಟ್ಟಿಲು ಹತ್ತಿದರೆ ಹೊರ ಬರುವುದು ಕಷ್ಟ ಅದು ಇಲಿ ಬೋನಿನೊಳಗೆ ಹೋದಂತೆ. ಒಳಗೆ ಪ್ರವೇಶಿಸುವುದೇನೋ ಸುಲಭ, ಹೊರಬರುವುದು ಮಾತ್ರ ಪ್ರಯಾಸದ ಕೆಲಸ. ಆದುದರಿಂದ ಸಾಮಾನ್ಯವಾಗಿ ಇವರ ಕೇಸುಗಳೆಲ್ಲಾ ಹೆಚ್ಚಿನವು ಪೊಲೀಸ್ ಠಾಣೆಗಳಲ್ಲಿಯೇ ಇತ್ಯರ್ಥವಾಗುತ್ತದೆ. 'ಹೈಟೆಕ್' ವೇಶ್ಯೆಯರ ಕೇಸುಗಳಂತೂ ಎಷ್ಟೇ ಗುರುತರವಾದ ಅಪರಾಧವೆಂದು ದಾಖಲಾದರೂ ಕೂಡಾ ಲಘುವಾಗಿಯೇ ತೇಲಿ ಹೋಗುವುದಿದೆ.

ಅಪರಾಧಿಗಳಿಗೆ ಶಿಕ್ಷೆ ತಪ್ಪಬಾರದು ನಿಜ. ಅಪರಾಧ ಸಾಬೀತಾಗಿ ಶಿಕ್ಷೆ ಯಾಗಲು ಈ ವೇಶ್ಯೆಯರ ಮೇಲೆ ಬೇರೆ ಸುಳ್ಳು ಕೇಸುಗಳನ್ನೂ ಸೇರಿಸಿ ಸೆರೆಮನೆಗೆ ತಳ್ಳಿದ ಪ್ರಕರಣಗಳೂ ಇವೆ. ಸೆರೆಮನೆಗಳನ್ನು ಕಾನೂನೆಂಬ ಈ ಕಲ್ಲು ಗಳಿಂದಲೇ ಕಟ್ಟಿರುತ್ತಾರಲ್ಲವೇ? ನ್ಯಾಯದ ತಕ್ಕಡಿ ಹಿಡಿದ ನ್ಯಾಯದೇವತೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡಿದ್ದಾಳಲ್ಲಾ. ದೇವತೆಯೇನೋ ಹೆಣ್ಣಾಗಿರಬಹುದು ಕಣ್ಣು ಮುಚ್ಚಿದ ಹೃದಯವಿಲ್ಲದ ದೇವತೆ ಈ ಹೆಣ್ಣುಗಳ ನೋವನ್ನು ಗ್ರಹಿಸುವುದಾದರೂ ಹೇಗೆ?

ಹಾಗಾದರೆ ಈ ಬವಣೆಗಳಿಗೆ ಪರಿಹಾರವೇ ಇಲ್ಲವೇ? ಈ ಸಮಸ್ಯೆಗಳಿಗೆ ಪರಿಹಾರ ವೇಶ್ಯೆಯರಿಗಿಂತಲೂ ಅವರನ್ನು ಸುತ್ತಿಕೊಂಡಿರುವ ಬೇರೆ ಮೂಲಗಳಿವೆ.

ಪ್ರಥಮವಾಗಿ ಬಾಲ್ಯದಿಂದಲೇ ಹೆಣ್ಣು ಮಗುವು ಪ್ರೀತಿಯ ಕೊರತೆಯಿಂದ ಸೊರಗಿರುತ್ತದೆ. ಕುಟುಂಬದಲ್ಲಿ ಈ ತಾರತಮ್ಯ ಆಹಾರದಿಂದ ಪ್ರಾರಂಭವಾಗಿ ಕೊಡುವ ಶಿಕ್ಷಣ, ಮತ್ತು ನೀಡುವ ಇತರ ಸೌಕಯ್ಯಗಳಲ್ಲೂ ಕಂಜೂಸಿತನ ತೋರಿಸುತ್ತದೆ. ಅವಳನ್ನು ಪರರ ಮನೆಯ ಸಿರಿದೇವಿ ಎಂದೇ ಭಾವಿಸಿ ಸಾಕುತ್ತಾರೆ. ಕುಲದೀಪಕನಾದ ಗಂಡು ಮಗುವಿಗೆ ಏನೆಲ್ಲಾ ಸೌಕಯ್ಯಗಳನ್ನು ಕೊಡಿಸಲು ಒದ್ದಾಡುವ ಹೆತ್ತವರು ಹೆಣ್ಣು ಮಗುವಿನಲ್ಲಿ ಒಂದಿಷ್ಟು ಪ್ರೀತಿಯಿಂದ ಮಾತಾಡುವ ವ್ಯವಧಾನವನ್ನು ಕಳಕೊಂಡಿರುತ್ತಾರೆ. ಇಂತಹ ಹೆಣ್ಣು ಮಕ್ಕಳು ಕುಟುಂಬದ ಹೊರಗೆ ಪ್ರೀತಿಯನ್ನು ಅರಸುತ್ತಾರೆ. ಹಾಗೆ ಹುಡುಕಿ ಮೋಸ ಹೋದವರಿಗೆ ಮತ್ತೆ ತವರು ಮನೆಯ ಬಾಗಿಲು ಮುಚ್ಚಿರುತ್ತದೆ. ಮುಂದೆ ಯಾವ್ಯಾವುದೋ ಬಾಗಿಲುಗಳನ್ನು ತಟ್ಟುವ ಪ್ರಕ್ರಿಯೆ ಅಲ್ಲಿಂದ ಪ್ರಾರಂಭವಾಗುತ್ತದೆ.

ಎರಡನೆಯದಾಗಿ ಹೆಣ್ಣಿಗೆ ಅವಳ ಬಗ್ಗೆಯೇ ಒಂದು ಗೌರವ ಭಾವ ಮೂಡಿಸಬೇಕಾಗುತ್ತದೆ. ಯಾವುದೋ ಜನ್ಮದ ಪಾಪದಿಂದ ಹೆಣ್ಣಾಗಿ ಹುಟ್ಟಿದೆವೆಂಬ ಕೀಳರಿಮೆಯಿಂದ ಬೆಳೆದವರಿಗೆ ತಮ್ಮ ದೇಹವೇ ಶಾಪವಾಗಿಯೂ, ವರವಾಗಿಯೂ ಕಾಣುತ್ತದೆ. ಗಂಡಿಗಿರುವ ಶಕ್ತಿ, ಸಾಮರ್ಥ್ಯ, ಪ್ರತಿಭೆಗಳು ತನ್ನಲ್ಲೂ ಇದೆ ಎಂಬ ಭಾವ ಬೆಳೆಯಲು ಆಸ್ಪದ ಕೊಟ್ಟರೆ ಈ ದೇಹದಾಚೆಯೂ ತಾನು ಸಾಧಿಸಬಲ್ಲ ಕೆಲಸಗಳಿವೆ ಎಂಬ ಅರಿವು ಮೂಡುತ್ತದೆ. ಸಹಜವಾಗಿ ಹೆಣ್ಣು ಮಗುವಿನಲ್ಲಿ ಈ ಗುಣಗಳಿದ್ದರೂ ಅದು ಬೆಳೆಯದಂತೆ ಚಿಗುರಿನಲ್ಲೇ ಚಿವುಟುವ ಕೆಲಸವನ್ನೇ ಹೆತ್ತವರು ಮಾಡುತ್ತಿರುವುದರಿಂದ ಆಕೆಗೆ ತಾನು ಎಲ್ಲದಕ್ಕೂ ನಾಲಾಯಕ್ಕು ಎಂಬ ಭಾವ ಬಲಗೊಳ್ಳುತ್ತದೆ. ಹೆಣ್ಣು ಜಗದ ಕಣ್ಣು ಎಂದು ಬಾಯಿ ಮಾತಿನಲ್ಲಿ ಹೇಳಿ ಅವಳನ್ನು ಹುಣ್ಣಿನಂತೆ ಕಾಣುವ ಮನೋವೃತ್ತಿ ಸಮಾಜದಲ್ಲಿ ಕಡಿಮೆಯಾಗಬೇಕು.

ಮೂರನೆಯದಾಗಿ ಅವಳು ಕಲಿಯಲು ಇಚ್ಛಿಸುವಷ್ಟು ವಿದ್ಯೆ ಕೊಡಿಸಬೇಕು. ಅವಳಿಗೆ ವಿದ್ಯೆಗೆ ಹಾಕುವ ದುಡ್ಡು ದಂಡ ಎಂಬ ಭಾವ ಹೆತ್ತವರಲ್ಲಿದೆ ಎಷ್ಟು ಕಲಿತರೂ ಮತ್ತೆ ಮಾಡುವುದು ಪರರ ಮನೆಯ ಒಲೆಯ ಬೂದಿ ಬಳಿಯುವ ಕೆಲಸವಲ್ಲವೇ ಎಂಬ ತಾತ್ಸಾರ ಸಲ್ಲದು. ಅಡುಗೆ ಮನೆಯ ಕೆಲಸ ಕೀಳು ಎಂದು ಶಾಸನ ಮಾಡಿದವರಾರು? ಯಾವ ಕೆಲಸವೂ ಇದು ಗಂಡು ಮಾಡುವಂತದ್ದು ಇದು ಹೆಣ್ಣು ಮಾಡುವಂತದ್ದು ಎಂದು ಇಲ್ಲ. ನಾವೇ ಈ ತಾರತಮ್ಯ ಮಾಡಿ ಕೆಲವು ಕೆಲಸಗಳನ್ನು ಕೀಳುಗೊಳಿಸಿದ್ದೇವೆ. ಕೀಳು ಕೆಲಸಗಳೆಲ್ಲಾ ಹೆಣ್ಣಿಗೆ, ಉತ್ತಮ ಕೆಲಸಗಳೆಲ್ಲಾ ಗಂಡಿಗೆ ಎಂದು ವಿಂಗಡನೆ ಮಾಡಿಟ್ಟಿದ್ದೇವೆ. ಕುಟುಂಬದ ಪ್ರತಿಯೊಂದು ಕಾರ್ಯಕಲಾಪಗಳಲ್ಲಿ ಆಗುಹೋಗುಗಳಲ್ಲಿ ಗಂಡಿನಷ್ಟೇ ಜವಾಬ್ದಾರಿಯನ್ನು ಹೆಣ್ಣುಮಗುವಿಗೂ ಕೊಟ್ಟರೆ ಅವಳು ಶಿಕ್ಷಣದಲ್ಲಿ ಮುನ್ನಡೆಯುತ್ತಾಳೆ. ತನ್ನ ಮನೆ, ತನ್ನ ಹೆತ್ತವರು ಎಂಬ ಮಮಕಾರ ಬೆಳೆಯುತ್ತದೆ. ಹೀಗೆ ಸದೃಢ ಚಿತ್ತವೃತ್ತಿಯುಳ್ಳ ಹೆಣ್ಣುಮಕ್ಕಳೇ ಮುಂದೆ ಶಿಕ್ಷಣದಲ್ಲೂ ಯಶಸ್ಸನ್ನು ಪಡೆಯುತ್ತಾರೆ. ಹದಿಹರೆಯಲ್ಲಿ ದೇಹದಲ್ಲಾಗುವ ಪರಿವರ್ತನೆಗಳ ಬಗ್ಗೆ ಹೆತ್ತವರು ಪ್ರೀತಿಯಿಂದ ಹೇಳಿಕೊಡಬೇಕಾಗುತ್ತದೆ. ಈ ಸಮಯದಲ್ಲೇ ಅವರ ಮನಸ್ಸು ಚಂಚಲವಾಗುವುದು ಹೆಚ್ಚು. ಆಗ ಸೂಕ್ತ ಮಾರ್ಗದರ್ಶನದಿಂದ ಸೃಷ್ಟಿಶೀಲ ಕ್ರಿಯೆಗಳಲ್ಲಿ ಅವರನ್ನು ತೊಡಗಿಸಿಕೊಳ್ಳಲು ಪ್ರೇರೇಪಿಸಿದರೆ ಅತ್ತಿತ್ತ ಹಾರಾಡುವ ಮನಸ್ಸು ಏಕಾಗ್ರತೆಯಿಂದ ಸಾಧನೆಯಲ್ಲಿ ತೊಡಗಬಹುದು.

ನಾಲ್ಕನೆಯದಾಗಿ ಹೆಣ್ಣು ಮಕ್ಕಳು ಆರ್ಥಿಕ ಸ್ವಾವಲಂಬನೆ ಗಳಿಸುವಂತೆ ಪ್ರೋತ್ಸಾಹಿಸಬೇಕಾಗಿದೆ. ಹಣ ಯಾವಾಗಲೂ ಅಲ್ಲಾವುದ್ದೀನನ ಮಾಯಾದೀಪದಂತೆ, ಮಿತವ್ಯಯ ಮಾಡಬಲ್ಲವರಿಗೆ ಮಾತ್ರ ಈ ಮಾಯಾದೀಪ ಒಲಿಯುತ್ತದೆ. ಆರ್ಥಿಕ ಸ್ವಾವಲಂಬಿಯಾದೊಡನೆ ಐಷಾರಾಮದ ಕನಸು ಕಾಣುವುದು, ಕೊಳ್ಳುಬಾಕ ಸಂಸ್ಕೃತಿಯ ದಾಸರಾಗುವುದು ಇತ್ತೀಚಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿದೆ. ಹಣದ ವ್ಯವಹಾರದಲ್ಲಿ ಮಿತವ್ಯಯದ ಆದರ್ಶವನ್ನು ಬಾಲ್ಯದಿಂದಲೇ ಕಂಡು ಬೆಳೆವ ಹೆಣ್ಣು ಮಗು ಸ್ವಾವಲಂಬನೆಯ ಮಹತ್ವವನ್ನು ಅರಿಯಬಲ್ಲದು. ಸಾಮಾನ್ಯವಾಗಿ ನಮ್ಮ ಕುಟುಂಬಗಳಲ್ಲಿ ಹಣದ ವ್ಯವಹಾರಗಳನ್ನು ನಡೆಸುವವರು ಗಂಡಸರು, ಹೆಂಗಸರೇ ತಮ್ಮ ದುಡಿಮೆಯ ಹಣವನ್ನು ಗಂಡಸರಿಗೊಪ್ಪಿಸಿ ತಮ್ಮ ಅಗತ್ಯಗಳಿಗಾಗಿ ಅವರಲ್ಲಿ ಕೈಯೊಡ್ಡುವ ಪರಿಪಾಠವಿದೆ. ಪ್ರಾಚೀನ ಕಾಲದಿಂದಲೂ ಹೆಣ್ಣುಮಕ್ಕಳ ಮೇಲೆ ಲಕ್ಷ್ಮಿ ಒಂದು ಕಡೆಗಣ್ಣ ನೋಟವನ್ನೂ ಹಾಯಿಸಿದ್ದಿಲ್ಲ. ಲಕ್ಷ್ಮೀ ಶ್ರಮದ ಸಹಚಾರಿಣಿ, ಬುದ್ಧಿಯ ಸೋದರಿ ಎಂಬುದನ್ನು ಕಲಿಸಿಕೊಡುವ ಪಾಠ ಕುಟುಂಬದಲ್ಲಿದ್ದರೆ ಪ್ರತೀ ಹೆಣ್ಣುಮಗುವೂ ಆರ್ಥಿಕ ಸ್ವಾವಲಂಬನೆಯಿಂದ ಸದೃಢರಾಗಬಹುದು.

ಐದನೆಯದಾಗಿ ಹೆಣ್ಣು ಮಕ್ಕಳನ್ನು ವಿವಾಹ ಮಾಡಿಕೊಡುವಾಗ ಅವಳ ಸಮ್ಮತಿಯನ್ನು ಪಡೆಯಲೇಬೇಕು. ಹೆತ್ತವರ ಬಲವಂತಕ್ಕೆ ಒಳಗಾಗಿ ಮದುವೆಯಾದ ಹೆಣ್ಣುಮಕ್ಕಳು ಈ ಬಂಧನದಿಂದ ಹೊರಬರಲು ತವಕಿಸುತ್ತಾರೆ. ಇವರ ಅಸಹಾಯಕತೆಯನ್ನು ದುರುಪಯೋಗ ಪಡಿಸಿಕೊಂಡು ಎಲ್ಲೆಲ್ಲೋ ಸುತ್ತಾಡಿ ಬಾಳು ಚಿಂದಿ ಚಿಂದಿ ಮಾಡಿಕೊಳ್ಳುವಂತಾಗುತ್ತದೆ. ಗಂಡು ಹೆಣ್ಣು ಪ್ರೀತಿಸಿ ಮದುವೆಯಾಗಲು ನಿರ್ಧರಿಸಿದಾಗ ಎಷ್ಟೋ ಹೆತ್ತವರು ಅವಳನ್ನೇ ಹಿಂಸಿಸಿ ಮನಪರಿವರ್ತನೆಗೆ ಪ್ರಯತ್ನಿಸುವುದಿದೆ. ಅದಮ್ಯವಾದ ಪ್ರೀತಿಯ ಸೆಳೆತ ಅವಳನ್ನು ಮನೆಬಿಟ್ಟು ಓಡಿ ಹೋಗುವಂತೆ ಮಾಡುವುದಿದೆ. ತಮ್ಮ ಅಂತಸ್ತು, ಮರ್ಯಾದೆಗಳನ್ನು ಬದಿಗಿಟ್ಟು ಹೆತ್ತವರು ಈ ಪ್ರೇಮಿಗಳೊಂದಿಗೆ ವರ್ತಿಸಿದರೆ ಮಗಳ ಸಂಸಾರ ಸುಖವಾಗಿರುತ್ತದೆ. ಹೀಗೆ ಹೋದ ಮಗಳು ಕೆಲವು ವರ್ಷದ ಬಳಿಕ ಭ್ರಮ ನಿರಸನ ಹೊಂದಿ ಪತಿಯಿಂದ ವಿಚ್ಛೇದಿತಳಾಗಿ ಬಂದಾಗ ತಂದೆತಾಯಿ ತೆರೆದ ಹೃದಯದ ಸ್ವಾಗತ ನೀಡುತ್ತಾರೆಯೇ? ತಪ್ಪನ್ನು ಮನ್ನಿಸಿ ಮೊದಲಿನ ಪ್ರೀತಿಯಿಂದಲೇ ಅಪ್ಪಿಕೊಂಡರೆ ಅವಳ ಬಾಳು ಹೋಳಾಗುವುದಿಲ್ಲ. ಎಲ್ಲಾ ಕಡೆಯಿಂದಲೂ ಪ್ರೀತಿ ವಂಚಿತರಾದ ಹೆಣ್ಣು ಮಕ್ಕಳೇ ಮುಂದೆ ನಿರ್ವಾಹವಿಲ್ಲದೆ ಲೈಂಗಿಕ ಕಾರಕರೆಯರಾಗಿ ಸೇರಿಸಲ್ಪಡುತ್ತಾರೆ. ಎಲ್ಲೂ ನೆಲೆ ನಿಲ್ಲಲು ಆಸ್ಪದ ಸಿಗದೇ ಹೋದಾಗ ಆಕೆಗೆ ಆತ್ಮಹತ್ಯೆಯೊಂದೇ ಉಳಿದಿರುವ ದಾರಿಯಾಗುತ್ತದೆ. ಅದಕ್ಕೂ ಮನಸ್ಸು ಗಟ್ಟಿ ಇರಬೇಕಲ್ಲಾ. ಕಟ್ಟಕಡೆಯ ಮಾರ್ಗ ಕಾಣುವುದು ಇದೊಂದೇ. ಈ ಕಾರ್ ನಿರ್ವಹಿಸುತ್ತಿರುವ ಅನೇಕ ಮಹಿಳೆಯರ ಕೌಟುಂಬಿಕ ಹಿನ್ನೆಲೆಯನ್ನು ಕೆದಕಿ ಕೇಳಿದಾಗ ಹೊರಬಂದ ಸತ್ಯಕತೆಯಿದು.

ಸಾಮಾನ್ಯವಾಗಿ ಈ ವೃತ್ತಿಗೆ ಬಂದವರಲ್ಲಿ ಹೆಚ್ಚಿನವರ ಪೂರ್ವ ಚರಿತ್ರೆಯಿಂದ ತಿಳಿದು ಬರುವ ವಿಷಯವೇನೆಂದರೆ ಇವರೆಲ್ಲಾ 'ಮೇಲ್ ಡೋಮಿನೇಟೆಡ್' ಸಂಸ್ಕೃತಿಯಲ್ಲಿ ಬೆಳೆದು ಬಂದವರು. ಅಕ್ಕನನ್ನು ಸಣ್ಣ ತಮ್ಮನೂ ನಿಯಂತ್ರಿಸುತ್ತಾನೆ. ತಾಯಿಯನ್ನು ಮಗನೂ ನಿಯಂತ್ರಿಸಬಲ್ಲ. ಮಗಳನ್ನು ತಂದೆ ನಿಯಂತ್ರಿಸುವುದು ಇದ್ದದ್ದೇ ಅಲ್ಲವೇ? ಇದರಿಂದ ಸಿಡಿದೆದ್ದು ಹೊರಬಂದವರು ಯಾವ್ಯಾವುದೋ ಅಗ್ನಿಕುಂಡಗಳನ್ನು ದಾಟಿ ತಾವು ಸುಟ್ಟು ಕೊಂಡು ಒಂದು ಹಿಡಿ ಬೂದಿಯಂತಾದರೂ ಮತ್ತೆ ಪುನಃ 'ಫಿನಿಕ್ಸ್ನಂತೆ ಜೀವ ತಳೆದು ಬಂದವರು. ಆದುದರಿಂದ ಇವರನ್ನು ತಿದ್ದುವ ಮೊದಲು ಅವರ ಕೌಟುಂಬಿಕ ವಲಯ, ಸಾಂಸ್ಕೃತಿಕ ವಲಯ ಮತ್ತು ಸಾಮಾಜಿಕ ವಲಯಗಳಲ್ಲಿ ಪರಿವರ್ತನೆಯಾಗಬೇಕಾಗಿದೆ.

ಇತ್ತೀಚೆಗೆ ಭಾರತೀಯ ಚಿತ್ರರಂಗದ ನಾಯಕ ನಟನೊಬ್ಬ ತಾರೆಯರೆಲ್ಲಾ ಸಿನಿಮಾದಲ್ಲಿ ಪಾತ್ರಗಿಟ್ಟಿಸಿಕೊಳ್ಳಲು ದೇಹವನ್ನೇ ನಿರ್ಮಾಪಕ, ನಿರ್ದೇಶಕನಿಗೆ ಅರ್ಪಿಸುತ್ತಾರೆ ಎಂಬ ಹೇಳಿಕೆ ಕೊಟ್ಟು ದೊಡ್ಡ ಸುದ್ದಿ ಮಾಡಿದ. ಹೀಗೆ ಸುದ್ದಿ ಮಾಡುವವರು ಪರಿಪೂರ್ಣರೆಂದೇನೂ ತಿಳಿಯಬೇಕಾಗಿಲ್ಲ. ಚಿತ್ರರಂಗವೆಂಬ ಮಹಾಸಾಗರದಲ್ಲಿ ದೊಡ್ಡ ದೊಡ್ಡ ತಿಮಿಂಗಿಲಗಳಿರುವಂತೆ ಸಣ್ಣ ಸಣ್ಣ ಮೀನುಗಳೂ ಇರುತ್ತವೆ. ಚಿತ್ರರಂಗದಲ್ಲಿ ಹೊರಾಂಗಣ ಚಿತ್ರೀಕರಣದ ಸಮಯದಲ್ಲಿ ನೂರಾರು ತಾಂತ್ರಿಕ ಸಿಬ್ಬಂದಿಗಳು ಭಾಗವಹಿಸುತ್ತಾರಷ್ಟೇ ಆಗ ಎಕ್ಸ್‌ಟ್ರಾ ನಟಿಯರಾಗಿ ಭಾಗವಹಿಸುವವರೂ ಕೂಡಾ ಈ ಗುಂಪಿನ ಜೊತೆಗೆ ಇರುತ್ತಾರೆ. ಅವರು ಈ ಚಿತ್ರತಂಡದ ಪುರುಷರ ಲೈಂಗಿಕ ದಾಹಕ್ಕೆ ಒದಗುತ್ತಾರೆ. ಬೇರೆ ಊರಿಗೆ ಈ ತಂಡ ಚಿತ್ರೀಕರಣಕ್ಕೆ ಹೋದಾಗ ಆ ಊರಿನ ಇಂತಹ ಮಹಿಳೆಯರನ್ನೇ ಬಳಸಿಕೊಳ್ಳುತ್ತಾರೆಂದು ದೂರದರ್ಶನ ಕಾರ್ಯಕ್ರಮವೊಂದರಲ್ಲಿ ವಿವರಿಸಲಾಗಿತ್ತು. ಪ್ರಾಚೀನ ಕಾಲದಲ್ಲಿ ರಾಜರು ಯುದ್ಧಕ್ಕೆ ದಿಗ್ವಿಜಯಕ್ಕೆ ರಾಜ್ಯದಿಂದ ರಾಜ್ಯಕ್ಕೆ ಹೋಗುವಾಗ ಜೊತೆಯಲ್ಲಿ ವೇಶ್ಯೆಯರನ್ನು ಒಯ್ಯುತ್ತಿದ್ದರೆಂದು ಚರಿತ್ರೆಯಿಂದ, ಕಾವ್ಯಗಳಿಂದ ತಿಳಿದು ಬರುತ್ತದೆ. ಇಂದೂ ಕೂಡಾ ಯುದ್ಧಗಳಾದಾಗ ವೈರಿ ದೇಶದ ನಾರಿಯರೆಲ್ಲಾ ಸೈನಿಕರಿಗೆ ವೇಶ್ಯೆಯರಾಗಿಯೇ ಕಾಣುವುದಿದೆ. ಹಾಗೆ ಕಂಡಾಗ ನಡೆದ ಅತ್ಯಾಚಾರದಿಂದ ಆ ಸ್ತ್ರೀಯರು ಜೀವನ ಪಠ್ಯಂತ ಬೀದಿ ವೇಶ್ಯಯರಾಗಿ ಬಾಳು ಸವೆಸಬೇಕಾದ ದುರಂತ ಸಂಭವಿಸುತ್ತದೆ. ಮಾನವ ಚಂದ್ರನನ್ನು ಮೆಟ್ಟಿ ಬಂದಿರಬಹುದು. ಮಂಗಳನನ್ನು ಮುಟ್ಟಿ ಬಂದಿರಬಹುದು. ತನ್ನ ಸಹ ಜೀವಿಯಾದ ಹೆಣ್ಣಿನ ನೋವುಗಳನ್ನು ಅರ್ಥಮಾಡಿಕೊಳ್ಳಲು ಶಕ್ತನಾಗಿಲ್ಲ. ದೇವಿ, ದೈವ ಎಂದು ಹೆಣ್ಣನ್ನು ಆರಾಧಿಸುತ್ತೇವೆ. ಆದರೆ ಆಕೆಯೂ ತನ್ನಂತೆ ಹೃದಯ, ಮನಸ್ಸುಗಳುಳ್ಳ ಓರ್ವ ಮಾನವಳೆಂದು ಮಾತ್ರ ತಿಳಿಯುತ್ತಿಲ್ಲ. ಇದನ್ನೇ ಭಾರತೀಯ ನಾರಿಯ ಹೆಗ್ಗಳಿಕೆ ಎಂದು ತಿಳಿಯಬೇಕೇ? ನಾರಿಯನ್ನು ಆರಾಧಿಸುವ ಮನಸ್ಸುಗಳೇ ಆವಳ ದೇಹವನ್ನು ಇರಿಯುವ ಕೆಲಸವನ್ನು ಮಾಡುತ್ತಿವೆ. ಅದಕ್ಕೆ ಹಣದ ಮುಲಾಮು ಹಚ್ಚಲಾಗುತ್ತದೆ. ಚೂರಿ ಚಿನ್ನದ್ದಾದರೇನು? ಕಬ್ಬಿಣದ್ದಾದರೇನು? ನೋವಿನಲ್ಲಿ ವ್ಯತ್ಯಾಸವಾಗುತ್ತದೆಯೇ?

ವಾದಗಳು

ಒಂದು ವಾದದ ಪ್ರಕಾರ ವೇಶ್ಯಾವೃತ್ತಿ ಕಾನೂನು ಸಮ್ಮತವಾಗಬೇಕು. ಈ ವೃತ್ತಿಯಲ್ಲಿರುವವರು ಕಾರ್ಮಿಕ, ಕ್ರಿಮಿನಲ್ ಹಾಗೂ ಸಿವಿಲ್ ಕಾಯಿದೆಯ ಮೂಲಕ ನ್ಯಾಯವನ್ನು ಪಡೆಯಬಹುದು. ಜಗತ್ತಿನಾದ್ಯಂತ ಪುರುಷರು ಹಾಗೂ ಸರಕಾರ ಈ ವೃತ್ತಿಯಿಂದ ಆದಾಯವನ್ನು ಪಡೆಯುತ್ತಿದೆ. ಅವರನ್ನು ಕಾರ್ಮಿಕ ರೆಂದು ಪರಿಗಣಿಸಿ ಅವರ ಮೇಲೆ ನಡೆಯುವ ದೌರ್ಜನ್ಯವನ್ನು ತಡೆಯಬಹುದು. ಇನ್ನೊಂದು ವಾದದಂತೆ ವೇಶ್ಯಾ ವೃತ್ತಿಯು ಸ್ತ್ರೀಯರ ಮೇಲೆ ನಡೆಯುವ ಘೋರ ಹಿಂಸೆ, ನೈತಿಕ ಚೌಕಟ್ಟಿನೊಳಗೆ ವಾದಿಸುವ ಇವರು ಈ ವೃತ್ತಿಯನ್ನು ಸಂಪೂರ್ಣ ನಾಶ ಮಾಡಬೇಕು. ಈ ವೃತ್ತಿಯಲ್ಲಿರುವ ಕ್ರೌರ್ಯವನ್ನು ಎಲ್ಲರೂ ಒಪ್ಪುತ್ತಾರೆ. ಆದರೆ ಸ್ವಲ್ಪ ವಿಶಾಲವಾಗಿ ಯೋಚಿಸುವವರು ಈ ವೃತ್ತಿಯಲ್ಲಿರುವ ಅಮಾನುಷ ಅಂಶಗಳನ್ನು ತೊಡೆದು ಹಾಕಿ ಅವರ ಸುಧಾರಣೆ ಮತ್ತು ಪುನರ್ವಸತಿಗೆ ಹೆಚ್ಚು ಗಮನ ಕೊಡಬೇಕು ಎಂದು ಹೇಳುತ್ತಾರೆ.

ಸ್ತ್ರೀಯರನ್ನು ಈ ವೃತ್ತಿಗೆ ಎಳೆಯುತ್ತಿರುವ ಶಕ್ತಿಗಳು ಪ್ರಬಲವಾಗಿವೆ ಕೈಗಾರೀಕರಣ, ಜಾಗತೀಕರಣ, ವ್ಯಾಪಾರೀಕರಣಗಳು ಪ್ರವಾಸೋದ್ಯಮಗಳು ಬೆಳೆಯುವುದಕ್ಕೆ ಈ ವೃತ್ತಿಯೂ ಪೋಷಣೆ ನೀಡುತ್ತದೆ. ಹೆಚ್ಚೇಕೆ ಜಾಗತಿಕ ಮಟ್ಟದ ಒಲಿಂಪಿಕ್ ಕ್ರೀಡೋತ್ಸವಗಳು, ವಿಶ್ವ ಕ್ರಿಕೆಟ್ ಪಂದ್ಯಾಟಗಳು ಮುಂತಾದ ಕ್ರೀಡಾಕೂಟಗಳೂ ಈ ವೃತ್ತಿಗೆ ಪೋಷಣೆ ನೀಡುತ್ತಿವೆ. ಇನ್ನು ಯುದ್ಧ ನಡೆದ ಸಂದರ್ಭಗಳಲ್ಲಿ ಈ ವೃತ್ತಿಯು ಸೈನಿಕರ ಹಕ್ಕು ಎಂಬಂತೆ ಸರಕಾರ ವ್ಯವಸ್ಥೆ ಮಾಡುತ್ತದೆ. ಮಿಲಿಟರಿ ವೇಶ್ಯಾ ವೃತ್ತಿಗೆ ಯುದ್ಧದಷ್ಟೇ ಇತಿಹಾಸವಿದೆ. ಹಾಗಿರುವಾಗ ಕಾನೂನು ಬದ್ಧಗೊಳಿಸುವ ಪ್ರಶ್ನೆಯೇ ಅಪ್ರಸ್ತುತವೆನಿಸುತ್ತದೆ.

ಆದುದರಿಂದ ವೇಶ್ಯಾವೃತ್ತಿಯಲ್ಲಿರುವ ಮಹಿಳೆಯರು ಧ್ವನಿ ಎತ್ತಬೇಕು. ಅಮಾನುಷವಾದ ಶೋಷಿತ ವ್ಯವಸ್ಥೆಯಲ್ಲಿ ಉಸಿರಾಡುವ ಈ ಹೆಣ್ಣು ಮಕ್ಕಳ ದೃಷ್ಟಿಕೋನವೇ ಮುಖ್ಯ. ಸಮಾಜದ ದ್ವಿಮುಖ ನೈತಿಕ ಮಾನದಂಡಗಳ ಬಗ್ಗೆ, ಅದರ ಮೇಲೆ ನಡೆಯುವ ಹಿಂಸೆಯ ಸ್ವರೂಪದ ಬಗ್ಗೆ, ವೇಶ್ಯಾವೃತ್ತಿಯ ಜಾಲದ ಸಂಕೀರ್ಣತೆಯ ಬಗ್ಗೆ, ನ್ಯಾಯಾಂಗ ವ್ಯವಸ್ಥೆಯ ಟೊಳ್ಳುತನದ ಬಗ್ಗೆ ಅವರು ದನಿಯೆತ್ತಿ ಮಾತನಾಡಬೇಕಾಗುತ್ತದೆ. ಅವರ ಒಳನೋಟಗಳೇ ಅವರ ಹಕ್ಕು ಬಾಧ್ಯತೆಯ ಸಮರ್ಥನೆಗೆ ಸರಿಯಾದ ಮಾರ್ಗಗಳು, (ಮಾನಸ 1999 ಮೇ)

ಬ್ರಿಟಿಷ್ ಭಾರತದಲ್ಲಿ ವೇಶ್ಯಾವಾಟಿಕೆ

ಬ್ರಿಟಿಷರು ಭಾರತಕ್ಕೆ ಬಂದ ಪ್ರಾರಂಭದಲ್ಲಿ ವೇಶ್ಯಾವೃತ್ತಿ ಅದರ ಗೌರವವನ್ನು ಕಳೆದುಕೊಂಡಿರಲಿಲ್ಲ. ಮೇಜರ್ ಸಿ.ಎ. ಮೆಕ್‌ ಮೋಹನ್, "ಭಾರತದಲ್ಲಿ ವೇಶ್ಯಾವೃತ್ತಿ ಚಮ್ಮರಿಕೆ, ಕಮ್ಮಾರಿಕೆಗಳಂತೆ ಒಂದು ವೃತ್ತಿಯಂತೆಯೇ ಇದೆ. ಇಲ್ಲಿನ ವೇಶ್ಯಯರಿಗೆ ಸಮಾಜದಲ್ಲಿ ಗೌರವವಿದೆ. ಬ್ರಿಟನ್ನಿನ ವೇಶ್ಯೆಯರಂತೆ ಇವರು ತಿರಸ್ಕೃತರಲ್ಲ" ಎಂದು ಬರೆದಿದ್ದಾನೆ. ಮುಂದೆ ಕೈಗಾರಿಕೀಕರಣವು ಹೆಚ್ಚಾದಂತೆಲ್ಲಾ ಈ ವೃತ್ತಿ ವ್ಯಾಪಾರವಾಯಿತು ಎಂದು ಸಮಾಜ ವಿಜ್ಞಾನಿಗಳು ಗುರುತಿಸುತ್ತಾರೆ. ಬ್ರಿಟಿಷರು ರಾಜ್ಯ ವಿಸ್ತರಣೆಗಾಗಿ ಸೇನೆಯನ್ನು ಪ್ರಮುಖ ನಗರಗಳಲ್ಲಿ ನೆಲೆಗೊಳಿಸಿದರು. ಈ ಪ್ರದೇಶವನ್ನು ಕಂಟೋನೆಂಟ್ (ದಂಡುಪ್ರದೇಶ) ಎಂದು ಕರೆದರು. ಈ ಸೈನಿಕರು ವಸಾಹತುಶಾಹಿ ರಾಷ್ಟ್ರಗಳಲ್ಲಿ ಸೇವೆ ಸಲ್ಲಿಸುವವ ರಾದುದರಿಂದ ಸಂಸಾರದಿಂದ ದೂರವೇ ಉಳಿದಿದ್ದರು. ಇವರಿಗೆ ವೇಶ್ಯೆಯರ ಅಗತ್ಯವನ್ನು ಮನಗಂಡು ಹಳ್ಳಿಗಳಿಂದ, ದೇವಾಲಯಗಳಿಂದ, ಉತ್ತಮ ರೀತಿಯ ಜೀವನ ನಡೆಸುತ್ತಿದ್ದ ಮನೆಗಳಿಂದ ಹೆಣ್ಣುಮಕ್ಕಳನ್ನು ಆಸೆ-ಆಮಿಶ ತೋರಿಸಿ, ವಂಚಿಸಿ ಕರೆತಂದು ದಂಡು ಪ್ರದೇಶದ ಸಮೀಪದ ಮನೆಗಳಲ್ಲಿ ಅವರನ್ನು ಇರಿಸುತ್ತಿದ್ದರು. ಹೊರಗಿನವರಿಗೆ ಈ ಹುಡುಗಿಯರು ಕಾಣದಂತೆ ಮನೆಗಳಿಗೆ ಕಬ್ಬಿಣದ ಬಾಗಿಲುಗಳನ್ನು ಮಾಡಿ ಯಾವಾಗಲೂ ಮುಚ್ಚಿಯೇ ಇರುವಂತೆ ನೋಡಿಕೊಳ್ಳಲು ಕಾವಲುಗಾರನನ್ನು ನೇಮಿಸಿದರು. ಸೈನಿಕರೊಡನೆ ಸೇರಲು ಬಯಸದ ಹೆಣ್ಣು ಮಕ್ಕಳನ್ನು ಉಪವಾಸ ಕೆಡವಿ, ಹೊಡೆದು ಬಡಿದು ಹಿಂಸಿಸಿದರು. ಕೊನೆಗೆ ನಿರ್ವಾಹವಿಲ್ಲದೆ ಹಲವರು ಸೈನಿಕರ ವೇಶ್ಯೆಯರಾದರು. ಈ ವೇಶ್ಯಯರು ಸ್ಥಳೀಯ ಪುರುಷರ ಸಂಬಂಧ ಬೆಳೆಸದಂತೆಯೂ ಎಚ್ಚರಿಕೆ ವಹಿಸಿದರು, ಹೀಗೆ ಇಲ್ಲಿಂದ ತಲೆ ಹಿಡುಕರನ್ನೊಳಗೊಂಡ ವೇಶ್ಯಾವಾಟಿಕೆ ಆರಂಭವಾಯಿತು. 1805ರಲ್ಲಿ ಲಾರ್ಡ್ ವಿಲಿಯಂ ಬೆಂಟಿಕ್‌ನು ಸೇನೆ ಇರುವಲ್ಲೆಲ್ಲಾ ಲಾಕ್ ಆಸ್ಪತ್ರೆಗಳಿರಬೇಕು, ಲೈಂಗಿಕ ರೋಗ ತಗಲಿದರೆ ಗುಣವಾಗುವವರೆಗೂ ವೇಶ್ಯಯರೂ ಆಸ್ಪತ್ರೆಯಲ್ಲೇ ಇರಬೇಕು ಎಂದು ಕಾನೂನು ಮಾಡಿದ. ಸೇನಾಧಿಕಾರಿ ಸೂಚಿಸಿದರೆ ಮ್ಯಾಜಿಸ್ಟ್ರೇಟರು ರೋಗ ತಗಲಿದ ವೇಶ್ಯೆಯರನ್ನು ಬಂಧಿಸಲು ಇಲ್ಲವೇ ಊರಿಗೆ ಕಳಿಸಲು ಆದೇಶಿಸುತ್ತಿದ್ದರು ಮತ್ತೆ ಅವರಿಗೆ ಅಲ್ಲಿಗೆ ಪ್ರವೇಶವಿರಲಿಲ್ಲ.

ಸಮಾಜ ವಿಜ್ಞಾನಿಗಳು ಹೇಳುವ ಪ್ರಕಾರ ಬೇರೆ ಬೇರೆ ದೇಶಗಳಿಂದ ಬಂದ ಈ ಸೈನಿಕರಿಗೆ ಭಾರತಕ್ಕೆ ಬರುವ ಮೊದಲೇ ಲೈಂಗಿಕ ರೋಗವಿತ್ತು. ಅವರಿಗೆ ವೈದ್ಯಕೀಯ ತಪಾಸಣೆ ಇರಲಿಲ್ಲ. ಈ ರೋಗಕ್ಕೆ 'ಪರಂಗಿ ರೋಗ'ವೆಂದು ಹೆಸರು ಬಂದದ್ದೇ ಈ ಸೈನಿಕರಿಂದ. ಅವರಿಂದಾಗಿ ಇಲ್ಲಿನ ಹುಡುಗಿಯರಿಗೆ ರೋಗ ತಗುಲಿತು. ರೋಗ ತಗುಲಿದ ವೇಶ್ಯೆಯರನ್ನು ಬ್ರಿಟಿಷ್ ಸರ್ಕಾರ ಬೀದಿಗೆ ತಳ್ಳುತ್ತಿತ್ತು. ಇದರಿಂದಾಗಿ ಸ್ಥಳೀಯ ಜನರು ವೇಶ್ಯಾವಾಟಿಕೆ ನಡೆಸುವುದಕ್ಕೆ ಮತ್ತು ಲಾಕ್ ಆಸ್ಪತ್ರೆ ಆರಂಭಿಸುವುದಕ್ಕೆ ವಿರೋಧ ವ್ಯಕ್ತ ಪಡಿಸುತ್ತಲೇ ಇದ್ದರು. 1830ರಲ್ಲಿ ಲಾಕ್ ಆಸ್ಪತ್ರೆಗಳನ್ನು ಸರ್ಕಾರ ಮುಚ್ಚಿತು. 1857ರ ಸಿಪಾಯಿ ದಂಗೆಯ ಬಳಿಕ ಬ್ರಿಟಿಷ್ ಸರಕಾರ ದಂಡು ಪ್ರದೇಶದಲ್ಲಿ ವೇಶ್ಯಾವೃತ್ತಿಯನ್ನು ಕಾನೂನು ಬದ್ಧಗೊಳಿಸಿತು. ಇದು "ಸಾಂಕ್ರಾಮಿಕ ಕಾನೂನು" ಎಂಬ ಹೆಸರಿನಲ್ಲಿ ಬ್ರಿಟಿಷ್ ಪಾರ್ಲಿಮೆಂಟಿನ ಒಪ್ಪಿಗೆ ಕೇಳದೆ ಇಲ್ಲಿನ ಅಧಿಕಾರಿಗಳು ಆದೇಶ ನೀಡಿದರು. ಸ್ಥಳೀಯರು ಈ ಕಾನೂನನ್ನು ಪ್ರತಿಭಟಿಸಿದರು. 1888ರಲ್ಲಿ ಈ ಕಾನೂನನ್ನು ಬ್ರಿಟಿಷ್ ಸರಕಾರ ರದ್ದುಗೊಳಿಸಿತು. ಭಾರತದ ವೇಶ್ಯೆಯರ ವಾಸ್ತವ ಸ್ಥಿತಿಯನ್ನು ಅಧ್ಯಯನ ಮಾಡಲು ಕ್ಯಾಥರೀನಾ ಬುಶೈಲ್ ಮತ್ತು ಎಲಿಜಬೆತ್ ಆಂಡ್ರ ಎಂಬ ಇಬ್ಬರು ಮಹಿಳೆಯರು ಭಾರತದ 10 ನಗರಗಳ ದಂಡು ಪ್ರದೇಶಗಳ ವೇಶ್ಯಾವಾಟಿಕೆಯನ್ನು ಅಧ್ಯಯನ ಮಾಡಿದರು. 1891ರಲ್ಲಿ 'ದಿ ಕ್ವಿನ್ಸ್ ಡಾಟರ್ ಇನ್ ಇಂಡಿಯಾ' ಎಂಬ ವರದಿಯನ್ನು ಸಿದ್ಧಗೊಳಿಸಿದರು. ಬ್ರಿಟಿಷ್ ಸೈನಿಕರಿಂದಲೇ ಭಾರತದ ಮಹಿಳೆಯರಿಗೆ ಲೈಂಗಿಕ ರೋಗ ಹರಡಿತೆಂದು ಅವರು ಬರೆದಿದ್ದಾರೆ. ಅವರು ನೀಡಿದ ಅಂಕಿ ಅಂಶಗಳ ಪ್ರಕಾರ ವರ್ಷಕ್ಕೆ 70 ಸಾವಿರ ಬ್ರಿಟಿಷ್ ಸೈನಿಕರಿಗೆ ಲೈಂಗಿಕ ರೋಗ ಹರಡುತ್ತಿದೆ ಎಂದು ತಿಳಿಸಿದರು. ಆದುದರಿಂದ ಕ್ರಿಶ್ಚಿಯನ್ನರಲ್ಲದ ವೇಶ್ಯೆಯರಿಗೆ ದಂಡು ಪ್ರದೇಶದಲ್ಲಿ ಸಾಂಕ್ರಾಮಿಕ ಕಾನೂನನ್ನು ಬ್ರಿಟಿಷ್ ಸರಕಾರ ಕಡ್ಡಾಯಗೊಳಿಸಿತು. ಭಾರತದಲ್ಲಿ ಸಾಂಕ್ರಾಮಿಕ ಕಾನೂನನ್ನು ಜಾರಿಗೊಳಿಸಿದ್ದಕ್ಕೆ ಇಂಗ್ಲೆಂಡಿನ ಪಾರ್ಲಿಮೆಂಟ್ ಆಕ್ಷೇಪವನ್ನು ವ್ಯಕ್ತ ಪಡಿಸಿತು. ಭಾರತದ ಬ್ರಿಟಿಷ್ ಸರಕಾರ ಅದು ತಾತ್ಕಾಲಿಕವಾಗಿ ಮಾತ್ರ ಜಾರಿಗೊಳಸಿದ್ದೆಂದು ಸಮರ್ಥಿಸಿಕೊಂಡಿತು.

ಈ ಸಮಯದಲ್ಲೇ ಸ್ಥಳೀಯರು ದಂಡು ಪ್ರದೇಶಕ್ಕೆ ಮಾತ್ರ ವೇಶ್ಯೆಯರ ಪೂರೈಕೆಯಾಗುತ್ತಿದ್ದುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಉಳಿದ ಕಡೆಗಳಲ್ಲೂ ದಂಡು ಪ್ರದೇಶದಂತೆ ವೇಶ್ಯಾವಾಟಿಕೆಯನ್ನು ಪ್ರಾರಂಭಿಸಿದರು. ದಂಡು ಪ್ರದೇಶಕ್ಕೆ ಭಾರತೀಯ ಹೆಣ್ಣು ಮಕ್ಕಳನ್ನು ಕಳಿಸಬಾರದು. ಅಲ್ಲಿನ ವೇಶ್ಯಾವಾಟಿಕೆಯನ್ನು ಮುಚ್ಚಬೇಕು ಎಂದು ಪ್ರತಿಭಟಿಸಿದರು. ಭಾರತದ ವೈದ್ಯರುಗಳೂ ಬ್ರಿಟಿಷ್ ಸರಕಾರದ ಮೇಲೆ ಒತ್ತಡ ಹೇರಿದರು. ಕೊನೆಗೂ ದಂಡು ಪ್ರದೇಶದ ವೇಶ್ಯಾವಾಟಿಕೆಯನ್ನು ಸರಕಾರ ನಿಲ್ಲಿಸಿತು. ಆ ನಂತರ ಸ್ಥಳೀಯರು ಪ್ರಾರಂಭಿಸಿದ ವೇಶ್ಯಾವಾಟಿಕೆಗಳಲ್ಲಿ ಹೆಣ್ಣು ಮಕ್ಕಳ ಶೋಷಣೆಯು ತೀವ್ರವಾಯಿತು. ವೇಶ್ಯಾವಾಟಿಕೆಯು ವ್ಯಾಪಾರೀಕರಣ ಮಾತ್ರವಲ್ಲ ಅಪರಾಧದ ಕೇಂದ್ರವಾಗಿಯೂ ಬದಲಾಯಿತು. ಮುಂದೆ ಇವುಗಳೇ ಕೆಲವು ಕೆಂಪು ದೀಪ ಪ್ರದೇಶಗಳಾಗಿ ಕುಪ್ರಸಿದ್ಧಗೊಂಡವು. ಭಾರತದಲ್ಲಿ ಈಗ 400ಕ್ಕೂ ಹೆಚ್ಚು ಕೆಂಪು ದೀಪ ಪ್ರದೇಶಗಳಿವೆ ಇಲ್ಲಿ ಶೇ. 80ರಷ್ಟು ಕೆಳಜಾತಿ, ದಲಿತ, ಗಿರಿಜನ ಮಹಿಳೆ ಮತ್ತು ಬಾಲಕಿಯರಿದ್ದಾರೆ ಎಂದು ಈಕ್ವಿಟಿ ಫೌಂಡೇಶನ್‌ನ ನಿರ್ದೇಶಕಿ ನೀನಾ ಶ್ರೀ ವಾಸ್ತವ ಹೇಳುತ್ತಾರೆ.

ಸ್ವಾತಂತ್ರ್ಯ ಚಳುವಳಿಯ ಕಾಲದಲ್ಲಿ ವೇಶ್ಯಾವೃತ್ತಿ ಅಕ್ಷಮ್ಯ ಅಪರಾಧವಾಯಿತು. ಆ ಕಾಲದ ಸಮಾಜ ಸುಧಾರಕರು ವೇಶ್ಯಾವೃತ್ತಿಯ ನಿರ್ಮೂಲನೆಗಾಗಿ ತುಂಬಾ ಪ್ರಯತ್ನಪಟ್ಟರು. ಬ್ರಹ್ಮ ಸಮಾಜ, ಕ್ರೈಸ್ತ ಧಾರ್ಮಿಕ ಸಂಸ್ಥೆಗಳು, ಇಂಡಿಯನ್ ವಿಜಿಲೆನ್ಸ್ ಆರ್ಗನೈಜೇಶನ್ ಮುಂತಾದ ಸಂಸ್ಥೆಗಳು ಈ ವೃತ್ತಿಯ ನಿರ್ಮೂಲನೆಗೆ ಕೆಲಸ ಮಾಡಿದುವು. ಮಹಾತ್ಮ ಗಾಂಧೀಜಿಯವರೂ ಕೂಡಾ ವೇಶ್ಯೆಯರಿಂದ ಸ್ವರಾಜ್ಯ ನಿಧಿಗೆ ಹಣ ಸ್ವೀಕರಿಸಲಿಲ್ಲ. ಅವರು ಕಾಂಗ್ರೆಸ್ ಸದಸ್ಯತ್ವವನ್ನು ಪಡೆಯುವುದಕ್ಕೂ ಆಸ್ಪದ ನೀಡಲಿಲ್ಲ. ಕನ್ನಡದ ಕಾದಂಬರಿಕಾರರಾದ ಡಾ. ಶಿವರಾಮ ಕಾರಂತರು ವೇಶ್ಯೆಯರ ಸಮಸ್ಯೆಯನ್ನು ಗಾಂಧೀಜಿಯವರ ಮುಂದೆ ಹೇಳಿದಾಗ ಅವರು "ಆ ಜೀವ ಪರ್ಯಂತ ಸನ್ಯಾಸಿನಿಯರಾಗಿ ಬದುಕಬೇಕೆಂದು ಹೇಳಿದರಂತೆ. ಇದು ಯಾವ ರೀತಿಯಲ್ಲೂ ಸಮಸ್ಯೆಗೆ ಪರಿಹಾರವಲ್ಲವೆಂದು ಕಾರಂತರಿಗೆ ಅರಿವಾಗಿ ಗಾಂಧೀಜಿಯ ಸಲಹೆಯನ್ನು ತಿರಸ್ಕರಿಸಿದರು. ಮುಂದೆ ಕೆಲವು ವರ್ಷಗಳ ಬಳಿಕ ಗಾಂಧೀಜಿಯವರು ವೇಶ್ಯೆಯರಿಗೆ ವಿವಾಹ ಮಾಡಿಸಿದರೆ ಈ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ಪರಿಹರಿಸಬಹುದು ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದರು (ಪುಟ 19. ಕಾಯದ ಕಾರ್ಪಣ್ಯ)

ದೇವದಾಸಿ ಮನೆತನದಲ್ಲಿ ಅರಳಿದ ಪ್ರತಿಭೆಗಳು

[ಸಂಪಾದಿಸಿ]
ದೇವದಾಸಿ ಮನೆತನದಲ್ಲಿ
ಅರಳಿದ ಪ್ರತಿಭೆಗಳು

ದೇವದಾಸಿ ಸಮುದಾಯದ ಹೆಣ್ಣುಮಗಳಾಗಿ ಹುಟ್ಟಿ ಅಪ್ರತಿಮ ಸಾಧನೆ ಮಾಡಿದ ಹಲವಾರು ಮಂದಿ ನೃತ್ಯ ಕಲಾವಿದೆಯರು, ಸಂಗೀತ ಕಲಾವಿದೆಯರು ಇದ್ದಾರೆ. ಅವರಲ್ಲಿ ಕರ್ನಾಟಕದ ಬೆಂಗಳೂರು ನಾಗರತ್ನಮ್ಮನ ಸಾಧನೆ ಸಿದ್ಧಿಗಳ ಬಗ್ಗೆ ಎರಡು ಮಾತು ಹೇಳುವುದು ಸೂಕ್ತವೆನಿಸುತ್ತದೆ. ಇವರ ತಾಯಿ ಪುಟ್ಟಲಕ್ಷ್ಮಮ್ಮ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ದೇವದಾಸಿಯಾಗಿದ್ದರು. 1878ರಲ್ಲಿ ಜನಿಸಿದ ನಾಗರತ್ನಮ್ಮ ಸಂಗೀತ ಮತ್ತು ನೃತ್ಯ ಎರಡರಲ್ಲೂ ಪ್ರವೀಣೆ ಯಾಗಿದ್ದರು. ಅಲ್ಲದೆ ಸಂಸ್ಕೃತ, ತೆಲುಗು ಸಾಹಿತ್ಯಗಳನ್ನು ಗಂಭೀರವಾಗಿ ಅಧ್ಯಯನ ಮಾಡಿದ್ದರು. ಇಂಗ್ಲೀಷ್ ಮತ್ತು ತಮಿಳು ಭಾಷೆಯನ್ನು ಬಲ್ಲವರಾಗಿದ್ದರು.

ಸೋದರಮಾವ ವೆಂಕಟ ಶಾಮಪ್ಪ, ಮುನಿಶಾಮಪ್ಪ, ಬಿಡಾರಂ ಕೃಷ್ಣಪ್ಪ ಮೊದಲಾದವರಿಂದ ಸಂಗೀತ ಶಿಕ್ಷಣವನ್ನು ಪಡೆದು ಪ್ರಸಿದ್ಧ ಸಂಗೀತ ಕಲಾವಿದೆಯಾಗಿ ಹಲವಾರು ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟರು. 1892ರಲ್ಲೇ ಹತ್ತನೆಯ ಚಾಮರಾಜ ಒಡೆಯರು ದೇವದಾಸಿ ಪದ್ಧತಿಗೆ ನಿಷೇಧ ಹೇರಿದ್ದರಿಂದ ನಾಗರತ್ನಮ್ಮ ದೇವದಾಸಿ ಎಂಬ ಪದ್ಧತಿಗೆ ಒಳಪಟ್ಟು ಯಾವುದೇ ದೇವಸ್ಥಾನದ ಆಶ್ರಯದಲ್ಲಿರಲಿಲ್ಲ. ದೇವದಾಸಿಯ ಮಗಳು ಎಂಬ ಕುಲನಾಮವೇ ಅವರನ್ನು ಮತ್ತು ಅವರ ಪ್ರತಿಭೆಯನ್ನು ಸಮಾಜ ಕಡೆಗಣಿಸಿದ ಘಟನೆ ಯೊಂದನ್ನು ಇಲ್ಲಿ ದಾಖಲಿಸಬೇಕೆಂದೆನಿಸುತ್ತದೆ. ನಾಗರತ್ನಮ್ಮ ತೆಲುಗು ಮತ್ತು ಕನ್ನಡ ಸಾಹಿತ್ಯಗಳನ್ನು ಆಳವಾಗಿ ಅಧ್ಯಯನ ಮಾಡಿದವರು. ಹಳೆಯ ತೆಲುಗು ಕಾವ್ಯಗಳನ್ನು ಪರಿಷ್ಕರಿಸಿ ಟಿಪ್ಪಣೆ ಮಾಡಿದ್ದಲ್ಲದೆ ತೆಲುಗಿನಲ್ಲಿ ಕಾವ್ಯ ರಚನೆ ಕೂಡಾ ಮಾಡಿದ್ದರು.

18ನೆಯ ಶತಮಾನದ ಪ್ರಸಿದ್ಧ ಶೃಂಗಾರ ಕಾವ್ಯವಾದ 'ರಾಧಿಕಾ ಸಾಂತ್ವನಮು' ಎಂಬ ಕಾವ್ಯವನ್ನು ವೆಂಕಟನರಸು ಎಂಬವರು 1907ರಲ್ಲಿ ಪ್ರಕಟಿಸಿದರು. ಆಗ ಸಮಾಜದ ಗಣ್ಯರಿಂದ ವಿರೋಧ ವ್ಯಕ್ತವಾಯಿತು. ನಾಗರತ್ನಮ್ಮ ಅವರು ಈ ತೆಲುಗು ಕಾವ್ಯವನ್ನು ಸಂಪಾದಿಸಿ ಪರಿಷ್ಕರಿಸಿ 1910ರ ಮಾರ್ಚ್ ತಿಂಗಳಲ್ಲಿ ವಾವಿಳ್ಳ ರಾಮಸ್ವಾಮಿ ಶಾಸ್ತ್ರಿ ಅಂಡ್ ಸನ್ಸ್ ಎಂಬ ಸಂಸ್ಥೆಯ ಮೂಲಕ ಪ್ರಕಟಿಸಿದರು. ಸಮಾಜ ಸುಧಾರಣಾ ಚಳುವಳಿಯಲ್ಲಿ ಪ್ರಸಿದ್ಧರಾಗಿದ್ದ ವೀರೇಶಲಿಂಗಂ ಪಂತುಲು ಅವರು ಈ ಕಾವ್ಯವನ್ನು ಟೀಕಿಸುತ್ತಾ ಓದುವುದು ಬಿಡಿ ಕಿವಿಯಿಂದ ಕೇಳಿಸಿ ಕೊಳ್ಳಲಾರದಷ್ಟು ಅಸಹ್ಯವಾಗಿದೆ ಎಂದರು. ಈ ಮಾತುಗಳಿಂದ ನಾಗರತ್ನಮ್ಮನ ಮನಸ್ಸು ನೊಂದಿತು. ರಾಧಿಕಾ ಸಾಂತ್ವನಮು ಎಂಬ ಕಾವ್ಯವನ್ನು ಬರೆದವಳು ಮುದ್ದು ಪಳನಿ. ಅವಳು ತಂಜಾವೂರಿನ ಮರಾಠ ರಾಜ ಪ್ರತಾಪಸಿಂಹನ ಆಸ್ಥಾನದಲ್ಲಿ ರಾಜದಾಸಿ ಮತ್ತು ನರ್ತಕಿಯಾಗಿದ್ದ ದೇವದಾಸಿಯೊಬ್ಬಳ ಪುತ್ರಿ ಯಾಗಿದ್ದಳು. ಶ್ರೀಕೃಷ್ಣನ ಕುರಿತು ರಾಧೆಗೆ ಇದ್ದ ಪ್ರೀತಿಯನ್ನು ಭಕ್ತಿ ಕಾವ್ಯಕ್ಕೆ ಪರ್ಯಾಯವಾಗಿ ಶೃಂಗಾರ ಕಾವ್ಯವಾಗಿ ರಚಿಸಿದ್ದಳು. ಈ ಕಾವ್ಯವನ್ನು ನಾಡಿನ ಶ್ರೇಷ್ಠ ಸಾಹಿತಿಗಳೆಂದು ಕೀರ್ತಿ ಗಳಿಸಿದವರೇ ನಿಂದಿಸಿ ಪತ್ರಿಕೆಗಳಲ್ಲಿ ಬರೆದುದನ್ನು ಕಂಡು ನಾಗರತ್ನಮ್ಮ ರಾಧಿಕಾ ಸಾಂತ್ವನಮು ಕೃತಿಯನ್ನು ಪರಿಷ್ಕರಿಸಿ ಕೃತಿಯ ಆರಂಭದಲ್ಲಿ ಪ್ರಸ್ತಾವನೆಯನ್ನು ಬರೆದರು. ಅದರಲ್ಲಿ ಪುರುಷರು ಬರೆದ ಶೃಂಗಾರ ವರ್ಣನೆಗಳು ಈ ಕೃತಿಗಿಂತ ಹೊಲಸಾಗಿದೆ ಎಂಬುದನ್ನು ಉದಾಹರಣೆ ಸಹಿತ ನೀಡಿದ್ದರು. ಸಂಗೀತ, ಸಾಹಿತ್ಯ, ನೃತ್ಯಕಲೆಗಳಲ್ಲಿ ಪ್ರವೀಣೆಯಾದ ಹೆಣ್ಣೂಬ್ಬಳು ಬರೆದಳೆಂಬ ಕಾರಣಕ್ಕಾಗಿ ಈ ಕೃತಿಯ ಬಗ್ಗೆ ಬಲ್ಲವರು ಕಟುಟೀಕೆಯನ್ನು ಮಾಡಿದ್ದನ್ನು ಕಂಡು ಪುರುಷ ಸಾಹಿತಿಗಳ ಸಾಹಿತ್ಯ ಸೇವೆಯ ಬಗ್ಗೆಯೇ ಮರುವಿಮರ್ಶೆ ಮಾಡಿಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದರು. ಇದು ಸನಾತನಿಗಳನ್ನು ಮತ್ತು ಸಾಹಿತಿಗಳನ್ನು ಕೆರಳಿಸಿತು. ಅವರ ಅಹಂಗೆ ಪೆಟ್ಟಾಯಿತು. ಅವರು ಆಗಿನ ಬ್ರಿಟಿಷ್ ಸರಕಾರಕ್ಕೆ ಈ ಕೃತಿಯ ಕೆಲವು ಭಾಗಗಳನ್ನು ಇಂಗ್ಲೀಷ್‌ಗೆ ಅನುವಾದ ಮಾಡಿ ಕಳಿಸಿದರು. ಬ್ರಿಟಿಷ್ ಸರಕಾರವು ಪ್ರಕಾಶಕರಿಂದ ಮತ್ತು ಅಂಗಡಿಗಳಿಂದ ಪುಸ್ತಕಗಳನ್ನು ಹುಡುಕಿ ಹುಡುಕಿ ನಾಶ ಮಾಡಿತು. ಅಶ್ಲೀಲ ಸಾಹಿತ್ಯವನ್ನು ಪ್ರಚಾರ ಮಾಡಿದ್ದಕ್ಕಾಗಿ ಭಾರತೀಯ ದಂಡ ಸಂಹಿತೆ 292ರ ಪ್ರಕಾರ ಕೃತಿಯ ಸಂಪಾದಕಿ ಮತ್ತು ಪ್ರಕಾಶಕರನ್ನು ದಂಡನೆಗೆ ಗುರಿಪಡಿಸಿತು. 37 ವರ್ಷಗಳ ಕಾಲ ನ್ಯಾಯಾಲಯದಲ್ಲಿ ಇದರ ಕೇಸು ವಿಚಾರಣೆ ನಡೆಯಿತು. ಕೊನೆಗೆ 1947ರಲ್ಲಿ ಭಾರತ ಸ್ವತಂತ್ರವಾಗಿ ಟಿ. ಪ್ರಕಾಶಂ ಅವರು ಮದ್ರಾಸ್ ಪ್ರೆಸಿಡೆನ್ಸಿಯ ಮುಖ್ಯಮಂತ್ರಿಯಾದಾಗ ನಾಗರತ್ನಮ್ಮನವರ ಕೃತಿಗೆ ಬಿಡುಗಡೆ ಲಭಿಸಿತು. "ತೆಲುಗು ಸಾಹಿತ್ಯ ದೇವಿಯ ಕಂಠಹಾರದಿಂದ ಕಿತ್ತು ಹಾಕಲಾಗಿದ್ದ ಅಮೂಲ್ಯ ರತ್ನಗಳನ್ನು ಮತ್ತೆ ಅಲ್ಲಿ ಸೇರುವಂತೆ ಮಾಡಲು ಯುದ್ಧವನ್ನೇ ಮಾಡಬೇಕಾಯಿತು" ಎಂದು ಟಿ. ಪ್ರಕಾಶಂ ಅವರು ಪ್ರತಿಕ್ರಿಯೆ ನೀಡಿದ್ದರಂತೆ (ಬೆಂಗಳೂರು ನಾಗರತ್ನಮ್ಮ, ಡಾ. ಎನ್. ಜಗದೀಶ ಕೊಪ್ಪ), ಬೆಂಗಳೂರು ನಾಗರತ್ನಮ್ಮನವರು ತನ್ನ ಸರ್ವ ಸಂಪತ್ತನ್ನು ತಿರುವೈಯ್ಯಾರಿನಲ್ಲಿ ತ್ಯಾಗರಾಜರ ಸಮಾಧಿಯ ನವೀಕರಣಕ್ಕಾಗಿ ಮತ್ತು ಅಲ್ಲಿ ದೇವಸ್ಥಾನ ನಿರ್ಮಾಣಕ್ಕಾಗಿ ವಿನಿಯೋಗಿಸಿದರು. ಅಲ್ಲಿ ನಡೆಯುವ ಸಂಗೀತ ಆರಾಧನೆಯ ಸಂದರ್ಭದಲ್ಲೂ ಪ್ರಾರಂಭದಲ್ಲಿ ಇವರನ್ನು ಅಲ್ಲಿನ ಸಂಗೀತ ವಿದ್ವಾಂಸರು ಕಡೆಗಣಿಸಿದರು. ಸಂಗೀತ ಕ್ಷೇತ್ರದಲ್ಲೂ ದೇವದಾಸಿ ಮನೆತನದ ಕಲಾವಿದೆಯರು ಪ್ರಸಿದ್ಧಿ ಪಡೆಯುವುದು ಕಳೆದ ಶತಮಾನದಲ್ಲಿ ಅಷ್ಟು ಸುಲಭವಿರಲಿಲ್ಲ. ಗಾನ ತಟ್ಟೆಗಳನ್ನು ಮುದ್ರಿಸುವ ಕಂಪೆನಿಗಳು, ನಾಟಕ ಕಂಪೆನಿಗಳು ಮತ್ತು ಸಿನಿಮಾ ತಯಾರಿಕಾ ಸಂಸ್ಥೆಗಳು ಈ ಮಹಿಳೆಯರ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿದ್ದರಿಂದ ಆರ್ಥಿಕವಾಗಿ ಅವರು ಉತ್ತಮ ಸ್ಥಿತಿಯನ್ನು ತಲುಪಿದರು. ಅವರಿಗೆ ಆಶ್ರಯ ನೀಡುವವರು ಗೌರವಾನ್ವಿತರಾದರೆ ಕೀರ್ತಿ ಶಿಖರವನ್ನೇರುವುದು ಕಷ್ಟವಾಗುವುದಿಲ್ಲ.

ಅದಕ್ಕೆ ಉದಾಹರಣೆಯಾಗಿ ಜಗತ್ತಿನಲ್ಲೆ ಸಂಗೀತದ ಸವಿಯನ್ನು ಪಸರಿಸಿದ ಎಂ.ಎಸ್. ಸುಬ್ಬಲಕ್ಷ್ಮಿಯವರು ಸಾಕ್ಷಿಯಾಗಿದ್ದಾರೆ. ಮಧುರೆಯ ಷಣ್ಮುಗವಡಿವು ಎಂಬ ದೇವದಾಸಿಯ ಮಗಳಾಗಿ 1916ರಲ್ಲಿ ಸಪ್ಟೆಂಬರ್ 16ರಂದು ಜನಿಸಿದರು. ತಾಯಿಯೇ ಮೊದಲ ಗುರು. ಬಾಲ್ಯದ ಹೆಸರು ಕುಂಜಮ್ಮ, ಸ್ವಾತಂತ್ರ್ಯ ಹೋರಾಟಗಾರ ಚಕ್ರವರ್ತಿ ರಾಜಗೋಪಾಲಾಚಾರಿಯವರ ಆಪ್ತಮಿತ್ರರಾದ ಟಿ. ಸದಾಶಿವಂ ಅವರ ಪತ್ನಿಯಾದ ಘಟನೆಯೂ ಸ್ವಾರಸ್ಯವಾಗಿದೆ. ಎಂ.ಎಸ್. ಅವರನ್ನು ಯಾವುದೋ ರಾಜ ಮನೆತನದ ಪುರುಷನನ್ನು ಆಶ್ರಯದಾತನನ್ನಾಗಿ ಮಾಡಲು ತಾಯಿ ಬಯಸಿದ್ದರು. ಸುಬ್ಬಲಕ್ಷ್ಮಿಯವರು ಮನೆಯಿಂದ ತಪ್ಪಿಸಿಕೊಂಡು ಹೋಗಿ ಟಿ. ಸದಾಶಿವಂ ಅವರ ಆಶ್ರಯ ಬಯಸಿದರು. ಮೊದಲೇ ಸದಾಶಿವಂ ಅವರೊಂದಿಗೆ ಸಂಗೀತ ಕಾರ್ಯಕ್ರಮಗಳಲ್ಲಿ ಪರಿಚಯವಾಗಿತ್ತು. ಸದಾಶಿವಂ ಅವರಿಗೆ ಮದುವೆಯಾಗಿ ಮಕ್ಕಳೂ ಇದ್ದರು. ಆದರೂ ಸುಬ್ಬಲಕ್ಷ್ಮಿಯವರು ಸದಾಶಿವಂ ಅವರನ್ನೇ ತನ್ನ ಪತಿ ಎಂದು ಸ್ವೀಕರಿಸಿದರು. ಮುಂದೆ ಅವರು ಪತಿಯ ಆದೇಶದಂತೆ ಸಂಗೀತ ಕ್ಷೇತ್ರ, ಸಿನಿಮಾ ಕ್ಷೇತ್ರಗಳಲ್ಲಿ ಮಿಂಚಿದರು. ಸುಬ್ಬಲಕ್ಷ್ಮಿಯವರ ಪ್ರಸಿದ್ಧಿಗೆ ಮೂಲಕಾರಣರು, ಪ್ರೇರೇಪಕರು, ಪ್ರೋತ್ಸಾಹಕರು ಪತಿ ಸದಾಶಿವಂ, ಆಜ್ಞಾಧಾರಕ ಸೇವಕಿಯಂತೆ ಪತಿಯನ್ನು ಅನುಸರಿಸಿದರು. ಸದಾಶಿವಂ ಅವರಿಗೆ ಆ ಕಾಲದ ಎಲ್ಲಾ ಮಹಾಪುರುಷರೊಂದಿಗೆ ನಿಕಟ ಸಂಪರ್ಕವಿದ್ದುದ್ದರಿಂದ ಸುಬ್ಬಲಕ್ಷ್ಮಿಯವರ ಸಂಗೀತ ಕಲೆಯು ದೇಶ ವಿದೇಶ ಗಳಲ್ಲೂ ಪಸರಿಸಿ ಖ್ಯಾತಿ ಗಳಿಸುವಂತಾಯಿತು. 1997ರಲ್ಲಿ ಸದಾಶಿವಂ ಅವರು ತೀರಿಕೊಂಡ ಮೇಲೆ ಎಂ.ಎಸ್. ಅವರು ಸಂಗೀತ ಕಚೇರಿ ನೀಡುವುದನ್ನೇ ನಿಲ್ಲಿಸಿಬಿಟ್ಟರು. ದೇವದಾಸಿ ಮನೆತನದ ಮಹಿಳೆಯರ ಪ್ರತಿಭೆಗಳನ್ನು ಗೌರವಿಸುವ ಆಶ್ರಯದಾತರಿದ್ದಾಗ ಸುಬ್ಬಲಕ್ಷ್ಮಿಯವರಂತಹ ಕಲಾವಿದೆಯರು ಸೃಷ್ಟಿಯಾಗುತ್ತಾರೆ. ಸ್ವಸಾಮರ್ಥ್ಯವಿದ್ದರೂ ಸಮಾಜದ ಅವಹೇಳನೆಗಳಿಗೆ ಸಡ್ಡು ಹೊಡೆದು ಮಿಂಚಿದ ಪ್ರತಿಭೆಗಳು ಇಲ್ಲವೆಂದಲ್ಲ. ಆದರೆ ವಿರಳ ಎಂದಷ್ಟೇ ಹೇಳಬಹುದು.

ಧಾರವಾಡದ ಗಂಗೂಬಾಯಿ ಹಾನಗಲ್ ದೇವದಾಸಿ ಮನೆತನದ ಪ್ರತಿಭೆ. ತಾಯಿ ಅಂಬವ್ವ ಕರ್ನಾಟಕ ಸಂಗೀತದಲ್ಲಿ ಪ್ರವೀಣೆಯಾಗಿದ್ದರು. ಆದರೆ ಮಗಳಿಗೆ ಹಿಂದುಸ್ಥಾನಿ ಸಂಗೀತದಲ್ಲಿ ಶಿಕ್ಷಣ ಕೊಡಿಸಿದರು. ದತ್ತೋಪಂತರು, ಹುಲಗೂರು ಕೃಷ್ಣಾಚಾರ್ಯರು, ಸವಾಯಿ ಗಂಧರ್ವರು ಇವರಿಗೆ ಸಂಗೀತ ಶಿಕ್ಷಣ ನೀಡಿದ ಗುರುಗಳು. ಆ ಕಾಲದಲ್ಲಿ ಗಾನತಟ್ಟೆಗಳ ಮೂಲಕ ಸಂಗೀತ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ಲಭಿಸುತ್ತಿತ್ತು. ಹಾಗೆಯೇ ಆಕಾಶವಾಣಿಯಲ್ಲೂ ಹಾಡುವ ಮೂಲಕ ಗಂಗೂಬಾಯಿಯ ಸಂಗೀತ ಜನಜನಿತವಾಯಿತು. ಸವಾಯಿ ಗಂಧರ್ವರ ಶಿಷ್ಯರಾಗಿ ಭೀಮಸೇನ ಜೋಶಿಯವರೂ ಗಂಗೂಬಾಯಿಯವರ ಜೊತೆಯಲ್ಲಿ ಒಂದೇ ಗರಡಿಯಲ್ಲಿ ಪಳಗಿದರು. ಅವರಿಗೆ ಮೂವರು ಮಕ್ಕಳು. ಚಿಕ್ಕವರಿರುವಾಗ ಅವರನ್ನು ಎತ್ತಿಕೊಂಡೇ ಸಂಗೀತ ಕಛೇರಿಗಳಿಗೆ ಹೋಗುತ್ತಿದ್ದುದನ್ನು ಗಂಗೂಬಾಯಿ ತಮ್ಮ ಆತ್ಮಕತೆಯಲ್ಲಿ ಸ್ಮರಿಸಿಕೊಂಡಿದ್ದಾರೆ.

ಟಾನ್ಸಿಲ್ಸ್ ಆಗಿ ಗಂಟಲಿನ ಶಸ್ತ್ರಚಿಕಿತ್ಸೆಗೊಳಗಾದ ಮೇಲೆ ಅವರ ಶಾರೀರ (ಧ್ವನಿ) ಸ್ವಲ್ಪ ಬದಲಾಯಿತು. ಆದರೆ ಸಂಗೀತ ಕಾರ್ಯಕ್ರಮ ನೀಡುವುದಕ್ಕೇನೂ ತೊಂದರೆಯಾಗಲಿಲ್ಲ. ಸ್ವಲ್ಪ ಮಟ್ಟಿನ ಗಂಡು ಧ್ವನಿಯಂತೆ ಕೇಳುವ ಅವರ ಶಾರೀರವು ಒಂದು ವಿಶಿಷ್ಟ ಮಾಧುರವನ್ನು ಹೊಂದಿತ್ತು. ಕಿರಾನಾ ಘರಾನದ ಮೇರು ಪ್ರತಿಭೆ ಗಂಗೂಬಾಯಿ, ಭಾರತದ ಪ್ರಮುಖ ನಗರಗಳಲ್ಲಿ ಅವರ ಸಂಗೀತ ಕಛೇರಿಗಳು ಸಂಪನ್ನಗೊಂಡಿವೆ. ಅದಲ್ಲದೆ ಜಗತ್ತಿನಾದ್ಯಂತ ಅವರ ಅಭಿಮಾನಿ ಗಳಿದ್ದಾರೆ. ಅಮೇರಿಕಾದ ಡೆಟ್ರಾಯ್ಡ್, ನ್ಯೂಯಾರ್ಕ್, ನ್ಯೂಜೆರ್ಸಿ ಮುಂತಾದ ಹತ್ತಿಪ್ಪತ್ತು ಪ್ರಮುಖ ನಗರಗಳಲ್ಲಿರುವ ಸಂಗೀತ ಪ್ರೇಮಿಗಳು ಇವರನ್ನು ಅಲ್ಲಿಗೆ ಕರೆಸಿಕೊಂಡು ಸಂಭ್ರಮಿಸಿದ್ದಾರೆ. ಅವರಿಗೆ ಭಾರತದ ಸರ್ವೋನ್ನತ ಪ್ರಶಸ್ತಿಗಳು ಲಭಿಸಿವೆ. ಸಂಗೀತ ಕ್ಷೇತ್ರದ ಅತ್ಯುನ್ನತ ಬಿರುದುಗಳು ಲಭಿಸಿವೆ. ಅದಲ್ಲದೆ ಅವರ ಸಂಗೀತ ಸೇವೆಗಾಗಿ ಅನೇಕ ವಿಶ್ವವಿದ್ಯಾಲಯಗಳು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.

ಕಲಾವಂತರ ಕುಟುಂಬದಲ್ಲಿ ಹುಟ್ಟಿದ ಅಮೀರ್‌ಬಾಯಿ ಕರ್ನಾಟಕಿಯವರೂ ಕಳೆದ ಶತಮಾನದ ಪ್ರಸಿದ್ಧ ಸಂಗೀತ ಕಲಾವಿದೆ. ಚಲನಚಿತ್ರ ನಟಿಯಾಗಿ, ಸಂಗೀತಗಾರ್ತಿಯಾಗಿ ಕನ್ನಡ, ಹಿಂದಿ ಎರಡೂ ಭಾಷೆಗಳಲ್ಲಿ ಪ್ರತಿಭೆ, ವಿದ್ವತ್ತು ಮತ್ತು ಪರಿಣತಿಯನ್ನು ಪಡೆದಿದ್ದರು. ಇವರ ತಂಗಿ ಗೋಹರ್‌ಬಾಯಿಯೂ ಸಂಗೀತ ಕಲಾವಿದೆ. ದೇವದಾಸಿ ಸಮುದಾಯವು ದೇವರ ಸೇವೆಗೆ ನಿಯಮಿಸಲ್ಪಟ್ಟವರಾದರೆ, ಕಲಾವಂತರು ತಮ್ಮ ಕಲೆ ಅದು ಸಂಗೀತ ಮತ್ತು ನೃತ್ಯಗಳಿಂದ ಸಮಾಜದ ರಸಿಕರನ್ನು ರಂಜಿಸುವ ಕಾಯಕವನ್ನು ಮಾಡುತ್ತಿದ್ದರು. ಕಲಾವಂತರೆಂದು ಕರೆಸಿಕೊಳ್ಳುವ ಈ ಸಮುದಾಯವು ಕಲೆಗಾಗಿಯೇ ತಮ್ಮ ಬದುಕನ್ನು ಸಂಪೂರ್ಣವಾಗಿ ಅರ್ಪಿಸಿಕೊಳ್ಳುತ್ತಿದ್ದರು. ಈ ಕಲಾವಂತ ಕುಟುಂಬ ದವರಾದ ಕೇಸರ ಬಾಯಿ ಕೇಲ್ಕರ್ ಕೂಡಾ ಹಿಂದೂಸ್ಥಾನಿ ಸಂಗೀತದ ಮೇರು ಕಲಾವಿದೆ. ಇವರು ಸಾರ್ವಜನಿಕ ವೇದಿಕೆಯಲ್ಲಿ ಕಚೇರಿ ನೀಡುವುದನ್ನು ಮೆಚ್ಚುತ್ತಿರಲಿಲ್ಲ. ಸಂಗೀತದ ಅಭಿರುಚಿ ಮತ್ತು ಜ್ಞಾನ ಇರುವ ಶೋತೃಗಳ ಮುಂದೆ ಮಾತ್ರ ಹಾಡುತ್ತಿದ್ದರು. ಇಂತಹ ಹಲವಾರು ಮಂದಿ ಕಲಾವಿದೆಯರಿಂದಲೇ ಇಂದಿಗೂ ಸಂಗೀತ ಮತ್ತು ನೃತ್ಯಕಲೆಗಳು ಉಳಿದಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೇಶ್ಯಾವಾಟಿಕೆ

[ಸಂಪಾದಿಸಿ]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವೇಶ್ಯಾವಾಟಿಕೆ

ಹೊಯ್ಸಳ, ವಿಜಯನಗರ ಮತ್ತು ಕೆಳದಿ ಅರಸರ ಕಾಲದಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವದಾಸಿ ಪದ್ಧತಿ ಬಳಕೆಯಲ್ಲಿದ್ದಿತ್ತು. ದೇವದಾಸಿಯರು ದೇವರ ಸೇವೆಗೆ ನಿಯಮಿಸಲ್ಪಟ್ಟಿದ್ದು ತನ್ನ ಕಲೆ ನೃತ್ಯಗಾರಿಕೆಯ ಮೂಲಕ ಸೇವೆ ಸಲ್ಲಿಸುತ್ತಿದ್ದರು. ಸಮಾಜದಲ್ಲಿ ಮಹತ್ವದ ಗೌರವ ಸಂಪಾದಿಸಿಕೊಂಡಿದ್ದ ದೇವದಾಸಿಯರು ಧಾರ್ಮಿಕ ಕಾರ್ಯಕಲಾಪಗಳಿಗೆ ದಾನ ದತ್ತಿ ಕೊಡುತ್ತಿದ್ದರು. ಶಾಸನ ಗಳಲ್ಲಿ ತಿಳಿಯುವಂತೆ ಪುಟ್ಟ ತಾಯಿ, ಜಮಖಂಡಿ ಚೆನ್ನಿ ಎಂಬವರು ಮಠವನ್ನು ನಿರ್ಮಿಸಿಕೊಂಡಿದ್ದರು. ಕಳದಿ ಎಂಬ ವೇಶ್ಯ ನಾಯಕ ತೋಡಿಸಿದ ಕೆರೆಗೆ ನೀರು ಬಾರದಿದ್ದ ಕಾರಣ ವಿಪ್ರನೊಬ್ಬ ಅವಳ ಕನಸಿನಲ್ಲಿ ಕಾಣಿಸಿಕೊಂಡು ನರಬಲಿಯಾದರೆ ನೀರು ಬರುವುದಾಗಿ ಸೂಚಿಸಿದಂತಾಯಿತು. ಅದರಂತೆ ಅವಳು ಲೋಕಹಿತಕ್ಕಾಗಿ ಸ್ವಇಚ್ಛೆಯಿಂದ ತನ್ನನ್ನು ಅರ್ಪಿಸಿಕೊಂಡಿದ್ದಳೆಂದೂ ಆದ್ದರಿಂದ ಕೆಳದಿಕೆರೆ ಎಂಬ ಹೆಸರು ಬಂದಿದೆ (ಪುಟ 244 ದಕ್ಷಿಣ ಕನ್ನಡ ಜಿಲ್ಲೆಯ ಮಹಿಳೆಯರ ಕೊಡುಗೆ-ಡಾ ಮಾಲತಿ ಮೂರ್ತಿ ಉಡುಪಿ. ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ ಎಂಬ ಸಂಪುಟದಲ್ಲಿ ಲೇಖಕಿಯವರು ದಾಖಲಿಸಿದ್ದಾರೆ. ಕೆಳದಿ ಎಂಬ ಕೆರೆ ಎಲ್ಲಿದೆ ಎಂದು ಸ್ಪಷ್ಟವಾಗಿಲ್ಲ. ದಾವಣಗೆರೆಯಲ್ಲಿ ವೇಶ್ಯಯೊಬ್ಬರು ಕಟ್ಟಿಸಿದ ಕೆರೆಗೆ ಸೂಳೆಕೆರೆ ಎಂದೆ ಹೆಸರಿದೆ. ದೊಡ್ಡ ಸರೋವರವಾಗಿದ್ದು ಇಡೀ ದಾವಣಗೆರೆಗೆ ಅದೇ ಕೆರೆಯ ನೀರು ಹಿಂದೆ ಸರಬರಾಜಗುತ್ತಿತ್ತು. ಈಗ ಅದಕ್ಕೆ ಶಾಂತಿ ಸಾಗರ ಎಂದು ಹೊಸ ನಾಮಕರಣ ಮಾಡಿದ್ದಾರಂತೆ. ಹಾಗೆಯೇ ವೇಶ್ಯಯೊಬ್ಬಳು ಬಲಿ ಅರ್ಪಿಸಿದ ಕೆರೆಯೆಂಬ ಕಾರಣಕ್ಕಾಗಿ ಕೆಳದಿ ಕೆರೆಯ ಹೆಸರು ಬದಲಾಗಿರುವ ಸಾಧ್ಯತೆಯೂ ಇದೆ.

ದೇವಸ್ಥಾನಗಳಲ್ಲಿ ಚಾಕರಿ ಮಾಡುವವರೆಂಬ ಕಾರಣಕ್ಕೆ ಸಮಾಜದಲ್ಲಿ ನಿಂದೆ, ಅವಮಾನಗಳಿಗೊಳಗಾದ ಒಂದು ಸಮುದಾಯವಿದೆ. ಇವರು ದೇವದಾಸಿಯರ ಸಮುದಾಯದವರಲ್ಲ. ಆದರೂ ಅಂತಹ ಒಂದು ವರ್ಗವಿತ್ತು ಎಂದು ಬುಕನನ್ ಎಂಬ ಅಧಿಕಾರಿಯ ದಾಖಲೆಗಳಿಂದ ವ್ಯಕ್ತವಾಗುತ್ತದೆ. ಕ್ರಿಶ. 18ನೆಯ ಶತಮಾನದ ಕೊನೆಯ ಹೊತ್ತಿಗೆ ಬ್ರಿಟಿಷ್ ಆಳ್ವಿಕೆಗೆ ಬಂದ ಎಲ್ಲಾ ಪ್ರದೇಶಗಳನ್ನು ಇವನು ಸರ್ವೇಕ್ಷಣೆ ಮಾಡಲು ಬಂದಿದ್ದನು. ವೈಸರಾಯ್ ವೆಲ್ಲೆಸ್ಲಿಯ ಬಳಿ ಡಾಕ್ಟರಾಗಿದ್ದ ಡಾ. ಫ್ರಾನ್ಸಿಸ್ ಬುಕನನ್ ತನ್ನ ಕೃತಿಯಲ್ಲಿ ದಾಖಲಿಸಿದ್ದಾನೆ. ಮೊಗೇರರು, ಬಿಲ್ಲವರು, ಕೊರವರು, ಬಚ್ಚದವರು, ಬಾಟದವರು, ಮಲೆಕುಡಿಯರು ಮೊದಲಾದ ಸಮುದಾಯಗಳಿದ್ದ ಹಾಗೆ ಮೊಯ್ದರು ಎಂಬ ಒಂದು ಸಮುದಾಯವಿದೆಯೆಂದು ತಿಳಿಸುತ್ತಾನೆ. "ತುಳುನಾಡಿನ ದೇವಾಲಯಗಳಲ್ಲಿ ಮಾತ್ರವೇ ಇರುವ ಒಂದು ವಿಶೇಷ ಪದ್ಧತಿಯಿಂದ ಸೃಷ್ಟಿಯಾದ ಒಂದು ವರ್ಗ ಮೊಯ್ದರು. ನಾಲ್ಕು ವರ್ಗಗಳಲ್ಲಿ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಸ್ತ್ರೀಯರುಗಳು ತಮ್ಮ ಯಾವ ಯಾವುದೇ ಕಾರಣಗಳಿಂದ ಶೋಷಣೆಗೊಳಗಾಗಿದ್ದರೆ, ನೊಂದಿದ್ದರೆ, ವಿಧವೆಯಾಗಿದ್ದರೆ ಅಥವಾ ವಿವಾಹವಾಗಲು ಇಷ್ಟವಿಲ್ಲದಿದ್ದರೆ ಅವರು ದೇವಾಲಯಗಳಲ್ಲಿ ದೇವರ ಸೇವೆ ಮಾಡಿಕೊಂಡು ಅಲ್ಲಿಯೇ ಊಟ ಮಾಡಿಕೊಂಡು ಇರಬಹುದಾದ ಅವಕಾಶ ಅವರಿಗಿತ್ತು. ದೇವಾಲಯದ ಮುಖ್ಯಸ್ಥರು ಮತ್ತು ಸರಕಾರದ ಅಧಿಕಾರಿಗಳು ಮತ್ತು ಜಾತಿಯ ಪ್ರಮುಖರು ದೇವಾಲಯದ ಆಶ್ರಯಕ್ಕೆ ಬರುವ ಕಾರಣ ಕೇಳಿ, ಅವಳು ಬ್ರಾಹ್ಮಣ ಸ್ತ್ರೀಯಾಗಿದ್ದರೆ ದೇವಾಲಯದಲ್ಲಿ ವಾಸಿಸುವಳೋ ಅಥವಾ ಅದರ ಪ್ರಾಂಗಣದೊಳಗಿರುವ ಆವರಣದೊಳಗಿರುವಳೋ ಎಂದು ತಿಳಿದು ದೇವಾಲಯದೊಳಗಿರುವುದಾದರೆ ಅವಳಿಗೆ ದೇವಾಲಯದ ಆಡಳಿತ ದಿನಭತ್ಯೆಯನ್ನು ವರ್ಷಕ್ಕೊಮ್ಮೆ ಬಟ್ಟೆಯನ್ನು ಕೊಡುತ್ತಾರೆ. ದೇವಾಲಯದಿಂದ ಹೊರಗಿರುವುದಾದರೆ ಅವಳು ದೇವಾಲಯದ ಅಂಗಳದ ಕಸ ಹೊಡೆಯುವುದು, ದೇವರಿಗೆ ಚೌರಿ ಬೀಸುವುದು ಮಾಡುತ್ತಾ ಯಾವನಾದರೂ ಬ್ರಾಹ್ಮಣನಿಗೆ ನಿಷ್ಟಳಾಗಿದ್ದುಕೊಂಡು ಜೀವನ ನಡೆಸಬಹುದಾಗಿತ್ತು. ಇಲ್ಲವಾದರೆ ಅಧಿಕಾರಿ ವರ್ಗದವನ ಉಪಪತ್ನಿಯಾಗಿಯೂ ಅವನ ಸೇವೆ ಮಾಡಿಕೊಂಡೋ ಇರಬಹುದಾಗಿತ್ತು. ಅಂತಹವಳ ಮಕ್ಕಳನ್ನು ಮೊಯ್ದರೆಂದು ಕರೆಯುತ್ತಾರೆ. ಹಾಗೆಯೇ ಅವರು ತಮ್ಮನ್ನು ಸ್ಥಾನಿಕರೆಂದೂ ಕರೆದುಕೊಳ್ಳುವರು. ಅವರು ಜನಿವಾರವನ್ನು ಧರಿಸುತ್ತಾರೆ. ಅವರುಗಳು ಪಂಜು ಹತ್ತಿಸುವುದು, ಹೂ ತರುವುದು ಇತ್ಯಾದಿ ದೇವಾಲಯದ ಕೆಲಸಗಳನ್ನು ಮಾಡುತ್ತಾರೆ. ಮತ್ತೆ ಕೆಲವರು ಬೇರೆ ಕೆಲಸಕ್ಕೆ ಸೇರಿ ಪ್ರಾಮಾಣಿಕವಾಗಿ ದುಡಿದು ತಿನ್ನುತ್ತಾರೆ. ಹೆಣ್ಣುಮಕ್ಕಳು ಕೆಲವರು ತಾಯಿಯ ಹಾಗೆ ಬದುಕುತ್ತಾರೆ. ಮತ್ತೆ ಕೆಲವರನ್ನು ಸ್ಥಾನಿಕರಿಗೆ ಆಯಾ ಜಾತಿಯ ಮೊಯ್ಲಿಗಳಿಗೆ ಕೊಟ್ಟು ಮದುವೆ ಮಾಡುತ್ತಾರೆ.

ಬ್ರಾಹ್ಮಣ ಹೆಂಗಸರು ಅಥವಾ ಕೆಳ ವರ್ಗದವರು ದೇವಾಲಯವನ್ನು ಆರಿಸಿಕೊಳ್ಳದಿದ್ದಾಗ ಅವರು ಆ ಸ್ಥಳದ ಒಬ್ಬ ಕುಲೀನ ಪುರುಷನ ಜೊತೆ ಕೂಡಿಕೆ ಮಾಡಿಕೊಂಡು ಇರಬಹುದು. ಆದರೆ ಆಗ ದೇವಾಲಯಕ್ಕೆ ಇಂತಿಷ್ಟು ಹಣ ಕೊಡಬೇಕೆಂದು ವಿಧಿಸುತ್ತಾರೆ. ಅವರ ಮಕ್ಕಳು ಮೊಯ್ತರುಗಳೆಂದು ಕರೆಯಲ್ಪಡುತ್ತಾರೆ. ಆ ಬ್ರಾಹ್ಮಣ ಸ್ತ್ರೀಯ ಮಕ್ಕಳು ದೇವಾಲಯದ ಒಳಗಿದ್ದ ಬ್ರಾಹ್ಮಣ ಸ್ತ್ರೀಯ ಮಕ್ಕಳನ್ನು ವಿವಾಹವಾಗಬಹುದು. ಆದರೆ ಕೆಳಗಿನ ಜಾತಿಯ ಹೆಣ್ಣಿನ ವ್ಯಕ್ತಿಯ ಸಂಬಂಧದ ಮಕ್ಕಳನ್ನು ಮದುವೆಯಾಗುವುದಿಲ್ಲ. ತುಳುವ ನಾಡಿನ ಇತರರಿಗಿಂತ ಭಿನ್ನವಾದ ಪದ್ಧತಿ ಇವರಲ್ಲಿದ್ದು ತಾಯಿಯಿಂದಲೇ ಗುರುತಿಸಿಕೊಂಡಿದ್ದಾರೆ. ಇಲ್ಲಿಯೂ ಅಳಿಯ ಕಟ್ಟು ಸಂಪ್ರದಾಯವಿದೆ. ಬ್ರಾಹ್ಮಣರಂತೆ ನಾಮವನ್ನು ಧರಿಸಿ ಜನಿವಾರವನ್ನು ಹಾಕಿಕೊಳ್ಳುತ್ತಾರೆ. ಮಾಂಸ ಮದ್ಯ ಸೇವನೆ ನಿಷಿದ್ಧ. ಆದರೂ ಅವರಿಗೆ ವೇದಾಧ್ಯಯನವೂ ನಿಷಿದ್ಧ. ಹಾಗೆಯೇ ಎಂಟು ಪುರಾಣಗಳನ್ನು ಓದುವ ಹಾಗಿಲ್ಲ. ಆದರೆ ದೇವರನ್ನು ಕುರಿತ ಹಾಡುಗಳನ್ನು ಹಾಡುವ ಅವಕಾಶವಿದೆ. ಸತ್ತಾಗ ಸುಡುತ್ತಾರೆ. ಆತ್ಮಗಳನ್ನು ನಂಬುತ್ತಾರೆ. ಬ್ರಾಹ್ಮಣ ಸಂಪ್ರದಾಯಗಳನ್ನು ಅನುಸರಿಸಿದರೂ ಇತರ ಬ್ರಾಹ್ಮಣರಿಗೆ ಇರುವ ಸ್ಥಾನಮಾನಗಳು ಇವರಿಗೆ ಇಲ್ಲ. ಉಪದೇಶಗಳನ್ನು ಕೊಡುವ ಅಧಿಕಾರವೂ ಇಲ್ಲ. ಬ್ರಾಹ್ಮಣರು ಮೊಲ್ಲರ ಕಾರ್ಯಗಳಿಗೆ ಬರುತ್ತಾರೆ. ಉಪದೇಶಗಳನ್ನು ಕೊಡುತ್ತಾರೆ. ಪೂಜೆ ಮಾಡಿಸುತ್ತಾರೆ. ದಾನ ದಕ್ಷಿಣೆಯನ್ನು ಒಪ್ಪಿಕೊಳ್ಳುತ್ತಾರೆ (ಪು. 315 ಪಿ. ಯಶೋದಾ ರಾಜಶೇಖರಪ್ಪ, ಬುಕನನ್ ಕಂಡ ದಕ್ಷಿಣ ಕನ್ನಡ ಜಿಲ್ಲೆಯ ಶ್ರಮಿಕ ವರ್ಗಗಳು, ದಕ್ಷಿಣ ಕನ್ನಡ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ). ದೇವಸ್ಥಾನದ ಚಾಕರಿಗೆ ಹೆಂಗಸರು ಇರುತ್ತಿದ್ದರು ಎಂಬುದಕ್ಕೆ ಈ ದಾಖಲೆ ಸಾಕ್ಷಿಯಾಗಿದೆ. ಇವರು ದೇವದಾಸಿ ಎಂಬ ಕೆಟಗರಿಗೆ ಸೇರಿದವರಲ್ಲವಾದರೂ, ದೇವಸ್ಥಾನದ ಚಾಕರಿಗೆ ತಮ್ಮ ಜೀವನವನ್ನು ಅರ್ಪಿಸಿಕೊಂಡವರಾಗಿದ್ದಾರೆ. ಅನಾಥ, ಬಹಿಷ್ಕೃತ, ನೊಂದ, ದಮನಿತ ವಿಧವೆ ಮುಂತಾದ ಶೋಷಿತ ಮಹಿಳೆಯರಿಗೆ ಆಶ್ರಯ ನೀಡಿ ಸಲಹುವ ವ್ಯವಸ್ಥೆಯಾಗಿ ರೂಢಿಯಲ್ಲಿತ್ತು ಎಂದು ತಿಳಿಯಬಹುದು. ದೇವರಿಗೆ ಚಾಮರವನಿಕ್ಕುವ ಸೇವೆಯಲ್ಲಿರುವ ಹೆಂಗಸರ ಉಲ್ಲೇಖ ಶಾಸನದಲ್ಲಿದೆ. (ARSIE 1930-32, No. 282)

ಬನ್ನೂರಿನಲ್ಲಿ ಗಂಗಾಧರ ಮಠ ಇದ್ದದ್ದು ಮತ್ತು ದೇವಾಡಿಗರ ಮೂಲ ಸ್ಥಳ ಹೊಂದಿದ್ದ ದಾಖಲೆಗಳು ಶಾಸನದಲ್ಲಿವೆ. EC VIII ತೀರ್ಥಹಳ್ಳಿ ನಂ. 52)

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೇವದಾಸಿಯರು

ಕ್ರಿ.ಶಕ 1377ರ ಇಮ್ಮಡಿ ಹರಿಹರನ ಕೋಟೇಶ್ವರ ದೇಗುಲದ ಶಾಸನದಲ್ಲಿ ಬಾರಕೂರನ್ನು ಬೊಮ್ಮರಸನು ಆಳುತ್ತಿದ್ದಾಗ ಅವನ ಮಹಾಪ್ರಧಾನಿ ಮುದ್ರೆ ದಂಣಾಯಕ ಕೋಟೇಶ್ವರ ದೇವರಲ್ಲಿ ಕಟ್ಟುಸಿದ ಮಠದಲ್ಲಿ ಚಾಮರವೆನಿಕ್ಕುವ ಹೆಮ್ಮಕ್ಕಳ ಜನ ಎಂಡಕ್ಕಂ ಅಕ್ಕಿ..... ಮೂಡೆ ಹದಿನೆಂಟು ಆ ಮಠದ ಬೋಹರಿಸುವ ಬಸವಿತ್ತಿಯ ಜನ ಒಂದಕ್ಕು ವರಿಸೆ ಒಂದಕ್ಕಂ ಆ ತತ್ರಕ್ಕೆ ಕೊಂಡು ಕೊಟ್ಟ ಎಂಮೆ ಮಾಣಿಕೊಂಡೊಡೆ.......... ಒತ್ತು ಭಯನಾಗಿ ಒಂದು ಎಂಮೆಯನೂ ಮಠಕ್ಕೆ ನಡೆಸಿ ಬಹನು" ಎಂದಿದೆ. ಆ ಬಸವಿತ್ತಿಗೆ ನಿಶ್ಚಿತವಾಗಿ ಸಲ್ಲುವ ವಿವರವಿರುವಲ್ಲಿ ಆಕೆಯ ವಾಸ್ತವ್ಯವನ್ನು ಸೂಚಿಸುತ್ತದೆ. ಬೋಹರಿಸು ಎಂದರೆ ಕಸತೆಗೆ, ಗುಡಿಸು ಎಂಬ ಅರ್ಥವಿದೆ. ಮಠಗಳಲ್ಲೂ ದೇವದಾಸಿಯರು ಮತ್ತು ಬಸವಿಗಳಿದ್ದರು ಎಂದು ಈ ಶಾಸನದಿಂದ ತಿಳಿಯುತ್ತದೆ. ತುಳುನಾಡಿನಲ್ಲಿ ವೀರಶೈವ ಎಂಬ ಈ ಲೇಖನ ಬರೆದ ಡಾ.ಎಂ.ಜಿ ನಾಗರಾಜ್ ಅವರು ಬಸವಿಯ ವೃತ್ತಿ ಎಂದು ಅರ್ಥೈಸಿಕೊಳ್ಳುವುದು ಸಮಚಿತವೆನಿಸುವುದಿಲ್ಲವೆಂದು ಬರೆದಿದ್ದಾರೆ. ದ.ಕ.ಜಿಲ್ಲೆಯ ದೇವಸ್ಥಾನಗಳಲ್ಲಿ ದೇವದಾಸಿಯರಿದ್ದರು ಎನ್ನುವುದಕ್ಕೆ ಕೆಲವು ದಾಖಲೆಗಳು ದೊರೆತಿವೆ. ಹೊಯ್ಸಳರ, ವಿಜಯನಗರದರಸರ, ಕೆಳದಿ ಅರಸರ ಕಾಲದಲ್ಲಿ ದ.ಕ ಜಿಲ್ಲೆಯಲ್ಲಿ ಆ ರಾಜರ ಪ್ರಭಾವದಿಂದ ಕೆಲವು ವಿಶಿಷ್ಟ ಸಂಪ್ರದಾಯಗಳು ಇಲ್ಲಿ ಕಾಣಿಸಿಕೊಂಡಿವೆ. ಉದಾಹರಣೆಗೆ: ಗರುಡ ಪದ್ಧತಿ, ಸತಿ ಪದ್ಧತಿ ಮುಂತಾದವುಗಳು. ಹಾಗೆಯೇ ದೇವದಾಸಿ ಪದ್ಧತಿಯೂ ಇಲ್ಲಿನ ಹಲವು ದೇವಸ್ಥಾನಗಳಲ್ಲಿ ರೂಢಿಯಲ್ಲಿದ್ದುದಲ್ಲಿ ಆಶ್ಚರ್ಯವೇನೂ ಇಲ್ಲ. ಉತ್ತರ ಕರ್ನಾಟಕದ ಕೆಲವು ಮಠಗಳಲ್ಲೂ ದೇವದಾಸಿ ಪದ್ಧತಿಗಳಿದ್ದುವು. ಹಾಗೆಯೇ ಮಠವನ್ನು ಶುಚಿಗೊಳಿಸುವ ಕೆಲಸದಲ್ಲಿ ಬಸವಿತ್ತಿಯು ಇದ್ದಳು ಎಂಬುದಕ್ಕೆ ಕೋಟೇಶ್ವರ ದೇಗುಲದ ಶಾಸನವು ಸಾಕ್ಷಿಯಾಗಿದೆ (ಪುಟ 140, ದ.ಕ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ವ).

ಹಿರಿಯಡ್ಕದ ಮಹತೋಭಾರ ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಪಕ್ಕದಲ್ಲಿ ಕೊಂಡಾಡಿ ಜಂಗಮ ಮಠವೂ ಇದೆ. ವೀರಭದ್ರ ಮತ್ತು ಮಹಾಕಾಳಿ ದೇವಸ್ಥಾನಗಳು ವೀರಶೈವ ಮತವು ಇಲ್ಲಿ ಗಟ್ಟಿಯಾಗಿ ನೆಲೆಯಾಗಿತ್ತು ಎಂಬುದಕ್ಕೆ ಸಾಕ್ಷಿಯಾಗಿದೆ. ಈ ದೇಗುಲವು ವಿಜಯನಗರ ಕಾಲದ್ದು, ಕೆಳದಿ ಅರಸರ ಕಾಲದಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಿದೆ. ಈ ದೇವಸ್ಥಾನದಲ್ಲಿ 16 ಜನರ ವಾದ್ಯ ಮೇಳವಿತ್ತು. ದೇವರಿಗೆ ಹೂವಿಡುವ ಮಾಲೆಯವರು ಇದ್ದರು. ಪೂಜಾ ಸಮಯದಲ್ಲಿ ಮಾಲೆಯರ ಕನೈಯರು ನರ್ತನ ಸೇವೆಯನ್ನು ಸಲ್ಲಿಸುತ್ತಿದ್ದರು. ಕೆಲವು ವರ್ಷಗಳ ಹಿಂದೆ ಈ ಸೇವೆ ನಿಂತಿದೆ. (ಪುಟ 160, ದ.ಕ ಜಿಲ್ಲೆಯ ಇತಿಹಾಸ) ಕರ್ನಾಟಕ ಸರಕಾರವು ದೇವದಾಸಿ ಪದ್ಧತಿಯನ್ನು ನಿಷೇಧಿಸುವ ಕಾನೂನು ಜಾರಿಗೊಳಿಸಿದಾಗ ಅಲ್ಲಿ ನರ್ತನ ಮಾಡುತ್ತಿದ್ದ ದೇವದಾಸಿಯೊಬ್ಬರು ದೇವಸ್ಥಾನದ ಅಂಗಣದಲ್ಲೇ ಬೆಂಕಿ ಹಚ್ಚಿಕೊಂಡು ಪ್ರಾಣತ್ಯಾಗ ಮಾಡಿದ ಘಟನೆಯನ್ನು ಕಂಡವರು ಇದ್ದರು. ಸರಕಾರವು ಈ ವೃತ್ತಿಯನ್ನು ನಿಷೇಧಿಸಿದಾಗ ಅವರಿಗೆ ದೇವಸ್ಥಾನದಿಂದ ಬರುತ್ತಿದ್ದ ಸವಲತ್ತುಗಳೂ ರದ್ದಾದವು. ಇದರಿಂದಾಗಿ ಬದುಕಿಗೆ ಬೇರೆ ದಾರಿ ಕಾಣದೆ ಆ ದೇವದಾಸಿ ಆತ್ಮಹತ್ಯೆ ಮಾಡಿಕೊಂಡಿರಬೇಕು.

ವೇಶ್ಯಯರು ಜನಹಿತಕ್ಕಾಗಿ ಕೆರೆ, ಕಾಲುವೆ, ಕಟ್ಟಿಸಿದ ನಿದರ್ಶನಗಳು ತುಂಬಾ ಇವೆ. ವಿಜಯನಗರದರಸರು ಆಡಳಿತದ ಕಾಲದಲ್ಲಿಯೇ ಇಲ್ಲಿ ದೇವದಾಸಿಯರು ಇದ್ದಿರಬೇಕು. ಕೆಳದಿ ಅರಸರ ಕಾಲದಲ್ಲೂ ಈ ಸಂಪ್ರದಾಯ ಇಲ್ಲಿ ಮುಂದುವರಿರುವ ಸಾಧ್ಯತೆ ಇದೆ.

ಪುತ್ತಿಗೆಯನ್ನು ಆಳುತ್ತಿದ್ದ ಚೌಟರಸ ಎರಡನೇ ಭೋಜರಾಯನು ಬಹಳ ಬಲಿಷ್ಠನಾಗಿದ್ದನು. ವಿಜಯನಗರದ ಕೃಷ್ಣ ದೇವರಾಯನು ಪಟ್ಟವೇರಿದಾಗ, 1509ರಲ್ಲಿ ಭೋಜರಾಯನನ್ನು ವಿಜಯನಗರಕ್ಕೆ ಆಮಂತ್ರಿಸಿದನು. ಭೋಜ ರಾಯನು ಕೃಷ್ಣದೇವರಾಯನನ್ನು ಭೇಟಿ ಮಾಡಿದಾಗ ಕೃಷ್ಣ ದೇವರಾಯನು ಭೋಜರಾಜನಿಗೆ ಕ್ರಮಪ್ರಕಾರ ಕಪ್ಪಕೊಡಬೇಕೆಂದು ತಾಕೀತು ಮಾಡಿದಾಗ ಭೋಜರಾಯನು ಒಪ್ಪಿದನು. ಅನಂತರ ಕೃಷ್ಣದೇವರಾಯನು ಭೋಜರಾಜನಿಗೆ ಬಿರುದು ಬಾವಲಿಗಳನ್ನಿತ್ತು ಪುತ್ತಿಗೆಗೆ ಹಿಂದೆ ಕಳುಹಿಸಿದ; ಮುತ್ತಿನ ತುರಾಯಿ, ಪಟ್ಟದ ಆನೆ, ಪಟ್ಟದ ಕುದುರೆ, ರಣಕಹಳೆ ಪಂಚ ದೀವಟಿಗೆಗಳು, ವಾದ್ಯ ಮೇಳ ಮುಂತಾದ ಹಲವು ವಸ್ತುಗಳ ಜೊತೆಗೆ ನರ್ತಕಿಯರ ಮೇಳವನ್ನೂ ಕಳುಹಿಸಿದನು. (ತುಳು ಕರ್ನಾಟಕ ಅರಸು ಮನೆತನಗಳು) ಸಂ.: ಹೆರಂಜೆ ಕೃಷ್ಣ ಭಟ್, ಡಾ. ಎಸ್.ಡಿ.ಶೆಟ್ಟಿ

ಈ ರಾಜ ನರ್ತಕಿಯರು ಆಸ್ಥಾನಗಳಲ್ಲಿ ನರ್ತನ ಸೇವೆಯನ್ನು ಸಲ್ಲಿಸುವುದಕ್ಕೋ, ದೇವಸ್ಥಾನಗಳಲ್ಲಿ ನರ್ತನ ಸೇವೆ ಸಲ್ಲಿಸುವುದಕ್ಕೋ ಎಂಬುದು ಸ್ಪಷ್ಟವಿಲ್ಲ. ಆದರೆ ದ.ಕ. ಜಿಲ್ಲೆಯಲ್ಲಿ ಅದರಲ್ಲೂ ಜೈನರ ರಾಜ್ಯಭಾರ ಇರುವಲ್ಲೆಲ್ಲಾ ಕೆಲವು ಪ್ರಮುಖ ದೇವಸ್ಥಾನಗಳಲ್ಲಿ ದೇವದಾಸಿಯರ ನರ್ತನ ಸೇವೆ ಇದ್ದುದ್ದಕ್ಕೆ ಸಾಕ್ಷಿಗಳಿವೆ. ಡಾ.ಕನರಾಡಿ ವಾದಿರಾಜ ಭಟ್ಟರು ದೇವದಾಸಿಯರ ಹಾಡುಗಳು ಎಂಬ ಕೃತಿಯನ್ನು ರಚಿಸಿದ್ದಾರೆ. ಅವರ ನರ್ತನ ಸೇವೆಯ ಹಾಡುಗಳನ್ನು ದೇವದಾಸಿಯರಿಂದಲೇ ಹಾಡಿಸಿ ಸಿ.ಡಿ ಮಾಡಿದ್ದಾರೆ.

ವಾಮಂಜೂರಿನ ಅಮೃತೇಶ್ವರ ದೇವಾಲಯವು ಬಹಳ ಪುರಾತನವಾದ ದೇವಸ್ಥಾನವಾಗಿದೆ. ಈ ದೇವಸ್ಥಾನದಲ್ಲಿ ದೇವದಾಸಿಯರ ನರ್ತನ ಸೇವೆ ಇತ್ತು ಎಂಬುದನ್ನು ಹಿರಿಯರು ಹೇಳುತ್ತಿದ್ದುದನ್ನು ದೇವಸ್ಥಾನದ ಸಮೀಪದಲ್ಲಿ ವಾಸವಾಗಿರುವ ಅಶ್ವಿನ್ ಶೆಟ್ಟಿಯವರು ಹೇಳುತ್ತಾರೆ. ಅವರು ನರ್ತಿಸುವಾಗ ಅಂತರಪಟವನ್ನು ಹಿಡಿಯುತ್ತಿದ್ದರಂತೆ. ದೇವಸ್ಥಾನದ ಸಮೀಪದಲ್ಲೇ ದೇವದಾಸಿ ಯರು ವಾಸವಾಗಿದ್ದರು ಎಂದು ಹಿರಿಯರು ಹೇಳುತ್ತಿದ್ದರು. ಈಗ ಅಲ್ಲಿ ಆ ನರ್ತನಸೇವೆಗಳು ನಡೆಯುವುದಿಲ್ಲ. ದೇವದಾಸಿಯರ ಮನೆತನಗಳೂ ಇಲ್ಲಿ ನೆಲೆಸಿಲ್ಲವೆಂದು ಅವರು ಹೇಳುತ್ತಾರೆ.

ಡಾ. ಎನ್. ಸರಸ್ವತಿಯವರು ಬರೆದ ವಿಜಯನಗರ ಕಾಲದ ಮಹಿಳೆಯರ ಕೊಡುಗೆಗಳು ಎಂಬ ಕೃತಿಯಲ್ಲಿ "ಬೊಮ್ಮರಸು ಬಾರ್ಕೂರನ್ನು ಆಳುತ್ತಿದ್ದಾಗ ಮಹಾಪ್ರದಾನ ಮುದ್ದೆದಣ್ಣಾಯಕನು ಮೂರು ಕುಂಟೆ ಭೂಮಿಯನ್ನು ಕೊಂಡು ಕೊಂಡು ಕೋಟೇಶ್ವರ ದೇವರ ಪೂಜೆ ಹಾಗು ನೈವೇದ್ಯಕ್ಕಾಗಿ ದೇವಾಲಯದಲ್ಲಿನ 13 ಬ್ರಾಹ್ಮಣರ ದಿನನಿತ್ಯದ ಅನ್ನಸಂತರ್ಪಣೆಗಾಗಿ ಹಾಗೂ ದೇವರ ಮುಂದೆ ಚೌರಿ ಬೀಸುತ್ತಿದ್ದ ಇಬ್ಬರು ಹೆಂಗಸರಿಗೆ ಉಂಬಳಿಗಾಗಿ ಭೂಮಿ ಮತ್ತು ಚಿನ್ನವನ್ನು ಕೊಟ್ಟನು." ಎಂದು 14ನೆಯ ಶತಮಾನದ ಶಾಸನವು ಹೇಳುತ್ತದೆ ಎಂದು ಉಲ್ಲೇಖಿಸಿದ್ದಾರೆ.

ರಾಜರು ತಮ್ಮನ್ನು ವೇಶ್ಯಾಭುಜಂಗ ವಿಟ ಚಕ್ರವರ್ತಿ ಎಂಬ ಬಿರುದಿನಿಂದ ಕರೆಸಿಕೊಳ್ಳಲು ಹೆಮ್ಮೆ ಪಡುತ್ತಿದ್ದರು. ಸೂಳೆಯರ ಮೇಳ, ಪಾತ್ರಮೇಳ, ಬಾಕನಂಗೆಯರು, ಚಾಮರದ ಸೂಳೆ ಮುಂತಾದ ಹೆಸರಿನಿಂದ ಕರೆಯುತ್ತಿದ್ದರು. ಹಿಂದೆ ಯಕ್ಷಗಾನ ಬಯಲಾಟದ ಪ್ರದರ್ಶನಗಳಲ್ಲಿ ಈ ಮೇಳದ ನರ್ತಕಿಯರಿಂದ ನೃತ್ಯ ಕಾರ್ಯಕ್ರಮವನ್ನು ಮಾಡಿಸುತ್ತಿದ್ದರಂತೆ.

ಧರ್ಮಸ್ಥಳ, ಬಸರೂರು, ಬಾರ್ಕೂರು, ಹಿರಿಯಡ್ಕ, ಪುತ್ತಿಗೆ, ಕುಂಬ್ಳೆ ಮುಂತಾದ ಕಡೆಗಳಲ್ಲಿ ದೇವದಾಸಿಯರು ಸೇವೆ ಸಲ್ಲಿಸುತ್ತಿದ್ದರು. ಈ ಸೇವೆಗೆ ತಟ್ಟೆ ಚಾಕರಿ ಎಂದು ಕರೆಯುತ್ತಿದ್ದರು. ದೇವದಾಸಿಯರನ್ನು ಕಸವ ಕಳೆವ ಬಸವಿತ್ತಿಯೆಂದೂ ಮಠವ ಬೋಹರಿಸುವ ಬಸವಿತ್ತಿಯರೆಂದೂ ಕರೆಯುತ್ತಿದ್ದರು. ಈ ಪದ್ಧತಿಯಿಂದ ಮೇಲ್ವರ್ಗ ಮಹಿಳೆಯರು ಮತ್ತು ಕೆಳವರ್ಗದ ಮಹಿಳೆಯರು ಸಾಂಪ್ರದಾಯಿಕ ಹೆಸರಿನಲ್ಲಿ ಶೋಷಣೆಗೊಳಗಾಗುತ್ತಿದ್ದರು.

ಕೂತಾಡುವ ಬಾಕನಂಗೆಯರು ಎಂಬ ಹೆಸರಿನಲ್ಲಿ ಯಾವ ಗೌರವವೂ ಇಲ್ಲದೆ ದೇವರ ಹೆಸರಿನಲ್ಲಿ ದೇವದಾಸಿಯರು ದೇವಸ್ಥಾನಗಳಲ್ಲಿ ಸೇವೆ ಸಲ್ಲಿಸುತ್ತಿದ್ದುದ್ದೂ ಇವೆ. ಕೂತಾಡುವ ಬಾಕನಂಗೆಯರು ಎಂಬ ಹೆಸರಿನ ದೇವದಾಸಿಯ ಬಗ್ಗೆ ಪಾಣೆಮಂಗಳೂರಿನ ಬಂಕೇಶ್ವರ ದೇವಸ್ಥಾನದಲ್ಲಿ ಸಿಕ್ಕಿದ ಶಾಸನದಲ್ಲಿದೆ. ಕುಂಬ್ಳೆಯ ಭಗವತೀ ಕ್ಷೇತ್ರದಲ್ಲಿ ಕೋಲ ಜಾತ್ರೆಯ ಸಮಯದಲ್ಲಿ ದೇವದಾಸಿಯರು ಸೇವೆ ಸಲ್ಲಿಸುತ್ತಿದ್ದರು ಎಂದು ಖ್ಯಾತ ಸಾಹಿತಿ ಅಮೃತ ಸೋಮೇಶ್ವರರು ತಮ್ಮ ನೆನಪುಗಳನ್ನು ಹಂಚಿಕೊಂಡಿದ್ದರು. ಈ ಕ್ಷೇತ್ರದ ಭಗವತಿಯು ದೇವದಾಸಿಯರ ಆರ್ಥಿಕ ಅಭಿವೃದ್ಧಿಗೆ ಆಶೀರ್ವದಿಸುತ್ತಾಳೆ ಎಂಬ ನಂಬಿಕೆ ಅವರಲ್ಲಿತ್ತು, ಮಂಗಳೂರಿನಲ್ಲಿ ಹಿಂದೆ ವ್ಯಾಪಾರಿ ಕೇಂದ್ರವಾಗಿದ್ದ ಸ್ಥಳಗಳಲೆಲ್ಲಾ ವೇಶ್ಯಾವಾಟಿಕೆ ಸಕ್ರಿಯವಾಗಿತ್ತು. ಉದಾಹರಣೆಗೆ, ಬಂಟ್ವಾಳ, ಬಸರೂರು, ಮಂಗಳೂರು ಮುಂತಾದ ಪಟ್ಟಣಗಳಲ್ಲಿ ಈ ವೃತ್ತಿಗೆ ಪ್ರಾಚೀನ ಚರಿತ್ರೆ ಇತ್ತು.

ದ.ಕ. ಜಿಲ್ಲೆಯಲ್ಲಿ ಹವ್ಯಾಸಿ ನಾಟಕ ಕಂಪೆನಿ ಪ್ರಾರಂಭವಾದದ್ದು ಬಸರೂರಿ ನಲ್ಲಿ ಎಂಬುದು ಅಭಿಮಾನದ ಸಂಗತಿಯಾಗಿದೆ. ಹೆಚ್ಚು ಕಾಲ ಈ ನಾಟಕ ಕಂಪೆನಿ ಬಾಳದಿದ್ದರೂ ಅಂದು ಹಚ್ಚಿದ ರಂಗಜ್ಯೋತಿ ಈಗಲೂ ಬೆಳಗುತ್ತಿದೆ. 1910-11ರಲ್ಲಿ ಹುಟ್ಟಿದ ನೀಲಮಣಿ ಕಂಪೆನಿ ಎನ್ನುವ ಹೆಸರಿನ ಸ್ತ್ರೀ ನಾಟಕ ಮಂಡಳಿಯು ಬಸರೂರಿನಲ್ಲಿ ಸ್ಥಾಪಿಸಲ್ಪಟ್ಟಿತ್ತು. ಬಸರೂರಿನ ರಾಹುತಕೇರಿಯ ಏಳು ಜನ ಸ್ತ್ರೀಯರಿಂದ ಪ್ರಾರಂಭಗೊಂಡ ಈ ಕಂಪೆನಿಯು ಜನರಿಂದ 'ಸೂಳೆ ಮೇಳ' ಎಂಬ ನಿಂದೆಯನ್ನು ಸಹಿಸಿಕೊಂಡರೂ ಹಲವು ವರ್ಷಗಳ ಕಾಲ ಈ ಕಂಪೆನಿ ಭಕ್ತಪ್ರಹ್ಲಾದ, ಕೃಷ್ಣ ಲೀಲಾ, ಚಂದ್ರಹಾಸ, ಸುಭದ್ರಾರ್ಜುನ ಮುಂತಾದ ಜನಪ್ರಿಯ ಹಾಗೂ ಯಶಸ್ವಿ ಪ್ರದರ್ಶನಗಳನ್ನು ನೀಡಿತ್ತು. ಇದೇ ಕಾಲದಲ್ಲಿ ದೊಡ್ಡಮನೆ ಪಾರ್ವತಿ ಎಂಬವರು ಇನ್ನೊಂದು ಸ್ತ್ರೀ ನಾಟಕ ಮಂಡಳಿಯನ್ನು ಪ್ರಾರಂಭಿಸಿದರು. ನೀಲಮಣಿ ಕಂಪೆನಿ ಮತ್ತು ದೊಡ್ಡ ಮನೆ ಪಾರ್ವತಿ ಕಂಪೆನಿ ಎರಡೂ ಕಂಪೆನಿಗಳು ನಮ್ಮ ಜಿಲ್ಲೆಯ ಸುತ್ತಮುತ್ತಲಿನಲ್ಲಿ ಹಲವು ಪ್ರದರ್ಶನಗಳನ್ನು ನೀಡಿತು. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ ಈ ಕಂಪೆನಿಗಳಲ್ಲಿ ಕಲಾವಂತ ಸಮುದಾಯದ ಹೆಣ್ಣುಮಕ್ಕಳೇ ಪಾತ್ರ ವಹಿಸುತ್ತಿದ್ದರು. ಅವರ ಸಮುದಾಯದ ಪುರುಷರು ಹಿಮ್ಮೇಳ, ಮುಮ್ಮೇಳಗಳಲ್ಲಿ ಸಹಕರಿಸುತ್ತಿದ್ದರು. 19ನೇ ಶತಮಾನದ ಕೊನೆಗಾಲ ಮತ್ತು 20ನೆಯ ಶತಮಾನದ ಪ್ರಾರಂಭ ಕಾಲಕ್ಕಾಗಲೇ ಈ ಕಲಾವಂತ ಸಮುದಾಯದವರು ದೇವದಾಸಿ ಎಂಬ ವ್ಯವಸ್ಥೆಯಿಂದ ಹೊರಬರುವ ಪರ್ಯಾಯ ದಾರಿಗಳನ್ನು ಹುಡುಕತೊಡಗಿದ್ದರು. ಆ ಕಾಲದ ನೃತ್ಯ, ಸಂಗೀತ, ನಾಟಕ, ಸಿನಿಮಾಗಳಲ್ಲಿ ಈ ಕಲಾವಿದೆಯರು ಪ್ರವೇಶ ಪಡೆದರು. ಹಲವು ಮಂದಿ ತಾವು ಆಯ್ಕೆ ಮಾಡಿಕೊಂಡ ಕಲಾಕ್ಷೇತ್ರಗಳಲ್ಲಿ ಪ್ರಸಿದ್ಧಿಯನ್ನೂ, ಆರ್ಥಿಕ ಭದ್ರತೆಯನ್ನೂ ಗಳಿಸಿದರು.

ದ.ಕ. ಜಿಲ್ಲೆಯ ದೇವಸ್ಥಾನಗಳಲ್ಲಿ ದೇವದಾಸಿ ಪದ್ಧತಿ ಇರಲಿಲ್ಲ. ಇಲ್ಲಿ ದೇವದಾಸಿಯರೇ ಇಲ್ಲವೆಂದು ನಾನು ಭಾವಿಸಿದ್ದೆ. ಶಾಸನಗಳು ಹೇಳುವ ದಾಖಲೆಗಳು ಬೇರೆಯೇ ಕಥೆ ಹೇಳುತ್ತದೆ. ದೇವಸ್ಥಾನಗಳಲ್ಲಿರುವ ದೇವದಾಸಿಯರ ಕುರಿತಾದ ದಾಖಲೆಗಳು ನಾಶವಾಗಿವೆ, ಯಾಕೆಂದರೆ ಈ ಪದ್ಧತಿಗೆ ಬ್ರಿಟಿಷ್ ಸರಕಾರ ನಿಷೇಧ ಹೇರುವ ಸುದ್ದಿ ಕೇಳಿದ ಕೂಡಲೇ ದೇವಸ್ಥಾನದ ಆಡಳಿತ ಮಂಡಳಿಯವರು ಜಾಗೃತರಾದರು ಮತ್ತು ದೇವದಾಸಿ ಸಮುದಾಯದವರೂ ಭವಿಷ್ಯದ ಬದುಕಿಗೆ ಬೇರೆ ಮಾರ್ಗವನ್ನು ಶೋಧಿಸತೊಡಗಿದರು. ಇಂತಹ ಅವಕಾಶ ಮತ್ತು ಮಾರ್ಗವನ್ನು ಕಂಡುಕೊಳ್ಳಲಾಗದ ದೇವದಾಸಿಯರು ಹತಾಶ ರಾಗಿ ಕೆಲವರು ಆತ್ಮಹತ್ಯೆ ಮಾಡಿಕೊಳ್ಳುವ ದುರಂತವನ್ನು ನಿರ್ವಾಹವಿಲ್ಲದೆ ಅಪ್ಪಿಕೊಳ್ಳಬೇಕಾಯಿತು. ಆಧುನಿಕ ಶಿಕ್ಷಣಕ್ಕೆ ನಮ್ಮ ದ.ಕ. ಜಿಲ್ಲೆ ಬಹಳ ಬಹಳ ಬೇಗನೇ ತೆರೆದುಕೊಂಡಿತು. ಹೆಣ್ಣು ಮಕ್ಕಳು ಆಧುನಿಕ ಶಿಕ್ಷಣದ ಆಕರ್ಷಣೆಗೆ ಒಳಗಾದರು. ಕಲಾವಂತ ಸಮುದಾಯದ ಹೆಣ್ಣು ಮಕ್ಕಳು ಶಿಕ್ಷಣಕ್ಕೆ ಮನಸೋತು ಹೊಸ ಹೊಸ ಉದ್ಯೋಗಗಳಿಗೆ ಸೇರಿಕೊಂಡರು. ದೇವದಾಸಿ ಪದ್ಧತಿ ನಿಂತ ಮೇಲೆ ದೇವಸ್ಥಾನದಿಂದ ಲಭಿಸುತ್ತಿದ್ದ ಆದಾಯವೂ ನಿಂತಿತು. ಉಂಬಳಿ ಭೂಮಿ ಕೈತಪ್ಪಿತು. ಒಕ್ಕಲು ಮಸೂದೆ ಜಾರಿಗೊಂಡ ಮೇಲೆ ಅವರ ವಶದಲ್ಲಿದ್ದ ಅಲ್ಪಸ್ವಲ್ಪ ಭೂಮಿಯೂ ಕೈ ತಪ್ಪಿತು. ಇಂತಹ ಸಮಯದಲ್ಲಿ ಈ ಕಲಾವಂತ ಸಮುದಾಯದವರು ಸಂಗೀತ, ನೃತ್ಯಗಳನ್ನು ಕಲಿಸುವ ಶಾಲೆಗಳನ್ನು ಸ್ಥಾಪಿಸಿ ಕಲೆಯ ಪ್ರಸಾರಕ್ಕೆ ಪ್ರಯತ್ನಿಸಿದರು. ಕೆಲವರು ಆಧುನಿಕ ನಾಟಕ, ಸಿನಿಮಾ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸತೊಡಗಿದರು. ಖ್ಯಾತ ಕಾದಂಬರಿಕಾರರಾದ ಶಿವರಾಮ ಕಾರಂತರು ಕೆಲವು ದೇವದಾಸಿಯರಿಗೆ ಮದುವೆ ಮಾಡಿಸಿ ಎಲ್ಲರಂತೆ ಬದುಕುವ ಪ್ರಯತ್ನ ಮಾಡಿದರು.

ಪ್ರೊ. ಕನರಾಡಿ ವಾದಿರಾಜ ಭಟ್ಟರು ಬಸರೂರಿನ ದೇವದಾಸಿ ಸಮುದಾಯದ ಈಗಿನ ತಲೆಮಾರಿನವರನ್ನು ಸಂದರ್ಶಿಸಿ, ಸಂಗ್ರಹಿಸಿದ ವಿವರಗಳು ಅತ್ಯಮೂಲ್ಯವಾಗಿದೆ. ಬಸರೂರಿನ ರಾಹುತಕೇರಿಯ ಮೂಡುಸಾಲಿನಲ್ಲಿ ನಾಲ್ಕು ಮನೆಗಳು, ಪಡುಸಾಲಿನಲ್ಲಿ ನಾಲ್ಕು ಮನೆಗಳಿದ್ದವು. ಮೂಡುಸಾಲಿನ ಒಂದು ಮನೆಯಲ್ಲಿ ಈಗ ವಾಸಿಸುತ್ತಿದ್ದವರನ್ನು ಸಂದರ್ಶನ ಮಾಡಿ ದೊರೆತ ವಿವರ ಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಈ ಸಮುದಾಯದ ಗಂಡಸರಿಗೆ ನಾಯಕ್ ಅಥವಾ ರಾವ್ ಎಂಬ ಉಪನಾಮಗಳಿದ್ದವು. ದೇವದಾಸಿಯರಿಗೆ 'ನಾಯಕಸಾನಿ'ಯರೆಂದು ಕರೆಯುತ್ತಿದ್ದರು. ಮನೆತನದ ಆಸ್ತಿ, ಸಂಪತ್ತಿಗೆ ಸ್ತ್ರೀಯೇ ಹಕ್ಕುದಾರಳು. ದೇವದಾಸಿಯರಿಗೆ ಹುಟ್ಟಿದ ಹೆಣ್ಣುಮಕ್ಕಳು ದೇವದಾಸಿಯ ರಾಗುತ್ತಾರೆ. ಗಂಡು ಮಕ್ಕಳಿಗೆ ಹುಟ್ಟಿದ ಹೆಣ್ಣುಮಕ್ಕಳು ದೇವದಾಸಿಯರಾಗುವುದಿಲ್ಲ. ದೇವದಾಸಿಯರಿಗೆ ಹೆಣ್ಣು ಮಕ್ಕಳಿಲ್ಲದಿದ್ದರೆ ದತ್ತು ಸ್ವೀಕರಿಸಬಹುದು. ಮನೆಯಲ್ಲಿ ದೇವದಾಸಿಯರದ್ದೇ ಸರ್ವಾಧಿಕಾರವಾದರೂ, ದೇವದಾಸಿಯ ಸೋದರಮಾವನು ವ್ಯವಹಾರವನ್ನು ನೋಡಿಕೊಳ್ಳುತ್ತಿದ್ದನು. ಹೆಣ್ಣು ಮೈನೆರೆಯುವ ಮೊದಲೇ ಗೆಜ್ಜೆಪೂಜೆ ಮಾಡುತ್ತಿದ್ದರು. ಪುರೋಹಿತರು ಶುಭದಿನವನ್ನು ನಿಶ್ಚಯಿಸುತ್ತಿದ್ದರು. ಗೆಜ್ಜೆ, ಕಾಲುಂಗುರ, ಕರಿಮಣಿಗಳ ತಯಾರಿ, ಊರಿನ ಪ್ರಮುಖರಿಗೆ, ಬಂಧುಗಳಿಗೆ ಆಮಂತ್ರಣವೀಯುವುದು ಮುಂತಾದ ಕೆಲಸಗಳ ಜವಾಬ್ದಾರಿ ಸೋದರಮಾವನದ್ದು. ಆ ದಿನದಂದು ಮಹಾಲಿಂಗೇಶ್ವರನಿಗೆ ಇವರ ಲೆಕ್ಕದಲ್ಲೇ ವಿಶೇಷ ಪೂಜೆ ಮಾಡಿಸಬೇಕು. ದೇವದಾಸಿಯಾಗುವವಳನ್ನು ಸ್ನಾನ ಮಾಡಿಸಿ, ಹೊಸ ಸೀರೆಯುಡಿಸಿ, ಅಲಂಕಾರ ಮಾಡಿ ಮಂಗಳ ವಾದ್ಯಗಳ ಜೊತೆಗೆ ದೇವಸ್ಥಾನಕ್ಕೆ ದಿಬ್ಬಣ ಹೋಗಬೇಕು. ಕರಿಮಣಿ, ಕಾಲುಂಗುರ, ಗೆಜ್ಜೆ, ಹೂಮಾಲೆ ದೇವರ ಮುಂದೆ ಇಡಬೇಕು. ಪೂಜೆಯ ಬಳಿಕ ಮುಹೂರ್ತದ ಸಮಯಕ್ಕೆ ಸರಿಯಾಗಿ ದೇವಸ್ಥಾನದ ಬ್ರಾಹ್ಮಣರಿಗೆ ಫಲದಾನ ಕೊಡಬೇಕು. ಅರ್ಚಕರು ದೇವರಿಗಿಟ್ಟ ಹೂಮಾಲೆಯನ್ನು ಐದು ಮಂದಿ ದೇವದಾಸಿಯರ ಕೈಗೆ ನೀಡುತ್ತಾರೆ. ಅವರು ಐವರೂ ಆ ಹೂಮಾಲೆ, ಕಾಲುಂಗುರ, ಗೆಜ್ಜೆಗಳನ್ನು ಮುಟ್ಟಿ, ಹುಡುಗಿಯ ಕೊರಳಿಗೆ ಕಟ್ಟುತ್ತಾರೆ. ಕಾಲುಂಗುರ ಇಡುತ್ತಾರೆ. ದೇವರ ಪ್ರಸಾದ ರೂಪದಲ್ಲಿರುವ ಗೆಜ್ಜೆಯನ್ನು ಅವಳ ಕಾಲಿಗೆ ಕಟ್ಟುತ್ತಾರೆ. ಹೀಗೆ ಮಹಾಲಿಂಗೇಶ್ವರನೊಡನೆ ಮದುವೆಯಾದ ಅವಳು ಪತಿದೇವನಿಗೆ ಅಡ್ಡಬಿದ್ದು, ಹಿರಿಯರ ಅಪ್ಪಣೆಯನ್ನು ಪಡೆದು ತಾಳಮದ್ದಲೆ, ಹಾರ್ಮೋನಿಯಂ ಮುಂತಾದ ಹಿಮ್ಮೇಳದವರಿಗೆ ವಂದಿಸಬೇಕು. ಆಮೇಲೆ ಅವಳು "ತಟ್ಟೆ ಚಾಕರಿಗೆ" ಸಿದ್ಧಳಾಗುತ್ತಾಳೆ. ತಟ್ಟೆ ಚಾಕರಿ ಎಂದರೆ ಪ್ರತಿ ನಿತ್ಯ ದೇವರಿಗೆ ಪೂಜೆಯಾದ ಬಳಿಕ ದೇವದಾಸಿಯರು ದೇವರಿಗೆ ಆರತಿ ಬೆಳಗುತ್ತಾ, ಹಾಡಿ ಕುಣಿಯುವ ಸಂಪ್ರದಾಯ, ದೇವಸ್ಥಾನದ ಪಾಟಾಳಿ ಬಸವ ಮಂಟಪದಲ್ಲಿಟ್ಟ ನೀಲಾಂಜನಗಳಿರುವ ಐದು ಆರತಿ ತಟ್ಟೆಗಳನ್ನು ಐದು ಮಂದಿ ದೇವದಾಸಿಯರು ಕೈಗೆತ್ತಿಕೊಂಡು ದೀಪ ಬೆಳಗಿಸಿ, ಹಾಡು ಹಾಡುತ್ತಾ ಕುಣಿಯುತ್ತಾರೆ. ಮಹಾಲಿಂಗೇಶ್ವರನ ಮುಂದೆ ಹಾಡಿ ಕುಣಿದ ಮೇಲೆ ದೇವಿಯ ಮುಂದೆ ಹಾಡಿ ಕುಣಿಯಬೇಕು.

ಆ ಬಳಿಕ ದೇವರದಾಸಿಯಾದ ಮದುಮಗಳನ್ನು ಊರಿನ ರಾಜರ ಅಥವಾ ಪಟೇಲರ ಮನೆಗೆ ಕರೆದುಕೊಂಡು ಹೋಗಿ ಅವರಿಗೆ ಹಣ್ಣು ಸಕ್ಕರೆ ಒಪ್ಪಿಸಿ, ನಮಸ್ಕರಿಸಿ ಅವರು ನೀಡಿದ ಉಡುಗೊರೆ ಸ್ವೀಕರಿಸಿ ಮನೆಗೆ ಮರಳುತ್ತಾರೆ. ಮನೆಯಲ್ಲಿ ಮದುವೆಯ ಸಂಭ್ರಮ. ಮದುಮಗಳಿಗೆ ಮಡಿಲು ತುಂಬಿಸಿ, ಬಂಧುಗಳು ಉಡುಗೊರೆ ನೀಡುತ್ತಾರೆ. ಆಗ ಮುದ್ದು ಪಾದಕೆ ಇಟ್ಟ ಗೆಜ್ಜೆ ಪರಾಕು ಎಂಬ ಹಾಡನ್ನು ಹಾಡುತ್ತಾರೆ. ಅದೇ ದಿನ ಸಂಜೆ ಪ್ರದೋಷ ಕಾಲದ ಪೂಜೆಗೆ 'ಸಲಾಂ' ಆಗಿ ಪೂಜೆಯಾದ ಬಳಿಕ ತಟ್ಟೆ ಚಾಕರಿ ಮಾಡಬೇಕು. ಬೇರೆ ಬೇರೆ ಹಾಡುಗಳನ್ನು ಹಾಡುತ್ತಾ ದೇವರಿಗೆ ಮುಖ ಮಾಡಿ ಹಿಂದೆ ಹಿಂದೆ ಹೆಜ್ಜೆ ಹಾಕುತ್ತಾ ನರ್ತಿಸುತ್ತಾರೆ. ಆ ಎಳೆಯ ಹುಡುಗಿ ಮಹಾಲಿಂಗೇಶ್ವರನ ಸತಿಯಾಗಿ, ನಿತ್ಯ ಸುಮಂಗಲೆಯಾಗಿ ದೇವರ ಸೇವೆ ಮಾಡುತ್ತಾ ದೇವದಾಸಿಯಾಗುತ್ತಾಳೆ. ಇದು ಇಲ್ಲಿನ ಸಂಪ್ರದಾಯ.

ಆ ಹುಡುಗಿ ಋತುಮತಿಯಾದ ಬಳಿಕ ಐದು ದಿನಗಳ ವರೆಗೆ ಸಂಭ್ರಮದ ಆಚರಣೆ ಇರುತ್ತದೆ. ಎಲ್ಲಾ ಸಮುದಾಯದ ಜಾತಿಯ ಹೆಂಗಸರು ಅಂದು ಅಲ್ಲಿ ಸೇರುತ್ತಾರೆ. ಅರಸಿನ ಅರೆದು, ಸುಣ್ಣ ಹಾಕಿ ಕೆಂಪು ಬಣ್ಣವಾದ ಮೇಲೆ ಅದನ್ನು ಹುಡುಗಿಯ ಕೈಗೆ ಹಚ್ಚುತ್ತಾರೆ. ಆ ಕೈಯಿಂದ ಗೋಡೆಗೆ ಚಟ್ಟು ಹೊಯ್ಯುತ್ತಾರೆ. ಆರತಿ ಮಾಡುತ್ತಾರೆ. ದಿನಕ್ಕೊಂದು ರೀತಿಯ ಕಜ್ಜಾಯ ಮಾಡಿ ಹುಡುಗಿಗೆ ತಿನ್ನಿಸುತ್ತಾರೆ. ಬಂದವರಿಗೆ ಸಿಹಿ ಹಂಚುತ್ತಾರೆ. ನಾಲ್ಕನೇ ದಿನ ಮಡಿವಾ ಬಂದು ಸ್ನಾನ ಮಾಡಿಸುತ್ತಾಳೆ. ಐದನೇ ದಿನ ಅವಳ ಪರಿವಾರದವರು ತಂದ ಹಾಲು, ತುಪ್ಪ ಮತ್ತು ತಿಂಡಿತಿನಿಸುಗಳನ್ನು ಬಡಿಸುತ್ತಾರೆ. ಅದೇ ದಿನ ಶೋಭನ ಪ್ರಸ್ತ ಮಾಡಿಸುತ್ತಾರೆ. ಪ್ರಸ್ತ ಮಾಡಲು ಒಂದೆರಡು ವರ್ಷ ವಿಳಂಬವಾದರೆ ಆಕೆ ಮನೆಯ ಹೊಸ್ತಿಲು ದಾಟಿ ಎಲ್ಲಿಗೂ ಹೋಗಬಾರದೆಂಬ ನಿಯಮವಿದೆ. ದೇವಸ್ಥಾನದ ಸೇವೆಯು ಪ್ರಾರಂಭವಾಗಬೇಕಾದರೆ ಅವಳ ಶೋಭನ ಪ್ರಸ್ತ ಆಗಿರಲೇ ಬೇಕು.

ದೇವದಾಸಿಯನ್ನು ಬಯಸಿದ ಶ್ರೀಮಂತರು ಪ್ರಸ್ತದ ಖರ್ಚು ವೆಚ್ಚಗಳನ್ನು ವಹಿಸುತ್ತಿದ್ದರು. ಶೋಭನ ಪ್ರಸ್ತದ ದಿನ ಪುರೋಹಿತರು ಮನೆಗೆ ಬಂದು ಹೋಮ ಮಾಡುವಾಗ ಒಂದು ತೆಂಗಿನ ಕಾಯಿಯನ್ನು ಇಡುತ್ತಾರೆ. ಇದು ಪತಿಯ ಪ್ರತೀಕ, ಬಳಿಕ ತೆಂಗಿನ ಕಾಯಿಯ ಸಮೇತ ಮದುಮಗಳು ಪರಿವಾರದವರು ದೇವಸ್ಥಾನಕ್ಕೆ ದಿಬ್ಬಣ ಹೋಗುತ್ತಾರೆ. ಮಂತ್ರಿಸಿದ ತೆಂಗಿನಕಾಯಿಯನ್ನು ದೇವರ ಪೂಜೆಗೆ ಇಡುತ್ತಾರೆ. ಆ ತೆಂಗಿನ ಕಾಯಿಯನ್ನು ಅರ್ಚಕರಿಂದ ಪಡೆದು ಮನೆಗೆ ತಂದು ಅದರ ಜೊತೆಯಲ್ಲಿ ಆರತಿ ಬೆಳಗುತ್ತಾರೆ. ಆ ದಿನ ರಾತ್ರಿ ತೆಂಗಿನಕಾಯಿಯ ಜೊತೆಗೆ ಶಯನಾಗಾರಕ್ಕೆ ಮದುಮಗಳನ್ನು ಕಳುಹಿಸುತ್ತಾರೆ. ದೇವದಾಸಿಯು ಆ ಫಲವನ್ನೇ ಪರದೈವವೆಂದು ತಿಳಿಯಬೇಕು. ಆ ತೆಂಗಿನ ಕಾಯಿಯನ್ನು ನೆಲದ ಮೇಲಿಡಬಾರದು ಎಂಬ ನಂಬಿಕೆಯಿದೆ. ಪ್ರಸ್ತ ಮಾಡಿಸಿದವರಿಗೆ ಆಕೆ ಪತ್ನಿಯಾಗಿರುತ್ತಿದ್ದಳು. ಸಾಮಾನ್ಯವಾಗಿ ಊರಿನ ಶ್ರೀಮಂತ ಬ್ರಾಹ್ಮಣ, ಜೈನ, ಬಂಟ ಸಮುದಾಯದವರು ದೇವದಾಸಿಯರನ್ನು ಇಟ್ಟುಕೊಳ್ಳುತ್ತಿದ್ದರು. ಒಂದು ವೇಳೆ ಆತ ತೀರಿಹೋದರೆ ಬೇರಾರನ್ನು ಬಯಸದೆ ದೇವರ ಸೇವೆಯಲ್ಲೇ ತಲ್ಲೀನರಾಗಿ ನಿಷ್ಠೆಯಿಂದ ಸೇವೆ ಸಲ್ಲಿಸುತ್ತಿದ್ದರು. ಆ ಕಾಲದ ದೇವದಾಸಿಯರು ವಿಷಯ ಸುಖಕ್ಕಿಂತಲೂ ಸತ್ಯಧರ್ಮ ಪಕ್ಷಪಾತಿಗಾಳಾಗಿ ದೈವ ಭೀರುಗಳಾಗಿ ದೇವಸ್ಥಾನದ ಸೇವೆಯಲ್ಲಿ ತೊಡಗಿರುತ್ತಿದ್ದರು. ದೇವಸ್ಥಾನದ ವಾರ್ಷಿಕ ಉತ್ಸವಗಳಲ್ಲಿ ದೇವದಾಸಿಯರ ಹಾಡುಕುಣಿತಗಳು ವಿಶೇಷವಾಗಿ ಆಕರ್ಷಿಸುತ್ತಿದ್ದುವು. ದೇವರ ಉತ್ಸವದ ಧ್ವಜಾರೋಹಣವಾಗಿ ಧ್ವಜ ಇಳಿಸುವವರೆಗೂ ದೇವದಾಸಿಯರು ಶುದ್ಧಾಚಾರದಲ್ಲಿ ಇರುತ್ತಿದ್ದರು. ಪ್ರತಿದಿನದ ಅಷ್ಠಾವಧಾನ ಸೇವೆಯಲ್ಲಿ ನರ್ತನ ಸೇವೆಯನ್ನು ದೇವದಾಸಿಯರೇ ಮಾಡುತ್ತಿದ್ದರು. ಏಳು ದಿನ ಏಳು ಕೇರಿಗಳಿಗೆ ದೇವರು ಹೋಗುವಾಗ ಪ್ರತಿ ಕೇರಿಗಳಿಗೆ ಪ್ರತ್ಯೇಕವಾದ ಹಾಡುಗಳಿರುತ್ತಿದ್ದವು. ಗುಡಿಗಾರ ಕಟ್ಟೆ, ವೆಂಕಟ್ರಮಣ ದೇವಸ್ಥಾನದ ಕಟ್ಟೆ, ಮಂಡಿಕೇರಿ ಕಟ್ಟೆ, ಚಿನಿವಾರ ಕಟ್ಟೆ, ಮೂಡುಕೇರಿ ತೊಮ್ಮೆ ಕಟ್ಟೆ, ಅಡಿಗರ ಕಟ್ಟೆ, ಕರ್ನಿಕರಕಟ್ಟೆ ಮುಂತಾದ ಏಳು ಕೇರಿಗಳಲ್ಲಿ ಹಾಡುವ ಹಾಡುಗಳು ಪ್ರತ್ಯೇಕವಾಗಿಯೂ, ವಿಶಿಷ್ಟವಾಗಿಯೂ ಇರುತ್ತಿದ್ದವು. ಹಾಗೆಯೇ ಹೂವಿನ ತೇರು, ಕೆರೆ ತೇರು, ಹಬ್ಬ ಪಕ್ಷಿಜಾಗರಣೆ ಮುಂತಾದ ಸಂದರ್ಭಗಳಲ್ಲೂ ಹಾಡುವ ಹಾಡುಗಳು ಪ್ರತ್ಯೇಕವಾಗಿರುತ್ತಿದ್ದವು. ಬೀದಿಯಲ್ಲಿ ಹೋಗುವಾಗ ಕುಣಿಯುವ ಹಾಡುಗಳು ಸಾಮಾನ್ಯವಾಗಿ ಶೃಂಗಾರ ಪ್ರಧಾನವಾಗಿರುತ್ತಿದ್ದವು. ಏಳು ಕೇರಿ ಮೆರೆದು ಓಕುಳಿಯ ದಿನ ದೇವದಾಸಿಯರ ಮನೆಯ ಗಂಡಸರನ್ನು ಹೊತ್ತುತಂದು ಓಕುಳಿಯ ಹೊಂಡಕ್ಕೆ ಹಾಕುವುದು ಒಂದು ಮನರಂಜನೆಯ ಆಟವಾಗಿರುತ್ತಿತ್ತು. ಮರುದಿನ ಬೆಳಿಗ್ಗೆ ಧ್ವಜ ಇಳಿಸಿದ ಬಳಿಕ ನಡೆಯುವ ಕಡುಬಿನ ಕಾಳಗದಲ್ಲಿ ದೇವದಾಸಿಯರ ಪಾತ್ರ ಮಹತ್ವ ಪಡೆಯುತ್ತದೆ. ಕೇರಿಗಳಿಗೆ ಸುತ್ತಲು ಹೋದ ಶಿವನನ್ನು ಪಾರ್ವತಿ ಮನೆಗೆ ಪ್ರವೇಶಿಸಲು ಬಿಡುವುದಿಲ್ಲ. ಆಗ ಪಾರ್ವತಿ ಮತ್ತು ಶಿವನ ಕಡೆಯವರಿಗೆ ಉಂಟಾದ ಕಾಳಗವನ್ನು ಈ ಕಡುಬಿನ ಕಾಳಗ ಪ್ರತಿನಿಧಿಸುತ್ತದೆ. ಅಡುಗೆ ಶಾಂತಿಯವರು ದೇವಸ್ಥಾನದಲ್ಲೇ ಮಾಡಿದ ಗಟ್ಟಿ ಕಡುಬಿನ ತುಂಡುಗಳನ್ನು ದೇವದಾಸಿಯರು ಪರಸ್ಪರ ಎಸೆದು ಹೊಡೆದಾಡಿಕೊಳ್ಳುತ್ತಾರೆ. ಈಗ ಈ ದೃಶ್ಯವನ್ನು ಮಕ್ಕಳು ಬಾಳೆ ಹಣ್ಣುಗಳನ್ನು ಎಸೆದುಕೊಂಡು ಆಚರಿಸುತ್ತಾರಂತೆ.

ದೇವಸ್ಥಾನದ ವಿಶೇಷ ಹಬ್ಬಹರಿದಿನಗಳಲ್ಲೂ ದೇವದಾಸಿಯರು ನಿಷ್ಠೆಯಿಂದ ಹಾಡು ಮತ್ತು ನರ್ತನ ಸೇವೆಯನ್ನು ಮಾಡುತ್ತಿದ್ದರು. ಬಸರೂರಿಗೆ ಸಮೀಪವಿರುವ ಊರುಗಳ ಜಾತ್ರೆಗಳಿಗೂ ದೇವದಾಸಿಯರನ್ನು ಆಮಂತ್ರಿಸುತ್ತಿದ್ದರು. ದೇವದಾಸಿಯರ ಹಾಡುಕುಣಿತಗಳಿರುವುದು ಆ ಕಾಲದಲ್ಲಿ ಪ್ರತಿಷ್ಠೆಯ ವಿಷಯವಾಗಿತ್ತು. ಅದಲ್ಲದೆ ಆ ಕಾಲದಲ್ಲಿ ಮದುವೆ ಮುಂತಾದ ಶುಭ ಸಮಾರಂಭಗಳಿಗೂ ಇವರನ್ನು ಆಮಂತ್ರಿಸುತ್ತಿದ್ದರು. ಹಾಗೆ ಆಮಂತ್ರಿಸುವವರು ದೇವಸ್ಥಾನದ ಮೊಕೇಸರರ ಅನುಮತಿಯನ್ನು ಪಡೆಯಬೇಕು. ಮದುವೆಯ ದಿಬ್ಬಣದ ಮುಂಭಾಗದಲ್ಲಿ ಇವರು ಮೇಳದೊಂದಿಗೆ ಹಾಡುತ್ತಾ ಕುಣಿಯುತ್ತಾ ಹೋಗುತ್ತಿದ್ದರು. ಮದುವೆ ಚಪ್ಪರದಲ್ಲಿ ರಸಿಕರನ್ನು ಮೆಚ್ಚಿಸುವ 'ದೌಲತ್ ಜ್ಯಾದ ಎಂಬ ಕಾರ್ಯಕ್ರಮವು ವಿಶೇಷವಾಗಿತ್ತು. 'ದೌಲತ್‌ಜ್ಯಾದ' ಎಂದರೆ ಸಂಪತ್ತು ಹೆಚ್ಚಾಗಲಿ ಎಂಬ ಹಾರೈಕೆ, ಈ ಹಿಂದಿ ಭಾಷೆಯ ಪದವು ರೂಢಿಗೆ ಬರಲು ಉತ್ತರ ಭಾರತದ ನಾಚ್‌ವಾಲಿಗಳಿಂದ ಪ್ರೇರಣೆ ಪಡೆದಿರಬಹುದು ಎಂದು ನನಗನಿಸುತ್ತಿದೆ. ನರ್ತನ ಪ್ರದರ್ಶನ ನಡೆಯುತ್ತಿರುವಾಗ ಈ ಸಭೆಯಲ್ಲಿ ನೆರೆದ ಯಾರಾದರೊಬ್ಬರು ಪ್ರಮುಖ ಶ್ರೀಮಂತನ ಹೆಸರು ಹೇಳಿ ದೌಲತ್‌ಜ್ಯಾದ ಎಂದು ಹೇಳಿ ಹಣವನ್ನು ಎಸೆಯುತ್ತಿದ್ದರು. ನರ್ತಕಿಯು ಆ ಪ್ರಮುಖರ ಬಳಿಗೆ ಹೋಗಿ, ಗಂಧ, ಅಕ್ಷತೆ, ಹೂವು, ಪನ್ನೀರುಗಳಿಂದ ಉಪಚರಿಸಿ ಅವರ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದಳು. ಆಗ ಉಪಚಾರ ಪಡೆದ ಪ್ರಮುಖರು ತನ್ನ ಹೆಸರನ್ನು ಹೇಳಿದವರಿಗೆ ದೌಲತ್‌ಜ್ಯಾದ ಎಂದು ಹೇಳಿ ಅವರಿಗಿಂತ ಹೆಚ್ಚು ಹಣವನ್ನು ಎಸೆಯುವುದು ಪ್ರತಿಷ್ಠೆಯ ಸಂಗತಿಯಾಗಿರುತ್ತಿತ್ತು. ಉತ್ತರಭಾರತದಲ್ಲೂ ಹೀಗೆ ಹಣವನ್ನು ಪರಸ್ಪರ ಪೈಪೋಟಿಯಿಂದ ಎಸೆಯುವ ಕಾರ್ಯಕ್ರಮವಿರುತ್ತಿತ್ತು. ದೇವದಾಸಿಯರಿಗೆ ರಾಜಮಹಾರಾಜರೊಂದಿಗೂ ನಂಟು ಇರುತ್ತಿದ್ದ ಕಾರಣ ಈ ಹಣ ಎಸೆಯುವ ಪದ್ಧತಿ ಬಂದಿರಬಹುದು. ಈ ಸಂಗ್ರಹವಾದ ಹಣದಲ್ಲಿ ಒಂದಂಶವನ್ನು ದೇವಸ್ಥಾನಕ್ಕೆ ನೀಡುತ್ತಿದ್ದರು. ಬಸರೂರಿನ ದೇವದಾಸಿಯರು ಹಾಡುತ್ತಿದ್ದ ಹಾಡುಗಳಲ್ಲಿ ತೆಲುಗು ಪದಗಳು ಇರುವ ಕಾರಣ ವಿಜಯನಗರದರಸರ ಕಾಲದಲ್ಲಿ ಇಲ್ಲಿಗೆ ಬಂದ ನರ್ತಕಿಯರು ಅಥವಾ ಇಲ್ಲಿಂದ ಅಲ್ಲಿಗೆ ಹೋಗಿ ಬಂದ ಪಾಳೆಯಗಾರರು ತಮ್ಮ ಜೊತೆ ಕರೆತಂದವರು ಈ ಪದ್ಧತಿಯನ್ನು ಮತ್ತು ಹಾಡುಗಳನ್ನು ಇಲ್ಲಿಗೆ ತಂದಿರಬಹುದು. ನಮ್ಮ ಜಿಲ್ಲೆಯೊಳಗೆ ಇರುವ ದೇವಸ್ಥಾನಗಳಿಗೂ ಬೇರೆ ಕಡೆಗಳಿಂದ ದೇವದಾಸಿಯರನ್ನು ಕರೆಸಿಕೊಳ್ಳುತ್ತಿದ್ದರು ಎಂದು ಡಾ. ಕನರಾಡಿಯವರಿಗೆ ಸಂದರ್ಶನ ನೀಡಿದ ದೇವದಾಸಿಯರು ಹೇಳಿಕೊಂಡಿದ್ದಾರೆ. ಬಸರೂರಿನ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ನರ್ತನ ಸೇವೆಗಾಗಿ ಹಿರಿಯಡ್ಕದಿಂದ ಇಬ್ಬರು ಹೆಣ್ಣುಮಕ್ಕಳನ್ನು ಕರೆಸಿ ಮನೆ, ಉಂಬಳಿ ನೀಡಿ ಸೇವೆಗೆ ವ್ಯವಸ್ಥೆ ಮಾಡಿದರೆಂದು ಅವರೇ ಹೇಳಿಕೊಂಡಿದ್ದಾರೆ.

ಬಸರೂರಿನ ದೇವದಾಸಿ ಮನೆತನದವರು ಸಂಗೀತದಲ್ಲಿ ಕರ್ನಾಟಕ ಮತ್ತು ಹಿಂದೂಸ್ತಾನಿ ಎರಡೂ ಶೈಲಿಯನ್ನು ಅಭ್ಯಾಸ ಮಾಡಿದ ವಿದುಷಿಯರಾಗಿದ್ದರು. ಅದಲ್ಲದೆ ಜಲತರಂಗ, ವೀಣೆ, ಪಿಟೀಲು, ಹಾರ್ಮೋನಿಯಂ ವಾದನದಲ್ಲೂ ಪರಿಣತರಾಗಿದ್ದರು. ಕಲೆಯಲ್ಲಿ ಪಾರಂಗತರಾದುದರಿಂದಲೇ ಇವರನ್ನು ಕಲಾವಂತ ಸಮಾಜದವರೆಂದು ಕರೆಯುತ್ತಿದ್ದರು. ಅನೇಕರು ಸಂಗೀತ ಶಿಕ್ಷಣ ನೀಡುವ ಸೇವೆಯಲ್ಲಿದ್ದರು. ದೇವದಾಸಿಯರನ್ನು ಇಟ್ಟುಕೊಂಡ ಶ್ರೀಮಂತರು ಅವರಿಗೆ ಅವರ ಮಕ್ಕಳಿಗೆ ಸಾಕಷ್ಟು ಭೂಮಿ ಉಂಬಳಿ ಬಿಟ್ಟ ಉದಾಹರಣೆಗಳಿವೆ. ಬಸರೂರಿನ ಹಿರಿಯ ದೇವದಾಸಿ ಚಂದ್ರಾವತಿ ನಾಯಕ್ ಸಾನಿ ಮತ್ತು ಗೌರಿ ನಾಯಕ್ ಸಾನಿಯವರನ್ನು ಶಾರದಾ ಮಹೋತ್ಸವ ಸಮಿತಿಯವರು ದೊಡ್ಡ ಸಮಾರಂಭದಲ್ಲಿ ಸನ್ಮಾನಿಸಿದುದನ್ನು ಪ್ರೊ. ಕನರಾಡಿ ವಾದಿರಾಜ ಭಟ್ಟರು ದಾಖಲಿಸಿದ್ದಾರೆ. ಈ ದೇವದಾಸಿಯರು ಮೃತರಾದರೆ ಅವರ ಮಗ ಅಥವಾ ಅಕ್ಕ ತಂಗಿಯರ ಮಕ್ಕಳು ಅಂತ್ಯ ಸಂಸ್ಕಾರ ಮಾಡುತ್ತಿದ್ದರು. ಆಕೆ ಸತ್ತು ಅವಳ ದಹನ ಕ್ರಿಯೆ ಆಗುವ ವರೆಗೆ ದೇವಸ್ಥಾನದಲ್ಲಿ ಪೂಜೆ ನಡೆಯುವುದಿಲ್ಲ. ಕೊನೆಯ ಸಮಾರಾಧನೆ ಕಾರ್ಯಕ್ರಮ ದೇವಸ್ಥಾನದಲ್ಲೇ ನಡೆಯುತ್ತಿತ್ತು. ಇವರ ಅಂತಿಮ ಸಂಸ್ಕಾರದಲ್ಲಿ ವೈದಿಕ ಕ್ರಮವೂ ಇದೆ. ಜಾನಪದ ಆಚರಣೆಗಳೂ ಇವೆ. ಹಬ್ಬ ಹರಿದಿನಗಳಲ್ಲಿ ದೇವದಾಸಿಯರು ಸಸ್ಯಾಹಾರಿಗಳಾಗಿರುತ್ತಿದ್ದರು. ಉಳಿದ ದಿನಗಳಲ್ಲಿ ಮಾಂಸಾಹಾರಿಗಳಾಗಿರುತ್ತಿದ್ದರು.

ದೇವದಾಸಿ ಪದ್ಧತಿ ನಿಷೇಧಗೊಂಡ ಮೇಲೆ ಈ ಕಲಾವಂತ ದೇವದಾಸಿ ಸಮುದಾಯವೇ ಮಾಯವಾಗಿದೆ. ದೇವದಾಸಿಯರ ಮಕ್ಕಳು ಮದುವೆಯಾಗಿ ಗೃಹಸ್ಥ ಜೀವನನ್ನು ನಡೆಸುತ್ತಿದ್ದಾರೆ. ಹಿಂದೆ ದೇವದಾಸಿಯರು ಮದುವೆಯಾಗುವುದು ನಿಷಿದ್ಧವಾಗಿತ್ತು. ಈಗ ಈ ಕಲಾವಂತ ಸಮಾಜದವರು ಬ್ರಾಹ್ಮಣ, ಬಂಟ, ಗಾಣಿಗ ಮುಂತಾದ ಬೇರೆ ಬೇರೆ ಜಾತಿಗಳ ಜೊತೆಗೆ ಮದುವೆ ಯಾಗಿ ಆಯಾ ಸಮಾಜದ ಸದಸ್ಯರೇ ಆಗಿದ್ದಾರೆ. ದೇವದಾಸಿ ಪದ್ಧತಿಯು ಒಂದು ಸಾಂಸ್ಕೃತಿಕ ಇತಿಹಾಸವಾಗಿ ಮಾತ್ರ ಉಳಿಯಬಹುದು ಎಂದು ಡಾ. ಕನರಾಡಿಯವರು ಹೇಳುತ್ತಾರೆ. (ಪುಟ 152 ಹೆಸರಾದ ಪಟ್ಟಣ ಬಸರೂರು ಒಂದು ಅಧ್ಯಯನ)

ಬಸರೂರಿನ ದೇವಸ್ಥಾನದ ದೇವದಾಸಿ, ಪದ್ಧತಿಯ ಬಗ್ಗೆ ಒಂದು ಒಂದು ಐತಿಹ್ಯವಿದೆ. ಇದನ್ನು ಡಾ. ರೇಖಾ ಬನ್ನಾಡಿಯವರು ಇದೇ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಹಿಂದೆ ಮಹಾಲಿಂಗೇಶ್ವರನಿಗೆ ತಮ್ಮನ್ನು ಒಪ್ಪಿಸಿಕೊಂಡ ದೇವದಾಸಿಯರು ಅವನೇ ತಮ್ಮ ಪತಿಯೆಂದು ತಾಳಿ ಕಟ್ಟಿಸಿಕೊಳ್ಳುತ್ತಿದ್ದರು. ಯಾರಾದರೂ ಶ್ರೀಮಂತರು ಅವಳನ್ನು ಉಪಪತ್ನಿಯೆಂದು ಸ್ವೀಕರಿಸಿ ಶೋಭನ ಪ್ರಸ್ತ ನೆರವೇರಿಸುತ್ತಿದ್ದರು. ಹೀಗಿರುವಾಗ ಅಲ್ಲಿ ದೇವದಾಸಿಯ ಶೋಭನ ಪ್ರಸ್ತ ನಡೆದ ಮರುದಿನ ಬೆಳಗಾತ ಏಳುವಾಗಲೇ ಅಂತಹ ಹೆಣ್ಣು ಮಕ್ಕಳು ಸಾಯುತ್ತಿದ್ದರು. ಈ ಬಗ್ಗೆ ಕೇರಳದ ಮಂತ್ರವಾದಿಯನ್ನು ಕರೆಸಿ ಕೇಳಿದಾಗ ವೀರಭದ್ರನೇ ಮನುಷ್ಯರೂಪ ತಾಳಿ ಪ್ರಸ್ತದ ದಿನ ರಾತ್ರಿ ಈ ಹೆಣ್ಮಕ್ಕಳ ಸಂಪರ್ಕ ನಡೆಸುತ್ತಿದ್ದುದರಿಂದ ಅವರು ಸಾಯುತ್ತಿದ್ದಾರೆಂದೂ, ಇನ್ನು ಮುಂದೆ ವೀರಭದ್ರನ ಕಾಲಿಗೆ ಸಂಕೋಲೆ ಬಿಗಿದು ನಿಲ್ಲಿಸಬೇಕೆಂದೂ, ಅವನ ಕಾಮದಾಹ ನೀಗಿಸಲು ಅವನೆದುರು ಬತ್ತಲೆ ಪರಮೇಶ್ವರಿಯನ್ನು ನಿಲ್ಲಿಸಬೇಕೆಂದೂ ಪರಿಹಾರ ನೀಡಿದನಂತೆ. ಆ ಮಂತ್ರವಾದಿಯ ಮಾತಿನಂತೆ ಈಗಲೂ ದೇವಸ್ಥಾನದಲ್ಲಿ ಸಂಕಲೆ ಬಿಗಿದ ವೀರಭದ್ರ ಮೂರ್ತಿ, ಮಲೆಯಾಳಿ ಬೊಬ್ಬರ್ಯನ ಪ್ರತಿಮೆಯನ್ನೂ ನಿಲ್ಲಿಸಿದ್ದಾರೆ. ಈ ಐತಿಹ್ಯ ಕತೆಯ ಹಿಂದೆ ನಡೆದಿರಬಹುದಾದ ಒಂದು ಘಟನೆ ಇದ್ದೇ ಇದೆ. ದೇವದಾಸಿಯರಾದ ಹೆಣ್ಣುಮಕ್ಕಳ ಪ್ರಸ್ತದ ದಿನ ಸಾಯುತ್ತಿದ್ದ ಘಟನೆ ಸತ್ಯವಿರಬಹುದು ಮಲೆಯಾಳೀ ಮಾಂತ್ರಿಕ ನೀಡಿದ ಪರಿಹಾರ ಮಾತ್ರ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ. ಶಿವನ ಒಂದು ರೂಪವಾದ ವೀರಭದ್ರನ ಮೇಲೆ ಹೀಗೊಂದು ಅಪವಾದ ಹೊರಿಸಿದ್ದು ಮತ್ತು ದಾಹ ಇಂಗಿಸಲು ಬತ್ತಲೆ ಪರಮೇಶ್ವರಿಯನ್ನು ನಿಲ್ಲಿಸಿದ್ದು ವಿಕೃತ ಕಾಮಿಗಳನ್ನು ನಿಯಂತ್ರಿಸುವ ಸಾಮಾನ್ಯ ಲೌಕಿಕ ಪರಿಹಾರವಾಗಿ ಕಾಣಿಸುತ್ತಿದೆ. ಮೈನರೆದ ಕೂಡಲೇ ಪ್ರಸ್ತವನ್ನು ನಡೆಸುತ್ತಿದ್ದುದರಿಂದ ಅಪ್ರಾಪ್ತ ವಯಸ್ಸಿನ ಬಾಲಕಿಯರು ಅತ್ಯಾಚಾರಕ್ಕೊಳಗಾಗಿ ಸಾವನ್ನಪ್ಪುವ ಸಂಭವವಿತ್ತೆ ಎಂಬ ಸಂಶಯ ನನ್ನನ್ನು ಕೊರೆಯುತ್ತಿದೆ. ದೇವರನ್ನೇ ಬಂಧಿಸಿಟ್ಟ ಮೇಲೆ ತಾವೂ ಸ್ವಲ್ಪ ಎಚ್ಚರಿಕೆವಹಿಸಬೇಕು ಎಂಬ ಮನಸ್ಥಿತಿಯು ದೇವದಾಸಿಯರ ಪ್ರಸ್ತದ ಕಾರ್ಯಕ್ರಮವನ್ನು ನಡೆಸುತ್ತಿದ್ದ ಶ್ರೀಮಂತರಲ್ಲಿ ಉಂಟಾಗಲಿ ಎಂಬ ಸಂದೇಶವನ್ನು ಈ ಕತೆಯು ಸಾರುತ್ತಿರಬಹುದೇ ಎಂದು ನನ್ನ ಮನಸ್ಸಿನಲ್ಲಿ ಪ್ರಶ್ನೆಗಳೇಳುತ್ತವೆ. ಯಾಕೆಂದರೆ ಮೈನೆರೆದ ಕೂಡಲೇ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಕಾಮಾತುರನಾದ ವ್ಯಕ್ತಿ ಅತ್ಯಾಚಾರ ಮಾಡಿದ್ದರಿಂದ ಆಕೆಯ ಸಾವು ಸಂಭವಿಸಿರಬಹುದು ಎಂದು ಅನಿಸುತ್ತಿಲ್ಲವೇ?

ಬಸರೂರಿನ ಕಲಾವಂತರ ಮನೆತನದ ಶ್ರೀಯುತ ಕಿರಣ್ ಅವರನ್ನು ಭೇಟಿ ಮಾಡಿ ಈ ಪದ್ಧತಿಯ ಬಗ್ಗೆ ವಿಚಾರಿಸಿದಾಗ ಅವರು ಬೆರಗಾದರು. ಸತ್ತು ಹೋಗಿರುವ ಈ ಪದ್ಧತಿಯ ಬಗ್ಗೆ ಅವರ ಚರಿತ್ರೆಯ ಬಗ್ಗೆ ಯಾವ ನೆನಪೂ ಉಳಿದಿಲ್ಲವೆಂದರು. ಯಾಕೆಂದರೆ ಅವರಿಗಿಂತ ಮೂರು ತಲೆಮಾರುಗಳ ಹಿಂದೆಯೇ ಈ ಪದ್ಧತಿ ನಾಶವಾಗಿದೆ. ಈಗ ಆ ಮನೆತನದವರು ಈಗ ದೇಶವಿದೇಶಗಳಲ್ಲಿ ಡಾಕ್ಟರು, ಇಂಜಿನಿಯರುಗಳಾಗಿ ಬೇರೆ ಬೇರೆ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಯಾರೂ ತಾವು ಕಲಾವಂತ ಸಮುದಾಯದವರೆಂದು ಹೇಳಿಕೊಳ್ಳಲು ಇಚ್ಛಿಸುವುದಿಲ್ಲವೆಂದರು. ಯಾಕೆಂದರೆ ಸಮಾಜದಲ್ಲಿ ಆ ಸಮುದಾಯದ ಬಗ್ಗೆ ಕೆಲವು ಮಿಥ್ಯಗಳು, ಅಪಕಲ್ಪನೆಗಳು ಹೇಗೋ ಹುಟ್ಟಿಕೊಂಡು ಅವರನ್ನು ವಕ್ರದೃಷ್ಟಿಯಿಂದ ನೋಡಲಾಗುತಿತ್ತು. ಕಲಾವಂತರು ನರ್ತನ, ಸಂಗೀತ ಮುಂತಾದ ಕಲೆಗಳ ಆರಾಧಕರಾಗಿ ದೇವರಿಗೆ ನಿಷ್ಠರಾಗಿ, ಸಮಾಜದಲ್ಲಿ ಹಿಂದೆ ಗೌರವದಿಂದ ಬಾಳುತ್ತಿದ್ದರು. ಜೀವಮಾನವಿಡೀ ಒಬ್ಬನೇ ವ್ಯಕ್ತಿಯ ಆಶ್ರಯದಲ್ಲಿರುತ್ತಿದ್ದರು. ಆದರೂ ಅವರ ಬಗ್ಗೆ ಕಲೆಯ ಬೆಲೆ ಗೊತ್ತಿಲ್ಲದ ಸಾಮಾನ್ಯರು ಹಗುರವಾಗಿ ಮಾತನಾಡುತ್ತಿದ್ದರು. ಕಲಾವಂತ ದೇವದಾಸಿಯರು ಮತ್ತು ಮಾಲೆಯವರು ಒಂದೇ ಅಲ್ಲ. ಮಾಲೆಯವರು ದೇವರಿಗೆ ಚಾಮರ ಬೀಸುವ, ಹೂ ಮಾಲೆ ಕಟ್ಟುವ ಕಾಯಕ ಮಾಡುತ್ತಿದ್ದರು ಎಂದು ಹೇಳಿದರು ಶ್ರೀಯುತ ಕಿರಣ್. ಅವರ ಪೂರ್ವಜರಿಗೆ ಸುಮಾರು 42 ಎಕ್ರೆಯಷ್ಟು ಭೂಮಿ ಉಂಬಳಿಯಾಗಿ ಲಭಿಸಿತ್ತು. ಅವುಗಳಲ್ಲಿ ಹೆಚ್ಚಿನವು ಒಕ್ಕಲು ಮಸೂದೆ ಜಾರಿಯಾದ ಮೇಲೆ ಪರಭಾರೆಯಾಯಿತು. ನಾವು ಅವರನ್ನು ಸಂದರ್ಶಿಸಿದ ಸಂದರ್ಭದಲ್ಲಿ ಅವರ ಮನೆತನದವರು ಆರಾಧಿಸುತ್ತಾ ಬಂದಿದ್ದ ದುರ್ಗಾಪರಮೇಶ್ವರಿಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದರು. ಆ ಗುಡಿಯ ಪಕ್ಕದಲ್ಲಿ ಪಂಜುರ್ಲಿಯ ದೈವದ ಸಣ್ಣ ಗುಡಿಯೂ ಇದೆ. ಅದರಲ್ಲಿ ಪುರಾತನ ಕಾಲದ ಒಂದು ಖಡ್ಗವೂ ದೈವದ ಮಂಚದಲ್ಲಿ ಪೂಜೆಗೊಳ್ಳುತ್ತಿದೆ.

ಈಗಿನ ಹೊಸತಲೆಮಾರಿನವರಿಗೆ ತಮ್ಮ ಪೂರ್ವಜರು ಹೀಗೊಂದು ವೃತ್ತಿಯಲ್ಲಿದ್ದರು ಎಂಬುದೇ ಗೊತ್ತಿಲ್ಲ. ಅದನ್ನು ನೆನಪಿಸಿಕೊಳ್ಳಲಾಗದಷ್ಟು ನಿಂದೆ ಅವಮಾನಗಳನ್ನು ಅಂದಿನ ಸಮಾಜ ಅವರಿಗೆ ನೀಡಿತ್ತು. ಆ ಸಮುದಾಯವೊಂದು ಇಲ್ಲಿ ಜೀವಿಸುತ್ತಿತ್ತು ಎಂಬ ಕುರುಹುಗಳನ್ನೇ ನಾಶ ಮಾಡಬೇಕಾಗಿದೆ ಎಂದು ನೊಂದು ನುಡಿದರು. ಅವರ ನೋವು ನಮಗೆ ಅರ್ಥವಾಯಿತು. ನಮ್ಮ ರಾಜ್ಯದ ಉತ್ತರ ಭಾಗದಲ್ಲಿ ಈಗಲೂ ಅಲ್ಲೊಂದು ಇಲ್ಲೊಂದು ದೇವದಾಸಿಯರು ಈ ವೃತ್ತಿಯನ್ನು ರಹಸ್ಯವಾಗಿ ಆಚರಿಸುತ್ತಾ ಬರುತ್ತಿದ್ದಾರೆ. ಅವರನ್ನು ಈ ಕೆಟ್ಟ ಸಂಪ್ರದಾಯದಿಂದ ಹೊರಗೆ ಎಳೆಯುವ ಅವರಿಗೆ ಪುನರ್ವಸತಿ ಕಲ್ಪಿಸುವ ಕೆಲಸಗಳೂ ನಡೆಯುತ್ತಿವೆ. ಆದರೆ ಕರಾವಳಿಯ ಜಿಲ್ಲೆಯ ದೇವಸ್ಥಾನಗಳಲ್ಲಿ ಈ ಪದ್ಧತಿಯ ಸ್ವಾತಂತ್ರ್ಯ ಪೂರ್ವಕ್ಕಾಗಲೇ ನಾಶವಾಗುತ್ತಾ ಪರಿವರ್ತನೆಯ ದಾರಿಯನ್ನು ಕಂಡುಕೊಂಡಿತ್ತು. ಅದಕ್ಕೆ ಇಲ್ಲಿ ಹೆಣ್ಣು ಮಕ್ಕಳಿಗೆ ಪಾಶ್ಚಾತ್ಯ ಶಿಕ್ಷಣಕ್ಕೆ ದೊರೆತ ಪ್ರೋತ್ಸಾಹ ಮತ್ತು ಇಲ್ಲಿನ ಸಮಾಜ ಸುಧಾರಕರ ಪ್ರಯತ್ನಗಳೂ ಕಾರಣವಾಗಿರಬಹುದು. ಉತ್ತರ ಕರ್ನಾಟಕದಲ್ಲಿ ಇಂತಹ ಕೆಲಸ ನಡೆಯದ ಕಾರಣ ಅಲ್ಲಿನ ಸ್ತ್ರೀಯರು ಈ ಪದ್ಧತಿಯ ಮೌಡ್ಯಕ್ಕೆ ಈಗಲೂ ಬಲಿ ಬೀಳುತ್ತಾರೆ.

ಬಸರೂರಿನಂತೆ ಹಿರಿಯಡ್ಕ, ಪುತ್ತಿಗೆ ಮುಂತಾದ ಪರಿಸರದ ದೇವಸ್ಥಾನಗಳಲ್ಲೂ ದೇವದಾಸಿಯರು ಸೇವೆ ಸಲ್ಲಿಸುತ್ತಿದ್ದರು ಎಂದು ತಿಳಿದು ಬರುತ್ತದೆ.

ಬಸರೂರಿನಲ್ಲಿ ದೇವದಾಸಿ ಸಂಪ್ರದಾಯ

ದೇವದಾಸಿ ಸಂಪ್ರದಾಯದ ಚರಿತ್ರೆಯನ್ನು ಹುಡುಕುತ್ತಾ ಬಸರೂರಿಗೆ ಹೋದಾಗ ಅಲ್ಲಿನ ಮಾಜಿ ಶಾಸಕರೂ ಮಹಾಲಿಂಗೇಶ್ವರ ದೇವಸ್ಥಾನದ ಮೊತ್ತೇಸರರೂ ಆದ ಅಪ್ಪಣ್ಣ ಹೆಗಡೆಯವರನ್ನು ಭೇಟಿಯಾದೆವು. ಅವರು ಡಾ. ಕನರಾಡಿ ವಾದಿರಾಜ ಭಟ್ಟರನ್ನು ಸಂಪರ್ಕಿಸಲು ಹೇಳಿದರು. ಡಾ. ಕನರಾಡಿಯವರು ಬರೆದ 'ದೇವದಾಸಿಯರ ಹಾಡುಗಳು' ಎಂಬ ಪುಸ್ತಕವನ್ನು ನೀಡಿದರು. ಆ ಕೃತಿಯಿಂದ ಒಂದಷ್ಟು ಮಾಹಿತಿಯನ್ನು ಸಂಗ್ರಹಿಸಿದೆವು. ದೇವಸ್ಥಾನದ ಸುತ್ತು ಮುತ್ತಲ ಪ್ರದೇಶಗಳನ್ನು ಸಂದರ್ಶಿಸಿ ಅಲ್ಲಿನ ಪ್ರಸಿದ್ಧ ಕೇರಿಗಳು, ದೇವಸ್ಥಾನಗಳು ಮತ್ತು ಕೆರೆಗಳನ್ನು ವೀಕ್ಷಿಸಿದೆವು. ಅಲ್ಲಿ ನಮಗೆ ಸಂಪನ್ಮೂಲ ವ್ಯಕ್ತಿಯಾಗಿ ಒದಗಿ ಬಂದವರು ಪ್ರದೀಪ್ ಬನ್ನೂರು ಎಂಬ ಸಾಮಾಜಿಕ ಕಾಳಜಿಯುಳ್ಳ ತರುಣ. ಅವರು ಕೆಲವು ಮಂದಿ ಹಿರಿಯರನ್ನು ಸಂಪರ್ಕಿಸಲು ನೆರವಾದರು. ಹಾಗೆ ನಾವು ಸಂದರ್ಶಿಸಿದ ಮಹಾನುಭಾವರೊಬ್ಬರು ಶತಮಾನದ ಹಿಂದೆ ನಾಟಕ ಕಂಪೆನಿಯೊಂದನ್ನು ಕಟ್ಟಿ ಹಲವು ಪ್ರಸಿದ್ಧ ನಾಟಕಗಳನ್ನು ಆಡಿಸಿದ ನೀಲಮಣಿ ನಾಟಕ ಕಂಪೆನಿಯ ಬಗ್ಗೆ ತಮಗೆ ಗೊತ್ತಿದ್ದ ವಿಷಯಗಳನ್ನು ನಮ್ಮೊಂದಿಗೆ ಹಂಚಿಕೊಂಡರು. ಅವರ ಮಾತಿನಂತೆ ಈ ಕಂಪೆನಿಯಲ್ಲಿ ದೇವದಾಸಿ ಸಮುದಾಯದ ಹೆಂಗಸರೇ ನಾಟಕ ನಿರ್ದೇಶಿಸುತ್ತಿದ್ದು, ನಾಟಕಗಳ ಪಾತ್ರಗಳ ಆಯ್ಕೆ, ಹಂಚಿಕೆ, ವೇಷಭೂಷಣ ಇತ್ಯಾದಿಗಳನ್ನು ಅವರೇ ನಿರ್ವಹಿಸುತ್ತಿದ್ದರು. ಅವರ ಸಮುದಾಯದ ಗಂಡಸರು ಹಿಮ್ಮೇಳ, ವೇದಿಕೆ, ಪ್ರಚಾರ ಇತ್ಯಾದಿಗಳ ಜವಾಬ್ದಾರಿ ವಹಿಸುತ್ತಿದ್ದರು. ದೇವದಾಸಿ ಸಮುದಾಯದವರೆಲ್ಲರೂ ಒಂದಲ್ಲ ಒಂದು ಕಲೆಯಲ್ಲಿ ಪರಿಣತಿಯನ್ನು ಹೊಂದಿದ್ದರಿಂದ ನಾಟಕ ಕಂಪೆನಿ ನಡೆಸುವುದು ಸುಲಭವಾಯಿತು. ಸಂಗೀತದ ಜೊತೆಗೆ ಹಾರ್ಮೋನಿಯಂ, ಜಲತರಂಗ, ತಬಲಾ, ಮೃದಂಗ ಮುಂತಾದ ಎಲ್ಲಾ ರೀತಿಯ ಸಂಗೀತ ಪರಿಕರ ಗಳನ್ನೂ ಹಿಮ್ಮೇಳದಲ್ಲೂ ಬಳಸಿಕೊಳ್ಳಲು ಅವರಿಗೆ ಸಾಧ್ಯವಾಯಿತು. ಅವರಿಗೆ ನೆನಪಿರುವಂತೆ ಗಂಗಪ್ಪ ಎಂಬ ಕಲಾವಿದರು ಸಂಗೀತದಲ್ಲಿ ವಿದ್ವಾಂಸರಾಗಿದ್ದರು. ಕನ್ನಡ ಚಲನಚಿತ್ರ ನಟ ಶ್ರೀನಿವಾಸ ಮೂತಿಯವರು ಇವರ ಶಿಷ್ಯನಾಗಿ ಸಂಗೀತ ಪಾಠ ಕಲಿತ ಭಾಗ್ಯವನ್ನು ಹಿಂದೆ ಒಂದು ವೇದಿಕೆಯಲ್ಲಿ ಹಂಚಿಕೊಂಡದ್ದನ್ನು ಕೇಳಿದ್ದೇನೆ ಎಂದರು. ಆ ನಾಟಕ ಕಂಪೆನಿಯಲ್ಲಿ ಸ್ತ್ರೀಯರು ಎಲ್ಲಾ ರೀತಿಯ ಪಾತ್ರಗಳನ್ನು ಕೂಡಾ ಅಂದರೆ ಪುರುಷ ಪಾತ್ರವನ್ನೂ ಮಾಡುವ ಪ್ರತಿಭೆ ಮತ್ತು ಸಾಮರ್ಥ್ಯ ಪಡೆದಿದ್ದರು. ಹಲವು ವರ್ಷಗಳ ಕಾಲ ನಮ್ಮ ಜಿಲ್ಲೆಯಲ್ಲಿ ಈ ನಾಟಕ ಕಂಪೆನಿ ಪ್ರಸಿದ್ಧಿಯನ್ನು ಪಡೆಯಿತು. ಆಮೇಲೆ ಇನ್ನೊಂದು ನಾಟಕ ಕಂಪೆನಿಯೂ ಹುಟ್ಟಿಕೊಂಡ ಕಾರಣ ಪೈಪೋಟಿಯನ್ನು ಎದುರಿಸಲಾರದೆ ನೀಲಮಣಿ ನಾಟಕ ಕಂಪೆನಿಯು ತನ್ನ ಪ್ರದರ್ಶನಗಳನ್ನು ಕಡಿಮೆ ಮಾಡಿತು. ದೂರದ ಸ್ಥಳಗಳಿಗೆ ಹೋಗಿ ಪ್ರದರ್ಶನ ನೀಡುವುದು ಆರ್ಥಿಕ ದೃಷ್ಟಿಯಿಂದ ಸ್ವಲ್ಪ ಹೊರೆ ಎನಿಸಿತು. ಸ್ಥಳೀಯವಾಗಿ ಈ ನಾಟಕ ಕಂಪೆನಿಯು ತನ್ನ ಕಲಾಸೇವೆಯನ್ನು ಮುಂದುವರಿಸಿತು. ನೀಲಮಣಿಯವರು ಬದುಕಿರುವವರೆಗೂ ಈ ಕಂಪೆನಿಯ ನಾಟಕ ಕಲಾಸೇವೆ ನಿರಂತರವಾಗಿ ನಡೆಯುತ್ತಿತ್ತು. ಅಂತೂ ನೀಲಮಣಿ ನಾಟಕ ಕಂಪೆನಿಯು ನಾಟಕ ಕ್ಷೇತ್ರದ ಚರಿತ್ರೆಯಲ್ಲಿ ಹೊಸ ಅಧ್ಯಾಯವನ್ನು ಬರೆಯಿತು. ಒಂದರ್ಥದಲ್ಲಿ ಅದು ಸುವರ್ಣ ಅಧ್ಯಾಯವಾಯಿತು. ಯಾಕೆಂದರೆ ದಕ್ಷಿಣ ಕನ್ನಡದಲ್ಲಿ ಸ್ವಂತ ನಾಟಕ ಕಂಪೆನಿಗಳೇ ಇಲ್ಲದ ಕಾಲದಲ್ಲಿ ದೇವದಾಸಿಯರೇ ತಮ್ಮ ಸ್ವಸಾಮರ್ಥ್ಯ ಮತ್ತು ಪ್ರತಿಭೆಯಿಂದ ಸ್ಥಾಪಿಸಿದ ಈ ಕಂಪೆನಿಯು ನಮ್ಮ ಜಿಲ್ಲೆಯ ಕಲಾಕ್ಷೇತ್ರದಲ್ಲಿ ಒಂದು ದೊಡ್ಡ ದಾಖಲೆಯನ್ನೇ ಬರೆಯಿತು. ನಾಲ್ಕು ತಲೆಮಾರುಗಳ ಹಿಂದೆ ನಡೆದ ಈ ಚರಿತ್ರೆಯನ್ನು ಈಗಿನವರು ಮರೆತಿರಬಹುದು. ಆದರೆ ನಾಟಕ ಕ್ಷೇತ್ರವು ಮರೆಯಬಾರದು. ಕೆಲವು ವರ್ಷಗಳ ಹಿಂದೆ ಕುಂದಾಪುರದಲ್ಲಿ ಸಾಹಿತ್ಯ ಸಮ್ಮೇಳನವು ನಡೆದಾಗ ವೇದಿಕೆಗೆ ನೀಲಮಣಿಯ ಹೆಸರನ್ನು ಇಡಲಾಗಿತ್ತು ಎಂದೂ ತಿಳಿಸಿದರು.

ಇನ್ನು ಇಲ್ಲಿನ ದೇವದಾಸಿಯರು ಈ ಪದ್ಧತಿ ನಿಷೇಧಗೊಂಡ ಮೇಲೆ ' ಮನೆಯಲ್ಲೇ ಸಂಗೀತ ಕ್ಲಾಸುಗಳನ್ನು ನಡೆಸುತ್ತಿದ್ದರು. ಕೆಲವರು ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಎರಡರಲ್ಲೂ ಪರಿಣತಿಯನ್ನು ಆ ಕಾಲದಲ್ಲಿ ಅವರಲ್ಲಿ ಪಡೆದಿದ್ದರು. ಅವರಿಗೆ ನೃತ್ಯ, ಸಂಗೀತ ಶಿಕ್ಷಣವನ್ನು ಕೊಡಿಸಲು ಬೇರೆ ಬೇರೆ ಕಡೆಗಳಿಂದ ಶಿಕ್ಷಕರನ್ನು ಕರೆಸಲಾಗುತ್ತಿತ್ತು. ಒಂದರ್ಥದಲ್ಲಿ ಸಂಗೀತ ಕಲೆಯನ್ನು ಮತ್ತು ನೃತ್ಯ ಕಲೆಯನ್ನು ಉಳಿಸಿ ಬೆಳೆಸಿದ ಕೀರ್ತಿಯೆಲ್ಲಾ ಈ ದೇವದಾಸಿ ಸಮುದಾಯದವರಿಗೆ ಸಲ್ಲಬೇಕು.

ಒಂದು ಕಾಲದಲ್ಲಿ ಈ ಸಮುದಾಯದವರನ್ನು ಸಮಾಜವು ಬಹಳ ಗೌರವದಿಂದ ಕಾಣುತ್ತಿತ್ತು. ದೇವಸ್ಥಾನ ಮಾತ್ರವಲ್ಲ ಊರಿನ ಎಲ್ಲಾ ಮಂಗಳ ಕಾರಗಳಲ್ಲೂ ಇವರಿಗೆ ಆಮಂತ್ರಣವಿರುತ್ತಿತ್ತು. ಈ ಕಾರ್ಯಕ್ರಮಗಳಲ್ಲಿ ಅವರ ಉಪಸ್ಥಿತಿಯು ಕುಟುಂಬಕ್ಕೆ ಬಹಳ ಮಂಗಳಕರವೆಂದೂ ನಂಬಿಕೆಯಿತ್ತು. ಅವರು ದೇವಸ್ಥಾನಕ್ಕೆ ತಮ್ಮನ್ನು ಅರ್ಪಿಸಿಕೊಂಡ ಮೇಲೆ ಸಾಂಸಾರಿಕವಾಗಿ ಯಾರಾದರೂ ಒಬ್ಬನಿಗೆ ನಿಷ್ಠರಾಗಿ ಜೀವಮಾನವಿಡೀ ಬಾಳುತ್ತಿದ್ದರು. ಮದುವೆಯಾಗಿ ಗೃಹಿಣಿ ಪಟ್ಟವನ್ನು ಅಲಂಕರಿಸುವಂತೆಯೇ ಆ ಪುರುಷನಿಗೆ ತನ್ನ ಜೀವನವನ್ನು ಮುಡಿಪಾಗಿಡುತ್ತಿದ್ದರು. ಅವನು ತೀರಿದ ಬಳಿಕ ಮತ್ತೆ ಯಾರನ್ನೂ ಕಟ್ಟಿಕೊಳ್ಳದೆ ವೈಧವ್ಯವನ್ನು ಅನುಭವಿಸಿದವರೂ ಅನೇಕರನ್ನು ನಾನು ಕಂಡಿದ್ದೇನೆ. ಹೀಗಿದ್ದರೂ ಆ ಸಮುದಾಯದ ಬಗ್ಗೆ ಕ್ರಮೇಣ ಸಮಾಜದ ದೃಷ್ಟಿ ವಕ್ರವಾಗ ತೊಡಗಿತು. ಈ ಪರಿಸ್ಥಿತಿ ಯಾಕೆ ಮತ್ತು ಹೇಗೆ ಉಂಟಾಯಿತು ಎಂಬ ಬಗ್ಗೆ ನನಗೆ ಆಶ್ಚರ್ಯ ಹಾಗೂ ದುಃಖವುಂಟಾಗುತ್ತದೆ. ಬಹುಶಃ ನನ್ನ ಗಮನಕ್ಕೆ ಬಂದ ಹಾಗೆ ಹೇಳುವುದಾದರೆ ಕೆಲವು ಅನೈತಿಕ ಸಂಪರ್ಕದಿಂದಾಗಿ ಜಾತಿ ಭ್ರಷ್ಟರಾದ ಮಹಿಳೆಯರು ಈ ಸಮುದಾಯದೊಳಗೆ ಪ್ರವೇಶ ಪಡೆದುದರಿಂದ ಮತ್ತು ಅವರು ತಮ್ಮ ಧಾರ್ಮಿಕ ನಿಷ್ಠೆಯನ್ನು ಮೀರಿ ನಡೆಯ ತೊಡಗಿದ್ದರಿಂದ, ಆರ್ಥಿಕ ಅಭಿವೃದ್ಧಿಯತ್ತ ಗಮನ ಕೇಂದ್ರೀಕರಿಸಿದ್ದರಿಂದ ಕ್ರಮೇಣ ಹಿಂದಿನ ಗೌರವವು ಕುಸಿಯಿತು. ತಾವು ದೇವದಾಸಿಯರೆಂದು ಹೇಳಿಕೊಳ್ಳುವುದೇ ಒಂದು ಸಂಕೋಚ ಮತ್ತು ಅವಮಾನಪಡುವ ವಿಷಯವೆಂಬಲ್ಲಿಗೆ ಸಾಮಾಜಿಕ ಮನೋಭಾವನೆ ಬಂದು ಮುಟ್ಟಿತು. ಈಗ ಇರುವ ಈ ಸಮುದಾಯದವರಾರೂ ತಮ್ಮನ್ನು ಕಲಾವಂತ ಸಮುದಾಯದವರೆಂದು ಹೇಳಿಕೊಳ್ಳುವುದಿಲ್ಲ. ಹೆಚ್ಚಿನವರು ಬ್ರಾಹ್ಮಣರು, ಬಂಟರು ಮತ್ತು ಜೈನರನ್ನು ವಿವಾಹವಾಗಿ ಅದೇ ಸಮುದಾಯದೊಳಗೆ ಗುರುತಿಸಿಕೊಂಡಿದ್ದಾರೆ. ಬಹುತೇಕ ಮಂದಿ ಉತ್ತಮ ಶಿಕ್ಷಣ ಪಡೆದು ದೇಶ ವಿದೇಶಗಳಲ್ಲಿ ಅತ್ಯುನ್ನತ ಹುದ್ದೆಗಳಲ್ಲಿ ಕೀರ್ತಿ ಗಳಿಸಿರುವುದನ್ನು ನಾನು ಕಂಡಿದ್ದೇನೆ. ಉತ್ತರ ಕರ್ನಾಟಕದಂತೆ ದೇವದಾಸಿ ಸಮುದಾಯದ ಪರಿಸ್ಥಿತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಲ್ಲ. ಅದರಲೂ ಬಸರೂರಿನಲ್ಲಿ ಇರಲೇ ಇಲ್ಲ ಎಂದು ಹೇಳಿದರು. ಬಸರೂರಿನ ವಿಲಾಸಕೇರಿಯಲ್ಲಿ ವಾಸಿಸುವ ವೇಶ್ಯೆಯರು ಹೆಚ್ಚಾಗಿ ಪರವೂರಿನ ಪುರುಷರ ಕಾಮದಾಹಕ್ಕೆ ಒದಗುತ್ತಿದ್ದರು. ಅದು ಬಸರೂರಿನ ವ್ಯಾಪಾರಿಕಟ್ಟೆ ಮತ್ತು ಮಂಡಿಕೇರಿಗೆ ಸಮೀಪದಲ್ಲೇ ಇತ್ತು. ಡಾ. ಶಿವರಾಮ ಕಾರಂತರ ಕಾಲದಲ್ಲಿ ಬದುಕುತ್ತಿದ್ದ ದೇವದಾಸಿಯರು ಎಂತಹ ಉದಾತ್ತ ಚಿಂತನೆ, ಪ್ರತಿಭೆ, ನಿಯತ್ತು, ಧರ್ಮಶ್ರದ್ಧೆಯಿಂದ ಬದುಕುತ್ತಿದ್ದರೆಂದು ತಮ್ಮ ಕೃತಿಯಲ್ಲಿ ಹೇಳಿರುವರಲ್ಲಾ. ಆ ನಂತರದ ಕಾಲದಲ್ಲಿ ನಾನೂ ಇಂತಹ ಸದ್ಗುಣ ಸಂಪನ್ನರಾದ ಕಲಾವಿದೆಯರು ದೇವದಾಸಿಯರಾಗಿ ಬಾಳಿದ್ದನ್ನು ಕಂಡಿದ್ದೇನೆ ಎಂದು ಕಿರಣ್ ಅವರು ಹೇಳಿದರು.

ಸಂವಾದ

2014ರ ಸೆಪ್ಟೆಂಬರ್ ತಿಂಗಳಲ್ಲಿ ಖ್ಯಾತ ಕವಿಗಳಾದ ನಿಸಾರ್ ಅಹಮದ್ ಅವರು ಪ್ರಜಾವಾಣಿ ಪತ್ರಿಕೆಯಲ್ಲಿ ವೇಶ್ಯಾವೃತ್ತಿಯ ಬಗ್ಗೆ ಒಂದು ಸಂವಾದವನ್ನು ಪ್ರಾರಂಭಿಸಿದರು. ವೇಶ್ಯಾವೃತ್ತಿಗೆ ಕಾನೂನಿನ ಮಾನ್ಯತೆ ಮತ್ತು ರಕ್ಷಣೆ ಬೇಕೆಂದು ಕವಿಗಳ ಅಭಿಪ್ರಾಯವಾಗಿತ್ತು. ಕೆಲವರು ವಿರೋಧಿಸಿದರು. ಕೆಲವರು ಸಮರ್ಥಿಸಿದರು. ಸುರೇಶ್ ಹುಬ್ಬಿಕರ್ ಅವರು ಯಾವುದೇ ವೃತ್ತಿಯೂ ಕೀಳಲ್ಲ. ಜಗತ್ತಿನ ಇತಿಹಾಸದಲ್ಲಿ ನಡೆದ ಕೆಲವು ಘಟನೆಗಳು ವೇಶ್ಯಾ ಸಮೂಹವನ್ನು ಹೊಸ ದೃಷ್ಟಿಕೋನದಿಂದ ನೋಡುವ ಹಾಗೆ ಮಾಡುತ್ತದೆ. ಯುದ್ಧ ಕಾಲದಲ್ಲಿ ಯೋಧರು ವರ್ಷಗಟ್ಟಲೇ ಕುಟುಂಬಗಳನ್ನು ತ್ಯಜಿಸಿ ಬದುಕಬೇಕಾದ ಸಂದರ್ಭ ಗಳಲ್ಲಿ ಅವರು ಮಾನಸಿಕ ಖಿನ್ನತೆಗೆ ಒಳಗಾಗದಂತೆ ರಕ್ಷಿಸಿದವರು ಈ ಸ್ತ್ರೀಯರು. ಅಮೇರಿಕದ ಲಾಸ್ ಎಂಜಲೀಸ್ ಮತ್ತು ಸಾನ್ ಫ್ರಾನ್ಸಿಸ್ಕೋದಲ್ಲಿ ರಸ್ತೆ, ಕಾಲುವೆಗಳ ನಿರ್ಮಾಣಕ್ಕಾಗಿ ಏಷ್ಯಾದಿಂದ ಸಾವಿರಾರು ಕಾರ್ಮಿಕರನ್ನು ತರಿಸಿಕೊಂಡಿದ್ದರು. ಇವರಿಗೆ ಒಂದು ವರ್ಗದ ಸ್ತ್ರೀಯರು ಊಟ, ತಿಂಡಿ ಮತ್ತು ಮನರಂಜನೆಯನ್ನು ಒದಗಿಸಿ ಅವರ ಜೊತೆ ಸಂಸಾರ ನಡೆಸಿದರು. ಇವರ ಸೇವೆಯನ್ನು ಕೀಳಾಗಿ ಕಾಣಲು ಸಾಧ್ಯವೇ? ಎಂದು ಪ್ರಶ್ನಿಸುತ್ತಾರೆ. ಹೀಗೆ ಪ್ರಪಂಚದ ಹಲವಾರು ದೇಶಗಳಲ್ಲಿ ಇದೇ ರೀತಿಯ ಸೇವೆ ಸಲ್ಲಿಸಿದ ಮಹಿಳೆ ಯರಿಂದಾಗಿ ಸಮಾಜದಲ್ಲಿ ನೆಮ್ಮದಿಯ ಜೀವನವು ಸಾಧ್ಯವಾಗಿದೆ. ಜಪಾನ್‌ನ ಟೋಕಿಯೋದಲ್ಲಿ ಜನಸಂಖ್ಯೆ ಅತಿಯಾದ ಕಾರಣ ಸಾವಿರಾರು ಯುವಕರು ಒಂದೇ ಕೋಣೆಯಿರುವ ಅಪಾರ್ಟ್‌ಮೆಂಟ್‌ಗಳಲ್ಲಿ ವಾಸಿಸುತ್ತಾರೆ. ತಮ್ಮ ಮಾನಸಿಕ ಮತ್ತು ದೈಹಿಕ ಒತ್ತಡಗಳನ್ನು ನೀಗಿಸಲು 'ಗೀಷ' ಎಂಬ ಸ್ತ್ರೀಯರ ಬಳಿಗೆ ಹೋಗುತ್ತಾರೆ. ಯುವಕರಿಗೆ ಜೀವನದಲ್ಲಿ ತೃಪ್ತಿ ಇದೆ. ಹುರುಪಿನಿಂದ ದುಡಿಯುತ್ತೇವೆ. ಸಂಸಾರವಿಲ್ಲದೆ ನೆಮ್ಮದಿಯಿಂದ ಬದುಕುತ್ತೇವೆ ಎಂದು ಅಲ್ಲಿನ ಯುವಕರು ಸುರೇಶ್ ಅವರಲ್ಲಿ ಹೇಳಿಕೊಂಡರಂತೆ. ಹೀಗಿರುವಾಗ ಈ ವೃತ್ತಿಯ ಬಗ್ಗೆ ಸಮಾಜದ ದೃಷ್ಟಿಕೋನ ಬದಲಾಗಲೇಬೇಕು ಎಂದು 2014ರ ಸೆಪ್ಟೆಂಬರ್ 25ನೇ ತಾರೀಕಿನ ಪ್ರಜಾವಾಣಿ ಪತ್ರಿಕೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

2017ರ ಜುಲೈ ತಿಂಗಳ ಮೊದಲ ವಾರದಲ್ಲಿ ಪತ್ರಿಕೆಯಲ್ಲಿ ವೇಶ್ಯಾವಾಟಿಕೆಯ ಬಗ್ಗೆ ಹಲವಾರು ಕಂತುಗಳಲ್ಲಿ ಬಹಳ ವಿಸ್ತ್ರತವಾದ ವರದಿಯೊಂದು ಪ್ರಕಟ ವಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವೆಯಾಗಿದ್ದ ಜಯಮಾಲಾ ಅವರ ನೇತೃತ್ವದಲ್ಲಿ ವೇಶ್ಯೆಯರ ಬಗ್ಗೆ ಒಂದು ಅಧ್ಯಯನ ನಡೆದಿತ್ತು. ಈ ಜಾಲಕ್ಕೆ ಸಿಲುಕಿದ ಹೆಣ್ಣು ಮಕ್ಕಳ ಅಂತರಾಳವನ್ನು ಈ ವರದಿ ಬಿಚ್ಚಿಟ್ಟಿತು. ಕೇವಲ 100 ದಿಂದ 5000 ರೂಪಾಯಿಗಳಿಗೆ ಮಾರಾಟವಾದ ಹೆಣ್ಣು ಮಕ್ಕಳು ಶಾಲಾ ವಯಸ್ಸಿನ ಬಾಲೆಯರು. ಹೆತ್ತವರು, ಒಡಹುಟ್ಟಿದವರು, ಮಾತ್ರವಲ್ಲ ಉಪಾಧ್ಯಾಯರೂ ಕೂಡಾ ಮಾರಾಟದಲ್ಲಿ ಭಾಗಿಯಾದ ಸತ್ಯವನ್ನು ಪ್ರಕಟ ಪಡಿಸಿತು. ಮಕ್ಕಳ ಕಳ್ಳಸಾಗಣೆಯು ನೇರವಾಗಿ ವೇಶ್ಯಾವಾಟಿಕೆಯ ದಂಧೆಗೆ ಬಳಸಲ್ಪಡುತ್ತದೆ. ಬಡತನ, ವಲಸೆ, ಬರಗಾಲ, ಅತಿವೃಷ್ಟಿ, ನಿರುದ್ಯೋಗಗಳು, ಬಾಲ್ಯ ವಿವಾಹ, ವೈವಾಹಿಕ ಜೀವನದ ಬಿರುಕುಗಳು ಈ ಜಾಲಕ್ಕೆ ಬೀಳಲು ಕಾರಣಗಳಾಗಿವೆ. ವಿಪರ್ಯಾಸವೆಂದರೆ ಈ ಹೆಣ್ಣು ಮಕ್ಕಳಿಗೆ ತಾವು ಮಾರಾಟವಾಗಿದ್ದೇವೆ ಎಂದು ಅರಿವೇ ಇರುವುದಿಲ್ಲ. ವಿವಾಹದ ನೆಪದಲ್ಲಿ ನಡೆವ 'ಗುಜ್ಜರ್ ಮದುವೆ'ಗಳು ಇದಕ್ಕೆ ಸಾಕ್ಷಿಯಾಗಿವೆ. ಮದುವೆ ಒಂದು ನೆಪ ಮಾತ್ರ ಮಾರಾಟಕ್ಕೆ ಈ ವಧು ಮುಂದೆ ವೇಶ್ಯೆಯಂತೆಯೇ ಎಲ್ಲರಿಗೂ ದೇಹಸುಖ ಕೊಡುವ ವಸ್ತುವಾಗಿ ಉಪಯುಕ್ತಳಾಗುತ್ತಾಳೆ. ಈ ಅಧ್ಯಯನವು ಭಾರತೀಯ ವಿವಾಹ ವ್ಯವಸ್ಥೆಯ ವಿಪನ್ಯಾಸಕ್ಕೆ ಕೈಗನ್ನಡಿಯಾಗಿದೆ ಏಕೆಂದರೆ ಈ ದಂಧೆಯಲ್ಲಿ ವಿವಾಹಿತರೇ ಹೆಚ್ಚು ಎಂಬ ಸತ್ಯವನ್ನು ತಿಳಿಸುತ್ತದೆ. ಕರ್ನಾಟಕದಲ್ಲೂ ರೆಡ್ ಲೈಟ್ ಏರಿಯಾಗಳಿರುವುದನ್ನು ಈ ಅಧ್ಯಯನ ಕಂಡು ಹಿಡಿದಿದೆ. ಉತ್ತರ ಕರ್ನಾಟಕದಲ್ಲೂ ಅದರಲ್ಲೂ ಬಾಗಲಕೋಟೆಯ ಚಿಮ್ಮಡ, ರಬಕವಿ, ಜಮಖಂಡಿಗಳಲ್ಲಿ ಈ ದಂಧೆ ನಡೆಸುವ ಕೆಂಪು ಪ್ರದೇಶಗಳಿವೆ. ಇಲ್ಲಿಂದ ನೆರೆಯ ಮುಂಬಯಿ, ಮೀರಜ್, ಸಾಂಗ್ಲಿ, ಪೂನಾಗಳಿಗೆ ಆಗಾಗ ಹೋಗಿ ದಂಧೆ ಮಾಡಿ ಬರುವವರೂ ಇದ್ದಾರೆ. ಈ ವೃತ್ತಿ ನಿರತರಲ್ಲಿ 44% ಮಂದಿ 34ವರ್ಷದೊಳಗಿನವರು. 9 ಮಂದಿ 18 ವರ್ಷದೊಳಗಿನವರು 2 ಮಂದಿ 55 ವರ್ಷಕ್ಕಿಂತ ಮೇಲ್ಪಟ್ಟವರು ಇದ್ದಾರೆ.

ಮಾನವ ಕಳ್ಳ ಸಾಗಾಣಿಕೆಯ ಮೂಲಕ ಈ ದಂಧೆಗೆ ದೂಡಲ್ಪಟ್ಟು ಅನೇಕರನ್ನು ಗಿರಾಕಿಗಳೇ ಪಾರು ಮಾಡಿದ ಘಟನೆಗಳಿವೆ. ಹೀಗೆ ಪಾರಾಗಿ ಬಂದವರನ್ನು ಮನೆತನದ ಮಾನ ಕಾಯುವ ಹೊಣೆ ಹೊರಿಸಿ ಬಹಿಷ್ಕರಿಸಿದ ಕಾರಣ ಮತ್ತೆ ಅದೇ ದಂಧೆಗೆ ಮರಳಿದವರು ಬಹಳ ಮಂದಿ, ಬಾಂಗ್ಲಾದೇಶದಿಂದ ಕಳ್ಳ ಸಾಗಣೆಯ ಮೂಲಕ ವಿಜಯಪುರಕ್ಕೆ ಸಾಗಿಸಲ್ಪಟ್ಟು ಈ ದಂಧೆಯಲ್ಲಿ ತೊಡಗಿದ ತೆಹಸ್ಸಿನಾ ತನ್ನ ಕರುಣ ಕಥೆಯನ್ನು ತೋಡಿಕೊಂಡ ವಿವರಗಳಿವೆ. ಈ ವೃತ್ತಿ ನಿರತ ಮಹಿಳೆಯರಿಗೆ ಸ್ವಂತದ್ದು ಏನೂ ಇಲ್ಲ. ದುಡಿದದ್ದೆಲ್ಲಾ ಕುಟುಂಬ ನಿಭಾಯಿಸಲು ಖರ್ಚಾಗುತ್ತದೆ. ಬಾಡಿಗೆ ಮನೆಯಲ್ಲಿದ್ದುಕೊಂಡೇ ಶೇ.63ರಷ್ಟು ಮಹಿಳೆಯರು ದಂಧೆ ನಡೆಸುವವರು. ಶೇ.39 ಮಂದಿ ಬಡತನಕ್ಕಾಗಿ, ಶೇ.60ರಷ್ಟು ಮಂದಿ ದೇವದಾಸಿ ಮನೆತನದವಳಾದ ಕಾರಣಕ್ಕಾಗಿ, ದಲ್ಲಾಳಿಗಳ ಮೂಲಕ 3% ಮಂದಿ ಹೆತ್ತವರ ಒತ್ತಾಯಕ್ಕೆ 0.5 ಮಂದಿ ಈ ವೃತ್ತಿಯನ್ನು ಆಯ್ಕೆ ಮಾಡಿದ್ದಾರೆ. ಸಂಪಾದನೆಯೂ 1000 ರಿಂದ 5000ದ ಒಳಗೆ ಇರುವವರು 30% ಮಂದಿ, 7000ಕ್ಕೂ ಹೆಚ್ಚು ಸಂಪಾದನೆ ಇರುವವರು 17 ಮಂದಿ ಇದ್ದಾರೆ ಎಂದು ಅಂಕಿ ಅಂಶಗಳ ಸಹಿತ ಪ್ರತೀ ವಿವರಗಳನ್ನು ಈ ವರದಿ ತಿಳಿಸುತ್ತದೆ. ರಾಜೇಶ್ ರೈ ಚಟ್ಲ ಅವರು ಸಂಕ್ಷಿಪ್ತವಾಗಿ ಸಂಗ್ರಹಿಸಿ ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ.

ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯ ಉನ್ನತ ಅಧಿಕಾರಿಯನ್ನು ರೂಪಾ ಹಾಸನರವರು ಸಂಪರ್ಕಿಸಿ ಈ ವೃತ್ತಿಯಲ್ಲಿರುವ ಹೆಣ್ಣು ಮಕ್ಕಳು ಪುನರ್‌ವಸತಿ ಬಯಸುತ್ತಾರೆ. ಅವರಿಗೆ ಏನಾದರೂ ವ್ಯವಸ್ಥೆ ಕಲ್ಪಿಸಿಕೊಡಿ ಎಂದು ವಿನಂತಿಸಿದಾಗ ಆ ಅಧಿಕಾರಿ, 'ಎಲ್ಲಿಯವರೆಗೆ ಡಿಮಾಂಡ್ ಇರುತ್ತದೋ ಅಲ್ಲಿಯವರೆಗೆ ಸಪ್ಪೆ ಮಾಡುತ್ತಿರಬೇಕು' ಎಂದು ಹೇಳಿದರಂತೆ. ಆಡಳಿತ ವ್ಯವಸ್ಥೆ ಎಷ್ಟೊಂದು ಹೃದಯಹೀನವಾಗಿದೆ ಎಂಬುವುದು ಇದರಿಂದ ವ್ಯಕ್ತವಾಗುತ್ತದೆ. ರೂಪಾ ಅವರು ಲೈಂಗಿಕ ಕಾರ್ಯಕರ್ತೆಯರ ಸ್ಥಿತಿಗತಿ ಅಧ್ಯಯನಾ ಸಮಿತಿಯಲ್ಲಿ ಕೆಲಸ ಮಾಡಿದವರು. 2015ರಲ್ಲಿ ಸಚಿವೆ ಜಯಮಾಲಾ ಅವರ ಅಧ್ಯಕ್ಷತೆಯಲ್ಲಿ ಈ ಸಮಿತಿ ರಚನೆಗೊಂಡು ರಾಜ್ಯದಾದ್ಯಂತ ಅಧ್ಯಯನ, ಸಂದರ್ಶನ ನಡೆಸಿ, ಮಾಹಿತಿ ಸಂಗ್ರಹಿಸಿ 2017ರಲ್ಲಿ ವರದಿ ಸಲ್ಲಿಸಿತು. ಈ ಸಮಿತಿಯು ಈ ದಂಧೆಗೆ ಬಿದ್ದವರನ್ನು ದಮನಿತರು ಎಂದು ಕರೆಯಬೇಕು ಎಂದು ನಿರ್ಧರಿಸಿತು. ಕಾಂಡೋಂ ಹಂಚಿಕೆಯ ಹೆಸರಿನಲ್ಲಿ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಮಂಡಳಿಯಲ್ಲಿ 96,878 ಮಂದಿ ನೋಂದಾಯಿಸಲ್ಪಟ್ಟಿದ್ದಾರೆ. ಇವರಲ್ಲಿ 72% ಮಂದಿ ಪುನರ್‌ವಸತಿ ಬಯಸಿದ್ದಾರೆ ಎಂಬುದು ಗಮನಾರ್ಹ. 733 ಕೋಟಿ ಹಣವನ್ನು ಇವರ ಪುನರ್‌ವಸತಿಗಾಗಿ ಮೀಸಲಾಗಿಡಬೇಕೆಂದು ಸಮಿತಿಯು ಸೂಚಿಸಿತು. 4 ವರ್ಷಗಳು ಉರುಳಿವೆ, 5 ಬಜೆಟ್ ಮಂಡನೆಯಾಗಿದೆ, ನಾಲ್ಕು ಸರ್ಕಾರ ಬದಲಾಗಿದೆ, ವರದಿಗಳ ಶಿಫಾರಸ್ಸುಗಳನ್ನು ಜಾರಿಗೊಳಿಸಲು ಸರ್ಕಾರ ಸ್ವಲ್ಪವೂ ಪ್ರಯತ್ನ ನಡೆಸಿಲ್ಲವೆಂದು ರೂಪಾ ಹಾಸನ ಅವರು ದುಃಖದಿಂದ ಹೇಳುತ್ತಾರೆ. (ಮಹಿಳೆ - ಭ್ರಮೆ ಮತ್ತು ವಾಸ್ತವ)

ಈ ದಮನಿತ ಮಹಿಳೆಯರಲ್ಲಿ 36.8% ಪರಿಶಿಷ್ಟ ಜಾತಿಯವರು, 6.8% ಮಂದಿ ಪರಿಶಿಷ್ಟ ಪಂಗಡದವರು, 18.2 ಹಿಂದುಳಿದ ವರ್ಗದವರು, 38.2% ಇತರ ವರ್ಗದವರೂ ಇದ್ದಾರೆ.

ಹಿಂದುಗಳು 85.5%, ಮುಸ್ಲಿಂ 9.7%, ಕ್ರೈಸ್ತರು 1.7%, ಜೈನರು 0.4, ಬೌದ್ಧರು 0.4%, ಸಿಬ್ಬರು 0.2%, ಇತರೆ 2.2 ಇದ್ದಾರೆ ಎಂದು ಆ ವರದಿಯ ಅಂಕಿ ಅಂಶಗಳು ತಿಳಿಸುತ್ತಾರೆ.

ಅಧ್ಯಯನದ ಅವಧಿಯಲ್ಲಿ 18 ವರ್ಷಕ್ಕಿಂತ ಕೆಳಗಿನವರು 459 ಮಂದಿ, 18 ವರ್ಷದಿಂದ 24 ವರ್ಷದೊಳಗಿನವರು 12,185 ಇದ್ದರು. ಆಗಲೇ ಅಪಾಯದ ಗುಂಪು ಎಂದು ಗುರುತಿಸಲ್ಪಟ್ಟ 8,000 ಮಂದಿ ಇದ್ದರು ಅಂದರೆ ಏಡ್ಸ್ ಪೀಡಿತರಾದ ಮಂದಿ ಇದ್ದರು. ಇವರನ್ನು ತುರ್ತಾಗಿ ಪುನರ್‌ವಸತಿ ಮಾಡದಿದ್ದರೆ, ಅಪಾಯಗಳು ಹೆಚ್ಚುವ ಸಂಭವವಿದೆ. ಇವರಲ್ಲಿ 2257 ಮಂದಿ ಮಾತ್ರ ಎ.ಆರ್.ಟಿ ಚಿಕಿತ್ಸೆ ಪಡೆಯುತ್ತಿದ್ದರು.

ಈ ದಮನಿತ ಸ್ತ್ರೀಯರಲ್ಲಿ 45.9% ಮಂದಿ ಕಳ್ಳತನದಿಂದ ಅಂದರೆ ಗೊತ್ತಿಲ್ಲದೆ ಮಾರಲ್ಪಟ್ಟು ಈ ದಂಧೆಗೆ ನೂಕಲ್ಪಟ್ಟವರು. ಕಳೆದ 10 ವರ್ಷಗಳಲ್ಲಿ 16,367 ಮಂದಿ ಬಾಲೆಯರು ಕಾಣೆಯಾಗಿದ್ದಾರೆ. ಅವರಲ್ಲಿ 1499 ಮಂದಿ ಪತ್ತೆಯಾಗಿಲ್ಲ ಇವರೆಲ್ಲ ಈ ದಂಧೆಗೆ ನೂಕಲ್ಪಟ್ಟಿರಬೇಕು. ಕುಟುಂಬದ ಒತ್ತಾಯದಿಂದ ಈ ದಂಧೆಗೆ ಬಂದವರು, ಗಂಡನ ಹಿಂಸೆ ತಡೆಯಲಾರದೆ ಹೊರಬಂದು ಈ ಕೆಲಸಕ್ಕೆ ಸೇರಿಕೊಂಡವರ ಸಂಖ್ಯೆಯೂ ದೊಡ್ಡದಿದೆ. ರೂಪಾ ಅವರು ಹಾಸನ ಪರಿಸರದಲ್ಲಿರುವ ದಮನಿತ ಸ್ತ್ರೀಯರ ಪುನರ್‌ವಸತಿಗಾಗಿ ಶ್ರಮಿಸುತ್ತಿರುವುದು ಅಭಿನಂದನೀಯವಾಗಿದೆ.

ಈ ಸಂದರ್ಭದಲ್ಲಿ 2021ರ ಸೆಪ್ಟೆಂಬರ್ 1ರಂದು ರಾಷ್ಟ್ರೀಯ ಪ್ರತಿಧ್ವನಿ ವರದಿಯನ್ನು ಇಲ್ಲಿ ಉಲ್ಲೇಖಿಸುವುದು ಸೂಕ್ತವೆನಿಸುತ್ತದೆ.

ನಾಗಪುರದ ಗಂಗಾ ಜಮುನದಲ್ಲಿ ಒಂದು ಪ್ರತಿಭಟನೆ ನಡೆಯಿತು. ಹಿಂದಿನ ಕಾಲದಲ್ಲಿ ಮಹಾರಾಜರೇ ತಮ್ಮ ಸೇನೆಯ ಸೈನಿಕರ ಮನೋರಂಜನೆಗಾಗಿ ಈ ಜಾಗವನ್ನು ಕೊಡುಗೆಯಾಗಿ ನೀಡಿದ್ದರು. ಅದೊಂದು ಕೆಂಪು ದೀಪ ಪ್ರದೇಶವಾಗಿ ಬಹಳ ವರ್ಷದಿಂದಲೂ ಪ್ರಸಿದ್ಧವಾಗಿತ್ತು. ಇತ್ತೀಚೆಗೆ ಇಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆಯೆಂದು ಪೋಲೀಸರು ಅಲ್ಲಿ ಸೆಕ್ಸ್ ವರ್ಕ್ ಅನ್ನು ನಿಷೇಧಿಸಿದ್ದರು. ಸುಮಾರು 1500 ಮಂದಿ ಲೈಂಗಿಕ ಕಾರ್ಯಕರ್ತೆಯರ ಬದುಕು ಇದರಿಂದಾಗಿ ಅತಂತ್ರವಾಗಿದೆ. ಪುನರ್‌ವಸತಿಯ ಹೆಸರಿನಲ್ಲಿ ತಮ್ಮ ಬದುಕನ್ನು ನಿರ್ನಾಮ ಮಾಡುತ್ತಿದ್ದಾರೆ ಎಂದು ಅಲ್ಲಿಯ ಕಾರ್ಯಕರ್ತೆಯರು ಒಂದು ಪ್ರತಿಭಟನೆ ನಡೆಸಿದರು. ಈ ಕಾರ್ಯಕ್ರಮಕ್ಕೆ ನ್ಯಾಷನಲ್ ನೆಟ್‌ವರ್ಕ್ ಆಫ್ ಸೆಕ್ಸ್ ವರ್ಕ್ ಸಂಘಟನೆಯ ಕಿರಣ್ ದೇಶ್‌ಮುಖ್ ಅವರು ಬೆಂಬಲ ಸೂಚಿಸಲು ಬಂದಿದ್ದರು. ಶತಮಾನದಿಂದ ನಡೆಯುತ್ತಾ ಬಂದ ಒಂದು ವ್ಯವಸ್ಥೆಯನ್ನು ಹೀಗೆ ಪಕ್ಕನೆ ಕಳಚುವುದು ಅಷ್ಟು ಸುಲಭವಲ್ಲ. ಲೈಂಗಿಕ ಕಾರ್ಯಕರ್ತೆಯರಿಗೆ ಸುಭದ್ರವಾದ ಬದುಕಿನ ದಾರಿಯನ್ನು ತೋರಿಸುವವರೆಗೂ ಅವರ ತುತ್ತಿನ ಚೀಲ ತುಂಬಿಸಲು ಈ ವೃತ್ತಿಯನ್ನು ತ್ಯಜಿಸಲು ಸಿದ್ಧರಾಗುವುದಿಲ್ಲ ಎಂಬ ಸತ್ಯವನ್ನು ಈ ಘಟನೆ ತಿಳಿಸಿದೆ.

2021ರ ಅಕ್ಟೋಬರ್ ತಿಂಗಳ ಸಂವಾದ ಪತ್ರಿಕೆಯಲ್ಲಿ ಡಾ. ಶೈಲಜಾ ಹಿರೇಮಠ ಅವರು ಬರೆದ ಲೇಖನದಲ್ಲಿ ಇನ್ನೂ ಒಂದು ಸಂಪ್ರದಾಯದ ಬಗ್ಗೆ ಬರೆದಿದ್ದಾರೆ. "ಕೊಪ್ಪಳದಿಂದ ಕೋಲಾರದವರೆಗೆ ಮರುಳೆಯರು ಎಂಬ ಸಂಪ್ರದಾಯವನ್ನು ಅನುಸರಿಸುವವರಿದ್ದಾರೆ. ಇವರು ಮರುಳಸಿದ್ಧ ಪರಂಪರೆಗೆ ಸೇರಿದವರು. ಇವರು ದೇವರೊಂದಿಗೆ ಮದುವೆಯಾಗುತ್ತಾರೆ. ಇವರು ಶುದ್ಧ ಸಸ್ಯಾಹಾರಿಗಳು, ಹೊಲೆಯರು ಮಾದಿಗರಿಗಿಂತಲೂ ತಾವು ಶ್ರೇಷ್ಠರು ಎಂದು ಹೇಳುತ್ತಾರೆ. ಪುರುಷರು ಪೂಜಾರಿಗಳಾಗಿ ಗುರುತಿಸಿಕೊಳ್ಳುತ್ತಾರೆ. ಹೊಲೆಯರು ಮತ್ತು ಮಾದಿಗರ ನೆಲೆಯಲ್ಲಿ ಇವರು ಪೂಜಾರಿಗಳು, ಲಿಂಗಾಯುತರ ನೆಲೆಯಲ್ಲಿ ಇವರು ಹೊಲೆಯರು. ತಮ್ಮ ಸಮುದಾಯದ ಹೆಣ್ಣುಮಕ್ಕಳನ್ನು ಮರುಳೆಯರನ್ನಾಗಿ ಉಳಿಸುವ ಮೂಲಕ ಜಾತಿ ಶ್ರೇಷ್ಠತೆಯನ್ನು ಉಳಿಸಿಕೊಳ್ಳುತ್ತಾರೆ. ಹೆಣ್ಣು ಮಕ್ಕಳ ಮದುವೆಯ ಆಯ್ಕೆಯನ್ನು ನಿರಾಕರಿಸಿದ ಕ್ರೌರ್ಯವಾಗಿ ಈ ಸಂಪ್ರದಾಯ ಚಾಲ್ತಿಯಲ್ಲಿದೆ. ವಿವಾಹವನ್ನು ಕಡ್ಡಾಯಗೊಳಿಸಿದ ಜಾತಿಗಳು ರೂಪಿಸಿದ ವಿಧಿನಿಯಮಗಳನ್ನು ಈ ದೇವದಾಸಿಯರು ಒಪ್ಪುವುದಿಲ್ಲ. ತಾವು ಇಟ್ಟುಕೊಂಡ ಜಾತಿಯ ಪುರುಷರ ಮೂಲಕವೇ ತಮ್ಮ ಜಾತಿಯನ್ನು ಗುರುತಿಸುತ್ತಾರೆ" ಎಂದು ಹೇಳಿದ್ದಾರೆ. ಮಹಿಳೆಯರನ್ನು ಭೋಗಿಸುವುದಕ್ಕೆ ಎಷ್ಟೆಲ್ಲಾ ರೀತಿಯ ಸಂಪ್ರದಾಯಗಳನ್ನು ಸಮಾಜ ಸೃಷ್ಟಿಸಿದೆ ಎಂದು ತಿಳಿದಾಗ ಸಖೇದಾಶ್ಚರ್ಯವಾಗುತ್ತದೆ. ಆ ಸಂಪ್ರದಾಯಗಳಿಗೆ ದೇವರು ಧರ್ಮದ ಮುದ್ರೆಯನ್ನೊತ್ತಿ ಆ ಸಂಪ್ರದಾಯಗಳನ್ನು ಧಿಕ್ಕರಿಸದಂತೆ ಆದೇಶ ನೀಡುತ್ತದೆ. ಧಿಕ್ಕರಿಸಿದರೆ ಶಿಕ್ಷೆಯನ್ನು ವಿಧಿಸುತ್ತದೆ.

ದೇಶ ವಿಭಜನೆಯಾಗಿ 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ದೆಹಲಿ, ಮುಂಬೈ, ಕಲ್ಕತ್ತಾಗಳ ವೇಶ್ಯಾವಾಟಿಕೆಗಳು ನಿರಾಶ್ರಿತರಾದ ಮಹಿಳೆಯರಿಂದ ತುಂಬಿ ತುಳುಕಿದವು. ಇವರೆಲ್ಲಾ ದೌರ್ಜನ್ಯಕ್ಕೊಳಗಾಗಿ, ಅತ್ಯಾಚಾರಕ್ಕೊಳಗಾಗಿ ತಮ್ಮ ಕುಟುಂಬದಿಂದ ಬಹಿಷ್ಕರಿಸಲ್ಪಟ್ಟವರು. ಆ ಸಮಯದಲ್ಲಿ ಹೆಣ್ಣು ಮಕ್ಕಳ ಮಾರಾಟವೇ ಒಂದು ದೊಡ್ಡ ದಂಧೆಯಾಗಿತ್ತು. ಲಕ್ಷಾಂತರ ಮಂದಿ ಮನೆ ಮಠ ಬಿಟ್ಟು ಬಂದ ಘಟನೆಯು ಜಗತ್ತಿನ ಮಹಾವಲಸೆಯೆಂದೇ ಗುರುತಿಸಲ್ಪಟ್ಟಿದೆ. ಅನ್ಯ ಮತದವರಿಂದ ಮಾತ್ರವಲ್ಲ ಸ್ವಧರ್ಮೀಯರಿಂದಲೂ ದೌರ್ಜನ್ಯಕ್ಕೊಳಗಾಗಿ ಅನಾಥರಾದ ಹೆಣ್ಣು ಮಕ್ಕಳ ದುರಂತ ಕಥನವು ಹೃದಯ ವಿದ್ರಾವಕವಾಗಿದೆ. ವರ್ಷದ ಬಳಿಕ ಭಾರತ ಸರಕಾರವು 12,500 ಮಂದಿ ಮಹಿಳೆಯರನ್ನು ಅವರ ಮನೆಗಳಿಗೆ ಕಳಿಸಿಕೊಡಲಾಯಿತು. ಆದರೆ ಅವರನ್ನು ಅವರ ಮನೆಯವರೇ ಪ್ರೀತಿ ಯಿಂದ ಸ್ವಾಗತಿಸಲಿಲ್ಲ. ಸ್ವಾಗತಿಸಿದರೂ ಕಳಂಕಿನಿಯೆಂಬ ಶಾಪ ಹೊರಿಸಿದರು. ಅನೇಕ ಹೆಣ್ಣುಮಕ್ಕಳಿಗೆ ಬಂಧುಗಳ ಮನೆಗೆ ತೆರಳುವುದು ಇಷ್ಟವಿರಲಿಲ್ಲ. ಗರ್ಭಿಣಿಯಾದ ಮಹಿಳೆಯ ಮಗುವನ್ನು ಸ್ವೀಕರಿಸಲು ಬಂಧುಗಳು ಸಿದ್ಧರಿರಲಿಲ್ಲ. ಶತ್ರುವಿನ ಮಗುವಿನ ಪೋಷಣೆಯು ಅವರನ್ನು ಪಾಪ ಪ್ರಜ್ಞೆಯಿಂದ ನರಳುವಂತೆ ಮಾಡುತ್ತಿತ್ತು. ಆದುದರಿಂದ ಹೆಣ್ಣುಮಕ್ಕಳದ್ದು ನರಕ ಸದೃಶವಾದ ಬಾಳು. ಕೆಲವು ಮಹಿಳೆಯರು ಪೋಲೀಸರಿಗೆ ಪ್ರಶ್ನೆ ಕೇಳಿದರಂತೆ, "ನಮ್ಮ ಮೇಲೆ ಅತ್ಯಾಚಾರವಾದಾಗ ನಿಮ್ಮಿಂದ ರಕ್ಷಿಸಲು ಸಾಧ್ಯವಾಗಲಿಲ್ಲ. ಈಗ ನಮ್ಮನ್ನು ಬಲವಂತವಾಗಿ ಕುಟುಂಬದ ವಶಕ್ಕೆ ಒಪ್ಪಿಸುವುದಕ್ಕೆ ನಿಮಗೇನು ಹಕ್ಕಿದೆ?" ಇದು ಭವಿಷ್ಯದ ಭಯದಿಂದ ವ್ಯಾಕುಲರಾಗಿ ಅವರು ಕೇಳಿದ ಪ್ರಶ್ನೆ. ಅದಕ್ಕೆ ಪೋಲೀಸರಲ್ಲಿ ಉತ್ತರವಿರಲಿಲ್ಲ. ಬಹುಶಃ ಯಾರಲ್ಲೂ ಇದಕ್ಕೆ ಉತ್ತರವಿಲ್ಲ.

ಅಧ್ಯಯನಗಳು

[ಸಂಪಾದಿಸಿ]

ಅಧ್ಯಯನಗಳು

ಡಾ. ವೀರೇಂದ್ರ ಕುಮಾರ್ ಎನ್ ಇವರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪಿಎಚ್.ಡಿ.ಗಾಗಿ ಮಾಡಿದ ಅಧ್ಯಯನದ ಫಲಿತಾಂಶಗಳು ಹೀಗಿವೆ. ಅವರು ಸಂಪರ್ಕಿಸಿದ ಸಂದರ್ಭದಲ್ಲಿ ಮಂಗಳೂರು ನಗರದಲ್ಲಿ ಈ ವೃತ್ತಿಯಲ್ಲಿ ನಿರತರಾಗಿದ್ದವರಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಬಿಲ್ಲವ ಸಮುದಾಯದವರು ಇದ್ದಾರೆ. ನಂತರದ ಸ್ಥಾನ ಗೌಡ ಸಮುದಾಯ ಮತ್ತು ಮುಸ್ಲಿಂ ಸಮುದಾಯದವರು ಹೆಚ್ಚು ಮಂದಿ ಇದ್ದಾರೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಲ್ಲದೆ ಬ್ರಾಹ್ಮಣ ಮತ್ತು ಜೈನ ಕ್ರೈಸ್ತ ಸಮುದಾಯದ ಮಹಿಳೆಯರೂ ಇದ್ದರು.

ಹೆಚ್ಚಿನವರು ಪ್ರಾಥಮಿಕ ಹಂತದ ಶಿಕ್ಷಣ ಪೂರೈಸಿದವ ರಾಗಿದ್ದರೆ. ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರೂ ಇದ್ದರು. ತಾಂತ್ರಿಕ ವೃತ್ತಿ ಶಿಕ್ಷಣ ಪಡೆದ ಮಹಿಳೆಯರೂ ಈ ವೃತ್ತಿಯಲ್ಲಿ ದುಡಿಯುತ್ತಿದ್ದರು. ಅನಕ್ಷರಸ್ಥ ಮಹಿಳೆಯರೂ ಈ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕನ್ನಡ, ತುಳು, ಮಲಯಾಳ, ಹಿಂದಿ, ಮರಾಠಿ, ತೆಲುಗು, ತಮಿಳು, ಇಂಗ್ಲಿಷ್ ಭಾಷೆಯಲ್ಲಿ ವ್ಯವಹರಿಸಬಲ್ಲವರೂ ಇದ್ದರು. ಹೆಚ್ಚಿನವರು ತುಳು ಮತ್ತು ಕನ್ನಡ ಬಲ್ಲವರು. ಈ ವೃತ್ತಿಗೆ ಭಾಷೆ ಎಂದೂ ತೊಡಕಾಗಿ ಕಾಡುವುದಿಲ್ಲ. 41% ಶೇಕಡಾ ಮಂದಿ ಅವಿವಾಹಿತೆಯರಾಗಿದ್ದು, ಉಳಿದವರು ವಿಧವೆಯರು, ಗಂಡ ಬಿಟ್ಟವರು, ವಿಚ್ಛೇದಿತರು ವೃತ್ತಿಯಲ್ಲಿದ್ದರು. ಗಂಡನ ಉಸ್ತುವಾರಿಯಲ್ಲಿಯೇ ಈ ವೃತ್ತಿ ಮಾಡುವವರು 6 ಮಂದಿ ಇದ್ದರು. ಮದುವೆ ಆದವರಲ್ಲಿ ಹೆಚ್ಚಿನವರು ಸಣ್ಣ ಪ್ರಾಯದಲ್ಲಿಯೇ ಗೃಹಿಣಿ ಪಟ್ಟಕ್ಕೇರಿದವರು. 66 ಮಂದಿ ಸಣ್ಣ ಕುಟುಂಬ ಅಂದರೆ ನಾಲೈದು ಮಂದಿಯೊಂದಿಗೆ ವಾಸಿಸುತ್ತಿದ್ದರು. ಉಳಿದವರು ಅವಿಭಕ್ತ ಕುಟುಂಬ ಅಂದರೆ 10 ಮಂದಿಗಿಂತಲೂ ಹೆಚ್ಚು ಮಂದಿಯಿರುವ ಕುಟುಂಬದಿಂದ ಬಂದವರು. 82% ಮಂದಿಗೆ ಕೌಟುಂಬಿಕ ಆಸ್ತಿಯೆಂದು ಏನೂ ಇಲ್ಲ. ಆದುದರಿಂದ ದುರ್ಬಲವಾದ ಆರ್ಥಿಕ ಸ್ಥಿತಿಯ ಹಿನ್ನೆಲೆಯುಳ್ಳವರು. ಕೃಷಿ ಕಾರ್ಮಿಕರಾಗಿಯೋ ಮನೆಕೆಲಸದವರಾಗಿಯೋ, ಬೀಡಿ ಕಟ್ಟುವವರಾಗಿಯೋ, ಸೇಲ್ಸ್ ಗರ್ಲ್ಸ್ಗಳಾಗಿಯೋ, ದುಡಿಮೆಯಲ್ಲಿದ್ದುಕೊಂಡು ಜೀವನ ಸಾಗಿಸುತ್ತಿದ್ದವರು. ಈ ವೃತ್ತಿಯಲ್ಲಿ ಬಹುತೇಕ ಮಂದಿಯ ಆದಾಯ 15 ಸಾವಿರದೊಳಗೆ ಇತ್ತು. ತಿಂಗಳಿಗೆ 30 ಸಾವಿರಕ್ಕೂ ಹೆಚ್ಚು ಗಳಿಸುವವರು 5% ಮಂದಿ ಇದ್ದರು ಎಂದು ಅವರ ಅಧ್ಯಯನ ಫಲಿತಾಂಶಗಳು ತಿಳಿಸುತ್ತವೆ. ಮನೆ ಬಾಡಿಗೆ, ಆಹಾರ ಉಡುಗೆ ತೊಡುಗೆ, ಮುಂತಾದ ಅವಶ್ಯಕ ವಿಷಯಗಳಿಗೆ ಅವರ ಹಣ ವಿನಿಯೋಗವಾಗಿ ಉಳಿದದ್ದು ಮನೆಯ ಅಗತ್ಯಗಳನ್ನು ಪೂರೈಸುವಷ್ಟಿರುತ್ತದೆ. ಆದರೂ ಆ ಹಣ ಸಾಲದೆ ಅವರು ಬ್ಯಾಂಕ್ ಸಾಲ ಮತ್ತು ಕೈ ಸಾಲ ಮಾಡಿಕೊಂಡು ಪ್ರತಿ ತಿಂಗಳು ಬಡ್ಡಿ ಕಟ್ಟುವವರೂ ಬಹುತೇಕ ಮಂದಿ ಇದ್ದರು. 34% ಮಂದಿಯಲ್ಲಿ ಉಳಿತಾಯವೇ ಇರಲಿಲ್ಲ. 4% ಮಂದಿ 50 ಸಾವಿರಕ್ಕೂ ಹೆಚ್ಚು ಉಳಿತಾಯವಿದೆಯೆಂದು ಮಾಹಿತಿ ನೀಡಿದ್ದರು. ವೃತ್ತಿನಿರತರು ಮಕ್ಕಳ ಶಿಕ್ಷಣ ಮತ್ತು ಉತ್ತಮ ಭವಿಷ್ಯಕ್ಕಾಗಿ ಹಣವನ್ನು ಗಳಿಸಿ ಉಳಿಸುತ್ತಿದ್ದರು. ವೃತ್ತಿ ನಿರತರಾದ ಹೆಚ್ಚಿನ ಎಲ್ಲಾ ಮಹಿಳೆಯರ ಆರ್ಥಿಕ ಹಿನ್ನೆಲೆಯು ತೀರಾ ಕೆಳಮಟ್ಟದ್ದೂ ಆಗಿತ್ತು. ನೆಮ್ಮದಿಯ ಬದುಕಿನ ಹಂಬಲದಿಂದ ಮನಸ್ಸನ್ನು ಕಲ್ಲು ಮಾಡಿಕೊಂಡು ಬೀದಿಗಿಳಿದಿದ್ದರು. ಲೈವ್‌ಬ್ಯಾಂಡ್ ಹುಡುಗಿಯರು ಸಾಮಾನ್ಯವಾಗಿ ಹೋಸ್ಟೆಲ್‌ಗಳಲ್ಲಿ ಮತ್ತು ಗೆಸ್ಟ್ ಹೌಸ್‌ಗಳಲ್ಲಿ, ಲಾಡ್ಜ್‌ಗಳಲ್ಲಿ ಉಳಿದುಕೊಳ್ಳುತ್ತಿದ್ದರು.

ಈ ಕಾರಕರ್ತೆಯರಲ್ಲಿ 57% ಮಂದಿ ಸುಮಾರು ಏಳು ವರ್ಷಗಳಿಂದ ಲೈಂಗಿಕ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 23% ಮಂದಿ ಸುಮಾರು 30 ವರ್ಷಗಳಿಂದ ವೃತ್ತಿ ನಿರತರಾಗಿದ್ದಾರೆ. ಇಷ್ಟು ದೀರ್ಘ ಕಾಲ ಈ ವೃತ್ತಿಯಲ್ಲಿದ್ದವರು; ಪ್ರಾಯಶಃ ಕೆಲವರು ಹದಿ ಹರೆಯದಲ್ಲೇ ಈ ವೃತ್ತಿಗೆ ಪ್ರವೇಶ ಮಾಡಿರಬೇಕು ಎಂದು ಊಹಿಸಬಹುದು. ಇವರಲ್ಲಿ ಸ್ವತಂತ್ರವಾಗಿ ಲೈಂಗಿಕ ಸೇವೆ ಸಲ್ಲಿಸುವವರು 33% ಇದ್ದರೆ 53 ಮಂದಿ ಸಂಘಟಿತ ವ್ಯವಸ್ಥೆ ಅಂದರೆ ಇವರನ್ನು ಬೇಕಾದಾಗ ಬೇಕಾದಲ್ಲಿಗೆ ಕಳುಹಿಸಿಕೊಡುವುದಕ್ಕಾಗಿ ಪಿಂಪ್‌ಗಳ ಮಾಡಿದ ವ್ಯವಸ್ಥೆಯ ಮೂಲಕ ಕಾರ್ಯ ನಿರ್ವಹಿಸುತ್ತಾರೆ. 31% ಬೀದಿ ವೇಶ್ಯೆಯರು ಪಿಂಪ್‌ಗಳ ನೆರವನ್ನು ಪಡೆದವರು ಕೆಲವರಾದರೆ, ಅವರ ನೆರವನ್ನು ಪಡೆಯದೆಯೇ ಕೆಲಸ ನಿರ್ವಹಿಸುವವರೇ ಹೆಚ್ಚು ಮಂದಿ. ಕೆಲವೊಮ್ಮೆ ರಸ್ತೆಯಿಂದಲೇ ಅವರನ್ನು ಬಾಡಿಗೆ ಮನೆಗಳಿಗೋ, ಲಾಡ್ಜ್‌ಗಳಿಗೋ ಒಯ್ಯುವವರೂ ಇದ್ದರು. ಸಮಯ ಸನ್ನಿವೇಶಗಳು ಅವರಲ್ಲಿ ಈ ಬದಲಾವಣೆಯ ವ್ಯವಸ್ಥೆಯನ್ನು ಒಪ್ಪಿಕೊಳ್ಳುವಂತೆ ಮಾಡುತ್ತದೆ. ಪಿಂಪ್‌ಗಳು 'ಘರ್‌ವಾಲೀ'ಗಳಿಗೆ ತಲುಪಿಸಿ ತಮ್ಮ ಕಮಿಶನ್ ಪಡೆಯುತ್ತಿದ್ದರು. ಕೆಲವು ರಿಕ್ಷಾ ಡ್ರೈವರ್‌ಗಳು 'ಪಿಂಪ್‌'ಗಳಾಗಿ ಹೊಟೇಲ್‌ಗಳಿಗೆ ಇವರನ್ನು ತಲುಪಿಸಿ ಬೋಕರ್‌ಗಳೊಂದಿಗೆ ಒಪ್ಪಂದ ಮಾಡಿಕೊಂಡು ವ್ಯವಹಾರ ಕುದುರಿಸುತ್ತಿದ್ದರು. 84% ಮಂದಿ ಸುಮಾರು ಎಂಟು ಗಂಟೆಗಳಷ್ಟು ಕಾಲ ಈ ವೃತ್ತಿಯನ್ನು ಕೈಗೊಳ್ಳುತ್ತಿದ್ದರು. 16% ಮಂದಿ 12 ಗಂಟೆಗಿಂತಲೂ ಹೆಚ್ಚು ಕಾಲ ವೃತ್ತಿ ನಿರತರಾಗಿರುತ್ತಿದ್ದರು. 98% ಮಂದಿ ಪ್ರತಿ ದಿನ ಆರು ಗಿರಾಕಿಗಳನ್ನು ತೃಪ್ತಿ ಪಡಿಸುತ್ತೇವೆಂದು ಒಪ್ಪಿಕೊಂಡರೆ 2 ಮಂದಿ ಸುಮಾರು ಎಂಟು ಮಂದಿ ಗಿರಾಕಿಗಳಿಗೆ ಸೇವೆ ಸಲ್ಲಿಸುತ್ತಿದ್ದರು ಎಂದು ಮಾಹಿತಿ ನೀಡಿದ್ದಾರೆ.

ಲೈಂಗಿಕ ಕಾರ್ಯಕರ್ತೆಯರು ತಮ್ಮ ವೃತ್ತಿಯಲ್ಲಿ ಹಣಕ್ಕೆ ಮಾತ್ರ ಪ್ರಾಧಾನ್ಯ ನೀಡುತ್ತಾರೆ. ಗಿರಾಕಿಗಳ ರೂಪ, ವಯಸ್ಸು, ಜಾತಿ, ಧರ್ಮ, ಬಣ್ಣ, ಅಂತಸ್ತು ಇವ್ಯಾವುದೂ ಗಣನೆಗೆ ಬರುವುದಿಲ್ಲ. ಅಧ್ಯಯನಕಾರರಿಗೆ ನೀಡಿದ ಮಾಹಿತಿಯಂತೆ 51% ಮಂದಿ 18 ರಿಂದ 70 ವರ್ಷದವರೆಗಿನ ಗಿರಾಕಿಗಳನ್ನು ಸ್ವೀಕರಿಸಿದ್ದಾರೆ. ವೃತ್ತಿನಿರತೆಯರ ರೂಪ, ವಯಸ್ಸು, ಬೇಡಿಕೆಗನುಗುಣವಾಗಿ ಶುಲ್ಕದಲ್ಲಿ ವ್ಯತ್ಯಾಸವಾಗುವುದಿದೆ. 3% ಮಂದಿ 100 ರೂ. ಶುಲ್ಕವನ್ನು ಸ್ವೀಕರಿಸುವವರಿದ್ದರೆ, 72% ಮಂದಿ 200 ರಿಂದ 1000 ರೂ. ವರೆಗೆ ದರ ನಿಗದಿಪಡಿಸುತ್ತಿದ್ದರು. ಉಳಿದ 25 ಮಂದಿ 2000 ದಿಂದ 8000ದವರೆಗೆ ಶುಲ್ಕವನ್ನು ಸ್ವೀಕರಿಸುತ್ತಿದ್ದರೆಂದು ತಿಳಿಸಿದ್ದಾರೆ. ಇನ್ನು ಈ ಮಹಿಳೆಯರು ಈ ವೃತ್ತಿಯನ್ನು ಹೇಗೆ ಸ್ವೀಕರಿಸಿದ್ದಾರೆ ಎಂಬ ಪ್ರಶ್ನೆಗೆ 67% ಮಂದಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅಂದರೆ ಮಾನಸಿಕವಾಗಿ ತೃಪ್ತರೂ, ಆರ್ಥಿಕವಾಗಿ ಸಬಲರೂ ಆಗಿರುವುದರಿಂದ ಈ ವೃತ್ತಿಯಿಂದಾಗಿ ನೆಮ್ಮದಿಯಿಂದಿದ್ದೇವೆ ಎಂದು ಪ್ರತಿಕ್ರಿಯಿಸಿದ್ದಾರೆ. 26 ಮಂದಿ ತಮಗೆ ಅಪರಾಧೀಪ್ರಜ್ಞೆ, ಒಂಟಿತನ, ಕೀಳರಿಮೆ, ವ್ಯಕ್ತಿತ್ವ ನಾಶ, ಚಿಂತೆ, ಸಾಮಾಜಿಕ ಬಹಿಷ್ಕಾರ ಮುಂತಾದ ಮಾನಸಿಕ ಒತ್ತಡಗಳಿಂದ ನರಳುವಂತಾಗಿದೆ ಎಂದು ಪ್ರತಿಕ್ರಿಯೆ ತೋರಿದ್ದಾರೆ. ಉಳಿದ 7% ಮಂದಿ ಈ ವೃತ್ತಿಯು ತಮ್ಮ ಮಾನಸಿಕ ಪರಿಸ್ಥಿತಿಯನ್ನು ಯಾವ ರೀತಿಯಲ್ಲೂ ಪ್ರಭಾವಿಸಿಲ್ಲವೆಂದು ತಿಳಿಸಿದ್ದಾರೆ.

ಹಾಗಾದರೆ ಈ ಮಹಿಳೆಯರು ಈ ವೃತ್ತಿಯಿಂದ ಹೊರಬರಲು ಇಚ್ಛಿಸುತ್ತಿಲ್ಲವೇ? ಈ ವೃತ್ತಿಯನ್ನು ಬಯಸಿ ಬಯಸಿ ಆಯ್ಕೆಮಾಡಿಕೊಂಡವರು ಬಹಳ ಕಡಿಮೆ. ಪರಿಸ್ಥಿತಿಗಳು, ಒತ್ತಡಗಳು ಅವರನ್ನು ಈ ವೃತ್ತಿಗೆ ದೂಡಿವೆ. ಗೊತ್ತಿಲ್ಲದೆ ಈ ವೃತ್ತಿಗೆ ಪ್ರವೇಶಿಸಿದ ಮೇಲೆ ಅದರಿಂದ ಬಿಡುಗಡೆ ಬಯಸಿದರೂ ಸಮಾಜ ಅವರನ್ನು ವಕ್ರ ದೃಷ್ಟಿಯಿಂದಲೇ ನೋಡುತ್ತವೆ. ಅನೇಕರು ಹೊರ ಬರಲು ಪ್ರಯತ್ನಿಸಿ ಮತ್ತೆ ಪುನಃ ಅದೇ ವೃತ್ತಿಯನ್ನು ಸ್ವೀಕರಿಸಿ ಬದುಕುವವರಿದ್ದಾರೆ. ಸಮಾಜದಲ್ಲಿ ಅವರದ್ದು ಮೌಲ್ಯ ರಹಿತ ಜೀವನವೆಂಬ ಭಾವನೆ ಇದೆ. ಬದುಕುವುದಕ್ಕೆ ಬೇರೆ ಯಾವುದೇ ಉದ್ಯೋಗವನ್ನು ದೊರಕಿಸಿಕೊಳ್ಳಲಾರದವರು ಈ ವೃತ್ತಿಗೇ ಅಂಟಿಕೊಂಡಿರಬೇಕಾಗುತ್ತದೆ. ಇನ್ನೂ ಕೆಲವರು ಈ ವೃತ್ತಿಯನ್ನು ಹವ್ಯಾಸವಾಗಿಸಿಕೊಂಡವರು ಮತ್ತೆ ಮತ್ತೆ ಈ ವೃತ್ತಿಯತ್ತ ಆಕರ್ಷಿತರಾಗುತ್ತಾರೆ. ಒಂದು ರೀತಿಯಲ್ಲಿ ಈ ವೃತ್ತಿಗೆ 'ಎಡಿಕ್ಟ್' ಆದವರು ಯಾವುದೇ ಸಂಕೋಚ, ಕೀಳರಿಮೆ ಇಲ್ಲದೆ ಲೈಂಗಿಕ ಕಾರಕರ್ತೆಯರಾಗಿಯೇ ಬದುಕುವ ಸಂಕಲ್ಪ ಮಾಡಿದವರಿದ್ದಾರೆ. ಗಳಿಕೆಯ ಸುಲಭ ದಾರಿಯೆಂದು ನಿರ್ವಾಹವಿಲ್ಲದೆ ಈ ವೃತ್ತಿಯನ್ನೇ ಆಯ್ಕೆ ಮಾಡಿಕೊಂಡವರಿದ್ದಾರೆ. ಈ ವೃತ್ತಿಯನ್ನು ನಿಷೇಧಿಸಬೇಕೆ ಎಂದು ಅವರಲ್ಲಿ ಪ್ರಶ್ನಿಸಿದಾಗ 96% ಮಂದಿ ನಿಷೇಧಿಸಕೂಡದು ಎಂದು ಉತ್ತರಿಸಿದರು. ಈ ಕಾರಕರ್ತೆಯರಿಗೆ ಸಹಾಯ ಮಾಡುವುದಾದರೆ ಈ ವೃತ್ತಿಯನ್ನು ಕಾನೂನು ಸಮ್ಮತಿಗೊಳಿಸಬಹುದು ಎಂದು 25 ಮಂದಿ ಸಲಹೆ ನೀಡಿದರು. ಈ ವೃತ್ತಿಯನ್ನು ಹೇಗೆ ತಡೆಯಬಹುದೆಂದು ಕೇಳಿದಾಗ ಈ ಮಹಿಳೆಯರಿಗೆ ಆರ್ಥಿಕ ಸಹಾಯ ನೀಡುವುದರ ಮೂಲಕ; ತಲೆ ಹಿಡುಕರನ್ನು, ಬೋಕರ್‌ಗಳನ್ನು ಶಿಕ್ಷಿಸುವ ಮೂಲಕ, ಇವರಿಗೆ ಉದ್ಯೋಗ ಕೊಡಿಸುವ ಮೂಲಕ, ಅವರಿಗೆ ಉತ್ತಮ ಸಾಮಾಜಿಕ ಪರಿಸರವನ್ನು ನಿರ್ಮಿಸುವ ಮೂಲಕ ಈ ವೃತ್ತಿಯನ್ನು ತಡೆಯಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. 34% ಮಂದಿ ಇದನ್ನು ತಡೆಯಲು ಸಾಧ್ಯವೇ ಇಲ್ಲವೆಂದೂ, ಹಾಗೆ ಮಾಡುವ ಅಗತ್ಯವಿಲ್ಲವೆಂದೂ ಅಧ್ಯಯನಕಾರರಿಗೆ ಸಲಹೆಯಿತ್ತರು.

ಮಂಗಳೂರು ಮಹಾನಗರವನ್ನು ಕೇಂದ್ರವಾಗಿರಿಸಿಕೊಂಡು ಮಾಡಿದ ಈ ಅಧ್ಯಯನದಲ್ಲಿ 19 ಮಂದಿಯ ಬಗ್ಗೆ ವಿವರವಾದ ಕೇಸ್ ಸ್ಟಡಿಯೂ ಇದೆ. ಬೀದಿ ವೇಶ್ಯೆಯರು, ಸೇಲ್ಸ್‌ ಗರ್ಲ್ಸ್, ಕಾಲ್‌ಗರ್ಲ್ಸ್, ಲೈವ್ ಬ್ಯಾಂಡ್ ನರ್ತಕಿಯರು, ಮನೆಯಲ್ಲಿ ಸ್ವತಂತ್ರವಾಗಿ ವೇಶ್ಯಾವೃತ್ತಿ ನಡೆಸುವವರು. ಲಾಡ್ಜ್‌ಗಳಲ್ಲಿ ಈ ವೃತ್ತಿಯಲ್ಲಿ ನಿರತರಾಗಿರುವವರು ಹೀಗೆ ವಿವಿಧ ಸ್ಥಳ ಸಂದರ್ಭ, ಸನ್ನಿವೇಶಗಳಲ್ಲಿ ಈ ವೃತ್ತಿಯಲ್ಲಿ ನಿರತರಾಗಿರುವವರು ತಮ್ಮ ಜೀವನ ವೃತ್ತಾಂತವನ್ನು ಸಂದರ್ಶಕರಲ್ಲಿ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಡಾ. ವೀರೇಂದ್ರ ಕುಮಾರ್ ಅವರು ಮಂಗಳೂರಿನಲ್ಲಿ ವೇಶ್ಯಾವಾಟಿಕೆಯು ಯಾವ ಸ್ಥಿತಿಯಲ್ಲಿದೆ ಎಂಬುದನ್ನು ಅಧ್ಯಯನ ಮಾಡಿ ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡಿದ್ದಾರೆ. ವೇಶ್ಯಾವಾಟಿಕೆಯ ಬಗ್ಗೆ ಹಲವಾರು ಮಂದಿ ಅಧ್ಯಯನ ಮಾಡಿದ್ದಾರೆ. ಕನ್ನಡದಲ್ಲಿಯೂ ಅನೇಕ ಕೃತಿಗಳು ಪ್ರಕಟವಾಗಿವೆ. ಡಾ. ವೀರೇಂದ್ರ ಕುಮಾರ್ ಅವರ ಈ ಕೃತಿಯು 2016ರಲ್ಲಿ ಪ್ರಕಟವಾಗಿದೆ. ಇದು ಇಂಗ್ಲಿಷ್ ಭಾಷೆಯಲ್ಲಿದೆ. ವೇಶ್ಯೆಯರ ಬದುಕಿನ್ನು ಸಮಗ್ರವಾಗಿ ಬೇರೆ ಬೇರೆ ಆಯಾಮಗಳಿಂದ ಪರಿಶೀಲನೆ ಮಾಡಿದ ಕೃತಿಯಿದು. ಇಂಗ್ಲಿಷ್‌ನಲ್ಲಿ ಈ ರೀತಿಯ ಕೃತಿಗಳಿವೆಯೋ ಗೊತ್ತಿಲ್ಲ. ಆದರೆ ಕನ್ನಡದಲ್ಲಂತೂ ಇಲ್ಲ. ಆ ಮಟ್ಟಿಗೆ ಅಧ್ಯಯನಕಾರರಿಗೆ ಇದೊಂದು ಉಪಯುಕ್ತವಾದ ಮತ್ತು ಮೌಲಿಕವಾದ ಕೃತಿಯಾಗಿದೆ.

ಡಾ. ವೀರೇಂದ್ರ ಕುಮಾರ್‌ ಅವರು ಮಂಗಳೂರಿನ ವೇಶ್ಯಾವಾಟಿಕೆಯ ಬಗ್ಗೆ ಅಧ್ಯಯನ ಮಾಡಿ ಕೃತಿ ಪ್ರಕಟಿಸಿದರು. ಇದು ಅಕಾಡೆಮಿಕ್ ಮಟ್ಟದಲ್ಲಿ ಮಾಹಿತಿ ಸಂಗ್ರಹಿಸಿ ಸಂದರ್ಶಿಸಿ, ಅಚ್ಚುಕಟ್ಟಾಗಿ ಬರೆಯಲ್ಪಟ್ಟ ಕೃತಿಯಾಗಿದೆ. ಪ್ರೊಸ್ಟಿಟ್ಯೂಶನ್ ಇನ್ ಇಂಡಿಯಾ, ಎ ಸೋಶಿಯೊಲೋಜಿಕಲ್ ಸ್ಟಡಿ ಇನ್ ಮ್ಯಾಂಗಲೂರ್, 2016ರಲ್ಲಿ ಹೊರಬಂದಿದೆ. ಅವರು ನೀಡಿದ ಮಾಹಿತಿಗಳು ನಮ್ಮನ್ನು ಬೆರಗುಗೊಳಿಸುತ್ತದೆ. ಜಗತ್ತಿನಾದ್ಯಂತ ವೇಶ್ಯಾವೃತ್ತಿ ವ್ಯಾಪಕವಾಗಿದೆ ಎಂದು ಹೇಳುತ್ತಾ ಕೆಲವು ದೇಶಗಳಲ್ಲಿ ಈ ವೃತ್ತಿಯು ದೇಶದ ಆದಾಯ ಮೂಲವೂ ಆಗಿದೆ. ಉದಾಹರಣೆಗೆ ಥಾಯ್‍ಲ್ಯಾಂಡ್ ಸರಕಾರದ 59% ಆದಾಯವು ಈ ವೃತ್ತಿಯಿಂದಲೇ ಬರುತ್ತದೆ. ಹೆಚ್ಚಿನ ಸಂಖ್ಯೆಯ ಬಾಲವೇಶ್ಯೆಯರು ಭಾರತ, ಥಾಯ್‍ಲ್ಯಾಂಡ್, ತೈವಾನ್ ಮತ್ತು ಫಿಲಿಪ್ಪೆನ್ಸ್‌ಗಳಲ್ಲೇ ಇದ್ದಾರೆ. 12 ವರ್ಷದ ಬಾಲೆಯರು ವೇಶ್ಯೆಯರಾಗಿ ದುಡಿಯುತ್ತಾರೆ ಎಂದರೆ ಈ ವೃತ್ತಿಯ ಭೀಕರತೆಯನ್ನು ಅರ್ಥ ಮಾಡಿಕೊಳ್ಳಬಹುದು. ಅಮೆರಿಕಾದ ಸಂಯುಕ್ತ ಸಂಸ್ಥಾನದಲ್ಲಿ ಒಂದು ಮಿಲಿಯದಷ್ಟು ವೇಶ್ಯೆಯರು ಸಕ್ರಿಯರಾಗಿದ್ದಾರೆ. 20% ಗಂಡಸು ವೇಶ್ಯೆಯರೂ ಇದ್ದಾರೆ. ವೇಶ್ಯಾವಾಟಿಕೆ ಅಲ್ಲಿ ಶಿಕ್ಷಾರ್ಹ ಅಪರಾಧವಾದರೂ ಅಲ್ಲಿನ 'ಪಾರ್ಲರ್ ಹೌಸ್'ಗಳಲ್ಲಿ ಈ ವೃತ್ತಿ ರಹಸ್ಯವಾಗಿ ನಡೆಯುತ್ತಿದೆ. ಬಾಂಗ್ಲಾ ದೇಶದಿಂದ ಎರಡು ಲಕ್ಷದಷ್ಟು ಹೆಣ್ಣುಮಕ್ಕಳು ಪಾಕಿಸ್ತಾನಕ್ಕೆ ಕಳ್ಳ ಸಾಗಾಣಿಕೆಗೊಳಗಾಗುತ್ತಾರೆ. ಅವರಲ್ಲಿ ಹೆಚ್ಚಿನವರು ವೇಶ್ಯಾವಾಟಿಕೆಗೆ ತಳ್ಳಲ್ಪಡುತ್ತಾರೆಂದು ಖಾತ್ರಿಯಾಗಿದೆ. ಬರ್ಮಾದಿಂದ 30 ಸಾವಿರದಷ್ಟು ಹೆಣ್ಣುಮಕ್ಕಳು ಥಾಯ್‍ಲ್ಯಾಂಡಿಗೆ ಸಾಗಿಸಲ್ಪಟ್ಟಿದ್ದಾರೆ. ಕಂಬೋಡಿಯಾದಲ್ಲಿ ಸುಮಾರು 15 ಸಾವಿರದಷ್ಟು ವೇಶ್ಯೆಯರಿದ್ದಾರೆ ಅವರಲ್ಲಿ 48% ಹೆಣ್ಣುಮಕ್ಕಳು ಅಪ್ರಾಪ್ತ ವಯಸ್ಕರು. ಚೀನಾದಲ್ಲಿ ಪ್ರವಾಸೋದ್ಯಮವು ಬೆಳೆದ ದೊಡ್ಡ ಪಟ್ಟಣಗಳಲ್ಲಿ ಮಾದಕ ದ್ರವ್ಯ ಮತ್ತು ಜೂಜುಕೇಂದ್ರಗಳಲ್ಲಿ 300ಕ್ಕೂ ಹೆಚ್ಚು ವೃತ್ತಿ ನಿರತ ವೇಶ್ಯೆಯರಿದ್ದಾರೆ. ಗಂಡು ಮಗುವನ್ನೇ ಬಯಸಿದ ಚೀನೀ ಸಮಾಜ ಇಂದು ಮಹಿಳೆಯರ ಕೊರತೆಯಿಂದ ಬಳಲುತ್ತಿದೆ. ಬೇರೆ ದೇಶಗಳಿಂದ ಮದುವೆಗಾಗಿ ಹೆಣ್ಣುಗಳನ್ನು ಆರಿಸಿ ತರಬೇಕಾದ ಪರಿಸ್ಥಿತಿ ಉಂಟಾಗಿದೆ.

ಭಾರತದಲ್ಲಿ ಸುಮಾರು 1000ಕ್ಕೂ ಹೆಚ್ಚು ವೇಶ್ಯಾವಾಟಿಕೆಯ ಕೇಂದ್ರಗಳಿವೆ. 2.3 ಮಿಲಿಯ ವೇಶ್ಯೆಯರಿದ್ದಾರೆ. ಅವರಲ್ಲಿ 25% ಬಾಲ ವೇಶ್ಯೆಯರು. ಇಂಡೋನೇಶಿಯಾದಲ್ಲಿ 71,281 ವೇಶ್ಯೆಯರು ನೋಂದಣಿಗೊಂಡಿದ್ದಾರೆ. ಅವರಲ್ಲಿ 60 ಸಾವಿರ ಮಂದಿ 15 ರಿಂದ 20 ವಯಸ್ಸಿನೊಳಗಿನವರು. ಜಪಾನಿನಲ್ಲಿ ಅತಿ ದೊಡ್ಡ ಲೈಂಗಿಕ ವ್ಯಾಪಾರ ಕೇಂದ್ರವಿದೆ. ಒಂದೂವರೆ ಲಕ್ಷ ವೇಶ್ಯೆಯರಿದ್ದಾರೆ. ಕೊರಿಯಾದಲ್ಲಿ 18 ಸಾವಿರ ನೋಂದಣಿಗೊಂಡವರು ಮತ್ತು 9000ದಷ್ಟು ನೋಂದಣಿಗೊಳ್ಳದ ವೇಶ್ಯೆಯರಿದ್ದಾರೆ. ಮಲೇಶ್ಯಾದಲ್ಲಿ ಒಂದು ಲಕ್ಷದ 42 ಸಾವಿರದಷ್ಟು ವೇಶ್ಯೆಯರಿದ್ದಾರೆ. ನೇಪಾಳದಿಂದ 5000 ಕ್ಕೂ ಹೆಚ್ಚು ಹೆಣ್ಣು ಮಕ್ಕಳು ಭಾರತ ಮತ್ತು ಬೇರೆ ದೇಶಗಳಿಗೆ ಕಳ್ಳಸಾಗಾಣಿಕೆ ಮೂಲಕ ಮಾರಾಟವಾಗುತ್ತಾರೆ. ಒಂದು ಅಧ್ಯಯನದ ಪ್ರಕಾರ 2ಲಕ್ಷದಷ್ಟು ನೇಪಾಳಿ ಹೆಣ್ಣು ಮಕ್ಕಳು ಲೈಂಗಿಕ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.

ನ್ಯೂಜಿಲೇಂಡಿನಲ್ಲಿ ವೇಶ್ಯಾವೃತ್ತಿಯಲ್ಲಿರುವವರಲ್ಲಿ ಹೆಚ್ಚಿನವರು ಏಷ್ಯಾದ ಬೇರೆ ಬೇರೆ ದೇಶಗಳ ಮಹಿಳೆಯರು, ಫಿಲಿಪೈನ್ಸ್‌ನಲ್ಲಿ ಮೂರು ಲಕ್ಷದಷ್ಟು ವೇಶ್ಯಯರಿದ್ದಾರೆ ಅವರಲ್ಲಿ 75 ಸಾವಿರ ಅಪ್ರಾಪ್ತ ವಯಸ್ಕರು. ಶ್ರೀ ಲಂಕಾದಲ್ಲಿ 15 ಸಾವಿರ ಮಂದಿ ನೋಂದಣಿಗೊಂಡ ಲೈಂಗಿಕ ಕಾರಕರ್ತೆಯರು ಇದ್ದಾರೆ. ನೋಂದಣಿಗೊಳ್ಳದವರು 30ಸಾವಿರಕ್ಕೂ ಹೆಚ್ಚು ಮಂದಿ ಇದ್ದಾರೆ. ತೈವಾನ್‌ನಲ್ಲಿ 60ಸಾವಿರದಷ್ಟು ಬಾಲ ವೇಶ್ಯೆಯರಿದ್ದಾರೆ. ಹಾರ್ಮೋನ್ ಇಂಜೆಕ್ಷನ್ ಕೊಟ್ಟು ಅವರು ದೈಹಿಕವಾಗಿ ಬೆಳೆಯುವಂತೆ ಮಾಡಲಾಗುವ ಕ್ರೂರ ವ್ಯವಸ್ಥೆಯೂ ಇದೆ. ಥ್ಯಾಲೆಂಡಿನಲ್ಲಿ ಲೈಂಗಿಕ ಪ್ರವಾಸೋದ್ಯಮವು ಪ್ರಸಿದ್ಧವಾಗಿದೆ. ಪ್ರತೀ ವರ್ಷ ಐದು ಲಕ್ಷಕ್ಕೂ ಹೆಚ್ಚು ಪ್ರವಾಸಿಗಳು ಲೈಂಗಿಕ ಸುಖಕ್ಕಾಗಿಯೇ ಇಲ್ಲಿಗೆ ಬರುತ್ತಾರೆಂದು ಅಧ್ಯಯನವೊಂದು ತಿಳಿಸುತ್ತದೆ. ವಿಯೆಟ್ನಾಮಿನಲ್ಲಿ ಎರಡು ಲಕ್ಷದಷ್ಟು ಮಹಿಳೆಯರು ಸೆಕ್ಸ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರಲ್ಲಿ 6.3% ಬಾಲ ವೇಶ್ಯಯರು. ಜಗತ್ತಿನಾದ್ಯಂತ ಮಹಿಳೆ ಮತ್ತು ಮಕ್ಕಳ ಕಳ್ಳ ಸಾಗಾಣಿಕೆಯು ದೊಡ್ಡ ಉದ್ಯಮವೇ ಆಗಿದೆ. ವಿಚಿತ್ರವೆಂದರೆ 10 ಸಾವಿರದಷ್ಟು ಗಂಡು ಬಾಲ ವೇಶ್ಯಯರೂ ಇದ್ದಾರೆ. ಗುಲಾಮರ ವ್ಯಾಪಾರವು ಕಳೆದ ಶತಮಾನದಲ್ಲೇ ನಿಲ್ಲಿಸಲ್ಪಟ್ಟಿದೆ. ಆದರೆ ಲೈಂಗಿಕ ಉದ್ಯಮವು ಜಗತ್ತಿನ ದೊಡ್ಡ ಲಾಭದಾಯಕ ವೃತ್ತಿಯಾಗಿದೆ. ಪ್ರತಿವರ್ಷ ಒಂದು ಮಿಲಿಯದಷ್ಟು ಬಾಲಕ, ಬಾಲಕಿಯರು ಈ ಉದ್ಯಮಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂಬ ಅಂಕಿ ಅಂಶಗಳನ್ನು ನೋಡಿದಾಗ ನಮ್ಮ ಜಗತ್ತು ಎತ್ತ ಸಾಗುತ್ತಿದೆ ಎಂದು ಮೂಕವಿಸ್ಮಿತರಾಗುತ್ತೇವೆ.

ಜಗತ್ತಿನ 137 ದೇಶಗಳಿಂದ 10 ಲಕ್ಷದಷ್ಟು ಹೆಣ್ಣು ಮಕ್ಕಳು ಕಳ್ಳಸಾಗಣೆಗೆ ಒಳಗಾಗುತ್ತಾರೆ. ಭಾರತದಲ್ಲಿ ಈ ಲೈಂಗಿಕ ಉದ್ಯಮವು 36.77 ಕೋಟಿಯಷ್ಟಾಗಿದೆ. ಈಗ ಈ ಮೊತ್ತ ನಾಲ್ಮಡಿ ಹೆಚ್ಚಿರಬಹುದು. ಪ್ರತಿ ವರ್ಷ ಐದು ಸಾವಿರದಷ್ಟು ಹೆಣ್ಣುಮಕ್ಕಳು ಕಾಣೆಯಾಗುತ್ತಾರೆ. ಮುಂಬೈಯ ಕಾಮಾಟಿಪುರ ಮತ್ತು ಗೋವಾದ ಬೈನಾ ಬೀಚ್‌ಗಳು ಅತಿ ಹೆಚ್ಚು ಲೈಂಗಿಕ ಉದ್ಯಮವಿರುವ ಜಿಲ್ಲೆಗಳಾಗಿವೆ. ದೇಶದ ದೊಡ್ಡ ಪಟ್ಟಣಗಳಲ್ಲೆಲ್ಲಾ ಈ ವೃತ್ತಿಯಿಂದ ಕೋಟಿಗಟ್ಟಲೆ ಗಳಿಕೆಯಾಗುತ್ತದೆ. ಅದಲ್ಲದೆ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ದಾಬಾಗಳೂ, ಸಣ್ಣ ಮನೆಗಳೂ ರಾತ್ರಿ ಹೊತ್ತಿನಲ್ಲಿ ಈ ಉದ್ಯಮದ ಕೇಂದ್ರಗಳಾಗಿವೆ. ಬೀದಿ ವೇಶ್ಯಯರು ಪ್ರಾಣವನ್ನು ಪಣಕ್ಕೊಡ್ಡಿ ವೃತ್ತಿ ನಿರತರಾಗಿರುವ ಘಟನೆಗಳೂ ಇವೆ. ವೇಶ್ಯೆಯರನ್ನು ಕೊಂದು ಹಾಕಿದ, ಕಾಡಿಗೆಸೆದು ಹೋದ, ಕಿವಿ, ಕೈ, ಕಾಲು ಕತ್ತರಿಸಿಕೊಂಡ, ಬಾವಿಗೆ ದೂಡಿದ ಇಂತಹ ಎಷ್ಟೋ ಘಟನೆಗಳು ನಡೆದಿವೆ. ಇವು ಸುದ್ದಿಯಾದವುಗಳು. ಸುದ್ದಿಯಾಗದ ಭಯಾನಕ ಕತೆಗಳು ಸಾಕಷ್ಟಿವೆ. ಎಸೆದ ಶವವನ್ನು ಪ್ರಾಣಿಗಳು ತಿಂದು ಹಾಕಿದ ಘಟನೆಗಳೂ ನಡೆದಿದೆ. ಎಲ್ಲವನ್ನೂ ದೋಚಿ ಬೀದಿಗೆ ಎಸೆಯಲ್ಪಟ್ಟ ವೇಶ್ಯೆಯರೂ ಇದ್ದಾರೆ, ಇವುಗಳು ಯಾವುವೂ ಪೋಲೀಸ್ ತನಿಖೆ ಆಗುವುದಿಲ್ಲ. ಕೋರ್ಟು ಮೆಟ್ಟಲೇರುವುದಿಲ್ಲ. ಇದರಿಂದ ಈ ವೇಶ್ಯಾವೃತ್ತಿಯಲ್ಲಿದ್ದವರು ಎದುರಿಸುವ ಸವಾಲುಗಳು ಹಿಂಸೆಗಳು ಅಸಹನೀಯವಾಗಿರುತ್ತವೆ.

ಮಂಗಳೂರು ಮಹಾನಗರಪಾಲಿಕೆಯೊಳಗಿನ ಮತ್ತು ಗ್ರಾಮಾಂತರ ಪ್ರದೇಶಗಳ ಕೆಲವು ಹೊಟೇಲುಗಳ ಲಾಡ್ಜ್‌ಗಳಲ್ಲಿ ಈ ವೃತ್ತಿಯು ನಿರಾತಂಕವಾಗಿ ನಡೆಯುತ್ತದೆ. ತಲೆಹಿಡುಕರು ಈ ವೃತ್ತಿನಿರತರನ್ನು ಬೇಕಾದಲ್ಲಿಗೆ ಆಮಂತ್ರಿಸುವ, ಇಲ್ಲವೇ ಕರೆದೊಯ್ಯುವ ಒಂದು ವ್ಯವಸ್ಥೆಯಿದೆ. ಎಲ್ಲವೂ ಈಗ ಮೊಬೈಲ್ ಮೂಲಕ ಸಂಪರ್ಕಿಸಲಾಗುತ್ತದೆ. ಹೊಟೇಲ್ ಮಾಲೀಕರು, ತಲೆಹಿಡುಕರು ಮತ್ತು ವೃತ್ತಿನಿರತ ಮಹಿಳೆಯರು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಈ ದಂಧೆಯಲ್ಲಿ ನಿರತರಾಗಿದ್ದಾರೆ. ನಾನು ಸಂಪರ್ಕಿಸಿದ ಹೊಟೇಲ್ ಮಾಲೀಕರು ಈ ಮಹಿಳೆಯರ ಬಗ್ಗೆ ಬಹಳ ಅನುಕಂಪದಿಂದಲೇ ಮಾತನಾಡಿದರು. "ಅವರು ದೇಹವನ್ನು ಬಾಡಿಗೆಗೆ ನೀಡುತ್ತಾರೆ ನಾವು ಸ್ಥಳವನ್ನು ಬಾಡಿಗೆಗೆ ನೀಡುತ್ತೇವೆ" ಎಂದು ಮೆಲುದನಿಯಲ್ಲಿ ಹೇಳಿದರು. ಅಷ್ಟೇ ಅಲ್ಲದೆ ಅವರಿಗೆ ಗೊತ್ತಿರುವ ಕೆಲವು ವೃತ್ತಿನಿರತ ಮಹಿಳೆಯರ ದಯನೀಯ ಪರಿಸ್ಥಿತಿಯ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು.

ಡಾ. ಕನರಾಡಿ ವಾದಿರಾಜ ಭಟ್ಟರು ಸಂಗ್ರಹಿಸಿ ಪ್ರಕಟಿಸಿದ ದೇವದಾಸಿಯರ ಹಾಡುಗಳು ಎಂಬ ಕೃತಿಗೆ ಕಡಲಕರೆಯ ಭಾರ್ಗವನೆಂದು ಬಿರುದು ಪಡೆದ ಕನ್ನಡದ ಶ್ರೇಷ್ಠ ಕಾದಂಬರಿಕಾರರಾದ ಡಾ. ಶಿವರಾಮ ಕಾರಂತರು ಮುನ್ನುಡಿ ಯನ್ನು ಬರೆದಿದ್ದಾರೆ. "ಈ ಪದ್ಧತಿಯು ವಿಷಯವಿಲಾಸ ಮುಖಕ್ಕೆ ಪ್ರಾಶಸ್ತ್ರ ಸಮಾಜದಲ್ಲಿ ಸ್ತ್ರೀಯರು ತಮ್ಮನ್ನು ದೇವರಿಗೆ ಅರ್ಪಿಸಿಕೊಂಡು ಕೊಡದೆ ನಡೆಸುತ್ತಿದ್ದ ಭಕ್ತಿಯ ಜೊತೆಗೆ ನಿಷ್ಠೆಯ ಬದುಕು ಹೇಗಿತ್ತು ಎಂಬುದನ್ನು ವಿವರವಾಗಿ ತಿಳಿಸಿರುತ್ತಾರೆ. ಇಂದು ವೇಶ್ಯಾವೃತ್ತಿ ಸೂಳೆಗಾರಿಕೆಯ ಪದ್ಧತಿಯಾಗಿ ಜಗತ್ತಿನುದ್ದಕ್ಕೂ ಪಸರಿಸಿದೆಯಾದರೂ ಸಾಮಾಜಿಕ ದೃಷ್ಠಿಯಿಂದ ಅದು ಸಹ ಒಂದು ಆಶ್ರಮದಂತಹ ಜೀವನಾವಸ್ಥೆಯಾಗಿ ಸ್ವೀಕೃತವಾಗಿತ್ತು ಎಂದು ತಿಳಿದೀತು... ಹಲವು ಗಂಡಸರ ಪಾಲಿಗೆ ವಿಷಯ ವಿಲಾಸದ ಬವಣೆಯಲ್ಲಿ ಸಿಲುಕಿದ ಈ ವೃತ್ತಿ ದೇವದಾಸಿಯರೆನಿಸಿಕೊಂಡ ವೇಶ್ಯೆಯರ ಪಾಲಿಗೆ ನಿತ್ಯ ಮಾಂಗಲ್ಯದ ವೃತ್ತಿಯೇ ಆಗಿತ್ತು. ತೊಗಲು ವ್ಯಾಪಾರ ಆಗಿರಲಿಲ್ಲ." ಎಂದು ಬರೆದಿದ್ದಾರೆ.

ಕನರಾಡಿಯವರು ಸಂಗ್ರಹಿಸಿದ ಈ ಕೃತಿಯಲ್ಲಿ 45 ಹಾಡುಗಳಿವೆ. ಅವುಗಳೆಲ್ಲವೂ ದಾಸರ ಕೀರ್ತನೆಗಳಂತೆ ರಾಗ ತಾಳಗಳ ಸೂಚನೆ ಸಹಿತ ರಚಿಸಲ್ಪಟ್ಟವುಗಳು. 15 ಹಾಡುಗಳು ಶಿವನ ಸ್ತುತಿಗಳಾಗಿವೆ. ಎಂಟು ಹಾಡುಗಳು ಪಾರ್ವತಿ ಸ್ತುತಿಗಳು. ನಾಲ್ಕು ವಿಷ್ಣುವಿನ ಸ್ತುತಿ, ಒಂದು ಗಣಪತಿ ಸ್ತುತಿಯಾಗಿದೆ. ಎಲ್ಲವು ಭಕ್ತಿ ಪ್ರಧಾನವಾದ ಹಾಡುಗಳು, ಮೂರು ಹಾಡುಗಳು ಶೃಂಗಾರ ಭಾವವನ್ನುಂಟು ಮಾಡುವವುಗಳು. ಎರಡು ಹಾಡುಗಳು ತೆಲುಗು ಭಾಷೆಯ ಮಿಶ್ರಣದ ಹಾಡುಗಳಾಗಿವೆ. ಬೇರೆ ಬೇರೆ ಕಡೆಯ ಕಟ್ಟೆಗಳಲ್ಲಿ ಹಾಡುವ ಹಾಡು ಗಳೆಂದು ಸೂಚಿಸಲಾಗಿದೆ. ನವರಾತ್ರಿಯ ವೇಳೆ, ದೇವರ ಬಲಿ ಉತ್ಸವದಲ್ಲಿ ಕೆರೆ ತೇರಿನ ದಿನ, ಹೂವಿನ ತೇರಿನ ದಿನ, ಹಾಡುವ ಹಾಡುಗಳೂ ಇವೆ. ಒಟ್ಟಾರೆಯಾಗಿ ದೇವಸ್ಥಾನದ ವಿವಿಧ ಪೂಜೆಗಳ ಸಂದರ್ಭದಲ್ಲಿ ಹಾಡುತ್ತಿದ್ದ ಹಾಡುಗಳಿವು.

ಇವರನ್ನು ಮದುವೆ ಸಮಾರಂಭಗಳಿಗೆ ಮತ್ತಿತರ ಕೌಟುಂಬಿಕ ಶುಭ ಸಮಾರಂಭಗಳಿಗೆ ಗೌರವದಿಂದ ಆಮಂತ್ರಿಸುತ್ತಿದ್ದರು. ಆಗ ಅವರು ಹಾಡುತ್ತಿದ್ದ ಉಡಿ ತುಂಬುವ ಹಾಡುಗಳು, ವಧುವಿಗೆ ಬುದ್ಧಿ ಮಾತು, ಬೀಗರನ್ನು ಛೇಡಿಸುವ ಹಾಡುಗಳೂ ಈ ಸಂಗ್ರಹದಲ್ಲಿದೆ. ಕುಂತಿ ಮತ್ತು ಗಾಂಧಾರಿಯವರು ಸಂವಾದ ಮಾಡುವ ಹಾಡುಗಳೂ ವಿಶಿಷ್ಟವಾಗಿವೆ.

ವೇಶ್ಯಾವಾಟಿಕೆಯ ಬಗ್ಗೆ ಹಲವಾರು ಮಂದಿ ಅಧ್ಯಯನ ಮಾಡಿ ಕೃತಿ ರಚಿಸಿದ್ದಾರೆ. ದೇವದಾಸಿಯರ ಬಗ್ಗೆ ಡಾ. ಜೋಗನ್ ಶಂಕರ್ ಅವರು ಅಧ್ಯಯನ ಮಾಡಿ ರಚಿಸಿದ ಕೃತಿ ಬಹಳ ಮಹತ್ವವುಳ್ಳದ್ದು. 1993ರಲ್ಲಿ ಪ್ರಕಟವಾದ ಈ ಕೃತಿಯು ನಂತರದ ಅಧ್ಯಯನಕಾರರಿಗೆ ಮೂಲ ಆಕರವೂ ಆಗಿದೆ. ಅಧ್ಯಯನ ಮಾಡಿದ ಬಳಿಕ ದೇವದಾಸಿಯರ ವಿಮೋಚನೆಗಾಗಿ ಪ್ರಯತ್ನಪಟ್ಟವರಲ್ಲಿ ಡಾ. ಜೋಗನ್ ಶಂಕರ್ ಮೊದಲಿಗರು ಎಂದು ಭಾವಿಸಿದ್ದೇನೆ. ದೇವದಾಸಿಯರ ಪುನರ್ವಸತಿಗಾಗಿ ವಿಮೋಚನಾ ಎಂಬ ಸಂಸ್ಥೆಯನ್ನು ಸ್ಥಾಪಿಸಲು ಪ್ರೇರೇಪಿಸಿ, ಆ ಸಂಸ್ಥೆಯ ಮೂಲಕ ದೇವದಾಸಿ ವೃತ್ತಿಯಿಂದ ಮಹಿಳೆಯರು ಹೊರ ಬಂದು ಹೊಸ ಬಾಳು ಕಟ್ಟಿಕೊಳ್ಳುವುದಕ್ಕೆ ಸಹಾಯವಾಯಿತು. ವಿಮೋಚನಾ ದೇವದಾಸಿ ಪುನರ್ವಸತಿ ಸಂಘವನ್ನು ಇವರು ಸ್ಥಾಪಿಸಿದರು. ದೇವದಾಸಿಯರಿಗೆ ಮತ್ತು ಅವರ ಮಕ್ಕಳಿಗೆ ಒಂದು ನೆಮ್ಮದಿಯ ಮತ್ತು ಗೌರವದ ಬದುಕು ರೂಪಿಸುವುದೇ ಈ ಸಂಘದ ಉದ್ದೇಶವಾಗಿತ್ತು. ಡಾ. ಜೋಗನ್ ಶಂಕರ್ ಅವರ ಜೊತೆಯಲ್ಲಿ ವಿ.ಎಸ್.ಮನವಾಡೆ, ವಕೀಲರಾದ ಬಿ.ಎಲ್.ಪಾಟೀಲ್‌, ಎಂ.ವಿ.ಪಾಟೀಲ್ ಮತ್ತಿತರ ಉತ್ಸಾಹಿ ಸಮಾಜಸೇವಾ ಮನೋಭಾವದ ತರುಣರು ಸೇರಿ ಉತ್ತರ ಕರ್ನಾಟಕದ ಹಲವು ಕಡೆಗಳಲ್ಲಿ ಈ ಸಂಘಟನೆಯ ಮೂಲಕ ದೇವದಾಸಿಯರನ್ನು ಸಂಘಟಿಸಿದರು ಮತ್ತು ಸಮಾಜದಲ್ಲಿ ಬೇರೂರಿದ್ದ ಮೂಢನಂಬಿಕೆಗಳನ್ನು ಅಳಿಸಿ ಹಾಕುವುದಕ್ಕೆ ಅಲ್ಲಲ್ಲಿ ವಿಚಾರ ಸಂಕಿರಣಗಳನ್ನು ಮಾಡಿದರು. ದೇವದಾಸಿ ಮಹಿಳೆಯರಿಗೆ ವೃತ್ತಿಪರ ತರಬೇತಿಕೊಡಿಸಿ ಸ್ವಾವಲಂಬಿಗಳಾಗುವಂತೆ ಮಾಡಲಾಯಿತು. ವಿಮೋಚನಾ ಉಡುಪು ತಯಾರಿಕಾ ಘಟಕ, ಸಹಕಾರಿ ಬ್ಯಾಂಕು ಸ್ಥಾಪನೆ, ಶೋಷಿತ ಮಕ್ಕಳಿಗಾಗಿ ವಸತಿ ಶಾಲೆ ಹೀಗೆ ಹತ್ತು ಹಲವು ಉಪಯುಕ್ತ ಕಾರ್ಯಗಳನ್ನು ಮಾಡಿ ದೇವದಾಸಿ ಪದ್ಧತಿಯ ವಿರುದ್ಧ ಒಂದು ಜನಾಂದೋಲನವನ್ನೇ ರೂಪಿಸಿದರು. 1990ರಲ್ಲೇ ಕರ್ನಾಟಕ ಸರಕಾರವು ವಿಮೋಚನಾ ದೇವದಾಸಿ ಪುನರ್ವಸತಿ ಸಂಘದ ಸೇವೆಯನ್ನು ಗುರುತಿಸಿ ರಾಜ್ಯ ಪ್ರಶಸ್ತಿಯನ್ನು ನೀಡಿದ್ದು ಶ್ಲಾಘನೀಯವಾಗಿದೆ. ದೇವದಾಸಿ ಸಂಪ್ರದಾಯದ ಸಮಸ್ಯೆಗಳ ಆಳ ಅಗಲಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಸಮಸ್ಯೆ ಪರಿಹಾರಕ್ಕೆ ಸಾಧ್ಯವಾಗುವ ಎಲ್ಲಾ ಪ್ರಯತ್ನಗಳನ್ನು ಮಾಡಿದ್ದರಿಂದಲೇ ನೂರಾರು ಕುಟುಂಬಗಳು ಇಂದು ಶೋಷಣೆರಹಿತವಾದ ಜೀವನ ನಡೆಸುವಂತಾಗಿದೆ. ಎಲ್ಲಾ ನಾಗರಿಕರಂತೆ ಗೌರವಯುತವಾಗಿ ಬಾಳುವಂತಾಗಿದೆ.

'ವೇಶ್ಯಾವಾಟಿಕೆ ಒಂದು ಅಧ್ಯಯನ' ಇದು ಡಾ. ಲೀಲಾ ಸಂಪಿಗೆಯವರು ಹಂಪಿ ವಿಶ್ವವಿದ್ಯಾಲಯಕ್ಕೆ ಪಿ.ಹೆಚ್ ಡಿ. ಪದವಿಗಾಗಿ ಸಲ್ಲಿಸಿದ ಮಹಾಪ್ರಬಂಧದ ಪರಿಷ್ಕೃತ ರೂಪದ ಕೃತಿಯಾಗಿದೆ. 2005ರಲ್ಲಿ ಪ್ರಕಟವಾಗಿದೆ. ಇವರೂ ಕೂಡಾ ಅಧ್ಯಯನದ ಜೊತೆಗೆ ಹೆಚ್.ಐ.ವಿ ಏಡ್ಸ್ ನಿಯಂತ್ರಣ ಕಾರ್ಯ ಯೋಜನೆಯ ರಾಜ್ಯ ಸಂಯೋಜಕರಾಗಿ ಕೆಲಸ ನಿರ್ವಹಿಸಿದ್ದಾರೆ. ಲೈಂಗಿಕ ವೃತ್ತಿ ನಿರತ ಮಹಿಳೆ ಯರನ್ನು ಸಂಘಟಿಸುತ್ತಾ ಅವರ ಆರೋಗ್ಯ, ಮೂಲಭೂತ ಸಮಸ್ಯೆಗಳು, ಮಾನವ ಹಕ್ಕುಗಳ ಸಂರಕ್ಷಣೆ ಇತ್ಯಾದಿಗಳ 'ನೆಲೆ' ಸಂಸ್ಥೆಯ ಸಹಕಾರದೊಂದಿಗೆ ಮಾಡಿರುತ್ತಾರೆ. ಸುಮಾರು 100ಕ್ಕೂ ಹೆಚ್ಚು ಈ ವೃತ್ತಿ ನಿರತ ಮಹಿಳೆಯರೊಂದಿಗೆ ಮುಖಾಮುಖಿಯಾಗಿ ಇನ್ನೊಂದು ಕೃತಿ ಬುದ್ಧನಿಲ್ಲದ ಆಮ್ರಪಾಲಿ ಎಂಬ ಕೃತಿಯಲ್ಲಿ ವೇಶ್ಯಾವಾಟಿಕೆ ವಿಶ್ವವ್ಯಾಪಿ ಸಮಸ್ಯೆಗಳನ್ನು ಅಧ್ಯಯನ ಮಾಡಿದ್ದಾರೆ. ಅವರು ತಯಾರಿಸಿದ ಸಮೀಕ್ಷಾ ವರದಿಯ ಮನಮಿಡಿಯುವಂತಿದೆ. ಪಾತರ ದವರು ಕೃತಿಯು ಡಾ. ಶೈಲಜಾ ಹಿರೇಮಠ ಅವರು ಹಂಪಿ ವಿಶ್ವವಿದ್ಯಾನಿಲಯದ ಮೂಲಕ ನಡೆಸಿದ ಅಧ್ಯಯನದ ಕೃತಿಯಾಗಿದೆ. 1999ರಲ್ಲಿ ಪ್ರಕಟವಾಗಿದೆ. ದೇವಸ್ಥಾನದಲ್ಲಿ ಪವಿತ್ರ ವೇಶ್ಯೆಯರಾಗಿ ಸೇವೆ ಸಲ್ಲಿಸುತ್ತಿದ್ದ ಹಲವಾರು ಮನೆತನಗಳ ಮಹಿಳೆಯರನ್ನು ಹುಡುಕಿ ಸಂದರ್ಶನ ಮಾಡಿದ ಕೃತಿಯಿದು. ಹರದೇಶಿ-ನಾಗೇಶಿ ಎಂಬ ಜಾನಪದ ಕಲೆಯ ಹಿಂದಿನ ಲಿಂಗ ಸಂಬಂಧೀ ಅಧ್ಯಯನವನ್ನೂ ಮಾಡಿದ ಇವರ ಈ ಸಂಶೋಧನಾ ಕೃತಿ 2011ರಲ್ಲಿ ಪ್ರಕಟವಾಗಿದೆ.

'ಕಾಯದ ಕಾರ್ಪಣ್ಯ' ಇದು ಕುಸುಮಾ ಶ್ಯಾನುಭೋಗ ಅವರು ಬೆಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಲೈಂಗಿಕ ವೃತ್ತಿನಿರತ ಮಹಿಳೆಯರನ್ನು ಅಧ್ಯಯನ ಮಾಡಿದ ಕೃತಿಯು 2007ರಲ್ಲಿ ಪ್ರಕಟವಾಗಿದೆ. ಕುಸುಮಾ ಶ್ಯಾನುಭೋಗರು ಈ ಮಹಿಳೆಯರನ್ನು ಈ ವೃತ್ತಿಯಿಂದ ಹೊರತರಲು ಪ್ರಯತ್ನಿಸಿದರು ಮತ್ತು ಅವರ ಮಕ್ಕಳ ಉತ್ತಮ ಭವಿಷ್ಯಕ್ಕಾಗಿ ಪ್ರಯತ್ನಿಸಿದರು. ಈ ವೃತ್ತಿನಿರತ ಮಹಿಳೆಯರ ಬಗ್ಗೆ ಅಧ್ಯಯನ ಕೃತಿ ರಚಿಸಿದವರು ಅನೇಕರು ಇದ್ದಾರೆ. ಅವರಲ್ಲಿ ಪುರುಷರೂ ಇದ್ದಾರೆ. ಈ ಮಹಿಳೆಯರನ್ನು ಹೃದಯಕ್ಕೆ ಅಪ್ಪಿಕೊಂಡು ಕೆಲಸ ಮಾಡಿದವರು ವಿರಳ. ಅವರನ್ನು ಸಂಘಟಿಸುವುದಕ್ಕೆ ಮೊದಲ ಪ್ರಯತ್ನ ಮಾಡಿ ಯಶಸ್ವಿಯಾದವರಲ್ಲಿ ಡಾ.ಜೋಗನ್ ಶಂಕರ್ ಅವರು ಮುಖ್ಯರಾಗುತ್ತಾರೆ.

ಡಾ. ಜಯಮಾಲಾ ಅವರು ಲೈಂಗಿಕ ವೃತ್ತಿ ನಿರತರ ಬಗ್ಗೆ ಮಾಡಿದ ಅಧ್ಯಯನವು ಒಂದು ದಾಖಲೆ ಕೃತಿಯಾಗಿದೆ. ಆದರೆ ಅದು ಸಾರ್ವಜನಿಕರ ಕೈಗೆ ಸಿಗದಂತೆ ಮಾಡಿದ ಸರಕಾರ ಅದನ್ನು "ಫ್ರೀಜರ್ ನೊಳಗೆ ಇರಿಸಿದೆ. ರಾಜೇಶ್ ರೈ ಚಟ್ಲಿ ಅವರು ಈ ಅಧ್ಯಯನದ ಸಾರವನ್ನು ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಜಯಮಾಲಾ ಅವರ ಈ ಅಧ್ಯಯನದಲ್ಲಿ ರಾಜ್ಯದ ಹಲವಾರು ಸ್ವಯಂ ಸೇವಾ ಸಂಸ್ಥೆಯ ಕಾರಕರ್ತರು ಮಾಹಿತಿ ಸಂಗ್ರಹಿಸುವುದರಲ್ಲಿ ತುಂಬಾ ಶ್ರಮಿಸಿದ್ದಾರೆ. ಪೊ. ಕುಂದಣಗಾರರ ಅಭಿಪ್ರಾಯದ ಪ್ರಕಾರ ದೇವದಾಸಿ ಪದ್ಧತಿಯ ಉಗಮವು ಮೇಲ್ವರ್ಗದವರಿಂದಾಗಿಯೇ ಶಾಸ್ತ್ರ ರಚಿಸಲ್ಪಟ್ಟು ಜಾರಿಗೊಂಡಿತು. ವಿದ್ಯಾವಂತರು ಮತ್ತು ಶ್ರೀಮಂತರೂ ಆಗಿದ್ದ ಮೇಲ್‌ವರ್ಗದವರು ದೇವಾಲಯದ ಪೂಜೆಯ ಕರ್ತವ್ಯವನ್ನು ಮಾತ್ರ ಮಾಡುತ್ತಿದ್ದರು. ಕೆಳ ಮಟ್ಟದ ಅಂದರೆ ಕಸಗುಡಿಸುವುದು, ತೊಳೆಯುವುದು ಮುಂತಾದ ಸಣ್ಣ ಕೆಲಸಗಳಿಗೆ ಮಹಿಳೆಯರನ್ನು ನೇಮಕ ಮಾಡಿಕೊಂಡರು. ದೇವಾಲಯದ ಇನ್ನಿತರ ನಿತ್ಯವಿಧಿಗಳಾದ ಪೂಜಾ ಕರ್ತವ್ಯಗಳಿಗೂ ಹೆಂಗಸರನ್ನು ನೇಮಿಸಿದರು. ಇದೇ ಮಂದೆ ದೇವದಾಸಿ ಪದ್ಧತಿಗೆ ಕಾರಣವಾಯಿತು ಎನ್ನುತ್ತಾರೆ.

ಸೂರ ದೇವಾಲಯಕ್ಕೆ ಕನೈಯರನ್ನು ಅರ್ಪಿಸುವವನು ಸೂರ್ಯಲೋಕದಲ್ಲಿ ಸ್ಥಾನ ಪಡೆಯುವನು ಎಂದು ಭವಿಷ್ಯ ಪುರಾಣವು ಸಾರಿತು. ವೇಶ್ಯೆಯರು ದೇವಸ್ಥಾನದಲ್ಲಿ ಸೇವೆ ಸಲ್ಲಿಸಿದರೆ ವಿಷ್ಣು ಲೋಕವನ್ನು ಹೊಂದಬಹುದು ಎಂದು ಶಾಸ್ತ್ರಗಳ ಮೂಲಕ ಆಮಿಷವೊಡ್ಡಿತು. ಕಾಮದ ಅನುಭೋಗಕ್ಕೆ ಯಾವ ಮಡಿವಂತಿಕೆಯೂ ಇಲ್ಲದಂತೆ ಶಾಸ್ತ್ರ ರಚಿಸಿ, ದೈವೀ ಅನುಮೋದನೆಯನ್ನು ನೀಡಿ ವೇಶ್ಯಾವಾಟಿಕೆಯನ್ನು ಕಾನೂನು ಬದ್ಧಗೊಳಿಸಿತು. ಹಿಂದಿನ ಜನ್ಮದ ಕರ್ಮಫಲವೇ ವೇಶ್ಯಾವೃತ್ತಿಗೆ ಕಾರಣವೆಂದು ನಂಬಿಸಲಾಗುತ್ತಿತ್ತು. ವಿವಾಹಿತ ಸ್ತ್ರೀಯು ಗಂಡನಿಗೆ ನಿಷ್ಠಳಾಗಿದ್ದರೆ ಸ್ವರ್ಗವನ್ನು ಪಡೆಯುತ್ತಾಳೆ. ಸತಿ ಸಹಗಮನ ಮಾಡಿದರಂತೂ ಆಕೆ ಗಂಡನಿಗೂ ಸ್ವರ್ಗ ಪ್ರಾಪ್ತಿಯಾಗುವಂತೆ ಮಾಡುತ್ತಾಳೆ ಎಂಬ ನಂಬಿಕೆಯು ವ್ಯಾಪಕವಾಗಿ ಸಮಾಜದಲ್ಲಿ ಹರಡುವಂತೆ ಪ್ರಚಾರ ಮಾಡಿದ್ದರಿಂದ ಮಧ್ಯಯುಗದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಹೊಯ್ಸಳ ಮತ್ತು ವಿಜಯನಗರದರಸರ ಕಾಲದಲ್ಲಿ ಸಹಗಮನ ಪದ್ಧತಿಯು ಹೆಚ್ಚಾಗಿತ್ತು ಎಂದು ಶಾಸನಗಳಿಂದ ಮತ್ತು ಇಲ್ಲಿ ಅಲ್ಲಲ್ಲಿ ಕಾಣಸಿಗುವ ಮಾಸ್ತಿಕಲ್ಲುಗಳಿಂದ ತಿಳಿದು ಬರುತ್ತದೆ.

ವಿಜಯನಗರದರಸರ ಕಾಲದಲ್ಲಿ ವೇಶ್ಯಾವಾಟಿಕೆ ಮೂರು ವಿಧದಲ್ಲಿತ್ತು. ವಾರಾಂಗನೆಯರು ಸೂಳೆಗೇರಿಯಲ್ಲಿ ವಾಸಿಸುತ್ತಿದ್ದರು ಇವರು ದೇವಾಲಯ ಮತ್ತು ರಾಜರ ಆಸ್ಥಾನಕ್ಕೆ ಹೊಂದಿಕೊಂಡು ವೃತ್ತಿ ನಿರತರಾಗಿದ್ದರು. ಇವರು ಸ್ವತಂತ್ರವಾಗಿ ಜೀವಿಸುತ್ತಿದ್ದರು. ಶ್ರೀಮಂತರು, ಮಂತ್ರಿಗಳು, ದಂಡನಾಯಕರು, ಸಾಮಂತರು ಇವರನ್ನು ಉಪಪತ್ನಿಯರಾಗಿ ಸ್ವೀಕರಿಸುತ್ತಿದ್ದರು. ಅಂತಃಪುರದಲ್ಲಿ ಮತ್ತು ರಾಜನ ಸಮ್ಮುಖದಲ್ಲಿ ಆಸನ ಸ್ವೀಕರಿಸಿ ವೀಳ್ಯವನ್ನು ಮೆಲ್ಲುವಷ್ಟು ಗೌರವವಿರುತ್ತಿತ್ತು. ರಾಜನ ದಂಡಯಾತ್ರೆಗಳಲ್ಲಿ ಸೇನಾಡೇರೆಗಳಲ್ಲಿಯೂ ಇವರು ಜೊತೆಗಿರುತ್ತಿದ್ದರು. ಇವರು ಸೈನಿಕರಲ್ಲಿ ಸ್ಫೂರ್ತಿ ತುಂಬುತ್ತಿದ್ದರು. ತೀರಾ ಕೆಳವರ್ಗದ ಸೈನಿಕರಿಗೆ ಸ್ಪೂರ್ತಿ ತುಂಬಲು ಸ್ಥಳೀಯವಾಗಿ ವಾಸಿಸುವ ದೇವದಾಸಿ ಯವರು, ಬಸವಿಯರು ಒದಗುತ್ತಿದ್ದರು. ಈ ವಾರಾಂಗನೆಯರು ನೃತ್ಯ, ಸಂಗೀತ, ಇತ್ಯಾದಿ ಕಲೆಗಳಲ್ಲಿ ಪರಿಣತರಾಗಿರುತ್ತಿದ್ದರು.

ವಿಜಯನಗರದ ಅಚ್ಚುತರಾಯರ ಕಾಲದಲ್ಲಿ 12 ಸಾವಿರ ಸೈನಿಕರ ಸಂಬಳವನ್ನು ಪ್ರತ್ಯೇಕ ತೆರಿಗೆ ಎಂದು ವೇಶ್ಯೆಯರಿಂದಲೇ ಸಂಗ್ರಹಿಸಲಾಗುತ್ತಿತ್ತು. ರಾಜ್ಯದ ವೇಶ್ಯಾಗೃಹಗಳಿಂದ ಸಂಗ್ರಹಿಸಿದ ತೆರಿಗೆಯಿಂದಲೇ ದೊಡ್ಡ ರಕ್ಷಣಾಪಡೆಯನ್ನು ನಡೆಸಲಾಗುತ್ತಿತ್ತು ಎಂದರೆ ವೇಶ್ಯಾವಾಟಿಕೆಯು ರಾಜಾದಾಯದಲ್ಲಿ ಎಷ್ಟು ಮುಖ್ಯವಾಗಿತ್ತು ಎಂದು ತಿಳಿಯುತ್ತದೆ.

ದೇವದಾಸಿಯರು ದೇವರಿಗೆ ಸ್ನಾನ ಮಾಡಿಸುವುದು, ಚೌರಿ ಬೀಸುವುದು ರಥಯಾತ್ರೆಯಲ್ಲಿ ಬೆಳ್ಳಿ ದಂಡ ಒಯ್ಯುವುದು, ಸ್ತಂಭ ಮತ್ತು ಮೂಡಗಳ ಬಳಿ ನಿಲ್ಲುವುದು ಮುಂಜಾನೆ, ಸಂಜೆ ಹಾಡುವುದು, ನರ್ತಿಸುವುದು ಇತ್ಯಾದಿ ಕೆಲಸಗಳನ್ನು ಮಾಡುತ್ತಿದ್ದರು. ಈ ಕಾರಣಕ್ಕಾಗಿಯೇ ದೇವಸ್ಥಾನಗಳು ನಿರ್ಮಾಣ ಗೊಳ್ಳುವಾಗ ನಾಟ್ಯ ಮಂಟಪ ಮತ್ತು ಸಭಾಮಂಟಪಗಳು ಸೇರ್ಪಡೆಗೊಂಡವು. ಹೊಸ ಮಂಟಪಗಳು ಹಳೇದೇವಸ್ಥಾನಗಳಲ್ಲಿ ಕಟ್ಟಲ್ಪಟ್ಟು ನವೀಕರಣಗೊಂಡವು.

ದೇವಸ್ಥಾನಗಳಲ್ಲಿ ನರ್ತಕಿಯರಾಗಿ ಸೇವೆ ಸಲ್ಲಿಸಲು ರಾಜರೇ ಎಲ್ಲೆಲ್ಲಿಂದ ನರ್ತಕಿಯರನ್ನು ಕರೆತರುತ್ತಿದ್ದರು. ಕ್ರಿ ಶಕ. 1531ರ ಶಾಸನವೊಂದರಲ್ಲಿ ಕುಪ್ಪಾಸಾನಿಯ ಮಗಳಾದ ಮುದ್ದು ಕುತ್ಪಾಯಿಯನ್ನು ರಾಜನು ಕರೆತಂದನೆಂದು ತಿಳಿಯುತ್ತಿದೆ. ಅವರಿಗೆ ಭೂಮಿ ಮತ್ತು ವಸ್ತುಗಳ ಉಡುಗೊರೆಗಳನ್ನು ನೀಡಲಾಗುತ್ತಿತ್ತು. ಅವರು ವಂಶ ಪಾರಂಪರವಾಗಿ ಸೇವೆ ಸಲ್ಲಿಸುತ್ತಿದ್ದರು. ದೇವಸ್ಥಾನಕ್ಕೆ ಹೀಗೆ ದೇವದಾಸಿ ಯರನ್ನು ನೀಡುವುದೂ ಕೂಡಾ ಒಂದು ಪವಿತ್ರಕಾರ್ಯವೆಂಬ ಭಾವನೆಯು ಸಮಾಜದಲ್ಲಿತ್ತು. ಹಾಗೆಯೇ ದೇವದಾಸಿಯಾಗುವುದೂ ಕೂಡಾ ಒಂದು ಪವಿತ್ರವಾದ ಧಾರ್ಮಿಕ ಕಾರ್ಯವೆಂದೇ ಸಮಾಜ ಭಾವಿಸಿದ ಕಾಲವಾಗಿತ್ತದು. ಮಾತ್ರವಲ್ಲ ಈ ಪದ್ಧತಿಯಿಂದಾಗಿ ದೇವಸ್ಥಾನಗಳು ಸದಾ ಭಕ್ತರನ್ನು ಆಕರ್ಷಿಸುವ ತಾಣವಾಗಿಯೂ ಪರಿವರ್ತನೆಗೊಂಡಿತ್ತು.

ಈ ದೇವದಾಸಿಯರು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡ ಹಲವಾರು ಘಟನೆಗಳು ಚರಿತ್ರೆಯಲ್ಲಿ ದಾಖಲಾಗಿವೆ. ದೇವಸ್ಥಾನ, ಕೆರೆ, ಬಾವಿ, ಕಾಲುವೆಗಳನ್ನು ಕಟ್ಟಿಸಿದ ನಿದರ್ಶನಗಳಿವೆ. "ಶ್ರೀರಂಗಂ" ನಲ್ಲಿದ್ದ ದೇವದಾಸಿಯೊಬ್ಬಳು ಮಹಮದೀಯ ದಂಡನಾಯಕನನ್ನು ಮೋಸದ ಬಲೆ ಬೀಸಿ ದೇವಸ್ಥಾನದ ಗೋಪುರದಿಂದ ಕೆಳಗೆ ತಳ್ಳಿಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆಯನ್ನು ಕೇಶವಾಚಾರ್ಯರು ಬರೆದ ವೈಷ್ಣವೀಯಂ ಎಂಬ ಕೃತಿ ವಿವರಿಸುತ್ತದೆ. ಅಂದಿನಿಂದ ಇವಳ ವಂಶದವರು ಶ್ರೀರಂಗಂನ ದೇವಾಲಯ ದಲ್ಲಿ ವಿಶೇಷ ಗೌರವದ ಹಕ್ಕನ್ನು ಪಡೆದುಕೊಂಡು ಬಂದಿದ್ದಾರೆ ಎಂದು ತಿಳಿಸುತ್ತದೆ. (ಪುಟ 147, ವಿಜಯನಗರ ಕಾಲದ ಮಹಿಳೆಯರ ಕೊಡುಗೆಗಳು)

ರೂಪಾ ಹಾಸನ್‌ರವರು ಪ್ರಜಾವಾಣಿಯ (21-04-2021) ಸಂಗತದಲ್ಲಿ ಕೋವಿಡ್ ಹರಡಲು ವೇಶ್ಯೆಯರೇ ಪ್ರೇರಣೆಯಾಗುತ್ತಾರೆ ಎಂಬ ಬಗ್ಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಅಮೇರಿಕಾದ ಯೇಲ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ತಮ್ಮ ವರದಿಯಲ್ಲಿ "ಭಾರತದ ಕೆಂಪು ದ್ವೀಪ ಪ್ರದೇಶಗಳನ್ನು ಮುಚ್ಚಿದರೆ ಹೊಸ ಕೋವಿಡ್ ಪ್ರಕರಣಗಳ ಪೈಕಿ ಶೇ. 72ರಷ್ಟನ್ನು ತಡೆಗಟ್ಟ ಬಹುದು. ಲೈಂಗಿಕ ಚಟುವಟಿಕೆಗಳನ್ನು ನಿರ್ಬಂಧಿಸಿದರೆ ಸೋಂಕು ಹರಡುವಿಕೆ ಮತ್ತು ಸಾವಿನ ಪ್ರಮಾಣವನ್ನು ಶೇ. 60ರಷ್ಟು ತಗ್ಗಿಸಬಹುದು" ಎಂದು ಹೇಳಿದೆ.

ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೋ) ದಾಖಲೆಗಳ ಪ್ರಕಾರ ನಮ್ಮ ದೇಶದಲ್ಲಿ ನೋಂದಣಿಯಾದ ಲೈಂಗಿಕ ಕಾರ್ಯಕರ್ತೆಯರು 6,37,500. ಲೈಂಗಿಕ ಚಟುವಟಿಕೆಯಲ್ಲಿ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಇದನ್ನು ಗಮನಿಸಿ ಆಸ್ಟ್ರೇಲಿಯಾ, ಜರ್ಮನಿ, ನೆದರ್ಲೆಂಡ್ಸ್‌ ನಲ್ಲಿ ವೇಶ್ಯಾಗೃಹಗಳನ್ನು ಅನಿರ್ದಿಷ್ಟಾವಧಿಯವರೆಗೆ ಮುಚ್ಚಲಾಗಿದೆ. ಇದರಿಂದ ಸೋಂಕಿನ ಪ್ರಮಾಣ ತಗ್ಗಿದೆ. ಜಪಾನ್ ಇಂತಹ ನಿಷೇಧಗಳನ್ನು ವಿಧಿಸದ ಕಾರಣ ಅಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಿವೆ.

ಭಾರತದಲ್ಲಿ ಹಳ್ಳಿ ಮೂಲೆಗಳಿಗೂ ವೇಶ್ಯಾವಾಟಿಕೆಯ ಬೇರು ವ್ಯಾಪಿಸಿದೆ. ಏಡ್ಸ್ ನಿಯಂತ್ರಣಕ್ಕಾಗಿ ನ್ಯಾಕೋ ಸಂಸ್ಥೆಯು ಸರ್ಕಾರದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಸರ್ಕಾರ ಮತ್ತು ವಿಶ್ವ ಮಟ್ಟದ ಸ್ವಯಂಸೇವಾ ಸಂಸ್ಥೆಗಳಿಂದ ಕೋಟ್ಯಾಂತರ ರೂಪಾಯಿಗಳ ಅನುದಾನವು ಕಾಂಡೋಂ ಹಂಚಿಕೆಯ ಯೋಜನೆಗಾಗಿ ಹರಿದು ಬರುತ್ತಿದೆ. ಲಕ್ಷಾಂತರ ಮಂದಿ ತಳಹಂತದ ಲೈಂಗಿಕ ಕಾರ್ಯಕತೆಯರು, ಸಲಿಂಗಕಾಮಿಗಳು, ಲಿಂಗತ್ವ ಅಲ್ಪಸಂಖ್ಯಾತರನ್ನು ಕಾಂಡೋಂ ವಿತರಣೆಯ ಜಾಲದಲ್ಲಿ ನೋಂದಣಿ ಮಾಡಿಕೊಳ್ಳಲಾಗಿದೆ. ಕಾಂಡೋಂ ಹಂಚಿಕೆಗೆ ಪ್ರೋತ್ಸಾಹ ಧನದ ಜೊತೆಗೆ ಇನ್ನಷ್ಟು ಪ್ರೋತ್ಸಾಹ ಧನದ ಅಮಿಷವನ್ನು ಒಡ್ಡಲಾಗುತ್ತದೆ. ಇದರಿಂದ ವೇಶ್ಯಾವಾಟಿಕೆ ವ್ಯಾಪಕವಾಗುತ್ತಿದೆ. ಸೆಕ್ಸ್ ಟ್ಯೂರಿಸಂ, ಸೆಕ್ರೋದ್ಯಮ ಮುಂತಾದ ಗೋಪ್ಯ ಚಟುವಟಿಕೆಗಳು ಹಲವು ಬಗೆಯ ಮಾಫಿಯಾಗಳು ಮುಂತಾದವು ಲೆಕ್ಕಕ್ಕೆ ಸಿಗದ ನೋಂದಣಿಯಾಗದ ಈ ದಂಧೆಯಿಂದ ಸೋಂಕಿನ ವ್ಯಾಪಕತೆ ವಿಪರೀತವಾಗಿ ಹೆಚ್ಚುತ್ತಿದೆ. ರಾಜ್ಯ ಸರ್ಕಾರದ ಸಚಿವರಾದ ಶ್ರೀರಾಮುಲು ಅವರ ಗಮನಕ್ಕೆ ತಂದಾಗ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿದ್ದರು. ಸಂಬಂಧಪಟ್ಟ ಇಲಾಖೆಗಳಿಗೆ ಆದೇಶ ನೀಡಿ ಕಾಂಡೋಂ ವಿತರಣೆಯ ಜಾಲದಲ್ಲಿರುವ ಸಂತೃಸ್ತರಿಗೆ ತಕ್ಷಣ ಆಹಾರ ಧಾನ್ಯ ಮತ್ತು ಸಹಾಯ ಧನ ವಿತರಣೆ ಮತ್ತು ಶಾಶ್ವತ ಪುನರ್‌ವಸತಿಗೆ ವಿಸ್ತ್ರತ ವರದಿಯೊಂದಿಗೆ ತಕ್ಷಣವೇ ಪ್ರಸ್ತಾಪವನ್ನು ಸಲ್ಲಿಸಲು ಸೂಚಿಸಿದ್ದರು. ಈ ಕಾರ್ಯಕರ್ತೆಯರಿಗೆಲ್ಲಾ ಕೋವಿಡ್ ಸೋಂಕಿನ ಜಾಗೃತಿಯನ್ನುಂಟುಮಾಡುವುದೇ ಉದ್ದೇಶವಾಗಿತ್ತು. ಆದರೆ ಯಾವುದೂ ಕಾರ್ಯಗತವಾಗುತ್ತಿಲ್ಲ. ಸುರಕ್ಷಿತ ಲೈಂಗಿಕತೆಯ ಹೆಸರಿನಲ್ಲಿ ಪ್ರತಿನಿತ್ಯ ಕಾಂಡೋಂ ವಿತರಣೆ ಮಾಡುತ್ತಲೇ ಇದೆ. ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯಿದೆ, ವಿಪತ್ತು ನಿರ್ವಹಣ ತಡೆ ಕಾಯ್ದೆಗಳು ಕೇವಲ ಆದೇಶಗಳಾಗಿ ಸತ್ತು ಬಿದ್ದಿವೆ. ಪರಸ್ಪರ ವೈರುದ್ಧದ ರೀತಿಯಲ್ಲಿ ವರ್ತಿಸುವ ಸರ್ಕಾರದ ನಡೆಯನ್ನು ಪ್ರಶ್ನಿಸಿ ತಕ್ಷಣ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಎಚ್ಚರಿಸಿದ್ದಾರೆ.

ಇದೇ ಸಮಯದಲ್ಲಿ ನಾನು (6-4-2021ರಂದು) ಮಂಗಳೂರಿನ ಕೇಂದ್ರ ಭಾಗದಲ್ಲಿರುವ ಹೋಟೇಲಿನ ಮಾಲಕರನ್ನು ಸಂದರ್ಶಿಸಿದೆ. ಕೋವಿಡ್ ಕಾಲದಲ್ಲಿ ಈ ದಂಧೆಯು ಹೆಚ್ಚಿದೆಯೇ ತಗ್ಗಿದೆಯೇ ಎಂದು ಪ್ರಶ್ನಿಸಿದಾಗ ಅವರು ತಕ್ಷಣ ಪ್ರತಿಕ್ರಿಯಿಸಿದ ರೀತಿಗೆ ಬೆರಗಾದೆ. "ಯಾವ ಸೋಂಕು ಈ ದಂಧೆಯನ್ನು ಬಾಧಿಸಿಲ್ಲ. ಹಗಲು ರಾತ್ರಿ ಬಿಡುವಿಲ್ಲದೆ ಈ ವ್ಯಾಪಾರ ನಡೆಯುತ್ತಿದೆ. ನೀವು ನಮ್ಮ ಹೋಟೇಲಿಗೆ ಬರುವ ದಾರಿಯಲ್ಲಿ ಜನ ನಿಂತದ್ದನ್ನು ಕಂಡಿಲ್ಲವೇ? ಸೆರ್ಕ್ಸ್‌ವರ್ಕರ್ಗಳು ಹೊಟ್ಟೆಪಾಡಿಗಾಗಿ ಮಾಡುವ ಈ ಕೆಲಸವನ್ನು ನಿಲ್ಲಿಸಿದರೆ ಅವರು ಬದುಕುವುದಾದರೂ ಹೇಗೆ?" ಎಂದು ಅವರಿಗೆ ಗೊತ್ತಿರುವ ಕೆಲವು ಕಾರ್ಯಕರ್ತೆಯರ ಬಗ್ಗೆ ಅನುಕಂಪದಿಂದಲೇ ಮಾತನಾಡಿದರು.

ಇದು ದೊಡ್ಡ ಪಟ್ಟಣಗಳ ಈಗಿನ ಪರಿಸ್ಥಿತಿ. ಆದರೆ ಉತ್ತರ ಕರ್ನಾಟಕದಲ್ಲಿ ಕಳೆದ ವರ್ಷ ಕೋವಿಡ್ ಸೋಂಕಿನ ಭಯದಿಂದ ಲೈಂಗಿಕ ಕಾರ್ಯಕರ್ತೆಯರು ತುಂಬಾ ಕಷ್ಟಪಟ್ಟ ಕತೆಯನ್ನು ಮಂಜುಶ್ರೀ ಕಡಕೋಳ ಅವರು ಪ್ರಜಾವಾಣಿಯಲ್ಲಿ ಅಧ್ಯಯನ ಪೂರ್ಣವಾದ ಲೇಖನವನ್ನು ಬರೆದಿದ್ದರು. "ನಮಗೆ ಏಡ್ಸ್ ಎಂದರೆ ಭಯವಿಲ್ಲ. ಆದರೆ ಕೊರೋನಾದಿಂದ ಬದುಕಿಲ್ಲ. ಮನೆ ಬಾಡಿಗೆ ಕಟ್ಟಲು ಹಣ ವಿಲ್ಲ. ಪೌಷ್ಟಿಕ ಆಹಾರಕ್ಕೂ ಗತಿಯಿಲ್ಲದಂತಾಗಿದೆ. ಮಕ್ಕಳ ಭವಿಷ್ಯದ ಚಿಂತೆಯೂ ಕಾಡುತ್ತಿದೆ. ಮನೆ ಮಂದಿಯೂ ಹೊರಗೆ ಹೋಗದ ಕಾರಣ ಲೈಂಗಿಕ ವೃತ್ತಿ ನಿರತರಿಗೆ ದುಡಿಮೆಯ ದಾರಿಯೇ ಇಲ್ಲದಂತಾಗಿದೆ" ಎಂದು ತಮ್ಮ ದುಃಖವನ್ನು ತೋಡಿಕೊಂಡಿದ್ದಾರೆ.

ಕರ್ನಾಟಕ ಸೆಕ್ಸ್ ವರ್ಕರ್ ಯೂನಿಯನ್ ಮತ್ತು ಸಂಗಮ ಸಂಸ್ಥೆಯು ಇವರ ಸಹಾಯಕ್ಕೆ ಮುಂದಾಗಿದೆ. ಇವರ ಜೊತೆಗೆ ಲಾಕ್‌ಡೌನ್‌ ಮೊದಲ ಮೂರು ತಿಂಗಳು ಸಾಧನಾ ಸಂಸ್ಥೆ, ಅಜೀಂಪ್ರೇಮ್‌ ಜೀ ಪೌಂಡೇಶನ್, ಸಾಲಿಡಾರಿಟಿ ಪೌಂಡೇಶನ್, ಗಮನ ಮಹಿಳಾ ಸಮೂಹ ಸಂಸ್ಥೆಗಳು ಲೈಂಗಿಕ ಕಾರ್ಯಕರ್ತೆಯರಿಗೆ ರೇಷನ್ ಕಿಟ್ಟ ವಿತರಿಸಿ ಸಹಕರಿಸಿದ್ದಾರೆ.

ಬಹುಶಃ ಈ ವರ್ಷ 2021ರ ಕೋವಿಡ್ ಸೋಂಕಿನ ಅಲೆಯು ತೀವ್ರವಾಗಿ ವ್ಯಾಪಿಸಿದಾಗಲೂ ಅಲ್ಲಿನ ಕಾರ್ಯಕರ್ತೆಯರಿಗೆ ಸಂಕಷ್ಟದ ಸಮಯದಲ್ಲಿ ಅವೇ ಸ್ವಯಂಸೇವಾ ಸಂಸ್ಥೆಗಳು ಸಹಾಯಹಸ್ತವನ್ನು ಚಾಚಿರಬಹುದು. ಮಂಗಳೂರಿನಲ್ಲಿ ಹೀಗೆ ಪ್ರತ್ಯಕ್ಷವಾಗಿ ಸಹಾಯಹಸ್ತ ಚಾಚಿ ಸಂಕಷ್ಟದಲ್ಲಿ ನೆರವಾದ ಸಂಸ್ಥೆಗಳಿರಬಹುದು. ಆದರೆ ಅವರು ತಮ್ಮನ್ನು ಸಾರ್ವಜನಿಕವಾಗಿ ಲೈಂಗಿಕ ಕಾರ್ಯಕರ್ತೆಯರೆಂದು ಕರೆಸಿಕೊಳ್ಳುವುದಿಲ್ಲ. ಬೆಥನಿ ಸಂಸ್ಥೆಯ ಒಕ್ಕೂಟದ ಕಾರ್ಯಕ್ರಮವೊಂದರಲ್ಲಿ ತೃತೀಯ ಲಿಂಗಿಯೊಬ್ಬರು ತಮ್ಮ ಕಷ್ಟಗಳಿಗೆ ಯಾರೂ ಸಾರ್ವಜನಿಕರು ಸ್ಪಂದಿಸಿಲ್ಲ. ಭಿಕ್ಷೆ ಬೇಡಿ ಹೊಟ್ಟೆಹೊರೆಯುವ ನಮ್ಮ ಪಾಡು ಲಾಕ್‌ಡೌನ್ ಅವಧಿಯಲ್ಲಿ ತುಂಬಾ ಶೋಚನೀಯವಾಗಿತ್ತು. ನಮ್ಮ ಬಗ್ಗೆ ಸಹಾನುಭೂತಿ ವ್ಯಕ್ತಪಡಿಸುವವರೇ ಇರಲಿಲ್ಲವೆಂದು ಬೇಸರ ವ್ಯಕ್ತಪಡಿಸಿದರು. ಹೀಗೆ ಕೊರೋನಾ ಅವಧಿಯಲ್ಲಿ ಲೈಂಗಿಕ ಕಾರ್ಯಕರ್ತೆಯರ ಬಗ್ಗೆ ಧನಾತ್ಮಕ ಮತ್ತು ಋಣಾತ್ಮಕ ಎರಡೂ ಅಭಿಪ್ರಾಯಗಳಿವೆ. ಲೈಂಗಿಕ ದಂಧೆಯೂ ಕಡಿಮೆ ಯಾಗಿದೆ. ಇದೇ ಕಾಲದಲ್ಲಿ ಭಯವಿಲ್ಲದೆ ನಿರಾತಂಕವಾಗಿ ಹೆಚ್ಚಿದೆ ಎನ್ನುವುದಕ್ಕೂ ಸಾಕ್ಷಿಗಳಿವೆ.

1996ರಲ್ಲಿ ದಿ ನೇಶನ್ ಪತ್ರಿಕೆಯಲ್ಲಿ ಒಂದು ಸಮೀಕ್ಷೆ ಪ್ರಕಟವಾಗಿತ್ತು. ಶ್ರೀಮಂತ ಪ್ರೌಢ ಶಾಲೆಗಳಲ್ಲಿ ಕಲಿಯುತ್ತಿದ್ದ ಶೇ.70ರಷ್ಟು ವಿದ್ಯಾರ್ಥಿಗಳು ವೇಶ್ಯಾವಾಟಿಕೆ ಸೇರಿದಂತೆ ಅಪರಾಧ ಸಂಬಂಧಿ ಕೃತ್ಯಗಳಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಲು ಬಯಸಿದ್ದರು ಹೆಚ್ಚು ದುಡ್ಡು ಸಂಪಾದನೆ ಮಾಡಬಹುದೆಂದು ಅವರ ಅಭಿಪ್ರಾಯವಾಗಿತ್ತು.

ವಿಶ್ವ ಫುಟ್‌ಬಾಲ್ ಪಂದ್ಯ 2010ರಲ್ಲಿ ಆಫ್ರಿಕದಲ್ಲಿ ನಡೆದಾಗ "ಕನಸರ್ನ್ಡ್ ಯೂತ್ ಪೀಪಲ್ ಇನ್ ಸೌತ್ ಆಫ್ರಿಕಾ" ಎಂಬ ಸಂಘಟನೆಯ ನಿರ್ದೇಶಕಿ ಬೊಂಗ್ ಥೇಥಾ ದೇಶಾದ್ಯಂತ ಜಾಗೃತಿಯನ್ನುಂಟು ಮಾಡುವ ಕಾರ್ಯಕ್ರಮ ರೂಪಿಸಿದರು. ಆ ಸಮಯದಲ್ಲಿ ಸುಮಾರು 40 ಸಾವಿರ ಹುಡುಗಿಯರ ಕಳ್ಳ ಸಾಗಣೆ ನಡೆದಿದೆ ಎಂದು ಅಧ್ಯಯನ, ಸಂಶೋಧನೆಗಳ ಮೂಲಕ ಜಗತ್ತಿನ ಮುಂದೆ ವಾಸ್ತವವನ್ನು ತೆರೆದಿಟ್ಟರು.

ಐದು ಲಕ್ಷದಷ್ಟು ವಿದೇಶೀ ಫುಟ್‌ಬಾಲ್ ಅಭಿಮಾನಿಗಳನ್ನು ಸೆಳೆಯಲು ಅಲ್ಲಿನ ಸರಕಾರ ಅತ್ಯಂತ ಅಗ್ಗದಲ್ಲಿ ಉತ್ತಮ ಲೈಂಗಿಕ ಸೇವೆಯನ್ನು ನೀಡುತ್ತದೆ ಎಂದು ಪ್ರಚಾರ ಮಾಡಲಾರಂಭಿಸಿತ್ತು. ವೇಶ್ಯಾವಾಟಿಕೆಗೆ ದಕ್ಷಿಣ ಆಫ್ರಿಕಾದಲ್ಲಿದ್ದ ನಿಷೇಧವನ್ನು ತೆಗೆದು ಹಾಕಿ, ಕಾನೂನು ಬದ್ಧಗೊಳಿಸಿದೆ. ಸರಕಾರದ ಉದ್ದೇಶವಿಷ್ಟೇ ಫುಟ್‌ಬಾಲ್ ನೆಪದಲ್ಲಿ ಹಣ ಗಳಿಸುವುದು.

ಹಿಂದೆ 2006ರಲ್ಲಿ ಜರ್ಮನ್‌ನಲ್ಲಿ ವಿಶ್ವಕಪ್ ನಡೆದಾಗಲೂ ಸಾವಿರಾರು ಮಂದಿ ಹೆಣ್ಮಕ್ಕಳ ಕಳ್ಳ ಸಾಗಾಣಿಕೆಯಾಗಿತ್ತು ಎಂದು ವರದಿ ತಿಳಿಸುತ್ತದೆ. ವಿಶ್ವದಲ್ಲಿ ಯಾವ ದೇಶದಲ್ಲಿ ಇಂತಹ ದೊಡ್ಡ ಪಂದ್ಯಾಟ ನಡೆದರೂ ವೇಶ್ಯಾವಾಟಿಕೆಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ವ್ಯವಸ್ಥೆ ಮಾಡಲು ಸಂಘಟನೆಗಳು ಮರೆಯುವುದಿಲ್ಲ. ವಿಶ್ವ ಒಲಿಂಪಿಕ್ ಕ್ರೀಡೆಗಳು ನಡೆದಾಗಲೂ ಈ ರೀತಿಯ ಮಾಂಸ ವ್ಯಾಪಾರಗಳು ರಾಜಾರೋಷವಾಗಿ ನಡೆಯುತ್ತವೆ. ಇದರ ವಿರುದ್ಧ ಪ್ರತಿಭಟನೆಗಳನ್ನು ಮಾಡುವ ಯಾವ ಸಂಘಟನೆಗಳಿಂದಲೂ ಜಾಲವನ್ನು ಕಿತ್ತೆಸೆಯಲು ಸಾಧ್ಯವಾಗಿಲ್ಲ. ಒಂದಿಷ್ಟು ಜಾಗೃತಿ ಮೂಡಿಸಿರಬಹುದು ಅಷ್ಟೇ.

1956ರಲ್ಲಿ ಮಹಿಳೆಯರ ಮಕ್ಕಳ ಅಕ್ರಮ ಸಾಗಾಣಿಕೆ ತಡೆ ಕಾಯ್ದೆ ಜಾರಿಗೊಂಡಿತು. ಇದರಲ್ಲಿ ವೇಶ್ಯಾವಾಟಿಕೆ ಅಪರಾಧವಾಗಿದೆ. ಇವರಿಗೆ ಹುಟ್ಟಿದ ಮಕ್ಕಳಿಗೆ ಪುನರ್ವಸತಿ ಕಲ್ಪಿಸಬೇಕೆಂದು ಹೇಳಲಾಗಿತ್ತು. ವೇಶ್ಯಾವಾಟಿಕೆಯನ್ನು ಕೇವಲ ಮಹಿಳೆಯರು ಮಾಡುವುದಿಲ್ಲ ಪುರುಷರೂ ಇದರಲ್ಲಿ ಅಪರಾಧಿಗಳು. ಆದುದರಿಂದ ಪುರುಷರನ್ನೂ ಇದರಲ್ಲಿ ತಪ್ಪಿತಸ್ಥರನ್ನಾಗಿಸಬೇಕೆಂದು ತಿದ್ದುಪಡಿ ಕಾನೂನು ಬಂತು. 1986ರಲ್ಲಿ ಪುರುಷ ಮತ್ತು ಮಹಿಳೆಯ ನಡುವೆ ಲೈಂಗಿಕ ಕ್ರಿಯೆ ವ್ಯಭಿಚಾರವಲ್ಲ. ಅಂದು ದುಡ್ಡಿಗಾಗಿ ಮಾಡಿದರೂ ವ್ಯಭಿಚಾರ ಅಲ್ಲ. ಆದರೆ ಈ ಕಾಯ್ದೆಯ 2ನೇ ಕಲಂನಲ್ಲಿ ವಾಣಿಜ್ಯದ ಉದ್ದೇಶದಿಂದ ಲೈಂಗಿಕ ಕ್ರಿಯೆ ನಡೆಸಿದರೆ ಮಾತ್ರ ಅದು ಅಪರಾಧ. ಅದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಿಳಿಸುತ್ತದೆ. ಸಂತೋಷವಾಗಿ ವೇಶ್ಯೆಯರ ಸಂಗ ಮಾಡುವವರು ತಪ್ಪಿತಸ್ಥರಲ್ಲ ಎಂದು ತಿಳಿಸಿತು. ಆದರೆ ಮುಂದೆ 2007ರಲ್ಲಿ ವೇಶ್ಯಾವಾಟಿಕೆ ಯಿಂದ ಹಣ ಗಳಿಸುತ್ತಿರುವವರು ಮತ್ತು ಈ ಕೃತ್ಯಕ್ಕೆ ಮಹಿಳೆಯರನ್ನು ತಳ್ಳಿದವರು ಅಪರಾಧಿಗಳು. ಮಾತ್ರವಲ್ಲ ಸಂತೋಷಕ್ಕಾಗಿ ವೇಶ್ಯೆಯರ ಸಂಗ ಮಾಡಿದವರೂ ಅಪರಾಧಿಗಳೆಂದು ಕಾನೂನು ಜಾರಿಯಾಯಿತು.

ಈವರೆಗೆ ನಾಲ್ಕು ಅಂತಾರಾಷ್ಟ್ರೀಯ ಸಮ್ಮೇಳನಗಳು ವೇಶ್ಯಾವಾಟಿಕೆಯ ಕುರಿತಾಗಿ ನಡೆದಿವೆ. 1904, 1910, 1933, 1950ರಲ್ಲಿ ಸಮ್ಮೇಳನಗಳು ನಡೆದಿವೆ. 50ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಎಲ್ಲಾ ದೇಶಗಳ ಪ್ರತಿನಿಧಿಗಳು ಒಕ್ಕೊರಲಿನಿಂದ ಹೇಳಿದ್ದೇನೆಂದರೆ ಇದನ್ನು ಕಾನೂನು ಬದ್ಧಗೊಳಿಸಬಾರದು. ಆದರೆ ವೇಶ್ಯಾವಾಟಿಕೆಯನ್ನು ಒಂದು ಗಂಭೀರ ಪ್ರಕರಣವೆಂದು ಪರಿಗಣಿಸಬೇಕು. ವೇಶ್ಯಾವಾಟಿಕೆ ನಡೆಸುವವರು. ಅವರನ್ನು ಈ ವೃತ್ತಿಗೆ ತಳ್ಳುವವರು, ವ್ಯಭಿಚಾರಕ್ಕೆ ಮನೆ ಬಾಡಿಗೆಗೆ ನೀಡುವವರು, ಗ್ರಾಹಕರನ್ನು ಕರೆಸಿ ದುಡ್ಡು ವಸೂಲಿ ಮಾಡುವವರು, ಚಿಕ್ಕ ಪ್ರಾಯದವರನ್ನು ಈ ವೃತ್ತಿಗೆ ದೂಡುವವರು, ಸಾರ್ವಜನಿಕ ಸ್ಥಳಗಳಲ್ಲಿ ವೇಶ್ಯಾವಾಟಿಕೆ ನಡೆಸಲು ವ್ಯವಸ್ಥೆ ಮಾಡಿಕೊಡುವವರು. ಪೊಲೀಸ್ ವಶದಲ್ಲಿದ್ದ ಮಹಿಳೆಯರನ್ನು ಇದಕ್ಕಾಗಿ ಬಳಸಿಕೊಳ್ಳುವವರು. ಹೀಗೆ ಈ ಎಲ್ಲಾ ಪ್ರಕರಣಗಳಿಗೆ ಅವುಗಳ ಗಂಭೀರತೆಯನ್ನು ಗಮನಿಸಿ ಒಂದು ತಿಂಗಳಿಂದ ಜೀವಾವಧಿ ಶಿಕ್ಷೆಯವರೆಗೂ ಅಪರಾಧಿಗಳು ಅರ್ಹರಾಗುತ್ತಾರೆ ಎಂದು ತೀರ್ಮಾನಿಸಲಾಯಿತು. ವೇಶ್ಯಾವಾಟಿಕೆಯನ್ನು ಒಂದು ಸಾಮಾಜಿಕ ಪಿಡುಗೆಂದೇ ಪರಿಗಣಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.

ವೇಶ್ಯಾವಾಟಿಕೆಯೆಂಬ ಸಾಮಾಜಿಕ ಪಿಡುಗನ್ನು ಕಾನೂನು ಬದ್ಧಗೊಳಿಸ ಬೇಕೋ, ಬೇಡವೋ ಎಂಬುದರ ಬಗ್ಗೆ ಪರ ವಿರೋಧ ಚರ್ಚೆಗಳು ಮಾಧ್ಯಮ ಗಳಲ್ಲಿ ಬಿರುಸಿನಿಂದ ನಡೆದುವು. ಈ ಪಿಡುಗಿಗೆ ಬಹಳ ಪ್ರಾಚೀನ ಇತಿಹಾಸವಿದೆ. ನಾಗರಿಕತೆಯ ಉಗಮದೊಂದಿಗೆ ಇದು ರಹಸ್ಯವಾಗಿಯೋ ಬಹಿರಂಗವಾಗಿಯೋ ಪ್ರಪಂಚದಾದ್ಯಂತ ನಡೆಯುತ್ತಾ ಬಂದಿದೆ. ಈ ಪಿಡುಗು ಗುಟ್ಟಾಗಿರುವಾಗ, ನಿಷೇಧವಿದ್ದಾಗಲೂ ಇಷ್ಟೊಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಹಾಗಿರುವಾಗ ಇದನ್ನು ಕಾನೂನು ಬದ್ಧಗೊಳಿಸಿದರೆ ಇದರ ಬೆಳವಣಿಗೆಯನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲದಷ್ಟೂ ಮಟ್ಟಕ್ಕೆ ಏರಬಹುದು ಎಂಬ ಅಭಿಪ್ರಾಯಗಳು ವ್ಯಕ್ತವಾದವು.

ಲೈಂಗಿಕತೆಯನ್ನು ಉತ್ತೇಜಿಸುವ ಔಷಧಿ, ಗರ್ಭನಿರೋಧಕಗಳು ಮತ್ತು ಕಾಂಡೋಮ್ ತಯಾರಿಕಾ ಕಂಪೆನಿಗಳು ವೇಶ್ಯಾವಾಟಿಕೆಯು ಕಾನೂನು ಬದ್ಧವಾಗುವುದನ್ನು ರಣಹದ್ದಿನಂತೆ ಕಾಯುತ್ತಿವೆ. ಲೈಂಗಿಕ ರೋಗ ನಿಯಂತ್ರಿಸುವ ಔಷಧಿ, ಪುರುಷತ್ವ ವೃದ್ಧಿಸುವ ಔಷಧಿ, ಏಡ್ಸ್ ಮತ್ತು ಹೆಚ್.ಐ.ವಿ ಬಾಧಿತರಿಗೆ ನೀಡುವ ಔಷಧಿ ತಯಾರಿಸುವ ಕಂಪೆನಿಗಳು, ನೀಲಿಚಿತ್ರ ತಯಾರಿಸುವ ಕಂಪೆನಿ ಗಳು, ಲೈಂಗಿಕತೆ ಪ್ರಚೋದಿಸುವ, ಉತ್ತೇಜಿಸುವ ಆಟಿಕೆಗಳನ್ನು ಗೊಂಬೆಗಳನ್ನು ತಯಾರಿಸುವ ಕಂಪೆನಿಗಳೂ ವೇಶ್ಯಾವಾಟಿಕೆ ಕಾನೂನು ಬದ್ಧವಾಗುವುದನ್ನು ಕಾತರದಿಂದ ಕಾಯುತ್ತವೆ. ಈ ಉದ್ಯಮದಿಂದ ಕೋಟಿಗಟ್ಟಲೆ ಬಾಚುವ ಅವಕಾಶ ಈ ಕಂಪೆನಿಗಳಿಗೆ ಸಲೀಸಾಗಿ ಸಿಗುತ್ತದೆ ಎಂಬುದು ಬೆಳಕಿನಷ್ಟೇ ಸ್ಪಷ್ಟ. ವೇಶ್ಯೆಯರನ್ನು ಸುಲಿಯುವ ತಲೆಹಿಡುಕರು, ಪೋಲೀಸಿನವರು, ಘರ್‌ವಾಲಿಗಳು, ವಕೀಲರು, ಮುಂತಾದ ವಿಷವರ್ತುಲಗಳಿಂದ ಹೇಗಾದರೂ ಪಾರಾಗಬಹುದು. ಆದರೆ ಈ ಕಂಪೆನಿಗಳ ವ್ಯಾಪಾರೀ ಕುತಂತ್ರಗಳಿಂದ ಪಾರಾಗುವುದು ಕಷ್ಟ ಹಾಲೆಂಡ್‌ದೇಶದಲ್ಲಿ ವೇಶ್ಯಾವಾಟಿಕೆ ಕಾನೂನು ಬದ್ಧಗೊಂಡಿದೆ. ಮಾಂಸದಂಗಡಿ ಯಲ್ಲಿ ಕುರಿ ಕೋಳಿಗಳನ್ನು ನೇತು ಹಾಕಿ ಮಾರಾಟಕ್ಕಿಟ್ಟಂತೆ ಅಲ್ಲಿ ಹೆಣ್ಣು ಮಕ್ಕಳು ಬತ್ತಲೆಯಾಗಿ ಕನ್ನಡಿಯ ಹಿಂದೆ ನಿಂತಿರುತ್ತಾರಂತೆ. ಅವರನ್ನು ಆಯ್ಕೆ ಮಾಡಿಕೊಂಡು ಗಿರಾಕಿಗಳು ಸುರತಕ್ಕೆ ಒಯ್ಯುತ್ತಾರಂತೆ. ಇಂತಹ ನೀಚ ಸ್ಥಿತಿ ನಮ್ಮ ನಾಡಿನ ಹೆಣ್ಣುಮಕ್ಕಳಿಗೆ ಬೇಕೆ? ಎಂದು ವಿರೋಧಿಗಳ ಅಭಿಮತ, ಕಾನೂನು ಮಾನ್ಯತೆ ಮಾಡಿದರೆ ಕೆಂಪು ದೀಪ ಪ್ರದೇಶಗಳು ನೂರಡಿ ಹೆಚ್ಚಬಹುದು ಎಂಬ ಆತಂಕ ಹಲವರದು. ಅತ್ಯಾಚಾರಗಳು ಹೆಚ್ಚುತ್ತಿರುವುದನ್ನು ಕಂಡು ವೇಶ್ಯಾವಾಟಿಕೆ ಯನ್ನು ಕಾನೂನು ಬದ್ಧಗೊಳಿಸಬೇಕೆಂಬ ಸಲಹೆ ನೀಡಿದವರೂ ಇದ್ದಾರೆ.

ವೇಶ್ಯಯರನ್ನು ಈ ವೃತ್ತಿಗೆ ಆಮಂತ್ರಿಸುವ, ಕರೆದೊಯ್ಯುವ ಕೆಲವು ಸ್ಥಳಗಳು ಮಂಗಳೂರಿನಲ್ಲಿವೆ. ಸ್ಟೇಟ್‌ ಬ್ಯಾಂಕ್, ಕಂಕನಾಡಿ, ಕೆ.ಎಸ್.ಆರ್.ಟಿ.ಸಿ ಗಳ ಬಸ್ ನಿಲ್ದಾಣಗಳು, ತುಂಬಾ ಜನ ಸೇರುವ ಬಸ್ ಸ್ಟಾಪ್‌ಗಳು, ನಗರದ ಸಿನಿಮಾ ಥಿಯೇಟರುಗಳು, ದೊಡ್ಡ ದೊಡ್ಡ ಆಸ್ಪತ್ರೆಗಳ ವಠಾರ, ಶಾಪಿಂಗ್ ಸೆಂಟರುಗಳು ವೇಶ್ಯೆಯರನ್ನು ಪಿಕ್-ಅಪ್ ಮಾಡುವ ತಾಣಗಳಾಗಿವೆ. ಈಗ ಎಲ್ಲವೂ ಮೊಬೈಲ್ ಮೂಲಕವೇ ವ್ಯಾಪಾರ ಕುದುರಿಸುವಷ್ಟು ಅಭಿವೃದ್ಧಿ ಹೊಂದಿದೆ. ತಲೆ ಹಿಡುಕರು ಕೂತಲ್ಲಿಯೇ ವ್ಯವಹಾರ ನಡೆಸುತ್ತಾರೆ. ಈ ವೃತ್ತಿಗಾಗಿಯೇ ಒಂದು 'ಆ್ಯಪ್‌'ನ ರಚನೆಯಾಗಿದೆ. ಒಂದು ಕ್ಷಣದೊಳಗೆ ಫಟಾಫಟ್ ಸಂಪರ್ಕ ಲಭಿಸುತ್ತದೆ ಮಾತ್ರವಲ್ಲ, ಕೆಲವು ರಿಕ್ಷಾ ಡ್ರೈವರುಗಳು ಈ ವೃತ್ತಿಯಲ್ಲಿ ಬದುಕುವವರಿಗೆ ಪೋಷಕರಾಗಿ ಮತ್ತು ಆಪತ್ಕಾಂದವರಾಗಿ ಸಹಕರಿಸುತ್ತಾರೆ. (ನಾನು ಈ ವೃತ್ತಿ ನಿರತ ಕೆಲವರನ್ನು ಸಂಪರ್ಕಿಸುವಲ್ಲಿ ಶಂಕರ ಎಂಬ ರಿಕ್ಷಾ ಡ್ರೈವರನು ತುಂಬಾ ಸಹಾಯ ಮಾಡಿದ್ದನೆಂದು ಕೃತಜ್ಞತೆಯಿಂದ ಸ್ಮರಿಸುತ್ತೇನೆ.)

ಪೋಲೀಸ್ ಸ್ಟೇಶನ್‌ಗಳಲ್ಲಿ ದಾಖಲಾಗುವ ಕೇಸುಗಳು ಮತ್ತು ಶಿಕ್ಷೆಯಾಗುವ ಪ್ರಸಂಗಗಳದ್ದೇ ಒಂದು ದೊಡ್ಡ ಕತೆಗಳಿವೆ. ಹಿಂದಿನ ವರ್ಷಗಳಲ್ಲಿ ಪಾಂಡೇಶ್ವರದ ಪೋಲೀಸ್ ಸ್ಟೇಶನ್ನಿನಲ್ಲಿ ಅತಿ ಹೆಚ್ಚು ಕೇಸುಗಳು ದಾಖಲಾಗಿವೆ. ತಲೆಹಿಡುಕರು ಮಾತ್ರವಲ್ಲ ಪೋಲೀಸರು ಮತ್ತು ವಕೀಲರಿಗೆ ಕೂಡಾ ಈ ವೃತ್ತಿಯಿಂದ ಸಾಕಷ್ಟು ಸಂಪಾದನೆ ಆಗುತ್ತದೆ.

ವೇಶ್ಯಾ ವೃತ್ತಿಯನ್ನು, ಅದರ ಮೂಲವನ್ನು, ಅಲ್ಲಿಗೆ ಬರುವ ಹೆಣ್ಣು ಮಕ್ಕಳ ಹಿನ್ನೆಲೆಯನ್ನು ಅರಿಯದೆ ಈ ವೃತ್ತಿಯ ಬಗ್ಗೆ ಪುಕ್ಕಟೆ ಸಲಹೆಯನ್ನು ಯಾರೂ ನೀಡಬಹುದು. ಈ ವೃತ್ತಿಯ ಸುತ್ತಲೂ ವ್ಯಾಪಿಸಿರುವ ಕಬಂಧ ಬಾಹುಗಳ ಕ್ರೌರ್ಯವನ್ನು, ಲಾಲಸೆಯನ್ನು ರಾಜಕಾರಣವನ್ನು, ಭ್ರಷ್ಟಾಚಾರವನ್ನು ಗುರುತಿಸಿ ನಾಶ ಮಾಡದಿದ್ದರೆ ಕಾನೂನು ಬದ್ಧಗೊಳಿಸಿದರೂ ಈ ವೃತ್ತಿನಿರತರಿಗೆ ಪ್ರಯೋಜನವಾಗದು. ಈ ವೃತ್ತಿಯಿಂದ ಹೊರ ಬಂದವರಿಗೆ ಘನತೆಯಿಂದ ಬಾಳುವ ವ್ಯವಸ್ಥೆಯೊಂದು ನಿರ್ಮಾಣವಾಗಲು ಈ ದೇಶದಲ್ಲಿ ಸಾಧ್ಯವೇ? ಇದೊಂದು ಗುರುತರವಾದ ಸಾಮಾಜಿಕ ಸಮಸ್ಯೆ. ಕಾಮವನ್ನು ಉತ್ತೇಜಿಸುವ, ವಿಕೃತ ಕಾಮಗಳನ್ನು ವೈಭವೀಕರಿಸುವ ದೃಶ್ಯ ಮಾಧ್ಯಮಗಳು, ಅಂತರ್ಜಾಲಗಳು, ಸೈಬರ್ ಕೆಫೆಗಳು, ವಿಫುಲವಾಗಿ ಲಭ್ಯವಿರುವಾಗ ಈ ವೃತ್ತಿಯಲ್ಲಿರುವವರನ್ನು ಹುಡುಕಿಕೊಂಡು ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕೆಲವರ ಅಭಿಪ್ರಾಯವಿದೆ. ಇದು ಅರ್ಧ ಸತ್ಯವಿರಬಹುದು. ಇಂದು ನೋಡಿದವನಿಗೆ ನಾಳೆ ಕೂಡುವಾಸೆ ಚಿಗುರುವುದರಲ್ಲಿ ಸಂಶಯವಿಲ್ಲ. ಆದುದರಿಂದ ಈ ವೃತ್ತಿಯನ್ನು ಬುಡ ಸಮೇತ ಕೀಳಬೇಕು ಎಂದು ಕನಸು ಕಾಣಬಹುದಷ್ಟೇ. ಬಹುಶಃ ಈ ಪ್ರಪಂಚದಲ್ಲಿ ಸ್ತ್ರೀ ಪುರುಷರಿರುವ ವರೆಗೂ ಈ ವೃತ್ತಿ ಇರುತ್ತದೆ.

ಸ್ವೀಡನ್, ಹಾಲೆಂಡ್ ಮುಂತಾದ ದೇಶಗಳಲ್ಲಿ ಮುಕ್ತ ಸ್ವಾತಂತ್ರ್ಯ ಇರುವುದರಿಂದ ವೇಶ್ಯಾವಾಟಿಕೆ ಕಡಿಮೆಯಾಗಿದೆ ಎಂದು ಒಂದು ಅಧ್ಯಯನ ತಿಳಿಸುತ್ತದೆ. ಈ ಮುಕ್ತ ಸ್ವಾತಂತ್ರ್ಯದಿಂದ ಅಮೆರಿಕಾದಲ್ಲಿ ಮತ್ತು ಕೆಂಪು ದೀಪ ಪ್ರದೇಶಗಳು ಹೆಚ್ಚಿವೆ ಎಂದು ಇನ್ನೊಂದು ಅಧ್ಯಯನ ತಿಳಿಸುತ್ತದೆ. ಪ್ರಾಚೀನ ಕಾಲದ ಮೆಸಪೊಟೇಮಿಯಾದ ಹಮುರಾಬೀ ಶಾಸನವು ಮಹಿಳೆಯ ವಾರಸುದಾರಿಕೆಯ ಹಕ್ಕುಗಳನ್ನು ಗುರುತಿಸುವಾಗ ವೇಶ್ಯಾಸ್ತ್ರೀಯರನ್ನೂ ಗೌರವ ದಿಂದ ಕಾಣುತ್ತದೆ. ಹಾಗೆಯೇ ಪ್ರಾಚೀನ ಗ್ರೀಸ್ ದೇಶದಲ್ಲಿ ಮಹಿಳೆ ಮತ್ತು ಪುರುಷರಿಬ್ಬರೂ 'ಹಣಕ್ಕಾಗಿ ಸಂಭೋಗ' ಮಾಡುವ ವ್ಯವಸ್ಥೆಯಿತ್ತು. ಗಂಡು ವೇಶ್ಯೆಯರೂ ಅಸ್ತಿತ್ವದಲ್ಲಿದ್ದರು. ಕಾಮವು ಯಾರ ಅಂಕೆಗೂ ಸಿಗದ ಒಂದು ವ್ಯವಸ್ಥೆಯೆಂದು ನಮ್ಮ ಪುರಾಣಕತೆಗಳಲ್ಲೇ ಸಾಕಷ್ಟು ನಿದರ್ಶನಗಳಿವೆ. ಈ ವೃತ್ತಿಯನ್ನು ಸಾಧ್ಯವಾದಷ್ಟು ಕ್ರೌರ್ಯರಹಿತವಾಗಿ ಹೇಗೆ ನಿಭಾಯಿಸಬಹುದು ಎಂಬುದನ್ನು ಮಾತ್ರ ನಾವು ಯೋಚಿಸಬಹುದೆಂದು ಭಾವಿಸುತ್ತೇನೆ.

ಉತ್ತರ ಕರ್ನಾಟಕದಲ್ಲಿ ವೃತ್ತಿನಿರತರ ಅಂಕಿ ಅಂಶಗಳು


ಬೆಳಗಾಂ ನಗರದ ಸುತ್ತ ಮುತ್ತಲ ಪ್ರದೇಶಗಳಲ್ಲಿ ಅಂದರೆ ಗ್ರಾಮಾಂತರದ ಬೇರೆ ಬೇರೆ ತಾಲೂಕುಗಳಲ್ಲಿ ಈ ವೃತ್ತಿಯು ಹೇಗೆ ಚದುರಿಕೊಂಡಿದೆ ಎಂಬುದರ ಬಗ್ಗೆ ರಾಮಚಂದ್ರ ರಾವ್ ಅವರು ಮಾಡಿದ ಅಧ್ಯಯನದ ಅಂಕಿ ಅಂಶಗಳಿಂದ ತಿಳಿದು ಬರುತ್ತದೆ. ಈ ವೃತ್ತಿಯಲ್ಲಿ 20 ವರ್ಷಕ್ಕಿಂತಲೂ ಹೆಚ್ಚು ಕಾಲ ಕೆಲಸ ಮಾಡುತ್ತಾ ಬಂದವರು ಸುಮಾರು 20.58% ಮಂದಿ ಇದ್ದಾರೆ. 16-20 ವರ್ಷಗಳ ಕಾಲ ಈ ವೃತ್ತಿಯಲ್ಲಿ ನಿರತರಾದವರು 28.76% ಮಂದಿ ಎಂದು ತಿಳಿದು ಬರುತ್ತದೆ. ಈ ಪ್ರದೇಶದಲ್ಲಿ ಮಹಿಳೆಯರಲ್ಲಿ ಸಾಕ್ಷರತೆಯ ಪ್ರಮಾಣ ತುಂಬಾ ಕಡಿಮೆ ಇರುವುದು ಒಂದು ಕಾರಣವಾದರೆ, ಬಡತನ ಮತ್ತು ಮೂಢನಂಬಿಕೆಗಳಿಂದಾಗಿಯೂ ಈ ಪ್ರದೇಶದಲ್ಲಿ ಅಂದರೆ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಈ ವೃತ್ತಿಯು ಸರ್ವ ಸಾಮಾನ್ಯವಾಗಿದೆ. ದೇವದಾಸೀ ಪದ್ಧತಿಯನ್ನು ನಿಷೇಧಿಸಿ ವರ್ಷಗಳೇ ಉರುಳಿವೆ. ಆದರೆ ಈಗಲೂ ಹರಿಕೆಯ ನೆಪದಲ್ಲಿ ಕುಟುಂಬದ ಸ್ವಾಸ್ಥ್ಯದ ನೆಪದಲ್ಲಿ ರಹಸ್ಯವಾಗಿ ದೇವದಾಸಿಯರಾದವರು ಇದ್ದಾರೆ. ಅವರು ತಮ್ಮ ಮುಂದಿನ ಜೀವನವಿಡೀ ಲೈಂಗಿಕ ದಾಸಿಯರಾಗಿ ಹೀನಾಯವಾದ ಬಾಳನ್ನು ಸವೆಸಬೇಕಾದಂತಹ ಪರಿಸರವೊಂದು ಆ ಭಾಗ ದಲ್ಲಿ ಕಂಡುಬರುತ್ತದೆ. ದೇವದಾಸಿ ಎಂಬ ಧಾರ್ಮಿಕ ಸಂಪ್ರದಾಯದ ನೆಪದಲ್ಲಿ ಹೆತ್ತವರೇ ಹೆಣ್ಣು ಮಕ್ಕಳನ್ನು ಈ ನರಕಕ್ಕೆ ದೂಡುವುದು ಕೌರದ ಕರಾಳ ರೂಪವಾಗಿ ಕಾಣುತ್ತಿದೆ ಅಲ್ಲವೇ? ಇನ್ನು ಸ್ಟೇಚ್ಛೆಯಿಂದ ಬರುವವರೂ ಧರ್ಮದ ಸೋಗಿನಿಂದ ಈ ವೃತ್ತಿಗೆ ಬರುತ್ತಾರೆ ಎಂಬುದು ಹೆಣ್ಮಕ್ಕಳ ಬಾಳಿನ ದುರಂತವಾಗಿದೆ.

ಈ ವೃತ್ತಿ ನಿರತರಲ್ಲಿ 25.88% ಮಂದಿ ದೇವದಾಸಿಯರು ಎಂದು ಅಂಕಿ ಅಂಶಗಳು ತಿಳಿಸುತ್ತವೆ. ಮದುವೆ ಆಗದವರು 0.60% ಮಂದಿ ಇದ್ದಾರೆ. ಮಂಗಳೂರಿನ ಅಂಕಿ ಅಂಶಕ್ಕೆ ಹೋಲಿಸಿದರೆ. ಉತ್ತರ ಕರ್ನಾಟಕದ ಬೆಳಗಾಂ ಪರಿಸರದಲ್ಲಿ ಮದುವೆ ಆಗದವರು ಈ ವೃತ್ತಿಗೆ ಬರುವುದು ತುಂಬಾ ಕಡಿಮೆ. ಅಲ್ಲಿ ಬಾಲ್ಯವಿವಾಹದ ಸಂಪ್ರದಾಯವನ್ನೂ ಹೆಚ್ಚಿನವರು ಅನುಸರಿಸುವುದರಿಂದ ಈ ವ್ಯತ್ಯಾಸ ಕಂಡು ಬರುತ್ತದೆ. ಗಂಡನಿಂದ ವಿಚ್ಛೇದನ ಪಡೆದವರು 3.47% ಮಂದಿ ಇದ್ದಾರೆ. ಮದುವೆಯಾಗಿ ಗಂಡ ಬಿಟ್ಟವರು 30.94 ಮಂದಿ. ಕಾನೂನು ರೀತಿಯಲ್ಲಿ ವಿಚ್ಛೇದನ ಪಡೆದವರಿಂತ ಗಂಡನೊಂದಿಗೆ ಬಾಳಲಾಗದೆ ಹೊರಬಂದು ಈ ವೃತ್ತಿಗೆ ಸೇರಿದವರ ಸಂಖ್ಯೆ ತುಂಬಾ ಹೆಚ್ಚು. ಯಾಕೆಂದರೆ ಕಾನೂನು ರೀತಿಯಲ್ಲಿ ವಿಚ್ಛೇದನ ಪಡೆಯುವಷ್ಟು ತಿಳಿವು ಮತ್ತು ಅನುಕೂಲ ಅವರಿಗಿರುವುದು ಸಂಶಯ. ಆದುದರಿಂದ ಕುಟುಂಬ ವ್ಯವಸ್ಥೆಯನ್ನು ಧಿಕ್ಕರಿಸಿ ಹೀಗೆ ಬೀದಿಗೆ ಬಂದವರ ಸಂಖ್ಯೆ ಹೆಚ್ಚು ಎಂಬುದನ್ನು ಗಮನಿಸಬೇಕು. ಅದೇ ರೀತಿ ವಿಧವೆಯರು 30.08, ಮಂದಿ ಈ ವೃತ್ತಿಯಲ್ಲಿದ್ದಾರೆ. ವಿಧವೆ, ಗಂಡ ವಿಟ್ಟವರು, ವಿಚ್ಛೇದಿತ, ಅವಿವಾಹಿತೆ ಇವರನ್ನು ಪಿತೃ ಪ್ರಧಾನ ಸಮಾಜ ನೋಡುವ ದೃಷ್ಟಿಕೋನವೇ ಅಸಹನೀಯವಾಗಿದೆ. ಹಾಗಾದರೆ ಈ ವೃತ್ತಿ ಸಹನೀಯವೇ? ಆರಿಸಿ, ಮೆಚ್ಚಿ, ಖುಶಿಯಿಂದ ಬಂದರೇ? ಖಂಡಿತಾ ಇಲ್ಲ. ಬಡತನ, ಅನಕ್ಷರತೆ, ಕುಟುಂಬದೊಳಗಿನ ದೌರ್ಜನ್ಯ, ಅಭದ್ರತೆಗಳು ಇವರನ್ನು ಹೀಗೆ ಬೀದಿಗೆ ತಂದು ನಿಲ್ಲಿಸಿದೆ. ಸುಮಾರು 2.89% ಮಂದಿ ಅನಾಥ ಮಹಿಳೆಯರೂ ಇದ್ದಾರೆ ಎಂಬುದನ್ನು ಗಮನಿಸಬೇಕು. ಒಮ್ಮೆ ಈ ನರಕದ ಕೂಪಕ್ಕೆ ದೂಡಲ್ಪಟ್ಟ ಮೇಲೆ ಮತ್ತೆ ಕೈ ಹಿಡಿದು ಮೇಲೆತ್ತುವವರು ಯಾರೂ ಇಲ್ಲ. ಒಂದು ವೇಳೆ ಮೇಲೆತ್ತಿದರೂ ಅವರನ್ನು ಇತರ ಸಾಮಾನ್ಯ ಮಹಿಳೆಯರಂತೆ ನೋಡುವಂತಹ ಮನಸ್ಥಿತಿ ನಮ್ಮ ಸಮಾಜದಲ್ಲಿಲ್ಲ. ಅನಾಥ ಹೆಣ್ಣು ಎಂದ ಮೇಲೆ ಆಕೆ ಸಾರ್ವಜನಿಕ ಸೊತ್ತು ಎಂದೇ ಭಾವಿಸುವ ಮನೋಭಾವ ಸಮಾಜದಲ್ಲಿದೆ.

ದಿನಕ್ಕೆ ಹೆಚ್ಚೆಂದರೆ 500-1000ದ ವರೆಗೆ ಈ ವೃತ್ತಿಯಿಂದ ಗಳಿಸುವವರಿರುವಂತೆ ಕೇವಲ 50 ರೂಪ್ಯಾಯಷ್ಟೇ ಗಳಿಕೆ ಮಾಡುವಂತಹ ಪ್ರಸಂಗಗಳೂ ಅವರ ವೃತ್ತಿ ಜೀವನದಲ್ಲಿ ಕೆಲವೊಮ್ಮೆ ಅವರಿಗೆ ಎದುರಾಗುವುದಿದೆ.

ಇಲ್ಲಿ ವೃತ್ತಿ ನಿರತರಾಗಿರುವವರಲ್ಲಿ 5.90% ಮುಸ್ಲಿಂ ಸಮುದಾಯದವರು. ಕ್ರೈಸ್ತರು 0.60% ಮಂದಿ ಇದ್ದಾರೆ. ಆ ಭಾಗದಲ್ಲಿ ಕ್ರೈಸ್ತ ಸಮುದಾಯದವರ ಸಂಖ್ಯೆಯೂ ಕಡಿಮೆ ಇದೆ. ಪರಿಶಿಷ್ಟ ಜಾತಿ ಸಮುದಾಯದವರೇ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ 45.73% ಇದ್ದಾರೆ. ಈ ಸಮುದಾಯದ ಹೆಚ್ಚಿನವರು ದೇವದಾಸಿಯರು ಎಂಬುದು ಗಮನಾರ್ಹವಾದ ಅಂಶವಾಗಿದೆ. ಪರಿಶಿಷ್ಟ ಪಂಗಡದ 19.49% ಶೇಕಡಾ ಮಂದಿ ಈ ವೃತ್ತಿಯಲ್ಲಿದ್ದಾರೆ. ಇವರಲ್ಲೂ ದೇವದಾಸಿಯರ ಸಂಖ್ಯೆ ಹೆಚ್ಚಿದೆ. ಒ.ಬಿ.ಸಿ. ಸಮುದಾಯವರು 17.45% ಮಂದಿ ಇದ್ದಾರೆ. ಹಿಂದುಳಿದ ವರ್ಗದವರು (ಬಿ.ಸಿ.) 10.83% ಮಂದಿ ಇದ್ದಾರೆ. ಇಲ್ಲಿಯ ವೃತ್ತಿ ನಿರತರಲ್ಲಿ ಮಹಿಳೆಯರಲ್ಲಿ ಎಸ್.ಎಸ್.ಎಲ್.ಸಿ. ಮಟ್ಟಕ್ಕೆ ಏರಿದವರಲ್ಲಿ 0.5% ಕೂಡಾ ಇಲ್ಲ. ಹೆಚ್ಚಿನವರು ಪ್ರಾಥಮಿಕ ಹಂತವನ್ನು ಮಾತ್ರ ದಾಟಿದವರು ಇಲ್ಲಿಯೂ ಅನಕ್ಷರಸ್ಥರು ಈ ವೃತ್ತಿಯಲ್ಲಿ ಇದ್ದಾರೆ. ಉತ್ತರ ಕರ್ನಾಟಕವು ದ.ಕನ್ನಡ ಜಿಲ್ಲೆಗೆ ಹೋಲಿಸಿದರೆ ತೀರಾ ಹಿಂದುಳಿದ ಪ್ರದೇಶವಾಗಿದೆ. ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿರುವ ಈ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಹೆಣ್ಣುಮಕ್ಕಳ, ಮಹಿಳೆಯರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವವರ ಸಂಖ್ಯೆ ತೀರಾ ಕಡಿಮೆ. ದೇವದಾಸಿಯರ ಪುನರ್ವಸತಿಗಾಗಿ ಉತ್ತರ ಕರ್ನಾಟಕದ ಹೆಚ್ಚಿನ ಜಿಲ್ಲೆಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಕೆಲಸ ಮಾಡುತ್ತಿವೆ.

ಮಂಗಳೂರಿನ ಆಸುಪಾಸಿನ ಅಧ್ಯಯನಗಳು

ಮಂಗಳೂರಿನ ಸ್ವಯಂಸೇವಾ ಸಂಸ್ಥೆಯಲ್ಲಿ ನೋಂದಣಿಗೊಂಡ ಕಾಠ್ಯಕರ್ತೆಯರಲ್ಲಿ ಬಹುತೇಕ ಮಂದಿ ಗ್ರಾಮಾಂತರ ಪ್ರದೇಶದವರು. ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳಿಂದಲೂ ಬಂದು ಇಲ್ಲಿ ವೃತ್ತಿನಿರತರಾಗಿದ್ದಾರೆ. ಆಯಾ ತಾಲೂಕಿನಲ್ಲಿಯೇ ಬೇರೆ ಬೇರೆ ನಿಗದಿತ ಸ್ಥಳಗಳಲ್ಲಿ ಕೆಲಸಕೈಗೊಳ್ಳುವವರೂ ಇದ್ದಾರೆ. 75% ಮಂದಿ ಮಂಗಳೂರು ತಾಲೂಕಿನಿಂದ ಹೊರಗಿನವರು. ಉಳಿದವರು ಪಟ್ಟಣದೊಳಗಿನ ಮತ್ತು ಆಸುಪಾಸಿನ ಗ್ರಾಮಗಳವರು.

ಇವರಲ್ಲಿ 5% ಮುಸ್ಲಿಂ ಮತಾನುಯಾಯಿಗಳೆಂದು ಗುರುತಿಸಿಕೊಂಡವರು, 0.55% ಮಂದಿ ಕ್ರೈಸ್ತರು. ಉಳಿದ 94.45% ಮಂದಿಯಲ್ಲಿ ಹಿಂದುಳಿದವರು, ದಲಿತರು ಇದ್ದಾರೆ. ಹೆಚ್ಚಿನವರು ಹಿಂದುಳಿದವರು ಎನ್ನುವುದು ಗಮನಾರ್ಹ. ಹಿಂದುಳಿದ ಎಲ್ಲಾ ಜಾತಿ ಸಮುದಾಯದ ಮಹಿಳೆಯರೂ ಇದ್ದಾರೆ. ನೋಂದಣಿಗೊಂಡವರಲ್ಲಿ 63.40% ಮಂದಿ ಮದುವೆ ಆದವರು. ಮದುವೆಯಾಗದವರು 31.42 ಮಂದಿ ಇದ್ದಾರೆ. ವಿಧವೆಯರು 2.73% ಮಂದಿ, ವಿಚ್ಚೇದಿತ ಮಹಿಳೆಯರು 1.40% ಮಂದಿ, ಗಂಡನಿದ್ದೂ ಅವನೊಂದಿಗೆ ವಾಸಿಸದವರು 1.05% ಮಂದಿ ಇದ್ದಾರೆ. ಮದುವೆ ಆದವರು ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂದರೆ ಕೌಟುಂಬಿಕ ವ್ಯವಸ್ಥೆಯಿಂದ ಶೋಷಿಸಲ್ಪಟ್ಟವರು, ಕೈಕಾಲು ಗಟ್ಟಿ ಇದ್ದೂ ದುಡಿಯದ, ದುಡಿದರೂ ಮನೆಯ ಖರ್ಚಿಗೆ ನೀಡದ, ಕುಡುಕತನ, ಹೊರಚಾಳಿ, ಇನ್ನಿತರ ದುಶ್ಚಟಗಳಿಗೆ ಬಲಿಯಾದ ಗಂಡಸರ ದೌರ್ಜನ್ಯಗಳಿಂದ ರೋಸಿ ಹೋಗಿ ಈ ವೃತ್ತಿಗೆ ನಿರ್ವಾಹವಿಲ್ಲದೆ ಸೆಳೆಯಲ್ಪಟ್ಟವರು. ವಿಶೇಷವೆಂದರೆ ಕುಟುಂಬದ ಸದಸ್ಯರಿಗೆ ಇವರು ಯಾವ ಕೆಲಸ ಮಾಡುತ್ತಾರೆ ಎಂದು ತಿಳಿಸದೆ ರಹಸ್ಯವಾಗಿಯೇ ಕೆಲಸ ಮಾಡುವವರಿದ್ದಾರೆ. ಎಲ್ಲೋ ಮನೆಕೆಲಸಕ್ಕೆ, ರೋಗಿಗಳ ಶುಶ್ರೂ‍ಷೆ‍ಗೆ ಹೀಗೆ ಹೇಳಿ ತಿಂಗಳುಗಳ ಕಾಲ ಮನೆ ಬಿಟ್ಟು ಹೊರಗೆ ಇದ್ದುಕೊಂಡು ಯಾವುದಾದರೊಂದು ನಿಗದಿತ ಸ್ಥಳವನ್ನು ಆಯ್ದುಕೊಂಡು ಲೈಂಗಿಕ ವೃತ್ತಿಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಬೆಳಿಗ್ಗೆ ಹೊರಟು ಸಂಜೆ ಮನೆಗೆ ತಲುಪುವವರು ಯಾವುದಾದರೊಂದು ಹೋಟೇಲು, ಮನೆಗಳನ್ನು ಈ ಕೆಲಸಕ್ಕಾಗಿ ಆಯ್ಕೆ ಮಾಡುತ್ತಾರೆ. ಗಂಡನಿಗೆ ತಿಳಿದೇ ಈ ಕೆಲಸ ಮಾಡುವ ಒಂದು ಸಣ್ಣ ಸಂಖ್ಯೆಯ ಮಹಿಳೆಯರೂ ಇದ್ದಾರೆ. ಈ ದುಡಿಮೆಯಿಂದಲೇ ಆರಾಮವಾಗಿ ಬದುಕುವ ಗಂಡ ಕ್ರಮೇಣ ಅವರ ಜೀವ ಹಿಂಡುವ, ಹಿಂಸಿಸುವ, ದೌರ್ಜನ್ಯವೆಸಗಿದ ಪ್ರಕರಣಗಳೂ ಇವೆ.

ವಿಧವೆಯರಲ್ಲಿ ಅನೇಕರು ಬದುಕಿನ ಅಭದ್ರತೆಯಿಂದಾಗಿ ಕಂಗಾಲಾಗಿ ಬಂಧುಗಳು, ಕುಟುಂಬಸ್ಥರು ಲೈಂಗಿಕ ದುರ್ಬಳಕೆ ಮಾಡಿಕೊಳ್ಳಲು ಪ್ರಯತ್ನಿಸಿದಾಗ ಕೊನೆಗೆ ನಿರ್ವಾಹವಿಲ್ಲದೆ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಅನ್ನುವುದು ಅವರೊಂದಿಗಿನ ಮಾತುಕತೆಯಿಂದ ವ್ಯಕ್ತವಾಗಿದೆ. ವಿಚ್ಛೇದಿತೆಯರು ಮತ್ತು ಗಂಡ ಬಿಟ್ಟವರನ್ನು ಕೂಡಾ ಸಾರ್ವಜನಿಕ ವಸ್ತುವೆಂದೇ ತಿಳಿಯುವ ಮನಸ್ಥಿತಿ ಇರುವ ಸಮಾಜದಲ್ಲಿ ಇವರು ಈ ವೃತ್ತಿಗೆ ಜಾರುವುದಕ್ಕೆ ಅನೇಕ ಆಮಿಶಗಳು ಕಾರಣವಾಗಿವೆ. ಮದುವೆ ಆಗದವರು 31.42% ಮಂದಿ ಇದ್ದಾರೆ ಎಂಬುದು ವಿಶೇಷ. ಪ್ರೀತಿಸಿ ವಂಚನೆಗೊಳಗಾದವರು, ಹೆತ್ತವರ ಪ್ರೀತಿಯಿಂದ, ಕುಟುಂಬದ ಆಶ್ರಯದಿಂದ ವಂಚಿತರಾದವರು ಬಹಳ ಮಂದಿ ಇದ್ದಾರೆ. ಹದಿಹರೆಯದಲ್ಲೇ ಈ ವೃತ್ತಿಗೆ ದೂಡಲ್ಪಟ್ಟು, ಇಲ್ಲಿಂದ ಹೊರಬರಲಾರದೆ ವೃತ್ತಿನಿರತರಾಗಿರುವವರೇ ಬಹಳ ಮಂದಿ ಇದ್ದಾರೆ.

ಇವರ ಶಿಕ್ಷಣದ ಮಾಹಿತಿಯನ್ನು ಕೇಳಿದಾಗ ತಿಳಿದ ಸತ್ಯವೇನೆಂದರೆ 29.67% ಮಂದಿ ಎಸ್.ಎಸ್.ಎಲ್.ಸಿ, ಮುಗಿಸಿದವರು, ಕೆಲವರು ಪಾಸಾದವರು ಇನ್ನು ಹೆಚ್ಚಿನವರು ಪರೀಕ್ಷೆ ಪಾಸಾಗದವರು. ಮುಂದಿನ ಶಿಕ್ಷಣಕ್ಕೆ ಇಚ್ಛೆ ಇದ್ದರೂ ಆರ್ಥಿಕ ಸೌಲಭ್ಯವಿಲ್ಲದವರು ಮತ್ತು ಮುಂದಿನ ಶಿಕ್ಷಣಕ್ಕೆ ಕುಟುಂಬ ದಲ್ಲಿ ಉತ್ತೇಜನ ನೀಡದ ಪರಿಸ್ಥಿತಿ ಇದ್ದವರು. ಒಟ್ಟಾರೆಯಾಗಿ ಈ ವೃತ್ತಿಗೆ ಬರುವವರು ಆರ್ಥಿಕವಾಗಿ ಕೆಳಮಧ್ಯಮ ಮತ್ತು ಕೆಳ ವರ್ಗದವರೇ ಹೆಚ್ಚು ಎಂಬುದನ್ನು ಗಮನಿಸಬೇಕು. ಬೀಡಿ ಕಟ್ಟುವವರು, ಕೂಲಿ ಕೆಲಸ ಮಾಡುವ ಹೆತ್ತವರೇ ಹೆಚ್ಚು. ಇಂತಹ ಕುಟುಂಬದಲ್ಲಿ ಹೆಚ್ಚಿನ ಕಲಿಕೆಯ ಬಗ್ಗೆ ತೀವ್ರವಾದ ಇಚ್ಛೆ ಸ್ವತಃ ಹೆಣ್ಣು ಮಕ್ಕಳಿಗೇ ಇಲ್ಲದಿದ್ದರೆ ಹೀಗೆ ಅತಂತ್ರರಾಗಿ ದಾರಿ ತಪ್ಪುವ ಮತ್ತು ದಾರಿ ತಪ್ಪಿಸುವ ಪರಿಸರ ಅವರ ಸಮೀಪದಲ್ಲೇ ಇರುತ್ತದೆ ಎಂಬುದು ಅವರೊಂದಿಗಿನ ಸಂದರ್ಶನದಿಂದ ತಿಳಿದು ಬರುತ್ತದೆ. ಇವರಲ್ಲಿ 65.87% ಮಂದಿ ಪ್ರಾಥಮಿಕ ಹಂತ ಮತ್ತು ಮಾಧ್ಯಮಿಕ ಹಂತದಷ್ಟು ಶಿಕ್ಷಣ ಪೂರೈಸಿದವರು. ಅಂದರೆ ಇವರಲ್ಲಿ ಏಳು, ಎಂಟನೆಯ ತರಗತಿಗೇ ಶಾಲೆ ಬಿಟ್ಟವರು ಹೆಚ್ಚು. ಆದರೆ ಪಾಠಗಳು ಕಷ್ಟವೆಂದೋ, ಇಂಗ್ಲೀಷ್, ಗಣಿತ ತಲೆಗೆ ಹತ್ತಲಿಲ್ಲವೆಂದೋ, ಶಾಲೆಯ ಫೀಸ್ ಕಟ್ಟಲು ಸಾಧ್ಯವಾಗಲಿಲ್ಲವೆಂದೋ ಶಾಲೆ ಬಿಟ್ಟವರು. ಎಸ್‌.ಎಸ್‌.ಎಲ್.ಸಿ ಮಾಡಿದರೂ ಏನೂ ಪ್ರಯೋಜನವಿಲ್ಲ. ಕನಿಷ್ಠ ಪದವಿಯನ್ನಾದರೂ ಪಡೆಯಬೇಕು. ಅದು ತನಗೆ ಸಾಧ್ಯವಿಲ್ಲವೆಂದು ದೃಢವಾಗಿ ನಂಬಿ ಶಾಲೆಯನ್ನು ಬಿಟ್ಟೆವೆಂದವರೂ ಇದ್ದಾರೆ. ಅಂದರೆ ಅವರಲ್ಲಿ ಕೆಲವರಿಗೆ ಶಿಕ್ಷಣವು ತೆರೆದು ತೋರಿಸುವ ಉತ್ತಮ ಭವಿಷ್ಯದ ಬಗ್ಗೆ ಅರಿವಿದೆ. ಆದರೆ ಆ ದಾರಿ ತಮಗಲ್ಲವೆಂದು ದೃಢವಾಗಿ ನಂಬಿದವರು ಅವರು. ಹಾಗೆಂದು ತಮ್ಮ ಮಕ್ಕಳಿಗೆ ತಮ್ಮಿಂದ ಸಾಧ್ಯವಾದಷ್ಟು ಮಾತ್ರವಲ್ಲ. ತಮ್ಮ ಮಕ್ಕಳು ಬಯಸುವಷ್ಟು ಮಟ್ಟದ ಉತ್ತಮ ಶಿಕ್ಷಣ ನೀಡಬೇಕೆಂಬ ಹಂಬಲವನ್ನು ಒಡಲಲ್ಲಿ ಕಟ್ಟಿಕೊಂಡೇ ಈ ವೃತ್ತಿಯಲ್ಲಿ ನಿರತರಾಗಿರುವವರೇ ಬಹಳ ಮಂದಿ ಇದ್ದಾರೆ. ವಿಚಿತ್ರವೆಂದರೆ 4.46% ಮಂದಿ ಅನಕ್ಷರಸ್ಥರೂ ಇದ್ದಾರೆ ಎಂದರೆ ನಂಬಬೇಕು. ಕೇವಲ ಹೆಬ್ಬೆಟ್ಟಿನ ಯಜಮಾನ್ತಿಯರು ಇವರು. ಆದರೆ ವೃತ್ತಿ ಪರವಾದ ವ್ಯವಹಾರ ಜ್ಞಾನದಲ್ಲಿ ಪರಿಣತರು ಇವರು. ಬದುಕು ಕಲಿಸಿದ ಅನುಭವ ಅವರಿಗೆ ಆ ಮಟ್ಟಿನ ಜ್ಞಾನವನ್ನು ಕಲಿಸಿಕೊಟ್ಟಿದೆ.

ಈ ವೃತ್ತಿಗೆ ಬರುವವರು ನಿತ್ಯ ಜೀವನದಲ್ಲಿ ಯಾವುದಾದರೂ ಉದ್ಯೋಗದಲ್ಲಿದ್ದುಕೊಂಡೇ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಸುಮಾರು 5.02% ಮಂದಿ ಗೃಹಿಣಿಯರಾಗಿದ್ದುಕೊಂಡೇ ಈ ವೃತ್ತಿಯಲ್ಲಿ ತೊಡಗಿಸಿಕೊಂಡವರಿದ್ದಾರೆ. 12.52% ಮಂದಿಗೆ ಉದ್ಯೋಗವಿದೆ. ಆದರೆ ಸಮಯ ಸಿಕ್ಕಾಗ ರಜಾ ದಿನಗಳಲ್ಲಿ ಈ ವೃತ್ತಿಗೆ ಬರುತ್ತಾರೆ. 32.42% ಮಂದಿಗೆ ಯಾವ ಉದ್ಯೋಗವೂ ಇಲ್ಲದೆ ಈ ವೃತ್ತಿಯನ್ನೇ ನಿಯಮಿತವಾಗಿ ಆಯ್ದುಕೊಂಡವರು ಇದ್ದಾರೆ. ಇನ್ನು 50.04% ಮಂದಿಗೆ ಅಂಶಕಾಲಿಕ ಉದ್ಯೋಗವಿದೆ. ಏನಾದರೂ ಕೂಲಿ ಕೆಲಸವೋ, ಬೀಡಿ ಸುತ್ತುವುದೋ ಇತ್ಯಾದಿ ಕೆಲಸಗಳಿರುತ್ತದೆ. ಈ ಕೆಲಸಗಳು ವಾರದ ಪ್ರತಿದಿನವೂ ನಿಯತವಾಗಿ ಸಿಗುವುದಿಲ್ಲ. ಆದುದರಿಂದ ಇವರು ಆಂಶಕಾಲಿಕ ಉದ್ಯೋಗಿಗಳಾಗಿದ್ದಾರೆ.

ಈ ವೃತ್ತಿಯಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟವರು 9.13% ಮಂದಿ ಇದ್ದಾರೆ. 30 ವರ್ಷಕ್ಕಿಂತ ಮೇಲಿನವರು 53.17% ಮಂದಿ 20 ವರ್ಷಕ್ಕಿಂತ ಮೇಲಿನವರು 38.48% ಮಂದಿ ಇದ್ದಾರೆ. 0.22 ಮಂದಿ 20 ವರ್ಷಕ್ಕಿಂತ ಕೆಳಗಿನವರು ಇದ್ದಾರೆ. ಅವರೇ ಹೇಳುವಂತೆ 50-55 ವರ್ಷ ಈ ವೃತ್ತಿಯಲ್ಲಿರಬಹುದು. ಮತ್ತು ಅನೇಕರು ಇದ್ದಾರೆ ಕೂಡಾ.

ಈ ಮಹಿಳೆಯರ ವೃತ್ತಿಯಲ್ಲಿ ಸಂಪಾದನೆಯ ಏರಿಳಿತಗಳು ಸದಾ ಇರುತ್ತವೆ. ಒಂದು ದಿನದಲ್ಲಿ ಐದು ಮಂದಿಗಿಂತ ಹೆಚ್ಚು ಮಂದಿಯನ್ನು ಬಳಸಿಕೊಳ್ಳುವವರು 16.30% ಮಂದಿ ಇದ್ದಾರೆ. ಈ ಮಹಿಳೆಯರಲ್ಲಿ 8.48% ಮಂದಿ ತಮ್ಮದೇ ಮನೆ ಅಥವಾ ಬೇರೆ ಮನೆ ಅಥವಾ ಲಾಡ್ಜ್‌ಗಳಲ್ಲಿ ವೃತ್ತಿ ನಿರತರಾಗುತ್ತಾರೆ. ಅವರೇ ಹೇಳಿದಂತೆ 47.72% ಮಂದಿ ರಸ್ತೆಯಲ್ಲಿ ಅಂದರೆ ಅವಕಾಶ ಸಿಕ್ಕಿದಂತೆಲ್ಲಾ ತಮ್ಮ ಕೆಲಸ ಪೂರೈಸುತ್ತಾರೆ. 27.50% ಮಂದಿ ಪಾರ್ಕ್‌ಗಳು, ರೈಲ್ವೆ ನಿಲ್ದಾಣಗಳು, ಓಣಿ, ಬೀದಿಯಲ್ಲಿ ಮರೆಯಿರುವ ಸ್ಥಳಗಳಲ್ಲಿ ಕೆಲಸದಲ್ಲಿ ನಿರತರಾಗುತ್ತಾರೆ. ಈಗ ಎಲ್ಲವೂ ಮೊಬೈಲ್ ಫೋನಿನಲ್ಲಿ ವ್ಯವಹಾರ ನಡೆಯುವ ಕಾರಣ ಎಲ್ಲವೂ ಜಟ್‌ಟ್ ಆಗಿ ನೆರವೇರುತ್ತದೆ. ಈ ವೃತ್ತಿಗಾಗಿಯೇ ಒಂದು ಆ್ಯಪ್ ಕೂಡಾ ನಿರ್ಮಾಣವಾಗಿದೆ ಎಂದರೆ ಈ ವೃತ್ತಿ ಎಷ್ಟು ಸಲೀಸು ಎಂದು ಅರ್ಥವಾಗುತ್ತದಲ್ಲವೇ?

ಹೀಗೆಲ್ಲಾ ರಸ್ತೆಯಲ್ಲಿ, ಪಾರ್ಕ್‌ಗಳಲ್ಲಿ ವೃತ್ತಿ ನಿರತರಾದವರಿಗೆ ಯಾವ ರೀತಿಯ ರಕ್ಷಣೆಯೂ ಇಲ್ಲ. ಸಾರ್ವಜನಿಕರಿಂದ ಪೊಲೀಸರಿಂದ ತಪ್ಪಿಸಿಕೊಂಡು ವೃತ್ತಿಯಲ್ಲಿ ತೊಡಗಿಕೊಳ್ಳುವುದೇ ಅವರಿಗೆ ಬಹುದೊಡ್ಡ ಸವಾಲು. ಮನೆ, ಲಾಡ್ಜ್‌ಗಳಲ್ಲಿ ವೃತ್ತಿಯಲ್ಲಿ ತೊಡಗಿಸಿಕೊಂಡವರು ಆಯಾ ವಠಾರದ ಪೊಲೀಸರಿಗೆ ಹಾಕೊಡುವುದು ಕಡ್ಡಾಯ. ಮಾಲಿಕರಿಗೆ ತಲೆಹಿಡುಕರಿಗೆ ಕಮಿಷನ್, ಅವರ ಸ್ವಂತ ಮೇಕಪ್, ತಿಂಡಿ, ಪ್ರಯಾಣ ವೆಚ್ಚವೆಲ್ಲ ಸೇರಿ ಅವರ ಕೈಗೆ ಸಿಗುವುದು 50% ಹಣ ಮಾತ್ರ ಆದುದರಿಂದ ಬೀದಿಯಲ್ಲಿರಲಿ, ಲಾಡ್ಜ್ ಮನೆಗಳಲ್ಲಿರಲಿ ಅವರಿಂದ ಹಣ ಸುಲಿಗೆ ಮಾಡುವ ವ್ಯವಸ್ಥೆಯೊಂದು ಸದಾ ಚಾಲ್ತಿಯಲ್ಲಿರುತ್ತದೆ. ಪೋಲೀಸರು ದಾಳಿ ಮಾಡಿದಾಗ ಸಿಕ್ಕಿ ಬಿದ್ದರೆ ಬಿಡಿಸಿಕೊಳ್ಳಲು ಮತ್ತು ಕೇಸ್ ಹಾಕಿದರೆ ವಕೀಲರಿಗೆ ಫೀಸ್ ಕಟ್ಟಲು ಹೀಗೆ ಮತ್ತೆ ಮತ್ತೆ ಹೆಚ್ಚು ಹೆಚ್ಚು ಗಳಿಕೆಯ ಮಾರ್ಗವನ್ನು ಅವರು ಹುಡುಕಲೇ ಬೇಕಾಗುತ್ತದೆ. 500 ರೂಪಾಯಿಯಿಂದ 1000 ರೂಪಾಯ್ ವರೆಗೆ ಅವರು ಒಂದು ಸಲಕ್ಕೆ ಸಂಪಾದನೆ ಮಾಡುತ್ತಾರೆ. ಈ ರೇಟು ನಿಯತವಾಗಿ ಇರುತ್ತದೆಂದು ಹೇಳಲಾಗದು. ಅದು ಹೆಚ್ಚು ಕಡಿಮೆಯಾಗುವ ಸಾಧ್ಯತೆ ಇದೆ. ತಮ್ಮ ಬಳಿಗೆ ಬರುವ ಗಿರಾಕಿಗಳು ಎಂತೆಂತಹ ದುಷ್ಟರು, ತಲೆಕೆಟ್ಟವರು ಇರುವಂತೆ, ಅಮಾಯಕರು, ಮುಗ್ಧರೂ ಒಮ್ಮೊಮ್ಮೆ ಎದುರಾಗುತ್ತಾರೆ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

ಲೈಂಗಿಕ ಕೆಲಸಕ್ಕಾಗಿ ಬಂದವರು ಕೇವಲ ನಗ್ನ ಶರೀರವನ್ನು ನೋಡಿ ಅಷ್ಟರಿಂದಲೇ ತೃಪ್ತರಾಗಿ ಹೋದವರೂ ಇದ್ದಾರೆ. ಏನೂ ತಿಳಿಯದ ಮುಗ್ಧರೂ ಬರುತ್ತಾರೆ. ಅವರಿಗೆ ಇವರೇ ಕ್ರಿಯೆಯ ಬಗ್ಗೆ ಕಲಿಸಿಕೊಟ್ಟದ್ದೂ ಇದೆ. ಇನ್ನು ಕ್ರೌರ್ಯದ ಬೇರೆಬೇರೆ ಆಯಾಮಗಳನ್ನು ಅವರು ವಿವರಿಸುವಾಗ ಅವರೊಂದಿಗೆ ವ್ಯವಹರಿಸುವವರು ಮೃಗಗಳೋ, ರಾಕ್ಷಸರೋ ಎಂದು ತಿಳಿಯದೆ ಕಂಗಾಲಾಗುವುದೂ ಇದೆ. ಸಿಗರೇಟಿನಿಂದ ಮೈಯನ್ನೂ ಸುಡುವವರು, ವಿಕೃತಕಾಮಗಳಿಗೆ ಒತ್ತಾಯಿಸುವವರು, ತಮ್ಮಲ್ಲಿದ್ದುದನ್ನೆಲ್ಲಾ ದೋಚಿಕೊಂಡು ವಂಚಿಸುವವರು ಹೀಗೆ ಅದರ ದಾರುಣ ಕತೆಗಳು ಕರುಣಾಜನಕವಾಗಿವೆ. ಹೀಗೆ ಕ್ರೌರ್ಯಕ್ಕೆ ಒಳಗಾದಾಗ ಇವರನ್ನು ರಕ್ಷಿಸುವವರು, ಸಂತೈಸುವವರು ಯಾರೂ ಇರುವುದಿಲ್ಲ. ಆದುದರಿಂದ ಪ್ರತಿಯೊಬ್ಬ ಗಿರಾಕಿಯ ಜೊತೆ ವ್ಯವಹರಿಸುವಾಗಲೂ ಬಹಳ ಎಚ್ಚರಿಕೆಯಿಂದಿರಬೇಕಾಗುತ್ತದೆ. ಮಾನವೀಯತೆಗೆ, ಭಾವುಕತೆಗೆ ಆಸ್ಪದವೇ ಇಲ್ಲದಂತಹ ಒಂದು ಕ್ರೂರ ವ್ಯವಸ್ಥೆಯೊಳಗೆ ಈ ಮಹಿಳೆಯರು ನಿತ್ಯವೂ ಹೆಣಗಾಡುತ್ತಾರಲ್ಲಾ ಅದೇ ದೊಡ್ಡ ವಿಸ್ಮಯದ ಸಂಗತಿಯಾಗಿದೆ.

ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಇಂದಿಗೂ ದೇವದಾಸಿ ಪದ್ಧತಿಯನ್ನು ಒಂದು ಅನಿಷ್ಠವೆಂದು ಪರಿಗಣಿಸದವರಿದ್ದಾರೆ. ಬದುಕಿನಲ್ಲಿ ಎದುರಾಗುವ ಆಪತ್ತು ಗಳು ಮತ್ತು ಕುಟುಂಬದ ಹೆಣ್ಣುಮಗಳನ್ನು ದೇವದಾಸಿಯಾಗಿ ಮಾಡಿದಾಗ ಕಷ್ಟಗಳು ಪರಿಹಾರವಾಗುತ್ತವೆ ಎಂದು ದೃಢವಾಗಿ ನಂಬುವವರಿದ್ದಾರೆ. ಇವರು ಅನಕ್ಷರಸ್ಥರಲ್ಲ ಓದು ಬರೆಹ ಬಲ್ಲವರು. ಆಧುನಿಕ ಪ್ರಪಂಚದ ಸಕಲ ಸವಲತ್ತುಗಳನ್ನೂ ಪಡೆಯಬಲ್ಲವರು. ಶಿಕ್ಷಣದಿಂದ, ಸ್ವಂತ ದುಡಿಮೆಯಿಂದ ಆರ್ಥಿಕ ಪರಿಸ್ಥಿತಿಯನ್ನು ಮೇಲಕ್ಕೇರಿಸುವುದರಿಂದ ಸಂಕಷ್ಟಗಳಿಂದ ಪಾರಾಗ ಬಹುದು ಎಂಬುದನ್ನು ಸುತ್ತಲ ಜಗತ್ತಿನಲ್ಲಿ ಪ್ರತ್ಯಕ್ಷ ಕಂಡವರು. ಆದರೂ ಕೂಡಾ ದೇವದಾಸಿಯಾಗುವುದೆಂದರೆ ಒಂದು ಹೆಣ್ಣಿನ ಬದುಕನ್ನೇ ಕೈಯ್ಯಾರೆ ಕೊಂದಂತೆ ಎಂಬ ಮಾತನ್ನು ಅವರು ಒಪ್ಪಲಾರರು. ರೇಣುಕೆ, ಎಲ್ಲಮ್ಮ ಎಂತಹ ಶಕ್ತಿಶಾಲಿ ದೇವತೆಗಳೆಂಬುದು ನಿಮಗೆ ಗೊತ್ತಿಲ್ಲವೆಂದು ನಮ್ಮಲ್ಲಿ ವಾದ ಮಾಡುವವರು. ಈ ಮೌಡ್ಯದಿಂದ ಹೊರತರಲು ಅವರಿಗೆ ಉತ್ತಮ ಶಿಕ್ಷಣದ ಜೊತೆಗೆ ಆರ್ಥಿಕ ಸಬಲೀಕರಣವೂ ಆಗಬೇಕಾಗಿದೆ.

ಈ ರೀತಿಯಾಗಿ ಸಬಲೀಕರಣಗೊಂಡ ಹಲವು ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಹಾಸನದ ಪ್ರೇರಣಾ ಸಂಸ್ಥೆಯು ಹಲವು ಹೆಣ್ಣುಮಕ್ಕಳು ಈ ಮೌಡ್ಯಗಳಿಂದ ಹೊರಬಂದಿದ್ದಾರೆ. ಇಲ್ಲಿ ಬೇರೆ ಜಿಲ್ಲೆಗಳಲ್ಲಿರುವಷ್ಟು ಸಂಖ್ಯೆಯಲ್ಲಿ ದೇವದಾಸಿಯರಿಲ್ಲದಿದ್ದರೂ ಈ ವೃತ್ತಿಯಿಂದ ಹೊರಬಂದು ಸ್ವತಂತ್ರವಾಗಿ ಬದುಕುವ ಗಟ್ಟಿತನ ತೋರಿಸಿದ್ದಾರೆ. ನಾನಾ ರೀತಿಯ ಉದ್ದಿಮೆಗಳನ್ನು ಸ್ಥಾಪಿಸಿದ್ದಾರೆ. ಉದಾಹರಣೆಗೆ ಡಿಟ್‌ರ್ಜಂಟ್ ಸೋಪು ಮುಂತಾದ ವಸ್ತುಗಳ ತಯಾರಿಕೆ, ಖಾನಾವಳಿಗಳು, ಕ್ಯಾಟರಿಂಗ್ ವ್ಯವಸ್ಥೆ, ಬ್ಯೂಟಿಪಾರ್ಲರ್ ಹೀಗೆ ಹಲವು ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಂತೃಪ್ತಿಯ ಬದುಕು ಕಟ್ಟಿಕೊಂಡಿದ್ದಾರೆ. ಆದರೆ ರಾಯಚೂರು, ಯಲಬುರ್ಗಿ, ಕೊಪ್ಪಳ, ಕೂಡ್ಲಿಗಿ ಮುಂತಾದ ಕಡೆಗಳಲ್ಲಿ ಈ ವೃತ್ತಿಯಲ್ಲಿ ನಿರತರಾಗಿರುವವರು ಬಹುತೇಕ ಮಂದಿ ದೇವದಾಸಿಯರು ಸ್ನೇಹ ಸಂಸ್ಥೆ ಮುಕ್ತ ಒಕ್ಕೂಟ, ಕೊಪ್ಪಳದ ಸ್ವಯಂಸೇವಾ ಸಂಸ್ಥೆಯು ಇವರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಇವರಲ್ಲಿ 40% ಮಂದಿ ಎಸ್.ಎಸ್.ಎಲ್.ಸಿ. ಹಂತದ ವಿದ್ಯಾಭ್ಯಾಸ ಪಡೆದವರು. 20% ಮಂದಿ ಈಗಲೂ ಅನಕ್ಷರಸ್ಥೆಯರು. ಉಳಿದವರು ಪ್ರಾಥಮಿಕ ಹಂತದ ಶಿಕ್ಷಣ ಪಡೆದವರು. 75% ಮಂದಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಾದರೆ ಉಳಿದವರು ಹಿಂದುಳಿದ ಜಾತಿ ಸಮುದಾಯದವರು.

30% ಮಂದಿ ಮೂವತ್ತು ವರ್ಷದೊಳಗಿನವರಾದರೆ ಉಳಿದವರು 60 ವರ್ಷ ದೊಳಗಿನವರು. 30% ಮಂದಿ 30 ವರ್ಷದೊಳಗಿನವರು ಇದ್ದಾರೆ ಎಂದರೆ ಇತ್ತೀಚಿನ ವರ್ಷಗಳಲ್ಲಿ ಈ ಮೌಡ್ಯಕ್ಕೆ ಬಲಿಯಾದವರು ಎಂದೇ ಅರ್ಥವಲ್ಲವೇ? ಕುಟುಂಬದ ಬಂಧುಗಳ ಒತ್ತಾಯಕ್ಕೆ ತಲೆಬಾಗಿ ದೇವದಾಸಿಯರಾಗಿ ತಮ್ಮ ಬದುಕನ್ನು ಬಲಿಕೊಟ್ಟವರೇ 70% ಮಂದಿ ಇದ್ದಾರೆ. ಉಳಿದವರಲ್ಲಿ ಸ್ವಇಚ್ಛೆಯಿಂದ ದೇವದಾಸಿಯರಾದವರು 0.5% ಮಂದಿ ಎಂದು ಹೇಳಬಹುದು. ಈ ಪ್ರದೇಶಗಳಲ್ಲಿರುವ ಈ ವೃತ್ತಿ ನಿರತರಲ್ಲಿ 10% ಮಂದಿ ಪುನರ್ವಸತಿಗೊಂಡು ವೃತ್ತಿಯನ್ನು ತೊರೆದು ಸಮಾಜದಲ್ಲಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದಾರೆ ಎನ್ನುವುದು ಸಂತೋಷದ ವಿಷಯ. ಆ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹವಿಲ್ಲದ ಕಾರಣದಿಂದ ಮತ್ತು ಬಾಲ್ಯವಿವಾಹದಂತಹ ಕ್ರೂರ ಸಂಪ್ರದಾಯವು ಇನ್ನೂ ಚಾಲ್ತಿಯಲ್ಲಿರುವುದರಿಂದ ಅಲ್ಲಿನ ಹೆಣ್ಣು ಮಕ್ಕಳು ಶಿಕ್ಷಣವನ್ನು ಪಡೆಯುವುದು ಸಾಧ್ಯವೇ ಇಲ್ಲವೆಂಬ ಪರಿಸ್ಥಿತಿ ಇದೆ. ವಿವಾಹ ಸಂಸ್ಥೆಯೊಳಗಿನ ದೌರ್ಜನ್ಯದಿಂದ ಪಾರಾಗಲು ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡವರೂ ಇದ್ದಾರೆ. ಹಾಗೆಂದು ಈ ವೃತ್ತಿಯಿಂದ ಅವರು ಸಂಪಾದಿಸುವ ಮೊತ್ತ 200 ರೂಪಾಯಿಗಿಂತ ಹೆಚ್ಚಿಲ್ಲ ಎಂಬುದೂ ಕೂಡಾ ಗಮನಿಸಬೇಕಾದ ಅಂಶವಾಗಿದೆ.

ಯಲಬುರ್ಗಿ, ರಾಯಚೂರು ಕಡೆಗಳಲ್ಲಿ ಈ ವೃತ್ತಿ ನಿರತರನ್ನು ಸಂಘಟಿಸಿ ಜಾಗೃತಿ ಮೂಡಿಸುವ ಸ್ವಯಂ ಸೇವಾ ಸಂಸ್ಥೆಯವರು ಹೇಳಿದಂತೆ ಅಲ್ಲಿಯೂ ದೇವದಾಸಿಯರೇ ಹೆಚ್ಚು ಮಂದಿ ಈ ವೃತ್ತಿ ನಿರತರಾಗಿದ್ದಾರೆ. ಅನೇಕರು ದೊಡ್ಡ ಪಟ್ಟಣಗಳಿಗೆ ಅಂದರೆ ಮುಂಬೈ, ಪೂನಾ ಮುಂತಾದ ನಗರಗಳಿಗೆ ಮಾರಾಟವಾಗಿ ಹೋದವರು ಇದ್ದಂತೆ. ಬೇರೆ ಸಮೀಪದ ತಾಲೂಕುಗಳಿಗೆ ಹೋದವರೂ ಇದ್ದಾರೆ. ಇಲ್ಲಿಯೂ ಎಸ್.ಎಸ್.ಎಲ್.ಸಿ ಶಿಕ್ಷಣ ಪಡೆದವರು ಕೇವಲ 10% ಮಂದಿ ಮಾತ್ರ ಉಳಿದವರು ಪ್ರಾಥಮಿಕ ಹಂತದ ಶಿಕ್ಷಣ ಪಡೆದವರು. 5% ಮಂದಿ ಅನಕ್ಷಸ್ಥರೂ ಇದ್ದಾರೆ. ಇಲ್ಲಿಯೂ 30% ಮಂದಿ 35 ವರ್ಷದೊಳಗಿನವರು ಉಳಿದವರು 60 ವರ್ಷದೊಳಗಿನವರು ಇಲ್ಲಿಯೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರೇ 80% ಮಂದಿ ಇದ್ದಾರೆ. ಉಳಿದವರು ಹಿಂದುಳಿದ ಬೇರೆ ಬೇರೆ ಜಾತಿ ಸಮುದಾಯದವರು. ಈ ತಾಲೂಕುಗಳು ಅತ್ಯಂತ ಹಿಂದುಳಿದ ಪ್ರದೇಶಗಳಾದುದರಿಂದ ಈ ಮಹಿಳೆಯರ ದಿನದ ಸಂಪಾದನೆಯೂ ಬಹಳ ಕಡಿಮೆ ಇರುತ್ತದೆ. ಕೆಲವೊಮ್ಮೆ ಕೇವಲ 50 ಕೂಡಾ ಗಳಿಕೆ ಸಾಧ್ಯವಾಗದ ಪ್ರಸಂಗಗಳೂ ಇವೆ ಎಂದು ಅವರೇ ಹೇಳಿಕೊಳ್ಳುತ್ತಾರೆ.

ನಾನು ಈ ಕೃತಿಯನ್ನು ಪೂರ್ಣಗೊಳಿಸಲು ಪ್ರಾರಂಭಿಸಿದ್ದು ಕೊರೋನಾ ವಿಧಿಸಿದ ಗೃಹಬಂಧನದ ಅವಧಿಯಲ್ಲಿ. ಆಗ ಮಧ್ಯೆ ಮಧ್ಯೆ ಕಾರಕರ್ತೆಯರನ್ನು, ಪೊಲೀಸ್ ಇಲಾಖೆಯನ್ನು, ಹೊಟೇಲುಗಳನ್ನು ಮಾಹಿತಿ ಸಂಗ್ರಹಕ್ಕಾಗಿ ಸಂದರ್ಶಿಸಿದ್ದೆ. ಮಂಗಳೂರು ಕಂಕನಾಡಿ ನಗರ ಪೋಲೀಸ್ ಠಾಣೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಯಾವುದೇ ಕೇಸ್ ದಾಖಲಾಗಿಲ್ಲ. ಲೈಂಗಿಕ ಕಾರಕರ್ತೆ ಯರನ್ನು ಶಿಕ್ಷಿಸಿದ ದಾಖಲೆಗಳೂ ಇಲ್ಲ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ 2018ರಲ್ಲಿ ಒಂದೇ ಒಂದು ಪ್ರಕರಣವಿಲ್ಲ. 2019ರಲ್ಲಿ ಒಂದು ಪ್ರಕರಣ ದಾಖಲಾಗಿದೆ. ಕಲಂ 3,4,7,5,7,8 ಐ.ಟಿ.ಪಿ ಕಾನೂನು ಪ್ರಕಾರ ದಾಖಲಾಗಿದೆ.

ಮಂಗಳೂರು ಪೂರ್ವ ಪೋಲೀಸ್ ಠಾಣೆಯಲ್ಲಿ 2018ರಲ್ಲಿ ಮೂರು ಕೇಸ್‌ಗಳು, 2019ರಲ್ಲಿ ಎರಡು ಕೇಸ್‌ಗಳು ದಾಖಲಾಗಿವೆ. ದಕ್ಷಿಣ ಪೋಲೀಸ್ ಠಾಣೆ ಪಾಂಡೇಶ್ವರ, ಮುಲ್ಕಿ, ಪೋಲೀಸ್ ಠಾಣೆ ಮತ್ತು ಪೋಲೀಸ್ ಆಯುಕ್ತರ ಕಛೇರಿ ಮಂಗಳೂರು ಇಲ್ಲಿ ಲೈಂಗಿಕ ಕಾರ್ಯಕರ್ತೆಯರನ್ನು ಬಂಧಿಸಿದ, ಶಿಕ್ಷಿಸಿದ ಯಾವ ಕೇಸುಗಳೂ ದಾಖಲಾಗಿಲ್ಲ. ಇದರರ್ಥ ಲೈಂಗಿಕ ಸೇವಾ ವೃತ್ತಿ ಮಂಗಳೂರು ಮಹಾನಗರದ ವ್ಯಾಪ್ತಿಯಲ್ಲಿ ಕಡಿಮೆಯಾಗಿದೆ ಎಂದಲ್ಲ. ನಗರಗಳಿಂದ ಗ್ರಾಮಾಂತರದ ಸ್ಥಳಗಳಿಗೆ ವಿಸ್ತರಿಸಲಾಗಿದೆ. ಜಾರಿಗೆ ಬಂದ ಹೊಸ ಕಾನೂನುಗಳು ಪೋಲೀಸ್‌ರನ್ನು ನಿರ್ಬಂಧಿಸಿದೆ. ಈ ವೃತ್ತಿಯನ್ನು ಹಣಕ್ಕಾಗಿ ಬಳಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಲೈಂಗಿಕ ವೃತ್ತಿ ನಡೆಸುವುದು, ಈ ಸೇವೆಗಾಗಿ ಬಲಾತ್ಕಾರದಿಂದ ಒಯ್ಯುವುದು, ಅಪಹರಿಸುವುದು ಮುಂತಾದ ಸೆಕ್ಷನ್‌ಗಳು ಈ ವೃತ್ತಿಯನ್ನು ತಡೆಯುವುದಕ್ಕೆ ಸಹಾಯ ಮಾಡುತ್ತದೆ.

ಅಧ್ಯಯನದ ಫಲಿತಾಂಶಗಳು

ರೂಪಾ ಹಾಸನ ಅವರು ಹಲವಾರು ವರ್ಷಗಳಿಂದ ಮಹಿಳೆ ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ನಿರಂತರವಾಗಿ ಕೆಲಸ ಮಾಡುತ್ತಿದ್ದಾರೆ. ಲೈಂಗಿಕ ಕಾರಕರ್ತೆಯರ ಪುನರ್ವಸತಿಗಾಗಿ ಶ್ರಮಿಸುತ್ತಾ ಬಂದಿದ್ದಾರೆ ಈಗಲೂ ಶ್ರಮಿಸುತ್ತಾರೆ ಮತ್ತು ಈ ದಂಧೆಯು ಹೆಚ್ಚುತ್ತಿರುವುದಕ್ಕೆ ಕಾರಣಗಳನ್ನು ಹುಡುಕುತ್ತಾ ಇದರ ಬಗ್ಗೆ ವರ್ಷಗಳಿಂದ ಅಧ್ಯಯನ ಮಾಡಿದ್ದಾರೆ. ವೇಶ್ಯಾವಾಟಿಕೆಯನ್ನು ಲೈಂಗಿಕ ಜೀತವೆಂದು ಕರೆಯುವ ಇವರು ಇದನ್ನು ಕಾನೂನುಬದ್ಧಗೊಳಿಸಿದರೆ ಮೂಲರೋಗವನ್ನು ಹಾಗೆಯೇ ಬಿಟ್ಟು ರೋಗಲಕ್ಷಣಕ್ಕೆ ಚಿಕಿತ್ಸೆ ಮಾಡಿದಂತಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

2012ರ ವರೆಗೆ ಕರ್ನಾಟಕದಲ್ಲಿ ಲೈಂಗಿಕ ಜೀತಗಾರ್ತಿಯರು 79169, ಸಲಿಂಗಕಾಮಿ ಪುರುಷ ಲೈಂಗಿಕ ಜೀತಗಾರರ ಸಂಖ್ಯೆ 25,244. ಲೈಂಗಿಕ ಜೀತಗಾರ್ತಿಯರಲ್ಲಿ ಹಿಂದುಳಿದ ಮತ್ತು ತಳ ಸಮುದಾಯದವರೇ ಹೆಚ್ಚು ಮಂದಿ. ಉದಾಹರಣೆಯಾಗಿ ಹಾಸನ ಜಿಲ್ಲೆಯ ಅಂಕಿ ಅಂಶವನ್ನು ನೋಡಿದರೆ 2791 ಮಂದಿ ಲೈಂಗಿಕ ಜೀತಗಾರ್ತಿಯರಲ್ಲಿ 599 ಮಂದಿ ಪರಿಶಿಷ್ಟ ಜಾತಿ, 698 ಪರಿಶಿಷ್ಟ ವರ್ಗ, 799 ಮಂದಿ ಹಿಂದುಳಿದ ವರ್ಗ, 696 ಇತರ ಸಮುದಾಯದವರು ಇದ್ದಾರೆ. ಈ ಇತರ ಸಮುದಾಯದಲ್ಲಿ ಮುಸ್ಲಿಮರು ಹೆಚ್ಚು ಎಂದು ಅವರ ಅಧ್ಯಯನವು ತಿಳಿಸುತ್ತದೆ. ಇವರೆಲ್ಲಾ ನೋಂದಣಿಗೊಂಡ ಜೀತಗಾರ್ತಿಯರು. ಯಾವ ಎನ್.ಜಿ.ಒ.ಗಳ ಅಥವಾ ಸರಕಾರದ ನೋಂದಣಿ ಪ್ರಕ್ರಿಯೆಯೊಳಗೂ ದಾಖಲಾಗದೇ ಹೊರಗುಳಿದವರ ಸಂಖ್ಯೆ ಮೇಲಿನ ಅಂಕಿ ಸಂಖ್ಯೆಯ ಎರಡರಷ್ಟೋ ಮೂರರಷ್ಟೂ ಇರಬಹುದು. ಇದರ ಜೊತೆಗೆ ಕಾಲ್‌ಗರ್ಲ್‌ಗಳು, ಹೈಟೆಕ್ ವೇಶ್ಯಾವಾಟಿಕೆ, ವ್ಯಾಪಾರೀಕರಣದ ಲೇಬಲ್ ಇಲ್ಲದ ಸಭ್ಯನಾಗರಿಕ ವ್ಯಭಿಚಾರವೂ ಸೇರುತ್ತದೆ. ಶೋಕಿಗಾಗಿ, ಮೋಜಿಗಾಗಿ, ವೈಭವೋಪೇತ ಜೀವನದ ಆಕರ್ಷಣೆಗಾಗಿ, ಸುಲಭದ ಹಣ ಗಳಿಕೆಗಾಗಿ, ವೈಯಕ್ತಿಕ ಸಂತೋಷಕ್ಕಾಗಿ ಕೆಲವರು ತಾವಾಗಿಯೇ ಇದನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ವೇಶ್ಯಾಗೃಹಗಳು ಎಲ್ಲೆಂದರಲ್ಲಿ ತಲೆ ಎತ್ತುತ್ತಿವೆ. ವೇಶ್ಯಾವಾಟಿಕೆಯು ಕೆಲವು ಸರ್ಕಾರೇತರ ಸಾಂಸ್ಥಿಕ ವ್ಯವಸ್ಥೆಗಳಿಂದ 'ವೇಶ್ಯಾ ವೃತ್ತಿ' ಎಂದು ಕರೆಸಿಕೊಂಡ ಪರಿಣಾಮವಾಗಿ ಈ ಜಾಲಕ್ಕೆ ಬೀಳುವವರ ಮತ್ತು ತಾವಾಗಿಯೇ ವೇಶ್ಯಾವಾಟಿಕೆಯನ್ನು ಆಯ್ದುಕೊಳ್ಳುವವರ ಸಂಖ್ಯೆ 50% ಹೆಚ್ಚಿದೆ. ವಾಣಿಜ್ಯಕೃತ ವೇಶ್ಯಾವಾಟಿಕೆ ಮತ್ತು ಕಾಮ ಪ್ರಚೋದಕಗಳ ದೊಡ್ಡ ಮಾಫಿಯಾವೇ ಯಾರ ಅಂಕೆಯೂ ಇಲ್ಲದೇ ಬೆಳೆದು ನಿಂತಿರುವಾಗ ಕಡಿವಾಣ ಹಾಕ ಬೇಕಾದದ್ದು ಯಾರಿಗೆ? ಎಂದು ರೂಪಾ ಪ್ರಶ್ನಿಸುತ್ತಾರೆ. (ಪುಟ 50-51 ಲೈಂಗಿಕ ಜೀತ ಅಪರಾಧಿ ಯಾರು?)

2010ರ ಭಾರತ ಸರ್ಕಾರದ ಮಹಿಳಾ ಕಲ್ಯಾಣ ಸಚಿವಾಲಯದ ವರದಿಯಂತೆ 30 ಲಕ್ಷಕ್ಕೂ ಹೆಚ್ಚು ಮಹಿಳೆಯರು ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದರು. 'ಮಾನವ ಹಕ್ಕುಗಳ ವಾಚ್‌'ನ ವರದಿಯಂತೆ ಇದುವರೆಗೆ ಭಾರತದ ಸುಮಾರು 150 ಲಕ್ಷಕ್ಕೂ ಹೆಚ್ಚು ಹೆಣ್ಣು ಮಕ್ಕಳು ದೇಶವಿದೇಶಗಳಲ್ಲಿ ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದಾರೆ. ನಾಪತ್ತೆಯಾಗುವ ಅರ್ಧದಷ್ಟು ಹೆಣ್ಣು ಮಕ್ಕಳು ಅಕ್ರಮ ಸಾಗಾಟ ಮತ್ತು ಮಾರಾಟ ಜಾಲಕ್ಕೆ ಸಿಕ್ಕಿ ವೇಶ್ಯಾವಾಟಿಕೆಗೆ ದೂಡಲ್ಪಡುತ್ತಾರೆ.

ವೇಶ್ಯಾವಾಟಿಕೆಯನ್ನು ನಿರ್ಮೂಲನಗೊಳಿಸುವುದಕ್ಕಾಗಿ ಸುಪ್ರೀಂಕೋರ್ಟು ಕೆಲವು ಮಾರ್ಗದರ್ಶಿ ಸೂತ್ರಗಳನ್ನು ವಿಧಿಸಿತ್ತು. ಈ ಸೂತ್ರಗಳೆಲ್ಲವನ್ನು ನಮ್ಮ ಸರಕಾರ ಮೂಲೆಗೆಸೆದಿದೆ. ಇವುಗಳು ಕಡತದಲ್ಲೇ ಕುಳಿತಿವೆ. ಉಜ್ವಲಾ, ಸ್ವಾಧಾರ ದಂತಹ ಯೋಜನೆಗಳನ್ನು ಸರಕಾರ ಜಾರಿಗೊಳಿಸಿದರೂ ಅದು ಸರಿಯಾದ ರೀತಿಯಲ್ಲಿ ಅನುಷ್ಠಾನಗೊಳ್ಳಲೇ ಇಲ್ಲ. ನಮ್ಮ ಸರಕಾರವು ಅವರಿಗೆ ಕೌಶಲ್ಯ ತರಬೇತಿ ನೀಡಿ ವ್ಯಾಪಾರಕ್ಕಾಗಿ 20 ಸಾವಿರ ಸಾಲ ನೀಡುವ ಯೋಜನೆ ಜಾರಿ ಗೊಂಡಿದೆ. ಆದರೆ ಅದೂ ಪರಿಣಾಮಕಾರಿಯಲ್ಲವಾದುದರಿಂದ ಸರಿಯಾಗಿ ಅನುಷ್ಠಾನಗೊಂಡಿಲ್ಲ. (ಪುಟ 55, ಲೈಂಗಿಕ ಜೀತ ಅಪರಾಧಿ ಯಾರು?)

2013ರಲ್ಲಿ ಲೈಂಗಿಕ ಕಾರಕರ್ತೆಯರಿಗೆ ಪುನರ್ವಸತಿಗಾಗಿ ಹತ್ತು ಸಾವಿರ ಮಂದಿಗೆ ವೃತ್ತಿ ತರಬೇತಿ ನೀಡಲಾಯಿತು. ಆದರೆ ಗುಣಾತ್ಮಕ ಮಾರುಕಟ್ಟೆ ಇಲ್ಲದೆ ಆ ಯೋಜನೆ ಸೋತಿತ್ತು. 2017ರಲ್ಲಿ ಎಂಟು ತಾಲೂಕುಗಳಲ್ಲಿ ಘಟಕ ಮಾಡಿ ವ್ಯಾಪಾರದ ವ್ಯವಸ್ಥೆ ಮಾಡಿದರು. (ಫಿನ್ಯಾಲ್, ಸೋಪು ಇತ್ಯಾದಿ ವಸ್ತುಗಳ ಮಾರಾಟ) ಆಸ್ಪತ್ರೆ, ಹಾಸ್ಟೆಲ್‌ಗಳು ಕೊಂಡುಕೊಳ್ಳುವಂತೆ ಆರೋಗ್ಯ ಇಲಾಖೆಯವರು ಸಹಕಾರ ನೀಡುವಂತೆ ಹಾಸನದ ಡಿ.ಸಿಯುವರು ವಿನಂತಿಸಿದರು. ಇದು ಸ್ವಲ್ಪ ಮಟ್ಟಿಗೆ ಯಶಸ್ವಿಯಾಯಿತು. ಮುಂದೆ ಈ ವ್ಯವಸ್ಥೆ ಮುಂದುವರಿಯುವಂತೆ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ರೂಪಾ ಅವರು ತಮ್ಮ ಅಧ್ಯಯನದಿಂದ ಹೊರಬಂದ ಫಲಿತಾಂಶವನ್ನು ಈ ರೀತಿ ವ್ಯಕ್ತಪಡಿಸುತ್ತಾರೆ. ಪ್ರತಿ ಜಿಲ್ಲೆಯಲ್ಲಿ ಕಾಣಿಯಾಗುವ ಹೆಣ್ಣು ಮಕ್ಕಳನ್ನು ಹುಡುಕುವುದಕ್ಕಾಗಿಯೇ ಒಂದು ವಿಭಾಗವನ್ನು ತೆರೆದು ಕೆಲಸ ಮಾಡಬೇಕಾಗಿದೆ ಎಂದು ಸಲಹೆ ನೀಡುತ್ತಾರೆ.

ವೇಶ್ಯಯರ ಕಾನೂನು ಸಮರ

ವೇಶ್ಯಾವಾಟಿಕೆಯನ್ನು ಪ್ರವಾಸೋದ್ಯಮವಾಗಿ ನಡೆಸಿಕೊಂಡು ಬರುತ್ತಿರುವ ರಾಷ್ಟ್ರಗಳಲ್ಲಿ ಥಾಯಿಲೆಂಡ್ ಪ್ರಸಿದ್ಧವಾಗಿದೆ. ಇಲ್ಲಿನ ವೇಶ್ಯೆಯರ ಸಲುವಾಗಿಯೇ ಪ್ರಪಂಚದ ನಾನಾ ಭಾಗಗಳಿಂದ ಮಿಲಿಯಗಟ್ಟಲೆ ಪ್ರವಾಸಿಗಳು ಬರುತ್ತಾರೆ. ಕನಿಷ್ಠ 25-30 ಲಕ್ಷ ಮಹಿಳೆಯರು ವೇಶ್ಯೆಯರಾಗಿ ವೃತ್ತಿ ನಿರತರಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ವೇಶ್ಯಯರು ಸರಿಯಾಗಿ ತೆರಿಗೆ ಕಟ್ಟುತ್ತಿಲ್ಲವೆಂದು ಸಂಶಯದಿಂದ ಸರಕಾರವು ಈ ವ್ಯವಸ್ಥೆಯನ್ನು ಕಾನೂನು ಬದ್ಧಗೊಳಿಸಬೇಕೆಂದು ನ್ಯಾಯಾಂಗವು ಒಂದು ಸಭೆಯನ್ನು ಕರೆಯಿತು. ಈ ಸಭೆಯಲ್ಲಿ ಗಣ್ಯರು, ಮಾಧ್ಯಮದವರು, ವಿಶ್ವವಿದ್ಯಾನಿಲಯದ ಮಹಿಳಾ ಅಧ್ಯಯನದವರಲ್ಲದೆ ನೂರಾರು ಮಂದಿ ವೇಶ್ಯಯರೂ ಭಾಗವಹಿಸಿದ್ದರು. ಈ ವೃತ್ತಿಯನ್ನು ಕಾನೂನು ಬದ್ಧಗೊಳಿಸಿದರೆ ದುಷ್ಟಕೂಟಗಳಿಗೆ ಶೋಷಣೆಗೆ ಅನುಮತಿ ನೀಡಿದಂತಾಗುತ್ತದೆಂದು ಮಹಿಳೆಯರ ಪರವಾಗಿ ಚಿಂತಿಸುವ ಹಲವರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಆದರೆ ವೇಶ್ಯಯರು ತಮ್ಮ ನಿಲುವನ್ನು ಗಟ್ಟಿ ಧ್ವನಿಯಲ್ಲಿ ಮಂಡಿಸಿದರು. "ನಮಗೆ ನಿಮ್ಮ ಕಾನೂನಿನ ರಕ್ಷೆಯೇನೂ ಬೇಕಾಗಿಲ್ಲ. ನಾವು ಬೇಕಾದಷ್ಟು ತೆರಿಗೆ ಕಟ್ಟುತ್ತಿದ್ದೇವೆ. ಆದರೆ ಬೇರೆ ವ್ಯಾಪಾರಿಗಳಿಗೆ ಉದ್ದಿಮೆದಾರರಿಗೆ ಸಕಲ ಸವಲತ್ತುಗಳನ್ನೂ ಕೊಡುವ ನೀವು ನಾವು ಕಟ್ಟುವ ತೆರಿಗೆಯ ಸಲುವಾಗಿಯಾದರೂ ನ್ಯಾಯ ದೊರಕಿಸಿ" ಎಂದು ಹೇಳಿದರು. ಇವರ ಉತ್ತರ ಕೇಳಿ ಕಾನೂನು ಮಂತ್ರಿಗಳು ಕಕ್ಕಾಬಿಕ್ಕಿಯಾದರಂತೆ. ಪ್ರವಾಸಿಗರನ್ನು ಆಕರ್ಷಿಸುವ ಹುಚ್ಚು ಪ್ರಯತ್ನದಲ್ಲಿ ಸರಕಾರ ಕ್ರೌರ್ಯವನ್ನೇ ಮೆರೆಯುತ್ತಿದೆ. ಬ್ಯಾಂಕಾಕಿನ ಬೀದಿಗಳಲ್ಲಿ 60-70 ವಯಸ್ಸಿನ ಮುದಿ ಪಾಶ್ಚಾತ್ಯರು 16-18 ವಯಸ್ಸಿನ ಥಾಯ್ ಹುಡುಗಿಯರ ಕೈ ಹಿಡಿದು ನಡೆಯುತ್ತಿರುವುದನ್ನು ಕಂಡಾಗ ಕರುಳು ಚುರ್ ಅನ್ನುತ್ತದೆ. ಮನುಷ್ಯನ ಕಾಮ ಪಿಪಾಸೆಯ ಬಗ್ಗೆ ಅಸಹ್ಯ ಹುಟ್ಟುತ್ತದೆ ಎಂದು ಶಾಂತಾ ನಾಗರಾಜ್ ಅವರು ಅಚಲ ಪತ್ರಿಕೆಯಲ್ಲಿ ಬರೆದಿದ್ದರು.

ಮ್ಯಾತೀಯ ಸಾಧನೆ

ಬಾಲ ವೇಶ್ಯೆಯರಾಗಿ ಮುಂಬಯಿ, ಕಲ್ಕತ್ತಾಗಳ ಕೆಂಪು ದೀಪದಡಿಯಲ್ಲಿ ದೌರ್ಜನ್ಯಕ್ಕೊಳಗಾದವರನ್ನು ಸಾಂತ್ವನ, ರಕ್ಷಣೆ, ಕಾನೂನಿನ ಸಹಾಯ ಮತ್ತು ಭವಿಷ್ಯದ ಭರವಸೆ ನೀಡಿ ರಕ್ಷಿಸುವ ಮನೆಯೇ 'ಮ್ಯಾತೀ', ಮ್ಯಾತಿ ಎಂದರೆ ತಾಯಿಯ ಮನೆ ಎಂದು ಅರ್ಥ. ನೇಪಾಲದ ಅನುರಾಧಾ ಕ್ಯೋರಾಲಾ 1993ರಲ್ಲಿ ಕಾಂಡುವಿನಲ್ಲಿ ಸ್ಥಾಪಿಸಿದ ಈ ಸಂಸ್ಥೆಯು ಭಾರತ ನೇಪಾಳದ ಗಡಿಯಲ್ಲಿ ಗಸ್ತು ನಡೆಸಿ ರಕ್ಷಿಸಿದ ಮಾರಾಟಕ್ಕೊಳಗಾಗುವ ಮಕ್ಕಳಿಗೆ ಆಶ್ರಯ ನೀಡಿ, ಪುನರ್ವಸತಿಯ ಶಿಕ್ಷಣ ನೀಡುತ್ತಿದೆ. 12 ಸಾವಿರಕ್ಕೂ ಹೆಚ್ಚು ಅಮಾಯಕ ಹೆಣ್ಣು ಮಕ್ಕಳನ್ನು ರಕ್ಷಿಸಿದೆ. ಮ್ಯಾತೀಯ ಹಲವು ಶಾಖೆಗಳು ಭಾರತ ಮತ್ತು ನೇಪಾಳದಲ್ಲಿ ಈ ಕೆಲಸವನ್ನು ಮಾಡುತ್ತಿದೆ. ನೇಪಾಳದ ಪುನರ್ವಸತಿ ಕೇಂದ್ರದಲ್ಲಿ 400ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದಿದ್ದಾರೆ. ಇವರ ಈ ಸಾಧನೆಗೆ 2010ರಲ್ಲಿ ಸಿ.ಎನ್.ಎನ್. ಹೀರೋ ಪ್ರಶಸ್ತಿಯನ್ನು ಪಡೆದಿದ್ದಾರೆ.

ಮಾನವ ಕಳ್ಳ ಸಾಗಾಣಿಕೆಯಲ್ಲಿ ಪ್ರಪಂಚದಾದ್ಯಂತ ಅತ್ಯಂತ ಹೆಚ್ಚು ಹೆಣ್ಣುಮಕ್ಕಳು ಮಾರಾಟವಾಗುವುದು ಭಾರತ ಮತ್ತು ನೇಪಾಳ ದೇಶಗಳಿಂದ. ದೇಶದೊಳಗೇ ಹೆಣ್ಣುಮಕ್ಕಳನ್ನು ಜೀತಕ್ಕಾಗಿ ಮಾರಾಟ ಮಾಡುವುದನ್ನು ಸರಕಾರ ನಿಷೇಧಿಸಿದರೂ ಇಂದೂ ಈ ಕಾಮಾರಿ ಪದ್ಧತಿ ಕಡಿಮೆಯಾಗಿಲ್ಲ. ನಮ್ಮಲ್ಲಿ ದೇವದಾಸಿ ಪದ್ಧತಿ ಇರುವಂತೆ ನೇಪಾಳದಲ್ಲಿ 'ದೇವುಕಿ' ಎಂಬ ಸಂಪ್ರದಾಯವಿದೆ. ಹೆಣ್ಣು ಮಕ್ಕಳನ್ನು ಕೆಲವೇ ಸಾವಿರ ರೂಪ್ಯಾಗಳಿಗೆ ಖರೀದಿಸಿ ದೇವುಕಿಯನ್ನಾಗಿ ಮಾಡಿ ದೇವಾಲಯಕ್ಕೆ ಒಪ್ಪಿಸುತ್ತಾರೆ. ಪೂಜಾರಿಗಳು ಇವರನ್ನು ತೀರ್ಥಯಾತ್ರೆಗೆ ಹೋದಾಗ ಗ್ರಾಹಕರಿಗೆ ಮಾರಾಟ ಮಾಡುತ್ತಾರೆ. ಹೆಣ್ಣು ಮಗುವನ್ನು ದೇವಿಯ ಸ್ಥಾನದಲ್ಲಿಟ್ಟು ಆರಾಧಿಸುವ ಸಂಪ್ರದಾಯವೂ ನೇಪಾಳದಲ್ಲಿದೆ. ಆ ಬಾಲೆ ಋತುಮತಿಯಾದ ಮೇಲೆ ಆಕೆ ಪದಚ್ಯುತಿಗೊಳ್ಳುತ್ತಾಳೆ. ಹೀಗೆ ಆರಾಧಿಸಲ್ಪಟ್ಟ ಹೆಣ್ಣುಮಕ್ಕಳನ್ನು ಯಾರೂ ವಿವಾಹವಾಗಲು ಮುಂದೆ ಬರುವುದಿಲ್ಲವಂತೆ. ಇವರು ಮುಂದೆ ಅವಿವಾಹಿತೆಯರಾಗಿಯೋ, ವೇಶ್ಯಯರಾಗಿಯೋ ಬಾಳಬೇಕಾದ ಅನಿವಾರ್ಯತೆ ಇದೆ. ನೇಪಾಳದಲ್ಲಿ ಅಸ್ಥಿರ ಸರಕಾರವಿದ್ದು ಮಾವೋವಾದಿ ಗಳ ಅಟ್ಟಹಾಸ, ಕುಸಿಯುತ್ತಿರುವ ಕಾನೂನು ವ್ಯವಸ್ಥೆಗಳಿಂದಾಗಿ ಹೆಣ್ಣು ಮಕ್ಕಳ ಸಂಕಷ್ಟಕ್ಕೆ ಸ್ಪಂದಿಸುವ ಹೃದಯವೇ ರಾಜಕೀಯಕ್ಕೆ ಇಲ್ಲವಾಗಿದೆ. ಸಾಲಬಾಧೆ ಗೊಳಗಾಗಿ ಹೊಲಗಳನ್ನು ಮಾರಿದ ರೈತರು ಜಮೀನ್ದಾರರ ಹೊಲಗಳಲ್ಲಿ ಜೀತದಾಳುಗಳಾಗಿ ದುಡಿಯುತ್ತಿದ್ದಾರೆ. ಹೆಣ್ಣು ಮಗು ಪ್ರಾಯಕ್ಕೆ ಬರುವ ಮೊದಲೇ ಮಾರಾಟದ ಸರಕಾಗುತ್ತಿದ್ದಳು. ಜಾಗತೀಕರಣದಿಂದಾಗಿ ಗುಡಿ ಕೈಗಾರಿಕೆಗಳು ನಾಶವಾಗಿ ಆರ್ಥಿಕ ದಾರಿದ್ರಕ್ಕೊಳಗಾದ ನೇಪಾಳಿ ಕುಟುಂಬಗಳಿಗೆ ಹೆಣ್ಣು ಮಕ್ಕಳ ಮಾರಾಟವೇ ಮುಖ್ಯ ಕಸುಬಾಗಿ ಬಿಟ್ಟಿತು. ಹೀಗೆ ನೇಪಾಳಿ ಹೆಣ್ಣು ಮಕ್ಕಳು ವಿಶ್ವದಾದ್ಯಂತ ಪಸರಿಸಿದರು. ಈ ಬಾಲ ವೇಶ್ಯೆಯರ ಬಗ್ಗೆ ಹಾಲಿವುಡ್ ನಿದೇರ್ಶಕ ಆ್ಯಂಡ್ರ ಲೆವಿನ್, "ನನ್ನ ದೇವರು ಸತ್ತ ದಿನ" ಎಂಬ ಸಾಕ್ಷ್ಯಚಿತ್ರ ನಿರ್ಮಿಸಿದನು. ಈ ಸಾಕ್ಷ್ಯಚಿತ್ರದಲ್ಲಿ ಹಲವು ಬಾಲಕಿಯರ ಕರುಣಾಜನಕ ಕತೆಗಳಿವೆ. ಈ ಸಾಕ್ಷ್ಯಚಿತ್ರ ನೋಡಿದ ಬಳಿಕ 'ಮ್ಯಾತೀ'ಯ ಅನುರಾಧಾ ಕೊಯಿರಾಲಾ ಮತ್ತು ಸಂಘಟನೆಯ ಮಕ್ಕಳ ಕಾರ್ಯ ವೈಖರಿಯನ್ನು ಪ್ರಪಂಚವೇ ಮೆಚ್ಚಿಕೊಂಡಿತು. ಇಲ್ಲಿನ ಮಕ್ಕಳು ಮಾಡಿದ 'ಬದುಕುಳಿದವರು ತಯಾರಿಸಿದ್ದು' ಎಂಬ ತಲೆಬರಹದೊಂದಿಗೆ ತಯಾರಿಸಲಾದ ಬ್ಯಾಗುಗಳಿಗೆ ವಿಶ್ವದಾದ್ಯಂತ ಬೇಡಿಕೆ ಹೆಚ್ಚಿತು. ಈ ಸಂಸ್ಥೆಯಲ್ಲಿರುವ ಹೆಣ್ಣು ಮಕ್ಕಳು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಗಟ್ಟಿಗೊಂಡಿದ್ದಾರೆ. ಈ ವೃತ್ತಿಯಿಂದ ಬಿಡುಗಡೆ ಹೊಂದಿ ನೆಮ್ಮದಿಯಿಂದ ಬದುಕಬಹುದು ಎಂಬುದಕ್ಕೆ ಮಾದರಿಯಾಗಿದ್ದಾರೆ. ವಿಶ್ವದಲ್ಲಿ ಐದು ಕೋಟಿಗೂ ಹೆಚ್ಚು ಜನರನ್ನು ದನಗಳಂತೆ ಮಾರಾಟ ಮಾಡಲಾಗುತ್ತಿದೆ ಎಂದು ವಿಶ್ವ ಸಂಸ್ಥೆಯ ವರದಿ ಹೇಳುತ್ತವೆ. ಇದರಲ್ಲಿ ಒಂದೂವರೆ ಕೋಟಿ ಎಳೆಯ ಮಕ್ಕಳನ್ನು ಅಪಹರಿಸಿ 80% ಮಕ್ಕಳನ್ನು ವೇಶಾವೃತ್ತಿಗೆ ತಳ್ಳಲಾಗುತ್ತದೆ. ನೇಪಾಳದಿಂದ ಆರು ವರ್ಷದ ಮಕ್ಕಳನ್ನೂ ತಂದು ವೇಶ್ಯಾವೃತ್ತಿಗೆ ದೂಡುತ್ತಾರೆ. ಆ ಮನಸ್ಸುಗಳು ಎಷ್ಟು ಕ್ರೂರವಾಗಿವೆ ಎಂದು ಊಹಿಸಿಯೇ ಬೆರಗಾಗುತ್ತೇವೆ. ಹೆಣ್ಣು ಮಕ್ಕಳನ್ನು ಈ ಕ್ರೂರ ಹಿಂಸೆಗೆ ಗುರಿಪಡಿಸುವ ಕೆಲಸದಲ್ಲಿ ಕೈ ಜೋಡಿಸುವವರಲ್ಲೂ ಮಹಿಳೆಯರೇ ಹೆಚ್ಚು ಎಂಬುದು ವಿಚಿತ್ರವಾದರೂ ಸತ್ಯ ಸಂಗತಿಯಾಗಿದೆ.

ಪತ್ರಿಕಾ ವರದಿಗಳಲ್ಲಿ ಉಂಟಾದ ವ್ಯತ್ಯಾಸಗಳು

ಒಂದೈವತ್ತು ವರ್ಷಗಳ ಹಿಂದೆ ವೇಶ್ಯಾವಾಟಿಕೆ ನಡೆಸುತ್ತಿದ್ದ ತಾಣಗಳ ಬಗ್ಗೆ ಜನರಲ್ಲಿ ತಿರಸ್ಕಾರ ಭಾವನೆಯೋ ಮಡಿವಂತಿಕೆಯೋ ಗೊತ್ತಿಲ್ಲ ಅದರ ಬಗ್ಗೆ ಬಹಿರಂಗವಾಗಿ ಮಾತಾಡುವುದಕ್ಕೆ ಮುಜುಗರ ಪಡುತ್ತಿದ್ದರು. ಆ ಕಾಲದಲ್ಲಿ ಎಲ್ಲೋ ಒಂದು ಮೂಲೆಯಲ್ಲಿ ಸಣ್ಣ ಸುದ್ದಿಯಾಗಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿತ್ತು. 21ನೆಯ ಶತಮಾನದಲ್ಲಿ ಈ ಮಡಿವಂತಿಕೆ ಪತ್ರಿಕೆಗೂ ಇದ್ದಂತಿಲ್ಲ. ಜನರೂ ಖುಲ್ಲಂಖುಲ್ಲಾ ಈ ತಾಣಗಳ ಬಗ್ಗೆ ಮಾತನಾಡುವಷ್ಟು ಅರಿವು ಮೂಡಿಸಿಕೊಂಡಿದ್ದಾರೆ ಎಂದು ಅನಿಸುತ್ತದೆ. ಜೈಲಿನ ಹಳೆಯ ಕಡತಗಳಲ್ಲೂ ಇಷ್ಟೊರಲ್ ಆಕ್ಷಿನ ಅಡಿಯಲ್ಲಿ ಹೆಂಗಸರನ್ನು ಬಂಧಿಸಿದ ದಾಖಲೆಗಳಿವೆ. ಆದರೆ ಗಿರಾಕಿಗಳ ಹೆಸರಿಲ್ಲ. ಪತ್ರಿಕೆಗಳಲ್ಲಿ ಬರುವ ವರದಿಗಳ ವಿನ್ಯಾಸಗಳೂ ಬದಲಾದುದನ್ನು ಗಮನಿಸಬಹುದು. ಕುಟುಂಬ ಯೋಜನೆಯ ಜಾಹೀರಾತುಗಳು, ಸ್ಯಾನಿಟರಿ ಪ್ಯಾಡ್‌ಗಳ ಜಾಹೀರಾತುಗಳು, ಕಾಂಡೋಮ್ ಜಾಹೀರಾತುಗಳು ಮಾಧ್ಯಮಗಳಲ್ಲಿ ಪ್ರಕಟವಾದಾಗ, ಪ್ರದರ್ಶನ ಗೊಂಡಾಗ ಸಂಪ್ರದಾಯವಾದಿಗಳು ಕಳೆದ ಶತಮಾನದಲ್ಲಿ ಬೆಚ್ಚಿಬಿದ್ದದ್ದುಂಟು. ಕ್ರಮೇಣ ದಿನನಿತ್ಯ ನೋಡುತ್ತಾ ಅದೊಂದು ಸಾಮಾನ್ಯ ಸಂಗತಿಯೆಂದು ತಿಳಿಯುವಂತಾಗಿಲ್ಲವೇ? ಹಾಗೆಯೇ ಈ ವೇಶ್ಯಾವಾಟಿಕೆಯ ಸುದ್ದಿಗಳು ಕೂಡ. ಹತ್ತಿಪ್ಪತ್ತು ವರ್ಷಗಳ ಹಿಂದೆ ವೇಶ್ಯಾ ವಾಟಿಕೆಯಲ್ಲಿ ತೊಡಗಿದ ಹೆಂಗಸರನ್ನು ಬಂಧಿಸಿದರು ಎಂಬ ಸುದ್ದಿಗಳು ಪ್ರಕಟವಾಗುತ್ತಿದ್ದವು. ಈ ಶತಮಾನದಲ್ಲಿ ಎಚ್.ಐ.ವಿಯ ಪಿಡುಗು ವ್ಯಾಪಿಸುತ್ತಿದ್ದಂತೆ ಅದರ ಬಗ್ಗೆ ಪ್ರಚಾರ ಮತ್ತು ಪರಿಹಾರ ಕಾರ್ಯಕ್ರಮಗಳು ಪ್ರಪಂಚದಾದ್ಯಂತ ಬಹಳ ಬಿರುಸಿನಿಂದ ನಡೆಯುತ್ತಿದ್ದದ್ದು ಗೊತ್ತು ತಾನೇ? ಈ ಪ್ರಚಾರ ಕಾರ್ಯಗಳಿಂದಾಗಿ ವೇಶ್ಯಾವಾಟಿಕೆಯ ಬಗ್ಗೆ ಎಲ್ಲರೂ ಹಿಂಜರಿಕೆ ಇಲ್ಲದೆ ಮಾತನಾಡತೊಡಗಿದರು. ಆದುದರಿಂದಲೇ ಇರಬಹುದೇನೋ ವೇಶ್ಯಾವಾಟಿಕೆಯಲ್ಲಿದ್ದ ಹೆಂಗಸರನ್ನು ಬಂಧಿಸಿದರು ಎಂಬ ಸುದ್ದಿಯ ಜೊತೆಗೆ ಹೆಂಗಸರ ಹೆಸರೂ ಪ್ರಕಟವಾಗ ತೊಡಗಿದವು. ಅವು ಅವರ ನಿಜ ಹೆಸರೋ ಅಲ್ಲವೋ ಎಂದು ತನಿಖೆ ಮಾಡುವ ಗೋಜಿಗೆ ಪೊಲೀಸರೂ ಹೋಗುವುದಿಲ್ಲ. 2007ರಲ್ಲಿ ಕಲ್ಕತ್ತಾದಲ್ಲಿ ಆರು ದಿನಗಳ ಕಾಲ ಲೈಂಗಿಕ ಕಾರಕರ್ತೆಯರ ಸಮಾವೇಶ ನಡೆಯಿತು. ತಮ್ಮನ್ನು ಮನರಂಜನಾ ಕಾರಕರ್ತೆ ಯರೆಂದು ಪರಿಗಣಿಸಬೇಕೆಂದು, ಲೈಂಗಿಕ ಖುಷಿಯನ್ನು ಮೂಲಭೂತ ಹಕ್ಕನ್ನಾಗಿ ಮಾಡಬೇಕೆಂದು ಈ ವೃತ್ತಿಯನ್ನು ಕಾನೂನು ಬದ್ಧಗೊಳಿಸಬೇಕೆಂದು ಸರಕಾರದ ಮುಂದೆ ಅವರು ಬೇಡಿಕೆಯನ್ನಿಟ್ಟರು. ಆಗ ಪರ ವಿರೋಧವಾಗಿ ದೃಶ್ಯ, ಶ್ರವ್ಯ, ಪತ್ರಿಕಾ ಮಾಧ್ಯಮಗಳಲ್ಲಿ ಬಹಳ ಬಿರುಸಿನ ವಾದ ವಿವಾದಗಳು ನಡೆದುವು.

ಈ ಘಟನೆಗಳ ಬಳಿಕ ಪೋಲೀಸರು ಮಾಡಿದ ದಾಳಿಯಲ್ಲಿ ಗಿರಾಕಿಗಳೂ ಸಿಕ್ಕಿ ಬಿದ್ದರು ಎಂದು ದಾಖಲಿಸತೊಡಗಿದರು. ಕಳೆದ ಹತ್ತು ವರ್ಷಗಳಿಂದಿಚೇಗೆ ಪತ್ರಿಕಾ ವರದಿಗಳಲ್ಲಿ ಸಿಕ್ಕಿ ಬಿದ್ದ ಹೆಂಗಸರ ಹೆಸರು ಮತ್ತು ಗಿರಾಕಿಗಳ ಹೆಸರೂ ಪ್ರಕಟವಾಗಲಾರಂಭಗೊಂಡವು. ದೃಶ್ಯ ಮಾಧ್ಯಮಗಳಲ್ಲಿ ಮುಖ ಮುಚ್ಚಿಕೊಂಡ ಗಂಡು ಹೆಣ್ಣುಗಳನ್ನು ಕಾಣಬಹುದಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ವೇಶ್ಯಯ ಹೆಸರು ಮಾತ್ರವಲ್ಲ ಹೆಸರು ಬಂಧಿಸಿದ ಸ್ಥಳ ವಶಪಡಿಸಿದ ವಸ್ತು, ಹಣ, ಗಿರಾಕಿಗಳ ಹೆಸರುಗಳ ಸಹಿತ ಭಾವಚಿತ್ರಗಳೂ ಪ್ರಕಟವಾಗತೊಡಗಿದ್ದು ವಿಶೇಷ ಬದಲಾವಣೆ.

ಉದಾಹರಣೆಗೆ ಉರ್ವ ಪೋಲೀಸ್ ಠಾಣೆಯ ಎದುರಿನ ಹೊಟೇಲಿನಿಂದ ಅನೈತಿಕ ಚಟುವಟಿಕೆ ನಡೆಸುವ 18 ಮಂದಿಯನ್ನು ಬಂಧಿಸಲಾಗಿದೆ. ಮೂರು ಲಕ್ಷದಷ್ಟು ಹಣ 12 ಮೊಬೈಲುಗಳನ್ನು ವಶಪಡಿಸಲಾಗಿದೆ. 8 ಮಂದಿ ಹೆಂಗಸರ ಹೆಸರು 10 ಮಂದಿ ವಿಟ ಪುರುಷರ ಹೆಸರೂ ಪ್ರಕಟವಾಗಿದೆ. (27-10-09 ಹೊಸ ದಿಗಂತ). ಬಲ್ಮಠದ ಮಿಷನ್ ಕಂಪೌಂಡು ಬಳಿಯ ಅಪಾರ್ಟ್‌ಮೆಂಟಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂಟು ಮಂದಿಯನ್ನು ಬಂಧಿಸಲಾಗಿದೆ. ಮೂವರು ಮಹಿಳೆಯರು ಐದು ಮಂದಿ ಪುರುಷರನ್ನು ಬಂಧಿಸಲಾಗಿದೆ. ಎಲ್ಲರ ಹೆಸರುಗಳು ಪ್ರಕಟವಾಗಿವೆ (16-6-09 ಹೊಸ ದಿಗಂತ).

ಬೆಂಗಳೂರಿನ ಮಾಗಡಿ ರಸ್ತೆಯ ಪೋಲೀಸ್ ಠಾಣಾ ವ್ಯಾಪ್ತಿಯ ಮನೆ ಯೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸಿನಿಮಾ ನಟಿಯರ ಹೆಸರು ಮತ್ತು ಭಾವಚಿತ್ರ ಸಹಿತ ಪ್ರಕಟವಾಗಿದೆ (2-06-1 ಪ್ರಜಾವಾಣಿ).

ತುಮಕೂರಿನಲ್ಲಿ ವೇಶ್ಯಾವಾಟಿಕೆ ನಿರತರಾಗಿ ಕೊಲೆಗಳನ್ನು ಮಾಡಿ ಸಿಕ್ಕಿ ಬಿದ್ದ ಸರಣಿ ಹಂತಕರನ್ನು ಹೆಸರು ಚಿತ್ರ ಸಹಿತ ಪ್ರಕಟಿಸಲಾಗಿದೆ (19-04-11 ಹೊಸ ದಿಗಂತ). ಅಂತರರಾಜ್ಯ ವೇಶ್ಯಾವಾಟಿಕೆ ಜಾಲವನ್ನು ಬೆಂಗಳೂರಿನ ಪ್ರತಿಷ್ಟಿತ ಹೊಟೇಲಿ ನಿಂದ ಸೆರೆ ಹಿಡಿಯಲಾಯಿತು. ಶೇಷಾದ್ರಿಪುರಂ ಪೋಲೀಸ್ ಠಾಣೆಯಲ್ಲಿ ದಾಖಲಾದ ಈ ಪ್ರಕರಣದಲ್ಲಿ ಬಂಧಿತರ ಫೋಟೋಗಳೂ ಇವೆ. (23-05-11 ಪ್ರಜಾವಾಣಿ)

ಬೆಂಗಳೂರಿನಲ್ಲಿ ಬಾಲಿವುಡ್ ನಟ ಮತ್ತು ನಟಿಯನ್ನು ಸೇರಿ ಎಂಟು ಮಂದಿಯನ್ನು ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡದ್ದಕ್ಕೆ ಬಂಧಿಸಲಾಗಿದೆ. ಎಲ್ಲರ ಹೆಸರು ಚಿತ್ರಗಳಲ್ಲದೆ ವಿದೇಶೀ ಯುವತಿಯರನ್ನು ಒದಗಿಸುವುದಾಗಿ ವೇಶ್ಯಾವಾಟಿಕೆಗೆ ಪ್ರಚೋದಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. (2-06-11 ಪ್ರಜಾವಾಣಿ)

ಬಂಟ್ವಾಳದಲ್ಲಿ ಮುಖ್ಯ ರಸ್ತೆಯ ವಸತಿ ಗೃಹದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಸುದ್ದಿ ಪ್ರಕಟವಾಗಿದೆ. ವಸತಿಗೃಹ ಮಾಲೀಕ ಮತ್ತು ವೇಶ್ಯಯ ವಿವರ ಹೆಸರೂ ಪ್ರಕಟವಾಗಿದೆ. (29-09-12 ಉದಯವಾಣಿ)

ಬೆಳ್ತಂಗಡಿ ಮೇಲಂತಬೆಟ್ಟು ಕಲ್ಲಗುಡ್ಡೆಯ ಬಾಡಿಗೆ ಮನೆಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ. (ಉದಯವಾಣಿ 16-12-2020)

ಬಂಟ್ವಾಳದ ಬಿಸಿರೋಡಿನ ಮುಖ್ಯ ವೃತ್ತದ ಬಳಿ ವೇಶ್ಯಾವಾಟಿಕೆ ನಡೆಸುತ್ತಿದ್ದ ವರ ಮೇಲೆ ದಾಳಿ ನಡೆಸಿ 8 ಮಂದಿ ಆರೋಪಿಗಳನ್ನು ಬಂಧಿಸಿದೆ. ಐವರು ಮಹಿಳೆಯರು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ (18-01-2021 ಪ್ರಜಾವಾಣಿ).

ಮಂಗಳೂರಿನ ವಸತಿ ಗೃಹದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರು ಪುರುಷರನ್ನು ಬಂಧಿಸಲಾಗಿದೆ. ಬೆಂಗಳೂರು ಮೂಲದ ಮಹಿಳೆಯನ್ನು ರಕ್ಷಿಸಲಾಗಿದೆ. (02-03-2021)

ಉಡುಪಿ ಸಿಟಿ ನಿಲ್ದಾಣದ ಬಳಿ ಹೋಟೇಲಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಲಾಗಿದೆ.

ಈ ಪತ್ರಿಕಾ ವರದಿಗಳನ್ನು ಗಮನಿಸಿದಾದ ಈ ಸಮಸ್ಯೆ ವ್ಯಾಪಿಸಿದ ವಿಸ್ತಾರ, ಪೊಲೀಸರ ಕಾರ್ಯಾಚರಣೆ ಮತ್ತು ಪತ್ರಿಕಾ ವರದಿಗಳಲ್ಲಿ ಉಂಟಾದ ಪರಿವರ್ತನೆ ಸೂಕ್ಷ್ಮಗಳು ಮನದಟ್ಟಾಗುತ್ತದೆ. ವೇಶ್ಯಾವಾಟಿಕೆಯು ಪಟ್ಟಣ, ಮಹಾನಗರಗಳಾಚೆ, ಗ್ರಾಮಾಂತರದ ಮನೆಗಳಿಗೆ ವ್ಯಾಪಿಸಿದೆ. 21ನೇ ಶತಮಾನದ ಆರಂಭ ಕಾಲದಲ್ಲಿ ಅಪರಾಧಿಗಳ ಹೆಸರನ್ನು ಪ್ರಕಟಿಸುವ ಕ್ರಮ ಪ್ರಾರಂಭವಾಗಿದೆ. ಗಿರಾಕಿಗಳೆಂಬ ಪದ ಪ್ರಯೋಗ ಮಾಡಿ ಪುರುಷರ ಹೆಸರು ಪ್ರಕಟವಾಗಿದೆ. 21ನೇ ಶತಮಾನದ ಎರಡನೇ ದಶಕದಿಂದಲೇ ಅಪರಾಧಿಗಳ ಭಾವಚಿತ್ರ ಪ್ರಕಟವಾಗಿದೆ. 2021ನೇ ವರದಿಯಲ್ಲಿ ಶೋಷಣೆಯ, ದೌರ್ಜನ್ಯಗಳ ಬಲಿಪಶುಗಳಾಗಿ ಈ ದಂಧೆಗೆ ಸೇರಿದ ಮಹಿಳೆಯರನ್ನು ರಕ್ಷಿಸಲಾಗಿದೆ ಎಂಬ ಭಾವವಿರುವ ವರದಿಯು ಗಮನಾರ್ಹ ವಾಗಿದೆ. ಕಾನೂನುಗಳ ಬದಲಾವಣೆಯು ಇದಕ್ಕೆ ಕಾರಣವಾಗಿದೆ. ಮಹಿಳೆಯನ್ನೇ ಅಪರಾಧಿಯಾಗಿ ಕಾಣುತ್ತಿದ್ದ ವ್ಯವಸ್ಥೆಯಲ್ಲಿ ಮಹಿಳೆಯ ರಕ್ಷಣೆ ಎಂಬ ವರದಿಯು ವ್ಯವಸ್ಥೆಯ ಪರಿವರ್ತನೆಯ ಸೂಚನೆ ನೀಡುತ್ತದೆ. ಪೋಲೀಸ್ ಠಾಣೆಯಲ್ಲಿ ನಾವು ಮಾಹಿತಿಗೆ ಹೋದಾಗಲೂ ಅವರು ವೇಶ್ಯಾವಾಟಿಕೆ ಈಗ ಅಪರಾಧವಲ್ಲ ಆದುದರಿಂದ ಕೇಸುಗಳು ದಾಖಲಾಗುವುದಿಲ್ಲ ಎಂದು ತಿಳಿಸಿದರು. ಹತ್ತು ವರ್ಷಗಳ ಹಿಂದೆ ನಾನು ಪೋಲೀಸ್ ಸ್ಟೇಶನ್‌ಗಳಲ್ಲಿ ವೇಶ್ಯೆಯರಿಗೆ ನೀಡುವ ಹಿಂಸೆಯ ಕುರಿತು ವಿರೋಧ ವ್ಯಕ್ತಪಡಿಸಿದಾಗ ಅಧಿಕಾರಿಯೊಬ್ಬರು ಅದು Spirit of Law ಎಂದು ಹೇಳಿದ್ದು ನೆನಪಾಗುತ್ತದೆ. ಆಗ ವೇಶ್ಯಯರು ತಮ್ಮ ಬಂಧುಗಳೊಂದಿಗೆ ರಸ್ತೆಯಲ್ಲಿ ಹೋಗುತ್ತಿದ್ದರೂ ಹಿಡಿದು ಲಾಕಪ್ಪಿಗೆ ಹಾಕಿದ ಉದಾಹರಣೆಗಳಿವೆ. ಹೊಡೆಯುವುದು ಸಾಮಾನ್ಯ ಅದು ಬೆತ್ತದ ಸ್ಪಿರಿಟ್ ಎಂಬ ಭಾವವಿದೆಯೋ ಏನೋ ಅವರಲ್ಲಿದ್ದ ಹಣ ಮಾತ್ರವಲ್ಲ ಕಾಲಲ್ಲಿದ್ದ ಚೈನ್‌ನ್ನು ಕಸಿದುಕೊಂಡು ದೌರ್ಜನ್ಯ ಎಸಗಿದ್ದನ್ನು ಕಂಡಿದ್ದೇನೆ. ಈಗ ಈ ಕ್ರೌರ್ಯ ಪೂರ್ಣ ಕಡಿಮೆಯಾಗದಿದ್ದರೂ ಪೋಲೀಸರ ಸ್ಪಿರಿಟ್ ಕುಗ್ಗಿಲ್ಲ. ಅದು ಕುಗ್ಗಿದರೆ ತಾವು ಪೋಲೀಸ್‌ ವೃತ್ತಿಗೆ ಅನರ್ಹರಾಗುತ್ತೇವೆ ಎಂಬ ಭಾವನೆ ಕಾಡುತ್ತದೋ ಏನೋ? ಯಾಕೆಂದರೆ ಅಧಿಕಾರದ ಗರ್ವವು ಅವರಿಂದ ಈ ಕೆಲಸ ಮಾಡಿಸುತ್ತದೆ.

ಕಾನೂನುಗಳು ಏನು ಹೇಳುತ್ತವೆ.

1956ರಲ್ಲಿ ಮಹಿಳೆ ಮತ್ತು ಬಾಲಕಿಯರ ಅಕ್ರಮ ಸಾಗಾಣಿಕೆಯ ಕಾಯ್ದೆಯು ವೇಶ್ಯಾವಾಟಿಕೆಯನ್ನು ಅಪರಾಧವೆಂದು ಪರಿಗಣಿಸಬೇಕು. ಈ ಕೃತ್ಯದಲ್ಲಿ ತೊಡಗಿಸಿಕೊಂಡ ಮಹಿಳೆಗೆ ಹುಟ್ಟುವ ಮಕ್ಕಳಿಗೆ ಪುನರ್‌ವಸತಿ ಕಲ್ಪಿಸಬೇಕು ಎಂದು ಹೇಳುತ್ತದೆ.

1986ರಲ್ಲಿ ಈ ಕಾಯ್ದೆಗೆ ತಿದ್ದುಪಡಿಯಾಗಿ ಮಹಿಳೆ ಮತ್ತು ಪುರುಷನ ನಡುವೆ ಒಪ್ಪಂದ ಏರ್ಪಟ್ಟು ನಡೆದ ಲೈಂಗಿಕ ಕ್ರಿಯೆ ವ್ಯಭಿಚಾರವಲ್ಲ. ಮಹಿಳೆ ಮತ್ತು ಪುರುಷ ತನ್ನ ಮನೆಯಲ್ಲೇ ಈ ಕ್ರಿಯೆಯನ್ನು ನಡೆಸಿದರೂ ಅದು ವೇಶ್ಯಾವಾಟಿಕೆಯಲ್ಲ. ಆದರೆ ವಾಣಿಜ್ಯದ ಉದ್ದೇಶದಿಂದ ಲೈಂಗಿಕ ಚಟುವಟಿಕೆ ನಡೆಸಿದರೆ ಗಂಡಾಗಲಿ ಹೆಣ್ಣಾಗಲಿ ಅವರ ವಿರುದ್ಧ ಕ್ರಮ ಜರುಗಿಸಬೇಕು. ಈ ಕೃತ್ಯಕ್ಕೆ ಮಹಿಳೆಯರನ್ನು ತಳ್ಳಿದವರು ಅಪರಾಧಿಗಳೆಂದು ವಿಧಿಸಿತು. 2007ರಲ್ಲಿ ತನ್ನ ಸಂತೋಷಕ್ಕಾಗಿ ವೇಶ್ಯೆಯರ ಸಂಗ ಮಾಡುವವರೂ ಕೂಡಾ ಅಪರಾಧಿಗಳೆಂದು ಕಾನೂನು ರೂಪಿಸಲಾಯಿತು. 2009ರ ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಲೈಂಗಿಕ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ ನಡೆಸುವ ಅಧಿಕಾರ ಯಾರಿಗೂ ಇಲ್ಲ ಎಂದು ಹೇಳಿದೆ. ಆದುದರಿಂದ ಕಾನೂನು ಐ.ಟಿ.ಪಿ.ಎ. ದಂಡ ಸಂಹಿತೆಯ ಸೆಕ್ಷನ್ 3 ವೇಶ್ಯಾವಾಟಿಕೆ ನಡೆಸುವವರು, ಸೆಕ್ಷನ್ 4 ವೇಶ್ಯೆಯರ ಗಳಿಕೆಯಿಂದ ಜೀವನ ನಡೆಸುವವರು, ಸೆಕ್ಷನ್ 5 ಮತ್ತು 6 ಹೆಣ್ಣು ಮಕ್ಕಳನ್ನು ವೇಶ್ಯಾ ವೃತ್ತಿಗಾಗಿ ತರುವವರು ಮತ್ತು ಬಂಧಿಸಿಡುವವರು, ಸೆಕ್ಷನ್ 7 ವೇಶ್ಯಾವೃತ್ತಿಗೆ ಪುಸಲಾಯಿಸುವವರು ಮತ್ತು ಬಲವಂತ ಮಾಡುವವರು, ಸೆಕ್ಷನ್ 8 ಸಾರ್ವಜನಿಕ ಸ್ಥಳಗಳಲ್ಲಿ ವೇಶ್ಯಾವೃತ್ತಿ ನಡೆಸುವವರು ಮಾತ್ರ ಕಾನೂನು ಪ್ರಕಾರ ಜೀವಾವಧಿಯವರೆಗಿನ ಶಿಕ್ಷೆಗೆ ಒಳಗಾಗುತ್ತಾರೆ. ಅಪರಾಧದ ಗಂಭೀರತೆಯನ್ನು ಗಮನಿಸಿ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತದೆ.

ಕರಾವಳಿಯಲ್ಲಿ ಸೆಕ್ಸ್ ಉದ್ಯಮವು ಬಹಳ ತೀವ್ರಗತಿಯಲ್ಲಿ ಬೆಳೆಯುತ್ತಿರುವುದಕ್ಕೆ ಹಲವು ಕಾರಣಗಳಿವೆ ಮತ್ತು ಅದರ ವಿವರಗಳು ಚಿತ್ರ ಸಹಿತ ಪ್ರಕಟವಾಗುವುದು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಲ್ಲಿ ಕಾಣಿಸಿಕೊಂಡಾಗ ಅನೇಕ ಸಂದೇಹಗಳು ಮೂಡುತ್ತವೆ. ವೇಶ್ಯೆಯರು ಮತ್ತು ಗಿರಾಕಿಗಳು ಅಂದರೆ ವಿಟರಲ್ಲಿ ಯಾರಿಗೆ ಶಿಕ್ಷೆಯಾಗುತ್ತದೆ? ಇದರಿಂದ ಹೊರಬರಲು ವಕೀಲರು ಏನೆಲ್ಲಾ ಕಸರತ್ತು ಮಾಡುತ್ತಾರೆ?

ವೇಶ್ಯಯರಿಗೂ ಕಾನೂನು ರಕ್ಷಣೆ ನೀಡಬೇಕು ಎಂದು ವೇದಿಕೆಗಳಲ್ಲಿ ನ್ಯಾಯಾಧೀಶರುಗಳು, ಜನನಾಯಕರು ದೊಡ್ಡ ಗಂಟಲಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ನಿಜವಾಗಿ ಲೈಂಗಿಕ ವೃತ್ತಿ ನಿರತರಿಗೆ ವಕೀಲರು ಮತ್ತು ನ್ಯಾಯಾಲಯಗಳು ನ್ಯಾಯ ನೀಡಿವೆಯೇ? ಅವರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಕಾರ್ಯಾಗಾರವನ್ನು ರಾಜ್ಯಾದ್ಯಂತ ಮಾಡಲಾಗುತ್ತದೆಂಬ ಭರವಸೆಯೂ ಕೇಳಿ ಬಂದದ್ದು ಮಾತ್ರ ಎಷ್ಟು ಫಲ ನೀಡಿದೆ ಎಂದು ಯಾರೂ ಅರಿಯರು. ಬೆಳೆಯುತ್ತಿರುವ ಮಂಗಳೂರು ನಗರದಲ್ಲಿ ಮೈಮಾರಾಟದ ದಂಧೆಯು ಯಾವುದೇ ಎಗ್ಗಿಲ್ಲದೆ ನಡೆಯುವುದಕ್ಕೆ ಯಾರೆಲ್ಲಾ ಉತ್ತೇಜನ ನೀಡುತ್ತಾರೆ ಅವರೊಳಗೆ ಯಾವ ನಮೂನೆಯ ಹೊಂದಾಣಿಕೆ ಇರುತ್ತದೆ. ಎಂಬುದನ್ನು ಯಾರೂ ಅರ್ಥ ಮಾಡಿಕೊಳ್ಳಬಲ್ಲರು. ಜಾಗತೀಕರಣ ತಂದೊಡ್ಡುವ ಹಲವು ಸಮಸ್ಯೆಗಳ ಜೊತೆಗೆ ಈ ದಂಧೆಯು ನಿರಾತಂಕವಾಗಿ ನಡೆಯುವಂತಾಗಿದೆ. ಅದೊಂದು ಅಪರಾಧವಲ್ಲ ವೃತ್ತಿ ಎಂಬ ಭಾವ ಬೆಳೆದು ಅಪರಾಧೀ ಪ್ರಜ್ಞೆ ಕಡಿಮೆಯಾಗುತ್ತಿದೆ.


ಸಮಾಜಸೇವಕಿಯೊಬ್ಬರ ಪ್ರತಿಕ್ರಿಯೆ

[ಸಂಪಾದಿಸಿ]

ಸಮಾಜಸೇವಕಿಯೊಬ್ಬರ ಪ್ರತಿಕ್ರಿಯೆ

ಬೆಥನಿ ಸೇವಾ ಪ್ರತಿಷ್ಠಾನದ ಅಂಗ ಸಂಸ್ಥೆಯಾದ ಸಹೋದಯದ ನಿರ್ದೆಶಕಿಯಾಗಿ ಸೇವೆ ಸಲ್ಲಿಸುತ್ತಿರುವ ಭಗಿನಿ ಶಾಂತಿ ಪ್ರಿಯಾ ಅವರು ಮುಂಬೈಯ ನಿರ್ಮಲಾ ನಿಕೇತನ ಕಾಲೇಜ್ ಆಫ್ ಸೋಶಲ್ ವರ್ಕ್ಸ್ ಇಲ್ಲಿ ಎಮ್. ಎಸ್. ಡಬ್ಲ್ಯೂ ತರಬೇತಿಯನ್ನು ಪಡೆದವರು. 20 ವರ್ಷಗಳ ಹಿಂದೆ ಅಲ್ಲಿ ವರ್ಷಗಳ ಕಾಲ ಪ್ರೇರಣಾ ಎಂಬ ಸ್ವಯಂ ಸೇವಾ ಸಂಸ್ಥೆಯ ಮೂಲಕ ಮುಂಬೈಯ ಕಾಮಾಟಿಪುರದ ಪರಿಸರದಲ್ಲಿ ಒಂದಷ್ಟು ಕೆಲಸ ಮಾಡಿದ ಅನುಭವಗಳನ್ನು ನನ್ನ ಜೊತೆ ಹಂಚಿಕೊಂಡಿದ್ದಾರೆ.

"ಕುಟುಂಬ ವ್ಯವಸ್ಥೆಯ ಒಳಗೆ ಎಂತೆಂತಹ ಕ್ರೌರ್ಯ ಮತ್ತು ದೌರ್ಜನ್ಯಗಳು ನಡೆಯುತ್ತವೆ ಎಂಬುದು ಎಲ್ಲರಿಗೂ ತಿಳಿದ ವಿಷಯ. ಈ ವ್ಯವಸ್ಥೆಯ ಹೊರಗೆ ಎಂತಹ ಭಯಾನಕ ಪ್ರಪಂಚವಿದೆಯೆಂಬ ಅರಿವು ನನಗೆ ಮೊತ್ತಮೊದಲು ಉಂಟಾದಾಗ ಆ ಆಘಾತದಿಂದ ಚೇತರಿಸಿ ಕೊಳ್ಳಲು ತುಂಬಾ ಸಮಯ ಬೇಕಾಯಿತು. ಪಾತಿವ್ರತ್ಯ ಮತ್ತು ವೇಶ್ಯ ಎರಡೂ ನಾಗರಿಕ ಪ್ರಪಂಚದಲ್ಲಿ ಜೊತೆ ಜೊತೆಯಾಗಿಯೇ ಹುಟ್ಟಿರಬೇಕು. ಬುದ್ಧ ಅಮ್ರಪಾಲಿಗೆ ಕರುಣೆಯ ಆಶ್ರಯವನ್ನಿತ್ತು ಅವಳ ವೃತ್ತಿಗೊಂದು ಗೌರವ ನೀಡಿದ. ಆ ಬಳಿಕ ಯೇಸುಕ್ರಿಸ್ತ ವೇಶ್ಯಗೆ ಕಲ್ಲೆಸೆಯುವ ಕೈಗಳು ಒಂದೂ ಪಾಪವನ್ನು ಮಾಡಿರಬಾರದು ಎಂದು ಸಭೆಯಲ್ಲಿ ಆಡಿದ ಮಾತಿನಿಂದಾಗಿ ವೇಶ್ಯಯ ಪಾಪದಲ್ಲಿ ಪುರುಷರೂ ಪಾಲುದಾರರು ಎಂಬುದನ್ನು ಸಾಕ್ಷೀಕರಿಸಿದ. ಆದರೂ ಇಂದಿನ ವರೆಗೂ ಈ ವೃತ್ತಿಯನ್ನು ಬುಡಸಮೇತ ಕೀಳಲು ಸಾಧ್ಯವಿಲ್ಲ. ಆದುದರಿಂದ ವೇಶ್ಯೆಯರ ಬದುಕು ಸ್ವಲ್ಪವಾದರೂ ಸಹನೀಯವಾಗಿರಲಿ ಎಂದು ಆಶಿಸುವುದಷ್ಟೇ ನಮ್ಮ ಉದ್ದೇಶವಾಗಿತ್ತು 'ಪ್ರೋಸ್ಟಿಟ್ಯೂಶನ್ ಇಸ್ ನೆಸೆಸಿಟಿ ಇವಿಲ್' ಎಂದು ಪರಿಗಣಿಸಬೇಕಾದ ಅನಿವಾರ್ಯತೆ ಇದೆ. ನಾನು ಅಂದು ಅಲ್ಲಿ ಕೆಲಸ ಮಾಡುವಾಗ ಇದ್ದ ವಾತಾವರಣದಲ್ಲಿ ಜನ ಬದಲಾಗಿರಬಹುದು. ಆದರೆ ಪರಿಸ್ಥಿತಿ ನೋವು, ಹಿಂಸೆ, ದೌರ್ಜನ್ಯಗಳು ಮುಗಿಯದ ಕಥಾನಕಗಳೇ ಆಗಿವೆ.

ಆ ಪರಿಸರದ ವೇಶ್ಯೆಯರ ಮಕ್ಕಳನ್ನು ಉತ್ತಮ ವಾತಾವರಣದಲ್ಲಿ ಮತ್ತು ಸಂಸ್ಕಾರ ನೀಡಿ ಬೆಳೆಸುವುದು ನಮ್ಮ ಉದ್ದೇಶವಾಗಿತ್ತು. ಬೆಳಗ್ಗಿನಿಂದ ಸಂಜೆಯ ವರೆಗೆ ಆ ಮಕ್ಕಳಿಗೆ ಚಿತ್ರಕಲೆ, ಹಾಡು, ಸಂಗೀತ, ಕತೆಗಳ ಮೂಲಕ ಅವರ ಮನಸ್ಸನ್ನು ಪ್ರಫುಲ್ಲಗೊಳಿಸುವುದಕ್ಕೆ ಪ್ರಯತ್ನಿಸಿದೆವು. ಸಾಮಾನ್ಯವಾಗಿ ವೇಶ್ಯಯರ ಹೆಣ್ಣು ಮಕ್ಕಳು ವೇಶ್ಯೆಯರಾಗಿ, ಗಂಡು ಮಕ್ಕಳು ತಲೆ ಹಿಡುಕರಾಗಿ ಸಮಾಜ ಘಾತುಕರಾಗಿ ಬೆಳೆಯುವುದೇ ಹೆಚ್ಚು. ಹೀಗಾಗದಂತೆ ಅವರಿಗೆ ಉತ್ತಮ ಶಿಕ್ಷಣ ನೀಡಿದರೆ ಭವಿಷ್ಯದ ಮೇಲೆ ಭರವಸೆ ಮೂಡಿಸಬಹುದೆಂಬ ನಿರೀಕ್ಷೆ ನಮ್ಮದು. ಆ ಸಮಯದಲ್ಲಿ ಬಾಲಕನೊಬ್ಬ ಹೇಳಿದ ಮಾತು ನೆನಪಾಗುತ್ತದೆ. ಅಮಿತಾಭ್ ಬಚ್ಚನ್ ಕೋವಿ ಹಿಡಿದ ಚಿತ್ರ ಬಿಡಿಸಿದ ಆತನೊಡನೆ "ನೀನು ಅಮಿತಾಬ್‌ನಂತೆ ಆಗುತ್ತಿಯಾ?" ಎಂದು ಕೇಳಿದ್ದೆ. ತಟ್ಟನೆ ಉತ್ತರಿಸಿದ ಆತನ ಮಾತಿಗೆ ನಾನು ಮೂರ್ಛ ಬೀಳುವುದೊಂದು ಬಾಕಿ. "ನಾನು ಈ ಕೋವಿಯಿಂದ ಜಗತ್ತಿನ ಎಲ್ಲಾ ಗಂಡಸರನ್ನು ಕೊಂದು ಹಾಕುತ್ತೇನೆ. ಯಾಕೆ ಗೊತ್ತೆ? ಪ್ರತಿದಿನ ನನ್ನ ಅಮ್ಮನಿಗೆ ಗಂಡಸರು ಚಿತ್ರಹಿಂಸೆ ನೀಡುತ್ತಾರೆ" ಎಂದಿದ್ದ, ಈ ಬಾಲಕ ಪ್ರತಿದಿನ ಗಿರಾಕಿಗಳು ಬಂದಾಗ ಮಂಚದಡಿಯಲ್ಲಿ ಮಲಗಿರುತ್ತಿದ್ದ. ಆ ಮಗುವನ್ನು ಅಲ್ಲಿಂದ ಹೊರಗೆಳೆದರೆ ಒಂದು ಜೀವಕ್ಕೆ ನೆಮ್ಮದಿಯ ತಾಣವನ್ನು ಕಲ್ಪಿಸಿದಂತಾಗುತ್ತದೆ ಎಂದು ನಮ್ಮ ವತಿಯಿಂದ ಏನೆಲ್ಲಾ ಕೆಲಸ ಮಾಡಲು ಸಾಧ್ಯವೋ ಅಷ್ಟನ್ನು ಮಾಡಿಸಿದ ತೃಪ್ತಿ ನಮಗಿದೆ.

ಇನ್ನು ಅಲ್ಲಿಗೆ ಬರುವ ಗಂಡಸರು ಕಾಮಾರ್ಥಿಗಳಾಗಿ ಲೈಂಗಿಕ ತೃಪ್ತಿಗೆ ಮಾತ್ರ ಬರುತ್ತಾರೆಂದು ತಿಳಿಯಬೇಡಿ. ಸಿಗರೇಟಿನಿಂದ ಮೈಯನ್ನು ಸುಟ್ಟು ಗಾಯ ಮಾಡಿ ಸುಖಿಸುವವರು, ಭೇಡಿನಿಂದ ಗಾಯ ಮಾಡಿ ಸುಖಿಸುವವರೂ ಇದ್ದಾರೆ ಎಂದ ಮೇಲೆ ಅಲ್ಲಿಗೆ ಬರುವವರು ರಾಕ್ಷಸರು, ಮೃಗಗಳು ಆಗಿರುತ್ತಾರೆ ಎಂಬ ಸತ್ಯ ತಿಳಿದಾಗ ಮನುಷ್ಯ ಜನ್ಮದ ಬಗ್ಗೆಯೇ ನನಗೆ ಅಸಹ್ಯ ಭಾವ ಮೂಡಿದ್ದುಂಟು. ಕೆಲವರಿಗೆ ಮುಟ್ಟಾದ ಹೆಣ್ಣೆ ಸಂಭೋಗಕ್ಕೆ ಬೇಕಂತೆ. ಇನ್ನು ಕೆಲವರಿಗೆ ಗರ್ಭಿಣಿ ಹೆಣ್ಣೆ ಬೇಕಂತೆ. ಇದೆಲ್ಲಾ ಅಲ್ಲಿನ ವೇಶ್ಯೆಯರು ನನ್ನೊಂದಿಗೆ ಹಂಚಿಕೊಂಡ ಮಾತುಗಳಾಗಿವೆ. ಅಲ್ಲಿನ ವೇಶ್ಯೆಯರ ದಿನದ ಪಾಳಿ ಶುರುವಾಗುವುದು ಮಧ್ಯಾಹ್ನ ಮೂರು ಗಂಟೆಗೆ ಮುಗಿಯುವುದು ರಾತ್ರಿ ಮೂರಕ್ಕೆ. ಕೆಲವು ತಾಯಂದಿರು ತಮ್ಮ ಸಣ್ಣ ಮಕ್ಕಳು ಕಿರಿಕಿರಿ ಮಾಡದಿರಲಿ ಎಂದು ಸಣ್ಣ ಪ್ರಮಾಣದಲ್ಲಿ ಅವರಿಗೆ ಡ್ರಗ್ಸ್ ನೀಡಿ ಮಲಗಿಸಿ ಬಿಡುತ್ತಿದ್ದರು. ನಮಗೆ ಅಲ್ಲಿನ ವೇಶ್ಯೆಯರ ಆರೋಗ್ಯದ ಬಗ್ಗೆ ಕಾಳಜಿ ಇತ್ತು. ಲೈಂಗಿಕ ಸುರಕ್ಷತೆಯ ಅರಿವು ಮೂಡಿಸಿ ಕಾಲಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸುವ ಕೆಲಸವನ್ನು ನಮ್ಮ ಟೀಂನವರು ಮಾಡುತ್ತಿದ್ದರು. ಆದುದರಿಂದ ಅಲ್ಲಿನ ಘರ್‌ವಾಲಿಗಳೂ ನಮ್ಮನ್ನು ಪೂರ್ಣ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗೆ ನಮ್ಮ ಮೇಲೆ ವಿಶ್ವಾಸವಿರಿಸಿದ್ದರು. ಇನ್ನೊಂದು ವಿಶೇಷ ಗೊತ್ತೇ? ಇಲ್ಲಿನ ಹೆಚ್ಚಿನ ವೇಶ್ಯಯರು ಉತ್ತರ ಕರ್ನಾಟಕದವರು. ನಾನು ಕನ್ನಡ ಮಾತಾಡುವವಳೆಂದು ತಿಳಿದೊಡನೆಯೇ ಒಂದು ಆತ್ಮೀಯತೆ ನಮ್ಮೊಳಗೆ ಗಟ್ಟಿಗೊಂಡಿತ್ತು. ಹೆಚ್ಚು ವಿದ್ಯಾಭ್ಯಾಸವಿಲ್ಲದವರು, ದಟ್ಟ ದಾರಿದ್ರವುಳ್ಳ ಕುಟುಂಬದವರು, ದೇವದಾಸಿ ಯರಾಗಿ ಇಲ್ಲಿಗೆ ಮಾರಲ್ಪಟ್ಟವರು, ಮೌಡ್ಯಗಳಿಗೆ ದಾಸರಾದವರು ಬಹಳ ಮಂದಿ ಇದ್ದರು. ವಿಶೇಷವೇನು ಗೊತ್ತೇ? ಇವರೆಲ್ಲರನ್ನು ಇಲ್ಲಿಗೆ ಮಾರಿದವರು ಅವರ ಹೆತ್ತವರೋ, ಬಂಧುಗಳೋ, ಪರಿಚಿತರೋ ಆಗಿರುತ್ತಾರೆ. ಅವರ ಕರುಣಾಜನಕ ಕತೆಗಳನ್ನು ಕೇಳಿದರೆ ಕರುಳು ಕಿತ್ತು ಬರುವಂತಾಗುತ್ತದೆ. ಇವರೆಲ್ಲಾ 35 ವರ್ಷಕ್ಕೆ ಮುದುಕಿಯರಾಗಿ ನಿಷ್ಟ್ರಯೋಜಕರಾಗುತ್ತಾರೆ. ಅಲ್ಲೇ ಅಡಿಗೆ ಕೆಲಸವೋ, ಕಸ ಗುಡಿಸುವ ಕೆಲಸವೋ ಮಾಡಿ ದಿನ ದೂಡುವವರು ಕೆಲವರಾದರೆ, ರಸ್ತೆಗೆ ಎಸೆಯಲ್ಪಡುವವರೂ ಹಲವರು. ಮನುಷ್ಯನ ಮನಸ್ಸಿನ ಕ್ರೌರ್ಯವು ಈ ಹಂತಕ್ಕೂ ಮುಟ್ಟಬಹುದೆಂದು ಊಹಿಸುವುದೂ ನಮಗೆ ಸಾಧ್ಯವಿರಲಿಲ್ಲ.

ಇಲ್ಲಿ ಇನ್ನೂ ಒಂದು ವಿಭಾಗವಿದೆ. ಬಿಳಿ ಚರ್ಮದ ನೇಪಾಳಿ, ಫಿಲಿಪೈನಿಗಳು, ಬಂಗಾಳಿಗಳು ಮುಂತಾದ ಎಳೆಯ ಪ್ರಾಯದ ಹುಡುಗಿಯರು ಇವರು ಒಂಭತ್ತ ರಿಂದ 15 ವರ್ಷದೊಳಗಿನವರು. ಇವರನ್ನು ಅಲ್ಲಿ ಅಕ್ಷರಶಃ ಪಂಜರದಲ್ಲಿ ಬೀಗ ಹಾಕಿಟ್ಟಿರುತ್ತಾರೆ.

ಗಿರಾಕಿಗಳು ಬಂದಾಗ ಘರ್‌ವಾಲಿಗಳು ಬೀಗ ತೆಗೆದು ಅವರನ್ನು ಕಳಿಸಿಕೊಡುತ್ತಾರೆ. ಈ ವ್ಯವಸ್ಥೆಯ ವಿರುದ್ಧ ನಾವು ಅಲ್ಲಿ ಸಣ್ಣ ಪ್ರತಿಭಟನೆ ಮತ್ತು ಕಾನೂನು ಸಮರ ನಡೆಸಿದೆವು. ಅದೆಲ್ಲವೂ ಗಾಳಿಯೊಂದಿಗೆ ನಮ್ಮ ಗುದ್ದಾಟವಾಯಿತೇ ಹೊರತು ಬೇರೇನೂ ಆಗಲಿಲ್ಲ. ಯಾಕೆಂದರೆ ಪೊಲೀಸ್, ವ್ಯವಸ್ಥೆ, ನ್ಯಾಯಾಂಗ, ಆಡಳಿತ ಎಲ್ಲವು ಈ ವ್ಯವಸ್ಥೆಯನ್ನು ಇದ್ದ ಹಾಗೆ ಪೋಷಿಸಿಕೊಂಡು ಹೋಗಲು ಬಯಸುತ್ತದೆಯೇ ಹೊರತು ಅದರಲ್ಲಿ ಸಣ್ಣ ಸುಧಾರಣೆ ಮಾಡುವುದನ್ನು ಒಪ್ಪುವುದಿಲ್ಲ. 'ನಮ್ಮದು ಲೈಂಗಿಕ ಸೇವೆ' ಎಂದು ಪರಿಗಣಿಸಬೇಕೆಂದು ಹಲವು ವರ್ಷಗಳಿಂದ ವೇಶ್ಯೆಯರ ಸಂಘಟನೆಯ ಕೆಲವರು ಹೋರಾಡುತ್ತಾ ಇದ್ದಾರೆ. ಆದರೂ ಅವರ ಬೇಡಿಕೆಯನ್ನು ಕೇಳುವ ಸ್ಥಿತಿಯಲ್ಲಿ ನಮ್ಮ ಆಡಳಿತ ವ್ಯವಸ್ಥೆ ಇಲ್ಲ.

ಅಲ್ಲಿ ನನಗೆದುರಾದ ಧರ್ಮ ಸಂಕಟದ ಘಟನೆಯೊಂದನ್ನು ಹೇಳಬೇಕು. ಇಬ್ಬರು ಮಕ್ಕಳಿರುವ ಹೆಣ್ಣು ಮತ್ತೆ ಗರ್ಭಿಣಿಯಾದಳು. ನನ್ನಲ್ಲಿ ಗರ್ಭಪಾತ ಮಾಡಿಸಬೇಕೆಂದೂ ಒತ್ತಾಯಿಸಿದಳು. ನಾನು ಅವಳಿಗೆ ಸಾಕಷ್ಟು ಸಾಂತ್ವನದ ಮಾತಾಡಿದರೂ ಅವಳದ್ದು ಒಂದೇ ಹಠ ಇಬ್ಬರು ಮಕ್ಕಳು ಅನುಭವಿಸಿದ್ದು ಸಾಕು ಇದೊಂದು ಈ ಭೂಮಿಗೆ ಬರುವುದೇ ಬೇಡವೆಂದು ಖಡಾಖಂಡಿತವಾಗಿ ಹೇಳಿದಳು. ಮಗು ಪರಮಾತ್ಮನ ಅನುಗ್ರಹದಿಂದ ಲಭಿಸುವ ವರ ಅದನ್ನು ಕೊಲ್ಲುವುದು ಪಾಪವೆಂದು ನಂಬಿದ್ದ ಧರ್ಮ ನನ್ನದು. ನನಗೆ ಏನು ಮಾಡಬೇಕೆಂದು ದಿಕ್ಕೇ ತೋಚದಂತಾಯಿತು. ಎರಡು ವಾರಗಳು ಕಳೆದ ಬಳಿಕ ಆಕೆಗೆ ಏನನಿಸಿತೋ ಮಗುವನ್ನು ಉಳಿಸುವ ಮನಸ್ಸು ಮಾಡಿದಳು. ನನಗೆ ದೊಡ್ಡದೊಂದು ಆಪತ್ತಿನಿಂದ ಪಾರಾದ ಅನುಭವ. ಅವಳ ವಿನಂತಿಯನ್ನು ಸ್ವೀಕರಿಸಲೂ ಸಾಧ್ಯವಾಗದೆ ತಿರಸ್ಕರಿಸಲು ಸಾಧ್ಯವಾಗದೆ ತಿಂಗಳುಗಳ ಕಾಲ ನಾನು ಆತ್ಮವಿಮರ್ಶೆ ಮಾಡಿಕೊಳ್ಳುತ್ತಾ, ಪರಮಾತ್ಮನ ಅನುಗ್ರಹವನ್ನು ಆಶಿಸುತ್ತಾ ಪ್ರಾರ್ಥಿಸಿದ ದಿನಗಳು ನೆನಪಾಗುತ್ತವೆ.

ಇನ್ನು ಓರ್ವ ಹೆಣ್ಣು ಮಗಳ ಬಳಿ ಯಾವಾಗಲೂ ಬರುತ್ತಿದ್ದವನೊಬ್ಬನಿಗೆ ಅವಳ ಮೇಲೆ ಪ್ರೀತಿ ಮೂಡಿ ಅವಳನ್ನು ಮದುವೆಯೂ ಆದ ಇಬ್ಬರು ಮಕ್ಕಳೂ ಆದುವು. ಆಮೇಲೆ ಕ್ರಮೇಣ ಅವನಿಗೆ ಅವಳ ಮೇಲೆ ಸಂದೇಹ ಕಾಡತೊಡಗಿತು. ತನ್ನ ಮೇಲೆ ಆಕೆ ನಿಷ್ಠೆಯಿಂದ ಇಲ್ಲವೆಂದು ಯಾವಾಗಲೂ ನಿಂದೆ, ಜಗಳ, ಹೊಡೆತಗಳು ಪ್ರಾರಂಭವಾದುವು. ಗಂಡ ಅವಳ ನಿಷ್ಠೆಯನ್ನು ಪರೀಕ್ಷೆ ಮಾಡಲು ಹೂಡಿದ ತಂತ್ರ ಮಾತ್ರ ಭಯಾನಕವಾಗಿತ್ತು. ಕುದಿಯುವ ಎಣ್ಣೆಯಿರುವ ಬಾಣಲೆಯಲ್ಲಿ ನಾಣ್ಯವನ್ನು ಹಾಕಿರುತ್ತಾರೆ. ಅದನ್ನು ಆಕೆ ಬರಿಗೈಯಿಂದ ತೆಗೆದರೆ ಅವಳು ನಿಷ್ಠೆಯಿಂದ ಇದ್ದಾಳೆಂದು ನಂಬಬಹುದಂತೆ. ಇಲ್ಲವಾದರೆ ಆಕೆ ಕಲಂಕಿತೆ ಎಂದು ತೀರ್ಮಾನವಾಗುತ್ತದೆ. ಈ ಪರೀಕ್ಷೆಗೆ ಸಿದ್ಧಗೊಳಿಸಿದ ಪತಿಪರಮೇಶ್ವರನ ತಂತ್ರವನ್ನು ಕಂಡು ಆಕೆ ಅವನನ್ನು ಬಿಟ್ಟು ಹೊರಟೇಬಿಟ್ಟಳು. ತನ್ನ ನಿಷ್ಠೆಯನ್ನು ಸಾಬೀತುಪಡಿಸಲಿಕ್ಕೂ ಇಷ್ಟೊಂದು ಹಿಂಸೆಪಟ್ಟುಕೊಂಡು ಯಾಕೆ ಬದುಕಬೇಕು. ಇಷ್ಟಕ್ಕೂ ಪುರುಷನಿಗಿಲ್ಲದ ನಿಷ್ಠೆ ಮಹಿಳೆಗೆ ಮಾತ್ರ ಯಾಕೆ ಎಂಬುದು ಪುರುಷ ಪ್ರಧಾನ ಸಮಾಜದ ಕ್ರೌರ್ಯದ ಪರಮಾವಧಿಯಾಗಿ ಕಾಣುತ್ತದೆ. ಆಕೆ ತಾನು ಎಲ್ಲಾದರೂ ದುಡಿದು ಬದುಕಿಯೇನು ಎಂದು ಅವನನ್ನು ಬಿಟ್ಟು ಹೊರಗೆ ನಡೆದೇ ಬಿಟ್ಟಳು. ಮತ್ತೆ ಕೆಂಪು ದೀಪದಡಿಗೆ ಬಂದಳು. ಹೆಂಗಸಿಗೆ ಹಿಂಸೆಯನ್ನು ನೀಡುವಾಗ ಈಗಲೂ ಶತಮಾನಗಳ ಹಿಂದಿನ ಹಿಂಸೆಯನ್ನೇ ಬಯಸುವ ಗಂಡಸಿನ ಮಾನಸಿಕ ಕ್ರೌರ್ಯವನ್ನು ಕಂಡು ಅಸಹ್ಯ ಪಟ್ಟುಕೊಳ್ಳುವಂತಾಗಿದೆ.

ನಾನು ಅಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿಗೆ ಬಂದು ಸೇರಿದವರು ಐದು ಸಾವಿರದಿಂದ ಐವತ್ತು ಸಾವಿರದವರೆಗೆ ಮಾರಾಟವಾಗಿ ಬಂದವರೂ ಇದ್ದರು. ಇಲ್ಲಿಗೆ ಸದಾ ಹೆಣ್ಣುಮಕ್ಕಳನ್ನು ಪೂರೈಸುವ ಒಂದು ಭೂಗತ ಜಗತ್ತೇ ಇದೆ. ಮಾನವ ಕಳ್ಳಸಾಗಾಣಿಕೆಯ ಕರಾಳ ರೂಪವನ್ನು ಇಲ್ಲಿ ಕಾಣಬಹುದು. ಇಲ್ಲಿಗೆ ಒಳಗೆ ಬರುವ ಮತ್ತು ಹೊರ ಹೋಗುವ ಪ್ರತಿಯೊಂದು ಚಲನವಲನಗಳನ್ನು ಗಮನಿಸುವ ಒಂದು ಬೇಹುಗಾರಿಕಾ ವ್ಯವಸ್ಥೆಯೂ ಇದೆ.

ವೇಶ್ಯಾವಾಟಿಕೆಯನ್ನು ನಿಲ್ಲಿಸುವುದಂತೂ ಸಾಧ್ಯವಿಲ್ಲ. ಇರುವ ವ್ಯವಸ್ಥೆಯೂ ಸ್ವಲ್ಪಮಟ್ಟಿಗಾದರೂ ಸಹನೀಯವಾಗಿ ಮತ್ತು ಕ್ರೌರ್ಯಗಳಿಲ್ಲದೆ ನಡೆಯುವಂತಾಗಲಿ ಎಂದು ಆಶಿಸುವುದಷ್ಟೇ ನಮಗೆ ಉಳಿದಿರುವ ಕರ್ತವ್ಯವಾಗಿದೆ. ಈ ವೃತ್ತಿಯನ್ನು ತ್ಯಜಿಸಿ ಹೊರಗೆ ಬರಲು ಬಯಸಿದ್ದ ಒಬ್ಬಿಬ್ಬರು ನನ್ನ ಕಣ್ಣ ಮುಂದಿದ್ದಾರೆ. ಅವರಿಗೆ ಶಿಕ್ಷಣ ಮತ್ತು ತರಬೇತಿ ನೀಡಿ ಸ್ವಂತ ದುಡಿಮೆಯನ್ನು ಕೈಗೊಳ್ಳುವ ವ್ಯವಸ್ಥೆಯನ್ನು ಮಾಡಲಾಗಿತ್ತು. ಹೀಗೆ ದುಡಿಮೆಯನ್ನು ಕೈಗೊಳ್ಳುವಾಗಲೂ ಅವರನ್ನು ಮತ್ತೆ ಅದೇ ವೃತ್ತಿಗೆ ಎಳೆದು ದೂಡುವ ಒಂದು ವ್ಯವಸ್ಥೆಯೇ ಇದೆ. ನಮ್ಮ ಉದ್ದೇಶವಿಷ್ಟೇ, ಅವರು ಅವರಿಗೆ ಇಷ್ಟ ಇದ್ದ ರೀತಿಯಲ್ಲಿ ಬದುಕಲಿ. ಆದರೆ ಅವರ ಮನಸ್ಸಾಕ್ಷಿಗೆ ಸರಿಯಾಗಿ ಬದುಕಲಿ ಎಂಬುದೇ ನಮ್ಮ ಹಾರೈಕೆ.

ಕೆಂಪು ದೀಪದಡಿಯಲ್ಲಿ ಆ ಹೆಣ್ಣುಮಕ್ಕಳೊಂದಿಗೆ ಕೆಲಸ ಮಾಡಿದ ಅನುಭವ ಗಳಿವೆಯಲ್ಲಾ ಇದು ನಮ್ಮ ಸಮಾಜದ ನಂಬಿಕೆ, ಧರ್ಮ, ಸಂಪ್ರದಾಯ, ವ್ಯವಸ್ಥೆ ಇವೆಲ್ಲವುಗಳನ್ನೂ ಮರುವ್ಯಾಖ್ಯಾನಿಸುವ ಅಗತ್ಯವುಂಟಾಗುತ್ತದೆ. ವೇಶ್ಯಾವಾಟಿಕೆಯನ್ನು ಧಾರ್ಮಿಕ ವೃತ್ತಿಯೆಂದು ಆಂಗೀಕರಿಸಿದ್ದು ಬಹುಶಃ ಭಾರತದಲ್ಲಿ ಮಾತ್ರವೆಂದು ಕಾಣುತ್ತದೆ. ಮನುಷ್ಯನು ತನ್ನ ಕಾಮದ ಪೂರೈಕೆಗಾಗಿ ಮಾಡಿಸಿಕೊಂಡಿರುವ ವ್ಯವಸ್ಥೆಯ ಬಗ್ಗೆಯೇ ಆಶ್ಚರ್ಯ ಹುಟ್ಟಿಸುತ್ತದೆ. ಈ ಆಧುನಿಕ ಯುಗದಲ್ಲಿ ಹೈಟೆಕ್ ವೇಶ್ಯಯರು, ಕಾಲ್‌ಗರ್ಲ್‌ಗಳು, ತಮ್ಮ ಮೋಜಿಗಾಗಿಯೂ ವೇಶ್ಯಾವಾಟಿಕೆಯನ್ನು ಸಲೀಸಾಗಿ ನಡೆಸುತ್ತಾರೆಂದ ಮೇಲೆ ಕೆಂಪುದೀಪದಡಿಯ ವೇಶ್ಯೆಯರ ಬಾಳು ಹೆಚ್ಚು ಸಹನೀಯವಾಗಿರಲಿ ಎಂದು ಆಶಿಸುವುದರಲ್ಲಿ ತಪ್ಪಿಲ್ಲವೆಂದು ನಾನು ಭಾವಿಸುತ್ತೇನೆ. ವೇಶ್ಯಾವಾಟಿಕೆಯು ಸಮಾಜದಿಂದ ಸಂಪೂರ್ಣ ನಾಶವಾಗಲಿ ಎಂಬುದು ನನ್ನ ಕನಸು. ಸಮಾಜದ ನೆಸೆಸರಿ ಈವಿಲ್ ಎಂಬ ಭಾವನೆ ಮುಂದುವರಿಯದಿರಲಿ. ಸಮಾಜವು ಹೆಣ್ಣನ್ನು ಗೌರವಾದರಗಳಿಂದ ಕಾಣುವಂತಾಗಲಿ. ಈ ಕನಸು ನನಸಾದೀತೇ? ಗೊತ್ತಿಲ್ಲ. ಆಗಲಿ ಎಂದು ಹೃದಯಂತರಾಳದಿಂದ ಹಾರೈಸುತ್ತೇನೆ.

ವೃತ್ತಿನಿರತರ ಅನುಭವ ಕಥನಗಳು

ಹೆಸರುಗಳನ್ನು ನದಿಗಳ ಹೆಸರಾಗಿ ಬದಲಾಯಿಸಲಾಗಿದೆ. ಮೂಲದಲ್ಲಿ ಎಲ್ಲಾ ನದಿಗಳೂ ಪವಿತ್ರವೇ, ಕ್ರಮೇಣ ನಾವು ನಮ್ಮ ಕೊಳಕುಗಳನ್ನು ನದಿಗೆಸೆದು ಮಲಿನಗೊಳಿಸುತ್ತೇವೆ. ನದಿ ಮೂಲವನ್ನು ಹುಡುಕುವುದೂ ಸುಲಭವಲ್ಲ ಮತ್ತು ಋಷಿ ಮೂಲವನ್ನು ಹುಡುಕಬಾರದು ಎಂಬ ಮಾತಿದೆ. ಹಾಗೆಯೇ ಈ ವೃತ್ತಿಯ ಮೂಲವನ್ನು ಹುಡುಕುವುದು ಸುಲಭವಲ್ಲ. ಈ ವೃತ್ತಿಗೆ ದೂಡಲ್ಪಟ್ಟ ಘಟನೆಗಳು ಮತ್ತು ಎದುರಿಸಿದ ಸವಾಲುಗಳು ಹಿಂಸೆ, ಅವಮಾನಗಳ ಬಗ್ಗೆ ಕೇಳಿದಾಗ ಮನಸ್ಸಿಗೆ ತುಂಬಾ ನೋವಾಗುತ್ತದೆ. ಅವರು ಹೇಳಿದ ಕಥನದ ಸಂಕ್ಷಿಪ್ತ ರೂಪವಿದು. ನಮ್ಮ ಪಾಪಗಳಿಂದ ನದಿಗಳನ್ನು ಮುಕ್ತಗೊಳಿಸಲು ಸಾಧ್ಯವೇ? ಪ್ರಶ್ನೆ ನನ್ನದು.

ಗಂಗಾ: ಕೆಳಮಧ್ಯಮ ವರ್ಗದ ಗ್ರಾಮಾಂತರ ಕುಟುಂಬದಲ್ಲಿ ಹುಟ್ಟಿದವಳು. ಏಳನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದೇನೆ. ಸಣ್ಣ ಪ್ರಾಯದಲ್ಲಿಯೇ ಹೆತ್ತವರು ಮದುವೆ ಮಾಡಿಕೊಟ್ಟರು. ಮೊದಲ ಮಗು ಏಳು ತಿಂಗಳಲ್ಲಿ ಹೆರಿಗೆ ಆಗಿ ತೀರಿಕೊಂಡಿತು. ಎರಡನೇ ಹೆರಿಗೆಯಲ್ಲಿ ಪೂರ್ಣ ಕಾಲದ ವಿಶ್ರಾಂತಿ ಪಡೆದುದರಿಂದಲೋ ಏನೋ ಸುಖ ಪ್ರಸವವಾಯಿತು. ಮನೆಯಲ್ಲಿ ನಾನು ಬೀಡಿ ಕಟ್ಟುತ್ತಿದ್ದೆ. ಗಂಡನ ಸಂಪಾದನೆ ಏನೂ ಮನೆ ಖರ್ಚಿಗೆ ಸಿಗುತ್ತಿರಲಿಲ್ಲ. ಕೆಲಸ ಸಿಕ್ಕಿದರೆ ಮಾಡುತ್ತಿದ್ದರು ಇಲ್ಲವಾದರೆ ಕೈ ಬೀಸಿಕೊಂಡು ಮನೆಗೆ ಬರುತ್ತಿದ್ದರು. ನನ್ನ ಅತ್ತೆಯಂತೂ ಘಟವಾಣಿ. ಗಂಡನ ಈ ವರ್ತನೆಯ ಬಗ್ಗೆ ನಾನು ಜೋರು ಮಾಡಿದರೆ ನನ್ನನ್ನೇ ಅಪರಾಧಿಯಂತೆ ಬೈದು ಮಗನ ಪರ ವಹಿಸಿ ಮಾತನಾಡುತ್ತಿದ್ದರು. ಈ ಮಧ್ಯೆ ಇನ್ನೊಂದು ಮಗುವಾಯಿತು. ನಿತ್ಯ ಮನೆಯಲ್ಲಿ ಜಗಳ, ಹೊಡೆತ, ಬಡಿತಗಳು. ಆಗ ನನಗೆ ಸಿನಿಮಾ ನೋಡುವ ಹುಚ್ಚು ಜೋರಾಗಿತ್ತು. ಮನೆಯಲ್ಲಿ ಹೀಗೆ ಯುದ್ಧ ಪ್ರಾರಂಭವಾದೊಡನೇ ಸೀದಾ ಎದ್ದು ಸಿನಿಮಾಕ್ಕೆ ಹೋಗುತ್ತಿದ್ದೆ. ಅಲ್ಲಿ ನನಗೆ ಒಬ್ಬ ಗಂಡಸಿನ ಪರಿಚಯವಾಯಿತು. ಮೊತ್ತಮೊದಲು ವುಡ್‌ ಸೈಡಿನಲ್ಲಿ ವೃತ್ತಿಯನ್ನು ಪ್ರಾರಂಭಿಸಿದೆ. ಮನೆ ಖರ್ಚಿಗೆ ಗಂಡನಿಂದ ಏನೂ ನಿರೀಕ್ಷಿಸುವಂತೆಯೇ ಇರಲಿಲ್ಲವಾದುದರಿಂದ ಈ ವೃತ್ತಿಯ ಆದಾಯದಿಂದಲೇ ಮಕ್ಕಳನ್ನು ಸಾಕತೊಡಗಿದೆ. ಈ ಸಮಯದಲ್ಲಿ ನನಗೆ ಈ ವೃತ್ತಿಗೆ ಸಂಬಂಧಿಸಿದ ಇತರ ಕೆಲವು ಮಹಿಳೆಯರ ಪರಿಚಯವಾಯಿತು. ಹೆಚ್ಚು ಆದಾಯದ ಮೂಲಗಳನ್ನು ಹುಡುಕುವುದರಲ್ಲಿ ಅವರು ನೆರವಾದರು. ಇದೇ ವೃತ್ತಿ ಖಾಯಂ ಆಯಿತು. ದಿನಾ ಬೆಳಿಗ್ಗೆ ಹೊರಟು ಬರುತ್ತಿದ್ದೆ. ನನಗೆ ಕೆಲವು ಗಿರಾಕಿಗಳ ಪರಿಚಯವಾಯಿತು. ಅವರಿಂದಲೇ ಹೊಸ ಗಿರಾಕಿಗಳೂ ಸಿಗುವಂತಾಯಿತು. ಈ ವೃತ್ತಿ ನಿರತ ಮಹಿಳೆಯರ ಸಹಾಯ ಹೇಗೂ ಇತ್ತಲ್ಲ. ನಿಜ ಹೇಳಬೇಕೆಂದರೆ ನಾನು ಹೀಗೆ ದುಡಿದ ಹಣದಿಂದಲೇ ಮನೆಯನ್ನು ಕಟ್ಟಿದೆ. ಶ್ರೀ ಸಾಯಿ ಹೋಟೇಲಿನಲ್ಲಿ ನಾನು ವೃತ್ತಿ ನಿರತಳಾಗಿ ತುಂಬಾ ಹಣ ಗಳಿಸಿದೆ. ನನಗೀಗ 62 ವರ್ಷ. ಈಗ ಈ ಸಂಸ್ಥೆಯಲ್ಲಿ (ಹಿಂದ್ ಕುಷ್ ನಿವಾರಣಾ ಸಂಘ) ಕೆಲಸ ಮಾಡುತ್ತಿದ್ದೇನೆ. ಲೈಂಗಿಕ ಕಾರಕರ್ತೆಯರಿಗೆ ಸುರಕ್ಷಿತವಾದ ಜೀವನ ನಿರ್ವಹಣೆಗೆ ಕಾಂಡೋಂ ವಿತರಣೆ ಮಾಡಿ ಅವರಲ್ಲಿ ಅರಿವು ಮೂಡಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ.

ಈಗ ನನ್ನ ಮಗಳು ಒಬ್ಬನನ್ನು ಪ್ರೇಮಿಸಿ ವಿವಾಹವಾಗಿದ್ದಾಳೆ. ಆದರೆ ಅವರ ವೈವಾಹಿಕ ಬದುಕು ಯಶಸ್ವಿಯಾಗಲಿಲ್ಲ. ವಿಚ್ಛೇದನದ ಹಂತಕ್ಕೆ ಬಂದು ಮುಟ್ಟಿದೆ. ಅಳಿಯನು ಮಗಳನ್ನು ಸಾಕುವುದು ಬಿಡಿ, ನೋಡಲಿಕ್ಕೂ ಬರುವುದಿಲ್ಲ. ನನಗದೇ ಚಿಂತೆಯಾಗಿದೆ. ಅವಳು ಮತ್ತೆ ಯಾರನ್ನಾದರೂ ವಿವಾಹವಾಗಿ ಸುಖವಾಗಿ ಜೀವನ ನಡೆಸಲಿ ಎಂಬುದೇ ನನ್ನ ಹಾರೈಕೆ. ಈ ವೇಶ್ಯಾವೃತ್ತಿಗೆ ಮಾತ್ರ ಖಂಡಿತಾ ಆಕೆ ಬರಲೇಬಾರದು. ಅದರ ಹಿಂಸೆ, ಕಷ್ಟ, ಅವಮಾನಗಳೆಲ್ಲಾ ನಾನು ಅನುಭವಿಸಿದ್ದು ಸಾಕು. ನನ್ನ ವೃತ್ತಿಜೀವನದಲ್ಲಿ ಎಂತೆಂತಹ ವಿಚಿತ್ರ ಮನೋವೃತ್ತಿಯವರು ಗಿರಾಕಿಗಳಾಗಿ ಬರುತ್ತಾರೆ ಎಂದು ಹೇಳಿದರೆ ನೀವು ಆಶ್ಚರ್ಯಪಡಬಹುದು. ಕೆಲವು ಲಾಡ್ಜ್‌ಗಳಲ್ಲಿ ಕೆಲಸಗಳನ್ನು ತರಾತುರಿಯಲ್ಲಿ ನಡೆಸಬೇಕೆಂಬ ಒತ್ತಡ ಹಾಕುತ್ತಾರೆ. ಕೋಣೆಯೊಳಗೆ 20 ನಿಮಿಷಕ್ಕಿಂತ ಹೆಚ್ಚು ಹೊತ್ತು ಕೂತರೆ ಮಾಲಕರು ಬಂದು ಬಾಗಿಲು ಬಡಿಯುತ್ತಾರೆ. ಇದು ನಮಗೆ ಕಿರಿಕಿರಿಯಾಗುತ್ತದೆ. ಹಾಗಾಗಿ ನಾನು ಅಂತಹ ಮಾಲಿಕರಿರುವ ಹೋಟೇಲನ್ನು ಆಯ್ಕೆ ಮಾಡುವುದಿಲ್ಲವೆಂದು ಗಿರಾಕಿಗಳಿಗೆ ಮೊದಲೇ ಹೇಳಿಟ್ಟಿರುತ್ತೇನೆ. ಕೆಲವರು ಗಿರಾಕಿಗಳು ಯಾವುದೇ ರೀತಿಯ ಲೈಂಗಿಕ ಕ್ರಿಯೆಗಳನ್ನೂ ನಡೆಸದೆ ಕೇವಲ ಬತ್ತಲೆ ನಿಲ್ಲಲು ಹೇಳುತ್ತಾರೆ. ಅಂಗಗಳನ್ನು ನೋಡಿ ಮುಟ್ಟುವುದರಲ್ಲಿಯೇ ತೃಪ್ತಿ ಪಡೆದುಕೊಳ್ಳುತ್ತಾರೆ ಎಂದು ಹೇಳಿದರೆ ಯಾರೂ ನಂಬಲಾರರು. ನನಗೆ ಅವರನ್ನು ಕಂಡು ಅವರ ಮುಗ್ಧತೆಗೆ ಪಾಪ ಅಂತ ಅನ್ನಿಸುತ್ತದೆ. ಲೈಂಗಿಕ ಕ್ರಿಯೆಯ ಬಗ್ಗೆ ಅವರ ಒಳ ಮನಸ್ಸಿನಲ್ಲಿ ಯಾವುದೋ ರೀತಿಯ ಭಯವಿದ್ದಿರಬೇಕು. ಯಾವ ಸುರಕ್ಷಾ ಕ್ರಮವನ್ನು ಅನುಸರಿಸುವುದಕ್ಕೂ ಅವರು ಒಪ್ಪುತ್ತಿರಲಿಲ್ಲ. ನಾನು ಅವರನ್ನು ಲೈಂಗಿಕ ಕ್ರಿಯೆಗೆ ಒಪ್ಪಿಸಲು ಬಹಳ ಪ್ರಯತ್ನ ಪಟ್ಟು ಸೋತಿದ್ದೇನೆ. ಆದರೆ ಪ್ರತೀ ಸಲವೂ 500 ರೂಪಾಯಿ ಕೊಡುವುದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಕೆಲವು ಗಿರಾಕಿಗಳು ಅರ್ಧ ಗಂಟೆಗೆ 2000 ರೂಪಾಯಿ ಕೊಟ್ಟದ್ದೂ ಇದೆ. ಕೋಣೆಯ ಬಾಡಿಗೆ, ಚಾ ತಿಂಡಿ ಇತ್ಯಾದಿಗಳ ಖರ್ಚನ್ನು ಗಿರಾಕಿಗಳೇ ಕೊಡುತ್ತಿದ್ದರು. ಕೆಲವು ಹೊಟೇಲುಗಳಲ್ಲಿ ನಾನೇ ಕೊಟ್ಟದ್ದೂ ಇದೆ. ಒಂದು ಸಲಕ್ಕೆ 2000 ರೂಪಾಯಿ ಪಡೆದದ್ದೂ ಇದೆ. 200 ರೂಪಾಯಿ ಪಡೆದದ್ದೂ ಇದೆ. ಒಂದು ವಿಷಯ ಗೊತ್ತಾ ಬೋಕರ್‌ಗಳು ಚೂಡಿದಾರ್ ಹಾಕಿದವರನ್ನೇ ಹೆಚ್ಚು ಕರೆಯುತ್ತಾರೆ. ಸೀರೆ ಉಟ್ಟವರು ಗಿರಾಕಿಗಳ ಕಣ್ಣಿಗೆ ವಯಸ್ಸಿನವರಂತೆ ಕಾಣುತ್ತಾರಂತೆ. ಹಾಗಾಗಿ ನಾನೂ ಚೂಡಿದಾರ್ ಹಾಕಿ ವೃತ್ತಿ ನಿರತಳಾಗಿದ್ದೆ. ನನ್ನ ವೃತ್ತಿ ಜೀವನದ ದೀರ್ಘ ಅವಧಿಯಲ್ಲಿ ಪಟ್ಟ ನೋವು, ಹಿಂಸೆ, ಅವಮಾನಗಳ ದೊಡ್ಡ ಕತೆಯೇ ಇದೆ. ಅದನ್ನೆಲ್ಲಾ ಸಹಿಸಿಯೂ ಈ ವೃತ್ತಿಯಲ್ಲೇ ಈವರೆಗೆ ಉಳಿದು ಬಂದೆನಲ್ಲಾ ಇದನ್ನು ಕಂಡು ನನಗೇ ಆಶ್ಚರ್ಯವಾಗುವುದಿದೆ. ನನ್ನ ಮನೆ ಮಕ್ಕಳು ಸಂಸಾರ ಸ್ವಸ್ಥವಾಗಿ ಬದುಕಬೇಕಾದರೆ ನಾನು ಅಂದು ಈ ವೃತ್ತಿಗೆ ಇಳಿಯದೆ ಬೇರೆ ದಾರಿಯೇ ಇರಲಿಲ್ಲ. ಸುಲಭದಲ್ಲಿ ಸಿಕ್ಕಿದ ಈ ದಾರಿಯಲ್ಲಿ ಹೇಗೆ ಹೇಗೋ ದಿನ ದೂಡುತ್ತಾ ಇಲ್ಲಿಗೆ ಬಂದು ಮುಟ್ಟಿದ್ದೇನೆ. ನಿಜ ಹೇಳಲಾ, ನಾನು ಆಯ್ಕೆ ಮಾಡಿದ ದಾರಿಯ ಬಗ್ಗೆ ನನಗೆ ಪಶ್ಚಾತ್ತಾಪವಿಲ್ಲ. ಆದರೆ ನನ್ನ ಮಕ್ಕಳು ಬಂಧುಗಳು ಯಾರಾದರೂ ವೃತ್ತಿಯನ್ನು ಆಯ್ಕೆ ಮಾಡುತ್ತಾರೆಂದರೆ ಅವರನ್ನು ತಡೆಯಲು ನಾನು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇನೆ.

ಯಮುನಾ: ಮಂಗಳೂರಿನ ಗ್ರಾಮಾಂತರ ಪ್ರದೇಶದ ಒಂದು ಕೃಷಿಕ ಕುಟುಂಬದಿಂದ ಬಂದವಳು ನಾನು. ಹಾಗೆ ನೋಡಿದರೆ ನನ್ನ ಕುಟುಂಬದವರು ಆರ್ಥಿಕವಾಗಿ ತುಂಬಾ ಗಟ್ಟಿಗರು ಎಂದೇ ಹೇಳಬೇಕು. ಹೆಚ್ಚಿನವರು ಸುಶಿಕ್ಷಿತರು. ಉತ್ತಮ ಹುದ್ದೆಯನ್ನು ಪಡೆದು ಸಮಾಜದಲ್ಲಿ ಹೆಸರು ಗಳಿಸಿದವರು. ನಾನು ಕಲಿತದ್ದು ಎಂಟನೇ ಕ್ಲಾಸು ಮಾತ್ರ ಮೈನೆರೆದ ಮೇಲೆ ನನ್ನನ್ನು ಯಾರೂ ಶಾಲೆಗೆ ಹೋಗಲು ಒತ್ತಾಯ ಮಾಡಲಿಲ್ಲ. ನನಗೂ ಶಾಲೆಗೆ ಹೋಗಲು ಮನಸ್ಸಿರಲಿಲ್ಲ. ಬೇಸಾಯದ ಕೆಲಸ ಮನೆಕೆಲಸವೆಂದು ಚೆನ್ನಾಗಿ ದುಡಿಯುತ್ತಿದ್ದೆ. 19 ವರ್ಷಕ್ಕೇ ನನಗೆ ಮದುವೆ ಮಾಡಿಕೊಟ್ಟರು. ತವರುಮನೆಯಲ್ಲಿ ಸ್ವತಂತ್ರವಾಗಿ ಬದುಕಿದವಳು ನಾನು. ತಿಂದುಣ್ಣುವುದಕ್ಕೆ ಉಡುವುದಕ್ಕೆ ಯಾವ ಕೊರತೆಯೂ ಇರಲಿಲ್ಲ. ಆದರೆ ಗಂಡನ ಮನೆಯೋ ಅದೊಂದು ಜೈಲೇ, ಯಾವುದಕ್ಕೂ ಅತ್ತೆಯ ಪರ್ಮಿಶನ್ ಬೇಕು. ಅವರ ಸೂಚನೆಯಿಲ್ಲದೆ ಒಂದು ಹುಲ್ಲುಕಡ್ಡಿಯೂ ಅಲ್ಲಾಡಬಾರದು ಎಂಬಂತಹ ಕಟ್ಟುನಿಟ್ಟು. ನನ್ನ ಗಂಡನೋ ತಾಯಿಗೆ ಹೆದರಿ ನಡುಗುವವನು. ಒಂದು ಮಗುವೇನೋ ಆಯಿತು. ಅದೂ ಹೆಣ್ಣುಮಗು. ಗಂಡು ಮಗುವಾಗಲಿಲ್ಲವೆಂದು ಅತ್ತೆಯ ನಿಂದೆ ಮತ್ತು ಕಟು ಮಾತುಗಳು ನಿತ್ಯ ವರ್ತಮಾನವಾಗಿತ್ತು. ಗಂಡು ಹೆಣ್ಣು ನಮಗೆ ಬೇಕಾದಂತೆ ಹೆರಲು ಸಾಧ್ಯವಿಲ್ಲ ವಲ್ಲಾ ಅದು ಅತ್ತೆಗೆ ಅರ್ಥವಾಗಲಾರದು. ಗಂಡಸರ ವೀರದಲ್ಲೇ ಗಂಡು ಹೆಣ್ಣು ಮಗುವಾಗುವ ಅಂಶಗಳಿರುತ್ತವೆ ಎಂದು ಈಗ ನಮಗೆ ಗೊತ್ತಾಗಿದೆ. ಆಗ ನಮಗೆ ಗೊತ್ತಿರಲಿಲ್ಲ. ನನ್ನ ಮೇಲೆಯೇ ದೋಷ ಹೊರಿಸಿ ಅವಮಾನಿಸುವುದನ್ನು ಸಹಿಸಿ ಸಹಿಸಿ ಸೋತುಹೋದೆ. ಒಮ್ಮೆ ಪೇಟೆಗೆ ಹೋದಾಗ ಅರಿಫಾ ಎಂಬವಳ ಪರಿಚಯ ವಾಯಿತು. ಆಗಾಗ ನಾನು ಅವಳಲ್ಲಿ ನನ್ನ ಕಷ್ಟಸುಖವನ್ನು ಹಂಚಿಕೊಳ್ಳುತ್ತಿದ್ದೆ. ಕೃಷಿ ಕುಟುಂಬದಿಂದ ಬಂದವಳಾದುದರಿಂದ ನನ್ನ ಕೈಯಲ್ಲಿ ಒಂದು ರೂಪಾಯಿ ಯಾಕೆ ಒಂದು ಪೈಸೆಯನ್ನು ಹಿಡಿಯಲು ಸಾಧ್ಯವಿರಲಿಲ್ಲ. ನನಗೆ ಬೇಕಾದ ಸೀರೆ, ಬಳೆ, ಹೂ ಮುಂತಾದ ಅಗತ್ಯದ ವಸ್ತುಗಳಿಗೂ ಬರಗಾಲವೇ. ಮೂರು ಹೊತ್ತು ಅನ್ನ ಉಣ್ಣಲು ದಾರಿದ್ರವಿಲ್ಲ ಎಂಬ ಒಂದು ವಿಷಯ ಬಿಟ್ಟರೆ ನಾನು ಯಾವಾಗಲೂ ಭಿಕ್ಷುಕಿಯೇ ಆಗಿದ್ದೆ. ಇದನ್ನು ಅರಿತ ಅರಿಫಾ ನನಗೆ ಅವಶ್ಯವಿರುವ ವಸ್ತುಗಳನ್ನು ತೆಗೆದುಕೊಟ್ಟಳು. ಅವಳ ಸ್ನೇಹ ಗಟ್ಟಿಯಾಗುತ್ತಾ ಹೋದಂತೆಲ್ಲಾ ನಾನು ಮನೆಯವರ ಹಿಡಿತದಿಂದ ಜಾರತೊಡಗಿದೆ. ಅವಳು ಹಣ ಗಳಿಸುವ ಸುಲಭದ ದಾರಿಯಾಗಿ ಈ ವೃತ್ತಿಗೆ ಸೇರಿಸಿದಳು. ಪ್ರಾರಂಭದಲ್ಲಿ ನನಗೆ ಹಿಂಸೆಯಾಗುತ್ತಿತ್ತು. ಮನೆ, ಅತ್ತೆ, ಗಂಡ, ಮಗಳು ಇವರಿಂದ ಬಿಡಿಸಿಕೊಂಡು ಇವರ ಸಂಬಂಧದಿಂದ ಕಳಚಿಕೊಳ್ಳುವುದು ಅಷ್ಟು ಸುಲಭವಲ್ಲ. ಕ್ರಮೇಣ ಗಂಡ ಅತ್ತೆಯವರ ಹಿಂಸೆ, ನಿಂದೆ, ಹೊಡೆತ, ಬಡಿತಗಳು ಹೆಚ್ಚಾಗತೊಡಗಿದಾಗ ಮನೆಯ ಸಂಬಂಧವನ್ನೇ ಕಡಿದುಕೊಂಡೆ. ಮನೆಗೆ ಹೋಗುವುದನ್ನೇ ಬಿಟ್ಟು ಬಿಟ್ಟೆ. ನನ್ನದೇ ವೃತ್ತಿಯಲ್ಲಿ ತೊಡಗಿಸಿಕೊಂಡವರ ಜೊತೆಗೆ ವಾಸಿಸುತ್ತಾ ಕಳೆದ 20 ವರ್ಷಗಳಿಂದ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದೇನೆ. ಮನೆಯಿಂದ ಹೊರ ಬರುವಾಗ ನನಗೆ ಬೇಕಾದುದನ್ನು ಪಡೆಯಬೇಕೆಂಬ ಹಂಬಲವಿತ್ತು. ಅವುಗಳನ್ನು ಪಡೆದೆ. ಆದರೆ ಈ ವೃತ್ತಿಯಲ್ಲಿದ್ದು ನಾನು ನೆಮ್ಮದಿಯಿಂದ ಇದ್ದೇನೆಯೇ ಎಂದು ನೀವು ಕೇಳಬಹುದು. ದೇಹದಲ್ಲಿ ಶಕ್ತಿ ಕುಂದಿದಾಗ ನಮ್ಮನ್ನು ನೋಡುವವರಾರು ಎಂಬ ಚಿಂತೆ ಸುರುವಾಗಿದೆ. ಈ ಚಿಂತೆಯಿಂದಾಗಿ ನನಗೆ ನೆಮ್ಮದಿಯಿಂದ ನಿದ್ರೆ ಮಾಡಲಾಗುತ್ತಿಲ್ಲ. ಭವಿಷ್ಯವು ನನ್ನನ್ನು ಹೆದರಿಸುತ್ತದೆ. ಸಂಬಂಧಿಕರನ್ನು ಹತ್ತಿರ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.

ಕಾವೇರಿ: ನಾನು ಬೇರೆ ತಾಲೂಕಿನಲ್ಲಿ ಹುಟ್ಟಿ ಬೆಳೆದವಳು. ನನ್ನ ಬಾಲ್ಯದಲ್ಲಿ ತುಂಬಾ ಬಡತನವಿತ್ತು. ತಂದೆ ತಾಯಿ ಕೂಲಿ ಕಾರ್ಮಿಕರು. ಎಂಟು ಮಂದಿ ಮಕ್ಕಳು. ಹೆತ್ತವರು ನನ್ನನ್ನು ದೂರದ ಒಂದು ಅನಾಥಾಶ್ರಮಕ್ಕೆ ಸೇರಿಸಿದರು. ಅದು ಕ್ರೈಸ್ತ ಸನ್ಯಾಸಿನಿಯರಿಂದ ನಡೆಸಲ್ಪಡುತ್ತಿತ್ತು. ಅವರು ನನ್ನನ್ನು ತುಂಬಾ ಪ್ರೀತಿಸುತ್ತಿದ್ದರು. ಅವರ ಪ್ರೋತ್ಸಾಹದಿಂದ ನಾನು ಎಸ್.ಎಸ್.ಎಲ್.ಸಿ.ಯನ್ನು ಮುಗಿಸಿದೆ. ನನ್ನ ಇತರ ಸಹೋದರರು ಬೇರೆ ಕಡೆ ಆಶ್ರಮದಲ್ಲಿದ್ದರು. ಅವರು ವಿದ್ಯೆ ತಲೆಗೆ ಹತ್ತದೆ ಓಡಿ ಬಂದು ಹಳ್ಳಿಯಲ್ಲಿ ಕೂಲಿ ಕೆಲಸಕ್ಕೆ ಸೇರಿದರು. ನನ್ನ ಸಹೋದರಿಯರೂ ಏಳನೇ ತರಗತಿಗಿಂತ ಹೆಚ್ಚಿನ ಶಿಕ್ಷಣವನ್ನು ಪಡೆಯಲಿಲ್ಲ. ನಾನು ಎಸ್.ಎಸ್.ಎಲ್.ಸಿ. ಪಾಸಾದೆನೆಂಬ ಹೆಮ್ಮೆ ನನಗೂ ಇತ್ತು. ನನ್ನ ಹೆತ್ತವರಿಗೂ ಇತ್ತು. ಎಸ್.ಎಸ್.ಎಲ್.ಸಿ. ಮುಗಿದ ಬಳಿಕ ಆ ಆಶ್ರಮದಲ್ಲಿ ಅಡುಗೆ ಕೆಲಸಕ್ಕೆ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದೆ. ಕಾನ್ವೆಂಟಿನ ಆಶ್ರಮಕ್ಕೆ ಬರುತ್ತಿದ್ದ ಪರಿಚಿತರೊಬ್ಬರು ನನಗೆ ಪಾಸ್‌ಪೋರ್ಟ್ ಮಾಡಿಸಿದರು. ವಿದೇಶಕ್ಕೆ ಮನೆ ಕೆಲಸಕ್ಕೆ ಕಳಿಸುವ ವ್ಯವಸ್ಥೆಯನ್ನು ಮಾಡಿದರು. ವಿದೇಶಕ್ಕೆ ಹೋಗುವ ಬಗ್ಗೆ ಭಯವಿದ್ದರೂ ಹಣ ಗಳಿಕೆಯ ಆಸೆಯಿಂದ ಧೈರ್ಯವನ್ನು ಒಗ್ಗೂಡಿಸಿ ಸೌದಿಗೆ ಹಾರಿದೆ. ಅಲ್ಲಿನ ಶ್ರೀಮಂತ ಅರಬಿಯ ಮನೆಯಲ್ಲಿ ದಿನದ 24 ಗಂಟೆಯೂ ಕೆಲಸ ಮುಗಿಯುತ್ತಿರಲಿಲ್ಲ. ಕೆಲಸವೇನೂ ಎಷ್ಟಾದರೂ ಮಾಡಬಲ್ಲೆ. ಆದರೆ ಅಲ್ಲಿನ ಹೆಂಗಸರು ನೀಡುವ ಶಿಕ್ಷೆ ಮತ್ತು ಬೈಗಳನ್ನು ನನಗೆ ಸಹಿಸುವುದು ತುಂಬಾ ಕಷ್ಟವಾಯಿತು. ಭಾಷೆ ಅರ್ಥವಾಗದಿದ್ದರೂ ಭಾವ ಅರ್ಥವಾಗುತ್ತಿತ್ತು. ನೋವು ಸಹಿಸುವುದು ಕಷ್ಟವಾಯಿತು. ಬಿಟ್ಟು ಬರಲು ಸಾಧ್ಯವಿರಲಿಲ್ಲ. ಅಲ್ಲಿ ಕಳೆದ ಎರಡು ವರ್ಷಗಳ ನರಕಯಾತನೆಯನ್ನು ನೆನಸಿದರೆ ಈಗಲೂ ಭಯವಾಗುತ್ತದೆ, ಎರಡು ವರ್ಷ ಕಷ್ಟದಿಂದ ದಿನದೂಡಿದ ನಾನು ಊರಿಗೆ ಮರಳಿದವಳು ವಿದೇಶದ ಕೆಲಸವನ್ನು ದ್ವೇಷಿಸುವಂತಾಯಿತು. ಎಲ್ಲಾದರೂ ಕೆಲಸಕ್ಕೆ ಸೇರಿಕೊಳ್ಳಬೇಕೆಂದು ಯೋಚಿಸುವಷ್ಟರಲ್ಲಿ ನನ್ನ ಮದುವೆಯೂ ನಡೆದು ಹೋಯಿತು. ಹುಡುಗ ಪರಿಚಿತನೇ. ಆದರೆ ಮದುವೆಯಾದ ಮೇಲೆ ಅವನು ಧನಪಿಶಾಚಿಯಾದ. ವಿದೇಶದಿಂದ ಬಂದವಳಲ್ಲಿ ಲಕ್ಷಗಟ್ಟಲೆ ಇರಬಹುದೆಂದೇ ಭಾವಿಸಿದ್ದ, ಅವನಿಗೆ ಸ್ವಂತ ಗ್ಯಾರೇಜ್ ತೆರೆಯುವ ಹಂಬಲವಿತ್ತು. ಇದ್ದ ಅಲ್ಪಸ್ವಲ್ಪ ಗಳಿಕೆಯನ್ನು ಅವನಿಗೆ ಕೊಟ್ಟೆ ಒಂದು ವರ್ಷದವರೆಗೆ ಗಂಡನ ಮನೆಯಲ್ಲಿ ಚೆನ್ನಾಗಿಯೇ ಇತ್ತು. ಅತ್ತೆ, ಮಾವ, ಮೈದುನ, ನಾದಿನಿಯಂದಿರು ನನ್ನನ್ನು ಪ್ರೀತಿಯಿಂದಲೇ ಕಾಣುತ್ತಿದ್ದರು. ಯಾವ ದೇವರ ಶಾಪ ತಟ್ಟಿತ್ತೋ ಕಾಣೆ, ಗಂಡನಿಗೆ ಕುಡಿತದ ಚಟ ಅಂಟಿತು. ಕೆಲಸದ ಮೇಲೆ ಗಮನ ಕಡಿಮೆಯಾಯಿತು. ಖರ್ಚಿಗೆ ಹಣವಿಲ್ಲ. ಮತ್ತೆ ಯಥಾಪ್ರಕಾರ ಹಣಕ್ಕೆ ಬೇಡಿಕೆ. ನಾನು ಚಿನ್ನದ ಮರವನ್ನೇ ನೆಟ್ಟಿದ್ದೇನೆ ಎಂಬಂತೆ ಹಣಕ್ಕಾಗಿ ಪೀಡೆ ಪ್ರಾರಂಭವಾಯಿತು. ಅತ್ತೆ ಮೈದುನಂದಿರೂ ನಾನು ಕಂಜೂಶಿತನ ತೋರಿಸುತ್ತೇನೆಂದೇ ಭಾವಿಸಿ ನಿಂದಿಸತೊಡಗಿದರು. ಮಗ ತನ್ನ ಗ್ಯಾರೇಜಿನಲ್ಲಿ ಕೆಲಸ ಸರಿಯಾಗಿ ನಿರ್ವಹಿಸುತ್ತಿಲ್ಲವೆಂಬ ತಪ್ಪು ಅವರಿಗೆ ಕಾಣಿಸಲೇ ಇಲ್ಲ. ಹಾಗೆ ನಾನು ಹೇಳಿದ್ದೇ ತಪ್ಪಾಗಿ ಗಂಡ ಕೈಎತ್ತಿ ನನಗೆ ಹೊಡೆಯಲು ಬಂದ. ನನಗೆ ಆಘಾತವಾಯಿತು. ಆದರೂ ತಾಳ್ಮೆಯಿಂದಲೇ ಹೊಂದಾಣಿಕೆ ಮಾಡಲು ಪ್ರಯತ್ನಿಸಿದೆ. "ಯಾವುದೋ ಯಂತ್ರವನ್ನು ತರಿಸಲು ಹಣಕ್ಕಾಗಿ ಒದ್ದಾಡುತ್ತಿದ್ದೇನೆ. ಗಂಡನ ಕಷ್ಟಕ್ಕೆ ನೆರವಾಗದ ನೀನು ಎಂತಹ ಹೆಂಡತಿ? ನಾನು ಏಳಿಗೆ ಹೊಂದುವುದು ನಿನಗೆ ಸಹಿಸುವುದಿಲ್ಲ. ಆದುದರಿಂದ ನೀನು ಎಲ್ಲರೊಂದಿಗೆ ಜಗಳ ಮಾಡುತ್ತೀಯಾ" ಎಂದು ಆರೋಪ ಹೊರಿಸಿದ. ನನಗೆ ವಿಚಿತ್ರ ಅನಿಸಿತು. ಆದರೂ ಒಂದು ಕೊನೆಯ ಪ್ರಯತ್ನ ಮಾಡಿ ನೋಡೋಣವೆಂದು ನನ್ನ ಬಳೆಗಳನ್ನು ಕೊಟ್ಟೆ, ನಾನೆಂತಹ ಮೂರ್ಖತನ ಮಾಡಿದೆನೆಂದು ಆ ನಂತರ ಗೊತ್ತಾಯಿತು. ಬಳೆಗಳನ್ನು ಮಾರಿದ. ಆದರೆ ಗ್ಯಾರೇಜಿಗೆ ಯಂತ್ರವು ಬರಲೇ ಇಲ್ಲ. ಕುಡಿತ ಮಾತ್ರ ಹೆಚ್ಚಾಗುತ್ತಾ ಹೋಯಿತು. ಇದು ಸರಿಯಾಗುವ ಅಸಾಮಿ ಅಲ್ಲ. ಅಥವಾ ನನ್ನಿಂದ ಸರಿ ಮಾಡಲು ಸಾಧ್ಯವಿಲ್ಲವೇನೋ ಎಂದು ಒಂದು ದಿನ ಮನೆಯವರಿಗೆ ಹೇಳಿಯೇ ನಾನು ತವರಿಗೆ ಬಂದೆ. ತವರಿನಲ್ಲೂ ಸೋದರರ ಕೆಟ್ಟ ಚಾಳಿಗಳಿಂದ ನೆಮ್ಮದಿ ಇರಲಿಲ್ಲ. ವಿದೇಶದಲ್ಲಿದ್ದು ಬಂದು ಒಂದಿಷ್ಟು ಹಣ ಕೈಯಲ್ಲಿ ಓಡಾಡಿದ ಕಾರಣ ಪುನಃ ಕೂಲಿ ಕೆಲಸಕ್ಕೆ ಮನಸ್ಸು ಒಪ್ಪಲಿಲ್ಲ. ಮಂಗಳೂರಿನಲ್ಲಿ ನನ್ನ ಗೆಳತಿಯೊಬ್ಬಳು ಸಿಕ್ಕಿದಳು. ಹಣ ಗಳಿಸುವ ಸುಲಭದ ದಾರಿಯನ್ನು ತಿಳಿಸಿದಳು. ಮೊದಲ ವಾರದಲ್ಲಿ ತುಂಬಾ ಹಿಂಸೆಯಾಯಿತು. ಕಷ್ಟವೂ ಆಯಿತು. ಪಾಪಪ್ರಜ್ಞೆಯೂ ಕಾಡಿತು. ಆಗಾಗ ದೇವಸ್ಥಾನಕ್ಕೆ ಹೋಗಿ ತಪ್ಪು ಕಾಣಿಕೆಯನ್ನು ದೇವರ ಹುಂಡಿಗೆ ಹಾಕಿ ನನ್ನನ್ನು ರಕ್ಷಿಸು ಎಂದು ಬೇಡಿಕೊಳ್ಳುತ್ತಿದ್ದೆ. ಈ ವೃತ್ತಿಗೆ ಸೇರಿದ ಮೇಲೆ ನನಗೆ ಹುಟ್ಟಿದ ಒಬ್ಬ ಮಗ ಇದ್ದಾನೆ. ಆರು ವರ್ಷದ ವರೆಗೆ ನನ್ನ ಜೊತೆಗೇ ಇರಿಸಿಕೊಂಡು ಸಾಕಿದೆ. ಈಗ ದೂರದ ಕಾನ್ವೆಂಟ್ ಶಾಲೆಯ ಹಾಸ್ಟೆಲ್‌ನಲ್ಲಿರಿಸಿ ಶಿಕ್ಷಣ ಕೊಡಿಸುತ್ತಿದ್ದೇನೆ. ಅವನಿಗೆ ಎಷ್ಟು ಸಾಧ್ಯವೋ ಅಷ್ಟು ಶಿಕ್ಷಣ ಕೊಡಿಸಬೇಕೆಂದಿದ್ದೇನೆ. ನನ್ನ ವೃತ್ತಿಯ ಬಗ್ಗೆ ಅವನಿಗೆ ಗೊತ್ತಾಗದಂತೆ ಎಚ್ಚರ ವಹಿಸಿದ್ದೇನೆ. ಮಂಗಳೂರಿನಲ್ಲಿ ಹೋಮ್ ನರ್ಸಿಂಗ್ ಕೆಲಸ ಮಾಡುತ್ತಿದ್ದೇನೆಂದು ಕಾನ್ವೆಂಟಿನಲ್ಲಿ ತಿಳಿಸಿದ್ದೇನೆ. ಅವನು ಕಾಲೇಜಿನ ಹಂತಕ್ಕೆ ಬಂದಾಗ ವೃತ್ತಿಯನ್ನು ತೊರೆದು ಅವನೊಂದಿಗೆ ವಾಸ ಮಾಡಬೇಕು ಎಂಬ ಆಸೆ ಇದೆ. ಅವನ ಭವಿಷ್ಯವು ಉತ್ತಮಗೊಳ್ಳುವಂತೆ ಪ್ರಯತ್ನಿಸುತ್ತೇನೆ. ಅವನು ಉದ್ಯೋಗಕ್ಕೆ ಸೇರಿಕೊಂಡ ಮೇಲೆ ಅವನಿಗೆ ಮದುವೆ ಮಾಡಿ ಮಗ ಸೊಸೆಯೊಂದಿಗೆ ನೆಮ್ಮದಿಯಿಂದ ಬಾಳಬೇಕೆಂಬ ಕನಸು ನನ್ನದು. ನನ್ನ ವೃತ್ತಿಯಲ್ಲಿ ನಾನು ಯಾರಿಗೂ ಮೋಸ ಮಾಡಿಲ್ಲ. ಯಾರಿಗೂ ಕೆಟ್ಟದ್ದನ್ನು ಬಯಸಿಲ್ಲ. ನಾನು ನಂಬಿದ ದೇವರು ನನ್ನ ಕೈ ಬಿಡಲಾರ ಎಂಬ ವಿಶ್ವಾಸದಿಂದ ಬದುಕುತ್ತಿದ್ದೇನೆ. ನಾಳೆ ಏನಾಗುತ್ತದೆಂದು ಕಂಡವರಿಲ್ಲ ಅಲ್ಲವೇ? ಬಂದದ್ದೆಲ್ಲಾ ಬರಲಿ ಗೋವಿಂದನ ದಯೆಯೊಂದಿರಲಿ ಎಂದೇ ಭಕ್ತಿಯಿಂದ ಕೈ ಮುಗಿಯುತ್ತೇನೆ.

ಗೋದಾವರಿ: ಈ 60ರ ಹೊಸ್ತಿಲಲ್ಲಿ ನಿಂತು ನನ್ನ ಭೂತಕಾಲವನ್ನು ನೆನಸಿಕೊಳ್ಳುವುದು ತುಂಬಾ ದುಃಖದ ಸಂಗತಿಯಾಗಿದೆ. ನಮ್ಮ ವಿಧಿಯನ್ನು ಯಾರು ಬರೆದರು? ನಾನೇ ಬರೆದುದೋ? ದೇವರೇ ಬರೆದರೋ ಗೊತ್ತಿಲ್ಲ. ಏನಾಗಬೇಕೆಂದು ಬಯಸಿದವಳು ಏನಾಗಿ ಹೋದೆ ಎಂದು ಅರಿವಾಗಿ ನನಗೆ ನನ್ನ ಮೇಲೆಯೇ ಜಿಗುಪ್ಪೆ ಉಂಟಾಗುತ್ತದೆ. ನಮ್ಮದು ಮಧ್ಯಮ ವರ್ಗದ ಕುಟುಂಬ, ಅಪ್ಪ ಡ್ರೈವರ್, ಒಳ್ಳೆಯ ಸಂಪಾದನೆ ಇತ್ತು. ಸ್ವಂತ ಮನೆ, ನಾವು ಮೂವರು ಮಕ್ಕಳು. ನಾನು ಹಿರಿಯವಳು, ಉಳಿದವರಿಬ್ಬರು ತಮ್ಮಂದಿರು. ನನಗೆ ಏಳು ವರ್ಷವಾಗುವಾಗ ಅಮ್ಮ ತೀರಿಕೊಂಡಳು. ಅಪ್ಪ ಊರಲ್ಲಿರುತ್ತಿದ್ದರೆ ಯಾರಾದರೂ ಅವಳನ್ನು ಕೂಡಲೇ ಆಸ್ಪತ್ರೆಗೆ ಒಯ್ಯುತ್ತಿದ್ದರೆ ಬದುಕುತ್ತಿದ್ದಳೋ ಏನೋ, ಎದೆ ನೋವೆಂದು ಚೀರಿದವಳು ಮರುದಿನ ಬೆಳಿಗ್ಗೆ ನಾವು ಎದ್ದಾಗ ತಣ್ಣಗೆ ಮರಗಟ್ಟಿದ್ದಳು. ಅಮ್ಮ ಮಾತಾಡುವುದಿಲ್ಲವೆಂದು ಅಳುತ್ತಾ ನೆರೆಮನೆಯ ಯಶೋದಕ್ಕನಿಗೆ ಹೇಳಿದಾಗ ಅವರು ಬಂದು ವಿಷಯ ತಿಳಿದು ನಮ್ಮನ್ನು ಅಪ್ಪಿ ಸಂತೈಸಿದ್ದು, ಅಪ್ಪನ ಆಫೀಸಿಗೆ ಜನ ಕಳಿಸಿದ್ದು, ಅಪ್ಪ ಬಂದು ಏನೂ ಮಾತಾಡದೆ ನಾವು ಮೂವರನ್ನು ಅಪ್ಪಿಕೊಂಡು ತಲೆಸವರಿ ಬೆನ್ನುತಟ್ಟಿದ್ದು ಈಗಲೂ ಕಣ್ಣಿಗೆ ಕಟ್ಟಿದಂತಿದೆ.

ಅಪ್ಪನಿಗೆ ಬೇರೆ ರಾಜ್ಯಗಳಿಗೆ ಲಾರಿಯಲ್ಲಿ ಸಾಮಾನು ಒಯ್ಯುವ ಕೆಲಸ ವಾದುದರಿಂದ ಕೆಲಸ ಬಿಡುವುದು ಸಾಧ್ಯವಿರಲಿಲ್ಲ. ಆದುದರಿಂದ ನಮ್ಮನ್ನು ಮಂಗಳೂರಿನ ಶ್ರದ್ಧಾನಂದ ಅನಾಥಾಶ್ರಮಕ್ಕೆ ಸೇರಿಸಿದರು. ಇಲ್ಲಿಂದಲೇ ನಾವು ಕದ್ರಿ ಶಾಲೆಗೆ ಹೋಗುತ್ತಿದ್ದೆವು. ನಾನು ತರಗತಿಯಲ್ಲಿ ಯಾವಾಗಲೂ ಫಸ್ಟ್ ಬ್ಯಾಂಕ್ ಪಡೆಯುತ್ತಿದ್ದೆ. ಆದುದರಿಂದ ಶಾಲೆಯಲ್ಲಿ ಮತ್ತು ಆಶ್ರಮದಲ್ಲಿ ಎಲ್ಲರೂ ನನ್ನನ್ನು ಪ್ರೀತಿಸುತ್ತಿದ್ದರು. ತಮ್ಮಂದಿರು ಮಾತ್ರ ಕಲಿಕೆಯಲ್ಲಿ ಸ್ವಲ್ಪ ಹಿಂದೆ ಇದ್ದರೂ ಅವರನ್ನು ಜಾಣರನ್ನಾಗಿ ಮಾಡಲು ನಾನು ಪ್ರತಿದಿನ ಓದಿಸಲು, ಬರೆಯಲು ಪ್ರೋತ್ಸಾಹ ನೀಡುತ್ತಿದ್ದೆ. ನಾನು ಹೈಸ್ಕೂಲಿಗೆ ಬಲ್ಮಠದ ಸರಕಾರಿ ಶಾಲೆಗೆ ಸೇರಿದ ಮೇಲೆ ನನ್ನ ತಮ್ಮಂದಿರು ನನ್ನನ್ನೂ ಕಡೆಗಣಿಸತೊಡಗಿದರು. ಓದನ್ನೂ ನಿರ್ಲಕ್ಷಿಸತೊಡಗಿದರು. ಅಮ್ಮ ತೀರಿದ ಎರಡೇ ವರ್ಷದೊಳಗೆ ಅಪ್ಪ ಎರಡನೇ ಮದುವೆಯಾದರು. ನಮ್ಮನ್ನು ಆಶ್ರಮದಿಂದ ಮನೆಗೆ ಕರೆತಂದರು. ಇಲ್ಲಿಂದ ನನ್ನ ಬದುಕಿಗೆ ತಿರುವು ನೀಡಿದ ಅಧ್ಯಾಯ ಪ್ರಾರಂಭವಾದುವು. ಅಪ್ಪ ತಿಂಗಳಲ್ಲಿ ಒಂದೆರಡು ಸಲ ಮಾತ್ರ ಬರುತ್ತಿದ್ದರು. ಹೇಳಿದ ಮಾತು ಕೇಳದ ತಮ್ಮಂದಿರ ಬಗ್ಗೆ ಮಲತಾಯಿಯ ದೂರುಗಳ ಪಿಟೀಲು ವಾದನ ಶುರುವಾದರೆ ಅಪ್ಪನ ತಾಳಮದ್ದಳೆ ಜೊತೆಯಾಗುತ್ತಿತ್ತು. ನಡುವೆ ಹಾಗಲ್ಲ ಹೀಗೆ ಎಂದು ನಾನು ಹೇಳಿದರೆ ನನ್ನ ಬೆನ್ನೂ ಅಪ್ಪನಿಗೆ ಮೃದಂಗವಾಗುತ್ತಿತ್ತು. ಮೊದಲೇ ಮೊಂಡನಾದ ನನ್ನ ದೊಡ್ಡ ತಮ್ಮ ಒಂದು ದಿನ ಮನೆಬಿಟ್ಟು ಪರಾರಿಯಾದ. ಅಪ್ಪ ಕಂಗಾಲಾಗಿ ಪೋಲೀಸ್ ಕಂಪ್ಲೆಂಟ್ ಕೊಟ್ಟರು. ಎಲ್ಲೆಲ್ಲಿ ಹುಡುಕಾಡಿದರೂ ಸಿಗಲಿಲ್ಲ. ಈ ಗಲಾಟೆಯಲ್ಲಿ ನಾನು ಒಂಬತ್ತನೆಯ ತರಗತಿಯಲ್ಲಿದ್ದೆ. ನನ್ನನ್ನು ಶಾಲೆ ಬಿಡಿಸಿದರು. ಮತ್ತೆ ಮೂರು ವರ್ಷ ಮನೆಯಲ್ಲಿ ಬೀಡಿ ಕಟ್ಟುತ್ತಾ ಮಲತಾಯಿಯ ಸಿಟ್ಟುಸಿಡುಕಿನೊಂದಿಗೆ ಜಗಳಾಡುತ್ತಾ ಹೊಂದಾಣಿಕೆ ಮಾಡಿಕೊಳ್ಳುತ್ತಾ ಕಾಲ ತಳ್ಳಿದೆ. ಹೀಗಿರುವಾಗ ನಮ್ಮ ಅಪ್ಪನ ಲಾರಿ ಕಂಪೆನಿಯ ಮಾಲಕರ ಮಗಳು ಅಮೆರಿಕಾದಲ್ಲಿದ್ದವಳ ಹೆರಿಗೆಯಾಗಿ ಸಣ್ಣ ಮಗುವಿನೊಂದಿಗೆ ಅಲ್ಲಿಗೆ ಮರಳುವವಳಿದ್ದಳು. ಅವಳ ಮಗು ನೋಡಿಕೊಳ್ಳಲು ನನ್ನನ್ನು ಅಮೇರಿಕಾಕ್ಕೆ ಕಳಿಸಿದರು. ನಾನು ಕನಸಿನಲ್ಲೂ ಊಹಿಸದ ಭಾಗ್ಯವಾಗಿತ್ತದು. ಅಲ್ಲಿ ಅವರು ನನ್ನನ್ನು ಮನೆ ಮಗಳಂತೆ ನೋಡಿಕೊಂಡರು. ಎರಡು ವರ್ಷದ ಬಳಿಕ ಬರುವ ಅವಕಾಶವಿತ್ತು. ನಾನೇ ಭಾರತಕ್ಕೆ ಬರುವುದನ್ನು ನಿರಾಕರಿಸಿದೆ. ಯಾಕೆಂದರೆ ಊರಲ್ಲಿದ್ದ ಸಣ್ಣ ತಮ್ಮನೂ ಹಣ ಕದ್ದು ಪರಾರಿಯಾಗಿದ್ದ. ನಾನು ಯಾರಿಗಾಗಿ ಬರಬೇಕು. ಯಾರಿದ್ದಾರೆ ಊರಲ್ಲಿ. ಮಾಲಕರ ಮಗಳು ಊರಿಗೆ ಮರಳುವಾಗಲೇ ಅವರ ಜೊತೆಯಲ್ಲಿ ಮರಳುವುದೆಂದು ನಿರ್ಧರಿಸಿದೆ. ಇತ್ತ ಅಪ್ಪನ ಆರೋಗ್ಯ ಕೆಟ್ಟಿದೆ ಎಂಬ ಸುದ್ದಿ ತಿಳಿಸಿದ ಕಾರಣ ನನ್ನನ್ನೊಬ್ಬಳನ್ನೇ ಭಾರತಕ್ಕೆ ಕಳಿಸಿದರು. ಇಲ್ಲಿಂದ ನನ್ನ ಬದುಕಿನ ಇನ್ನೊಂದು ಕರಾಳ ಅಧ್ಯಾಯ ಪ್ರಾರಂಭವಾಯಿತು.

ವಿಮಾನದಲ್ಲಿ ನನ್ನ ಪಕ್ಕದಲ್ಲಿ ಕುಳಿತ ಯುವಕ ತುಂಬಾ ಪರಿಚಿತನಂತೆ ವರ್ತಿಸಿದ. ಎಷ್ಟು ಆತ್ಮೀಯನಾದನೆಂದರೆ ನಾನು ನನ್ನ ಕತೆಯನ್ನೆಲ್ಲಾ ಅವನಿಗೆ ಹೇಳಿಬಿಟ್ಟೆ. ಅವನು ಎಷ್ಟು ಪ್ರೀತಿ ತೊರಿಸಿದನೆಂದರೆ ನನ್ನ ಜೊತೆಯಲ್ಲಿ ನನ್ನ ಮನೆಗೂ ಬಂದ. ಅಪ್ಪನನ್ನು ಕಂಡು ಮನೆ ಮಗನಂತೆ ವರ್ತಿಸಿ ಆಸ್ಪತ್ರೆಗೆ ಸೇರಿಸಿ ಎರಡು ದಿನ ನಮ್ಮ ಮನೆಯಲ್ಲೇ ಇದ್ದ. ನಾನು ಸುಂದರ ಕನಸುಗಳನ್ನು ಹೆಣೆದೆ. ಅವನ ಪೂರ್ವಾಪರ ವಿಚಾರಿಸದೆ ಅಪ್ಪನಲ್ಲಿ ಇವನೇ ನಿಮ್ಮ ಅಳಿಯ. ನಾನು ಅವನನ್ನೇ ಮದುವೆಯಾಗುತ್ತೇನೆ ಎಂದು ಹೇಳಿದೆ. ಅಪರೇಶನ್ ಆಗಿ ನಿಸ್ಸಹಾಯಕ ಸ್ಥಿತಿಯಲ್ಲಿದ್ದ ಅಪ್ಪನಿಗೆ ಒಪ್ಪದೇ ನಿರ್ವಾಹವೇ ಇರಲಿಲ್ಲ. ಎದ್ದು ಓಡಾಡಲಾರದ ಸ್ಥಿತಿಯಲ್ಲಿ ಅಪ್ಪ ಮನೆಗೆ ಬಂದ ಮೇಲೆ ಒಂದು ದಿನ ಅವನು ಮನೆಗೆ ಬಂದು ನನ್ನನ್ನು ಅವನ ತಂದೆತಾಯಿಗಳಿಗೆ ತೋರಿಸಲು ಕರೆದುಕೊಂಡು ಹೋಗುತ್ತೇನೆಂದು ಹೇಳಿ ಕಾಸರಗೋಡಿಗೆ ಒಯ್ದ. ಆ ದೊಡ್ಡ ಬಂಗಲೆಯಂತಹ ಮನೆ. ಅಕ್ಕ ಎಂದು ಅವನು ಪರಿಚಯಿಸಿದ ಹೆಂಗಸು ಅವರು ತೋರಿದ ಪ್ರೀತಿ ಇವನ್ನೆಲ್ಲಾ ಕಂಡು ನಾನು ಸ್ವರ್ಗದಲ್ಲೇ ತೇಲಾಡಿದೆ. ಮದುವೆಯ ಸುದ್ದಿ ಎತ್ತಿದೊಡನೆಯೇ ಸಿಡುಕುವ ಅವನ ಮಾತು ಕೇಳಿ ಆಶ್ಚರ್ಯವಾಗುತ್ತಿತ್ತು. ಕತ್ತಲೆಯಾದ ಕೂಡಲೇ ಈ ಅಕ್ಕ ಸಿಂಗರಿಸಿ ಕಾರಿನಲ್ಲಿ ಹೋಗುವುದು ಮುಂಜಾನೆ ಬರುವುದು. ಇವುಗಳ ಬಗ್ಗೆ ನನಗೆ ಯಾವ ಸಂಶಯವೂ ಬರಲಿಲ್ಲ. ಯಾಕೆಂದರೆ ನನ್ನ ಹುಡುಗನ ಬಗ್ಗೆ ನನಗೆ ಅಷ್ಟು ವಿಶ್ವಾಸವಿತ್ತು. ಒಂದು ದಿನ ಸೋದರಮಾವನನ್ನು ಕರೆದುಕೊಂಡು ಬರುತ್ತೇನೆಂದು ಹೋದವ ಕಾಣೆಯಾದ. ನನ್ನನ್ನು ಈ ಅಕ್ಕನಿಗೆ ಮಾರಾಟ ಮಾಡಲಾಗಿದೆಯೆಂದು ಅನಂತರ ತಿಳಿಯಿತು. ನನ್ನ ಮುಗ್ಧತೆಯನ್ನು ಅವರು ಚೆನ್ನಾಗಿ ದುರುಪಯೋಗಪಡಿಸಿಕೊಂಡಿದ್ದರು. ತಪ್ಪಿಸಿಕೊಂಡು ಮನೆಗೆ ಹೋಗಲೇ? ಅಲ್ಲಿ ರೋಗಿಯಾದ ಅಪ್ಪ, ಮಲತಾಯಿ ಇವರಿಬ್ಬರೂ ನನ್ನನ್ನು ಪ್ರೀತಿಯಿಂದ ಸ್ವೀಕರಿಸುತ್ತಾರೆ ಎಂಬ ನಂಬಿಕೆ ನನಗಿರಲಿಲ್ಲ. ಇಬ್ಬರು ತಮ್ಮಂದಿರ ಮೇಲೆ ನನಗೆ ತುಂಬಾ ಮಮತೆ ಇತ್ತು. ಅವರಿಬ್ಬರೂ ಕಲಿತು ಒಳ್ಳೆಯ ಉದ್ಯೋಗ ಪಡೆಯಬೇಕೆಂಬ ಕನಸು ಕಂಡಿದ್ದೆ. ನಾನು ಚೆನ್ನಾಗಿ ಕಲಿತು ನರ್ಸ್ ಅಥವಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಬೇಕೆಂದು ಬಯಸಿದ್ದೆ. ನಾನು ಅಮೇರಿಕದ ಸ್ವರ್ಗದಿಂದ ನೇರವಾಗಿ ವೇಶ್ಯಾಚಾಟಿಕೆಯ ನರಕಕ್ಕೆ ದೂಡಲ್ಪಟ್ಟೆ, ಸಮಾಜದ ಯಾರಿಗೂ ಮುಖ ತೋರಿಸುವ ಧೈರ್ಯ ನನಗಿರಲಿಲ್ಲ. ನಲ್ವತ್ತು ವರ್ಷದವರೆಗೆ ಅದೇ ಅಕ್ಕನ ಮನೆಯಲ್ಲಿ ಈ ವೃತ್ತಿಯಲ್ಲಿದ್ದೆ. ಮತ್ತೆ ಹೊರಬಂದು ಸಣ್ಣ ಬಾಡಿಗೆ ಮನೆ ಮಾಡಿ ನಾನೂ ಕೂಡಾ ದಂಧೆಯನ್ನು ಪ್ರಾರಂಭಿಸಿದ್ದೇನೆ. ಈಗ ನಾನು ಅಕ್ಕನ ಸ್ಥಾನದಲ್ಲಿದ್ದೇನೆ. ನನ್ನನ್ನು ಮೊದಲು ಈ ವೃತ್ತಿಗೆ ದೂಡಿದ ಅಕ್ಕನ ಮೇಲೆ ನಾನು ಸೇಡು ತೀರಿಸಿಕೊಳ್ಳುತ್ತಿದ್ದೇನೆಯೇ ಎಂದು ಒಮ್ಮೊಮ್ಮೆ ಅನಿಸುತ್ತದೆ. ಆ ಅಕ್ಕನೂ ನನ್ನಂತೆ ದೂಡಲ್ಪಟ್ಟವಳು ಎಂದು ಅವಳೇ ಹೇಳುವುದನ್ನು ಕೇಳಿಸಿಕೊಂಡಿದ್ದೆ. ಈಗ ನಾನು ಕೆಲವರನ್ನು ಈ ವೃತ್ತಿಗೆ ಸೆಳೆಯುವ ಪ್ರಯತ್ನ ಮಾಡುತ್ತಿದ್ದೇನೆ. ಕೆಲವು ಸಲ ಪೋಲೀಸ್ ದಾಳಿ, ಕೋರ್ಟು ಕೇಸು ಎಲ್ಲಾ ಅನುಭವಿಸಿದಾಗಲೆಲ್ಲಾ ಈ ವೃತ್ತಿಯನ್ನು ಸಂಪೂರ್ಣ ನಿಲ್ಲಿಸಬೇಕೆಂದು ಯೋಚಿಸಿದ್ದೆ. ನನಗೆ ಮಕ್ಕಳಿಲ್ಲ. ಮಕ್ಕಳನ್ನು ಹುಟ್ಟಿಸಬಾರದೆಂದೇ ನಿರ್ಧಾರ ಮಾಡಿದ್ದೆ. ಕೂಡಲೇ ಮಕ್ಕಳಾಗದಂತೆ ಸೂಕ್ತ ಕ್ರಮ ಕೈಗೊಂಡಿದ್ದೆ, ಈ ಲೋಕದಲ್ಲಿ ನಾನು ತೀರಾ ಒಂಟಿ ಎಂದು ಅನಿಸುತ್ತಿದೆ. ಒಂಟಿಯಾಗಿಯೇ ಈ ಭೂಮಿಗೆ ಬಂದೆ ಒಂಟಿಯಾಗಿಯೇ ತೆರಳುತ್ತೇನೆ. ಬದುಕು ತೀರಾ ಕಷ್ಟವೆನಿಸಿದಾಗ ಅದಕ್ಕೆ ಪರಿಹಾರವು ನನ್ನ ಕೈಯಲ್ಲೆ ಇದೆ ಎಂಬ ಧೈರ್ಯದಿಂದ ಬದುಕುತ್ತಿದ್ದೇನೆ.

ತುಂಗೆ: ನಮ್ಮದು ತೀರಾ ಕುಗ್ರಾಮ. ಅಮ್ಮ ಬೀಡಿ ಕಟ್ಟುತ್ತಿದ್ದಳು. ಅಪ್ಪನಿಗೆ ಗುಜರಿ ವಸ್ತುಗಳ ಮಾರಾಟದ ಕೆಲಸ. ನಾವು ಆರು ಮಂದಿ ಮಕ್ಕಳು. ನಾನೇ ಹಿರಿಯವಳು. ಶಾಲೆಯ ಮೆಟ್ಟಿಲು ಹತ್ತದವಳು ನಾನು. ನನ್ನ ನಂತರ ಹುಟ್ಟಿದವರನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿತ್ತು. ಇದ್ದುದರಲ್ಲೇ ಹಂಚಿ ತಿನ್ನುವ ಸುಖವನ್ನು ಕಂಡವಳು ನಾನು. ನನ್ನ ಹೆತ್ತವರು ಅತೀವ ಧಾರ್ಮಿಕ ಶೃದ್ಧೆಯುಳ್ಳವರಾದುದರಿಂದ ಧಾರ್ಮಿಕ ಪೂಜೆ, ಪ್ರಾರ್ಥನೆಗಳನ್ನು ಮಾತ್ರ ಕಲಿಸಿದ್ದರು. 16 ವರ್ಷದಲ್ಲೇ ನನ್ನ ಮದುವೆಯೂ ನಡೆಯಿತು. ಗಂಡ ಸೈಕಲಲ್ಲಿ ಮೀನು ಮಾರಾಟ ಮಾಡುತ್ತಿದ್ದರು. ಅತ್ತೆ, ಮಾವ, ಭಾವ, ಮೈದುನಂದಿರು, ಅತ್ತಿಗೆ ನಾದಿನಿಯರೆಂದು 16 ಮಂದಿ ಇದ್ದೆವು. ಗಂಡನ ಇಬ್ಬರು ಅಣ್ಣಂದಿರು ಸೌದಿಯಲ್ಲಿದ್ದರು. ಆದುದರಿಂದ ತವರುಮನೆಯಷ್ಟು ದಾರಿದ್ರವಿರಲಿಲ್ಲ. ನಾನು ಕಲಿಯದವಳು ಮತ್ತು ಬಡವಳು ಎಂಬ ಕಾರಣಕ್ಕಾಗಿ ಅತ್ತಿಗೆ, ನಾದಿನಿ, ಅತ್ತೆಯವರು ತಾತ್ಸಾರದಿಂದ ಕಾಣುತ್ತಿದ್ದರು. ನನ್ನ ಗಂಡ ಹೆಚ್ಚು ಕಲಿಯದ ಕಾರಣ ಮೀನು ಮಾರಾಟದ ಉದ್ಯೋಗದಲ್ಲಿದ್ದರು. ನನಗೆ ಮದುವೆಯಾಗಿ ಮರುವರ್ಷವೇ ಒಂದು ಗಂಡು ಮಗುವಾಯಿತು. ಅದೇ ಸಮಯದಲ್ಲಿ ಗಂಡನಿಗೆ ವಿದೇಶದ ವೀಸಾ ಬಂತು. ಅಲ್ಲಿ ಅಣ್ಣಂದಿರ ಜೊತೆಗೆ ಕೆಲಸಕ್ಕೆ ಸೇರಿಕೊಂಡರು. ನನ್ನ ತವರುಮನೆಯವರು ನನಗೆ ಒಲಿದು ಬಂದ ಭಾಗ್ಯಕ್ಕಾಗಿ ದೇವರಿಗೆ ವಂದನೆ ಸಲ್ಲಿಸಿದರು. ನಾನು ಮಗುವನ್ನು ಕರೆದುಕೊಂಡು ಮರಳಿ ಗಂಡನ ಮನೆಗೆ ಹೋದಾಗ ನನ್ನನ್ನೂ ಮಗುವನ್ನೂ ಮನೆಯೊಳಗೆ ಬರಮಾಡಿಕೊಂಡ ರೀತಿಯನ್ನು ಕಂಡು ನೋವಾಯಿತು. ಬಡವನ ಸಿಟ್ಟು ದವಡೆಗೆ ಮೂಲವಲ್ಲವೇ? ನಾನು ಸಾಧ್ಯವಾದಷ್ಟು ತಗ್ಗಿ ಬಗ್ಗಿ ಎಲ್ಲರೊಂದಿಗೆ ಹೊಂದಾಣಿಕೆ ಮಾಡಿಕೊಂಡೆ. ನನ್ನ ತಂದೆ ತಾಯಿ ನನಗೆ ಒಳ್ಳೆಯ ಸಂಸ್ಕಾರವನ್ನು ಕಲಿಸಿದ್ದರು. ಮನೆಯಲ್ಲಿ ಕೈ ತುಂಬಾ ಕೆಲಸವಿತ್ತು. ಮಗುವಿನ ಆರೈಕೆಯಲ್ಲಿ ನಾನು ತವರನ್ನು ಮರೆತೆ, ಗಂಡ ವಿದೇಶದಿಂದ ಬಂದಾಗ ನಾವು ಬೇರೆ ಮನೆ ಮಾಡಬೇಕೆಂಬ ಬೇಡಿಕೆ ಇಟ್ಟೆ. ಅದು ದೊಡ್ಡ ಬಾಂಬ್ ಸಿಡಿದಂತೆ ಗಾಬರಿಯಾಗಿ ಸಿಟ್ಟಿನಿಂದ ನನ್ನನ್ನು ಬೈದರು. ನಾನು ಎಷ್ಟೆಲ್ಲಾ ನಿಂದೆ ಅಪಮಾನಗಳನ್ನು ಸಹಿಸಿ ಮನೆಯ ಜೀತದಾಳಿನಂತೆ ಅಲ್ಲಿ ದಿನ ಕಳೆಯುತ್ತಿದ್ದುದು ಅವರಿಗೆ ಗೊತ್ತೇ ಇಲ್ಲದಂತೆ ವರ್ತಿಸಿದರು. ಮರುವರ್ಷ ಇನ್ನೊಂದು ಹೆಣ್ಣುಮಗು ಆಯಿತು. ಗಂಡ ವಿದೇಶದಲ್ಲಿದ್ದರೂ ನನ್ನ ಕೈಗೆ ಒಂದು ಪೈಸೆ ಹಣ ಕೊಟ್ಟವರಲ್ಲ. ಹಣ ಬೇಕೆಂದರೆ ಅಮ್ಮನಲ್ಲಿ ಕೇಳು, ಅತ್ತಿಗೆಯಲ್ಲಿ ಕೇಳು ಎಂದು ಹೇಳುತ್ತಿದ್ದರು ಗಂಡ. ಎರಡನೇ ಮಗುವಾದ ಮೇಲೆ ನಾನು ಬೀಡಿ ಕಟ್ಟಲೇ ಎಂದು ಅತ್ತೆ ಮಾವನಲ್ಲಿ ಕೇಳಿದೆ. ಅವರು ಒಪ್ಪಲಿಲ್ಲ. ಇದು ಅವರಿಗೆ ಅಪಮಾನದ ಸಂಗತಿಯಾಗಿತ್ತು. ನನ್ನ ಮಕ್ಕಳಿಗೆ ಏನು ಕೊಡಿಸುವುದಿದ್ದರೂ ಹಣಕ್ಕೆ ಅತ್ತೆಯವರಲ್ಲಿ ಕೈ ಚಾಚಬೇಕಿತ್ತು. ಗಂಡನಿಗೆ ಪತ್ರ ಬರೆದು ತಿಳಿಸುವುದಂತೂ ನನ್ನಿಂದ ಸಾಧ್ಯವಿರಲಿಲ್ಲ. ಈಗ ಮೂವರು ಮಕ್ಕಳು ವಿದೇಶದಲ್ಲಿದ್ದ ಕಾರಣ ಗಂಡನ ಮನೆಯವರ ಶ್ರೀಮಂತಿಕೆ ದಿನೇ ದಿನೇ ಹೆಚ್ಚುತಿತ್ತು. ಆದರೆ ನನಗೆ ನನ್ನ ಮಕ್ಕಳಿಗೆ ಅದೇ ದೈನ್ಯಾವಸ್ಥೆಯಲ್ಲೇ ಬದುಕುವುದು ಅನಿವಾರ್ಯವಾಯಿತು. ಎರಡನೇ ಸಲ ಊರಿಗೆ ಬಂದವರು ಮೊದಲ ದಿನವೇ ನನ್ನಲ್ಲಿ ಬಹಳ ಗರಂ ಆಗಿದ್ದರು. ಮುಖ ಊದಿಸಿಕೊಂಡೇ ಮಾತಾಡುತ್ತಿದ್ದರು. ಮುಖಕ್ಕೆ ಮುಖ ಕೊಟ್ಟು ಮಾತಾಡುತ್ತಿರಲಿಲ್ಲ. ವಾರದ ಬಳಿಕ ನನ್ನನ್ನು ಮಕ್ಕಳನ್ನು ತವರಿಗೆ ತಂದು ಬಿಟ್ಟರು. ತಾಯಿ ಮನೆಯಲ್ಲಿ ಅವರು ಒಂದು ರಾತ್ರಿ ಕೂಡಾ ನಿಲ್ಲಲಿಲ್ಲ. ಕರೆದೊಯ್ಯಲು ಬರುತ್ತೇನೆ ಎಂದು ಮಕ್ಕಳ ಕೈಗೆ ಸ್ವಲ್ಪ ಹಣಕೊಟ್ಟು ಹೋದವರು ಮತ್ತೆ ಮರಳಲೇ ಇಲ್ಲ. ತಿಂಗಳ ಬಳಿಕ ಎರಡನೇ ಮದುವೆಯಾದರೆಂದು ಸುದ್ದಿ ಸಿಕ್ಕಿತು. ಇದರಿಂದ ನನ್ನ ತಂದೆಗೆ ಆದ ಆಘಾತದಿಂದ ಚೇತರಿಸಲೇ ಇಲ್ಲ. ಎರಡು ತಿಂಗಳ ಆಸ್ಪತ್ರೆ ಮನೆ ಎಂದು ಓಡಾಡಿದೆವು. ಒಂದು ದಿನ ಬೆಳಿಗ್ಗೆ ಏಳುವಾಗಲೇ ಅಪ್ಪ ತೀರಿ ಹೋಗಿದ್ದರು. ದುಡಿಯುವ ಒಂದೇ ಆಸರೆಯಾದ ಅಪ್ಪನಿಲ್ಲದ ಸಂಸಾರ ಒಂದು ರೀತಿಯಲ್ಲಿ ಬೀದಿಗೆ ಬಿದ್ದಂತಾಯಿತು. ಜೀವನಕ್ಕೆ ಬೀಡಿಯೊಂದೇ ಸಂಜೀವಿನಿಯಾಯಿತು. ಅದೂ ಕೂಡಾ ಪ್ರತಿದಿನ ದುಡಿಯುವಷ್ಟು ಇರಲಿಲ್ಲ. ವಾರದಲ್ಲಿ ಮೂರು ದಿನ ಮಾತ್ರ ಕೆಲಸವಿತ್ತು. ನಾನು ಮತ್ತು ಅಮ್ಮ ನಮ್ಮ ಊರ ಮದ್ರಸಾದ ಗುರುಗಳಲ್ಲಿ ಹೋಗಿ ನಮ್ಮ ಕಷ್ಟವನ್ನು ನಿವೇದಿಸಿಕೊಂಡೆವು. ಅವರು ಹೇಳಿದ ಸುದ್ದಿಯಂತೆ ನಾನು ಜಗಳಗಂಟಿಯೆಂದೂ, ಮನೆ ಮುರಿಯಲು ಪ್ರಯತ್ನಿಸಿದೆನೆಂದೂ ಹಾಗಾಗಿ ಕಾಗದದಲ್ಲೇ ತಲಾಖ್ ನೀಡಿದ್ದೇನೆಂದು ತಿಳಿಸಿದರಂತೆ. ಸತ್ಯವಂತರಿಗೆ, ಬಡವರಿಗೆ ಯಾರೂ ಆಧಾರವಿಲ್ಲವೆಂದು ನನಗೆ ಖಾತ್ರಿಯಾಯಿತು. ಅಪ್ಪನ ಕಡೆಯ ಬಂಧುಗಳಾಗಲೀ, ಅಮ್ಮನ ಕಡೆಯ ಬಂಧುಗಳಾಗಲೀ ಗಂಡ ತಲಾಖ್ ಕೊಟ್ಟದ್ದು ತಪ್ಪು ಎಂದು ಹೇಳಲಿಲ್ಲ. ನಾನು ಹೊಂದಿ ಬಾಳದ ಕಾರಣ ಗಂಡ ಬೇರೆ ಮದುವೆಯಾದ. ನೀನೂ ಅವನನ್ನು ಮರೆತು ಬೇರೆ ಮದುವೆಯಾಗು ಎಂದು ಉಪದೇಶಿಸಿದರು. ತನಗೆ ಹುಟ್ಟಿದ ಇಬ್ಬರು ಮಕ್ಕಳ ಮೇಲಿನ ಪ್ರೀತಿಯಿಂದಲಾದರೂ ಒಂದಿಷ್ಟು ಧನಸಹಾಯ ಮಾಡಬಹುದೆಂದು ನಿರೀಕ್ಷಿಸಿದ್ದು ಸುಳ್ಳಾಯಿತು. ತವರುಮನೆಯೇ ನನಗೆ ಆಸರೆಯಾಯಿತು. ಆರಕ್ಕೇರದ ಮೂರಕ್ಕಿಳಿಯದ ಆರ್ಥಿಕ ಪರಿಸ್ಥಿತಿ ನಮ್ಮದು. ಅಮ್ಮನಿಗೆ ತನ್ನ ಐದು ಮಂದಿ ಮಕ್ಕಳ ಭವಿಷ್ಯದ ಚಿಂತೆ. ನನಗೆ ನನ್ನ ಮಕ್ಕಳ ಚಿಂತೆ. ತಮ್ಮಂದಿರು ಮನೆಯ ಜವಾಬ್ದಾರಿಯನ್ನು ವಹಿಸುವ ಆಸಕ್ತಿ ತೋರಿಸಲಿಲ್ಲ. ಇಬ್ಬರೂ ಮನಗೆ ಬಂದರೆ ಬಂದರು. ಇಲ್ಲದಿದ್ದರೆ ಇಲ್ಲ ಎಂಬಂತಹ ರೂಢಿ ಇಟ್ಟುಕೊಂಡವರು. ಬೀಡಿಯ ಕೆಲಸವೂ ಕೆಲವು ತಿಂಗಳು ನಿಂತೇ ಹೋಯಿತು. ಆಗ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯಾಯ್ತು. ಇಂತಹ ಒಂದು ಸಂಕಷ್ಟದ ಸಮಯದಲ್ಲಿ ನಮಗೆ ನೆರವಾದವರು ಸಫಿಯಾ, ಅವಳು ನನ್ನನ್ನು ಈ ಕೆಲಸಕ್ಕೆ ಮೊತ್ತಮೊದಲು ಕರೆದೊಯ್ದಳು. ಅವರೂ ಕೂಡಾ ನನ್ನ ಹಾಗೆ ಗಂಡನಿಂದ ತಲಾಖ್ ಪಡೆದ ಮೇಲೆ ಮೂವರು ಮಕ್ಕಳನ್ನು ಸಾಕುವ ದಾರಿ ಕಾಣದೆ ಈ ವೃತ್ತಿಗೆ ಪ್ರವೇಶಿಸಿದ್ದಳು. ನಾನು ಶ್ರೀಮಂತರ ಮನೆಯ ಕೆಲಸಕ್ಕೆ ಹೋಗುತ್ತೇನೆಂದು ಮನೆಯಲ್ಲಿ ಹೇಳಿ ಬೆಳಿಗ್ಗೆ ಹೊರಟರೆ ರಾತ್ರಿ 8 ಗಂಟೆಗೆ ಮರಳುತ್ತೇನೆ. ಈಗ ಮನೆಯಲ್ಲಿ ಮೂರು ಹೊತ್ತು ಊಟ ತಿಂಡಿಗೆ ಬರವಿಲ್ಲ. ನನಗೆ ವಿದ್ಯೆಯಿಲ್ಲ. ನನ್ನ ಮಕ್ಕಳು ಹಾಗಾಗಬಾರದೆಂದು ಶಾಲೆಗೆ ಸೇರಿಸಿದ್ದೇನೆ. ಮಕ್ಕಳು ಹದಿಹರೆಯಕ್ಕೆ ಬಂದ ಮೇಲೆ ತವರೂರು ಬಿಟ್ಟು ದೂರದ ಊರಿಗೆ ಹೋಗಿ ವೃತ್ತಿ ಆರಂಭಿಸಿದೆ. ಅಲ್ಲಿ ನನ್ನ ರಕ್ಷಣೆಗಾಗಿ ಒಬ್ಬ ಗಂಡಸನ್ನು ಜೊತೆಗಿರಿಸಿಕೊಂಡಿದ್ದೇನೆ. ದುಡಿಮೆಯ ಅರ್ಧಾಂಶ ಅವನಿಗೆ ಸಂದಾಯವಾಗುತ್ತದೆ. ಆದರೂ ಬೇರೆ ಉಪಾಯವಿಲ್ಲ. ಗುರುತು ಪರಿಚಯವಿಲ್ಲದ ಊರಿನಲ್ಲಿ ನಾನು ಒಬ್ಬಳೇ ಬದುಕುವುದು ಕಷ್ಟ ನಾನು ಅನಕ್ಷರಸ್ಥೆಯಾದರೂ ಹಣದ ವ್ಯವಹಾರಗಳನ್ನು ಮಾಡಬಲ್ಲಷ್ಟು ಜ್ಞಾನ ಗಳಿಸಿದ್ದೇನೆ. ನನ್ನನ್ನು ಸುಲಭದಲ್ಲಿ ಯಾರೂ ಯಾಮಾರಿಸದಂತೆ ಎಚ್ಚರ ವಹಿಸಿದ್ದೇನೆ. ತಿಂಗಳಿಗೊಮ್ಮೆ ನಮ್ಮ ನೆಟ್‌ವರ್ಕಿನ ಮೀಟಿಂಗ್ ಇದೆಯಾದುದ ರಿಂದ ತವರೂರಿಗೆ ಬರುತ್ತೇನೆ. ಮಕ್ಕಳು ಚೆನ್ನಾಗಿ ಕಲಿಯುತ್ತಿದ್ದಾರೆ. ಅವರ ನಾಳೆಗಳು ಉತ್ತಮ ಭವಿಷ್ಯದತ್ತ ಮುನ್ನಡೆಯಲಿ ಎಂದೇ ಈ ತಾಯಿಯ ಹಾರೈಕೆ. ಈ ವೃತ್ತಿಗೆ ಬಂದ ಮೇಲೆ ನಮ್ಮ ಮೇಲೆ ಸವಾರಿ ಮಾಡುವವರನ್ನು ಹೇಗೆ ಒದ್ದೋಡಿಸಬೇಕು; ಶೋಷಿಸುವವರನ್ನು ಹೇಗೆ ಪ್ರತಿಭಟಿಸಬೇಕು ಎಂಬ ಪಾಠ ಕಲಿತಿದ್ದೇನೆ. ನಾನು ತುಂಬಾ ಕಳಕೊಂಡಿರಬಹುದು. ಆದರೆ ಏನಾದರೂ ಗಳಿಸಿದ್ದರೆ, ಏನಾದರೂ ಒಳ್ಳೆಯ ಪಾಠ ಕಲಿತಿದ್ದರೆ, ಅದು ಇಲ್ಲಿಯೇ. ಒಮ್ಮೆ ಇಲ್ಲಿಗೆ ದೂಡಲ್ಪಟ್ಟ ನಾನು ಮತ್ತೆ ಮೇಲೆಳಲು, ಹಿಂತಿರುಗಲು ಸಾಧ್ಯವಾಗಲೇ ಇಲ್ಲ. ಇದೇ ನನ್ನ ದುರಂತ.

ಭದ್ರೆ: ನಮ್ಮದು ಮಧ್ಯಮ ವರ್ಗದ ಕುಟುಂಬ. ನಾಲ್ಕು ಮಂದಿ ಮಕ್ಕಳು. ಅಪ್ಪ ಜಾಗ ಮಾರಾಟದ ಬ್ರೇಕರ್, ಜಾಗಕ್ಕೆ ಸಂಬಂಧಿಸಿದ ಎಲ್ಲಾ ವ್ಯವಹಾರ ಗಳನ್ನು ಮಾಡಿಸಿಕೊಡಿಸುತ್ತಿದ್ದರು. ಒಳ್ಳೆಯ ಸಂಪಾದನೆ ಇತ್ತು. ಕೈಯಲ್ಲಿ ಕಾಸು ತುಂಬಾ ಓಡಾಡುವಾಗ ಗೆಳೆಯರು ಸೇರುವುದು ಕುಡಿತ, ಮೋಜು ಎಲ್ಲವೂ ಇತ್ತು. ನನ್ನ ಅಮ್ಮ ಖಾಸಗೀ ಆಸ್ಪತ್ರೆಯಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದರು. ಯಾರಾರಿಗೋ ಬಾಡಿಗೆ ಮನೆ, ಸ್ವಂತ ಮನೆ ಮಾಡಿಸಿ ಕೊಡುವುದು, ಸ್ವಂತ ಜಾಗ ಮಾಡಿಸಿ ಕೊಟ್ಟು ಮನೆ ಕಟ್ಟುವುದಕ್ಕೆ ವ್ಯವಸ್ಥೆ ಮಾಡುವುದು; ಜಾಗ ಮಾರಾಟ ಮಾಡಿಸಿಕೊಡುವುದು ಹೀಗೆ ಕೆಲಸ ಮಾಡುತ್ತಿದ್ದ ಅಪ್ಪನಿಗೆ ಮಾತ್ರ ಸ್ವಂತ ಜಾಗ ಮಾಡಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ನಾವು ಬಾಡಿಗೆ ಮನೆಯಲ್ಲೇ ಇದ್ದೆವು. ಮೊದಮೊದಲು ವಾರಕ್ಕೊಮ್ಮೆಯೋ ತಿಂಗಳಿಗೊಮ್ಮೆಯೋ ಇರುತ್ತಿದ್ದ ಕುಡಿತದ ಗ್ಯಾಂಗು ಕ್ರಮೇಣ ಪ್ರತಿದಿನವೂ ಎಂಬಂತೆ ಹೆಚ್ಚಾಯಿತು. ಕುಡಿದು ಬಂದು ಸ್ವಸ್ಥ ಮಲಗುವುದಂತೂ ಅಪ್ಪನಿಗೆ ಸಾಧ್ಯವಾಗುತ್ತಿರಲಿಲ್ಲ. ಸಣ್ಣ ಸಣ್ಣ ಕಾರಣಕ್ಕೆ ಜಗಳ ಪ್ರಾರಂಭಿಸಿ ಅದು ಬೆಳೆಯುತ್ತಾ ಹೊಡೆತ, ಬಡಿತ ಚೀರಾಟ, ಗದ್ದಲ ಗಲಾಟೆಯಲ್ಲಿ ಕೊನೆಗೊಳ್ಳುತ್ತಿತ್ತು. ಅಮ್ಮ ಸಹಿಸುವಷ್ಟು ಸಹಿಸಿದಳು. ಒಂದು ದಿನ ಪೋಲೀಸ್ ಕಂಪ್ಲೆಂಟ್ ಕೊಟ್ಟಳು. ಪೋಲೀಸರು ಧಮಕಿ ಹಾಕಿ ಕಳುಹಿಸಿದರೆಂದು ಕಾಣುತ್ತದೆ. ಮತ್ತೆ ಮನೆಯತ್ತ ಮುಖ ಮಾಡಲಿಲ್ಲ. ಯಾರೋ ಒಬ್ಬಳು ಹೆಂಗಸಿನೊಂದಿಗೆ ವಾಸಿಸುತ್ತಾರೆ ಎಂಬ ಸುದ್ದಿ ಸಿಕ್ಕಿತು. ಅಮ್ಮ ಪೀಡೆ ತೊಲಗಿತು ಎಂದು ಅವರ ಗೋಜಿಗೆ ಹೋಗಲಿಲ್ಲ. ಕುಡುಕನಾದರೂ ಒಬ್ಬ ಗಂಡು ಜೀವ ಮನೆಯಲ್ಲಿದ್ದರೆ ಕೆಲವು ಪುಂಡ ಪೋಕರಿಗಳಿಗೆ ಸಲಿಗೆ ತೋರಲು ಧೈರ್ಯ ಬರುತ್ತಿರಲಿಲ್ಲ. ನಾನು ಪಿ.ಯು.ಸಿ.ಯಲ್ಲಿದ್ದೆ. ಆಗ ನಮ್ಮ ನೆರೆಮನೆಗೆ ಆಗಾಗ ಬರುತ್ತಿದ್ದ ಹುಡುಗ ನನ್ನನ್ನು ಬಲೆಗೆ ಬೀಳಿಸಲು ಪ್ರಯತ್ನಿಸಿ ಸಫಲನಾದ. ಕಾಲೇಜಿಗೆ ಚಕ್ಕರ್ ಹಾಕಿ, ಅವನೊಂದಿಗೆ ಸಿನಿಮಾ, ಪಾರ್ಕು ಎಂದು ಸುತ್ತಾಡಿದೆ. ಅವನಿಗೆ ಮೈಸೂರಿನಲ್ಲಿ ದೊಡ್ಡ ವ್ಯಾಪಾರದ ಮಳಿಗೆ ಇದೆಯೆಂದೂ ನನ್ನ ಮುಂದೆ ಚೆನ್ನಾಗಿಯೇ ರೈಲು ಬಿಟ್ಟ ವಿವೇಕಹೀನಳಾಗಿ ನಾನು ಅವನ ಪುಂಗಿಗೆ ಶರಣಾದೆ. ಮೈಸೂರಿನ ಅವನ ಮನೆ ಮತ್ತು ಅಂಗಡಿಗಳನ್ನು ತೋರಿಸುತ್ತೇನೆ. ಮನೆಯವರಿಗೆ ಪರಿಚಯಿಸಿ ಮದುವೆಗೆ ಸಿದ್ಧತೆ ಮಾಡುತ್ತೇನೆ ಎಂದೆಲ್ಲಾ ಹೇಳಿದಾಗ ನನಗೆ ಸ್ವರ್ಗಕ್ಕೆ ಮೂರೇ ಗೇಣು ಎಂಬಂತಾಯಿತು. ಅಪ್ಪನ ಕುಡಿತದಿಂದ ರೋಸಿ ಹೋಗಿದ್ದೆ. ಅಮ್ಮನ ಒದ್ದಾಟಗಳು ಮುಗಿಯುವಂತಿಲ್ಲ ಎಂದೂ ಗೊತ್ತಿತ್ತು. ಇವನು ನನಗೆ ಬಹುವರ್ಣೀಯ ಕನಸುಗಳನ್ನು ಬಿತ್ತತೊಡಗಿದಾಗ ಅವನ ಹಿಂದೆ ಬಾಲದಂತೆ ಹೋದೆ. ಅಲ್ಲಿ ಒಂದು ಹೋಟೆಲಲ್ಲಿ ನನ್ನನ್ನು ಇರಿಸಿದ. ಸ್ವರ್ಗ ಸುಖ ತೋರಿಸಿದ. ಏನೇನೆಲ್ಲಾ ಕೊಡಿಸಿದ, ಕುಡಿಸಿದ, ತಿನ್ನಿಸಿದ. ವಾರದ ಬಳಿಕ ಇನ್ನೊಬ್ಬನನ್ನು ಕರೆ ತಂದು ಇವನು ಇಂದು ರಾತ್ರಿ ನಿನ್ನೊಂದಿಗೆ ಇರುತ್ತಾನೆ. ನೀನು ಅವನು ಹೇಳಿದಂತೆ ಕೇಳಬೇಕು ಎಂದಾಗ ನನಗೆ ನಿಂತ ನೆಲವೇ ಕುಸಿದಂತಾಯಿತು. ಕೂಗಿದೆ, ಬೈದೆ. ನನ್ನನ್ನು ಊರಿಗೆ ಕಳಿಸು ಎಂದು ಕಾಲಿಗೆ ಬಿದ್ದೆ. ಉಹುಂ ಅವನು ಕರಗಲಿಲ್ಲ. ಅವರಿಬ್ಬರೂ ನನ್ನನ್ನು ಬಲಾತ್ಕಾರವಾಗಿ ಮಂಚಕ್ಕೆ ತಳ್ಳಿ ಇಬ್ಬರೂ ಹಿಂಸಿಸಿದರು. ಯಾರಲ್ಲಿ ಹೇಳಲಿ? ಮರುದಿನ ನಾನು ಬದುಕಿದ್ದೇ ಹೆಚ್ಚು. ಸತ್ತರೆ ಚೆನ್ನಾಗಿತ್ತು ಎಂದು ಅನಿಸಿತ್ತು. ಮರುದಿನ ನಾನು ಎದ್ದವಳೇ ಸೀದಾ ಬಸ್‌ಸ್ಟಾಂಡಿಗೆ ಹೋಗಿ ಊರಿನ ಬಸ್ಸು ಹಿಡಿದು ಮರಳಿದೆ. ಮತ್ತೆ ಕಾಲೇಜಿಗೆ ಹೋಗಲೇ ಇಲ್ಲ. ಹೋಗುತ್ತೇನೆಂದು ಅಮ್ಮನಲ್ಲಿ ಸುಳ್ಳು ಹೇಳಿದ್ದೆ. ನನ್ನ ತಮ್ಮ ತಂಗಿಯರಿಗೆ ನಾನು ಬೇರೆಲ್ಲೋ ಸುತ್ತಾಡಿ ಬರುತ್ತೇನೆಂದು ಗೊತ್ತಾಯಿತು. ಎರಡು ತಿಂಗಳಾಗುವಾಗ ನನ್ನ ಹೊಟ್ಟೆಯೊಳಗೆ ತಳಮಳ ಶುರುವಾಗಿ ವಾಕರಿಕೆ ಪ್ರಾರಂಭವಾಯಿತು. ಅಮ್ಮನಿಗೆ ಸಂಶಯ ಬಂತು. ಅಮ್ಮ ಕೂಗಿದರು. ಬೈದರು. ಸತ್ಯ ಹೇಳಬೇಕಾಯಿತು. ಆದರೂ ಅವರು ಕೂಡಲೇ ಆಸ್ಪತ್ರೆಗೆ ಒಯ್ದು ಗರ್ಭ ಇಳಿಸಿದರು. ಇಲ್ಲಿಗೆ ನನ್ನ ಬದುಕಿನ ಒಂದು ಅಧ್ಯಾಯ ಕೊನೆಗೊಂಡಿತು.

ಮುಂದೆ ತಿಂಗಳುಗಳ ಕಾಲ ಮನೆಯಲ್ಲೇ ಇದ್ದೆ. ಆಗ ಯಾವ ಮಾಯಕ ದಲ್ಲೋ ನಮ್ಮ ನೆರೆಮನೆಯಲ್ಲಿ ಅದೇ ಕಟುಕ ಮತ್ತೆ ಕಾಣಿಸಿಕೊಂಡ. ಮನೆಯಲ್ಲಿ ಯಾರು ಇಲ್ಲದಾಗ ಬಂದ. ನಾನು ರೌದ್ರಾವತಾರ ತಾಳಿ ಅವನನ್ನು ಮನೆಯೊಳಗೆ ಕಾಲಿಡದಂತೆ ಎಚ್ಚರಿಸಿದೆ. ಅವನ ವಿರುದ್ಧ ಪೋಲೀಸ್ ಕಂಪ್ಲೆಂಟ್ ಕೊಡುತ್ತೇನೆಂದು ಹೆದರಿಸಿದೆ. ಅವನು ನಿರ್ವಿಕಾರವಾಗಿ ನಾನೇ ಕಂಪ್ಲೆಂಟ್ ಕೊಡುತ್ತೇನೆ. ನೀನು ನನ್ನ ಚೈನ್ ಕದ್ದಿದ್ದೆ ಎಂದು ಹೇಳುತ್ತೇನೆ. ನಿನ್ನ ಮನೆಗೆ ಪೋಲೀಸರು ಬರುವಂತೆ ಮಾಡುತ್ತೇನೆ ಎಂದು ಬೆದರಿಸಿದ. ಅವನ ಚೈನ್ ನನಗೆ ಕೊಟ್ಟದ್ದು ನನ್ನಲ್ಲಿದ್ದುದ್ದು ಹೌದು. ಇವನಿಂದ ಪಾರಾಗುವ ಉಪಾಯವಿಲ್ಲದೆ ಕಂಗಾಲಾದೆ. ನೀನು ಹೆಚ್ಚು ಹಾರಾಡಬೇಡ. ಪತಿವ್ರತೆಯಾಗುವ ಕನಸು ಕಾಣಬೇಡ, ನಾನು ಹೇಳಿದ ಹಾಗೆ ಕೇಳು. ನಿನಗೆ ಸುಖವಾಗಿ ಬದುಕುವ ದಾರಿ ತೋರಿಸುತ್ತೇನೆ ಎಂದು ಹೇಳಿದ. ಆ ಬಳಿಕ ಅವನೇ ನನ್ನ ತಲೆಹಿಡುಕನಾಗಿ ಪ್ರತಿದಿನ ಗಿರಾಕಿಗಳನ್ನು ನಿಶ್ಚಿತ ಸ್ಥಳದಲ್ಲಿ ಭೇಟಿಯಾಗುವಂತೆ ವ್ಯವಹಾರ ಕುದುರಿಸುತ್ತಿದ್ದ. ಮನೆಯಲ್ಲಿದ್ದು ಈ ಕೆಲಸ ಮಾಡಿದರೆ ನನ್ನ ತಮ್ಮ ತಂಗಿಯರ ಜೀವನಕ್ಕೆ ತೊಂದರೆಯಾದೀತೆಂದು ಒಂದು ದಿನ ಮನೆಯಲ್ಲಿ ಹೇಳದೆ ಹೊರಗೆ ಬಂದು ಪಟ್ಟಣದ ಒಂದು ಮೂಲೆಯಲ್ಲಿ ಸಣ್ಣ ಬಾಡಿಗೆ ಮನೆಯಲ್ಲಿ ವಾಸಿಸತೊಡಗಿದೆ. ಪ್ರತಿದಿನ ಬೈಕ್‌, ಸ್ಕೂಟರ್‌ಗಳ ಸಾಲನ್ನು ಗಮನಿಸಿದ ಯಾರೋ ಪೋಲೀಸರಿಗೆ ದೂರು ಕೊಟ್ಟರೆಂದು ಕಾಣುತ್ತದೆ. ಒಂದು ದಿನ ಪೋಲೀಸರ ದಂಡು ಮನೆಯನ್ನು ರೈಡ್ ಮಾಡಿ ಎಲ್ಲರನ್ನು ಬಂಧಿಸಿ ಜೈಲಿಗಟ್ಟಿದರು. ಆಗ ಅವನೇ ನನ್ನನ್ನು ಬಿಡಿಸಿ ತಂದ. ಕಳಕೊಂಡ ನಷ್ಟವನ್ನು ಭರಿಸಲು ಹೆಚ್ಚು ಹೆಚ್ಚು ಗಿರಾಕಿಗಳೊಂದಿಗೆ ವ್ಯವಹರಿಸುವಂತೆ ವ್ಯವಸ್ಥೆ ಮಾಡುತ್ತಿದ್ದ. ಮಕ್ಕಳಾಗದಂತೆ ಸಾಕಷ್ಟು ಮುಂಜಾಗ್ರತೆ ವಹಿಸಿದರೂ ಒಂದೆರಡು ಸಲ ಗರ್ಭ ನಿಂತಿತ್ತು. ನನ್ನಂತಹ ಪಾಪಿ ಬದುಕಿಗೆ ಮಕ್ಕಳೊಂದು ಕೇಡು ಎಂದು ಭಾವಿಸಿ ನಾನೇ ಅದನ್ನು ತೆಗೆಸಿದೆ. ಭವಿಷ್ಯದ ಬಗ್ಗೆ ಯೋಚಿಸಿದರೆ ಚಿಂತೆಯಾಗುತ್ತದೆ. ಮರುಕ್ಷಣವೇ ನನಗೆ ನಾನೇ ಧೈರ್ಯ ತಾಳುತ್ತೇನೆ. ಕಳೆದ ಮೂವತ್ತು ವರ್ಷಗಳಿಂದ ವೃತ್ತಿಯಲ್ಲಿದ್ದೇನೆ. ಎಂತಹ ಆಪತ್ತುಗಳು ಎದುರಾದರೂ ಅದನ್ನು ನಾನೇ ಎದುರಿಸಬೇಕಲ್ಲವೇ? ನನ್ನ ಹೆತ್ತಮ್ಮನನ್ನು ಸೋದರ ಸೋದರಿಯರನ್ನು ಮತ್ತೆ ಎಂದೂ ನಾನು ಭೇಟಿಯಾಗಲಿಲ್ಲ. ಆಗುವುದೂ ಇಲ್ಲ. ನನ್ನಿಂದಾಗಿ ಅವರ ಬದುಕಿಗೆ ಕಳಂಕ ಹಚ್ಚುವುದು ಬೇಡವೆಂದು ನಿರ್ಧರಿಸಿದ್ದೇನೆ. ಇಷ್ಟು ವರ್ಷದ ನನ್ನ ವೃತ್ತಿಜೀವನದಲ್ಲಿ ಉತ್ತಮ ಸಂಸ್ಕಾರವುಳ್ಳ ಮಾನವೀಯತೆಯುಳ್ಳ ಗಿರಾಕಿಗಳನ್ನು ಕಂಡಿದ್ದೇನೆ. ಹಾಗೆಯೇ ಅತ್ಯಂತ ಕ್ರೂರಿಗಳನ್ನೂ ಕಂಡಿದ್ದೇನೆ. ಒಂದು ವಿಶೇಷ ಸಂಗತಿ ನಿಮಗೆ ಹೇಳಬೇಕು. ನನ್ನ ಕೆಲವು ಹಳೆಯ ಗಿರಾಕಿಗಳು ಈಗಲೂ ಒಮ್ಮೊಮ್ಮೆ ನನ್ನಲ್ಲಿ ಪ್ರೀತಿಯಿಂದ ಮಾತನಾಡುವುದುಂಟು. ನನ್ನ ಲೈಂಗಿಕ ಸೇವೆಯಾಚೆಗೂ ಕೆಲವರು ನನ್ನೊಂದಿಗೆ ಒಂದು ಬಾಂಧವ್ಯವನ್ನಿರಿಸಿಕೊಂಡಿದ್ದಾರೆ. ಅವರೊಂದಿಗೆ ಮಾತನಾಡಿದಾಗ ನನಗೆ ನಾನೇ ಸಾಂತ್ವನ ಮಾಡಿಕೊಂಡಂತಾಗುತ್ತದೆ.

ನೇತ್ರಾವತಿ: ನನ್ನದು ಮಧ್ಯಮ ವರ್ಗದ ಕುಟುಂಬ. ಮಹಾನಗರದಲ್ಲಿ ವಾಸ. ಅಪ್ಪ ಮೆಕ್ಯಾನಿಕಲ್‌ ಇಂಜಿನಿಯರ್ ಆಗಿದ್ದರು. ಸ್ವಂತ ಗ್ಯಾರೇಜ್ ಇತ್ತು. ನಾವಿಬ್ಬರು ಮಕ್ಕಳು. ನಾನು ಪದವಿ ಮುಗಿಸಿ ಮನೆಗೆ ಸಮೀಪದ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೆ. 24 ವರ್ಷದಲ್ಲಿ ಮದುವೆಯಾಯಿತು. ಗಂಡ ಬೆಂಗಳೂರಿನಲ್ಲಿ ಸಣ್ಣ ಉದ್ಯಮಿಯಾಗಿದ್ದ, ಗಂಡನ ಮನೆಯಲ್ಲಿ ಅವರ ಇಬ್ಬರು ಮೈದುನಂದಿರೂ ಇದ್ದರು. ಅವರು ಕಾಲೇಜಿನಲ್ಲಿ ಓದುತ್ತಿದ್ದರು. ಮದುವೆಯಾದ ಕೂಡಲೇ ಕೆಲಸಕ್ಕೆ ರಾಜೀನಾಮೆ ನೀಡಿದೆ. ಬೆಂಗಳೂರಲ್ಲಿ ಯಾವುದಾದರೂ ಕೆಲಸಕ್ಕೆ ಸೇರಬೇಕೆಂದು ನನಗೆ ಇಚ್ಛೆಯಾಯಿತು. ಮದುವೆಯಾಗಿ ಮೂರು ವರ್ಷ ನೆಮ್ಮದಿಯಿಂದ ಇದ್ದೆ. ಯಾರ ಶಾಪ ತಟ್ಟಿತೋ ಗೊತ್ತಿಲ್ಲ. ಒಂದು ದಿನ ನನ್ನ ಗಂಡ ಹೃದಯಾಘಾತದಿಂದ ತೀರಿಹೋದ. ನನ್ನ ಮಗನಿಗೆ ಆಗ ಒಂದು ವರ್ಷ. ಗ್ಯಾರೇಜಿಗಾಗಿ ಗಂಡ ಸಾಲ ಮಾಡಿದ್ದ. ಸಾಲಗಾರರು ಆಗಾಗ ಮನೆಗೆ ಬರುತ್ತಿದ್ದರು. ಅವರನ್ನು ನಿಭಾಯಿಸುವುದೇ ಕಷ್ಟವಾಯಿತು. ಮೈದುನಂದಿರಾಗಲೀ, ಅತ್ತೆ ಮಾವಂದಿರಾಗಲೀ ಸಾಲದ ಹೊರೆಯನ್ನು ಹೊರಲಿಲ್ಲ. ಗೆಳೆಯರು ಸಾಲದ ಹಣದ ಜೊತೆಗೆ ನನ್ನನ್ನು ದುರುಪಯೋಗ ಪಡಿಸಿಕೊಂಡರು. ಮನೆಯಲ್ಲಿ ಸಂಶಯದ ಹೊಗೆ ಆವರಿಸತೊಡಗಿತು. ಗ್ಯಾರೇಜಿನ ಮಾಲಕತ್ವವನ್ನು ಮೈದುನಂದಿರು ಬಯಸಿದರು. ಗಂಡನ ಹೆಸರಿನಲ್ಲಿದ್ದ ಎಲ್ಲಾ ದಾಖಲೆಗಳಲ್ಲೂ ಅವರ ತಾಯಿಯ ಹೆಸರು ನಮೂದಿಸಲಾಗಿತ್ತೇ ಹೊರತು ನನ್ನ ಹೆಸರು ಇರಲಿಲ್ಲ. ಮೂರು ವರ್ಷದ ದಾಂಪತ್ಯಕ್ಕೆ ಮೂರು ಕಾಸಿನ ಬೆಲೆಯೂ ಇರಲಿಲ್ಲ. ಸೀದಾ ಗಂಡನ ಮನೆ ಬಿಟ್ಟು ತವರಿಗೆ ಬಂದೆ. ಇಲ್ಲಿ ನನ್ನ ಬಂಧುಗಳು ನನ್ನ ಮೂರ್ಖತನಕ್ಕೆ ನಿಂದಿಸಿದರು. ಗಂಡನ ಉದ್ಯಮವನ್ನು ಮೇಲ್ವಿಚಾರಣೆ ಮಾಡಿ ಗಂಡನ ಮನೆಯಲ್ಲೇ ಇರಬೇಕಿತ್ತು ಎಂದು ಸಲಹೆ ನೀಡಿದರು. ಸಾಲಗಾರರ ಪೀಡೆ ತಾಳಲಾರದೆ, ಅದನ್ನು ನಾನು ಅನುಭವಿಸಿದ ಹಿಂಸೆಯನ್ನು ಹೇಗೆ ಹೇಳುವುದು? ಹೇಳಿದರೆ ನಂಬಲಾರರು. ನನಗೂ ನನ್ನ ಮಗನಿಗೂ ಏನೂ ಸಿಗಬಾರದೆಂದು ಅವರು ಮೊದಲೇ ನಿರ್ಧರಿಸಿದ್ದರು. ಹಾಗೆಂದು ಹೇಳಿದ ಮೇಲೆ ಅನಾಥೆಯಾಗಿ ಪರವೂರಿನಲ್ಲಿರುವುದಕ್ಕಿಂತ ನನಗೆ ಪರಿಚಯದ ತವರಿನಲ್ಲಿ ಇರುವುದು ಕ್ಷೇಮವೆಂದು ಭಾವಿಸಿದೆ. ಅಷ್ಟು ಹೊತ್ತಿಗಾಗಲೇ ಗಂಡನ ಮನೆಯವರು ನನ್ನ ಬಗ್ಗೆ ನನ್ನ ಶೀಲದ ಬಗ್ಗೆ ಕತೆ ಕಟ್ಟಿ ಪ್ರಚಾರವನ್ನು ಪ್ರಾರಂಭಿಸಿದ್ದರು. ಎಲ್ಲಿವರೆಗೆಂದರೆ ಗಂಡನಿಗೆ ಹೃದಯಾಘಾತವಾದದ್ದೂ ನನ್ನ ಕಾರಣದಿಂದಲೇ ಎಂದು ಕತೆ ಕಟ್ಟಿ ಹೇಳತೊಡಗಿದರು. ವಿಚಿತ್ರವೆಂದರೆ ಈ ಕತೆಯನ್ನು ನನ್ನ ತವರಿನವರು ನಂಬಿದರು. ತವರುಮನೆ ನನ್ನ ಹಾದಿಯಲ್ಲಿ ಮುಳ್ಳನ್ನೇ ಬಿತ್ತಿತ್ತು. ಗಂಡನ ಮನೆಗೇ ಹೋಗಬೇಕೆಂಬ ಒತ್ತಾಯ. ತವರಿನಲ್ಲಿ ಜಾಗವಿಲ್ಲವೆಂಬ ಬೆದರಿಕೆಗೆ ರೋಸಿ ಹೋಗಿ ಮನೆ ಬಿಟ್ಟೆ, ಸಣ್ಣ ಬಾಡಿಗೆ ಮನೆ ಮಾಡಿದೆ. ಶೀಲಗೆಟ್ಟವಳೆಂಬ ಬಿರುದು ಹೇಗೂ ಇದೆ. ಇದನ್ನು ಅಳಿಸಲು ಸಾಧ್ಯವಿಲ್ಲ. ಆದುದರಿಂದ ಈ ವೃತ್ತಿಯನ್ನೇ ಆಯ್ಕೆ ಮಾಡಿದೆ. ನನ್ನ ಪರಿಚಯದ ಓರ್ವ ಮಹಿಳೆ ಈ ವೃತ್ತಿಯಲ್ಲಿ ನಿರತರಾದದ್ದು ನನಗೆ ಗೊತ್ತಿತ್ತು. ಅವರನ್ನು ಭೇಟಿಯಾಗಿ ಅವಕಾಶಕ್ಕಾಗಿ ಕೇಳಿಕೊಂಡೆ. ಆಗ ಮಗುವಿಗೆ ಮೂರು ವರ್ಷ, ಎಲ್ಲಿ ಬಿಟ್ಟು ಹೋಗುವುದೆಂದು ತಿಳಿಯದೆ ನನ್ನ ಜೊತೆಗೇ ಒಯ್ಯುತ್ತಿದ್ದೆ. ಮಗುವಿನ ಸಮ್ಮುಖದಲ್ಲೇ ನಾನು ವೃತ್ತಿಯಲ್ಲಿ ನಿರತಳಾಗುತ್ತಿದ್ದೆ. ಐದಾರು ವರ್ಷ ಕಳೆದ ಮೇಲೆ ಚಾವಡಿಯಲ್ಲಿ ಅವನನ್ನು ಬಿಟ್ಟು ನಾನು ಕೋಣೆ ಸೇರುತ್ತಿದ್ದೆ. ಆಟದ ಸಾಮಾನುಗಳನ್ನು ತೆಗೆದುಕೊಟ್ಟರೆ ಮೌನವಾಗಿ ಅವನೊಬ್ಬನೇ ಆಡುತ್ತಿದ್ದ. ಕೆಲವೊಮ್ಮೆ ನಾನು ವೃತ್ತಿನಿರತಳಾಗಿದ್ದಾಗಲೇ ಕರೆದು ಕೂಗಿ ಕಿರಿಕಿರಿ ಮಾಡಿದ್ದೂ ಇದೆ. ಆದುದರಿಂದ ಹಗಲಿನ ಗಿರಾಕಿಗಳನ್ನು ಕಡಿಮೆ ಮಾಡಿ ರಾತ್ರಿಯ ಗಿರಾಕಿಗಳನ್ನು ಮಾತ್ರ ಒಳಗೆ ಸೇರಿಸುತ್ತಿದ್ದೆ. ಮಗನನ್ನು ಬಿಟ್ಟಿರುವುದು ನನ್ನಿಂದ ಸಾಧ್ಯವಿರಲಿಲ್ಲ. ಏಳು ವರ್ಷದವರೆಗೂ ಮನೆಯಲ್ಲೇ ಇದ್ದ. ನಾನೇ ಕಲಿಸಲು ಪ್ರಾರಂಭಿಸಿದ್ದೆ. ಆದರೆ ಶಾಲೆಗೆ ಸೇರಿಸದೆ ಹೀಗೆ ಒಬ್ಬನೇ ಮನೆಯಲ್ಲಿರುವುದು ಮಗುವಿನ ಮಾನಸಿಕ, ದೈಹಿಕ ಬೆಳವಣಿಗೆಯ ಮೇಲೆ ದುಷ್ಪರಿಣಾಮ ಬೀರುತ್ತದೆಂದು ಸ್ವಯಂ ಸೇವಾ ಸಂಸ್ಥೆಯವರು ಬಂದು ಆಗಾಗ ನನ್ನನ್ನು ಎಚ್ಚರಿಸುತ್ತಿದ್ದರು. ಮಗನ ಮೇಲಿನ ಮೋಹವೋ ಅಥವಾ ಅವನು ದೂರ ಹೋಗುತ್ತಾನೆಂಬ ಭಯವೋ ಗೊತ್ತಿಲ್ಲ. ಅವನನ್ನು ಬಿಟ್ಟಿರುವುದೆಂದರೆ ನನಗೆ ದೇಹದೊಳಗೆ ಒಂದು ರೀತಿಯ ತಳಮಳ, ಸಂಕಟವುಂಟಾಗುತ್ತಿತ್ತು. ಅಂತೂ ಅವರು ಒತ್ತಾಯದಿಂದ ಶಾಲೆಗೆ ಸೇರಿಸಿದರು. ಈಗ ನನಗನಿಸುತ್ತಿದೆ ಅವನನ್ನು ನನ್ನಿಂದ ದೂರ ಇರಿಸುವುದೇ ಒಳ್ಳೆಯದು ಎಂದು. ಆದುದರಿಂದ ಹೈಸ್ಕೂಲಿಗೆ ಬಂದ ಮೇಲೆ ದೂರದ ಶಾಲೆಗೆ ಸೇರಿಸಿ ಅಲ್ಲಿನ ಹಾಸ್ಟೆಲಿನಲ್ಲಿ ಇರಿಸಬೇಕೆಂದು ನಿಶ್ಚಯಿಸಿದ್ದೇನೆ.

ಈ ವೃತ್ತಿಗೆ ಸೇರಿದ ಮೇಲೆ ಕೆಲವು ಕೆಟ್ಟ ಚಟಗಳನ್ನು ಅಂಟಿಸಿಕೊಂಡಿದ್ದೇನೆ. ಮಗನಿಗೆ ಆ ಚಟಗಳು ಅಂಟಿದರೆ ನನ್ನ ಮತ್ತು ಅವನ ಭವಿಷ್ಯವೇ ಕೆಟ್ಟು ಹೋಗುತ್ತದೆಂದು ನನಗೆ ಮನವರಿಕೆಯಾಗಿದೆ. ನಿಜ ಹೇಳಬೇಕೆಂದರೆ ತವರುಮನೆ ಗಂಡನ ಮನೆಗಳನ್ನು ಧಿಕ್ಕರಿಸಿ ಬಂದವಳು ಹೀಗೊಂದು ಅಡ್ಡದಾರಿಯಲ್ಲಿ ಸಾಗುತ್ತೇನೆಂದು ಯಾರೂ ಯೋಚಿಸಿರಲಿಲ್ಲ. ನಾನೇ ಇಲ್ಲಿ ಖಾಯಂ ಆಗಿ ಈ ವೃತ್ತಿ ನಿರತಳಾಗುತ್ತೇನೆಂದು ಕಲ್ಪಿಸಿರಲಿಲ್ಲ. ಒಂದು ರೀತಿಯಲ್ಲಿ ಹಠಕ್ಕೆ ಬಿದ್ದು ಆ ಕ್ಷಣಕ್ಕೆ ಈ ವೃತ್ತಿಗೆ ಸೇರುವುದೆಂದು ನಿರ್ಧರಿಸಿದೆನಾದರೂ ಇದರಲ್ಲೇ ಮುಂದುವರಿಯುತ್ತೇವೆಂದು ನಾನು ಯೋಚಿಸಿರಲಿಲ್ಲ. ಹಣದ ಅಗತ್ಯವಿತ್ತು. ಅದಕ್ಕಾಗಿ ಕೆಲವು ದಿನ ಸಂಪಾದನೆ ಮಾಡೋಣವೆಂದೇ ಯೋಚಿಸಿದ್ದೆ. ಒಮ್ಮೆ ನೀರಲ್ಲಿ ಮುಳುಗಿದವನಿಗೆ ಚಳಿ ಎಲ್ಲಿಯದು? ಈ ವೃತ್ತಿಯಲ್ಲಿ ಮುಳುಗಿದ ಮೇಲೆ ಮೇಲೆದ್ದು ಬರುವುದು ತುಂಬಾ ಕಷ್ಟವೆಂದು ನನಗೆ ಗೊತ್ತಾಯಿತು. ಬಂದರೂ ವಿಧವೆಯಾದ ನನ್ನನ್ನು ನೆಮ್ಮದಿಯಿಂದ ಸಮಾಜ ಬದುಕಲು ಬಿಡುತ್ತಿರಲಿಲ್ಲ. ಶಿಕ್ಷಕಿಯ ಕೆಲಸ ಹುಡುಕುವಷ್ಟು ತಾಳ್ಮೆ ಇರಲಿಲ್ಲ. ತುರ್ತಾಗಿ ಹಣದ ಅಗತ್ಯವಿತ್ತು. ಆದುದರಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡೆ. ಈಗ ನಾನು ವಾಸವಾಗಿರುವ ಮನೆ ನನ್ನ ಈ ವೃತ್ತಿಯಿಂದಲೇ ಗಳಿಸಿದ್ದು, ನನಗೆ ನನ್ನ ಮಗನ ಭವಿಷ್ಯವು ಉಜ್ವಲವಾಗಬೇಕೆಂಬ ಹಂಬಲವಿದೆ. ಅವನು ಒಂದು ನೆಲೆಗೆ ಬಂದ ಮೇಲೆ ನಾನು ವೃತ್ತಿಯಿಂದ ನಿವೃತ್ತಳಾಗುತ್ತೇನೆಂದು ನಿರ್ಧರಿಸಿದ್ದೇನೆ.

ಫಲ್ಗುಣಿ: ನಾವಿದ್ದದ್ದು ಪಟ್ಟಣದೊಳಗೇ. ಒಂದು ಮೂಲೆಯಲ್ಲಿರುವ ಕಾಲೊನಿಯಲ್ಲಿ, ಕಾರ್ಮಿಕರೇ ವಾಸಿಸುತ್ತಿದ್ದದ್ದು. ಹೆಚ್ಚಿನವರು ಕೂಲಿ ಕಾರ್ಮಿಕರು, ಸಣ್ಣ ಸಣ್ಣ ಮನೆಗಳು ಜೋಪಡಿ ಮನೆಗಳೂ ಇದ್ದುವು. ನಾನು ಸಮೀಪದ ಸರಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯವರೆಗೆ ಹೋಗಿದ್ದೆ. ಮತ್ತೆ ಅಮ್ಮ ಕೆಲಸಕ್ಕೆ ಹೋಗಲು ಪ್ರಾರಂಭಿಸಿದ ಕಾರಣ ನನ್ನನ್ನು ಶಾಲೆ ಬಿಡಿಸಿ ತಮ್ಮ ಮತ್ತು ತಂಗಿಯರನ್ನು ನೋಡಿಕೊಳ್ಳುವುದಕ್ಕಾಗಿ ಶಾಲೆ ಬಿಡಿಸಿದರು. ನನ್ನ ದೇಹದ ಬೆಳವಣಿಗೆ ನನ್ನ ವಯಸ್ಸಿಗಿಂತ ಹೆಚ್ಚಾಗಿತ್ತು. ಗಟ್ಟಿ ಮುಟ್ಟಾಗಿದ್ದೆ. ಬೇಗ ಪ್ರಾಯಕ್ಕೆ ಬಂದೆ. ಮನೆಯಲ್ಲಿ ಕೆಲಸ ಮಾಡುತ್ತಾ ತಮ್ಮ ತಂಗಿಯರನ್ನು ಆರೈಕೆ ಮಾಡುತ್ತಾ ಇದ್ದೆ. ನೆರೆಮನೆಯ ಹುಡುಗರು ಮನೆಗೆ ಬಂದು ನನ್ನನ್ನು ಏನೇನೋ ಆಸೆ ಹುಟ್ಟಿಸಿ ಕರೆಯುತ್ತಿದ್ದರು. ಅಶ್ಲೀಲವಾದ ಮಾತುಗಳನ್ನಾಡುತ್ತಿದ್ದರು. ಅವರಲ್ಲಿ ಒಬ್ಬ ಹುಡುಗ ತುಂಬಾ ಒಳ್ಳೆಯವ, ಅವನ ಬಗ್ಗೆ ನನಗೆ ಪ್ರೀತಿಯಿತ್ತು. ಅವನೊಬ್ಬನೇ ಕರೆದರೆ ನಾನು ಹೋಗುತ್ತಿದ್ದೆ. ತುಂಬಾ ಮಂದಿ ಹುಡುಗರು ಇದ್ದುದರಿಂದ ನಾನು ಅವರು ಕರೆದಾಗ ಹೋಗಲು ಹಿಂಜರಿದೆ. ಹೀಗೆ ನಾನು ಆ ಹುಡುಗನ ಬಗ್ಗೆ ಕನಸು ಕಾಣುತ್ತಾ ದಿನ ಕಳೆಯುತ್ತಿರುವಾಗ ಒಮ್ಮೆ ನನ್ನ ಚಿಕ್ಕಪ್ಪ ಮನೆಗೆ ಬಂದ. ಅದೂ ಇದೂ ಮಾತನಾಡಿ ನನ್ನನ್ನು ಒಳಗೆ ಕರೆದು ಬಾಗಿಲು ಹಾಕಿದ. ಮಾಡಬಾರದ್ದನ್ನು ಮಾಡಿದ. ಬೊಬ್ಬೆ ಹಾಕದಂತೆ ಬೆದರಿಕೆ ಹಾಕಿದ. ಬಾಯಿ ಮುಚ್ಚಿಸಿದ. ಯಾರಲ್ಲಾದರೂ ಹೇಳಿದರೆ ನಿನ್ನ ತಮ್ಮನನ್ನು ಕೊಂದು ಬಿಡುತ್ತೇನೆ ಎಂದು ಚೂರಿ ತೋರಿಸಿದ. ನನ್ನ ನೋವನ್ನು ಯಾರಲ್ಲೂ ಹೇಳಲಾಗದೆ ನಾನು ಹೆಣದಂತೆ ಬದುಕಿದೆ. ಎರಡು ತಿಂಗಳಾಗುವಾಗ ನನಗೆ ವಾಂತಿ ಪ್ರಾರಂಭವಾಯಿತು. ಅಮ್ಮ ಕಷಾಯ ಕುಡಿಸಿದರು. ಗರ್ಭ ಬೆಳೆಯಿತು. ಹೊಟ್ಟೆ ಕಾಣಲು ತೊಡಗಿದಾಗ ಅಮ್ಮ ಗದರಿಸಿ ಬೈದು ಕೇಳಿದಳು. ನಾನು ಸತ್ಯ ಹೇಳಿದೆ. ಅಪ್ಪ ಗರ್ಭ ತೆಗೆಸಲು ಹೇಳಿದರು. ಅಮ್ಮ ನನ್ನನ್ನು ಆಸ್ಪತ್ರೆಗೆ ಕರೆದೊಯ್ದುರು. ಅಲ್ಲಿ ಡಾಕ್ಟರ್ ಗರ್ಭ ತೆಗೆಸಲು ಸಾಧ್ಯವಿಲ್ಲವೆಂದು ಹಿಂದೆ ಕಳಿಸಿದರು. ಚಿಕ್ಕಪ್ಪನ ಬಗ್ಗೆ ಪೋಲಿಸ್ ಸ್ಟೇಶನ್‌ನಲ್ಲಿ ದೂರು ಕೊಡುವುದೆಂದು ತಂದೆ ಅಬ್ಬರಿಸಿದರು. ಅಮ್ಮ ತಡೆದರು. ನನ್ನನ್ನು ದೂರದ ಒಂದು ಆಶ್ರಮದಲ್ಲಿ ಇರಿಸಿದರು. ಹೆರಿಗೆಯಾದ ಮೇಲೆ ಮಗುವನ್ನು ಅಲ್ಲೇ ಬಿಟ್ಟು ಮನೆಗೆ ಕರೆತಂದರು. ಈಗ ನನಗೆ ಬದುಕು ಅಸಹನೀಯವಾಗತೊಡಗಿತು. ಹೊರಗೆ ಹೋಗುವಂತಿಲ್ಲ. ಯಾರನ್ನೂ ಮಾತನಾಡಿಸುವಂತಿಲ್ಲ. ಒಂದು ರೀತಿಯ ಜೈಲೇ. "ಊರಲ್ಲಿ ತಲೆ ಎತ್ತಿ ನಡೆಯುವಂತಿಲ್ಲ. ನಮ್ಮ ಮಾನ ಹರಾಜು ಹಾಕಿದಳು. ಇನ್ನು ಇವಳನ್ನು ಮದುವೆ ಮಾಡಿ ಕೊಡುವಂತಿಲ್ಲ. ಯಾರು ಮದುವೆಯಾಗುತ್ತಾರೆ" ಹೀಗೆ ಅಪ್ಪ ಪ್ರತಿದಿನ ಮನೆಯಲ್ಲಿ ಸಹಸ್ರನಾಮಾರ್ಚನೆ ಮಾಡುತ್ತಿದ್ದರು. ಆದರೆ ಒಮ್ಮೆಯೂ ಚಿಕ್ಕಪ್ಪನಿಂದಾಗಿ ಹೀಗಾಯ್ತು ಎಂಬ ಒಂದು ಶಬ್ದವೂ ಅವರ ಬಾಯಿಯಿಂದ ಬರಲಿಲ್ಲ. ಕಚ್ಚೆ ಹರುಕ ಗಂಡಸರ ಕತೆಗಳನ್ನು ನಾನು ಬಾಲ್ಯದಿಂದಲೇ ಕೇಳುತ್ತಾ ಬೆಳೆದವಳು. ಹೆಣ್ಣಿನ ಬುದ್ಧಿ ಸರಿಯಲ್ಲ ಎಂದು ಆರೋಪ ಹೊರಿಸುತ್ತಾರೆಯೇ ವಿನಹ ಬಲಾತ್ಕಾರ ಮಾಡಿದ ಪಾಪಿ ಗಂಡಸರು ರಾಜಾರೋಷವಾಗಿ ತಲೆ ಎತ್ತಿ ತಿರುಗುತ್ತಿದ್ದರು. ಚಿಕ್ಕಪ್ಪನನ್ನು ಎಲ್ಲಾದರೂ ಕಂಡರೆ ಸಿಗಿದು ತೋರಣ ಕಟ್ಟಬೇಕು ಎಂಬಷ್ಟು ರೋಷ ನನ್ನಲ್ಲೂ ಉಕ್ಕುತ್ತಿತ್ತು. ನನ್ನ ಈ ಪರಿಸ್ಥಿತಿಯನ್ನು ಅರಿತ ವೃತ್ತಿನಿರತ ಲೈಂಗಿಕ ಕಾರಕರ್ತೆಯೊಬ್ಬರು ಒಂದು ದಿನ ನನ್ನ ಮನೆಗೆ ಬಂದರು. ಯಾರೂ ಇಲ್ಲದ ಸಮಯ ನೋಡಿ ನನ್ನನ್ನು ಭೇಟಿಯಾಗಿ ನನಗೊಂದು ಮೊಬೈಲ್ ಕೊಟ್ಟು ಅದನ್ನು ಉಪಯೋಗಿಸುವ ರೀತಿಯನ್ನು ಕಲಿಸಿಕೊಟ್ಟರು. ಪಟ್ಟಣದಲ್ಲಿ ಶ್ರೀಮಂತರೊಬ್ಬರ ಮನೆಯಲ್ಲಿ ಕೆಲಸಕ್ಕೆ ಸೇರಿದ್ದೇನೆಂದೂ ತಿಂಗಳಿಗೆ ಹತ್ತು ಸಾವಿರ ಸಂಬಳವೆಂದೂ ನಿಗದಿಯಾಗಿದೆಯೆಂದೂ ಮನೆಯವರಿಗೆ ತಿಳಿಸಲು ಹೇಳಿದರು. ಇಲ್ಲಿಂದ ನನ್ನ ಲೈಂಗಿಕ ವೃತ್ತಿ ಪ್ರಾರಂಭವಾಯಿತು. ಅಪ್ಪ ಅಮ್ಮ ಮೊದಲು ಸಮ್ಮತಿಸಲಿಲ್ಲ. ಅದರೆ 10 ಸಾವಿರ ಸಂಬಳವೆಂದಾಗ ಮಗಳ ಅದೃಷ್ಟದ ಬಾಗಿಲು ತೆರೆಯಿತೆಂದೇ ಭಾವಿಸಿದರು.

ಪ್ರತಿದಿನ ಶೃಂಗಾರ ಮಾಡಿ ಹೊರಟು ಹೋಗುತ್ತಿದ್ದೆ. ಮೊಬೈಲ್ ಮೂಲಕ ಗಿರಾಕಿಗಳನ್ನು ದೊರಕಿಸಿ ಕೊಡುವ ಕೆಲಸವನ್ನು ಅವರು ಮಾಡುತ್ತಿದ್ದರು. ಅವರಿಗೆ ತಪ್ಪದೆ ಕಮಿಶನ್ ಸಂದಾಯ ಮಾಡುತ್ತಿದ್ದೆ. ಕೆಲವೊಮ್ಮೆ ಹೋಟೇಲು, ಕೆಲವೊಮ್ಮೆ ಮನೆ, ಕೆಲವೊಮ್ಮೆ ಸಿಕ್ಕಿದ ಓಣಿಮೂಲೆ, ಪಾರ್ಕ್‌ಗಳ ಮೂಲೆಗಳಲ್ಲಿ ಗಿರಾಕಿಗಳಿಗೆ ಸೇವೆ ಸಲ್ಲಿಸಿದ್ದೂ ಇದೆ. ದಿನಕ್ಕೆ ಐದಾರು ಮಂದಿಯನ್ನು ತೃಪ್ತಿಪಡಿಸಿದ್ದೂ ಇದೆ. ಪೊಲೀಸಿನವರು ನನ್ನ ಮೇಲೆ ಕಣ್ಣಿಡುವಷ್ಟು ಪ್ರಸಿದ್ಧಳಾದೆ. ಒಂದೆರಡು ಸಲ ಪೊಲೀಸ್ ಠಾಣೆಗೆ ಒಯ್ದು ಬೆತ್ತದ ರುಚಿ ತೋರಿಸಿ ಅವರಿಗೆ ದಕ್ಷಿಣೆ ಕೊಟ್ಟೇ ಹೊರಗೆ ಬಂದಿದ್ದೆ. ನನ್ನ ಮೈಯಲ್ಲಿ ಕೈಯಲ್ಲಿದ್ದುದೆಲ್ಲವನ್ನೂ ಸೆಳೆದಿಟ್ಟುಕೊಂಡರು. ಅವರ ಭಯದಿಂದಲೇ ನಾನು ಸಂತೆಯ ಫ್ಯಾನ್ಸಿ ಆಭರಣಗಳನ್ನೇ ಧರಿಸುತ್ತಿದ್ದೆ. ಈ ವೃತ್ತಿಯಲ್ಲಿ ದುಡಿದೇ ನಾನು ಒಂದಷ್ಟು ಆಭರಣಗಳನ್ನು ಮಾಡಿಸಿದೆನಾದರೂ ಅದನ್ನು ಮನೆಯಲ್ಲಿ ಇಡದೆ ಬ್ಯಾಂಕಿನಲ್ಲೇ ಇರಿಸಿದ್ದೆ.

ಹೀಗೆ ಐದಾರು ವರ್ಷಗಳುರುಳಿದ ಮೇಲೆ ಮನೆಯವರಿಗೆ ಯಾರಾದರೂ ಹೇಳಿದರೋ ಅಥವಾ ಅವರೇ ಗ್ರಹಿಸಿದರೋ ಗೊತ್ತಿಲ್ಲ. ಒಂದು ದಿನ ನನ್ನನ್ನು ಅಪ್ಪ ವಾಚಾಮಗೋಚರವಾಗಿ ಬೈದು ಮನೆಯಿಂದ ಹೊರದಬ್ಬಲು ಪ್ರಯತ್ನಿಸಿದರು. ಆಗ ನಾನು ಸಿಡಿದು ನಿಂತೆ. ಈವರೆಗೆ ನಾನು ತಂದ ಹಣ ನಿಮಗೆ ಕಹಿಯಾಗಲಿಲ್ಲ. ನನ್ನನ್ನು ಈ ಸ್ಥಿತಿಗೆ ತಳ್ಳಲು ಮೂಲ ಕಾರಣನಾದ ನಿಮ್ಮ ತಮ್ಮನ ಪಾಪ ಕಾರ್ಯದ ಬಗ್ಗೆ ಏನೂ ಅನಿಸಲಿಲ್ಲ ಅಲ್ಲವೇ? ಈ ಬಗ್ಗೆ ನಾನು ನಮ್ಮ ಸಮಾಜದ ಜನರಿಗೆ ಈಗಲೇ ತಿಳಿಸುತ್ತೇನೆ. ಅವನು ಸಿಕ್ಕಿದ ಹೆಣ್ಣುಮಕ್ಕಳನ್ನು ಭೋಗಿಸುತ್ತಾ ಸಮಾಜದಲ್ಲಿ ತಲೆ ಎತ್ತಿ ತಿರುಗಾಡುತ್ತಾನೆ ಎಂದಾದರೆ ನಾನು ಯಾಕೆ ಮಾಡಬಾರದು? ನಿಮಗೆ ಸಮಾಜದಲ್ಲಿ ತಲೆ ಎತ್ತಿ ತಿರುಗಲು ಕಷ್ಟವಾಗುತ್ತಿದೆಯಲ್ಲಾ. ಹಾಗಾದರೆ ಅವನನ್ನು ಕರೆಸಿ ಇಂದೇ ತೀರ್ಮಾನವಾಗಲಿ" ಎಂದು ರೋಷದಿಂದ ಹೇಳಿದೆ. ಅಪ್ಪನ ಆರ್ಭಟ ತಗ್ಗಿತು. ಅಮ್ಮ ಅಡುಗೆ ಮನೆಯಿಂದ ಹೊರಬಂದು "ನಿನ್ನ ತಂಗಿ ತಮ್ಮಂದಿರ ಬಾಳನ್ನು ಹಾಳು ಮಾಡಬೇಡ. ನೀನು ಎಲ್ಲಾದರೂ ಸಾಯಿ, ನಮಗೆ ನೀನು ಬದುಕಿದರೂ ಒಂದೇ ಸತ್ತರೂ ಒಂದೇ" ಎಂದು ಅಳುತ್ತಾ ಹೇಳಿದಾಗ ನಾನು ಮರಗಟ್ಟಿ ಹೋದೆ. ಆಗಲೇ ಮನೆ ಬಿಡುವ ನಿರ್ಧಾರ ಮಾಡಿದೆ. ಎರಡೇ ದಿನದಲ್ಲಿ ಸಣ್ಣ ಕೈ ಚೀಲವನ್ನು ಹಿಡಿದುಕೊಂಡು ಹೊರಟು ಬಂದವಳು ಹಿಂದಿರುಗಿ ಹೋಗಲಿಲ್ಲ. ನನ್ನದೇ ಸಣ್ಣ ಬಾಡಿಗೆ ಮನೆಯಿದೆ. ಸಾಧ್ಯವಿರುವಷ್ಟು ಕಾಲ ಇದೇ ವೃತ್ತಿಯಲ್ಲಿ ದುಡಿಯುತ್ತೇನೆ. ನನ್ನಂತೆ ಅತ್ಯಾಚಾರಕ್ಕೊಳಗಾಗಿ ಬೀದಿಗೆ ಬಿದ್ದ ಹಲವು ಮಹಿಳೆಯರು ನನ್ನ ಪರಿಚಯದಲ್ಲಿದ್ದಾರೆ. ಇಂತಹ ಹೃದಯಹೀನ ಸಮಾಜದಲ್ಲಿ ನಾವು ಇನ್ನೂ ಬದುಕುತ್ತೇವಲ್ಲಾ ಅದೇ ಆಶ್ಚರ್ಯ ಅಲ್ಲವೇ?

ನಂದಿನಿ: ನಾನು ಉತ್ತರ ಕರ್ನಾಟಕದ ಒಂದು ಹಳ್ಳಿಯಿಂದ ಈ ಪಟ್ಟಣಕ್ಕೆ ಕೂಲಿ ಕಾರ್ಮಿಕಳಾಗಿ ವಲಸೆ ಬಂದವಳು. ನಮಗೆ ಊರಲ್ಲಿ ಸ್ವಂತ ಜಮೀನು ಕೃಷಿಭೂಮಿ ಮತ್ತು ಮನೆ ಇದೆ. ಆದರೆ ಅದನ್ನು ನಂಬಿ ನೆಮ್ಮದಿಯ ಬದುಕು ನಡೆಸಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಗುಂಪು ಗುಂಪಾಗಿ ಮಕ್ಕಳು ವೃದ್ಧರ ಸಮೇತ ಗುಳೇ ಹೊರಡುವುದು ಸಾಮಾನ್ಯ ಸಂಗತಿಯಾಗಿತ್ತು. ನಮ್ಮ ಜನಗಳು ಕೂಲಿ ಕೆಲಸವನ್ನು ಅರಸುತ್ತಾ ದಶದಿಕ್ಕುಗಳಿಗೆ ಚದುರಿ ಹೋಗುತ್ತಿದ್ದರು. ಹಾಗೆ ಮಂಗಳೂರಿಗೆ ಅನ್ನದ ದಾರಿ ಹುಡುಕಿ ಬಂದವಳು ನಾನು ಮತ್ತು ನನ್ನ ಗಂಡ. ನಮ್ಮನ್ನು ಇಲ್ಲಿಗೆ ಕರೆಸಿದ ಏಜಂಟ್ ಕೆ.ಎಸ್.ಆರ್.ಟಿ.ಸಿ. ಬಸ್‌ಸ್ಟಾಂಡಿಗೆ ಸಮಯಕ್ಕೆ ಸರಿಯಾಗಿ ಬಾರದೆ ನಾವು ನಾಯಿಪಾಡು ಪಡಬೇಕಾಯಿತು. ಒಂದು ದಿನ ಒಂದು ರಾತ್ರಿ ರಸ್ತೆ ಬದಿಯಲ್ಲಿ ಅಂಗಡಿ ಜಗಲಿಯಲ್ಲಿ ಕೂತು ಒರಗಿ ಕಾಲಕಳೆದ ಕರಾಳ ನೆನಪುಗಳ ಭಯ ಈಗಲೂ ಗರ್ಭದಲ್ಲಿ ಗಟ್ಟಿಯಾಗಿ ಕೂತಿದೆ. ಎರಡು ದಿನಗಳ ಬಳಿಕ ಏಜಂಟ್ ನಮ್ಮನ್ನು ಕಟ್ಟಡ ಕಂಟ್ರಾಕ್ಟರ್‌ಗಳ ಬಳಿಗೆ ಕರೆದೊಯ್ದು ಕೆಲಸಕ್ಕೆ ಸೇರಿಸಿದ. ನಾವಿಬ್ಬರೂ ಅಗೆಯುವುದು, ಜಲ್ಲಿ, ಮಣ್ಣು ಹೊರುವ ಕೆಲಸದಲ್ಲಿ ದುಡಿಯುತ್ತಿದ್ದೆವು. ಕಟ್ಟಡ ನಿರ್ಮಾಣದ ಸ್ಥಳದಲ್ಲಿ ಇದ್ದ ಶೆಡ್ಡಿನಲ್ಲಿ ನಮ್ಮ ವಾಸ. ಈ ಸುಖಕ್ಕಾಗಿ ನನ್ನ ತವರೂರಿನ ಮಣ್ಣನ್ನು ಮರೆತು ಬರಬೇಕಾಗಿತ್ತಾ ಎಂದು ಎಷ್ಟೋ ಸಲ ಅನಿಸಿದ್ದಿದೆ. ನನ್ನ ಗಂಡ ಸೀದಾಸಾದಾ ಮನುಷ್ಯ ಯಾವ ಕೆಟ್ಟ ಚಟಗಳೂ ಇರಲಿಲ್ಲ. ತಿಂಗಳುಗಳುರುಳಿದಂತೆ ನಮ್ಮಲ್ಲಿ ಸಂಬಳದ ಹಣ ಜಮೆಯಾಗುತ್ತಿತ್ತು. ಅದನ್ನು ಪ್ರತಿ ತಿಂಗಳು ನೋಡಿ ಮನಸ್ಸು ಅರಳುತ್ತಿತ್ತು. ವಿಧಿಯಾಟ ಬಲ್ಲವರಾರು? ಒಂದು ದಿನ ಕೆಲಸ ಮಾಡುತ್ತಿರುವಾಗ ಏಳನೇ ಮಾಳಿಗೆಯಿಂದ ಬಿದ್ದ ನನ್ನ ಗಂಡನ ಕಾಲು ತುಂಡಾಗಿ ಆಸ್ಪತ್ರೆಯಲ್ಲಿ ತಿಂಗಳುಗಳ ಕಾಲ ನರಳಬೇಕಾಯಿತು. ಕಟ್ಟಡದ ಕಂಟ್ರಾಕ್ಟರ್ ಆಸ್ಪತ್ರೆಯ ಖರ್ಚು ಕೊಟ್ಟ ಕೆಲಸ ಕೊಡಲಿಲ್ಲ. ಕಾಲಿಲ್ಲದವನಿಗೆ ಯಾರು ಕೆಲಸ ಕೊಡುತ್ತಾರೆ? ಕೆಲಸ ಇಲ್ಲದ ಮೇಲೆ ಆ ಶೆಡ್ಡನ್ನೂ ತೆರವು ಮಾಡಬೇಕೆಂದು ಆಗ್ರಹಿಸಿದ. ಒಂಟಿ ಹೆಣ್ಣು ಅಂಗಹೀನ ಗಂಡನ ಬದುಕಿಗೆ ಯಾವ ಭದ್ರತೆಯನ್ನೂ ನೀಡಲಿಲ್ಲ. ಯಾರಲ್ಲಿ ಹೇಳಲಿ ನನ್ನ ಕಷ್ಟ? ಎಲ್ಲಾದರೂ ಮನೆಕೆಲಸ ಮಾಡಿ ಇಲ್ಲೇ ಬದುಕುವುದೋ ಅಥವಾ ಊರಿಗೆ ಮರಳಿ ಅಲ್ಲೇ ಏನಾದರೂ ಕೆಲಸ ಹುಡುಕುವುದೋ ಎಂದು ನಿರ್ಧರಿಸಲಾಗದೆ ತಿಂಗಳುಗಳ ಕಾಲ ಅಲ್ಲೇ ಇದ್ದೆವು. ಕಾಲು ಸರಿಯಾಗಿ ಗುಣವಾಗುವವರೆಗೆ ಊರಿಗೆ ಹೋಗಬಾರದೆಂದು ಡಾಕ್ಟರ್ ಹೇಳಿದ್ದರಿಂದ ಸದ್ಯಕ್ಕೆ ನಾವು ಮಂಗಳೂರಿನಲ್ಲೇ ಇರುವುದೆಂದು ನಿರ್ಧರಿಸಿ ಕಟ್ಟಡದ ಕೆಲಸ ನಡೆಯುತ್ತಿದ್ದ ಒಂದು ಕಿಲೋಮೀಟರ್ ದೂರದಲ್ಲಿ ಒಂದು ಸಣ್ಣ ಕೋಣೆಯ ಮನೆ ಬಾಡಿಗೆಗೆ ಪಡೆದೆ. ಇಲ್ಲಿ ನಾನು ತಪ್ಪು ಮಾಡಿದೆನೆಂದು ಕಾಣುತ್ತದೆ. ಗಂಡನನ್ನು ಅನುಕಂಪದಿಂದ ನೋಡಲು ಬರುವ ಗಂಡಸರು ಕೆಲವರು ಮನೆಯಲ್ಲೇ ನಿಲ್ಲತೊಡಗಿದರು. ಅವರು ನಿಜವಾಗಿ ಗಂಡನ ಮೇಲಿನ ಪ್ರೀತಿಯಿಂದ ಮಾತಾಡಲು ಬರುತ್ತಿಲ್ಲವೆಂದು ನನಗೆ ವಾರದೊಳಗೇ ಗೊತ್ತಾಯಿತು. ಅವರ ಹಾವಭಾವಗಳು ಬೇರೇನೋ ಬಯಸುತ್ತಿದ್ದವು. ಒಬ್ಬಿಬ್ಬರು ಧನಸಹಾಯ ಮಾಡುವ ನೆಪದಲ್ಲಿ ಮೈಮುಟ್ಟ ತೊಡಗಿದರು. ನನ್ನ ಅಂದಿನ ಮನಸ್ಥಿತಿ ಹೇಗಿತ್ತೆಂದರೆ ಅವರನ್ನು ಧಿಕ್ಕರಿಸಿ ಪ್ರತಿಭಟಿಸುವಂತಹ ಪರಿಸ್ಥಿತಿ ಇರಲಿಲ್ಲ. ಅಪರಿಚಿತ ಊರು, ಕರೆದು ಕೇಳುವ ಆದರಿಸುವ ಬಂಧುಗಳಿಲ್ಲ. ಕೈಯಲ್ಲಿ ಬಿಡಿಗಾಸೂ ಇಲ್ಲ. ತವರಿನಿಂದ ಹಣ ಸಹಾಯ ಕೇಳುವ ಮನಸ್ಸು ನನಗಿರಲಿಲ್ಲ. ಕೊಡುವ ಶಕ್ತಿ ಅವರಿಗೂ ಇರಲಿಲ್ಲ. ಆ ಗಂಡಸರು ಹಣ ಕೊಟ್ಟದ್ದನ್ನು ಗಂಡನಿಗೆ ಹೇಳಿದೆ. “ಇರಲಿ ಇಟ್ಟುಕೋ, ನನ್ನನ್ನು ಬಿಟ್ಟು ನೀನು ಕೆಲಸಕ್ಕೆ ಹೋಗಬೇಡ” ಎಂದು ಕಣ್ಣು ತುಂಬಿ ಬೇಡಿಕೊಂಡರು. ಆದರೆ ಎಷ್ಟು ಕಾಲ ಇನ್ನೊಬ್ಬರು ನೀಡಿದ ದಾನದಿಂದ ಬದುಕಬಹುದು. ಅವರು ಕೊಟ್ಟದ್ದು ದಾನವಲ್ಲ, ನನ್ನ ಮೈದಾನವನ್ನು ಬಯಸುತ್ತಾರೆಂದು ತಿಳಿಯಿತು. ಒಬ್ಬಾತ ಬಾಯಿ ಬಿಟ್ಟು ಕೇಳಿದ. ಒಮ್ಮೆ ಜಗ್ಗನೇ ಮೈಯೆಲ್ಲಾ ಬೆಂಕಿ ಹತ್ತಿ ಉರಿದಂತೆ ಭಾಸವಾಯಿತು. ತಕ್ಷಣ ಚಾಪೆಯಲ್ಲಿ ಮಲಗಿದ ಗಂಡ ನೆನಪಾದ, ನಮ್ಮೂರಿನ ದುರ್ಗಾಮ್ಮ ದೇವಿಯ ನೆನಪಾಯಿತು. ದೀನಳಾಗಿ ಬೇಡಿಕೊಂಡೆ. ನನ್ನ ತಪ್ಪಿದ್ದರೆ ಕ್ಷಮಿಸು ಎಂದು ಅರಿಕೆ ಮಾಡಿಕೊಂಡೆ. ಅಂದಿನಿಂದ ಅಡುಗೆ ಕೋಣೆಯನ್ನೇ ನನ್ನ ವೃತ್ತಿಗೆ ಆಯ್ಕೆ ಮಾಡಿಕೊಂಡೆ. ಕೋಣೆಯಲ್ಲಿ ಮಲಗಿದ ಗಂಡನಿಗೆ ಅಡುಗೆ ಕೋಣೆಯೊಳಗೆ ಯಾರು ಬಂದರೂ ಹೋದರೂ ಕಾಣುತ್ತಿರಲಿಲ್ಲ. ಅವನಿಗೆ ನನ್ನ ಈ ಕೃತ್ಯ ಗೊತ್ತಾಗುತ್ತಿರಲಿಲ್ಲವೆಂದು ಮೊದಲಿಗೆ ನಾನು ತಿಳಿದುಕೊಂಡಿದ್ದೆ. ಸೂಕ್ಷ್ಮ ಮನಸ್ಸಿನ ಗಂಡನಿಗೆ ನಾನು ಮೈ ಮಾರುತ್ತಿದ್ದೇನೆಂದು ಗೊತ್ತಾಗಿದೆ. ಗೊತ್ತಾಗಿಯೂ ಅವನು ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದಾನೆಂದು ಅವನ ಮನಸ್ಸಿನ ಹಾವಭಾವಗಳು ನನಗೆ ಅರ್ಥವಾಗುತ್ತಿದ್ದುವು. ಒಂದು ದಿನ ಮಧ್ಯರಾತ್ರಿ ನಾನು ಅವನ ಕೋಣೆಗೆ ಹೋದಾಗ ನನ್ನನ್ನು ಹಿಡಿದೆಳೆದು ಅಪ್ಪಿ ಭೋರೆಂದು ಅತ್ತರು. ನನಗೊಂದಿಷ್ಟು ವಿಷ ಕೊಡು ಎಂದು ಬೇಡಿಕೊಂಡರು. ಅವರು ಹೊಡೆದು, ಬೈದು ಚೀರಾಡುತ್ತಿದ್ದರೆ ನಾನು ಹಠದಿಂದಲೇ ಈ ವೃತ್ತಿಯನ್ನು ಮುಂದುವರಿಸುತ್ತಿದ್ದೆನೆಂದು ಕಾಣುತ್ತದೆ. ಅವರು ಅಷ್ಟು ಭಾವುಕರಾಗಿ ಅತ್ತಾಗ ನಾನು ಗಟ್ಟಿ ನಿರ್ಧಾರ ಮಾಡಿದೆ. ಇನ್ನು ಮುಂದೆ ಈ ವೃತ್ತಿ ಮಾಡಲಾರೆನೆಂದು, ವಾರದ ಕಾಲ ಅವರ ಬಳಿಯಿಂದ ಕದಲಲಿಲ್ಲ. ಊಟ ತಿಂಡಿಗೆ ಮಾತ್ರ ಅಡಿಗೆ ಕೋಣೆಗೆ ಹೋಗುತ್ತಿದ್ದೆ. ಖಾಯಂ ಗಿರಾಕಿಗಳನ್ನು ಹಿಂದೆ ಕಳಿಸಿದೆ. ಇಂತಹ ಒಳ್ಳೆಯ ಗಂಡನಿಗೆ ನಾನು ಮೋಸ ಮಾಡಿದೆನೆಂದು ಪಾಪಪ್ರಜ್ಞೆ ಕಾಡತೊಡಗಿತು. ಮರುಕ್ಷಣವೇ ಇವರ ಸೇವೆ ಮಾಡುತ್ತಾ ನಾವು ತಿನ್ನುವುದೇನನ್ನು, ಕುಡಿಯುವುದೇನನ್ನು ಮಣ್ಣು ತಿಂದು, ಗಾಳಿ ನುಂಗಿ ಜೀವಿಸಲು ಸಾಧ್ಯವಿಲ್ಲವಲ್ಲಾ ಎಂದೂ ಮನಸ್ಸು ಹೇಳುತ್ತಿತ್ತು. ಅವರ ದೇಹಕ್ಕಿಂತ ಹೆಚ್ಚು ಮನಸ್ಸಿಗೆ ಆಘಾತವಾಗಿತ್ತು. ಮತ್ತೊಮ್ಮೆ ಬೆನ್ನು ಹುಣ್ಣಿಗಾಗಿ ಆಸ್ಪತ್ರೆಗೆ ಸೇರಿಸಬೇಕಾಯಿತು. ಅಲ್ಲಿ ಎರಡೇ ವಾರದಲ್ಲಿ ತೀರಿಕೊಂಡರು. ಶವ ಸಂಸ್ಕಾರದ ಕೆಲಸ ಮುಗಿಸಿ ಊರಿಗೆ ಹೋದೆ. ಅಲ್ಲಿ ಗಂಡನ ಅಣ್ಣಂದಿರು ಆಸ್ತಿಗಾಗಿ ಕಚ್ಚಾಡಿ ಜಾಗ ಪಾಲು ಮಾಡಿಕೊಂಡಿದ್ದರು. ತವರುಮನೆಯಲ್ಲೂ ಅಣ್ಣಂದಿರ ಮನೆ ಕುರುಕ್ಷೇತ್ರವಾಗುತ್ತಿತ್ತು. ನನ್ನ ಬದುಕಿನ ಕರಾಳ ಅಧ್ಯಾಯವನ್ನು ಕೊನೆಗೊಳಿಸಬೇಕೆಂದಿದ್ದೆ. ಆದರೆ ಯಾಕೋ ಗಂಡನ ಮನೆಯಲ್ಲಾಗಲೀ, ತವರು ಮನೆಯಲ್ಲಾಗಲೀ ನಾನು ವಾಸಿಸತೊಡಗಿದರೆ ಈಗ ಇರುವ ನೆಮ್ಮದಿಯೂ ದಕ್ಕಲಾರದು ಎಂದು ಭಾವಿಸಿದೆ. ಮುಂದಿನ ಮಳೆಗಾಲಕ್ಕೆ ಊರಿಗೆ ಬರುತ್ತೇನೆ ಎಂದು ಮನೆಯವರಿಗೆ ಹೇಳಿದೆ. ಮಂಗಳೂರಿನಲ್ಲಿ ನಾನು ಮನೆಕೆಲಸ ಮಾಡುತ್ತೇನೆ. ರೋಗಿಗಳ ಶುಶೂಷೆಗಾಗಿ ತಿಂಗಳುಗಟ್ಟಲೆ ಮನೆ ಬಿಟ್ಟು ಕೆಲಸ ಮಾಡುತ್ತೇನೆ ಎಂದೆಲ್ಲಾ ನನ್ನ ಬಗ್ಗೆ ಒಂದಷ್ಟು ಸದಭಿಪ್ರಾಯ ಮೂಡುವಂತೆ ಬಣ್ಣಿಸಿ ಹೇಳಿದೆ. ಇಂತಹ ಸುಳ್ಳುಗಳು ನೀರಲ್ಲಿ ಹೇತ ಹಾಗೆ, ಒಂದಲ್ಲ ಒಂದು ದಿನ ಅದು ಮೇಲೆ ಬಂದೇ ಬರುತ್ತದೆ ಎಂದೂ ನನಗೆ ಗೊತ್ತಿತ್ತು. ಸಾಧ್ಯವಾದಷ್ಟು ಈ ವೃತ್ತಿಯಲ್ಲಿರುವುದು ಮತ್ತೆ ಬದುಕಿ ಉಳಿದರೆ ಬೇರೆ ಕೆಲಸ ಹುಡುಕುವುದು, ಬೇರೆ ಕೆಲಸ ಸಿಕ್ಕಿದ ಮೇಲೆ ಊರಿನಿಂದ ಅತ್ತೆಯನ್ನೋ, ಅಮ್ಮನನ್ನೋ ಕರೆತರುವುದೆಂದು ನಿರ್ಧರಿಸಿದೆ. ಈಗ ಐದು ವರ್ಷಗಳಿಂದ ಇದೇ ವೃತ್ತಿಯಲ್ಲಿದ್ದೇನೆ. ನನ್ನ ಮನೆ ಈಗ ಬೇರೆ ಲೈಂಗಿಕ ಕಾರಕರ್ತೆಯರಿಗೂ ಒಂದು ತಂಗುದಾಣವಾಗಿದೆ. ಪರವೂರಿನಿಂದ ಬಂದು ಇಲ್ಲಿ ವೃತ್ತಿನಿರತರಾಗಿರುವ ನಾಲ್ವರು ಸಹೋದರಿಯರು ನನ್ನ ಜೊತೆಗೇ ಇದ್ದಾರೆ. ನನ್ನ ರಕ್ಷಣೆಗೆ ಅವರು ಅವರ ರಕ್ಷಣೆಗೆ ನಾನು ಎಂಬ ವಚನಕ್ಕೆ ಬದ್ಧರಾಗಿ ಬಾಳುತ್ತಿದ್ದೇವೆ. ಎಷ್ಟು ಕಾಲ ಈ ವೃತ್ತಿಯಲ್ಲಿರುತ್ತೇನೆ ಎಂದು ಹೇಳಲಾರೆ. ನಾನೇ ಒಂದು ದೊಡ್ಡ ಮನೆ ಖರೀದಿಸಿಯೋ, ಬಾಡಿಗೆಗೆ ಹಿಡಿದೋ ವೇಶ್ಯಾವಾಟಿಕೆ ನಡೆಸಬೇಕು ಎಂಬ ಯೋಚನೆಯೂ ಇದೆ. ಈ ವೃತ್ತಿಯಿಂದ ಹೊರಬಂದು ಸಮಾಜದಲ್ಲಿ ಬದುಕುವುದು ಅಷ್ಟು ಸುಲಭವಲ್ಲವೆಂದೂ ಗೊತ್ತಿದೆ. ಏನಾದರೂ ಬೇರೆ ಸ್ವಉದ್ಯೋಗ ಮಾಡಿ ಜೀವನ ಸಾಗಿಸಬೇಕು ಎಂಬ ಆಸೆಯೂ ಇದೆ. ಯಾವುದು ಯಾವಾಗ ಕೈಗೂಡುತ್ತದೋ ಕಾದು ನೋಡಬೇಕು.

ಪಯಸ್ವಿನಿ: ಮಂಗಳೂರಿನ ಗ್ರಾಮಾಂತರ ಪ್ರದೇಶದ ಒಂದು ಬಡ ಕುಟುಂಬ ದವಳು. ನನ್ನ ಅಪ್ಪನಿಗೆ ಕೂಲಿ ಕೆಲಸ. ಅಮ್ಮ ಬೇರೆಯವರ ಮನೆಯ ಕೆಲಸ ಮಾಡುತ್ತಿದ್ದಳು. ನಾವು ಮೂವರು ಹೆಣ್ಣುಮಕ್ಕಳು. ಅಪ್ಪನ ಕುಡುಕತನದಿಂದಾಗಿ ನನ್ನಮ್ಮ ತುಂಬಾ ಹಿಂಸೆ ಅನುಭವಿಸುತ್ತಿದ್ದಳು. ನಮ್ಮ ಅನ್ನ, ಆಹಾರಕ್ಕೆ, ಶಿಕ್ಷಣಕ್ಕೆ ಯಾರಾರಿಂದಲೋ ಸಾಲ ಮಾಡಿ, ಬೇಡಿ ತಂದು ಹೇಗಾದರೂ ವಿದ್ಯೆ ಕಲಿಸಬೇಕೆಂದು ಪ್ರಯತ್ನಿಸುತ್ತಿದ್ದಳು. ಅಪ್ಪನ ನಿರ್ಲಕ್ಷ್ಯವನ್ನು ಕಂಡು ನಾವು ಬೇರೆಲ್ಲಾದರೂ ಮನೆ ಮಾಡೋಣ. ಅಪ್ಪನ ಮನೆಯಲ್ಲಿ ಅವರೇ ಇರಲಿ ಎಂದು ನಾವು ಹೇಳುತ್ತಿದ್ದೆವು. ಕುಡುಕನಾದರೂ ಅಪ್ಪ ಎಂದು ಹೇಳಿಕೊಳ್ಳಲು ಒಬ್ಬ ಗಂಡಸು ಇದ್ದಾನಲ್ಲಾ ಅಷ್ಟು ಸಾಕು. ನಾವು ಏನು ಕಾಡಿ ಬೇಡಿಯೋ ದುಡಿದು ತರುತ್ತೇವೋ ಅದನ್ನೇ ಅವನಿಗೆ ನೀಡಿ ಸುಮ್ಮನಿರೋಣ ಎಂದು ಬುದ್ಧಿವಾದ ಹೇಳುತ್ತಿದ್ದಳು. ಅಂತಹ ಕುಡುಕ, ದುಡಿಯದ ಗಂಡನಿಂದ ಯಾವ ರಕ್ಷಣೆಯನ್ನು ಅಮ್ಮ ಪಡೆಯುತ್ತಿದ್ದಳೋ ನನಗೆ ತಿಳಿಯುತ್ತಿರಲಿಲ್ಲ. ಅಂತೂ ನಾನು ಅಪ್ಪನೊಂದಿಗೆ ಜಗಳವಾಡದ ದಿನಗಳೇ ಇರಲಿಲ್ಲ. ತಂಗಿಯಂದಿರು ನನ್ನಂತೆ ಜೋರು ಮಾಡುತ್ತಿರಲಿಲ್ಲ. ಅಪ್ಪನ ಹತ್ತಿರ ಮಾತೇ ಆಡುತ್ತಿರಲಿಲ್ಲ. ನಾನು ಕಲಿಕೆಯಲ್ಲಿ ಮುಂದಿದ್ದೆ. ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಅಂಕ ಗಳಿಸಿದೆ. ಪಿಯುಸಿಗೆ ಮಂಗಳೂರಿನ ಕಾಲೇಜಿಗೆ ಸೇರಿದೆ. ಅಲ್ಲಿ ಸರಕಾರಿ ಹಾಸ್ಟೆಲ್‌ನಲ್ಲಿ ಉಳಕೊಳ್ಳುವ ವ್ಯವಸ್ಥೆಯನ್ನು ಮಾಡಿದೆ. ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾನು ಮುತುವರ್ಜಿಯಿಂದ ಭಾಗವಹಿಸುತ್ತಿದ್ದೆ. ನೃತ್ಯ, ನಾಟಕ, ಸಂಗೀತ, ಭಾಷಣ ಮುಂತಾದ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ. ಸಮೂಹ ನೃತ್ಯದಲ್ಲಿ ನನ್ನ ತಂಡಕ್ಕೆ ಹಲವು ಬಹುಮಾನಗಳು ಲಭಿಸಿದವು. ಪಿಯುಸಿ ಎರಡನೇ ವರ್ಷದಲ್ಲಿ ನಮ್ಮ ತಂಡ ಬೇರೆ ಬೇರೆ ಕಡೆಗಳಲ್ಲಿ ಪ್ರದರ್ಶನ ನೀಡತೊಡಗಿತು. ಆಗ ನಮ್ಮ ತಂಡದ ತರಬೇತುದಾರನ ಜೊತೆಗೆ ಸ್ನೇಹ ಬೆಳೆಯಿತು. ಅವನು ನನಗೆ ನನ್ನ ಬಡತನವನ್ನು ಗಮನಿಸಿ ಮೊಬೈಲು, ಒಳ್ಳೆ ಡ್ರೆಸ್‌ಗಳನ್ನೆಲ್ಲಾ ಕೊಡಿಸಿದ. ಶ್ರೀಮಂತ ಮನೆತನದವನಾದ ಕಾರಣ ಅವನಿಗೆ ಇದೆಲ್ಲಾ ಸಾಮಾನ್ಯ ವಿಷಯವೆಂದು ನನ್ನ ಗೆಳತಿಯರು ಹೇಳಿದರು. ನನಗೆ ಮಾತ್ರವಲ್ಲ ಬೇರೆ ಹುಡುಗಿಯರಿಗೂ ಅವನು ಅವರು ಬಯಸಿದ ಡ್ರೆಸ್‌ಗಳನ್ನು ತೆಗೆಸಿಕೊಟ್ಟಿದ್ದಾನೆಂದು ತಿಳಿಯಿತು. ನಾನೂ ನನ್ನ ತಂಗಿಯಂದಿರೂ ಒಳ್ಳೆಯ ಡ್ರೆಸ್‌ಗಾಗಿ ಆಸೆ ಪಡುತ್ತಿದ್ದೆವು. ಆದುದರಿಂದ ಅವನು ಕೊಟ್ಟದೆಲ್ಲವನ್ನು ಖುಶಿಯಿಂದ ಸ್ವೀಕರಿಸಿದೆ.

ಇದಾಗಿ ಮೂರು ತಿಂಗಳ ಬಳಿಕ ಅವನು ಇಬ್ಬರು ಗೆಳೆಯರು ನನ್ನನ್ನು ಮತ್ತು ಇಬ್ಬರು ಗೆಳತಿಯರನ್ನು ಕರೆದುಕೊಂಡು ರೆಸಾರ್ಟ್ ಒಂದಕ್ಕೆ ಕರೆದುಕೊಂಡು ಹೋದರು. ಅಂದು ಹಿಂತಿರುಗುವಾಗ ರಾತ್ರಿಯಾದುದರಿಂದ ಒಂದು ಹೋಟೇಲಲ್ಲಿ ತಂಗಿದೆವು. ಅಂದೇ ನಮ್ಮ ದುರಾದೃಷ್ಟಕ್ಕೆ ಪೋಲೀಸರು ದಾಳಿ ಮಾಡಿದರು. ನಾವು ಹುಡುಗಿಯರು ಮೂವರು ಮತ್ತು ಅವರು ಮೂವರು ಒಂದೇ ಕೋಣೆಯಲ್ಲಿದ್ದೆವು. ಪಾನಗೋಷ್ಠಿ ನಡೆಯುತ್ತಿತ್ತು. ವ್ಯಭಿಚಾರಕ್ಕೆ ಪ್ರಚೋದನೆ ನೀಡುತ್ತಾರೆ ಎಂಬ ಕಾರಣ ನೀಡಿ ನಮ್ಮನ್ನು ಬಂಧಿಸಿದರು. ಅವನಿಗೆ ದೊಡ್ಡ ಮನುಷ್ಯರ ಸಂಪರ್ಕವಿದ್ದುದರಿಂದ ನಮಗೆ ಬಿಡುಗಡೆಯೇನೋ ಸಿಕ್ಕಿತು. ಆದರೆ ಕಾಲೇಜಿನಲ್ಲಿ ನನ್ನ ಬಗ್ಗೆ ಕೆಟ್ಟ ಕತೆ ಪ್ರಚಾರವಾಯಿತು. ಪ್ರಾಂಶುಪಾಲರು ನನ್ನನ್ನು ಕರೆದು ವಿಚಾರಿಸಿ "ಇನ್ನು ಮುಂದೆ ಹೀಗೆ ಹುಡುಗರ ಹಿಂದೆ ತಿರುಗಾಡಿದರೆ ನಿನ್ನ ಭವಿಷ್ಯ ಹಾಳಾಗುತ್ತದೆ ಜಾಗ್ರತೆ ಮಾಡು" ಎಂದು ಎಚ್ಚರಿಸಿದರು. ಇದು ಯಾರಿಂದಲೋ ಅಮ್ಮ ಅಪ್ಪನಿಗೂ ಸುದ್ದಿ ತಲುಪಿತು. ನಾನು ಹುಡುಗರೊಟ್ಟಿಗೆ ಹೋದದ್ದು ಹೌದು. ಆದರೆ ನಾವು ಹಾದರ ಮಾಡಿಲ್ಲವೆಂದರೆ ನಂಬುವರಿರಲಿಲ್ಲ. ನನಗೆ ಶಾಲೆ ಮನೆ ಎರಡೂ ಬೇಡ ಅನ್ನಿಸತೊಡಗಿತು. ಅವನನ್ನು ಸಂಪರ್ಕಿಸಿ ಎಲ್ಲಾದರೂ ಒಂದು ಕೆಲಸ ತೆಗೆಸಿಕೊಡು ಎಂದು ಅಂಗಲಾಚಿದೆ. ಅವನಿಗೆ ಪ್ರಭಾವೀ ವ್ಯಕ್ತಿಗಳ ಪರಿಚಯವಿದ್ದುದರಿಂದ ಒಂದು ದೊಡ್ಡ ಅಂಗಡಿಯಲ್ಲಿ ಎಕೌಂಟ್ಸ್ ಬರೆಯುವ ಕೆಲಸಕ್ಕೆ ಸೇರಿಸಿದ. ಬೇರೊಂದು ಹಾಸ್ಟೆಲ್ ಹುಡುಕಿದೆ. ಇದು ನನ್ನನ್ನು ಹಿಡಿಯಲು ಪ್ರಯತ್ನಿಸುವವರಿಗೆ ಸುಲಭ ವಾಯಿತು. ವಾರಾಂತ್ಯದಲ್ಲಿ ಅವನ ಒಬ್ಬೊಬ್ಬ ಗೆಳೆಯರಿಗೆ ನಾನು ದೇಹ ಸುಖ ನೀಡುವುದಕ್ಕಾಗಿ ಯಾವ್ಯಾವುದೋ ದೂರದ ಹೋಟೆಲ್‌ಗಳಿಗೆ ಒಯ್ಯುವುದು ಖಾಯಂ ಆಯಿತು. ಪ್ರತೀವಾರ ನನ್ನನ್ನು ಕಾರಿನಲ್ಲಿ ಕರೆದೊಯ್ಯುವ ಈ ಕಾಮರೂಪಿ ಗೆಳೆಯರನ್ನು ಕಂಡು ಹಾಸ್ಟೆಲ್ ವಾರ್ಡ್‌ನ್ ನನಗೆ ಎಚ್ಚರಿಸಿದರು. ನನಗೆ ಈಗ ಹಣದ ರುಚಿ ಹತ್ತಿತ್ತು. ಕಾಮ ಹೆಡೆಯೆತ್ತಿ ನರ್ತಿಸತೊಡಗಿತು. ನನ್ನ ಗಳಿಕೆ ದಿನೇ ದಿನೇ ಹೆಚ್ಚುತ್ತಿದ್ದಂತೆ ನಾನು ಹಾಸ್ಟೆಲ್ ವಾಸ ತ್ಯಜಿಸಿದೆ. ಒಂದು ಪ್ಲಾಟ್‌ನಲ್ಲಿ ಬಾಡಿಗೆಗೆ ವಾಸಿಸತೊಡಗಿದೆ. ನಾನು ಎಕೌಂಟ್ ಬರೆಯುವ ಕೆಲಸದ ಐದಾರು ಪಟ್ಟು ಹೆಚ್ಚು ಈ ದುಡಿಮೆಯಿಂದ ಗಳಿಸತೊಡಗಿದೆ. ಅಮ್ಮ ಅಪ್ಪನನ್ನು ನೋಡಲಿಕ್ಕೂ ಗಿರಾಕಿಗಳು ನನ್ನನ್ನು ಕಾರಲ್ಲೇ ಕರೆದೊಯ್ದು ಬಿಡುತ್ತಿದ್ದರು. ಶ್ರೀಮಂತ ಮನೆತನದ ಯುವಕರು ಲೈಂಗಿಕ ಆಸಕ್ತಿಯ ಕಾರಣಕ್ಕಾಗಿ ಎಷ್ಟು ಹಣವನ್ನೂ ಖರ್ಚು ಮಾಡಬಲ್ಲರು ಎಂಬುದು ನನಗೆ ಅರ್ಥವಾಗತೊಡಗಿತು. ಅವರಿಗೆ ನನ್ನಂತಹವರು ಬಳಸಿ ಬಿಸಾಡುವ ಒಂದು ವಸ್ತುವೆಂದೂ ನನಗೆ ಗೊತ್ತಿತ್ತು. ಆದರೆ ನನಗೆ ನನ್ನ ಮನೆಯ ದಾರಿದ್ರವನ್ನು ನೀಗಿಸಿ ಅಮ್ಮ ಅಪ್ಪ ತಂಗಿಯರಿಗೆ ಒಂದು ಭದ್ರವಾದ ನೆಲೆಯನ್ನು ನೀಡಬೇಕಾದರೆ ಈ ವೃತ್ತಿ ಯಿಂದ ಬಹಳ ಬೇಗನೆ ಗಳಿಸಬಹುದೆಂದು ನನಗೆ ಅರ್ಥವಾಯಿತು. ಈಗ ನನ್ನ ಪ್ಲಾಟಿಗೆ ನನ್ನ ಮನೆಯವರನ್ನು ಕರೆಸಿಕೊಳ್ಳದಿದ್ದರೂ ಒಂದೆರಡು ದಿನ ಇದ್ದು ಹೋಗುತ್ತಿದ್ದರು. ಆ ದಿನಗಳಲ್ಲಿ ಯಾರೂ ನನ್ನ ಗೆಳೆಯರು ಬಾರದಂತೆ ಎಚ್ಚರ ವಹಿಸುತ್ತಿದ್ದೆ. ಹಳ್ಳಿಯಲ್ಲಿ ಸ್ವಂತ ಮನೆ ಖರೀದಿಸಿ ನನ್ನ ಹೆತ್ತವರನ್ನು ಸುಖವಾಗಿರಿಸಬೇಕು. ತಂಗಿಯರಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂಬ ಕನಸು ನನ್ನದು. ಎಷ್ಟು ಸಾಕಾರವಾಗುತ್ತದೆ ಎಂದು ಕಾಲವೇ ಹೇಳಬೇಕು.

ನಿಮಗೆ ಗೊತ್ತಾ? ಈ ವೇಶ್ಯಾವಾಟಿಕೆ ಭೂಮಿಯ ಮೇಲೆ ಮಾತ್ರವಲ್ಲ ಸಾಗರದಲ್ಲಿ ತೇಲುವ ಹಡಗುಗಳಲ್ಲೂ ನಡೆಯುತ್ತಿದೆ ಎಂಬುದನ್ನು ಜಾಗತಿಕ ಅಧ್ಯಯನವು ತಿಳಿಸುತ್ತದೆ. ತಿಂಗಳುಗಟ್ಟಲೆ ನೆಲವನ್ನು ಕಾಣದೆ ಪ್ರಯಾಣಿಸುವ ಹಡಗುಗಳಲ್ಲಿ ಲಕ್ಷಾಂತರ ಮಂದಿ ಗಂಡಸರು ಕೆಲಸ ಮಾಡುತ್ತಾರೆ. ಕೋಟ್ಯಾಂತರ ಮಂದಿ ಪ್ರಯಾಣಿಸುತ್ತಾರೆ. ಅವರಿಗೆ ದೇಹ ಸುಖ ನೀಡಲಿಕ್ಕಾಗಿಯೇ ವೇಶ್ಯೆಯರನ್ನು ನಿಯೋಜಿಸಲಾಗುತ್ತದೆ. ಈ ವೃತ್ತಿ ನಿರತ ವೇಶ್ಯಯರು ಇರುವ ಹಡಗುಗಳು ತಂಗುವ ದೊಡ್ಡ ದೊಡ್ಡ ಬಂದರುಗಳಲ್ಲೂ ಕೂಡಾ ಇವರನ್ನು ಸಂಪರ್ಕಿಸಿ ದಂಧೆಗೆ ಒಯ್ಯುವ ಒಂದು ವ್ಯವಸ್ಥೆಯೇ ಕಾರ್ಯನಿರ್ವಹಿಸುತ್ತದೆ. ಇದೊಂದು ವ್ಯವಸ್ಥಿತ ಜಾಲವಾಗಿದೆ ಎಂದು ಈ ವೃತ್ತಿಯಲ್ಲಿದ್ದ ನನ್ನ ಗೆಳತಿಯೊಬ್ಬಳು ಹೇಳಿದ್ದಳು. ಹಿಂದೆ ಹೀಗೆ ವೃತ್ತಿ ನಿರತರಾದ ವೇಶ್ಯೆಯರ ಮನ ಪರಿವರ್ತನೆ ಮಾಡಲು ಪಾದ್ರಿಗಳು ಪ್ರಯತ್ನಿಸುತ್ತಿದ್ದರಂತೆ. ಈಗಲೂ ಇಂತಹ ಪ್ರಯತ್ನ ಇದೆಯೋ ಇಲ್ಲವೋ ಗೊತ್ತಿಲ್ಲ. ಅಂತೂ ಕಾಮನಾಟಗಳನ್ನು ನಿಯಂತ್ರಿಸುವುದು ಸಾಧ್ಯವಿಲ್ಲ ಎಂಬ ಸತ್ಯ ಸಾಬೀತಾಗಿದೆ. ನಾವಾಗಿಯೇ ಒಪ್ಪಿಕೊಂಡು ಈ ದಂಧೆಗೆ ಪ್ರವೇಶಿಸಿದರೆ ಅದನ್ನು ಕಷ್ಟಪಟ್ಟಾದರೂ ನಾವೇ ನಿಯಂತ್ರಿಸಬಹುದು. ನಮ್ಮ ದೇಹವನ್ನೇ ಬಂಡವಾಳ ಮಾಡಿಕೊಂಡು ಬೇರೆಯವರು ಉದ್ಯಮವನ್ನು ನಡೆಸುತ್ತಿರುವುದಿದೆಯಲ್ಲಾ ಇದು ಆತಂಕದ ಸಂಗತಿಯಾಗಿದೆ. ತಮ್ಮ ಮೇಲೆ ನಡೆಯುತ್ತಿರುವ ಶೋಷಣೆಗಳಿಂದ ಜಾಗೃತರಾಗದಿದ್ದರೆ ನಮ್ಮ ಭವಿಷ್ಯ ಕರಾಳವಾಗಿರುತ್ತದೆ ಎಂಬುದಂತೂ ಸತ್ಯ. ಇದು ನಾನು ಕಲಿತ ಪಾಠ.

* * *

ಕಾಮನ ಮಾಯಾಜಾಲದ ವಿಸ್ತಾರ

[ಸಂಪಾದಿಸಿ]

ಕಾಮನ ಮಾಯಾಜಾಲದ ವಿಸ್ತಾರ

ಮನುಷ್ಯನಿಗೆ ಮತ್ತು ಎಲ್ಲಾ ಜೀವಿಗಳಿಗೆ ನಿದ್ದೆ ಎಷ್ಟು ಅವಶ್ಯವೋ ಅಷ್ಟೇ ಕಾಮವೂ ಮುಖ್ಯ. ಅದು ನಿಸರ್ಗಸಹಜ ಗುಣ. ಕಾಮದಿಂದಲೇ ಸೃಷ್ಟಿಕಾರ್ಯ ನಿರಂತರವಾಗಿ ನಡೆಯುತ್ತದೆ. ವಯಸ್ಸಿಗೆ ಸಹಜವಾದ ಕಾಮವನ್ನು ನಿಗ್ರಹಿಸುವುದು ತುಂಬಾ ಕಷ್ಟ. ಋಷಿ, ಮುನಿಗಳು ಇಂದ್ರಿಯಗಳನ್ನು ಗೆದ್ದಿದ್ದೇವೆ ಎಂದು ಹೇಳುವುದಿದೆಯಲ್ಲ ಇದು ಅರ್ಧ ಸತ್ಯ. ಮನಸ್ಸಿನಲ್ಲಿ ಹುಟ್ಟಿದ, ಮನಸ್ಸಿನೊಳಗೆ ಅಡಗಿ ಕೂತ ಈ ಕಾಮವಿದೆಯಲ್ಲಾ ಈ ಕಾಮದ ಮಾಯಾ ಜಾಲದಲ್ಲಿ ಸಿಕ್ಕಿಬೀಳದ ಜೀವಿಗಳಿರಲು ಸಾಧ್ಯವೇ? ಪ್ರಾಣಿ ಪಕ್ಷಿ ಸಂಕುಲಗಳಲ್ಲಿ ಕಾಮ ಕೆರಳುವ ಒಂದು ನಿಶ್ಚಿತ ಅವಧಿ ಇರುತ್ತದೆ.ಆ ಕಾಲದಲ್ಲಿ ಮಾತ್ರ ಕೂಡುತ್ತವೆ. ಆದರೆ ಮನುಷ್ಯನಿಗೆ ಹಾಗಿಲ್ಲ. ಹಗಲು ರಾತ್ರಿಯೆನ್ನದೆ ಎಲ್ಲಾ ಕಾಲದಲ್ಲೂ ಕಾಮಕ್ರಿಯೆಯಲ್ಲಿ ತೊಡಗಿಕೊಂಡಿರಬಲ್ಲವನು ಮನುಷ್ಯ ಮಾತ್ರ. ಆದಿ ಮಾನವನ ಕಾಲದಲ್ಲಿ ಹೇಗಿದ್ದನೋ? ಬಹುಶಃ ಈಗ ಇರುವಂತೆ ಎಲ್ಲಾ ಕಾಲಗಳಲ್ಲಿ ಕಾಮಕ್ರಿಯೆಯಲ್ಲಿ ತೊಡಗಿಕೊಂಡಿರಲು ಖಂಡಿತಾ ಸಾಧ್ಯವಿಲ್ಲ. ನಾಗರಿಕತೆಯ ಆರಂಭ ಕಾಲದಲ್ಲಿ ಆಸ್ತಿಯ ಪರಿಕಲ್ಪನೆ ಉಂಟಾದಾಗ ಹೆಂಡತಿಯೂ ಆಸ್ತಿಯಾದಳು. ಕುಟುಂಬ ವ್ಯವಸ್ಥೆ ಬಲಗೊಂಡಾಗ ಕುಟುಂಬದ ಹೊರಗಿನ ಸಂಬಂಧಗಳೂ ಹುಟ್ಟಿಕೊಂಡು ಹೆಣ್ಣು, ಗಂಡುಗಳಲ್ಲಿ ಹಾದರದ ಪ್ರವೃತ್ತಿ ಹೆಚ್ಚಾಗಿರಬೇಕು. ಈ ಹಾದರವನ್ನು ಒಂದು ವ್ಯವಸ್ಥಿತವಾಗಿ ರೂಪಿಸಲು ವೇಶ್ಯಾವಾಟಿಕೆಯೆಂಬ ವ್ಯವಸ್ಥೆಯನ್ನು ಸಮಾಜ ರೂಢಿಸಿಕೊಂಡಿರಬೇಕು. ಪುರುಷಪ್ರಧಾನ ಸಮಾಜ ತನಗೆ ಬೇಕಾದಂತೆ ನೀತಿ, ನಿಯಮ ರೂಪಿಸಿಕೊಂಡು, ಪುರಾಣ ಕತೆಗಳನ್ನು ರಚಿಸಿ, ಧರ್ಮಶಾಸ್ತ್ರಗಳ ಮೂಲಕ ಕಾನೂನು ಕ್ರಮಗಳನ್ನು ಮಾಡಿದ ರೀತಿಗೆ ನಾವು ಬೆಕ್ಕಸ ಬೆರಗಾಗಬೇಕು. ಭೂಲೋಕದಲ್ಲಿ ವೇಶ್ಯೆಯರ ಸಂಗ ಮಾಡುವುದಕ್ಕೆ ಪುರುಷರಿಗೆ ಮುಕ್ತ ಪರವಾನಿಗೆ ನೀಡಿದ ಪುರಾಣಗಳು ಸತ್ತ ಮೇಲೆ ಸ್ವರ್ಗದಲ್ಲೂ ವೇಶ್ಯೆಯರ ಸಂಗದ ಆಮಿಷವನ್ನೊಡ್ಡಿದ ಪ್ರಸಂಗಗಳು ಬಹಳ ಕುತೂಹಲದಾಯಕವಾಗಿವೆ. ಸ್ವರ್ಗ ಸುಖಕ್ಕೆ ರಂಭೆ, ಊರ್ವಶಿಯರಂತಹ ಹೆಣ್ಣು ವೇಶ್ಯಯರನ್ನು ಮಾತ್ರ ಪುರಾಣಗಳು ಹೆಸರಿಸುತ್ತವೆ. ಈ ಸಂಗ ಸುಖ ಗಂಡಸರಿಗೆ ಮಾತ್ರ ಹೆಂಗಸರಿಗೆ ಸ್ವರ್ಗದಲ್ಲಿ ಪ್ರವೇಶವಿದೆಯೇ? ಇದ್ದರೆ ಸ್ವರ್ಗದಲ್ಲಿ ಯಾವ ಸುಖವಿದೆ? ಗೊತ್ತಿಲ್ಲ. ಅಲ್ಲೂ ಪುರಾಣಕಾರರ ಲಿಂಗ ತಾರತಮ್ಯದ ಬಗ್ಗೆ ಯಾರೂ ಸೊಲ್ಲೆತ್ತಿಲ್ಲ. ಯಾಕೆಂದರೆ ಹೆಣ್ಣು ಪತಿವ್ರತೆಯಾಗಿ ಈ ಭೂಮಿಯ ಮೇಲೆ ಬಾಳಿದರೆ, ಯೋನಿ ಪಾವಿತ್ರ್ಯವನ್ನು ಕಾಪಾಡಿದರೆ, ಇಲ್ಲವೇ ಗಂಡ ಸತ್ತಾಗ ಸಹಗಮನ ಮಾಡಿದರೆ ಮಾತ್ರ ಗಂಡನಿಗೆ ಸ್ವರ್ಗ ಸುಖ ಲಭಿಸುತ್ತದೆ ಎಂದು ಪುರಾಣಗಳು ತಾಕೀತು ಮಾಡಿದವು. ಪತಿವ್ರತೆಯಾದವಳು ಭೂಮಿಯ ಮೇಲೂ ಕಾಮವನ್ನು ನಿಯಂತ್ರಿಸಿಕೊಳ್ಳಬೇಕು. ಆದರೂ ಅವಳಿಗೆ ಸ್ವರ್ಗದಲ್ಲಿ ಸ್ಥಾನವಿದೆಯೆಂಬ ಖಾತ್ರಿಯಿಲ್ಲ. ಗಂಡನಿಗೆ ಸ್ವರ್ಗ ಸುಖವನ್ನು ದೊರಕಿಸಿ ಕೊಡುವುದಕ್ಕಾಗಿಯೇ ಪತಿವ್ರತೆಯ ಬಾಳು ಸಾರ್ಥಕವಾಗಬೇಕು. ಹಾಗಾದರೆ ವೇಶ್ಯೆಯರಿಗೆ ಸ್ವರ್ಗದಲ್ಲಿ ಜಾಗವಿದೆಯೇ? ಬಹುಶಃ ಇಲ್ಲ. ಹೆಂಗಸರಿಗೆ ಸ್ವರ್ಗ ಸುಖವನ್ನು ನೀಡುವ ಬಗ್ಗೆ ಪುರಾಣಕಾರರು ಯೋಚನೆಯನ್ನೇ ಮಾಡಿರಲಾರರು ಎಂದು ಕಾಣುತ್ತದೆ.

ಈ ಭೂಮಿಯ ಮೇಲೆ ಕಾಮದ ಪೂರೈಕೆಗಾಗಿ ಮನುಷ್ಯ ಮಾಡಿಕೊಂಡ ವ್ಯವಸ್ಥೆ ಮತ್ತು ಅದರಿಂದ ಹೆಣ್ಣು ಜೀವದ ಮೇಲಾಗುತ್ತಿರುವ ದೌರ್ಜನ್ಯ, ಹಿಂಸೆ ಇತ್ಯಾದಿಗಳ ಬಗ್ಗೆ ಒಂದಷ್ಟು ವಿಷಯಗಳ ಬಗ್ಗೆ ಈ ಕೃತಿಯಲ್ಲಿ ಚರ್ಚಿಸಿದೆ. ಕಾಮಲಾಲಸೆಗಳು ಕೇವಲ ಗಂಡಿಗೆ ಮಾತ್ರವಲ್ಲ ಹೆಣ್ಣಿಗೂ ಇರುತ್ತವೆ. ಈ ಲಾಲಸೆ ಹದ ತಪ್ಪಿದರೆ ಬಾಳು ಚಿಂದಿ ಚಿಂದಿಯಾಗುತ್ತವೆ. ಕುಟುಂಬ ವ್ಯವಸ್ಥೆ ನಾಶವಾಗುತ್ತದೆ ಎಂಬ ಸತ್ಯದ ಅರಿವೂ ನಮಗಿದೆ. ಆದುದರಿಂದ ಹೆಣ್ಣುಮಕ್ಕಳು ತಾವಾಗಿ ಈ ವೃತ್ತಿಗೆ ಬರುವವರಿಗಿಂತ ಈ ವೃತ್ತಿಗೆ ದೂಡಲ್ಪಟ್ಟವರೇ ಹೆಚ್ಚು ಎಂಬ ವಾಸ್ತವವೂ ನಮ್ಮ ಕಣ್ಣ ಮುಂದಿದೆ. ನನ್ನ ಈ ಕೃತಿ ಅಚ್ಚಿಗೆ ಹೋಗುತ್ತಿರುವ ಸಮಯದಲ್ಲೇ ಎರಡು ವಾರಗಳ ಅಂತರದಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ಮಾಡಿ ಹೆಣ್ಮಕ್ಕಳನ್ನು ರಕ್ಷಿಸಿದ ಎರಡೆರಡು ವರದಿಗಳು ಪತ್ರಿಕೆಗಳಲ್ಲಿ ಪ್ರಕಟವಾದುವು. ಕಳೆದ ವಾರದಲ್ಲಿ ಇನ್ನೂ ಒಂದು ವಿಶೇಷವಾದ ಸುದ್ದಿ ಪ್ರಕಟವಾಯಿತು. ಕಾಲೇಜಿಗೆ ಹೋಗುವ ಹೆಣ್ಮಕ್ಕಳನ್ನು ವೇಶ್ಯಾವಾಟಿಕೆಗೆ ಸೆಳೆದು ದಂಧೆ ಮಾಡುತ್ತಿದ್ದ ಸುದ್ದಿಯು ಫೆಬ್ರವರಿ 8 ಮತ್ತು 9ನೆಯ ತಾರೀಕಿನ ಪತ್ರಿಕೆಗಳಲ್ಲಿ ಪ್ರಕಟವಾದುವು. ಮಾರ್ಚ್ ತಿಂಗಳಲ್ಲಿ ಕಾಲೇಜು ಕನೈಯರನ್ನು ವೇಶ್ಯಾವಾಟಿಕೆಗೆ ಬಳಸಿಕೊಂಡ ಫ್ಲಾಟ್ ಮಾಲಿಕ ಮತ್ತು ವಿಟಪುರುಷರನ್ನು ಬಂಧಿಸಿದ ಸುದ್ದಿ ಪ್ರಕಟವಾಗಿದೆ. ಇದು ಪತ್ರಿಕೆಯಲ್ಲಿ ಈಗ ಪ್ರಕಟವಾಯಿತು ಎಂಬುದನ್ನು ಬಿಟ್ಟಿರೆ ಇದು ಹಿಂದೆ ಕೆಲವು ವರ್ಷಗಳಿಂದಲೂ ನಡೆಯುತ್ತಿದ್ದ ಸಂಗತಿಯೇ ಆಗಿದೆ. ನಾನು ಸಂದರ್ಶಿಸಿದ ಕೆಲವು ಹುಡುಗಿಯರು ಈ ಸಂಗತಿಯನ್ನು ನನ್ನಲ್ಲಿ ಹೇಳಿಕೊಂಡಿದ್ದರು. ಅವರಲ್ಲಿ ಹಲವರು ಗೃಹಿಣಿಯರಾಗಿ ಸುಖಜೀವನ ನಡೆಸುತ್ತಾರೆ. ಕೆಲವರು ಮಾತ್ರ ಈ ದಂಧೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಇದೇ ಜನವರಿ ಎರಡನೇ ವಾರದಲ್ಲಿ ಅಂದರೆ 11ನೆಯ ತಾರೀಕಿನ ಪತ್ರಿಕೆ ಯಲ್ಲಿ ಪ್ರಕಟವಾದ ಸುದ್ದಿ ಬಹಳ ವಿಶೇಷವಾಗಿತ್ತು. ತಿರುವನಂತಪುರದಲ್ಲಿ 'ಸಂಗಾತಿ ವಿನಿಮಯ' ಮಾಡಿಕೊಳ್ಳುವ ಗ್ಯಾಂಗನ್ನು ಬಂಧಿಸಿದ್ದಾರೆಂದು ತಿಳಿಸಲಾಗಿದೆ. ಕೊಟ್ಟಾಯಂ, ಎರ್ನಾಕುಲಂ, ಆಲಪ್ಪುಳ ಜಿಲ್ಲೆಗಳಲ್ಲಿದ್ದ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪತ್ರಿಕಾ ವರದಿ ಹೇಳುತ್ತದೆ. ಕರುಚಕಲ್ ನಗರದ ಮಹಿಳೆಯೊಬ್ಬರು ತನ್ನ ಗಂಡ ತಾನು ಬೇರೊಬ್ಬರೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಪೀಡಿಸುತ್ತಾನೆಂದು ಪೊಲೀಸರಿಗೆ ದೂರು ನೀಡಿದ ಕಾರಣ ಈ ಸುದ್ದಿ ಬಹಿರಂಗಗೊಂಡಿತು. ಫೆಬ್ರವರಿ ಎರಡನೇ ವಾರದಲ್ಲಿ ಇದೇ ರೀತಿಯ ಗ್ಯಾಂಗನ್ನು ಬೆಂಗಳೂರಿನಲ್ಲೂ ಬಂಧಿಸಲಾಯಿತು. ಸಂಗಾತಿ ವಿನಿಮಯ ಮಾಡಿಕೊಳ್ಳುವುದು ಕಾಮನಾಟದ ಮತ್ತೊಂದು ಸ್ವರೂಪವನ್ನು ತಿಳಿಸುತ್ತದೆ. ಕಾಮನಾಟಗಳಿಗೆ ವೇಶ್ಯಾವಾಟಿಕೆ ಸುರಕ್ಷಿತವಲ್ಲವೆಂಬ ಭಾವನೆಯಿಂದಲೋ ಹಣ ಸುಮ್ಮನೆ ಕೈಬಿಡುತ್ತದೆ ಎಂಬ ಕಾರಣಕ್ಕೋ ಹೀಗೆ ಉಚಿತವಾಗಿ ಗೆಳೆಯರ ಪತ್ನಿಯರೊಂದಿಗೆ ಕಾಮಕೇಳಿಗೆ ಆಹ್ವಾನವೀಯುವ ಒಂದು ಒಡಂಬಡಿಕೆಯಲ್ಲಿ ಈ ಕೆಲಸ ನಡೆಯುತ್ತದೆ. ಇದೇನೂ ಹೊಸ ವಿಷಯವಲ್ಲ. ಭಾರತದ ಚರಿತ್ರೆಯಲ್ಲಿ ಇಂತಹ ಒಂದು ವ್ಯವಸ್ಥೆಯಿದ್ದುದು ತಿಳಿಯುತ್ತದೆ. ಹಿಂದೆ ಮಹಾರಾಜರ ಕಾಲದಲ್ಲಿ 'ಕಂಚುಕೀ ಉತ್ಸವ'ವನ್ನು ಏರ್ಪಡಿಸುತ್ತಿದ್ದರಂತೆ. ಸ್ನೇಹ ಸಂಬಂಧವಿರುವ ರಾಜರು, ಸಾಮಂತರು ಒಂದು ನಿಶ್ಚಿತ ದಿನದಲ್ಲಿ ಅವರವರ ಪತ್ನಿಯರ ಒಂದು ರವಿಕೆಯನ್ನು ಒಂದು ದೊಡ್ಡ ಪಾತ್ರೆಯಲ್ಲಿ ಹಾಕುತ್ತಿದ್ದರಂತೆ. ಸೇರಿದ ರಾಜರು ಆ ಪಾತ್ರೆಯಿಂದ ತನ್ನ ಕೈಗೆ ಸಿಕ್ಕಿದ ರವಿಕೆಯನ್ನು ಎತ್ತಿಕೊಳ್ಳುತ್ತಿದ್ದರು. ಆ ರವಿಕೆಯ ಒಡತಿಯೊಂದಿಗೆ ಒಂದು ರಾತ್ರಿ ಕೂಡುವ ಉಚಿತ ಅವಕಾಶವು ಸಿಗುತ್ತಿತ್ತಂತೆ. ರಾಜರುಗಳ ಅಂತಃಪುರದಲ್ಲಿ ನೂರಾರು ಪತ್ನಿಯರಿದ್ದರು. ಆದರೂ ಕೂಡಾ ಬೇರೆ ರಾಜರ ಪತ್ನಿಯರನ್ನು ಭೋಗಿಸುವ ಕಾಮಲಾಲಸೆಯನ್ನು ಏನೆಂದು ವರ್ಣಿಸುವುದು? ಅಂತಃಪುರದೊಳಗಿನ ಹಾದರದ ಕತೆಗಳೂ ಸಾಕಷ್ಟಿವೆ. ರಾಣಿಯರ ಶೋಷಣೆಯ ದಾರುಣ ಕತೆಗಳು ಬೇಕಾದಷ್ಟಿವೆ. ಮನುಷ್ಯನ ಕಾಮಕ್ಕೆ ಕಟ್ಟೆ ಕಟ್ಟಿ ತಡೆಯಲು ಸಾಧ್ಯವಿಲ್ಲ. ಕಾಮವು ಜೀವಿಗಳಲ್ಲಿ ಚೈತನ್ಯವನ್ನು ತುಂಬಬಲ್ಲುದು. ಹಾಗೆಯೇ ಜೀವನವನ್ನು ನಾಶ ಮಾಡಬಲ್ಲುದು. ವೇಶ್ಯೆಯರ ಬಗ್ಗೆ ಹೆಚ್ಚು ಹೆಚ್ಚು ಅಧ್ಯಯನ ಮಾಡುತ್ತಿದ್ದಂತೆಲ್ಲಾ ಅವರ ನೋವನ್ನು ಅರ್ಥ ಮಾಡಲು ಸಾಧ್ಯವಾಯಿತು. ಅವರನ್ನು ಆಪ್ತವಾಗಿ ಅಪ್ಪಿಕೊಂಡಂತೆಲ್ಲಾ ಮನಸಿಜನ ಮಾಯಾಜಾಲದ ವಿಸ್ತಾರ ಮತ್ತು ಆಳವು ಅರ್ಥವಾಗತೊಡಗಿತು. ಕಾಮಿಗಳ ಕಾಮವು ಭೋಗಿಸುವುದರಿಂದ ಶಾಂತವಾಗುವುದಿಲ್ಲ. ಬೆಂಕಿಗೆ ತುಪ್ಪ ಬಿದ್ದಂತೆ ಅದು ತೀಕ್ಷ್ಣ‍ವಾಗಿ ಉರಿಯುತ್ತದೆ. ಕಾಮಾತುರರಿಗೆ ಲಜ್ಜೆ, ಭಯ ಇರುವುದಿಲ್ಲ. ಪಂಚೇಂದ್ರಿಯಗಳಿಂದ ಅನುಭವಕ್ಕೆ ಬರುವ ಜ್ಞಾನವೇ ಕಾಮವೆನ್ನುತ್ತಾರೆ. ಸಾರ್ವಜನಿಕ ಜೀವನವು ಹೆಚ್ಚು ಕ್ರಮಬದ್ಧವಾಗಿ ಮತ್ತು ಸುವ್ಯವಸ್ಥಿತವಾದಾಗಲೆಲ್ಲಾ ನೈತಿಕತೆಯ ಪತನವಾಗುತ್ತದೆನ್ನುವುದನ್ನು ಚರಿತ್ರೆಯ ಪಾಠಗಳು ತಿಳಿಸುತ್ತವೆ. ರಾಜರ ಸುವರ್ಣ ಯುಗದ ಕಾಲದಲ್ಲಿಯೇ ಈ ರೀತಿಯ ಸ್ವೇ‍ಚ್ಛಾ‍ಚಾರಗಳು ನಡೆಯುತ್ತವೆ ಎಂದು ಚರಿತ್ರೆಯ ಪಾಠಗಳು ಹೇಳುತ್ತವೆ. ಅಂದರೆ ಸುಖ ಸಮೃದ್ಧಿ ಹೆಚ್ಚಾದಾಗಲೆಲ್ಲಾ ಈ ಕಾಮದ ಮಾಯಾ ಜಾಲಕ್ಕೆ ಸಿಲುಕುವವರ ಸಂಖ್ಯೆ ಹೆಚ್ಚು. ಸಂಗಾತಿ ವಿನಿಮಯ ಮಾಡುವುದು, ಮೋಜಿಗಾಗಿ ಕಾಮುಕರಾಗುವ ಒಂದು ವರ್ಗವಿದೆಯಲ್ಲಾ, ಅದನ್ನು ಹೈಟೆಕ್ ವೇಶ್ಯಯರು ಎಂದು ಹೇಳುತ್ತೇವೆ. ಈ ವರ್ಗದ ಕಾಮದಾಟಗಳನ್ನು ಇಲ್ಲಿ ಗಣನೆಗೆ ತೆಗೆದುಕೊಂಡಿಲ್ಲ, ಅಧ್ಯಯನ ಮಾಡಿಲ್ಲ. ಜೀವನದ ಅತ್ಯಂತ ದಾರುಣ ಸ್ಥಿತಿಯಲ್ಲಿದ್ದಾಗ ಬದುಕಿಗೆ ಬೇರೆ ದಾರಿ ಕಾಣದೆ ವೇಶ್ಯಾ ವೃತ್ತಿಗಿಳಿದವರು ಮತ್ತು ಈ ವೃತ್ತಿಗೆ ಮೋಸದಿಂದ ತಳ್ಳಲ್ಪಟ್ಟವರನ್ನು ಮಾತ್ರ ಅಧ್ಯಯನ ಮಾಡುವುದು ನನ್ನ ಉದ್ದೇಶವಾಗಿತ್ತು. ಈ ಕೆಲಸದಲ್ಲಿ ನಾನು ಸಂಪೂರ್ಣ ಯಶಸ್ವಿಯಾಗಿದ್ದೇನೆಂದು ಭಾವಿಸಿಲ್ಲ. ಆದರೆ ಆ ನೊಂದ ಮಹಿಳೆಯರ ನೋವಿಗೆ ಸ್ಪಂದಿಸಿ, ಅವರ ಮಾತುಗಳನ್ನು ದಾಖಲಿಸುವ ಅವಕಾಶ ನೀಡಿದ ಆ ನನ್ನ ಸೋದರಿಯರಿಗೆ ಶಿರಬಾಗಿ ವಂದಿಸುತ್ತೇನೆ.

ಪರಾಮರ್ಶನ ಗ್ರಂಥಗಳು

[ಸಂಪಾದಿಸಿ]

ಪರಾಮರ್ಶನ ಗ್ರಂಥಗಳು

  1. ಪಾತರದವರು, ಡಾ.ಶೈಲಜಾ ಹಿರೇಮಠ, ಪ್ರಸರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ (1999)
  2. ಕನ್ನಡ ಶಾಸನಗಳಲ್ಲಿ ವೇಶ್ಯೆಯರು, ಡಾ. ತಿಪ್ಪೇ ಸ್ವಾಮಿ, ಗೌತಮ್ ಬುಕ್ ಹೌಸ್, ಕಮಲಾಪುರ (2016)
  3. ವೇಶ್ಯಾವಾಟಿಕೆ ಒಂದು ಅಧ್ಯಯನ, ಡಾ. ಲೀಲಾ ಸಂಪಿಗೆ, ನೆಲೆ ಅಕಾಡೆಮಿ ಪ್ರಕಾಶನ (2005)
  4. ಬೆತ್ತಲೆ ವೃಕ್ಷ, ಡಾ. ಸಿ.ಜಿ. ಲಕ್ಷ್ಮೀಪತಿ ಸಖಿ, ಹೊಸಪೇಟೆ ಬಳ್ಳಾರಿ (2007)
  5. ಬುದ್ಧನಿಲ್ಲದ ಆಮ್ರಪಾಲಿ, ಡಾ. ಲೀಲಾ ಸಂಪಿಗೆ, ಚಾರುಮತಿ ಪ್ರಕಾಶನ, ಚಾಮರಾಜ ಪೇಟೆ, ಬೆಂಗಳೂರು (2014)
  6. ಕಾಯದ ಕಾರ್ಪಣ್ಯ, ಕುಸುಮಾ ಶಾನುಭೋಗ, ಹೇಮಾಂಶು ಪ್ರಕಾಶನ, ಮಂಗಳೂರು (2007)
  7. ಜನವಶ್ಯ-:ಕಲ್ಲರಸ ವಿರಚಿತ, ಜಿ.ಜಿ. ಮಂಜುನಾಥನ್ (ಸಂಪಾದಕ), ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾನಿಲಯ (1974)
  8. ದೇವದಾಸಿ ಮತ್ತು ಬೆತ್ತಲೆ ಸೇವೆ, ಉತ್ತಮ ಕಾಂಬಳೆ, ಅನು:- ಡಾ. ಸಿದ್ರಾಮ ಕಾರಣಿಕ, ಲಡಾಯಿ ಪ್ರಕಾಶನ, ಗದಗ (2013)
  9. ವೇಶ್ಯೆಯರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ನಡೆದು ಬಂದ ದಾರಿ, ಪ್ರೊ ಶಿವರಾಮಯ್ಯ, ಸೃಷ್ಟಿ ಪ್ರಕಾಶನ, ಬೆಂಗಳೂರು (2012)
  10. ಮಹಾರಾಷ್ಟ್ರದ ತುಂಬಾ ಹರಿಯುತ್ತಿರುವ ವೇಶ್ಯಾ ಸೋದರಿಯರ ಕಣ್ಣೀರು ಕಡಲಿನ ಕೋಗಿಲೆ ಗಾನ, ಚೆನ್ನಣ್ಣ ವಾಲೀಕಾರ, ವಾಲೀಕಾರ ವಿರಸಂ, ದಲಿತ ಬಂಡಾಯ ಸಾಹಿತ್ಯ ಪ್ರಕಾಶನ ಕೇಂದ್ರ, ಗುಲ್ಬರ್ಗಾ (1999)
  11. ಅಲೆಮಾರಿ ಪ್ರವಾದಿ, ವಿಷ್ಣು ಪ್ರಭಾಕರ್, ಅನು:- ಪ್ರಧಾನ್ ಗುರುದತ್ತಾ ನ್ಯಾಶನಲ್ ಬುಕ್ ಟ್ರಸ್ಟ್ ಇಂಡಿಯಾ (2001)
  12. ಹರದೇಶಿ-ನಾಗೇಶಿ ಕಲೆ ಮತ್ತು ಕಲಾವಿದರು, ಲಿಂಗ ಸಂಬಂಧಿ ಅಧ್ಯಯನ, ಡಾ. ಶೈಲಜಾ ಹಿರೇಮಠ, ಪ್ರಸರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ (2011)
  13. ವೇಶ್ಯಾ ಜಗತ್ತಿನ ಅನಾವರಣ, ಕೆಂಗುಲಾಬಿ, ಹನುಮಂತ ಹಾಲಿಗೇರಿ,
    ಜೆ.ಪುಸ್ತಕ, C/o ವಿ.ಆರ್, ಕಾರ್ಪೆಂಟರ್, ಬೆಂಗಳೂರು (2011)
  14. ಭಗ್ನ ವಿಜಯನಗರ ಚರಿತ್ರೆ, ಕಂದೂರಿ ಈಶ್ವರ ದತ್ತು, ಅನು:- ಗುರುಮೂರ್ತಿ ಪೆಂಡಕೂರು, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾನಿಲಯ, ಹಂಪಿ (2010)
  15. ಕಲ್ಲಣನ ರಾಜತರಂಗಿಣಿ, ಅನು:- ನೀರ್ಪಾಜೆ ಭೀಮಭಟ್ಟ, ಅಭ್ಯುದಯ ಪ್ರಕಾಶನ, ಕನ್ಯಾನ (1999)
  16. ದಿ ಸೆಕೆಂಡ್ ಸೆಕ್ಸ್, ಸಿಮೋನ್ ದ ಬೋವಾ, ಅನು:- ಡಾ. ಎಚ್. ಎಸ್.ಶ್ರೀಮತಿ, ಅಧ್ಯಯನ ಮಂಡಲ, ಬೆಂಗಳೂರು (2007)
  17. ದಲಿತರು ಮತ್ತು ಚರಿತ್ರೆ, ಸಂ:- ಡಾ. ವಿರೂಪಾಕ್ಷ ಪೂಜಾರಳ್ಳಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ (2005)
  18. ತುಳುನಾಡಿನ ಶಾಸನಗಳ ಸಾಂಸ್ಕೃತಿಕ ಅಧ್ಯಯನ, ಡಾ. ಶೈಲಾ ಟಿ, ವರ್ಮ, ಜ್ಞಾನೋದಯ ಪ್ರಕಾಶನ, ಬೆಂಗಳೂರು (2002)
  19. ಪ್ರವಾಸಿ ಕಂಡ ವಿಜಯನಗರ, ಸಂಪಾದಕ:- ಡಾ. ಬಿ.ಎ. ವಿವೇಕ್ ರೈ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ (2005)
  20. ದೇವದಾಸಿ ಸಂಪ್ರದಾಯ, ಡಾ. ಜೋಗನ್ ಶಂಕರ್, ವಿಮೋಚನಾ ಪ್ರಕಾಶನ, ಅಥಣಿ (1993)
  21. ಉತ್ತರೆಯ ಅಳಲು, ಕೆ. ಶಾರದಾ ಭಟ್, ಸುಮಂತ ಪ್ರಕಾಶನ, ಉಪ್ಪಿನಕೋಟೆ, ಬ್ರಹ್ಮಾವರ (2007)
  22. ಬರ್ತೀಯಾ........ಎಷ್ಟು?, ಸಂಪಾದಕಿ:- ರುಚಿರಾ ಗುಪ್ತ, ಅನು:- ಸುಕನ್ಯಾ ಕನ್ಯಾರಳ್ಳಿ, ವಸಂತ ಪ್ರಕಾಶನ, ಬೆಂಗಳೂರು (2019)
  23. ದಕ್ಷಿಣ ಕನ್ನಡ ಜಿಲ್ಲೆಯ ಪುರಾತತ್ವ ಸಂ:- ಡಾ. ಆರ್. ಗೋಪಾಲ್, ಪ್ರಾಚ್ಯ ವಸ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು (2007)
  24. ತುಳು ಕರ್ನಾಟಕ ಅರಸು ಮನೆತನಗಳು ಸಂಪಾದಕರು:- ಹೆರಂಜೆ ಕೃಷ್ಣ ಭಟ್ ಮತ್ತು ಡಾ. ಎಸ್.ಡಿ. ಶೆಟ್ಟಿ, ಕನ್ನಡ ವಿಶ್ವವಿದ್ಯಾನಿಲಯ ಹಂಪಿ (2000)
  25. ಡೊಮಿಂಗೋಸ್ ಪಿಯಾಸ್ ಕಂಡ ವಿಜಯನಗರ, ಎಂ.ಪಿ. ಪ್ರಕಾಶ್, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾನಿಲಯ, ಹಂಪಿ (2017)
  26. ಮನದೊಳಗಿನ ಸುಪ್ರಭಾತ, ಎಂ.ಎಸ್.ಸುಬ್ಬಲಕ್ಷ್ಮೀ, ಡಾ.ಎನ್‌.ಜಗದೀಶ್‌, ಕೊಪ್ಪ, ವಿಕಾಸ ಪ್ರಕಾಶನ (2016)
  27. ಗಟ್ಟಿದನಿಯ ದಿಟ್ಟ ಕಲಾವಿದೆ, ಬೆಂಗಳೂರು ನಾಗರತ್ನಮ್ಮ, ಡಾ. ಎನ್. ಜಗದೀಶ್ ಕೊಪ್ಪ, ವಿಕಾಸ ಪ್ರಕಾಶನ (2016)
  28. ಅಮೀರ್ ಬಾಯಿ ಕರ್ನಾಟಕ ಡಾ. ರಹಮತ್ ತರೀಕೆರೆ, ಪಲ್ಲವ ಪ್ರಕಾಶನ (2012)
  29. ಡಾ. ಗಂಗೂಬಾಯಿ ಹಾನಗಲ್, ನಿರೂಪಣೆ, ಎನ್ಕೆ ಸಾಹಿತ್ಯ ಪ್ರಕಾಶನ (2002)
  30. ಮಹಿಳಾ ಶೋಷಣೆಯ ನೆಲೆಗಳು, ಡಾ. ಅನುಸೂಯಾ ಕದಂ, ಸಖಿ ಪ್ರಕಾಶನ (2011)
  31. ಶೂನ್ಯವಾದವಳು, ಡಾ|| ವೆಂ. ವನಜ, ಮಾನಸ ಪ್ರಕಾಶನ (2006)
  32. ದೇವದಾಸಿಯರ ಹಾಡುಗಳು, ಸಂ. ಡಾ.ಕನರಾಡಿ ವಾದಿರಾಜ ಭಟ್ಟ, ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನ ಬಸೂರು, ದ.ಕ (1987)
  33. Prostitution in India, A Sociological Study in Mangalore, Veerendra Kumar N, Mangala Publications (2019)
  34. ವಸುಧೆ, ಪ್ರಬಂಧ ಮಂಜರಿ, ಸಂಪಾದಕರು, ವಿಜಯಾಶಂಕರ ಗೀತಾಂಜಲಿ ಪಬ್ಲಿಕೇಶನ್ಸ್ (2014)
  35. ಹೆಣ್ಣುಸಿರ ತಲ್ಲಣಗಳು, ಸಂಪಾದಕರು ರೂಪಾ ಹಾಸನ, ಅಭಿರುಚಿ ಪ್ರಕಾಶನ (2015)
  36. ಅರೆ ಶತಮಾನದ ಮೌನ, ಅನು:- ಅರುಣ್, ಛಂದ ಪುಸ್ತಕ ಪ್ರಕಾಶನ
  37. ಹೇಳುತ್ತೇನೆ ಕೇಳು:-ಹೆಣ್ಣಿನ ಆತ್ಮಕಥನಗಳು, ಸುಕನ್ಯಾ ಕನ್ಯಾರಳ್ಳಿ, ಲಂಕೇಶ್ ಪ್ರಕಾಶನ (2012)
  38. ಕನ್ನಡ ಸಾಹಿತ್ಯ ಪರಿಷತ್ಪತ್ರಿಕೆ ಸಂಪುಟ 70, ಸಂಚಿಕೆ 2
  39. Castes and tribes of Southern India, Edger Thurston ಸಂಪುಟ 2, ಸಂ.: ಡಾ.ಕೆ.ಮರುಳಸಿದ್ಧಪ್ಪ, ಕುವೆಂಪು ಭಾಷಾ ಪ್ರಾಧಿಕಾರ (2019)
  40. ವಿಜಯನಗರ ಕಾಲದ ಮಹಿಳೆಯರ ಕೊಡುಗೆಗಳು, ಡಾ. ಎನ್. ಸರಸ್ವತಿ, ಪ್ರ: ಸಿಂಚು ಮಲ್ಟಿ ಗ್ರಾಫ್ (2008)
  41. ಹೆಣ್ಣು ಹೆಜ್ಜೆ, ಸಾವಿತ್ರಿ ಮುಜುಮದಾರ, ಜನದನಿ ಪ್ರಕಾಶನ (2014)
  42. ಹೆಸರಾದ ಪಟ್ಟಣ ಬಸರೂರು ಒಂದು ಅಧ್ಯಯನ ಸಂಪಾದಕರು, ಪ್ರಕಾಶಕರು: ಶ್ರೀ ಶಾರದಾ ಕಾಲೇಜು ಟ್ರಸ್ಟ್ (ರಿ.), ಬಸ್ರೂರು, ದ.ಕ., ದ್ವಿತೀಯ ಮುದ್ರಣ (2013)
  43. ಸೆಕ್ಸ್ ವರ್ಕರ್ ಒಬ್ಬಳ ಆತ್ಮಕಥನ, ನಳಿನಿ ಜಯಮಾಲಾ, ಅನು: ಕೆ. ನಾರಾಯಣ ಸ್ವಾಮಿ.
  44. ಅವಸಾನ-ಸಹನಾ ವಿಜಯಕುಮಾರ್, ಸಾಹಿತ್ಯ ಭಂಡಾರ, 2020