ವಿಷಯಕ್ಕೆ ಹೋಗು

ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ/ಸಾಧನಗಳು : ಎರಡನೆಯಭಾಗ : ೧೮೫೯-೧೮೬೨

ವಿಕಿಸೋರ್ಸ್ದಿಂದ


90842ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ — ಸಾಧನಗಳು : ಎರಡನೆಯಭಾಗ : ೧೮೫೯-೧೮೬೨1919ಟಿ. ಎಸ್. ವೆಂಕಣ್ಣಯ್ಯ ಮತ್ತು ಎ. ಆರ್. ಕೃಷ್ಣಶಾಸ್ತ್ರೀ

ಈಗ ಪರಮಹಂಸರು ವಿಧ್ಯುಕ್ತವಾಗಿ ಪೂಜೆ ಪುರಸ್ಕಾರಗಳನ್ನುಮಾಡುವುದು ಅಸಾಧ್ಯವಾಗಿ ದೇವಿಯ ಅರ್ಚನೆಯ ಕೆಲಸವನ್ನು ಬಿಟ್ಟಿದ್ದರೂ ದೇವಿಯ ಪೂಜೆಗಾಗಿ ಪ್ರತಿನಿತ್ಯವೂ ಬೆಳಗ್ಗೆ ಹೊತ್ತು ಹೂ ಬಿಡಿಸಿಕೊಂಡು ಬಂದು ಮಾಲೆಗಳನ್ನು ಕಟ್ಟಿಕೊಡುತ್ತಿದ್ದರು. ಒಂದುದಿನ ಬೆಳಗ್ಗೆ ಹೀಗೆ ಮಾಲೆಗೆಂದು ಗಂಗಾತೀರದ ಹೂತೋಟದಲ್ಲಿ ಹೂಬಿಡಿಸುತ್ತಿದ್ದರು. ಆಗ ಒಂದು ದೋಣಿಯು ದಕ್ಷಿಣೇಶ್ವರದ ದೇವಸ್ಥಾನದ ಕಡೆಗೆ ಬರುವಂತೆ ಕಂಡುಬಂತು. ಕಾವಿಯ ಸೀರೆಯನ್ನುಟ್ಟು ಭೈರವೀ ವೇಷಧಾರಿಣಿಯಾದ ಒಬ್ಬ ಹೆಂಗಸುಕೈಯಲ್ಲಿ ಒಂದು ಪುಸ್ತಕಗಳ ದಪ್ತರವನ್ನು ಹಿಡಿದುಕೊಂಡು ದೋಣಿಯಿಂದ ಇಳಿದು ಬಂದಳು. ಆಕೆಯು ಬರುತ್ತಿದ್ದದ್ದನ್ನುನೋಡಿ ಪರಮಹಂಸರು ದೇವಸ್ಥಾನಕ್ಕೆ ಹೋಗಿ ಹೃದಯನನ್ನುಕೂಗಿ ತಾನು ಕರೆದೆನೆಂದು ಹೇಳಿ ಭೈರವೀ ಬ್ರಾಹ್ಮಣಿಯನ್ನುತಾನಿದ್ದಲ್ಲಿಗೆ ಕರೆದುಕೊಂಡು ಬರಲು ಹೇಳಿದನು. ಹೃದಯನುಸ್ವಲ್ಪ ಹಿಂದುಮುಂದು ನೋಡಿ " ಹೆಂಗಸು ಅಪರಿಚಿತಳು ; ಕರೆದರೆತಾನೇ ಇಲ್ಲಿಗೆ ಬರುವಳೇ ?” ಎಂದು ಕೇಳಲು, ಪರಮಹಂಸರು" ನನ್ನ ಹೆಸರನ್ನು ಹೇಳಿ ನಾನು ಕರೆಯುತ್ತೇನೆಂತ ಹೇಳು; ಬರುತ್ತಾಳೆ” ಎಂದು ಹೇಳಿದರು. ಅದರಂತೆ ಹೃದಯನು ಹೋಗಿ ಕರೆಯಲು ಭೈರವಿಯು ಹಿಂದೆ ಮುಂದೆ ನೋಡದೆ ಯಾವ ಪ್ರಶ್ನೆಯನ್ನೂ ಮಾಡದೆ ಅವರಿದ್ದೆಡೆಗೆ ಬಂದುಬಿಟ್ಟಳು.

ಪರಮಹಂಸರನ್ನು ನೋಡಿ ಅತ್ಯಂತ ಆನಂದದಿಂದ ಭೈರವಿಯ ಕಣ್ಣಿಂದ ಆನಂದಾಶ್ರುವು ಹರಿಯುವುದಕ್ಕೆ ಆರಂಭವಾಯಿತು. ಕಣ್ಣೀರನ್ನು ಒರಸಿಕೊಳ್ಳುತ್ತಾ "ನೀನು ಇಲ್ಲಿ ಇದ್ದೀಯೇನು? ನೀನು ಗಂಗಾತೀರದಲ್ಲಿರುವೆ, ಎಂದು ತಿಳಿದು ನಿನ್ನನ್ನು ಹುಡುಕಿಕೊಂಡು ತಿರುಗಾಡುತ್ತಿದ್ದೆನು. ಇಷ್ಟು ದಿನಗಳ ಮೇಲೆ ನಿನ್ನನ್ನು ನೋಡಿದೆನು"ಎಂದು ಹೇಳಿದಳು. ಪರಮಹಂಸರು “ ಅಮ್ಮಾ ನನ್ನ ಸುದ್ದಿನಿಮಗೆ ಹೇಗೆ ಗೊತ್ತಾಯಿತು ? ” ಎಂದು ಕೇಳಲು ಬ್ರಾಹ್ಮಣಿಯು "ಜಗದಂಬೆಯ ಅನುಗ್ರಹದಿಂದ ನನಗೆ ಬಹಳ ದಿನಗಳ ಹಿಂದೆ ಈಸುದ್ದಿಯು ಗೊತ್ತಾಯಿತು " ಎಂದು ಉತ್ತರಕೊಟ್ಟಳು. ಆಮೇಲೆ ಅವರು ಆಕೆಯ ಹತ್ತಿರ ಕುಳಿತು ಮಕ್ಕಳು ತಮ್ಮ ತಾಯಿಯ ಮುಂದೆ ಹೇಳುವ ಹಾಗೆ ತಮ್ಮ ಅಪೂರ್ವವಾದ ದರ್ಶನಗಳು, ಪೂಜೆ ಮಾಡುತ್ತ ಮಾಡುತ್ತ ಬಾಹ್ಯ ಜ್ಞಾನಹೋಗುವುದು, ಮೈಯರಿ, ನಿದ್ರೆಯಲ್ಲಿದಿರುವುದು, ಜನಗಳು ಹುಚ್ಚು ಹಿಡಿದಿದೆ ರೋಗ ಬಂದಿದೆ ಎಂದು ಹೇಳುವುದು ಮುಂತಾದ ವಿಷಯಗಳನ್ನೆಲ್ಲ ಮುಚ್ಚು ಮರೆ ಇಲ್ಲದೆ ಹೇಳಿ “ ನನಗೆ ಯಾಕೆ ಹೀಗಾಗುತ್ತದೆ? ನನಗೆ ನಿಜವಾಗಿಯೂ ಹುಚ್ಚು ಹಿಡಿದಿದೆಯೇ ? ದೇವಿಯನ್ನು ಮನಃಪೂರ್ವಕವಾಗಿ ಧ್ಯಾನಮಾಡಿದ್ದರಿಂದ ನನಗೆ ರೋಗಬಂದಿದೆಯೆ? ” ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಭೈರವಿಯು “ನಿನಗೆ ಹುಚ್ಚೆಂದು ಹೇಳಿದವರಾರಪ್ಪಾ! ನಿನಗೆ ಹುಚ್ಚು ಹಿಡಿದಿಲ್ಲ, ಇದು ಮಹಾಭಾವದಲಕ್ಷಣ. ನಿನ್ನ ಈ ಸ್ಥಿತಿಯು ಯಾರಿಗೂ ಗೊತ್ತಾಗುವುದಿಲ್ಲ. ಆದ್ದರಿಂದಲೇಅವರು ಹಾಗೆ ಹೇಳುವುದು. ರಾಧೆಗೂ ಚೈತನ್ಯನಿಗೂ ಹೀಗೆಯೇಆಗಿತ್ತು. ಇದೆಲ್ಲವೂ ಭಕ್ತಿಶಾಸ್ತ್ರದಲ್ಲಿ ಬರೆದಿದೆ. ಅದನ್ನೆಲ್ಲ ನಾನು ನಿನಗೆ ಓದಿಹೇಳುತ್ತೇನೆ. ” ಎಂದು ಹೇಳಿದಳು.

ಭೈರವಿಯು ಭಕ್ತಿಶಾಸ್ತ್ರವನ್ನು ಚೆನ್ನಾಗಿ ಓದಿದ ಪಂಡಿತಳಾಗಿದ್ದಳು. ಆಕೆಯು ಚೈತನ್ಯ ಚರಿತಾಮೃತ, ಚೈತನ್ಯಭಾಗವತ ಮುಂತಾದ ಭಕ್ತಿ ಶಾಸ್ತ್ರಗ್ರಂಥಗಳಲ್ಲಿ ಚೈತನ್ಯದೇವನ ನಡೆನುಡಿ ಆಚಾರವ್ಯವಹಾರ ಮುಂತಾದುವುಗಳ ವಿಚಾರವಾಗಿ ಏನೇನು ಬರೆದಿದೆಯೊ ಅದರೊಡನೆ ಪರಮಹಂಸರ ಲಕ್ಷಣಗಳನ್ನೆಲ್ಲ ಹೋಲಿಸಿ ನೋಡಿ ಅವರು ಅವತಾರ ಪುರುಷರಿರಬೇಕೆಂದು ನಿರ್ಧರಿಸಿದಳು. ಈ ಕಾಲದಲ್ಲಿ ಒಂದುದಿನ ಪರಮಹಂಸರು ಪಂಚವಟಿಯ ಒಳಗೆ ಮಧುರಾನಾಥನೊಡನೆ ಕುಳಿತುಕೊಂಡು ಮಾತನಾಡುತ್ತ, ಮಾತಿಗೆ ಮಾತು ಬಂದು ಭೈರವಿಯು ತಮ್ಮ ವಿಚಾರವಾಗಿ ಹೇಳಿದ್ದನ್ನೆಲ್ಲ ಅನನಿಗೆ ತಿಳಿಸಿದರು. ಅದನ್ನು ಕೇಳಿ ಮಧುರನು “ ಆಕೆ ಏನು ಹೇಳಿದರೇನು? ಅವತಾರಗಳು ಹತ್ತಕ್ಕಿಂತ ಹೆಚ್ಚು ಉಂಟೇನು? ಆದ್ದರಿ೦ದ ಆಕೆಯ ಮಾತು ಹೇಗೆ ಸತ್ಯವಾದೀತು? ಆದರೆ ನಿಮ್ಮ ಮೇಲೆ ಜಗದಂಬೆಯ ಕೃಪೆಯಿದೆ ಎಂಬುದೇನೋ ಸತ್ಯ. ಎಂದು ಹೇಳಿದನು. ಇದಾದ ಸ್ವಲ್ಪ ಹೊತ್ತಿನಮೇಲೆ ಬ್ರಾಹ್ಮಣಿಯು ಅಲ್ಲಿಗೆ ಬಂದಳು. ಪರಮಹಂಸರು ಆಕೆಗೆ ಮಧುರಾನಾಥನ ಪರಿಚಯ ಮಾಡಿಕೊಟ್ಟು ಆಕೆಯನ್ನು ಕುರಿತು “ ಅಮಾ, ನೀನು ನನ್ನ ಸಂಬಂಧವಾಗಿ ಹೇಳಿದ್ದನ್ನೆಲ್ಲ ಈತನಿಗೆ ಹೇಳಿದೆ. ಅದಕ್ಕೆ ಈತನು ಅವತಾರಗಳು ಹತ್ತೇ ಹೊರತು ಹೆಚ್ಚೆಲ್ಲಾದರೂ ಉಂಟೆ ಎಂದನು” ಎಂದು ಹೇಳಿದರು. ಆಗ ಬ್ರಾಹ್ಮಣಿಯು ಮಧುರನಿಗೆ ಆಶೀರ್ವಾದ ಮಾಡಿ "ಯಾಕೆ ? ಭಾಗವತದಲ್ಲಿ ಇಪ್ಪತ್ತನಾಲ್ಕು ಮುಖ್ಯ ಮುಖ್ಯವಾದ ಅವತಾರಗಳಜಿ ಎಂದೂ ಅಲ್ಲದೆ ಅಸಂಖ್ಯ ಅವತಾರಗಳಿವೆ ಎಂದೂ ಹೇಳಿಲ್ಲವೆ? ವೈಷ್ಣವಗ್ರಂಥಗಳಲ್ಲಿ ಚೈತನ್ಯದೇವನ ಪುನರಾಗಮನದ ಮಾತು ಸ್ಪಷ್ಟವಾಗಿದೆಯಲ್ಲ!" ಎಂದು ಹೇಳಲು ಮಧುರನು ಅದಕ್ಕೆ ಪ್ರತ್ಯುತ್ತರ ಹೇಳುವುದಕ್ಕೆ ತೋರದೆ ಸುಮ್ಮನಾದನು.

ಬ್ರಾಹ್ಮಣಿಯು ಶಾಸ್ತ್ರಜ್ಞಾನವನ್ನು ಪಡೆದ ಪಂಡಿತಳಷ್ಟೇ ಅಲ್ಲ. ಶಾಸ್ತ್ರದಲ್ಲಿ ಹೇಳಿದ ಸಾಧನಗಳನ್ನು ಅನುಷ್ಠಾನಮಾಡಿ ತಿಳಿದುಕೊಂಡಿದ್ದಳು. ಆದ್ದರಿಂದ ಪರಮಹಂಸರನ್ನು ತಂತ್ರಸಾಧನೆ ಮಾಡಲು ಪ್ರೇರೇಪಿಸಿ, ಗುರುರೂಪವಾಗಿ ನಿಂತು ಆತನಿಂದ ಎಲ್ಲ ವಿಧವಾದ (ಸುಮಾರು ಅರವತ್ತನಾಲ್ಕು) ತಂತ್ರಸಾಧನೆಗಳನ್ನೂ ಸಾಂಗೋಪಾಂಗವಾಗಿ ಮಾಡಿಸಿದಳು. ತಂತ್ರಸಾಧನೆಯು ನಮ್ಮ ದೇಶದಲ್ಲಿ ರೂಢಿಯಲ್ಲಿಲ್ಲದಿರುವುದೇ ಮುಂತಾದ ಕಾರಣಗಳಿಂದ ಅದನ್ನು ಇಲ್ಲಿ ವಿವರಿಸಿಲ್ಲ. ಆದರೆ ತಂತ್ರಶಾಸ್ತ್ರಗಳಲ್ಲಿ ಹೇಳಿರುವ ರೀತಿ ಅನುಷ್ಟಾನಮಾಡುವುದರ ಉದ್ದೇಶವನ್ನು ಮಾತ್ರ ಇಲ್ಲಿ ಸೂಚಿಸುತ್ತೇವೆ. ರೂಪರಸಾದಿಗಳು ಜನರ ಮನಸ್ಸನ್ನು ಆಕರ್ಷಣ ಮಾಡಿ ಪುನಃಪುನಃ ಅವರನ್ನು ಜನನಮರಣಗಳಲ್ಲಿ ಸಿಕ್ಕಿಸುತ್ತವೆ. ಮತ್ತು ಜ್ಞಾನಸಂಪಾದನೆ ಮಾಡಗೊಡದೆ ಈಶ್ವರಸಾಕ್ಷಾತ್ಕಾರಕ್ಕೆ ಅಡ್ಡಿಯಾಗಿಬರುತ್ತವೆ; ಅಪೂರ್ವವಾದ ಇಂದ್ರಿಯನಿಗ್ರಹದ ಮೂಲಕ ಆ ರೂಪ ರಸಾದಿಗಳನ್ನೂ ಈಶ್ವರಸ್ವರೂಪವೆಂದು ಅಭ್ಯಾಸ ಮಾಡಿಸುವುದೇ ತಾಂತ್ರಿಕ ಕ್ರಿಯೆಗಳ ಸಾಮಾನ್ಯವಾದ ಉದ್ದೇಶ. ಕಠೋರವಾದ ಇಂದ್ರಿಯನಿಗ್ರಹ ಮಾಡಿಕೊಂಡೇ ತಂತ್ರೋಕ್ತ ಸಾಧನಗಳನ್ನು ಅನುಷ್ಟಾನಮಾಡಲು ಮೊದಲುಮಾಡಬೇಕು.ರಿಂದ ಸಾಮಾನ್ಯರಿಗೆ ಇದು ಅತ್ಯಂತ ಕಠಿಣ ತಂತ್ರ ಸಾಧಕನು ಇಂದ್ರಿಯಗಳಿಗೆ ಸ್ವಲ್ಪ ವಶನಾದರೂ ಅವನಿಗೆ ಭಯಂಕರವಾದ ಅಧಃಪತನವಾಗುವುದು. ಬಹುಶಃ ಈ ಕಾರಣದಿಂದಲೇ, ಪರನು ಹಂಸರು ಅವುಗಳನ್ನು ತಮ್ಮ ಶಿಷ್ಯರೆದುರಿಗೆ ವಿಸ್ತಾರವಾಗಿ ಹೇಳಿರಲಾರರು.

ಈ ಸಾಧನೆಗಳು ಮುಗಿದಮೇಲೆ ಪರಮಹಂಸರಿಗೆ ಅಣಿ ಮಾದ್ಯಷ್ಟಸಿದ್ದಿಗಳೂ ಸ್ವಾಧೀನವಾದುವು. ಆದರೆ ಅವರು ಅವುಗಳನ್ನು ಅಮೇಧದಂತೆ ಹೇಯವೆಂದು ತಿಳಿದು ಅವುಗಳ ಕಡೆಗೆ ಸ್ವಲ್ಪವೂ ಲಕ್ಷ್ಯ ಕೊಡುತ್ತಿರಲಿಲ್ಲ. ಮುಂದೆ ಇವೆಲ್ಲ ನಡೆದ ಅನೇಕ ದಿನಗಳಮೇಲೆ ಒಂದುದಿವಸ ಅವರು ಪಂಚವಟಿಯಲ್ಲಿ ತಮ್ಮ ಪ್ರಿಯ ಶಿಷ್ಯರಾದ ವಿವೇಕಾನಂದರನ್ನು ಕರೆದು “ ನೋಡೋ ! ನನ್ನಲ್ಲಿ ಪ್ರಸಿದ್ಧವಾದ ಅಣಿಮಾದ್ಯಷ್ಟಸಿದ್ಧಿಗಳು ಇವೆ. ಆದರೆ ಅವುಗಳನ್ನು ನಾನು ಯಾವಾಗಲೂ ಪ್ರಯೋಗಮಾಡುವುದಿಲ್ಲ ಎಂದು ಮೊದಲಿ ನಿಂದಲೂ ಸಂಕಲ್ಪ ಮಾಡಿದ್ದೆ. ಅವುಗಳನ್ನು ಉಪಯೋಗಿಸಬೇಕಾದ ಅಗತ್ಯವೂ ಬರಲಿಲ್ಲ. ನೀನು ಧರ್ಮ ಪ್ರಚಾರ ಮೊದಲಾದ ಅನೇಕ ಕಾರ್ಯಗಳನ್ನು ಮಾಡಬೇಕಾಗುತ್ತೆ. ಆದ್ದರಿಂದ ನಿನಗೇ ಇವ ನ್ನೆಲ್ಲಾ ದಾನಮಾಡೋಣವೆಂದು ನಿಶ್ಚಯಮಾಡಿದ್ದೇನೆ ; ಹಿಡಿ ! ” ಎಂದು ಹೇಳಿದರು. ಅದಕ್ಕೆ ಸ್ವಾಮಿಗಳು “ ಮಹಾಶಯ, ಈಶ್ವರ ಲಾಭಮಾಡಿಕೊಳ್ಳಲು ಇವುಗಳಿಂದ ನನಗೇನಾದರೂ ಪ್ರಯೋಜನವಾಗುವುದೇ ? ” ಎಂದು ಕೇಳಿದರು. ಪರಮಹಂಸರು ಅದಕ್ಕೆ ಉತ್ತರವಾಗಿ “ ಧರ್ಮಪ್ರಚಾರ ಮುಂತಾದ ಕಾರ್ಯಗಳಿಗೆ ಅವುಗಳಿಂದ ಸ್ವಲ್ಪ ಮಟ್ಟಿಗೆ ಸಹಾಯವಾಗುವುದಾದರೂ ಈಶ್ವರಲಾಭಕ್ಕೆ ಯಾವವಿಧವಾದ ಪ್ರಯೋಜನವೂ ಆಗುವುದಿಲ್ಲ.” ಎಂದರು. ಅದನ್ನು ಕೇಳಿ ಸ್ವಾಮಿಗಳು “ ಹಾಗಾದರೆ ಅವುಗಳಿಂದ ನನಗೇನೂ ಕೆಲಸವಿಲ್ಲ” ಎಂದುಬಿಟ್ಟರು.