ಶ್ರೀರಾಮಕೃಷ್ಣ ಪರಮಹಂಸರ ಚರಿತ್ರೆ/ಸಾಧನಗಳು : ಮೂರನೆಯಭಾಗ : ೧೮೬೩-೧೮೬೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು


ಎಂಟನೆಯ ಅಧ್ಯಾಯ

ಸಾಧನಗಳು-ಮೂರನೆಯ ಭಾಗ : 1863-1866.

ತಾಂತ್ರಿಕ ಸಾಧನೆಗಳನ್ನು ಮುಗಿಸಿದಮೇಲೆ ಪರಮಹಂಸರಮನಸ್ಸು ಪುನಃ ವೈಷ್ಣವ ಮತದ ಸಾಧನೆಗಳ ಕಡೆಗೆ ತಿರುಗಿತು.ಅವರು ಮೊದಲು ನಾಲ್ಕು ವರ್ಷಗಳಲ್ಲಿ ವೈಷ್ಣವ ಶಾಸ್ತ್ರಗಳಲ್ಲಿ ಹೇಳಿರುವ ಶಾಂತ, ದಾಸ್ಯ, ಸಖ್ಯಭಾವಗಳನ್ನು ಅವಲಂಬನ ಮಾಡಿ ಸಿದ್ಧಿಯನ್ನು ಪಡೆದಿದ್ದರು. ಆದ್ದರಿಂದ ಈಗ ವಾತ್ಸಲ್ಯ, ಮಧುರ ಎಂಬಮಿಕ್ಕೆರಡು ಭಾವಗಳ ಸಾಧನೆಯನ್ನು ಮಾಡಿಬಿಡಬೇಕೆಂದು ನಿರ್ಧರಿಸಿದರು. ಈ ಕಾಲದಲ್ಲಿ ಅವರು ಜಗನ್ಮಾತೆಯ ಸಖಿಯೆಂಬ ಭಾವನೆಯಿಂದ ಹುವ್ವಿನ ಸರಗಳನ್ನು ಕಟ್ಟಿ ದೇವಿಗೆ ಅಲಂಕಾರಗಳನ್ನುಮಾಡುತ್ತಲೂ,ಚಾಮರ ಹಾಕುತ್ತಲೂ,ಸೇವೆಮಾಡುತ್ತಿರುವರು ಮಧುರಾನಾಥನಿಗೆ ಹೇಳಿ ಹೊಸಹೊಸ ಒಡವೆಗಳನ್ನು ಮಾಡಿಸಿ ದೇವಿಗೆ ಅವುಗಳನ್ನು ಇಟ್ಟು ಶೃಂಗಾರಮಾಡುವರು ; ಮತ್ತು ಸ್ತ್ರೀವೇಷದಿಂದ ದೇವಿಯ ಎದುರಿಗೆ ನಿಂತು ನೃತ್ಯಗೀತಗಳನ್ನು ಮಾಡುತ್ತಿರುವರು. ಹೀಗಿರಲು ಈ ಕಾಲಕ್ಕೆ ತಕ್ಕ ಹಾಗೆ ವಾತ್ಸಲ್ಯ ಭಾವಸಾಧಕನಾದ ಜಟಾಧಾರಿಯೆಂಬ ಒಬ್ಬ ಸಾಧುವು ದಕ್ಷಿಣೇಶ್ವರ ದೇವಸ್ಥಾನಕ್ಕೆ ಬಂದನು.

ಜಟಾಧಾರಿಗೆ ಶ್ರೀರಾಮಚಂದ್ರನಲ್ಲಿ ಅದ್ಭುತವಾದ ಅನುರಾಗವಿತ್ತು.ಬಾಲಕ ರಾಮಚಂದ್ರಮೂರ್ತಿಯೇ ಅವನಿಗೆ ಅತ್ಯಂತ ಇಷ್ಟ ಇಂಥ ರಾಮಚಂದ್ರಮೂರ್ತಿಯನ್ನು ಬಹುಕಾಲ ವಾತ್ಸಲ್ಯದಿಂದಸೇವೆಮಾಡಿದ್ದರಿಂದ ಆತನ ಮನಸ್ಸು ವಾತ್ಸಲ್ಯಭಾವದಿಂದ ತುಂಬಿಹೋಗಿತ್ತಲ್ಲದೆ ಶ್ರೀರಾಮಚಂದ್ರನ ಜ್ಯೋತಿರ್ಘನ ಬಾಲವಿಗ್ರಹವುಪ್ರತ್ಯಕ್ಷವಾಗಿ ಅವನ ಎದುರಿಗೆ ಬಂದು ಭಕ್ತಿಯುಕ್ತವಾದ ಸೇವೆ ಯನ್ನು ಗ್ರಹಣಮಾಡುತ್ತಿತ್ತಂತೆ. ಹೀಗೆ ಆತನು ಯಾವ ವಿಗ್ರಹದ ಅವಲ೦ಬನೆಯಿಂದ ತನಗೆ ದಿವ್ಯ ದರ್ಶನವಾಗಿತ್ತೋ ಆ ರಾಮವಿಗ್ರಹ ವನ್ನೇ ಸೇವೆಮಾಡುತ್ತ ಅನೇಕ ಪುಣ್ಯಕ್ಷೇತ್ರಗಳನ್ನು ಸುತ್ತಿಕೊಂಡು ದಕ್ಷಿಣೇಶ್ವರಕ್ಕೆ ಬಂದಿದ್ದನು.

ಪರಮಹಂಸರು ಜಟಾಧಾರಿಯನ್ನು ನೋಡಿದ ಕೂಡಲೆ, ಅವನ ವೃತ್ತಾಂತವನ್ನೆಲ್ಲ ತಿಳಿದುಕೊಂಡರು. ಮನೆದೇವರಾದ ರಘು ವೀರನನ್ನು ಯಥಾವಿಧಿಯಾಗಿ ಪೂಜೆಮಾಡುವುದಕ್ಕಾಗಿ ಬಹುದಿನಗಳ ಕೆಳಗೆ ರಾಮಮಂತ್ರದ ಉಪದೇಶವನ್ನು ಹೊಂದಿದ್ದರೂ ಅವರಿಗೆ ರಾಮಚಂದ್ರನು ತಾವು ಸೇವಿಸಬೇಕಾದ ಪ್ರಭು ಎಂಬ ದಾಸ ಭಾವವಿತ್ತೇ ಹೊರತು ಬೇರೆ ಭಾವವಿರಲಿಲ್ಲ. ಈಗ ಜಟಾಧಾರಿಯ ಹತ್ತಿರವಿದ್ದ ವಿಗ್ರಹವನ್ನು ನೋಡಿ ಅದೇ ರಾಮಚಂದ್ರನಲ್ಲಿ ವಾತ್ಸಲ್ಯ ಭಾವವು ಉತ್ಪನ್ನವಾಯಿತು. ಮಂತ್ರೋಪದೇಶ ಮೂಲಕ ಜಟಾ ಧಾರಿಯು ಹೇಳಿದ ಮಾರ್ಗವನ್ನು ಹಿಡಿದು ಪರಮಹಂಸರು ಬಾಲ ರಾಮಚಂದ್ರನ ದರ್ಶನಲಾಭವನ್ನು ಪಡೆದರು. ಆ ದಿವ್ಯಮೂರ್ತಿಯ ಧ್ಯಾನದಲ್ಲಿಯೇ ಮಗ್ನರಾಗಿರಲು ಅತ್ಯಲ್ಪ ಕಾಲದಲ್ಲಿ ಕೆಳಗೆ ಹೇಳುವ ಅಭಿಪ್ರಾಯದ ಪ್ರತ್ಯಕ್ಷಾನುಭವವುಂಟಾಯಿತು :——

ಜೋರಾಂ ದಶರಥಕಿ ಬೇಟಾ,
ಓಹಿರಾ೦ ಘಟ್ ಘಟ್ ಮೇಲೆ ಟಾ !
ಓಹಿರಾ೦ ಜಗತ್ ಪಶೇರಾ,
ಓಹಿರಾ೦ ಸಬ್ಸೇನೇಯಾರಾ||

ಆರ್ಥ:— ಶ್ರೀರಾಮಚಂದ್ರನು ದಶರಥಪುತ್ರನು ಮಾತ್ರವೇ ಅಲ್ಲ. ಪ್ರತಿಶರೀರವನ್ನೂ ಆಶ್ರಯಮಾಡಿ ಜೀವಭಾವದಿಂದ ಪ್ರಕಾಶಿ ಸುತ್ತಿದ್ದಾನೆ. ಹೀಗೆ ಪ್ರಾಣಿಗಳ ಆ೦ತರ್ಯದಲ್ಲಿ ಸೇರಿ ಜಗದ್ರೂಪ ವಾಗಿ ಇದ್ದರೂ ಜಗತ್ತಿನ ಎಲ್ಲಾ ಪದಾರ್ಥಗಳಿಂದಲೂ ಬೆರೆಯಾ ಗಿದ್ದಾನೆ. ಯಾವಾಗಲೂ ಮಾಯಾರಹಿತ ನಿರ್ಗುಣ ಸ್ವರೂಪ ದಲ್ಲಿ ಇರುತ್ತಾನೆ.
ಇದಾದಮೇಲೆ ಪರಮಹಂಸರು ಮಧುರಭಾವ ಸಾಧನೆಯಲ್ಲಿಪ್ರವೃತ್ತರಾಗಿ ಹೆಂಗಸರಿಗೆ ತಕ್ಕ ವೇಷಭೂಷಣಗಳನ್ನು ಹಾಕಿಕೊಳ್ಳಬೇಕೆಂದು ಅಪೇಕ್ಷಿಸಿದರು. ಪರಮಭಕ್ತ ಮಧುರಾಮೋಹನನುನಾನಾವಿಧವಾದ ಬಹಳ ಬೆಲೆಯುಳ್ಳ ವಸ್ತ್ರಾಭರಣಗಳನ್ನು ತಂದುಕೊಟ್ಟನು. ಇವೆಲ್ಲವನ್ನೂ ಧರಿಸಿಕೊಂಡು ಪರಮಹಂಸರು ರಾಧೆಯಭಾವದಲ್ಲಿ ಎಷ್ಟರಮಟ್ಟಿಗೆ ಮಗ್ನರಾದರೆಂದರೆ, ಅವರಿಗೆ ತಾವು ಗಂಡಸರೆಂಬ ಜ್ಞಾನವೇ ಸಂಪೂರ್ಣವಾಗಿ ಹೋಗಿ ಪ್ರತಿಚಿಂತೆ, ನಡವಳಿಕೆ,ಮಾತು, ಕಥೆ ಎಲ್ಲ ಹೆಂಗಸರ ಹಾಗಾಯಿತು. ಹೃದಯನು ಆವಿಚಾರವಾಗಿ, “ ಒಂದು ದಿನ ಮಧುರಾನಾಥನು ನನ್ನನ್ನು ಅಂತ:ಪುರಕ್ಕೆ ಕರೆದುಕೊಂಡುಹೋಗಿ ಹೇಳು ನೋಡೋಣ, ಇವರಲ್ಲಿ ನಿಮ್ಮಮಾವಯಾರು ? ಎಂದು ಕೇಳಿದನು. ನಾನು ಎಷ್ಟೋದಿನಗಳಿಂದ ಆತನ ಜೊತೆಯಲ್ಲಿಯೇ ಇದ್ದರೂ ಆಗ ಗುರುತು ಹಿಡಿಯುವುದಕ್ಕಾಗಲಿಲ್ಲ.” ಎಂದು ಹೇಳಿದನಂತೆ. ಹೀಗೆ ರಾಧೆಯ ಭಾವದಲ್ಲಿಯೇ ತನ್ಮಯರಾಗಿ ಸಾಧನೆ ಮಾಡುತ್ತಿರಲು ಶ್ರೀ ಕೃಷ್ಣನ ದರ್ಶನವಾಯಿತು. ಹಿಂದೆ ಪ್ರತ್ಯಕ್ಷವಾದ ಇತರ ದೇವಮೂರ್ತಿಗಳಂತೆಶ್ರೀ ಕೃಷ್ಣನ ಮೂರ್ತಿಯೂ ಅವರ ದೇಹದೊಳಗೇ ಐಕ್ಯವಾಯಿತು.

ಮಧುರಭಾವ ಸಾಧನೆಯು ಮುಗಿದ ಕೆಲವು ದಿನಗಳಲ್ಲಿಯೇಪರಮಹಂಸರು ತೋತಾಪುರಿಗೋಸ್ವಾಮಿ ಎಂಬೊಬ್ಬ ಸನ್ಯಾಸಿ ಯಿಂದ ಉಪದೇಶವನ್ನು ಪಡೆದು ವೇದಾಂತಮತಸಾಧನೆಗೆಆರಂಭಮಾಡಿದರು. ' ತೋತಾ ಪುರಿ ' ಎಂಬಾತನು, ನರ್ಮದಾತೀರದಲ್ಲಿ ಬಹುಕಾಲ ತಪಸ್ಸು ಮಾಡಿ ನಿರ್ವಿಕಲ್ಪ ಸಮಾಧಿಯನ್ನುಹೊಂದಿ ಬ್ರಹ್ಮಸಾಕ್ಷಾತ್ಕಾರವನ್ನು ಪಡೆದಿದ್ದನು. ಬ್ರಹ್ಮಜ್ಞಾನವಾದಮೇಲೆ ಆತನ ಮನಸ್ಸಿನಲ್ಲಿ ತೀರ್ಥಾಟನೆ ಮಾಡಬೇಕೆಂಬ ಸಂಕಲ್ಪಹುಟ್ಟಿತು. ಈ ಸಂಕಲ್ಪದ ಪ್ರೇರಣೆಯಿಂದ ಆತನು ಪುಣ್ಯಕ್ಷೇತ್ರದಿಂದ ಪುಣ್ಯಕ್ಷೇತ್ರಕ್ಕೆ ಹೋಗುತ್ತ ದಕ್ಷಿಣೇಶ್ವರಕ್ಕೆ ಬಂದು ಕಾಳಿದೇವಸ್ಥಾನದ ಒಂದು ಮಂಟಪದಲ್ಲಿ ಇಳಿದುಕೊಂಡನು. ಆಗ ಅದೇ ಮಂಟಪದ ಒಂದು ಮೂಲೆಯಲ್ಲಿಯೇ ಪರಮಹಂಸರೂಅನ್ಯಮನಸ್ಕರಾಗಿ ಕುಳಿತಿದ್ದರು. ಅವರ ಮುಖವನ್ನು ನೋಡುತ್ತಲೆ ತೋತಾಪುರಿಯ ಮನಸ್ಸಿಗೆ ಇಂಥ ಉತ್ತಮವಾದ ಅಧಿಕಾರಿ ಯು ಸಿಕ್ಕುವುದು ಅಪೂರ್ವವೆಂದು ಬೊಧೆಯಾಯಿತು. ತಂತ್ರ ಸಾಧನೆಯೇ ವಿಶೇಷ ಪ್ರಚಾರದಲ್ಲಿರುವ ಬಂಗಾಳಾದೇಶದಲ್ಲೂ ಇಂಥ ವೇದಾಂತಸಾಧನೆಯ ಅಧಿಕಾರಿಯು ಇರುವನೇ ಎಂದು ಆಶ್ಚರ್ಯದಿಂದ ಅವರನ್ನು ಕುರಿತು “ ನಿಮ್ಮನ್ನು ನೋಡಿದರೆ ಉತ್ತಮವಾದ ಅಧಿಕಾರಿಗಳೆಂದು ತೋರುತ್ತಿರಿ. ನೀವು ವೇದಾಂತ ಸಾಧನೆ ಮಾಡುತ್ತೀರಾ?” ಎಂದು ಕೇಳಿದನು. ಆಜಾನುಬಾಹುವಾದ ಜಟಾಧಾರಿಯಾದ, ನಗ್ನಾವಸ್ಥೆಯಲ್ಲಿದ್ದ ಸನ್ಯಾಸಿಯ ಪ್ರಶ್ನೆಯನ್ನು ಕೇಳಿ ಪರಮಹಂಸರು " ಏನುಮಾಡಬೇಕೋ ಏನುಮಾಡಬಾರದೋ ನನಗೆ ಒಂದೂ ಗೊತ್ತಿಲ್ಲ. ನನ್ನ ತಾಯಿಗೆ ಎಲ್ಲಾ ಗೊತ್ತು. ಆಕೆಯು ಅಪ್ಪಣೆಕೊಟ್ಟರೆ ಆಗಬಹುದು. ” ಎಂದು ಹೇಳಿದರು. ಸನ್ಯಾಸಿಯು “ ಹಾಗಾದರೆ ಈಗಲೇ ಹೋಗಿ ನಿಮ್ಮ ತಾಯಿಯನ್ನು ಕೇಳಿ ಬನ್ನಿ. ಏಕೆಂದರೆ ನಾನು ಬಹುಕಾಲ ಇಲ್ಲಿರುವುದಿಲ್ಲ”.[೧] * ಎಂದು ಹೇಳಿದನು. ಪರಮಹಂಸರೂ ಕೂಡಲೆ ಕಾಳಿಕಾದೇವಸ್ಥಾ ನಕ್ಕೆ ಹೋಗಿ ಅಲ್ಲಿ ಭಾವಾವಿಷ್ಟರಾಗಿ “ ಹೋಗು, ಉಪದೇಶ ತೆಗೆದುಕೊ ; ನಿನಗೆ ಉಪದೇಶಮಾಡುವುದಕ್ಕಾಗಿಯೇ ಆ ಸನ್ಯಾಸಿಯು ಇಲ್ಲಿಗೆ ಬಂದಿರುವುದು ” ಎಂಬ ದೈವವಾಣಿಯನ್ನು ಕೇಳಿ ಬಂದು ಅದನ್ನು ತೋತಾಪುರಿಗೆ ತಿಳಿಸಿದರು.

ತೋತಾಪುರಿಗೆ ಸಂತೋಷವಾಯಿತು. ಉಪದೇಶವಾಗುವುದಕ್ಕೆ ಮುಂಚೆ ಶಿಖಾಯಜ್ಯೋಪವೀತಗಳನ್ನು ಪರಿತ್ಯಾಗಮಾಡಿ ಶಾಸ್ತ್ರೀಯವಾಗಿ ಸನ್ಯಾಸಗ್ರಹಣ ಮಾಡಬೇಕೆಂದು ಹೇಳಲು ಪರಮ ಹಂಸರು ಸ್ವಲ್ಪ ಹಿಂದುಮುಂದು ನೋಡಿ ಗುಟ್ಟಾಗಿ ಹಾಗೆಮಾಡುವು ದಾದರೆ ಆಗಬಹುದು ಎಂದು ಹೇಳಿದರು. ಆತನು ಅದಕ್ಕೆ ಒಪ್ಪಿ ಒಂದು ಶುಭದಿವಸ ಶ್ರಾದ್ಧಾದಿಕ್ರಿಯೆಗಳನ್ನು ಮಾಡಿಸಿ, ಆತ್ಮ ಪಿಂಡವನ್ನು ಹಾಕಿಸಿ ಸನ್ಯಾಸವನ್ನು ಕೊಟ್ಟನು. ವೇದಾಂತಸಾಧನೆಯನ್ನು ಕುರಿತು ಪರಮಹಂಸರು ಹೀಗೆ ಹೇಳುತ್ತಿದ್ದರು. "ಗೋಸ್ವಾಮಿಯು ದೀಕ್ಷೆ ಕೊಟ್ಟು ಅನೇಕ ಸಿದ್ದಾಂತವಾಕ್ಯಗಳನ್ನು ಉಪದೇಶಮಾಡಿ ಮನಸ್ಸನ್ನು ನಿರ್ವಿಕಲ್ಪ ಮಾಡಿ ಆತ್ಮಧ್ಯಾನದಲ್ಲಿ ಮಗ್ನನಾಗುವಂತೆ ಹೇಳಿದನು. ಆದರೆ ಧ್ಯಾನಮಾಡುವುದಕ್ಕೆ ಕುಳಿತು ಎಷ್ಟು ಪ್ರಯತ್ನ ಮಾಡಿದರೂ ಮನಸ್ಸನ್ನು ನಿರ್ವಿಕಲ್ಪಮಾಡುವುದಕ್ಕೆ ಎಂದರೆ ನಾಮರೂಪಗಳ ಮೇರೆಯನ್ನು ದಾಟಿಸುವುದಕ್ಕೆ ನನಗೆ ಸಾಧ್ಯವಾಗಲಿಲ್ಲ. ಇತರ ವಿಚಾರಗಳಿಂದ ಮನಸ್ಸು ಸ್ವಾಭಾವಿಕವಾಗಿಯೇ ಪಾರಾಗುತ್ತಿತ್ತು. ಆದರೆ ಹೀಗೆ ವಾರಾದ ಒಡನೆಯೇ ಅದರಲ್ಲಿ ಜಗದಂಬೆಯ ಚಿರಪರಿಚಿತವಾದ ಚಿದ್ಘನೋಜ್ವಲಮೂರ್ತಿಯಡ ಆವಿರ್ಭಾವವಾಗಿ ಎಲ್ಲವಿಧವಾದ ನಾಮರೂಪಗಳನ್ನು ತ್ಯಾಗಮಾಡಬೇಕೆಂಬ ಸಂಕಲ್ಪವನ್ನು ಮರೆಸಿಬಿಡುತ್ತಿತ್ತು. ಮೇಲಿಂದ ಮೇಲೆ ಹೀಗಾಗುವದನ್ನು ನೋಡಿ ನಿರಾಶೆಯಾಗಿ ಅವನನ್ನು ಕುರಿತು— ಆಗುವದಿಲ್ಲ! ಮನಸ್ಸನ್ನು ಸಂಪೂರ್ಣವಾಗಿ ನಿರ್ವಿಕಲ್ಪ ಮಾಡಿ ಆತ್ಮ ಧ್ಯಾನದಲ್ಲಿ ಮುಳುಗಿಸಲು ನನ್ನ ಕೈಲಾಗುವುದಿಲ್ಲ——ಎಂದು ಹೇಳಿದೆನು. ಅದಕ್ಕೆ ಆತನು ಬಹಳೆ ಸಿಟ್ಟಾಗಿ ಏನು ! ಆಗುವುದಿಲ್ಲವೆ ? ಎಂಥಮಾತು! ಎಂದು ಹೇಳಿ, ಆ ಕೊರಡಿಯಲ್ಲಿ ಬಿದ್ದಿದ್ದ ಒಂದು ಗಾಜಿನ ಚೂರನ್ನು ತೆಗೆದುಕೊಂಡು ತೀಕ್ಷ್ಣವಾದ ಅದರ ಮೊನೆಯಿಂದ ನನ್ನ ಹುಬ್ಬಿನನಡುವೆ ಜೋರಾಗಿ ಎಳೆದು ಗಾಯಮಾಡಿ ಈ ಬಿಂದುವಿನ ಬಲದಿಂದ ಮನಸ್ಸನ್ನು ತಿರುಗಿಸು——ಎಂದು ಹೇಳಿದನು. ಆಗ ಪುನಃ ದೃಢಸಂಕಲ್ಪ ಮಾಡಿ ಧ್ಯಾನಕ್ಕೆ ಕುಳಿತೆನು. ಹಿಂದಿನಹಾಗೆ ಜಗದಂಬೆಯ ಮೂರ್ತಿಯ ಆವಿರ್ಭಾವವಾದ ಒಡನೆಯೇ ಜ್ಞಾನಖಡ್ಗದಿಂದ ಅದನ್ನು ಮನಸ್ಸಿನಲ್ಲಿಯೇ ಎರಡು ಹೋಳಾಗಿ ಸೀಳಿಹಾಕಿದೆನು. ಆಮೇಲೆ ಯಾವವಿಧವಾದ ಸಂಕಲ್ಪ ವಿಕಲ್ಪವೂ ಉಳಿಯಲಿಲ್ಲ. ಇದ್ದಕ್ಕಿದ್ದ ಹಾಗೆ ಸಮಾಧಿಯಲ್ಲಿ ಮಗ್ನ ನಾದೆನು.”

ಹೀಗೆ ಶಿಷ್ಯನು ಸಮಾಧಿಸ್ಧನಾಗಲು ತೋತಾಪುರಿಯು ಸ್ವಲ್ಪ ಹೊತ್ತು ಅಲ್ಲಿಯೇ ಇದ್ದು ಅನಂತರ ಯಾರಾದರೂ ಬಂದು ತೊಂದರೆಮಾಡಿಯಾರೆಂಬ ಯೋಚನೆಯಿಂದ ಕುಟೀರದ ಬಾಗಿಲನ್ನು ಹಾಕಿ ಬೀಗಹಾಕಿಕೊಂಡು ಪಂಚವಟಿಗೆಹೋಗಿ ಅಲ್ಲಿ ಶಿಷ್ಯನು ಎಚ್ಚೆತ್ತು ಕೂಗುವುದನ್ನೇ ನಿರೀಕ್ಷಿಸಿಕೊಂಡು ಕುಳಿತಿದ್ದನು. ಹಗಲೆಲ್ಲ ಕಳೆಯಿತು ; ರಾತ್ರಿಯಾಯಿತು ; ರಾತ್ರಿಯೂ ಕಳೆಯಿತು; ಒಂದುದಿನವಾಯಿತು, ಎರಡುದಿನವಾಯಿತು, ಮೂರುದಿನವಾಯಿತು ; ಆದರೂ ಪರಮಹಂಸರು ಕೂಗಲೇ ಇಲ್ಲ. ಆಶ್ಚರ್ಯದಿಂದ ತೋತಾ ಪುರಿಯು ಎದ್ದು ಬಂದು ನೋಡಲು ಶಿಷ್ಯನು ಇನ್ನೂ ಸಮಾಧಿಸ್ಧ ನಾಗಿಯೇ ಇದ್ದಾನೆ! ದೇಹದಲ್ಲಿ ಪ್ರಾಣದಚಿಹ್ನೆಯೇ ಇಲ್ಲ! ಆದರೆ ಮುಖವು ಮಾತ್ರ ಪ್ರಶಾಂತವಾಗಿಯೂ, ಗಂಭೀರವಾಗಿಯೂ, ಜ್ಯೋತಿಃ ಪೂರ್ಣವಾಗಿಯೂ ಇತ್ತು. ಸಮಾಧಿರಹಸ್ಯವನ್ನು ತಿಳಿದು ತೋತಾಪುರಿಯು ಆ ಸ್ಥಿತಿಯನ್ನು ನೋಡಿ “ ಇದೇನು ಆಶ್ಚರ್ಯ ! ನಾನು ನಲವತ್ತು ವರ್ಷಗಳ ಕಾಲ ಕಠೋರ ಸಾಧನೆಮಾಡಿ ಯಾವು ದನ್ನು ಪಡೆದೆನೋ ಅದನ್ನು ಈ ಮಹಾಪುರುಷನು ನಿಜವಾಗಿಯೂ ಒಂದೇ ದಿನದಲ್ಲಿ ಹೊಂದಿದನೇ! ” ಎಂದು ಪುನಃ ಶಿಷ್ಯನದೇಹದಲ್ಲಿ ಕಾಣುತ್ತಿದ್ದ ಲಕ್ಷಣಗಳನ್ನು ಪರೀಕ್ಷಿಸಿ ನೋಡಿದನು. ಸತ್ಯವಾಗಿಯೂ ನಿರ್ವಿಕಲ್ಪ ಸಮಾಧಿ! ಆಗ ಆತನು ಅತ್ಯಾಶ್ಚರ್ಯದಿಂದ " ಇದೇನು ದೇವರ ಅದ್ಭುತಮಾಯ ! ” ಎಂದಂದುಕೊಂಡು ತಾನೇ ಶಿಷ್ಯನನ್ನು ಎಬ್ಬಿಸಿದನು.

ಮೂರುದಿನಕ್ಕೆ ಹೆಚ್ಚಾಗಿ ಎಲ್ಲಿಯೂ ನಿಲ್ಲದೆ ತಿರುಗುತ್ತಿದ್ದ ತೋತಾಪುರಿಯು ದಕ್ಷಿಣೇಶ್ವರದಲ್ಲಿ ಹನ್ನೊಂದು ತಿಂಗಳಿದ್ದನು. ಈ ಕಾಲದಲ್ಲಿ ಪರಮಹಂಸರು ನಿರ್ವಿಕಲ್ಪ ಸಮಾಧಿಯಲ್ಲಿ ದೃಢ ಪ್ರತಿಷ್ಟಿತರಾಗಿ, ಸಮಾಧಿಯಲ್ಲಿಯೇ ಇದ್ದು ಬಿಡಬೇಕೆಂದು ಕುಳಿತರು. ಆರು ತಿಂಗಳ ಕಾಲ ಸಮಾಧಿ ಭಂಗವಾಗಲಿಲ್ಲ. ಅಷ್ಟು ಹೊತ್ತಿಗೆ ಸರಿಯಾಗಿ ಒಬ್ಬ ಸಾಧುವು ಅಲ್ಲಿಗೆ ಅಕಸ್ಮಾತ್ತಾಗಿ ಬಂದು ಪರಮಹಂಸರಿಂದ ಮುಂದೆ ವಿಶೇಷವಾಗಿ ಲೋಕಕಲ್ಯಾಣವಾಗತಕ್ಕದಿದೆ ಎಂದು ಹೇಳಿ ನಾನಾ ಉಪಾಯಗಳಿಂದ ಅವರ ದೇಹವನ್ನು ಕಾಪಾಡಿಕೊಂಡು ಬಂದನು. ಆರನೆಯ ತಿಂಗಳ ಕೊನೆಯಲ್ಲಿ ಅವರಿಗೆ ವಿಚಿತ್ರ ದಿವ್ಯಾನುಭವವಾಗಿ ಜಗದಂಬೆಯು ಅಶರೀರವಾಣಿಯಿಂದ ಮೂರುಸಲ “ ಭಾವಮುಖದಲ್ಲಿರು!” “ಭಾವಮುಖದಲ್ಲಿರು! " "ಭಾವಮುಖದಲ್ಲಿರು!" ಎಂದು ಆಜ್ಞೆ ಮಾಡಿದ್ದನ್ನು ಕೇಳಿದರು.

ಇದಾದ ಕೆಲವು ದಿನಗಳ ಮೇಲೆ ಗೋವಿಂದರಾಯನೆಂಬೊಬ್ಬ ಮಹಮ್ಮದೀಯಧರ್ಮ ಸಾಧಕನು ದಕ್ಷಿಣೇಶ್ವರಕ್ಕೆ ಬಂದನು. ಆತ ನನ್ನು ನೋಡಿ ಪರಮಹಂಸರಿಗೆ ಮಹಮ್ಮದೀಯ ಧರ್ಮವನ್ನೂ ಅಭ್ಯಾಸಮಾಡಬೇಕೆಂಬ ಪ್ರವೃತ್ತಿಹುಟ್ಟಿತು. ಆ ಸಂಗತಿಯನ್ನು ಕುರಿತು ಅವರು ಹೇಳಿರುವುದೇನೆಂದರೆ, “ ಆ ಕಾಲದಲ್ಲಿ ಅಲ್ಲಾ ಮಂತ್ರವನ್ನು ಜಪಿಸುತ್ತಿದ್ದೆ. ಮುಸಲ್ಮಾನರ ಹಾಗೆ ವೇಷಭೂಷ ಗಳನ್ನು ಹಾಕಿಕೊಳ್ಳುತ್ತಿದೆ. ಮೂರು ಹೊತ್ತು ನಮಾಜುಮಾಡುತ್ತಿದ್ದೆ. ಹಿಂದೂಭಾವವು ಮನಸ್ಸಿನಲ್ಲಿ ಸುತರಾಂ ಲೋಪವಾಗಿ ಹೋಗಿತ್ತು. ಹಿಂದೂ ದೇವತೆಗಳಿಗೆ ನಮಸ್ಕಾರಮಾಡುವುದು ಹಾಗಿರಲಿ, ಅವುಗಳ ದರ್ಶನಮಾಡುವುದಕ್ಕೂ ಮನಸ್ಸು ಬರುತ್ತಿರ ಲಿಲ್ಲ. ಹೀಗೆ ಮೂರುದಿವಸಗಳು ಕಳೆದಮೇಲೆ ಇಸ್ಲಾಂ ಮತಸಾಧ ನವು ಫಲಿಸಿತು.”

ಇದರಂತೆ ಪರಮಹಂಸರಿಗೆ ಕ್ರಿಸ್ತನು ದರ್ಶನಕೊಟ್ಟಂತೆಯೂ ಕ್ರೈಸ್ತಮತದ ಅನುಭವವೂ ಬಂದಂತೆಯೂ ಹೇಳಲ್ಪಟ್ಟಿದೆ.


  1. ಏಕೆಂದರೆ ಮೂರು ದಿನಕ್ಕೆ ಮೇಲ್ಪಟ್ಟು ಆ ತನು ಒಂದು ಸ್ಥಳದಲ್ಲಿ ನಿಲ್ಲುತ್ತಿರಲಿಲ್ಲ.