ವಿಷಯಕ್ಕೆ ಹೋಗು

Katha sangraha or Canarese selections: PROSE: Part VI. Proverbs

ವಿಕಿಸೋರ್ಸ್ದಿಂದ

ಕಥಾ ಸಂಗ್ರಹ: ಭಾಗ ೪ - ಗಾದೆಗಳು Katha sangraha or Canarese selections: PROSE: Part VI. Proverbs (1868)
by ಡೇನಿಯಲ್ ಸಾಂಡರ್ಸನ್
94282ಕಥಾ ಸಂಗ್ರಹ: ಭಾಗ ೪ - ಗಾದೆಗಳು Katha sangraha or Canarese selections: PROSE: Part VI. Proverbs1868ಡೇನಿಯಲ್ ಸಾಂಡರ್ಸನ್

ಇದನ್ನು ಡೌನ್ಲೋಡ್ ಮಾಡಿ: Download this featured text as an EPUB file (suitable for most e-readers except Kindles). Download this featured text as a RTF file. Download this featured text as a PDF. Download this featured text as a MOBI file (suitable for Kindles).


PART VI.

Proverbs, ಗಾದೆಗಳು.


ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು.
ಅಂಜಿದವನ ಮೇಲೆ ಕಪ್ಪೆ ಹಾಕಿದ ಹಾಗೆ.
ಅಂತೂ ಇಂತೂ ಕುಂತೀ ಮಕ್ಕಳಿಗೆ ರಾಜ್ಯವಿಲ್ಲ.
ಅಂದಿಗೆ ಅದೇ ಸುಖ, ಇಂದಿಗೆ ಇದೇ ಸುಖ.
ಅಂಬಲೀ ಕುಡಿಯುವವನಿಗೆ ಮೀಸೇ ತಿಕ್ಕುವವನೊಬ್ಬ.
ಅಕ್ಕ ತಂಗಿಯರದಾದಾಗ್ಯೂ ಅಕ್ಕಸಾಲೆ ಬಿಡ.
ಅಕ್ಕನ ಶಾಲೆ, ಭಾವನ ಕಠಾರಿ.
ಅಕ್ಕರದಿಂದ ಗಿಣೀ ಸಾಕಿ ಬೆಕ್ಕಿನ ಬಾಯಿಗೆ ಕೊಟ್ಟಾರೇ?
ಅಕ್ಕಸಾಲೆ ಕಿವಿ ಚುಚ್ಚಿದರೆ ನೋವಿಲ್ಲ.
ಅಕ್ಕಿ ಕೊಟ್ಟು ಅಕ್ಕನ ಮನೆಯೇ?
ಅಕ್ಕಿ ಜೋಕೆಯಾಗಿರಬೇಕು, ಅಕ್ಕನ ಮಕ್ಕಳು ಜೋಕೆಯಾಗಿರಬೇಕು.
ಅಗಸರ ಕತ್ತೇ ಕೊಂಡು ಹೋಗಿ, ದೊಂಬರರಿಗೆ ತ್ಯಾಗಾ ಹಾಕಿದ ಹಾಗೆ.
ಅಜ್ಜೀ ಮನೆಗೆ ಅಜ್ಜ ಬಂದ ಹಾಗೆ.
ಅಟ್ಟದಿಂದ ಬಿದ್ದವನನ್ನು ದಡಿಯಿಂದ ಚಚ್ಚಿದ ಹಾಗೆ.
ಅಟ್ಟ ಪಾಯಸದಲ್ಲಿ ಕೆರಾ ಇಟ್ಟ ಹಾಗೆ.
ಅಡವಿಗೆ ಹೋದರೂ ಚಿಗಟನ ಕಾಟ ತಪ್ಪದು.
ಅಡಿಕೆಗೆ ಹೋದ ಮಾನ ಆನೇ ಕೊಟ್ಟರೂ ಬಾರದು.
ಅಡಿಕೆ ಉಡಿಯಲ್ಲಿ ಹಾಕ ಬಹುದು, ಮರವಾದ ಮೇಲೆ ಕೂಡದು.
ಅತಿ ಸ್ನೇಹ ಗತಿ ಕೆಡಿಸೀತು.
ಅತ್ತೆಯೊಡೆದ ಪಾತ್ರೆಗೆ ಬೆಲೆ ಇಲ್ಲ.
ಅದಕ್ಕದು, ಉಳಿ ಕೊಡತಿಯ ನ್ಯಾಯ.
ಅಪ್ಪ ನೆಟ್ಟ ಆಲದ ಮರವೆಂದು ನೇಣು ಹಾಕಿ ಕೊಳ್ಳ ಬಹುದೇ?
ಅಭ್ಯಾಸವಿಲ್ಲದ ಬ್ರಾಹ್ಮಣ ಹೋಮಾ ಮಾಡಿ, ಗಡ್ಡ ಮೀಸೆ ಸುಟ್ಟು ಕೊಂಡ .
ಅರಸನ ಕುದುರೆ ಕಾಲು ತುಳಿದರೆ, ಇವನಿಗೆ ಬಂದ ಭಾಗ್ಯವೇನು?
ಅರಸನ ಕುದುರೆ ಲಾಯದಲ್ಲಿಯೇ ಮುಪ್ಪಾಯಿತು.
ಅಲ್ಪ ಕಾರ್ಯಕ್ಕೆ ಅರಮನೆಗೆ ಹೋಗ ಬಾರದು.
ಅಲ್ಪನಿಗೆ ಐಶ್ವರ್ಯ ಬಂದಾಗ ಅರ್ಧ ರಾತ್ರೆಯಲ್ಲಿ ಕೊಡೇ ಹಿಡಿಸಿಕೊಂಡ.
ಅಲ್ಪರ ಸಂಗ ಅಭಿಮಾನ ಭಂಗ.
ಅಲ್ಲಾಡುವ ಹಲ್ಲಿನ ಮೇಲೆ ಹಲಿಗೇ ಕಲ್ಲು ಬಿದ್ದಂತೆ.
ಅವನ ಮಾತು ಕೆಸರಿನಲ್ಲಿ ನೆಟ್ಟ ಕಂಭದ ಹಾಗೆ.
ಅವನ ಸಾಕ್ಷಿ ಅಡ್ಡ ಗೋಡೆಯ ಮೇಗಣ ದೀಪದ ಹಾಗೆ.
ಅಶನ ವಸನ ಶಿಕ್ಕಿದ ಮೇಲೆ ವ್ಯಸನವ್ಯಾಕೆ?
ಅಳಿದ ಊರಿಗೆ ಉಳಿದವನೇ ಗೌಡ.
ಆಕಳು ಕಪ್ಪಾದರೆ ಹಾಲು ಕಪ್ಪೇ?
ಆಗದ ಕಾರ್ಯಕ್ಕೆ ಆಶೆ ಪಟ್ಟರೆ, ಸಾಗುವದಿಲ್ಲ ಹೋಗುವದಿಲ್ಲ.
ಆಟಕ್ಕೆ ತಕ್ಕ ವೇಷ, ವೇಷಕ್ಕೆ ತಕ್ಕ ಭಾಷೆ.
ಆನೆಗೆ ಗುಂಗುರು ಕಾಡಿದ ಹಾಗೆ.
ಆನೇ ಕಂಡು ಶ್ವಾನ ಬೋಗುಳಿದ ಹಾಗೆ
ಆನೇ ಕೈಲಿ ಕಬ್ಬು ಕೊಟ್ಟ ಹಾಗೆ.
ಆನೇ ಮೇಲೆ ಹೋಗುವವನನ್ನು ಸುಣ್ಣಾ ಕೇಳಿದ ಹಾಗೆ
ಆರಾಳು ಮೂರು ಘಾಜು.
ಆಶೆಗೆ ನಾಶವಿಲ್ಲ.
ಇಡೀ ಮುಳುಗಿದ ಮೇಲೆ ಛಳಿ ಉಂಟೇ?
ಇರುಳು ಕಂಡ ಬಾವಿಯಲ್ಲಿ ಹಗಲು ಬಿದ್ದ.
ಇಲಿ ಬೆಕ್ಕಿಗೆ ಸಾಕ್ಷಿ.
ಇಲಿಗೆ ಹೆದರಿ, ಹುಲಿಯ ಬಾಯಿಯಲ್ಲಿ ಬಿದ್ದ.
ಇವನವನಿಗೆ ಎಣ್ಣೆ ಶೀಗೆ.
ಈಚಲು ಮರದ ಕೆಳಗೆ ಮಜ್ಜಿಗೇ ಕುಡಿದರೆ, ನಾಚಿಕೆ ಗೇಡಾಗದೇ?
ಉಂಟು ಮಾಡಿದ ದೇವರು ಊಟವ ಕೊಡಲಾರನೋ?
ಉಂಡದ್ದು ಉಂಡ ಹಾಗೆ ಹೋದರೆ, ವೈದೃನ ಹಂಗೇನು?
ಉಂಬೋಕ್ಕೆ ಉಡೋಕ್ಕೆ ಅಣ್ಣಪ್ಪ, ಕೆಲಸಕ್ಕೆ ಮಾತ್ರ ಡೊಣ್ಣಪ್ಪ.
ಊರೆಲ್ಲಾ ಸೂರೆ ಆದ ಮೇಲೆ ಬಾಗಲು ಹಾಕಿದರು.
ಎಣ್ಣೆ ಬರುವಾಗ ಗಾಣ ಮುರಿಯಿತು.
ಎಣ್ಣೇ ಅಳದ ಮಾನದ ಜಿಡ್ಡು ಹೋದೀತೇ?
ಎತ್ತ ಹೋದರೂ ಮೃತ್ಯು ಬಿಡದು.
ಎತ್ತಿನ ಮುಂದೆ ತೆಂಗಿನ ಕಾಯಿ ಹಾಕಿದ ಹಾಗೆ.
ಎತ್ತು ಹಾರುವದಕ್ಕಿಂತ ಮುಂಚೆ ಕೌದಿ ಹಾರಿತು.
ಎಮ್ಮೇ ಮೇಲೆ ಮಳೆ ಗರೆದ ಹಾಗೆ.
ಎಲ್ಲಾ ಹೊಕ್ಕಿತು, ಬಾಲ ಮಾತ್ರ ಉಳಿಯಿತು.
ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ತೊಡೆಯ ಬಹುದೇ?
ಒಡಂಬಡಿಕೆಯಿಂದ ಆಗುವದು, ದಡಂಬಡಿಕೆಯಿಂದ ಆದೀತೇ?
ಒಪ್ಪೋತ್ತುಂಡವ ಯೋಗಿ, ಎರಢೊತ್ತುಂಡವ ಭೋಗಿ, ಮೂರ್‍ಹೊತ್ತುಂಡವ ರೋಗಿ,
ನಾಲ್ಖೊತ್ತುಂಡವನ ಹೊತ್ತು ಕೊಂಡು ಹೋಗಿ.
ಒರಳಲ್ಲಿ ಕೂತರೆ ಒನಿಕೇ ಪೆಟ್ಟು ತಪ್ಪಿತೇ?
ಓದಿ ಓದಿ ಮರುಳಾದ.
ಕಂಕುಳಲ್ಲಿ ದೊಣ್ಣೆ, ಕೈಯಲ್ಲಿ ಶರಣಾರ್ತಿ.
ಕಂಡದ್ದು ಮಾತಾಡಿದರೆ ಕೆಂಡದಂತ ಕೋಪ.
ಕಂಡವರ ಮಕ್ಕಳನ್ನು ಭಾವಿಯಲ್ಲಿ ದೂಡಿ, ಆಳಾ ನೋಡಿದ ಹಾಗೆ.
ಕಚ್ಚೋ ನಾಯಿ ಬೊಗಳದು, ಬೊಗಳೋ ನಾಯಿ ಕಚ್ಚದು.
ಕಡು ಕೋಪ ಬಂದಾಗ ತಡ ಕೊಂಡವನೇ ಜಾಣ.
ಕಡ್ಲೆಗೆ ಬಾಯಿ ತೆರೆದು, ಕಡಿವಾಣಕ್ಕೆ ಬಾಯಿ ಮುಚ್ಚಿದರೆ, ಆದೀತೇ?
ಕತ್ತೆ ಕಸ್ತೂರೀ ಹೊತ್ತ ಹಾಗೆ.
ಕತ್ತೇ ಮೊಲೆಯಲ್ಲಿ ಖಂಡುಗ ಹಾಲಿದ್ದರೇನು?
ಕಪ್ಪೆ ಕೂಗಿ ಮಳೇ ಬರಿಸಿದ ಹಾಗೆ.
ಕಬ್ಬಿಣ ಗಡಾರೀ ನುಂಗಿ, ಶುಂಠಿ ಕಷಾಯಾ ಕುಡಿದ ಹಾಗೆ.
ಕಬ್ಬು ಡೊಂಕಾದರೆ, ಸವಿ ಡೊಂಕೇ?
ಕರಡಿಗೆ ಕೂದಲು ಯಾವದು, ರೊಮವು ಯಾವದು?
ಕರಡೀ ಕೈಗೆ ಹೆದರದವ ಕರೀ ಕಂಬಳಿಗೆ ಹೆದರ್‍ಯಾನೇ?
ಕರೆಯುವ ಹಸಾ ಕೊಟ್ಟು, ಒದೆಯುವ ಕತ್ತೇ ತಂದ ಹಾಗೆ.
ಕಳ್ಳ ಕಳ್ಳಗೆ ಬಲ್ಲ.
ಕಾಗೆ ಕೋಗಿಲೆಯ ಹಾಗಿದ್ದರೂ, ರಾಗದಲ್ಲಿ ಭೇದವಿಲ್ಲವೇ?
ಕಾಡಲ್ಲಿ ಹೊಂಬಾಳೆ ಬಯಸಿದ ಹಾಗೆ.
ಕಾಡಿನಲ್ಲಿ ತಿರುಗಿ, ಕಟ್ಟಿಗೆ ಇಲ್ಲ ಅಂದ ಹಾಗೆ.
ಕಿಚ್ಚೆದ್ದಾಗ ಭಾವಿ ತೋಡಿದ.
ಕಿಟಕಿಯಿಂದ ನುಸುಳುವವ ಹೆಬ್ಬಾಗಿಲಿಂದ ಬಾರನೇ?
ಕಿಡಿಯಿಂದ ಕಾಡ ಸುಡ ಬಹುದು.
ಕೀಟ ಸಣ್ಣದಾದರೂ ಕಾಟ ಬಹಳ.
ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.
ಕುರುಬನ ಮುಂದೇ ತೋಳ ಕಾದ ಹಾಗೆ.
ಕುಲವನ್ನು ನಾಲಿಗೆ ಹೇಳುವದು.
ಕಾಸು ಕಾಸ ಬಾಳದು, ಜೋಗುಳ ಮುಗಿಲ ಮುಟ್ಟಿತು?
ಕೂಳ ಚೆಲ್ಲಿದ ಕಡೆ ಸಾವಿರ ಕಾಗೆ.
ಕೆರದ ಅಳತೆಗೆ ಕಾಲು ಕೊಯಿಸಿದ ಹಾಗೆ.
ಕೈಗೆ ಬಂದ ತುತ್ತು ಬಾಯಿಗಿಲ್ಲ.
ಕೊಯಿದ ಕಾಲು ನಾಯಿ ತಿಂದರೇನು ನರಿ ತಿಂದರೇನು?
ಕೋಟಿ ವಿದ್ಯೆಯೂ ಕೂಳಿಗೋಸ್ಕರವೇ?
ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ.
ಗಂಗೆಗೆ ಹೋಗಿ, ತೆಂಗಿನ ಓಟೆ ತಂದ ಹಾಗೆ.
ಗಂಡ ಹೆಂಡರ ಜಗಳದಲ್ಲಿ ಕೂಸು ನಾಶವಾಯಿತು?
ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇ?
ಗುರುವಿನಂತೆ ಶಿಷ್ಯ, ತಂದೆಯಂತೆ ಮಗ.
ಗೇಣು ಬಿಟ್ಟು ಅಗಳು ದಾಟಿದ ಹಾಗೆ.
ಘಾಳಿ ಬಂದಾಗಲೇ ತೂರಿ ಕೊಳ್ಳ ಬೇಕು.
ಚರ್‍ಮ ತೊಳೆದರೆ ಕರ್‍ಮ ಹೋದೀತೇ?
ಚಿಂತೆಯೇ ಮುಪ್ಪು, ಸಂತೋಷವೇ ಯೌವನ.
ಚಿನ್ನದ ಚೂರಿ ಎಂದು ಕುತ್ತಿಗೆ ಕೊಯಿಸಿ ಕೊಳ್ಳ ಬಹುದೇ?
ಚೇಳಿನ ಮಂತ್ರವನ್ನರಿಯದವ ಹಾವಿನ ಹುತ್ತಕ್ಕೆ ಕೈ ಇಕ್ಕಿದ ಹಾಗೆ.
ಜಗದೀಶ್ಚರನ ದಯೆ ಒಂದಿದ್ದರೆ, ಜಗತ್ತೆಲ್ಲಾ ನನ್ನದು.
ಜನ ಮರುಳೋ? ಜಾತ್ರೆ ಮರುಳೋ?
ಜೋಗಿಗೆ ಜೋಗಿ ತಬ್ಬಿ ಕೊಂಡರೆ, ಮೈಯೆಲ್ಲಾ ಬೂದಿ.
ಜ್ಞಾನವಂತನಿಗೆ ಸ್ನಾನವೇಕೆ?
ತಟಸ್ಥನಾದವನಿಗೆ ತಂಟೆ ಏನು?
ತರ್ಕಾ ಮಾಡುವವ ಮೂರ್ಖನಿಂದ ಕಡೆ.
ತಲೆ ಘಟ್ಟ ಎಂದು ಕಲ್ಲನ್ನು ಹಾಯ ಬಾರದು.
ತಾ ಕಳ್ಳನಾದರೆ ಪರರನ್ನು ನಂಬ.
ತಾನಾಗಿ ಬೀಳುವ ಮರಕ್ಕೆ ಕೊಡಲಿ ಯಾಕೆ?
ತಾನು ಮಾಡಿದ್ದು ಉತ್ತಮ, ಮಗ ಮಾಡಿದ್ದು ಮಧ್ಯಮ, ಆಳು ಮಾಡಿದ್ದು ಹಾಳು.
ತಾಸಿಗೊಂದು ಕೂಸು ಹೆತ್ತರೆ, ಈಸೀಸು ಮುತ್ತು.
ತಾಳಿದವ ಬಾಳಿಯಾನು.
ತಿಪ್ಪೇ ಮೇಲೆ ಮಲಗಿ, ಉಪ್ಪರಿಗೇ ಕನಸ ಕಂಡ ಹಾಗೆ.
ತೀರಕ್ಕೆ ಬಂದ ಮೇಲೆ ತೆರೆಯ ಭಯವೇ?
ತೀರದಲ್ಲಿರುವ ಮರಕ್ಕೆ ನೀರು ಯಾಕೆ?
ತುಂಟ ಕುದುರೆಗೆ ಗಂಟು ಲಗಾಮು.
ತುಂಡಿಲ್ಲದವನಿಗೆ ತುಂಟನ ಭಯವೇನು?
ತುಂತುರು ಮಳೆಯಿಂದ ತೂಬಿನ ಕೆರೆ ತುಂಬೀತೇ?
ತುಂಬಿದ ಕೊಡ ತುಳಕುವದಿಲ್ಲ.
ತುಚ್ಛನ ಸಂಗಡ ಬಾಳೋದಕ್ಕಿಂತ ಹುಚ್ಚನ ಸಂಗಡ ಬೀಳೋದು ವಾಸಿ.
ತುಚ್ಛ ಮಾತಾಡುವವನು ಹುಚ್ಚಿನಿಂದ ಕಡೆ.
ತುದಿಯಲ್ಲಿ ಕಾಣುವದು ಮದುವೇ ಗುಣ
ದಣಿದ ಎತ್ತಿಗೆ ಮಣುವೇ ಭಾರ.
ದಾರಿ ತಪ್ಪಿದ ಮೇಲೆ ಹಾರಿ ಏನು ಫಲ?
ದಾಸೈಯ ತಿರುಪತಿಗೆ ಹೋದ ಹಾಗೆ.
ದಾಹ ಹತ್ತಿದವನಿಗೆ ಹತ್ತೀ ಕುಡಿಯೋದಕ್ಕೆ ಕೊಟ್ಟ ಹಾಗೆ.
ದಿಕ್ಕಿಲ್ಲದ ಮನುಷ್ಯನಿಗೆ ದೇವರೇ ಗತಿ.
ದಿಕ್ಕು ದಿಕ್ಕಿಗೆ ಹೋದರೂ ದುಖ್ಖ ತಪ್ಪೀತೇ?
ದುಖ್ಖದ ಮೇಲೆ ಸುಖ; ಸುಖದ ಮೇಲೆ ದುಖ್ಖ.
ದುಮ್ಮಿನಿಂದ ಹಮ್ಮ ಕಳ ಕೊಂಡ.
ದೂರಕ್ಕೆ ಬೆಟ್ಟ ನುಣ್ಣಗೆ.
ದೆಬ್ಬೆ ಕೊಟ್ಟು, ಬೊಬ್ಬೇ ಕೊಂಡ.
ದೇವರು ಕೊಟ್ಟರೂ, ಪೂಜಾರಿ ಕೊಡ.
ದೇಶಾಂತರ ಹೋದರೆ, ದೈವ ಬಿಟ್ಟೀತೇ?
ದೊಣ್ಣೆ ಹಿಂಡಿದರೆ, ಎಣ್ಣೆ ಬೀಳುವದೇ?
ದೋತ್ರ ದೊಡ್ಡದಾದರೆ ಗೋತ್ರ ದೊಡ್ಡದೇ?
ದೋಷಾ ಮಾಡುವವನಿಗೆ ರೋಷ ಬಹಳ.
ದ್ರಾಕ್ಷಿ ಶೀ ಎಂದು ಬಳ್ಳಿ ಸಹ ತಿನ್ನ ಬಾರದು.
ಧರ್ಮಕ್ಕೆ ಕೊಟ್ಟ ಎಮ್ಮೇ ಹಲ್ಲು ಹಿಡಿದು ನೋಡಿದ.
ಧರ್ಮಕ್ಕೆ ಕೊಟ್ಟ ದಟ್ಟೀ ಹಿತ್ತಲಿಗೆ ಹೋಗಿ ಮೊಳಾ ಹಾಕಿ ನೋಡಿದ.
ಧೂಪಾ ಹಾಕಿದರೆ ಪಾಪ ಹೋದೀತೇ?
ಧೈರ್ಯ ಉಂಟಾದವನಿಗೆ ದೈವ ಸಹಾಯ ಉಂಟು.
ದೊರೆಯಿಂದ ಆಗುವಂಥಾದ್ದು ನರಿಯಿಂದ ಆದೀತೇ?
ಧೊರೆ ಹೇಳಿದನೆಂದರೆ ಮರದ ಕಾಯಿ ಬಿದ್ದೀತೇ?
ನಡುಗುವವನ ಮೇಲೆ ಸತ್ತ ಹಾವು ಬಿದ್ದ ಹಾಗೆ.
ನಯವಿದ್ದಲ್ಲಿ ಭಯವಿಲ್ಲ.
ನಯ ಶಾಲಿಯಾದವ ಜಯ ಶಾಲಿಯಾದಾನು.
ನರಕಕ್ಕೆ ನವ ದ್ವಾರ, ನಾಕಕ್ಕೆ ಒಂದೇ ದ್ವಾರ.
ನರಿಯ ಹೊಟ್ಟೇ ಒಳಗೆ ಸಿಂಹದ ಮರಿ ಹುಟ್ಟೀತೇ?
ನರ್ಮದೆಗೆ ಹೋದರೆ ಕರ್ಮ ತಪ್ಪೀತೇ?
ನವಿಲು ಕುಣಿಯೋದ ನೋಡಿ ಕೆಂಬೋತಿ ಪುಕ್ಕಾ ತೆರೆಯಿತು.
ನಷ್ಟ ಬಿದ್ದರೂ ಭ್ರಷ್ಟನಾಗ ಬಾರದು.
ನಾಕದವರಿಗೆ ಲೋಕದ ಭಯವೇನು?
ನಾಕದ ಸಂತೋಷ ಸೂಕರಗೆ ತಿಳಿದೀತೇ?
ನಾಚಿಕೆ ಇಲ್ಲದವರ ಕಂಡರೆ ಆಕೆಗೆ ಹೋಗ ಬೇಕು.
ನಾಡಿಗೆ ಇಬ್ಬರು ಅರಸುಗಳಾದರೆ, ಕೇಡು ಬಪ್ಪುದು ತಪ್ಪದು.
ನಾಡೀ ನೋಡದೆ ಮದ್ದು ಕೊಟ್ಟರೆ, ಕಾಡು ರೋಗ ಬರೋದು.
ನಾಡೀ ಪರೀಕ್ಷೆ ಆಡು ಬಲ್ಲದೇ?
ನಾದವಿದ್ದರೆ ಘಂಟೆ, ವಾದವಿದ್ದರೆ ತಂಟೆ.
ನಾಮವಿದ್ದವಗೆ ಕಾಮ ಕಡಿಮೆಯೇ?
ನಾಯಿ ಕೂಗಿದರೆ ದೇವ ಲೋಕ ಹಾಳಾದೀತೇ?
ನಾಯಿ ಬಡೀಲಿಕ್ಕೆ ಬಣ್ಣದ ಕೋಲೇ?
ನಾಯಿಯ ಬಾಲಾ ಲಳಿಗೇಲಿ ಹಾಕಿದರೆ, ಡೊಂಕು ಬಿಟ್ಟೀತೇ?
ನಾಳೆ ಎಂಬೋದು ಗಣಪತೀ ಮದುವೆಯ ಹಾಗೆ,
ನಿಜವಾಡಿದರೆ ನಿಷ್ಠೂರ.
ನಿತ್ಯ ದರಿದ್ರನಿಗೆ ನಿಶ್ಚಿಂತೆ.
ನೀರಲ್ಲಿ ಬರೆದ ಬರಹದ ಹಾಗೆ.
ನೀರಿನ ಮೇಲಣ ಗುಳ್ಳೆಯ ಹಾಗೆ.
ನೀರಿಲ್ಲದ ತಾವಿನಲ್ಲಿ ಊರ ಕಟ್ಟಿದ ಹಾಗೆ.
ನೀರು ಇದ್ದರೆ ಊರು, ನಾರಿ ಇದ್ದರೆ ಮನೆ.
ನೀರುಳ್ಳಿ ನೀರಲ್ಲಿ ತೊಳೆದರೆ, ನಾರೋದು ತಪ್ಪಿತೇ?
ನೀರುಳ್ಳಿಯವನ ಸಂಗಡ ಹೋರಾಟಕ್ಕೆ ಹೋದರೆ, ಮೋರೆ ಎಲ್ಲಾ ನಾರದೇ?
ನೀರೊಳಗೆ ಹೋಮಾ ಮಾಡಿದ ಹಾಗೆ.
ನುಂಗಿದ ತುತ್ತಿನ ರುಚಿ ಮತ್ತೆ ಬಯಸಿದ ಹಾಗೆ.
ನುಗ್ಗಿದವನಿಗೆ ಹಗ್ಗ ತಪ್ಪೀತೇ?
ನುಡಿ ಪುರಾತನ, ನಡೆ ಕಿರಾತನ.
ನೆಚ್ಚಿದ ಎಮ್ಮೆ ಕೋಣನಾಯಿತು.
ನೋಟ ಇಲ್ಲದೆ ಓಟಾ ಮಾಡಿದರೆ, ಕಾಟ ತಪ್ಪದು.
ನೋಟ ನೆಟ್ಟಗಿದ್ದರೆ, ಕಾಟ ಹ್ಯಾಗೆ ಬಂದೀತು?
ನೋಡಿದರೆ ಕಾಣದ್ದು ಓಡಿದರೆ ಶಿಕ್ಕೀತೇ?
ನೋಡಿ ನಡಿಯೋನಿಗೆ ಕೇಡು ಬಾರದು.
ಪಂಜರದಲ್ಲಿ ಕಾಗೆ ಇಟ್ಟರೆ, ಪಂಚಮ ಸ್ಪರ ಕೊಟ್ಟೀತೇ?
ಪರಡಿಯ ರುಚಿ, ಕರಡಿಗೆ ತಿಳಿದೀತೇ?
ಪಕ್ಷಿಗೆ ಆಕಾಶವೇ ಬಲ, ಮತ್ಸ್ಯಕ್ಕೆ ನೀರೇ ಬಲ.
ಪ್ರಾಯ ಹೆಚ್ಚಾದರೂ ಬಾಯಿ ಚಂದಾಗಿರಬೇಕು.
ಪ್ರೇತದ ಭೀತಿ ಹೋದರೂ, ನಾತದ ಭೀತಿ ಹೋಗಲಿಲ್ಲ.
ಬಂಕಾ ಪುರಕ್ಕೆ ಹೋದರೆ ಡೊಂಕು ಬಿಟ್ಟೀತೇ?
ಬಂದ ದಿವಸ ನಂಟ; ಮರು ದಿವಸ ಭಂಟ; ಮೂರನೆ ದಿವಸ ಕಂಟ.
ಬಲಾತ್ಕಾರದಿಂದ ತಂದ ನಾಯಿ ಮೊಲಾ ಹಿಡಿದೀತೇ? ಬಲೆಗೆ ಶಿಕ್ಕದ್ದು ಕೋಲಿಗೆ ಶಿಕ್ಕೀತೇ?
ಬಲ್ಲವನೇ ಬಲ್ಲ ಬೆಲ್ಲದ ಸವಿ.
ಬಸವನ ಹಿಂದೆ ಬಾಲ.
ಬಾಣದ ಗುರಿ ನೊಣದ ಮೇಲೆಯೇ?
ಬಾಳೇ ತೋಟಕ್ಕೆ ಆನೆ ಬಂದ ಹಾಗೆ.
ಬಾಳೇ ಹಣ್ಣಿಗೆ ಗರಗಸವ್ಯಾಕೆ?
ಬುದ್ಧೀ ಹೇಳಿದವರ ಸಂಗಡ ಗುದ್ದ್ಯಾಟಕ್ಕೆ ಹೋದ ಹಾಗೆ.
ಬೂರುಗದ ಮರವನ್ನ ಗಿಣಿ ಕಾದ ಹಾಗೆ.
ಬೆಂದ ಮನೆಗೆ ಹಿರಿದದ್ದೇ ಲಾಭ.
ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ.
ಬೆಟ್ಟ ಅಗಿದು ಇಲೀ ಹಿಡಿದ ಹಾಗೆ.
ಬೆಟ್ಟಕ್ಕೆ ಹೋಗುವವನ ಸೊಂಟದಲ್ಲಿ ಕೊಡ್ಲೀ ಶಿಕ್ಕಿಸಿದ ಹಾಗೆ.
ಬೆರಳು ತೋರಿದರೆ ಮುಂಗೈ ತನಕ ನುಂಗುತ್ತಾನೆ.
ಬೆಳಗಾನಾ ರಾಮಾಯಣಾ ಕೇಳಿ, ಸೀತೆಯೂ ರಾಮನೂ ಏನಾಗ ಬೇಕೆಂದ ಹಾಗೆ.
ಬೆಳಗೂ ಕಡೆದ ಬೆಣ್ಣೆ ಮೋಳ ಬೆಕ್ಕಿನ ಪಾಲಾಯಿತು.
ಬೆಳೆಯ ಸಿರಿ ಮೊಳೆಯಲ್ಲೇ ಕಾಣುವದು.
ಬೇಕು ಅಂದಾಕ್ಷಣ ನಾಕಾ ಸೇರುವನೇ?
ಬೇರು ಬಲ್ಲಾತನೆಗೆ ಎಲೇ ತೋರಿಸ ಬೇಕೇ?
ಬೇಲಿ ಎದ್ದು ಹೊಲಾ ಮೇಯಿದರೆ, ಕಾಯುವವರ್ಯಾರು?
ಬೋರೇ ಗಿಡದಲ್ಲಿ ಕಾರೇ ಹಣ್ಣಾದೀತೇ?
ಭಲಾ ಜಟ್ಟಿ ಅಂದರೆ, ಕೆಮ್ಮಣ್ಣು ಮುಕ್ಕಿದ.
ಭಾಗ್ಯ ಬರುವದನ್ನು ಭಾಗಮ್ಮ ತಡೆದಾಳೇ?
ಭಾರವಾದ ಪಾಪಕ್ಕೆ ಘೋರವಾದ ನರಕ.
ಭಾವೀ ನೀರಾದರೆ ಭಾವಿಸಿದರೆ ಬಂದೀತೇ?
ಭೇದಾ ತಿಳಿಯದಿದ್ದರೂ ವಾದಾ ಬಿಡುವದಿಲ್ಲ.
ಬೋಗಿಗೆ ಯೋಗಿ ಮರುಳು; ಯೋಗಿಗೆ ಭೋಗಿ ಮರುಳು.
ಭ್ರಷ್ಟನಾದರೂ ಕಷ್ಟ ತಪ್ಪದು.
ಭ್ರಾಂತಿ ಹಿಡಿದವನಿಗೆ ವಾಂತಿ ಕೊಟ್ಟರೆ ಹೋದೀತೇ?
ಮಂಗನ ಕೈಯಲ್ಲಿ ಮಾಣಿಕ ಕೊಟ್ಟ ಹಾಗೆ.
ಮಂಗನ ಪಾರುಪತ್ಯ ಹೊಂಗೇ ಮರದ ಮೇಲೆ.
ಮಂತ್ರಿಸಿದರೆ ಮಾವಿನ ಕಾಯಿ ಬಿದ್ದೀತೇ?
ಮಂದೇ ಬಳಿಗೆ ತೋಳ ಬಂದರೆ, ತಂದೇ ಬಳಿಗೆ ಓಡಿ ಹೋದ ಹಾಗೆ.
ಮಕ್ಕಳಿಲ್ಲದವನಿಗೆ ಒಕ್ಕಳ ಹೊನ್ನಿದ್ದರೇನು?
ಮಜ್ಜಿಗೆಗೆ ಹೋದವನಿಗೆ ಎಮ್ಮೇ ಕ್ರಯವ್ಯಾಕೆ?
ಮಟ್ಟು ತಿಳಿಯದೆ ಮಾತಾಡ ಬಾರದು.
ಮಠಪತಿಯಾದರೂ ಶಠತನ ಬಿಡಲಿಲ್ಲ.
ಮಡಿಕೆ ಒಡೆಯುವದಕ್ಕೆ ಅಡಿಕೇ ಮರ ಬೇಕೇ?
ಮಣ್ಣು ಕಾಲು ನೀರಿಗಾಗದು; ಮರದ ಕಾಲು ಬೆಂಕಿಗಾಗದು.
ಮಣ್ಣು ದೇವರಿಗೆ ಮಜ್ಜನವೇ ಸಾಕ್ಷಿ.
ಮತಿ ಇಲ್ಲದವನಿಗೆ ಗತಿ ಇಲ್ಲ.
ಮತ್ತನಾದವನ ಹತ್ತಿರ ಕತ್ತಿ ಇದ್ದರೇನು?
ಮದುವೆಗೆ ತಂದ ಅಕ್ಕಿ ಎಲ್ಲಾ ಸೇಸೆಗೆ ತೀರಿ ಹೋಯಿತು.
ಮನೇ ಕಟ್ಟ ಬಹುದು, ಮನಸ್ಸು ಕಟ್ಟ ಕೂಡದು.
ಮನೇ ಕಟ್ಟಿ ನೋಡು, ಮದುವೇ ಮಾಡಿ ನೋಡು.
ಮನೆಗೆ ಮಾರಿ, ಹೆರರಿಗೆ ಉಪಕಾರಿ.
ಮನೇ ಬಲ್ಲೆ, ದಾರೀ ಅರಿಯೆ.
ಮನೇ ದೀಪವಾದರೆ ಮುತ್ತು ಕೊಡ ಬಹುದೇ?
ಮನೇ ತಿಂಬುವವನಿಗೆ ಕದ ಹಪ್ಪಳ ಸಂಡಿಗೆ.
ಮಳೆಗೆ ಹೆದರಿ, ಹೊಳೆಗೆ ಬಿದ್ದ ಹಾಗೆ
ಮಳೆಗೆ ತಡೆಯದ ಕೊಡೆ ಶಿಡಿಲಿಗೆ ತಡೆದೀತೇ?
ಮಳೆ ನೀರು ಬಿಟ್ಟು ಮಂಜಿನ ನೀರಿಗೆ ಕೈ ಒಡ್ಡಿದ ಹಾಗೆ.
ಮಳೇ ಹನಿ ಬಿಟ್ಟರೂ ಮರದ ಹನಿ ಬಿಡಲಿಲ್ಲ.
ಮಾಡ ಬಾರದ್ದು ಮಾಡಿದರೆ, ಆಗ ಬಾರದ್ದಾಗುವದು.
ಮಾಡಿದ ಪಾಪಕ್ಕೆ ಮನವೇ ಸಾಕ್ಷಿ, ತೋಡಿದ ಭಾವಿಗೆ ಜಲವೇ ಸಾಕ್ಷಿ.
ಮಾಡೋದು ದುರಾಚಾರ, ಮನೆಯ ಮುಂದೆ ವೃಂದಾವನ.
ಮಾಣಿಕ್ಯವನ್ನು ಮಸೀ ಅರವೇಲಿ ಕಟ್ಟಿದ ಹಾಗೆ.
ಮಾತು ಕೊಂಡು ಹೋದವ ಉಂಡ; ಮಾಣಿಕ್ಯ ಕೊಂಡು ಹೋದವ ಹಸಿದು ಬಂದ.
ಮಾತು ಬಂದಾಗ, ಸೋತು ಹೋದವನೇ ಜಾಣ.
ಮಾನದಲ್ಲಿ ಆನೆ ಹಿಡಿದೀತೇ?
ಮಾನ ಹೋದ ಮೇಲೆ ಮರಣವಾದ ಹಾಗೆ.
ಮಾರಿಯ ಕಣ್ಣು ಹೋತನ ಮೇಲೆ.
ಮಾರಿಯ ಮನೆಗೆ ಹೋತ ಕನ್ನಾ ಕೊರೆದ ಹಾಗೆ.
ಮಾರ್‍ಯಮ್ಮ ಅರಿಯದ ಕೋಣೆಯೋ?
ಮೀನು ನೀರಿನಲ್ಲಿ ಮುಣಿಗಿದರೆ, ಸ್ನಾನದ ಫಲ ಬಂದೀತೇ?
ಮುತ್ತಿನ ಚಲುವು ಕತ್ತಿಗೆ ತಿಳಿದೀತೇ?
ಮುತ್ತು ಕೆಟ್ಟರೆ ಭತ್ತಕ್ಕಿಂತ ಕಡೆಯೇ?
ಮೂಕನಿದುರಿಗೆ ಮೂಗು ತುರಿಸಿ ಕೊಂಡ ಹಾಗೆ.
ಮೂಗಿಗಿಂತ ಮೂಗುತಿ ಭಾರ.
ಮೂಗು ಕೊಯಿದು ಮೊಗ್ಗಿನ ತುರಾಯಿ ಕೊಟ್ಟ ಹಾಗೆ.
ಮೂರ್ಖಗೆ ಹೇಳಿದ ಬುದ್ಧಿ ಗೋರ್ಕಲ್ಲಿನ ಮೇಲೆ ಮಳೆ ಹೊಯಿದ ಹಾಗೆ.
ಮೂರ್ತಿ ಸಣ್ಣದಾದರೂ ಕೀರ್ತಿ ದೊಡ್ಡದು.
ಮೂವರ ಕಿವಿಗೆ ಮುಟ್ಟಿದ್ದು ಮೂರು ಲೋಕಕ್ಕೆ ಮುಟ್ಟುವದು.
ಮೂರೆತ್ತಿನ ಬಂಡಿ ಹೊಲಕ್ಕೂ ಹೋಗದು, ಮನೆಗೂ ಬಾರದು.
ಮೆಚ್ಚಿದವನಿಗೆ ಮಸಣವೇ ಸುಖ.
ಮೆಟ್ಟಿದಲ್ಲದೆ ಹಾವು ಕಡಿಯದು.
ಮೆಟ್ಟಿದಾಕ್ಷಣ ಘಟ್ಟ ತಗ್ಗೀತೇ?
ಮೈಯಲ್ಲಿ ಹುಟ್ಟಿದ ರೋಗಕ್ಕಿಂತ ಕಾಡಲ್ಲಿ ಹುಟ್ಟಿದ ಔಷಧ ಮೇಲು.
ಮೊಗೇ ಮಾಡದ ಕುಂಬಾರ ಗುಡಾಣಾ ಮಾಡ್ಯಾನೇ?
ಮೊಳಕೈ ಆಡಿದರೆ ಮುಂಗೈ ಆಡುತ್ತದೆ.
ಯಾತ ತಲೇ ತೂಗಿದರೆ, ಪಾತಾಳದ ನೀರು ಹರಿಯುತ್ತದೆ. ತಾತ
ತಲೇ ತೂಗಿದರೆ, ಪಾಗು ಬೀಳುತ್ತದೆ.
ಯಾರೂ ಇಲ್ಲದ ಊರಿಗೆ ಅಗಸರ ಮಾಳಿಯೇ ಮುತ್ತೈದೆ.
ಯಾರೂ ಇಲ್ಲದ ಊರಿಗೆ ಹೋಗಿ ನೀರ ಮಜ್ಜಿಗೇ ಬಯಸಿದ ಹಾಗೆ
ಯಾವ ರಾಯನಿಗೆ ರಾಜ್ಯವಾದರೂ ರಾಗಿ ಬೀಸೋದು ತಪ್ಪದು.
ಯೋಗಿಯಾದರೂ ಭೋಗಾ ಬಿಡ.
ಯೋಗ್ಯತೆ ಅರಿಯದ ಧೊರೆಯೂ ರೋಗವರಿಯದ ವೈದ್ಯನೂ ಒಂದೇ.
ರಂಗನ ಮುಂದೆ ಶಿಂಗನೇ?
ರಾಗ ನುಡಿಸುವಾಗ ತಂತಿ ಹರಿಯಿತು.
ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡ.
ರಾಯರ ಪಾದದಾಣೆ ಹಾರೇ ನುಂಗು.
ರಾವಣನ ಹೊಟ್ಟೆಗೆ ಅರೆ ಕಾಸಿನ ಮಜ್ಜಿಗೆಯೇ?
ಲಂಗು ಹರಿದ ಮೇಲೆ ಜಂಗಮನ ಹಂಗೇನು?
ಲೆತ್ತಾ ಹಾಕಲಿಕ್ಕೆ ಹೋದರೆ, ಬೋಕಿ ಬಿತ್ತು.
ಲೋಕದವರೆಲ್ಲಾ ಸತ್ತರೆ ಶೋಕಾ ಮಾಡುವವರ್ಯಾರು?
ವಂಚಕನಿಗೆ ಸಂಚು ಕೊಟ್ಟ ಹಾಗೆ.
ವನವಾಸಕ್ಕೆ ಹೋದರೂ ಘನ ಕಷ್ಟ ಬಿಡಲಿಲ್ಲ.
ವಾಶಿ ಆಗದ ರೋಗಕ್ಕೆ ರಾಶಿ ಮದ್ದು ಮಾಡಿದರೂ ವ್ಯರ್ಥ.
ವಿತ್ತಕ್ಕೆ ತಕ್ಕ ವಿಭವ.
ವೀರನ ಶೌರ್ಯ ಹಾರುವನ ಮೇಲೆಯೇ?
ವೈರವಿದ್ದವನಿಂದ ಕ್ಷೌರಾ ಮಾಡಿಸಿ ಕೊಂಡ ಹಾಗೆ.
ವೈರಾಗ್ಯವುಳ್ಳವನಾದರೂ ವೈರತ್ವ ಬಿಡಲಿಲ್ಲ.
ಶಕುನದ ಹಕ್ಕಿಯ ಗೋಣು ಮುರಿದ ಹಾಗೆ.
ಶಕ್ತಿ ಇದ್ದವನಾದರೂ ಯುಕ್ತಿ ಇದ್ದವನ ಕೆಳಗೆ.
ಶಾಂತಿ ಮಾಡಿದರೂ ಭ್ರಾಂತಿ ಹೋಗಲಿಲ್ಲ.
ಶ್ಯಾನಭೋಗನ ಸಂಬಳ ಸಂತೋ? ಎಂದು ಕೇಳ ಬೇಡ, ಹೆಂಡತೀ
ದೆಸೆಯವರು ಉಂಡರೋ? ಎಂದು ಕೇಳ ಬೇಡ.
ಶಾಪ ಕೊಡುವವ ಪಾಪಕ್ಕೆ ಹೆದರ.
ಶಿಟ್ಟಿಗೆ ಕೊಯಿದ ಮೂಗು ಶಾಂತತ್ವದಿಂದ ಹತ್ತೀತೇ?
ಶಿವಾ ಅಂದರೆ ಶೆರಗು ಸುತ್ತಿ ಕೊಂಡ. ಭವಾ ಅಂದರೆ ಭೈರವಾಸು ಹರಿದು ಬಿಟ್ಟು.
ಶೀತರೆ ಬೀಳುವ ಮೂಗು ಕೊಯಿದರೆ ನಿಂತೀತೇ?
ಶೀಸದ ಉಳಿಯಲ್ಲಿ ಶೈಲಾ ಒಡೆಯ ಬಹುದೇ?
ಶೆಕೆ ಹೆಚ್ಚಾಯಿತೆಂದು ಕಂಬಳಿ ಹೊದ್ದು ಕೊಂಡ.
ಶೆಟ್ಟ ಬಿಟ್ಟಲ್ಲೇ ಪಟ್ಟಣ.
ಶೆಟ್ಟಿಯ ಬಾಳು ಸತ್ತಲ್ಲದೆ ತಿಳಿಯದು.
ಶೆಟ್ಟ ಶೃಂಗಾರವಾಗುವಾಗ್ಯೆ ಪಟ್ಟಣವೆಲ್ಲಾ ಸೂರೆ ಹೋಯಿತು.
ಶೆಟ್ಟಿ ಸವಾ ಶೇರು, ಲಿಂಗ ಅಡಾ ಶೇರು.
ಶೇದಿದ ನೀರ ಹಾದೀಲಿ ಹಾಕ್ಯಾರೇ?
ಶೇರದ ಗಂಡನಿಗೆ ಮೊಸರಲ್ಲಿ ಕಲ್ಲು ಶಿಕ್ಕಿತು
ಶ್ವಾನನ ಮುಂದೆ ಗಾನಾ ಹಾಡಿದ ಹಾಗೆ.
ಸಂಕಟ ಬಂದರೆ ವೆಂಕಟರಮಣ.
ಸಂಚು ನಡಿಸಲಿಕ್ಕೆ ಸಂಚಕಾರ ಕೊಡ ಬೇಕೇ?
ಸಂತೆ ನೆರೆಯುವದಕ್ಕಿಂತ ಮುಂಚೆ ಗಂಟು ಕಳ್ಳರು ನೆರೆದ ಹಾಗೆ.
ಸಂತೆ ಹೊತ್ತಿಗೆ ಮೂರು ಮೊಳಾ ನೇದ ಹಾಗೆ.
ಸಜ್ಜನನಿಗೂ ಸಜ್ಜನನಿಗೂ ಮೂರು ದಾರಿ. ಸಜ್ಜನನಿಗೂ ದುರ್ಜನನಿಗೂ
ಎರುಡು ದಾರಿ, ದುರ್ಜನನಿಗೂ ದುರ್ಜನನಿಗೂ ಒಂದೇ ದಾರಿ.
ಸಟೆ ಆಡುವವನಿಗೆ ಮಠದ ಪೂಜೆ ಶಿಕ್ಕೀತೇ?
ಸಣ್ಣ ತಲೆಗೆ ದೊಡ್ಡ ಮುಂಡಾಸು.
ಸತ್ತ ಕುರಿ ಕಿಚ್ಚಿಗೆ ಅಂಜೀತೇ?
ಸತ್ಯವಿದ್ದರೆ ಎತ್ತಲೂ ಭಯವಿಲ್ಲ.
ಸಮಯಕ್ಕಾಗದ ಅರ್ಥ ಸಹಸ್ರವಿದ್ದರೂ ವ್ಯರ್ಥ?
ಸಮಯಕ್ಕಾದವನೆ ನಂಟ, ಸಾಹಸಕ್ಕೊದಗಿದವನೇ ಬಂಟ.
ಸಮುದ್ರದ ನಂಟು, ಉಪ್ಪಿಗೆ ಬಡತನ.
ಸಮುದ್ರದ ಮುಂದೆ ಅರವಂಟಗೆ.
ಸಮುದ್ರ ದೊಡ್ಡದಾದರೂ ಪಾತ್ರೆ ಇದ್ದಷ್ಟೇ ನೀರು ಶಿಕ್ಕೀತು.
ಸಮುದ್ರ ಮೆರೆದಪ್ಪಿದರೆ ಯಾರೂ ಮಾಡೋದೇನು?
ಸರಕು ಒಪ್ಪಿಸಿದ ಮೇಲೆ ಸುಂಕವೇ?
ಸರ್ಪನ ಕೂಡೆ ಸರಸವೇ?
ಸಾಧು ಎತ್ತಿಗೆ ಎರಡು ಹೇರು.
ಸಾಧಿಸಿದರೆ ಸಬಳಾ ನುಂಗ ಬಹುದು.
ಸಾಯುವ ತನಕ ಸಾಮು ಕಲಿತರೆ, ಯುದ್ಧಾ ಮಾಡುವದ್ಯಾವಾಗ?
ಸಾಯುವವನ ಕಣ್ಣಿಗೆ ಸುಳಿದವನೇ ಜವರಾಯ.
ಸಾವಿಗಂಜದವನು ನೋವಿಗೆ ಹೆದರ್ಯಾನೇ?
ಸಾವಿರ ಕುದುರೇ ಸರದಾರನಾದರೂ, ಮನೇ ಹೆಂಡತೀ ಕಾಸ್ತಾರ.
ಸಾವಿರ ತನಕಾ ಸಾಲ; ಆ ಮೇಲೆ ಲೋಲ.
ಸಾವಿರ ವರಹಾ ತೂಕ ಚಿನ್ನಕ್ಕೆ ಹಾಗ ತೂಕ ಮಚ್ಚ
ಸಾವಿರ ಬೆಕ್ಕು ಕೂಡಿದರೆ ಒಂದು ಹುಲಿಯಾದೀತೇ?
ಸಾವಿರ ಬಾರಿ ಗೋವಿಂದಾ ಎನ್ನಬಹುದು; ಒಬ್ಬ ದಾಸೈಯಗೆ ಇಕ್ಕೋದು ಕಷ್ಟ.
ಸುಂಕದವನ ಸಂಗಡ ಸುಖ ದುಖ್ಖ ಹೇಳಿದರೆ, ಕಂಕುಳಲ್ಲಿ ಏನು? ಅಂದ.
ಸುಂಕದವನು ಸುಳ್ಳ, ಬಣಜಿಗ ಕಳ್ಳ.
ಸುಡುಗಾಡಿಗೆ ಹೋದ ಹೆಣ ತಿರಿಗಿ ಬಂದೀತೇ?
ಸುವ್ವೀ ಅಂದರೆ ತಿಳಿಯದೇ? ಒನಿಕೇ ರಾಗ,
ಸುಳ್ಳು ದೇವರಿಗೆ ಕಳ್ಳ ಪೂಜಾರಿ.
ಸೂಜಿಗೆ ಸೂಜಿ ಮುತ್ತು ಕೊಟ್ಟ ಹಾಗೆ.
ಸೂಜಿಯಷ್ಟು ಬಾಯಿ, ಗುಡಾಣದಷ್ಟು ಹೊಟ್ಟೆ.
ಸೂಲು ತಪ್ಪಿದರೆ ಗೊಡ್ಡೇ?
ಸೇರು ರಾಜ, ಮಣುವು ಬಂಟ.
ಸ್ಥಿತಿ ಇಲ್ಲದಿದ್ದರೂ, ಗತಿ ಕೇಡ ಬಾರದು.
ಸ್ಮರಣೆ ತಪ್ಪಿದರೂ, ಸೈರಣೆ ಇರಬೇಕು.
ಸ್ವಪ್ನದಲ್ಲಿ ದಂಡಿಗೇ ಏರಿ ಗೊಂಡೇ ಹಿಡಿದ ಹಾಗೆ.
ಸ್ವಾಮಿ ದ್ರೋಹೀ ಮನೆಗೆ ಪಂಚ ಮಹಾ ಘಾತಕದ ಬಾಗಲು.
ಹಂಗಾಳಾದ ಮೇಲೆ ಮಂಗನ ಹಾಗೆ ಮಾಡ ಬೇಕು.
ಹಂಗು ಹರಿದ ಮೇಲೆ ತೊಂಗೇನು? ತೊಡರೇನು?
ಹಂಚಿನಲ್ಲುಣ್ಣುವವನಿಗೆ ಹರಿವಾಣವೇಕೆ?
ಹಂದಿ ತೊಳೆದರೂ, ಕೆಸರಲ್ಲಿ ಹೊರಳೋದು ಬಿಡದು.
ಹಣವಿದ್ದವನಿಗೆ ಗುಣವಿಲ್ಲ, ಗುಣವಿದ್ದವನಿಗೆ ಹಣವಿಲ್ಲ.
ಹಣವಿಲ್ಲದವ ಹೆಣ.
ಹಣವಂದರೆ ಹೆಣ ಬಾಯಿ ಬಿಡುತ್ತೆ.
ಹಣ್ಣು ಜಾರಿ ಹಾಲಲ್ಲಿ ಬಿದ್ದ ಹಾಗೆ, ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದ ಹಾಗೆ.
ಹಣ್ಣೆಂದು ಶಲಭ ದೀಪದ ಮೇಲೆ ಬಿದ್ದು ಸತ್ತ ಹಾಗೆ.
ಹತ್ತರ ಸಾವು ಮದುವೇ ಸಮಾನ.
ಹತ್ತರ ಹಲ್ಲ ಕಡ್ಡಿ ಒಬ್ಬನ ತಲೆ ಹೊರೆ.
ಹನಿ ಗೂಡಿದರೆ ಹಳ್ಳ; ತೆನೆ ಗೂಡಿದರೆ ಭತ್ತ.
ಹನುಮಂತರಾಯ ಹಗ್ಗಾ ತಿನ್ನುವಲ್ಲಿ ಪೂಜಾರೈಯ ಶ್ಯಾವಿಗೇ ಬಯಸಿದ.
ಹನ್ನೆರಡು ವರುಷ ಸಾಧಕಾ ಮಾಡಿ ಮನೆಯ ಮುದುಕಿ ಸೊಂಟಾ ಮುರಿದ ಹಾಗೆ.
ಹಬೆಗೆ ತಾಳದೆ ಉರಿಯೊಳಗೆ ಬಿದ್ದನಂತೆ.
ಹರವಿಯ ಅನ್ನದಲ್ಲಿ ಒಂದಗುಳು ನೋಡಿದರೆ ಸರಿ.
ಹರಿಯೋ ಪರಿಯಂತರ ಎಳೆಯ ಬಾರದು, ಮುರಿಯೋ ಪರಿಯಂತರ ಬೊಗ್ಗಿಸ ಬಾರದು.
ಹಲವು ಸಮಗಾರರು ಕೂಡಿ ತೊಗಲು ಹದಾ ಕೆಡಿಸಿದರು.
ಹಲ್ಲು ಇರುವಾಗಲೇ ಕಡ್ಲೇ ತಿನ್ನ ಬೇಕು.
ಹಶೀ ಗೋಡೆಗೆ ಕಲ್ಲು ಹೊಡೆದ ಹಾಗೆ.
ಹಳೆದು ಮೀರಿ ಹೊಸದಿಲ್ಲ. ಬಿಳಿದು ಮೀರಿ ಬಣ್ಣವಿಲ್ಲ.
ಹಳ್ಳೀ ಕುರುಬರಿಗೆ ಗಾಜೇ ಮಾಣಿಕ್ಯ.
ಹಾಕುವದಕ್ಕೆ ತೆಗೆಯುವದಕ್ಕೆ ಗೌಡನ ಕೋಳವೇ?
ಹಾಕೋದು ಬಿತ್ತೋದು ನನ್ನಿಚ್ಛೆ; ಆಗೋದು ಹೋಗೋದು ದೇವರಿಚ್ಛೆ.
ಹಾಗದ ಕೋತಿ ಮುಪ್ಪಾಗದ ಬೆಲ್ಲಾ ತಿಂತು.
ಹಾಗಲವಾಡಿಗೆ ಹೋದರೆಗೀದರೆ, ಹಾಗಕ್ಕೊಂದೆಮ್ಮೆ ತಂದರೆಗಿಂದರೆ,
ಕರೆದರೆಗಿರೆದರೆ, ನಿಮ್ಮವರಿಗೆ ಮಜ್ಜಿಗೆ ಗಿಜ್ಞೆಗೆ ಕೊಟ್ಟುಗಿಟ್ಟೀಯಾ?
ಹಾಡಿದ್ದೇ, ಹಾಡೋ, ಕಿಸುವಾಯಿ ದಾಸ.
ಹಾದೀ ಜಗಳ ಹಣವಡ್ಡಕ್ಕೆ ಕೊಂಡ.
ಹಾರೋ ಗುಬ್ಬಿಗೆ ಗೋಧೀ ಕಲ್ಲು ಕಟ್ಟಿದ ಹಾಗೆ.
ಹಾಲಕ್ಕಿಯಾದರೆ ಹಾಲ ಕರದೀತೇ?
ಹಾಲಿದ್ದಾಗಲೇ ಹಬ್ಬಾ ಮಾಡು.
ಹಾವಿಗೆ ಹಾಲೆರದರೆ, ತನ್ನ ವಿಷ ಬಿಟ್ಟೀತೇ?
ಹಾವಿನ ಕೂಡೆ ಕಪ್ಪೆಗೆ ಸರಸವೇ?
ಹಾವ ಕೊಂದು ಹದ್ದಿನ ಮುಂದೆ ಹಾಕಿದ ಹಾಗೆ.
ಹಾವು ಮುಪ್ಪಾದರೆ ವಿಷ ಮುಪ್ಪೇ?
ಹಾಸಿಗೇ ಅರಿತು ಕಾಲ್ನೀಡ ಬೇಕು.
ಹಾಳು ತೋಟಕ್ಕೆ ನೀರು ಹಾಕಿ, ಬೀಳು ರೆಟ್ಟೆ ಬಿದ್ದು ಹೋಯಿತು.
ಹಿಗ್ಗಿದವ ಮುಗ್ಯಾನು, ತಗ್ಗಿದವ ಜೈಶ್ಯಾನು.
ಹಿಡಿದದ್ದು ತಪ್ಪಿತು; ಮೆಟ್ಟಿದ್ದು ಮುರಿಯಿತು.
ಹಿಡಿ ತುಂಬಾ ಹಣ ಕೊಟ್ಟರೂ ನುಡಿ ಚನ್ನಾಗಿರ ಬೇಕು.
ಹಿಡಿಯುವದಕ್ಕೆ ಪಟ್ಟಲ್ಲ, ನಿಲ್ಲುವದಕ್ಕೆ ಕೊನೆ ಇಲ್ಲ.
ಹಿರಿಯಕ್ಕನ ಚಾಳಿ ಮನೇ ಮಕ್ಕಳಿಗೆಲ್ಲ.
ಹುತ್ತಾ ಬಡಿದರೆ ಹಾವು ಸಾಯುವದೇ?
ಹುಬ್ಬೇ ಮಳೇಲಿ ಬಿತ್ತಿದರೆ, ಹುಲ್ಲೂ ಇಲ್ಲ, ಕಾಳೂ ಇಲ್ಲ.
ಹುರುಳೀ ಸಾರಿಗೆ ಹೋಗಿ ಕುದುರೆಯ ಬೆಲೇ ಕೇಳಿದ ಹಾಗೆ.
ಹುಲೀ ಬಣ್ಣಕ್ಕೆ ನರೀ ಮೈ ಸುಟ್ಟು ಕೊಂಡ ಹಾಗೆ.
ಹುಲೀ ಮರೀ ಹುಲ್ಲು ಮೇದೀತೇ?
ಹುಲ್ಲೆ ಹಾರಿದ್ದಕ್ಕೂ ಹುಲಿ ಅಡಗಿದ್ದಕ್ಕೂ ಸರೀ ಬಂದೀತೇ?
ಹೂ ಮಾರಿದ ಊರಲ್ಲಿ ಹುರೀ ಮಾರ ಬಾರದು.
ಹೂವಿನಿಂದ ನಾರು ಮಂಡೇ ಮೇಲೆ.
ಹೆಗ್ಗಣ ಪರ ದೇಶಕ್ಕೆ ಹೋದರೆ, ನೆಲಾ ಕೆರೆಯುವದ ಬಿಟ್ಟೀತೇ?
ಹೆಣ್ಣು ಚಲ್ವೆ, ಕಣ್ಣು ಮಾತ್ರ ಕಾಣುವದಿಲ್ಲ.
ಹತ್ತೈಯನ ಹರಿಯದವ ಮುತ್ತೈಯನ ಬಲ್ಲನೇ?
ಹೆತ್ತವರಿಗೆ ಹೆಗ್ಗಣ ಮುದ್ದು.
ಹೆಸರು ಮಾತ್ರ ಗಂಗಾ ಭವಾನಿ, ಕುಡಿಯುವದಕ್ಕೆ ನೀರಿಲ್ಲ.
ಹೇಳಿ ಕೊಟ್ಟ ಬುದ್ಧಿ, ಕಟ್ಟಿ ಕೊಟ್ಟ ಬುತ್ತಿ, ಎಲ್ಲೀ ತನಕಾ ಬರುವದು?
ಹೇಳುವವರು ಹೆಡ್ಡರಾದರೆ, ಕೇಳುವವರಿಗೆ ಮತಿ ಇಲ್ಲವೇ?
ಹೊಟ್ಟು ಕುಟ್ಟಿ ಕೈಯೆಲ್ಲಾ ಗುಳ್ಳೆ.
ಹೊರಗೆ ಹೋಗುವ ಮಾರಿ ನನ್ನ ಮನೇ ಹೊಕ್ಕು.ಹೋಗು ಅಂದ ಹಾಗೆ,
ಹೊಸ ವೈದ್ಯನಿಗಿಂತ ಹಳೇ ರೋಗಿ ವಾಶಿ.
ಹೊಸ್ತಿಲ ಸಾರಿಸಿದ ಮಾತ್ರದಲ್ಲಿಯೇ ಹಬ್ಬವಾಯಿತೋ?
ಹೊಳೆ ದಾಟಿದ ಮೇಲೆ ಅಂಬಿಗನ ಮಿಂಡ.
ಹೊಳೆಗೆ ನೆನೆಯದ ಕಲ್ಲು ಮಳೆಗೆ ನೆನೆದೀತೇ?
ಹೊಳೇ ನೀರಿಗೆ ದೊಣ್ಣಪ್ಪ ನಾಯಕನ ಅಪ್ಪಣೆಯೇ?
ಹೊಳೆ ಮೂಗಾವುದವನ್ನ ಕೆರಾ ಕಳಚುವರುಂಟೇ?
ಹೋಗದ ಊರಿಗೆ ದಾರೀ ಕೇಳಿದ ಹಾಗೆ.
ಹೋದರೆ ಒಂದು ಕಲ್ಲು, ಬಿದ್ದರೆ ಒಂದು ಹಣ್ಣು.
ಕ್ಷೌರ ಕತ್ತಿ ಚಲೋದು, ಯಾಕೆ ಅಳುತ್ತೀರಮ್ಮಾ?
ಕ್ಷೌರಕ್ಕೆ ಕೂತಲ್ಲಿ ಶೀನು ಬಂದ ಹಾಗೆ.