ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಎಲುಬುಮೀನು

ವಿಕಿಸೋರ್ಸ್ದಿಂದ

ಎಲುಬು ಮೀನುಗಳು : ಇವು ಮೀನುಗಳಲ್ಲಿನ ಎರಡು ವರ್ಗಗಳಲ್ಲೊಂದು (ಆಸ್ಟ್ರೆಕ್ತಿಯೀಸ್). ಇನ್ನೊಂದು ವರ್ಗದವು ಕೋಮಲಾಸ್ಥಿ ಮೀನುಗಳು (ಕಾಂಡ್ರಿಕ್ತಿಯೀಸ್). ಇಂದು ಜೀವಿಸಿರುವ ಮೀನುಗಳಲ್ಲಿ ಅನೇಕ ಜಾತಿಯವು ಎಲುಬು ಮೀನುಗಳೇ ಆಗಿವೆ. ಇವುಗಳಿಗೆ ಕಾಸ್ಮಾಯ್ಡ್‌ ಅಥವಾ ಗನಾಯ್ಡ್‌ ಬಗೆಯ ಹುರುಪೆಗಳಿವೆ. ಬಾಲದ ರೆಕ್ಕೆ ಸಮಲಾಂಗೂಲ ಅಥವಾ ದ್ವಿಪಾಶರ್ವ್‌ ಸಮಲಾಂಗೂಲ ಬಗೆಯದಾಗಿರುತ್ತದೆ. ರೆಕ್ಕೆಯ ಕಡ್ಡಿಗಳು ಎಲುಬಿನಿಂದ ರಚಿತವಾಗಿವೆ. ಕಿವಿರುತಂತುಗಳನ್ನು ಒಂದು (ತೆಳುವಾದ) ಪೊರೆ ಮುಚ್ಚಿರುತ್ತದೆ. ಈ ಪೊರೆಯನ್ನು ಅಪಕುರ್ಯ್‌ಲಂ ಅಥವಾ ಕಿವಿರು ಕವಚ ಎಂದು ಕರೆಯುತ್ತಾರೆ. ಕೆಳದವಡೆ ಅನೇಕ ಮೂಳೆಗಳಿಂದ ಮಾಡಲ್ಪಟ್ಟಿರುತ್ತದೆ. ಗರ್ಭಾಂಕುರತೆ ಸಾಮಾನ್ಯವಾಗಿ ದೇಹದೊಳಗಾಗದೆ ಹೊರಾವರಣದಲ್ಲೇ ಆಗುತ್ತದೆ. ಅಂಡಾಶಯದ ಜೊತೆಗೇ ಅಂಡನಳಿಕೆಗಳು ಅವಿರತವಾಗಿರುತ್ತವೆ.

ಕೆಲವು ವರ್ಷಗಳ ಹಿಂದೆ, ಎಲುಬು ಮೀನುಗಳು ಶಾರ್ಕ್ ಮಾದರಿಯ ಮೀನು ಗಳಿಂದ ಉದ್ಭವಿಸಿರಬಹುದೆಂದೂ ಆದ್ದರಿಂದ ಇವುಗಳ ಎಲುಬು ಒಂದು ಹೊಸ ಗಳಿಕೆ ಎಂದೂ ನಂಬಿದ್ದರು. ಆದರೆ ಆ ರೀತಿಯಾಗದೆ ಎಲುಬು ಮೀನುಗಳಲ್ಲಿ ಎಲುಬು, ಆಸ್ಟ್ರಕೋಡರ್ಮ್ ಮತ್ತು ಪ್ಲಾಕೊಡರ್ಮ್ ಮೀನುಗಳಲ್ಲಿದ್ದ ಹಾಗೆ ಆದಿಯಿಂದಲೂ ಇದ್ದು, ಉಳಿದುಕೊಂಡು ಬಂದಿರುವುದಲ್ಲದೆ ಕ್ರಮೇಣ ಅವುಗಳ ನವೀನ ಕಾರ್ಯಾಚರಣೆಗೆ ಹೊಂದಿಕೊಂಡಿದೆ ಎಂದು ಇತ್ತೀಚಿನ ಪ್ರಾಣಿವಿಜ್ಞಾನಿಗಳು ಅಭಿಪ್ರಾಯ ಪಡುತ್ತಾರೆ. ವಿಕಸನ ಪಥದಲ್ಲಿ ಸಾಕಷ್ಟು ಮುಂದುವರೆದಿದ್ದು ಪ್ರಪಂಚದ ವೈವಿಧ್ಯ ಜಲಪರಿಸರಗಳಿಗೆ ಹೊಂದಿಕೊಂಡು ಬದುಕಲು ಕಲಿತಿವೆ. ತದ್ವಿರುದ್ಧವಾಗಿ ಮೃದ್ವಸ್ಥಿ ಮೀನುಗಳು ಕಡಲನ್ನು ಬಿಟ್ಟರೆ ಸಿಹಿನೀರು ಪ್ರದೇಶಗಳಲ್ಲಿ ಕಾಣಸಿಗುವುದು ಕಡಿಮೆ.

ಈ ಮೀನುಗಳಿಗೆ ಬಹು ಪ್ರಾಚೀನವಾದ ಇತಿಹಾಸವಿದೆ. ಇವು ಡಿವೊನಿಯನ್ ಯುಗದಲ್ಲೇ ಇದ್ದುವೆಂಬುದಕ್ಕೆ ಜೀವಾವಶೇಷಗಳ ಆಧಾರವಿದೆ. ಆದ್ದರಿಂದ ಎಲುಬು ಮೀನುಗಳು ಶಾರ್ಕ್ ಮೀನುಗಳಿಗಿಂತಲೂ ಹಳೆಯವು. ಮಧ್ಯ ಡಿವೊನಿಯನ್ ಕಾಲದಲ್ಲೇ ಎಲುಬು ಮೀನುಗಳು ಸಿಹಿ ನೀರಿನಲ್ಲಿ ಪ್ರಧಾನವಾದ ಪ್ರಾಣಿಗಳಾಗಿದ್ದು ಪ್ರಾಚೀನ ಜೀವ ಕಲ್ಪದ (ಪೇಲಿಯೊಜೋ಼ಯಿಕ್) ಉತ್ತರಾರ್ಧದ ಅಂತ್ಯದಲ್ಲಿ ಹೆಚ್ಚಿನ ಜಾತಿಗಳು ಮತ್ತು ಪ್ರಭೇದಗಳನ್ನೊಳಗೊಂಡು ಬಹಳ ಹೆಚ್ಚಿನ ಸಂಖ್ಯೆಯಲ್ಲಿದ್ದುವು. (ಮೀಸೊಜೋ಼ಯಿಕ್) ಕಾಲದಲ್ಲಿ ಅವು ಸಮುದ್ರಗಳಿಗೆ ವಲಸೆ ಹೋಗಿ ನೆಲೆಸಲಾರಂಭಿಸಿದುದರಿಂದ ಸಮುದ್ರವೇ ಅವುಗಳ ಮುಖ್ಯ ಸ್ಥಾನವಾಯಿತು.

ಶ್ವಾಸಕೋಶಗಳು ಎಲ್ಲ ಪ್ರಾಚೀನ ಎಲುಬು ಮೀನುಗಳಲ್ಲೂ ಇದ್ದಂತೆ ಕಾಣುತ್ತದೆ. ಆದರೆ ಆಧುನಿಕ ಎಲುಬು ಮೀನುಗಳಲ್ಲಿ ಅಂಥ ರಚನೆಗಳು ಸಾಮಾನ್ಯವಾಗಿ ಕಂಡುಬಂದಿಲ್ಲ. ಒಂದುವೇಳೆ ಅಂಥವು ಇದ್ದಲ್ಲಿ ಅವು ಗಾಳಿಯಕೋಶಗಳಾಗಿ ಮಾರ್ಪಾಡು ಹೊಂದಿವೆ. ಋತುಗಳನ್ನನುಸರಿಸಿ ಸಿಹಿನೀರಿನ ಕೆರೆಕುಂಟೆಗಳು ಬತ್ತಿದಾಗ, ಶ್ವಾಸಕೋಶಗಳು ಈ ಮೀನುಗಳಿಗೆ ಉಸಿರಾಡಲು ಸಹಾಯಕವಾಗಿದ್ದು ಅವು ಜೀವಂತವಾಗಿರುವುದಕ್ಕೆ ಅನುಕೂಲವಾಗುತ್ತಿದ್ದವೆಂದು ಕಾಣುತ್ತದೆ. ಪ್ರಾಚೀನ ಎಲುಬು ಮೀನುಗಳು ವಾಸವಾಗಿದ್ದ ಸಿಹಿನೀರಿನ ಕೆರೆಕುಂಟೆಗಳು ಆಗಾಗ್ಗೆ ಬತ್ತಿಹೋಗುತ್ತಿದ್ದಿರಬೇಕು. ವಾತಾವರಣ ಬದಲಾದ ನಂತರ ಕೆಲವು ಜೀವಂತವಾಗಿದ್ದ ಎಲುಬು ಮೀನುಗಳು ಸಮುದ್ರವನ್ನು ಮತ್ತೆ ಸೇರಿದಮೇಲೆ ಶ್ವಾಸಕೋಶ ತನ್ನ ಪ್ರಾಧಾನ್ಯಯನ್ನು ಕಳೆದುಕೊಂಡಿತು.

ಈ ವರ್ಗವನ್ನು ಎರಡು ಉಪವರ್ಗಗಳನ್ನಾಗಿ ವಿಂಗಡಿಸಲಾಗಿದೆ: ಉಪವರ್ಗ 1. ಕೊಯೊನಿಕ್ಥೆಸ್ ಉಪವರ್ಗ 2: ಆಕ್ಟಿನೊಟೆರಿಜಿಯ

ಕೊಯನಿಕ್ಥಿಸ್[ಸಂಪಾದಿಸಿ]

ಈ ಉಪವರ್ಗದ ಮೀನುಗಳಿಗೆ ಮೂಗಿನ ಹೊಳ್ಳೆಗಳು ಒಳಗಿದ್ದು ಶ್ವಾಸಕೋಶಗಳ ಸಹಾಯದಿಂದ ಉಸಿರಾಡಲು ಅನುಕೂಲವಿದೆ. ಡಿವೊನಿಯನ್ ಕಾಲದಿಂದಲೂ ಕಂಡುಬಂದಿರುವ ಈ ಜಾತಿಯ ಮೀನುಗಳಿಗೆ ವಿಕಾಸದಲ್ಲಿ ಬಹು ಪ್ರಾಮುಖ್ಯವಿದೆ. ಅನೇಕ ಪ್ರಾಣಿವಿಜ್ಞಾನಿಗಳು ಈ ವರ್ಗದ ಒಂದು ಗುಂಪಿನ ಮೀನುಗಳಿಂದಲೇ ದ್ವಿಚರ ಪ್ರಾಣಿಗಳು ಹುಟ್ಟಿಕೊಂಡುವೆಂದು ಹೇಳುತ್ತಾರೆ. ಆಸ್ಟಿಕ್ತಿಯೀಸ್ ವರ್ಗದ ಆಕ್ವಿನೊಟೆರಿಜಿಯೈ ಉಪವರ್ಗದ ಮೀನುಗಳಿಗಿಂತಲೂ ವಿಕಾಸದಲ್ಲಿ ಈ ಮೀನುಗಳು ಬಹು ಮುಂದಿವೆ ಎಂಬುದಕ್ಕೆ ಆಧಾರಗಳು ದೊರತಿಲ್ಲ. ಕೊಯನಿಕ್ತೀಯೀಸ್ ಮೀನುಗಳು ಸಂಖ್ಯೆಯಲ್ಲಿ ಸಾಕಾದಷ್ಟಿದ್ದರೂ ಪ್ರಭೇದಗಳು ಮಾತ್ರ ಕೆಲವು. ಈ ಉಪವರ್ಗದಲ್ಲಿ ಎರಡು ಗುಂಪುಗಳಿವೆ : 1 ಕ್ರಾಸೊಟೆರಿಜಿಯೈ, ಲೋಬ್ಫಿನ್ ಮೀನುಗಳದ್ದು. 2 ಡಿಪ್ನಾಯ್. ಶ್ವಾಸ ಕೋಶದ ಮೀನುಗಳು (ಲಂಗ್ ಫಿಶಸ್)

ಕ್ರಾಸೊಟೆರಿಜಿಯೈ[ಸಂಪಾದಿಸಿ]

ಡಿವೊನಿಯನ್ ಕಾಲದಲ್ಲಿ ಈ ಜಾತಿಯ ಮೀನುಗಳ ಸಂಖ್ಯೆ ಬಹು ಅಧಿಕವಾಗಿತ್ತು. ದ್ವಿಚರ ಪ್ರಾಣಿಗಳಿಗೆ ಮತ್ತು ತನ್ಮೂಲಕ ಮತ್ತೆಲ್ಲ ಕಶೇರುಮಣಿಸ್ತಂಭ ಪ್ರಾಣಿಗಳಿಗೆ ಪುರ್ವಜಗಳಾಗಿದ್ದ ಈ ಮೀನುಗಳಿಗೆ ಪಳೆಯುಳಿಕೆಯ ಶಾಸ್ತ್ರದಲ್ಲಿ ಒಂದು ವಿಶಿಷ್ಟ ಸ್ಥಾನವಿದೆ. ಇವುಗಳ ಜೋಡಿ ಈಜುರೆಕ್ಕೆಯ ಬುಡದಲ್ಲಿ ಒಂದು ಬಗೆಯ ಮಾಂಸದ ಪಟಲವಿರುತ್ತಿತ್ತು. ಈ ಪಟಲಕ್ಕೆ ಮೂಳೆಯ ಆಧಾರವಿತ್ತು. ಈ ಗುಣವನ್ನು ಪರಿಶೀಲಿಸಿದರೆ ಇತರ ಭೂಚರ ಕಶೇರುಕಗಳಿಗೆ ಇದೇ ರೀತಿಯ ಸಾಮ್ಯವಿರುವುದು ಕಂಡುಬರುತ್ತದೆ. ಬಹುಶಃ ಅಸ್ಥಿಯ ಆಧಾರವಿದ್ದ ಮಾಂಸದ ಪಟಲ ರೆಕ್ಕೆಯ ತಳಭಾಗದಲ್ಲಿದ್ದುದರಿಂದಲೇ ಈ ಮೀನುಗಳು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವಲಸೆ ಹೋಗಲು ಸಹಾಯವಾಗುತ್ತಿತ್ತೆಂದು ಕಾಣುತ್ತದೆ. ಈ ಜಾತಿಯ ಮೀನುಗಳಿಗೆ ಪೈನಿಯಲ್ ರಂಧ್ರ ಪರೈಟಲ್ ಮೂಳೆಗಳ ಮಧ್ಯದಲ್ಲಿರುವುದು ಕಂಡುಬಂದಿದೆ. ಹಲ್ಲುಗಳಿಗೆ ಸುತ್ತು ಸುತ್ತಾದ ರಚನೆ ಇದೆ. ಈ ಜಾತಿಯ ಮೀನುಗಳಲ್ಲಿ 3 ಗುಂಪುಗಳಿವೆ. ಪೋರೊಲೆಪಿಡ್, ಆಸ್ಟಿಯೊಲೆಪಿಡ್, ಮತ್ತು ಸೀಲಕಾಂತ್.

ಪೋರೊಲೆಪಿಡ್ ಮತ್ತು ಆಸ್ಟಿಯೊಲೆಪಿಡ್ ಮೀನುಗಳು ಡಿವೋನಿಯನ್ ಮತ್ತು ಪರ್ಮಿಯನ್ ಕಾಲಗಳಲ್ಲಿ ಜೀವಿಸಿದ್ದುವು. ಇವು ಪೇಲಿಯೋಜೋಯಿಕ್ ಯುಗ ಮುಗಿಯುವುದರೊಳಗೆ ಆಳಿದು ಹೋದ ಮೀನುಗಳು. ಈ ಸಣ್ಣ ಗುಂಪಿನ ಮೀನುಗಳಿಗೆ ದ್ವಿಚರ ಪ್ರಾಣಿಗಳ ಅನೇಕ ಗುಣಗಳಿವೆ. ಅಷ್ಟೊಂದು ಸಾಮ್ಯವಿರುವುದರಿಂದಲೇ ದ್ವಿಚರ ಪ್ರಾಣಿಗಳು ಈ ಮೀನುಗಳಿಂದ ಹುಟ್ಟಿಕೊಂಡಿರಬಹುದು ಎಂದು ಊಹಿಸಲಾಗಿದೆ. ಆಸ್ಟಿಯೋಲೆಪಿಸ್ ಮ್ಯಾಕ್ರೊ ಲೆಪಿಡೊತಸ್ ಮೀನು ಈ ಗುಂಪಿನಲ್ಲಿ ಗೊತ್ತಾದ ಮೊಟ್ಟಮೊದಲನೆಯ ಪ್ರಭೇದ. ಈ ಮೀನಿನಿಂದ ಈ ಗುಂಪಿನ ಮುಖ್ಯ ಗುಣಗಳನ್ನೂ ವಿಶಿಷ್ಟ ಗುಣಗಳನ್ನೂ ತಿಳಿಯಬಹುದು. ಆದಿಯ ಅಕ್ಟಿನೊಟೆರಿಜಿಯೈ ಮೀನುಗಳೊಡನೆ ಹೋಲಿಸಿದರೆ ಈ ಗುಂಪಿನ ಮೀನುಗಳಲ್ಲಿ ಅನೇಕ ಸಾಮಾನ್ಯ ಅಂಶಗಳಲ್ಲದೆ ಕೆಲವು ಮೂಲಭೂತ ಅಂಶಗಳಾದ ಒಳಮೂಗಿನ ಹೊಳ್ಳೆ, ಕಾಸ್ಮಾಯ್ಡ್‌ ಹುರುಪೆಗಳ ರಚನೆ ಮತ್ತು ತಲೆಯ ಮೂಳೆಗಳಲ್ಲಿ ವ್ಯತ್ಯಾಸಗಳಿದ್ದುವು. ಇವುಗಳಲ್ಲಿ ಒಂದು ರೆಕ್ಕೆಯ ಬದಲು ಎರಡು ಮೇಲು ರೆಕ್ಕೆಗಳಿದ್ದು ಸಣ್ಣ ಕಣ್ಣುಗಳ ರಚನೆ ಮತ್ತು ಜೋಡು ಈಜು ರೆಕ್ಕೆಗಳು ಆರ್ಕಿಟೆರಿಜಿಯಂ ರೀತಿಯವಾಗಿದ್ದು ಒಂದೇ ಒಂದು ಬುಡದ ಮೂಳೆ ಭುಜಕಟಿ ಬಂಧದೊಡನೆ ಕೀಲಿನಂತಿತ್ತು. ಹಲ್ಲುಗಳೂ ಸಾಮಾನ್ಯ ರೀತಿಯಲ್ಲಿರದೆ ತಿರುಪಿನಂತೆ ಸುತ್ತು ಸುತ್ತಾಗಿದ್ದುವು. ಈ ಗುಣಲಕ್ಷ್ಷಣಗಳು ಈ ಗುಂಪಿನ ಕೆಲವು ಮೊದಲಿನ ಪ್ರಾಣಿಗಳಿಂದ ಚತುಷ್ಟಾದಿಗಳಿಗೆ ನಡೆದು ಬಂದಿವೆ. ಇದನ್ನು ಆದಿ ದ್ವಿಚರಿಗಳಲ್ಲಿ ಕಾಣಬಹುದು.

ಸೀಲಕಾಂತ್ ಮೀನುಗಳು: ಈ ಮೀನುಗಳು ಸುಮಾರು 60 ದಶಲಕ್ಷ ವರ್ಷಗಳ ಹಿಂದೆಯೇ (ಕ್ರಿಟೇಶಿಯಸ್ ಯುಗ) ಅಂತ್ಯಗೊಂಡುವು ಎಂದು ಬಹಳ ದಿನಗಳವರೆಗೂ ವಿಜ್ಞಾನಿಗಳೂ ತಿಳಿದುಕೊಂಡಿದ್ದರು. ಆದರೆ ಡಿಸೆಂಬರ್ 22, 1938 ರಲ್ಲಿ ಈ ಗುಂಪಿಗೆ ಸೇರಿದ ಒಂದು ಜೀವಂತವಾದ ಮೀನು ದಕ್ಷಿಣ ಆಫ್ರಿಕಾ ತೀರದಲ್ಲಿ ಸಿಕ್ಕಿತು. ಇದಕ್ಕೆ ಲ್ಯಾಟಿಮೀರಿಯ ಕಾಲಮ್ನೆ ಎಂದು ಹೆಸರು. ಮುಂದೆ 1952ರಲ್ಲಿ ಇನ್ನೊಂದು ಮೀನು ಸಿಕ್ಕಿ ಅದರ ರಚನೆಯನ್ನು ತಿಳಿದುಕೊಳ್ಳುವುದಕ್ಕೆ ಸಾಧ್ಯವಾಯಿತು. ಈ ಮೀನಿನಲ್ಲಿ ಅದರ ಗತಕಾಲದ ಅನೇಕ ಗುಣಗಳು ಕಂಡುಬಂದಿರುವುದರಿಂದ ಅದಕ್ಕೆ ಜೀವಂತ ಪಳೆಯುಳಿಕೆ ಎಂದು ಕರೆಯುತ್ತಾರೆ. ಸೀಲಕಾಂತ್ ಮೀನುಗಳು ಮೂಲದಲ್ಲಿ ಸಿಹಿನೀರಿನ ವಾಸಿಗಳು. ಅವುಗಳ ಒಂದು ಗುಂಪು ಸಾಗರವನ್ನು ಸೇರಿ ಅಲ್ಲಿನ ವಾಸಕ್ಕೆ ಅಭ್ಯಾಸ ಮಾಡಿಕೊಂಡುವು. ಇವುಗಳ ಪಳೆಯುಳಿಕೆಗಳು ಸಿಹಿನೀರು ಮತ್ತು ಉಪ್ಪುನೀರಿನ ನಿಕ್ಷೇಪಗಳಲ್ಲಿ ಸಿಕ್ಕಿವೆ. ಲ್ಯಾಟಿಮೀರಿಯ ಮೀನಿನ ಗುಣಲಕ್ಷಣಗಳು ಈಗ ಆದಷ್ಟು ವಿಶದವಾಗಿ ತಿಳಿದಿದೆ. ಈಜುರೆಕ್ಕೆ, ಬಾಲದರೆಕ್ಕೆ, ಮತ್ತು ಈಜುಚೀಲ (ಕೋಶ)-ಇವುಗಳ ರಚನೆಯಲ್ಲಿ ವಿಶೇಷ ಗುಣಲಕ್ಷಣಗಳಿವೆ. ಈಗ ಈ ಗುಂಪು ಸೀಲಕಾಂತಿಡೀ ಕುಟುಂಬದಿಂದ ಉಳಿದಿದೆ.

ಡಿಪ್ನಾಯ್[ಸಂಪಾದಿಸಿ]

ಈ ಮೀನುಗಳನ್ನು ಪುಪ್ಪಸ ಮೀನುಗಳೆಂದು ಸಾಮಾನ್ಯವಾಗಿ ಕರೆಯುತ್ತಾರೆ. ಇವು ನೀರಿನಲ್ಲಲ್ಲದೆ ನೀರಿನ ಹೊರಗಡೆಯೂ ಉಸಿರಾಡಬಲ್ಲವಾದ್ದರಿಂದ ಇವುಗಳಿಗೆ ದ್ವಿಶ್ವಾಸಿಗಳು ಎಂಬ ಹೆಸರು ಬಂದಿದೆ. ಇವು ಕಿವಿರುಗಳಿಂದಲೂ ಶ್ವಾಸಕೋಶಗಳಿಂದಲೂ ಸಂದರ್ಭಕ್ಕನುಸಾರವಾಗಿ ಉಸಿರಾಡುತ್ತವೆ; ಕೆರೆಕುಂಟೆ ಮತ್ತು ಜೌಗು ಪ್ರದೇಶಗಳಲ್ಲಿ ಜೀವಿಸುತ್ತವೆ. ಡಿವೋನಿಯನ್ ಕಾಲದಲ್ಲಿ ಹೇರಳವಾಗಿದ್ದು ವಿಶ್ವವ್ಯಾಪಿಗಳಾಗಿದ್ದ ಈ ಗುಂಪಿನ ಮೀನುಗಳು ಆ ಕಾಲದಲ್ಲೇ ಕೆಲವು ವಿಶೇಷ ಗುಣಗಳನ್ನು ಹೊಂದಿದ್ದುವು. ಈಗ ಈ ಮೀನುಗಳ ಸಂಖ್ಯೆ ಮತ್ತು ವ್ಯಾಪ್ತಿ ಬಲು ಕಡಿಮೆಯಾಗಿವೆ. ಆಸ್ಟ್ರೇಲಿಯದ ಕ್ವೀನ್ಸ್‌ಲೆಂಡಿನಲ್ಲಿ ನಿಯೊಸೆರಟೊಡಸ್, ಆಫ್ರಿಕದಲ್ಲಿ ಪ್ರೊಟಾಪ್ಟರಸ್ ಮತ್ತು ದಕ್ಷಿಣ ಅಮೆರಿಕದಲ್ಲಿ ಲೆಪಿಡೊಸೈರನ್ ಜಾತಿಯ ಮೀನುಗಳು ಮಾತ್ರ ಇಂದು ಜೀವಂತವಾಗಿವೆ. ಈ ಆಧುನಿಕ ಮೀನುಗಳಲ್ಲಿ ಸೈಕ್ಲಾಯಿಡ್ ಹುರುಪೆಗಳಿವೆ. ತಲೆಬುರುಡೆಯಲ್ಲಿ ಎಲುಬಿನ ತಟ್ಟೆಗಳು ಕಡಿಮೆಯಾಗಿವೆ. ಹಲ್ಲುಗಳು ಕೂಡಿಕೊಂಡು ದೊಡ್ಡ ತಟ್ಟೆಗಳಂತಿವೆ. ಡಿಪ್ನಾಯ್ ಮೀನುಗಳಲ್ಲಿ ಕೆಲವು ವಿಶೇಷ ಗುಣಗಳಿದ್ದು ಮೂಳೆ ಮೀನುಗಳ ಕೆಲವು ಗುಣಗಳೂ ದ್ವಿಚರಿ ಪ್ರಾಣಿಗಳ ಕೆಲವು ಗುಣಗಳೂ ಇವೆ. ಕರುಳಿನಲ್ಲಿರುವ ಸುರುಳಿಯ ಕವಾಟ, ಕ್ಲೊಯೆಕ ಮತ್ತು ಹೃದಯದ ಭಾಗವಾದ ಕೊನಸ್ ಆರ್ಟೀರಿಯೊಸಸ್ನಲ್ಲಿನ ಕವಾಟಗಳೂ ಮತ್ತು ಕುಗ್ಗದಿರುವ ಆದ್ಯಮೃದ್ವಸ್ಥಿಯ ಪಟ್ಟೆ _ ಇವು ಈ ಮೀನುಗಳ ಕೆಲವು ಮೂಲಗುಣಗಳು. ದ್ವಿಚರಿ ಪ್ರಾಣಿಗಳು ಈ ಡಿಪ್ನಾಯ್ ಮೀನುಗಳಿಂದಲೇ ವಿಕಸಿತವಾದುವು ಎಂದು ಹಿಂದಿನ ಪಳೆಯುಳಿಕೆವಿಜ್ಞಾನಿಗಳು ತಿಳಿದಿದ್ದರು. ಆದರೆ ಕೆಲವು ಮುಖ್ಯ ಪಳೆಯುಳಿಕೆಗಳು ಸಿಕ್ಕಿದ ಮೇಲೆ ಆ ಅಭಿಪ್ರಾಯವನ್ನು ಬದಲಾಯಿಸಬೇಕಾಯಿತು. ದ್ವಿಚರಿ ಪ್ರ್ರಾಣಿಗಳು ಮತ್ತು ಡಿಪ್ನಾಯ್ ಮೀನುಗಳು ಒಳಮೂಗು ಹೊಳ್ಳೆಗಳನ್ನೂ ಅಸ್ಥಿಯ ಆಧಾರವಿದ್ದ ಬುಡ ಪಟಲಗಳನ್ನೂ ಹೊಂದಿದ್ದ ಜೋಡಿ ಈಜುರೆಕ್ಕೆಯ ಪ್ರಾಚೀನ ಕಾಲದ ಅಸ್ಟಿಯೋಲೆಪಿಡ್ ಬುಡಕಟ್ಟಿನ ಮೀನುಗಳಿಂದ ವಿಕಸಿತವಾಗಿವೆ ಎಂದು ಅಭಿಪ್ರಾಯ ಪಡಲಾಗಿದೆ.

ಈಗ ಜೀವಂತವಾಗಿರುವ ಡಿಪ್ನಾಯ್ ಮೀನುಗಳ ಗುಂಪನ್ನು ಎರಡು ಉಪಗಣಗಳನ್ನಾಗಿ ವಿಂಗಡಿಸಿದೆ.

ಉಪಗಣ 1 ಮಾನೋನ್ಯೂಮೊನ: ಈ ಗುಂಪಿನ ಮೀನುಗಳಲ್ಲಿ ಒಂದು ಶ್ವಾಸಕೋಶವಿದೆ. ಈಜುರೆಕ್ಕೆಗಳು ಅವುಗಳ ಕಡ್ಡಿಗಳಿಂದ ಪ್ರಬಲವಾಗಿವೆ. ಉದಾಹರಣೆ ನಿಯೊಸೆರೊಟೊಡಸ್. ಈ ಮೀನು ಸುಮಾರು 4'-5' ಉದ್ದ ಬೆಳೆಯುತ್ತದೆ. ವಾಸ ಕೆರೆಕುಂಟೆಗಳಲ್ಲಿ. ಚಲನೆ ವಿಧಾನ.

ಉಪಗಣ 2 ಡೈನ್ಯೂಮೊನ: ಈ ಗುಂಪಿನ ಮೀನುಗಳಲ್ಲಿ ಎರಡು ಶ್ವಾಸಕೋಶ ಗಳಿವೆ. ಈಜುರೆಕ್ಕೆಗಳ ಕಡ್ಡಿಗಳು ಕೆಲವು ಮೀನುಗಳಲ್ಲಿರುವುದಿಲ್ಲ, ಇದ್ದರೆ ಒಂದೇ ಕಡೆ ಇರುತ್ತವೆ. ಆದ್ದರಿಂದ ಈಜುರೆಕ್ಕೆಗಳು ಅಷ್ಟು ಪ್ರಬಲವಾಗಿರುವುದಿಲ್ಲ. ಉದಾಹರಣೆ ಪ್ರೊಟೊಪ್ಟರಸ್. ಈ ಮೀನು ಸುಮಾರು 6' ಉದ್ದ ಬೆಳೆಯುತ್ತದೆ. ಅನನುಕೂಲವಾದ ವಾತಾವರಣದ ಋತುಗಳಲ್ಲಿ ಇದು ತೇವದ ಭೂಮಿಯಲ್ಲಿ ಸುಮಾರು 2' ಕೆಳಕ್ಕೆ ನಳಿಗೆಯಾಕಾರದ ಪ್ರದೇಶವನ್ನು ಅನುಗೊಳಿಸಿ ಈ ಕೋಣೆಗೆ ತನ್ನ ದೇಹದಿಂದ ಬರುವ ಅಂಟನ್ನು ಬಳಿದು ಅದು ಆರಿದ ಮೇಲೆ ತನ್ನ ದೇಹವನ್ನು ಸುರುಳಿಸುತ್ತಿ ಅಲ್ಲಿ ಮಲಗುತ್ತದೆ. ಇದಕ್ಕೆ ಬೇಸಗೆಯ ನಿದ್ದೆ ಎಂದು ಹೇಳುತ್ತಾರೆ. ಹೊರಗಿನ ವಾತಾವರಣ ಸರಿಯಿದ್ದಾಗ ಈ ಕೋಣೆಯಿಂದ ಹೊರಬಂದು ಯಥಾಪ್ರಕಾರ ನೀರಿನಲ್ಲಿ ಈಜುತ್ತದೆ.

ಲೆಪಿಡೊಸೈರನ್ ಈ ಗುಂಪಿನ ಇನ್ನೊಂದು ಉದಾಹರಣೆ.

ಆಕ್ಟಿನಾಪ್ಟರಿಜಿಯೈ[ಸಂಪಾದಿಸಿ]

ಈ ಉಪವರ್ಗದ ಮೀನುಗಳಲ್ಲಿ ರೆಕ್ಕೆಗಳಿಗೆ ಕೆಲವು ಸಣ್ಣ ಕಡ್ಡಿಗಳು ಆಧಾರವಾಗಿರುವುದರಿಂದ ಇವನ್ನು ಕಡ್ಡಿ ರೆಕ್ಕೆ ಮೀನುಗಳೆಂದು (ರೇ ಫಿಶ್) ಸಾಮಾನ್ಯವಾಗಿ ಕರೆಯುವರು. ಈ ಗುಂಪಿನಲ್ಲಿ ಸಮುದ್ರದಲ್ಲಿ ಸಾಮಾನ್ಯವಾಗಿ ಸಿಕ್ಕುವ ಎಲ್ಲ ಮೀನುಗಳನ್ನೂ ಸಿಹಿ ನೀರಿನ ಅನೇಕ ಜಾತಿಯ ಮೀನುಗಳನ್ನೂ ಸೇರಿಸಲಾಗಿದೆ. ಅಲ್ಲದೆ ಈ ಗುಂಪಿನಲ್ಲಿ ವಿಚಿತ್ರವಾದ ಹಾಗೂ ಪ್ರಾಚೀನ ಕಾಲದ ಗುಣಗಳುಳ್ಳ ಕೆಲವು ಗ್ಯಾನಾಯ್ಡ್‌ ಮೀನುಗಳೂ ಸೇರಿವೆ.

ಪ್ರಥಮವಾಗಿ ಗೊತ್ತಾದ ಆಕ್ಟಿನಾಪ್ಟರಿಜಿಯೈ ಮೀನುಗಳು ಮಧ್ಯ ಡಿವೋನಿಯನ್ ಕಾಲದಲ್ಲಿ ಸಿಹಿನೀರಿನಲ್ಲಿ ವಾಸವಾಗಿದ್ದುವು. ಆಶ್ಚರ್ಯಕರವಾದ ವಿಚಾರವೆಂದರೆ ಡಿವೋನಿಯನ್ ಕಾಲದ ಪುರ್ವಾರ್ಧದಲ್ಲಿ ಕೇವಲ ಕೆಲವೇ ಅಸ್ಪಷ್ಟವಾದ ಎಲುಬು ಮೀನುಗಳ ಪಳೆಯುಳಿಕೆಗಳು ಕಂಡುಬಂದರೂ ಮಧ್ಯ ಡಿವೋನಿಯನ್ ಕಾಲದ ಹೊತ್ತ್ತಿಗೆ ಅವುಗಳ ಸಂಖ್ಯೆ ಹೆಚ್ಚಾಗಿ ವಿವಿಧ ಜಾತಿ ಮತ್ತು ಪ್ರಭೇದಗಳ ಸಂಖ್ಯೆಯೂ ಹೆಚ್ಚಾಯಿತು. ಆಗ ಸಿಹಿ ನೀರಿನಲ್ಲಿ ವಾಸಿಸುವ ಮೀನುಗಳೇ ಹೆಚ್ಚಾಗಿದ್ದುವು.

ಕ್ರಾನಾಪ್ಟಜಿಯೈ ಮತ್ತು ಆಕ್ಟಿನಾಪ್ಟರಿಜಿಯೈ ಗುಂಪಿನ ಮೀನುಗಳ ಹತ್ತಿರದ ಸಂಬಂಧಿಗಳು ಮತ್ತು ಇವುಗಳಿಗೆ ಜನ್ಮವಿತ್ತ ಪುರ್ವಿಕರು ಯಾವುವು ಎಂಬುದು ಸರಿಯಾಗಿ ಗೊತ್ತಿಲ್ಲ. ಸೈಲ್ಯೂರಿಯನ್ ಉತ್ತರಾರ್ಧದಲ್ಲಿ ಅಥವಾ ಡಿವೋನಿಯನ್ ಪುರ್ವಾರ್ಧದಲ್ಲಿ ಜೀವಿಸಿದ್ಧ ಯಾವುದೋ ಕೆಲವು ಮೀನುಗಳು ಈ ಎರಡು ಗುಂಪುಗಳ ಆದಿ ಮೀನುಗಳಾಗಿರಬೇಕು. ಮಧ್ಯ ಡಿವೋನಿಯನ್ ಕಾಲದ ಹೊತ್ತಿಗೆ ಈ ಗುಂಪಿನ ಮೀನುಗಳು ತಮ್ಮವೇ ಆದ ಗುಣಲಕ್ಷಣಗಳಿಂದ ರೂಪಗೊಂಡು ಬೇರೆ ಬೇರೆ ಗುಂಪುಗಳಾಗಿದ್ದುವು. ಕಡ್ಡಿರೆಕ್ಕೆ ಮೀನುಗಳು ಮೊದಲಲ್ಲಿ ಕ್ರಾಸೊಟೆರಿಜಿಯೈ ಮೀನುಗಳಿಗಿಂತ ಅಪುರ್ವವಾಗಿದ್ದರೂ ಈಗ ಇವು ಅತಿ ಸಾಮಾನ್ಯವಾದ ಕಶೇರುಕಗಳಾಗಿವೆ.

ಆದಿಯ ಕಡ್ಡಿರೆಕ್ಕೆ ಮೀನುಗಳ ದೇಹದ ಮೇಲೆ ಹುರುಪೆಗಳು ಹೇರಳವಾಗಿದ್ದುವು. ದೇಹ ನೀಳವಾಗಿರಲಿಲ್ಲ. ಚಲನೆ ಬಲು ನಿಧಾನವಾಗಿತ್ತು. ನವೀನ ಕಡ್ಡಿರೆಕ್ಕೆ ಮೀನುಗಳಲ್ಲಿ ಒಳಗಿನ ಮೂಗಿನ ಹೊಳ್ಳೆಗಳಿಲ್ಲ. ಜೋಡಿ ಈಜು ರೆಕ್ಕೆಗಳಿಗೆ ಮಾಂಸದ ಪಟಲಗಳಿಲ್ಲ. ಆದರೆ ಈ ಭಾಗಗಳಲ್ಲಿ ಸಣ್ಣ ಸಣ್ಣ ಅಸ್ಥಿಗಳಿಂದ ಆಧಾರ ದೊರೆತಿದೆ. ರೆಕ್ಕೆಯ ಬಲೆ ಕೊಂಬಿನ ಗುಣವುಳ್ಳ ಸಣ್ಣ ಕಡ್ಡಿಗಳಿಂದ ಆಧರಿತವಾಗಿದೆ. ಈ ಗುಂಪಿನ ಮೀನುಗಳಿಗೆ ಗ್ಯಾನಾಯ್ಡ್‌ ರೀತಿಯ ಹುರುಪೆಗಳಿವೆ. ಈ ಗುಣಲಕ್ಷಣ ಈ ಗುಂಪನ್ನು ಗುರುತಿಸಲು ಆಧಾರ. ಅನೇಕ ಜಾತಿಗಳಲ್ಲಿ ಈ ಹುರುಪೆಗಳ ಕೆಲವು ಮೂಲವಸ್ತುಗಳು ನಶಿಸಿ ಮಾರ್ಪಾಟಾಗಿವೆ. ಇನ್ನೂ ಕೆಲವು ಜಾತಿಗಳಲ್ಲಿ ಇವು ತೆಳುವಾಗಿರಬಹುದು ಅಥವಾ ಇಲ್ಲದೆ ಇರಬಹುದು. ಬಾಲದರೆಕ್ಕೆ ಮೊದಲು ಭಿನ್ನ ಲಾಂಗೂಲವಾಗಿದ್ದು ಅನಂತರ ಸಮಲಾಂಗೂಲ ಸ್ಥಿತಿ ಮತ್ತು ಕೆಲವು ವೇಳೆ ದ್ವಿಪಾರ್ಶ ಸಮಲಾಂಗೂಲ ಸ್ಥಿತಿ ವಿಕಾಸಗೊಂಡಿತು. ಕಿವಿರು ತಂತುರಚನೆಯನ್ನು ಹೊಂದಿದೆ. ಹೃದಯದಲ್ಲಿ ಕೋನಸ್ ಆಕ್ಟೀರಿಯೋಸಸ್ಸಿಗೆ ಬದಲಾಗಿ ಬಲ್ಬಸ್ ಆಕ್ಟೀರಿಯೋಸಸ್ ಇದ್ದು ಕೋನಸ್ ಒಂದು ಅಥವಾ ಎರಡು ಸಾಲಿನ ಕವಾಟಗಳಾಗಿ ಮಾರ್ಪಾಟಾಗಿದೆ.

ಎಲುಬು ಮೀನುಗಳು ಬೆಳೆವಣಿಗೆಯಲ್ಲಿ ಬಹಳ ದೊಡ್ಡ ಪ್ರಮಾಣವನ್ನು ಮುಟ್ಟದಿದ್ದರೂ ಆಸಿಪೆನ್ಸರ್ ಹೊಸೋ (ಸ್ಟರ್ಜಿನ್) ಎಂಬ ಮೀನು ಸು.24|| ಉದ್ದವಾಗಿದ್ದು 2000 ಪೌಂಡಿನಷ್ಟು ತೂಗುತ್ತದೆ. ಕೆಲವು ಎಲುಬು ಮೀನುಗಳಂತೂ ಶಾರ್ಕ್ ಮೀನುಗಳಷ್ಟೇ ಅಪಾಯಕಾರಿಗಳು.

ಈ ಉಪವರ್ಗವನ್ನು ಮೂರು ಗುಂಪುಗಳನ್ನಾಗಿ ವಿಂಗಡಿಸಿದೆ.

ಗುಂಪು 1 ಪೇಲಿಯೋನಿಸ್ಕಾಯ್ಡ್‌ ಮೀನುಗಳು : ಈ ಮೀನುಗಳಲ್ಲಿ ತಲೆಯ ಮೇಲೆ ತೆಳುವಾದ ಚರ್ಮದ ಫಲಕಗಳಿವೆ. ಅಸ್ಥಿಪಂಜರ ಮೃದ್ವಸ್ಥಿಯದು. ಶಾಶ್ವತವಾದ ಆದ್ಯಮೃದ್ವಸ್ಥಿಯ ಪಟ್ಟಿ ಇದೆ. ಭಿನ್ನಲಾಂಗೂಲ ರೀತಿಯ ಬಾಲದ ರೆಕ್ಕೆ ಇದೆ. ಕಿವಿರು ರಂಧ್ರಗಳು 5 ಜೊತೆ. ಗಾಳಿಯ ಕೋಶ ಹೊಟ್ಟೆಯ ಮೇಲ್ಭಾಗದಲ್ಲಿದೆ. ಕರುಳಿನಲ್ಲಿ ಸುರುಳಿಗೆ ಕವಾಟವಿದೆ. ಈ ಗುಂಪಿನ ಮೀನುಗಳು ಪೇಲಿಯೋಜೋ಼ಯಿಕ್ ಕಾಲದಲ್ಲಿ ಬಹಳ ಸಂಖ್ಯೆಯಲ್ಲಿದ್ದು ಇವುಗಳಲ್ಲಿ ಅನೇಕ ಜಾತಿಗಳಿದ್ದವು. ಈ ಗುಂಪನ್ನು ಪೇಲಿಯೋನಿಸಿಡ್ ಗುಂಪು ಎಂದು ಕರೆಯುತ್ತಾರೆ. ಇವು ಸಿಹಿನೀರಿನಲ್ಲಿ ಜೀವಿಸುವ ಸಣ್ಣ ಮೀನುಗಳು. ಬಾಲದ ರೆಕ್ಕೆ ಭಿನ್ನಲಾಂಗೂಲದ ರೀತಿಯದಾಗಿತ್ತು. ಹುರುಪೆಗಳು ಗನಾಯ್ಡ್‌ ರೀತಿಯವು. ಇವು ಕಾರ್ಬೊನಿಫೆರಸ್ ಕಾಲದಲ್ಲಿ ಅಭಿವೃದ್ಧಿಯ ಶಿಖರವನ್ನು ಮುಟ್ಟಿ ಟ್ರಯಾಸಿಕ್ ಕಾಲದಲ್ಲಿ ಕ್ಷೀಣಿಸಿ ಹೋಗಿ ಕೇವಲ ಕೆಲವೇ ಜಾತಿಯ ಕ್ಷೀಣ ಜೀವಿಗಳು ಉಳಿದಿವೆ. ಈ ಗುಂಪಿನಲ್ಲಿ ಸುಮರು 10 ಜಾತಿಯ ಬೈಕಿರ್ಗಳು, ಒಂದು ರೀಡ್ ಫಿಶ್ (ಪಾಲಿಪ್ಟೆರಿಡೀ) 20 ಸ್ಟರ್ಜಿಯನ್ (ಅಸಿಪೆನ್ಸರ್).

ಗುಂಪು 2 ಹೊಲೊಸ್ಟೈ: ಈ ಗುಂಪಿನ ಮೀನುಗಳ ಗುಣಲಕ್ಷಣಗಳನ್ನು ಪರಿಶೀಲಿಸಿದರೆ ಇವು ಪೇಲಿಯೋನಿಸ್ಕಿಡ್ ಮೀನುಗಳಿಗಿಂತ ಹೆಚ್ಚು ವಿಕಸಿತವಾದವು ಎಂದು ತಿಳಿಯುತ್ತದೆ. ಮಾಕ್ಸಿಲ್ಲ ರಚನೆಯಲ್ಲಿ ಸಾಮ್ಯ ರೂಪಾಂತರ ಇದೆ; ಮತ್ತು ಕಿವಿರು ಕವಚ ಮತ್ತು ಕಣ್ಣುಗೂಡಿನ ಪುರ್ವ ಪ್ರದೇಶಗಳಲ್ಲೂ ಬದಲಾವಣೆ ಇದೆ. ಇವುಗಳ ಹುರುಪೆಗಳು ರಚನೆಯಲ್ಲಿ ಮಾರ್ಪಾಡಾಗಿ ತೆಳುವಾಗಿದೆ. ಈ ಗುಂಪಿನಲ್ಲಿ ಕೆಲವೇ 10 ಜಾತಿಯ ಮೀನುಗಳಿವೆ. ಗಾರ್ಪೈಕ್ ಮೀನುಗಳು (ಲೆಪಿಸಾಸ್ಟಿಯಸ್), ಕೆಸರು ಮೀನು (ಎಮಿಯಾ ಕಾಲ್ವಾ) ಈ ಗುಂಪಿನಲ್ಲಿವೆ. ಗುಂಪು 3 ಟೀಲಿಯೊಸ್ಟೈ: ಆಕ್ಟಿನಾಪ್ಟರಿಜಿಯೈ ವರ್ಗದ ಈ ಗುಂಪು ವಿಕಾಸ ದೃಷ್ಟಿಯಲ್ಲಿ ಬಹಳ ಅಭಿವೃದ್ಧಿ ಹೊಂದಿದೆ. ಇವು ವಾಣಿಜ್ಯ ದೃಷ್ಟಿಯಿಂದಲೂ ಬಹಳ ಮುಖ್ಯವಾದುವು. ಈ ಗುಂಪಿನಲ್ಲಿ 25 ಸಾವಿರಕ್ಕೂ ಹೆಚ್ಚಿನ ಪ್ರಭೇದಗಳಿವೆ. ಇವು ಎಲ್ಲ ಸಾಗರಗಳ ಆಳಗಳಲ್ಲೂ ಶೀತವಲಯ ಸುಮುದ್ರಗಳಲ್ಲೂ ಎಲ್ಲ ಸಿಹಿನೀರಿನ ಪ್ರದೇಶಗಳಲ್ಲೂ ಇವೆ. ಕೆಲವು ಟೀಲಿಯೋಸ್ಟ್‌ ಮೀನುಗಳಂತೂ ನೆಲದ ಮೇಲೂ ಕೆಲ ಸಮಯದವರೆಗೆ ಬದುಕಬಲ್ಲವಾಗಿವೆ. ನಿಜ ಅರ್ಥದಲ್ಲಿ ಟೀಲಿಯೋಸ್ ಅಂದರೆ ಸಂಪುರ್ಣ, ಆಸ್ಟಿಯಸ್ ಅಂದರೆೆ ಎಲುಬು, ಆದ್ದರಿಂದ ಇವು ಸಂಪುರ್ಣ ಅಭಿವೃದ್ಧಿ ಹೊಂದಿದ ಎಲುಬು ಮೀನುಗಳೆಂದು ಅರ್ಥ.

ಈ ಗುಂಪಿನಲ್ಲಿ ಆಹಾರವಾಗಿ ಬಳಕೆಯಾಗುವ ಅನೇಕ ಮೀನುಗಳಿವೆ.

ನಿಜವಾದ ಟೀಲಿಯೊಸ್ಟಿಯೈ ಮೀನುಗಳು ಜುರಾಸಿಕ್ ಕಾಲದ ಪುರ್ವಾರ್ಧದಲ್ಲಿ ಕಾಣಿಸಿಕೊಂಡವು; ಕ್ರಿಟೇಷಿಯಸ್ ಕಾಲದ ಸಮುದ್ರದಲ್ಲಿ ಅವು ಹೇರಳವಾಗಿದ್ದುವು. ಸಮುದ್ರದಲ್ಲೇ ಉದ್ಭವಿಸಿದುವು ಎಂದು ಪರಿಗಣಿಸಲಾಗಿದ್ದರೂ ದಾಖಲೆಗಳು ಸಾಕಾದಷ್ಟು ದೊರೆತಿಲ್ಲ. ಟರ್ಷಿಯರಿ ಕಾಲದ ಮೊದಲಲ್ಲಿ ಅವು ಹೇರಳವಾಗಿ ಪ್ರಸರಿಸಿದುವು. ಈ ಮೀನುಗಳು ವಿಕಾಸದ ಪುರ್ತಿ ಉಬ್ಬರವನ್ನು ಇನ್ನೂ ಮುಟ್ಟಿಲ್ಲ. ಟೀಲಿಯೋಸ್ಟ್‌ ಮೀನುಗಳ ಗುಂಪು ಅನೇಕ ವಾತಾವರಣಗಳಿಗೆ ಹೊಂದಿಕೊಂಡು ಕೆಲವು ರಚನೆಗಳಲ್ಲಿ ಮಾರ್ಪಾಟು ಹೊಂದಿ ಸಣ್ಣ ಸಣ್ಣ ಗುಂಪುಗಳಾಗಿ ಕಾಣಿಸಿಕೊಂಡಿವೆ. ಈ ಮೀನುಗಳಲ್ಲಿ ಅಸ್ಥಿಪಂಜರ ಬಹಳವಾಗಿ ಅಸ್ಥಿಗತವಾಗಿದೆ. ಬಾಲದ ರೆಕ್ಕೆ ಅನೇಕ ವೇಳೆ ದ್ವಿಪಾಶರ್ವ್‌ ಸಮಲಾಂಗೂಲ ರೀತಿಯದಾಗಿಯೂ ಕೆಲವು ವೇಳೆ ಸಮಲಾಂಗೂಲ ರೀತಿಯದಾಗಿಯೂ ಇದೆ. ಹುರುಪೆಗಳು ಸೈಕ್ಲಾಯ್ಡ್‌ ಅಥವಾ ಟಿನಾಯ್ಡ್‌ ರೀತಿಯವು. ಕಿವಿರು ಕವಚ ತಪ್ಪದೇ ಇದೆ. ಕಿವಿರುಗಳು ತಂತುಗಳ ರೂಪದಲ್ಲಿವೆ. ಅನೇಕ ವೇಳೆ ಗಾಳಿಯ ಕೋಶವಿರುತ್ತದೆ. ಕರುಳಿನಲ್ಲಿ ಸುರುಳಿಯ ಕವಾಟವಿಲ್ಲ. ಜನನ ಗ್ರಂಥಿಗಳು ಅವುಗಳ ನಳಿಕೆಗಳೊಂದಿಗೆ ಅವಿರತವಾಗಿವೆ. ವೃಷಣಗಳು ಮೂತ್ರಪಿಂಡಗಳಿಂದ ಬೇರೆಯಾಗಿವೆ. ಮೊಟ್ಟೆಗಳು ಗಾತ್ರದಲ್ಲಿ ಸಣ್ಣವಾದರೂ ಅತ್ಯಧಿಕ ಸಂಖ್ಯೆಯಲ್ಲಿವೆ. ಲಾರ್ವ ಸ್ಥಿತಿ ಉಂಟು. ಈ ಮೀನುಗಳ ವರ್ಗೀಕರಣದಲ್ಲಿ ಕೆಲವು ಹೊರ ರಚನೆಯ ಗುಣಲಕ್ಷಣಗಳನ್ನು ಗಣನೆಗೆ ತೆಗೆದುಕೊಂಡಿದ್ದಾರೆ. 1 ಎರಡನೆಯ ಜೋಡಿ ಈಜುರೆಕ್ಕೆಗಳು ಇರುವ ಸ್ಥಳ. 2 ಬಾಯಿ ಅಗಲಿಸುವುದಕ್ಕೆ ಕಾರಣವಾದ ಪ್ರಿಮ್ಯಾಕ್ಸಿಲ್ಲ ಮತ್ತು ಮ್ಯಾಕ್ಸಿಲ್ಲಗಳ ಸಂಬಂಧ. 3 ಮೇಲಿನ, ಗುದ ಮತ್ತು ಜೋಡು ಈಜುರೆಕ್ಕೆಗಳಲ್ಲಿನ ಮುಳ್ಳುಗಳು ಹಾಗೂ ಅವುಗಳ ರಚನೆ.

ಇವುಗಳ ವೈವಿಧ್ಯದ ಬಗ್ಗೆ ಸಂಪುರ್ಣವಾಗಿ ವಿವರಿಸಲು ಸಾಧ್ಯವಿಲ್ಲದಿದ್ದರೂ ಇವುಗಳ ಪ್ರಮುಖ ಈ ಗುಂಪಿನ ವರ್ಗೀಕರಣದ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಟೀಲಿಯೋಸ್ಟ್‌ ಗಳನ್ನು ಸಹಸ್ರಾರು ಕುಟುಂಬಗಳನ್ನೊಳಗೊಂಡ ಅನೇಕ ಗಣಗಳಾಗಿ ವಿಂಗಡಿಸಿದೆ.

1. ಐಸೊಸ್ಟಾಂಡೈಲಿ: ಇದರಲ್ಲಿ ಕೆಲವು ಪ್ರಾಚೀನ ಮೀನುಗಳನ್ನು ಸೇರಿಸಲಾಗಿದೆ. ಇವುಗಳಲ್ಲಿ ಸುಮಾರು 900 ಜಾತಿಯ ಮೀನುಗಳಿವೆ. ಇವು ಹೊಲೊಸ್ಟಿಯೈ ಮೀನುಗಳನ್ನು ಹೋಲುತ್ತವೆ. ರೆಕ್ಕೆಗಳಲ್ಲಿ ಮುಳ್ಳುಗಳಿರುವುದಿಲ್ಲ. ಅನೇಕ ಜಾತಿಯ ಸಾರ್ಡಿನ್, ಹೆರ್ರಿಂಗ್ ಮೀನು, ಹಿಲ್ಸ ಮೀನು ಟ್ರೌಟ್ ಮೀನು, ಚಪ್ಪಲು ಮೀನು _ ಈ ಗುಂಪಿನಲ್ಲಿ ಇವು ಮುಖ್ಯವಾದುವು. ಇವಲ್ಲದೆ ಕೆಲವು ಸಮುದ್ರ ತಳದಲ್ಲಿ ಜೀವಿಸುವ ಮೀನುಗಳೂ ಸೇರಿವೆ. ಟ್ರೌಟ್ ಮೀನು, ಭಾರತದ್ದಲ್ಲದಿದ್ದರೂ ನೀಲಗಿರಿಬೆಟ್ಟಗಳಲ್ಲಿ ಇವನ್ನು ಸಾಕಲಾಗುತ್ತಿದೆ.

2. ಆಸ್ಟೀರಿಯೊಫೈಸಿ: ಸಿಹಿನೀರಿನಲ್ಲಿ ವಾಸಿಸುವ ಬಹಳ ಮುಖ್ಯವಾದ ಮೀನುಗಳನ್ನು ಈ ಗುಂಪಿನಲ್ಲಿ ಸೇರಿಸಲಾಗಿದೆ. ಏಷ್ಯ, ಆಫ್ರಿಕ, ಯುರೋಪ್ ಮತ್ತು ಅಮೆರಿಕ ಖಂಡಗಳಲ್ಲಿ ಹೇರಳವಾಗಿ ಕಂಡು ಬರುತ್ತವೆ. ಇವುಗಳಲ್ಲಿ ಎರಡನೆಯ ಜೋಡಿ ಈಜುರೆಕ್ಕೆಗಳು ಹೊಟ್ಟೆಯ ತಳಭಾಗದಲ್ಲಿವೆ. ಈ ಗಣದ ಸೈಪ್ರಿಯನಾಯ್ಡಿಯ ಗುಂಪಿನಲ್ಲಿ ಆಹಾರಯೋಗ್ಯವಾದ ಗೆಂಡೆ ಮೀನುಗಳು (ಕಾರ್ಪ್‌) ಮುಖ್ಯ. ಇವುಗಳಲ್ಲಿ ಜಾಗ್ರತೆಯಾಗಿ ದೊಡ್ಡದಾಗಿ ಬೆಳೆಯುವ ಜಾತಿಯವು ಯಾವುವೆಂದರೆ ಕಟ್ಲ, ಲೇಬಿಯೊ (ರೋಹು), ಸಿರೈನ (ಮ್ರಿಗಾಲ್), ಗೆಂಡೆ (ಬಾರ್ಬಸ್ ಕರ್ನಾಟಿಕಸ್), ಅರ್ಜ (ಸಿರೈನ ಜಾತಿ). ಗೆಂಡೆ ಮೀನುಗಳಿಗೆ ಹಲ್ಲಿಲ್ಲ. ಇವು ಸಸ್ಯಾಹಾರಿಗಳೂ. ಭಾರತದಲ್ಲಿ ಈಗ ಕೆಲವು ವರ್ಷಗಳಿಂದ ಮುಖ್ಯವಾದ ಗೆಂಡೆಗಳ ಸಂವರ್ಧನೆ ವೈಜ್ಞಾನಿಕ ರೀತಿಯಲ್ಲಿ ಅಗುತ್ತಿದೆ. ಆಸ್ಟೆರಿಯೊಫೈಸಿಯ ಇನ್ನೊಂದು ಗುಂಪು ಮೀಸೆಮೀನು (ಸೈಲ್ಯುರಾಯ್ಟಿಯ). ಇವುಗಳಿಗೆ ಬಾಯಿಯ ಸುತ್ತಲೂ ಉದ್ದನೆಯ ಮೀಸೆಗಳಿವೆ. ಇವಕ್ಕೆ ಹಲ್ಲುಗಳಿವೆ. ಇವು ಮಾಂಸಾಹಾರಿಗಳು, ಹುರುಪೆಗಳು ಇರುವುದಿಲ್ಲ. ಆಣೆಮೀನು (ಕ್ಲೇರಿಯಾಸ್), ಚೇಳುಮೀನು (ಹೆಟರೊನ್ಯೂಸ್ಟೆಸ್), ಬಾಳೆಮೀನು (ವಲ್ಲಾಗೊ) ಇವು ತಿನ್ನಲು ಯೋಗ್ಯವಾದುವು.

3. ಏಪೋಡ್ಸ್‌: ದೇಹ ನೀಳವಾಗಿ ಹಾವಿನ ರೀತಿ ಇರುವುದರಿಂದ ಇವುಗಳಿಗೆ ಹಾವು ಮೀನುಗಳೆಂದು (ಈಲ್) ಹೆಸರು. ಸಮುದ್ರವಾಸಿಗಳಾದರೂ ಕೆಲವು ತಮ್ಮ ಯೌವನಾವಸ್ಥೆಯನ್ನು ಸಿಹಿ ನೀರಿನಲ್ಲಿ ಕಳೆಯುತ್ತವೆ. ಜೋಡಿ ಈಜುರೆಕ್ಕೆಗಳಿಲ್ಲ. ಕೆಲವಲ್ಲಿ ಹುರುಪೆಗಳಿರುತ್ತವೆ. ಇವು ಮಾಂಸಾಹಾರಿಗಳು. ಉದಾಹರಣೆ: ಮುರಿನ, ಆಂಗ್ಯುಲ್ಲ ಮತ್ತು ಓಫಿಕ್ಥಿಸ್.

4. ಹೆಟರೋಮಿ: ಸಮುದ್ರದಾಳದಲ್ಲಿ ಜೀವಿಸುವ ಕೆಲವು ಮೀನುಗಳು ಈ ಗುಂಪಿಗೆ ಸೇರಿವೆ. ಇವುಗಳ ತಲೆ ದೇಹ ಮತ್ತು ಬಾಲ ಇವು ಉದ್ದವಾಗಿವೆ. ಉದಾಹರಣೆ: ನೋಟೋಕ್ಯಾಂತಸ್, ಹೊಲೊಸಾರಸ್. (ಸ್ಪೈನೀ ಈಲ್)

5. ಇನಿಯೋಮಿ: ಗುಂಪಿನಲ್ಲಿ ಸು. 400 ಪ್ರಭೇಧಗಳಿದ್ದು ಬಹುಪಾಲು ಆಳ ಸಮುದ್ರಗಳಲ್ಲಿ ವಾಸಿಸುತ್ತವೆ. ಲ್ಯಾಂಟರ್ನ್‌ ಮೀನುಗಳು (ಮಿಕ್ಟೋಫಿಡೆ) ಟ್ರೈಪೊಡ್ ಮೀನುಗಳು, ಲಿಜಾ಼ರ್ಡ್‌ ಮೀನುಗಳು ಈ ಗುಂಪಿನಲ್ಲಿ ಕಂಡುಬರುವ ಪ್ರಮುಖ ಮೀನುಗಳು. ಈ ಗುಂಪಿನಲ್ಲಿರುವ ಬಾಂಬೆಡಕ್ ಮೀನು (ಹರ್ಟೊಡಾನ್) ಖಾದ್ಯ ಯೋಗ್ಯ.

6. ಸೈನೆಂಟೊಗ್ನಾತೀ: ಈ ಗುಂಪಿನಲ್ಲಿ ಹಾರುವ ಮೀನುಗಳು, ಗಾರ್ ಮೀನುಗಳು (ಬಿಲೋನೀ), ಕುದುರೆ ಮೀನು ಪ್ರಮುಖವಾದವು. ಗಾರ್ ಮೀನುಗಳ ಎರಡು ದವಡೆಗಳೂ ಕೊಕ್ಕಿನ ರೀತಿಯಲ್ಲಿ ಉದ್ದವಾಗಿವೆ. ಹೆಮಿರ್ಯಾಂಪಸ್ ಮೀನಿನಲ್ಲಿ ಕೆಳದವಡೆ ಮಾತ್ರ ಮೇಲುದವಡೆಗಿಂತ ಉದ್ದವಾಗಿದೆ. ಹಾರುವ ಮೀನುಗಳಲ್ಲಿ ಒಂದಾದ ಸಿಪ್ಸಿಲ್ಯೂರಸ್ನಲ್ಲಿ ಮೊದಲಿನ ಜೋಡಿ ಈಜುರೆಕ್ಕೆಗಳು ಮಾರ್ಪಾಡಾಗಿ ಬಹಳ ದೊಡ್ಡವಾಗಿದ್ದು ನೀರಿನ ಮೇಲೆ ಸ್ವಲ್ಪದೂರ ಹಾರುವುದಕ್ಕೆ ಅನುಕೂಲವಾಗಿವೆ. ಕುದುರೆಮೀನು (ಹಿಪ್ಪ್ಪೊಕ್ಯಾಂಪಸ್) ಮತ್ತು ಕೊಳವೆ ಮೀನುಗಳಲ್ಲಿ (ಸಿನ್ಯಾತಸ್) ಹುರುಪೆಗಳು ಮಾರ್ಪಾಡಾಗಿ ದೇಹ ಸ್ವಲ್ಪ ಗಟ್ಟಿಯಾಗಿದೆ.

7. ಅಕ್ಯಾಂತಾಪ್ಟರಿಜಿಯೈ ಅಥವಾ ಪರ್ಕೊಮಾರ್ಫಿ: ಈ ಮೀನುಗಳಲ್ಲಿ ಒಂಟಿ ರೆಕ್ಕೆಗಳ ಮುಂದಿನ ರೆಕ್ಕೆ ಕಡ್ಡಿಗಳು ಮುಳ್ಳುಗಳಾಗಿ ಮಾರ್ಪಾಡಾಗಿವೆ. ಎರಡನೆಯ ಜೋಡಿ ಈಜುರೆಕ್ಕೆಗಳು ಹೊಟ್ಟೆಯ ಬಹು ಮುಂದಿವೆ. ಈ ಗುಂಪಿನಲ್ಲಿ ಅನೇಕ ಸಮುದ್ರ ಮೀನುಗಳೂ ಕೆಲವು ಸಿಹಿನೀರಿನ ಮೀನುಗಳೂ ಸೇರಿವೆ. ಮುಳ್ಳು ಪ್ರಬಲವಾಗಿರುವ ಪರ್ಚ್‌ ಮೀನುಗಳು (ಎಟ್ರೊಪ್ಲಸ್), ದೇಹ ನೀಳವಾಗಿರುವ ರಿಬ್ಬನ್ ಮೀನು (ಟ್ರೈಕಿಯೂರಸ್), ತೆಳುವಾಗಿ ಆಳವಾಗಿರುವ ದೇಹವುಳ್ಳ ಏಂಜೆಲ್ ಮೀನು (ಟಿರೊಫಿಲ್ಲಂ), ಗಟ್ಟಿ ದೇಹದ ಪೆಟ್ಟಿಗೆಮೀನು ಮತ್ತು ಹಸುಮೀನು (ಆಸ್ಟ್ರೇಸಿಯಾನ್), ದೇಹ ಎರಡು ಕಣ್ಣಗಳನ್ನು ಒಂದೇ ಕಡೆ ಹೊಂದಿರುವ ಚಪ್ಪಟೆ (ಸೋಲ್) ಮೀನು (ಪ್ಲೊರೊನೆಕ್ಟಿಸ್, ಸಿನಾಪ್ಟ), ಸಾಮಾನ್ಯವಾಗಿ ಗೂಡುಕಟ್ಟುವ ಸೂರ್ಯಮೀನು (ಆರ್ತೊಗೊರಿಸ್ಕಸ್), ಗಾಳದಂಥ ರೆಕ್ಕೆ ಕಡ್ಡಿಗಳಿರುವ ಗಾಳದ ಮೀನುಗಳು (ಆಂಟಿನೇರಿಯಸ್), ಹೀರುಬಟ್ಟಲಂತಿರುವ ಮೇಲುರೆಕ್ಕೆಗಳನ್ನುಳ್ಳ ಮತ್ತು ಬೇರೆ ಪ್ರಾಣಿಗಳಿಗೆ ಅಥವಾ ಹಡಗುಗಳಿಗೆ ಅಂಟಿಕೊಂಡು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಬೆಳೆಸುವ ಹೀರುಬಟ್ಟಲು ಮೀನು (ಪಿಕಿನಸ್), ಗೂಡು ಕಟ್ಟಿ ಮೊಟ್ಟೆ ಮರಿಗಳನ್ನು ಕಾಪಾಡುವ ಗೌರಿ ಮೀನು (ಆಸ್ಟ್ರೊನೀಮಸ್ ಗೌರಾಮಿ), ಮೇಲುರೆಕ್ಕೆ ಮತ್ತು ಅದರ ಮುಳ್ಳಿನಲ್ಲಿ ವಿಷದ ಗ್ರಂಥಿಗಳನ್ನುಳ್ಳ ಚೇಳು ಮೀನುಗಳು (ಸ್ಕಾರ್ಪೀನಡೀ), ಗೋಲದ ಮೀನು (ಟೆಟ್ರಡಾನ್), ಮುಳ್ಳುಮೀನು (ಡಯೊಡಾನ್) ಇದೇ ಗುಂಪಿಗೆ ಸೇರಿವೆ. ತಿನ್ನಲು ಯೋಗ್ಯವಾದ ಹೂಮೀನು, ಕೊರವ ಮತ್ತು ಕುಚ್ಚು ಮೀನುಗಳು (ಒಫಿಯೋಸೆಫಾಲಸ್ ಜಾತಿ) ಸಿಹಿನೀರಿನಲ್ಲಿ ವಾಸಿಸುತ್ತವೆ. ಇವುಗಳಲ್ಲಿ ಗಾಳಿಯನ್ನು ಸೇವಿಸಲು ವಿಶೇಷ ಅಂಗಗಳಿರುವುದರಿಂದ ಇವು ನೀರಿನ ಹೊರಗಡೆ ಕೆಲವು ಕಾಲ ಜೀವಿಸಬಲ್ಲುವು. ಹೇರಳವಾಗಿ ಸಿಗುವ ಬಂಗಡೆ ಮೀನು (ರಾಸ್ಟಲಗರ್ ಕನಗೂರ್ತ) ಸಮುದ್ರವಾಸಿ. ಇದು ಕರ್ನಾಟಕದ ಮೀನುಗಾರಿಕೆಯಲ್ಲಿ ಬಹಳ ಮುಖ್ಯವಾದುದು. ಇವಲ್ಲದೆ ಇನ್ನೂ ಅನೇಕ ಪ್ರಭೇದಗಳು ಈ ಗುಂಪಿಗೆ ಸೇರಿವೆ (ನೋಡಿ- ಮೀನುಗಳು; ಮ್ನದ್ವಸ್ತಿ- ಮೀನುಗಳು). (ಎನ್.ವಿ.ಎ.)