ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
ಚಿರಸ್ಮರಣೆ
೫೫

ಅಪ್ಪು,ತಾನು ಮಲಗುವ ಮೂಲೆಗೆ ದೃಷ್ಟಿ ಹರಿಸಿದ. ಅವನ ತಮ್ಮಂದಿರು ಆಗಲೆ ಅಲ್ಲಿ ನಿದ್ದೆ ಹೋಗಿದ್ದರು.ಇನ್ನೊಂದು ಮೂಲೆಯಲ್ಲಿ ತಣ್ಣನೆಯ ನೆಲದ ಮೇಲೆ ಬರಿಮೈ ಚಾಚಿ ಅಪ್ಪುವಿನ ತಂದೆ ಮಲಗಿದ್ದ.ಆತ ಕುಡಿದು ಬಂದಿರಲಿಲ್ಲ ಎಂಬುದು ನೋಡಿದೊಡನೆಯೆ ಅಪ್ಪುವಿಗೆ ಗೊತ್ತಾಯಿತು.ಕುಡಿಯದೆ ಇದ್ದ ದಿನಗಳಲ್ಲಿ ಮಾತ್ರ ಹಾಗೆ ಆತ ಊಟಕ್ಕೆ ಮುಂಚೆ ನೆಲದ ಮೇಲೆ ಮಲಗಿ ದಣಿವಾರಿಸಿಕೊಳ್ಳುವ ಪದ್ಧತಿ. ಆ ದಿನವಷ್ಟೇ ಅಜ್ಜಿ ಬಂದುದರಿಂದ ತನಗೆ ಹೊಡೆತ ತಪ್ಪಿತೆಂಬುದೂ ಅಪ್ಪುವಿಗೆ ಗೊತ್ತಿತ್ತು.
ಮಗ ಬಂದುದನ್ನು ಕಂಡೊಡನೆಯೆ ಮತ್ತೊಮ್ಮೆ ತಾಯಿ ಹೇಳಿದಳು:
"ಬೆಳಗಾಗ್ಬೇಕಾದರೆ ಆ ಚಿರುಕಂಡ ಬಂದು ಕರಕೊಂಡು ಹೋದ. ಅದೇನು ಕಥೆಯೋ,ಏನು ಕೆಲಸವೋ..."
"ಎಲ್ಲೋ ಹೋಗಿದ್ದೆ?"
ಎಂದು ಕೇಳಿದ ಅಪ್ಪುವಿನ ತಂದೆ, 'ಏಟು ತಪ್ಪಿದರೂ ಮಾತು ತಪ್ಪೋಲ್ಲ'ಎನ್ನುವುದನ್ನು ತನ್ನ ನೋಟದಲ್ಲೆ ಸ್ಪಷ್ಟಗೊಳಿಸುತ್ತ.
ಅಪ್ಪು ತನ್ನ ಅಂಗಿ ತೆಗೆದು ಗೂಟಕ್ಕೆ ನೇತು ಹಾಕಿದ. ಅದರ ಕೆಳಗೇ ನೆಲದ ಮೇಲೆ ಉರಿಯುತ್ತಿದ್ದ ದೀಪವನ್ನು ಹೊಗೆ ಅಂಗಿಗೆ ತಗಲದಂತೆ, ಬದಿಗೆ ಸರಿಸಿದ.
ಪ್ರಶ್ನೆಗೆ ಉತ್ತರ ಬರಲಿಲ್ಲವೆಂದು ಅಪ್ಪುವಿನ ತಂದೆಗೆ ರೇಗಿತು.
"ಅದು ಯಾವ ಸುಡುಗಾಡಿಗೊ ಹೋಗಿದ್ದೆ ನೀನು?ಎಲ್ಲಿ ಪೋಲಿ ಅಲೀತಿದ್ದೆ?"
ಪೋಲಿ ಅಲೆಯುವ ಮಾತಿನಿಂದ ಅಪ್ಪುವಿಗೆ ಅವಮಾನವಾಯಿತು.ಆತ ಬಾಯಿ ತೆರೆದ.ಚಿರುಕಂಡ ಹೇಳಿದುದನ್ನೇ ಏನೂ ತಡವರಿಸದೆ ತಿಳಿಸಿದ.
"ಹುಂ!"
ಎಂದು ಅವನ ತಂದೆ ಹುಂಕರಿಸಿದ, ಮಾಸ್ತರರ ಹೆಸರು ಹೇಳಿದ್ದರಿಂದ ಆತ ಸುಮ್ಮನಾದನೆಂದು ಅಪ್ಪುವಿಗೆ ಸ್ಪಷ್ಟವಾಯಿತು.
ಅಜ್ಜಿಗೂ ಮಾಸ್ತರೆಂದರೆ ಇಷ್ಟ ಒಂದೆರಡು ಸಾರೆ ಆಕೆ ಹಗಲು ಹೊತ್ತು ಅಂಗಳದಲ್ಲಿ, ತಾಳೆಯ ಗರಿಯಿಂದ ತಡಿಕೆ ಹೆಣೆಯುತ್ತ ಕುಳಿತಿದಾಗ, ಆ ಹಾದಿಯಾಗಿ ಬಂದ ಮಾಸ್ತರು ತಡೆದು ನಿಂತು ಆಕೆಯನ್ನು ಮಾತಾಡಿಸಿದ್ದರು.ತುಂಬಾ ವಿನಯಸಂಪನ್ನ, "ಚಾ ಕುಡಿದು ಹೋಗಿ" ಎಂದರೂ ಬೇಡ ಎಂದಿದ್ದರು.
ಆ ಮಾಸ್ತರರ ಮಾತು ಬಂತೆಂದು ಅಜ್ಜಿ ಕೇಳಿದಳು;
"ಅವರಿನ್ನೂ ಸ್ವಂತ ಅಡುಗೆ ಮಾಡ್ಕೊಂಡೆ ಇದ್ದಾರಾ?"
"ಹೂ೦.. ಇನ್ಯಾರು ಮಾಡ್ತಾರೇಂತ ತಿಳ್ಕೊಂಡೆ?"