ಪುಟ:Chirasmarane-Niranjana.pdf/೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೫೬

ಚಿರಸ್ಮರಣೆ

ತನ್ನ ಪ್ರಶ್ನೆಯ ಅರ್ಥ ಅಪುವಿಗೆ ಹೇಗೆ ಆಗಬೇಕು?-ಅಜ್ಜಿ ನಕ್ಕಳು.
ಅಪ್ಪುವಿನ ತಾಯಿ ಹೊರಗೆ ತಲೆ ಹಾಕಿ ಕೇಳಿದಳು:
"ಮದ್ಯಾಹ್ನ ಊಟ ಮಾಡಿದ್ಯೆನೊ?"
"ಹೂಂ..ಊಟ ಮಾಡದೆ ಇರ್ತಾರಾ ಯಾರಾದರೂ?"
ತಂದೆ ಗೊಣಗಿದ:
"ಮಹಾ ಅಧಿಕಪ್ರಸಂಗಿ,ಹೇಳಿದ್ದಕ್ಕೆಲಾ ಮರುಪ್ರಶ್ನೆ ಕೇಳದೆ ಇರೋದಿಲ್ಲ."
"ಎಲ್ಲಿ ಮಾಡಿದೆ?"
ಎಂದು ತಾಯಿ ಇನ್ನೊಂದು ಪ್ರಶ್ನೆ ಕೇಳಿದಳು.
"ಚರ್ವತ್ತೂರಲ್ಲೇ.ಈಗ ನಿಮ್ಮದೆಲ್ಲಾ ಆಯ್ತೋ ಇಲ್ಲವೋ?"
ಅಜ್ಜಿಗೆ ರೇಗಿತು;
"ಫಟಿಂಗ! ನೋಡು.. ಅವನು ಪ್ರಶ್ನೆ ಕೇಳೋ ರೀತಿ... ಹುಂ.ಹುಡುಗರೆಲ್ಲ ಮನೆಗೆ ಬರದೆ ದೊಡ್ಡೋರು ಊಟ ಮಾಡ್ತಾರೇನೋ?"
ಅಪ್ಪು ಸುಮ್ಮನಾದ.
"ಹೋಗು ಕಂಬದ ಹಾಗೆ ನಿಂತ್ಕೋಬೇಡ. ಕೈಕಾಲು ತೊಳಕೋ.." ಎಂದು ತಂದೆ, ಎದು ಕುಳಿತುಕೊಳ್ಳುತ್ತ ಹೇಳಿದ.
...ಅಲ್ಲೇ ಬಾಗಿಲು ಮರೆಮಾಡಿ, ಅಜ್ಜಿಯೂ ಮಗನೂ ಮೊಮ್ಮಗನೂ ಊಟಕ್ಕೆ ಕುಳಿತರು, ಅಪುವಿನ ತಾಯಿ ಆ ಮೂವರಿಗೂ ಬಡಿಸಿದಳು, ದಣಿದಿದ್ದ ಆತನಿಗೆ ಚೆನಾಗಿ ಹಸಿವೆಯಾಗಿತ್ತು, ಉಣ್ಣುತ್ತಲಿದ್ದಂತೆ, ಮಧಾಹ್ನ ಮಾಡಿದ ಊಟದ ಚಿತ್ರ ಆತನ ಕಣ್ಣಮುಂದೆ ಕಟ್ಟಿತು. ಅಲ್ಲಿ ಊಟದ ವೇಳೆಯಲ್ಲಿ ನಡೆದ ಮಾತುಕತೆ ಮತ್ತೆ ನೆನಪಿಗೆ ಬಂತು. ಆ ನೆನಪನ್ನು ಸವಿಯುತ್ತಿದ್ದ ಅಪ್ಪುವಿಗೆ ತಾಯಿ ತನ್ನ ಮುಂದೆಯೆ ನಿಂತಿದ್ದುದೂ ಕಾಣಿಸಲಿಲ್ಲ.
"ಸಾರು ಬೇಕೇನೋ?"
ಮಗನಿಂದ ಉತ್ತರ ಬರಲಿಲ್ಲವೆಂದು ಆಕೆ ಮತ್ತೊಮ್ಮೆ ಕೇಳಿದಳು:
"ಬೇಕೇನೋ ಸಾರು"
ಅಪು. ಬೆಚ್ಚಿಬಿದ್ದವನಂತೆ ತಲೆ ಎತ್ತಿದ. ತಾಯಿಯ ಮುಖವನ್ನು ಕಂಡು ನಕ್ಕು ಹೇಳಿದ:"ಬೇಡ."
ಅಜ್ಜಿ ಮೊಮ್ಮಗನನ್ನು ನೋಡುತ್ತ ಕೇಳಿದಳು:
"ಅದೇನು ಯೋಚ್ನೆ ಮಾಡ್ತಿದ್ದೆ?"
"ಏನೂ ಇಲ್ಲಜ್ಜಿ"