ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ
೨೯
ಚಿರಸ್ಮರಣೆ

ಸಂಚಾರ ಮಾಡಿದುವು.
ಚಹಧಂಗದಡಿಯಲ್ಲಿ ತಮ್ಮನ್ನು ನೋಡುತ್ತಿದ್ದಹಾಗೆಯೇ ಈಗಲೂ ತಿವಿದು ನೋಡುತ್ತಿದ್ದ, ಆ ಧಾಂಡಿಗ. ಮುದುಕ ರೈತನ ಮುಖದ ಮೇಲೆ ನಗೆ ಕುಣಿಯುತ್ತಿತ್ತು. ಈ ಮಕ್ಕಳನ್ನು ಕಂಡು ఆತ ಬೀರುತ್ತಿದ್ದುದು ವಾತ್ಸಲ್ಯದ ದೃಷ್ಟಿ, ಆತನ ನಗೆಗೆ ಪ್ರತ್ಯುತ್ತರವಾಗಿ ಗಾಂಭೀರ್ಯ ಸಲ್ಲದೆಂದು ಹುಡುಗರು ಮುಗುಳು ನಕ್ಕರು. ಆದರೆ ಧಾಂಡಿಗನತ್ತ ಅವರು ನೋಡಲಿಲ್ಲ.
ಆ ಇನ್ನೊಬ್ಬರೂ ಯುವಕರಾಗಿಯೇ ಇದ್ದರು. ಶುಭ್ರವಾಗಿದ್ದ ಬಿಳಿಯ ಅಡ್ಡಪಂಚೆ-ಷರಟು. ತೆಳ್ಳಗಿನ ಕರಿಯ ದೇಹ, ಕೆನ್ನೆಯ ಮೂಳೆಗಳು ಎದ್ದು ಕಾಣಿಸುತ್ತಿದ್ದ ಕ್ಷೀಣ ಪ್ರಕೃತಿ. ಶಾಂತವಾದ ಮುಖಮುದ್ರೆ. ಕಣ್ಣುಗಳು ಚಂಚಲವಾಗಿ ಸಜೀವವಾಗಿ, ನೋಟ ಆತ್ಮೀಯವಾಗಿತ್ತು. ಅವರ ಮುಖದ ಮೇಲೆ ಸದಾ ನೆಲೆಸಿತ್ತು-ಸೂಕ್ಷ್ಮವಾದೊಂದು ಮುಗುಳುನಗು.
'ಇವರು ಮಾಸ್ತರರ ಸ್ನೇಹಿತರಿರಬೇಕು. ಅವರು ಇನ್ನು ಬರಬೇಕಷ್ಟೆ' ಎಂಬ ತೀರ್ಮಾನಕ್ಕೆ ಹುಡುಗರು ಬಂದರು.
ಹುಡುಗರನ್ನು ಕರೆದು ತಂದ ಯುವಕನನ್ನು ಉದ್ದೇಶಿಸಿ ಆ ಮಾಸ್ತರರ 'ಸ್ನೇಹಿತ'ರು ಕೇಳಿದರು:
"ನಡೆದು ನಡೆದು ಕಾಲು ಸೋತಿರಬೇಕು, ಅಲ್ವ ಪ್ರಭು?"
"ಹಾಗೇನೂ ಇಲ್ಲ!"
ಆ ಯುವಕ ನಗುತ್ತ ಉತ್ತರವಿತ್ತ. ಆ ಸ್ವರದಲ್ಲಿ ವಿನಯವಿತ್ತು. ಇಂತಹ ಪರೀಕ್ಷೆಯಲ್ಲೆಲ್ಲ ತಾನು ಸೋಲುವವನಲ್ಲ ಎಂಬ ಆತ್ಮಾ ಭಿಮಾನವಿತ್ತು.
ಅಪ್ಪು ಮತ್ತು ಚಿರುಕಂಡ ಪ್ರಭುವನ್ನು ನೋಡಿದರು. ಪ್ರಭು. ಈತ ತಮ್ಮ\ ಜನವಲ್ಲವೆಂದು-ರೈತನಲ್ಲವೆಂದು ಚಿರುಕಂಡ-ಸುಲಭವಾಗಿ ತಿಳಿದುಕೊಂಡ.ಪರೀಕ್ಷಿಸಿ ನೋಡಿದಾಗ, ಆ ಯುವಕನ ನಡೆನುಡಿಯಲ್ಲಿ ನಯನಾಜೂಕನ್ನು ಆತ ಕಂಡ. ಪಟ್ಟಣವಾಸಿ, ಸಂದೇಹವಿಲ್ಲ, ಆದರೂ ತಮ್ಮ ಪಕ್ಷದವನು...!
ಆ ಇನ್ನೊಬ್ಬರು, ಹುಡುಗರನ್ನು ಸೂಕ್ಷ್ಮವಾಗಿ ದಿಟ್ಟಿಸಿ ನೋಡುತ್ತಿದ್ದು, ಮಾಸ್ತರರತ್ತ ತಿರುಗಿ ಅ೦ದರು:
"ಶಿಷ್ಯರು ನಿಮಗೆ ತುಂಬಾ ಅಂಟಿಕೊಂಡಿದ್ದಾರೆ."
ಮಾಸ್ತರು ನಕ್ಕರು. ಆ ನಗೆಯಲ್ಲಿ ಸಲಿಗೆಯಿದ್ದರೂ ಅವರ ಮುಖಭಾವದಲ್ಲಿ ವಿನಯವಿತ್ತು. ಆ ಮಾತಿಗೆ ಉತ್ತರವಾಗಿ ಮಾಸ್ತರು ಏನಾದರು ಹೇಳುವರೆಂದು ಹುಡುಗರು ನಿರೀಕ್ಷಿಸಿದ್ದರು. ಆದರೆ ಏನೂ ಹೇಳದೆ ಸುಮ್ಮನಿದ್ದುದನ್ನು ಕಂಡಾಗ