ವಿಷಯಕ್ಕೆ ಹೋಗು

ಪುಟ:Chirasmarane-Niranjana.pdf/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚಿರಸ್ಮರಣೆ ೧೭೩

ಹಳ್ಳಿಯಲ್ಲಿ ಯಾರಿಗೆ ಮದುವೆ ಗೊತ್ತಾದರೂ ಮೊದಲು ಭೂಮಾಲಿಕರಿಬ್ಬರ ಸಮ್ಮತಿ ಪಡೆಯುವುದು ಪದ್ಡತಿ. ಕರೆಯಲು ಹೋದಾಗ 'ನಜರು' ಒಪ್ಪಿಸಬೇಕು; ಮದುವೆಯಾದ ಮೇಲೆ ದಂಪತಿಗಳು ಜಮೀನ್ದಾರರಲ್ಲಿಗೆ ಹೋಗಿ ಆಶೀರ್ವಾದ ಪಡೆಯಬೇಕು. ಅದಕ್ಕೆ ಪ್ರತಿಯಾಗಿ ಏನಾದರೂ ಉಡುಗೊರೆ ಬರುತ್ತಿತ್ತು. ಎಲ್ಲದಕ್ಕಿಂತಲೂ ಮುಖ್ಯವಾದದ್ದು, ವೆಚ್ಚಕ್ಕೆ ಹಣ.ಅದನ್ನು ಉದಾರಿಗಳಾದ ಜಮೀನ್ದಾರರಿಂದ ಸಾಲ ಪಡೆಯದೆ ಹಳ್ಳಿಯಲ್ಲಿ ಆಗಿರುವ ಮದುವೆಯಾದರೂ ಯಾವುದು?

ಆದರೆ ಈ ಸಲ ಆ ಸಂಪ್ರದಾಯ ಮುರಿದುಹೋಯಿತು. ಅಪ್ಪುವಿನ ತಂದೆಯೂ ಕಣ್ಣನೂ ಮೊದಲು ಭೂಮಾಲಿಕರಲ್ಲಿಗೆ ಹೋಗಿ ಸಮ್ಮತಿ ಪಡೆಯಲಿಲ್ಲ. 'ನಜರು' ಒಪ್ಪಿಸಲಿಲ್ಲ. ಹಳ್ಳಿಯ ಎಲ್ಲರನ್ನೂ ಕರೆಯುವಂತೆ ಅವರನ್ನೂ ಕರೆದರು. ಇವರು ಹೋದಾಗ ಪೂಜೆಯಲ್ಲಿದ್ದ ನಂಬೂದಿರಿ ಹೊರಕ್ಕೆ ಬರಲಿಲ್ಲ.ದೇವಕಿಯ ತಂಗಿಗೆ ಮದುವೆ ಎಂಬ ವಿಷಯವಂತೂ, ಅವರ ಹಳೆಯದೊಂದು ಗಾಯ ಸೋರುವಂತೆ ಮಾಡಿತು.

ಮದುವೆಯು ಅದ್ಡೂರಿಯಿಂದಲೇ ಜರಗಿತು. ಯಾರು ಏನೇ ಹೇಳಿದರೂ ಅಪ್ಪುವಿನ ತಂದೆ ಕೈ ಸಡಿಲಬಿಡದಿರಲಿಲ್ಲ.

ಮದುವೆಯ ಚಪ್ಪರದಲ್ಲಿ, ಸಂಘದ ಕಟ್ಟಡಕ್ಕೋಸ್ಕರ ವರನ ಪರವಾಗಿ ಹತ್ತು ರೂಪಾಯಿ ಕಾಣಿಕೆ ಕೊಟ್ಟಿರುವುದಾಗಿ ಅಪ್ಪುವಿನ ತಂದೆ ಘೋಷಿಸಿದ. ಹತ್ತು ರೂಪಾಯಿ ದೊಡ್ಡ ಮೊತ್ತವೇ ಆಗಿದ್ದರೂ ಕಣ್ಣ ಹಿಂಜರಿಯದೆ, ವಧುವಿನ ಪರವಾಗಿಯೂ ಅಷ್ಟೇ ಹಣ ವಾಗ್ದಾನಮಾಡಿದ.

"ಕೆಂಪುಬಾವುಟಕ್ಕೆ ಖುಷಿಯಾಗಿದೆ; ಜೋರಾಗಿ ಹಾರಾಡ್ತಿದೆ" ಎಂದರು ಯಾರೋ.

ಮದುವೆಯ ಸಮಾರಂಭದಲ್ಲಿ ಮಾಸ್ತರು,ಚಿರುಕಂಡ ಮತ್ತು ತ್ರಿಕರಪುರದಿಂದ ಬಂದಿದ್ದ ಚಂದು, ವರನ ಬಳಿಯಲ್ಲಿ ಕುಳಿತರು.

"ಪಂಡಿತರು ಬರೋದಕ್ಕಾಗಲ್ವಾ?" ಎಂದಿದ್ದ ಅಪ್ಪು; "ಪ್ರಭು, ಧಾಂಡಿಗ, ರಾಮುಣ್ಣಿ, ಕೇಳಪ್ಪನ್ ಇವರು ಯಾರೂ ಬರೋಕಾಗಲ್ವಾ?"

"ಮಗುವಿನ ಹಾಗೆ ಮಾತಾಡ್ಬೇಡ. ಜಮೀನ್ದಾರರ ಕಡೆಯೋರು ಗುರುತು ಹಿಡಿದರೆ ಪೋಲೀಸರಿಗೆ ವರದಿ ಕಳಿಸೋದಿಕ್ಕೆ ಅನುಕೂಲವಾಗ್ತದೆ" ಎಂದು ಚಿರುಕಂಡ ರೇಗಿದ್ದ.