ಪುಟ:Chirasmarane-Niranjana.pdf/೧೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ೧೭೨ ಚಿರಸ್ಮರಣೆ

ಮತ್ತೊಮ್ಮೆ ನಗೆಯ ತೆರೆ ಎಬ್ಬಿಸಿದರು. ಚರ್ವತ್ತೂರು ಸಮೀಪಿಸಿತ್ತು....

    .......................................

ಮಾಸ್ತರ ರಾಯಭಾರಕ್ಕೆ ಸುಲಭವಾಗಿಯೇ ಯಶಸ್ಸು ದೊರೆಯಿತು. ಕಣ್ಣ ಊಟದ ಬಲೆ ಬೀಸಿ ಅಪ್ಪುವನ್ನು ಕೆಡವಿಕೊಂಡ ಕಥೆ ಹಲವರ ಬಾಯಿ ಮಾತಾಗಿ, ಎಲ್ಲರೂ ಕಣ್ಣನನ್ನು ಹೊಗಳಿದರು.

ನಾನಲ್ಲಪ್ಪೋ, ಊಟಕ್ಕೆ ಕರೀಂತ ಹೇಳ್ದೋಳು ನನ್ನ ಹೆಂಡತಿ" ಎಂದ ಕಣ್ಣ. "ಇಂಥ ವಿಷಯ ಅವಳಿಗೆಲ್ಲ ಚೆನ್ನಾಗಿ ಗೊತ್ತಪ್ಪ" ಎಂದರು ಯಾರೋ. ವರ್ಷದ ಕೊನೆಯಲ್ಲಿ ಮದುವೆ ಎಂಬ ಸೂಚನೆ ಬಂತು.

"ಸಂಘದ ಕಟ್ಟಡದಲ್ಲೇ ಮದುವೆಯಾದರೆ ಚೆನ್ನಾಗಿರ್ತದೆ" ಎಂದು, ವಿವಾಹಿತ ಪೊಡವರ ಕುಂಞ್ಂಬುವೆಂದ.

ಅಪ್ಪುವಿನ" ತಂದೆ ಅದಕ್ಕೊಪ್ಪದೆ ಹೇಳಿದ : "ಛೆ! ಛೆ! ಅದೆಲ್ಲ ಸರಿಯಲ್ಲ. ಹೆಣ್ಣಿಗೆ ಸ್ವಂತ ಮನೆ ಇಲ್ಲವಾದ್ದರಿಂದ ನಮ್ಮನೇಲೇ ಮದುವೆ ನಡೀಲಿ."

ಆದರೆ ಮಾಸ್ತರು ಇಲ್ಲದೆ ಮದುವೆ ಜರುಗುವುದೆಂದರೇನು? 'ನಾನು ಎಲ್ಲಿದ್ದರೂ ಬಂದೇ ಬರ್ತೇನೆ'ಎಂದು ಅವರು ಆಶ್ವಾಸನೆಯನ್ನೇನೋ ಕೊಟ್ಟರು. ಅಪ್ಪು ಒಪ್ಪಲಿಲ್ಲ. ಮಾಸ್ತರು ಕಯ್ಯೂರು ಬಿಡುವುದಕ್ಕೆ ಮುಂಚೆಯೇ ಬೇಸಗೆಯಲ್ಲೇ ಮದುವೆ ಎಂದು ಗೊತ್ತಾಯಿತು...

....ಕಯ್ಯೂರು ಶಾಲೆಯ ಪರೀಕ್ಷೆಗಳು ನಡೆದುವು.ಆ ವರ್ಷ ಕಯ್ಯೂರಿನ 'ಪದವೀಧರ'ರಲ್ಲಿ ಮೊದಲ ಸ್ಥಾನ ಪಡೆದವನು ಕುಂಞ್ಂಬುವಿನ ತಮ್ಮ ರಾಮನ್ ನಾಯರ್. ಎರಡನೆಯವನು ಅಪ್ಪುವಿನ ತಮ್ಮ. ನಂಬೂದಿರಿಯ ದೊಡ್ಡ ಮಗನಿಗೆ ಹೆಚ್ಚು ಅಂಕಗಳು ದೊರೆತಿದ್ದವು. ಆದರೆ ನಂಬಿಯಾರರ ಮಗ ಕರುಣಾಕರ ಅಂತೂ ಇಂತೂ ತೇರ್ಗಡೆಯಾಗಿದ್ದ.

....ಅಪ್ಪು ಮಾಸ್ತರೊಡನೆ, "ಮದುವೆ ಹೊಸ ರೀತಿಯಲ್ಲಾಗ್ಬೇಕು; ರಿಜಿಸ್ತ್ರಿಯಾಗಿ ಆಗ್ಬೇಕು" ಎಂದು ತನ್ನ ಆಶಯವನ್ನು ವ್ಯಕ್ತಪಡಿಸಿದ.ಕ್ರಾಂತಿಕಾರನಾದ ಅಪ್ಪು ಹಾಗೆ ಯೋಚಿಸುವುದು ಸಹಜವಾಗಿತ್ತು. ಆದರೆ ಅಂತಹ ಅರಿವು ಸ್ಪಷ್ಟವಾಗಿ ಮೂಡದೆ ಇದ್ದ ವಾತವರಣದಲ್ಲಿ, ಆ ರೀತಿ ಮಾಡುವುದು ಸುಲಭವಾಗಿರಲಿಲ್ಲ. ಮಾಸ್ತರು ಶಾಂತವಾಗಿ ಬಹಳ ಹೊತ್ತು ಅಪ್ಪುವಿನೊಡನೆ ವಾದಿಸಿದರು. ಹಿರಿಯರಿಗೂ ಊರವರಿಗೂ ಸಮ್ಮತವಾಗುವಂತೆ_ಆದರೆ ಆದಷ್ಟು ಕಡಮೆ ಖರ್ಚಿನಲ್ಲಿ-ಮದುವೆ ನಡೆಯುವುದೇ ವಿಹಿತವೆಂದು, ಪ್ರಯಾಸಪಟ್ಟು ಅಪ್ಪುವನ್ನು ಒಪ್ಪಿಸಿದರು.