ಪುಟ:Chirasmarane-Niranjana.pdf/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦೪

ಚಿರಸ್ಮರಣೆ

ಚಿರುಕಂಡನ ಹಣೆಯ ಮೇಲೆ ಗೆರೆಗಳು ಮೂಡಿದುವು. ಆತ ಯೋಜಿಸಿ ನಿಧಾನವಾಗಿ ಹೇಳಿದ:
"ಅದು ನಿಜ. ಆದರೆ ನಮ್ಮಲ್ಲಿ ಇಂಥ ಬಿಕ್ಕಟ್ಟಿನ ಪರಿಸ್ಥಿತಿ ಉಂಟಾಗಿರೋದು ಇದೇ ಮೊದಲ್ನೇ ಸಲ. ಹಾಗಿರುವಾಗ, ಒಮ್ಮಿಂದೊಮ್ಮೆಲೆ ಜನರನ್ನು ಅವರ ಪಾಡಿಗೆ ಬಿಟ್ಟು ಕಾರ್ಯಕರ್ತರೆಲ್ಲ ಭೂಗತರಾಗೋದು ಸರಿಯಲ್ಲ."
ಆ ಮಾತಿನಲ್ಲಿ ಸತ್ಯಾಂಶವಿದೆಯೆಂಬುದು ಸ್ಪಷ್ಟವಾದರೂ ಒಪ್ಪಲಾರದೆ ಅಪ್ಪುವೆಂದು:
"ಹಾಗಾದರೆ ಪೋಲೀಸರನ್ನ ಇದಿರಿಸೋದು ಅಂತ್ಲೆ?"
ಅಬೂಬಕರ್ ನಡುವೆ ಬಾಯಿ ಹಾಕಿದ:
"ಅದು ಹ್ಯಾಗಾದೀತು? ಸುತ್ತುಮುತ್ತೆಲ್ಲ ದೇಶದಲ್ಲಿ ಅದೇ ಕಾರ್ಯಕ್ರಮ ಇಲ್ಲದಿರುವಾಗ, ಪ್ರತಿಭಟನೆ ಎಷ್ಟು ದಿವಸ ಸಾಧ್ಯ?ಪೋಲೀಸರ ಹಿಂದೆ ಸೈನ್ಯವೂ ಬರ್ತದೇಂತ ಮರೀಬೇಡಿ."
ಮಾತು ಮಾತಿಗೂ ಬೃಹದಾಕಾರ ತಳೆಯುತ್ತಿದ್ದ ಸಮಸ್ಯೆಯನ್ನು ಕುರಿತು ಎಲ್ಲರೂ ಯೋಚಿಸಿದರು.
ಮೌನವನ್ನು ಕೊನೆಗಾಣಿಸಿ, ಚಿರುಕಂಡ ಹೇಳಿದ:
“ಹಳ್ಳಿಯ ಹೊರಗಿನ ಕೇಂದ್ರದಲ್ಲಿ ಯಾರಾದರೂ ಇದ್ದೇ ಇರ್ತಾರೆ. ಅವರಿಗೆ ವಿಷಯ ತಿಳಿಸೋಣ.ನೀಲೇಶ್ವರಕ್ಕೂ ಯಾರನ್ನಾದರೂ ಕಳಿಸೋಣ,ಆದರೆ ಅದಕ್ಕೆ ಮುಂಚೆ ನಮ್ಮದೇ ಆದ ಅಭಿಪ್ರಾಯಕ್ಕೆ ನಾವು ಬರ್ಬೇಕು.ಅದನ್ನೂ ಪರಿಶೀಲಿಸಿ ಅವರು ನಿರ್ದೇಶ ಕೊಡಲಿ."
ಎಲ್ಲರಿಗೂ ಆ ಸೂಚನೆ ಒಪ್ಪಿಗೆಯಾಯಿತು. ಚಿರುಕಂಡ ಮುಂದುವರಿಸಿದ:
"ಈಗಿನ ಸ್ಥಿತೀಲಿ ಪ್ರತಿಭಟನೆ ಯೋಗ್ಯವಲ್ಲಾಂತ ನನ್ನ ಅಭಿಪ್ರಾಯ. ನಮ್ಮಲ್ಲಿ ಕೆಲವರು ಕತ್ತಲಾದ ಕೂಡಲೇ ಭೂಗತರಾಗ್ಬೇಕು. ಉಳಿದವರು ಜನರ ಜತೇಲಿದ್ದು ಬಹಿರಂಗವಾಗಿ ಮಾರ್ಗದರ್ಶನ ನೀಡ್ಬೇಕು. ಒಂದೆರಡು ದಿನ ಪರಿಸ್ಥಿತಿ ನೋಡ್ಕೊಂಡು ಆಮೇಲೆ ಹೊಸ ತೀರ್ಮಾನ ಮಾಡಬಹುದು. ಇದು ನಿಮಗೆ ಒಪ್ಪಿಗೆಯಾದರೆ, ನಮ್ಮ ಅಭಿಪ್ರಾಯ ಹೀಗಿದೇಂತ ನಮ್ಮವರಿಗೆ ಬರೆದು ಕಳಿಸೋಣ."
ಸುತ್ತಲೂ ಇದ್ದವರು ತಮ್ಮೊಳಗೇ ಸ್ವಲ್ಪ ಹೊತ್ತು ಮಾತನಾಡಿ 'ಒಪ್ಪಿಗೆ' ಎಂದರು.
ಅಪ್ಪು ಕೇಳಿದ: