ಪುಟ:ನಡೆದದ್ದೇ ದಾರಿ.pdf/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೬೬ ನಡೆದದ್ದೇ ದಾರಿ ಕೊಡಿಸಿದರೆಂದೂ ಸ್ವಾಮಿಯ ಆಜ್ಞಾಪಾಲನೆಗಾಗಿ ಹನುಮಂತ ರಾಮಾಯಣ ಕಾಲದಿಂದಲೇ ಇಲ್ಲಿ ನೆಲೆನಿಂತನೆಂದೂ ಸ್ಥಳಪುರಾಣ. ಆ ಹಳ್ಳಿಗೆ ಆ ಹೆಸರು ಬಂದಿದ್ದೂ ಈ ದೇವರಿಂದಲೇ. ಊರಿನ ಜನರ ಜೀವನದಲ್ಲಿ ಹನುಮಂತ ಒಂದಾಗಿ ಹೋಗಿದ್ದಾನೆ. ಆತನ ಅಪ್ಪಣೆ ಇಲ್ಲದೆ ಊರಲ್ಲಿ ಯಾರೂ ಏನೂ ಮಾಡುವುದಿಲ್ಲ. ಮಗಳ ಲಗ್ನ ನಿಶ್ಚಯ ಮಾಡಬೇಕಾದರೆ, ಹೊಲ ಮಾರಬೇಕಾದರೆ, ದಾಯಾದಿಯ ಸೊಕ್ಕು ಮುರಿಯಬೇಕಾದರೆ, ಮಳೆಯಾಗದಿದ್ದರೆ, ಎಮ್ಮೆ ಕಳೆದರೆ- ಎಲ್ಲಕ್ಕೂ ಹನುಮಂತನ ಪ್ರಸಾದ ಅವರಿಗೆ ಬೇಕು. ಊರಿನ ಜನಸಂಖ್ಯೆ ಮೂರುನೂರಕ್ಕೂ ಕಡಿಮೆ. ಅವರಲ್ಲಿ ಒಂದು ಕಾಲುಭಾಗಕ್ಕಿಂತ ಕಡಿಮೆ ಬ್ರಾಹ್ಮಣರು : ಇನ್ನೊಂದು ಕಾಲುಭಾಗಕ್ಕಿಂತ ತುಸು ಹೆಚ್ಚು ಲಿಂಗಾಯತರು ; ಉಳಿದವರು ಒಕ್ಕಲಿಗರು, ಹೊಲೆಯರು. ಬ್ರಾಹ್ಮಣರ ಮಣ್ಣಿನ ಮನೆಗಳೆಲ್ಲ ಗುಡಿಯ ಸುತ್ತಲಿನ, ಆಗಸೀ ಬಾಗಿಲ ಒಳಗಡೆಯ ಆವರಣದಲ್ಲಿ : ಬಾಗಿಲಾಚೆ ಲಿಂಗಾಯತರ ಹಂಚಿನ ಮನೆಗಳು ; ಇದು ಬಿಟ್ಟು ಅರ್ಧ ಫರ್ಲಾಂಗಿನಾಚೆ ಕೆಳಜಾತಿಯವರೆನ್ನಿಸಿದವರ ಹಟ್ಟಿಗಳು. ದೇವರ ಪೂಜಾರರು ಎಂದಿನಿಂದಲೂ ಶೆಟ್ಟರ ಮನೆತನದವರು. ಮುಂಜಾನೆ ಊರ ಬ್ರಾಹ್ಮಣರು ಊರಾಚೆಯ ನದಿಯಲ್ಲಿ ಸ್ನಾನ-ಅಹಿಕ ಮುಗಿಸಿ ಗುಡಿಗೆ ಬಂದು ಅಭಿಷೇಕ ಮಾಡಿ ಹೊರಗೆ ಬಂದ ನಂತರವೇ ಪೂಜಾರಿಯಾದ ಶೆಟ್ಟಿ ಹೊಳೆಗೆ ಹೋಗಿ ಜಳಕ ಮಾಡಿ ಒದ್ದೆಯಲ್ಲೇ ಗುಡಿಗೆ ಬಂದು ಪೂಜೆ ಮಾಡುವನು. ನಂತರದ ಆರತಿಗೆ ಎಲ್ಲರೂ ಸೇರುವರು. ವರ್ಷಕ್ಕೊಮ್ಮೆ ಬರುವ ಹನುಮ ಜಯಂತಿ ಆ ಊರಿಗೆ ದೊಡ್ಡ ಹಬ್ಬ. ಅಂದು ಬ್ರಾಹ್ಮಣರು ದೇವರಿಗೆ ವಿಶೇಷ ಪಂಚಾಮೃತ ಅಭಿಷೇಕ, ಪವಮಾನಹೋಮ ಮಾಡುವರು. ನಂತರ ನೂರಾರು ವರ್ಷಗಳ ಹಿಂದಿನ ಹಳೆಯ ಕಟ್ಟಿಗೆಯ ತೇರು ವಾದ್ಯವೈಭವಗಳೊಂದಿಗೆ ಆಗಸಿಯಿಂದ ಹೊರಟು, ಊರಲ್ಲಿ ಒಂದು ಸುತ್ತು ಹಾಕಿ, ಗುಡಿಯ ಎದುರಿಗೆ ಬಂದು ನಿಲ್ಲುವುದು. ತೇರಿನಿಂದ ಉತ್ಸವಮೂರ್ತಿಯನ್ನು ಕೆಳಗಿಳಿಸಿದ ನಂತರ ಗುಡಿಯೊಳಗೆ ತರುವ ಮುನ್ನ ಮೊದಲು ಊರಿನ ಹಿರಿಯ ಗೋಪಾಲಾಚಾರ್ಯರು ತೆಂಗಿನಕಾಯಿ ಒಡೆದು ಮಂಗಳಾರತಿ ಮಾಡುವರು. ನಂತರ ಇನ್ನೊಬ್ಬ ಹಿರಿಯ ರಾಮಗೌಡರು ಎರಡನೇ ಕಾಯಿ ಒಡೆಯುವರು. ಅವರ ಮನೆಯ ಹೆಂಗಸರು ಆರತಿ ಬೆಳಗುವರು. ಇದು ಪುರಾತನ ಕಾಲದಿಂದಲೂ ನಡೆದುಬಂದ ಸಂಪ್ರದಾಯ. ಇಂದಿನ ಜಗಳಕ್ಕೆ ಕಾರಣವೂ ಇದೇ. ಪಟ್ಟಣದಿಂದ ಅಲ್ಪಸ್ವಲ್ಪ ವಿದ್ಯೆ ಕಲಿತು ಬಂದ ರಾಮಗೌಡರ ಕಿರಿಯ ಮಗ ವೀರಭದ್ರಗೌಡ ಹಾಗೂ ಆತನ ಚಮಚಾಗಳಾದ