ಪುಟ:ನಡೆದದ್ದೇ ದಾರಿ.pdf/೫೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಇನ್ನಷ್ಟು ಕತೆಗಳು / ಸೋನಿಯಾ

೪೯೩

ತಿಳಿದಿದ್ದರಿಂದ ಪೇಢೆ ತಗೊಂಡು ಗೆಳತಿಯನ್ನು ಕಾಣಲು ಹೊರಟಳು. ನಾನೂ ಜೊತೆಗೆ
ಹೋದೆ.

ಸೋನಿಯಾ ತನ್ನ ಮೂರು ತಿಂಗಳ ಮಗುವನ್ನೆತ್ತಿಕೊಂಡು ನಗುತ್ತ
ಕೂತಿದ್ದಳು. ಬಂಗಾರದೊಡವೆ ತೊಟ್ಟು ರೇಶಿಮೆ ಸೀರೆ ಉಟ್ಟು ಮಗುವಿಗೂ
ಅಲಂಕಾರ ಮಾಡಿ ರಂಗು ರಂಗಿನ ಚಿತ್ತಾರದ ದುಪ್ಪಟಿಯಲ್ಲಿ ಮಗುವನ್ನು ಸುತ್ತಿ
ಮಡಿಲಲ್ಲಿರಿಸಿಕೊಂಡು ಕೂತಿದ್ದಳು ಒಂದು ಸುಂದರ ಕಲಾಕೃತಿಯ ಹಾಗೆ.
ಸೋನಿಯಾಳ ಮದುವೆ ಒಂದು ಟ್ರ್ಯಾಜಿಡಿ ಅಂದುಕೊಂಡು ಕಳೆದ ವರ್ಷವಿಡೀ
ಅವಳಿಗಾಗಿ ಪರಿತಾಪ ಪಟ್ಟಿದ್ದು ನಮ್ಮದೇ ತಪ್ಪೇನೋ ಅನಿಸುವ ಹಾಗೆ. ಆಕೆಯ
ತುಟಿಯಂಚಿನ ಮಂದಸ್ಮಿತ, ಕಣ್ಣಲ್ಲಿನ ಮಿಂಚು, ಮುಖದ ಮೇಲಿನ ದೈವೀಕಳೆ,
ತಾಯ್ತನದ ಸೊಗಸು -ಎಲ್ಲ ಎಷ್ಟು ಚೆಂದ....

“ಹೇಗಿದ್ದೀ ಸೋನಿಯಾ ?"" ಅಂತ ಕೇಳುವುದೇ ತಡ, ಪಟಪಟ ಅರಳು
ಹುರಿದಂತೆ ಮಾತಾಡಿದಳು. ಮೂರೇ ತಿಂಗಳಾಗಿದ್ದರೂ ಎಷ್ಟು ತುಂಟವಾಗಿದೆ ಮಗು.
ತಾಯಿಯನ್ನು ನೋಡಿದರೆ ನಗುತ್ತದೆ, ಅಜ್ಜಿಯನ್ನು ನೋಡಿದರೆ ಅಳುತ್ತದೆ, ಹಾಲು
ಬೇಕಾದಾಗ ಕೈಯೆತ್ತಿ, ಚೀರುತ್ತದೆ. ನಿದ್ರೆ ಬಂದಾಗ ಹಾಡಿದರೇನೇ ಮಲಗುತ್ತದೆ.
ರಾತ್ರಿಯಿಡೀ ಹಾಸಿಗೆ ಒದ್ದೆ ಮಾಡುವುದಿಲ್ಲ. ಎಲ್ಲ ಟೈಮಿಗೆ ಸರಿಯಾಗಿ ಆಗಬೇಕು.
ಪಾಪ್‌ ಮ್ಯೂಜಿಕ್‌ ಹಾಕಿದರೆ ಅದಕ್ಕೆ ಬಹಳ ಖುಷಿ, ಆಹಾ, ಇಂತಹ ಅಪರೂಪದ
ಮಗು ಬೇರೆಲ್ಲೂ ಇರಲಾರದು... ಇರಲು ಹೇಗೆ ಸಾಧ್ಯ?

“ನಾ ಈಗ ಭಾಳ ಹ್ಯಾಪಿ ಇದ್ದೀನಿ ಆಂಟಿ, ದಿನಾ ಹ್ಯಾಂಗ ಕಳೀತದಂತ ಗೊತ್ತ
ಆಗೋದಿಲ್ಲ ಈ ಪಾಪೂನ ತುಂಟಾಟದಾಗ....

“ನೀನು ಹೀಗೆಯೇ ಸುಖವಾಗಿರು, ನಗುನಗುತ್ತ ಇರು, ನಿನಗೆ ಒಳ್ಳೆಯದಾಗಲಿ"
ಅಂತ ಹರಸಿ ಬಂದೆ.


ಆ ರಾತ್ರಿ ತಿರುತಿರುಗಿ ನನಗೆ ಮಾಸ್ತಿಯವರ "ಸರಸಿಯ ಗೊಂಬೆ"
ನೆನಪಾಗತೊಡಗಿತು. “ಒಬ್ಬ ಪುಟ್ಟ ಹುಡುಗನೆಂದರೆ ಪುಟ್ಟ ಹುಡುಗನೇ. ಒಬ್ಬ ಪುಟ್ಟ
ಹುಡುಗಿ ಮಾತ್ರ ಒಬ್ಬ ಪುಟ್ಟ ತಾಯಿಯಾಗಿರುತ್ತಾಳೆ'. ಎಂತಹ ಜೀವನ ದರ್ಶನ !

ನನಗೆ ನಿದ್ರೆ ಬರಲಿಲ್ಲ. ಇವರಾಗಲೇ ಗೊರಕೆ ಹೊಡೆಯತೊಡಗಿದ್ದರು.
ನಾನು ಚಿಕ್ಕಂದಿನಲ್ಲಿ ಬಹುವಾಗಿ ಮೆಚ್ಚಿಕೊಂಡಿದ್ದ ಸರಸಿಯ ಗೊಂಬೆಯ ಕತೆಯನ್ನು
ಮಿಲಿಗೆ ಹೇಳೋಣವೆಂದುಕೊಂಡು ಅವಳ ಕೋಣೆಗೆ ಹೋದೆ.

ಟೇಬಲ್‌ ಲ್ಯಾಂಪ್‌ ಉರಿಯುತ್ತಿತ್ತು. ಮಿಲಿಯ ಎದುರಿಗೆ ಪುಸ್ತಕವಿತ್ತು.