ಪುಟ:ನಡೆದದ್ದೇ ದಾರಿ.pdf/೫೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಇನ್ನಷ್ಟು ಕತೆಗಳು / ವೀಣಾ ನಡೆದ ದಾರಿ...

೫೩೩

ಹೋಗುತ್ತಾಳೆ. ಪ್ರೀತಿಸುವ ಪತಿಗೆ ಮೋಸ ಮಾಡುತ್ತಿದ್ದೇನೆಯೇ ಎಂಬ ಗೊಂದಲಕ್ಕೆ
ಬೀಳುತ್ತಾಳೆ. ಅವಳ ಪುಸ್ತಕ ವಿಳಾಸದ ಚೀಟಿಯೊಡನೆ ಸುರಕ್ಷಿತ ಮರಳಿ ಬರುತ್ತದೆ.
'Waiting for Godot' ನ ಸಂಕೇತ ಈ ಕತೆಯಲ್ಲಿ ಶಕ್ತಿಯುತವಾಗಿ ಬಳಕೆಯಾಗಿದೆ.
ನಮ್ಮ ಸಮಾಜದಲ್ಲಿ ಮಿನಿಯಂತೆಯೇ ಅನೇಕ ಸ್ತ್ರೀಯರಿಗೆ ವ್ಯರ್ಥ ಕಾಯುವುದರಲ್ಲೆ,
ನಿರೀಕ್ಷೆಯಲ್ಲೇ ಬದುಕು ಕಳೆದುಹೋಗುತ್ತದೆ.
'ಒಂದು ಗಿಡ ಒಂದು ಬಾವಿ'ಯಂತಹ ಪರಿಸರ ಕಾಳಜಿಯ ಕಥೆ, ದಲಿತ ಮಹಿಳೆ
'ರಾಧವ್ವ'ನ ಕತೆ, ವ್ಯವಸ್ಥೆಯ ವಿಪರ್ಯಾಸವನ್ನು ಚಿತ್ರಿಸುವ 'ದರಿದ್ರ ಬ್ರಾಹ್ಮಣ
ಕ್ರಿಷ್ಟಪ್ಪನ ಕಥೆ', ಸ್ವಾಭಿಮಾನಿ ಹೆಣ್ಣೊಬ್ಬಳು ತನಗೆ ಬೇಕಾದಂತೆ ಬದುಕು
ರೂಪಿಸಿಕೊಳ್ಳುವ 'ಹೀಗೊಂದು ಕಥೆ' ಹೀಗೆ ವೈವಿಧ್ಯಮಯವಾದ ಕಥೆಗಳು ವೀಣಾ
ಅವರ ಲೇಖನಿಯಿಂದ ಮೂಡಿವೆ.
ವೀಣಾ ಶಾಂತೇಶ್ವರ ಅವರ ಕತೆಗಳನ್ನು ಕುರಿತು ವಿಮರ್ಶಕ ಜಿ. ಎಸ್.
ಆಮೂರರ ಮಾತನ್ನಿಲ್ಲಿ ಉಲ್ಲೇಖಿಸಬಹುದೆನಿಸುತ್ತದೆ. "ವೀಣಾರ ಕತೆಗಳಲ್ಲಿ ನಾವು
ನೋಡುವ ಅಂತರ್ಮುಖತೆ ಆತ್ಮಪ್ರಜ್ಞೆ, ದ್ವಂದ್ವಗಳ ಅರಿವು ನವ್ಯ ಮನೋಧರ್ಮದ
ಆವಿಷ್ಕಾರಗಳು. ಕತೆಯನ್ನು ಕೇವಲ ಮನೋರಂಜನೆಗಾಗಲೀ, ಸಾಮಾಜಿಕ
ಜಾಗೃತಿಗಾಗಲೀ ಬಳಸದೆ ಇವರು ಅದನ್ನು ಸತ್ಯದ ಶೋಧದಂತಹ ಗಂಭೀರ
ಪ್ರಯತ್ನದಲ್ಲಿ ತೊಡಗಿಸಿದರು ಹಾಗೂ ಅದನ್ನು ಪ್ರಬುದ್ಧ ಸಾಹಿತ್ಯ ಮಾಧ್ಯಮವಾಗಿ
ಬಳಸಿಕೊಂಡರು." (ಪುಟ ೧೧ ಅವಳ ಕತೆಗಳು)
ವೀಣಾ ತಮ್ಮ ಕಥೆ-ಕಾದಂಬರಿಗಳಲ್ಲಿ ಮಾನವೀಯ ಗುಣಕ್ಕೆ ಒತ್ತು ಕೊಟ್ಟು
ಅರ್ಥಹೀನ ಸಂಪ್ರದಾಯದ ಸಂಕೋಲೆಗಳನ್ನು ಮುರಿಯುವ ಮೂಲಕ ಒಂದು
ಬಗೆಯ ವಿಗ್ರಹಭಂಜಕ ಕೆಲಸವನ್ನು ಮಾಡುತ್ತಾರೆ. ಸಮಾಜದ ಸ್ವಾಸ್ಥ್ಯ ಕಾಪಾಡುವ
ಹೊಣೆ ಬರೀ ಹೆಣ್ಣಿನದಾಗಿದ್ದರೆ ಸಾಲದು, ಅದು ಗಂಡಿನದೂ ಜವಾಬ್ದಾರಿ ಎಂಬುದು
ವೀಣಾ ಅವರ ಕತೆಗಳ ಆಶಯಗಳಲ್ಲೊಂದು. ತನ್ನ ಬದುಕನ್ನೇ ಮರೆತು ತನಗೆ ವ್ಯಕ್ತಿತ್ವ,
ಆಸೆಗಳು ಇಲ್ಲವೇ ಇಲ್ಲವೆನ್ನುವಂತೆ ಬದುಕುವ ಭಾರತೀಯ ಸ್ತ್ರೀ ಮಾದರಿಗಳ
ಪ್ರಸ್ತುತತೆಯನ್ನು ವೀಣಾ ಪ್ರಶ್ನಿಸುತ್ತಾರೆ.
ತಮ್ಮ ಪಿಹೆಚ್.ಡಿ ಪ್ರಬಂಧಕ್ಕೆ ವೀಣಾ ಅವರ ಕತೆಗಳನ್ನೂ ಅಧ್ಯಯನ ಮಾಡಿದ
ಡಾ. ಎಲ್. ಜಿ. ಮೀರಾ ಸ್ಥಾಪಿತ ಮೌಲ್ಯಗಳ ಬಗೆಗೆ ಬೆಂಕಿಯಂತೆ ಉರಿಯುವ ಸಿಟ್ಟು
ವೀಣಾ ಅವರ ಕಥನ ಪ್ರಜ್ಞೆಯ ಪ್ರಧಾನ ಗುಣ ಎಂದು ಗುರುತಿಸುತ್ತಾರೆ.
“ಗಂಡಿಗೊಂದು ಹೆಣ್ಣಿಗೊಂದು ಮೌಲ್ಯಗಳನ್ನು ಮಾಡಿ, ತಪ್ಪಾದಾಗಲೆಲ್ಲ ಅವಳನ್ನೇ
ದೂಷಿಸುವ ಆತ್ಮವಂಚಕ ಸಮಾಜದತ್ತ ಈ ಕಥನ ಪ್ರಜ್ಞೆ ಬೆಳಕು ಬೀರುತ್ತದೆ.