ಪುಟ:ಬೆಳಗಿದ ದೀಪಗಳು.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೯೮

ಸಂಪೂಣ-ಕಥೆಗಳು

ಹೇಗೋ ಮಲಗಿದ್ದನು.

ತನ್ನ ಭೃತ್ಯನು ಸುಖರೂಪನಾಗಿರುವದನ್ನು ಕಂಡು ಕೇರಳಾಧೀಶ್ವರನಿಗೆ ಪರಮ ಸಂತೋಷವಾಯಿತು. ರಾಜನು ತನ್ನ ಆಳುಮಗನ ಬೆನ್ನು ಮೇಲೆ ಕೈಯಿಟ್ಟು "ಬಂಟನೆ, ನಾನೀ ಸಮಯದಲ್ಲಿ ಬಹು ಸಂತುಷ್ಟನಾಗಿರುವನು. ಈ ಸಮಯದಲ್ಲಿ ನಿನ್ನ ಅಪೇಕ್ಷೆ ಏನಿರುವದು ಹೇಳು; ನಿಶ್ಚಯವಾಗಿ ಪೂರೈಸುತ್ತೇನೆ ಎಂದು ಆಶ್ವಾಸನವನ್ನಿತ್ತನು, ಆ ಧೀರನು ಮಹಾರಾಜರ ಕಾಲುಗಳ ಮೇಲೆ ತನ್ನ ಹಣೆಯನ್ನಿಕ್ಕಿ "ಪ್ರಭುಗಳು ವಚನವನ್ನಿತ್ತ ಮಾತ್ರದಿಂದಲೇ ನನ್ನ ಮನೋರಥವು ಸಿದ್ಧವಾಯಿತೆಂಬದರಲ್ಲಿ ಸಂದೇಹವಿಲ್ಲ. ವಚನ ಪರಿಪಾಲನದಲ್ಲಿ ಮಹಾರಾಜರು ಶಿಬಿಚಕ್ರವರ್ತಿಗೆ ಸಮಾನರಾದವರು. ಕೋರಿಕೆಯನ್ನು ನಿವೇದಿಸಲು ಆಜ್ಞೆ ಇರಲಿ ” ಎಂದು ವಿಜ್ಞಾಪಿಸಿದನು.

"ಬೇಡು! ಬೇಡು! ನಿಃಶಕನಾಗಿ ಬೇಡು!” ಎಂದು ಮಹಾರಾಜರು ಮನಬಿಚ್ಚಿ ಹೇಳಿದರು.

"ಮಹಾರಾಜರ ಸಿಂಹಾಸನದ ಮೇಲೆ ಮೂರು ಮುಕ್ಕಾಲು ಗಳಿಗೆ ಕುಳಿತು ರಾಜ್ಯ ಮಾಡಬೇಕೆನ್ನುತ್ತೇನೆ” ಎಂದು ಆ ಸ್ವಾಮಿಭಕ್ತನು ಅಂಜುತ್ತೆ ಅಂಜುತ್ತೆ ನುಡಿದನು.

ಮಹಾರಾಜರು ಗಹಗಹಿಸಿ ನಕ್ಕು ಅಂದದ್ದು : "ಹುಚ್ಚನಿರುವಿ ನೀನು! ಮೂರು ಮುಕ್ಕಾಲು ಗಳಿಗೆ ಸಿಂಹಾಸನದ ಮೇಲೆ ಕುಳಿತರೆ ನಿನಗಾಗುವ ಲಾಭವೇನು? ಈ ಸಿಂಹಾಸನದ ಮೇಲೆ ಹತ್ತು ವರುಷ ಕುಳಿತನನಾದ ನನಗೆ ಇದರಿಂದ ಸುಖದೋರಲಿಲ್ಲ. ಈ ಸಮಯದಲ್ಲಿ ನೀನು ವಿಸ್ತಾರವಾದ ಭೂಸ್ವಾಸ್ಥಿಯನ್ನು ಬೇಡು. ನಿನ್ನಿಚ್ಛೆ ಇದ್ದರೆ ಅರ್ಧ ರಾಜ್ಯವನ್ನು ಬೇಡಿದರೂ ಚಿಂತೆಯಿಲ್ಲ."

"ದೇವರೂ, ಮಾತು ಆಡಿ ಹೋಯಿತು, ಮುತ್ತು ಒಡೆದು ಹೋಯಿತು. ಬೇಡಿದ್ದರಲ್ಲಿ ಹೆಚ್ಚು ಕಡಿಮೆ ಮಾಡಲಾರೆನು ” ಎಂದು ಏಕಮಾರ್ಗಿಯಾದ ಆ ಧೀರನು ಹೇಳಿದನು.

ಆ ಸಮಯದಲ್ಲಿ ಆ ಕೊಡೆಯಾಳಿನ ಮುಖದಲ್ಲಿ ತೋರಿದ ನಿಶ್ಚಯವನ್ನೂ, ಗ್ರಾಮ್ಯವಾದರೂ ಗಂಭೀರವಾಗಿರುವ ಅವನ ನಿಶ್ಚಯದ ನುಡಿಯನ್ನೂ ಕೇಳಿ ಕೇರಳಾಧೀಶ್ವರನಿಗೆ ಅತಿಶಯವಾದ ಆಶ್ಚಯವಾಯಿತು.