ಪುಟ:ಬೆಳಗಿದ ದೀಪಗಳು.pdf/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ನರಗುಂದದ ಸಾವಿತ್ರೀಬಾಯಿ

೧೧

ಅತ್ತಳು. "ಪತಿರಾಜ, ಪತಿರಾಜ! ನಿನ್ನ ಪಾದಾರವಿಂದಗಳಿಗೆ ಈ ದೀನೆಯಾದ ದಾಸಿಯ ಪ್ರಣಾಮ ಮಾಡುತ್ತಾಳೆ, ಸ್ವೀಕರಿಸಬೇಕು. ತಮಗೂ ತಮ್ಮ ಸಂಸ್ಥಾನಕ್ಕೂ ದೊಡ್ಡದೊಂದು ವಿಪತ್ತು ಬಂದಿರುವ ಸಂಗತಿಯನ್ನು ನೆನೆದೇ ನಾನು ವ್ಯಸನಪಡುತ್ತೇನೆ. ಇಲ್ಲವಾದರೆ ನಮ್ಮ ಮೂರ್ತಿಯ ಧ್ಯಾನವಾದಾಗ ನನಗೆ ದುಃಖವಾಗುವ ಬಗೆ ಹೇಗೆ ? ಹೋಗಿ ಬರುತ್ತೇನೆ, ಅಪ್ಪಣೆಯಿರಲಿ! ಪರಲೋಕದಲ್ಲಿ ತಮ್ಮ ಪಾದಾರವಿಂದಗಳ ಪ್ರವೇಶವಾಗುವದರೊಳಗಾಗಿಯೇ ದಾಸಿಯಾದ ನಾನು ಅಲ್ಲಿ ಸೇವೆಗೆ ಸಿದ್ಧಳಾಗಿರಬೇಕಲ್ಲವೆ? ” ಎಂದು ನುಡಿದ ಸಾವಿತ್ರಿಬಾಯಿಯ ಕೈಕಾಲುಗಳು ಥರಥರನೆ ನಡುಗಿದವು. ಮರ್ಧೆ ಬಂದು ಅವಳಲ್ಲಿಯೇ ನೆಲಕ್ಕೆ ಬಿದ್ದಳು. ಯಮುನಾಬಾಯಿಯು ಸೊಸೆಯನ್ನೆತ್ತಿ ತಬ್ಬಿಕೊಂಡು ಅವಳ ಕಣ್ಣುಗಳನ್ನು ನೀರಿನಿಂದ ತೊಳೆದು ಅವಳನ್ನು ಎಚ್ಚರಿಸಿದಳು.

"ಸಾವಿತ್ರೀದೇವಿ, ಇನ್ನೇನು ಮಾಡತಕ್ಕದ್ದು ಹೇಳು. ನೀನು ವಿಚಾರ ಶೀಲಳು. ನಾವು ಆತ್ಮಹತ್ಯೆಯ ಪಾಪಕೃತ್ಯವನ್ನು ಮಾಡಿ ಸಾಯಬೇಕೆ ?”

"ಇನ್ನೊಮ್ಮೆ ಸ್ನಾನ ಮಾಡೋಣ ಬನ್ನಿರಿ, ಆ ಮೇಲೆ ಹೇಳುವೆನು " ಎಂದು ಸಾವಿತ್ರೀದೇವಿಯು ಎದೆಮಟ್ಟಿಗೆ ನೀರು ಬರುವ ಸ್ಥಳಕ್ಕೆ ಬಂದಳು.

"ಇಲ್ಲಿ ನೀರು ಆಳವಾಗಿದೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋದರೆ ಮುಳುಗಿಳುಗುವವು" ಎ೦ದು ಯಮುನಾಬಾಯಿಯು ತಟ್ಟನೆ ನಿಂತು ನುಡಿದಳು.

"ಮುದಿಹುಚ್ಚೆ! ಇನ್ನೇತರ ಆಂಜಿಕೆ” ಎಂದವಳೇ ಸಾವಿತ್ರೀ ದೇವಿಯು ಅತ್ತೆಯನ್ನು ತಬ್ಬಿಕೊಂಡು ಧುಡುಮ್ಮನೆ ನೀರಲ್ಲಿ ದುಮುಕಿದಳು.

ಹೋಯಿತು, ಮುಳುಗಿ ಹೋಯಿತು! ಅಲ್ಲಿ ನೋಡಿರಿ, ಭಗವಂತನು ಉಲ್ಲಾಸದಿಂದ ನಿರುಮಿಸಿದಂಥ ಮಕರಂದ ನಯವಾದ ಕುಸುಮವು ಹೇಗೆ ನೀರಲ್ಲಿ ಅಕಸ್ಮಾತ್ತಾಗಿ ಮುಳುಗಿಹೋಯಿತು! ಅಂಥ ಸೌಂದರ್ಯ, ಆಂಥ ಕಾಂತಿ, ಅಂಥ ಕೋಮಲತೆ, ಆ೦ಥ ಪರಿಮಳಗಳಿಂದ ಯುತವಾದ ಕುಸುಮವು ಪ್ರಫುಲ್ಲಿತವಾಗಿ ತಲೆದೋರಿತೇಕೋ, ಹಾಗೆ ಆಕಸ್ಮಾತ್ತಾಗಿ ಅಡಗಿಹೋಯಿತೇಕೋ, ಆಗಾಧಲೀಲನಾದ ಭಗವಂತನೊಬ್ಬನಿಗೇ ಗೊತ್ತು !