ವಿಷಯಕ್ಕೆ ಹೋಗು

ಪುಟ:ರಂಗಣ್ಣನ ಕನಸಿನ ದಿನಗಳು.pdf/೧೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ
ಪ್ಲೇಗು ಮಾರಿಯ ಹೊಡೆತ
೧೪೩

“ಪುನಃ ಇಲ್ಲಿಗೆ ವರ್ಗ ಮಾಡಿಸಿ ಕೊಡಬೇಕೆಂದು ಕೇಳುತ್ತಿದ್ದಾನಲ್ಲ ಆ ಮನುಷ್ಯ ! ಜೊತೆಗೆ ಕರಿಯಪ್ಪ ನವರ ಶಿಫಾರಸು ಪತ್ರ ಬೇರೆ ತಂದು ಕೊಟ್ಟದ್ದಾನೆ! ಒಳ್ಳೆಯ ಜನ !

ಈ ಮಾತುಗಳು ಮುಗಿಯುವ ಹೊತ್ತಿಗೆ ಸಾಹೇಬರ ಗುಮಾಸ್ತೆ ನಾರಾಯಣ ರಾವ್ ಬಂದನು. ಕಚೇರಿಯ ಲೆಕ್ಕ ಪತ್ರಗಳ ತನಿಖೆಗಾಗಿ ಆತ ಒಂದು ದಿನ ಮುಂಚಿತವಾಗಿ ಬಂದನು. ಆತನ ಹಾಸಿಗೆಯನ್ನು ಕಚೇರಿಯ ಒಂದು ಕೋಣೆಯಲ್ಲಿಡಿಸಿದ್ದಾಯಿತು. ಸಾಹೇಬರು ಮರುದಿನ ಹನ್ನೊಂದು ಗಂಟೆಯೊಳಗಾಗಿ ಬರುವರೆಂದೂ ಬಂಗಲೆಯಲ್ಲಿ ಅವರಿಗೆ ಸ್ಥಳವನ್ನು ಗೊತ್ತು ಮಾಡ ಬೇಕೆಂದೂ ಆತನು ತಿಳಿಸಿದನು. ಬಂದಗುಮಾಸ್ತೆಗೆ ಉಪಾಹಾರಕ್ಕೆ ರಂಗಣ್ಣ ಏರ್ಪಾಟು ಮಾಡಿ ಸ್ನಾನ ಮತ್ತು ಊಟಗಳಿಗೆ ತನ್ನ ಮನೆಗೆ ಬರ ಬಹುದೆಂದೂ, ಸಾಹೇಬರ ಬೀಡಾರ ದಲ್ಲಿಯೇ ಊಟವನ್ನು ಮಾಡುವುದಾದರೆ ಅದು ಸಹ ಆಗಬಹುದೆಂದೂ ಹೇಳಿದನು.

'ನಾನು ಹೊಟಲಿಗೆ ಊಟಕ್ಕೆ ಹೋಗುತ್ತೇನೆ ಸಾರ್ ! ಸಾಹೇಬರ ಬಿಡಾರದಲ್ಲಿ ನಮಗೆಲ್ಲ ಊಟದ ವ್ಯವಸ್ಥೆಯಿಲ್ಲ.'

'ನೀವು ಕಚೇರಿಯ ತನಿಖೆಗೆ ಬಂದಿರುತ್ತೀರಿ. ಆದ್ದರಿಂದ ನಾನು ಬಲಾತ್ಕಾರ ಮಾಡಿದರೆ ಚೆನ್ನಾಗಿರಲಾರದು. ಹೋಟಲಿಗೆ ಬೇಕಾಗಿದ್ದರೆ ಹೋಗಬಹುದು. ಆದರೆ ನಿಮಗೆ ಬರುವ ಭತ್ಯದಲ್ಲಿ ನಿಮ್ಮ ದಿನದ ಖಚು೯ ಏಳುತ್ತದೆಯೆ ?'

'ಸಾಕಾಗುವುದಿಲ್ಲ ಸಾಲ ! ಏನು ಮಾಡುವುದು ? ಕೈಯಿಂದ ಕತ್ತರಿಸುತ್ತದೆ ; ದಂಡ ತೆರಬೇಕು '

'ಆ ಕಷ್ಟವನ್ನು ನಾನು ಬಲ್ಲೆ ಆದ್ದರಿಂದಲೇ ನಾನು ನಿಮಗೆ ಹೇಳಿದ್ದು , ನಿಮ್ಮ ಮನಸ್ಸು ಬಂದ ಹಾಗೆ ತನಿಖೆ ಮಾಡ ಬಹುದು. ನಿಮ್ಮ ಮನಸ್ಸು ಬಂದ ಹಾಗೆ ವರದಿಯನ್ನು ಬರೆಯಬಹುದು, ನನ್ನ ಆಕ್ಷೇಪಣೆ ಇಲ್ಲ. ನನ್ನ ಮನೆಯಲ್ಲಿ ಊಟ ಮಾಡಿದ ಕಾರಣದಿಂದ ಯಾವುದೊಂದು ದಾಕ್ಷಿಣ್ಯ ಕ್ಕೂ ಒಳಗಾಗಬೇಕಾಗಿಲ್ಲ. '