ವಿಷಯಕ್ಕೆ ಹೋಗು

ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

5

ಕಥಾವಸ್ತುವಿನಿಂದ ಕೂಡಿದುವಾಗಿದ್ದರೂ 'ದಾಜೀಬಾನ ಬ್ಯಾಂಕು', 'ದೊಡ್ಡಮ್ಮ ನೋಡಿದ ವರ ' 'ನನ್ನನ್ನು ನೋಡಲಿಕ್ಕೆ ಬಂದಾಗ' 'ಬಕಪಕ್ಷಿ' ಎಂಬುವುಗಳೂ ವಾಸ್ತವ ಚಿತ್ರಗಳೆ ! 'ದಾಜೀಬಾ ' ನ ಸ್ವಭಾವ ಚಿತ್ರದೊಂದಿಗೆ ಆತನ ಸ್ವರೂಪವೂ ನಸುಮೂಡಿದೆ; ಆದರೆ ಚಿತ್ರದ ನಗೆಯ ಬಗೆಯು ಅದನ್ನು ಮರೆಮಾಡಿ ಬಿಡುತ್ತದೆ. *'ದೊಡ್ಡಮ್ಮ ನೊಡಿದ ವರ ' ದಲ್ಲಿ ಕುತೂಹಲವನ್ನು ಹುಟ್ಟಿ ಸುವಂತಹ ವಸ್ತು ರಚನಾ ಚಮತ್ಕೃತಿಯಿದೆ.

'ನೀಲಾ' 'ಚಂದ್ರ' 'ದ್ಯಾಂವಕ್ಕ' ಇವರ ಸ್ವರೂಪವನ್ನು ಕಂಡರಿಸುವ ಕಾರ್ಯದಲ್ಲಿ ಕತೆಗಾರ್ತಿಯರು ಸಾಕಷ್ಟು ನೈಪುಣ್ಯವನ್ನು ತೋರಿಸಿದ್ದಾರೆ. 'ಸಿದ್ಲಿಂಗಗೌಡ'ನ ಕೈ ಹಿಡಿದಿದ್ದರೂ, ತಿಂಗಳಲ್ಲಿ ಒಂದುಸಲವಾದರೂ ಶಂಕರಮಾವನ ಮನೆಗೆ ಬಂದು ಹೋಗುವ ನೀಲೆಯೂ, ಹುಚ್ಚಿಯಾಗಿ ಹಂಚಿನ ಬಿಲ್ಲೆಗಳನ್ನು ಎಣಿಸುತ್ತ-ಹರಕು ಬಟ್ಟೆ ಗಳನ್ನು ಮಡಿಸುತ್ತ ಕುಳಿತುಕೊಳ್ಳುವ ಚಂದ್ರಿಯೂ, ಖಂಡಿತ ವಾಚಕರಿಂದ ಬಿಸಿಯುಸಿರನ್ನು ಕಸಿದುಕೊಳ್ಳುತ್ತಾರೆ. 'ಚೆಂಗಳಿಕವ್ವನಂತೆ ' ಕಾಣುವ 'ದ್ಯಾವಕ್ಕ' ನ ಪೌರುಷ ಜೀವನವು ಓದುವವರನ್ನು ಆಶ್ಚರ್ಯದ ನೋಟದಿಂದ ನೋಡಲು ತೊಡಗಿಸುತ್ತದೆ.

ಇನ್ನು ಇದರ ಭಾಷೆಯ ವಿಚಾರದಲ್ಲಿ ಹೇಳಬೇಕೆಂದರೆ ಹೆಚ್ಚಾಗಿ ಈ ಕಡೆಯ 'ಜೀವಂತ ' ಭಾಷೆಯಲ್ಲಿಯೇ ಎಲ್ಲವನ್ನೂ ಬರೆದಿದ್ದಾರೆ. ವ್ಯಾಕರಣಶುದ್ದಿಯನ್ನಪೇಕ್ಷಿಸುವವರು ಮಡಿವಂತರಾಗಿ ಇದರಿಂದ ದೂರಕ್ಕೆ ಉಳಿಯಬೇಕು. ಕನ್ನಡ ಭಾಷೆ ಇದೀಗ ಬೆಳೆಯುವ ಕಾಲ! ಇದರಲ್ಲಿ ಬಹುವಿಧವಾದ ಶಬ್ದ ಭಾಂಡಾರವು ಸೇರಿಕೊಳ್ಳಬೇಕಾಗಿದೆ. ಕನ್ನಡನಾಡಿನ ಬೇರೆ ಬೇರೆ ಕಡೆಯ 'ದೇಸಿ' ಗಳಲ್ಲಿ, ನಮ್ಮ ನುಡಿಯ ಸೊಗಸನ್ನು ಹೆಚ್ಚಿಸುವಂತಹ ಶಬ್ದಗಳೂ, ಪದಪ್ರಯೋಗಗಳೂ, ವಾಕ್ಯ ಪದ್ಧತಿಗಳೂ ಇರುವುದರಿಂದ ಎಲ್ಲ 'ದೇಸಿ'ಗಳಲ್ಲಿಯೂ ಇಂದು ಸಾಹಿತ್ಯ ರಚನೆಯಾಗಬೇಕಾಗಿದೆ;