ಪುಟ:ಹೂಬಿಸಿಲು-ಶ್ಯಾಮಲಾದೇವಿ.pdf/೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅರಿಕೆ

ನನ್ನ ಕತೆಗಳ ವಿಚಾರವಾಗಿ ಈಗಾಗಲೇ ಸಾಕಷ್ಟು ಹೇಳಿಯಾ ಗಿವೆಯೆಂದಮೇಲೆ ನಾನು ಹೇಳಬೇಕಾದುದೇನಿದೆ ? ನಾನೇನು "ಕತೆಯತಂತ್ರ " ವನ್ನು ಅಭ್ಯಾಸಿಸಿಕೊಂಡು ಬರೆಯಲು ಪ್ರಯತ್ನ ಪಟ್ಟವಳಲ್ಲ. ಅರಿತ ನುರಿತ ಲೇಖಕವರ್ಗಕ್ಕೆ ಸೇರಿದವಳಲ್ಲ,

ಮೊಟ್ಟ ಮೊದಲು, ಕೆಲಸಬೊಗಸೆಗಳನ್ನು ಮಾಡಿ ಮಿಕ್ಕ ವೇಳೆಯಲ್ಲಿ ನನ್ನ ಮನರಂಜನೆಗೆಂದು "ನನ್ನನ್ನು ನೋಡಲಿಕ್ಕೆ ಬಂದಾಗ––" ಎಂಬುದನ್ನು ಬರೆದೆ, ಅದನ್ನೋದಿದ ನನ್ನ ಬಂಧುವರ್ಯರಾದ ಶ್ರೀ ಹ. ಪೀ. ಜೋಶಿಯವರು ಮತ್ತು ನನ್ನ ಪತಿರಾಯರು ಸಂತೋಷಬಟ್ಟು, ಜಯಕರ್ನಾಟಕದಲ್ಲಿ ಅದಕ್ಕೆ ಪ್ರವೇಶ ಮಾಡಗೊಟ್ಟರು. ( ಮಾರ್ಚ್ ೧೯೩೪ ).

ಅದು ಪ್ರಕಟವಾದ ಕೂಡಲೆ ರೆಕ್ಕೆ ಬಲಿಯದ ಹಕ್ಕಿಯನ್ನು, ಅದು ಹಾರಲು ಕಲಿಯಲೆಂದು ಗೂಡಿನ ಹೊರಕ್ಕೆ ತಂದಿರಿಸಿದಂತಾಯಿತು, ಕಟ್ಟು ಕತೆಗಳನ್ನು ಸುಂದರ ಶೈಲಿಯಲ್ಲಿ ಬರೆಯುವಷ್ಟು ಚತುರಳಂತೂ ನಾನಲ್ಲ. ನನ್ನ ಸುತ್ತಮುತ್ತಲೂ ನಡೆದ ಸಣ್ಣ ಪುಟ್ಟ ವರ್ತಮಾನಗಳನ್ನೆ ಏನೋ? ಒಂದು ಬಗೆಯಲ್ಲಿ ಆಗಾಗ ನಾನು ಬರೆದಿಡುತ್ತಿದ್ದುದು. ಅಂತಹವುಗಳಲ್ಲಿ 'ನಡೆದುಬಂದ ಲಕ್ಷ್ಮಿ' ಯೊಂದು. ಜ. ಕ. ಗ್ರಂಥಮಾಲೆಯವರು ಅದನ್ನು ಪೋಣಿಸಿಕೊಂಡುಬಿಟ್ಟರು. ಈ ಸಂಗ್ರಹದಲ್ಲಿಯ ಉಳಿದ ಕತೆಗಳು ಇತ್ತೀಚೆಯ ೨-೩ ತಿಂಗಳಲ್ಲಿ ಬರೆದುವು. 'ಹೇಗೆ ಬರೆಯಬೇಕು' ಎಂದು ವಿಚಾರಿಸುತ್ತ ಕುಳಿತಾಗ, 'ಬರೆಯಿರಿ, ಬಂದುಬಿಡುವುದು ' ಎಂದು ಪ್ರೋತ್ಸಾಹಿಸಿ ಇನ್ನು ಬೇರೆ ಬಗೆಯಿಂದ ಸಲಹೆಯಿತ್ರ ಬಂಧುವರ್ಯ ಹ. ಪೀ. ಜೋಶಿಯವರನ್ನು ಇನ್ನೊಮ್ಮೆ ಅಭಿವಂದಿಸುವೆನು.