ಪುಟ:Chirasmarane-Niranjana.pdf/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚಿರಸ್ಮರಣೆ

೧೦೩



ವರ್ಗಶಕ್ತಿಯಾದ ನಂಬಿಯಾರರೆದುರಲ್ಲಿ ತಾನು ಬಡ ಮಾನವ ಪ್ರಾಣಿಯಾಗಿ ಇರಬೇಕಾಯಿತಲ್ಲ, ಯಾವ ಮಾತನ್ನೂ ನೇರವಾಗಿ ಆಡಲು ತನ್ನಿಂದ ಆಗಲಿಲ್ಲವಲ್ಲಎಂದು ಕೆಡುಕೆನಿಸಿತು....

    ಅವರು ಊಹಿಸಿದ್ದಂತೆಯೇ ಶಾಲೆಯ ಜಗಲಿಯಲ್ಲಿ ರೈತರು ಯಾರೂ ಇರಲಿಲ್ಲ. ಆದರೆ ದಿನವೂ ಸಂಜೆ ಬರುತ್ತಿದ್ದ ಅಪ್ಪು ಮತ್ತು ಚಿರುಕಂಡ ಜಗಲಿಯ ಆವರಣದ ಅಡ್ಡಗೋಡೆಯ ಮೇಲೆ ಕುಳಿತಿದ್ದರು. ಮಾಸ್ತರನ್ನು ಕಂಡೊಡನೆ ಅವರು ಎದ್ದು ನಿಂತರು. ಮಾಸ್ತರ ಪಾಲಿಗೆ ಈ ಶಿಷ್ಯರ ದರ್ಶನ ಹಿತಕರವಾಯಿತು. ಆದರೆ, ಪಪ್ಪಾಯಿಹಣ್ಣುಗಳನ್ನು ಹೊತ್ತುತರುತ್ತಿದ್ದ ಜಮೀನ್ದಾರರ ಆಳನ್ನು ಕಂಡು ಹುಡುಗರು ಸುಮ್ಮನಾದರು. ಆತನನ್ನು ಬೇಗನೆ ಕಳುಹಿಸಿಬಿಡಬೇಕೆಂದು ಮಾಸ್ತರೆಂದರು:
"ಜಗಲೀಲೇ ಇಡು."
ಆತ ಕೆಳಕ್ಕಿರಿಸಿ, "ಹೋರಡ್ತೇನೆ"ಎಂದು ಕೈ ಜೋಡಿಸಿದ; ಮಾಸ್ತರು "ಹೂಂ"ಎಂದೊಡನೆ ಹೊರಟುಹೋದ.
ಶಾಲೆಯ ಬಾಗಿಲಿಗೆ ಹಾಕಿದ್ದ ಪುಟ್ಟ ಬೀಗವನ್ನು ತೆರೆದೊಡನೆ ಅಪ್ಪು ಮಾಸ್ತರ ಮುರುಕು ಕುರ್ಚಿಯನ್ನು ತಂದು ಹೊರಕ್ಕಿರಿಸಿದ.ಮಾಸ್ತರು ದಿನಪತ್ರಿಕೆಯನ್ನು ಚಿರುಕಂಡನಿಗೆ ಕೊಟ್ಟು ಕುರ್ಚಿಯ ಮೇಲೆ ಕುಳಿತರು.
ಪತ್ರಿಕೆಯಲ್ಲಿರುವುದಕ್ಕಿಂತಲೂ ವಿಶೇಷ ವಾರ್ತೆ ಬೇರೆ ಇದೆಯೆಂದು ಊಹಿಸಿದ ಚಿರುಕಂಡ. ಮಾಸ್ತರತ್ತ ನೋಡಿ ಕೇಳಿದ:
"ಜಮೀನ್ದಾರರ ಮನೆಗೆ ಹೋಗಿದ್ದಿರಾ ಸರ್?"
"ಹೂಂ ಕಣೊ."
"ಏನು ಸರ್ ವಿಶೇಷ?"
"ಇವತ್ತಿನಿಂದ ಇಲ್ಲಿ ಪತ್ರಿಕೆ ಓದಿ ಹೇಳೋದು ಬಂದ್!"
"ಆಹಾ!" ಎಂದು ಕಣ್ಣರಳಿಸಿ ಅಪ್ಪು ಉದ್ಗಾರವೆತ್ತಿ,ಪಪ್ಪಾಯಿ ಹಣ್ಣುಗಳ ಬಳಿ ಹೋಗಿ ಕುಳಿತ. ಚಿರುಕಂಡ ಸ್ವರ ತಗ್ಗಿಸಿ ಹೇಳಿದ:
"ಅವರಿಗೆ ನಿಮ್ಮ ಮೇಲೆ ಸಂಶಯ ಬಂದಿರ್ವೌದೆ ಸರ್?"
"ಇರಲಾರ್ದು" ಎಂದು ಮಾಸ್ತರು ಬೀಡಿ ಹಚ್ಚಿ ಸೇದುತ್ತ, ಸಾವಧಾನವಾಗಿ-ಆದರೆ ಚುಟುಕಾಗಿ-ಜಮೀನ್ದಾರರ ಮನೆಯಲ್ಲಿ ನಡೆದ ಸಂವಾದದ ಮುಖ್ಯವಿಷಯ ಹೇಳಿದರು.