ಪುಟ:Chirasmarane-Niranjana.pdf/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೧೧೬ ಚಿರಸ್ಮರಣೆ

ಶಾಲೆ. ಮುದುಕರ ಶಾಲೆಯಲ್ಲ. ಇದರಲ್ಲೆಲ್ಲ ಅಷ್ಟು ಆಸಕ್ತಿ ಇದ್ದವರು ಬೇರೆ ಶಾಲೆ ಕಟ್ಟೆಸ್ಲಿ." ಕೊನೆಯ ಮಾತು ನ೦ಬೂದಿರಿಯ ಮೇಲೆಸೆದ ಮರುಬಾಣ.ನ೦ಬೂದಿರಿ ಸುಮ್ಮನಿದುದನ್ನು ಕಂಡು ಮಾಸ್ತರತ್ತ ತಿರುಗಿ, ನಂಬಿಯಾರರು ಹೇಳಿದರು: "ಏನು ಹೇಳ್ತೀರಿ ಮಾಸ್ತರೆ?" ತಮಗೆ ಅನುಕೂಲವಾಗುವಂತೆ ನಡೆದ ಈ ಪ್ರಕರಣದಿಂದ ಉತ್ತೇಜಿತರಾಗಿ
ಮಾಸ್ತರು ಉತ್ತರವಿತ್ತರು: "ಈ ಶಾಲೆಯಲ್ಲೇ ವಯಸ್ಕರಿಗೂ ಪಾಠ ಹೇಳಬಾರ್ದು. ಅವರೇ ಎಲ್ಲಾದರೂ ಜಾಗ ಗೊತ್ಮಾಡ್ಲಿ." ಈಗ ನಂಬೂದಿರಿ ಮಾಸ್ತರನ್ನು ಕೇಳಿದರು: "ಇದೆಲ್ಲ ನೋಡಿದರೆ ನಾಲ್ಕು ಕಾಸು ಹೆಚ್ಚಿನ ಸಂಪಾದನೆಗೆ ನೀವೇ ಏರ್ಪಾಟು ಮಾಡಿಕೊಂಡಹಾಗೆ ಕಾಣ್ತದೆ!" ಮಾಸ್ತರ ಮುಖ ಅವಮಾನದಿಂದ ರಂಗೇರಿತು. ಆದರೂ ಅವರು ನಕ್ಕು. ಅ೦ತಹ ಆರೋಪವೂ ಒಳ್ಳೆಯದೇ ಎ೦ದು ಭಾವಿಸಿ ಉತ್ತರವಿತ್ತರು: "ಹಾಗೇನೂ ಇಲ್ಲ. ಕೊಟ್ಟರೂ ಮಹಾ ಅವರೆಷ್ಟು ಕೊಡಬಹುದು?" "ಕೊಡ್ತಾರೆ ಮಣ್ಣು!" ಎಂದು ನಂಬಿಯಾರರು ಸಿಡುಕಿನಿಂದ ನುಡಿದು, ಸಿಗರೇಟಿಗೆ ಕೈ ಹಾಕಿದರು. ನಂಬೂದಿರಿ ನಗುತ್ತ ಅಂದರು: "ನಿಮಗೆ ಒಂದು ಹೇಳ್ತೇನೆ ಮಾಸ್ತರೆ. ಅವರನ್ನ ನೆಚ್ಕೊ೦ಡು ನೀವಿರ್ಬೇಡಿ. ನಿಮ್ಮ ರಾತ್ರಿಶಾಲೆ ನಾಲ್ಕು ದಿವಸ ನಡೆದ್ರೆ ದೊಡ್ಡದು. ವಿಧ್ಯಾ ಸರಸ್ವತಿ ಎಲ್ಲಿ-- ರೈತರೆಲ್ಲಿ!ಕುಣಿಯೋ ಕೋತೀನ ನೋಡೋದಕ್ಕೆ ಇವರೆಲ್ಲ ಬಂದಾರೆ ಹೊರತು..." ರೈತರು ಮತ್ತು ವಿದ್ಯೆಗೆ ಸಂಬಂಧಿಸಿ ಇಬ್ಬರು ಜಮೀನ್ದಾರರಲ್ಲೂ ಭಿನ್ನಾಭಿಪ್ರಾಯಗಳಿರಲಿಲ್ಲ. ಅವರೊಳಗಿನ ವೈಯಕ್ತಿಕ ಅಸೂಯೆಯಿಂದ ರೈತರಿಗೆ ಆ ವಿಷಯದಲ್ಲಿ ಹಿತವಾಗಿತ್ತು ಅಷ್ಟೆ.ಅದು ಸ್ಪಷ್ಟವಾಗಿತ್ತು,ಮಾಸ್ತರಿಗೆ. ಕರುಣಾಕರನನ್ನೂ ನಂಬೂದಿರಿಯ ಮಕ್ಕಳನ್ನೂ ಕರೆದು ಮಾಸ್ತರೆಂದರು: "ನನ್ನ ಕೊಠಡಿಗೆ ಹೋಗಿ ಕೂತ್ಕೊಳ್ಳಿ ಬಂದ್ಬಿಟ್ಟೆ." ಅದು ತಮ್ಮ ಮಕ್ಕಳಿಗೋಸ್ಕರ ವಿಶೇಷ ಪಾಠ. ಜಮೀನ್ದಾರರಿಬ್ಬರಿಗೂ ಅದರಿ೦ದ ಸಮಾಧಾನವಾಯಿತು. "ಇನ್ನು ಹೋಗೋಣವೇನಪ್ಪ?” ಎಂದರು ನಂಬೂದಿರಿ ನಂಬಿಯಾರರಿಗೆ,