ಪುಟ:Chirasmarane-Niranjana.pdf/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦೬

ಚಿರಸ್ಮರಣೆ


"ಸ್ವಲ್ಪ ದಿವಸ ತಲಚೇರಿಗೆ ಹೋಗ್ತೇನಮ್ಮ."
ಬೇರೆ ದಿನವಾಗಿದ್ದರೆ ಬೂಬಮ್ಮ ಆತನಿಗೆ ಅಡ್ಡಿ ಮಾಡುತ್ತಿದ್ದಳು.ಆದರೆ ಈ ದಿನ, ಮಗನಿಗೆ ಒದಗಬಹುದಾದ ಅಪಾಯದ ಭೀತಿ ಆಕೆಯ ಹೃದಯವನ್ನು ದಹಿಸುತ್ತಿತ್ತು. ಮಗ ತಲಚೇರಿಗೆ ಹೋಗುವುದೇ ಸುರಕ್ಷಿತವೆಂದು ಆಕೆಗೆ ತೋರಿತು.
"ಒಬ್ಬನೇ ಹೋಗ್ತೀಯೇನು?"</br "ಬೇರೆಯವರೂ ಇರ್ತರೆ...... ನಾನೆಲ್ಲೀಂತ ಯಾರಾದರೂ ಕೇಳಿದರೆ ಏನು ಹೇಳ್ತೀಯಾ?"
"ಏನು ಹೇಳ್ಲಿ ಮಗು?"
"ಕಲ್ಲಿಕೋಟೆಗೆ ಹೋಗಿದ್ದಾನೇಂತ ಹೇಳು."
"ಹೂ೦, ನಿನ್ನ ರಕ್ಷಣೆ ಮಾಡ್ಕೋಪ್ಪಾ. ಅಲ್ಲಾ ನೋಡ್ತಾನೆ!"
ಬೇಡವೆಂದರೂ ಆಕೆ ತಂದುಕೊಟ್ಟ ತಿಂಡಿಯೊಡನೆ ಅಬೂಬಕರ್
ಮಾಯವಾದ.
ಹಾಗೆಯೇ ಇಬ್ಬರು ಸ್ವಯಂ ಸೇವಕರೂ ಬಂದರು. ರಾತ್ರೆಯೆ ನಾಲ್ವರೂ ನದಿಯ ದಂಡೆಯುದ್ದಕ್ಕೂ ಮೇಲಕ್ಕೆ ಸಾಗಿ ಅಡವಿ ಸೇರಿದರು....
ಚಿರುಕಂಡನ ಎಣಿಕೆ ಸರಿಯಾಯಿತು.ಹೊಸದುರ್ಗದಿಂದ ನಾಲ್ವತ್ತು ಜನ ಸಶಸ್ತ್ರ ಪೋಲೀಸರು ಯಾವುದೋ ಗೂಡ್ಸ್ ಗಾಡಿಯಲ್ಲಿ ಚರ್ವತ್ತೂರಿನವರೆಗೆ ಬಂದು, ನಡುವಿರುಳು ದಾಟುತ್ತಿದ್ದಂತೆ ಕಯ್ಯೂರು ಸೇರಿದರು. ಕಯ್ಯೂರು ತಲಪುವ ಹಾದಿಯಲ್ಲೂ ನದಿ ದಾಟುವಲ್ಲೂ ಹಳ್ಳಿಯಿಂದ ಹೊರಹೋಗುವ ಬೇರೆ ಎರಡು ಕಾಲುದಾರಿಗಳಲ್ಲೂ ಆ ಪೋಲೀಸರು ನಾಲ್ವರು ನಾಲ್ವರಾಗಿ ಕಾವಲು ನಿಂತರು. ಉಳಿದವರು ಜಮೀನ್ದಾರರ ಬಂಟರನ್ನು ನೆರವಿಗೆ ಕರೆದು, ಮುಂಜಾವದ ಹೊತ್ತಿನಲ್ಲಿ ಅಪ್ಪು , ಚಿರುಕಂಡ, ಅಬೂಬಕರರ ಮನೆಗಳನ್ನೂ ಸಂಘದ ಕಚೇರಿಯನ್ನೂ ಮುತ್ತಿದರು. ಸರಕಾರದ ಆಗಮನವಾಗಿದೆಯೆಂದು ಸಾರುವುದಕ್ಕೋಸ್ಕರ ನಾಲ್ಕಾರು ಗುಂಡುಗಳು ಗುರಿಯಿಲ್ಲದೆ ಹಾದುಹೋಗಿ ಡಂ-ಡಂ ಸದ್ದು ಮಾಡಿದುವು. ಅವುಗಳ ಪ್ರತಿಧ್ವನಿಗಳಿಂದ ಕಯ್ಯೂರು ಕಂಪಿಸಿತು.
ಬೆಳಕು ಹರಿಯುತ್ತಿದ್ದಂತೆ ಬಂಧನಗಳಾದವು. ರಾಜಮರ್ಯಾದೆಯಲ್ಲ, ವೈರಿಯನ್ನು ಚುಚ್ಚಿ ತಿವಿದು ಗಾಯಾಳುವಾಗಿ ಮಾಡಿ ಸೆರೆಹಿಡಿಯುವ ಪದ್ಧತಿ. ಬಯನೆಟಿನ ಇರಿತ. ಹೇಯವಾದ ನಿಂದ್ಯವಾದ ಚುಚ್ಚಮಾತಿನ ಕೊರೆತ. ಬೂಟುಗಾಲುಗಳ ಒದೆತ.
ಆ ಪೋಲೀಸ್ ಅಧಿಕಾರಿ ಮಹಾ ಚತುರನಾಗಿದ್ದ. ಕರಿದಾದ ಭೀಮ ದೇಹದ