ಪುಟ:Chirasmarane-Niranjana.pdf/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚಿರಸ್ಮರಣೆ

ಆಗಿದ್ದರೆ-–ಎನಿಸಿತು. 'ಒಳಗಿನಿಂದ ಅಪ್ಪುವಿನ ತಾಯಿ ಕೇಳಿದ್ದಳು: 'ಯಾರೋ ಅದು?' ಆ ಪ್ರಶ್ನೆಗೆ ತಾನು ಉತ್ತರ ಕೊಡಬೇಕೋ ಬಾರದೋ....

ವಿಚಾರ ತಡವರಿಸಿತು, ಗಂಟಲೋಣಗಿತು.

ಉತ್ತರ ಬರಲಿಲ್ಲವೆಂದು ಒಳಗಿದ್ದ ತಾಯಿ ಹಟ್ಟಿಯ ಬಾಗಿಲಿಗೆ ನಡೆದಳು. ಹೊರಗೆ ಹುಡುಗ ಏನು ಮಾಡಬೇಕೆಂದು ತಿಳಿಯದೆ ನಿಂತಿದ್ದಾಗಲೇ, ಬಾಗಿಲು ಕಿರ್ರೆಂದಿತು.

"ಓ ನೀನೇನೋ?"

ಬೆಚ್ಚಿಬಿದ್ದ ಹುಡುಗ ಹಲ್ಲು ಕಿಸಿದ. ಉಟ್ಟಿದ್ದುದು ಮೊಣಕಾಲವರೆಗಿನ ಒಂದು ಅಂಗವಸ್ತ್ರ ಮೈಮೇಲಿದ್ದುದೊಂದು ಹರಕು ಅಂಗಿ. ಆ ವಸನದ ಹೊರಗೆ ಕಾಣುತ್ತಿದ್ದುದೆಲ್ಲ ಕರಿದಾದ ಬಡಕಲು ಮೈ.

"ಹೊರಗೆ ಯಾಕೆ ನಿಂತಿದೀಯೋ? ಬಾ ಒಳಕ್ಕೆ."

ಹಾಗೆ ಆದೇಶವಿತ್ತು, ತಾಯಿ ಮಗನತ್ತ ಬಾಗಿ ಮೈಮುಟ್ಟಿದಳು.

ಎಚ್ಚರಗೊಂಡ ಅಪ್ಪು ಮುಖದ ಮೇಲಿನ ಕಂಬಳಿಯನ್ನು ಸರಿಸಿ ಕಣ್ಣು ತೆರೆದು ತನ್ನೆಡೆಗೆ ಬಾಗಿದ್ದ ತಾಯಿಯನ್ನು ನೋಡಿದ. ಆಕೆ ಉಟ್ಟಿದ್ದುದು ಮಾಸಿದ್ದ ಪಂಚೆ; ಎದೆಯ ಮೇಲೆ ಅಷ್ಟು ಮಾಸದೇ ಇದ್ದ ಬಿಳಿಯ ರವಿಕೆ; ಸಡಿಲವಾಗಿ ಗಂಟು ಹಾಕಿದ್ದ ತುಂಬುಹೆರಳು. ಕಪ್ಪು ಹೆರಳಿಗೆ ಪ್ರತಿಯಾದ ಬಿಳುಪು ಮುಖ: ಆ ಬಿಳುಪನ್ನು ನಾಚಿಸುವ, ದಂತಪಂಗ್ತಿಯನ್ನು ತೋರಿಸಿಕೊಡುತ್ತಿದ್ದ ನಗೆ.

"ಯಾಕೋ ಹಾಗೆ ನೋಡ್ತಿದ್ದೀಯಾ? ಏಳು ಚಿರುಕಂಡ ಕರೀತಿದ್ದಾನೆ."

ತಾಯಿಯಂತೆ ತಾನೂ ಮುಗುಳುನಗುತ್ತಿದ್ದ ಅಪ್ಪು. ಒಮ್ಮೆಲೆ ಗಡಬಡಿಸಿ ಎದ್ದ. ಬೇಗನೆ ಏಳುವೆನೆಂದು ಮಾತು ಕೊಟ್ಟಿದ್ದುದು ಆಗ ನೆನಪಾಯಿತು. ಆತನ ದೃಷ್ಟಿ ಬಾಗಿಲಿನತ್ತ ಸರಿಯಿತು. ಕರೆಯಲು ಬಂದಿದ್ದ ಚಿರುಕಂಡ ಅಲ್ಲಿ ನಿಂತಿದ್ದ. ಅಪ್ಪು ತಾನೂ ಒಂದು ಅಂಗವಸ್ತ್ರವನ್ನು ನಡುವಿಗೆ ಅಡ್ಡವಾಗಿ ಕಟ್ಟಿ, ತನ್ನುದೊಂದು ಹಸುರು ಷರಟನ್ನು ತೊಟ್ಟು, ಹೊರಟು ನಿಂತ.

ಒಳಗೆ ಒಲೆಯ ಬಳಿಗೆ ಹೋದ ತಾಯಿ ಕೇಳಿದಳು:

"ಎಲ್ಲಿಗೆ ಹೊರಟಿದ್ದೀರೋ ಇಷ್ಟು ಬೆಳಿಗ್ಗೆ?" "ಎಲ್ಲಿಗೂ ಇಲ್ಲಮ್ಮ, ಇಲ್ಲೇ..."

ಹಾಗೆ ಹೇಳುತ್ತಲಿದ್ದ ಅಪ್ಪುವನ್ನು ಚಿರುಕಂಡನ ಕಣ್ಣುಗಳು ಕಾತರದಿಂದ ನೋಡಿದುವು. ಆ ನೋಟವನ್ನು ಅಪ್ಪು ಗಮನಿಸದೆ ಇರಲಿಲ್ಲ. ಆತನ ಮರು ನೋಟದಲ್ಲಿ 'ಗಾಬರಿಯಾಗಬೇಡ, ಹೇಳೋದಿಲ್ಲ'ಎನ್ನುವ ಆಶ್ವಾಸನೇ ಇತ್ತು.