ಪುಟ:Chirasmarane-Niranjana.pdf/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೪೬

ಚಿರಸ್ಮರಣೆ

ವಿರೋಧಿ ಎಂಬುದು ಸ್ಪಷ್ಟವಾಗಿತ್ತು. ಎದ್ದು ಕುಳಿತ ಪಂಡಿತರ ಮುಖವನ್ನು ಹುಡುಗರು ಕಾತರದಿಂದ ನೋಡಿದರು.

ಆ ಮುಖದ ಮೇಲೆ ಗಾಬರಿಯ ಯಾವ ಚಿಹ್ನೆಯೂ ಇರಲಿಲ್ಲ. ಹಿಂದಿದ್ದ ಹಾಗೆಯೇ ಮುಖ ಶಾಂತವಾಗಿತ್ತು. ಆ ಮುಗುಳುನಗೆಯೂ ಮಾಯವಾಗಿರಲಿಲ್ಲ.

ಅಪ್ಪು ಮತ್ತು ಚಿರುಕಂಡನತ್ತ ನೋಡಿ ಮಾಸ್ತರು ಕೇಳಿದರು:
“ಅವನು ಯಾರು ಗೊತ್ತಾಯ್ತನೋ?"
ಇಬ್ಬರಿಗೂ ಗೊತ್ತಾಗಿತ್ತು. ಚಿರುಕಂಡ ಹೇಳಿದ:
"ಗೊತ್ತಾಯ್ತು.ಅವನು ಸತ್ಕಾರದ ಕಡೆಯೋನು.ಜಮೀನ್ದಾರರ ಕಡೆಯೋನು."
ಪಂಡಿತರು ನಕ್ಕು ಅಂದರು:

"ಸರಿಯಾಗಿ ಊಹಿಸ್ಕೊಂಡಿದ್ದೀರಿ, ಪರವಾಗಿಲ್ಲ. ಒಬ್ಬ ಮನುಷ್ಯನನ್ನು ನೋಡಿದ ತಕ್ಷಣ ಅವನು ಒಳ್ಳೆಯವನೇ ಕೆಟ್ಟವನೇ ಅಂತ ತಿಳಿಯೋದನ್ನು ಕಲೀಬೇಕು. ಅವನು ಮಾಡುವ ಒಂದು ಮುಖಭಂಗಿ, ಆಡುವ ಒಂದು ಮಾತು, ಅಷ್ಟರಿಂದ ಆತ ಎಂಥವನು ಅನ್ನೋದನ್ನ ಗೊತ್ಮಾಡೇಕು."

ಹುಡುಗರೂ ಇತರರೂ ಆ ಮಾತುಗಳನ್ನು ಕವಿಗೊಟ್ಟು ಕೇಳಿದರು. ಹುಡುಗರತ್ತ ನೋಡುತ್ತ ಪಂಡಿತರೆಂದರು: “ನೀವು ಕಯೂರಿನಿಂದ ಹ್ಯಾಗ್ನಂದ್ರಿ ಹೇಳೇ ಇಲ್ವಲ್ಲಾ...."

ಅಪ್ಪುವಿನ ಮುಖ ಅರಳಿತು. ಚಿರುಕಂಡ ಮತ್ತು ಮಾಸ್ತರರತ್ತ ಆತ ಒಮ್ಮೆ ದೃಷ್ಟಿ ಹರಿಸಿದ. ಆದರೆ ಅವರ ಪ್ರತಿಕ್ರಿಯೆಯ ಹಾದಿ ನೋಡದೆ, ತನ್ನ ಗೆಳೆಯನೊಡನೆ ತಾನು ದಾಟಿಬಂದ ಸಾಹಸ ಕಥೆಯನ್ನು ಇದ್ದಂತೆಯೆ ತಿಳಿಸಿದ... ಹೇಳಬೇಕಾಗಿದ್ದ ವಿಷಯಗಳು ಮುಗಿಯುತ್ತ ಬಂದಾಗ ಅಪ್ಪು ಎಂದ:

“ಚಿರುಕಂಡ ಬಹಳ ಸೂಕ್ಷ್ಮ, ಸ್ವಲ್ಪ ಗಟ್ಟಿಯಾಗಿ ಮಾತನಾಡಿದರೂ ಸಾಕು, ನನ್ನ ಬಾಯಿ ಮುಚ್ಚಿಸಿದ್ದ. ಪ್ರತಿಯೊಂದು ವಿಷಯದಲ್ಲೂ ಅವನಿಗೆ ದೂರಾಲೋಚನೆಯೇ."

ಸ್ನೇಹಿತನ ಬಾಯಲ್ಲಿ ತನ್ನ ಹೊಗಳಿಕೆ ಕೇಳುತ್ತ ಚಿರುಕಂಡನಿಗೆ 'ಒಂದು ವಿಧ'ವಾಯಿತು. ಪ್ರಶಂಸೆ ಅವನಿಗೆ ಯಾವ ಕಾಲದಲ್ಲೂ ಇಷ್ಟವಿರಲಿಲ್ಲ. ಆದರೆ ಅಪ್ಪು ಹಾಗಲ್ಲ. ಮಾಡಿದ ಕೆಲಸದ ಬಗೆಗೆ ಹೆಮ್ಮೆ ಪಡುತ್ತ ತನ್ನ ಪ್ರಶಂಸೆಯನ್ನು ತಾನೇ ಮಾಡಿಕೊಳ್ಳುತ್ತಿದ್ದ; ಇತರರನ್ನೂ ಅದೇ ರೀತಿಯಲ್ಲಿ ಮುಕ್ತಕಂಠದಿಂದ ಹೊಗಳುತ್ತಿದ್ದ. ಆದರೆ ಹಾಗೆ ಮಾಡುವಾಗ, ಸತ್ಯಕ್ಕೆಂದೂ ಚ್ಯುತಿ ಬರುತ್ತಿರಲಿಲ್ಲ. ಅಪ್ಪು ಹೇಳಿದುದನ್ನು ಕೇಳಿ ಎಲ್ಲರಿಗೂ ಸಂತೋಷವಾಯಿತು.