ಪುಟ:Chirasmarane-Niranjana.pdf/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಚಿರಸ್ಮರಣೆ

೮೭

 "ಹೂಂ"
"ಕಂಡಿದ್ಯಾ?"
"ಹೂಂ. ಬೆಳಿಗ್ಗೆ ಹೋಗಿದ್ದೆ."
ಒಮ್ಮೆಲೆ ಇನ್ನೊಂದು ವಿಷಯ ನೆನಪಾಗಿ ಅಪ್ಪು ಕೇಳಿದ:
"ನಿನ್ನೆ ಅವರ ಜತೇಲಿ ಚರ್ವತ್ತೂರಿಗೆ ಹೋಗಿದ್ದೆವೂಂತ ಹೇಳಿದ್ದನ್ನ ತಿಳಿಸಿದ್ಯಾ?"
"ಹೂಂ."
ಆ ಉತ್ತರದಿಂದ ಸಮಾಧಾನವಾದ ಮೇಲೆ ವಸ್ತುಸ್ಥಿತಿ ಅಪ್ಪುವನ್ನು ಕಾಡಿತು.
"ಹೊಲ ಹೋದ ವಿಷಯಾನಾ ಹೇಳಿದ್ಯೇನು?"
"ಹೂಂ, ಚುಟುಕಾಗಿ ಹೇಳ್ದೆ. ಶಾಲೆಗೆ ಹೊತ್ತಾಗ್ಬಿಟ್ಟಿತ್ತು."
"ಏನಂದ್ರು?"
"ಈವರೆಗೂ ಬೇರೆಯವರಿಗೆ ಆಗ್ತಾ ಇದ್ದುದನ್ನು ನೀನು ನೋಡ್ತಿದ್ದೆ; ಈಗ ನಿಮಗೇ ಆಯ್ತು ; ಬೇಜಾರುಪಟ್ಕೋಬೇಡ- ಅಂದ್ರು."
"ಅಷ್ಟೇನಾ?"
"ಬೇರೇನಪ್ಟಾ ಅವರು ಹೇಳ್ಬೇಕು? ರಾತ್ರೆ ಮನೆಗೆ ಬರ್ತೇನೆ ಅಂದ್ರು."
ಮಾಸ್ತರು ಚಿರುಕಂಡನ ಮನೆಗೆ ಬಂದಾಗ ತಾನೂ ಅಲ್ಲಿರಬೇಕೆಂದು ಅಪ್ಪುವಿಗೆ ತೋರಿತು.
"ನಾನೂ ಬರಲಾ?"
"ಬಾ. ಆದರೆ ಮಾಸ್ತರು ಬರೋದು ತಡವಾದೀತು. ಜಮೀನ್ದಾರರ ಕಡೆಯವರ ಕಣ್ಣುತಪ್ಪಿಸಿ ಬರೋದು ಬೇಡ್ವ ಅವರು ?"
"ಅದು ನಿಜ ಅನ್ನು. ತಡವಾದರೆ ಇವತ್ತು ನಮ್ಮಪ್ಪನೂ ಸುಮ್ಮಿರೋದಿಲ್ಲ"
ಅಪ್ಪು ಮರದ ಕಾಂಡಕ್ಕೊರಗಿ,ನೀಲಿ ಆಕಾಶದಲ್ಲಿ ತಲೆಕೆಳಗಾಗಿ ತೇಲುತ್ತಿದ್ದ ಬಿಳಿಯ ಮೋಡಗಳನ್ನು ನೋಡಿದ.ಮತ್ತೆ ಆತನ ದೃಷ್ಟಿ ಮೌನವಾಗಿ ನೆಲವನ್ನೇ ನೋಡುತ್ತ ಕುಳಿತಿದ್ದ ಚಿರುಕಂಡನತ್ತ ತಿರುಗಿತು.ದೊಡ್ಡದೊಂದು ಕರಿಯ ಇರುವೆ ಅಂಗಿಯ ಬಲತೋಳಿನ ಮೇಲಿನಿಂದ ಚಿರುಕಂಡನ ಕೊರಳಿನ ಕಡೆಗೆ ಸರಿಯುತ್ತಿತ್ತು. ಅಪ್ಪು ನೇರವಾಗಿ ಕುಳಿತು, ಆ ಇರುವೆಯತ್ತ ಕ್ಕೆ ಚಾಚಿ ಅದನ್ನೆತ್ತಿದ.ಕೊಲ್ಲಲು ಮನಸ್ಸಾಗದೆ ದೂರ ಎಸೆದ.
ಅದನ್ನು ನೋಡಿಯೂ ನೋಡದಂತಿದ್ದ ಚಿರುಕಂಡ ಸರಿಯಾಗಿ ಕುಳಿತು,ಮೈಮುರಿದು, ನಿಟ್ಟುಸಿರುಬಿಟ್ಟ.