ಪುಟ:Kadaliya Karpoora.pdf/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೨೬

ಕದಳಿಯ ಕರ್ಪೂರ

ಭಾವಶುದ್ಧವಿಲ್ಲದವರಲ್ಲಿ ಆರತಿಯನೊಲ್ಲೆಯಯ್ಯಾ ನೀನು.

ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು.

ಹೃದಯಕಮಲ ಶುದ್ಧವಿಲ್ಲದವರಲ್ಲಿ ಇರಲೊಲ್ಲೆಯಯ್ಯಾ ನೀನು.

ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ

ಹೇಳಾ ಚೆನ್ನಮಲ್ಲಿಕಾರ್ಜುನಾ !

ತನಗೇ ಅನ್ವಯಿಸಿಕೊಂಡು ಹೇಳಿದ ಆ ಮಾತು ಶರಣರೆಲ್ಲವನ್ನೂ ಆತ್ಮ ಶೋಧನೆಗೆ ಹಚ್ಚಿತ್ತು. ಅನುಭವಮಂಟಪವೆಲ್ಲಾ ಸ್ತಬ್ಧವಾಗಿ ಆ ವಚನತೀರ್ಥದ ಮಹತ್ತಿನಲ್ಲಿ ಮಿಂದಿತ್ತು.

ಈ ಲೋಕದಲ್ಲಿ ಇದ್ದರೂ ಇದಕ್ಕೆ ಅಂಟದಂತೆ ಬಾಳಬೇಕೆಂಬ ಮಾತನ್ನು ಪ್ರತಿಪಾದಿಸುವ ಸಂದರ್ಭದಲ್ಲಿ, ಇನ್ನೊಂದು ದಿನ ಮಹಾದೇವಿ ಹೇಳಿದ ವಚನವಂತೂ ಶರಣರ ಮನಸ್ಸನ್ನು ಸೂರೆಗೊಂಡಿತ್ತು :

ಹಾವಿನ ಹಲ್ಲ ಕಳೆದು ಹಾವನಾಡಿಸಬಲ್ಲರೆ

ಹಾವಿನಸಂಗವೇ ಲೇಸು ಕಂಡಯ್ಯ.

ಕಾಯ ಸಂಗವ ವಿವರಿಸಬಲ್ಲರೆ,

ಕಾಯ ಸಂಗವೇ ಲೇಸು ಕಂಡಯ್ಯ ;

ತಾಯ ರಕ್ಕಸಿಯಾದಂತೆ ಕಾಯವಿಕಾರವು.

ಚೆನ್ನಮಲ್ಲಿಕಾರ್ಜುನಯ್ಯ ನೀನೊಲಿದವರು

ಕಾಯಗೊಂಡಿರ್ದರೆನಬೇಡ.

ಇದನ್ನು ಕೇಳಿದ ಚೆನ್ನಬಸವಣ್ಣ ತನ್ನ ಮೆಚ್ಚುಗೆಯನ್ನು ಅಡಗಿಸಿಕೊಳ್ಳಲಾರದೆ ಮೇಲೆದ್ದು,

ಅಕ್ಕನ ವಚನಗಳ ಶಕ್ತಿಯನ್ನು ತುಂಬುಹೃದಯದಿಂದ ಕೊಂಡಾಡುತ್ತಾ ಹೀಗೆ ಹೇಳಿದ್ದ :

ಆದ್ಯರ ಅರವತ್ತು ವಚನಕ್ಕೆ ದಣ್ಣಾಯಕರ ಇಪ್ಪತ್ತು ವಚನ ;

ದಣ್ಣಾಯಕರ ಇಪ್ಪತ್ತು ವಚನಕ್ಕೆ ಅಜಗಣ್ಣನ ಹತ್ತು ವಚನ ;

ಪ್ರಭುದೇವರ ಹತ್ತು ವಚನಕ್ಕೆ ಅಜಗಣ್ಣನ ಐದು ವಚನ ;

ಅಜಗಣ್ಣನ ಐದು ವಚನಕ್ಕೆ ಕೂಡಲಚನ್ನ ಸಂಗಯ್ಯನಲ್ಲಿ

ಮಹಾದೇವಿಯಕ್ಕಗಳ ಒಂದು ವಚನ

ನಿರ್ವಚನ ಕಾಣಾ, ಸಿದ್ಧರಾಮಯ್ಯ.

ಶರಣರೆಲ್ಲರೂ ಇದಕ್ಕೆ ಒಪ್ಪಿಗೆಯ ಉದ್ಗಾರವನ್ನು ಘೋಷಿಸಿದ್ದರು. ಆಕೆ ತಮ್ಮೆಲ್ಲರ ಅಕ್ಕ,

ಎಂದು ಮೆಚ್ಚಿ ನುಡಿದಿದ್ದರು. ವಿನಮ್ರಳಾಗಿ ಅಕ್ಕ ತಲೆಬಾಗಿದ್ದಳು.